ಬೃಹತ್ ಬೆಂಗಳೂರು – ಜಿ ಎಸ್ ಎಸ್ ಪ್ರಸಾದ್ ಬರೆದ ಕವಿತೆ

ಬೃಹತ್ ಬೆಂಗಳೂರು

ಬೆಳೆದಿದೆ ನಮ್ಮ ಬೆಂಗಳೊರು

ಇತಿಮಿತಿಗಳಿಲ್ಲದೆ, ಪರಿಮಿತಿಯ ಅರಿವಿಲ್ಲದೆ

ಹಬ್ಬಿದೆ ಕಾಡ್ಗಿಚ್ಚಿನ ಬೆಂಕಿಯಂತೆ

ಕಬಳಿಸಿದೆ ಸುತ್ತಲ ಹಳ್ಳಿ ಹೊಲ ಗದ್ದೆಗಳ

Bangalore – CC- Wiki

ಬೆಳೆದಿದೆ ನಮ್ಮ ಬೆಂಗಳೊರು

ನೆಲ ಕಬಳಿಸುವ ಭ್ರಷ್ಟರ ದುರಾಸೆಯತ್ತ

ಸಾಫ್ಟ್ವೇರ್ ಕಂಪನಿಗಳ ಹಿತಾಸಕ್ತಿಗಳತ್ತ

ಮಧ್ಯಮವರ್ಗ ಜನರ ಹೊಂಗನಸಿನತ್ತ

ಪ್ರಗತಿಯ ಹೆಸರಲ್ಲಿ ಎಲ್ಲವು ಅಸ್ಥವ್ಯಸ್ಥ!

ಕಂಡಕಡೆ ತಲೆಯತ್ತಿವೆ ಎತ್ತರದ ಫ಼್ಲಾಟ್ ಗಳು

ಕಾಂಕ್ರಿಟ್ ಅರಣ್ಯದಲಿ ರೋದಿಸಿವೆ ಮರಗಳು

ತಂಪಾಗಿದ್ದ ಉದ್ಯಾನ ನಗರಿಯಲ್ಲಿ

ಬೆವರು ಜಿಗುಪ್ಸೆ ಅಪಸ್ವರಗಳು

ಉಸಿರು ಕಟ್ಟಿಸುವ ಕಿಕ್ಕಿರಿದ ರಸ್ತೆಗಳು

ಮೆಟ್ರೋ ಹಾದಿಗೆ ಅಗೆದ ಕಲ್ಲು, ಮಣ್ಣು, ಧೂಳು

ಲಂಗು ಲಗಾಮಿಲ್ಲದ ಕುದುರೆಯಂತೆ

ಮುನ್ನುಗ್ಗುವ ವಾಹನಗಳು

ಅಸಮಾಧಾನದ ಕರ್ಕಶ ಗೊಂದಲಗಳು

ನಗಾರಭಿವೃದ್ದಿ ಕಛೇರಿಗಳಲಿ ಲಂಚಾವತಾರ

ಕನ್ನಡೇತರರಿಗಿದು ನೆಚ್ಚಿನ ಆಗರ

ಗುರುತಿಸಲಾರೆ ನಗರದ ಅಂತರಂಗ ಆಕಾರ

ಬೆಳವಣಿಗೆಯ ನೆಪದಲ್ಲಿ ನಗರವಾಗಿದೆ ವಿಕಾರ!

ಇಂಗ್ಲಂಡಿನಲ್ಲಿ ಮಾವಿನ ಹಣ್ಣು – ಕೇಶವ ಕುಲಕರ್ಣಿ ಬರೆದ ಕವಿತೆ

ಇಂಗ್ಲಂಡಿನಲ್ಲಿ ಮಾವಿನ ಹಣ್ಣು

mango‘ಮಾವು’ ಎಂದೆ ನೋಡಿ
ಮನೆಯೆಲ್ಲ
ಮನವೆಲ್ಲ
ಕಂಪು, ಬಣ್ಣ, ಸ್ವಾದ, ನಾರು, ಗೊರಟ,
ಜೊತೆಗೆ ಭಾರತ

ಗೆಳೆಯ,
ಮಾವಿನ
ಸಿಹಿ ಗೊತ್ತಿದ್ದೂ
ಒಗರು ಗೊತ್ತಿದ್ದೂ
’I am not missing it’ ಎಂದು
ದ್ರಾಕ್ಷಿಯ ವೈನು ಹಿಡಿದು ಕೂತಿದ್ದೇನೆ

ನಿದ್ದೆಗೆ ಜಾರುವಾಗ ಕನಸಿನಲ್ಲಿ
ಬೆನ್ನುಹುರಿಯಲ್ಲಿ ಅಳುಕಿದಂತಾಗಿ
ಎದೆಯೆಲ್ಲ ಹಿಂಡಿದಂತಾಗಿ
ಹುಳಿದ್ರಾಕ್ಷಿಯ ತೇಗಿನಲ್ಲೂ
ಮಾವಿನ ವಾಸನೆ

ತ್ರಿಶಂಕುವಿನ ಸ್ವರ್ಗದಲ್ಲಿ
ಮಾವು ಸಿಗುವುದಿಲ್ಲ
ಸಿಕ್ಕರೂ ತಿಂದಂತಾಗುವುದಿಲ್ಲ

ಅಭಿಮನ್ಯುವಿನ ಚಕ್ರವ್ಯೂಹವಿದು
ಎಂದು ಯಾರಿಗೆ ಗೊತ್ತಿತ್ತು?

ಮಾವನ್ನು ದಿಟ್ಟಿಸುತ್ತ ಕೂತಿದ್ದೇನೆ
ಇಂಟರ್ನೆಟ್ಟಿನ ಮುಂದೆ
ಇನ್ನು ಒಂದೇ ಕ್ಲಿಕ್ಕು
ಆನ್‍ಲೈನ್ ಆರ್ಡರು
ರತ್ನಾಗಿರಿಯಿಂದ ಸೀದಾ ಮನೆಗೆ ಆಪೂಸು!