ಬದುಕಿನ ಪ್ರತಿ ಕ್ಷಣದಲ್ಲೂ ಕಲಿಕೆಯ ಅವಕಾಶವಿದೆ. ನಮ್ಮ ಹಲವಾರು ಕಲಿಕೆಗಳು ಇತರರ ಸಜ್ಜನಿಕೆಯಿಂದ, ಆದರ್ಶದಿಂದ, ಸರಳ ಬದುಕಿನ ರೀತಿ ನೀತಿಗಳಿಂದ ಉಂಟಾಗುತ್ತವೆ. ಈ ರೀತಿಯ ಕಲಿಕೆ ಸಾಮಾನ್ಯವಾಗಿ ನಾವು ಕಿರಿಯರಾಗಿದ್ದಾಗ ನಮ್ಮ ವಿವೇಚನಾ ಶಕ್ತಿಯನ್ನು ಬೆಳಸಿಕೊಳ್ಳಲು ಗುರು-ಹಿರಿಯರ ಮಾರ್ಗದರ್ಶನದಿಂದ ನಮಗೆ ಒದಗಿಬರುತ್ತದೆ. ಇದು ಗುಣಾತ್ಮಕ ಕಲಿಕೆ. ನಮ್ಮ ಬಾಲ್ಯಾವಸ್ಥೆಯಿಂದ ಆಚೆ ಬೆಳೆದಾಗ ನಮ್ಮ ಸಮಾಜದಲ್ಲಿ ಇತರರ ದುಷ್ಟತನ, ಅಹಂಕಾರ, ಸ್ವಾರ್ಥ, ದ್ವೇಷ ಈ ಲಕ್ಷಣಗಳನ್ನು ಗುರುತಿಸಲು ಸಮರ್ಥರಾಗಿರುತ್ತೇವೆ. ಬದುಕಿನ ಹಲವಾರು ಸನ್ನಿವೇಶಗಳನ್ನು ಭಾವನೆಗಳನ್ನು ನಮ್ಮ ಒಳ ಮನಸ್ಸಿನ ಸೂಕ್ಷ್ಮ ತೀಕ್ಷ್ಣ ತಕ್ಕಡಿಯಲ್ಲಿ ಇಟ್ಟು ಅಳೆಯಲು ಪ್ರಾರಂಭಿಸುತ್ತೇವೆ. ಹಲವಾರು ನಕಾರಾತ್ಮಕ ಅನುಭವಗಳು ನಮಗೆ ಪಾಠ ಕಲಿಸುತ್ತವೆ. ಹೀಗೆ ಪರಿಪಕ್ವವಾದ ಮನಸ್ಸು ತನ್ನ ವಿವೇಚನಾ ಶಕ್ತಿಯನ್ನು ರೂಢಿಸಿಕೊಳ್ಳುತ್ತದೆ. ಇದನ್ನು ಮನೋವಿಕಾಸ ಎಂದು ಕರೆಯಬಹುದು. ಇಲ್ಲಿ ಒಂದು ನೈತಿಕ ಜವಾಬ್ದಾರಿ ಉಂಟಾಗಿರುತ್ತದೆ. ಒಬ್ಬ ಹಿರಿಯ ಕವಿ ಹೇಳಿದ ಹಾಗೆ "ದೇವ ದಾನವ ಗುಣದ ಮಿಲನದಿ ಮೂಡಿ ಬಂದನೋ ಮಾನವ" ಕೆಲವೊಮ್ಮೆ ಆ ಮಾನವನ ದೈವತ್ವವು ಹಿಮ್ಮೆಟ್ಟಿ ಕ್ಷುದ್ರ ಸ್ವಾರ್ಥದ ದಾನವನಾಗುತ್ತಾನೆ. ತನ್ನ ಸ್ವಾರ್ಥಕ್ಕಾಗಿ ಆ ನೈತಿಕ ಮೌಲ್ಯಗಳನ್ನು ಪ್ರಜ್ಞಾ ಪೂರ್ವಕವಾಗಿ ಗಾಳಿಗೆ ತೂರುತ್ತಾನೆ. ಒಂದು ವೈಯುಕ್ತಿಕ ನೆಲೆಯಲ್ಲಿ ಶುರುವಾಗುವ ಈ ಅಹಂಕಾರ, ಸ್ವಾರ್ಥ ಒಂದು ಸಂಸಾರವನ್ನು, ಒಂದು ಸಮುದಾಯವನ್ನೂ ಆವರಿಸಿಕೊಳ್ಳಬಹುದು. ಒಬ್ಬರು ಇನ್ನೊಬ್ಬರನ್ನು ವಂಚನೆ, ಸುಲಿಗೆ ಇವುಗಳ ನೆಪದಲ್ಲಿ ಶೋಷಿಸಿದಾಗ ಶೋಷಿಸುವವನು ಜಾಣನೆಂದು ಶೋಷಿತಗೊಂಡವನು ಪೆದ್ದನೆಂದು ಪರಿಗಣಿಸುತ್ತೇವೆ. ಕೆಲವೊಮ್ಮೆ ಪರಿಸ್ಥಿತಿಯ ಪರಿಣಾಮಗಳಿಂದಾಗಿ, ಸಂಕೀರ್ಣತೆಯಿಂದಾಗಿ ನಾವು ಸಹನೆಯಿಂದ ವರ್ತಿಸಬೇಕಾಗುತ್ತದೆ. ಇನ್ನೊಬ್ಬರ ಸಣ್ಣತನದ ಬಗ್ಗೆ ಆಕ್ರೋಶಕ್ಕಿಂತ ವ್ಯಥೆ ಮತ್ತು ಕನಿಕರದ ಮೂಲಕ ಪ್ರತಿಕ್ರಿಯೆ ವ್ಯಕ್ತಪಡಿಸಬೇಕಾಗುತ್ತದೆ.ಅರಿವಿನಲ್ಲೂ ಮುಗ್ಧತೆ ಎಂಬ ಮುಖವಾಡವನ್ನು ಧರಿಸಬೇಕಾಗುತ್ತದೆ.
ಈ ಹಿನ್ನೆಲೆಯಲ್ಲಿ ಅಮಿತ ಅವರ 'ಕಲಿಯಬೇಕಿದೆ' ಎಂಬ ಕವನವನ್ನು ನಾವು ಓದುವುದು ಉಚಿತ. ಬದುಕಿನ ಹಲವಾರು ಸನ್ನಿವೇಶಗಳ ಮೂಲಕ ಈ ಮೇಲಿನ ಅಂಶಗಳನ್ನು ಪರಿಣಾಮಕಾರಿಯಾಗಿ ಕವನದಲ್ಲಿ ಕಟ್ಟುಕೊಟ್ಟಿದ್ದಾರೆ.
-ಸಂಪಾದಕ
ನಾನು ಕಲಿಯಬೇಕಿದೆ,ಇಂಥವರ ನಡುವೆ
ಬೆಳೆಯಲು ಬೆಳಗಲು
ಮುಂದೆ ನಗುತ್ತಲೇ ಇರುವುದು
ಅವರು ತೆರಳಿದ ಬೆನ್ನಿಗೆ
ಉಫ್ಫ್!! ಎಂದು ಉಸಿರುಬಿಟ್ಟು,
ಚಾಡಿ ಮಾತಾಡಿ ಅದರಲ್ಲೇ ಊಟ ,
ನಿದ್ದೆಯ ಸುಖ ಪಡೆಯುವುದನ್ನ.
ನಾನು ಕಲಿಯಬೇಕಿದೆ
ಗೊತ್ತಿಲ್ಲದ್ದನ್ನು ಗೊತ್ತಿದೆ …
ಎಲ್ಲಾ ನನಗೇ ಗೊತ್ತಿದೆ
ಮತ್ತೆ ನನಗಲ್ಲದೆ ಇದು ಯಾರಿಗೂ ಗೊತ್ತಿರಲು
ಸಾಧ್ಯವೇ ಇಲ್ಲ ಎಂದು ವಾದಿಸುವ ಕಲೆಯನ್ನ....
ಕಲಿಯಬೇಕಿದೆ
ಸುಳ್ಳುಗಳ ಮೂಟೆಯಲ್ಲಿ ಸತ್ಯ ಹುಡುಕುವ
ವ್ಯರ್ಥ ಪ್ರಯತ್ನ ಮಾಡುವುದನ್ನ
ಮಿಥ್ಯದ ಕನ್ನಡಿಯಲ್ಲಿ ಸತ್ಯ ತೋರಲು ಒದ್ದಾಡಿ,
ಇಲ್ಲದ್ದನ್ನು ಇದೆ ಎಂದು ತೋರುವ ವಿದ್ಯೆಯನ್ನ
ಕಲಿಯಬೇಕಿದೆ
ಏಳಿಗೆ ಆದರೆ ಅದು ನನ್ನದೇ ಆಗಬೇಕು,
ಜಗದಲ್ಲಿ ನನ್ನ ಹೊರತು ಏಳಿಗೆಗೆ ಅರ್ಹರ್ಯಾರು?
ಎಂದು ಬೀಗುವುದನ್ನ...
ಅನನ್ಯ ಕದಡಿ ನಮ್ಮ ಅನಿವಾಸಿಯ ಹೆಮ್ಮೆಯ ಸದಸ್ಯೆ ಸ್ಮಿತಾ ಕದಡಿಯವರ ಸುಪುತ್ರಿ. ತನ್ನ ಆರನೆಯ ವರ್ಷದಿಂದಲೇ ಕರ್ನಾಟಕ ಶಾಸ್ತ್ರೀಯ ಸಂಗೀತಾಭ್ಯಾಸ ಆರಂಭಿಸಿ ಪ್ರಸ್ತುತ ಬೆಂಗಳೂರಿನ ಬೃಂದಾ ಎನ್. ರಾವ್ ಅವರಿಂದ ಆನ್ಲೈನ್ ಕಲಿಕೆ ಮುಂದುವರೆಸಿದ್ದಾಳೆ. ಈಗ A levels ನಲ್ಲಿ ಅಭ್ಯಸಿಸುತ್ತಿರುವ ಇವಳಿಗೆ ಮುಂದೆ ವೈದ್ಯೆಯಾಗುವ ಕನಸು.
ನಮ್ಮ ತಲೆಗೇ ಕನ್ನಡ ಮುಗಿದು ಹೋಗುತ್ತಾ ಎಂಬ ನಮ್ಮಂಥ ಅನಿವಾಸಿಗಳ ತಳಮಳವನ್ನು ಅನನ್ಯಾಳಂಥ ಮಕ್ಕಳು ತಕ್ಕ ಮಟ್ಟಿಗಾದರೂ ಕಡಿಮೆ ಮಾಡುತ್ತಾರೆ; ಹೊಸ ಭರವಸೆ ಮೂಡಿಸುತ್ತಾರೆ.
ನಂದು ಬಾತುಕೋಳಿ .. ನಂದು ಕುದುರೆ ..ನಾನು ದೊಡ್ಡ ಗೋಪುರ ತಿಂದೆ ….
“ಇದೇನಪ್ಪ ಕುದುರೆ ಬಾತುಕೋಳಿ ಯಾರು ತಿಂತಾರೆ ?!” ಅನ್ಕೋತಿರ್ಬೇಕು ನೀವು.ಇದು ಸಂಕ್ರಾಂತಿಯ ಸಂಭ್ರಮ.. ಮಕ್ಕಳು ಬಿಳಿ ಮತ್ತು ಬಣ್ಣ ಬಣ್ಣದ ವಿವಿಧ ಆಕಾರಗಳ ಸಕ್ಕರೆ ಅಚ್ಚು ಸವಿಯುತ್ತಾ ಮಾತಾಡುವ ರೀತಿ.. ಉತ್ತರ ಕರ್ನಾಟಕದ ಸಂಕ್ರಮಣ ಹಾಗು ದಕ್ಷಿಣ ಕರ್ನಾಟಕದ ಸಂಕ್ರಾಂತಿಯ ಆಚರಣೆಯಲ್ಲಿ ಸ್ವಲ್ಪ ವ್ಯತ್ಯಾಸ ಇದೆ. ಪ್ರತೀ ವರ್ಷ ನಾವು ಸುಮಾರು ೧೦-೧೨ ವರ್ಷದವರಾಗುವ ತನಕ ಮನೆ ಮನೆಗೆ ಹೋಗಿ ಎಳ್ಳು ಸಕ್ಕರೆ ಅಚ್ಚಿನ ಪ್ಯಾಕೆಟ್, ಒಂದು ಕಬ್ಬು ಹಾಗು ಯಾವುದಾದರು ಹಣ್ಣು ಒಂದು ತಟ್ಟೆಯಲ್ಲಿ ಜೋಡಿಸಿಕೊಂಡು ಸುಮಾರು ೨೦-೨೫ ಮನೆಗಳಿಗೆ ಬೀರುವ ಪದ್ಧತಿ ನಾವೂ ಪಾಲಿಸುತ್ತಿದ್ವಿ. ”ಎಳ್ಳು ಬೆಲ್ಲ ತಿಂದು ಒಳ್ಳೆ ಒಳ್ಳೆ ಮಾತಾಡೋಣ” ಅನ್ನೋದು. ನಮ್ಮದು ಮಹಡಿ ಮನೆ. ಕೆಳಗಿನ ಮನೆಯಲ್ಲಿ ಐಯಂಗಾರ್ ಪಾಟಿ.. ಅವರು ತಿಂಗಳ ಮುಂಚಿತವಾಗಿಯೇ ಕೊಬ್ಬರಿ ಹಾಗು ಬೆಲ್ಲದ ಅಚ್ಚನ್ನು ಅಡಕೋತ್ ನಿಂದ ಬಹಳ ನಾಜೂಕಾಗಿ ಪ್ರತಿಯೊಂದು ತುಂಡು ಸಮ ಆಕಾರ ಗಾತ್ರಕ್ಕೆ ಅಚ್ಚುಕಟ್ಟಾಗಿ ಕತ್ತರಿಸಿ, ಕೊಬ್ಬರಿಯನ್ನು ಬಿಸಿಲಿಗೆ ಒಣಗಿಸಲು ಅಂಗಳದಲ್ಲಿ ಬೆತ್ತದ ಮೊರಗಳಲ್ಲಿ ಇಟ್ಟಾಗ ಸಂಕ್ರಾಂತಿ ಬರುವ ಸೂಚನೆ ಸಿಗುತ್ತಿತ್ತು. ಆದರೆ ನಮ್ಮ ಮನೆಯಲ್ಲಿ ಆ ಪದ್ಧತಿ ಇಲ್ಲದ ಕಾರಣ ದೇವರ ನೈವೇದ್ಯಕಷ್ಟೇ ಅಮ್ಮ ಎಳ್ಳು ಬೆಲ್ಲ ಮಾಡುತ್ತಿದ್ದಳು. ನಮ್ಮ ತಂದೆಗೆ ಹಬ್ಬ ಅಂದ್ರೆ ಹುರುಪು. ೨-೩ ಅಂಗಡಿಗಳಲ್ಲಿ ತಿರುಗಾಡಿ ಶೇಂಗಾ,ಬೆಲ್ಲದ ತುಂಡುಗಳು,ಕುಸುರೆಳ್ಳು ಎಲ್ಲಾ ತಂದು ಅಂಗೈ ಅಗಲದ ಪ್ಲಾಸ್ಟಿಕ್ ಪೊಟ್ಟಣದಲ್ಲಿ ಇವೆಲ್ಲ ಸಾಮಾನಿನ ಮಿಶ್ರಣ ಮಾಡಿ ಅದನ್ನು ತುಂಬಿ ಸ್ಟೇಪ್ಲರ್ ಹೊಡೆದು ಹಿಂದಿನದಿನವೇ ತಯ್ಯಾರಿ ಮಾಡುತ್ತಿದ್ದರು. ಸಕ್ಕರೆ ಅಚ್ಚಿನ ಕಥೆಯೇ ಬೇರೆ.. ಮೊದಮೊದಲು ನಾವೂ ಅಂಗಡಿಯಿಂದ ಅಚ್ಚನ್ನು ತಂದು ಬೀರುತ್ತಿದ್ವಿ. ನಂತರ ಅಮ್ಮ ಹಾಗು ಅವಳ ಫ್ರೆಂಡ್ಸ್ ಎಲ್ಲಾ ಸೇರಿ ಮನೆಯಲ್ಲೇ ಸಕ್ಕರೆ ಅಚ್ಚು ಮಾಡುವ ವಿಧಾನ ಕಲಿತು ಅದೊಂದು ಸಂಭ್ರಮವೇ ಆಯಿತು. ಮನೆಯಲ್ಲಿ ಮಾಡಿದ ಅಚ್ಚಿನ ರುಚಿನೇ ಬೇರೆ.. ಬಣ್ಣ ನೋಡೀನೇ ಹೇಳಬಹುದು.ಬಾಯಿಯಲ್ಲಿ ಇಟ್ಟ ತಕ್ಷಣ ಕರಗಿ..ಆಹಾ … ಮರೆಯಲಸಾಧ್ಯ ಆ ದಿನಗಳು .. ಕೆಲವೊಬ್ಬರು ಹಳೇ ಮೈಸೂರಿನವರು ಪ್ರತಿಯೊಬ್ಬರಿಗೂ ಸ್ಟೀಲಿನ ಪುಟ್ಟ ಡಬ್ಬಿ, ತಟ್ಟೆಯಲ್ಲಿ ಎಳ್ಳು ಬೀರುತ್ತಿದ್ದರು. ನಂತರ ಬಣ್ಣ ಬಣ್ಣದ ಪ್ಲಾಸ್ಟಿಕ್ ಡಬ್ಬಿಯ ಹಾವಳಿ. ಹೀಗೆ ನಾವು ಬೀದಿಯ ಸಮ ವಯಸ್ಸಿನ ಹೆಣ್ಣು ಮಕ್ಕಳೆಲ್ಲಾ ಗುಂಪು ಮಾಡಿಕೊಂಡು ಮನೆಯಿಂದ ಮನೆಗೆ ಎಳ್ಳು ಕಬ್ಬು ಬೀರುತ್ತಿರುವಾಗ ಯಾರ ಮನೆಯ ಸಕ್ಕರೆ ಅಚ್ಚು ಅದ್ಭುತವಾಗಿರುತ್ತದೆ ಅಂತ ನಮಗೆ ಮೊದಲೇ ತಿಳಿದ ಕಾರಣ ಅವರ ಮನೆಯಿಂದ ಹೊರಬರುತ್ತಿವಾಗಲೇ ರಸ್ತೆಯಲ್ಲಿ ಸವಿಯುತ್ತಾ ನಾನು ಅದೆಷ್ಟೋ ಬಾತುಕೋಳಿ, ಕುದುರೆ, ಗಂಡಭೇರುಂಡ, ಆನೆ ಹಾಗು ಗೋಪುರಗನ್ನು ಗುಳುಂ ಎನಿಸಿದ್ದೇನೆ..
ಇವೆಲ್ಲಾ ಕಥೆ ಮನೆಗೆ ಬಂತಕ್ಷಣ ಹೇಳುತ್ತಿರುವಾಗ ಅಮ್ಮ ತಮ್ಮ ಬಾಲ್ಯದ ನೆನಪು ತೆಗೆಯುತ್ತಿದ್ದರು. ಈ ಉತ್ತರ ಕರ್ನಾಟಕದವರು ಒಂದೇ ದಿನ ಹಬ್ಬ ಮಾಡೋದಿಲ್ಲ! ಯಾಕೋ ಏನೋ ಎಲ್ಲಾ ದಿನಗಟ್ಟಲೆ!! ಸಂಕ್ರಮಣದ ಹಿಂದಿನ ದಿನ ಭೋಗಿ .. ಅದರ ಊಟಾ.. ಭಾರಿ ಜೋರ್ ! ಎಳ್ಳು ಹಚ್ಚಿದ ಸಜ್ಜಿ ರೊಟ್ಟಿ, ಖಾರ್ ಹುಗ್ಗಿ ಸೀ ಗೊಜ್ಜು, ಶೇಂಗಾ ಹೋಳಗಿ.. ಅಮ್ಮನ ಕಾಲದಾಗ ಸಂಕ್ರಮಣದ ದಿನ ಗಾಜಿನ ಛಂದಾಛಂದ ಬಾಟಲಿ ಯೊಳಗ ಕುಸುರೆಳ್ಳು ತುಂಬಿಕೊಂಡು ಹಿರಿಯರ ಕೈಯಾಗ್ ಕೊಟ್ಟು ”ಎಳ್ಳು ಬೆಲ್ಲ ಕೊಟ್ಟ ಎಳ್ಳು ಬೆಲ್ಲದ್ಹಂಗ ಇರೋಣು” ಅಂದು ನಮಸ್ಕಾರ ಮಾಡೋದು.
ಮೈಸೂರ್ ನ್ಯಾಗ ಸೀ ಪೊಂಗಲ್ ಖಾರ ಪೊಂಗಲ್ ಅದ್ರ ಮುಗಿತು ಹಬ್ಬ, ಅನ್ನೋರು. ನಂಕಡೆ ಭಕ್ರಿ, ಹೋಳಗಿ ಎಷ್ಟು ಥರಾವರಿ ಅಡಗಿ. ಆದರೆ ನಮಗೆ ಮೈಸೂರೆಂದ್ರೆ ಎಲ್ಲಿಲ್ಲದ ಅಭಿಮಾನ.. ಆಗ ಏನು ಅoತಿರಲಿಲ್ಲ.. ಈಗ ನೋಡಿದರೆ ಯಾವ ಪ್ರದೇಶದಲ್ಲಿ ಏನು ಬೆಳೆಯುತ್ತಾರೋ ಅದನ್ನೇ ಅಲ್ಲವೇ ತಿನ್ನೋದು ಅಂತ ನಾನು ನನ್ನ ಅಕ್ಕ ಸಮರ್ಥಿಸಿಕೊಳ್ಳುತ್ತೇವೆ .. ಒಂದೇ ರಾಜ್ಯವಾದರೂ ಎಷ್ಟೆಲ್ಲಾ ವಿವಿಧತೆ. ನಲವತ್ತು ವರ್ಷಗಳ ಹಿಂದೆ ಜೋಳ ಸಜ್ಜೆ ಮೈಸೂರಿನಲ್ಲಿ ಜನಪ್ರಿಯವಿರಲಿಲ್ಲ. ಹಬ್ಬಕ್ಕೆ ಜೋಳದ ರೊಟ್ಟಿ ಅಂದ್ರೆ ಆಶ್ಚರ್ಯ ಪಡುತ್ತಿದ್ದರು. ಬಹುಷಃ ಇಂಗ್ಲೆಂಡಿನಲ್ಲಿ ಸಂಕ್ರಾಂತಿಯ ಪದ್ಧತಿ ಇದ್ದಿದ್ದ್ರೆ ಆಲೂಗಡ್ಡೆಯ ವಿಧವಿಧವಾಗಿ ಅಡಿಗೆ ಜಾಕೆಟ್ ಪೊಟಾಟೋ, ಮ್ಯಾಶ್ಡ್ ಪೊಟಾಟೋ, ಪೊಟಾಟೋ ಪೈ ಅಂತ ಮಾಡ್ತಿದ್ರೋ ಏನೋ? ನಾವು ಹೇಗೆ ಮನೆ ಮನೆಗೆ ಹೋಗಿ ಎಳ್ಳು ಕೊಟ್ಟಂತೆ ನಮ್ಮ ಮನೆಗೂ ಅಕ್ಕ ಪಕ್ಕದವರು ಎಳ್ಳು ಕೊಡುತ್ತಿದ್ದರು. ಮನೆಯಲ್ಲಿ ಎಲ್ಲಿ ನೋಡಿ ಎಳ್ಳಿನ ಪ್ಯಾಕೆಟ್. ಕಿಲೋಗಟ್ಟಲೆ ಈ ಎಳ್ಳಿನ ಮಿಶ್ರಣ.. ಸರಿ! ಈಗ ಏನ್ ಮಾಡಬೇಕು ಈ ಮಿಶ್ರಣ ಇಟ್ಕೊಂಡು? ಅಮ್ಮನ ಐಡಿಯಾ! ಅಪ್ಪನಿಗೆ ಆರ್ಡರ್ ಕೊಟ್ರು! ಈ ಮಿಶ್ರಣದಿಂದ ಕುಸುರೆಳ್ಳು, ಬೆಲ್ಲ ಬೇರೆ ಮಾಡಿ ಅಂತ. ಪಾಪ! ಅಪ್ಪ .. ಬೇಸರವಿಲ್ದೆ ಅದನ್ನು ಬೇರೆ ಮಾಡಿ ಕೊಟ್ರು .. ಅಮ್ಮ ಅದರಿಂದ ಚಟ್ನಿ ಪುಡಿ, ಆ ಪುಡಿ ಈ ಪುಡಿ ಮಾಡಿ.. ಸಂಕ್ರಮಣದ ಕಥೆ ಮುಗಿಸಿದರು. ಒಟ್ಟಿನಲ್ಲಿ ಹೀಗೆ ವರ್ಷಾರಂಭದಿಂದ ಕಡೆಯತನ ಬರುವ ಎಲ್ಲಾ ಹಬ್ಬಗಳನ್ನು ನಾನು ನನ್ನ ಅಕ್ಕ ನಾರ್ತ್ ಸೌತ್ ನ ಹೋಲಿಕೆ ಹುಡುಕಲಾಗದೆ ಅಲ್ಲೂ ಇಲ್ಲ ಇಲ್ಲೂ ಅಂತ ಹಬ್ಬದ ಎಲ್ಲಾ ಪದ್ಧತಿ ಅನುಸರಿಸಲು (ಅನುಕರಣೆ) ಪ್ರಯತ್ನಿಸುತ್ತಾ ಸುಸ್ತಾಗುತ್ತಿದ್ದೇವೆ. ಎಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳು. ***ರಾಧಿಕಾ ಜೋಶಿ.