ಕವನ ಗುಚ್ಛ: ವಿ.ಕೆ. ಭಗವತಿ ಹಾಗೂ ಅಮರಪ್ರೇಮ (ಭಾಗ-೨): ಕೇಶವ ಕುಲಕರ್ಣಿ

ಅನಿವಾಸಿ ಸತತವಾಗಿ ಇಂದು ತನ್ನ ಐನೂರನೇ ಸಂಚಿಕೆಯನ್ನು ಪ್ರಕಟಿಸುತ್ತಿದೆ. ನಮ್ಮೆಲ್ಲರಿಗೂ ಇದು ಹೆಮ್ಮೆಯ, ಸಂತೋಷದ ವಿಷಯ. ಈ ಸಾಧನೆಯ ಹಿಂದೆ ಅನಿವಾಸಿ ಸದಸ್ಯರ ಅವಿರತ ಶ್ರಮವಿದೆ, ಕಣ್ಣೀರಿದೆ, ಕಕ್ಕುಲತೆಯಿದೆ, ಕನ್ನಡ ನಾಡಿನ – ಭಾಷೆಯ ಮೇಲಿನ ಅಪಾರ ಪ್ರೇಮವಿದೆ.

ತಾಯ್ನಾಡಿನ ಕೊಂಡಿಯನ್ನು ಪ್ರತಿನಿಧಿಸುತ್ತಿರುವವರು ಅತಿಥಿ ಕವಿ ಡಾ. ವಿ.ಕೆ. ಭಗವತಿ. ವಿಕೆಬಿ, ವೃತ್ತಿಯಲ್ಲಿ ವೈದ್ಯರು. ಈಗಿನ ಗದಗ ಜಿಲ್ಲೆಯಲ್ಲಿರುವ ರೋಣ ತಾಲೂಕಿನ ಲಕ್ಕಲಕಟ್ಟಿಯಲ್ಲಿ ಹುಟ್ಟಿ, ಹುಬ್ಬಳ್ಳಿಯ ಕೆ ಎಂ ಸಿ ಯಲ್ಲಿ ಸ್ನಾತಕ, ಸ್ನಾತಕೋತ್ತರ ಪದವಿ ಪಡೆದು, ಹಾವೇರಿಯಲ್ಲಿ ವೃತ್ತಿ ನಿರತರಾಗಿದ್ದರು. ಮೊದಲಿನಿಂದಲೂ ಸಾಹಿತ್ಯ, ನಾಟಕ, ಸಂಗೀತ ಹಾಗು ಸುತ್ತುವ ಹವ್ಯಾಸವಿರುವ ವಿಕೆಬಿ, ಕನ್ನಡ ಹಾಗೂ ಉರ್ದುಗಳಲ್ಲಿ ಕವನ, ಗಝಲ್ ಗಳನ್ನ ರಚಿಸಿದ್ದಾರೆ. ವೃತ್ತಿಯಿಂದ ನಿವೃತ್ತರಾದಮೇಲೆ, ದೇಶ ವಿದೇಶಗಳ ಪ್ರವಾಸ ಮುಗಿಸಿ, ಶಿರಸಿಯ ಹತ್ತಿರದ ಹಳ್ಳಿಯೊಂದರಲ್ಲಿ ಕೃಷಿಯನ್ನು ಪ್ರವೃತ್ತಿಯನ್ನಾಗಿಸಿಕೊಂಡು ಜೀವನದ ಎರಡನೇ ಇನ್ನಿಂಗ್ಸ್ ಆಡುತ್ತಿದ್ದಾರೆ. ರೈತ ಮನೆತನದಲ್ಲಿ ಹುಟ್ಟಿದ ವಿಕೆಬಿ ಅವರ ಕವನಗಳಲ್ಲಿ ಮಣ್ಣಿನ ಸಾಮೀಪ್ಯತೆಯ ಅರಿವಾಗುತ್ತದೆ. ಅವರ ವಿಭಿನ್ನ ರೀತಿಯ ಪದಗಳ ಬಳಕೆ; ಗಝಲ್ ಶೈಲಿ ನಿಮ್ಮ ಗಮನಕ್ಕೆ ಬರಬಹುದು ಈ ಮೂರು ಕವನಗಳಲ್ಲಿ.

ಐನೂರನೇ ಸಂಚಿಕೆಯ ಇಂಗ್ಲೆಂಡಿನ ಪ್ರತಿನಿಧಿಯಾಗಿ ಎರಡನೇ ಭಾಗದಲ್ಲಿ ಓದುಗರು ಕಾತುರದಿಂದ ಕಾದಿರುವ ಕೇಶವ್ ಬರೆದಿರುವ ‘ಅಮರ ಪ್ರೇಮ’ ಕಥೆಯ ಮುಂದಿನ ಕಂತಿದೆ. ಅಮರನ ‘ಪ್ರೇಮ’ ಸಿಕ್ಕಳೇ? ಆತನ ಪ್ರೇಮ ಗಗನ ಕುಸುಮವಾಗಿಯೇ ಉಳಿಯಿತೇ? ನಿಮ್ಮ ಪ್ರಶ್ನೆಗಳಿಗೆ ಉತ್ತರ ಸಿಕ್ಕೀತೇ ಯಾ ಕೇಶವ್ ಇನ್ನೂ ನಿಮ್ಮನ್ನು ಕೌತುಕದ ಸುಳಿಯಲ್ಲಿ ಸಿಕ್ಕಿಸಿ ಒದ್ದಾಡಿಸುವರೇ? – ರಾಂ

ವಿ ಕೆ ಭಗವತಿಯವರ ಮೂರು ಕವನಗಳು

ಜೀವನ

ಬಿತ್ತಲು ಬೇಕಾದ ಮಣ್ಣು ಕತ್ತಲು

ನನ್ನಲಿ ಕೈತುಂಬಾ ಕಾಳು ಬಿತ್ತಲು

ಆಸೆ ಅಂಜಿಕೆ ಬಿಟ್ಟರೆ ನೀ ಬೆತ್ತಲು

ವಿಜಯಕೇ ಬೇಕಾದ ಮೆಟ್ಟಲು ಹತ್ತಲು

ದಾಟದೇ ಹಾಯಾದ ಗೆರೆಗಳ ಸುತ್ತಲು

ಬುಗ್ಗೆಯೇ ಬೇಕೇನು ಬದುಕಿನ ಬಟ್ಟಲು

ಅಂಕೆ ಸಂಖೆಯ ಆಟದೆ ನಿನ ಎತ್ತಲು

ಸಂಜೆಯಾಯಿತು ಕಣ್ಣ ಮುಚ್ಚಲು ಕತ್ತಲು

ಮದುವೆ

ನಿನ್ನ ಬಳುಕು ಮೈ ಮೋಹನವಾದರೆ

ಮುರಳಿಯಾಗದಿರುವುದೇ ನನ್ನ ಮನ

ಕೊಳವಿದೆ ಅಲ್ಲಿ ನನ್ನ ಅಂಗಳದಲ್ಲಿ

ಅದರೊಳಗೆ ಮುಳುಗಿ ಮಿಂದು ಬಾ

ಬಿಗುಮಾನಗಳ ಕಳೆದು, ತೊಳೆದು

ಗಂಟು ಗುಣಿಕೆಗಳ ಸಡಿಲಿಸಿ ಬಾ

ದಿಂಡೆ ಬಾಳೆಯಂತಾದರೆ ನಿನ್ನ ಕಾಲಿಗೆ

ನೂರಡಿಯಾಗದೇನು ನನ್ನ ಜೊಲ್ಲು ನಾಲಿಗೆ

ಕೈಗೆ ಕೈಯಿಟ್ಟು, ಬಾಯಿಗೆ ಮುತ್ತಿಟ್ಟರೆ ನೀನು

ನಾಳೆ ನಾಳೆಗಳಿಗೆ ತೊತ್ತಿಡುವೆ ನಾನು

ಮೋಹನವಲ್ಲದ ಮೈ, ದಿಂಡಲ್ಲದ ಕಾಲ್ಗಳಿದ್ದರೆ

ಹಸಿರಾಗು ನೀ ಹೆಮ್ಮರವಾಗಿ

ಮುರಳಿಯಾಗದ ನನ್ನ ಮನ

ಟೊಂಗೆ ಟೊಂಗೆ ಜಿಗಿಯುವುದು ಮರ್ಕಟವಾಗಿ

ಪಯಣ

ಪಯಣದ ರೀತಿ ನೀತಿ ಸರಳ ಶುದ್ಧ ದಾರಿಯಾಗಿದೆ

ಇನ್ನೂ ಸ್ವಲ್ಪ ಕ್ರಮಿಸಿ ನೋಡೋಣ

ಅಲ್ಪ ವಿರಮಿಸಿ, ಶ್ರಮಿಸಿ ನೋಡೋಣ

ಸಂಬಂಧಗಳಡಿ ಬಂಧಿಯಾಗಲಾತುರವೇಕೆ

ಸಡಿಲ ದಾರಗಳ ಮೇಲೆ ಕಟ್ಟಿದ ಸೇತುವೆ ಬೀಳಿಸಲು ಒಂದೇ ಪ್ರಶ್ನೆ ಯಾಕೆ

ಬಂಧಗಳ ಸಾರ ಕರಗಿದಾಗ ದಾರ ಹರಿಯದೆ?

ಆ ದಿನ ಬಂದಾಗ, ಬಗ್ಗದ ಈ ಬಿದಿರು ಮುರಿಯದೆ?

ದಾರದ ಸತ್ವ ಕರಗುವ ಮುನ್ನ ಸ್ವಲ್ಪ ತಗ್ಗಿಸಿ ನೋಡೋಣ

ಬೆದರದ ಬಿದಿರು ಮುರಿಯುವ ಮುನ್ನ ಸ್ವಲ್ಪ ಬಗ್ಗಿಸಿ ನೋಡೋಣ

ಹೇಳಲು ಒಂದು ಮನೆಯಿದೆ, ಬೇರೆಯಲ್ದು ಒಂದು ಭ್ರಮೆಯಿದೆ

ಬೇರೆಯಾದ ಭ್ರಮೆಯಾಚೆ, ಅಗಣಿತ ಅಪರಿಮಿತ ನಲುಮೆಯಿದೆ

ನೀ ನಡೆಯಲೊಪ್ಪದ ದಾರಿಯ ಕೊನೆಯಲ್ಲಿ ಮಸಣವಿದೆ

ನೀ ಓಡುವ ಗೆಲುವಿನ ದಾರಿ ಅದೇ ಅಲ್ಲವೇ

ಸಂಕುಚಿತ ಸೀಮೆಗಳಿಂದಾಚೆ ಅವಕಾಶಗಳ ಎನಿಸಿ ನೋಡೋಣ

ಅಲ್ಲಿಗೆ ಹತ್ತಿರದ ದಾರಿ ಬಿಟ್ಟು ಸುತ್ತದ ದಾರಿ ಬಳಸಿ ನೋಡೋಣ

ಪಯಣದ ರೀತಿ ನೀತಿ ಸರಳ ಶುದ್ಧ ದಾರಿಯಾಗಿದೆ

ಇನ್ನೂ ಸ್ವಲ್ಪ ಕ್ರಮಿಸಿ ನೋಡೋಣ

ಅಲ್ಪ ವಿರಮಿಸಿ, ಶ್ರಮಿಸಿ ನೋಡೋಣ

ಅಮರಪ್ರೇಮ (ಕತೆ): ಕೇಶವ ಕುಲಕರ್ಣಿ (ಎರಡನೇ ಕಂತು)

ಮೊದಲ ಕಂತನ್ನು ಇನ್ನೂ ಓದಿಲ್ಲದಿದ್ದರೆ, ಓದಲು ಇಲ್ಲಿ ಒತ್ತಿ

ಭಾಗ 2: ಇಸ್ವಿ 1989

ಅಮರನಿಗೆ ಪ್ರೇಮಾಳನ್ನು ನೋಡುವ ಅದಮ್ಯ ಹಂಬಲ ಮತ್ತೆ ಹುಟ್ಟಿದ್ದು, ತನ್ನ ಮಗುವಿನ ನಾಮಕರಣದ ಸಮಯದಲ್ಲಿ.  

ಅಮರ ಮತ್ತು ಉಷಾ ತಮ್ಮ ಹೆಣ್ಣುಮಗುವಿಗೆ ಹೆಸರು ಹುಡುಕುತ್ತಿದ್ದರು. ಹುಟ್ಟುವ ಮೊದಲು ಮಗು ಗಂಡೋ ಹೆಣ್ಣೋ ಗೊತ್ತಿರಲಿಲ್ಲ. ಗರ್ಭದಲ್ಲಿನ ಮಗು ಗಂಡೋ ಹೆಣ್ಣೋ ಎಂದು ಪತ್ತೆ ಮಾಡುವುದು ತನ್ನ ಆದರ್ಶದ ವಿರುದ್ಧವೆಂದು ಅಮರ ಬಗೆದಿದ್ದ (ಆಗಿನ್ನೂ ಕಾನೂನು ಅಷ್ಟು ಗಡುಸಾಗಿರಲಿಲ್ಲ) . ಮಗುವಿನ ಹೆಸರನ್ನು ಮಗು ಹುಟ್ಟುವ ಮೊದಲು ನಿರ್ಧಾರ ಮಾಡಿದರೆ ಅಪಶಕುನವೆಂದು ಉಷಾ ನಂಬಿದ್ದಳು. 

ಹೆಣ್ಣು ಮಗು ಹುಟ್ಟಿ ಮೂರು ವಾರದ ಬಳಿಕ ಗಂಡ ಹೆಂಡತಿ ಇಬ್ಬರೇ ಮಗುವಿಗೆ ಏನು ಹೆಸರು ಇಡುವುದೆಂದು ಒಂದು ಚಂದದ ಜಗಳವಾಡುತ್ತಿದ್ದರು. ಅಮರ ಮಗುವನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡಿದ್ದ. ಉಷಾ ಒಂದು ಹೆಸರು ಹೇಳುವುದು, ಅದಕ್ಕೆ ಅಮರ ಏನಾದರೂ ತಗಾದೆ ತೆಗೆಯುವುದು, ಅಮರ ಒಂದು ಹೆಸರು ಹೇಳುವುದು, ಅದಕ್ಕೆ ಉಷಾ ಮೂಗು ಮುರಿಯುವುದು, ಅವಳು ಹೇಳಿದ ಹೆಸರನ್ನು ಚಿಕ್ಕದಾಗಿ ಕರೆದರೆ ಚೆನ್ನಾಗಿರುವುದಿಲ್ಲ ಎಂದು ಇವನು ಹೇಳುವುದು, ಇವನು ಹೇಳಿದ ಹೆಸರಿನ ಮೊದಲ ಅಕ್ಷರದ್ದೋ ಕೊನೆಯ ಅಕ್ಷರದ್ದೋ ಉಚ್ಚಾರ ಸರಿ ಇಲ್ಲ ಎಂದು ಇವಳು ಹೇಳುವುದು ನಡೆಯುತ್ತಿತ್ತು. 

ಹೀಗೆ ವಾದ ನಡೆಯುತ್ತಿರಬೇಕಾದರೆ, ಉಷಾ, `ಪ್ರೇಮಾ ಎನ್ನುವ ಹೆಸರು ಹೇಗೆ?` ಎಂದಳು. ಉಷಾ `ಓಂ` ಮತ್ತು `ನಮ್ಮೂರ ಮಂದಾರ ಹೂವೇ` ಸಿನೆಮಾಗಳಲ್ಲಿ ನಟಿಸಿದ ಪ್ರೇಮಾಳ ಫ್ಯಾನ್ ಆಗಿದ್ದಳು. ಅಮರನ ಕಣ್ಣುಗಳಲ್ಲಿ ಒಂದು ಸಾವಿರ ವ್ಯಾಟಿನ ಮಿಂಚು ಮಿನುಗಿತು, ಮುಖದಲ್ಲಿ ಒಂದು ಕ್ಷಣ ಚಹರೆಯೇ ಬದಲಾಯಿತು; ಆದರೆ ತಕ್ಷಣವೇ ಸಾವರಿಕೊಂಡು `ಉಹುಂ, ಚೆನ್ನಾಗಿಲ್ಲ, ತುಂಬಾ ಹಳೆಯ ಹೆಸರು,` ಎಂದ. ಆದರೆ ಉಷಾ ಅವನ ಕಣ್ಣುಗಳಲ್ಲಿ ಮೂಡಿದ ಮಿಂಚನ್ನು, ಮುಖದ ಚಹರೆ ಬದಲಾದದ್ದನ್ನು ಗಮನಿಸಿದ್ದಳು, ಅವನಿಗೆ ‘ಪ್ರೇಮಾ` ಎನ್ನುವ ಹೆಸರು ಇಷ್ಟವಾಗಿದೆ, ಸುಮ್ಮನೇ ತನ್ನನ್ನು ಸತಾಯಿಸಲು ಇಷ್ಟವಿಲ್ಲ ಎಂದು ಸುಳ್ಳು ಹೇಳುತ್ತಿದ್ದಾನೆ ಎಂದುಕೊಂಡಳು. `ಪ್ರೇಮಾ ಎನ್ನುವ ಹೆಸರು ತುಂಬ ಚೆನ್ನಾಗಿದೆ, ಇವಳು ನಮ್ಮಿಬ್ಬರ ಪ್ರೇಮದ ಫಲವಲ್ಲವೇ?` ಎಂದು, `ಪ್ರೇಮಾ` ಎನ್ನುವ ಹೆಸರಿನ ಮೇಲೆ ಪಟ್ಟು ಹಿಡಿದಳು. ಅಮರ ಏನೇನೋ ಸಾಬೂಬು ಹೇಳಲು ಹೋದ, ಆದರೆ ಉಷಾ ಪಟ್ಟು ಬಿಡಲಿಲ್ಲ. ಆ ಹೆಸರು ಅವನ ಅಮ್ಮನಿಗೂ ತುಂಬ ಇಷ್ಟವಾಯಿತು. ವಿಧಿಯಿಲ್ಲದೇ ಒಪ್ಪಿಕೊಂಡ. 

ಅದೇ ಸಮಯಕ್ಕೆ ಪುಟ್ಟ ಮಗು ಉಚ್ಚೆ ಮಾಡಿ ಅವನ ಪ್ಯಾಂಟನ್ನೆಲ್ಲ ಒದ್ದೆ ಮಾಡಿತು. ತಕ್ಷಣವೇ ಮಕ್ಕಳ ವಿಭಾಗ ಪೋಸ್ಟಿಂಗಿನಲ್ಲಿ ತಾನು ಮಗುವೊಂದನ್ನು ಪರೀಕ್ಷೆ ಮಾಡಲು ಎತ್ತಿಕೊಂಡಾಗ, ಆ ಮಗು ತನ್ನ ಪ್ಯಾಂಟಿನ ಮೇಲೆ ಉಚ್ಚೆ ಮಾಡಿದಾಗ ಮೂಗಿಗೆ ಬಡಿದ ವಾಸನೆ, ಆಗ ಪಕ್ಕದಲ್ಲೇ ಇದ್ದ ಪ್ರೇಮಾ ನಗು ತಡೆಯಲಾಗದೇ ಐದು ನಿಮಿಷ ನಕ್ಕಿದ್ದು ನೆನಪಾಯಿತು. 

ಅವತ್ತಿನಿಂದ ಮಗಳಿಗೆ `ಪ್ರೇಮಾ` ಎಂದು ನಾಮಕರಣ ಮಾಡುವ ದಿನದವರೆಗೂ ಪ್ರತಿದಿನ ಅಮರನಿಗೆ ಪ್ರೇಮಾಳನ್ನು ನೋಡುವ ಹಂಬಲ ಹೆಚ್ಚಾಗುತ್ತಲೇ ಹೋಯಿತು. ತನ್ನ ಬಳಿಯಿದ್ದ ಪ್ರೇಮಾಳ ಬೆಂಗಳೂರಿನ ನಂಬರಿಗೆ ಫೋನು ಮಾಡಿದ. ಯಾರೂ ಎತ್ತಲಿಲ್ಲ (ಪ್ರೇಮಾಳ ತಾಯಿ ತಂದೆ ಅಮೇರಿಕಕ್ಕೆ ಮಗಳ ಹತ್ತಿರ ಹೋಗಿದ್ದರು). 

ಭಾಗ 3: ಇಸ್ವಿ 1996

ಅಮರನಿಗೆ ಪ್ರೇಮಾಳನ್ನು ನೋಡುವ ಅದಮ್ಯ ಹಂಬಲ ಮತ್ತೆ ಹುಟ್ಟಿದ್ದು, ಅವನ ಎಂ.ಬಿ.ಬಿ.ಎಸ್ ರೂಮ್-ಮೇಟ್ ಮಲ್ಲಿಕಾರ್ಜುನನಿಗೆ ಫೋನು ಮಾಡಿ ಇಟ್ಟ ಮೇಲೆ.  

ಅಮರ ಮೈಸೂರಿನಲ್ಲಿ ಎಂ.ಬಿ.ಬಿ.ಎಸ್ ಮುಗಿಸಿ, ಪುಣೆಯಲ್ಲಿ ಪಿ.ಜಿ ಮಾಡಲು ಹೋದಾಗಲೇ ಮೈಸೂರಿನ ಅವನ ಬಹುತೇಕ ಕ್ಲಾಸ್‍ಮೇಟುಗಳೆಲ್ಲ ಅಮೇರಿಕ ಮತ್ತು ಇಂಗ್ಲಂಡಿಗೆ ಹಾರಲು ತಯಾರಿ ಮಾಡಿದ್ದರು. ಅಮರನ ಬಹುತೇಕ ಕ್ಲಾಸ್‍ಮೇಟುಗಳೆಲ್ಲ ಬೆಂಗಳೂರು ಮೈಸೂರು ಮಂಗಳೂರಿನ ಕಡೆಯವರು ಬೇರೆ. ಉತ್ತರ ಕರ್ನಾಟಕದವರು ಬೆರಳಣಿಕೆಯಷ್ಟು ಮಾತ್ರ ಇದ್ದರು. ಹೀಗಾಗಿ ಇಂಟರ್ನೆಟ್ಟು ಮೊಬೈಲುಗಳಿಲ್ಲದ ಆ ಕಾಲದಲ್ಲಿ ಜಮಖಂಡಿಯ ಅಮರ ಮೈಸೂರು ಬಿಟ್ಟು ಪಿ.ಜಿ ಮಾಡಲು ಪುಣೆ ಸೇರಿದ ಮೇಲೆ ಅವನ ಸಂಪರ್ಕದಲ್ಲಿ ಇದ್ದುದು ಗೋಕಾಕಿನಿಂದ ಬಂದಿದ್ದ ಅವನ ರೂಮ್‍ಮೇಟ್ ಆಗಿದ್ದ ಮಲ್ಲಿಕಾರ್ಜುನನ ಜೊತೆ ಮಾತ್ರ. ಮಲ್ಲಿಕಾರ್ಜುನ ಎಂ.ಬಿ.ಬಿ.ಎಸ್ ಮುಗಿಸಿ ಪಿ.ಜಿ ಮಾಡದೇ ಗೋಕಾಕಿಗೇ ಹೋಗಿ ತಂದೆಯಿಂದ ಇನ್ನೂರು ಎಕರೆ ಜಮೀನಿನ ಉಸ್ತುವಾರಿ ತೆಗೆದುಕೊಂಡು ಪ್ರಾಕ್ಟೀಸನ್ನೂ ಆರಂಭಿಸಿದ್ದ. ಅಮರ ಆರು ತಿಂಗಳು ವರ್ಷಕ್ಕೊಮ್ಮೆ ಜಮಖಂಡಿಗೆ ಬಂದಾಗ ಮಲ್ಲಿಕಾರ್ಜುನನ್ನು ತಪ್ಪದೇ ಭೇಟಿಯಾಗುತ್ತಿದ್ದ. ಮಲ್ಲಿಕಾರ್ಜುನ ಜಮಖಂಡಿಗೆ ಬರುತ್ತಿದ್ದ, ಇಲ್ಲವೇ ಅಮರ ಗೋಕಾಕಿಗೆ ಹೋಗುತ್ತಿದ್ದ. ಹೀಗೆ ಮಲ್ಲಿಕಾರ್ಜುನ ಮೈಸೂರು ಮೆಡಿಕಲ್ ಕಾಲೇಜಿನ ಏಕೈಕ ಕೊಂಡಿಯಾಗಿದ್ದ. ಅಮರ ಪಿ.ಜಿ ಮುಗಿದ ಮೇಲೆ ಪುಣೆಯಲ್ಲೇ ಪ್ರಾಕ್ಟೀಸು ಮಾಡುತ್ತಿದ್ದ.  ಉಷಾಳನ್ನು ಮದುವೆಯಾದ, ಮಗಳಾದಳು, ಪುಣೆಯಲ್ಲೇ ಮನೆ ಕಟ್ಟಿದ. 

ಇಷ್ಟೆಲ್ಲ ಕಾಲ ಕಳೆದಿದ್ದರೂ ಇನ್ನೂ ಮೊಬೈಲು ಅದೇ ತಾನೆ ಕಾಲಿಡುತ್ತಿದ್ದ, ಮನೆಯಲ್ಲಿ ಫೋನು ಇದ್ದರೆ ಶ್ರೀಮಂತರು ಎಂದು ಅಂದುಕೊಳ್ಳುವ ಕಾಲವದು. ಆದರೆ ಲ್ಯಾಂಡ್‍ಲೈನಿನಿಂದ ಎಸ್.ಟಿ.ಡಿ ಸುಲಭವಾಗಿತ್ತು ಅನ್ನುವಷ್ಟರ ಮಟ್ಟಿಗೆ ಸಂವಹನ ತಂತ್ರಜ್ಞಾನ ಮುಂದುವರೆದಿತ್ತು. ಆಸ್ಪತ್ರೆಯ ಕೆಲಸ ಮುಗಿಸಿ ರಾತ್ರಿ ತಡವಾಗಿ ಮನೆಗೆ ಬರುತ್ತಿದ್ದಂತೆಯೇ, ಹೆಂಡತಿ ಉಷಾ ಮಲ್ಲಿಕಾರ್ಜುನ ಫೋನ್ ಮಾಡಿರುವುದಾಗಿಯೂ ಯಾವ ವಿಷಯನ್ನು ಹೇಳದೇ ಸುಮ್ಮನೆ ಮಾಡಿದ್ದೇನೆಂದು ಹೇಳಿ ಫೋನು ಇಟ್ಟನೆಂದೂ ಹೇಳಿದಳು. ಮಲ್ಲಿಕಾರ್ಜುನ ಹಾಗೆಲ್ಲ ಸುಮ್ಮಸುಮ್ಮನೇ ಫೋನು ಮಾಡುವವನಲ್ಲವೇ ಅಲ್ಲ. ಕೂಡಲೇ ಮಲ್ಲಿಕಾರ್ಜುನನಿಗೆ ಫೋನಿಸಿದ. 

`ಜುಲೈ ೧೫ ನೇ ತಾರೀಖು ಮೈಸೂರಿನಲ್ಲಿ ನಮ್ಮ ಎಂಬಿಬಿಎಸ್ ಬ್ಯಾಚಿನ ಇಪ್ಪತ್ತನೇ ವರ್ಷದ ಪುನರ್ಮಿಲನವಿದೆ, ನಾನು ಹೋಗುತ್ತಿದ್ದೇನೆ ಸುಕುಟುಂಬ ಸಮೇತ, ನೀನೂ ಅಷ್ಟೇ, ತಪ್ಪಿಸಬೇಡ, ಫ್ಯಾಮಿಲಿ ಜೊತೆ ಬಾ`, ಎಂದು ಮಲ್ಲಿಕಾರ್ಜುನ. ಫೋನು ಇಡುತ್ತಿದ್ದಂತೆಯೇ ಅಮರನಿಗೆ ಪ್ರೇಮಾಳನ್ನು ನೋಡುವ ಆಸೆ ಮತ್ತೊಮ್ಮೆ ಮೂಡಿತು. ಅಮೇರಿಕದಲ್ಲಿರುವ ಪ್ರೇಮಾಳಿಗೆ ಈ ವಿಷಯ ಗೊತ್ತಿದೆಯೋ ಇಲ್ಲವೋ, ಗೊತ್ತಾದರೂ ಅವಳು ಬರುತ್ತಾಳೋ ಇಲ್ಲವೋ ಎಂದು ಪ್ರಶ್ನೆಗಳೆದ್ದವು. ಕೂಡಲೇ ಮತ್ತೆ ಮಲ್ಲಿಕಾರ್ಜುನನಿಗೆ ಫೋನು ಮಾಡಿ, ಯಾರು ಆರ್ಗನೈಸ್ ಮಾಡುತ್ತಿದ್ದಾರೆ, ಯಾವ ಹೊಟೇಲಿನಲಿ ಇಳಿದುಕೊಳ್ಳುವ ವ್ಯವಸ್ಥೆಯಾಗಿದೆ, ಎಷ್ಟು ದುಡ್ಡು, ಎಷ್ಟು ದಿನ, ಯಾರು ಯಾರು ಬರುತ್ತಿದ್ದಾರೆ ಎಂದೆಲ್ಲ ಕೇಳಿ ಒಂದಿಷ್ಟು ವಿಷಯ ತಿಳಿದುಕೊಂಡ. ಅಮೇರಿಕಕ್ಕೆ ವಲಸೆ ಹೋದ ಕೆಲವು ಗೆಳೆಯರು ಬರುತ್ತಾರೋ ಇಲ್ಲವೋ ತಿಳಿದುಕೊಂಡ. ಅಮೇರಿಕ ಮತ್ತು ಇಂಗ್ಲಂಡಿನಲ್ಲಿ ಇರುವವರಿಗೆ ರಜೆ ಇರುವ ಸಮಯ ನೋಡಿಯೇ ಜುಲೈನಲ್ಲಿ ಇಟ್ಟುಕೊಂಡಿರುವುದಾಗಿ ಮಲ್ಲಿಕಾರ್ಜುನ ಹೇಳಿದ. ನೇರವಾಗಿ ಪ್ರೇಮಾಳಿಗೆ ಈ ವಿಷಯ ಗೊತ್ತೋ ಇಲ್ಲವೋ ಕೇಳಲು ಹೋಗಲಿಲ್ಲ, ಏಕೆಂದರೆ ಮಲ್ಲಿಕಾರ್ಜುನನಿಗೂ ಕೂಡ ತನಗೆ ಆ ಕಾಲದಲ್ಲಿ ಪ್ರೇಮಾಳನ್ನು ಕಂಡರೆ ಇಷ್ಟ ಎಂಬ ಸಣ್ಣ ಸುಳಿವನ್ನೂ ಕೊಟ್ಟಿರಲಿಲ್ಲವಲ್ಲ. 

ಉಷಾ, `ಏನು ಸಮಾಚಾರ? ನಿನ್ನ ಫ್ರೆಂಡಿಗೆ ಫೋನು ಮಾಡಿ ತುಂಬ ಖುಷಿಯಲ್ಲಿ ಇದ್ದೀಯಾ?` ಎಂದು ಅಮರನನ್ನು ಕೇಳಿದಳು. 

ಅಮರ ಖುಷಿಖುಷಿಯಲ್ಲಿ ಮೈಸೂರಿನಲ್ಲಿ ನಡೆಯುವ `ಪುನರ್ಮಿಲನ`ದ ಬಗ್ಗೆ ಹೇಳಿದ. ಎಂದೂ ಜಾಸ್ತಿ ಮಾತಾಡದ ಅಮರ, ಊಟ ಮಾಡುತ್ತ, ಊಟವಾದ ಮೇಲೆ ತನ್ನ ಎಂ.ಬಿ.ಬಿ.ಎಸ್ ದಿನಗಳ ಬಗ್ಗೆ, ಗುರುಗಳ ಬಗ್ಗೆ, ಕಾಲೇಜಿನ ಬಗ್ಗೆ, ಮೈಸೂರಿನ ರಸ್ತೆ-ಗಲ್ಲಿಗಳ ಬಗ್ಗೆ, ಹೊಟೇಲುಗಳ ಬಗ್ಗೆ ಕಥೆಗಳನ್ನು ಹೇಳುತ್ತ ಹೋದ. ಮಲ್ಲಿಕಾರ್ಜುನ ಕುಟುಂಬ ಸಮೇತ ಬರುತ್ತಿರುವುದಾಗಿ ಹೇಳಿದ. ಉಷಾ ಇದನ್ನೆಲ್ಲ ಆಗಲೇ ನೂರಾರು ಸಲ ಕೇಳಿದ್ದಳು. ಆದರೂ ಈಗ ಹುಟ್ಟಿರುವ ಉತ್ಸಾಹಕ್ಕೆ ಏಕೆ ತಣ್ಣೀರೆರೆಯುವುದೆಂದು ಕೇಳಿಸಿಕೊಂಡಂತೆ ನಟಿಸಿದಳು. 

ಉಷಾ, `ನಾನೂ ಕೂಡ ಮೈಸೂರು ನೋಡಿ ಯಾವ ಕಾಲವಾಯಿತು? ಮಗಳು ಕೂಡ ಮೈಸೂರು ನೋಡಿಲ್ಲ,` ಎಂದಳು. 

ಅಮರ ಮಾರನೆಯ ದಿನವೇ ಪುಣೆಯಿಂದ ಬೆಂಗಳೂರಿಗೆ ಮೂವರಿಗೂ ರೈಲು ರಿಸರ್ವೇಶನ್ ಮಾಡಿದ.  

ಅಂದಿನಿಂದ ಅಮರನಿಗೆ ಪ್ರೇಮಳನ್ನು ನೋಡುವ ಆಸೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಯಿತು. ಇದುವರೆಗೂ ಒಂದೇ ಒಂದು ಸಲವೂ ಪ್ರೇಮದ ಸುಳಿವು ಬಿಟ್ಟುಕೊಡದ, ತುಟಿ ಸೋಕದ, ಮೈಮುಟ್ಟದ ಪ್ರೇಮಾಳನ್ನು ನೋಡುವ ಕಾತರ ಇಷ್ಟು ವರ್ಷವಾದ ಮೇಲೂ ಮತ್ತೆ ಚಿಗುರಿ ಪೆಡಂಭೂತದಂತೆ ಬೆಳೆಯುತ್ತಿರುವುದನ್ನು ನೋಡಿ ಅಮರನಿಗೆ ದಿಗಿಲಾಯಿತು, ಅದೇ ಸಮಯಕ್ಕೆ ತನ್ನ ವಯಸ್ಸು ಇಪ್ಪತ್ತು ವರ್ಷ ಹಿಂದೆ ಚಲಿಸುತ್ತಿರುವಂತೆ ಅನಿಸಿ ರೋಮಾಂಚನವೂ ಆಯಿತು.

(ಮುಂದುವರೆಯುವುದು…)

ಫೋಟೋ ಕವನ ಸಂಚಿಕೆ ೨

ಹನಿಗಳು ಮತ್ತು ಹಾದಿಗಳು

ಕಾವ್ಯ ಕಟ್ಟುವ ಕೆಲಸ ಬಹಳ ಮೌಲಿಕವಾದದ್ದು. ಕವಿತೆಗಳು  ಏಕಾಂತದ ಕವಿತೆಗಳಾಗಿರಬಹುದು, ಲೋಕಾಂತದ ಕವಿತೆಗಳಾಗಿರಬಹುದು.  ಭಾವನಾತ್ಮಕ,  ಉತ್ಪ್ರೇಕ್ಷಿತ, ವೈಚಾರಿಕ, ವರ್ಣನಾತ್ಮಕ, ಪ್ರಾಮಾಣಿಕ ಯಾವುದೂ ಆಗಿರಬಹುದು. ಬಂಡಾಯ, ಖಂಡನೆ, ನೋವು, ವಿಡಂಬನೆ, ಹಾಸ್ಯ , ಶೃಂಗಾರ, ಪ್ರೀತಿ ವಿರಹ, ವಿದಾಯ, ವೇದನೆ, ಭಕ್ತಿ, ಬಿನ್ನಹದ ಕೇಂದ್ರಗಳನ್ನು ಹೊಂದಿರಬಹುದು. ಹೋಲಿಕೆ, ವೈರುಧ್ಯಗಳ ಹಾದಿಯನ್ನು ತುಳಿಯಬಹುದು. ಓದುಗರಿಗೆ ಲೌಕಿಕ, ಅಲೌಕಿದ ಅನುಭಗಳನ್ನು ನೀಡಬಲ್ಲದು.

ಕಾವ್ಯ ಓದುಗರನ್ನು ಮುದಗೊಳಿಸಬಲ್ಲವು. ಚಿಂತನೆಗೆ ತಳ್ಳಬಹುದು. ಭಾವ ಪರವಶತೆಯ ಅನುಭವ
ನೀಡಬಲ್ಲವು, ಸುಖಿಸುವಂತೆ ಮಾಡಬಲ್ಲವು, ನಗಿಸಬಲ್ಲವು, ಅಳಿಸಬಲ್ಲವು, ಅಚ್ಚರಿಗೆ ತಳ್ಳಬಹುದು, ಎಚ್ಚರಿಕೆಯನ್ನು ನೀಡಬಲ್ಲವು. ಜೀವನ ಪ್ರೀತಿಯನ್ನು ಹೆಚ್ಚಿಸಬಲ್ಲವು. ಕಾವ್ಯಕ್ಕೆ ಇರುವ ಹರವು ವಿಸ್ತಾರವಾದದ್ದು.ಅವುಗಳು ಹುಟ್ಟುವ ಸಮಯವನ್ನು ಕವಿ ಸಮಯ ಎನ್ನುತ್ತಾರೆ.

ವಾರದ ಛಾಯಾಗ್ರಾಹಕ ರಾಮಶರಣ ಲಕ್ಷ್ಮೀನಾರಾಯಣ ಮತ್ತು ಕವಿ ಕೇಶವ ಕುಲಕರ್ಣಿ. ಕವಿತ್ವವನ್ನು ಉದ್ದೀಪನಗೊಳಿಸಿ ಒರೆಗೆ ಹಚ್ಚಿರುವುದು  ರಾಮಶರಣರ  ಕ್ಯಾಮರಾ ಹಿಂದಿನ ಕಣ್ಣುಗಳು.  ಕಣ್ಣಿಗೆ ಕಂಡದ್ದನ್ನು ಹೀಗೇ ಸೆರೆಹಿಡಿಯಬೇಕೆನ್ನುವುದು. ಫೋಟಾಗ್ರಫಿ ಪ್ರಿಯರ ಆಸೆ.  ಅಂತಹ ಕ್ಷಣವನ್ನು ಸೆರೆಹಿಡಿದಾಗಿನ ಅದ್ಭುತ  ರೋಮಾಂಚನ ಅವರಿಗೆ ಕಾವ್ಯವನ್ನು ಬರೆದಷ್ಟೇ ಸಂತೋಷ ನೀಡಬಲ್ಲುದು.  ನೋಡಿದಾಗೆಲ್ಲ ಮತ್ತೆ,ಮತ್ತೆ ಅವರಲ್ಲಿ ಸಂತಸವನ್ನು ಹೆಚ್ಚಿಸಿ, ಹೆಮ್ಮೆಯ ಭಾವವನ್ನು ಮೂಡಿಸಬಲ್ಲವು.

ಛಾಯಾಚಿತ್ರ ತೆಗೆಯುವವರು ಒಂದು ಚಿತ್ರದ ಮೂಲಕ ಕೇವಲ ಒಂದು ದೃಶ್ಯವನ್ನು ಒದಗಿಸಿದರು,
ಅದನ್ನು ಕವಿಗಳ ಮುಂದೆ ಹಿಡಿದಾಗ ಕವಿಗೆ ಕಾಣುವ ನೋಟಗಳು ಅನೇಕ. ವಾರದ ವಿಶೇಷ ಕೂಡ
ಅದೇ.

 ರಾಮಶರಣರ ಅಚ್ಚರಿ ತರುವ ನಿಖರತೆ, ನಿಚ್ಚಳತೆ,  ತಾಂತ್ರಿಕತೆ, ಸೌಂದರ್ಯ ಮತ್ತು ಭಾವಗಳನ್ನು ತುಂಬಿದ  ಚಿತ್ರಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಅವೇ ಚಿತ್ರಗಳು ಕೇಶವರಿಗೆ ಕವಿ ಸಮಯವನ್ನು ಒದಗಿಸಿವೆ.  ಕೆಲವು ಚಿತ್ರಗಳಂತೂ ಕವಿ ಮನಸ್ಸಿನಲ್ಲಿ ಹಲವು ಭಾವಗಳನ್ನು ಹೊಮ್ಮಿಸಲು ಸಮರ್ಥವಾಗಿವೆ.

ರಾಮಶರಣ್‌ ಒಂದೇ ವಿಷಯಕ್ಕೆ ಸಂಬಂಧಿಸಿದಂತ ಹಲವು ಚಿತ್ರಗಳನ್ನು ಒದಗಿಸಿ ಸರಣಿಗೆ ಒಂದು
ಶೀರ್ಷಿಕೆಯನ್ನು ನೀಡಿದ್ದರು. ಅದನ್ನೇ ಇಲ್ಲಿ ನೀಡಿದ್ದೇನೆ. ಕೇಶವ್‌ ಸರಣಿಯ ಒಂದು ಅಥವಾ ಹಲವು ಚಿತ್ರಗಳನ್ನು ಆಯ್ದು ಕವನಗಳನ್ನು ರಚಿಸಿದ್ದಾರೆ. ಇನ್ನೂ ವಿಶೇಷವೆಂದರೆ ತಾವೇ ಪೀಠಿಕೆಯ ಕಿರು ಗವನಗಳನ್ನು ಬರೆಯುತ್ತ ಒಂದು ಚಿತ್ರ ಹೇಗಿರಬೇಕೆಂದು ಹೇಳುತ್ತ ಜೊತೆಗೆ ಚಿತ್ರಕ್ಕೆ ಬರೆದ ಕವನದಲ್ಲಿ ಏನಿರಬಾರದೆಂದೂ ವಿವರಿಸಿದ್ದಾರೆ. ಅದು ಅವರ ಕುಶಲಮತಿ ಪ್ರತಿಭೆಗೆ ಸಾಕ್ಷಿಯಾಗಿದೆ.

ಓದಿರಿ. ಚಿತ್ರಗಳನ್ನು ಕೂಲಂಕುಶವಾಗಿ ಅವಲೋಕಿಸಿ. ಮತ್ತೆ ಓದರಿ. ಮರೆಯದೆ ಕಮೆಂಟಿಸಿ- ಸಂ


ಪೀಠಿಕೆಯ ಕಿರುಗವನಗಳು:

ಒಂದು ಹೈಕುವನ್ನಾದರೂ

ಬರೆಸಿಕೊಳ್ಳದ ಫೋಟೊ

ಫೋಟೋನೇ ಅಲ್ಲ

ಈ ಫೋಟೋದ ಸಂಯೋಜನೆ ಹೇಗೆ

ಎಷ್ಟು ISO

ಎಷ್ಟು ದ್ಯುತಿರಂಧ್ರ

ಎಷ್ಟು ನಾಭಿದೂರ

ಎಷ್ಟು ಸಂಸ್ಕರಣ

ಎಂದು ವಿವರಣೆ ಕೇಳಿದ ದಿನ

ಫೋಟೋದೊಳಗಿನ ಕವಿತೆ

ಸತ್ತುಹೋಗುತ್ತದೆ

ʼಹನಿಗಳು ಸರ್‌ ಹನಿಗಳುʼ ಸರಣಿ: `ಇಬ್ಬನಿಗಳು`

ಜಗದ ಕೊಳೆಯ
ತೊಳೆಯೆ
ಇಳೆಗೆ ಬಂದೇ ಏನೇ
ಇಬ್ಬನಿ?
ರಾತ್ರಿಯೆಲ್ಲ ಬಿಕ್ಕಳಿಸಿ
ಜಾರದೇ ಉಳಿದ ಕಂಬನಿ
ಇಬ್ಬನಿ
ರಾತ್ರಿಯೆಲ್ಲ
ಅಪ್ಪಿತಬ್ಬಿ
ಅಪ್ಪಿತಪ್ಪಿ
ಉಳಿದ ಮುತ್ತಿನ ಹನಿ
ಇಬ್ಬನಿ
ಮುಂಜಾವಿನ ಕೊರಳಿಗೆ
ವಜ್ರದ ಹರಳು
ಇಬ್ಬನಿ
ನೇಸರನ ಸ್ವಾಗತಕೆ
ಥಳಿ ಹೊಡೆದ ನೀರು
ಇಬ್ಬನಿ

ರಾತ್ರಿಯ ಸೆಕೆಗೆ
ಮೂಡಿದ ಬೆವರು
ಇಬ್ಬನಿ
ಪ್ರೇಮಿಯ ಕೂದಲಿನ
ಅಂಚಿಗೆ ಉಳಿದ ಹನಿ
ಇಬ್ಬನಿ
ಕಣ್ಣು ಬಿಟ್ಟ ಮಗು
ಅಮ್ಮನನ್ನು ಕಂಡ ಖುಷಿಯಲ್ಲಿ
ಮೂಡಿದ ಕಣ್ಣಂಚಿನ ಪಸೆ
ಇಬ್ಬನಿ
ಮುಂಜಾವಿನೆದೆಯಿಂದ
    ದು
  ರಿ
ಬೀಳುವ ಹನಿ
ಇಬ್ಬನಿ
೧೦
ಮತ್ತೆ ಬೆಳಗಾಯಿತು
ಮತ್ತೆ ಹೊಸಜೀವ ಬಂದಿತು
ನಿಸರ್ಗದ ಆನಂದ ಬಾಷ್ಪ
ಇಬ್ಬನಿ

೧೧
ರಾತ್ರಿ ಹೊತ್ತು
ಯಾವುದೋ ಕೀಟ ಮಾಡಿದ ಗಾಯಕ್ಕೆ
ಎಲೆ ಮೇಲೆ ಮೂಡಿದ ಗುಳ್ಳೆ
ಇಬ್ಬನಿ
೧೨
ಅನಂತದಲಿ ಬಿಂದು
ಬಿಂದುವಿನಲಿ ಅನಂತ
ಒಂದು ಮಂಜಿನ ಹನಿ
ಯೊಳಗೊಂದು ಬ್ರಹ್ಮಾಂಡ
೧೩
ಎಲೆಯ ಮೇಲೆ
ಮುಂಜಾವಿನ
ಮುತ್ತಿನ ಗುರುತು
ಸ್ವಲ್ಪ ಹೊತ್ತು
ಹಾಗೇ ಇರಲಿ ಬಿಡು
೧೪
ಪದಗಳಲ್ಲಿ
ಹುಡುಕಿದರೂ ಸಿಗದ ಕವಿತೆ
ಪುಟ್ಟ ಹುಲ್ಲಿನೆಳೆಯ ಮೇಲೆ
ಮುಂಜಾವಿನ ಮಂಜಿನೊಳಗೆ
ನಗುತ್ತ ಕಣ್ಬಿಡುತ್ತಿತ್ತು

*****

ʼಹೋದಲೆಲ್ಲ ಹಾದಿ ʼ ಸರಣಿ: 

೧. ಬೆಂಚಿನ ಸ್ವಗತ

ಮುಂಜಾವಿನ ಬಾಗಿಲು ಅದೇ ತೆರೆದಿತ್ತು
ಅರ್ಲಿಮಾರ್ನಿಂಗ್ ವಾಕಿನ ಮಧ್ಯವಿರಾಮಕ್ಕೆ
ಬಂದು ನನ್ನ ಮೇಲೆ ಕೂತರು ಇಬ್ಬರು
ವಯಸ್ಸು ಎಪ್ಪತ್ತೋ ಎಂಬತ್ತೋ
ಒಬ್ಬರು ತಮ್ಮ ತೀರಿಹೋದ ಹೆಂಡತಿಯನ್ನು
ಪರದೇಶಕ್ಕೆ ಹೋದ ಮಕ್ಕಳನ್ನು ನೆನಯುತ್ತ
‘ನನ್ನ ಬದುಕು ಈ ಬೆಂಚಿನಂತೆ ಒಂಟಿ,’ ಎಂದು ಹಲುಬಿದರು.
ಇನ್ನೊಬ್ಬರು ಸಮಾಧಾನ ಮಾಡುತ್ತಿದ್ದರು
ಕಾಲೇಜಿಗೆ ಚಕ್ಕರ್
ನನ್ನ ಮೇಲೆ ಹಾಜರ್
ಕಿಲಿಕಿಲಿ ನಗು
ಚಿಲಿಪಿಲಿ ಮಾತು
ಕದ್ದು ಕದ್ದು ಮುತ್ತು
ಹುಸಿಮುನಿಸು
ಅಳುನಟನೆ
ತುಂಟನಗು
‘ನೀನು ನನ್ನನ್ನು ಎಷ್ಟು ಪ್ರೀತಿಸುತ್ತೀಯಾ?’ ಎಂದಳು
‘ಈ ಬೆಂಚು ಇಲ್ಲಿರುವವರೆಗೂ,’ ಎಂದ
ಅವನ ಕೆನ್ನೆಗೊಂದು ಮುತ್ತು ಸಿಕ್ಕಿತು
ಲಂಚ್ ಬ್ರೇಕಿನಲ್ಲಿ ಹತ್ತಿರದ ಆಫೀಸಿನಿಂದ ಬಂದು
ಡಬ್ಬಿ ಬಿಚ್ಚಿದರು; ಅವನ ಡಬ್ಬ ಇವನು
ಇವನ ಡಬ್ಬ ಅವಳು ಹಂಚಿಕೊಂಡರು
ಇವನ ಹೆಂಡತಿ ಕೊಡುವ ಕಾಟ ಅವಳು ಕೇಳಿಸಿಕೊಂಡಳು
ಅವಳ ಗಂಡ ಕೊಡುವ ಕಷ್ಟ ಇವನು ಕೇಳಿಸಿಕೊಂಡ
‘ನಮ್ಮ ಬದುಕು ಈ ಬೆಂಚಿನಂತೆ
ಎಲ್ಲೂ ಹೋಗುವುದಿಲ್ಲ, ಏನೂ ಆಗುವುದಿಲ್ಲ,’ ಎಂದರು
ಮತ್ತೆ ಆಫೀಸಿಗೆ ಹೋಗುವ ಸಮಯವಾಯಿತು
ಈಗ ರಾತ್ರಿಯ ನೀರವಮೌನದಲ್ಲಿ
ಬೀದಿದೀಪಗಳ ಮಬ್ಬುಬೆಳಕಲ್ಲಿ
ಒಂಟಿಯಾಗಿ
ದಿನದ ನೂರಾರು ಕತೆಗಳ ನೆನೆಯುತ್ತ
ದಿನದ ಸಾವಿರಾರು ಕವನಗಳ ಕನವರಿಸುತ್ತ
ನಿದ್ದೆ ಬರದೇ
ಕೂತೇ ಇದ್ದೇನೆ

೨. ಎಲ್ಲಿ ಹೋಗುವಿರಿ ಹೇಳಿ ಹಾದಿಗಳೇ

ಕಲ್ಲು ಮುಳ್ಳಿನ ಹಾದಿಯ
ನೆನಪುಗಳು ಕಳೆದಿಲ್ಲ
ಬಿದ್ದು ಕಲ್ಲಿನ ಮೇಲಾದ ಗಾಯದ ಗುರುತುಗಳು
ಚುಚ್ಚಿಸಿಕೊಂಡ ಅಪಮಾನಗಳು

ಇಲ್ಲಿ ಎಲ್ಲ ಒಳ್ಳೆಯವರು
ಎಂಬ ನಂಬಿಕೆಯಲ್ಲಿ
ಹಲ್ಲು ಕೊರೆದ ಹಾದಿಯಲ್ಲಿ
ಜೊತೆಗೆ ಬಂದವರು
ನನಗಿಂತ ಸ್ವಲ್ಪ ಹೆಚ್ಚೇ ನೋವುಂಡವರು

ಹೂವಿನ ದಾರಿಯ ಮೇಲೆ
ನಡೆಸುವೆ ಎಂದು ಭರವಸೆ ಕೊಟ್ಟವರು
ಹೂವಿನ ಜೊತೆ ಮುಳ್ಳೂ ಇರುತ್ತದೆ
ಎಂದು ಹೇಳುವುದನ್ನು ಮರೆತರು
ನನಗೆ ಅರಿವಾಗುವಷ್ಟರಲ್ಲಿ ಅವರಿದ್ದೂ ಇರಲಿಲ್ಲ

ಅಲ್ಲಿಯೂ ಸಲ್ಲಲಿಲ್ಲ
ಇಲ್ಲಿಗೂ ಒಗ್ಗಿಕೊಳ್ಳಲಿಲ್ಲ
ದೇಶಬಿಟ್ಟ ಪರದೇಸಿ
ಕಲ್ಲಿಗಿಂತ ಕಲ್ಲಾಗಿ
ಪರಸಿಕಲ್ಲಿನ ಹಾದಿಯ ಮೇಲೆ
ಅಂಗಡಿ ಅಂಗಡಿಗಳಲ್ಲಿ
ನಡೆವ ಜನರ ಮುಖಗಳಲ್ಲಿ
ಸುಖ ಸಂತೋಷ ಹುಡುಕುತ್ತೇನೆ
ಹಾದಿಹೋಕ ನಾನು
ಹಾದಿಹೋಕನಾಗಿಯೇ ಉಳಿದಿದ್ದೇನೆ

ವಾರಾಂತ್ಯಕ್ಕೆ ಬಿಡುವು ಹುಡುಕುತ್ತೇನೆ
ಹುಲ್ಲುಹಾಸಿನ ಹಾದಿಯ
ಫೋಟೋ ತೆಗೆದು
ಫೋನಿನ ವಾಲ್-ಪೇಪರ್ ಮಾಡಿಕೊಳ್ಳುತ್ತೇನೆ

ಹೈವೇಯ ಸೈನ್-ಬೋರ್ಡುಗಳು
ಈಗ ನನ್ನ ಮಿತ್ರರು
ನನ್ನ ಕಾರಿನ ದಾರಿ ಹೇಳಿಕೊಡುವವರು
ಹಗಲು ಸಂಜೆ ಅದೇ ಹಾದಿ
ಕಾರಿಗಿಂತ ಯಾಂತ್ರಿಕವಾಗಿ ಬದುಕು ನಡೆಸುತ್ತೇನೆ
*
ಕಾಲ ಮಾಗುತಿದೆ
ದಾರಿ ಸವೆಯುತಿದೆ
ತಾಣದ ಮರೀಚಿಕೆ
ಹಾಗೇ ಉಳಿದಿದೆ
ಹಾಗೇ ಉಳಿದರೇ ಬದುಕೆ?