ಮೋನಲೀಸಾ 
(ಕಲಾಭಿಮಾನಿಯ ಸ್ವಗತ) 

ಫೋಟೋ ಕೃಪೆ ಗೂಗಲ್

೧೬ನೇ ಶತಮಾನದಲ್ಲಿ ಪ್ರಖ್ಯಾತ ಚಿಂತಕ, ವಿಜ್ಞಾನಿ, ಕಲೆಗಾರ ಲಿಯೋನಾರ್ಡೊ ಡಾವಿಂಚಿ ರಚಿಸಿದ ಅದ್ಭುತ ಅದ್ವಿತೀಯ ವರ್ಣಚಿತ್ರ"ಮೋನಲೀಸ" ಈ ವರ್ಣಚಿತ್ರವನ್ನು ಡಾವಿಂಚಿ ಉತ್ತರ ಇಟಲಿಯಲ್ಲಿ ಸೃಷ್ಟಿಸಿದ್ದು ನಂತರ ಅದನ್ನು ಫ್ರಾನ್ಸ್ ದೇಶ ಪಡೆದುಕೊಂಡು ನೂರಾರು ವರುಷಗಳಿಂದ ಅದು ಪ್ಯಾರಿಸ್ಸಿನ ಲುವ್ರ ಅರಮನೆ ಎಂಬ ಮ್ಯೂಸಿಯಂನಲ್ಲಿ ಶಾಶ್ವತವಾಗಿ ನೆಲೆಯೂರಿದೆ. ಇದು ಕಲಾ ಪ್ರಪಂಚದಲ್ಲಿ ಅತ್ಯಂತ ಬೆಲೆಯುಳ್ಳ ಕಲಾಕೃತಿಯಾಗಿದೆ. ಈ ಚಿತ್ರದಲ್ಲಿ ಮೋನಾಲೀಸಳಾ ಒಂದು ಕಿರು ನಗೆ (Half smile) ವಿಶೇಷವಾದದ್ದು ಮತ್ತು ಯಾವ ದಿಕ್ಕಿನಿಂದ ನೋಡಿದರೂ ಮೋನಲೀಸಾ ನೋಡುಗರ ಕಡೆ ಕಣ್ಣು ಹಾಯಿಸುವಂತೆ ಭಾಸವಾಗುತ್ತದೆ. ಅವಳ ಈ ನಿಗೂಢ ಚಹರೆಯನ್ನು ಹಲವಾರು ತಜ್ಞರು ವಿಶ್ಲೇಷಿಸಿ ಪಾಂಡಿತ್ಯಪೂರ್ಣ ಅಭಿಪ್ರಾಯವನ್ನು ಒದಗಿಸಿದ್ದಾರೆ. ನಾನು ಹಲವಾರು ಬಾರಿ ಪ್ಯಾರಿಸ್ಸಿನ ಲುವ್ರ್ ಮ್ಯೂಸಿಯಂಗೆ ತೆರಳಿ ಮೋನಲೀಸಾ ಕಲಾಕೃತಿಯನ್ನು ವೀಕ್ಷಿಸಿದ್ದೇನೆ. ನಾನು ಭಾವನಾತ್ಮಕ ನೆಲೆಯಲ್ಲಿ ಈ ಚಿತ್ರವನ್ನು ವಿಶ್ಲೇಷಿಸಿ ನನ್ನ ಕೆಲವು ಅನಿಸಿಕೆಗಳನ್ನು ಒಂದು ಸ್ವಗತ ಕಾವ್ಯ ರೂಪದಲ್ಲಿ ವ್ಯಕ್ತಪಡಿಸಿದ್ದೇನೆ.ಮೋನಲೀಸಾ ನಮ್ಮ- ನಿಮ್ಮ ನಡುವಿನ ಸ್ತ್ರೀಯಾಗಿ, ರೂಪಕವಾಗಿ ನನ್ನ ಆಲೋಚನೆಗಳನ್ನು ಕೆದಕಿದ್ದಾಳೆ. ದಯವಿಟ್ಟು ಓದಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.
ಮೋನಲೀಸಾ (ಕಲಾಭಿಮಾನಿಯ ಸ್ವಗತ) 

ಡಾ. ಜಿ. ಎಸ್. ಶಿವಪ್ರಸಾದ್


ಖುಷಿಯಾಗಿ ಮನಬಿಚ್ಚಿ ನಗಲೇಕೆ? 
ಈ ಹುಸಿ ನಗೆಯೇಕೆ? ನಗಲೂ ಚೌಕಾಶಿಯೇ, 
ಭಾವನೆಗಳಿಗೂ ಕಡಿವಾಣವೇ? 
ಮೊಗ್ಗು ಹೂವಾಗಿ ಅರಳಿದಾಗ
ಚೆಲುವಲ್ಲವೇ
? ಹೇಳು ಮೋನಲೀಸಾ 

ನಿನ್ನ ಈ ಮಾರ್ಮಿಕ ಚಹರೆ 
ಅದೆಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ 
ಕಲಾವಿದರು, ಪಂಡಿತರು, ಸಾಮಾನ್ಯರು 
ನಿನ್ನ ನಿಲುವನ್ನು ವಿಮರ್ಶಿಸಿದ್ದಾರೆ 
ಉತ್ತರ ನಿನಗಷ್ಟೇ ಗೊತ್ತು 

ನೂರಾರು ವರ್ಷಗಳು ಪ್ಯಾರಿಸ್ಸಿನ 
ಅರಮನೆಯಂಬ ಸೆರೆಮನೆಯಲ್ಲಿ 
ಕೂತು, ಎಲ್ಲರ ಕಣ್ಣಲ್ಲಿ ಕಣ್ಣಿಟ್ಟು 
ಒಂದೇ ಸಮನೆ ನಕ್ಕು ಸಾಕಾಯಿತೇ 
ಮೋನಲೀಸಾ ?

ಶತಮಾನಗಳ ಹಳೆ ನೆನಪುಗಳೆ?
ಒಂಟಿತನದ ಬೇಸರವೇ, ವಿರಹದ ನೋವೇ?
ತವರಿನ ತುಡಿತವೇ? ನಿನ್ನನ್ನು ಹೀಗೆ 
ಚಿತ್ರಿಸಿದ ಡಾವಿಂಚಿಯ ಮೇಲೆ ಕೋಪವೇ? 

ಫ್ರೆಂಚ್ ಕ್ರಾಂತಿಯಲ್ಲಿ ಮುಗ್ಧರ ಬಲಿದಾನ,
ಕರೋನ ಮಹಾಮಾರಿ, ಭಯೋತ್ಪಾದನೆ 
ಇವಲ್ಲೆವನ್ನು ಕಂಡೂ ನಿಸ್ಸಹಾಯಕಳಾಗಿ 
ಕುಳಿತ್ತಿದ್ದೇನೆ ಎಂಬ ಅಪರಾಧ ಪ್ರಜ್ಞೆಯೇ?

ನಿನ್ನನ್ನು ಖುಷಿಯಾಗಿಸಲು 
ನಾನೇನು ಮಾಡಬೇಕು ಹೇಳು?
ಚಾರ್ಲಿ ಚಾಪ್ಲಿನ್ ಸಿನಿಮಾ ತೋರಿಸಲೇ 
ನನ್ನ ಒಂದೆರಡು ಹನಿಗವನಗಳನ್ನು ಓದಲೇ? 

ಇಲ್ಲ ...
ಐಫಿಲ್ ಟವರ್ ತೋರಿಸಲೇ? 
ಶ್ಯಾಂಪೇನ್ ಕುಡಿಸಲೇ? 
ಏನಾದರೂ ಹೇಳು ಮೋನಲೀಸಾ 
ಬೇಡ ಈ ವಿಲಕ್ಷಣ ಮೌನ 

ಓಹ್, ಚಿತ್ರದ ಚೌಕಟ್ಟಿನಿಂದ 
ಹೊರಬರುವ ತವಕವೇ ಮೋನಲೀಸಾ 
ಬೇಡ ಬೇಡ, ನೀನು ಅಲ್ಲೇ ಸುರಕ್ಷಿತವಾಗಿರು 
ಶ್ರೀಮಂತರು ನಿನ್ನನ್ನು ಹರಾಜು ಹಾಕಿಬಿಡುತ್ತಾರೆ 
ಕಳ್ಳರು ನಿನ್ನನು ಮಾರಿಕೊಳ್ಳುತ್ತಾರೆ 

ಪ್ಯಾರಿಸ್ಸಿನ ಫ್ಯಾಷನ್ ಡಿಸೈನರ್ಗಳು 
ನಿನ್ನನ್ನು ಉಪವಾಸ ಕೆಡವಿ, 
ಮೈಭಾರವಿಳಿಸಿ, ಅರೆ ನಗ್ನ ಗೊಳಿಸಿ 
ಕ್ಯಾಟ್ ವಾಕ್ ವೇದಿಕೆಯ ಮೇಲೆ 
ಮೆರವಣಿಗೆ ಮಾಡುತ್ತಾರೆ! 

ಪ್ರಪಂಚ ಬದಲಾಗಿದೆ ಮೋನಲೀಸಾ 
ಹೊರಗೆ ಕಾಲಿಟ್ಟ ಕೂಡಲೇ 
ನಿನ್ನ ಬಣ್ಣ, ಅಂದ, ಚೆಂದ, ಮೈಕಟ್ಟು 
ಸಂಪತ್ತು, ಜಾತಿ, ಧರ್ಮ ಇವುಗಳನ್ನು 
ಮುಂದಿಟ್ಟು ಅಳೆಯುತ್ತಾರೆ 

ಸಮಾಜ ಹಾಕಿರುವ ಫ್ರೆಮಿನೊಳಗೆ 
ಎಲ್ಲ ಸ್ತ್ರೀಯರು ಇರುವಂತೆ, ನೀನೂ
ಫ್ರೆಮಿನೊಳಗೇ ಇರಬೇಕೆಂಬುದು ಎಲ್ಲರ ನಿರೀಕ್ಷೆ 
ಸ್ತ್ರೀವಾದ, ಸ್ತ್ರೀ ಸ್ವಾತಂತ್ರ್ಯ ಉಳಿದಿರುವುದು 
ವಿಚಾರವಂತರ ಭಾಷಣಗಳಲ್ಲಷ್ಟೇ

ಹರುಷವಿರಲಿ ದುಃಖವಿರಲಿ ಹಾಕಿಕೋ 
ನಿನ್ನ ನಸು ನಗೆಯ ಮುಖವಾಡ 
ನಾವು ಹಣ ತೆತ್ತು ಬರುವುದು 
ನಿನ್ನ ಕಿರುನಗೆಯನ್ನು ನೋಡಲಷ್ಟೇ 
ನಿನ್ನ ಕಷ್ಟ ಇಷ್ಟಗಳು ಇರಲಿ ನಿನ್ನೊಳಗೇ 

ಸೆಲ್ಫಿಗಳ ಸುರಿಮಳೆಯು ನಿಂತಮೇಲೆ 
ಕಲಾಭಿಮಾನಿಗಳು ನಿರ್ಗಮಿಸಿದ ಮೇಲೆ 
ಮ್ಯೂಸಿಯಂ ಬಾಗಿಲುಗಳು ಮುಚ್ಚಿದ ಮೇಲೆ 
ಒಬ್ಬಳೇ ಏಕಾಂತದಲ್ಲಿ ಅಳುವುದು 
ಇದ್ದೇ ಇದೆ ಮೋನಲೀಸಾ 

***

7 thoughts on “

 1. ನನಗೆ ಮೊಟ್ಟಮೊದಲು ‘ಮೋನಾಲಿಸಾ’ಳ ಹೆಸರು ಗೊತ್ತಾದದ್ದು ನಾನು ಆರನೇ ಇಯತ್ತೆಯಲ್ಲಿ‌ ಓದುತ್ತಿರುವಾಗ. ರಸಪ್ರಶ್ನೆಯ ಸ್ಪರ್ಧೆಗೆ ಓದುವಾಗ.

  ಪ್ಯಾರಿಸ್ಸಿಗೆ ಹೋದಾಗ ಮೂಲ ಕಲಾಕೃತಿಯನ್ನು ನೋಡಿದ್ದೂ ಅಯಿತು.

  ಮೋನಾಲಿಸಾ ದಂತಕತೆಯಾದಳು. ದಾವಿಂಚಿ ಅಜರಾಮರನಾದ. ಅಂದಿನಿಂದ‌ ಮೋನಾಲಿಸಾ ಕಲಾ ವಿಮರ್ಶಕರ ಮತ್ತು ಸಾಹಿತಿಗಳ ನಿದ್ದೆಗಡಿಸುತ್ತಲೇ ಇದ್ದಾಳೆ. ಕವಿಹೃದಯದ ಪ್ರಸಾದ್ ಅವರು ಮೋನಾಲಿಸಾಳ ಗಾಳಕ್ಕೆ ಬಿದ್ದುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.

  ಮೋನಾಲಿಸಾಳ ಮೇಲೆ ಪ್ರಶ್ನೆಗಳ ಸುರಿಮಳೆ! ಆದರೆ ಯಾವ ಪ್ರಶ್ನೆಗೂ ಮೋನಾಲಿಸಾ ಉತ್ತರ ಕೊಡುವುದಿಲ್ಲ ಎಂದು ಕವಿಗೆ ಗೊತ್ತು, ಆದರೂ ಪ್ರಶ್ನಗಳನ್ನು ಕೇಳದೇ ಇರಲಾರ. ಪ್ರಶ್ನೆಗಳನ್ನು ಕೇಳುತ್ತಲೇ ಕವಿಗೆ ಉತ್ತರಗಳೂ ಸಿಗಲು ಆರಂಭವಾಗುತ್ತದೆ ದ್ವಿತೀಯಾರ್ಧದಲ್ಲಿ. ಮೋನಾಲಿಸಾ, ನೀನು ದಾವಿಂಚಿಯ ಕುಂಚದಲ್ಲಿಯೇ ಉಳಿ, ಅದಕ್ಕೆ ಹಾಕಿರುವ ಚೌಕಟ್ಟಿನಿಂದ‌ ಹೊರಬರಬೇಡ ಎಂದು ಕವಿ ಮಾಡುವ ಬಿನ್ನಹ ಮನಮುಟ್ಟುತ್ತದೆ.

  ಪ್ರಸಾದ್ ಅವರು ಅವರ ತಂದೆಯಂತೆಯೇ ಸರಳ ಮಾತುಗಳಲ್ಲಿ ಗಹನವಾದುದನ್ನು ಹೇಳಬಲ್ಲರು.

  ‘ನನ್ನ ಒಂದೆರೆಡು ಹನಿಗವನಗಳನ್ನು ಓದಲೇ’ ಎನ್ನುವ ಸಾಲು ತಟ್ಟನೇ ಖುಷಿಕೊಡುತ್ತದೆ.

  ಪ್ರಸಾದ್ ಅವರಿಗೆ ಅಭಿನಂದನೆಗಳು.

  ದೇಸಾಯಿಯವರು ಈ ಕವನದ ಬಗ್ಗೆ ಅನಿಸಿಕೆಯನ್ನು ಬರುವಾಗ Ekphrasis ಬಗ್ಗೆ ಬರೆಯುತ್ತಾರೆ. ದೇಸಾಯಿಯವರ ಜ್ಞಾನ ಭಾಂಡಾರ ಅದಮ್ಯ. ಅಂಥದೊಂದು ಕಾವ್ಯ ಪ್ರಕಾರ ಇದೆಯೆಂದು ಗೊತ್ತೇ ಇರಲಿಲ್ಲ.

  Liked by 1 person

 2. Very interesting poetic projection ‘date’ where the poet becomes one with the subject and abhors the metaphorical ‘frame’ that surrounds them.

  I guess, in earlier encounters, a youthful Prasad had probably brought her out and danced to some romantic tunes in their liberated world!

  Murali

  Liked by 1 person

 3. ಮೊನಾಲಿಸಾ ಎಲ್ಲರನ್ನೂ ಆಕರ್ಷಿಸಿ, ಚರ್ಚೆಗೆ ಗ್ರಾಸವಾದ ಕೃತಿ ಎಂಬ ಪೀಠಿಕೆ ಹಾಕಿ ಪ್ರಸಾದ್ ಅವಳ ಮನದಲ್ಲಿ ಹೊಕ್ಕಿ ಅವಳ ಭಾವನೆಗಳನ್ನು ಅಳೆಯುವ ಕವನ ಬರೆದಿರುವ ಶೈಲಿ ಇಷ್ಟವಾಯಿತು. ಜನರಿಗೆ ಆಕೆ ಗಗನ ಕುಸುಮವೇ ಆಗಿರಲೆಂಬ ಆಶಯದ ಹಿಂದಿನ ವಿಚಾರಗಳೂ ಸುಂದರವಾಗಿ ಪೋಣಿಸಲ್ಪಟ್ಟಿವೆ ಈ ಕವನದಲ್ಲಿ,

  ದೇಸಾಯಿಯವರ ವಿದ್ವತ್ಪೂಣ೯ ಪ್ರತಿಕ್ರಿಯೆ, ಪೂರಕವಾದ ಲೇಖನದ ಪೂರೈಕೆ ಈ ವಾರದ ಅನಿವಾಸಿ ಭೋಜನಕ್ಕೆ ವಿಶೇಷ ರುಚಿ ನೀಡಿವೆ.

  – ರಾಂ

  Like

 4. ಜಿ ಎಸ್ ಪ್ರಸಾದರ ಮೋನಾ ಲೀಸಾ ಸ್ವಗತವನ್ನು ಒಂದು ekphrastic poem (ಬಹಿರೋಕ್ತಿ) ಎಂದು ಕರೆಯಬಹುದು. ಮೊದಲು ಈ ಶಬ್ದವನ್ನು ಚಿತ್ರ- ಕಾವ್ಯ ಮೀಮಾಂಸೆ ವರ್ಗಗಳಲ್ಲಿ ‘ಶಬ್ದಗಳಿಂದ ಚಿತ್ರದ ವರ್ಣನೆ’ ಅಂತ ಪರಿಗಣಿಸಲಾಗುತ್ತಿತ್ತು. W H ಆಡೆನ್ನನ ಕವನದ ನಂತರ ಅದನ್ನು ಒಂದು ಚಿತ್ರವು ಕಲಾರಸಿಕನಲ್ಲಿ ಉದ್ಭವಿಸಿದ ಭಾವನೆಗಳ ಕವಿತೆ, ಅಥವಾ (ಇಲ್ಲಿದ್ದಂತೆ) ಚಿತ್ರವಸ್ತುವನ್ನೇ ಸಂಬೋಧಿಸಿದ ಕವಿತೆಗಳು ಅಂತ ಕರೆಯಲಾಯಿತಂತೆ. ಒಂದು ಕಲಾಕೃತಿ ಇನ್ನೊಬ್ಬ ಕಲಾಕಾರನಲ್ಲಿ ಅಲೆಗಳನ್ನೆಬ್ಬಿಸಿವುದನ್ನು ಅನೇಕ ಕಡೆ ನೋಡಿದ್ದೇವೆ. ಸಂಗೀತದಲ್ಲಿ ಸಹ. ಮೊಡೆಸ್ಟ್ ಮಸ್ಗೋರ್ಕಿಯ ಹತ್ತು ಪಿಯಾನೋ ಕೃತಿ Pictures at an exhibition ಪ್ರಸಿದ್ಧ. ಮತ್ತು ಅದರಲ್ಲಿ ಬರುವ ‘ಪ್ರಿಲ್ಯೂಡ್’ ಅಲ್ಲಲ್ಲಿ ಕೇಳಿಬರುತ್ತದೆ’. ಅದು ಆತನ ಮಿತ್ರನ ಮರಣದ ನಂತರ ಹುಟ್ಟಿದ್ದು. ಇಲ್ಲಿ ಸುಪ್ರಸಿದ್ಧ ಮೋನಾ ಲೀಸಾ ಅದೆಷ್ಟು ಕವನ, ಕಥೆ, ಸಿನಿಮಾಗಳ ವಸ್ತುವಾಗಿದ್ದಾಳೆ. ಸೂಕ್ಷ್ಮ ಸಂವೇದನೆಯ ಕಲಾರಸಿಕರಾದ ಕವಿ ಪ್ರಸಾದರು ಈ ಸ್ವಗತ ಕವನದಲ್ಲಿ ಅನೇಕ ಸಲ ವೀಕ್ಷಿಸಿ ವಿವಿಧ ರೀತಿಯಲ್ಲಿ ಆ ಸ್ತ್ರೀಯ ಚಿತ್ರವನ್ನು ಕಂಡು ತಮ್ಮ ಮನಸ್ಸಿನಲ್ಲಾದ ಭಾವನೆಗಳನ್ನು ಮೂಡಿಸಿ ವಿವಿಧ ಶಬ್ದ ಕುಂಚದಿಂದ ಇನ್ನೊಂದು ವರ್ಣಚಿತ್ರವನ್ನು ಕೊಡುತ್ತಾರೆ. ನಮ್ಮ ಪರಂಪರೆಯಲ್ಲಿ ಸ್ತ್ರೀತ್ವಕ್ಕಿರುವ ಸ್ಥಾನಮಾನ ವಿಶಿಷ್ಟ. ಅದೂ ಇಲ್ಲಿ ವ್ಯಕ್ತವಾಗಿದೆ. ‘ನೀನು ಕಳುವಾಗ ಬೇಡ, ಮಾರಿಕೊಳ್ಳ ಬೇಡ, ಗೌರವ ಗಾಂಭೀರ್ಯ ರಹಿತ ಪ್ರದರ್ಶನ ಬೇಡ’ ಅನ್ನುವದರಲ್ಲಿ ಎರಡು ಸಂಸ್ಕೃತಿಗಳ interaction ಇದೆ. ತನ್ನ ‘ಕಿರುನಗೆ’ಯಿಂದಲೇ ಮೋನಾ ಲೀಸಾ ಕವಿಯನ್ನು ಸಂತೋಷದಿಂದ ಅನುಮೋದಿಸುತ್ತಿರಬೇಕು! ಈ ತರದ ekphrastic ಕವನಗಳು ಕನ್ನಡದಲ್ಲಿ ಅಪರೂಪವೆನ್ನ ಬಹುದು. ಇಂಗ್ಲಿಷ್ನಲ್ಲಿ ಕಾಲೇಜಿನಲ್ಲಿ ಅನೇಕರು ಕೀಟ್ಸ ಕವಿಯ ಪ್ರಸಿದ್ಧ ಕವನ Ode to the Grecian Urn ಪಠ್ಯ ಪುಸ್ತಕದಲ್ಲಿ ಓದಿದ್ದು ನೆನಪಾಗಬಹುದು ಕೆಲವರಿಗೆ.

  Like

  • ತಿಡ್ಡುಪಡೆ: ಮೇಲಿನ ನನ್ನ ಕಮೆಂಟಿನಲ್ಲಿ prelude ಬದಲು Promanade ಅಂತ ತಿದ್ದಿಕೊಳ್ಳಬೇಕೆಂದು ವಿನಂತಿ. ಶ್ರೀವತ್ಸ

   Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.