ಒಂದು ಸಿನಿಮಾ ಕಥೆ

ಓಟಿಟಿಯ ಕಾಲದಲ್ಲಿ ಥ್ರಿಲ್ಲರ್, ಸಸ್ಪೆನ್ಸ್ , ಕ್ರೈಂ ಅನ್ನೋ ಜಾನ್ರದಲ್ಲಿ ಹಾಗು vfx ಗಳ ಮಾಯಾಲೋಕದಲ್ಲಿ ಮುಳುಗಿದ ನಾನು ಹಾಗೆ ಸ್ಕ್ರಾಲ್ ಮಾಡುತ್ತಿದ್ದಾಗ ಅಕಸ್ಮಾತಾಗಿ ಸಿಕ್ಕ ಸಿನಿಮಾದ ಬಗ್ಗೆ ಒಂದು ವರದಿ ಈ ವಾರ ನಿಮ್ಮೆಲ್ಲರ ಓದಿಗಾಗಿ.
ಸಿನಿಮಾದ ಟೆಕ್ನಿಕಲ್ ವಿವರಗಳ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಆದರೆ ಅಲ್ಲಿರುವ ಪಾತ್ರಗಳು ನನ್ನ ಆಲೋಚನೆಯನ್ನು ಬದಲಿಸಿದೆ.
– ಸಂ

ನಮಸ್ತೆ ಶಾರದಾ ದೇವಿ ಕಾಶ್ಮೀರ ಪುರವಾಸಿನಿ
ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂ ಚ ದೇಹಿಮೆ

ಈ ಶ್ಲೋಕವನ್ನು ಬಾಲ್ಯದಿಂದಲೇ ಕೇಳುತ್ತಿದ್ದೇವೆ. ಕಾಶ್ಮೀರ ವಿದ್ಯೆ ಹಾಗು ಜ್ಞಾನದ ಉತ್ತುಂಗ ಹಾಗು ವಿಶಾಲ ದೈವಿಕ ಹಿಮಾಲಯಕ್ಕೆ ಆಶ್ರಯ ಕೊಟ್ಟಂತಹ ಒಂದು ಅದ್ಭುತ ಪ್ರದೇಶ.
ಕಾಶ್ಮೀರದ ಸೌನ್ದರ್ಯದ ಬಗ್ಗೆ ಬಹಳಷ್ಟು ಕವಿಗಳು ವಿಭಿನ್ನ ಬಗೆಯಲ್ಲಿ ವರ್ಣಿಸಿದ್ದಾರೆ.
ಇತಿಹಾಸದ ಕಥೆಗಳಲ್ಲಿ ಹಿಮಾಲಯ ಬಗ್ಗೆ ಹಾಗು ಶ್ರೀಶಂಕರಾಚಾರ್ಯರು ಸ್ಥಾಪಿಸಿದ ಶಾರದಾ ಪೀಠದ ಬಗೆಗಿನ ಕಥೆಗಳು ನಮ್ಮನ್ನು ಕಾಶ್ಮೀರವನ್ನು ಪೂಜಿಸುವ ಪುಣ್ಯ ಕ್ಷೇತ್ರವನ್ನಾಗಿಸಿದರೆ ಮತ್ತೊಂದೆಡೆ ಸಿನೆಮಾಗಳು ಎಲ್ಲ ಋತುವನ್ನು ವಿಶೇಷವಾಗಿ ಹಿಮ ಪರ್ವತಗಳ ಮಡಿಲಲ್ಲಿ ಹರಡಿರುವ ಹಸಿರಿನ ಕಣಿವೆಗಳು, ಚಳಿಗಾಲದಲ್ಲಿ ಮುತ್ತಿನಂತೆ ಹೊಳೆಯುವ ಹಿಮಕಣಗಳು, ಬೇಸಿಗೆಯಲ್ಲಿ ಬಣ್ಣ ಬಣ್ಣದ ಪುಷ್ಪಗಳಿಂದ ಅರಳಿದ ತೋಟಗಳು—ಇವೆಲ್ಲವನ್ನು ಎಷ್ಟು ಅದ್ಭುತವಾಗಿ ಸೆರೆ ಹಿಡಿದು ನೋಡುವವರಿಗೆ ಒಂದು ಅಲೌಕಿಕ ಅನುಭವನ್ನು ಕೊಡುವುದಲ್ಲದೆ ಅಲ್ಲಿಗೆ ಆ ತಕ್ಷಣ ಹೋಗುವ ಹಂಬಲವನ್ನುಂಟುಮಾಡುತ್ತದೆ.
ದಾಲ್ ಸರೋವರದ ನೀರಿನ ಮೇಲೆ ತೇಲುವ ಹೌಸ್‌ಬೋಟ್‌ಗಳು ಮತ್ತು ಶಿಕಾರಾಗಳ ಸುಂದರ ನೋಟ ಹೃದಯವನ್ನು ಶಾಂತಗೊಳಿಸುತ್ತವೆ. ಚೀನಾರ್ ಮರಗಳ ಕೆಂಪು ಎಲೆಗಳು, ಮೋಡಗಳನ್ನು ಮುಟ್ಟುವ ಪರ್ವತ ಶಿಖರಗಳು ಮತ್ತು ಕಣಿವೆ ಮೇಲೆ ಹರಡುವ ಮಳೆಯ ಪರಿಮಳನನ್ನ ಕೂತಲ್ಲಿಯೇ ಅನುಭವಿಸುವ ದೃಶ್ಯಗಳು ನಮ್ಮನು ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತದೆ.
“गर फिरदौस बर-रूऐ ज़मीं अस्त
हमी अस्तो, हमी अस्तो, हमी अस्त”

ಸಿನಿಮಾ ಮೂಲಕವೇ ಈ ಪ್ರದೇಶವನ್ನು ಬಹಳಷ್ಟು ಜನ ನೋಡಿದ್ದೇವೆ.
ನನ್ನ ಮೊದಲ ಕಾಶ್ಮೀರದ ದೃಶ್ಯ ಶಮ್ಮಿ ಕಪೂರ್ ‘ಯಾಹೂ’ ಎಂದು ಜೋರಾಗಿ ಹಿಮಪಾತದಲ್ಲಿ ಬಿದ್ದು ಹಾಡೋದು ನಂತರ ಕಾಶ್ಮೀರ ಕಿ ಕಲಿ ಚಿತ್ರದಲ್ಲಿ ಶರ್ಮಿಳಾ ಟ್ಯಾಗೋರ್ ನ ಸುಂದರ ಫೇರನ್ ಹಾಗು ಶಿಕಾರದಲ್ಲಿ ಹೂವುಗಳ ಮಧ್ಯೆ ಹಾಡೋದೆ ಕಣ್ಣು ಮುಂದೆ ಬರುತ್ತದೆ.
ಕಾಶ್ಮೀರವನ್ನು ಒಂದು ಕನಸುಗಳ ಲೋಕದ ರೂಪದಲ್ಲಿ ನೋಡುತ್ತಿದ್ದೆ. ಅಲ್ಲಿ ಹೋಗುವ ಆ ಸೌಂದರ್ಯವನ್ನು ಅನುಭವಿಸುವ ನನ್ನ ಕನಸು ಇನ್ನು ಕನಸಾಗಿಯೇ ಉಳಿದಿದೆ.
ಒಂದೆಡೆ ಕಾಶ್ಮೀರ ಒಂದು ಮಾಯಾಲೋಕವಾದರೆ ಮತ್ತೊಂದೆಡೆ ಅದೊಂದು ನಿಗೂಢ ನಗರಿ ಕೂಡ.
ಭಾರತದ ಸ್ವಾತಂತ್ರದ ಸಮಯದಿಂದ ಇಂದಿನ ತನಕ ರಾಜಕೀಯ ಗೊಂದಲ ಮತ್ತು ದ್ವಂದ್ವಗಳು ಮಧ್ಯೆ ಒಂದು ಸ್ಥಿರ ಪರಿಸ್ಥಿತಿ ಈ ಪ್ರದೇಶದಕ್ಕೆ ದೊರಕಿಸಿಕೊಡುವ ಹೋರಾಟ ದಶಕಗಳಿಂದ ನಡೆಯುತ್ತಲೇಯಿದೆ. ಭಗೀರಥನ ಪ್ರಯತ್ನದಿಂದ ಆಕಾಶದ ಆ ಗಂಗೆಯು ಧರೆಗೆ ಬಂದು ಇಲ್ಲಿ ನೆಲಸಿ ಜನರನ್ನು ಹರಿಸಿದ್ದಾಳೆ, ಆದರೆ ಭಗೀರಥನಂತಹ ವ್ಯಕ್ತಿಯೊಬ್ಬ ಬಂದು ಶಾಂತಿಯೆಂಬ ಗಂಗೆಯನ್ನು ಈ ಭೂಮಿಯಲ್ಲಿ ಯಾವಾಗ ಹರಿಸುತ್ತಾರೋ ಎಂಬ ಹಂಬಲ ನನಗೂ ಇದೆ..
ಅದನ್ನು ಮಡಿಯ ಪ್ರದೇಶವನ್ನಾಗಿ ಮಾಡಿದ್ದೇವೆ. ಈ ಸ್ವರ್ಗಲೋಕವನ್ನು ಭಯೋತ್ಪಾದನೆ ಹಾಗು ಆತಂಕದ ತಾಣ ಎನ್ನುವ ದೃಶ್ಯಗಳು ನಂತರ ಬಂದಂತಹ ಜನಪ್ರಿಯ ರೋಜಾ, ದಿಲ್ ಸೆ, ಕಾಶ್ಮೀರ ಫೈಲ್ಸ್ ಚಲನ ಚಿತ್ರಗಳು ಮೂಲಕ ಕಾಶ್ಮೀರವನ್ನು ಮತ್ತಷ್ಟು ಮೂಲೆಗೆ ಒತ್ತುವಂತೆ ಮಾಡಿತು.
ಕೆಲ ವರ್ಷಗಳ ಹಿಂದೆ ಬಂದ ವಿಶೇಷ ಸಿನಿಮಾ ‘ರಾಜಿ’ ಕಾಶ್ಮೀರಿ ಹೆಣ್ಣಿನಲ್ಲಿರುವ ದೇಶಪ್ರೇಮ ಧೃಢತೆ ಹಾಗು ಶೌರ್ಯದ ಪರಿಚಯ ಮಾಡಿಸಿತು.
ಭಾರತ ಸರ್ಕಾರದ ಹಾಗು ಗಡಿಯಾಚೆಗಿನ ದೇಶಗಳ ಮಧ್ಯೆಯಿರುವ ಮತ ಭೇಧಗಳ ಫಲ ಸ್ವರೂಪ ಅಲ್ಲಿಯ ಮೂಲದವರಿಗೆ ನೆಲೆಯಿಲ್ಲದಂತಾಗಿದೆ. ಎಂಬತ್ತರ ದಶಕದ ಹಿಮಾಲಯ್ ದರ್ಶನ ಧಾರವಾಹಿ ಒಂದು ಒಳ್ಳೆಯ ಉದ್ದೇಶದಿಂದ ಮಾಡಿದಂತಹ ಪ್ರಯತ್ನ. ಅಲ್ಲಿಯವರ ಜೀವನ ದಿನನಿತ್ಯದ ವ್ಯವಸಾಯ ಅಷ್ಟೇ ಅಲ್ಲ ಅಲ್ಲಿಯ ಕಲೆ ಹಾಗು ಪ್ರತಿಭೆಯ ಬಗ್ಗೆ ಭಾರತದ ಬೇರೆ ರಾಜ್ಯದ ಜನರ ಪರಿಚಯವಿರುವಂತೆ ಕಾಶ್ಮೀರಿ ನಾಗರೀಕರ ಪರಿಚಯ ಮಾಡುವ ಇತ್ತೀಚಿಗೆ ಬಿಡುಗಡೆಯಾದ ‘ ಸಾಂಗ್ಸ್ ಆಫ್ ಪ್ಯಾರಡೈಸ್’ ಒಂದು ಸರಳ ಸ್ವಚ್ಛ ಸುಂದರ ಜೀವನ ಚರಿತ್ರೆ ಆಧಾರಿತ ಚಲನ ಚಿತ್ರ. ನಾನು ಸಿನಿಮಾ ವಿಮರ್ಶಕಳಲ್ಲ. ಸಿನಿಮಾದ ತಾಂತ್ರಿಕ ಸೂಕ್ಷ್ಮತೆಗಳ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ. ಆದರೆ ಒಂದು ಸಿನಿಮಾ ನೋಡಿದರೆ ಅದು ಬಹುಕಾಲ ನಿಮ್ಮ ಮನಸಿನ್ನಲ್ಲಿ ಉಳಿದರೆ ಆ ಸಿನಿಮಾದಲ್ಲಿ ಏನೋ ವಿಶೇಷತೆ ಇರಬೇಕು ಎಂಬ ಭಾವನೆ ನನ್ನದು. ಒಂದು ಸಿನಿಮಾ ನೋಡಲು ಯೋಗ್ಯ ಅನ್ನಿಸಿಕೊಳ್ಳಲು ಮುಖ್ಯ ಅಂಶವೇನೆಂದರೆ ಕಥೆ ಹಾಗು ಸಂಭಾಷಣೆ. ಇವೆರಡರ ಹಿಡಿತವಿರಬೇಕು. ಮಾತಿಗಳು ಮನಸ್ಸು ಮುಟ್ಟುವಂತಿರವಬೇಕು.ಈ ಸಿನಿಮಾದಲ್ಲಿ ಕೆಲ ಸಂಭಾಷಣೆ ನನಗೆ ಹಾಗೆನಿಸಿದವು.

ಪದ್ಮಶ್ರೀ ರಾಜ್ ಬೇಗಮ್ ಹೆಸರು ನಾನು ಅದಕ್ಕೆ ಮುಂಚೆ ಕೇಳಿರಲಿಲ್ಲ. ‘ಗಾನ ಕೋಗಿಲೆ ‘, ‘ಮಾಧುರ್ಯದ ಅರಸಿ’ ಹೀಗೆ ಹತ್ತು ಹಲವು ಬಿರುದಗಳು ಅಷ್ಟೇ ಅಲ್ಲ ಸಂಗೀತ ನಾಟಕ ಅಕಾಡೆಮಿ ಪುರಸ್ಕೃತೆ ಕೂಡ . ರಾಜ್ ಬೇಗಮ್ ನ ಜೀವನ ಕಥೆ ಒಂದು ಆದರ್ಶ. ಪರಕೀಯರ ದಾಳಿ ಸದಾ ಭಯೋತ್ಪಾದನೆಯಲ್ಲಿ ಮುಳುಗಿದ ವಾತಾವರಣದಲ್ಲಿ ವ್ಯಕ್ತಿ, ವ್ಯಕ್ತಿತ್ವ, ಕಲೆ, ಪ್ರತಿಭೆ ಇವೆಲ್ಲವನ್ನು ಸಾಧಿಸುವುದು ಬಿಡಿ, ಊಹಿಸಿಕೊಳ್ಳುವುದು ಕೂಡ ಒಂದು ಕನಸೇ !
ಅಲ್ಲಿ ಪುರುಷರ ಸಾಮ್ರಾಜ್ಯ ! ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ಸುಡು ಬೆಂಕಿಯಲ್ಲಿ ಒಂದು ಸುಂದರ ಬಳ್ಳಿಯಾಗಿ ನಾಜೂಕಾದ ಕುಸುಮಗಳ ಹೂವಿನ ರೀತಿಯಲ್ಲಿ ಹಬ್ಬಿ ಸಂಗೀತದಂತಹ ತಾಂತ್ರಿಕ ಕಲೆಯ ಸೂಕ್ಷ್ಮಗಳನ್ನು ತಿಳಿದು ಅದನ್ನು ಕಲಿತು ರಸ ರಾಗಲಹರಿಯ ಸುಗಂಧವನ್ನು ಪಸರಿಸುತ್ತಾ ಅದನ್ನೇ ವೃತ್ತಿ ಮಾಡುವುದಲ್ಲದೆ, ತಾನಿರುವ ದೇಶದ ಪರಿಸ್ಥಿಯಲ್ಲಿ ಹೋರಾಡುವುದಕ್ಕೆ ಮತ್ತೊಂದು ಮಟ್ಟದ ಧೈರ್ಯ ಹಾಗು ಮನಸ್ಥಿತಿ ಹೊಂದಿದ ದಿಟ್ಟ ಮಹಿಳೆ.

ಸಿನೆಮಾಗಳಲ್ಲಿಯೇ ಪುನಃ ಪುನಃ ಉಪಯೋಗಿಸುವ “when you want something, all the universe conspires in helping you to achieve it.”
ಈ ನುಡಿಯು ಈ ಕಥೆಯಲ್ಲಿ ನೈಜ ರೂಪ ತಾಳಿದೆ.
ಒಂದು ಬಡ ಕುಟುಂಬದಿಂದ ಬಂದ ಸಾಧಾರಣ ಮಹಿಳೆ ಒಬ್ಬ ಸಂಗೀತಗಾರನ ಮನೆಕೆಲಸದವಳಾಗಿ ದುಡಿಯುತ್ತಿದ್ದಾಗ , ಆ ಸಂಗೀತಕಾರನು ಅವರ ಪ್ರತಿಭೆಯನ್ನು ಅಕಸ್ಮಾತಾಗಿ ಗುರುತಿಸಿ ಅವಳಿಗೆ ತನ್ನ ಜ್ಞಾನವನ್ನು ಧಾರೆಯೆರೆಯುವುದಲ್ಲದೆ ಅವಳಿಗೆ ಅವಕಾಶಗಳನ್ನು ಒದಗಿಸಿ ಕೊಟ್ಟು ಒಂದು ಅದ್ಭುತ ಕಲಾಕಾರಳನ್ನಾಗಿ ಮಾಡುವುದರಲ್ಲಿ ಬಹಳ ಶ್ರಮಿಸುತ್ತಾನೆ.
ಇದಕ್ಕೆ ಪೂರಕವಾಗಿ ಸುತ್ತಲಿನ ಜನಗಳಿಂದ ಅವಳಿಗೆ ಸಿಕ್ಕ ಪ್ರೋತ್ಸಾಹ, ಅವಳ ತಂದೆಯ ಸಹಕಾರ ಈ ದಿಕ್ಕಿನಲ್ಲಿ ಅವಳಿಗೆ ಮೊದಲ ಹೆಜ್ಜೆ ಇಡಲು ಧೈರ್ಯ ತಂದಿತು. ನಂತರ ಬಂದ ಪುರುಷರು ಅಭಿಮಾನಿ ಹಾಗು ಪ್ರೇಮಿ ನಂತರ ಪತಿ ಹಾಗೆ ಅವಳು ಕಾಶ್ಮೀರ ರೇಡಿಯೋಗೆ ಕೆಲಸ ಮಾಡುವ ಅಲ್ಲಿನ ಸಹೋದ್ಯೋಗಿಗಳು ತುಂಬಿದ ಉತ್ಸಾಹ, ಹುಮ್ಮಸ್ಸು ಅವಳಿಗೆ ಆಕಾಶದೆತ್ತರ ಬೆಳೆಯಲು ಸಹಕಾರಿಯಾಯಿತು.
ಅಷ್ಟೇ ಅಲ್ಲ ತನಗೆ ಅಥವಾ ಅವಳ ಸುತ್ತಮುತ್ತಲಿನ ಜನರಿಗೆ ಆಗುವ ಅನ್ಯಾಯವನ್ನು ವಿರೋಧಿಸಿ ನ್ಯಾಯ ದೊರಕಿಸುವಲ್ಲಿ ಅವರ ಸ್ವಚ್ಛಂದ ಭಾವನೆ ಶ್ಲಾಘನೀಯ.
ಅವಳ ತಾಯಿಯು ಸಾಮಾಜಿಕ ಕಟ್ಟುಪಾಡಿನ ದಿಗ್ಬಂಧನದಲ್ಲಿ ಸಿಲುಕಿ ಮಗಳ ಪ್ರತಿಭೆ ಕಂಡರೂ ಕಾಣದಂತೆ ಅವಳನ್ನು ಕುಗ್ಗಿಸುವ ನಡುವಳಿಕೆ ಹಾಗು ಕಿರಿದಾದ ಚಿಂತನೆ ರಾಜ್ ಬೇಗಮ್ ಪ್ರತಿಭೆಯನ್ನು ತಡೆಯಲಾಗಲಿಲ್ಲ.
ಅಕ್ಕಪಕ್ಕದ ಮನೆಯವರ ಅವಹೇಳನೆ ಹಾಗು ಒಂದು ಹೆಣ್ಣು ಪ್ರಗತಿಶೀಲಳಾಗುವುದನ್ನು ನೋಡಲು ಸಹಿಸದ ಜನ ಇವಲ್ಲೆವನ್ನು ಮೆಟ್ಟಿ ನಿಂತ ಒಂದು ಸುಂದರ ಜೀವಿಯ ಕಥೆಯೇ ‘ಸಾಂಗ್ಸ್ ಒಫ್ ಪ್ಯಾರಡೈಸ್ ‘
ಅಗಾಧ ಪ್ರತಿಭೆಯುಳ್ಳ ಪ್ರದೇಶವಾಗಿರುವ ಕಾಶ್ಮೀರ, ಕಲಾವಿದರಿಗೆ ಪ್ರೋತ್ಸಾಹ ಹಾಗು ಅವಕಾಶಗಳನ್ನು ಕೊಡುವುದರಲ್ಲಿ ಎಷ್ಟು ಸಾಮರ್ಥ್ಯ ಹೊಂದಿದೆ ಅನ್ನುವುದು ಈ ಸಿನಿಮಾದ ಮೂಲಕ ತಿಳೀತು.

ಸಿನಿಮಾದ ತಾಂತ್ರಿಕತೆಯ ಬಗ್ಗೆ ಹೇಳಹೊರಟರೆ ಎಲ್ಲರ ಅಭಿನಯ ಅದ್ಭುತವಾಗಿದೆ. ಹಿರಿಯ ರಾಜ್ ಬೇಗಮ್ ಪಾತ್ರದಲ್ಲಿ ನುರಿತ ಅಭಿನೇತ್ರಿ ಸೋನಿ ರಾಜ್ದಾನ್ ಬಹಳ ಸುಂದರವಾಗಿ ಅಭಿನಯಿಸಿದ್ದಾರೆ. ಇಳಿವಯಸ್ಸಿನ ರಾಜ್ ಬೇಗಮ್ ಆಗಿ ಸಬಾ ಆಜಾದ್ ತಮ್ಮ ಪಾತ್ರವನ್ನು ಇನ್ನು ಸ್ವಲ್ಪ ಬಿಗಿಯಾಗಿ ನಿಭಾಯಿಸಬಹುದಾಗಿತ್ತು. ಕೆಲೆವೆಡೆ ಅವಳ ಭಾವನೆಯನ್ನು ವ್ಯಕ್ಪಡಿಸುವ ರೀತಿ ಇನ್ನೂ ಪ್ರಭಾವಕಾರಿಯಾಗಬಹುದಿತ್ತು. ರಾಜ್ ಬೇಗಮ್ ಸಾಧನೆಯ ಎತ್ತರಕ್ಕೆ ಬೆಳದ ಮೇಲು ತನ್ನ ಗುರುವಿನ ಮನೆಯ ಕೆಲಸ ಮಾಡುತ್ತಿದ್ದಾಗ, ಆ ಗುರುವು ನೀನು ಇನ್ನೂ ಹೀಗೆಲ್ಲ ಕೆಲಸ ಮಾಡಬಾರದು. ಒಬ್ಬ ಗೌರವಾನ್ವಿತ ವ್ಯಕ್ತಿಯಾಗಿದ್ದೀಯ ಅಂದಾಗ ಅವಳು ಯಾವುದೇ ಕೆಲಸ ದೊಡ್ಡದು ಚಿಕ್ಕದು ಇರುವುದಿಲ್ಲ ನಾನು ಖುಷಿಯಿಂದ ಈ ಕೆಲಸ ಮಾಡುತ್ತೇನೆ ಎಂದಾಗ ಆ ಗುರುವಿನ ಕಣ್ಣಲ್ಲಿ ಹೆಮ್ಮಯ ಆ ಹೊಳಪು ತಾನು ತರಬೇತಿ ನೀಡಿದ ಶಿಷ್ಯೆ ಎಂಬ ಖುಷಿ ನೋಡುವವರಿಗೆ ಅಂತಹ ಘೋರ ಭೀತಿಯ ಪ್ರದೇಶದ ಸೂಕ್ಷ್ಮ ಭಾವನೆಯ ಮನುಷ್ಯರನ್ನು ಪರಿಚಯಿಸುತ್ತದೆ.
ಅವರ ತಾಯಿ, ತಂದೆ, ಗುರು, ಪತಿ ಇವರೆಲ್ಲರು ಕೂಡ ಅನುಭವಿ ನಟರಾದ ಕಾರಣ ಎಲ್ಲವು ನೈಜವಾಗಿ ಮೂಡಿಬಂದಿದೆ. ಕಾಶ್ಮೀರಿನಂತೆಯೇ ಅಲ್ಲಿಯ ಸಂಗೀತ ವಿಭಿನ್ನ ಹಾಗು ವಿಶಾಲ. ಮಾಧುರ್ಯ ಹಾಗು ಸೌಂದರ್ಯದಿಂದ ಅಲಂಕೃತವಾದ ಒಂದು ಸರಳ ಸ್ವಚ್ಛ ಯಾವುದೇ ಕಲ್ಮಶವಿಲ್ಲದ ಪವಿತ್ರ ದೇವನಾದ ಅನಿಸುತ್ತದೆ.
ಕಾಶ್ಮೀರಿ ಭಾಷೆಯ ಸೊಗಡೇ ಬೇರೆ! ಹಿಂದಿ ಉರ್ದು ಕಿಂತಬೇರೆಯಾಗಿದ್ದು ಈ ಚಲಚಿತ್ರದಲ್ಲಿ ಸಲೀಲದಂತೆ ಹರಿದಿದೆ.
ಯಾವುದೇ ದೃಶ್ಯವು ಅತೀಯನಸದೆ ಯಾವುದೊಂದು ಭಾವನೆಯನ್ನು ಅತಿರೇಕಕ್ಕೆ ಕರೆದೊಯ್ಯದೆ ಅವಾಚ್ಯ ಅಶ್ಲೀಲತೆಯ ಸುಳಿವಿಲ್ಲದ ಒಂದು ಸರಳ ಸಿನಿಮಾ. ಕಾಶ್ಮೀರವನ್ನು ವಿಭಿನ್ನ ದೃಷ್ಟಿಯಲ್ಲಿ ತೋರಿಸಿದ ಕೆಲವೇ ಸಿನೆಮಾಗಳಲ್ಲಿ ಇದು ಒಂದು.
ಒಮ್ಮೆ ನೋಡಬಹುದು.

Pic courtesy: Internet

ಭೈರಪ್ಪ ನಮನ


ಅನಿವಾಸಿ ಬಂಧುಗಳಿಗೆಲ್ಲ ನಮಸ್ಕಾರ. ಜೊತೆಗೇ ನಾಡಹಬ್ಬ ದಸರೆಯ ಹಾರ್ದಿಕ ಶುಭಾಶಯಗಳು. ನವರಾತ್ರಿಯ ಈ ಶುಭ ಸಂದರ್ಭದಲ್ಲಿ ನವದುರ್ಗೆಯರು ತಮ್ಮೆಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ.
ಈ ನಾಡ ಹಬ್ಬದ ಸರಸ್ವತಿ ಪೂಜೆಯ ಸಂದರ್ಭದಲ್ಲಿ ಸರಸ್ವತಿ ಸಮ್ಮಾನರಾದ ಸರಸ್ವತಿ ಪುತ್ರನನ್ನು ನಾಡು ಕಳೆದುಕೊಂಡ ವಿಷಾದವಿದೆಯಾದರೂ ಅಕ್ಷರಗಳಿಗೆಂದಿಗೂ ಸಾವಿಲ್ಲ, ಅಕ್ಷಯ ಆಯಸ್ಸು ಅವುಗಳಿಗೆ. ನಾಡಿನ ಹೆಮ್ಮೆಯ ಹೆಸರಾಂತ ಸಾಹಿತಿ ಭೈರಪ್ಪನವರು ಆ ಅಕ್ಷರ ರೂಪದಲ್ಲಿ ಕೀರ್ತಿ ಶರೀರದಲ್ಲಿ ಚಿರಕಾಲ ನಮ್ಮೊಡನೆ ಇರುತ್ತಾರೆ ಎಂಬುದು ಸಮಾಧಾನದ ವಿಷಯ.
ಒಂದು ರೀತಿಯಲ್ಲಿ ನನ್ನನ್ನು ಈ ಅನಿವಾಸಿ ಗುಂಪಿಗೆ ಸೇರಿಸಿದ ಶ್ರೇಯವೂ ಪರೋಕ್ಷವಾಗಿ ಭೈರಪ್ಪನವರಿಗೇ ಸೇರಬೇಕು ಎನ್ನಿ. 2019ರ ನಾಡಹಬ್ಬದ ಉದ್ಘಾಟನೆ ಮುಗಿಸಿದ ಭೈರಪ್ಪನವರು ಶತಾವಧಾನಿ ಗಣೇಶರೊಂದಿಗೆ ನೇರ ಲಂಡನ್ ಗೆ ಬಂದಿಳಿದಿದ್ದರು.ಆ ಕಾರ್ಯಕ್ರಮದಲ್ಲಿ ನಾನು ಮೊದಲ ಬಾರಿಗೆ ಅನಿವಾಸಿಯ ಘಟಾನುಘಟಿಗಳಾದ ಪ್ರೇಮಲತಾ ರಾಮ್ ಹಾಗೂ ಕೇಶವ್ ಅವರ ಸಂಪರ್ಕಕ್ಕೆ ಬಂದಿದ್ದು. ಈ ಅನಿವಾಸಿಯನ್ನು ನನ್ನದಾಗಿಸಿಕೊಂಡಿದ್ದು.
ಅವತ್ತಿನ ಆ ಕಾರ್ಯಕ್ರಮ ನನ್ನ ಜೀವಮಾನವಿಡೀ ನೆನಪಿಡುವಂತಹ ಅವಿಸ್ಮರಣೀಯ ಕಾರ್ಯಕ್ರಮ. ಶ್ರೀಯುತ ಎಸ್ ಎಲ್ ಭೈರಪ್ಪ ಮತ್ತು ಶತಾವಧಾನಿ ಗಣೇಶರಂಥ ನಡೆದಾಡುವ ವಿಶ್ವಕೋಶಗಳನ್ನು ಸ್ಟೇಜ್ ಮೇಲೆ ಏಕಕಾಲಕ್ಕೆ ನೋಡುವ ಅವರ ಮಾತು ಕೇಳುವ ಅವರ ಕೃತಿಗಳ ಬಗ್ಗೆ ತೊದಲ ನುಡಿ ಆಡುವ ಅವಕಾಶ ಸಿಕ್ಕಿತ್ತಂದು ಸಾಹಿತ್ಯದ ರಸಗಳ ಗುಣಪಡಿಸಿ ನಮ್ಮ ಆತ್ಮವನ್ನು ತೃಪ್ತಪಡಿಸುವ ಅವರಿಗೆ ಅಂದು ನಮ್ಮ ಮನೆಯಲ್ಲಿ ನಮ್ಮ ಕೈಯಾರೆ ಗುಣಪಡಿಸುವ ಭಾಗ್ಯವು ಸಿಕ್ಕಿತ್ತು ಅದೇ ನೆನೆಸಿಕೊಂಡರೆ ಈಗಲೂ ಹೃದಯ ಖುಷಿಯಿಂದ ಧನ್ಯತೆಯಿಂದ ಮೂಕವಾಗುತ್ತದೆ.
ಇಂದಿನ ಸಂಚಿಕೆಯಲ್ಲಿ ಅಂದಿನ ನನ್ನ ಮಾತುಗಳನ್ನೇ ಹಂಚಿಕೊಳ್ಳುತ್ತಿದ್ದೇನೆ.
ಅವರಿನ್ನಿಲ್ಲ ಎಂದರಿವಾದಾಗ ಮನಭಾರವಾಗುತ್ತದೆ.ಮಾತು ಮೂಕವಾಗುತ್ತದೆ. ಹೃದಯ ಒದ್ದೆಯಾಗುತ್ತದೆ. ಆದರೆ ಭೈರಪ್ಪನವರು ಹಚ್ಚಿದ ಅಕ್ಷರ ಜ್ಯೋತಿ ‘ ಮಾತು ಮನಂಗಳಿಂದ ಅತ್ತತ್ತ ಮೀರಿ, ನಿರುಪಾಧಿಕ ನಿರ್ಮಲವಾಗಿ ಬೆಳಗುತ್ತಲೇ ಇರುತ್ತದೆ.. ಬೆಳಕ ಹಬ್ಬಿಸುತ್ತಲೇ ಇರುತ್ತದೆ.

~ ಸಂಪಾದಕಿ

ಭೈರಪ್ಪನೆಂಬ ದೈತ್ಯ ಪ್ರತಿಭೆ

ಭೈರಪ್ಪನವರು ಒಂದು ಅಗಾಧಸಾಗರ. ಅದರ ಆಳ, ವಿಸ್ತಾರ, ಭೋರ್ಗರೆತ, ಅಲೆಗಳ ಕುಣಿತ ಅಂತರಾಳದಲ್ಲ ಡಗಿರುವ ಹವಳ ಮುತ್ತುಗಳು, ನೂರೆಂಟು ಬಗೆಯ ಸಸ್ಯರಾಜಿಗಳು, ಸಣ್ಣ ಮೀನಿನಿಂದ ಹಿಡಿದು ದೊಡ್ಡ ತಿಮಿಂಗಿಲಿನವರೆಗೆ ಸಾವಿರಾರು ಬಗೆಯ ಜೀವ ವೈವಿಧ್ಯಗಳು, ಅಷ್ಟೇ ಏಕೆ ಅಸ್ತಮಿಸುವ ಸೂರ್ಯ,  ಉದಯಿಸುತ್ತಿರುವ ಚಂದ್ರ ಇವರನ್ನೂ ತನ್ನಲ್ಲಿ ಒಳಗೊಂಡಿರುವಂಥದ್ದು. ಇನ್ನು ನಾನೋ ಸಮುದ್ರದ ದಡದಲ್ಲಿ ಕುಳಿತು ಅಟ್ಟಿ ಬರುವ ಅಲೆಗಳಿಂದ ಪಾದ ತೋಯಿಸಿಕೊಂಡು, ಉಸುಕಿನ ಪುಟ್ಟ ಗುಬ್ಬಿ ಮನೆ ಕಟ್ಟಿ, ದಡಕ್ಕೆ ಬಂದು ಬಿದ್ದ ಒಂದೆರಡು ಶಂಖ ಕಪ್ಪೆ ಚಿಪ್ಪುಗಳನ್ನು ಆರಿಸಿ “ಓಹೋ ಸಾಗರ ತಾನೇ?  ನಾ ಬಲ್ಲೆ” ಎಂದು ಹೇಳುವಂತಹ ದುಸ್ಸಾಹಸ.. ನಾನು ಇಲ್ಲಿ ಬಂದು ಇಂದು ಸಾಕ್ಷಾತ್ ಅವರ ಉಪಸ್ಥಿತಿಯಲ್ಲಿ ಅವರ ಕೃತಿಗಳ ಬಗ್ಗೆ ಮಾತನಾಡುವುದು ಎಂದರೆ. ಸಂಪೂರ್ಣ ವೇದ ವಾಗ್ಮಯದ ಕರ್ತೃವೇ ಆದ ಪರಮಾತ್ಮನೆದಿರು ಒಂದೆರಡು ಶಬ್ದಗಳಿಂದ ಹೆಣೆದ ಸ್ತೋತ್ರ ಒಂದನ್ನು ‘ನಾ ರಚಿಸಿದೆ’ ಎಂದು ಬೀಗುತ್ತಾ ಹಾಡುವ ಭಕ್ತನ ಪಾಡು ನನ್ನದು. ಅವರೊಂದು ಅಗಾಧ ಚೈತನ್ಯ. ಅದಕ್ಕೇ ನಾ ಮುಂಚೆಯೇ ಹೇಳುತ್ತಿರುವೆ. ಈಗ ನಾ ಮಾತಾಡುತ್ತಿರುವುದು ಭೈರಪ್ಪನವರ ಬಗ್ಗೆ ಅಲ್ಲ “ಭೈರಪ್ಪ ನನಗೆ ದಕ್ಕಿದಷ್ಟು” ಎಂಬುದರ ಬಗ್ಗೆ ‘ಬಾಲಕನ ಕಲಭಾಷೆ ಕೇಳಿ ಜನನಿ ಸುಖ ಪಡುವಂದದಿ’ ಎಂದು ದಾಸರು ಹಾಡುವಂತೆ ಅವರೂ ಕೂಡ ನನ್ನೀ ತೊದಲುಗಳನ್ನು ಸಾವಧಾನದಿಂದ ಕೇಳಿಯಾರು ಎಂಬ ವಿಶ್ವಾಸ ನನಗೆ. 

ಭೈರಪ್ಪನವರು ಶತಾವಧಾನಿ ಗಣೇಶರೊಂದಿಗೆ

ಭೈರಪ್ಪನವರ ಕೃತಿಗಳ ಬಗ್ಗೆ ಹೇಳ ಹೊರಟಾಗ ಮೊದಲನೆಯದಾಗಿ ತಾವೇ ತಾವಾಗಿ ಓದಿಸಿಕೊಂಡು ಹೋಗುವ ಅವುಗಳ ಗುಣದ ಬಗ್ಗೆ ಬಹಳ ಅಚ್ಚರಿಯಾಗುತ್ತದೆ. ಕಾದಂಬರಿಯ ವಿಷಯ ವಸ್ತು- ಸಿದ್ಧಾಂತಗಳು ಏನೇ ಇರಲಿ, ಅವುಗಳನ್ನು ನೀವು ಒಪ್ಪಲಿ ಬಿಡಲಿ ಅದು ಬೇರೆ ವಿಷಯ. ಆದರೆ ಪುಸ್ತಕ ಹಿಡಿದರೆ ಸಾಕು ಮುಗಿಸುವ ತನಕ ಒಂದರೆಗಳಿಗೆ ಬಿಡದಂತೆ ನಮ್ಮನ್ನು ಅವಿಶ್ರಾಂತವಾಗಿಸಿ ಒಂದೇ ಗುಕ್ಕಿಗೆ ಓದಿಸಿಕೊಳ್ಳುವಂಥ ಅದ್ಭುತ ಶಕ್ತಿ ಅವುಗಳಿಗೆ. ನಾನಂತೂ ಇದುವರೆಗೂ ಅವರ ಕಾದಂಬರಿಗಳನ್ನು ಓದುತ್ತಾ ಒಲೆಯ ಮೇಲಿಟ್ಟ ಅದೆಷ್ಟು ಪಾತ್ರೆಗಳನ್ನು ಸುಟ್ಟು ಕರಕಲು ಮಾಡಿ ಎಸೆದೇಬಿಟ್ಟಿದ್ದೇನೋ ಲೆಕ್ಕವಿಲ್ಲ. ಅಂದರೆ ನಾನಿಲ್ಲಿ ಹೇಳಬಯಸುತ್ತಿರುವುದು ಇಷ್ಟೇ , ಓದಿಗೆ ಬೇಕಾದದ್ದು ಕಣ್ಣು, ತಲೆ, ಮನಸ್ಸುಗಳು.ಅವು ಮೂರು ತಲ್ಲೀನವಾಗಿದ್ದರೆ ಸಾಕಲ್ಲವೇ? ಆದರೆ ಇವರ ಕಾದಂಬರಿಗಳನ್ನು ಓದುತ್ತಿರುವಾಗ ಎಲ್ಲ ಜ್ಞಾನೇಂದ್ರಿಯಗಳೂ ಓದಿನ ಮೋಡಿಗೆ ಸಿಲುಕಿ ಬಿಡುತ್ತವೆ. ಮನೆಯಲ್ಲಿ ಯಾರೋ ಕೂಗಿದ್ದು, ಬೆಲ್ ಆಗಿದ್ದು,ಮಗು ಅತ್ತದ್ದು ಕಿವಿಗೆ ಕೇಳದು. ಸುಟ್ಟ ವಾಸನೆ ಮೂಗಿಗೆ ಅಡರದು. ಒಂಥರಾ ಧ್ಯಾನಸ್ಥ ಸ್ಥಿತಿ. ಧ್ಯಾನದಲ್ಲಿ ಹೊರ ಜಗತ್ತಿನ ಆಗುಹೋಗುಗಳ ಅರಿವಾಗುತ್ತಿದ್ದರೂ ಅಲ್ಲಿ ನಮ್ಮದು ಕೇವಲ ಸಾಕ್ಷಿ ಭಾವ. ಯಾವ ಕ್ರಿಯೆ-  ಪ್ರತಿಕ್ರಿಯೆಗಳೂ ಇಲ್ಲದಂತಹ ಸ್ಥಿತಿಯಲ್ಲಿರುತ್ತದೆ. ಅಂಥದೇ ಒಂದು ಸ್ಥಿತಿಯನ್ನು ಅವರ ಕಾದಂಬರಿಗಳು ಒದಗಿಸಲು ಸಶಕ್ತವಾದವುಗಳು. ಎರಡನೆಯದು ಅವರು ಬಳಸುವ ಭಾಷೆ. ಟಿಪಿಕಲ್ ಆದ ‘ಭೈರಪ್ಪ ಭಾಷೆ’ ಅಂತಲೇ ಅದನ್ನು ನಾವು ಕರೆಯಬಹುದು. ಅವರ ಕಾದಂಬರಿಗಳನ್ನು ಓದುವಾಗ ಮನೆ ಕೆಲಸ ಇತ್ಯಾದಿಗಳನ್ನು ಮಾಡುತ್ತಿರುವಾಗಲೂ ಅದೇ ಭಾಷೆ ನನ್ನ ತಲೆಯಲ್ಲಿ ಓಡುತ್ತಿರುತ್ತದೆ. ಉದಾಹರಣೆಗೆ.. ಅವಸರದಲ್ಲಿ ಹಾಲನ್ನು ಜೋರು ಉರಿಯಲ್ಲಿಟ್ಟು ಉಕ್ಕಿಸಿದರೆ “ಹಾಲನ್ನು ಅವಸರಿಸದೇ ಸಣ್ಣ ಉರಿಯಲ್ಲಿಟ್ಟು ಕಾಸಿದ್ದರೆ ಹದವಾದ ಕೆನೆಯೂ ದಕ್ಕುತ್ತಿತ್ತು.. ಗ್ಯಾಸನ್ನು ಸ್ವಚ್ಛಗೊಳಿಸುವ ಪ್ರಮೇಯವೂ ತಪ್ಪುತ್ತಿತ್ತು”ಎನ್ನುವ ವಿಚಾರ ಹೊಳೆಯಿತು, ಭಾವಸ್ಪರಿಸಿತು” ಇತ್ಯಾದಿಯಾಗಿ.ಈ ತೆರನಾಗಿ ನನಗೆ ಅರಿವಿಲ್ಲದೇ ಆ ಭಾಷಾ ಪ್ರಯೋಗ ನನ್ನಲ್ಲಿ ನಡೆದಿರುತ್ತದೆ. ಹೀಗೆ ವೈಚಾರಿಕ ನೆಲೆಯಿರಲಿ, ಭಾಷಾ ಪ್ರಯೋಗವಿರಲಿ, ಕಥಾಹಂದರವಿರಲಿ, ಪಾತ್ರ ಪ್ರಪಂಚವಿರಲಿ ಅವರ ಸಮ್ಮೋಹನಕ್ಕೆ ಒಳಗಾಗಿ ಬಿಟ್ಟಿರುತ್ತೇವೆ. ‘ಬೌದ್ಧಿಕ ಸಾಹಚರ್ಯ’ ಎನ್ನುವ ಪದವನ್ನು ನಾನು ಕಾಲೇಜಿನಲ್ಲಿದ್ದಾಗ ಮೊದಲ ಸಲ ಅವರ ಕಾದಂಬರಿಯಲ್ಲೋದಿ ರೋಮಾಂಚಿತಳಾಗಿದ್ದು ಈಗಲೂ ನೆನಪಿದೆ. ಹೀಗೆ ಸಂಪೂರ್ಣ ಭಿನ್ನವಾದ ಆಯಾಮಗಳನ್ನು ಒದಗಿಸುವುದೇ ಅವರ ಕಾದಂಬರಿಗಳ ವೈಶಿಷ್ಟ್ಯ. ಇನ್ನು  ಅವರು ಸೃಷ್ಟಿಸಿದ ಪಾತ್ರ ಪ್ರಪಂಚ.. ಗೃಹ ಭಂಗದ ಪಾತ್ರ ವೈವಿಧ್ಯಗಳಂತೂ ಅನುಪಮ. ಸೌಮ್ಯತೆಯ ಸಂಕೇತವಾದ ನಂಜಮ್ಮ, ಬಾಯ್ ತೆರೆದರೆ ಸಾಕು ಬೈಗುಳಗಳನ್ನು ಉದುರಿಸುವ ಗಂಗಮ್ಮ, ಬೇಜವಾಬ್ದಾರಿಯ ಚೆನ್ನಿಗರಾಯ, ಉಡಾಫೆಯ ಅಪ್ಪಣ್ಣ, ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಅಯ್ಯನವರು.. ಹೀಗೆ ಮಾನವ ಪ್ರಪಂಚದ ಎಲ್ಲ ಮುಖಗಳು, ಎಲ್ಲ ಭಾವ ರಸಗಳು ಇಡಿ ಇಡಿಯಾಗಿ ದೊರಕುವಂತಹ ಅಪರೂಪದ ಕಾದಂಬರಿ. ಅವರು ಸೃಷ್ಟಿಸಿದ ಸ್ತ್ರೀ ಪಾತ್ರಗಳೂ ಅಷ್ಟೇ.. ಸಮಕಾಲೀನ ಸಾಮಾಜಿಕ ವ್ಯವಸ್ಥೆ ಮೌಲ್ಯಗಳ ವಿರುದ್ಧ ಸಿಡಿದೆದ್ದ ‘ದಾಟು’ವಿನ ಸತ್ಯ ಇರಲಿ, ‘ಸಾರ್ಥ’ದ ಚಂದ್ರಿಕೆ ಇರಲಿ , ಉತ್ತರ ಕಾಂಡದ ಸೀತೆ ಇರಲಿ ಅಥವಾ ಆವರಣದ ರಜಿಯಾ ಆಗಿರಲಿ ಇವರೆಲ್ಲ ವಿಭಿನ್ನವಾಗಿ ಚಿಂತಿಸಿ, ವಿಭಿನ್ನವಾಗಿ ಬಾಳಿ, ಕೊನೆಯಲ್ಲಿ ಸೋತಂತೆ ಕಂಡರೂ ಸೋಲಲ್ಲೂ ಗೆಲುವನ್ನು ಕಂಡಂತಹವರು. ಸ್ವಲ್ಪ ಕಣ್ತೆರೆದರೆ ಸಾಕು ನಮ್ಮಲ್ಲೇ ನಮ್ಮ ಸುತ್ತಮುತ್ತಲಲ್ಲೇ ಅಂಥ ಹತ್ತು ಹಲವಾರು ಪಾತ್ರಗಳ ಅನಾವರಣವಾಗುತ್ತದೆ. ನಾನು ಮನೆಯಲ್ಲಿ ಎಷ್ಟೋ ಸಲ ಯಾವುದೋ ಕೆಲಸದ ಬಗ್ಗೆ ಬೇಜವಾಬ್ದಾರಿ ತೋರುವ ನಮ್ಮ ಯಜಮಾನರಿಗೆ ‘ಚೆನ್ನಿಗರಾಯನಂಗ ಮಾಡಬ್ಯಾಡ’ ಅಂತಲೂ,  ಮಕ್ಕಳ ಬಗ್ಗೆ ಗಮನಕೊಡದಿದ್ದಾಗ ‘ನೀ ಏನು ನಿರಾಕರಣದ ನರಹರಿನಾ?’ ಅಂತಲೂ  ಮೂದಲಿಸುವಷ್ಟು ಜೀವಂತ ಆ ಪಾತ್ರಗಳು. ಯಾವುದೇ ವಿಷಯದ ಬಗ್ಗೆ ಕಾದಂಬರಿ ಬರೆಯಲಿ ಬರೆಯುವುದಕ್ಕಿಂತ ಮುಂಚಿನ ಅವರ ಅಧ್ಯಯನದ ಶಿಸ್ತು, ಅಚ್ಚುಕಟ್ಟು ತನಗಳು, ಆ ವಿಷಯದ ಬಗೆಗಿನ ನಿಷ್ಠೆ ಅವುಗಳ ರೀತಿಯೇ ಬೇರೆ. ಭೀಮ ಕಾಯದ ಕುಸ್ತಿ ಇರಲಿ, ಮಂದ್ರದ ಸಂಗೀತ ನಾಟ್ಯಗಳಿರಲಿ, ಸಾರ್ಥದ ಇತಿಹಾಸ -ಪುರಾಣ -ಮೂರ್ತಿ ಶಿಲ್ಪ- ವೇದಾಂತ- ನಾಟಕಗಳಿರಲಿ, ಯಾನದ ಸ್ಪೇಸ್ ಟೆಕ್ನಾಲಜಿ ಇರಲಿ ಎಲ್ಲವೂ ಪೂರ್ಣ.. ಪರಿಪೂರ್ಣ. ಹೀಗಾಗಿ ಅವರ ಕಾದಂಬರಿಗಳನ್ನು ಓದುವಲ್ಲಿ ಓದುಗರಾದ ನಾವೂ ಸ್ವಲ್ಪ ಮಟ್ಟಿಗಿನ ಸಿದ್ಧತೆ ಮಾಡಿಕೊಳ್ಳುವುದು ಅನಿವಾರ್ಯವೇನೋ ? ಉದಾಹರಣೆಗೆ ಮಂದ್ರವನ್ನೇ ತೆಗೆದುಕೊಳ್ಳಿ. ಕೇವಲ ಸಾಹಿತ್ಯಸಕ್ತನಿಗಾಗಲಿ ಅಥವಾ ಕೇವಲ ಸಂಗೀತಗಾರನಿಗಾಗಲಿ ಸಂಪೂರ್ಣವಾಗಿ ದೊರಕದದು. ಸ್ವಲ್ಪ ಮಟ್ಟಿಗೆ ಎರಡರ ಜ್ಞಾನವಿದ್ದವನಿಗೆ ಅಷ್ಟೇ ದಕ್ಕಬಲ್ಲದು. ಇಲ್ಲದಿದ್ದರೆ ಹೆಣ್ಣಿನ ವ್ಯಾಮೋಹದ, ವಿಷಯ ಲಂಪಟ ಮೋಹನ ಲಾಲನನ್ನಲ್ಲದೇ ಬೇರೇನನ್ನೂ ನಾವು ಅದರಲ್ಲಿ ದಕ್ಕಿಸಿಕೊಳ್ಳಲಾರೆವು.

ಬರೀ ಪಾಣಿಪತ್ ಕದನ ರಕ್ಕಸತಂಗಡಗಿ ಕದನಗಳ ಇಸ್ವಿಗಳಿಗಷ್ಟೇ ಸೀಮಿತವಾಗಿದ್ದ ನಮ್ಮ ಇತಿಹಾಸದ ಜ್ಞಾನಕ್ಕೆ ಐತಿಹಾಸಿಕ ಪ್ರಜ್ಞೆಗಳನ್ನು ಅನಾವರಣಗೊಳಿಸಿದ್ದು,ಅವುಗಳಿಗೆ ಒಂದು ಹೊಸದಾದ ಆಯಾಮ ದೊರಕಿಸಿದ್ದೇ ಸಾರ್ಥ, ಆವರಣದಂತಹ ಐತಿಹಾಸಿಕ ನೆಲೆಯಲ್ಲಿರುವ ಅವರ ಕಾದಂಬರಿಗಳು. ಮೊದಲ ಸಲ ಸಾರ್ಥ ಓದಿದಾಗ ದಂಗಾಗಿ ಬಿಟ್ಟಿದ್ದೆ. ‘ಸಾರ್ಥ’ ಎಂದರೆ ಅಲ್ಲಿಂದಿಲ್ಲಿಗೆ ಸಂಚರಿಸುವ ವ್ಯಾಪಾರಿಗಳ ಗುಂಪು ಎಂದಷ್ಟೇ ಗೊತ್ತಿದ್ದ ನನಗೆ ಸಾರ್ಥದಲ್ಲಿ ಏನೆಲ್ಲಾ ಉಂಟು? ಬಡಗಿ,ಅಡುಗೆ ಮಾಡುವವನು, ಡೇರೆ ಹಾಕುವವನು, ವೈದ್ಯ, ಪಶುವೈದ್ಯ, ಕಮ್ಮಾರರು, ಜನ ಹಾಗೂ ಪದಾರ್ಥಗಳನ್ನು ಹೊರಲು ಆನೆ, ಕುದುರೆ, ಕತ್ತೆ ಗಳು, ಕುದುರೆ ಗಾಡಿಗಳು, ವಿದ್ಯಾರ್ಥಿಗಳು, ಪ್ರವಾಸಿಗಳು, ಸನ್ಯಾಸಿಗಳು, ಧರ್ಮ ಪ್ರಚಾರಕರು.. ಇಡಿಯ ಪ್ರಪಂಚದ ಒಂದು ಸಣ್ಣ ತುಂಡು - ಮಿನಿ ಪ್ರಪಂಚವೇ ಸಾರ್ಥದಲ್ಲಿರುತ್ತದೆ ಎಂದು ಓದಿದಾಗ ಅರೆ ಹೌದಲ್ಲ ಎನ್ನಿಸಿದ್ದುಂಟು. ಸಾರ್ಥ ನನ್ನ ಮೆಚ್ಚಿನ ಕಾದಂಬರಿ. ಅದರಲ್ಲೂ ಶಂಕರ, ಮಂಡನ ಮಿಶ್ರ, ಭಾರತಿ, ಕುಮಾರಿಲ ಭಟ್ಟ ಇತ್ಯಾದಿ ವೃತ್ತಾಂತಗಳು ಬಹಳವೇ ಇಷ್ಟ. 98 ರಲ್ಲಿ ಆ ಕಾದಂಬರಿ ಬಂದಾಗ ಕಸ್ತೂರಿಯಲ್ಲಿ ಕುಮಾರಿಲ ಭಟ್ಟರು ಪ್ರಾಯಶ್ಚಿತ್ತ ರೂಪವಾಗಿ ಹೊಟ್ಟಿನ ಬೆಂಕಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗದ ವಿವರಣೆ ಇತ್ತು ಪುಸ್ತಕ ಪರಿಚಯ ಕಾಲಮ್‌ನಲ್ಲಿ. ಸುಮಾರು ದಿನಗಳವರೆಗೆ ಸಂಕಟಪಟ್ಟಿದ್ದೆ ನಾನೇ ಆ ಹೊಟ್ಟಿನ ಶಾಖದಲ್ಲಿ ಬೆಂದಂತೆ. ನಾನಾಗ ಅಮ್ಮನ ಮನೆಯೆಂದು ಇಲ್ಕಲ್ ಬಳಿ ಹಳ್ಳಿಗೆ ಹೋಗಿದ್ದೆ. ಅಲ್ಲಿ ಇಲಕಲ್ಲಿನಲ್ಲಿ ಇದ್ದದ್ದೇ ಒಂದು ಬುಕ್ ಸ್ಟಾಲ್. ಬಸವರಾಜ್ ಬುಕ್ ಡಿಪೋ ಅಂತ. ಅವನ ಅಂಗಡಿಗೆ ಹೋಗಿ ಸಾರ್ಥ ಕೇಳಿದೆ . “ಅಕ್ಕೋರ, ಇಲ್ಲಿ ಯಾರು ಓದ್ತಾರ್ರಿ ಅವನ್ನೆಲ್ಲ? ಮತ್ತ ಭಾಳ ಬಿರಿ ಪುಸ್ತಕರೀ..ಮಾರಾಟ ಆಗಂಗಿಲ್ರಿ. ಅದಕ್ಕೇ ತರಸಂಗಿಲ್ರೀ” ಅಂದುಬಿಟ್ಟ. ಬಿಜಾಪುರಕ್ಕೆ ವಾಪಸ್ ಹೋಗಲು ಇನ್ನೂ ವಾರವಿತ್ತು. ವಾರಗಟ್ಟಲೆ ಅದನ್ನು ಓದದೇ ಇರುವುದು ಹೇಗೆ? ಅಂಗಡಿಯವನಿಗೆ ದುಂಬಾಲು ಬಿದ್ದು ಸ್ಪೀಡ್ ಪೋಸ್ಟ್ ನ ಎಕ್ಸ್ಟ್ರಾ ದುಡ್ಡು ಕೊಟ್ಟು ಆ ಪುಸ್ತಕವನ್ನು ತರಿಸಿಯಾಯಿತು. ಅಂಥ ಹಳ್ಳಿಯಲ್ಲಿ ರಾತ್ರಿಯೆಲ್ಲ ಕರೆಂಟ್ ಇರುತ್ತಿರಲಿಲ್ಲ. ಚಿಮಣಿ, ಕಂದೀಲುಗಳ ಬೆಳಕಲ್ಲಿ ಎರಡು ರಾತ್ರಿ ಹಗಲುಗಳಲ್ಲಿ ಅದನ್ನ ಗಬಾ ಗಬ ಓದಿಯಾಯಿತು. ಹೀಗೆ ಬೆಂಬಿಡದೆ ಕಾಡಿ ಓದಿಸಿಕೊಳ್ಳುವ ತಾಕತ್ತು ಬರೀ ಭೈರಪ್ಪನವರ ಪುಸ್ತಕಗಳಿಗೆ ಮಾತ್ರ. ಸಾರ್ಥ ಹಿಂದು - ಬೌದ್ಧ ಧರ್ಮಗಳ ಸಂಘರ್ಷದ ಕಾಲಘಟ್ಟದ ಕಥೆ ಹೇಳಿದರೆ ಆವರಣ ಹಿಂದೂ - ಮುಸ್ಲಿಂ ಕಾಲಘಟ್ಟದ ಕಥೆ ಹೇಳುತ್ತದೆ ಹಂಪಿಯ , ಕಾಶಿಯ ವಿಶ್ವನಾಥನನ್ನು ಜೊತೆ ಜೊತೆಯಾಗಿ ಕಣ್ಣೆದುರಿಗೆ ತಂದುಬಿಡುತ್ತಾರೆ ಭೈರಪ್ಪ ಇದರಲ್ಲಿ. ಭೀಭತ್ಸರಸವನ್ನು ಓದಿಯೂ ಅನುಭವಿಸಬಹುದು ಎನ್ನುವುದು ಅರ್ಥವಾದದ್ದೇ ಆವರಣದ ಕೆಲವೊಂದು ವಿವರಗಳನ್ನು ಓದುವಾಗ. ಅದರ ಮುನ್ನುಡಿಯಲ್ಲಿ ಅವರು “ಸತ್ಯಶೋಧನೆಯಲ್ಲಿ ಓದುಗನು ಲೇಖಕನಷ್ಟೇ ಪಾಲುದಾರ ಪಾತ್ರಗಳನ್ನಾಗಲಿ ಸನ್ನಿವೇಶಗಳನ್ನಾಗಲಿ ಸತ್ಯದ, ಕಲಾ ಸತ್ಯದ ವಸ್ತು ನಿಷ್ಠೆಯಿಂದ ಗ್ರಹಿಸಿ ಅವುಗಳ ಭಾವವನ್ನು ಆಸ್ವಾದಿಸಬೇಕೇ ಹೊರತು ವೈಯಕ್ತಿಕ ರಾಗ ದ್ವೇಷಗಳಿಂದ ಉದ್ರೇಕಗೊಳ್ಳಬಾರದು ಎಂದು ಹೇಳಿರುವುದು ಅಕ್ಷರ ಸತ್ಯ. ಅದರಲ್ಲಿ ಶಕ್ತಿಯೇ ಧರ್ಮ,ಶಕ್ತ ವಲ್ಲದ್ದು ಧರ್ಮ ಹೇಗಾದೀತು ಎಂಬ ತರ್ಕ ಸ್ಫುಟವಾಯಿತು ಅನ್ನುವ ಮಾತೊಂದು ಬರುತ್ತದೆ ಯಾವಾಗಲೂ ಇದುವೇ ಐತಿಹಾಸಿಕ ಸತ್ಯವೇನೋ ಅನಿಸುತ್ತದೆ ಶಕ್ತವಾದದ್ದು ದುರ್ಬಲವಾದದನ್ನು ತನ್ನೊಳಗೆ ಎಳೆದುಕೊಂಡು ಬಿಟ್ಟಿದೆ ಅಂತ. ಡಾರ್ವಿನ್ ನ ವಿಕಾಸವಾದ ನೆನಪಾಗುತ್ತದೆ.
“ ಒಳಗಿನದನ್ನೆಲ್ಲ ಸುರಿದುಕೊಂಡರೂ ನಮ್ಮನ್ನು ತಕ್ಕಡಿಗೆ ಹಾಕುವುದಿಲ್ಲವೆಂಬಂಥ ಒಬ್ಬ ಆತ್ಮೀಯ ಸ್ನೇಹಿತನಿದ್ದರೆ….ಎಲ್ಲ ಜೀವಿಗಳ ಹಂಬಲದ ಪ್ರತೀಕವೆನಿಸುತ್ತದೆ ಈ ಮಾತು. ನಾವೆಷ್ಟೇ ಹೋರಾಡಿದರೂ ನಾವು ನಮ್ಮ ಸಂಸ್ಕಾರದ ಅಡಿಯಾಳುಗಳು, ವ್ಯವಸ್ಥೆ ಯ ಒಂದು ಅಂಗಗಳಷ್ಟೇ ಎಂಬುದು ಲಕ್ಷ್ಮಿ ಮತ್ತು ಪ್ರೊಫೆಸರ್ ಪಾತ್ರಗಳು ಮಾಡುತ್ತವೆ. ಒಟ್ಟಿನಲ್ಲಿ ಭೈರಪ್ಪನವರ ಕೃತಿಗಳ ಬಗ್ಗೆ ಎಷ್ಟು ಮಾತಾಡಿದರೂ ಕಡಿಮೆ. ಅವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗೆ ಹೋಲಿಕೆಯೇ ಇಲ್ಲ ನಿಜವಾದ ಲೇಖಕನಿಗೆ ಪ್ರಶಸ್ತಿ ಸನ್ಮಾನಗಳೆಲ್ಲ ಬರೀ ನಿಮಿತ್ತ. ಅವನ ಶ್ರಮ ಸಾರ್ಥಕವಾಗುವುದು ಅವನ ಕೃತಿಗಳನ್ನು ಓದುವ, ಅರ್ಥೈಸಿಕೊಳ್ಳುವ ಓದುಗರು ದೊರೆತಾಗ ಮಾತ್ರ. ಅಂತಹ ಅಗಣಿತ ಓದುಗರು ಭೈರಪ್ಪನವರಿಗಿದ್ದಾರೆಂಬುದು ನಿರ್ವಿವಾದ. ಕನ್ನಡ ಸಾಹಿತ್ಯ ಲೋಕದಲ್ಲಿ ಅವರು ಪಡೆದ ವಿಶಿಷ್ಟವಾದ ಸ್ಥಾನಮಾನಕ್ಕೆ ಪರ್ಯಾಯ ಎನ್ನುವುದಿಲ್ಲ.