
ಅನಿವಾಸಿ ಓದುಗರಿಗೆಲ್ಲ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ‘ಕನ್ನಡವೆಂದರೆ ಬರೀ ನುಡಿಯಲ್ಲ ; ಹಿರಿದಿದೆ ಅದರರ್ಥ’ ಎಂದ ನಮ್ಮ ನಿತ್ಯೋತ್ಸವದ ಕವಿ ನಿಸಾರರ ಮಾತು ಅಕ್ಷರಶ: ಸತ್ಯ ಎಂಬುದನ್ನು ನಮ್ಮಂಥ ಅನಿವಾಸಿಗಳಿಗಿಂತ ಮಿಗಿಲಾಗಿ ಬಲ್ಲವರಾರು ಅಲ್ಲವೇ? ನಿಜ; ಕನ್ನಡ ಬರೀ ನಾಡು-ನುಡಿಯಲ್ಲ.. ಅದು ನಮ್ಮ ಇರವು,ಅರಿವು,ಹರವು,ಕಸುವು, ಜಸವು..ಅದೆಮ್ಮ ಬಲವು, ಒಲವು, ಗೆಲುವು..ಅದ ಬಿಟ್ಟರಾವ ಅಸ್ಮಿತೆಯೂ ಎಮಗಿಲ್ಲ. ಅದಕ್ಕೆಂದೇ ಕನ್ನಡವೇ ಸತ್ಯ..ಕನ್ನಡವೇ ನಿತ್ಯ. ನಲುಮೆಯ ಓದುಗರೇ, ಈ ರಾಜ್ಯೋತ್ಸವದ ಸಂದರ್ಭದಲ್ಲಿ ಭಾರತೀಯ ವಿದ್ಯಾಭವನದ ಚೈತನ್ಯಮೂರ್ತಿ ಶ್ರೀಯುತ ನಂದ ಕುಮಾರ ಅವರ ಸುಂದರ-ಸುಲಲಿತ ಪದ್ಯವೊಂದು ಓದಿಗಾಗಿ ನಿಮ್ಮ ಕೈ ಸೇರಲಿದೆ. ಓದಿ, ಆನಂದಿಸಿ. ಜೊತೆಗೇ ನಾನೊಂದು ಹೋಟೆಲಿನ ಪರಿಚಯ ಮಾಡಿಸುತ್ತಿದ್ದೇನೆ. ‘ ಪುಸ್ತಕ, ಸಿನೆಮಾ, ಕವಿ-ಕೃತಿ ಪರಿಚಯಗಳೇನೋ ಸರಿ..ಆದರೆ ಇದೇನಿದು ಹೋಟೆಲ್ ಪರಿಚಯ?!’ ಎಂದು ಹುಬ್ಬೇರಿಸಬೇಡಿ..ನೋಡಿ ಹೇಳಿ. ~ ಸಂ
ಕನ್ನಡಮ್ಮನ ಬಳಸಿರಿ
ಹಸುರು ಸೊಬಗಿನ, ಬಯಲುಗಿರಿಗಳ ಉದಧಿನದಿಗಳ ನಾಡಿದು ನಗೆಯಮಲ್ಲಿಗೌ, ಚಿಗುರುಕೇದಗೆ, ಸಕಲಸುಮಗಳ ಬೀಡಿದು ಬಸವ ಸರ್ವಜ್ಞಾದಿ ದಾಸರ, ನಾರಣಪ್ಪನ ಮಾಡಿದು ಹೊನ್ನ ಸಿರಿನುಡಿ ಕನ್ನಡಮ್ಮನ ಕಂದರೆಲ್ಲರ ಗೂಡಿದು ⎮⎮ ಮುಗಿಲುಮುಟ್ಟುವ, ದಿಗಿಲುಗೊಳಿಸುವ ತರುವರಂಗಳ ಕಾನನ ನವಿಲು ಕೋಗಿಲೆ, ಗಿಳಿಯ ಚಿಲಿಪಿಲಿ ವಿಹಗಗಳ ಬೃಂದಾವನ ಆನೆ ಹುಲಿ ನರಿ ಮೃಗಗಳೆಲ್ಲಕು ಆಸರೆಯು ಈ ತಾಯ್ನೆಲ ಅಲ್ಲಿ ಅಗೋ ಬಲು, ಸುಂದರತರ, ಗುಡಿಯಗೋಪುರ ನೋಡುವಾ ⎮⎮ ಸ್ವಾರ್ಥವೆಣಿಸದೇ ನಾಡಹಿತವನು ಬಯಸಿ ದುಡಿದರ ನೆಲೆಯಿದು ಕಲಿಕೆ ಎಲ್ಲರ ಸ್ವತ್ತು ಹಿಂದಡಿಯಿಡದಿರೆಂದರ ಸೆಲೆಯಿದು ಸಕಲ ಉನ್ನತ ಗುಣಗಣಂಗಳ ಪಡೆದ ಸುಜನರ ಕುಲವಿದು ಭೇದವೇ ಇರದಿರುವ ಬಾಳನು ಬಾಳಿದಂತರ ನೆಲವಿದು ⎮⎮ ಬಯಸಿದೆಲ್ಲವ ಆಗು ಮಾಡಿದ ಭಾರತಾಂಬೆಯ ಕರುವಿದು ಬಯಸದೆಯೆ ನಮಗೆಲ್ಲ ನೀಡಿಹ ನಮ್ಮಗಳ ಕರುನಾಡಿದು ಮನದ ಭಾವವ ಮೂಡಿಸಲು ಸರಿಯುಂಟೆ ನಮ್ಮೀಭಾಷೆಗೆ? ನೆನೆಯುತಲಿ ತಾಯೊಲವ ಗೆಳೆಯಾ ಉಬ್ಬಿಹೋಗಿದೆ ನನ್ನೆದೆ ⎮⎮ ಭಾಷೆ ದೇಶದ ಭಾವನಾಡಿಯು ಭಾಷೆ ಬದುಕಿಗೆ ಕನ್ನಡಿ ಕನ್ನಡದ ಕಸ್ತೂರಿ ಮರೆತರೆ ನಷ್ಟ ನಮಗೇ ನೆನಪಿಡಿ! ನೂರುಭಾಷೆಯ ದಾಳಿಯಾಗುವ ಮುನ್ನ ಏಳಿರಿ ಬನ್ನಿರಿ ಭಾರತದ ಕಣ್ಮಣಿಯ, ಹನುಮನ, ಕನ್ನಡಮ್ಮನ ಬಳಸಿರಿ. ⎮⎮ ~ಮತ್ತೂರು ನಂದಕುಮಾರ, ಭಾರತೀಯ ವಿದ್ಯಾಭವನ.
ಕರ್ನಾಟಿಕ್ ಕೆಫೆ

ಕಳೆದ ವರುಷ ಹೀಗೇ ಚಳಿ ಸಣ್ಣಗೆ ಬಾಲ ಬಿಚ್ಚುತ್ತಿರುವ ನವೆಂಬರ್ ತಿಂಗಳು. ಹೊರಗೆ ಮೋಡ ಕವಿದು ಹಗಲು ಹನ್ನೆರಡರ ಹೊತ್ತಿನಲ್ಲೂ ಮಬ್ಬುಗತ್ತಲು. ಹೊರೆ ಕೆಲಸವಿದ್ದರೂ ಮಾಡಲು ಮೂಡಿಲ್ಲದೇ ‘ಥ್ರೋ’ ಮೈಮೇಲೆ ಥ್ರೋ ಮಾಡಿಕೊಂಡು, ಕೈಯಲ್ಲಿ ಜಂಗಮವಾಣಿಯನ್ನು ಸ್ಥಾಪಿಸಿಕೊಂಡು ಸೋಫಾದ ಮೂಲೆಯಲ್ಲಿ ಮುದುಡಿ ಕುಳಿತ ಸೋಮಾರಿ ಹಗಲು. ಒಮ್ಮೆಲೇ ದೆಹಲಿಯಲ್ಲಿರುವ ಮಗರಾಯನ ಕಾಲು.( ಇಂಗ್ಲೀಷಿನ call ಕನ್ನಡದ ಪ್ರಥಮಾ ‘ಉ” ವಿಭಕ್ತಿಯೊಂದಿಗೆ) ‘ಇದೇನಿದು’ ಎಂದು ನನಗೆ ದಿಗಿಲು. ಹತ್ತು ಸಲ ನಾ call ಮಾಡಿದರೇ ಎತ್ತಿ ಉತ್ತರಿಸದ ಭೂಪ.ಅವನದೇ call, ಅದೂ ನನಗೆ ಬಂದರೆ ಅದು ‘ಗಾಡಿ ಮ್ಯಾಲಿಂದ ಬಿದ್ದೆ, ನಂದೇನೂ ತಪ್ಪಿರಲಿಲ್ಲ. ಬರೇ ಒಂಚೂರು ಕೈ ಫ್ರಾಕ್ಚರ್ ಆಗೇದ. ಒಂದೂವರೆ ತಿಂಗಳು ಪ್ಲಾಸ್ಟರ್ ಹಾಕ್ಕೋಬೇಕಷ್ಟೇ.. ಹಂಗೇ ಗಾಡಿಗೊಂಚೂರು ಅಲ್ಲಿಲ್ಲೆ ರಿಪೇರಿಗೆ ಒಂದ ಹತ್ತ-ಹದಿನೈದು ಖರ್ಚಾಗಬಹುದು’ ಅಂತಲೋ ಅಥವಾ, ‘ ನಿನ್ನೆ ರಾತ್ರಿ ಶಿವಾಂಶನ ಮನಿಯಿಂದ ಬರೂ ಮುಂದ ನಾಯಿ ಕಡಿಸಿಕೊಂಡೆ. ನೀ ಏನ ಗಾಬರಿಯಾಗಬ್ಯಾಡ..ಇಂಜಕ್ಷನ್ ಮಾಡಸಗೊಂಡು ಬಂದೀನಿ. ಆದ್ರ ಆ ನಾಯಿ ಮ್ಯಾಲ ಕಣ್ಣಿಟ್ಟರಲಿಕ್ಕೆ ಹೇಳ್ಯಾರ ಡಾಕ್ಟರು..ಅದು ಸಾಯಬಾರದಂತ. ಸತ್ರ ಸ್ವಲ್ಪ ಡೇಂಜರ್ ಅಂತ’(ಅದ್ಯಾವುದೋ ಬೀದಿನಾಯಿ ಮ್ಯಾಲ ಕಣ್ಣಿಡಲಿಕ್ಕೆ ಅದೇನು ತನ್ನ ಅಡ್ರೆಸ್ ಹೇಳಿರತದಾ ಇವಂಗ?!) ಅಂತಲೋ ಎದೆ ಒಡೆಸೋ ವಿಷಯಾನೇ ಇರತಾವ. ಅದಕ್ಕೇ ಸ್ವಲ್ಪ ಗಾಬರಿಯಿಂದಲೇ ಎತ್ತಿ ‘ ಹಲೋ ಮತ್ತೇನಾತಪಾ’ ಎಂದೆ. ‘ಅಮ್ಮಾ, ಇಷ್ಟ ದಿನಾ ಆದ್ರೂ ನೀ ನಂಗ ಒಮ್ಮೆನೂ ಹಂಪಿಗೆ ಯಾಕ ಕರಕೊಂಡು ಹೋಗಿಲ್ಲ? ಈ ಸಲ ಬಂದಾಗ ಅಲ್ಲೇ ಹೋಗೂಣು ಸೂಟಿಗೆ’ ಅಂದವನೇ ‘ ನಾ ಈಗ ಹೋಟೆಲ್ ಗೆ ಬಂದಿದ್ದೆ. ಆ ಮ್ಯಾಲೆ ಮಾಡತೀನಿ’ ಅಂತ ಫೋನಿಟ್ಟ..
ಈ ಹೋಟೆಲ್ ಮತ್ತ ಹಂಪಿಯ ಬಾದರಾಯಣದ ತಲೆಬುಡ ತಿಳಿಯಲಿಲ್ಲ ನನಗೆ. ಆದರೂ ಮಗ ಹಂಪಿ ನೋಡಬೇಕು ಅಂದಿದ್ದೇ ಖುಷಿಯ ವಿಚಾರವಾಗಿತ್ತು. ಕನ್ನಡ ಇತಿಹಾಸಕ್ಕೆ ಸುವರ್ಣ ಯುಗ ಸೇರಿಸಿದ ಹಂಪೆ, ಕೃಷ್ಣದೇವರಾಯ-ಚಿನ್ನಾದೇವಿ-ತಿರುಮಲಾಂಬೆಯರ ಹಂಪೆ, ರಸ್ತೆ ಬದಿಯಲ್ಲಿ ಸೇರಿನಿಂದ ಮುತ್ತುರತ್ನವನಳೆದ ಹಂಪೆ, ವಿರೂಪಾಕ್ಷ-ವಿಜಯವಿಠ್ಠಲರ ದಿವ್ಯ ಸಾನಿಧ್ಯದ ಹಂಪೆ, ಕಲ್ಲುಕಲ್ಲಿನಲೂ ಕನ್ನಡ ನುಡಿ ಮೊಳಗಿಸಿದ ಹಂಪೆ, ಶಿಲೆಯಲ್ಲೂ ಸರಿಗಮದ ಸಂಗೀತದಲೆ ಹೊಮ್ಮಿಸುವ ಹಂಪೆ, ಹನುಮನ ಹಂಪೆ, ಹರಿದಾಸ ಗುರು ವ್ಯಾಸರಾಯರ, ಪುರಂದರರ ಹಂಪೆ, ತುಂಗಭದ್ರೆ ಹರಿವ ಹಂಪೆ..ವಸುಧೇಂದ್ರರ ಇತ್ತೀಚಿನ ಕಾದಂಬರಿ ತೇಜೋತುಂಗಭದ್ರಾದ ಹಂಪೆ..ಎಂದೆಲ್ಲ ನನ್ನ ಮನ ಭಾವುಕವಾಯಿತು. ‘ಆತ ಬಿಡ್ರಿ, ಏನೋ ಹೋಟೆಲ್ ಅಂದು ಇದೇನು ಇತಿಹಾಸ, ಪುರಾಣ ಹಚಗೊಂಡ ಕೂತೀರಿ ಆವಾಗಿಂದ’ ಅಂತ ನಿಮ್ಮ ಸಹನೆ ಕಳಕೋಬ್ಯಾಡ್ರಿ




ಈಗ ಸೀದಾ ಅಲ್ಲೇ ಕರಕೊಂಡು ಹೋಗತೀನಿ. ಇದು ದೆಹಲಿ NCR ದಲ್ಲಿರುವ CARNATIC CAFE. ಮತ್ತ ಹೋಟೆಲ್ ಅಂದ್ರೆಲಾ ಅಂತಿರೇನು? ಖರೇ ಹೇಳತೀನಿ ಈ ಹೋಟೆಲ್, ರೆಸ್ಟೋರೆಂಟ್, ಕೆಫೆ ಇತ್ಯಾದಿಗಳ ವ್ಯತ್ಯಾಸ ಅಷ್ಟ ಖಾಸೇನ ತಿಳ್ಯಂಗಿಲ್ರಿ ನನಗ. ನಮ್ಮೂರ ‘ ಸಂಗಮೇಶ್ವರ ಟೀ ಕ್ಲಬ್’, ಧಾರವಾಡದ ಕಾಮತ್, ಬಸಪ್ಪನ ಖಾನಾವಳಿ, ಹೈ ವೇ ದ ಢಾಬಾ, ಹುಬ್ಬಳ್ಳಿಯ ಉಡುಪಿ ಹೋಟೆಲ್, ಶಿರಸಿಯ ಸತ್ಕಾರ್, ಬಿಜಾಪೂರದ ಮೈಸೂರ ರೆಸ್ಟಾರೆಂಟ್, ಬೆಂಗಳೂರಿನ ಓಣ್ಯೋಣಿ ದರ್ಶಿನಿಗಳು, ದೆಹಲಿಯ ಕರ್ನಾಟಕ ಭವನ. ಕೊನೆಗೆ ಇಲ್ಲಿನ ಮೋಟರ್ ವೇ ಸರ್ವೀಸಿನ costa, subway ಹೊಟ್ಟೆ ತುಂಬಿಸುವ ತಾಣಗಳೆಲ್ಲ ನನ್ನ ಮಟ್ಟಿಗೆ ಹೋಟೆಲ್ ಗಳೇ.. ಹತ್ತು ಹಲವಾರು,ಥರದ ದೋಸೆಗಳು, ಇಡ್ಲಿ-ವಡೆ-ಸಾಂಬಾರ್ ಗಳು, ಬಿಸಿಬೇಳೆ-ಮೊಸರನ್ನಗಳು, ಕರುನಾಡ ಎವರ್ ಗ್ರೀನ್ ಸ್ಪೆಷಲ್ ಕೇಸರಿಭಾತು, ಮೈಸೂರುಪಾಕು, ಒಬ್ಬಟ್ಟುಗಳು, ಘಮಘಮಿಸುವ ಫಿಲ್ಟರ್ ಕಾಫಿ..ಇದಿಷ್ಟೇ ಆಗಿದ್ದರೆ ವಿಶೇಷವಿರುತ್ತಿರಲಿಲ್ಲ..ನಾನಿಲ್ಲಿ ಅದರ ಬಗ್ಗೆ ಪ್ರಸ್ತಾಪಿಸುತ್ತಲೂ ಇರುತ್ತಿರಲಿಲ್ಲ. (ಉತ್ತರ ಭಾರತದಲ್ಲಿ ನಮ್ಮ ದಕ್ಷಿಣದವರ ಅಥೆಂಟಿಕ್ ಟೇಸ್ಟ್ ನ ಖಾದ್ಯಗಳು ದೊರೆವುದು ಸಹ ಅಪರೂಪವೇ ಎನ್ನಿ.) ಇಲ್ಲಿ ನನ್ನ ಸೆಳೆದದ್ದು ಅಪರೂಪದ ಮೆನ್ಯು ಕಾರ್ಡ್.. ಮಧ್ಯೆ ಪುರಂದರದಾಸರ ಅಂಚೆಚೀಟಿ, ಪಕ್ಕದಲ್ಲಿ ರಾಮನಾಮ ಪಾಯಸಕ್ಕೆ ಹಾಡು. ಪಕ್ಕದ ಗೋಡೆಗಳ ಮೇಲೆ ದಾಸವರೇಣ್ಯರ ಹಾಗೂ ಯಂತ್ರೋದ್ಧಾರನ ಫೋಟೊ, ಎದುರಿನ ಗೋಡೆಯ ಟಿ.ವಿ.ಯ ದೊಡ್ಡ ಸ್ಕ್ರೀನ್ ಮೇಲೆ ಅನವರತವಾಗಿ ನಡೆಯುತ್ತಲೇ ಇರುವ ಗಿರೀಶ್ ಕಾರ್ನಾಡರ ನಿರ್ದೇಶನದ, ಶಂಕರ್ ನಾಗ್, ಅರುಂಧತಿ ನಾಗ್ ಹಾಗೂ ಶ್ರೀನಿವಾಸ ಪ್ರಭು ಅವರ ಅಭಿನಯದ ‘ಕನಕ-ಪುರಂದರ’ ಡಾಕ್ಯುಮೆಂಟರಿ. ಹೊರನಾಡಿನಲ್ಲಿ ನಮ್ಮ ನೆಲದ ಸವಿ ಕಣ್ಣು, ಕಿವಿ, ನಾಲಗೆಗಳಿಗೆ ಸಿಕ್ಕರೆ ಆಗುವ ಆನಂದಾನುಭೂತಿ ಎಂಥದೆಂದು ನಮ್ಮ ಅನಿವಾಸಿ ಬಳಗಕ್ಕೆ ವಿವರಿಸಬೇಕಾದ್ದಿಲ್ಲ ಅಲ್ಲವೇ? ತೆಂಗಿನ ಪರಟಿಯಲ್ಲಿ ಬಂದ ಬಡೇಸೋಪು ಸಹ ವಿಶೇಷವೆನ್ನಿಸಿತು ನನಗೆ. ದೆಹಲಿ, ನೊಯಿಡಾ ಕಡೆಗೇನಾದರೂ ಹೋದರೆ ಖಂಡಿತ ಇಲ್ಲೊಮ್ಮೆ ಭೇಟಿಕೊಡಿ..ಕರುನಾಡಿನವನು(ಳು) ನಾನೆಂದು ಹೆಮ್ಮೆ ಪಡಿ. ‘ಜೈನರ ಕಾವ್ಯದ ಶರಣರ ವಚನದ ದಾಸರ ಹಾಡಿನದೀ ನಾಡು’ ಎಂದೊಮ್ಮೆ ಮನದಲ್ಲೇ ಹಾಡಿ.( ನಿಮ್ಮ ಸ್ವರತಾಳಲಯದ ಬಗ್ಗೆ ನಂಬುಗೆಯಿದ್ದವರು ದನಿ ತೆಗೆದೇ ಹಾಡಲಡ್ಡಿಯಿಲ್ಲ.) ಕನ್ನಡ ತಾಯ ಜಯಕಾರ ಮಾಡಿ. ಜೈ ಭುವನೇಶ್ವರಿ. ~ ಗೌರಿಪ್ರಸನ್ನ
