ತಲಾಷ್ ( ಶೋಧ )

ಕಾಲ ಚಕ್ರ ಉರುಳಿ ಶತ ಶತಮಾನಗಳು ಗತಿಸಿದರೂ , ಆಧುನಿಕತೆಯ ಗಾಳಿಯು ಬೀಸಿದರೂ , ಸಮಾಜದಲ್ಲಿ ಹೆಣ್ಣಿನ ಶೋಷಣೆ ಮಾತ್ರ ಹಾಗೆಯೇ ಮುಂದುವರೆದಿರುವದು ಕಟು ಸತ್ಯ . ಜಗತ್ತಿನ ಮೂಲೆ ಮೂಲೆಗಳಲ್ಲಿ ಈ ಅನಿಷ್ಟ ಪದ್ಧತಿ ಇನ್ನೂ ಬೇರೂರಿರುವದು ದುಃಖಕರ ಸಂಗತಿ . ಬದಲಾವಣೆಯ ಅಲೆಯು ಭಾರತದ ಹಳ್ಳಿಗಳಲ್ಲಿ ಬಿಸುತ್ತಿದ್ದರೂ ಲಿಂಗ ಬೇಧ ಮಾತ್ರ ಕೊನೆ ಕಂಡಿಲ್ಲ . ಅಕ್ಷರವಂತರು , ಶ್ರೀಮಂತ ಕುಟುಂಬಗಳು ಇದಕ್ಕೇನು ಹೊರತಾಗಿಲ್ಲ .ಈ ದೇಶಕ್ಕೆ ಬರುವ ಮುನ್ನ ನಾನು ಕೆಲಸಮಾಡುತ್ತಿದ್ದ ಸ್ಥಳದಲ್ಲಿ ನಡೆದ ಒಂದು ಘಟನೆ ಇನ್ನೂ ಮನಸಿನಲ್ಲಿ ಹಾಗೆಯೇ ಉಳಿದಿದೆ . ಘಟನೆಗೆ ಅವಶ್ಯಕ ಬದಲಾವಣೆಗಳನ್ನು ಮಾಡಿ ಒಂದು ಕಥೆ ಬರೆಯಬೇಕು ಎಂದು ಅನಿಸಿತು ಅದಕ್ಕಾಗಿ ಬರೆದಿರುವೆ , ನಿಮ್ಮ ಮುಂದೆ ಇಟ್ಟಿರುವೆ. ದಯವಿಟ್ಟು ಸಮಯ ದೊರೆತಾಗ ಓದಿರಿ ಹಾಗೆಯೇ ಒಂದೆರಡು ಅಕ್ಷರದ ಅನಿಸಿಕೆಯನ್ನು ಗೀಚಲು ಮರೆಯದಿರಿ – (ಸಂಪಾದಕ)

ತಲಾಷ್ ( ಶೋಧ )

“ಅಮ್ಮ; ಅಂಜಲಿ ಇನ್ನೂ ಶಾಲೆಯಿಂದ ಮನೆಗೆ ಬಂದಿಲ್ಲ “
ಅಟ್ಟದ ಮೇಲಿದ್ದ ತಾಯಿಗೆ ದೊಡ್ಡ ಮಗಳು ಕೂಗಿ ಹೇಳುತ್ತಿದ್ದಳು. ಇಕ್ಕಿದ ಸಂಡಿಗೆಯನ್ನು ಆರು ಹಾಕುತ್ತಿದ್ದ ವಸುಂಧರೆ ಉತ್ತರಿಸಿದಳು ” ಇಷ್ಟರಲ್ಲಿಯೆ ಬರಬಹುದು ಬಿಡು …., ಆ ಬೀದಿಯ ನಾಯಿಯ ಜೊತೆಗೊ ಅಥವಾ ಹುಚ್ಚಪ್ಪನ ಜೊತೆಗೊ ಆಟವಾಡುತ್ತಿರಬಹುದು ” ಎಂದು. ಅಂಜಲಿ ಆರು ವರ್ಷದ ಮೂರನೆಯ ಮುದ್ದಿನ ಮಗಳು . ವಸುಂಧರೆಯ ಪಾಲಿಗಂತೂ ವಿಶೇಷ ಮಗಳು . ಮೊಮ್ಮಗ ಬೇಕೆಂದು ಹರ ಸಾಹಸ ಮಾಡುತ್ತಿರುವ ಅತ್ತೆಯ ನಿರೀಕ್ಷೆಗೆ ವಿರುದ್ಧವಾಗಿ ಹುಟ್ಟಿದವಳು . ಗಂಡನಿಗೂ ಮತ್ತೆ ‘ಹೆಣ್ಣಾಯಿತಲ್ಲ’ ಎಂಬ ನಿರಾಸೆಯಿದ್ದರೂ ಚಿಕ್ಕ ಮಗಳೆಂದು ಪ್ರೀತಿ ಜಾಸ್ತಿ . ಚೊಚ್ಚಲು ಮೊಮ್ಮಗು ಹೆಣ್ಣಾದಾಗ ಅತ್ತೆ, ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ . ‘ಇರಲಿ ಬಿಡು ಮುಂದಿನದಾದರೂ ಗಂಡಾದರೆ ಸಾಕು’ ಎಂದು ನಿಟ್ಟುಸಿರು ಬಿಟ್ಟಿದ್ದಳು . ಆದರೆ , ಎರಡನೆಯ ಮೊಮ್ಮಗೂ ಕೂಡ ಹೆಣ್ಣೆಂದು ಗೊತ್ತಾದಾಗ ಗರಬಡಿದವಳ ಹಾಗೆ ಕುಳಿತುಕೊಂಡಿದ್ದಳು . ಮಗನ ಮುಂದೆ ತನ್ನ ಮನದ ದುಗುಡನ್ನು ತೋರಿಕೊಂಡು;” ಏನಪ್ಪಾ ರಾಮು ! ಹೀಗೇಕಾಯಿತು …. ? ನನಗೆ ಇರುವವನು ನೀನೊಬ್ಬನೇ ಮಗ , ನಿನಗೆ ಗಂಡು ಮಗು ಆಗದಿದ್ದರೆ ಈಮನೆತನದ ವಂಶೋದ್ಧಾರನೆ ಹೇಗೆ ಸಾಧ್ಯ….. ? “ಎಂದು ಕಣ್ಣೀರು ಸುರಿಸಿದ್ದಳು . ರಾಮು ಅಷ್ಟೇ ಶಾಂತವಾಗಿಉತ್ತರಿಸಿದ್ದ ;” ಇರಲಿ ಬಿಡಮ್ಮ , ಅವರನ್ನೇ ಗಂಡು ಮಕ್ಕಳ ಹಾಗೆ ಬೆಳೆಸಿದರಾಯಿತು . ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳುಗಂಡಸರಿಗಿಂತ ಯಾವುದರಲ್ಲಿ ಕಡಿಮೆ ಇದ್ದಾರೆ…? . ತಂದೆ ತಾಯಿಗಳ ಮೇಲೆ ಅವರಿಗಿರುವಷ್ಟು ಪ್ರೀತಿ ಗಂಡುಮಕ್ಕಳಿಗೆ ಎಲ್ಲಿದೆ? ಯಾಕೆ ಹೀಗೆ ಮಕ್ಕಳಲ್ಲಿ ಭೇಧ ಭಾವ ಮಾಡ್ತಿಯಾ ?” ಎಂದು ಸಮಾಧಾನ ಹೇಳಿದ್ದ
” ನನ್ನ ಸಂಕಟ ನಿನಗೆ ಹೇಗೆ ಗೊತ್ತಾಗುತ್ತದೆ . ಪುರಾಣ , ವೇದಗಳಲ್ಲಿ ಹೇಳಿಲ್ಲವೇನೋ….’ ಗಂಡು ಮಗು ಇಲ್ಲದಿದ್ದರೆ
ಮೋಕ್ಷ ಸಾಧ್ಯವಿಲ್ಲವೆಂದು …’ . ಹೆಣ್ಣು ಎಂದಾದರು ಪರರ ಆಸ್ತಿ . ಇಷ್ಟೊಂದು ಪಿತ್ರಾರ್ಜಿತ ಆಸ್ತಿಯನ್ನು ಬೇರೆಯವರ
ಪಾಲು ಮಾಡಲು ನನಗೆ ಎಳ್ಳಷ್ಟೂ ಇಷ್ಟವಿಲ್ಲ “ ಎಂದು ಬೇಸರದಿಂದ ನುಡಿದಿದ್ದಳು.
” ಅಮ್ಮಾ, ಪುರಾಣ ವೇದಗಳಲ್ಲಿ ಹೆಣ್ಣು ಮಕ್ಕಳ ಕುರಿತು ಒಳ್ಳೆಯದನ್ನೂ ಹೇಳಿದ್ದಾರೆ . ಒಳ್ಳೆಯದನ್ನು ಆರಿಸಿಕೊಂಡು ಕೆಟ್ಟದ್ದನ್ನು ಬಿಟ್ಟರಾಯಿತು . ಸತ್ತ ಮೇಲೆ ಸ್ವರ್ಗ ನರಕ ಯಾರಿಗೆ ತಿಳಿದಿದೆ …?” ಎಂದು ತಾಯಿಯನ್ನು ಸಮಾಧಾನ ಪಡಿಸಲು ಯತ್ನಿಸಿದ್ದ . ಆದರೆ ತಾಯಿಯು ತಾನೂ ಒಂದು ಹೆಣ್ಣು ಎಂಬುವದನ್ನು ಮರೆತು ಇದಕ್ಕೆ ಯಾವುದಕ್ಕೂ ಜಗ್ಗಿದಂತೆ ಕಾಣಿಸಿರಲಿಲ್ಲ. ಅದೊಂದು ದಿನ ಮನೆ ಕೆಲಸದ ಸುಬ್ಬಿ ವಸುಂಧರೆಗೆ ಹೇಳುತ್ತಿದ್ದಳು ” ನೋಡಮ್ಮ ನಮ್ಮ ಪಕ್ಕದ ಮನೆ ಅನುಸುಯಿಗೆ ಮಕ್ಕಳಾಗಲಿಲ್ಲ ಅಂತ ಅವಳ ಗಂಡ ಇನ್ನೊಂದು ಹೆಣ್ಣನ್ನ ಕಟ್ಟಿಕೊಂಡಾನ್ ….ಆದರ ಆರು ತಿಂಗಳಾದರೂ ಅದಕ್ಕೂ ಗರ್ಭ ತುಂಬಿಲ್ಲ …..ಅವಳ ಅತ್ತಿ ಇನ್ನ ಮುಂದ ಏನ್ ಮಾಡ್ತಾಳಂತ ಗೊತ್ತಿಲ್ಲ”
“ಅದೇನ್ ಹೊಸಾದ ಬಿಡ ಸುಬ್ಬಿ ….ರಾಮಾಯಣದ ಸೀತವ್ವನ ಹಿಡಕೊಂಡು ಇಲ್ಲಿವರೆಗೂ ಹೆಣ್ಣಿನ ಮ್ಯಾಲ ದಬ್ಬಾಳಿಕಿ
ನಡದ ಐತಿ … ಮಕ್ಕಳಾಗದಿದ್ದರೆ ‘ಬಂಜಿ ‘ ಎಂಬ ಪಟ್ಟಾ ಕಟ್ಟತಾರ , ಹೆಣ್ಣು ಹೆತ್ತರ ಗಂಡು ಹಡಿಯಲಿಲ್ಲ ಎಂದು
ಶಪಿಸತಾರ್ … ಗಂಡಸರು ಮಾತ್ರ ಏನೂ ತಪ್ಪಿಲ್ಲ ಎಂದು ಮೌನವಾಗಿರತಾರ್ ….ನಮ್ಮ ಅತ್ತಿಗೂ ಸ್ವಲ್ಪ ಹೇಳಿಬಿಡು “
ಅಂತ ಸುಬ್ಬಿಗೆ ಹೇಳಿದ್ದಳು . ಅತ್ತೆ ಮಾತು ಕೇಳಿಸಿಕೊಂಡರು ಏನು ಮಾತನಾಡಿರಲಿಲ್ಲ
ಮನೆಯಲ್ಲಿ ಅತ್ತೆಯ ವಿರುದ್ಧವಾಗಿ ಹೋಗುವ ಶಕ್ತಿ ಯಾರಿಗೂ ಇರಲಿಲ್ಲ . ರಾಮು , ಹೆಂಡತಿಯ ಮೇಲಿದ್ದ ಪ್ರೀತಿಯನ್ನ ಕಡೆಗಣಿಸಲಾಗದೆ , ತಾಯಿಯ ವಿರುದ್ಧ ಮಾತನಾಡುವ ಶಕ್ತಿಯಿಲ್ಲದೆ ತ್ರಿಶಂಕು ನರಕದಲ್ಲಿ ಸಿಕ್ಕಿಹಾಕಿಕೊಂಡಿದ್ದನು . ವಸುಂಧರೆ ಮತ್ತೆ ಗರ್ಭವತಿ ಎಂದು ಗೊತ್ತಾದಾಗ ಅತ್ತೆಗೆ ಸಂತೋಷವೂ ಆಗಿತ್ತು ಹಾಗೆಯೆ ಚಿಂತೆಯೂ ಮೂಡಿತ್ತು.
‘ದೇವರೆ ! ಈ ಸಾರಿಯಾದರೂ ನನ್ನ ಆಸೆಯನ್ನು ಪೂರೈಸು ಎಂದು ದೊಡ್ಡ ನಮಸ್ಕಾರವನ್ನು ಹಾಕಿದ್ದಳು’ , ತಕ್ಷಣವೇ
ಅವಳನ್ನು ತನಗೆ ಗೊತ್ತಿದ್ದ ವೈದ್ಯರ ಹತ್ತಿರ ಕರೆದುಕೊಂಡು ಹೋಗಿ ತಪಾಸಣೆ ಮಾಡಿಸಿದ್ದಳು . ಅಡ್ಡದಾರಿಯಲ್ಲಿ
ವೈದ್ಯರಿಂದ ಲಿಂಗ ಪರೀಕ್ಷೆಯೂ ಆಗಿತ್ತು . ಗಂಡು ಮಗು ಎಂಬ ಆಶ್ವಾಸನೆಯು ದೊರಕಿದಾಗ ಅವಳ ಆನಂದಕ್ಕೆ
ಪಾರವೇ ಇರಲಿಲ್ಲ . ಸೊಸೆಯನ್ನು ಅಪ್ಪಿ ಮುದ್ದಾಡಿದ್ದಳು, ‘ದೇವರು ಕೊನೆಗೂ ತನ್ನ ಮೇಲೆ ಕರುಣೆ ತೋರಿದನಲ್ಲಾ’
ಎಂದು ಸಂತೋಷದ ಉಸಿರನ್ನು ಬಿಟ್ಟಿದ್ದಳು. ಆದರೆ ಅತ್ತೆಗೆ ಗೊತ್ತಾಗಿರಲಿಲ್ಲ ‘ ತಾನೊಂದು ಬಗೆದರೆ,ದೈವ
ಇನ್ನೊಂದು ಬಗೆಯುವದೆಂದು’. ಅದೊಂದು ದಿನ ವಸುಂಧರೆಗೆ ಹೆರಿಗೆ ಆಯಿತು ಆದರೆ ಅವರೆಂದುಕೊಂಡಂತೆ ಗಂಡು ಮಗವಾಗಿರಲಿಲ್ಲ ಮತ್ತೆ ಇನ್ನೊಂದು ಹೆಣ್ಣು ಮಗುವಿನ ಆಗಮನವಾಗಿತ್ತು . ವೈಧ್ಯರ ಪರೀಕ್ಷೆ ಸುಳ್ಳಾಗಿತ್ತು. ಅತ್ತೆಯ ಪೂಜೆಗೆ ಯಾವ ದೇವರೂ ವರ ಕೊಟ್ಟಿರಲಿಲ್ಲ ಅದಷ್ಟೇ ಅಲ್ಲದೆ ಮಗು ‘ಮೂಲಾ ‘ ನಕ್ಷತ್ರದಲ್ಲಿ ಹುಟ್ಟಿತ್ತು . ಒಂದರಮೇಲೊಂದು ಆಘಾತವನ್ನು ಅನುಭವಿಸಿದ ಅತ್ತೆಯ ತಲೆಯ ಮೇಲೆ ಆಕಾಶವೇ ಕಳಚಿ ಬಿದ್ದಿತ್ತು . ಮೂಲಾ ನಕ್ಷತ್ರದಲ್ಲಿ ಮಗು ಹುಟ್ಟಿದರೆ ತಂದೆಯ ಪ್ರಾಣಕ್ಕೆ ಅಪಾಯ ಎಂಬುದು ಬಹು ಜನರ ನಂಬಿಕೆ . ಅತ್ತೆಯೂ ಅದಕ್ಕೇನು
ಹೊರತಾಗಿರಲಿಲ್ಲ . ಈ ಅನಿಷ್ಟ ಮಗು ಏಕೆ ಈ ಮನೆಯಲ್ಲಿ ಹುಟ್ಟಿತೆಂದು ಪರಿತಪಿಸಿದ್ದಳು. ಮಗನ ಜೊತೆಗೆ ವಿಷಯವನ್ನು ಎತ್ತಿದಾಗ ಅವನೇನು ತಲೆಕೆಡಿಸಿಕೊಳ್ಳಲಿಲ್ಲ . ” ಮಗು ಮುದ್ದಾಗಿದೆಯಮ್ಮ! ಎತ್ತಿ ಮುದ್ದಾಡಿಬಿಡು. ಮೂಢನಂಬಿಕೆಗಳಿಗೆಲ್ಲ ಸುಮ್ಮನೆ ತಲೆ ಕೆಡಿಸಿಕೊಂಡು ಯಾಕೆ ನಿನ್ನ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿ ಮತ್ತು ಮನೆಯ ನೆಮ್ಮದಿಯನ್ನೂ ಕೂಡಾ ಕೆಡಿಸುತ್ತಿ” ಅಂತ ಅವಳನ್ನು ಸಮಾಧಾನ ಮಾಡಲು ಪ್ರಯತ್ನಿಸಿದ್ದನು . ಅಮ್ಮನ ಮನಸು ಅಷ್ಟು ಸುಲಭವಾಗಿ ಒಪ್ಪುವದಿಲ್ಲವೆಂದು ಅವನಿಗೆ ಗೊತ್ತಿತ್ತು. ಅತ್ತೆಯ ವರ್ತನೆಯಿಂದ ವಸುಂಧರೆಗೆ ರೋಷಿ ಹೋಗಿತ್ತು. ಇವಳೂ ಒಬ್ಬಳು ಹೆಣ್ಣಾಗಿ ಇನ್ನೊಂದು ಹೆಣ್ಣಿನ ಭಾವನೆಗಳನ್ನು ಯಾಕೆ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಬೇಸರಮಾಡಿಕೊಂಡಿದ್ದಳು. ಅತ್ತೆಗೆ ಎದುರಾಗಿ ಎಂದೂ ಮಾತನಾಡದವಳು ಅದೊಂದು ದಿನ ಘಟ್ಟಿ ಮನಸಿನಿಂದ ಹೇಳಿಬಿಟ್ಟಿದ್ದಳು . ” ನೋಡು ಅತ್ತೆಮ್ಮ…..ನಿಮ್ಮ ಗಂಡು ಮೊಮ್ಮಗನ ಆಸೆಯಿಂದ ನನಗೆ ಮತ್ತೆ ಮಕ್ಕಳನ್ನು ಹೆರಲು ಹೇಳಬೇಡಿ . ನಾನೇನು ಮಕ್ಕಳನ್ನು ಹೆರುವ ಫ್ಯಾಕ್ಟರಿ ಅಲ್ಲ . ಇದ್ದ ಮೂವರು ಮಕ್ಕಳನ್ನು ಚನ್ನಾಗಿ ಬೆಳೆಸುವ ಜವಾಬ್ಧಾರಿ ನನಗೆ ಸಾಕು. ಗರ್ಭದಲ್ಲಿ ಜೀವ ಮೂಡುವದಕ್ಕೆ ಗಂಡ ಹೆಂಡತಿ ಹೇಗೆ ಕಾರಣರೊ……ಹಾಗೆಯೇ ಮೂಡಿದ ಜೀವ ಹೆಣ್ಣು ಅಥವಾ ಗಂಡು ಎಂದು ಮಾರ್ಪಡಲು ಅವರಿಬ್ಬರೂ ಅಷ್ಟೆ ಸಮಪಾಲರು ಎಂಬುವದನ್ನು ಮರೆಯಬೇಡಿರಿ“ ಎಂದಿದ್ದಳು . ಸೊಸೆಯ ಈ ಮಾತಿನಿಂದ ಆಘಾತವಾಗಿದ್ದರು ಏನನ್ನು ತಿರುಗಿ ಮಾತನಾಡದೆ ಸುಮ್ಮನಾಗಿದ್ದಳು .
ತನ್ನ ಮನಸಿನ ವೇದನೆಯನ್ನು , ವಸುಂಧರೆ ಗಂಡನಿಗೂ ಮುಟ್ಟಿಸಿದ್ದಳು” ನನಗೆ ಇನ್ನು ಮುಂದೆ ಮಕ್ಕಳು ಬೇಡ
….ನಿಮಗೇನಾದರೂ ನಿಮ್ಮ ತಾಯಿಯ ಹಾಗೆ ಗಂಡುಮಗುವಿನ ಆಸೆಯಿದ್ದರೆ ……? ಇನ್ನೊಂದು ಮದುವೆಯನ್ನು
ಮಾಡಿಕೊಳ್ಳಿ …ನನಗೇನೂ ತೊಂದರೆ ಇಲ್ಲ . ನನ್ನನ್ನು ನನ್ನ ಪಾಲಿಗೆ ಬಿಟ್ಟುಬಿಡಿ ” ಎಂದು . ವಸುಂಧರೆಯನ್ನು
ಸಮಾಧಾನಪಡಿಸಿ ಅವನು ಹೇಳಿದ್ದ ” ಇದಕ್ಕೆಲ್ಲ ಯಾಕೆ ತಲೆಕೆಡಿಸಿಕೊಳ್ಳುತ್ತೀಯ ಸ್ವಲ್ಪ ಸಮಯದ ನಂತರ ಎಲ್ಲ
ಸರಿಯಾಗುತ್ತದೆ ಬಿಡು ” ಎಂದು .
ಕಾಲಚಕ್ರ ತಿರುಗುತ್ತಿತ್ತು , ಅಂಜಲಿ ಅಷ್ಟರಲ್ಲಿಯೇ ಆರು ವಸಂತಗಳನ್ನು ಕಳೆದಿದ್ದಳು . ತಂದೆ ತಾಯಿಯರ ಇಚ್ಛೆಯಂತೆ
ಮನೆಯಿಂದ ಸುಮಾರು ಮೂರು ಮೈಲು ದೂರವಿದ್ದ ಇಂಗ್ಲಿಷ್ ಶಾಲೆಗೆ ಪಾದಾರ್ಪಣೆ ಮಾಡಿದ್ದಳು . ಮನೆಯಿಂದ
ನೂರು ಮೀಟರ್ ನಡೆದರೆ ಆಲದ ಮರದ ಕಟ್ಟೆ . ಅಲ್ಲಿಗೆ ಶಾಲೆಯ ವಾಹನ ಬಂದು ಮಕ್ಕಳನ್ನು ಕರೆದೊಯ್ಯುತ್ತಿತ್ತು .
ಅಂಜಲಿಗೆ ಪ್ರಾಣಿಗಳನ್ನು ಕಂಡರೆ ತುಂಬಾ ಅನುಕಂಪ , ಮನೆಯ ಮುಂದೆ ಮಲಗುತ್ತಿದ್ದ ಬೀದಿಯ ನಾಯಿಗೆ ದಿನಾಲೂಊಟವನ್ನು ಹಾಕಿ ಸ್ನೇಹವನ್ನು ಗಿಟ್ಟಿಸಿದ್ದಳು. ತಿಂದ ಅನ್ನದ ಋಣ ಎಂಬುವಂತೆ ದಿನಾಲೂ ಮನೆಯಿಂದ ಆಲದ ಕಟ್ಟೆಯವರೆಗೂ ಅದು ಅವಳನ್ನು ಹಿಂಬಾಲಿಸುತ್ತಿತ್ತು ಮತ್ತು ಸಾಯಂಕಾಲ ಅವಳ ಬರುವಿಕೆಗಾಗಿ ಕಟ್ಟೆಯ ಹತ್ತಿರ ಕಾಯುತ್ತಿತ್ತು .
ಸಾಯಂಕಾಲ ಐದು ಘಂಟೆಯಾದರೂ ಅಂಜಲಿ ಮನೆ ಸೇರದಿದ್ದಾಗ ವಸುಂಧರೆಗೆ ಚಿಂತೆಯಾಗತೊಡಗಿತು….. ಆಲದ
ಕಟ್ಟೆಯವರೆಗೂ ಹೋಗಿನೋಡೊಣವೆಂದು ಮನೆಯ ಹೊರಗೆ ಬಂದಳು . ಬಾಗಿಲಿನ ಎದುರು ಬೀದಿ ನಾಯಿ
ಒಂಟಿಯಾಗಿ ಜೋರಾಗಿ ಬೊಗಳುತ್ತ ನಿಂತಿತ್ತು ಆದರೆ ಅಂಜಲಿ ಇರಲಿಲ್ಲ . ನಾಯಿಯು ಏನೋ ಸಂದೇಶವನ್ನು
ಹೇಳಲು ಪ್ರಯತ್ನಿಸುತಿತ್ತು
ವಸುಂಧರೆಗೆ ಯಾಕೋ ಭಯವಾಗತೊಡಗಿತು . ಗಂಡನಿಗೆ ಫೋನು ಮಾಡಿ ತಕ್ಷಣವೇ ಮನೆಗೆ ಬರಲು ಹೇಳಿ ,
ನಾಯಿಯ ಜೊತೆಗೆ ಆಲದ ಮರದ ಕಟ್ಟೆಯಕಡೆಗೆ ನಡೆದಳು .
( ಮುಂದಿನ ಸಂಚಿಕೆಯಲ್ಲಿ ಮುಂದುವರೆಯುವದು )

ನಾಗಾಭರಣಾಯಣ

 

ಈ ವಾರ ನಿಮ್ಮ ಮುಂದಿದೆ ಕಳೆದ ಶನಿವಾರ ಹೆಸರಾಂತ ನಿರ್ದೇಶಕ, ರಂಗ ಕರ್ಮಿ ಟಿ. ಎಸ್. ನಾಗಾಭರಣರೊಡನೆ ಅನಿವಾಸಿಗಳು ನಡೆಸಿದ ಸಂವಾದದ ವರದಿ.

ನವೆಂಬರ್ ೨೬ರಂದು ಕನ್ನಡ ಬಳಗ (ಯು.ಕೆ) ಸ್ಟೋಕ್ ಆನ್ ಟ್ರೆಂಟ್ ನಗರದಲ್ಲಿ ದೀಪಾವಳಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಅಂದು ಮುಖ್ಯ ಅತಿಥಿಗಳಾಗಿ ಹೆಸರಾಂತ ನಿರ್ದೇಶಕ, ರಂಗಕರ್ಮಿ ಶ್ರೀ. ಟಿ. ಎಸ್. ನಾಗಾಭರಣ ಕರ್ನಾಟಕದಿಂದ ಆಗಮಿಸಿದ್ದರು. ಅವರು ಬರುವ ವಿಚಾರ ನಮಗೆ  ಸಪ್ಟೆಂಬರ್ ತಿಂಗಳಲ್ಲೇ ತಿಳಿದಿತ್ತು. ಅದಕ್ಕನುಗುಣವಾಗಿ ಸಂಪ್ರದಾಯದಂತೆ ಅನಿವಾಸಿ ಹುಟ್ಟಿದಾಗಿನಿಂದ ನಡೆಸಿಕೊಂಡು ಬಂದಿರುವ ಗೋಷ್ಠಿಗೆ ನಾಗಾಭರಣರ ನಾಟಕ ಹಾಗೂ ಸಿನಿಮಾಗಳ ವಿಶ್ಲೇಷಣೆ ಮಾಡುವ ನಿರ್ಧಾರಕ್ಕೆ ಬಂದಿದ್ದೆವು. ಇದರೊಡನೆ, ಅವುಗಳ ಬಗ್ಗೆ ಮಾತಾಡುವ ಸದಸ್ಯರಿಗೆ ನಾಗಾಭರಣರನ್ನು ಪ್ರಶ್ನಿಸುವ ಅವಕಾಶವನ್ನು ಕೊಡಲಾಯಿತು. 

ಅನಿವಾಸಿ ಕಾರ್ಯಕ್ರಮಕ್ಕೆ ಉತ್ತಮವಾದ ವಿಂಡ್ಸರ್ ಕೋಣೆ ಹಾಗು ಸೂಕ್ತವಾದ ಧ್ವನಿ ವ್ಯವಸ್ಥೆಯ ಅನುಕೂಲ ಮಾಡಿಕೊಟ್ಟವರು ಕನ್ನಡ ಬಳಗದ ಅಧ್ಯಕ್ಷರಾದ ಶ್ರೀಮತಿ ಸುಮನಾ ಗಿರೀಶ್. ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದವರು ಡಾ. ಲಕ್ಷ್ಮೀನಾರಾಯಣ ಗುಡೂರ್. ಆರು ಅನಿವಾಸಿಗಳು ತಮಗೆ ಬೇಕಾದ ಸಿನಿಮಾಗಳನ್ನು ಆರಿಸಿಕೊಂಡು, ವಿಶ್ಲೇಷಿಸಿದರು. ಪ್ರತಿಯೊಬ್ಬರಿಗೂ ಸರಿ ಸುಮಾರು ಹತ್ತು ನಿಮಿಷಗಳ ಕಾಲಾವಕಾಶವಿತ್ತು. ಮೊದಲ ಒಂದೆರಡು ನಿಮಿಷಗಳು ಸಿನಿಮಾ ಕಥೆಯ ವಿವರಣೆಗೆ ಮೀಸಲಿಡಲು ಸೂಚಿಸಲಾಗಿತ್ತು. ನಂತರದ ಎರಡು ನಿಮಿಷಗಳನ್ನು ಸಿನಿಮಾದ ತುಣುಕನ್ನು ತೋರಿಸಲು ಹಾಗು ಉಳಿದ ಸಮಯದಲ್ಲಿ ವಿಶ್ಲೇಷಣೆ ಹಾಗು ನಾಗಾಭರಣರೊಡನೆ ಆ ಸಿನಿಮಾ ಕುರಿತಾದ ಸಂವಾದಕ್ಕೆಂದು ಗುರುತಿಸಿಕೊಂಡಿದ್ದೆವು. ವಿಶ್ಲೇಷಕರಿಗೆ ಬೇಕಾದ ಸಿನಿಮಾ ತುಣುಕುಗಳನ್ನು ಮುತುವರ್ಜಿಯಿಂದ ತಯಾರಿಸಿ ಒದಗಿಸಿದವರು ಡಾ. ಶ್ರೀವತ್ಸ ದೇಸಾಯಿ.

ಅನಿವಾಸಿಗಳ ಆಯ್ಕೆ ಈ ಕೆಳಗಿನಂತಿದ್ದವು:

೧. ಡಾ. ಕೇಶವ ಕುಲಕರ್ಣಿ: ಅನ್ವೇಷಣೆ (ಬಿಡುಗಡೆ: ೧೯೮೩)

೨. ಡಾ. ಜಿ.ಎಸ್. ಶಿವಪ್ರಸಾದ: ಅಲ್ಲಮ (ಬಿಡುಗಡೆ: ೨೦೧೭)

೩. ಡಾ. ರಶ್ಮಿ ಮಂಜುನಾಥ: ಚಿನ್ನಾರಿ ಮುತ್ತ (ಬಿಡುಗಡೆ: ೧೯೯೩) 

೪. ಡಾ. ರಾಮಶರಣ ಲಕ್ಷ್ಮೀನಾರಾಯಣ: ನಾಗಮಂಡಲ (ಬಿಡುಗಡೆ: ೧೯೯೭) 

೫. ಡಾ. ಶ್ರೀವತ್ಸ ದೇಸಾಯಿ: ಸಿಂಗಾರೆವ್ವ (ಬಿಡುಗಡೆ: ೨೦೦೩) 

೬. ಡಾ. ಲಕ್ಷ್ಮೀನಾರಾಯಣ ಗುಡೂರ್: ಮೈಸೂರು ಮಲ್ಲಿಗೆ (ಬಿಡುಗಡೆ: ೧೯೯೧) 

ಉತ್ತಮವಾದ ಪ್ರತಿ ಸಿಗದ ಕಾರಣ ಕೇಶವ ಕುಲಕರ್ಣಿಯವರು ಸಿನಿಮಾದ ತುಣುಕನ್ನು ತೋರಿಸದಿದ್ದರೂ, ಅವರ ತಮ್ಮ ಹೇಗೆ ಸಿನಿಮಾದ ಪ್ರಾರಂಭದಲ್ಲಿನ ದೃಶ್ಯವೊಂದರ ಬಳಿಕ ಹೆದರಿ ಪರದೆಗೆ ಬೆನ್ನು ಮಾಡಿ ಕುಳಿತಿದ್ದನೆಂಬುದನ್ನು ಕೇಳಿದವರಿಗೆ ಸಿನಿಮಾ ಟ್ರೇಲರ್ ನೋಡಿದ ಅನುಭವವಾಗಿರಬಹುದು. ಜನಮನದ ಗೀತೆಗಳನ್ನು ಆಧಾರಿಸಿ ನಿರ್ಮಿಸಿದ ಸಿನಿಮಾವಾಗಿದ್ದರಿಂದ ಗುಡೂರರು ಸಿನಿಮಾದ ಹಾಡುಗಳ ಸಂಗೀತವನ್ನು ಕತ್ತರಿಸಿ ಧ್ವನಿ ಕೊಲಾಜನ್ನು ಪ್ರಸ್ತುತ  ಪಡಿಸಿದರು. ಇಡೀ ಹಾಡನ್ನು ನಿರೀಕ್ಷಿಸುತ್ತಿದ್ದವರಿಗೆ, ಒಮ್ಮೆಲೇ ಇನ್ನೊಂದು ಹಾಡು ಶುರುವಾಗಿ ತಬ್ಬಿಬ್ಬಾಗಿದ್ದು (ನಾಗಾಭರಣರನ್ನೂ ಸೇರಿ) ಈ ಪ್ರಯೋಗದ ವೈಶಿಷ್ಠ್ಯ. 

ನಮ್ಮ ಕಾರ್ಯಕ್ರಮದ ವಿಶೇಷ ನಾಗಾಭರಣರೊಂದಿಗಿನ ಸಂವಾದ.  ಅವರ ಸಿನೆಮಾಗಳ ಬೆಳವಣಿಗೆಯ ಹಿಂದಿನ ಕುತೂಹಲಕಾರಿ ಕಥೆಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದವು, ಆಶ್ಚರ್ಯಚಕಿತರಾಗಿಸಿದವು. ‘ಅನ್ವೇಷಣೆ’ ನಾಗಾಭರಣರ ಎರಡನೇ ಸಿನೆಮಾ. ಅವರ ಗುರು ಗಿರೀಶ್ ಕಾರ್ನಾಡರು. ಅವರ ಸಲಹೆಯಂತೆ ಸ್ಮಿತಾ ಪಾಟೀಲರನ್ನು ನಾಯಕಿಯಾಗಿ ಆರಿಸಿದ್ದರು ನಾಗಾಭರಣ. ಅದಕ್ಕೆ ಎರಡು ಕಾರಣಗಳು: ಆಕೆ ಚಿತ್ರಕಥೆ ಇಷ್ಟ ಪಟ್ಟು ತಾನೇ ನಾಯಕಿಯಾಗಿ ನಟಿಸುತ್ತೇನೆಂದಿದ್ದು ಹಾಗು ನಾಗಾಭರಣರ ಕಾಸಿನ ಕಷ್ಟ ನೋಡಿ ಸಂಭಾವನೆ ಇಲ್ಲದೇ ಕೆಲಸ ಮಾಡುವೆನೆಂದು ಒಪ್ಪಿದ್ದು. ನಾಯಕ ಅನಂತನಾಗ್ ಪ್ರೇಮದ ಕಡಲಲ್ಲಿ ಈಸುತ್ತ, ನಾಗಾಭರಣರನ್ನು ಇರುಸು-ಮುರಿಸಿನ ಪ್ರಸಂಗಕ್ಕೆ ಸಿಲುಕಿಸಿದ್ದನ್ನು ಹಂಚಿಕೊಂಡರು. ಕೇವಲ ೨.೫ ಲಕ್ಷದಲ್ಲಿ ತಯಾರಿಸಿದ ಚಿತ್ರವಿದಾಗಿತ್ತು. ಮಕ್ಕಳ ಚಿತ್ರ ಜಗತ್ತಿನಲ್ಲೇ ಹೆಚ್ಚು ಕಡೆಗಣಿಸಲ್ಪಟ್ಟ ಪ್ರಕಾರ ಎಂಬುದು ನಾಗಾಭರಣರ ಅಂಬೋಣ. ‘ಚಿನ್ನಾರಿ ಮುತ್ತ’ ಕ್ಕೆ ಪ್ರೇರಣೆ ಡಿಕನ್ಸ್ ನ ಓಲಿವರ್ ಟ್ವಿಸ್ಟ್. ಕವಿ ಎಚ್ಚೆಸ್ವಿಯವರಿಗೆ ಸವಾಲು ಹಾಕಿ ಕಥೆ, ಸಂಭಾಷಣೆ, ಹಾಡು ಬರೆಸಿ ತಯಾರಿಸಿದ ಸಿನಿಮಾ. ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯೂ ಸಿಕ್ಕಿತ್ತು. ಹೀಗೇ ನಾಲಕ್ಕು ಮಕ್ಕಳ ಚಿತ್ರಗಳನ್ನು ತಯಾರಿಸಿ, ಪ್ರಶಸ್ತಿ ಪಡೆದ ಹೆಗ್ಗಳಿಕೆ ನಾಗಾಭರಣರದ್ದು. 

ಸಂಗೀತ ನಾಗಾಭರಣರ ಚಿತ್ರಗಳ ಜೀವಾಳ. ಅದಕ್ಕೆ ಅವರಿಗೆ ಹೆಗಲು ಕೊಟ್ಟಿದ್ದು ಹೆಸರಾಂತ ಕಲಾವಿದ ಸಿ. ಅಶ್ವಥ್. ಇವರ ಯಮಳ ಪ್ರಯೋಗಗಳನ್ನು ಹೆಚ್ಚಿನ ಪ್ರಸಿದ್ಧ ಸಿನಿಮಾಗಳಲ್ಲಿ ಕಾಣುತ್ತೇವೆ (ಮೈಸೂರು ಮಲ್ಲಿಗೆ, ಚಿನ್ನಾರಿ ಮುತ್ತ, ಸಂತ ಶಿಶುನಾಳ ಶರೀಫ, ನಾಗಮಂಡಲ, ಸಿಂಗಾರೆವ್ವ). ‘ಮೈಸೂರು ಮಲ್ಲಿಗೆ’ ನಾಗಾಭರಣರಿಗೆ ವಿಶೇಷ ಸವಾಲನ್ನು ಒಡ್ಡಿದ ಪ್ರಯೋಗ. ಕೇವಲ ಹಾಡುಗಳನ್ನು ಆಧರಿಸಿ ಹೊಸೆದ ಕಥೆಯಿದು. ಸುಮಾರು ಹದಿನೈದು ಹೆಸರಾಂತ ಕವಿಗಳೊಡನೆ ಸಮಾಲೋಚಿಸಿದರೂ, ದಾರಿ ಕಾಣದಾದಾಗ, ನಾಗಾಭರಣರೇ ಕಥೆಯನ್ನು ಹೊಸೆಯುವ ನಿರ್ಧಾರ ಮಾಡಿದರು. ಹಲವು ಆವೃತ್ತಿಗಳನ್ನು ಕವಿತೃಯರಾದ ಎಚ್ಚೆಸ್ವಿ, ನರಹಳ್ಳಿ ಬಾಲಸುಬ್ರಹ್ಮಣ್ಯ ಹಾಗು ವ್ಯಾಸರಾಯರೊಡನೆ ಚರ್ಚಿಸಿದ್ದರಂತೆ. ಒಂದು ಬೆಳಗಿನ ಝಾವ ಬುಲ್ ಟೆಂಪಲ್ ಎದುರಿನ ಕಟ್ಟೆಯ ಮೇಲೆ ಅಶ್ವಥ್ ಜೊತೆ ಕುಳಿತಿದ್ದಾಗ ಬಲ್ಬ್ ತಟ್ಟನೆ ಫ್ಲಾಶ್ ಆಗಿ ಕಥೆಗೊಂದು ರೂಪ ಬಂದಿತ್ತೆಂದು ವಿವರಿಸಿದರು. ಇದರಲ್ಲಿ ಅವರು ಕಾಣುವುದು ಸಂಘರ್ಷ: ಸ್ವಾತಂತ್ರ್ಯ ಹೋರಾಟ, ಸರಕಾರದ ಪರವಾದ ಶಾನುಭೋಗರೊಂದೆಡೆ, ಸಂಗ್ರಾಮದ ಪರವಾದ ಅವರ ಅಳಿಯ, ಇವರ ನಡುವೆ ಬಳಲುವ ಪದುಮ. ಈ ಸಿನೆಮಾದ ತೆರೆಯ ಮರೆಯಲ್ಲಿ ಆದ ಸಂಘರ್ಷ ನಮಗೆಲ್ಲ ನಾಗಾಭರಣರ ಜಿದ್ದು, ಸಿನಿಮಾ ಕ್ಷೇತ್ರದಲ್ಲಿ ಅವರಿಗಿದ್ದ ಪ್ರಭಾವಗಳನ್ನೂ ಪರಿಚಯ ಮಾಡಿಸಿತು. ಮೈಸೂರು ಮಲ್ಲಿಗೆ ಧ್ವನಿ ಸುರುಳಿಯ ಯಶಸ್ಸಿನ ಹಿಂದಿನ ರೂವಾರಿ ಅಶ್ವಥ್ ಎಂಬುದು ಎಲ್ಲರಿಗೂ ಗೊತ್ತಿದ್ದದ್ದೇ. ಆದರೆ ನಾಗಾಭರಣರಿಗೆ ಬೇಕಿದ್ದುದು ಯುವಕನಿಗೆ ಹೊಂದುವ ಧ್ವನಿ. ಹೇಗೆ ಅವರು ಎಸ್ಪಿ ಬಾಲಸುಬ್ರಹ್ಮಣ್ಯರನ್ನು ಅಶ್ವಥ್ ಬದಲು ಅಶ್ವಥ್ ನಿರ್ದೇಶನದಲ್ಲೇ ಹಾಡಿಸಿದರು ಎಂಬುದನ್ನು ಕೇಳಿ ಪ್ರೇಕ್ಷಕರೆಲ್ಲ ದಿಗ್ಭ್ರಂತರಾದರು, ಮನಸಾರೆ ನಕ್ಕರು. 

‘ನಾಗಮಂಡಲದ’ ಲ್ಲಿ ಅವರು ತೋರಬಯಸುವುದು ರಾಣಿಯ ಬಯಕೆ, ಮುಗ್ಧತೆ, ಸಂವೇದನೆಗಳು. ಇದರಲ್ಲಿ ಬರುವ ಹಲವು ಸನ್ನಿವೇಶಗಳು, ಬದುಕಿನ ವಿಪರ್ಯಾಸಗಳಿಗೆ ರೂಪಕಗಳು. ನಾಗಪ್ಪ – ಅಣ್ಣಪ್ಪ ಎರಡು ಪಾತ್ರಗಳಲ್ಲ. ಒಬ್ಬನೇ ವ್ಯಕ್ತಿಯ ಎರಡು ಮನಸ್ಥಿತಿಗಳ ಸಂಕೇತ, ಅವುಗಳ ನಡುವಿನ ಸಂಘರ್ಷ. ಕೊನೆಯಲ್ಲಿ ಕಂಡುಬರುವುದು ರಾಣಿಯ ಪ್ರೀತಿಯ ಗೆಲುವು. ಕಾರ್ನಾಡರ ಪ್ರಸಿದ್ಧ ನಾಟಕವನ್ನಾಧರಿಸಿದ ನಾಗಮಂಡಲವನ್ನು ನೋಡಿ ಮೆಚ್ಚಿದ ಕಾರ್ನಾಡರು ನೀಡಿದ ಪ್ರತಿಕ್ರಿಯೆಯೇ ನಾಗಾಭರಣರಿಗೆ ಚಿತ್ರಕ್ಕೆ ಸಿಕ್ಕ ಇತರ ಪ್ರಶಸ್ತಿಗಳಿಗಿಂತ ಅತ್ಯಮೂಲ್ಯವಾಗಿದ್ದರಲ್ಲಿ ಸಂದೇಹವೇ ಇಲ್ಲ. ‘ಸಿಂಗಾರೆವ್ವ’ ದಲ್ಲಿ ನಾಗಾಭರಣರು ಕಾಣುವುದು ವರ್ಗ ಸಂಘರ್ಷ, ಇರುವವರ-ಇಲ್ಲದವರ ನಡುವಿನ ಸಂಘರ್ಷ, ಹೆಣ್ಣು-ಗಂಡಿನ ನಡುವಿನ ಸಂಘರ್ಷ. ಇಲ್ಲಿ ಸಿಂಗಾರೆವ್ವ ಪ್ರಕೃತಿಯ ಸಂಕೇತ. ಪ್ರಕೃತಿ ನಾಶವಾದಂತೆ ಹೇಗೆ ಪುರುಷ ನಾಶವಾಗುತ್ತಾನೆ ಎಂಬುದನ್ನು ಅವರು ಈ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ‘ಅಲ್ಲಮ’ ದಲ್ಲಿ ಆತನ ಚಿಂತನೆಗಳನ್ನು ಪ್ರಸ್ತುತಕ್ಕೆ ಹೊಂದಿಸುವ ಪ್ರಯತ್ನ ಮಾಡಿದ್ದಾರೆ. ಅವಧೂತನಾದ ಅಲ್ಲಮನ ವಚನಗಳನ್ನೇ ಸಂಭಾಷಣೆಯನ್ನಾಗಿ ಉಪಯೋಗಿಸಿದ್ದಾರೆ. ಅವನ ವಚನಗಳನ್ನು ದೃಶ್ಯ ರೂಪದಲ್ಲಿ ನೋಡುಗರ ಕಣ್ಮುಂದೆ ತಂದಿದ್ದಾರೆ. ಈ ಪ್ರಯೋಗವು ಅವರಿಗೆ ಹೊಸ ಸವಾಲನ್ನೆಸೆದಿತ್ತು. ಅದನ್ನು ಯಶಸ್ವಿಯಾಗಿ ನಿಭಾಯಿಸಿದ ತೃಪ್ತಿ ಅವರಿಗಿದೆ. 

ಸುದೀರ್ಘವಾಗಿ, ನಗೆ ಚಾಟಿಕೆಗಳ ನಡುವೆ ತಮ್ಮ ಸಿನಿಮಾ ಪಯಣವನ್ನು ಹಂಚಿಕೊಂಡ ನಾಗಾಭರಣರು, ತಮ್ಮ ಪ್ರತಿಭೆ, ಸರಳತೆ, ಯೋಚನಾ ಲಹರಿಯ ಹರಿವು – ದಿಕ್ಕುಗಳನ್ನು ಪರಿಚಯಿಸಿದರು. ಬಂದ ಪ್ರೇಕ್ಷಕರೆಲ್ಲ ಸಂವಾದವನ್ನು ತುಂಬು ಹೃದಯದಿಂದ ಅನುಭವಿಸಿದರು. ಅವರಿಗೂ ಸಂವಾದಿಸುವ ಅವಕಾಶ ಸಮಯಾಭಾವದಿಂದ ಸಿಗದೇ ನಿರಾಶರಾಗಿದ್ದು ಪ್ರಯೋಜಕರಿಗೆ ವೇದ್ಯವಾಗಿತ್ತು. 

-ರಾಂ