ಲಂಡನ್ನಿನಲ್ಲಿ ಕನ್ನಡ ಡಿಂಡಿಮ – ಕನ್ನಡ ಬಳಗ ಯು ಕೆ-40 ರ ಸಂಭ್ರಮದ ಝಲಕ್ ಗಳು!

ಮಹಾರಾಜರು ತಮ್ಮ ಸಂದೇಶದಲ್ಲಿ ೧೯೩೯ರಲ್ಲಿ ಅಂದಿನ ಯುವರಾಜರು ಲಂಡನ್ನಿನಲ್ಲಿ ದಸರಾ ಹಬ್ಬವನ್ನು ಆಚರಿಸಿ ಕನ್ನಡದಲ್ಲಿ ಮಾಡಿದ ಭಾಷಣವನ್ನು ನೆನೆದರು. ಕರ್ನಾಟಕದ ವೈಭವ, ಶ್ರೀಮಂತ ಸಂಸ್ಕೃತಿ, ಲೋಕಕ್ಕೆ ಎಂದೆಂದಿಗೂ ಮಾದರಿಯಾದ ಬಸವ ತತ್ವ, ಸೈದ್ಧಾಂತಿಕ, ವೇದಾಂತಿಕ, ವೈಜ್ಞಾನಿಕ ಹಾಗೂ ಶೈಕ್ಷಣಿಕ ಕೊಡುಗೆಗಳನ್ನು ಸ್ಮರಿಸಿದರು. ಕನ್ನಡಿಗರು ಈ ಕೊಡುಗೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು, ಇವುಗಳಿಂದ ಪ್ರೇರೇಪಿತರಾಗಿ ಬಾಳಿನ ಎಲ್ಲ ದಿಶೆಗಳಲ್ಲಿ ಹೆಚ್ಚಿನ ಯಶಸ್ವಿಯನ್ನು ಪಡೆದು ಪ್ರಭಾವಶಾಲಿಗಳಾಗಬೇಕೆಂದು ಕರೆ ಕೊಟ್ಟರು. ತದನಂತರ ನಾಡಿನ ಪ್ರಮುಖ ಸಾಹಿತಿಗಳು, ಯು.ಕೆ. ಕನ್ನಡಿಗರು ಬರೆದ ಲೇಖನ, ಕವನಗಳ ಸ್ಮರಣ ಸಂಚಿಕೆ “ಸಂಭ್ರಮ”ವನ್ನು ಬಿಡುಗಡೆ ಮಾಡಿದರು.

ಸಂಭ್ರಮ: ಕನ್ನಡ ಬಳಗ (ಯು.ಕೆ) ಗೆ  ಮಾಣಿಕ್ಯ ಹುಟ್ಟಿದ ಹಬ್ಬ  
ಲೇಖಕರು: ರಾಮಶರಣ ಲಕ್ಷ್ಮೀನಾರಾಯಣ 

ಯುನೈಟೆಡ್ ಕಿಂಗ್ಡಮ್ ನ ಮೊದಲ ಕನ್ನಡ ಸಂಘ ಕನ್ನಡ ಬಳಗ (ಯು.ಕೆ). ೪೦ ವರ್ಷಗಳ ಹಿಂದೆ ಐವರು ದಂಪತಿಗಳು ದೀಪಾವಳಿಯ ಶುಭದಿನದಂದು ಕನ್ನಡ ಸಂಘವೊಂದರ ದೀಪ ಬೆಳೆಗಿದರು. ಅದು ಇಂದಿಗೂ ಯು.ಕೆಯಲ್ಲಿ ನೆಲೆಸಿರುವ ಕನ್ನಡಿಗರ ಮನೆ-ಮನಗಳಲ್ಲಿ ಬೆಳಗುತ್ತಿದೆ. ಈ ವಾರಾಂತ್ಯ (ಸಪ್ಟೆಂಬರ್ ೩೦, ಅಕ್ಟೋಬರ್ ೧) ಕನ್ನಡ ಬಳಗ ತನ್ನ ಹುಟ್ಟುಹಬ್ಬ “ಸಂಭ್ರಮ”ವನ್ನು ವಿಜೃಂಭಣೆಯಿಂದ ಲಂಡನ್ ನಗರದಲ್ಲಿ ಸಂಸ್ಥಾಪಕ ಹಿರಿ ಜೀವಿಗಳೊಂದಿಗೆ, ನಾಡಿನ ಹಲವು ಮೂಲೆಗಳಿಂದ ಬಂದ ಎಲ್ಲ ವಯಸ್ಸಿನ ಕನ್ನಡಿಗರೊಂದಿಗೆ ಆಚರಿಸಿದ್ದು  ತನ್ನ ‘ಹಳೆ ಬೇರು, ಹೊಸ ಚಿಗುರು’ ಧ್ಯೇಯ ವಾಕ್ಯಕ್ಕೆ ತಕ್ಕುದಾಗಿತ್ತು. ಈ ಕಾರ್ಯಕ್ರಮವನ್ನು ಯಶಸ್ಸಿಗೆ ಕಾರಣೀಕರ್ತರು, ಕನ್ನಡ ಬಳಗದ ಅಧ್ಯಕ್ಷೆ ಸುಮನಾ ಗಿರೀಶ್, ಉಪಾಧ್ಯಕ್ಷೆ ಸ್ನೇಹಾ ಕುಲಕರ್ಣಿ, ಕಾರ್ಯದರ್ಶಿ ಮಧುಸೂಧನ್, ಖಜಾಂಚಿ ರಶ್ಮಿ ಮಂಜುನಾಥ್, ಸಾಂಸ್ಕೃತಿಕ ಕಾರ್ಯದರ್ಶಿ ವ್ರತ ಚಿಗಟೇರಿ, ಯುವ ಕಾರ್ಯದರ್ಶಿ ವಿದ್ಯಾರಾಣಿ, ಕಾರ್ಯನಿರ್ವಾಹಕ ಸಮಿತಿಯ ಸದಸ್ಯರಾದ ಚಂದ್ರಪ್ಪ, ಆಶೀರ್ವಾದ ಮರ್ವೇ, ರಾಜೀವ ಮೇತ್ರಿ ಹಾಗೂ ಪ್ರವೀಣ್ ತ್ಯಾರಪ್ಪ. ಅಧ್ಯಕ್ಷೆ ಸುಮನಾ ಗಿರೀಶ್, ಗಣ್ಯ ಅತಿಥಿಗಳಾದ ಮೈಸೂರಿನ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಪ್ರೊಫೆಸರ್ ಗುರುರಾಜ ಕರ್ಜಗಿ, ಪತ್ರಕರ್ತರಾದ ಶ್ರೀಯುತ ವಿಶ್ವೇಶ್ವರ ಭಟ್, ರವಿ ಹೆಗಡೆ ಹಾಗೂ ಸ್ವಾಮಿ ಜಪಾನಂದಜಿ ಹಾಗೂ ನೆರೆದ 1500 (ಎರಡು ದಿನಗಳಲ್ಲಿ ಸೇರಿ) ಕನ್ನಡಿಗರನ್ನು ಹಾರ್ದಿಕವಾಗಿ ಸ್ವಾಗತಿಸಿದರು.  ಮಹಾರಾಜರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಮ್ಮ ಅಮೃತ ಹಸ್ತದಿಂದ “ಸಂಭ್ರಮ” ಕಾರ್ಯಕ್ರಮವನ್ನು ಬೈರನ್ ಸಭಾಂಗಣದಲ್ಲಿ ಪ್ರಾರಂಭ ಮಾಡಿದರು. 

ಸಾಂಪ್ರದಾಯಿಕ ಭರತನಾಟ್ಯ, ಕೂಚಿಪುಡಿ ನೃತ್ಯಗಳಿಂದ ಯು.ಕೆ ಕನ್ನಡಿಗರ ಕಲಾಪ್ರದರ್ಶನ ಪ್ರಾರಂಭವಾಯಿತು. ‘ಬಾರಿಸು ಕನ್ನಡ ಡಿಂಡಿಮವ’ ಎಂಬ ವಿಶಿಷ್ಟ ನೃತ್ಯ ರೂಪಕ, ದರ್ಶಕರಿಗೆ ಶತಮಾನಗಳ ಕರ್ನಾಟಕದ ಇತಿಹಾಸ, ಕಲೆ, ಸಂಸ್ಕೃತಿಗಳನ್ನು ಮನಮೋಹಕವಾಗಿ ಬಣ್ಣಿಸಿತು. ಕನ್ನಡ ಬಳಗ ಚಿಣ್ಣರಲ್ಲಿ ಕನ್ನಡವನ್ನು ಕಲಿಸಿ, ಬೆಳೆಸುವ ಶ್ಲಾಘನೀಯ ಕೆಲಸವನ್ನು ‘ಕನ್ನಡ ಕಲಿ’ ಕಾರ್ಯಕ್ರಮದ ಮೂಲಕ ಮಾಡುತ್ತಲೇ ಬಂದಿದೆ. ಈ ಮಕ್ಕಳು ಕಿರು ನಾಟಕ, ಹಾಡುಗಳ ಮೂಲಕ ತಮ್ಮ ಪ್ರತಿಭೆಯ ಪ್ರದರ್ಶನ ಮಾಡಿದರು. ಪ್ರೊಫೆಸರ್ ಗುರುರಾಜ ಕರ್ಜಗಿಯವರು ಮಾನವನಿಗೆ ನಂಬಿಕೆ ಎಷ್ಟು ಮುಖ್ಯ, ಏಕೆ ಬೇಕು ಎಂಬ ಮನಮುಟ್ಟುವ ವಿವರಣೆಯಿಂದ , ಸಭಿಕರನ್ನು ಮಂತ್ರ ಮುಗ್ಧರನ್ನಾಗಿಸಿದರು. ಈ ವಿದ್ವತ್ಪೂರ್ಣ ಭಾಷಣದ ನಂತರ ಖ್ಯಾತ ಗಾಯಕ ಶ್ರೀ ರಾಜೇಶ್ ಕೃಷ್ಣನ್ ತಮ್ಮ ಸುಮಧುರ ಗಾಯನದಿಂದ ನೆರೆದವರ ಮನತಣಿಸಿ, ಸಭಿಕರೊಡನೆ ಹೆಜ್ಜೆ ಹಾಕಿ ಕುಣಿಸಿದರು.(ಇದರ ಬಗ್ಗೆ ರಮ್ಯ ಭಾದ್ರಿ ಬರೆದ ವಿಸ್ತೃತ ಲೇಖನ ಕೆಳಗೆ ಕೊಟ್ಟಿದೆ.)

ಎರಡನೇ ದಿನದ ಮನರಂಜನಾ ಕಾರ್ಯಕ್ರಮದಲ್ಲಿ ಯಾರ್ಕ್ ಶೈರ್ ಕನ್ನಡ ಬಳಗದ ಗಾಯಕ ವೃಂದ ಪ್ರಸ್ತುತ ಪಡಿಸಿದ ಚಿರನೂತನ ‘ನಿತ್ಯೋತ್ಸವ’, ನಾಡ ಭಕ್ತಿ ಉಕ್ಕಿಸುವ ‘ಅಪಾರ ಕೀರ್ತಿ’ ಚಿತ್ರಗೀತೆಗಳು ಸಭಿಕರನ್ನು ಕನ್ನಡತೆಯ ಭಾವನೆಯಲ್ಲಿ ತೇಲಿಸಿದವು. ಗುರುಪ್ರಸಾದ್ ಪಟ್ವಾಲ್ ಇಲ್ಲಿಯೇ ತರಬೇತಿ ಕೊಟ್ಟು ಬೆಳೆಸಿದ ತಂಡ ಪ್ರದರ್ಶಿಸಿದ ‘ಪಂಚವಟಿ’ ಯಕ್ಷಗಾನ ಕಿರು ಪ್ರಸಂಗ ಕನ್ನಡದ ಜಾನಪದ ಕಲೆಯ ವೈವಿಧ್ಯತೆಯ ಪ್ರದರ್ಶನದೊಂದಿಗೆ, ಯು.ಕೆ ಯಲ್ಲಿ ಈ ಪ್ರಕಾರವನ್ನು ಬೆಳೆಸಿ, ಪ್ರಚಲಿತಗೊಳಿಸುವ ಸಾಹಸದ ದ್ಯೋತಕವಾಗಿತ್ತು. ಕನ್ನಡ ಪ್ರಭದ ಪ್ರಧಾನ ಸಂಪಾದಕರಾದ ಶ್ರೀ ರವಿ ಹೆಗಡೆಯವರು, ಕನ್ನಡ ಬಳಗದ ಕಾರ್ಯವನ್ನು ಶ್ಲಾಘಿಸುತ್ತ, ಬಳಗ ನೂರ್ಕಾಲ ಬಾಳಲಿ, ಕನ್ನಡದ ಬಾವುಟವನ್ನು ವಿದೇಶಿ ನೆಲದಲ್ಲಿ ಹಾರಿಸಲಿ, ಸಾಂಕೇತಿಕವಾಗಿ ಕನ್ನಡದ ಸೀಮೆಯನ್ನು ಕರ್ನಾಟಕದಿಂದಾಚೆ ವಿಸ್ತರಿಸುತ್ತಿರಲಿ ಎಂದು ಆಶಿಸಿದರು. ವಿಶ್ವವಾಣಿಯ ಪ್ರವರ್ತಕರೂ, ಪ್ರಧಾನ ಸಂಪಾದಕರೂ ಆದ ಶ್ರೀ ವಿಶೇಶ್ವರ ಭಟ್ಟರು, ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಅನಿವಾಸಿ ಕನ್ನಡಿಗ ಸಂಘಗಳ ಮಹತ್ವ, ಇತರ ಭಾಷಿಕರಿಂದ ನಾವು ಮಾತೃ ಭಾಷೆಯ ಉಳಿವಿಗೆ, ಪ್ರಸಾರಕ್ಕೆ ಕಲಿಯಬೇಕಾದ ವಿಷಯಗಳನ್ನು ಸುಂದರವಾಗಿ ವಿವರಿಸಿದರು. ಅನ್ಯ ದೇಶಗಳಲ್ಲಿರುವ ಕನ್ನಡ ಸಂಘಗಳ ಅನುಭವಗಳನ್ನು ಹೀರಿ ಕನ್ನಡ ಬಳಗ ಹೇಗೆ ಅಭಿವೃದ್ಧಿಯಾಗಬಹುದು ಎಂದು ವಿಸ್ತರಿಸಿದರು. ಸ್ವಾಮಿ ಜಪಾನಂದಜಿಯವರು ಕನ್ನಡ ಭಾಷೆ ನಶಿಸಬಾರದು, ಬಳಗ ಮಾಡುತ್ತಿರುವ ಕಾರ್ಯ ಈ ದಿಶೆಯಲ್ಲಿ ಮಹತ್ತರವಾಗಿದೆ; ಈ ಕಾರ್ಯಕ್ಕೆ ಕನ್ನಡಿಗರೆಲ್ಲರೂ ನೂರಾನೆಯ ಬಲ ಸೇರಿಸಿ ಎಂದು ನೆರೆದವರಲ್ಲಿ ಉತ್ಸಾಹ ತುಂಬಿದರು.(ಕೆಳಗೆ ಕೊಟ್ಟ ಶ್ರೀಮತಿ ಶ್ರೀರಂಜಿನಿ ಸಿಂಹ ಅವರ ಲೇಖನದಲ್ಲಿ ಇನ್ನಷ್ಟು ವಿವರಗಳಿವೆ.)  

ಕನ್ನಡ ಬಳಗ ವಿಶೇಷವಾಗಿ ಕನ್ನಡ ಸಾಹಿತ್ಯವನ್ನು ಬೆಂಬಲಿಸುತ್ತ ಬಂದಿದೆ. ಕನ್ನಡ ಬಳಗದ ಸಾಹಿತ್ಯಾಸಕ್ತ ಸದಸ್ಯರು ಹುಟ್ಟುಹಾಕಿದ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಿಚಾರ ವೇದಿಕೆ ತನ್ನ ಅನಿವಾಸಿ (anivaasi.com) ಜಾಲತಾಣದಲ್ಲಿ ವಾರಕ್ಕೊಮ್ಮೆ ಲೇಖನ, ಕಥೆ, ಕವನ, ಪ್ರಬಂಧಗಳನ್ನು ಪ್ರಕಟಿಸುತ್ತಿದೆ. ಹಾಗೆಯೇ, ಕನ್ನಡ ಬಳಗದ ಕಾರ್ಯಕ್ರಮಗಳಿಗೆ ಬರುವ ಸಾಹಿತ್ಯಾಸಕ್ತರನ್ನು ಒತ್ತಟ್ಟಿಗೆ ತಂದು ಸಮಾನಾಂತರ ಸಭೆಗಳನ್ನು ಕಳೆದ ಒಂದು ದಶಕದಿಂದ ನಡೆಸುತ್ತಿದೆ. ಈ ಬಾರಿ ಕನ್ನಡದ ಮೂರು ಪ್ರಮುಖ ಆಹ್ವಾನಿತರು ಅನಿವಾಸಿ ಸಭೆಯಲ್ಲಿ ಸಕ್ರಿಯವಾಗಿ ಪಾಲುಗೊಂಡರು. ಶಿಕ್ಷಣ ನೀತಿ, ಮಾಧ್ಯಮಗಳ ಪ್ರಬಲತೆ-ಪ್ರಭಾವ ಎಂಬ ಎರಡು ವಿಷಯಗಳು ಅತಿಥಿಗಳಾದ ಪ್ರೊಫೆಸರ್ ಕರ್ಜಗಿ, ಶ್ರೀಯುತ ರವಿ ಹೆಗಡೆ ಹಾಗೂ ವಿಶ್ವೇಶ್ವರ ಭಟ್ಟರ ಸಮ್ಮುಖದಲ್ಲಿ ಚರ್ಚಿಸಲ್ಪಟ್ಟವು. ಸದಸ್ಯರ ಚರ್ಚೆಯ ನಂತರ ಅತಿಥಿಗಳು ತಮ್ಮ ಅಭಿಪ್ರಾಯಗಳನ್ನು ಸಭಿಕರಿಗೆ ಸುದೀರ್ಘವಾಗಿ ತಿಳಿಸಿದ್ದಲ್ಲದೆ, ಆಧುನಿಕ ತಂತ್ರಜ್ಞಾನ ಕಲಿಕೆ, ಮಾಧ್ಯಮ ಹಾಗು ಭಾಷೆಯ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂದು ವಿಶ್ಲೇಷಿಸಿದರು. ಸಭಿಕರೊಡನೆ ನಡೆದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳ ಮೇಲಿನ ಪ್ರಶ್ಳಿಗಳಿಗೆ ಪಾಂಡಿತ್ಯಪೂರ್ಣ ಉತ್ತರಗಳನ್ನು ನೀಡಿ, ಸಭಿಕರೊಡನೆ ಬೆರೆತು ಸಂಭಾಷಿಸಿದರು. (ಇದರ ಪ್ರತ್ಯೇಕ ವರದಿಯನ್ನು ಕಳೆದ ವಾರದ ’ಅನಿವಾಸಿ’ ಸಂಚಿಕೆಯಲ್ಲಿ ನೋಡಿರಿ)  https://anivaasi.com/2023/10/06/%e0%b2%85%e0%b2%a8%e0%b2%bf%e0%b2%b5%e0%b2%be%e0%b2%b8%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%95%e0%b2%b9%e0%b2%b3/

ಕನ್ನಡ ಬಳಗ ದತ್ತಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಯು.ಕೆ ಹಾಗೂ ಕರ್ನಾಟಕದಲ್ಲಿ ಹಲವಾರು ಸಂಘ-ಸಂಸ್ಥೆಗಳೊಡನೆ ಜೊತೆಯಾಗಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಲೇ ಬಂದಿದೆ. ಈ ಉದಾತ್ತ ಕಾರ್ಯ,  ಕಾರ್ಯಕ್ರಮದುದ್ದಕ್ಕೂ ಹಲವು ಮಾಧ್ಯಮಗಳಲ್ಲಿ ಬಿತ್ತರವಾಯಿತು. ಎರಡು ದಿನಗಳ ರಂಜಿತ ಕಾರ್ಯಕ್ರಮ ಎಲ್ಲ ವಯೋಧರ್ಮಗಳಿಗೆ ಪೂರಕವಾಗಿದ್ದಲ್ಲದೆ, ಕಲೆತ ಕನ್ನಡಿಗರಲ್ಲಿ ಹೊಸ ಹುಮ್ಮಸ್ಸನ್ನು ತುಂಬಿದ್ದಲ್ಲಿ ಸಂದೇಹವಿಲ್ಲ.  
ಮಹಾರಾಜರಿಗೆ ಸನ್ಮಾನ
ಬಾರಿಸು ಕನ್ನಡ ದಿಂಡಿಮವ’ ನೃತ್ಯ ನಾಟಕದ ಒಂದು ದೃಶ್ಯ

1. 2.ಸುಮಧುರ ಸಂಜೆ ರಾಜೇಶ್ ಕೃಷ್ಣನ್ ನೊಂದಿಗೆ …

ಮಾಣಿಕ್ಯ ಸಂಭ್ರಮ ಗೀತೆ (RTP) 
– ಯೂ ಟ್ಯೂಬ್ ರೆಕಾರ್ಡಿಂಗ್ ಕೃಪೆ: ಆಂಚಲ್ ಅರುಣ್
Photoes: Kannada Balaga UK (except where credited)

ಅನಿವಾಸಿಯಲ್ಲಿ  ಕನ್ನಡ ಕಹಳೆ

ನಮಸ್ಕಾರ. ಕನ್ನಡ ಬಳಗದ ನಲ್ವತ್ತರ ‘ಸಂಭ್ರಮ’ ನಮ್ಮ ಮಹಾರಾಜರ ಹಾಗೂ ಅನೇಕ ಹೆಸರಾಂತ  ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಯಶಸ್ವಿಯಾಗಿ ಹಾಗೂ ಅದ್ಧೂರಿಯಾಗಿ ಜರುಗಿತು.  ಜೊತೆಗೇ KSSVV, ಅನಿವಾಸಿ ಸಮಾನಾಂತರ ಸಭೆಗಳೂ ಕೂಡ ಅಷ್ಟೇ ಯಶಸ್ವಿಯಾಗಿ ಜರುಗಿದ್ದು, ಅತಿಥಿಗಳೆಲ್ಲರ ಪ್ರಶಂಸೆಗೆ ಪಾತ್ರವಾಗಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಎರಡೂ ದಿನದ ಸಭೆಯ ವಿವರವಾದ ‘ವೀಕ್ಷಕ ವಿವರಣೆ’ಯನ್ನು ತಮ್ಮೆದಿರು ಪ್ರಸ್ತುತಪಡಿಸಲಿದ್ದಾರೆ  ಶ್ರೀ ರಾಮಶರಣ ಹಾಗೂ ಶ್ರೀ ಕೇಶವ್ ಅವರು. ಅನಿವಾಸಿಯ ಸಾಧನೆಗಳು ಮುಂಬರುವ ದಿನಗಳಲ್ಲಿ ಇನ್ನೂ ಕಳೆಗಟ್ಟಲಿ ಎಂಬ ಸದಾಶಯಗಳೊಂದಿಗೆ 

–  ಸಂಪಾದಕಿ.
ಕನ್ನಡ ಬಳಗದ ಮಾಣಿಕ್ಯೋತ್ಸವಕ್ಕೆ ಕರ್ನಾಟಕದ ಮೂವರು ಅತಿಥಿಗಳು ಅನಿವಾಸಿ ಸಭೆಗೆ ಬರುವರೆಂದು ನಿಗದಿಯಾಗಿತ್ತು. ಪ್ರೊ. ಗುರುರಾಜ ಕರ್ಜಗಿಯವರು ಹೆಸರಾಂತ ಶಿಕ್ಷಣ ತಜ್ಞರು, ಉತ್ತಮ ವಾಗ್ಮಿ. ಅಧ್ಯಯನ ಮಾಡಿ, ಜಗತ್ತಿನ ಹಲವಾರು ದೇಶಗಳನ್ನು ತಜ್ಞನಾಗಿ ಸಂದರ್ಶಿಸಿದ ಅನುಭವಿ. ಶ್ರೀ. ವಿಶ್ವೇಶ್ವರ ಭಟ್ಟರು ಪ್ರಸಿದ್ಧ ಪತ್ರಕರ್ತ (ವಿಶ್ವ ವಾಣಿ ಪತ್ರಿಕೆಯ ಮಾಲಕ ಹಾಗೂ  ಪ್ರಧಾನ ಸಂಪಾದಕ) ಹಾಗೂ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದ ಬರಹಗಾರ. ಶ್ರೀ. ರವಿ ಹೆಗಡೆ ಕನ್ನಡ ಪ್ರಭಾ ದಿನ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಹಾಗೂ ಸುವರ್ಣ ಸುದ್ದಿವಾಹಿನಿಯ ಮುಖ್ಯ ಸಂಪಾದಕ. ಅತಿಥಿಗಳ ವಿಶೇಷತೆಗನುಗುಣವಾಗಿ ಅನಿವಾಸಿ ಸಭೆಗೆ ಸ್ವರೂಪ ಕೊಡುವುದೊಂದು ವಾಡಿಕೆ. ಈ ಬಾರಿ ಎರಡು ಬಗೆಯ ವಿಶೇಷತೆಗಳನ್ನು ಹೊಂದಿಸಿ ನಡೆಸುವ ಕಾರ್ಯಕ್ರಮದ ಬಗ್ಗೆ ಚರ್ಚಿಸಿ, ಎರಡು ವಿಷಯಗಳ ಮೇಲೆ ಅನಿವಾಸಿ ಸದಸ್ಯರು ವೇದಿಕೆಯ ಮೇಲೆ ಚರ್ಚಿಸುವುದೆಂದು ನಿರ್ಧರಿಸಲಾಯಿತು. ಅತಿಥಿಗಳ ವಿಶೇಷತೆಗನುಗುಣವಾಗಿ ಸದಸ್ಯರು ಎರಡು ವಿಷಯಗಳನ್ನು ಆರಿಸಿದರು: ಶಿಕ್ಷಣ ನೀತಿ ಸಮಾಜಕ್ಕೆ ಅನುಗುಣವಿರಬೇಕು; ಮಾಧ್ಯಮಗಳು ಪ್ರಬಲವಾಗುತ್ತಿವೆ. ಮೊದಲನೆಯ ವಿಷಯಕ್ಕೆ ಪರವಾಗಿ ಲೇಖಕ, ಡಾ.ಶಿವಪ್ರಸಾದ್, ಡಾ.ವತ್ಸಲಾ ರಾಮಮೂರ್ತಿ, ವಿರೋಧವಾಗಿ ಡಾ. ಕೇಶವ ಕುಲಕರ್ಣಿಯವರು; ಎರಡನೇ ವಿಷಯದ ಪರವಾಗಿ ಡಾ.ಶಿವಪ್ರಸಾದ್,  ಡಾ. ಕೇಶವ ಕುಲಕರ್ಣಿ ಹಾಗೂ  ವಿರೋಧವಾಗಿ ಲೇಖಕ ವಾದಿಸುವ ಆಯ್ಕೆ ಮಾಡಿಕೊಂಡರು.  

ಮೊದಲ ದಿನದ ಸಭೆಯ ಅಧ್ಯಕ್ಷತೆ ಹಾಗೂ ನಿರ್ವಹಣೆಯನ್ನು ಡಾ. ಪ್ರೇಮಲತಾ ವಹಿಸಿದರು. ಕಾರ್ಯಕ್ರಮ ಕು. ಅನನ್ಯ ಕದಡಿಯ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಅಧ್ಯಕ್ಷರು ಎಲ್ಲರನ್ನು ಸ್ವಾಗತಿಸಿ, ಅತಿಥಿಗಳ ಪರಿಚಯ ಮಾಡಿಕೊಟ್ಟಿದ್ದಲ್ಲದೆ, ಕಾರ್ಯಕ್ರಮದ ಸ್ವರೂಪವನ್ನು ನಿವೇದಿಸಿದರು. ಮೊದಲ ವಿಷಯದ ಪರವಾಗಿ ಮಂಡಿಸಿದ ಸದಸ್ಯರು ಸಮಾಜ ಹಾಗು ಶಿಕ್ಷಣದ ಬೆಳವಣಿಗೆಯನ್ನು ಅವಲೋಕಿಸಿದರು. ಶಿಕ್ಕ್ಷಣ ಸಮಾಜ ಮುಖಿಯಾಗಿರಬೇಕು, ಮೌಲಿಕವೂ ನೈತಿಕವಾಗಿಯೂ ಇರಬೇಕು. ಸಮಾಜದಲ್ಲಿರುವ ಸಂಬಂಧಗಳನ್ನು ಗೌರವಿಸುವಂತಿರಬೇಕು. ಶಿಕ್ಷಣ ಸಮಾಜಕ್ಕೆ ವಿಮುಖವಾಗಿದ್ದರೆ ಉತ್ತಮ ನಾಗರೀಕರನ್ನು ಬೆಳೆಸಲಾರದೆಂದು ಅಭಿಪ್ರಾಯಪಟ್ಟರು. ಶಿಕ್ಷಣದಲ್ಲಿ ರಾಜಕೀಯ ಹಾಗೂ ಧಾರ್ಮಿಕ ಹಸ್ತಕ್ಷೇಪಗಳಿಲ್ಲದೆ ಸ್ವತಂತ್ರವಾಗಿ ಬೆಳೆಯಬೇಕು ಎಂದು ಪ್ರತಿಪಾಸಿದರು. ವಿರುದ್ಧವಾಗಿ ವಾದಿಸಿದ ಕೇಶವ್ ಶಿಕ್ಷಣ ಎಂದಿಗೂ ಸಮಾಜದ ವಿರುದ್ಧವಾಗಿಯೇ ಕಾರ್ಯವಹಿಸಿದೆ ಎಂದರು. ಈ ವಿರೋಧಿ ನಿಲುವಿನಿಂದ ಶಿಕ್ಷಣ ಸಮಾಜದ ಹಲವು ಡೊಂಕುಗಳನ್ನು ತಿದ್ದುವಲ್ಲಿ ಸಫಲವಾಗಿದೆ. ಎಂದು ಶಿಕ್ಷಣ ನೀತಿ ಹಾಗೂ ಸಮಾಜದ ರೀತಿ ಅನುಸರಿಸಲು ತೊಡಗುವವೋ, ಅಂದಿನಿಂದ ಸಮಾಜ ನಿಂತ ನೀರಾಗಿ ಕೊಳೆಯುವುದೆಂದು ಅಭಿಪ್ರಾಯ ಪಟ್ಟರು. ಪ್ರೊ. ಕರ್ಜಗಿ ಎಲ್ಲರ ವಾದಸರಣಿಗಳನ್ನು ವಿಶ್ಲೇಷಿಸುತ್ತ, ತಮ್ಮ ನಿಲುವು ವಿಷಯದ ಪರ ಎಂದು ಉದಾಹರಣೆಗಳೊಂದಿಗೆ ವಿವರಿಸಿದರು. ಪರ ವಾದಿಗಳನ್ನ ಅಂಗೀಕರಿಸಿ, ಸಮಾಜ ಸದಾ ಬದಲಾಗುವ ವ್ಯವಸ್ಥೆ, ಅದಕ್ಕನುಗುಣವಾಗಿ ಶಿಕ್ಷಣ ವ್ಯವಸ್ಥೆ ಬದಲಾಗುವುದು ಅವಶ್ಯ, ಈ ವ್ಯವಸ್ಥೆ ರಾಜಕೀಯ ಯಾ ಧಾರ್ಮಿಕ ಹಸ್ತಕ್ಷೇಪದಿಂದ ಸ್ವತಂತ್ರವಾಗಿರಬೇಕೆಂಬುದನ್ನು ಅನುಮೋದಿಸಿದರು. ಶಿಕ್ಷಣ ನೀತಿ ಸಮಾಜದ ರೀತಿಗೆ ವಿರೋಧವಾಗಿದ್ದರೆ ಸಮಾಜದ ಮೂಲಭೂತ ತತ್ವಕ್ಕೆ ಧಕ್ಕೆ ತರುವ ಸಾಧ್ಯತೆಗಳಿವೆ, ಶಿಕ್ಷಣ ಸಮಾಜ ಡೊಂಕನ್ನು ತಿದ್ದುತ್ತಿರುವುದು ಅದರೊಡನೆ ಸಹಭಾಗಿಯಾಗಿರುವುದರಿಂದಲೇ ಹೊರತು ವಿರೋಧವಾಗಿರುವುದರಿಂದಲ್ಲವೆಂದು ಅಭಿಪ್ರಾಯಪಟ್ಟರು. ಶಿಕ್ಷಣ ಮಕ್ಕಳನ್ನು ಬದುಕನ್ನೆದುರಿಸಲು ತಯಾರು ಮಾಡಬೇಕು, ಸ್ವತಂತ್ರ ಮನೋಭಾವವನ್ನು ಬೆಳೆಸಬೇಕು, ಅಸಮಾನತೆಯನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ನೀಡಬೇಕೆಂದರು. ಶಿಕ್ಷಣ ಮಕ್ಕಳನ್ನು ಸುಸಂಸ್ಕೃತರನ್ನಾಗಿಸಬೇಕು, ಇಲ್ಲದಿದ್ದರೆ ಅದು ಸಮಾಜದ ಅವನತಿಗೆ ಹಾದಿಯಾದೀತೆಂದು ಎಚ್ಚರಿಸಿದರು. ಉತ್ತಮ ಶಿಕ್ಷಣದ ಬೆಳವಣಿಗೆಗೆ ಸೂಕ್ತ ಶಿಕ್ಷರನ್ನು ಬೆಳೆಸಬೇಕು; ಶಿಕ್ಷಣ ಕೇವಲ ಪರೀಕ್ಷೆಯವರೆಗೆ ಮಿತಿಯಾಗದೇ ಬಾಳಿನುದ್ದಕ್ಕೂ ಅನುಭವಗಳನ್ನು ಹೀರಿ ವ್ಯಕ್ತಿತ್ವ ಬೆಳೆಸುವ ಸಲಕರಣೆಯಾಗಿರಲಿ ಎಂದು ಆಶಿಸಿದರು.   

ಎರಡನೇ ವಿಷಯದ ಪರವಾಗಿ ವಾದ ಮಂಡಿಸಿದ ಸದಸ್ಯರು ಪ್ರಮುಖವಾಗಿ ಸಾಮಾಜಿಕ ಹಾಗೂ ದೃಶ್ಯ ಮಾಧ್ಯಮಗಳ ಹಾವಳಿ ಹಾಗೂ ಪ್ರಭಾವಗಳ ಮೇಲೆ ಹೆಚ್ಚಿನ ಒತ್ತನ್ನು ಕೊಟ್ಟಿದ್ದು ಕಂಡುಬಂದಿತು. ಸಾಮಾಜಿಕ ಮಾಧ್ಯಮಗಳ ಪ್ರಭಾವ ಹೇಗೆ ಮಾನವ ಸಂಬಂಧಗಳನ್ನು ಕಲುಷಿತಗೊಳಿಸುತ್ತಿದೆ ಎಂದು ವಿವರಿಸಿದರು. ವೈಯಕ್ತಿಕ ಭಾವನೆಗಳನ್ನು ಇತರರನ್ನು ಕೆರಳಿಸುವ ಶಕ್ತಿ ಹೊಂದಿದ್ದು, ಇತ್ತೀಚಿಗೆ ಈ ಮಾಧ್ಯಮಗಳು ಮನುಕುಲಕ್ಕೆ ಹೆಚ್ಚಿನ ಹಾನಿ ಮಾಡುತ್ತಿವೆ. ಆಧುನಿಕ ಯುಗದಲ್ಲಿ ಮಾಧ್ಯಮಗಳ ಸಂಖ್ಯೆ ಅತಿಯಾಗಿದ್ದು; ದಿನವಿಡೀ ತೋರಿಸಲ್ಪಡುವ ಸುದ್ದಿವಾಹಿನಿಗಳ ಹಾವಳಿ, ಸುದ್ದಿ ಸ್ಫೋಟದ ಮೇಲಿನ ಅತೀವ ಅವಲಂಬನೆ ಹಾಗೂ ಇದರಿಂದಾಗುವ ದುಷ್ಪರಿಣಾಮಗಳನ್ನು ವಿವರಿಸಿ, ಇಂದಿನ ಶತಮಾನದಲ್ಲಿ ಮಾಧ್ಯಮಗಳು ಅಗತ್ಯಕ್ಕಿಂತ ಹೆಚ್ಚು ಪ್ರಬಲವಾಗಿವೆ ಎಂದು ಪ್ರತಿಪಾದಿಸಿದರು. ಪಕ್ಷಪಾತಿಯಾದ ಮಾಧ್ಯಮಗಳು ಪ್ರಬಲವಾಗಿರುವುದರಿಂದಲೇ ವಿರೂಪಗೊಂಡ ಅಭಿಪ್ರಾಯಗಳು ಜನರ ಮೇಲೆ ತಪ್ಪಾದ ಪ್ರಭಾವ ಬೀರುತ್ತಿವೆ ಎಂಬುದು ಅವರ ಅಭಿಪ್ರಾಯವಾಗಿತ್ತು. ವಿರುದ್ಧವಾಗಿ ಲೇಖಕ, ಮಾಧ್ಯಮ ಇಂದಿನ ದಿನಗಳಲ್ಲಿ ದುರ್ಬಲವಾಗುತ್ತಿದೆ ಎಂದು ವಾದಿಸಿದರು. ಮಾಧ್ಯಮಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದರೂ, ಗಟ್ಟಿ ಸುದ್ದಿಗಿಂತ ಜೊಳ್ಳು ಜಾಸ್ತಿ; ಪತ್ರಿಕೆ ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಪಟ್ಟಭದ್ರ ಹಿತಾಸಕ್ತಿಗಳು ಮಾಧ್ಯಮದ ಮೇಲೆ ಹೆಚ್ಚಿನ ಹಿಡಿತ ಸಾಧಿಸುತ್ತಿದ್ದಾರೆ. ಸ್ವಾತಂತ್ರ್ಯ ಕಳೆದುಕೊಳ್ಳುತ್ತಿರುವ ಮಾಧ್ಯಮ ಸೊರಗುತ್ತಿದೆ ಎಂದು ವಾದಿಸಿದರು. ಶ್ರೀ ರವಿ ಹೆಗಡೆ ಮಾಧ್ಯಮ ಹಿಂದೆಯೂ ಪ್ರಬಲವಾಗಿತ್ತು, ಇಂದೂ ಅಷ್ಟೇ ಶಕ್ತಿಯುತವಾಗಿದೆ ಎಂದು ಉದಾಹರಣೆಗಳನ್ನು ಕೊಟ್ಟು ವಿವರಿಸಿದರು. ಸಾಮಾಜಿಕ ಮಾಧ್ಯಮಗಳು ಅಂಕೆಯಿಲ್ಲದಂತೆ ವರ್ತಿಸುತ್ತಿದ್ದರೂ ಜನ ಸಾಮಾನ್ಯರು ಆ ಮಾಹಿತಿಗಳನ್ನು ಒಪ್ಪುವ/ಬಿಡುವ, ಉಪಯೋಗಿಸುವ/ತಿರಸ್ಕರಿಸುವ ಸ್ವಾತಂತ್ರ್ಯ ಹೊಂದಿದ್ದಾರೆ. ದಿನವಿಡೀ ಬಿತ್ತರಗೊಳ್ಳುವ ಸುದ್ದಿ ನಮಗೆ ಮಾಧ್ಯಮದ ಪ್ರಬಲತೆ ಅತಿಯಾಗಿದೆ ಎಂದು ಅನಿಸುವುದು ಸಹಜ. ಸಿಗುವ ಮಾಹಿತಿಯನ್ನೋ, ಮನರಂಜನೆಯನ್ನೋ ಪಡೆಯುವ ಆಯ್ಕೆಮಾಡುವ ಅವಕಾಶ ಗ್ರಾಹಕರಲ್ಲಿದೆ. ಕೈಯಲ್ಲಿರುವ ಆಯುಧವನ್ನು ಒಳಿತಿಗೆ ಉಪಯೋಗಿಸಬೇಕೋ ಅಥವಾ ಧ್ವಂಸತ್ವಕ್ಕೆ ಬಳಸಬೇಕೋ ಎನ್ನುವುದು ನಮ್ಮ ಕೈಯಲ್ಲಿದೆ. ತಂತ್ರಜ್ನಾದ ಬಳಕೆಯನ್ನು ಉತ್ತಮವಾಗಿ ಉಪಪಯೋಗಿಸುವ ಬುದ್ಧಿವಂತಿಕೆ ನಮ್ಮಲ್ಲಿರಬೇಕೇ ಹೊರತು ಮಾಧ್ಯಮಗಳ ಪ್ರಬಲತೆ/ದುರ್ಬಲತೆಯನ್ನು ಚರ್ಚಿಸುವುದರಲ್ಲಿ ಹೆಚ್ಚಿನ ಅರ್ಥವಿಲ್ಲವೆಂದರು. ಉತ್ತಮ ಗುಣಮಟ್ಟದ ಮಾಹಿತಿಗೆ ಮುದ್ರಿತ ಮಾಧ್ಯಮಗಳು ಇಂದಿಗೂ ಶ್ರೇಷ್ಠ ಎಂದು ಅಭಿಪ್ರಾಯ ಪಟ್ಟರು.  ಶ್ರೀ. ವಿಶ್ವೇಶ್ವರ ಭಟ್ಟರು ತಮ್ಮ ದೀರ್ಘ ವೃತ್ತಿಪರ ಅನುಭವವನ್ನು ವಿಸ್ತರಿಸುತ್ತ ಮಾಧ್ಯಮ ಪ್ರಬಲವಾಗಿಯೂ ಪರಿಣಾಮಕಾರಿಯೂ ಆಗಿರಬೇಕು; ಇದ್ದರೆ ಮಾತ್ರ ದೇಶ ಸಧೃಡವಾಗಿರಲು ಸಾಧ್ಯವೆಂದರು. ಮಾಧ್ಯಮ ಸಮಾಜವನ್ನು ಪ್ರತಿಫಲಿಸುತ್ತದೆ, ಯಾವುದನ್ನೇ ಕೃತಕವಾಗಿ ಸೃಷ್ಟಿ ಮಾಡದು. ದೃಶ್ಯ ಮಾಧ್ಯಮ ವೈಚಾರಿಕತೆಯನ್ನು ಹತ್ತಿಕ್ಕುತ್ತದೆ. ಮುದ್ರಿತ ಮಾಧ್ಯಮ ಎಂದೆಂದಿಗೂ ಪ್ರಸ್ತುತ; ದೂರದರ್ಶನ ಹಾಗೂ ಸಾಮಾಜಿಕ ಮಾಧ್ಯಮಗಳು ಭಾವನೆಗಳನ್ನು ಕೆರಳಿಸುವ, ಮನೋಲ್ಲಾಸಕಾರಿ ಮನರಂಜನೆಗಷ್ಟೇ ಸೀಮಿತ ಎಂದು ಅಭಿಪ್ರಾಯಪಟ್ಟರು. ಜನರ ಅಭಿರುಚಿಗನುಗುಣವಾಗಿ ಈ ಮಾಧ್ಯಮಗಳು ಕಾರ್ಯಕ್ರಮಗಳನ್ನು ಬಿತ್ತರಿಸುತ್ತವೆಯೇ ಹೊರತು ವೈಚಾರಿಕತೆಗೆ ಹೆಚ್ಚಿನ ಪ್ರಾಧಾನ್ಯತೆ ಕೊಡುವಲ್ಲಿ ಸೋತಿವೆ ಎಂದು ಉದಾಹರಣೆಗಳೊಂದಿಗೆ ವಿವರಿಸಿದರು. ಮುದ್ರಿತ ಮಾಧ್ಯಮಗಳ ಪ್ರಾಬಲ್ಯ ಅತಿ ಆಗುತ್ತಿಲ್ಲ, ಕಡಿಮೆಯೂ ಆಗುತ್ತಿಲ್ಲ ಆದರೆ ಪ್ರಬಲ ಮಾಧ್ಯಮ ಸಮಾಜಕ್ಕೆ ಅತ್ಯವಶ್ಯಕ ಎಂದರು. 

ಈ ಬಾರಿಯ ಸಭೆ ಹಿರಿದಾದ ಕೊನೆಯಲ್ಲಿದ್ದುದ್ದಲ್ಲದೆ, ಉತ್ತಮ ಧ್ವನಿ ವ್ಯವಸ್ಥೆಯನ್ನೂ ಪಡೆದಿದ್ದು ವಿಶೇಷ. ಶ್ರೀ. ಆನಂದ ಕೇಶವಮೂರ್ತಿಯವರು ನೀಡಿದ ಉತ್ತಮ ತಂತ್ರಜ್ಞಾನ ಬೆಂಬಲ ಕೇಳುಗರಿಗೆ ಯಾವುದೇ ವ್ಯತ್ಯಯವಾಗದಂತೆ ಸಹಕರಿಸಿತು. ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ನೆರೆದ ಸಭಿಕರು ಸಕ್ರಿಯವಾಗಿ ಅತಿಥಿಗಳಿಗೆ ಪ್ರಶ್ನೆಗಳನ್ನು ಕೇಳಿ ಭಾಗವಹಿಸಿದರು. ಅವರಲ್ಲನೇಕರು ವೈಯಕ್ತಿಕವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಅನಿವಾಸಿ ಸದಸ್ಯರಿಗೆ ಮಾರನೆಯ ದಿನದ ಕಾರ್ಯಕ್ರಮಕ್ಕೆ ಹೆಚ್ಚಿನ ಹುರುಪು ನೀಡಿತು. ಶ್ರೀಮತಿ ಅನ್ನಪೂರ್ಣ ಆನಂದ್ ಚೊಕ್ಕದಾಗಿ ವಂದನಾರ್ಪಣೆ ಕಾರ್ಯ ನಿರ್ವಹಿಸಿದರು. 

- ರಾಮಶರಣ
ಎರಡನೇ ದಿನ ಅಂದುಕೊಂಡಿದ್ದಕ್ಕಿಂತ ತುಂಬ ತಡವಾಗಿ ಕಾರ್ಯಕ್ರಮ ಆರಂಭವಾದರೂ, ಅಂದುಕೊಂಡಿದ್ದಕ್ಕಿಂತ ಹೆಚ್ಚು ಜನರು ಸೇರಿದ್ದರು. ಕಾರ್ಯಕ್ರಮದ ಉಸ್ತುವಾರಿಯನ್ನು ಶ್ರೀಮತಿ ಗೌರಿ ಪ್ರಸನ್ನ ಅವರು ವಹಿಸಿಕೊಂಡಿದ್ದರು. `ದೇಶ ಸುತ್ತು ಕೋಶ ಓದು,` ಎನ್ನುವ ಗಾದೆಮಾತನ್ನು ಹೇಳಿ, ಬಹಳಷ್ಟು ದೇಶಗಳನ್ನು ಸುತ್ತಿದ, ಸಹಸ್ರಾರು ಕೋಶಗಳನ್ನು ಓದಿರುವುದಲ್ಲದೇ  ಹಲವಾರು ಕೃತಿಗಳನ್ನು ರಚಿಸಿರುವ, ವಾಗ್ಮಿಗಳಾದ ಶ್ರೀ ಗುರುರಾಜ ಕರ್ಜಗಿಯವರು ಮತ್ತು  ಶ್ರೀ ವಿಶ್ವೇಶ್ವರ ಭಟ್ಟರು, `ಕನ್ನಡ ಬಳಗ`ದ `ಕೆ ಎಸ್ ಎಸ್ ವಿ ವಿ` ಯ ಪರ್ಯಾಯ ಕಾರ್ಯಕ್ರಮಕ್ಕೆ ಬಂದಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಹೇಳಿದರು. ಸುವರ್ಣ ವಾಹಿನಿ ಮತ್ತು ಕನ್ನಡ ಪ್ರಭದ ಉಸ್ತುವಾರಿ ವಹಿಸಿಕೊಂಡಿರುವ ಶ್ರೀ ರವಿ ಹೆಗಡೆಯವರೂ ವೇದಿಕೆಯ ಮೇಲೆ ಮತ್ತೋರ್ವ ಅತಿಥಿಯಾಗಿ ಉಪಸ್ಥಿತರಿದ್ದರು. 

ಮೊದಲ ದಿನದ ಗಂಭೀರ ಚರ್ಚೆಗಳನ್ನು ಬದಿಗಿಟ್ಟು, ಎರಡನೇ ದಿನ, `ವಿದೇಶದಲ್ಲಿ ಎದುರಿಸಿದ ಪೇಚಿನ ಮತ್ತು ಮೋಜಿನ ಪ್ರಸಂಗಗಳು.` ಎನ್ನುವ ವಿಷಯದ ಬಗ್ಗೆ ಮಾತನಾಡಲು ಅತಿಥಿಗಳನ್ನು ಕೇಳಿಕೊಳ್ಳಲಾಯಿತು. 

ಮೊದಲು ಮಾತನಾಡಿದ ರವಿ ಹೆಗಡೆಯವರು, ಶ್ರೀಲಂಕಾದಲ್ಲಿ ನಡೆದ ಪೇಚಿನ ಪ್ರಸಂಗವನ್ನು ಹೇಳಿ ನಮಗೆ ಮೋಜು ನೀಡಿದರು. ಶ್ರೀಲಂಕಾದಲ್ಲಿ `ಮರಿಯಾನೆಯ ಕುಣಿತ`ವನ್ನು ತೋರಿಸುತ್ತೇನೆಂದು ಮೋಸಮಾಡಿದ ಪ್ರಸಂಗವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿ ನಮ್ಮನ್ನು ನಗಿಸಿದರು. 

ನಂತರ ಮಾತನಾಡಿದ ಶ್ರೀ ಗುರುರಾಜ ಕರ್ಜಗಿಯವರು, ಅಮೇರಿಕದಲ್ಲಿ ತಾವು ಕಣ್ಣಾರೆ ಕಂಡ `ಟು ಫಾರ್ ಅಸ್, ಒನ್ ಫಾರ್ ದ ವಾಲ್`ಪ್ರಸಂಗವನ್ನು ಹೇಳಿದರು. ಆ ಪ್ರಸಂಗದ ಬಗ್ಗೆ ಲೇಖನ ಬರೆದಾಗ, ಅದನ್ನು ಓದಿದ, `ವಿದ್ಯಾರ್ಥಿ ಭವನ`ದ ಶ್ರೀ ಅರುಣ ಅಡಿಗರು, ಕೊರೋನಾ ಸಮಯದಲ್ಲಿ ಅದರಿಂದ ಸ್ಪೂರ್ತಿಯನ್ನು ಪಡೆದು ಸಹಸ್ರಾರು ಜನರಿಗೆ ಆಹಾರ ಸರಬುರಾಜು ಮಾಡಿದ್ದನ್ನು ನೆನಪಿಸಿಕೊಂಡರು. 

ಗಂಟಲು ಕೈಕೊಟ್ಟ ಕಾರಣಕ್ಕೆ ಮಾತನಾಡಲಾರೆ ಎಂದಿದ್ದ ಶ್ರೀ ವಿಶ್ವೇಶ್ವರ ಭಟ್ಟರು ಇಬ್ಬರ ಭಾಷಣದಿಂದ ಉತ್ಸಾಹಗೊಂಡು, `ಒನ್ ಫಾರ್ ದ ಬುಕ್,` ಎನ್ನುವ ವೇಲ್ಸ್-ನಲ್ಲಿರುವ ಹೇ-ಆನ್-ವೈ ಎನ್ನುವ ಪುಸ್ತಕ ಗ್ರಾಮದ ಬಗ್ಗೆ ಮಾತನಾಡಿದರು. ಆ ಪುಸ್ತಕಗ್ರಾಮ ಪುಸ್ತಕಗಳ್ಳನ ಮೇಲೆ ಮಾಡಿದ ಅದಮ್ಯ ಪರಿಣಾಮದ ಬಗ್ಗೆ ಹೇಳಿದರು. 

ಇದಾದ ಮೇಲೆ ಸಭಿಕರ ಜೊತೆ ಪ್ರಶ್ನೋತ್ತರದ ಕಾರ್ಯಕ್ರಮ ನಡೆಯಿತು. 

ಶ್ರೀ  ರವಿ ಹೆಗಡೆಯವರು `ಅನಿವಾಸಿ ಕನ್ನಡಿಗರು ಇಲ್ಲಿಯೂ ಅಲ್ಲಿಯೂ ಸಲ್ಲದವರೋ ಅಥವಾ ಎರಡೂ ಕಡೆ ಸಲ್ಲುವವರೋ?` ಎನ್ನುವ ಪ್ರಶ್ನೆಯನ್ನು ಎತ್ತಿಕೊಂಡು, `ಜಾಗತೀಕರಣದ ಕಾಲದಲ್ಲಿ ಅನಿವಾಸಿ ಕನ್ನಡಿಗರು ಕರ್ನಾಟಕದ ರಾಯಭಾರಿಗಳು, ಎಲ್ಲೆಲ್ಲಿಯೂ ಸಲ್ಲುವವರು,` ಎಂದು ಮನಮುಟ್ಟುವಂತೆ ಹೇಳಿದರು. 

ಶ್ರೀ ವಿಶ್ವೇಶ್ವರ ಭಟ್ಟರು ಪತ್ರಕರ್ತರಿಗೆ ಭಾಷೆಯ ಸ್ವಚ್ಛತೆಯ ಬಗೆಗಿನ ಪ್ರಶ್ನೆಗೆ ಉತ್ತರಿಸುತ್ತ, ತಾವು ಇಂಗ್ಲೆಂಡಿನಲ್ಲಿ ಜರ್ನಲಿಸಂ ಓದುವಾಗ ಸನ್ ಪತ್ರಿಕೆಯು ಹೇಗೆ ಕೆಲವೇ ಪದಗಳಲ್ಲಿ ಸ್ಪಷ್ಟವಾಗಿ ಬರೆಯುವ ತರಬೇತಿಯನ್ನು ಪತ್ರಕರ್ತರಿಗೆ ಕೊಡುತ್ತದೆ ಎನ್ನುವುದರಿಂದ ಹಿಡಿದು, ತಾವು ಹೇಗೆ ಹೊಸ ಪತ್ರಕರ್ತರನ್ನು ಆಯ್ಕೆ ಮಾಡುತ್ತೇವೆ ಎನ್ನುವವರೆಗೆ ಹೇಳಿದರು. 

ಶ್ರೀ ಗುರುರಾಜ ಕರ್ಜಗಿಯವರು ಪ್ರಶೆಗಳನ್ನು ಎತ್ತಿಕೊಂಡು, ವಸುಧೈವ ಕುಟುಂಬಕಮ್, ಜಾತಿ ತಾರತಮ್ಯ, ಲಿಂಗ ಬೇಧ, ಮೀಸಲಾತಿ, ಶಿಕ್ಷಕರು ಇತ್ಯಾದಿಗಳ ಬಗ್ಗೆ ಮನಮುಟ್ಟುವಂತೆ ವಿವರಿಸಿದರು. `ಟೀನೇಜ್ ಮಗಳಿಗೆ ಏನುಪದೇಶ ಕೊಡುವುದು?` ಎನ್ನುವ ಪ್ರಶ್ನೆಗೆ, `ಅವಳು ಸರಿಯಾಗಿದ್ದಾಳೆ, ಸುಮ್ಮನೇ ತಡುವಬೇಡಿ, ನಿಯಮಗಳು ಎಲ್ಲರಿಗೂ ಒಂದೇ ಟೀನೇಜ್ ಮಗಳಿರಲಿ ಅಥವಾ ಮಗನಿರಲಿ, ಲಿಂಗಬೇಧವಿರಬಾರದು,` ಎಂದು ಹೇಳಿದರು. 

ಆಭಾರ ಮನ್ನಣೆಯನ್ನು ಶ್ರೀಮತಿ ವತ್ಸಲಾ ರಾಮಮೂರ್ತಿ ನಡೆಸಿಕೊಟ್ಟರು. 

- ಕೇಶವ್ ಕುಲಕರ್ಣಿ