ಮಡಿಬಾ, ಮತ್ತೆ ಬಾ – ಗಿರಿಧರ ಎಸ್ ಹಂಪಾಪುರ ಕವನ

ಇವತ್ತು ನೆಲ್ಸನ್ ಮಂಡೆಲಾ ಅವರ ಪ್ರಥಮ ಪುಣ್ಯತಿಥಿ. ಡಾ. ಗಿರಿಧರ ಹಂಪಾಪುರ ಅವರಿಂದ ಒಂದು ಕವನಾಂಜಲಿ.

cc- lasanta.com.ec

ಮಡಿಬಾ,

ವರ ವೀರ
ಧೀರ ಶೂರ
ಮಡಿಬಾ
ಮತ್ತೆ ಬಾ,
ಕಾರಾಗ್ರಹ ನಿನ್ನ ನಿತ್ರಾಣಗೊಳಿಸಲಿಲ್ಲ
ಹಗೆಯ ಭಾವನೆ ಹೃದಯ ತಟ್ಟಲಿಲ್ಲ.
ಬಿಳಿಯರ ಕರಿ ಮಡಿಯನ್ನು ಕಡಿದು
ವರ್ಣಭೇದವನ್ನು ಛೇದಿಸಿ
ಸಹನೆ ಸಹಬಾಳ್ವೆಯ ರೂಪಿಸಿ
ಕಾಮನಬಿಲ್ಲಿನ ನಾಡೊಂದ ಸೃಷ್ಟಿಸಿ
ಗೆದ್ದು ರಾಜ್ಯವ ಬಿಟ್ಟುಕೊಟ್ಟ ರಾಜರ್ಷಿ
ಈ ಧರೆಯೋಳ್ ಮತ್ತೆ ಬಾ
ಮಡಿಬಾ

ಒಲವು — ಬೆಳ್ಳೂರು ಗದಾಧರ ಅವರ ಕವನ

ಒಲವು

 

couple-drawing cropped

ನಿನ್ನೊಲವಿನ ಸುಳಿಗಾಳಿಯಲಿ
ಪಟವನೇರಿಸಿ ನೀನು
ಜೀವನದ ನೌಕೆಯನು ತೇಲಿ ಬಿಟ್ಟೆ
ಹಗುರ ಹೃದಯದಲಿ
ಆಸೆ ಆಕಾಂಕ್ಷೆಗಳಿಗೆ
ಜೀವ ಯಾತ್ರೆಗೆ ಉಸಿರು ಕೊಟ್ಟೆ

ಪಯಣ ಕಳೆದಂತೆ
ಒಲವು ಪ್ರೀತಿಗಳ
ಎದೆ ಮನಗಳಲಿ ತುಂಬಿ ಇಟ್ಟೆ
ನಿಷ್ಕಲಂಕ ದಿನಗಳು
ಪ್ರೇಮಪೂರ್ಣ ವರ್ಷಗಳು
ನನ್ನ ಸುಖಕೆಂದೇ ಮೀಸಲಿಟ್ಟೆ

ಮರೆತಲ್ಲಿ ನಾ ನಿನ್ನ ತ್ಯಾಗ
ನೀನರ್ಪಿಸಿರುವ ಅನುರಾಗ
ಸ್ವಾರ್ಥ ದಡವ ನಾ ಮುಟ್ಟೆ
ಓ ನನ್ನ ನಾವಿಕಳೆ
ಬರಲಿ ನಿನ್ನೊಲವ ಸುಳಿಗಾಳಿ
ನೌಕೆ ತೇಲಿಸು ಮತ್ತೆ ದಡವ ಬಿಟ್ಟು