ಮುಸಲ ಧಾರೆ
ಮಳೆ, ಸಂಜೆ, ಉಷಾ ಕಾಲ, ಮೋಡಗಳು, ಇತ್ಯಾದಿಯಾದ ಪ್ರಕೃತಿಯ ವಿವಿಧ ಅವತಾರಗಳು ಕವಿ ಮನಗಳನ್ನು ಪ್ರಚೋದಿಸದೆ ಬಿಟ್ಟಿಲ್ಲ. ಅದರಲ್ಲೂ ಜೀವ ಆಧಾರಕವಾದ ಮಳೆ ಬಂದಾಗ ಇಳೆಗೊಂದು ಹೊಸ ಸ್ವರೂಪವೇ ಬಂದುಬಿಡುತ್ತದೆ. ಈ ಬಾಹ್ಯ ಬದಲಾವಣೆಯ ಜೊತೆ ಜೊತೆಯಲ್ಲಿ ಅಂತರಿಕವಾಗಿ ಮಳೆ ಮುದ ಕೊಡುವುದರ ಜೊತೆಗೆ ವಿವಿಧರೀತಿಯ ಭಾವನಾತರಂಗಗಳನ್ನು ಬಡಿದೆಬ್ಬಿಸುವುದು ಅಶಕ್ಯವೇನಲ್ಲ; ಹಾಗಾದರೆ ಅದು ಎಂಥ ಭಾವನೆಗಳನ್ನು ಬಡಿಬ್ಬಿಸಬಹುದು?
”ಯದ್ಭಾವಂ ತದ್ಭವತಿ ” ಮನದ ಭಾವ ಇರುವಂತೆ ಭಾವನೆಗಳೂ ಸಹ!
ಇಂತಹ ಒಂದು ಸುಂದರ ಕವನ ಇಲ್ಲಿದೆ, . ಓದಿ ನೋಡಿ, ನಿಮ್ಮ ಭಾವನೆಗಳು ಏನು ಎಂದು ನಮಗೂ ತಿಳಿಸಿ.
ರಾಮಶರಣ್ ಅವರು ನಮ್ಮ ಜಾಲಜಗುಲಿಯ ಕನಸನ್ನು ಸಾಕಾರಗೊಳಿಸುವ ಪಾತ್ರವಹಿಸಿದ ಸದಸ್ಯರಲ್ಲಿ ಒಬ್ಬರು. ಭಾರತದಲ್ಲಿ ಪ್ರಾಥಮಿಕ ವೈದ್ಯಕೀಯ ತರಬೇತಿ ಪಡೆದು ಈಗ ಇಂಗ್ಲೆಂಡಿನ ಡಾರ್ಬಿಷೈರ್ ನಲ್ಲಿ, ಮೂಳೆ , ಕೀಲು, ಸ್ನಾಯು ಸಂಬಂಧಿ ಖಾಯಿಲೆಗಳ (Rheumatologist) ತಜ್ಞರಾಗಿ ಸೇವೆಸಲ್ಲಿಸುತ್ತಿದ್ದಾರೆ.
ಸಾಹಿತ್ಯಿಕವಾಗಿ ಶ್ರಿಮಂತವಾದ ಕುಟುಂಬದಲ್ಲಿ ಜನಿಸಿ, ಅದೇ ರೀತಿಯ ಕುಟುಂಬದಿಂದ ಪತ್ನಿಯನ್ನೂ ಪಡೆದು, ತಾವಿರುವಲ್ಲಿಯೇ ಕನ್ನಡದ ಕಂಪನ್ನು ಯುವಪೀಳಿಗೆಯಲ್ಲಿ ಹರಡುತ್ತಿರುವ ಕೃಷಿಕ.
ಕನ್ನಡದ ಬಗ್ಗೆ ತಮಗಿರುವ ಕಾಳಜಿಯನ್ನು ಯಾವ ಅಬ್ಬರ-ಆರ್ಭಟಗಳಿಲ್ಲದೆ, ಶಾಂತವಾಗಿ ಮಾಡಿಕೊಂಡು ಸಾಗುವುದು ಇವರ ವ್ಯಕ್ತಿತ್ವ. ಮಾತು ನಡತೆಗಳು ಸಹ ಮೃದು. ನೀವು ಕರ್ನಾಟಕದ ‘ಶಾಲ್ಮಲಿ’ ಎಂಬ ಸುಂದರ ನದಿಯ ಹರಿವನ್ನು ನೋಡಿದ್ದರೆ, ರಾಮಶರಣ ಅವರ ವ್ಯಕ್ತಿತ್ವದ ಪ್ರತಿಮೆ ನಿಮ್ಮ ಮನದಲ್ಲಿ ಮೂಡಬಹುದೇನೋ.
ಮುಸಲ ಧಾರೆ
ಹೊಳೆ ಹೊಳೆವ, ಆಕರ್ಷಕ ಕೊಳ
ಎಲ್ಲಿಂದಲೋ ಬೀಸಿ ಬಂತಂದು ಮಾಳ
ತಂತು ಕಾರ್ಮೋಡದಿ ಹುದುಗಿದ್ದ ವರ್ಷಾ ಜಾಲ.
ಹನಿ ಹನಿಯಾಯ್ತು ಮುಸಲ ಧಾರೆ
ಹನಿಯಲ್ಲ; ಚಿತ್ತ ಕ್ಷೊಭೆ, ನಾ ತಾಳಲಾರೆ
ತಳದಲ್ಲಿ ಹಣಿ ನಿಂತ ಕಸ-ಮೃತ್ತಿಕೆ
ಮೇಲೆದ್ದು ಇರಿಯಿತು ಖಡ್ಗವ ಮನಕೆ
ಬೇಡೆನಗೆ ಈ ಚಿತ್ರಹಿಂಸೆ, ಮಳೆಗಿಲ್ಲ ಇದಾವುದರ ಚಿಂತೆ
ಕೊಡೆಯಿಲ್ಲೆಂಬ ಪರಿವಿಲ್ಲದೆ ಹೊಡೆಯುತಿದೆ ಭರ್ತಿ
ಹೋಗಿನ್ನು ಬರಬೇಡವೆನಲೂ ಎನಗಿಲ್ಲ ಶಕುತಿ
ಬರಗಾಲ ಬಂದೆಲ್ಲ ಬರಡಾದರೆಂಬ ಭೀತಿ
ಡೋಲಾಯಮಾನ ಮನ, ಕಣ್ಬರದು ಮುಂದಿನ ದಿನ
ಬೆಂಕಿಯಲಿ ಬೆಂದು, ಪ್ರಹಾರಗಳ ತಿಂದು ಅಭರಣವಾದಂತೆ ಚಿನ್ನ
ಕಂಡೀತು ಕಾರ್ಮೋಡದಂಚಿನಲಿ ನೇಸರನ ಬಣ್ಣ
ಕೊನೆಯಿಲ್ಲದೆ ಹೊಡೆಯಿತ್ತಿರುವ ಮಳೆಯನ್ನು ನಿಲ್ಲು ಎನ್ನಲೂ ಭೀತಿ, ಎನ್ನುವ ಸಾಲಿನಲ್ಲಿ ರಾಮಶರಣ್, ಬರಗಾಲವೆಲ್ಲಿ ಸಮಸ್ಯೆಗಳ ಕಂತೆಯನ್ನೇ ಹೊತ್ತು ತರುತ್ತದೆ ಎನ್ನುವ ಚಿಂತೆಯನ್ನು ಬಹಳ ಪರಿಣಾಮಕಾರಿಯಾಗಿ ವರ್ಣಿಸಿದ್ದಾರೆ. ಇದು ಒಬ್ಬ ಭಾರತೀಯನ ಮನದ ಭೀತಿ ಎನ್ನುವುದು ಸ್ಪಷ್ತವಾಗುತ್ತದೆ. ಬ್ರಿಟನ್ನಿನಲ್ಲಿ ಸಾಕಪ್ಪಾ ಎನಿಸುವಷ್ಟು ವರ್ಷಾಕಾಲವೂ ಸುರಿಯುವ ಮಳೆಯಿಂದ ಚಿಡಿಗುಟ್ಟುವ ನಮ್ಮ ಮನಗಳಿಗೆ, ಇನ್ನೂ ತಾಯ್ನಾಡಿನಲ್ಲಿ ಮಳೆ ಇರದಿದ್ದರೆ ಬರಗಾಲದ ಸಮಸ್ಯೆ ತಮ್ಮವರನ್ನು ಕಿತ್ತು ತಿನ್ನುವುದೆಂಬ ಚಿಂತೆ ಕವಿಯುತ್ತಲೇ ಇರುತ್ತದೆ. ಆದರೆ ಮುಂದಿನ ದಿನ, ಮೋಡವನ್ನು ಚದುರಿಸಿ ಹೊರಹೊಮ್ಮುವ ನೇಸರದ ಹೊಂಗಿರಣ, ಕವಿಯ ಮನಸ್ಸಿನ ಆಶಾಭಾವವನ್ನೂ ತೋರುತ್ತದೆ. ಸರಳ ಶೈಲಿಯಲ್ಲಿ ಮನವನ್ನು ಮುದಗೊಳಿಸಿವ ಕವನ ಮುಸಲಧಾರೆ. ರಾಮಶರಣ ಅವರ ಮಲೆನಾಡಿನಲ್ಲಿ ಕಳೆದ ದಿನಗಳ ನೆನಪನ್ನು ಪ್ರತಿಬಿಂಬಿಸುತ್ತಿದೆ ಎನ್ನುವಂತಿದೆ ಅವರ ಈ ಕವನ.
ಉಮಾ ವೆಂಕಟೇಷ್
LikeLike
ಉತ್ತಮ. ಕವನ ಸರ್. ಆದರೆ ವಣ೯ನೆ ಕಡಿಮೆ ಅನ್ನಿಸ್ತು.
LikeLike
ಸಂಪಾದಕರು ಮುನ್ನುಡಿಯಲ್ಲಿ ಬರೆದಂತೆ ಇದು ಬರಿ ಮಳೆಯ ವರ್ಣನೆಯಾಗದೆ ಅದು ಕವಿಯ ಮನಸ್ಸಿನಲ್ಲೆಬ್ಬಿಸಿದ ಕ್ಷೋಭೆಯನ್ನು ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಈಗೇನೂ ಮಳೆ; ಮುಂದೆ ಬರಗಾಲ ಬಂದರೆ? ಕೊಡೆಯಿಲ್ಲೆಂಬ ಪರಿವಿಲ್ಲದೆ ಹೊಡೆಯುತಿದೆ ಭರ್ತಿ ಎಂಬ ಸಾಲು ‘ನಿನಗೆ ಕೊಡೆಯಿರಲಿ ಬಿಡಲಿ, ನಾನು ಅದು ಹರಿದು ಹೋಗುವಂತೆ ಕೊಡಲಾರದೆ ಬಿಡೆ’ ಎಂದಂತೆ ಆಯಿತು! ಈ ಮುಸಲ ಧಾರೆ ಕರಾವಳಿಯದೇನೋ! ಎನ್ಕೆ ಕುಲಕರ್ಣಿಯವರ ಧಾರವಾಡದ ‘ಶ್ರಾವಣದ ಕೊಳೆ’ಯಂತೆ ಜಿಟಿ ಜಿಟಿ ಮಳೆಯಲ್ಲ. ಅದರಲ್ಲಿ ಈ ಕೊಡೆಯ (ನಾತಪತ್ರ) ಮೇಲೊಂದು ಅವರ ಶ್ಲೇಷೆ. ‘ಪತ್ರವನ್ನು ಕೊಡಲಾರೆ’ಅಂದ ಪೋಸ್ಟ್ ಮ್ಯಾನ್; ಅದನ್ನು ಅವರು ”ಕೊಡೆಯೆಂಬನಾತಪತ್ರವಂ! (ಕೊಡೆಯೆಂಬನ್+ಆತ+ಪತ್ರವಂ)” ಎಂದರು.
ಮುಸಲಧಾರೆ ನನ್ನನ್ನು ಖಡ್ಗದ೦ತೆ ಇರಿಯಲಿಲ್ಲ; ಮುದ ಕೊಟ್ಟಿತು.
LikeLike