ನಾವು ಇಂಗ್ಲೆಂಡ್ ಗೆ ಹೊಸದಾಗಿ ಬಂದ ದಿನಗಳವು. ಆಗ ನಾವು ಮೊದಲಿಗೆ ಬಂದಿಳಿದಿದ್ದು ನನ್ನ ಮನೆಯವರ ಸಹೋದ್ಯೋಗಿ ಮಿತ್ರರ ಮನೆಯಲ್ಲಿ. ವಾರಾಂತ್ಯಕ್ಕೆ ಮೊದಲ ಬಾರಿ “ಟೌನ್” ನೋಡಲು ಹೋದಾಗ ಏನಾದರೂ ಖರೀದಿಸುವುದಿದೆಯಾ ಎಂದು ನಮ್ಮನ್ನು ‘Peacock’, ‘Debenhams’ ಹೀಗೆ ಬೇರೆ ಬೇರೆ ಅಂಗಡಿಗಳಿಗೆ ಕರೆದುಕೊಂಡು ಹೋದರು. ಮಹಿಳಾ ಸಹಜ ಗುಣದಂತೆ ನನಗೂ ಶೋಪಿಂಗ್‌ನಲ್ಲಿ ಆಸಕ್ತಿ. ಹಾಗೆ ಪ್ರತಿಯೊಂದು ಬಟ್ಟೆ ತೆಗೆದು ನೋಡುತ್ತಾ ಹೋದೆ. ಆದರೆ ಬೆಲೆ ನೋಡಿ ಕಂಗಾಲಾದೆ. ಹಾಂ!!!! 1500, 4000 ರೂಪಾಯಿಗಳು??? ಪ್ರತಿಯೊಂದರ ಬೆಲೆ ನೋಡಿದಾಕ್ಷಣ ಮನಸ್ಸು ಅದರ ಬೆಲೆಯನ್ನು ರೂಪಾಯಿಯಲ್ಲಿ ಹೇಳುತ್ತಿತ್ತು. ಅಬ್ಬಬ್ಬಾ!! ಹೀಗಾದರೆ ನಾನಿಲ್ಲಿ ಬಟ್ಟೆ ಖರೀದಿಸುವ ಆಸೆಯನ್ನೇ ಬಿಟ್ಟುಬಿಡಬೇಕೆಂದು ಸುಮ್ಮನಾದೆ. ಹೀಗೆ ಕೆಲದಿನಗಳು ಅಲ್ಲಲ್ಲಿ ‘ವಿಂಡೋ ಶಾಪಿಂಗ್’ ಮಾಡಿ ದಿನನಿತ್ಯಕ್ಕೆ ಬೇಕಾಗುವ ಹಾಲು, ತರಕಾರಿ, ಹಣ್ಣು ತೆಗೆದುಕೊಂಡು ಮನೆಗೆ ಬರುತ್ತಿದ್ದೆ.
ಕೆಲ ದಿನಗಳು ಕಳೆದ ಮೇಲೆ ಒಂದು ಶನಿವಾರ ಬೆಳಗ್ಗೆ ನನ್ನ ಸ್ನೇಹಿತೆಯೊಬ್ಬಳು ಕರೆ ಮಾಡಿ “ಏನ್ಮಾಡ್ತಿದ್ದೀಯಾ ?” ಅಂತ ಕೇಳಿದ್ಲು. “ಏನಿಲ್ಲಾ, ಆರಾಮವಾಗಿ ಎದ್ದು ತಿಂಡಿ ತಿನ್ನುತ್ತಾ ಕೂತಿದ್ದೀವಿ” ಅಂದೆ. “ವಿಷಯ ಗೊತ್ತಿದೆಯಾ?, JJB Shop close ಆಗ್ತಾ ಇದೆ, closing down sale ನಡೀತಾ ಇದೆ ಬೇಗ ಬನ್ನಿ ಅಂದಳು”. ಅಲ್ಲಿ ತನಕ ಇಲ್ಲಿಯ ಸೇಲ್ ಗಳ ರುಚಿ ಗೊತ್ತಿಲ್ಲದಿರೋ ನಾವು ತಯಾರಾಗಿ ಶಾಪ್ ತಲುಪಿದ್ರೆ ಬಾಗಿಲು ಅರ್ಧ ಮುಚ್ಚಿತ್ತು. ಕರೆ ಮಾಡಿ ಒಳಗಿದ್ದ ನನ್ನ ಸ್ನೇಹಿತೆಯನ್ನ ಹೊರಗೆ ಕರೆಯಿಸಿಕೊಂಡ್ವಿ. ಅವಳು ಹೊರಬಂದು ಇವರು ನಮ್ಮ ಜೊತೆಗೆ ಇದ್ದವರು ಅಂತ ಹೇಳಿ ನಮ್ಮನ್ನು ಒಳಗೆ ಕರೆದುಕೊಂಡು ಹೋದಳು. ಅಲ್ಲಿ ಇಲ್ಲಿ ಎಲ್ಲ ಬ್ರ್ಯಾಂಡೆಡ್ ಬಟ್ಟೆ, ಶೂ, ಜ್ಯಾಕೆಟ್ ತುಂಬಾ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದನ್ನು ನೋಡಿ ಖುಷಿಯೋ ಖುಷಿ. ನಾವೂ ಒಂದಿಷ್ಟು ಖರೀದಿ ಮಾಡಿದ್ವಿ. ಇಂಗ್ಲೆಂಡ್ ಗೆ ಬಂದಮೇಲೆ ಮೊದಲಬಾರಿಗೆ ಮನಸ್ಸಪೂರ್ತಿ ಖರೀದಿ ಮಾಡಿದುದರ ಆನಂದ ನನಗಾಗಿತ್ತು.
ಅಲ್ಲಿಂದ ಮುಂದೆ ಇಲ್ಲಿಯ ಒಂದೊಂದೇ ಸೇಲ್ ಗಳ ಪರಿಚಯ ಆಗ್ತಾ ಬಂತು. End of Season Sale, Winter Sale, Summer Sale, Closing Down Sale, Boxing Day Sale… ವ್ಹಾ! ವ್ಹಾ!!! ಆನಂದವೋ ಆನಂದ. ನಮ್ಮ ಮಿತ್ರರೊಬ್ಬರು ಯಾವಾಗಲೂ ಹೊರಹೋದಾಗ ಸೇಲ್, ಸೇಲ್ ಅಂದ್ರೆ ಚೆನ್ನಾಗಿರಲ್ಲ ಅಂತ “ಸಾಲೆ, ಸಾಲೆ” ಅನ್ನುತ್ತಿದ್ದರು. ನಿಜವಾಗಿಯೂ ಇಲ್ಲಿಯ ಸೇಲ್ ಗಳು ಅದ್ಭುತ ವಿಷಯವೇ. ಯಾವಾಗ ಯಾವ ವಸ್ತುವೂ ನಿಮಗೆ ಬೇಕಾದ ಬೆಲೆಯಲ್ಲಿ ಸಿಗಬಹುದು. ನಮಲ್ಲಿ ಕಾಯುವ ತಾಳ್ಮೆ ಇರಬೇಕು ಅಷ್ಟೇ!!
ಸೇಲ್ ಗಳಲ್ಲಿ “Next Half Price Sale” ತುಂಬಾ ಚಿರಪರಿಚಿತ. ಮುಂಜಾನೆಯೇ 4.30 ರಿಂದ ಸರತಿ ಸಾಲಿನಲ್ಲಿ ನಿಂತು ಖರೀದಿ ಮಾಡುವವರನ್ನು ನೋಡುವಾಗ, ನನ್ನಂತೆ ಬಹಳಷ್ಟು ಜನ ಇದ್ದಾರೆ ಸೇಲ್ ಇಷ್ಟ ಪಡೋರು, ನಾನೊಬ್ಬಳೇ ಅಲ್ಲ ಅಂತ ಏನೋ ಮನಸ್ಸಲ್ಲಿ ಸಮಾಧಾನವೂ, ಖುಷಿಯೂ ಆಗುತ್ತದೆ.
ಇನ್ನು ಈ ಸೇಲ್ ಗಳ ಮೇಲೆ ಬಹಳಷ್ಟು ಟಿಪ್ಸಗಳೂ ಸಿಕ್ಕಿವೆ.
– ಸೇಲ್ ನ ಮೊದಲನೇ ದಿನ ನಮಗೆ ಬೇಕಾಗಿರುವ ಬಟ್ಟೆ, ವಸ್ತು ಎಲ್ಲಿವೆ ಅಂತ ನೋಡಿಟ್ಟುಕೊಳ್ಳುವುದು.
– ಬಟ್ಟೆ ಆರಿಸಿಕೊಳ್ಳಲು ತುಂಬಾ ಹೊತ್ತು ಮಾಡದೆ ತಮಗೆ ಇಷ್ಟವಾದ ಎಲ್ಲ ಬಟ್ಟೆಗಳನ್ನು ತರುವುದು. ಹಿಂದಿರುಗಿಸುವ ವರದಾನ ಇದ್ದೇಇದೆಯಲ್ಲಾ !! ಮನೆಯಲ್ಲಿ ತಮಗೆ ಬೇಕಾಗಿರೋ, ಸರಿಯಾಗೋ ಬಟ್ಟೆಗಳನ್ನ ಆರಿಸಿದರಾಯಿತು.
– ಮಕ್ಕಳು, ಗಂಡನನ್ನು ಮನೆಯಲ್ಲೇ ಬಿಟ್ಟು ಹೋಗುವುದು.
– ನಮ್ಮ ಅಂದಾಜಿಗಿಂತ ಹೆಚ್ಚಿನ ಹಣ ತೆಗೆದುಕೊಂಡು ಹೋಗುವುದು [ಕಾರ್ಡ್ ಜೊತೆಗಿದ್ದರೆ ಯಾವಾಗಲೂ ಒಳ್ಳೆಯದು]
– ಇದು ನಮ್ಮೂರಿಗೆ ಸಂಬಂಧ ಪಟ್ಟಿದ್ದು. ASDAಗೆ ಗುರುವಾರ ಹೆಚ್ಚಾಗಿ ಭೇಟಿ ನೀಡುವುದು. ಯಾಕೆಂದರೆ ಇಲ್ಲಿ ಗುರುವಾರವೇ ಹೆಚ್ಚಾಗಿ ಸೇಲ್ ಹಾಕುತ್ತಾರೆ [ಸೀಸನ್ ಟೈಮ್ ನಲ್ಲಿ]
ಹೀಗೆ ಹಲವಾರು ಟಿಪ್ಸ್‌ಗಳು ನನಗೆ ನನ್ನ ಸ್ನೇಹಿತೆಯರಿಂದ ಲಭ್ಯವಾಗಿದೆ. ಸಂಶಯವೇ ಇಲ್ಲಾ , ತುಂಬಾ ಉಪಕಾರಿಯೇ!
ನನ್ನ ಗೆಳತಿಗಾದ ಕಷ್ಟ ನಿಮ್ಮ ಜೊತೆ ಹಂಚಿಕೊಳ್ಳಲೇ ಬೇಕು. ಈಗ ನಡೀತಿರೋ ‘Summer sale’ ಗೆ ಏನೂ ಖರೀದಿ ಮಾಡಲೇಬಾರದು ಅಂತ ಅಂದುಕೊಂಡಿದ್ಲಂತೆ.”‘New Look sale’ ಯಾವತ್ತೂ ಬಿಟ್ಟು ಬರೋಲ್ಲ ಆದ್ರೂ ಈ ಬಾರಿ ಆ ಕಡೆ ಹೋದರೂ ಒಳಗೆ ಹೋಗಲೇ ಇಲ್ಲ. ಹೊರಗಿಂದ ನೋಡಿದೆ, ನನ್ನ ಅಳತೆಗೆ ಆಗಿ ಬರೋ ಒಳ್ಳೆ ಡ್ರೆಸ್ ಕಾಣಿಸ್ತು. ಬರೀ ಎಂಟೇ ಪೌಂಡ್. ಒಳಗೆ ಹೋಗಿ ಖರೀದಿಸಿ ಬಿಡುತ್ತೇನೆ ಅಂದ್ಕೊಂಡೆ. ಆದ್ರೂ ದೃಢ ಮನಸ್ಸು ಮಾಡಿ ಹಾಗೆ ಮನೆಗೆ ಬಂದೆ. ಮನೆಗೇನೋ ಬಂದೆ ಆದ್ರೆ ಮನಸ್ಸು ಆ ಡ್ರೆಸ್ ಅಕ್ಕಪಕ್ಕನೇ ಉಳಿದುಹೋಯಿತು. ಅಯ್ಯೋ!!! ಬರೀ 8 ಪೌಂಡ್ ಗೋಸ್ಕರ ಯಾಕಿಷ್ಟು ಯೋಚನೆ ಮಾಡ್ತಿದ್ದೀನಿ ಅನ್ನಿಸ್ತು. ಸುಮ್ನೆ ತಂದು ಬಿಡಬೇಕಾಗಿತ್ತು. ಮುಂದೆ ಸಿಗುತ್ತೊ ಇಲ್ಲವೋ ಅಂತ ಅದೇ ಅದೇ ಯೋಚನೆ. ಏನೇ ಇರಲಿ ನಾಳೆ ಮತ್ತೆ ಹೋಗ್ತೀನಿ. ನನ್ನ ಅಳತೆ ಸಿಗದೇ ಹೋದರೆ ಸಮಾಧಾನ ಆಗಬಹುದು. ತಗೋಬೇಕು ಅಂತ ಇದ್ದೆ ಆದ್ರೆ ನನ್ನ ಅಳತೆ ದು ಸಿಕ್ಕಿಲ್ಲ ಅಂತ. ಸಿಕ್ಕಿದ್ರೆ ತಗೊಂಡೇ ಬರ್ತೀನಿ. ಇಲ್ಲಾಂದ್ರೆ ಅದೊಂದು ಮನಸ್ಸಿಗೆ ದಿನಾ ಕಾಡುವ ಕಿರಿಕಿರಿ.” ಅಬ್ಬಬ್ಬಾ!!! ಅವಳ ಮಾತು ಕೇಳಿ ಅನ್ನಿಸ್ತು ಯಾವೆಲ್ಲಾ ತರಹದ ತಲೆ ನೋವು ಈ ಸೇಲ್ ಗಳಿಂದ.
ಏನೇ ಇರಲಿ ಸೇಲ್ ಗಳ ಬಗ್ಗೆ ಬರೆದಷ್ಟು ಕಡಿಮೆಯೇ. ” ಜನ ಮರುಳೋ ಜಾತ್ರೆ ಮರುಳೋ” ಎಂಬ ಮಾತಿನಂತೆ ಮನಸ್ಸಿಗೇನೋ ನೆಮ್ಮದಿ ಕಡಿಮೆ ಬೆಲೆ ಗೆ ಸಿಕ್ತು ಅಂತ. ಆದ್ರೆ ಹಲವು ಬಾರಿ ಒಂದು ವಸ್ತು ಖರೀದಿಸುವಲ್ಲಿ ಮೂರ್ನಾಲ್ಕು ವಸ್ತುಗಳನ್ನ ಖರೀದಿಸಿ ಖರ್ಚು ಜಾಸ್ತಿಯೇ ಆಗಿರುತ್ತದೆ. “ಈ ಸೇಲ್ ಗಳು ಬಂದರೆ ನಮ್ಮ ಜೇಬಿಗೆ ಕತ್ತರಿ” ಅನ್ನೋದು ಗಂಡಸರ ಗೋಳು. Whatever it is at the end, peace of mind matters ಅಲ್ವಾ?!! ಎಲ್ಲರೂ ಅಲ್ಲದಿದ್ದರೂ ಕೆಲವರಾದರೂ ಸೇಲ್ ಗಳನ್ನು ಇಷ್ಟ ಪಡೋರು ಖಂಡಿತ ಇರಬಹುದು. ನಿಮಗೆಲ್ಲರಿಗೂ ” Happy Shopping”!!! :)..