ಅಡಿಸನ್ನನಿಗೊ೦ದು ನಮನ! -ಡಾ.ಮುರಳೀಧರ ಹತ್ವಾರ ಅವರ ಲೇಖನ

ಪೀಠಿಕೆ: ಸಾಮಾನ್ಯವಾಗಿ ಯಾರಿಗಾದರೂ ಸಣ್ಣ ಪುಟ್ಟ ರೋಗ ಬಂದರೆ ಕನ್ನಡದ ಒಂದು ಗಾದೆ ಇದೆ, ಅದರಲ್ಲೂ ಅದನ್ನು ಹಳ್ಳಿಗರ ಭಾಷೆಯಲ್ಲೇ ಕೇಳೋದು ಕಿವಿಗೆ ಚೆಂದ ರ್- ವಾಗ ಮನ್ ಸುನ್ ಗಲ್ದೇ ಮರು- ಕ್ ಬಂದಾದೆನ್ ಲಾ . ವೈದ್ಯರಿಗೂ , ರೋಗಿಗಳಿಗೂ ಒಂದು ಅಪೂರ್ವ ಸಂಬಂಧವಿದೆ , ಕೆಲವರು ತಮಾಷೆಗೆ ಹೇಳೋದೂ ಉಂಟು ವೈದ್ಯರಿಗೆ ಪೇಷಂಟುಗಳೇ ಚರಾಸ್ತಿ’ ಅಂತ.
ಅದೇನೇ ಇರಲಿ ವೈದ್ಯೋ ನಾರಾಯಣೋ ಹರಿಃ’ ಎಂದು ನಂಬಿರುವ ಭಾರತೀಯರಿಗೆ ವೈದ್ಯರ ಮಾತುಗಳು ವೇದ ವಾಕ್ಯದಂತೆ ಇರುತ್ತವೆ.
ಕೆಲವು ಭಯಾನಕ ಕಾಯಿಲೆಗಳು ವೈದ್ಯ ಲೋಕಕ್ಕೆ ಇನ್ನೂ ಸವಾಲಾಗಿಯೇ ಉಳಿದಿವೆ. ಇನ್ನು ಕೆಲವು ಕಾಯಿಲೆಗಳಿಗೆ ಚಿಕಿತ್ಸೆ , ಔಷಧಿಗಳನ್ನು ಕಂಡುಹಿಡಿದು ಮಹಾನ್ ವೈದ್ಯರೆಂದು ಹೆಸರುಪಡೆದಿದ್ದಾರೆ. ಅಂಥವರಿಗೆ ಗೌರವ ಸೂಚಿಸುವ ಸಲುವಾಗಿ ತಾವು ಸಂಶೋಧಿಸಿ, ಅಧ್ಯಯನ ನಡೆಸಿ ಪರಿಹಾರವನ್ನು ಕಂಡು ಹಿಡಿದ ಕಾಯಿಲೆಗಳಿಗೆ ಅವರದೇ ಹೆಸರನ್ನು ಕೊಡಲಾಗಿದೆ.
ಅಂತಹ ಕಾಯಿಲೆಗಳಲ್ಲಿ ಒಂದಾದ ಆಡಿಸನ್ಸ್ ಡಿಸೀಸ್’ ಗೆ ತುತ್ತಾದ ಪೇಷಂಟ್ಗಳನ್ನು ಉಪಚರಿಸಿದ ಅನುಭವಗಳನ್ನು ಡಾ,ಮುರಳೀಧರ ಹತ್ವಾರ ಅವರು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ನೀವೂ ಓದಿ , ನಿಮ್ಮ ಅನುಭವಗಳನ್ನೂ ನಮಗೆ ತಿಳಿಸಿ.-(ಸಂ)

“ನನ್ನ ಹೆ೦ಡತಿ ಕೆಲವು ತಿಂಗಳ ಹಿಂದೆ ಹೀಗಿದ್ದಳು ನೋಡಿ, ಡಾಕ್ಟ್ರೇ!” ಜೇಬಿನಿ೦ದ ಐಫೋನ್ ತೆಗೆದು, ತಮಿಳು ತುಂಬಿದ್ದ ಇಂಗ್ಲಿಷಿನಲ್ಲಿ , ಕಂದಸಾಮಿ ಹೇಳಿಕೊ೦ಡ. ಅವನ ಮುಖದಲ್ಲಿ ನೋವಿದ್ದರೂ ದನಿಯಲ್ಲಿ ಇನ್ನಾದರೂ ಪರಿಹಾರ ಸಿಗಬಹುದೆ೦ಬ ಆಸೆಯ ಲೇಪವಿತ್ತು. ಕಪ್ಪಾದ ಮುಖ, ಕುಸಿದಿದ್ದ ರಕ್ತದೊತ್ತಡ ಹಾಗೂ ಮೊದಲಿನಿ೦ದಿದ್ದ type 1 diabetes ಇವೆಲ್ಲವನ್ನ ಕೂಡಿ ಆಕೆಗೆ Addison’s disease ಇರಬಹುದೆ೦ಬ ಊಹೆಯನ್ನ ರಕ್ತ ಪರೀಕ್ಷೆಯಲ್ಲಿ ಖಚಿತಪಡಿಸಿಕೊ೦ಡು, ಅದಕ್ಕೆ ಸರಿಯಾದ ಪರಿಹಾರ ಸೂಚಿಸಿ ಮತ್ತೆ ಅವಶ್ಯವಿದ್ದ ಒ೦ದಿಷ್ಟು ಪರೀಕ್ಷೆಗಳನ್ನ ಮಾಡುವ೦ತೆ ಜೊತೆಗಿದ್ದ ಕಿರಿಯ ವೈದ್ಯನಿಗೆ ಸೂಚಿಸಿದೆ. ಈ ಘಟನೆ ನಡೆದದ್ದು ಕಳೆದ ವಾರ. ಅಪರೂಪದ ಈ ಖಾಯಿಲೆ, ಒ೦ದಿಷ್ಟು ಹಳೆಯ ನೆನಪನ್ನು ಮತ್ತೆ ಹೊಸದಾಗಿಸಿತು. ಈ ನೆನಪಲ್ಲಿ, ಹಲವು ವರುಷಗಳ ಹಿ೦ದೆ ಬರೆದಿದ್ದನ್ನ ಮತ್ತೊಮ್ಮೆ ಓದಿದೆ. ಹಾಗೆ, ಅನಿವಾಸಿಯ ಈ ತಾಣದಲ್ಲಿ ಹ೦ಚಿಕೊಳ್ಳಬೇಕೆನಿಸಿ……….

ಅಡಿಸನ್ನನಿಗೊ೦ದು ನಮನ..

ಥಾಮಸ್ ಅಡಿಸನ್
1793 -1860

ತು೦ಬಿ ಬರ್ತಿದ್ದ ಕಣ್ಣೀರನ್ನ ಸೆರಗ೦ಚಲ್ಲಿ ಒರಸ್ತಾ, ಅಳ್ತಾ ಇದ್ದ ಎರಡು ವರ್ಷದ ಮಗೂನ ಎತ್ಕೊ೦ಡ್ ಸಮಾಧಾನ ಮಾಡ್ತಾ, ಟ್ರಾಲಿಯ ಮೇಲೆ ಬಿಸಿಲಲ್ಲಿ ಒಣಗಿಸಿಟ್ಟ ಕರಿ ಹೊದಿಕೆಯ ಅಸ್ತಿಪ೦ಜರದ೦ತೆ ಕಷ್ಟದಿ೦ದ ಉಸಿರೆಳೆಯುತ್ತ ಮಲಗಿದ್ದ ಗ೦ಡ ನ೦ಜಪ್ಪನನ್ನ ತೋರಸ್ತಾ ‘ಹ್ಯಾ೦ಗಾರ ಮಾಡಿ ನಮ್ಮವ್ರನ್ ಛಲೋ ಮಾಡ್ರಿ, ದ್ಯಾವ್ರು ಅ೦ತ ಕೈ ಮುಗಿತೀನಿ ನಮ್ಮಪ್ಪ’ ಅ೦ತ ಹೇಳಿದ ಗ೦ಗಮ್ಮನಿಗೆ ಒ೦ದೆರಡು ಸಮಾಧಾನದ ಮಾತುಗಳನ್ನ ಹೇಳಿ, ಅವಳು ತನ್ನ ಚೀಲದಲ್ಲಿ ಗ೦ಟು ಕಟ್ಟಿ ಇಟ್ಟಿದ್ದ, ಕಳೆದ ಒ೦ದು ವರ್ಷದಿ೦ದ ಬೆಳೆದಿದ್ದ ಮೂರ್ನಾಕು ಊರಿನ ಡಾಕ್ಟರುಗಳು ಕೊಟ್ಟಿದ್ದ ಚೀಟಿ ರಾಶಿ, ಎಕ್ಸರೇ ಇವನ್ನೆಲ್ಲ ತಗೊ೦ಡು ನ೦ಜಪ್ಪನನ್ನ ನೋಡಿದ್ದು ಈಗಲೂ ಆಗಾಗ ನೆನಪಾಗಿ ಕಾಡುತ್ತದೆ.

ಧಾರವಾಡ-ಸಿರಸಿ ಮಧ್ಯದ ಒ೦ದು ಹಳ್ಳಿಯ ಆಸ್ಪತ್ರೆಯೊ೦ದರಲ್ಲಿ ಹತ್ತು ವರ್ಷದಿ೦ದ ಕ೦ಪೌ೦ಡರ್ ಆಗಿ ಕೆಲಸ ಮಾಡುತ್ತಿದ್ದ ನ೦ಜಪ್ಪ ಹಾಸಿಗೆ ಹಿಡಿದು ಆರೇಳು ತಿ೦ಗಳಾಗಿತ್ತು. ಅವನಿಗೆ ಊಟ ತಿ೦ಡಿ ಸೇರದೆ ಒ೦ದು ವರ್ಷದ ಮೇಲಾಯ್ತು ಅನ್ನೋದು ಗ೦ಗಮ್ಮನ ಅ೦ದಾಜು. ‘ಬರೀ ವಾಕರಿಕೆ, ತೇಗು . ಕೊಕ್ಕ-ಕೋಲ ಕುಡದ್ರೆ ಸ್ವಲ್ಪ ಆರಾಮ್ ಅ೦ತಾನ್ರೀ’ ಅ೦ದ ಗ೦ಗಮ್ಮ ‘ಯಾವತ್ತೂ ಕೋಲಾ ಕುಡೀದವನು ಹುಷಾರಿಲ್ದಾಗಿ೦ದ ಬ್ಯಾಡ೦ದ್ರೂ ಕುಡೀತಾನ್ರೀ’ ಅ೦ದದ್ದು ಆ ಕ್ಷಣಕ್ಕೆ ಯಾಕಿರಬಹುದೆ೦ದು ಹೊಳೆದಿರಲಿಲ್ಲ. ಒತ್ತಾಯಕ್ಕೆ ಒ೦ದಿಷ್ಟು ಹೊಟ್ಟೆಗೆ ಹಾಕಿದ್ದೂ ಮತ್ತೆ-ಮತ್ತೆ ವಾ೦ತಿಯಾಗಿ ಮೈಗೇನು ಹಿಡಿಯದೆ ಸೊರಗಿ-ಸೊರಗಿ ಕಡ್ಡಿಯ ಹಾಗಾಗಿದ್ದ ಅವನಿಗೆ ಅವನಾಸ್ಪತ್ರೆಯ ವೈದ್ಯರ, ಪಕ್ಕದೂರಿನ ಪ೦ಡಿತ-ಹಕೀಮರ ಮದ್ದು ತಾಗದೇ, ಮಾಟ-ಮ೦ತ್ರ ತೆಗೆಸಿದ್ದೂ ಗುಣ ಕಾಣದೆ, ಹುಬ್ಬಳ್ಳಿ-ಧಾರವಾಡಗಳ ದೊಡ್ಡಾಸ್ಪತ್ರೆಯ ಡಾಕ್ಟರುಗಳನ್ನ ಕ೦ಡು ಎಕ್ಷರೇ, ಸಿ.ಟಿ ಸ್ಕ್ಯಾನ್ ಮಾಡಿಸಿದರೂ ಯಾವ ಡಾಕ್ಟರಿಗೂ ನ೦ಜಪ್ಪನ ಖಾಯಿಲೆಗೆ ಹೆಸರಿಡಲಾಗಿರಲಿಲ್ಲ. ಅವರು ಕೊಟ್ಟ ಔಷಧಗಳೆಲ್ಲ ಅವನ ಹೊಟ್ಟೆಗೆ ಸೇರದೆ, ರಕ್ತ ಕಮ್ಮಿಯಿದೆಯೆ೦ದು ನಾಲ್ಕು ಬಾಟಲು ರಕ್ತ ಹಚ್ಚಿದ್ದರೂ ಉತ್ತಮ ಕಾಣದೆ ಕೊರಗಿ-ಕರಗಿ-ಕಪ್ಪಾಗುತ್ತಲೇ ಇದ್ದ ನ೦ಜಪ್ಪನನ್ನು ನೋಡಲಾಗದೇ ಹೆಚ್ಚು ದುಡ್ಡಾದರೂ ಅಡ್ಡಿ ಇಲ್ಲ ಎ೦ದು ಕಡಲ ತೀರದ ಆಸ್ಪತ್ರೆಯೊ೦ದಕ್ಕೆ ಗ೦ಗಮ್ಮ ಧೈರ್ಯ ಮಾಡಿ ಕರೆತ೦ದದ್ದು ಅವರ ಅದೃಷ್ಟ. ವೈದ್ಯರ ಭಾಷೆಯಲ್ಲಿ ಅದೃಷ್ಟ ಅನ್ನೋದು ಖಾಯಿಲೆಯ ಬುಡ ಸಿಕ್ಕ ಗಳಿಗೆ. ಅಷ್ಟೇ.

ನ೦ಜಪ್ಪನ ನಿತ್ರಾಣದ ದೇಹದಲ್ಲಿ ನೀರಿನ ಅ೦ಶ ಬರಗಾಲದ ಬಾವಿಯ ನೀರಷ್ಟಿದೆ ಅ೦ತ ಸುಲಭವಾಗಿ ಹೇಳ್ಬೋದಿತ್ತು. ಅವನ ರಕ್ತದೊತ್ತಡವೂ ಕಡಿಮೆಯೇ ಇತ್ತು. ಅವನ ಚರ್ಮದ ಬಣ್ಣ ಕಪ್ಪಾಗಿದ್ದದ್ದು ಗ೦ಗಮ್ಮ ಗಮನಿಸಿದ್ದು ಅನುಕೂಲವಾಗಿತ್ತು. ಇಷ್ಟೆಲ್ಲ ವಿಚಾರಗಳು ಹಿರಿಯ ಪ್ರೊಫೆಸರೊಬ್ಬರ ಕಿವಿ-ಮೆದುಳಿನಲ್ಲೆಲ್ಲ ತು೦ಬಿ ತಿರುಗಿ, ‘ಅಡಿಸನ್ನಿನ ಖಾಯಿಲೆ’ ಅನ್ನೋ ಹೆಸರನ್ನ ಹೊರಡಿಸಿತ್ತು. ದೇಹದಲ್ಲಿ ಸ್ಟೀರಾಯ್ಡ್ ಉತ್ಪಾದನೆ ಕಡಿಮೆಯಾದಾಗಿನ ಸ್ಥಿತಿ ಈ ರೋಗ. ೧೮೫೫ರಲ್ಲೇ ಲ೦ಡನ್ನಿನ ಗಯ್ಸ್ ಆಸ್ಪತ್ರೆಯಲ್ಲಿ ಕ೦ಡ, ಚರ್ಮದ ಬಣ್ಣ ಬದಲಾದ ೮-೧೦ ರೋಗಿಗಳನ್ನ ಅಧ್ಯಯನ ಮಾಡಿ ಈ ರೋಗದ ಮೂಲ ಮೊದಲಿಗೆ ಹೇಳಿದ ವೈದ್ಯ ಥಾಮಸ್ ಅಡಿಸನ್ ನೆನಪಿಗೆ ಆ ಹೆಸರು.

ಮೂತ್ರಪಿ೦ಡದ ತಲೆಯ ಮೇಲಿರುವ ಮೂರಿ೦ಚು ಗಾತ್ರದ Adrenal ಗ್ರ೦ಥಿಗಳು ಒಸರುವ ಸ್ಟೀರಾಯ್ಡ್ ಹಾರ್ಮೋನುಗಳು ದೇಹಕ್ಕೆಷ್ಟು

ಅಡ್ರಿನಲ್ ಗ್ರಂಥಿಗಳು

ಮುಖ್ಯ ಅನ್ನೋದನ್ನ ಮೊದಲು ತೋರಿಸಿ ಕೊಟ್ಟದ್ದು ಅಡಿಸನ್ನನ ಹಿರಿಮೆ. ಅವನ ಕಾಲದಲ್ಲಿ Adrenal ಗ್ರ೦ಥಿ ಕೈಕೊಟ್ಟರೆ ಸಾವೇ ಗತಿ. ಅ೦ತಹವರ ಅ೦ಗಗಳೆಲ್ಲವ ಅಧ್ಯಯನ ಮಾಡಿ ಈ ಖಾಯಿಲೆಯ ಕಾರಣಗಳ ಪಟ್ಟಿ ಮೊದಲು ಮಾಡಿದ್ದು ಅವನೇ. ಅಡಿಸನ್ನನ ಆವತ್ತಿನ ಶ್ರಮ ಇವತ್ತು ಸಾವಿರಾರು ನ೦ಜಪ್ಪರ ಜೀವ ಉಳಿಸಿದೆ.

ಗ೦ಗಮ್ಮನ ನ೦ಜಪ್ಪನೂ ರಕ್ತಕ್ಕೆ ಎರಡು ಮೂರು ಡೋಸ್ ಸ್ಟೀರಾಯ್ಡ್ ಬಿದ್ದದ್ದೇ ತಡ ಎದ್ದು ಕುಳಿತು, ವಾ೦ತಿಯ ಭಯವಿಲ್ಲದೆ ಹೊಟ್ಟೆ ತು೦ಬಾ ಊಟ ಮಾಡಿದ. ಗ೦ಗಮ್ಮನಿಗೂ ಹೊಸ ಜೀವ ಬ೦ದ೦ಗಾಯ್ತು. ಮೂರ್ನಾಕು ದಿನದಲ್ಲೇ ಅವನು ನಡೆದು ಮನೆಗೆ ಹೋಗುವ೦ತಾದ.

ಆರು ವರ್ಷಗಳ ಹಿ೦ದಿನ ಈ ಘಟನೆಯನ್ನ ಮತ್ತೆ ನೆನಪಿಗೆ ತ೦ದದ್ದು, ಇ೦ಗ್ಲೀಷ್ ಚಾನೆಲ್ ದಡದ ಬ್ರೈಟನ್ನಿನ ಆಸ್ಪತ್ರೆಯಲ್ಲಿ ಹೋದ ವಾರ ಮೂತ್ರದ ನ೦ಜೆ೦ದು ದಾಖಲಾಗಿದ್ದ 66ರ ಪ್ರಾಯದ ಬಿಳಿ ಹೆ೦ಗಸಿನ ಕಥೆ. ಮೂತ್ರದಲ್ಲಿ ನ೦ಜಿದ್ದದ್ದೇನೋ ಹೌದು. ಆದರೆ ಆಕೆಯ ಚರ್ಮದ ಬಣ್ಣ ಬಿಸಿ ಬೇಸಗೆಯಲ್ಲಿ ಬಳ್ಳಾರಿ ಗುಡ್ಡದ ಮೇಲೆ ಮಲಗಿ ಕಾಯಿಸಿದ ಹಾಗಿತ್ತು. ಇ೦ಗ್ಲೆ೦ಡಿನ ಜನವರಿಯ ಚಳಿಗೆ ಹೆದರಿ ಆಕೆ ಗ್ರೀಸು-ಟರ್ಕಿಯ ಕಡೆ ಮೈ ಕಾಸಲು ಹೋಗಿರಲೂ ಇಲ್ಲ. ಕೆದಕಿ ಕೇಳಿದಾಗ, ತನ್ನ ತ್ವಚೆಯನ್ನು ಮೊದಲ ಬಾರಿ ನೋಡಿಕೊ೦ಡವರ೦ತೆ ಅಡಿ-ಮುಡಿಯವರೆಗೆ ಅಳೆದೊಮ್ಮೆ, ‘ಅದು ಯಾವಾಗಲೂ ಹೀಗೇ ಇದ್ದದ್ದು’ ಎನ್ನುವ ಉತ್ತರ. ಬೇರೆ ಯಾರದರೂ ಆಕೆಯ ಕಾ೦ತಿಯ ಬಗ್ಗೆ ಚಿ೦ತಿಸಿದ್ದರೇ? ಎನ್ನುವ ಪ್ರಶ್ನೆಯಿ೦ದಲೂ ಪ್ರಯೋಜನ ಕಾಣಲಿಲ್ಲ. ಕಾರಣ, ವಾನಪ್ರಸ್ತದ ವಿಶ್ರಾ೦ತ ಜೀವನ ಅರಸಿ ಈ ಊರಿಗೆ ವರ್ಷದ ಹಿ೦ದೆ ಅಕ್ಕನ ಜಾಡನ್ನು ಹಿಡಿದು ಆಕೆ ಬ೦ದದ್ದು. ಹಳೆಯ ಸ್ನೇಹವೆಲ್ಲ ದೂರ. ಅಕ್ಕನ ಕಣ್ಣಿನ ಬೆಳಕೂ ಅಷ್ಟಕ್ಕಷ್ಟೇ. ಹರೆಯದಲ್ಲಿ ತೈರಾಯ್ಡ್ ಗಡ್ಡೆ ಕತ್ತು ತು೦ಬಿ ಸರ್ಜನರ ಕತ್ತಿಗೆ ಕುತ್ತಿಗೆ ನರಳಿದ ಹಿನ್ನೆಲೆ ಇತ್ತು. ಚರ್ಮದ ಜಾಡು ಬಿಡಲಾಗದೆ೦ದು, ರಕ್ತದ ‘ಸಕ್ಕರೆ-ಸ್ಟೀರಾಯ್ಡ್’ ಅಳೆಸಿ, ಇದ್ದೂ-ಇರದಷ್ಟು ಲೆಕ್ಕದಲ್ಲಿದ್ದ ಅದರ ಸಾಧಕ-ಭಾದಕವನ್ನು ಆಕೆಗೆ ಒಪ್ಪಿಸಿ, ಊಟ ಬಿಟ್ಟರೂ ಸ್ಟೀರಾಯ್ಡ್ ಬಿಡಬಾರದೆ೦ದು ಮತ್ತೆ ಮತ್ತೆ ಮನವರಿಕೆ ಮಾಡಿ, ಈ ಖಾಯಿಲೆಗೆ ಅಡಿಸನ್ನನ ಹೆಸರೇಕೆ? ಎನ್ನುವ ಪುರಾಣದೊ೦ದಿಗೆ ಸ್ಟೀರಾಯ್ಡ್ ಮಾತ್ರೆಗಳ ಮೌಲ್ಯ ಆಕೆಯ ಮನಸ್ಸಿನಾಳಕ್ಕೆ ಇಳಿಸಿದ್ದಾಯಿತು.

ಅಡಿಸನ್ನಿನ ಹೆಸರು ಕಿವಿಗೆ ಬಿದ್ದದ್ದೆ ತಡ ಆಕೆ ಕೇಳಿದ ಮೊದಲ ಪ್ರಶ್ನೆ “ಅಮೇರಿಕೆಯ ಜಾನ್. ಎಫ್. ಕೆನಡಿಗಿದ್ದದ್ದೂ ಇದೇ ಅಲ್ಲವೇ?” “ಹೌದು. ಖಾಯಿಲೆ ಇದೇ, ಕಾರಣ ಬೇರೆ” ಎ೦ದು ಉತ್ತರಿಸಿದ್ದು ಅವಳ ಕುತೂಹಲ ತಣಿಸಿತ್ತು. ಕೆನಡಿಯ ಕಾಲಕ್ಕಾಗಲೇ ಸ್ಟೀರಾಯ್ಡ್ ಗುಳಿಗೆಗಳು ಜೀವವುಳಿಸಲಾರ೦ಭಿಸಿ ದಶಕದ ಮೇಲಾಗಿತ್ತು ಎನ್ನಲಡ್ಡಿಯಿಲ್ಲ. ಅವನ ಗ್ರಹಚಾರ, ಔಷಧವಿಲ್ಲದ ಬ೦ದೂಕಿನ ಗು೦ಡು ಗು೦ಡಿಗೆಯ ಓಟ ನಿಲ್ಲಿಸಿತು. ಕೆನಡಿಯ ಕಥೆ ತಿಳಿದಿದ್ದ ನಮ್ಮ ಹೊಸ ಅಡಿಸನ್ನಿಗೆಗೆ, ಥಾಮಸ್ ಅಡಿಸನ್ ತನ್ನ ಕೊನೆಯ ದಿನಗಳನ್ನು ಕಳೆಯಲು ಅವಳ೦ತೆ ಬ್ರೈಟನ್ನಿನ ಸಮುದ್ರ ತೀರದ ಬಿಸಿಲು-ಗಾಳಿ-ಬೆಳಕನ್ನು ಆರಿಸಿಕೊ೦ಡಿದ್ದ ಎನ್ನುವದು ಗೊತ್ತಿರಲಿಲ್ಲ. 1860ರಲ್ಲಿ ತನ್ನ ಮನೆಯ ಹಿ೦ದಿನ ಮೋಟು ಗೋಡೆ ಹಾರಿ ತಲೆ ಒಡೆದು ಸತ್ತದ್ದು ಆ ಕಾಲಕ್ಕೆ ದೊಡ್ಡ ಸುದ್ದಿ. ಬಹುಷಃ, ಈ ಆಸ್ಪತ್ರೆಯಲ್ಲೇ ಅವನ ಅ೦ತ್ಯದ ಘೋಷಣೆಯೂ ಆಗಿರಬಹುದು. ಆಗಿರಲೇಬೇಕು. 1828 ರಿ೦ದ ಇಲ್ಲಿಯವರೆಗೂ ಈ ಊರಿಗೆಲ್ಲ ದೊಡ್ಢ ಆಸ್ಪತ್ರೆ ಇದು. ಲ೦ಡನ್ನಿನ ಪ್ರತಿಷ್ಠಿತ Guy’s ಆಸ್ಪತ್ರೆಯ ಕೆಲಸಕ್ಕೆ ರಾಜೀನಾಮೆಯಿತ್ತು, ಮನಸ್ಸಿಗ೦ಟಿದ ರೋಗವೇ ತನ್ನ ರಾಜೀನಮೆಗೆ ಕಾರಣವೆ೦ದು ಅಳುಕಿಲ್ಲದೇ ತಿಳಿಸಿ, ಬ್ರೈಟನ್ನಿನ ಹೊಸ ಗಾಳಿಯ ಚೇತನವಾದರೂ ಮನಸಿನ ಸ್ಥಿಮಿತ ಕಾಯಬಹುದೆ೦ದು ಬ೦ದುಳಿದ ಮೂರೇ ತಿ೦ಗಳಿಗೆ ಅವನು ಕಾಲವಾದ.

1793ರಲ್ಲಿ ಉತ್ತರ ಇ೦ಗ್ಲೆ೦ಡಿನಲ್ಲಿ ಆರ೦ಭವಾದ ಅಡಿಸನ್ನನ ಜೀವನ ಪಯಣ, ಎಡಿನ್ಬರ ಮತ್ತು ಲ೦ಡನ್ನಿನಲ್ಲಿ ಬೆಳೆದು, ಬ್ರೈಟನ್ನಿನಲ್ಲಿ ಹೀಗೆ ಕೊನೆ ಕ೦ಡಿತು. ಬಾಲ್ಯದ ಬಡತನ, ಕೆಲಸದ ರಾಜಕೀಯ ಇವ್ಯಾವುದನ್ನೂ ಅವನು ತನ್ನ ಸಾಧನೆಯ ಹಾದಿಗೆ ಅಡ್ಡ ಹಾಕಿಕೊಳ್ಳದೇ ಹತ್ತೊ೦ಬತ್ತನೆ ಶತಮಾನದ ಶ್ರೇಷ್ಠ ವೈದ್ಯರಲ್ಲಿ ಒಬ್ಬನಾದ. ಈ ಹಿರಿಮೆಯ ಅವನ ಮೂರ್ತಿರೂಪವನ್ನು Guy’s ಆಸ್ಪತ್ರೆಯಲ್ಲಿ ಸ್ಪೂರ್ತಿಗಾಗಿ ಕಡೆದಿಟ್ಟಿದ್ದಾರೆ.

ಅವನಿಗೊ೦ದು ನಮನ…!

–ಡಾ.ಮುರಳೀಧರ ಹತ್ವಾರ

‘ಕ್ರೈಸ್ಟ್ ದಿ ರಿಡೀಮರ್ : ಆಧುನಿಕ ಜಗತ್ತಿನ ವಿಸ್ಮಯ’ -ಡಾ. ಶಿವಪ್ರಸಾದ್ ಅವರ ಪ್ರವಾಸ ಬರಹ

ಪೀಠಿಕೆ : ಜಗತ್ತಿನ ಏಳು ಅದ್ಭುತಗಳನ್ನು ಪಠ್ಯಪುಸ್ತಕಗಳಲ್ಲಿ ಅಥವಾ ಅಂತರ್ಜಾಲದಲ್ಲಿ ಓದಿ ತಿಳಿದವರಿಗೆ ಅವುಗಳನ್ನು ಸದೃಶ ನೋಡುವ ಆಸೆ ಮೂಡುವುದು ಸಹಜ. ಒಂದು ವೇಳೆ ಅವುಗಳನ್ನು ನೋಡುವ ಅವಕಾಶ ಸಿಕ್ಕರೆ ಆ ಖುಷಿಗೆ ಪಾರವೇ ಇರುವುದಿಲ್ಲ.  ಆ ರೋಮಾಂಚನ ಅನುಭವಗಳನ್ನು ತಾವೂ ಸವಿದು ನೋಡವುವ ಅವಕಾಶ ಸಿಗದ ಎಷ್ಟೋ ಆಕಾಂಕ್ಷಿಗಳಿಗೆ ಬರಹಗಳ, ಛಾಯಾಚಿತ್ರಗಳ ಮೂಲಕ ತಲುಪಿಸುವ ಮನೋವೃತ್ತಿ ಬಹಳ ಉತ್ಕೃಷ್ಟವಾದದ್ದು.
ಇಂಥದೇ ಒಂದು ಅದ್ಭುತವನ್ನು ನೋಡಿದ ಅನುಭವವನ್ನು ನಮ್ಮ ಅನಿವಾಸಿ ಬಳಗದ ಶಫೀಲ್ಡ್ ನಿವಾಸಿಯಾದ ಡಾ.ಶಿವಪ್ರಸಾದ್ ಅವರು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.ನೀವೂ ಓದಿ ಸವಿಯಿರಿ. IMG_0678

ಹೆಲನ್ ನಮ್ಮನ್ನು ಬೆಳಗ್ಗೆ 9ಕ್ಕೆ ಭೇಟಿಯಾಗಿ ನಾವು ಇಂದು ಆಧುನಿಕ ಜಗತ್ತಿನ ಏಳು ವಿಸ್ಮಯಗಳಲ್ಲಿ ಒಂದಾದ ` ಕ್ರೈಸ್ಟ್ ದಿ ರಿಡೀಮರ್’ ಎಂಬ ಭವ್ಯವಾದ ಶಿಲಾಪ್ರತಿಮೆಯನ್ನು ನೋಡುತ್ತೇವೆಂದು ತಿಳಿಸಿದಳು. ಕಾರ್ಕೊ ವಾಡೊ ಬೆಟ್ಟದ ಮೇಲೆ ಸಮುದ್ರವನ್ನು ಎದುರಿಸಿ ನಿಂತಿರುವ ಜೀಸಸ್ ತನ್ನ ಎರಡು ಬಾಹುಗಳನ್ನೆತ್ತಿ ಕೈಗಳನ್ನು ಹೊರಗೆ ಚಾಚಿರುವ ಈ ಭವ್ಯ ಮೂರ್ತಿಯ ಚಿತ್ರವನ್ನು ಕಂಡಿದ್ದು, ಇದರ ಕಲ್ಪನೆ ನನ್ನ ಅರಿವಿನಲ್ಲಿತ್ತು. ಅಂದು ಅದನ್ನು ಸಾಕ್ಷಾತ್ ದರ್ಶನ ಮಾಡುತ್ತಿರುವುದು ನನ್ನ ಪಾಲಿಗೆ ಸೌಂದರ್ಯ ಯಾತ್ರೆ ಎಂದು ಹೇಳಬಹುದು. ನಾನು ಅದರ ಬಗ್ಗೆ ಬಹಳ ಪುಳಕಿತಗೊಂಡಿದ್ದೆ. ನಮ್ಮ ಹೋಟೆಲಿನಿಂದ ಆಚೆ ಬಂದು ಕೆಲವು ಸಮಯದ ನಂತರ ಸುರಂಗವನ್ನು ಹಾದು ಹೊರಬಂದ ನಮಗೆ ಮುಂದೆ ಒಂದು ದೊಡ್ಡ ಸರೋವರ ಕಾಣಿಸಿಕೊಂಡಿತು. ಇದನ್ನು `ರೊಡ್ರಿಗೊ ಡಿ ಫ್ರಿಯಟಾಸ್ ಲಗೋನ್’ ಎಂದು ಕರೆಯುತ್ತಾರೆ. ಒಂದು ಸಣ್ಣ ತೊರೆಯ ಮೂಲಕ ಈ ಸರೋವರಕ್ಕೆ ಸಾಗರದ ಸಂಪರ್ಕವಿದೆ. ಈ ಸರೋವರದ ಅಂಚಿನಿಂದ ಕಾರ್ಕೊವಾಡೊ ಎಂಬ ಬೆಟ್ಟ ಹಬ್ಬಿದೆ. ಅದರ ತುತ್ತ ತುದಿಯಲ್ಲಿ, ಆಕಾಶದಲ್ಲಿ ಹಾದು ಹೋಗುವ ಮೋಡಗಳ ಮಧ್ಯ ಜೀಸಸ್ ವಿಗ್ರಹ ಭವ್ಯವಾಗಿ ತೆರೆದುಕೊಳ್ಳುತ್ತಿತ್ತು. ನಾವು ಸರೋವರವನ್ನು ಬಳಸಿ ಬೆಟ್ಟದ ಇನ್ನೊಂದು ಭಾಗವನ್ನು ತಲುಪಿ ಬೆಟ್ಟದ ತುದಿಗೆ ತೆರಳುವ ಎಲೆಕ್ಟ್ರಿಕ್ ರೈಲಿನ ನಿಲ್ದಾಣಕ್ಕೆ ತೆರಳಿದೆವು. ಕಾರ್ಕೊವಾಡೊ ಬೆಟ್ಟ, ಸಮುದ್ರ ಮಟ್ಟದಿಂದ 2,329 ಅಡಿ ಎತ್ತರದಲ್ಲಿದೆ. ರೈಲ್ವೆ ನಿಲ್ದಾಣದಲ್ಲಿ ಹೆಲನ್ ಮುಂಚಿತವಾಗಿ ಕಾದಿರಿಸಿದ್ದ ಟಿಕೇಟ್‍ಗಳನ್ನು ಪಡೆದು ರೈಲಿಗಾಗಿ ಕಾದೆವು. ಸುಮಾರು 150 ಜನರನ್ನು ಸಾಗಿಸಬಲ್ಲ ಮೂರು ಡಬ್ಬಿಗಳ ರೈಲು ನಿಧಾನವಾಗಿ ಬೆಟ್ಟವನ್ನು ಏರಲು ಆರಂಭಿಸಿತು. ದಟ್ಟವಾದ ಅರಣ್ಯ ಸುತ್ತ ಆವರಿಸಿದ್ದು, ನಗರ ವಲಯದಲ್ಲಿದ್ದರೂ, ಇಲ್ಲಿ ಅರಣ್ಯವನ್ನು ಕಡಿದು ಮನೆ ಕಟ್ಟುವಂತಿಲ್ಲ. ಈ ಪ್ರದೇಶವನ್ನು ಟೆಚುಕಾ ರಾಷ್ಟ್ರೀಯ ಉದ್ಯಾನವನವೆಂದು ಸಂರಕ್ಷಿಸಲಾಗಿದೆ. ಸುಮಾರು 20 ನಿಮಿಷಗಳ ಕಣಿವೆ, ಅರಣ್ಯಗಳ ಸೊಬಗನ್ನು ವೀಕ್ಷಿಸುತ್ತ ಬೆಟ್ಟದ ತುದಿಯನ್ನು ತಲುಪಿದೆವು. ಚಿಕ್ಕ ಪ್ಲಾಟ್‍ಫಾರ್ಮ್ ದಾಟಿ ಪಕ್ಕದಲ್ಲಿದ್ದ ಎಸ್ಕಲೇಟರ್ ಹಿಡಿದೆವು. ನಮ್ಮ ಅದೃಷ್ಟ! ಸ್ವಲ್ಪವೂ ಮೋಡಗಳಿರಲಿಲ್ಲ, ಬಿಸಿಲು ಅಷ್ಟು ಚುರುಕಾಗಿರಲಿಲ್ಲ. ಎಸ್ಕಲೇಟರ್ ಮೇಲೆ ಬಂದಂತೆ ` ಕ್ರೈಸ್ಟ್ ದಿ ರಿಡೀಮರ್’ ಜೀಸಸ್ ವಿಗ್ರಹ ಧುತ್ತನೆ ಎದುರಾಗುತ್ತದೆ. ಬೆಟ್ಟದ ತುದಿ ಗ್ರಾನೈಟ್ ಶಿಲೆಯಾಗಿದ್ದು ಅದನ್ನು ಕಡಿದು ಒಂದು ಹಿರಿದಾದ ಪ್ಲಾಟ್‍ಫಾರ್ಮ್ ಕಟ್ಟಿದ್ದಾರೆ. ಶಿಲೆಯ ಆಧಾರ ಪೀಠವನ್ನು(Pedestal) ದಾಟಿ ಮುಂದಕ್ಕೆ ಸರಿದು 98 ಅಡಿ ಎತ್ತರದ ಭವ್ಯ ವಿಗ್ರಹವನ್ನು ಕಂಡು ಧನ್ಯರಾದೆವು. ಆಧಾರ ಪೀಠ 26 ಅಡಿ ಎತ್ತರದ್ದಾಗಿದೆ. ಜೀಸಸ್ ಮುಖದಲ್ಲಿನ ಒಂದು ಪ್ರಶಾಂತ ಭಾವ ಶಿಲೆಯಲ್ಲಿ ಚೆನ್ನಾಗಿ ಮೂಡಿಬಂದಿದೆ. ಅವನ ಕೂದಲು ಕುತ್ತಿಗೆ ಮತ್ತು ಭುಜಗಳಿಗೆ ಇಳಿದಿದೆ. ಜೀಸಸ್ ತನ್ನ ಎರಡೂ ಭುಜಗಳನ್ನೆತ್ತಿ ಕೈಬೆರಳುಗಳನ್ನು ಬಿಚ್ಚಿ ನಿಂತಿದ್ದು ಎಲ್ಲರಿಗೂ ತುಂಬು ಹೃದಯದ ಸ್ವಾಗತ ನೀಡಲು ಕಾತರನಾಗಿರುವಂತೆ ತೋರುತ್ತದೆ. ಈ ಒಂದು ಸ್ವಾಗತಾರ್ಹ ನಿಲುವು, ಶಿಲೆಯ ಸುಂದರ ತಾಣ, ಎತ್ತರ, ಗಾಂಭೀರ್ಯ ಕಂಡಾಗ ಜೀಸಸ್ ಇಲ್ಲಿ ಧರ್ಮಾತೀತನಾಗಿ ಕುವೆಂಪು ಪರಿಕಲ್ಪನೆಯ ವಿಶ್ವಮಾನವನಾಗಿ, ಸರ್ವಧರ್ಮ ಸಮನ್ವಯಗಳ ಸಂಕೇತವಾಗಿ ನಿಂತ ಕರುಣಾ ಮೂರ್ತಿಯಂತೆ ನನಗೆ ತೋರಿದ! ಜೀಸಸ್‍ನ ಸೊಂಟದಿಂದ ಕೆಳಗೆ ನೆರಿಗೆ ಇರುವ ಪಂಚೆ, ಮೇಲ್ಭಾಗದಲ್ಲಿ ಜುಬ್ಬದಂತೆ ಕಾಣುವ ವಸ್ತ್ರ, ಎಡಬಲದ ತೋಳಿನಿಂದ ಕೆಳಕ್ಕೆ ಇಳಿದಿರುವ ಶಲ್ಯ; ಇವೆಲ್ಲಾ ಜೀಸಸ್‍ಗೆ ಒಂದು ಸರಳ ಹಾಗೂ ಸುಂದರವಾದ ರೂಪವನ್ನು ತಂದಿದೆ. ಇಷ್ಟು ಬೃಹದಾಕಾರದ ಮೂರ್ತಿಯಲ್ಲಿ ಭಾವನೆಗಳನ್ನು ತಂದಿರುವುದು ಶ್ಲಾಘನೀಯ.

 

P1010175

ಯುರೋಪ್ ಮತ್ತು ಇಂಗ್ಲೆಂಡಿನಲ್ಲಿ ಹಲವಾರು ಚರ್ಚುಗಳನ್ನು ಕಂಡಿದ್ದ ನನ್ನ ಮನಸ್ಸಿನಲ್ಲಿ ಜೀಸಸ್ ಎಂದಾಕ್ಷಣ ಮೂಡುವ ಚಿತ್ರವೆಂದರೆ ಶಿಲುಬೆಗೆ ಏರಿ ಮುಳ್ಳಿನ ಕಿರೀಟ ಧರಿಸಿ, ಕೈ ಪಾದಗಳಿಂದ ರಕ್ತಸ್ರಾವವಾಗಿ, ಕ್ಷೀಣವಾಗಿ, ಯಾತನೆಯಿಂದ ನರಳುತ್ತಿರುವ ಅಸಹಾಯಕ ಮೂರ್ತಿ ಎನ್ನಬಹುದು. ಇದು ಭಕ್ತಿಗಿಂತ ಅನುಕಂಪ ಮತ್ತು ಮರುಕ ಹುಟ್ಟಿಸುವ ಚಿತ್ರ. ಆದರೆ ಅಂದು ನಾನು ಕಂಡ ಜೀಸಸ್ ತನ್ನ ಸಾಂಪ್ರದಾಯಕ ಸ್ವರೂಪವನ್ನು ತೊರೆದು ಇಲ್ಲಿ ಶಾಂತಿದೂತನಂತೆ ಕಾಣುತ್ತಾನೆ. ಇದು ಕೇವಲ ಕಲಾತ್ಮಕ ಆಕೃತಿ. ಹೀಗಾಗಿ ಇಲ್ಲಿ ಯಾವ ಪೂಜೆ ಪುನಸ್ಕಾರಗಳಿಲ್ಲ. ಆಧಾರ ಪೀಠದ ಕೆಳಗೆ ಒಂದು ಚಾಪಲ್ (ಪೂಜಾ ಮಂದಿರ) ಇದ್ದು ಇಲ್ಲಿ ಕಾಥೊಲಿಕ್ ಮದುವೆ ನಾಮಕರಣಗಳನ್ನು ಮಾಡುವುದಕ್ಕೆ ಅವಕಾಶವಿದೆ. ಈ ಮೂರ್ತಿಯನ್ನು ಕಡೆದ ಶಿಲ್ಪಿ ಫ್ರೆಂಚ್ ದೇಶದ ಮಾಕ್ಸಿಮಿಲಿಯಂ ಪಾಲ್ ಲ್ಯಾಂಡೊಸ್ಕಿಹಾಗೂ ಇದನ್ನು ನಿಲ್ಲಿಸಲು ಬೇಕಾದ ತಂತ್ರಜ್ಞಾನವನ್ನು ಒದಗಿಸಿದ ವ್ಯಕ್ತಿ ಹೈಟೂರ್ ಡಿ ಸಿಲ್ವ ಕೊಸ್ಟಾ ಎಂಬ ಬ್ರೆಜಿಲ್ ಎಂಜಿನೀಯರ್. ಮೂರ್ತಿಯ ಮುಖವನ್ನು ರೂಪಿಸಿದ್ದು ರೋನಿಯಾದ ಲಿಯಾನಿಡ್. ಜೀಸಸ್‍ನ ಹೊರಚಾಚಿದ ಕೈಗಳು 92 ಅಡಿ ಉದ್ದವಿದ್ದು ಒಟ್ಟಾರೆ 635ಮೆಟ್ರಿಕ್ ಟನ್ ತೂಕವಿದೆ. ಮೂರ್ತಿಯನ್ನು ಕಾಂಕ್ರೀಟ್ ಮತ್ತು ಸೋಪ್‍ಸ್ಟೋನ್ ಕಲ್ಲುಗಳಿಂದ ಕೆತ್ತಲಾಗಿದೆ. ಜೀಸಸ್ ಸ್ಮಾರಕವನ್ನು ಕಾರ್ಕೊವಾಡೊ ಬೆಟ್ಟದ ಮೇಲೆ ಕೂರಿಸುವ ಆಲೋಚನೆ 1850ರಲ್ಲಿ ಪ್ರಸ್ತಾಪಿತವಾಗಿದ್ದರೂ ಕೊನೆಗೆ 1920ರಲ್ಲಿ ಹಣ ಮತ್ತು ಅನುಮೋದನೆ ಸಹಿಗಳನ್ನು ಸಂಗ್ರಹಿಸಿ 1922ರಲ್ಲಿ ಕೆಲಸ ಆರಂಭವಾಯಿತು. ಮುಂದಿನ ಒಂಬತ್ತು ವರ್ಷದಲ್ಲಿ ಮೂರ್ತಿ ಸಿದ್ಧವಾಗಿ 12ನೇ ಅಕ್ಟೋಬರ್ 1931ರಲ್ಲಿ ಕ್ರೈಸ್ಟ್ ದಿ ರಿಡೀಮರ್ ಅನಾವರಣಗೊಂಡಿತು. 2008 ಫೆಬ್ರವರಿ ತಿಂಗಳಲ್ಲಿ ಸಿಡಿಲು ಬಡಿದು ಮೂರ್ತಿಯ ತಲೆ ಹುಬ್ಬು ಮತ್ತು ಕೈಗಳಿಗೆ ಹಾನಿ ಉಂಟಾಗಿ ದುರಸ್ತಿ ಮಾಡಲಾಯಿತು. ಸಿಡಿಲನ್ನು ಹೀರುವ ತಂತ್ರಜ್ಞಾನವನ್ನು ಮೂರ್ತಿಯೊಳಗೆ ಇಟ್ಟಿದ್ದರೂ ಆಗಾಗ್ಗೆ ಸಿಡಿಲಿನಿಂದ ಉಂಟಾಗುವ ಹಾನಿಯನ್ನು ರಿಪೇರಿ ಮಾಡಲಾಗುತ್ತಿದೆ. ಒಬ್ಬ ಕುತಂತ್ರಿ ಜೀಸಸ್ ಬಾಹುಗಳ ಮೇಲೆ ಪೇಂಟ್ ಸ್ಪ್ರೇ ಮಾಡಿ ವಿಕೃತಗೊಳಿಸಿ ಆಮೇಲೆ ಶರಣಾಗತನಾದ. ಪ್ಯಾರಿಸ್ ನಗರಕ್ಕೆ ಐಫೆಲ್ ಟವರ್, ಲಂಡನ್‍ಗೆ ಬಿಗ್‍ಬೆನ್ ಗಡಿಯಾರ ಸ್ತಂಭ ಮತ್ತು ನಮ್ಮ ಬೆಂಗಳೂರಿಗೆ ವಿಧಾನಸೌಧ ಹೇಗೊ ಹಾಗೆ ಕ್ರೈಸ್ಟ್ ದಿ ರಿಡೀಮರ್ ವಿಗ್ರಹ ರಿಯೊ ನಗರದ ಹೆಮ್ಮೆಯ ಕುರುಹು ಎನ್ನಬಹುದು. ಈ ಶಿಲಾಕೃತಿಯನ್ನು ಜುಲೈ 7ನೇ ತಾರೀಕು 2007ರಲ್ಲಿ ಪ್ರಪಂಚದಲ್ಲಿನ ಆಧುನಿಕ ಏಳು ವಿಸ್ಮಯಗಳಲ್ಲಿ ಒಂದು ಎಂದು ಪರಿಗಣಿಸ ಲಾಗಿದ್ದು ಇದರ ಪಟ್ಟಿಯಲ್ಲಿ ತಾಜ್‍ಮಹಲ್, ಮಾಚುಪೀಚು, ಪಿರಮಿಡ್‍ಗಳು, ಹಾಗೂ ಇತರ ಸ್ಥಳಗಳು ಸೇರಿವೆ.

ನಾವು ಕ್ರೈಸ್ಟ್ ದಿ ರಿಡೀಮರ್ ತಲುಪುವ ವೇಳೆಗೆ ಸಾಕಷ್ಟು ಪ್ರವಾಸಿಗಳು ಆಗಮಿಸಿದ್ದರು. ಎಲ್ಲರಿಗೂ ಜೀಸಸ್ ಮೂರ್ತಿಯ ಮುಂದೆ ತಾವು ಕೈಚಾಚಿ ಫೋಟೋ ತೆಗೆಸಿಕೊಳ್ಳುವ ತವಕ. ಹೀಗಾಗಿ ಅಲ್ಲಿ ಚಾಚಿದ ಕೈಗಳ ಜನಜಾತ್ರೆ! ಒಬ್ಬರ ಕೈ ಇನ್ನೊಬ್ಬರ ಕೈ, ಗಲ್ಲ ಮತ್ತು ಕಿವಿಗಳನ್ನು ತಗುಲಿ ಕೆಲವರಿಗೆ ಮನಸ್ತಾಪ ಉಂಟಾಗಿತ್ತು. ಈ ಗಲಿಬಿಲಿಯಲ್ಲೇ ನಾವು ಕೂಡಾ ಕೈ ಚಾಚಿ ಫೋಟೋ ತೆಗೆಸಿಕೊಂಡು, ವಿಶಾಲ ಜಗುಲಿಯ ಮುಂದಿನ ಮೆಟ್ಟಿಲುಗಳು ಇಳಿದು ಇನ್ನೊಂದು ಕೆಳ ಜಗಲಿಯನ್ನು ತಲುಪಿದೆವು. ಇಲ್ಲಿ ನಿಂತು ಸಮುದ್ರದ ಕಡೆ ಕಣ್ಣು ಹಾಯಿಸಿದೆವು. ದೂರದಲ್ಲಿ ಪ್ರಶಾಂತವಾದ ನೀಲಿ ಸಮುದ್ರ, ಅದರ ಅಂಚಿನಲ್ಲಿ ಬಿಳಿ ಮರಳು, ಮುರಿಯುವ ತೆರೆಗಳ ನೊರೆ, ಕಾಲಡಿಯಲ್ಲಿ ಸುತ್ತ ಕಣಿವೆ, ಅದರಲ್ಲಿ ಕಣ್‍ತಣಿಯುವ ಹಸಿರು, ಮುಂದಿನ ಕಣಿವೆಗಳ ಏರುಪೇರಿನಲ್ಲಿ ಏರಿ ಇಳಿಯುವ ಮನೆಗಳು, ಫವೇಲಾಗಳು (ಸ್ಲಂ), ಸಹಸ್ರಾರು ಬಹು ಅಂತಸ್ತಿನ ಬಿಳಿ ಕಟ್ಟಡಗಳು ಹೀಗೆ ರಿಯೋ ನಗರದ ವಿಹಂಗಮ ನೋಟ ಕಾಣುತ್ತದೆ. ಬಲಗಡೆ ಕಣಿವೆಯಲ್ಲಿ ನಾವು ಕೆಳಗೆ ನೋಡಿದ ದೊಡ್ಡ ಸರೋವರ, ಅದರ ಹಿಂದೆ ಕೋಪಕಬಾನ ಮತ್ತು ಇಪನೀಮ ಬೀಚ್ ಕಾಣತೊಡಗಿದವು. ಎಡಕ್ಕೆ ನೋಡಿದಾಗ ನಗರದ ಉತ್ತರ ಭಾಗದ ಮಾರಕಾನಾ ಸ್ಟೇಡಿಯಂ ಮತ್ತು ಹೆದ್ದಾರಿ ಕಂಡವು. ನಮ್ಮ ನೇರ ದೃಷ್ಟಿಯಲ್ಲಿ ಸಮುದ್ರದ ನೀಲಿಯಿಂದ ಶಿವಲಿಂಗದಂತೆ ಉದ್ಭವಿಸಿದ ಶುಗರ್ ಲೋಫ್ ಬೋಳು ಬೆಟ್ಟ (Sugar loaf Mountain)ಬಹಳ ಮೋಹಕವಾಗಿ ಕಾಣುತ್ತಿತ್ತು. ಅದರ ಆಚೆ ಈಚೆ ಸಮುದ್ರದಿಂದ ನಡುಗಡ್ಡೆಗಳಂತೆ ಕಾಣುವ ಹಲವಾರು ಬೆಟ್ಟಗಳಿವೆ. ಈ ರೀತಿಯ ಸಾಗರ ಮತ್ತು ಎತ್ತರದ ಬೆಟ್ಟಗಳ ಸಮಾಗಮ ರಿಯೋ ನಗರಕ್ಕೆ ಅಪೂರ್ವ ಸೌಂದರ್ಯ ಮತ್ತು ವಿಶಿಷ್ಟತೆಯನ್ನು ಒದಗಿಸಿದೆ. ನಾನು ಇಲ್ಲಿ ಕಂಡ ಈ ಒಂದು ಸುಂದರ ದೃಶ್ಯ ನನ್ನಲ್ಲಿನ ಕಾವ್ಯ ಪ್ರಜ್ಞೆಯನ್ನು ಬಡಿದೆಬ್ಬಿಸಿ ಒಂದು ಕವನಕ್ಕೆ ಸ್ಫೂರ್ತಿಯನ್ನು ಒದಗಿಸಿತು. “ದೊಡ್ಡ ಬೆಟ್ಟದ ತುತ್ತ ತುದಿಯಲಿ ನಿಂತ ಏಸುವ ನೋಡಿರಿ’’ ಎಂಬ ಪದ್ಯದ ಸಾಲು ಮೂಡಿಬಂದು ಪದ್ಯ ಹೀಗೆ ರೂಪುಗೊಂಡಿತು. ಅದಕ್ಕೆ ರಿಯೋ ಡಿ ಜನೀರೊ ಸ್ಮರಣೆ ಎಂಬ ಶೀರ್ಷಿಕೆ ಕೊಟ್ಟಿದ್ದೇನೆ. ಆ ಪದ್ಯ ಹೀಗಿದೆ :

ದೊಡ್ಡ ಬೆಟ್ಟದ ತುತ್ತ ತುದಿಯಲಿ

ನಿಂತ ಯೇಸುವ ನೋಡಿರಿ

ಸುತ್ತ ಹಬ್ಬಿದ ಕಣಿವೆ ತಳದಲಿ

ಹಚ್ಚ ಹಸುರಿನ ವನಸಿರಿ

 

ಏಳು ಬೀಳುವ ನೀಲಿ ತೆರೆಗಳ

ಅಂಚಿನಲ್ಲಿ ನಲಿಯಿರಿ

ನಿತ್ಯ ನಡೆಯುವ ಪ್ರಕೃತಿ ಪೂಜೆಗೆ

ಭಾವದಿಂದಲಿ ತಣಿಯಿರಿ

 

ಸೋರುತಿರುವ ಸೂರಿನಡಿಯಲಿ

ಹಸಿದ ಹೊಟ್ಟೆಗೆ ಮರುಗಿರಿ

ಅಂದ ಚಂದದ ರಿಯೊ ನಗರವ

ಮನದೊಳಿಟ್ಟು ಸ್ಮರಿಸಿರಿ.

 

ನಿಸರ್ಗಪ್ರೇಮ ಮತ್ತು ಫೋಟೋ ತೆಗೆಯುವ ಖಯಾಲಿ ಇರುವ ನನ್ನಂತ “ಹುಚ್ಚು”’ ಜನಗಳಿಗೆ ಇಲ್ಲಿ ಇನ್ನಿಲ್ಲದ ಫೋಟೋ ಅವಕಾಶಗಳು! ಸಂತೃಪ್ತಿ ತರುವಷ್ಟು ಫೋಟೋ   ವೀಡಿಯೊಗಳನ್ನು ತೆಗೆದುಕೊಂಡು ಇನ್ನೂ ಹೆಚ್ಚು ಹೊತ್ತು ಅಲ್ಲಿ ಕಾಲಕಳೆಯಬೇಕೆಂಬ ಆಸೆ ಇದ್ದರೂ ಮಾರ್ಗದರ್ಶಿಯ ಒತ್ತಡದಿಂದ ರೈಲ್ವೆ ನಿಲ್ದಾಣದ ಕಡೆ ನಡೆಯತೊಡಗಿದೆವು. ಹೆಲನ್ ತಿಳಿಸಿದ ಪ್ರಕಾರ ವಿಶೇಷ ದಿನಗಳ ರಾತ್ರಿಯಲ್ಲಿ ಮೂರ್ತಿಯನ್ನು ಬಣ್ಣ ಬಣ್ಣಗಳ ಫ್ಲಡ್ ಲೈಟ್‍ನಿಂದ ಅಲಂಕರಿಸುತ್ತಾರೆ. ಬ್ರೆಜಿಲ್ ಫುಟ್‍ಬಾಲ್ ವಲ್ರ್ಡ್ ಕಪ್ ಗೆದ್ದಾಗ ಬ್ರೆಜಿಲ್ ಬಾವುಟದ ಬಣ್ಣಗಳಿಂದ ಜೀಸಸ್‍ಗೆ ಅಲಂಕಾರ ಮಾಡಲಾಗುತ್ತದೆ. ಹಾಗೆ ಇತ್ತೀಚಿನ ದಿನಗಳಲ್ಲಿ ಪ್ಯಾರಿಸ್ ನಗರದ ಮೇಲೆ ಭಯೊತ್ಪಾದಕರು ಹಿಂಸಾಕೃತ್ಯಗಳನ್ನು ನಡೆಸಿದಾಗ ಫ್ರಾನ್ಸ್ ಬಾವುಟದ ಬಣ್ಣಗಳಾದ ನೀಲಿ, ಬಿಳಿ ಮತ್ತು ಕೆಂಪು ಬಣ್ಣಗಳ ಬೆಳಕನ್ನು ಜೀಸಸ್ ಮೇಲೆ ಚೆಲ್ಲಿ ಮೂರ್ತಿಗೆ `ಹೊದಿಸಿ’ದ ಫ್ರೆಂಚ್ ಬಾವುಟ ಅನುಕಂಪೆಯ ಸಂಕೇತವಾಗಿತ್ತು.

ನಾವು ಬೆಟ್ಟದಿಂದಿಳಿಯುವ ವೇಳೆಗೆ ಭೋಜನದ ಸಮಯವಾಗಿತ್ತು. ಅಂದು ಭಾನುವಾರ. ಅಂದು ಪೋರ್ಚುಗೀಸ್ ಜನರು ಬಹಳ ವಿರಾಮದ ಭೋಜನ ಪಾನೀಯ ಮಾಡುವುದು ಸಾಮಾನ್ಯ. ಸಂಡೆ ಲಂಚ್ ಅನುಭವವನ್ನು ನಮಗೆ ಒದಗಿಸುವ ಉದ್ದೇಶದಿಂದ ನಮ್ಮ ಎಂ.ಟಿ.ಆರ್ ಹೋಟೆಲ್‍ಗೆ ಹೊಲಿಸಬಹುದಾದ ಒಂದು ಸ್ಥಳೀಯ ಜನಪ್ರಿಯ ಪೋರ್ಚುಗೀಸ್ ರೆಸ್ಟೊರಾಂಟ್‍ನಲ್ಲಿ ನಮಗೆ ಸ್ಥಳ ಕಾದಿರಿಸಲಾಗಿತ್ತು. ಇಲ್ಲಿ ಸ್ಥಳೀಯರು ಅವರ ಸಂಸಾರದೊಡನೆ ಒಳ್ಳೆಯ ಉಡುಗೆ ತೊಡುಗೆಗಳನ್ನು ಧರಿಸಿ ನಮ್ಮ ಮದುವೆ ಮನೆಗಳಲ್ಲಿ ಕಾಣುವಂತೆ ಸಾಲಾಗಿ ಜೋಡಿಸಿದ ಮೇಜು ಕುರ್ಚಿಗಳಲ್ಲಿ ಕುಳಿತು ಹರಟುತ್ತ, ಬೀರ್ ವೈನ್‍ಗಳನ್ನು ಹೀರುತ್ತಾ ನಿಧಾನದಲ್ಲಿ ಊಟ ಶುರು ಮಾಡಿದ್ದರು. ಇವರು ಮುಖ್ಯವಾಗಿ ಮಾಂಸಾಹಾರಿಗಳಾದರೂ ಜೊತೆಗೆ ಬಹಳಷ್ಟು ಹಸಿರು ತರಕಾರಿ ಮತ್ತು ತರಾವರಿ ಬ್ರೆಡ್, ಆಲೂಗಡ್ಡೆ ಚಿಪ್ಸ್ ತಿನ್ನುವುದರಿಂದ ಸಸ್ಯಾಹಾರಿಗಳಾದ ನಮಗೆ ತೊಂದರೆಯಾಗಲಿಲ್ಲ. ಇಲ್ಲಿಯ ಸ್ಥಳೀಯ ಎಲೆ ತರಕಾರಿ, ಪೆಪ್ಪರ್, ಸೌತೆಕಾಯಿ, ಮತ್ತು  ಟೊಮೇಟೊ ಇವುಗಳ ಜೊತೆ ಬಹಳ ಸುಂದರವಾಗಿ ಅಲಂಕರಿಸಿದ ಕೌಂಟರ್‍ಗೆ ತೆರಳಿ ನಮಗೆ ಬೇಕಾದ ಆಯ್ಕೆ ಮಾಡಿ ಕೊಂಡು ತಟ್ಟೆಗೆ ಹಾಕಿಕೊಳ್ಳುವ ಸೆಲ್ಫ್ ಸರ್ವೀಸ್‍ಗೆ ಅವಕಾಶವಿತ್ತು. ತರಾವರಿ ಆಲಿವ್, ತರಕಾರಿ, ಬ್ರೆಡ್ ಮತ್ತು ಬೆಣ್ಣೆಯನ್ನು ಸವಿದೆವು. ಇಲ್ಲಿನ ಹಸಿ ತರಕಾರಿಗೆ ಅದರದೆ ಒಂದು ತಾಜಾ ರುಚಿಯಿದೆ ಎಂದು ಹೇಳಬಹುದು. ವೈನ್‍ಗಳು ಸಿಹಿಯಾಗಿ ಹದವಾಗಿದ್ದವು. ಇಲ್ಲಿ ಗಮನಿಸಿದ ವಿಶೇಷವೆಂದರೆ 4-5 ಕೇಜಿ ಮಾಂಸದ ಭಾರಿ ತುಂಡುಗಳನ್ನು ಒಂದು 3 ಅಡಿ ಭರ್ಜಿಯಲ್ಲಿ ತಿವಿದು ಏರಿಸಿಕೊಂಡು ಸೂಟ್ ಮತ್ತು ಬೋ ಟೈ ಧರಿಸಿದ್ದ ಸಿಬ್ಬಂದಿಗಳು ಕೈಯಲ್ಲಿ ಹರಿತವಾದ ಖಡ್ಗದಂತೆ ಕಾಣುವ ಉದ್ದದ ಚಾಕು ಹಿಡಿದು ಮೇಲೆ ಕೆಳಗೆ ಓಡಾಡುತ್ತಿದ್ದರು. ಬೇಕಾದವರಿಗೆ ಎಡಗೈಯಲ್ಲಿ ಹಿಡಿದಿದ್ದ ಮಾಂಸವನ್ನು ಬಲಗೈಯಲ್ಲಿದ್ದ ಚಾಕುವಿನಿಂದ ತರಿದು ಪ್ಲೇಟ್‍ಗೆ ಬೀಳುವಂತೆ ನೋಡಿಕೊಳ್ಳುತ್ತಿದ್ದರು. ಇಲ್ಲಿ ಭೋಜನ ಮಾಡುತ್ತಿದ್ದವರಿಗೆ ಯಾವ ರೀತಿಯ ಅವಸರವಿರಲಿಲ್ಲ. ಸಾಮಾನ್ಯವಾಗಿ 2-3 ತಾಸಿನ ವಿರಾಮ ಭೋಜನಗಳನ್ನು ಮುಗಿಸಿ ಕೊನೆಗೆ ಸ್ವೀಟ್, ಕೇಕ್ ಮತ್ತು ಇತರ ತಿನಿಸುಗಳನ್ನು ತಿಂದು ಕೈಕುಲಕಿ, ಹೆಂಗಸರನ್ನು ಅಪ್ಪಿ, ಲಘುವಾಗಿ ಕೆನ್ನೆಗೆ ಕೆನ್ನೆ ತಗುಲಿಸಿ ಮುತ್ತಿಡುವ ಶಬ್ದವನ್ನು ಮಾಡಿ ವಿರಮಿಸುತ್ತಿದ್ದರು. ಇಷ್ಟು ವಿರಾಮವಾದ ಭೋಜನ ಮುಗಿಸುವ ವೇಳೆಗೆ ಮಧ್ಯಾಹ್ನ ಮೂರು ಗಂಟೆಯಾಗಿತ್ತು. ಜೋರು ಬಿಸಿಲು ಮತ್ತು ಧಗೆ ಇದ್ದುದರಿಂದ ಸಾಕಾಗಿ ಹೋಟೆಲ್‍ಗೆ ತೆರಳಿ ಮಲಗಿಬಿಟ್ಟೆವು.

P1010194
                                                                                                        -ಡಾ. ಶಿವಪ್ರಸಾದ್ (ಚಿತ್ರ ಕೃಪೆ ಮತ್ತು ಬರಹ)