ಅನುಪಮ ನಿರಂಜನ – ಹೋರಾಟದ ಬದುಕು: ಡಾ. ರಾಮಶರಣ ಲಕ್ಷ್ಮೀನಾರಾಯಣ

ಲೇಖಕರು: ಡಾ. ರಾಮಶರಣ ಲಕ್ಷೀನಾರಾಯಣ

ಡಾ. ರಾಮಶರಣ ಲಕ್ಷ್ಮೀನಾರಾಯಣ ಅವರು ಅನಿವಾಸಿ ಬಳಗದಲ್ಲಿ ಬಹಳ ಸಕ್ರಿಯರು.  ಇತ್ತೀಚೆ ಜರುಗಿದ ಅನಿವಾಸಿಗಳ ಸಂವಾದದಲ್ಲಿ ಕನ್ನಡದ ಖ್ಯಾತ ಸಾಹಿತಿ, ಅನುಪಮಾ ನಿರಂಜನರ ಬಗ್ಗೆ ಮಾತಾಡಿ, ಅಂದಿನ ಮುಖ್ಯ ಅತಿಥಿಗಳಾದ ಸುಧಾ ಬರಗೂರ್ ಅವರು ತುಂಬ ಶ್ಲಾಘಿಸಲ್ಪಟ್ಟರು. ಆ ಭಾಷಣದ ಬರಹರೂಪ ಇಲ್ಲಿದೆ – ಸಂ 

೭೦-೮೦ ರ ದಶಕದಲ್ಲಿ ಬೆಳೆದ ನಮ್ಮ ಪೀಳಿಗೆಯವರಿಗೆ ಕನ್ನಡ ಓದುವ ಗೀಳು ಬೆಳೆಸಿದವರಲ್ಲಿ ಅನುಪಮ ನಿರಂಜನ ಒಬ್ಬರು. ಅವರ ಕಾದಂಬರಿ-ಕಥೆಗಳು ನಾಡಿನ ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ಬಂದ ಧಾರಾವಾಹಿಗಳ ಪುಟಗಳನ್ನೂ ಕತ್ತರಿಸಿ, ಒಟ್ಟಾಗಿ ಹೊಲೆದು ಪುಸ್ತಕ ಮಾಡಿಡುವುದು ನನ್ನಮ್ಮನ ಹವ್ಯಾಸ. ಅಂತಹ ಕಂತೆಗಳಲ್ಲಿ ಅನುಪಮಾ ನಿರಂಜನರ “ಹಿಮದ ಹೂ” ಕಾದಂಬರಿ ಓದಿದ ನೆನಪು. ಅವರು ಸ್ತ್ರೀವಾದಿ. ಅವರ ಮನೋಗುಣಕ್ಕೆ ತಕ್ಕುದಾಗಿ ಈ ಕೃತಿಯ ಪ್ರಧಾನ ಪಾತ್ರಗಳು ಒಬ್ಬ ಶಿಕ್ಷಕಿ ಹಾಗೂ ಆಕೆಯ ವಿದ್ಯಾರ್ಥಿನಿ. ಈ ವಿದ್ಯಾರ್ಥಿನಿ ರಕ್ತ ಕ್ಯಾನ್ಸರಿನಿಂದ ಬಳಲುವಾಗ, ನಾಯಕಿ ಹಾಗೂ  ಬಾಲಕಿಯ ನಡುವಿನ ಸಂಬಂಧ, ಮಾನಸಿಕ ತುಮುಲಗಳನ್ನು ಸೂಕ್ಷ್ಮವಾಗಿ ಅನ್ವೇಷಿಸುತ್ತ, ಓದುಗರನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುವ ಶೈಲಿ ಮನ ಮುಟ್ಟಿತ್ತು. ಅನುಪಮಾ ಅವರ ಇತರ ಕೃತಿಗಳಲ್ಲಿ ಬರುವಂತೆಯೇ ಇಲ್ಲೂ ಅವರ ವೈದ್ಯ ವೃತ್ತಿ ಮತ್ತು ಜೀವನಾನುಭವಗಳು ಮೇಳೈಸಿವೆ.

ಮಲೆನಾಡು, ಕನ್ನಡ ಸಾಹಿತ್ಯಕ್ಕೆ ಕೊಟ್ಟ ಕಣ್ಮಣಿಗಳಲ್ಲಿ ಅನುಪಮಾ ಒಬ್ಬರು. ೧೯೩೪ ರಲ್ಲಿ ತೀರ್ಥಹಳ್ಳಿಯಲ್ಲಿ ವೆಂಕಟಲಕ್ಷ್ಮಿಯಾಗಿ ಅವರ ಜನನ. ನನಗೆ ನೆನಪಿದ್ದಂತೆ ಅವರ ತಂದೆ ಸರ್ಕಾರಿ ಉದ್ಯೋಗಿ. ಮಹಾ ಕಟ್ಟುನಿಟ್ಟಿನ ಮನುಷ್ಯ. ಅನುಪಮ ಅವರು ಓದಿನಲ್ಲಿ ಮುಂದು. ಚಿಕ್ಕಂದಿನಿಂದಲೇ ಅವರದ್ದು ಹೋರಾಟದ ಮನೋಭಾವ. ಗಂಡು-ಹೆಣ್ಣು ಮಕ್ಕಳ ನಡುವಿನ ತಾರತಮ್ಯವನ್ನ ಕಟುವಾಗಿ ವಿರೋಧಿಸಿದ್ದು ೨೧ನೇ ಶತಮಾನಕ್ಕೆ ತಕ್ಕುದಾದೀತು.

ಅನುಪಮಾ ನಿರಂಜನ (ಕೃಪೆ: ವಿಕಿಪೀಡಿಯ)

೧೯೫೬ರಲ್ಲಿ ಅವರು ಮೈಸೂರಿನ ವೈದ್ಯ ಶಾಲೆಯಿಂದ ಎಂ.ಬಿ.ಬಿ.ಎಸ್ ಪದವೀಧರೆಯಾಗಿ ಹೊರಬಿದ್ದರು. ಅದಾಗಲೇ ಅವರು ಪತ್ರಕರ್ತ-ಲೇಖಕ ನಿರಂಜನರ ಸಖ್ಯ ಬೆಳಸಿದ್ದರು. ಪದವೀಧರರಾದ ವರ್ಷವೇ ಮನೆ ಜನರ ವಿರೋಧವಿದ್ದರೂ ನಿರಂಜನರೊಡನೆ ಮದುವೆಯಾದರು. ನಿರಂಜನರು ಮೆಲ್ವರ್ಗದವರು, ತಂದೆಯಿಲ್ಲದೇ ಹುಟ್ಟಿದವರು. ಅನುಪಮಾ, ನೇಕಾರ ಮನೆತನದವರು. ಅಂದಿನ ಕಾಲದಲ್ಲೇ ಜಾತಿ, ಅಂತಸ್ತುಗಳನ್ನು ಮೆಟ್ಟಿ, ಬಂಧು- ಬಾ೦ಧವರ ವಿರೋಧವನ್ನು ಎದುರಿಸಿ ನಿಲ್ಲುವ ಮನೋಸ್ಥೈರ್ಯವನ್ನು ತೋರಿದ್ದಾರೆ.

ನಿರಂಜನ, ಅನುಪಮಾ ಅವರದ್ದು ಮಾದರಿ ದಾಂಪತ್ಯವೆಂದೇ ಹೇಳಬಹುದು. ಇಬ್ಬರೂ ಒಬ್ಬರಿಗೊಬ್ಬರು ಸಮ್ಮಾನ ಗೌರವಗಳನ್ನು ಕೊಟ್ಟು-ಪಡೆದವರು. ಅವರದ್ದು ಕಮ್ಯುನಿಸ್ಟ್-ಎಡಪಂಥೀಯ ಧೋರಣೆ. ಅದರಂತೇ ಬಾಳಿದವರು. ವೈದ್ಯರಾದರೂ  ಅವರ ಜೀವನ ಆಡಂಬರದ್ದಾಗಿರಲಿಲ್ಲ. ಕಾಲಿಗೊಂದು, ಕೈಗೊಂದು ಚಾಕರರಿರಲಿಲ್ಲ.

ಎಣಿಕೆಯಂತೇ ನಿರಂಜನ, ಅನುಪಮ ಅವರ ಬರಹಗಳ ಪ್ರಥಮ ನಿರ್ದಯಿ ವಿಮರ್ಶಕರಾಗಿದ್ದರು; ಅಂತೆಯೇ ಪ್ರೋತ್ಸಾಹಕರೂ ಆಗಿದ್ದರು. ಇದನ್ನು ಅನುಪಮಾ ಅವರೇ ತಮ್ಮ ಆತ್ಮಕಥೆ “ನೆನಪು: ಸಿಹಿ-ಕಹಿ”ಯಲ್ಲಿ ಹೇಳಿದ್ದಾರೆ. ಇವನ್ನು ಹೀರಿ ಬೆಳೆದ ಅನುಪಮಾ ತಮ್ಮದೇ ಶೈಲಿಯನ್ನು ಬೆಳೆಸಿಕೊಂಡರು. ಸ್ತ್ರೀ ವಾದ, ಅಬಲೆಯರ ಶೋಷಣೆ, ನವ್ಯತೆ, ಬಂಡಾಯ ಇತ್ಯಾದಿ ಮನೋಧರ್ಮಗಳನ್ನು ಒಳಗೂಡಿದ ಕೃತಿಗಳನ್ನು ರಚಿಸಿ, ಸ್ವಂತಿಕೆಯನ್ನು ಬೆಳೆಸಿಕೊಂಡವರು. ವೈದ್ಯಕೀಯ ಜ್ಞಾನ ಬಳಸಿ, ಮನೋವೈಜ್ಞಾನಿಕ ಕೃತಿಗಳ ಸೊಬಗನ್ನು ಅವರು ಕನ್ನಡಕ್ಕಿತ್ತರು.

ಅನುಪಮಾ ಅವರ ಬದುಕು ಹೂವಿನ ಹಾಸಿಗೆಯಾಗಿರಲಿಲ್ಲ. ಸಂಬಂಧಿಕರ ವಿರೋಧ ಕಟ್ಟಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅವರು ಜನಸೇವೆ, ಸಾಹಿತ್ಯ ಸೇವೆಗಳನ್ನೂ ಕೊನೆಯ ಉಸಿರಿನವರೆಗೆ ಮಾಡಿದರು. ೧೯೭೨ರಲ್ಲಿ ಅವರ ಸಂಗಾತಿ ನಿರಂಜನ ಪಾರ್ಶ್ವ ವಾಯುವಿಗೆ ತುತ್ತಾಗಿ ಹಾಸಿಗೆ ಹಿಡಿದರು. ಅನುಪಮಾ, ವೃತ್ತಿ, ಮಕ್ಕಳ ಜವಾಬ್ದಾರಿ, ಮನೆ ನಿರ್ವಹಣೆಗಳನ್ನು ಹೊತ್ತು, ಅವಿರತ ಸಾಹಿತ್ಯ ಸೇವೆ ಮಾಡಿ ೨೫ ಕಾದಂಬರಿ, ೯ ಕಥಾ ಸಂಕಲನಗಳನ್ನು ಪ್ರಕಟಿಸಿದರು.

ಕೃಪೆ: ಕನ್ನಡ ಸ್ಟೋರ್

ಅವರ “ದಿನಕ್ಕೊಂದು ಕಥೆ” ಆಗ ಮಕ್ಕಳಿಗೆಲ್ಲ ಜನಪ್ರಿಯವಾದ ಕೃತಿ. ಮಕ್ಕಳಿಗಾಗಿ ಕಥೆಗಳನ್ನು ಬರೆಯಲು ಲೇಖನಿಯೆತ್ತಿಕೊಂಡಾಗ ನಿರಂಜನರು, “೩೬೫ ಕಥೆಗಳನ್ನು ಬರೆಯಿರಿ, ದಿನಕ್ಕೊ೦ದಾಗುತ್ತದೆ”, ಎಂದರಂತೆ. ಅಂತೆಯೇ  ಪ್ರಪಂಚದ ಎಲ್ಲೆಡೆಯ ಕಥೆಗಳನ್ನು ಬರೆದು, ಅವನ್ನು ಚೈತ್ರದಿಂದ ಫಾಲ್ಗುಣದವರೆಗೆ ೧೨ ಸಂಪುಟಗಳನ್ನಾಗಿಸಿ ಪ್ರಕಟಿಸಿದರು. ಅಸಂಖ್ಯಾತ ಕನ್ನಡ ಕಣ್ಮಣಿಗಳು ಇವನ್ನು ಓದಿ ತಮ್ಮ ಅರಿವಿನ ಪರಿಧಿಯನ್ನು ಹಿಗ್ಗಿಸಿಕೊಂಡಿದ್ದಾರೆ. ಇಂದಿಗೂ ಈ ಕಥೆಗಳನ್ನು ಮಕ್ಕಳಿಗೆ ಓದಿ ರಂಜಿಸಬಹುದು, ನಾವೂ  ಓದಿ ಬಾಲ್ಯಕ್ಕೆ ಮರಳಿ ಪುಳಕಿತರಾಗಬಹುದು.

ವೈದ್ಯಕೀಯ ಸಾಹಿತ್ಯಕ್ಕೆ ಅನುಪಮಾ ಅವರ ಕೊಡುಗೆ ಅಪಾರ. ಮುಖ್ಯವಾಗಿ ಇದರಲ್ಲೂ ತಾಯಿ, ಮಗುವಿನ ಸ್ವಾಸ್ಥ್ಯಕ್ಕೆ ಸಂಬಂಧಿಸಿದ, ವನಿತೆಯರ ಆರೋಗ್ಯ, ದಾಂಪತ್ಯ ವಿಜ್ಞಾನಕ್ಕೆ ಕೈಪಿಡಿಯಾಗುವ ಕೃತಿಗಳೇ ಹೆಚ್ಚು. ಈ ಕೃತಿಗಳು ಪತ್ರಿಕೆಗಳಲ್ಲಿ ಸರಣಿಯಾಗಿ ಬಂದು ಕನ್ನಡದ ಮೂಲೆ -ಮೂಲೆಗಳನ್ನು ತಲುಪಿವೆ. ೧೯೭೮ರಲ್ಲಿ ಸ್ತನದ ಕ್ಯಾನ್ಸರ್ ಅವರನ್ನು ತಟ್ಟುತ್ತದೆ. ಇದರಿಂದಾಗಿಯೇ ಅವರು ೩ ಸಲ ಶಸ್ತ್ರ ಚಿಕಿತ್ಸೆಗೊಳಗಾಗುತ್ತಾರೆ. ಅನಾರೋಗ್ಯದ ನಡುವೆಯೇ ಅವರು ಕ್ಯಾನ್ಸರ್ ಬಗ್ಗೆ “ಕ್ಯಾನ್ಸರ್ ಜಗತ್ತು” ಎಂಬ ಪುಸ್ತಕವನ್ನು ಬರೆಯುತ್ತಾರೆ.

ಅನುಪಮಾ ಅವರಿಗೆ ಪ್ರವಾಸದ ಹುಚ್ಚಿತ್ತು. ಅಮೇರಿಕ, ಯುರೋಪ್ ಸುತ್ತಿ ಅವರು “ಅಂಗೈಯಲ್ಲಿ ಯುರೋ-ಅಮೇರಿಕ” ಎಂಬ ಪುಸ್ತಕ ಬರೆದರು. ಈ ಪ್ರವಾಸಗಾಥೆ “ವನಿತಾ” ಎಂಬ ಮಾಸಿಕದಲ್ಲಿ ಹರಿದು ಬಂತು. ಅದನ್ನು ಓದಿದ್ದು ನನಗಿನ್ನೂ ಹಚ್ಚ ಹಸಿರಾಗಿದೆ. ಅವರು ಲಂಡನ್ ನಗರಕ್ಕೆ ಬಂದಾಗ, ಅವರಿಗೆ ಕೈಯಲ್ಲಿ ಕೊಡೆಯಿಟ್ಟುಕೊಂಡೇ ತಿರುಗಿ, ಯಾವಾಗ ಇಲ್ಲಿ ಮಳೆ ಬರುತ್ತೋ ಊಹಿಸಲಸಾಧ್ಯ ಎಂದು ಕಿವಿ ಮಾತು ಹೇಳಿದ್ದರಂತೆ. ನನಗೆ ಈಗಲೂ ಈ ಮಾತು ನೆನಪಾಗುತ್ತಲೇ ಇರುತ್ತದೆ, ಇಲ್ಲಿನ ಹವಾಮಾನ ಅನುಭವಿಸಿ.

ಹುಟ್ಟಾ ಹೋರಾಟಗಾರ್ತಿ ಅನುಪಮಾ, ಸಾಹಿತ್ಯ ಕ್ಷೇತ್ರದಲ್ಲಿನ ಅಸಮಾನತೆಯ ವಿರುದ್ಧವೂ ಹೋರಾಡಿದಾದರು. ಅರ್ಹರಾದರೂ  ಅವರಿಗೆ ಸಂದ ಬೇಕಾದ ಪ್ರಶಸ್ತಿಗಳು ಸಿಗದೇ ಹೋಗಿರಬಹುದು. ಸಾಹಿತ್ಯ ಅಕಾಡೆಮಿ, ಸೋವಿಯತ್ ಲ್ಯಾ೦ಡ್ ನೆಹರೂ ಪ್ರಶಸ್ತಿಗಳು ಅವರನ್ನರಸಿ ಬಂದವು. ಕ್ಯಾನ್ಸರ್ ವಿರುದ್ಧ ಹೋರಾಡುತ್ತ, ೧೯೯೧ರಲ್ಲಿ ಓಗೊಡದ ನಾಡಿಗೆ ತೆರಳಿದರು. ೨೦೧೦ರಲ್ಲಿ ಕರ್ನಾಟಕ ಸರ್ಕಾರ ಅವರ ನೆನಪಿನಲ್ಲಿ ಕನ್ನಡ ವೈದ್ಯ ಸಾಹಿತ್ಯ ಪುರಸ್ಕಾರವನ್ನು ಪ್ರಾರಂಭಿಸಿದ್ದು ಸೂಕ್ತ.

ನೇಮಿಚಂದ್ರ : ನಮ್ಮ ನಡುವಿನ ಕನ್ನಡದ ವಿಶಿಷ್ಟ ಲೇಖಕಿ ಮತ್ತು ವಿಜ್ಞಾನಿ – ವಿನತೆ ಶರ್ಮ

ಲೇಖಕರು: ವಿನತೆ ಶರ್ಮ

(ವಿನತೆ ಶರ್ಮ, ನಮ್ಮ ಅನಿವಾಸಿ ಬಳಗದ ಬರಹಗಾರರು. ಅಂತರಜಾಲದ ಅವಧಿ ಮತ್ತು ಕೆಂಡಸಂಪಿಗೆ ಗೆ ನಿಯಮಿತವಾಗಿ ಬರೆಯುತ್ತಾರೆ.ಇಂಗ್ಲಂಡನ್ನು ಬಿಟ್ಟು ಆಸ್ಟ್ರೇಲಿಯಾಗೆ ಹೋಗಿದ್ದರೂ,  ಇತ್ತೀಚೆ ಕನ್ನಡ ಬಳಗದ ಆಶ್ರಯದಲ್ಲಿ ಕೆ ಎಸ್ ಎಸ್ ವಿ ವಿ ನಡೆಸಿದ ಕನ್ನಡದಲ್ಲಿ ಮಹಿಳಾ ಲೇಖಕಿಯರು ಎಂಬ ಚರ್ಚೆಗಾಗಿ ಈ ಬರಹವನ್ನು ಬರೆದು ಕಳಿಸಿದ್ದರು. ಅದನ್ನು ಕಾರ್ಯಕ್ರಮದ ಅತಿಥಿಗಳಾದ ಸುಧಾ ಬರಗೂರರು ಆಲಿಸಿ ತುಂಬ ಸಂತೋಷಪಟ್ಟರು. – ಸಂ) 

ಎಂಭತ್ತರ ಮತ್ತು ತೊಂಭತ್ತರ ದಶಕಗಳಲ್ಲಿ ನಾನು ನೇಮಿಚಂದ್ರರನ್ನು ನೋಡಿದಾಗಲೆಲ್ಲ ನನಗೆನಿಸುತ್ತಿದ್ದದ್ದು ಈಕೆ ಅಪ್ಪಟ ತಮಿಳರಂತೆ ಕಾಣುತ್ತಾರೆ ಎಂದು. ಆದರೆ ನೇಮಿಚಂದ್ರ ಅಪ್ಪಟ ಕನ್ನಡದ ಲೇಖಕಿ ಎಂದು ಕೂಡ ನನಗೆ ಗೊತ್ತಿತ್ತು. ಅವರ ಸಣ್ಣಕತೆಗಳನ್ನು ನಾನು ಇಷ್ಟಪಟ್ಟು ಓದುತ್ತಿದ್ದೆ. ತಮ್ಮ ಕತೆಗಳಲ್ಲಿ ಅವರು ವಿಭಿನ್ನವಾಗಿ ರೂಪಿಸುತ್ತಿದ್ದ ಮತ್ತು ಆ ಕಾಲಕ್ಕೆ ಬೋಲ್ಡ್ ಎನಿಸುತ್ತಿದ್ದ ವೃತ್ತಿಪರ, ತಾಂತ್ರಿಕ ಹುದ್ದೆಗಳಲ್ಲಿ ತೊಡಗಿಸಿಕೊಂಡ ಮಹಿಳಾ ಪಾತ್ರಗಳು ನನಗೆ ಇಷ್ಟವಾಗುತ್ತಿದ್ದವು. ಜಾತಿ ಪದ್ಧತಿಯ ಕಟ್ಟಾ ಅನುಸರಣೆಯನ್ನು, ಲಿಂಗ ತಾರತಮ್ಯತೆ, ಪುರುಷ ಪ್ರಾಬಲ್ಯವನ್ನು ಅನುಮೋದಿಸುತ್ತಿದ್ದ ಸಮಾಜವನ್ನು ಮತ್ತು ಸುತ್ತಲೂ ಆವರಿಸಿದ್ದ ಅವೇ ಸ್ಟೀರಿಯೊಟೈಪ್ ನಂಬಿಕೆಗಳನ್ನು ಮತ್ತು ಧೋರಣೆಗಳನ್ನು ನಾನು ಒಪ್ಪಿಕೊಳ್ಳದೇ, ಅವನ್ನು ವಿರೋಧಿಸಿ, ಪ್ರಶ್ನಿಸುತ್ತಿದ್ದ ಕಾಲ ಅದು. ಹಾಗಾಗಿ ಯುವ ಲೇಖಕಿ ನೇಮಿಚಂದ್ರ ತಮ್ಮ ಕಥೆಗಳ ಮುಖ್ಯಪಾತ್ರಗಳನ್ನು ಲಿಬರಲ್ ಆಗಿ ಪೋಷಿಸುತ್ತಿದ್ದದ್ದು ಮೆಚ್ಚುವಂತಿತ್ತು. ಜೊತೆಗೆ ಅವರು ತಮ್ಮದೇ ಅನುಭವಗಳ ಮೂಸೆಯಿಂದ ಹೊರಹೊಮ್ಮಿದ ವೈಜ್ಞಾನಿಕ ಮತ್ತು ಸಂಶೋಧನಾ ಅಧ್ಯಯನದ ಒಳನೋಟಗಳನ್ನು, ದೃಷ್ಟಿಕೋನಗಳನ್ನು ಆ ಪಾತ್ರಗಳಲ್ಲಿ ಹರಿಬಿಟ್ಟು ಅವು ಹಿಂಜರಿಕೆಗಳನ್ನು ಹಿಂದೆ ಬಿಟ್ಟು ಧೈರ್ಯದಿಂದ ಬದುಕುವುದನ್ನು ಚಿತ್ರಿಸುತ್ತಿದ್ದರು. ಆ ಪಾತ್ರಗಳಲ್ಲಿ ತುಂಬಿದ್ದ ಆತ್ಮವಿಶ್ವಾಸ, ದೃಢ ಮನೋಭಾವ ಮತ್ತು ಹೆಣ್ಣುಮಕ್ಕಳಿಗೆ ಬದುಕಿನಲ್ಲಿ ಇರುವ ಅನೇಕ ಆಯ್ಕೆಗಳು – ಇವುಗಳನ್ನು ಹೊಮ್ಮಿಸುತ್ತಿದ್ದ ದಿಟ್ಟ ದನಿ ಆಗ ಮಧ್ಯಮವರ್ಗದ ಸಾಂಪ್ರದಾಯಕ ಕುಟುಂಬಗಳಲ್ಲಿ ಬೆಳೆಯುತ್ತಿದ್ದ ನಮ್ಮಂತಹ ಹುಡುಗಿಯರಿಗೆ ಬಹಳ ಅವಶ್ಯವಾಗಿ ಬೇಕಿತ್ತು.

ನೇಮಿಚಂದ್ರ (ಕೃಪೆ: ಗುಡ್ ರೀಡ್)

ನೇಮಿಚಂದ್ರ ಈಗಿನ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಒಬ್ಬ ಪ್ರಮುಖ ಲೇಖಕಿ ಎಂದು ಗುರುತಿಸಲ್ಪಡುತ್ತಾರೆ. ಅವರ ಬರವಣಿಗೆಯ ದಾಸ್ತಾನಿನಲ್ಲಿ ಶೇಖರವಾಗಿರುವುದು ಅನೇಕ ಪ್ರಕಾರಗಳ ಕನ್ನಡ ಸಾಹಿತ್ಯ – ಸಣ್ಣ ಕಥೆಗಳ ಸಂಕಲನಗಳು, ಮಹಿಳಾ ಲೇಖಕಿಯರ ಬಗೆಗಿನ ಬರಹಗಳು, van Gogh ನ ಜೀವನಗಾಥೆ, ವಿಜ್ಞಾನದ ವಿಷಯಗಳ ಬಗ್ಗೆ ಪುಸ್ತಕಗಳು, ಹೊತ್ತಿಗೆಗಳು, ಮಹಿಳಾ ಅಧ್ಯಯನದ ಬಗ್ಗೆ ಕೃತಿಗಳು, ಬಹು ಜನಪ್ರಿಯವಾದ ಅವರ ಪ್ರವಾಸಿಕಥೆಗಳ ಪುಸ್ತಕ ರೂಪ ಮತ್ತು ಅವರು ಆಗಾಗ ಬರೆಯುವ ಕವನಗಳು. ಕನ್ನಡ ಸಾಹಿತ್ಯ ಲೋಕಕ್ಕೆ ಅವರು ಸೇರಿಸಿದ ಮಹಿಳಾ ವಿಜ್ಞಾನಿಗಳ ಜೀವನ ಚರಿತ್ರೆಗಳು ಬಹಳ ವಿಶಿಷ್ಟವಾದ ಕೊಡುಗೆ ಎನ್ನಬಹುದು.

ನೇಮಿಚಂದ್ರ ತುಮಕೂರಿನಲ್ಲಿ ಹುಟ್ಟಿದ್ದು. ಅವರ ಮನೆಯಲ್ಲಿ ರಾಶಿರಾಶಿ ಪುಸ್ತಕಗಳಿದ್ದವು. ಮುಂದೆ ಮೈಸೂರಿನಲ್ಲಿ  ವಿದ್ಯಾಭ್ಯಾಸವನ್ನು ಮುಂದುವರೆಸಿ, ಅಲ್ಲೇ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಪದವಿ ಪಡೆದು, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಗೆ ಕಾಲಿಟ್ಟು ಅಲ್ಲಿನ ಸಂಶೋಧನೆಗಳಲ್ಲಿ ತೊಡಗಿಸಿಕೊಂಡರು. ಅವರು ಆರಿಸಿಕೊಂಡದ್ದು ವೈಮಾನಿಕ ಕ್ಷೇತ್ರ. ಬೆಂಗಳೂರಿನ HAL ಸಂಸ್ಥೆಯಲ್ಲಿ ವೈಮಾನಿಕ ಇಂಜಿನಿಯರ್, ಹೆಲಿಕಾಪ್ಟರ್ ರಚನೆಯ ವಿಜ್ಞಾನಿ ಎಂಬಂತೆ ಗುರುತರ ಜವಾಬ್ದಾರಿಯ ಕೆಲಸಗಳ ನಿರ್ವಹಣೆ. ಕುಟುಂಬದ ನಿರ್ವಹಣೆಯ ಜೊತೆಗೆ ಆಗಾಗ್ಗೆ ಮಹಿಳಾ ವಿಜ್ಞಾನಿಗಳ ಜೀವನದ ಎಳೆಗಳನ್ನು  ಹಿಡಿದು, ಅವರನ್ನು ಹುಡುಕುತ್ತಾ ಪ್ರಪಂಚದಾದ್ಯಂತ ತಿರುಗಾಟ. ನೇಮಿಚಂದ್ರ ತಮ್ಮ ಸ್ನೇಹಿತೆಯರೊಂದಿಗೆ ಕೈಜೋಡಿಸಿ ಬೆಳೆಸಿದ ‘ಅಚಲ’ ಪತ್ರಿಕೆ ಮತ್ತು ಈ ವರ್ಷ ಆರಂಭವಾಗಿರುವ ‘ಹಿತೈಷಿಣಿ’ ಅಂತರ್ಜಾಲ ಪತ್ರಿಕೆಯ ರೊವಾರಿ ಕೂಡ.

೧೯೭೯ರಲ್ಲಿ ಆರಂಭವಾದ ಕರ್ನಾಟಕ ಲೇಖಕಿಯರ ಸಂಘದ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸಿದ ನೇಮಿಚಂದ್ರ ಸಂಘದ ಇತರ ಸದಸ್ಯರೊಡನೆ ಸೇರಿ ಇಪ್ಪತ್ತನೇ ಶತಮಾನದ ಆರಂಭ ಕಾಲದ ಕನ್ನಡ ಲೇಖಕಿಯರ ಬಗ್ಗೆ ಅಧ್ಯಯನಗಳನ್ನು ಕೈಗೊಂಡರು. ಅವರುಗಳ ತಂಡಗಳು ರಾಜ್ಯದ ಹಲವೆಡೆ ತಿರುಗಾಡಿ, ಮೌಖಿಕ ಮತ್ತು ಬರಹದ ದಾಖಲೆಗಳನ್ನು ಸಂಗ್ರಹಿಸಿ ಅಪರೂಪದ ಸಂಗ್ರಹಗಳನ್ನು ಹೊರತಂದರು. ಭಾರತ ಸ್ವಾತಂತ್ರ್ಯದ ಮುನ್ನಾ ದಶಕಗಳಲ್ಲಿ ಬದುಕಿದ್ದ ಬೆಳೆಗೆರೆ ಜಾನಕಮ್ಮ ಎಂಬವರ ಬಗ್ಗೆ ನೇಮಿಚಂದ್ರ ಆಳವಾದ ಅಧ್ಯಯನವನ್ನು ಕೈಗೊಂಡು ಕನಿಷ್ಠ ಶಿಕ್ಷಣವನ್ನು ಪಡೆದಿದ್ದರೂ ಕೂಡ ಜಾನಕಮ್ಮ ಎಂತಹ ಅಪರೂಪದ ಕವಯಿತ್ರಿಯಾಗಿದ್ದರು ಎಂಬ ಅಪರೂಪದ ಜ್ಞಾನವನ್ನು ಕನ್ನಡ ಸಾರಸ್ವತ ಲೋಕಕ್ಕೆ ತಂದರು. ನೇಮಿಚಂದ್ರ ಸ್ವತಃ ತೀಕ್ಷ್ಣವಾದ ಮಹಿಳಾಪರ ಧೋರಣೆಯನ್ನು ಹೊಂದಿದ್ದರೂ ತಮ್ಮನ್ನು ಪ್ರತ್ಯೇಕವಾಗಿ ಸ್ತ್ರೀವಾದಿ ಎಂದು ಕರೆದುಕೊಂಡಿಲ್ಲ.

ನಮ್ಮ ದೇಶಕ್ಕೆ ಹೆಮ್ಮೆ ತರುವ ಅಂತರಿಕ್ಷಯಾನ ಇಂಜಿನಿಯರ್ ಆಗಿ, ಹೆಲಿಕಾಪ್ಟರ್ ವಿಜ್ಞಾನಿಯಾಗಿ ಅತ್ಯಂತ ಜವಾಬ್ದಾರಿಯ ಹುದ್ದೆಗಳನ್ನು ನಿರ್ವಹಿಸುತ್ತಾ ಇದ್ದರೂ ನಿಸ್ವಾರ್ಥದಿಂದ ನೇಮಿಚಂದ್ರ ಕನ್ನಡ ಸಾಹಿತ್ಯಕ್ಕೆ ಅನವರತ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಅವರು ಸೇರಿಸುತ್ತಾ ಬಂದಿರುವ ಸಾಹಿತ್ಯದ ಅನರ್ಘ್ಯ ಮುತ್ತುಗಳನ್ನು ಗೌರವಿಸಿ ಅವರನ್ನ ಅನೇಕ ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಅವುಗಳಲ್ಲಿ ಕೆಲವು – ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಮೇರಿ ಕ್ಯೂರಿ ಜೀವನ ಚರಿತ್ರೆ), ಗೊರೂರು ಪ್ರಶಸ್ತಿ (ಸಣ್ಣ ಕಥೆಗಳ ಸಂಗ್ರಹ), ರತ್ನಮ್ಮ ಹೆಗಡೆ ಪ್ರಶಸ್ತಿ (ಯುರೋಪ್ ಪ್ರವಾಸ ಅನುಭವಗಳ ಪುಸ್ತಕ).

ನೇಮಿಚಂದ್ರರಿಗೆ ಇನ್ನೂ ಹೆಚ್ಚಿನ ಕೀರ್ತಿಯನ್ನು, ಜನಪ್ರಿಯತೆಯನ್ನು ತಂದಿರುವುದು ಅವರ ದಕ್ಷಿಣ ಅಮೆರಿಕೆಯ ಮತ್ತು ಪೆರು ಕಣಿವೆಯನ್ನು ಸುತ್ತಿದ ಪ್ರವಾಸಿ ಅನುಭವಗಳ ಪುಸ್ತಕ ‘ಪೆರುವಿನ ಪವಿತ್ರ ಕಣಿವೆಯಲ್ಲಿ’, ಬೆಂಗಳೂರಿನಿಂದ ಆರಂಭವಾಗುವ ಯಹೂದಿಗಳ ನೋವಿನ ಕಥೆಯನ್ನು ಹಿಂಬಾಲಿಸುತ್ತಾ ಜರ್ಮನಿಯನ್ನು, ಇಸ್ರೇಲನ್ನು ಸುತ್ತಿ ಅಲ್ಲಿನ ಯಹೂದಿಗಳ ಅನುಭವಗಳನ್ನು, ಅವರ ಹಿರಿಯರು ಮತ್ತು ಜರ್ಮನಿಯ ಹಿಟ್ಲರ್ ಕಾಲದ ಮರೆಯಲಾಗದ ಸಾವಿನ ವಾಸನೆಯ ಕಥೆಗಳನ್ನು ಹೇಳುವ ‘ಯಾದ್ ವಶೇಮ್’,  ಗಂಡುಹೆಣ್ಣು ಭೇದವಿಲ್ಲದೆ ಎಲ್ಲರಲ್ಲೂ ಆತ್ಮ ಸ್ಥೈರ್ಯ ಮತ್ತು ಆಶಾವಾದವನ್ನು ತುಂಬುವ ‘ಬದುಕು ಬದಲಿಸಬಹುದು’ ಸರಣಿ ಪುಸ್ತಕಗಳು.