
(ವಿನತೆ ಶರ್ಮ, ನಮ್ಮ ಅನಿವಾಸಿ ಬಳಗದ ಬರಹಗಾರರು. ಅಂತರಜಾಲದ ಅವಧಿ ಮತ್ತು
ಇಂಗ್ಲಂಡನ್ನು ಬಿಟ್ಟು ಆಸ್ಟ್ರೇಲಿಯಾಗೆ ಹೋಗಿದ್ದರೂ, ಇತ್ತೀಚೆ ಕನ್ನಡ ಬಳಗದ ಆಶ್ರಯದಲ್ಲಿ ಕೆ ಎಸ್ ಎಸ್ ವಿ ವಿ ನಡೆಸಿದ ಕನ್ನಡದಲ್ಲಿ ಮಹಿಳಾ ಲೇಖಕಿಯರು ಎಂಬ ಚರ್ಚೆಗಾಗಿ ಈ ಬರಹವನ್ನು ಬರೆದು ಕಳಿಸಿದ್ದರು. ಅದನ್ನು ಕಾರ್ಯಕ್ರಮದ ಅತಿಥಿಗಳಾದ ಸುಧಾ ಬರಗೂರರು ಆಲಿಸಿ ತುಂಬ ಸಂತೋಷಪಟ್ಟರು. – ಸಂ) ಕೆಂಡಸಂಪಿಗೆ ಗೆ ನಿಯಮಿತವಾಗಿ ಬರೆಯುತ್ತಾರೆ.
ಎಂಭತ್ತರ ಮತ್ತು ತೊಂಭತ್ತರ ದಶಕಗಳಲ್ಲಿ ನಾನು ನೇಮಿಚಂದ್ರರನ್ನು ನೋಡಿದಾಗಲೆಲ್ಲ ನನಗೆನಿಸುತ್ತಿದ್ದದ್ದು ಈಕೆ ಅಪ್ಪಟ ತಮಿಳರಂತೆ ಕಾಣುತ್ತಾರೆ ಎಂದು. ಆದರೆ ನೇಮಿಚಂದ್ರ ಅಪ್ಪಟ ಕನ್ನಡದ ಲೇಖಕಿ ಎಂದು ಕೂಡ ನನಗೆ ಗೊತ್ತಿತ್ತು. ಅವರ ಸಣ್ಣಕತೆಗಳನ್ನು ನಾನು ಇಷ್ಟಪಟ್ಟು ಓದುತ್ತಿದ್ದೆ. ತಮ್ಮ ಕತೆಗಳಲ್ಲಿ ಅವರು ವಿಭಿನ್ನವಾಗಿ ರೂಪಿಸುತ್ತಿದ್ದ ಮತ್ತು ಆ ಕಾಲಕ್ಕೆ ಬೋಲ್ಡ್ ಎನಿಸುತ್ತಿದ್ದ ವೃತ್ತಿಪರ, ತಾಂತ್ರಿಕ ಹುದ್ದೆಗಳಲ್ಲಿ ತೊಡಗಿಸಿಕೊಂಡ ಮಹಿಳಾ ಪಾತ್ರಗಳು ನನಗೆ ಇಷ್ಟವಾಗುತ್ತಿದ್ದವು. ಜಾತಿ ಪದ್ಧತಿಯ ಕಟ್ಟಾ ಅನುಸರಣೆಯನ್ನು, ಲಿಂಗ ತಾರತಮ್ಯತೆ, ಪುರುಷ ಪ್ರಾಬಲ್ಯವನ್ನು ಅನುಮೋದಿಸುತ್ತಿದ್ದ ಸಮಾಜವನ್ನು ಮತ್ತು ಸುತ್ತಲೂ ಆವರಿಸಿದ್ದ ಅವೇ ಸ್ಟೀರಿಯೊಟೈಪ್ ನಂಬಿಕೆಗಳನ್ನು ಮತ್ತು ಧೋರಣೆಗಳನ್ನು ನಾನು ಒಪ್ಪಿಕೊಳ್ಳದೇ, ಅವನ್ನು ವಿರೋಧಿಸಿ, ಪ್ರಶ್ನಿಸುತ್ತಿದ್ದ ಕಾಲ ಅದು. ಹಾಗಾಗಿ ಯುವ ಲೇಖಕಿ ನೇಮಿಚಂದ್ರ ತಮ್ಮ ಕಥೆಗಳ ಮುಖ್ಯಪಾತ್ರಗಳನ್ನು ಲಿಬರಲ್ ಆಗಿ ಪೋಷಿಸುತ್ತಿದ್ದದ್ದು ಮೆಚ್ಚುವಂತಿತ್ತು. ಜೊತೆಗೆ ಅವರು ತಮ್ಮದೇ ಅನುಭವಗಳ ಮೂಸೆಯಿಂದ ಹೊರಹೊಮ್ಮಿದ ವೈಜ್ಞಾನಿಕ ಮತ್ತು ಸಂಶೋಧನಾ ಅಧ್ಯಯನದ ಒಳನೋಟಗಳನ್ನು, ದೃಷ್ಟಿಕೋನಗಳನ್ನು ಆ ಪಾತ್ರಗಳಲ್ಲಿ ಹರಿಬಿಟ್ಟು ಅವು ಹಿಂಜರಿಕೆಗಳನ್ನು ಹಿಂದೆ ಬಿಟ್ಟು ಧೈರ್ಯದಿಂದ ಬದುಕುವುದನ್ನು ಚಿತ್ರಿಸುತ್ತಿದ್ದರು. ಆ ಪಾತ್ರಗಳಲ್ಲಿ ತುಂಬಿದ್ದ ಆತ್ಮವಿಶ್ವಾಸ, ದೃಢ ಮನೋಭಾವ ಮತ್ತು ಹೆಣ್ಣುಮಕ್ಕಳಿಗೆ ಬದುಕಿನಲ್ಲಿ ಇರುವ ಅನೇಕ ಆಯ್ಕೆಗಳು – ಇವುಗಳನ್ನು ಹೊಮ್ಮಿಸುತ್ತಿದ್ದ ದಿಟ್ಟ ದನಿ ಆಗ ಮಧ್ಯಮವರ್ಗದ ಸಾಂಪ್ರದಾಯಕ ಕುಟುಂಬಗಳಲ್ಲಿ ಬೆಳೆಯುತ್ತಿದ್ದ ನಮ್ಮಂತಹ ಹುಡುಗಿಯರಿಗೆ ಬಹಳ ಅವಶ್ಯವಾಗಿ ಬೇಕಿತ್ತು.

ನೇಮಿಚಂದ್ರ ಈಗಿನ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಒಬ್ಬ ಪ್ರಮುಖ ಲೇಖಕಿ ಎಂದು ಗುರುತಿಸಲ್ಪಡುತ್ತಾರೆ. ಅವರ ಬರವಣಿಗೆಯ ದಾಸ್ತಾನಿನಲ್ಲಿ ಶೇಖರವಾಗಿರುವುದು ಅನೇಕ ಪ್ರಕಾರಗಳ ಕನ್ನಡ ಸಾಹಿತ್ಯ – ಸಣ್ಣ ಕಥೆಗಳ ಸಂಕಲನಗಳು, ಮಹಿಳಾ ಲೇಖಕಿಯರ ಬಗೆಗಿನ ಬರಹಗಳು, van Gogh ನ ಜೀವನಗಾಥೆ, ವಿಜ್ಞಾನದ ವಿಷಯಗಳ ಬಗ್ಗೆ ಪುಸ್ತಕಗಳು, ಹೊತ್ತಿಗೆಗಳು, ಮಹಿಳಾ ಅಧ್ಯಯನದ ಬಗ್ಗೆ ಕೃತಿಗಳು, ಬಹು ಜನಪ್ರಿಯವಾದ ಅವರ ಪ್ರವಾಸಿಕಥೆಗಳ ಪುಸ್ತಕ ರೂಪ ಮತ್ತು ಅವರು ಆಗಾಗ ಬರೆಯುವ ಕವನಗಳು. ಕನ್ನಡ ಸಾಹಿತ್ಯ ಲೋಕಕ್ಕೆ ಅವರು ಸೇರಿಸಿದ ಮಹಿಳಾ ವಿಜ್ಞಾನಿಗಳ ಜೀವನ ಚರಿತ್ರೆಗಳು ಬಹಳ ವಿಶಿಷ್ಟವಾದ ಕೊಡುಗೆ ಎನ್ನಬಹುದು.
ನೇಮಿಚಂದ್ರ ತುಮಕೂರಿನಲ್ಲಿ ಹುಟ್ಟಿದ್ದು. ಅವರ ಮನೆಯಲ್ಲಿ ರಾಶಿರಾಶಿ ಪುಸ್ತಕಗಳಿದ್ದವು. ಮುಂದೆ ಮೈಸೂರಿನಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸಿ, ಅಲ್ಲೇ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಪದವಿ ಪಡೆದು, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಗೆ ಕಾಲಿಟ್ಟು ಅಲ್ಲಿನ ಸಂಶೋಧನೆಗಳಲ್ಲಿ ತೊಡಗಿಸಿಕೊಂಡರು. ಅವರು ಆರಿಸಿಕೊಂಡದ್ದು ವೈಮಾನಿಕ ಕ್ಷೇತ್ರ. ಬೆಂಗಳೂರಿನ HAL ಸಂಸ್ಥೆಯಲ್ಲಿ ವೈಮಾನಿಕ ಇಂಜಿನಿಯರ್, ಹೆಲಿಕಾಪ್ಟರ್ ರಚನೆಯ ವಿಜ್ಞಾನಿ ಎಂಬಂತೆ ಗುರುತರ ಜವಾಬ್ದಾರಿಯ ಕೆಲಸಗಳ ನಿರ್ವಹಣೆ. ಕುಟುಂಬದ ನಿರ್ವಹಣೆಯ ಜೊತೆಗೆ ಆಗಾಗ್ಗೆ ಮಹಿಳಾ ವಿಜ್ಞಾನಿಗಳ ಜೀವನದ ಎಳೆಗಳನ್ನು ಹಿಡಿದು, ಅವರನ್ನು ಹುಡುಕುತ್ತಾ ಪ್ರಪಂಚದಾದ್ಯಂತ ತಿರುಗಾಟ. ನೇಮಿಚಂದ್ರ ತಮ್ಮ ಸ್ನೇಹಿತೆಯರೊಂದಿಗೆ ಕೈಜೋಡಿಸಿ ಬೆಳೆಸಿದ ‘ಅಚಲ’ ಪತ್ರಿಕೆ ಮತ್ತು ಈ ವರ್ಷ ಆರಂಭವಾಗಿರುವ ‘ಹಿತೈಷಿಣಿ’ ಅಂತರ್ಜಾಲ ಪತ್ರಿಕೆಯ ರೊವಾರಿ ಕೂಡ.
೧೯೭೯ರಲ್ಲಿ ಆರಂಭವಾದ ಕರ್ನಾಟಕ ಲೇಖಕಿಯರ ಸಂಘದ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸಿದ ನೇಮಿಚಂದ್ರ ಸಂಘದ ಇತರ ಸದಸ್ಯರೊಡನೆ ಸೇರಿ ಇಪ್ಪತ್ತನೇ ಶತಮಾನದ ಆರಂಭ ಕಾಲದ ಕನ್ನಡ ಲೇಖಕಿಯರ ಬಗ್ಗೆ ಅಧ್ಯಯನಗಳನ್ನು ಕೈಗೊಂಡರು. ಅವರುಗಳ ತಂಡಗಳು ರಾಜ್ಯದ ಹಲವೆಡೆ ತಿರುಗಾಡಿ, ಮೌಖಿಕ ಮತ್ತು ಬರಹದ ದಾಖಲೆಗಳನ್ನು ಸಂಗ್ರಹಿಸಿ ಅಪರೂಪದ ಸಂಗ್ರಹಗಳನ್ನು ಹೊರತಂದರು. ಭಾರತ ಸ್ವಾತಂತ್ರ್ಯದ ಮುನ್ನಾ ದಶಕಗಳಲ್ಲಿ ಬದುಕಿದ್ದ ಬೆಳೆಗೆರೆ ಜಾನಕಮ್ಮ ಎಂಬವರ ಬಗ್ಗೆ ನೇಮಿಚಂದ್ರ ಆಳವಾದ ಅಧ್ಯಯನವನ್ನು ಕೈಗೊಂಡು ಕನಿಷ್ಠ ಶಿಕ್ಷಣವನ್ನು ಪಡೆದಿದ್ದರೂ ಕೂಡ ಜಾನಕಮ್ಮ ಎಂತಹ ಅಪರೂಪದ ಕವಯಿತ್ರಿಯಾಗಿದ್ದರು ಎಂಬ ಅಪರೂಪದ ಜ್ಞಾನವನ್ನು ಕನ್ನಡ ಸಾರಸ್ವತ ಲೋಕಕ್ಕೆ ತಂದರು. ನೇಮಿಚಂದ್ರ ಸ್ವತಃ ತೀಕ್ಷ್ಣವಾದ ಮಹಿಳಾಪರ ಧೋರಣೆಯನ್ನು ಹೊಂದಿದ್ದರೂ ತಮ್ಮನ್ನು ಪ್ರತ್ಯೇಕವಾಗಿ ಸ್ತ್ರೀವಾದಿ ಎಂದು ಕರೆದುಕೊಂಡಿಲ್ಲ.
ನಮ್ಮ ದೇಶಕ್ಕೆ ಹೆಮ್ಮೆ ತರುವ ಅಂತರಿಕ್ಷಯಾನ ಇಂಜಿನಿಯರ್ ಆಗಿ, ಹೆಲಿಕಾಪ್ಟರ್ ವಿಜ್ಞಾನಿಯಾಗಿ ಅತ್ಯಂತ ಜವಾಬ್ದಾರಿಯ ಹುದ್ದೆಗಳನ್ನು ನಿರ್ವಹಿಸುತ್ತಾ ಇದ್ದರೂ ನಿಸ್ವಾರ್ಥದಿಂದ ನೇಮಿಚಂದ್ರ ಕನ್ನಡ ಸಾಹಿತ್ಯಕ್ಕೆ ಅನವರತ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಅವರು ಸೇರಿಸುತ್ತಾ ಬಂದಿರುವ ಸಾಹಿತ್ಯದ ಅನರ್ಘ್ಯ ಮುತ್ತುಗಳನ್ನು ಗೌರವಿಸಿ ಅವರನ್ನ ಅನೇಕ ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಅವುಗಳಲ್ಲಿ ಕೆಲವು – ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಮೇರಿ ಕ್ಯೂರಿ ಜೀವನ ಚರಿತ್ರೆ), ಗೊರೂರು ಪ್ರಶಸ್ತಿ (ಸಣ್ಣ ಕಥೆಗಳ ಸಂಗ್ರಹ), ರತ್ನಮ್ಮ ಹೆಗಡೆ ಪ್ರಶಸ್ತಿ (ಯುರೋಪ್ ಪ್ರವಾಸ ಅನುಭವಗಳ ಪುಸ್ತಕ).
ನೇಮಿಚಂದ್ರರಿಗೆ ಇನ್ನೂ ಹೆಚ್ಚಿನ ಕೀರ್ತಿಯನ್ನು, ಜನಪ್ರಿಯತೆಯನ್ನು ತಂದಿರುವುದು ಅವರ ದಕ್ಷಿಣ ಅಮೆರಿಕೆಯ ಮತ್ತು ಪೆರು ಕಣಿವೆಯನ್ನು ಸುತ್ತಿದ ಪ್ರವಾಸಿ ಅನುಭವಗಳ ಪುಸ್ತಕ ‘ಪೆರುವಿನ ಪವಿತ್ರ ಕಣಿವೆಯಲ್ಲಿ’, ಬೆಂಗಳೂರಿನಿಂದ ಆರಂಭವಾಗುವ ಯಹೂದಿಗಳ ನೋವಿನ ಕಥೆಯನ್ನು ಹಿಂಬಾಲಿಸುತ್ತಾ ಜರ್ಮನಿಯನ್ನು, ಇಸ್ರೇಲನ್ನು ಸುತ್ತಿ ಅಲ್ಲಿನ ಯಹೂದಿಗಳ ಅನುಭವಗಳನ್ನು, ಅವರ ಹಿರಿಯರು ಮತ್ತು ಜರ್ಮನಿಯ ಹಿಟ್ಲರ್ ಕಾಲದ ಮರೆಯಲಾಗದ ಸಾವಿನ ವಾಸನೆಯ ಕಥೆಗಳನ್ನು ಹೇಳುವ ‘ಯಾದ್ ವಶೇಮ್’, ಗಂಡುಹೆಣ್ಣು ಭೇದವಿಲ್ಲದೆ ಎಲ್ಲರಲ್ಲೂ ಆತ್ಮ ಸ್ಥೈರ್ಯ ಮತ್ತು ಆಶಾವಾದವನ್ನು ತುಂಬುವ ‘ಬದುಕು ಬದಲಿಸಬಹುದು’ ಸರಣಿ ಪುಸ್ತಕಗಳು.