ಗೌರಿ ಲಂಕೇಶ್ – ಬದುಕು ಮತ್ತು ಬರಹ: ಡಾ. ಪ್ರೇಮಲತ ಬಿ

ಲೇಖಕರು: ಡಾ. ಪ್ರೇಮಲತ ಬಿ

ದಂತವೈದ್ಯರಾಗಿರುವ ಡಾ. ಪ್ರೇಮಲತ ಬಿ ಕೆ ಎಸ್ ಎಸ್ ವಿ ವಿ, ಯುಕೆ (ಅನಿವಾಸಿ.ಕಾಂ) ಬಳಗದ ಅತ್ಯಂತ ಸಕ್ರಿಯ ಬರಹಗಾರರು. ಅವರು ಬರೆದ ಹಲವಾರು ಕವನಗಳು `ಅವಧಿ` ಮತ್ತು `ಕನೆಕ್ಟ್ ಕನ್ನಡ` ಜಾಲಗಳಲ್ಲಿ ಪ್ರಕಟವಾಗಿವೆ. `ಕೆಂಡಸಂಪಿಗೆ` ಜಾಲತಾಣಕ್ಕೆ ಲೇಖನಮಾಲೆಯನ್ನು ಕಳೆದ ವರ್ಷ ಬರೆದಿದ್ದಾರೆ. ಅವರು ಬರೆದ ` ಬಾಯೆಂಬ ಬ್ರಹ್ಮಾಂಡ` ಎನ್ನುವ ದಂತವೈದ್ಯಸಾಹಿತ್ಯದ ಪುಸ್ತಕವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಇತ್ತೀಚೆ ಪ್ರಕಟಿಸಿದ್ದಾರೆ. ಅಸ್ಖಲಿತ ಅಪ್ಪಟ ಕನ್ನಡದಲ್ಲಿ ಒಂದಿನಿತೂ ತಡವರಿಸದೇ ಸ್ಫಟಿಕದಂತೆ ಮಾತನಾಡುತ್ತಾರೆ. ಇತ್ತೀಚೆ ` ಕನ್ನಡ ಬಳಗ`ದ ಆಶ್ರಯದಲ್ಲಿ ನಡೆದ ಮಹಿಳಾ ಸಾಹಿತಿಗಳ ಗೋಷ್ಠಿಯಲ್ಲಿ ಪ್ರೇಮಲತ ಗೌರಿ ಲಂಕೇಶ್ ಅವರ ಬಗ್ಗೆ ಮಾತಾಡಿದರು. ಅದರ ಪೂರ್ಣರೂಪ ಇಲ್ಲಿದೆ. ದಯವಿಟ್ಟು ಓದಿ, ಪ್ರತಿಕ್ರಿಯೆ ಬರೆಯಲು ಮಾತ್ರ ಮರೆಯದಿರಿ. – ಸಂ

ವಚನ, ಕಥೆ, ಕವನ, ಕಾದಂಬರಿ, ಚರಿತ್ರೆ, ಲೇಖನ, ಚಿತ್ರ ಕಥೆ , ವಿಮರ್ಶೆ, ಹಾಸ್ಯ ಮತ್ತು ವರದಿಗಳನ್ನು ಬರೆದ ಹಲವು  ಲೇಖಕಿಯರು ಕನ್ನಡಕ್ಕೆ ಸಂದಿದ್ದಾರೆ. ಇವುಗಳಲ್ಲಿ ವಿಮರ್ಶೆ ಮತ್ತು ಚರಿತ್ರೆಯ ಸಾಹಿತ್ಯ ಪ್ರಕಾರಗಳನ್ನು ಬರೆದ ಲೇಖಕಿಯರು ಕಡಿಮೆ ಎಂತಲೇ ಹೇಳಬಹುದು. ಪತ್ರಿಕೋದ್ಯಮದಲ್ಲಿ ನಾನಾ ಸ್ತರಗಳಲ್ಲಿ ತೊಡಗಿಕೊಂಡ ಮಹಿಳಾ ವರದಿಗಾರರೂ, ಸಂಪಾದಕಿಯರೂ ಇದ್ದಾರೆ. ಆದರೆ ಪತ್ರಿಕೋದ್ಯಮವನ್ನೇ ವೃತ್ತಿಯಾಗಿ ನಡೆಸುತ್ತ ಸಾಮಾಜಿಕ ಕಳಕಳಿಗಳಲ್ಲಿ  ಭಾಷಣ ಮತ್ತು ಅಕ್ಷರ ಸ್ವರೂಪಕ್ಕಿಂತ ಹೆಚ್ಚಿನ ಮಟ್ಟದಲ್ಲಿ ತೊಡಗಿಕೊಂಡವರು ಬಹಳ ವಿರಳವಾಗಿ ಸಿಗುತ್ತಾರೆ. ವಿಮರ್ಶೆ ಮತ್ತು ಪತ್ರಿಕೋದ್ಯಮ ಎರಡೂ ಮನರಂಜನೆಯಾಗಿ ಮಾತ್ರ ಮಾಡುವ ಸಾಹಿತ್ಯ ಪ್ರಕಾರಗಳಲ್ಲ. ಇವನ್ನು ಬರಹಗಾರ/ರ್ತಿ ತಮ್ಮ ದುಡಿಮೆಯ ಮಾರ್ಗವನ್ನಾಗಿ ಮಾತ್ರ ಮಾಡಿಕೊಂಡಲ್ಲಿ ಅವು ಏಕಪ್ರಕಾರದ ವರದಿ/ಬರಹಗಳಗೋ ಅಥವಾ ಯಾವುದಾದರೊಂದು ರಾಜಕೀಯ ಪಕ್ಷ, ಧರ್ಮ ಅಥವಾ ಸಂಸ್ಥೆಗಾಗಿಯೋ ಕೆಲಸ ಮಾಡುವವರು ಬರೆದಂತಿರುತ್ತದೆ. ಇಂಥವರು ಯಶಸ್ವಿಯಾಗಬಹುದು, ಹಣವನ್ನು ಕಾಣಬಹುದು. ರಾಜಕೀಯವಾಗಿ ಮೇಲೇರಬಹುದು; ಒಟ್ಟಾರೆ, ’ಗೆದ್ದವನದೇ ದೊಣ್ಣೆ’ ಎನ್ನುವಂತೆ ಅಂತವರು ಸಲ್ಲುತ್ತಾರೆ. ಗೆಲ್ಲುತ್ತಾರೆ. ಎಲ್ಲರೂ ಅವರನ್ನು ಹಿಂಬಾಲಿಸುತ್ತಾರೆ. ಇನ್ಯಾರಾದಾರರೂ ಭಿನ್ನವಾಗಿ ನಿಂತರೆ, ಅವರು ’ಸರಿಯಿಲ್ಲ’ ಎನ್ನುವ ನಮ್ಮ ಸಾಂಪ್ರದಾಯಿಕ ಮನು ಸಂಸ್ಕೃತಿ ಅಂಥವರ ಬಾಯನ್ನು ಮುಚ್ಚಿಸಲು ಹೀನ ಕೃತ್ಯಗಳಿಗಿಳಿಯುತ್ತದೆ. ಇದು ಶತಮಾನಗಳಿಂದ ನಡೆದು ಬಂದಿರುವ ವಿಚಾರ.

ಗೌರಿ ಲಂಕೇಶ್

ಕನ್ನಡದಲ್ಲಿ ಬರೆದ ಲೇಖಕಿಯರು ಹನ್ನೆರಡನೇ ಶತಮಾನದಿಂದಲೇ ಇದ್ದಾರೆ. 12 ನೇ ಶತಮಾನ ಕಂಡ ಕ್ರಾಂತಿ, ತೋರಿದ ವಿಶ್ವರೂಪಿ ಧರ್ಮ, ಧರ್ಮಕ್ಕೆ ಮಿಗಿಲಾದ ಕಾಯಕದ ನಂಬುಗೆ, ಸ್ವತಂತ್ರ್ಯ ಮನೋಧರ್ಮ, ತ್ಯಾಗದ ಪರಮಾವಧಿಗಳು ಸಮಾಜದಲ್ಲಿ ಪ್ರವರ್ತಕರು ಬಂದು ಹಲವು ಬದಲಾವಣೆಗಳಿಗೆ ಕಾರಣರಾಗಿ ತಂದ ಸಂಘರ್ಷದ ಅಸದಳತೆಯನ್ನು ತೋರುತ್ತದೆ. ಈ ಕಾಲದಲ್ಲಿ ಒತ್ತಟ್ಟಿಗೆ ೩೬ ಕನ್ನಡ ವಚನಕಾರ್ತಿಯರು ಬರೆದ ದಾಖಲೆಗಳಿವೆ! ೧೭-೧೮ನೇ ಶತಮಾನದಲ್ಲಿ ಕೂಡ ಇಂಗ್ಲಿಷ್ ಲೇಖಕಿಯರು ಗಂಡಸರ ಹೆಸರಲ್ಲಿ ಬರೆಯಬೇಕಾದ ಅನಿವಾರ್ಯತೆಯಿದ್ದದ್ದನ್ನು ನೋಡಿದರೆ, ಸಮಾಜವೊಂದರ ವಿಕಸನ, ಆಲೋಚಿಸುವ ಕ್ರಮದಲ್ಲಿ ದಾಖಲಾದ ಉನ್ನತ ಮಟ್ಟ, ಮಹಿಳೆಯರು ಕಾಯಕ ಮಾರ್ಗದಲ್ಲಿ, ವಚನ ಸಾಹಿತ್ಯದಲ್ಲಿ ತೊಡಗಿಕೊಂಡ ಬಗೆ ಪ್ರಪಂಚದ ಇತರೆ ಸಮಾಜಗಳಿಗೆ ಹೋಲಿಸಿದರೆ ಅತ್ಯದ್ಭುತವಾಗಿ ವಿಕಸಿತವಾಗಿದ್ದು ಕನ್ನಡನಾಡಿನಲ್ಲಿ ಎಂಬುದನ್ನು ತೋರಿಸುತ್ತದೆ. ಈ ಶತಮಾನದ ಕೊನೆಯಲ್ಲಿ ನಡೆದ ಗಲಭೆಯಲ್ಲಿ ಶರಣರ ಹತ್ಯೆ ಅವ್ಯಾಹಿತವಾಗಿ ನಡೆದು ವೈಚಾರಿಕತೆಯನ್ನು ಅಧಿಕಾರ ಕೈ ತಪ್ಪುವ ಭಯದಲ್ಲಿ ಬರ್ಭರತೆ, ನುಂಗಿಹಾಕಿದ್ದನ್ನು ಕಾಣುತ್ತೇವೆ. ಆಗೆಲ್ಲ ಶರಣರು ಭಯೋತ್ಪಾದಕರೆಂದೂ, ಧರ್ಮಭ್ರಷ್ಟರೆಂದೂ ಒಂದು ನಂಬಿಕೆ ಹರಡಿ ಅವರನ್ನು ಕಂಡ ಕಂಡಲ್ಲಿ ಕೊಚ್ಚಿ ಹಾಕುವ ಕೆಲಸ ಶುರುವಾದಾಗ ಶರಣರು  ತಮ್ಮ ಕೆಲವು ವಚನದ ಪುಸ್ತಕಗಳ ಜೊತೆ ಚೆಲ್ಲಾ ಪಿಲ್ಲಿಯಾಗಿ ಓಡಿಹೋಗಬೇಕಾಯ್ತು. ಅಲ್ಲಿಂದ ಮುಂದಕ್ಕೆ, ಕಾಲ ನಡೆದದ್ದು ಹಿಂದಕ್ಕೆ! ೧೫ನೇ ಶತಮಾನದಲ್ಲಿ ಬಂದ ದಾಸ ಸಾಹಿತ್ಯ ಮತ್ತೆ ಆಶಾಕಿರಣವಾಯ್ತಾದರೂ ಮಹಿಳೆಯರು ಮಂಚೂಣಿಯಲ್ಲಿ ಕಾಣಿಸಲಿಲ್ಲ.

ಮತ್ತೆ ಒಂಭತ್ತು ಶತಮಾನಗಳು ಕಳೆದರೂ ಸಾಮಾಜಿಕ ಮಟ್ಟದಲ್ಲಿ ಅವೇ ಧರ್ಮ, ಜಾತಿ, ಲಿಂಗ, ಬೆದರಿಕೆ, ಹತ್ಯೆ, ಸಮಾಜವನ್ನು ಚಿಧ್ರಿಸಿ ಯಾವುದರಲ್ಲೂ ಐಕ್ಯತೆ ಇಲ್ಲದಂತೆ ನೋಡುವುದರ ಸುತ್ತಲೇ ರಾಜಕಾರಣ ಸುತ್ತುತ್ತಿದೆ. ಸಂಪೂರ್ಣ ಸಹಿಶ್ಣುತೆ ಬಹುಶಃ ಸಾಧ್ಯವಿಲ್ಲ ಎನ್ನುವುದು ಒಪ್ಪಬೇಕಾದ ಮಾತು. ಆದರೆ ತಮ್ಮ ರಾಜಕೀಯ ಹುನ್ನಾರಗಳಿಗೆ ಆಗೀಗ ಸುಮ್ಮನಿರುವ ವ್ಯವಸ್ಥೆಗಳನ್ನು ಕಲಕಿ ಮುಗ್ದ ಜನರ ಬದುಕನ್ನು ಕಲಕುವ ಕೆಲಸ ಅವ್ಯಾಹತವಾಗಿ ನಡೆಯುತ್ತಲೇ ಬಂದಿದೆ. ಮತಧರ್ಮ ರಾಜಕಾರಣ ವಿಜೃಂಬಿಸುತ್ತಿದೆ!

ಕೃಪೆ: ಸತೀಶ್ ಆಚಾರ್ಯ

ಹೀಗಾಗಿ ಇಂತಹ ಪ್ರಭುತ್ವವನ್ನು ಪ್ರಶ್ನಿಸಿದ ಕೆಲವರ ಬರಹಗಳು ಅವರದೇ ವಯಕ್ತಿಕ ನಿಲುವುಗಳ ಪ್ರತಿಪಾದನೆಯಾಗಿದ್ದು ಅಂತಹ ಬರಹಗಳಿಗೆ ತಮ್ಮದೇ ದೃಷ್ಟಿಕೋನವನ್ನು, ಹಿಂಬಾಲಕರನ್ನು ಸೃಷ್ಟಿಸುವ ಶಕ್ತಿಯಿರುತ್ತದೆ. ಅದು ಕೆಲವರಿಗೆ ಹಿಡಿಸುತ್ತದೆ. ಮತ್ತೆ ಕೆಲವರಿಗೆ ಹಿಡಿಸುವುದಿಲ್ಲ. ಉದಾಹರಣೆಗೆ,  ಪೂರ್ವ ಪಾಕಿಸ್ತಾನದಲ್ಲಿ ( ಈಗಿನ ಬಾಂಗ್ಲಾದೇಶದಲ್ಲಿ) ಹುಟ್ಟಿ, ಬಾಂಗ್ಲಾದೇಶದಲ್ಲಿ ಬೆಳೆದ ತಸ್ಲಿಮಾ ನಸ್ರೀನ್ ವೃತ್ತಿಯಲ್ಲಿ ಪ್ರಸೂತಿ ತಜ್ಞೆ. ಆದರೆ ತನ್ನ ಬರಹಗಳಲ್ಲಿ ಆಕೆ ತೋರಿದ ಹೊಸ ದೃಷ್ಟಿಕೋನ ಆಕೆಯ ಧರ್ಮದ ಜನರು ಆಕೆಯ ವಿರುದ್ದವೇ ಫತ್ವಾ ಹೊರಡಿಸುವಂತೆ ಮಾಡಿತು. ಆಕೆಯ ಗಂಡ ನಾಲ್ಕೇ ವರ್ಷಗಳಲ್ಲಿ ವಿಚ್ಚೇದನ ನೀಡಿದ. ಪ್ರಾಣಭಯದಿಂದಾಗಿ  ಆಕೆ ಯೂರೋಪು ಮತ್ತು ಅಮೆರಿಕಾದಲ್ಲಿ ಹತ್ತು ವರ್ಷ ಬದುಕಿ, ಭಾರತಕ್ಕೆ ಬಂದರೆ ಅಲ್ಲಿನ ಆಕೆಯದೇ ಧರ್ಮದ ಮುಖಂಡರು ಮತ್ತೆ ಆಕೆಯ ಹತ್ಯೆಯ ಸಂಚು ಮಾಡಿದರು. ಧರ್ಮ ಎನ್ನುವುದು ಸಂವಿಧಾನಕ್ಕಿಂತ, ಮನುಷ್ಯತ್ವಕ್ಕಿಂತ, ಕಾನೂನಿಗಿಂತ ಹೆಚ್ಚಿನದೆಂದು ನಂಬಿದ ಯಾವ ದೇಶಗಳಲ್ಲಿಯೂ ಆಕೆ ಸಲ್ಲುತ್ತಿಲ್ಲ. ಸಲ್ಮಾನ್ ರಶ್ದಿಯನ್ನು, ಸಾನಿಯಾ ಮಿರ್ಝಳನ್ನೂ ಇವೇ ಧರ್ಮದ ವಿಚಾರಗಳು ಕಾಡಿದವು.  ಆಗರ್ಭ ಶ್ರೀಮಂತರಾಗಿದ್ದವರು ಅಥವಾ ಪ್ರಾಣರಕ್ಷಣೆಗೆ ಮುಂದುವರೆದ ದೇಶಗಳಿಗೆ ಶರಣಾರ್ತಿ ಕೇಳಿ ಸೇರಿದವರು ಮಾತ್ರವೇ ಬದುಕುಳಿದಿರುವುದು. ಆಗೆಲ್ಲ ಇವರ ಧರ್ಮದ ಹೊರಗಿರುವ ನಾವು ’ಇವೆಲ್ಲ ಸಂಕುಚಿತ ಮನದ ಜನರ ಮತ್ತು ಅಸಹಿಷ್ಣುತೆಯ ಪ್ರತೀಕಗಳು’ ಎಂದು ಜರಿದೆವು. ಅಭಿವ್ಯಕ್ತಿ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಭಾಷಣ ಬಿಗಿದೆವು.

2017  ಸೆಪ್ಟೆಂಬರ್ ೫ನೇ ತಾರೀಖು ಸಂವಿಧಾನ ಬದ್ದ, ಸ್ವತಂತ್ರ ದೇಶ ಭಾರತದಲ್ಲಿ ವೈಚಾರಿಕತೆಯನ್ನು ಮತ್ತು ಪ್ರಭುತ್ವವನ್ನು ಪ್ರಶ್ನಿಸಿದ  ಪ್ರೊ.ಕಲ್ಬುರ್ಗಿ ಯ ನಂತರ ಮತ್ತೊಂದು ಹತ್ಯೆಯಾಯ್ತು. ಅದು ಪತ್ರಿಕೋದ್ಯಮಿ, ಬರಹಗಾರ್ತಿ ಗೌರಿ ಲಂಕೇಶರದ್ದು !

ಹಲವರು ಸತ್ತ ನಂತರ ಹೆಚ್ಚು ಬೆಳಕಿಗೆ ಬರುತ್ತಾರಂತೆ. ಗೌರಿಯ ವಿಚಾರದಲ್ಲೂ ಇದೇ ನಿಜವಾಯ್ತು. ಗೌರಿ ಲಂಕೇಶ್  ಸಣ್ಣ ವಯಸ್ಸಿಗೇ ಪತ್ರಿಕೋದ್ಯಮಕ್ಕೆ ಬಂದ ಕಾರಣ ಸಾಯುವ ವೇಳೆಗೆ ೩೨ ವರ್ಷಗಳ ಕಾಲ ಈ ಕ್ಷೇತ್ರದಲ್ಲಿ ದುಡಿದಿದ್ದರು.

ಇವರು ಹಲವು ಪುಸ್ತಕಗಳನ್ನು ಬರೆದಿದ್ದಾರೆ. ೧) ಗಿಡುಗಗಳಿಗೆ ಬಲಿಯಾದ ಬೆನಝಿರ್ ಭುಟ್ಟೋ (೨೦೦೮). ೨) ಕಂಡಹಾಗೆ-ಸಂಪಾದಕೀಯ ಬರಹಗಳ ಸಂಗ್ರಹ-೧ (೨೦೦೯). ೩) ಕಂಡಹಾಗೆ-ಸಂಪಾದಕೀಯ ಬರಹಗಳ ಸಂಗ್ರಹ-೨ (೨೦೧೧). ೪) ಕಂಡಹಾಗೆ-ಸಂಪಾದಕೀಯ ಬರಹಗಳ ಸಂಗ್ರಹ-೩ (೨೦೧೩), ೫)  ಎಲ್. ಬಸವರಾಜು ಬದುಕು ಮತ್ತು ಮಾರ್ಗ-ಸಂಪಾದನೆ (೨೦೧೦). ೬) ದರವೇಶಿ ಕಥೆಗಳು-  ಇಂದ್ರೀಶ್ ಶಾ ರ ಪುಸ್ತಕ ಅನುವಾದ (೨೦೦೨). ೭) ಕಪ್ಪು ಮಲ್ಲಿಗೆ- ಅನುವಾದಿತ ಆಧುನಿಕ  ಸಣ್ಣ ಕಥೆಗಳ ಸಂಚಯ (೨೦೧೦). ೮) ಜುಗಾರಿ ಕ್ರಾಸ್- ಪೂರ್ಣ ಚಂದ್ರ ತೇಜಸ್ವಿಯವರ ಕನ್ನಡ ಕಥೆಯ ಇಂಗ್ಲಿಷ್ ಅನುವಾದ (೨೦೦೪). ೯) ಆವರಣ (ಎಸ್. ಎಲ್. ಭೈರಪ್ಪ) ರ  ಪುಸ್ತಕ ವಿಮರ್ಶಾ ಲೇಖನಗಳ ಸಂಪಾದನೆ (೨೦೦೭) . ೧೦) ಇವೆಲ್ಲ ಪ್ರಕಟಣೆಗಳ ಜೊತೆ ಒಟ್ಟು ೩೨ ವರ್ಷಗಳ ಕಾಲದ ಪತ್ರಿಕೋದ್ಯಮ ಬರಹಗಳು ( ೧೫ ವರ್ಷ ಇಂಗ್ಲಿಷ್ ಮತ್ತು ಸಾಯುವ ದಿನಗಳವರೆಗಿನ ೧೭ ವರ್ಷಗಳ ಕನ್ನಡ ಪತ್ರಿಕೋದ್ಯಮ).

ಕೃಪೆ: ಮಂಜುಲ್

ಕನ್ನಡ ಪತ್ರಿಕೋದ್ಯಮ ಮತ್ತು ಬರವಣಿಗೆಯಲ್ಲಿ ಬಂಡಾಯ, ಹೊಸತನ, ನವೀನ ಶೈಲಿಯನ್ನು ತಂದ ಪ್ರತಿಭಾವಂತ ಪತ್ರಿಕೋದ್ಯಮಿ ಪಾಳ್ಯದ ಲಂಕೇಶ್.  ಈ ಉದ್ಯಮದ ಯಾರಿಗೂ ಸೊಪ್ಪು ಹಾಕದ ಈತ ಜಾಹೀರಾತುಗಳೇ ಇಲ್ಲದೆ 2 ಲಕ್ಷಕ್ಕೂ ಹೆಚ್ಚಿದ್ದ ಚಂದಾದಾರರ ಹಣದಿಂದಲೇ ಪತ್ರಿಕೆ ನಡೆಸಿ, ಸಿನಿಮಾ ಮಾಡಿ, `ಪ್ರಗತಿ ರಂಗ’ ಎಂಬ ರಾಜಕೀಯ ಪಕ್ಷವನ್ನೂ ಕಟ್ಟಿದ್ದ ವ್ಯಕ್ತಿ. ಹೊಸ ಬಗೆಯ ಕನ್ನಡ ಪತ್ರಿಕೋದ್ಯಮಕ್ಕೆ  ನಾಂದಿ ಹಾಡಿದ ಈತ ತನ್ನಂತೆ ಹೊಸದಾಗಿ ಬರೆಯಬಲ್ಲ, ಹೊಸದಾಗಿ ಯೋಚಿಸಬಲ್ಲ ಎಲ್ಲರಿಗೂ ಪ್ರಿಯವಾದ ವ್ಯಕ್ತಿ. ಆದರೆ ಎಲ್ಲ ಹೊಸತನ್ನೂ ವಿರೋಧಿಸುವ ನಮ್ಮ ಸಮಾಜದಲ್ಲಿ ಈತನ ವಿರುದ್ಧವಾಗಿ ನಿಂತವರು ಬಹಳ ಮಂದಿ. ಆದರೆ ಅಂಥವರ ಹಣದ ಮರ್ಜಿಗೆ ಬಿದ್ದಿಲ್ಲದ ಈತನನ್ನು ಮಿತಗೊಳಿಸುವುದು, ಕಟ್ಟಿಹಾಕುವುದು ಕಷ್ಟವಾಗಿತ್ತು. ಇವರ ಮೊದಲ ಪುತ್ರಿ ಗೌರಿ.

ಅಪ್ಪನ ಬಗ್ಗೆ ಈಕೆಗೆ ಇನ್ನಿಲ್ಲದ ಅಭಿಮಾನವಿದ್ದರೂ ಅದನ್ನು ವ್ಯಕ್ತಪಡಿಸಲು  ಈಕೆಗೆ ಲಂಕೇಶ್ ನೀಡಿದ ಅವಕಾಶಗಳು ಬಹಳ ಕಡಿಮೆ. ಆದರೆ ವಿಚಾರಶೀಲ ಮಗಳಾಗಿದ್ದ ಗೌರಿಗೆ ಪೂರ್ಣ ವ್ಯಕ್ತಿ ಸ್ವಾತಂತ್ರ್ಯ ನೀಡಿದ್ದರು. ಈಕೆ ಓದಿದ್ದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ. ಮುಂದೆ ಡೆಲ್ಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ನ ಪತ್ರಿಕೋದ್ಯಮ ವಿಭಾಗದಲ್ಲಿ. ಅದಾದ ನಂತರ ಅಮೆರಿಕಾ, ಫ್ರಾನ್ಸ್ ಮತ್ತು ಸೌತ್ ಆಫ್ರಿಕಾದಲ್ಲಿ ಪತ್ರಿಕೋದ್ಯಮದಲ್ಲಿ ತರಬೇತಿ ಪಡೆದು ಬಂದ ಗೌರಿ ಟೈಮ್ಸ್ ಆಫ್ ಇಂಡಿಯಾ, ಸಂಡೆ ಮತ್ತು ದಿಲ್ಲಿಯ ಈ ಟಿವಿ ಚಾನೆಲ್ಲಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಹದಿನೈದು ವರ್ಷಗಳ ಕಾಲ ಕೆಲಸ ಮಾಡಿದರು. ಈಕೆಯ ವಿಚಾರಗಳು ವಿದೇಶಿಯರ ಉದಾರ ನೀತಿಯ ವಿಚಾರ ಮಟ್ಟದಲ್ಲಿದ್ದು, ಸೀಮಿತವಾದ ದೇಶೀ ಅರಿವಿನ ಮಿತಿಯೊಳಗೆ ಮಾತ್ರ ಇರಲು ನಿರಾಕರಿಸುತ್ತಿತ್ತು. ಜಾತಿ ,ಮತ ಮತ್ತು ಧಾರ್ಮಿಕ ನಂಬಿಕೆಗಳು ಪ್ರಜಾಪ್ರಭುತ್ವಕ್ಕಿಂತ ದೊಡ್ಡವಲ್ಲ ಎಂಬ ಈಕೆಯ ನಂಬಿಕೆಗಳು ಹಲವರಿಗೆ ಜೀರ್ಣವಾಗಿರಲಿಲ್ಲ. ಉದಾರೀಕರಣವಾದಿ ಶಿಕ್ಷಣ, ಅಪ್ಪಟ ಜಾತ್ಯಾತೀತತೆ, ಮುಕ್ತ ಮನಸ್ಸು ಮತ್ತು ಬದುಕಿನ ಬಗ್ಗೆ ಪ್ರೀತಿ ಇದ್ದ ಗೌರಿಯಲ್ಲಿ ಸಣ್ಣತನ, ಕುಟಿಲತೆಯ ಲವಲೇಶಗಳು ಇರಲಿಲ್ಲ.

ಗೌರಿ ಲಂಕೇಶ್ ಪತ್ರಿಕೆ

ಲಂಕೇಶ್ ಆ ಕಾಲದಲ್ಲಿ ಕುವೆಂಪು ಅವರ ಸರಳ ಮದುವೆ  ’ಮಂತ್ರ ಮಾಂಗಲ್ಯ’ ವನ್ನು ಇತರರಿಗೆ ಮಾಡಿಸುತ್ತಿದ್ದರು. ಆದರೆ ತಮ್ಮದೇ ಮಗಳಾದ ಗೌರಿಗೆ ಅದ್ದೂರಿಯಾಗೇ ಮದುವೆ ಮಾಡಬೇಕೆಂದು ಅಂದುಕೊಂಡಿದ್ದರು. ಗೌರಿ ಇದನ್ನು ವಿರೋಧಿಸಿದವಳು. ಆಕೆಯನ್ನು ಒಪ್ಪಿದ ಮತ್ತು ತಾಯಿ ಅಳಿಯನಾಗಲೆಂದು ಆಸೆಪಟ್ಟ ಇಬ್ಬರು ವೈದ್ಯ ಗಂಡುಗಳನ್ನು ನಿರಾಕರಿಸಿ ತಾನು ಪ್ರೀತಿಸಿದ ವೈದ್ಯನೋರ್ವನ ಮಗ ಪತ್ರಿಕೋದ್ಯಮಿ ಚಿದಾನಂದ ರಾಜಘಟ್ಟ ಎಂಬುವವನೊಂದಿಗೆ ಸರಳವಾಗಿ ರಿಜಿಸ್ಟರ್ ಮದುವೆಯಾದವಳು. ಅದನ್ನು ಸಮ್ಮತಿಸಿದ್ದ ಲಂಕೇಶ್ ಅವರೊಡನೆ ಉತ್ತಮ ಸಂಬಂಧ ಹೊಂದಿದ್ದರು. ಆರ್ಥಿಕವಾಗಿ ಸುಖವಾಗೇ ಬೆಳೆದ ಗೌರಿ ಮತ್ತು ಚಿದಾನಂದ ಮದುವೆಯ ನಂತರ ಎರಡೂ ಕಡೆಯಿಂದ ಆರ್ಥಿಕ ಸಹಾಯವನ್ನು ನಿರಾಕರಿಸಿ ತಮ್ಮದೇ ಬದುಕನ್ನು ಕಟ್ಟಿಕೊಂಡವರು. ಅಲ್ಲಿಂದಲೆ ಗೌರಿಯ ಸ್ವತಂತ್ರ ವ್ಯಕ್ತಿತ್ವ ಶುರುವಾಗಿತ್ತು.

೨೦೦೦ದಲ್ಲಿ ಲಂಕೇಶ್ ಸತ್ತ ನಂತರ ತಂದೆಯ ಮೇಲಿನ ಅಗಾಧವಾದ ಪ್ರೀತಿಗೆ ತನ್ನ ೧೫ ವರ್ಷಗಳ ವೃತ್ತಿಪರ  ಆಂಗ್ಲ ಭಾಷಾ ಕೆಲಸವನ್ನು ಬಿಟ್ಟು, ಕನ್ನಡ ಪತ್ರಿಕೆಯನ್ನು ನಡೆಸಲು ಕರ್ನಾಟಕಕ್ಕೆ ಧಾವಿಸಿ ಬಂದಳು. ತಂದೆ ಸತ್ತ ಮರುವಾರವೂ ಪತ್ರಿಕೆ ನಿಲ್ಲದಂತೆ ನಡೆಸಿದಳು. ಇಂಗ್ಲೀಷ್ ಪತ್ರಿಕೆಯಷ್ಟೇ ನಿರ್ಭಿಡತೆಯನ್ನು ಕನ್ನಡ ಪತ್ರಿಕೆಗೂ ತರಲು ಮುಂದಾದಳು. ಆದರೆ ಅವಳಿಗೆ ಮುಂದೆ ಆಘಾತ ಕಾದಿತ್ತು. ಲಂಕೇಶ್ ಸತ್ತಾಗ ಪತ್ರಿಕೆಯ ಪೂರ್ತಿ ವಾರಸುದಾರಿಕೆಯನ್ನು ಈಕೆಯ ತಮ್ಮ ಇಂದ್ರಜಿತ್ ಗೆ ಮಾಡಿದ್ದರು. ಪತ್ರಿಕೆಗಳಲ್ಲಿ ಏನನ್ನೇ ಬರೆದರೂ ಗಂಡು ಮಗನಿಗೆ ಎಲ್ಲವನ್ನೂ ಬರೆದು ಗೌರಿ ಮತ್ತು ಕವಿತಾ ಇಬ್ಬರಿಗೂ .ಲಂಕೇಶ್ ಪತ್ರಿಕೆಯ ಪಾಲುದಾರಿಕೆಯನ್ನು ನೀಡಿರಲಿಲ್ಲ. ಗೌರಿ ’ಲಂಕೇಶ್ ಪತ್ರಿಕೆ” ಯಲ್ಲಿ ಐದು ವರ್ಷಗಳ ಕಾಲ ಕೇವಲ ಒಬ್ಬ ಕೆಲಸಗಾರಳಾಗಿದ್ದಳು. ತಾತ್ವಿಕ ಭಿನ್ನಾಭಿಪ್ರಾಯಗಳ ಕಾರಣ  ಮುಂದೆ ಗೌರಿ ಈ ಪತ್ರಿಕೆಯನ್ನು ಬಿಟ್ಟು, ಯಾವತ್ತೋ ನೋಂದಣಿ ಮಾಡಿಸಿದ್ದ ತನ್ನದೇ ಹೆಸರಿನ `ಗೌರಿ ಲಂಕೇಶ್ ಪತ್ರಿಕೆ’ಯನ್ನು ಶುರು ಮಾಡಿದಳು. ಹಾಗಾಗಿ ಅಪ್ಪನ ಪತ್ರಿಕೆಯನ್ನು ಮಾತ್ರವೇ ನಡೆಸುತ್ತಿದ್ದಳು ಎಂದುಕೊಂಡವರಿಗ ನಿಜದ ಅರಿವೇ ಇಲ್ಲದಿರುವುದು ಸ್ಪಷ್ಟ. ಆದರೆ ಅಪ್ಪ ಕೂರುತ್ತಿದ್ದ ಕುರ್ಚಿಯನ್ನು ತನ್ನ ಕುರ್ಚಿಯ ಪಕ್ಕ ಹಾಕಿಕೊಂಡು ಕೂತು ಕೆಲಸಮಾಡುತ್ತಿದ್ದ ಅವಳನ್ನು `ರಾಮನ ಪಾದುಕೆಯನ್ನು ಇಟ್ಟುಕೊಂಡು ರಾಜ್ಯ ಭಾರ ಮಾಡಿದ ಭರತನಂತೆ’ ಎಂದು ಕುಚೋದ್ಯ ಮಾಡಿ ನಗುತಿದ್ದ ಜನರೂ ಇದ್ದರು. ಸಣ್ಣದೊಂದು ಪತ್ರಿಕೆಯನ್ನು ಅಪ್ಪನ ರೀತಿಯಲ್ಲೆ ಪತ್ರಿಕೆ ನಡೆಸಬೇಕೆಂದು ಆಕೆ ಪ್ರಯತ್ನಿಸಿದ ಕಾರಣ ’ಲಂಕೇಶ್ ಪುತ್ರಿಕೆ’ ಎಂದು ಚುಡಾಯಸಿದರೂ ಇದ್ದರು. ಅಪ್ಪನ ರೀತಿಯಲ್ಲೇ ಜಾಹೀರಾತು ಇಲ್ಲದೆ ಪತ್ರಿಕೆ ನಡೆಸಲು ಮುಂದಾದ ಗೌರಿಗೆ ಕಾಡಿದ ಹಣಕಾಸಿನ ಮುಗ್ಗಟ್ಟು ಅಷ್ಟಿಷ್ಟಲ್ಲ. ಆದರೆ ರಾಜಕಾರಣಿಗಳನ್ನು ಓಲೈಸಿ ಬರೆಯಲು, ಜಾಹೀರಾತುಗಾರರ ಮುಲಾಜಿಗೆ ಬೀಳಲು ಆಕೆ ಸುತಾರಾಂ ಒಪ್ಪಲಿಲ್ಲ. ಲಂಕೇಶ್ ಪ್ರಕಾಶನದಿಂದ ಪ್ರಕಟಿಸಿದ ಪುಸ್ತಕ ಮತ್ತು ತನ್ನ ಪುಸ್ತಕಗಳ ಆದಾಯ ಎಲ್ಲವನ್ನೂ ಆಕೆ ಪತ್ರಿಕೆಗಾಗಿಯೇ ಸುರಿದಳು. ತಾನು ಸಾಯುವ ದಿನಗಳಲ್ಲಿ ತನ್ನ ಜೀವ ವಿಮೆಯ ಹಣವನ್ನೂ ತೆಗೆದು ಎಲ್ಲರಿಗೂ ಸಂಬಳ ನೀಡಿದ್ದಳು. ಹಲವು ರಾಜಕಾರಣಿಗಳ ಕುಮ್ಮಕ್ಕು, ಹಣ ಸರಬರಾಜು ಇದ್ದಿದ್ದಲ್ಲಿ ಇವೆಲ್ಲದರ ಅಗತ್ಯ ಈಕೆಗೆ ಇರಲಿಲ್ಲ. ಅದೇ ರೀತಿ ತಾನು ನಂಬಿದ ಧ್ಯೇಯಗಳಿಗಾಗಿಯಲ್ಲದಿದ್ದರೆ ನಮ್ಮ- ನಿಮ್ಮಂತೆ ಒಂದು ವೃತ್ತಿಯನ್ನು ಮಾಡಿಕೊಂಡು ದೈಹಿಕವಾಗಿ, ಸಾಮಾಜಿಕವಾಗಿ ಸುಖವಾಗಿರಲು ಯಾವ ತೊಂದರೆಗಳೂ ಇರಲಿಲ್ಲ. ಇನ್ನೊಬ್ಬರಿಗೆ ಯಾವ ಧ್ಯೇಯಗಳು ಇರಬೇಕು ಅಥವಾ ಇರಬಾರದು ಎಂಬುದನ್ನು ಅವರು ಇನ್ನೊಬ್ಬರಿಗೆ ಸಂವಿಧಾನೇತರ ರೀತಿಯಲ್ಲಿ ಕಿರುಕುಳ ಕೊಡದಿದ್ದಲ್ಲಿ ನಾವು ಹೇಳುವುದು, ನಿರ್ಣಯಮಾಡುವುದು ಸರಿಯೂ ಅಲ್ಲ. ಅಥವಾ ಆಕೆ ಹಣಮಾಡಲಿಲ್ಲ, ಪತ್ರಿಕೆಯನ್ನು ಲಾಭದಾಯಕವಾಗಿ ನಡೆಸಲಿಲ್ಲ ಎಂಬ ಕಾರಣಕ್ಕೆ ಆಕೆ ಪತಿತಳಾಗುವುದೂ ಇಲ್ಲ. ಆದರೆ ಈಕೆಯ ನಿರುಮ್ಮಳತೆಯನ್ನು ಸಹಿಸದ ಹಲವರು ಹಾಗೆಂದು ಅಪಪ್ರಚಾರ ಮಾಡುತ್ತ ಬಂದರು.

ಪತ್ರಿಕೆ ನಡೆಸುವವರಿಗೆ ಬೆದರಿಕೆಗಳು ಮತ್ತು ಮಾನನಷ್ಟ ಮೊಕದ್ದಮೆಗಳು ಬರುವುದು ಸರ್ವೇಸಾಮಾನ್ಯ. ಅವು ಬೇಡವೇ ಬೇಡವೆಂದರೆ ಸಾಹಿತ್ಯಕ, ಸಿನಿಮಾ ಅಥವಾ ಮನರಂಜನೆಯ ಪತ್ರಿಕೆಗಳನ್ನು ಮಾತ್ರ ನಡೆಸಲು ಸಾಧ್ಯ. ಗೌರಿಗೂ ಇಂತಹ ಬೆದರಿಕೆಗಳು ಬರುತ್ತಿದ್ದವು. ರಾಜಕಾರಣಿಗಳು ರಕ್ಷಣೆ ಒದಗಿಸುತ್ತೇವೆಂದಾಗಲು, ಮುಲಾಜಿಲ್ಲದೆ ಸಿಗದಿದ್ದ ಈ ರಕ್ಷಣೆಯನ್ನು ಗೌರಿ ನಿರಾಕರಿಸಿದ್ದಳು. ತನಗಿದ್ದ ಪತ್ರಿಕಾ ರಂಗದ ವಶೀಲಿಯನ್ನು ತನ್ನ ಹಣಕಾಸಿನ ವಿಚಾರಕ್ಕೆ ಉಪಯೋಗಿಸಿಕೊಳ್ಳದೆ ತಾನು ನಂಬಿದ್ದ ಧ್ಯೇಯಗಳಿಗಾಗಿ ಮಾತ್ರ ಬಳಸುತ್ತಿದ್ದಳು. ಗೌರಿಯ ಅನುಯಾಯಿಗಳು ನಾಥುರಾಂ ಗೋಡ್ಸೆಯನ್ನು ಭಾರತದ ನೇತಾರರೆಂದು ಕರೆಯಲು ತಯಾರಿಲ್ಲದವರಾಗಿದ್ದರು. ಮೋದಿ ಮಾತ್ರ ನಮ್ಮ ದೇಶದ ಮಹಾತ್ಮನೆಂದು ಕರೆಯಲು ಸಿದ್ದರಿಲ್ಲದವರು. ಹಿಂದುತ್ವ ಅಥವಾ ಹಿಂದೂವಾದಿ ರಾಷ್ಟ್ರದ ಹೆಸರಲ್ಲಿ ಸಮಾಜವನ್ನು ಹಿಂದೂ, ಮುಸಲ್ಮಾನ, ಕ್ರಿಶ್ಚಿಯನ್ನರೆಂದು ಮತೀಯವಾಗಿ ಒಡೆದು  ಭಾರತದಲ್ಲಿ ಮತ್ತೊಂದು ಮಾರಣಹೋಮ ಮಾಡುವ ವಿಚಾರವನ್ನು ವಿರೋಧಿಸಿದವರು, ನಿರಾಕರಿಸಿದವರು. ಹಾಗಾಗಿ, ಮೋದಿಯನ್ನು ಮತ್ತು ಇತ್ತೀಚೆಗಿನ ಹೊಸ ಆರ್. ಎಸ್.ಎಸ್ ಅನ್ನು ಉಗ್ರವಾಗಿ ಮತ್ತು ನೇರವಾಗಿ ಖಂಡಿಸಿದವರು. ಪ್ರತಿ ರಾಜಕೀಯ ಪಕ್ಷಕ್ಕೆ ವಿರೋಧ ಪಕ್ಷಗಳಿರುವುದು ಹೇಗೆ ಒಳಿತೋ ಹಾಗೆಯೇ ವಿರುದ್ಧವಾದ ಪತ್ರಿಕಾ ದೃಷ್ಟಿಕೋನಗಳಿರುವುದು ಮುಕ್ತ ಸಮಾಜವನ್ನು ತೋರಿಸುತ್ತದೆಯೇ ಹೊರತು ಸಂಕುಚಿತ ಸಮಾಜವನ್ನಲ್ಲ. ಅದನ್ನು ವಿರೋಧಿಸುವ ದೃಷ್ಟಿಕೋನವಷ್ಟೆ ಸಂಕುಚಿತವಾದ್ದು.

೨೦೦೨ರಲ್ಲಿ ಬಾಬಾಬುಡನ್ ಗಿರಿಯನ್ನು  ಕರ್ನಾಟಕದ ಅಯೋಧ್ಯೆ ಮಾಡುತ್ತೇನೆಂದು ಅಂದಿನ ಸರ್ಕಾರ ಹೊರಟಾಗ, ಸಾಮಾಜಿಕ ಅಭಿಪ್ರಾಯಕ್ಕಾಗಿ ಒಂದು ಸಮಿತಿಯನ್ನು ನಿರ್ಮಿಸಲಾಗಿತ್ತು. ಗಿರೀಶ್ ಕಾರ್ನಾಡ್, ಕೆ. ಮರುಳ ಸಿದ್ದಪ್ಪ, ಗೋವಿಂದರಾವ್ ಜೊತೆಯಲ್ಲಿ ಗೌರಿಯೂ ಹೋಗಿದ್ದಳು. ಈ ಹುನ್ನಾರದ ಹಿಂದಿದ್ದ ರಾಜಕೀಯ ಮತ್ತು  ಫ್ಯಾಸಿಸ್ಟ್ ಸೈದ್ದಾಂತಿಕೆಯನ್ನು ಅರಿತ ಗೌರಿಯಲ್ಲಾದ ತಳಮಳ ಆಕೆಯನ್ನು ಸಮಾಜ ಕಾರ್ಯಕರ್ತೆಯನ್ನಾಗಿಸಿತು. ಕರ್ನಾಟಕ ಕೋಮು ಸೌಹಾರ್ದಾ ವೇದಿಕೆಯನ್ನು ಸೃಷ್ಟಿಸಿತು. ಆಕೆಯನ್ನು ಕೋಮು ಸೌಹಾರ್ದತೆಯ ಹಲವು ಹೋರಾಟಗಳಿಗೆ ಮುಂದುಮಾಡಿತು. ರಾಷ್ಟ್ರಮಟ್ಟದಲ್ಲಿ ಗೌರಿ ಗುರುತಿಸಲ್ಪಟ್ಟಳು  (ಇಪ್ಪತ್ತು ವರ್ಷಗಳ ಹಿಂದೆ ಬಾಬಾಬುಡನ್ ಗಿರಿಯ ದತ್ತಾತ್ತ್ರೇಯ- ದರ್ಗಾಕ್ಕೆ ನಾನು ಹೋಗಿ ಬಂದಿದ್ದೇನೆ. ಹಿಂದೂ -ಮುಸ್ಲಿಮ ಸ್ಥಳೀಯರು ಅತ್ಯಂತ ಶಾಂತಿಯುತವಾಗಿ ಇರುವ ಈ ಜಾಗದಲ್ಲಿ ಮತಧರ್ಮ ರಾಜಕಾರಣಕ್ಕೆ ಆಗ ಯಾವ ಜಾಗವೂ ಇರಲಿಲ್ಲ).

೨೦೦೪ರ ಮತ್ತೊಂದು ತಿರುವಿನಲ್ಲಿ ಗೌರಿಗೆ ಬೆಂಗಳೂರು ಮತ್ತು ದೆಹಲಿಯಲ್ಲಿ ಪತ್ರಿಕೋದ್ಯಮ ಓದುತ್ತಿರುವಾಗ ಆಕೆಗೆ ಸೀನಿಯರ್ ಆಗಿದ್ದ ಸಾಕೇತ ರಾಜನ್ ಎನ್ನುವ ಪತ್ರಕರ್ತ ಮತ್ತು ಮಾವೋವಾದಿ ಕಾರ್ಯಕರ್ತನ ಭೇಟಿಯಾಗುತ್ತದೆ. ಈ ನಕ್ಸಲೀಯ ನಾಯಕ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಗೌರಿ ಆತನನ್ನು ಮತ್ತೆ ಭೇಟಿಯಾಗುತ್ತಾಳೆ. ನಕ್ಸಲರು ಆಗ ಕರ್ನಾಟಕದ ಪಶ್ಚಿಮ ಘಟ್ಟಗಳನ್ನು ತಮ್ಮ ಹೋರಾಟತಾಣವನ್ನಾಗಿ ಮಾಡಿಕೊಳ್ಳುವ ಉತ್ಸಾಹದಲ್ಲಿದ್ದವರು. ಅವರ ಹೋರಾಟದ ಉದ್ದೇಶ ಉತ್ತಮವೇ ಆಗಿತ್ತು ಎಂದು ಮೆಚ್ಚಿಕೊಂಡಿದ್ದ ಗೌರಿ ಅವರು ಆರಿಸಿಕೊಂಡಿದ್ದ ಸಶಸ್ತ್ರ ಹೋರಾಟವನ್ನು ಖಂಡಿಸುತ್ತಾಳೆ. ಸೌಹಾರ್ದತೆಗೆ ಕರೆ ಕೊಡುತ್ತಾಳೆ. ಸರ್ಕಾರದೊಂದಿಗೆ ಶಾಂತಿಯುತ ಹೋರಾಟ ಮಾಡಲು ಕರೆಕೊಟ್ಟು ಅವರಲ್ಲಿ ಕೆಲವರು ಶಸ್ತ್ರತ್ಯಾಗ ಮಾಡಲು ಕರೆಕೊಟ್ಟು ನೆರವಾಗುತ್ತಾಳೆ. ಈಕೆಗಿದ್ದ ಸುಭಗ ಇಂಗ್ಲೀಷ್ ಭಾಷೆ, ಪತ್ರಿಕೋದ್ಯಮದ ಮತ್ತು ಸಮಾಜ ಕಾರ್ಯಕರ್ತೆಯ ಹಿನ್ನೆಲೆಗಾಗಿ ಸರ್ಕಾರ ಈಕೆಯನ್ನು  ಮಾವೋವಾದಿ ನಕ್ಸಲೀಯರ ಜೊತೆ ಶಾಂತಿ ಸಂಧಾನ ನಡೆಸಲು ಒಪ್ಪಿಸುತ್ತದೆ. ಆದರೆ ಸರ್ಕಾರ ಇವಳು ಶಾಂತಿಯುತ ಸಂಧಾನ ನಡೆಸುತ್ತಿರುವಾಗಲೇ ೨೦೦೫ರಲ್ಲಿ ಸಾಕೇತ್ ರಾಜ್ ಮತ್ತಿತರ ನಕ್ಸಲೀಯರನ್ನು ಗುಂಡಿಟ್ಟು ಕೊಲ್ಲುತ್ತದೆ. ಇದರಿಂದ ವಿಚಲಿತಳಾದ ಗೌರಿ, ಸರ್ಕಾರ ಮತ್ತು ನಕ್ಸಲೀಯರು ಇಬ್ಬರೂ ಶಾಂತಿಯುತ ಹೋರಾಟ ಮಡುವಂತೆ ಬರೆಯುತ್ತಲೇ ಹೋಗುತ್ತಾಳೆ. ೨೦೧೦ರ ವೇಳೆಗೆ ಗೌರಿ ಮಹಿಳೆಯರು, ದಲಿತರು, ನಕ್ಸಲರು ಎಲ್ಲರಿಗೂ ದನಿಯಾಗುತ್ತ ನಡೆಯುತ್ತಾಳೆ. ಈ ವೇಳೆಗೆ ಆಕೆ ಪತ್ರಕರ್ತೆಯಾಗಿ ಮಾತ್ರವಲ್ಲದೆ ಹೋರಾಟಗಾರ್ತಿಯಾಗಿಬಿಡುತ್ತಾಳೆ. ಹಿಂದುತ್ವವಾದೀ ಹೆಸರಲ್ಲಿ ದೇಶವನ್ನು ಒಡೆಯುವುದನ್ನು ೧೯೯೦ರಿಂದಲೇ  ಲಂಕೇಶ್ ಕೂಡ ವಿರೋಧಿಸುತ್ತ ಬಂದಿದ್ದ ವ್ಯಕ್ತಿ. ಅದನ್ನೇ ಮುಂದುವರೆಸುವ ಗೌರಿ ೨೦೦೩ರಲ್ಲೇ ಸುಳ್ಳುಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾಳೆ. ಗೌರಿ ಎಂಬ ಈ ದಿಟ್ಟ ಮಹಿಳೆ ವಿವಾದಗಳೇ ಇಲ್ಲದ ವ್ಯಕ್ತಿಯೇನಲ್ಲ. ವಿವಾದಗಳೇ ಇಲ್ಲದ ಸಾಮಾಜಿಕ ಕಾರ್ಯಕರ್ತರು, ಪತ್ರಿಕೋದ್ಯಮಿಗಳು ಇಲ್ಲವೂ ಇಲ್ಲ. ನೈತಿಕತೆಯ ಲವಲೇಶವೂ ಇಲ್ಲದೆ, ರಾಜಕೀಯ ದಾಳಗಳಾಗಿ, ಆತ್ಮಗಳನ್ನು ಮಾರಿಕೊಂಡ ಸಾವಿರಾರು ಪತ್ರಿಕೋದ್ಯಮಿಗಳು ನಮ್ಮ ದೇಶದಲ್ಲದ್ದಾರೆ. ಇವರ ಬಗ್ಗೆ ಚಕಾರ ಎತ್ತದ ಸಮಾಜ ಮಹಿಳೆಯೋರ್ವಳ ದಿಟ್ಟತನವನ್ನು ಮಾತ್ರ ಸಹಿಸದೆ ಪ್ರಹಾರಗಳನ್ನು ನೀಡುತ್ತ ಹೋಯಿತು. ಇಂತಹ ಹಲವು  ಘಟನೆಗಳಿಂದ ಆಕೆ ಕಲಿಯುತ್ತಲೇ ಹೋಗುತ್ತಾಳೆ. ಸಾಮಾಜಿಕ ಕಾರ್ಯಕರ್ತೆಯಾಗಿ ಅವಿರತ ದುಡಿಯುತ್ತಾಳೆ. ಒಂದಿಷ್ಟು ಗಳಿಕೆ, ಅದರಲ್ಲೇ ಪ್ರಪಂಚ ಗೆದ್ದ ಅತ್ಯಲ್ಪ ಸುಖಗಳು ಅವಳಿಗೆ ಸುಸಲಿತವಾಗಿ ಸಿಗಲು ಯಾವ ತಡೆಗಳು ಇಲ್ಲದಿದ್ದರೂ ಅವೆಲ್ಲಕ್ಕೂ ಮೀರಿ ಸಮಾಜವನ್ನು, ರಾಜಕೀಯವನ್ನು ಬದಲಿಸುವ ಕೆಲಸಗಳಿಗೆ ಮುಂದಾಗುತ್ತಾಳೆ.

ಚಿತ್ರಕೃಪೆ: ಸ್ಕ್ರೋಲ್.ಇನ್

೨೦೧೭ರಲ್ಲಿ ಆಕೆಯ ಹತ್ಯೆಯಾದಾಗ ಬರೀ ಪತ್ರಿಕೋದ್ಯಮದ ವ್ಯಕ್ತಿಗಳು ಮಾತ್ರವಲ್ಲದೆ ಯುವಕರು, ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು ಎಲ್ಲರೂ ರಸ್ತೆಗಿಳಿದು ಅವಳ ಹತ್ಯೆಯನ್ನು ಖಂಡಿಸಿದ್ದು ಇದೇ ಕಾರಣಕ್ಕೆ. ಆಕೆ ಬರೀ ಪತ್ರಕರ್ತೆ-ಬರಹಗಾರ್ತಿಯಲ್ಲದೆ ಸಾಮಾಜಿಕ ಕಾರ್ಯಕರ್ತೆ ಮತ್ತು ಹೋರಾಟಗಾರ್ತಿಯಾಗಿದ್ದು ಪ್ರಜಾಪ್ರಭುತ್ವದಲ್ಲಿ ಸಂಪೂರ್ಣ ನಂಬಿಕೆಯಿಟ್ಟ ವ್ಯಕ್ತಿಯಾಗಿದ್ದಳು. ೨೦೧೦ ಮತ್ತು ನಂತರದ ೨೦೧೩ರ ರಾಜಕೀಯ ಪಕ್ಷಗಳು ಈ ಉದಾರಿ ಮತ್ತು ಮುಕ್ತಮನಸ್ಸಿನ ಹೆಣ್ಣನ್ನು ತಮ್ಮ ಆಟಗಳಿಗೆ ಬಳಸಿಕೊಂಡವೋ ಹೇಳಲಾಗುವುದಿಲ್ಲ. ಆದರೆ ಈ ಕಾರಣಕ್ಕೆ ಒಬ್ಬ ಧ್ಯೇಯವಂತ ಪತ್ರಕರ್ತೆಯ ಬಲಿಯಂತೂ ಆಯಿತು. ಅಸಂವಿಧಾನಕ ರೀತಿಯಲ್ಲಿ ಪ್ರತಿದಿನ ಕ್ರೌರ್ಯಗಳನ್ನು ಮಾಡುವ ಹಲವರು ಧುರೀಣರು ನಮ್ಮ ನಡುವೆ ತಲೆಯೆತ್ತಿ ಓಡಾಡುತ್ತಾರೆ. ಸಂವಿಧಾನ ಶಿಕ್ಷಿಸಬಲ್ಲಂತ ಒಂದೇ ಒಂದು ತಪ್ಪುನ್ನು ಗೌರಿ ಮಾಡಿದ್ದಿದ್ದರೆ ಆಕೆಯನ್ನು ಜೈಲಿಗೆ ತಳ್ಳಲು ಯಾವುದೇ ಅಡೆ ತಡೆಗಳಿರಲಿಲ್ಲ. ಅಂತಹ ಯಾವ ತಪ್ಪನ್ನೂ ಮಾಡದ ಗೌರಿ ಪ್ರಭುತ್ವವನ್ನು ಪ್ರಶ್ನಿಸಿದ ಒಂದೇ ಕಾರಣಕ್ಕೆ ಹತ್ಯೆಗೊಳಗಾಗಿದ್ದು ಅಭವ್ಯಕ್ತಿ ಸ್ವಾತಂತ್ರ್ಯಕ್ಕೆ ಮಾಡಿದ ಅತ್ಯಾಚಾರವಾಯ್ತು. ಆಕೆ ಬದುಕಿದ್ದಿದ್ದರೆ ಸಿಗದಷ್ಟು ಹೆಸರು ಅವಳಿಗೆ ಸಿಕ್ಕಿತು. ಈ ಕಾರಣಗಳಿಗಾಗಿ ಗೌರಿ ಧೈರ್ಯ, ಧ್ಯೇಯಗಳಿಗೆ ಬದ್ದಳಾದ ಪತ್ರಿಕೋದ್ಯಮಿ ಬರಹಗಾರ್ತಿಯಾಗಿ ಗುರುತಿಸಲ್ಪಟ್ಟಳು.

ಈಕೆಯ ಬರಹದಲ್ಲಿ ಖಂಡಿತವಾಗಿ ಕಾಲ್ಪನಿಕ ಪಾತ್ರಗಳಿಲ್ಲ. ಅವೆಲ್ಲ ಕಥೆ, ಕಾವ್ಯ ಮತ್ತು ಕಾದಂಬರಿಗಳಿಗೆ ಸೀಮಿತ. ಪತ್ರಿಕೋದ್ಯಮದ ಬರಹಗಾರ್ತಿಯಾದ ಗೌರಿಯ ವಿಚಾರದಲ್ಲಿ ಈ ಕಾರಣಕ್ಕೇ ’ಬದುಕು ಮತ್ತು ಬರಹ ’ ವನ್ನು ಒತ್ತಟ್ಟಿಗಿಟ್ಟು ನೋಡಲು ಸಾಧ್ಯವಿದೆ.

ಉಮಾ ವೆಂಕಟೇಶ್ ಬರೆವ ವಿಜ್ಞಾನ ಮತ್ತು ವನಿತೆಯರು ಸರಣಿ: ಲೀಸ ಮೈಟ್ನರ್

ಲೇಖಕರು: ಉಮಾ ವೆಂಕಟೇಶ್

ಉಮಾ ವೆಂಕಟೇಶ್, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆಯ ಸಂಸ್ಥಾಪಕರಲ್ಲಿ ಒಬ್ಬರು. `ಕನ್ನಡವೆನೆ ಕಿವಿ ನಿಮಿರುವುದು` ಎಂದು ಕವಿ ಇವರನ್ನೇ ನೋಡಿ ಬರೆದಿರಬೇಕು. ಕನ್ನಡದ ಸೇವೆಗೆ ಎಲ್ಲಿದ್ದರೂ ಹಾಜರು. ಕನ್ನಡ ಸಾಹಿತ್ಯ, ಅದರಲ್ಲೂ ವೈಜ್ಞಾನಿಕ ಸಾಹಿತ್ಯ ಇವರ ಮುಖ್ಯ ಆಸಕ್ತಿ. ಇಂಗ್ಲಂಡಿನಲ್ಲಿ ವಿಜ್ಞಾನಿ ಪತಿಯೊಡನೆ `ಅನಿವಾಸಿ` ಬಳಗದ ಪ್ರಮುಖ ಪ್ರೇರಕಶಕ್ತಿಯಾಗಿದ್ದವರು, ಈಗ ಅಮೇರಿಕದಲ್ಲಿ ನೆಲೆಸಿದ್ದಾರೆ. ಆದರೂ ನಮ್ಮ ನಂಟನ್ನು ಬಿಟ್ಟುಕೊಟ್ಟಿಲ್ಲ ಎನ್ನುವುದಕ್ಕೆ ಈ ಲೇಖನ ಬರೆದು ಕೊಟ್ಟಿದ್ದಾರೆ.

ನೋಬೆಲ್ ಪಾರಿತೋಷಕ ವಂಚಿತ ಅಪ್ರತಿಮ ಪ್ರತಿಭಾಶಾಲಿ ಮಹಿಳೆ: ಪರಮಾಣು ವಿದಳನದ ಪ್ರಥಮಾನ್ವೇಷಕಿ ಲೀಸ ಮೈಟ್ನರ್

“ವಿಜ್ಞಾನವು ಸಾಮಾನ್ಯ ಮಾನವರನ್ನು ಸತ್ಯ ಮತ್ತು ವಸ್ತುನಿಷ್ಠತೆಯತ್ತ ನಡೆಯಲು ಪ್ರೇರೇಪಿಸಿ, ವಾಸ್ತವತೆಯನ್ನು ಆಶ್ಚರ್ಯ ಮತ್ತು ಮೆಚ್ಚುಗೆಯೊಂದಿಗೆ ಸ್ವೀಕರಿಸುತ್ತಾ ಮುನ್ನಡೆಯುವುದನ್ನು ಕಲಿಸಿದರೆ, ವಸ್ತುಗಳ ನೈಸರ್ಗಿಕ ಕ್ರಮವು ವಿಜ್ಞಾನಿಗಳಲ್ಲಿ ವಿಸ್ಮಯ ಮತ್ತು ಅತ್ಯಾನಂದದ ಭಾವನೆಗಳನ್ನು ಉಕ್ಕಿಸುತ್ತದೆ”.

1940ನೆ ಇಸವಿಯ ಶರತ್ಕಾಲದಲ್ಲಿ, ದಕ್ಷಿಣ ಆಫ಼್ರಿಕಾದ ನವತರುಣಿಯೊಬ್ಬಳು, ತಾನು ವಿಜ್ಞಾನಿಯಾಗುವ ಆಕಾಂಕ್ಷೆಯ ಹೊಂದಿರುವೆ ಎಂದು ವಿವರಿಸಿ, ಅಂದಿನ ಪ್ರಖ್ಯಾತ ಭೌತಶಾಸ್ತ್ರಜ್ಞನೆನಿಸಿದ್ದ ಸರ್ವಕಾಲಿಕ ಮಹಾಮೇಧಾವಿ ಆಲ್ಬರ್ಟ್ ಐನಸ್ಟೈನನಿಗೆ ಪತ್ರವೊಂದನ್ನು ಬರೆದಿದ್ದಳು. ಆ ಪತ್ರವನ್ನು ಕೊನೆಗೊಳಿಸುವಾಗ ದೈನ್ಯಭಾವದಿಂದ, “ನಾನೊಬ್ಬಳು ಹುಡುಗಿಯೆಂದು ನನ್ನ ಬಗ್ಗೆ ತಪ್ಪಾಗಿ ತಿಳಿಯುವುದಿಲ್ಲ ಎಂದು ಭಾವಿಸುತ್ತೇನೆ,” ಎನ್ನುತ್ತಾ ಮುಗಿಸಿದ್ದಳು. ಅಂದು ಐನಸ್ಟೈನನು ಆಕೆಗೆ ಬರೆದ ಆಶ್ವಾಸನೆಯ ಉತ್ತರದಲ್ಲಿ, ಆತನ ಅಸಾಮಾನ್ಯ ಬುದ್ಧಿವಂತಿಗೆ ಮತ್ತು ಲೋಕಜ್ಞಾನಗಳನ್ನು ಪ್ರತಿಬಿಂಬಿಸುವ ಮಾತುಗಳು ಇಂದಿಗೂ ಅನುರುಣಿಸುತ್ತದೆ: “ನೀನು ಒಬ್ಬಳು ಹುಡುಗಿ ಎನ್ನುವ ವಿಷಯದ ಬಗ್ಗೆ ನನಗೇನೂ ಆಕ್ಷೇಪಣೆಯಿಲ್ಲ; ಆದರೆ ಮುಖ್ಯ ವಿಷಯವೆಂದರೆ ಆ ಅಂಶದ ಕಡೆಗೆ ನೀನೂ ಕೂಡಾ ಗಮನಕೊಡಬಾರದು, ಆ ರೀತಿಯ ಕೀಳುಭಾವನೆಗೆ ಇಲ್ಲಿ ಯಾವ ಕಾರಣಗಳೂ ಇಲ್ಲ,” ಎಂದು ಬರೆದಿದ್ದ ಅವನ ಮಾತುಗಳ ಹಿಂದೆ, ಮಹಿಳೆಯರ ಬಗ್ಗೆ ಅವನಿಗಿದ್ದ ಗೌರವ ಮತ್ತು ವಿಶಾಲ ಮನೋಭಾವನೆಗಳು ವ್ಯಕ್ತವಾಗುತ್ತವೆ. ಆದಾಗ್ಯೂ, ಇಂತಹ ತಾರ್ಕಿಕ ಸಮರ್ಥನೆಗಳ ಹಿಂದೆ ಯಾವಾಗಲೂ ವಿವೇಚನೆ, ವಿವೇಕಗಳು ಇರುತ್ತವೆ ಎಂದು ಹೇಳಲಾಗದು.

ವಿಜ್ಞಾನದ ಇತಿಹಾಸಗಳ ಪುಟಗಳು, ಸ್ವತಃ ಈ ಪ್ರಪಂಚದ ಇತಿಹಾಸದಂತೆ, ಅಸಂಬದ್ಧ ಹಾಗೂ ಅಸಮತೆಗಳಿಂದ ಸುತ್ತುವರಿದ ಅಧಿಕಾರ ಮತ್ತು ಪ್ರಭಾವಗಳಿಂದ ತುಂಬಿಹೋಗಿವೆ. ಈ ಅಧಿಕಾರದ ದಮನಕಾರಿ ಪರಿಣಾಮಗಳ ಕಾರಣದಿಂದಲೇ, ಕೇವಲ ಬೆರಳೆಣಿಸುವಷ್ಟು ಮಹಿಳೆಯರು ಮಾತ್ರ ಇಂತಹ ವಿಜ್ಞಾನ ಪ್ರಪಂಚದಲ್ಲಿ, ತಮ್ಮ ಬುದ್ಧಿಶಕ್ತಿ, ದೃಢತೆ ಮತ್ತು ಅಸಾಮಾನ್ಯ ಪ್ರತಿಭೆಗಳ ಫಲವಾಗಿ ಉತ್ತುಂಗಕ್ಕೇರಲು ಸಾಧ್ಯವಾಗಿದೆ. ಇಂತಹ ಅತ್ಯುತ್ತಮರ ಸಾಲಿಗೆ ಸೇರಿದ್ದರೂ ಕೂಡಾ, ತನ್ನ ಪ್ರತಿಭೆ ಮತ್ತು ಬುದ್ದಿಶಕ್ತಿಗಳಿ ತಕ್ಕಷ್ಟು ಕೀರ್ತಿಯನ್ನು ಪಡೆಯದಿದ್ದ ಪ್ರಥಮಾನ್ವೇಷಕಿ ಮಹಿಳೆಯೇ ಆಸ್ಟ್ರಿಯಾ ದೇಶದ ಭೌತಶಾಸ್ತ್ರಜ್ಞೆ, ಲೀಸ ಮೈಟ್ನರ್ (ನವೆಂಬರ್ ೭, ೧೮೭೮-ಅಕ್ಟೋಬರ್ ೨೭, ೧೯೬೮). ಪರಮಾಣು ವಿದಳನ ಸಂಶೋಧನೆಯ (Atomic Fission) ತಂಡದ ನಾಯಕತ್ವ ವಹಿಸಿದ್ದ ಈಕೆಯನ್ನು, ಇದರ ಅನ್ವೇಷಣೆಯ ಸಲುವಾಗಿ ನೀಡಿದ ನೋಬೆಲ್ ಪಾರಿತೋಷಕದ ಹೆಸರಿನ ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಸಣ್ಣ ಆಕೃತಿಯ ಈ ಯಹುದಿ ಮಹಿಳೆಯು, ಹಿಟ್ಲರನ ಸರ್ವಾಧಿಕಾರದಿಂದ ಪಾರಾಗಿ ತನ್ನ ಜೀವವನ್ನುಳಿಸಿಕೊಳ್ಳುವ ಸಲುವಾಗಿ, ತನ್ನ ದೇಶವನ್ನು ತೊರೆದಿದ್ದಳು. ಇವಳ ಬುದ್ದಿಮತ್ತೆ ಮತ್ತು ಸಾಹಸಗಳನ್ನು ಮೆಚ್ಚಿದ್ದ ಅಂದಿನ ಮಹಾಮೇಧಾವಿ ಐನಸ್ಟೈನ್, ಈಕೆಯನ್ನು “ಜರ್ಮನ್ ಭಾಷೆಯನ್ನಾಡುವ ನಮ್ಮ ಕಾಲದ ಮೇರಿ ಕ್ಯೂರಿ” ಎಂದು ಕೊಂಡಾಡಿದ್ದನು.

ಆಸ್ಟ್ರಿಯಾ ದೇಶದ, ವಿಯನ್ನಾ ನಗರದಲ್ಲಿ ಜನ್ಮತಳೆದ ಈಕೆ, ಸಣ್ಣ ವಯಸ್ಸಿನಲ್ಲೇ ಗಣಿತಶಾಸ್ತ್ರದಲ್ಲಿ ತನ್ನ ಪ್ರತಿಭೆಯನ್ನು ತೋರಿದ್ದಳು. ೧೯ನೆಯ ಶತಮಾನದ ಯೂರೋಪಿನಲ್ಲಿ, ಮಹಿಳೆಯರ ಕೌಶಲ್ಯ ಮತ್ತು ಬುದ್ದಿಮತ್ತೆಗಳಿಗೆ ಅಷ್ಟೇನೂ ಅವಕಾಶ ಮತ್ತು ಪ್ರಶಂಸೆಗಳು ದೊರಕುತ್ತಿರಲಿಲ್ಲ. ತನ್ನ ಹದಿನಾಲ್ಕನೆಯ ವಯಸ್ಸಿನಲ್ಲಿ ವಿಯನ್ನಾದಲ್ಲಿ ಶಾಲಾ ವಿದ್ಯಾಭ್ಯಾಸವನ್ನು ಮುಗಿಸಿದ ಆಕೆಗೆ, ಹಲವು ವರ್ಷಗಳ ನಂತರ, ವಿಶ್ವವಿದ್ಯಾಲಯಗಳು ಮಹಿಳೆಯರನ್ನು ಸೇರಿಸಿಕೊಳ್ಳಲು ಪ್ರಾರಂಭಿಸಿದ ಮೇಲೆ, ಭೌತಶಾಸ್ತ್ರದ ಪದವಿಯಲ್ಲಿ ಅಧ್ಯಯನ ಮಾಡಲು ಅವಕಾಶ ಸಿಕ್ಕಿತು. ಭೌತಶಾಸ್ತ್ರದಲ್ಲಿ ತನ್ನ ಭವಿಶ್ಯವನ್ನು ಹುಡುಕುತ್ತಾ, ಬರ್ಲಿನ್ ನಗರಕ್ಕೆ ಹೋದ ಮೈಟ್ನರಳಿಗೆ, ಅದೃಷ್ಟವಶಾತ್ ಪ್ರಸಿದ್ಧ ವಿಜ್ಞಾನಿ ಮ್ಯಾಕ್ಸ್ ಪ್ಲಾಂಕ್ ಅಂತಹ ಒಬ್ಬ ಸ್ನೇಹಿತ ಮತ್ತು ಓಟ್ಟೋ ಹಾನ್ ಎನ್ನುವ ಒಬ್ಬ ರಸಾಯನಶಾಸ್ತ್ರಜ್ಞನು ಸಹಭಾಗಿಯ ರೂಪದಲ್ಲಿ ದೊರಕಿದರು. ಅವರಿಬ್ಬರೂ ವಿಕಿರಣಶೀಲತೆಯ ಸಂಶೋಧನೆಯಲ್ಲಿ ಸಾಕಷ್ಟು ಹೆಸರನ್ನೂ ಗಳಿಸಿದ್ದರು.

೧೯೨೦ರ ದಶಕದಲ್ಲಿ, ಮೈಟ್ನರ್, ತಾನೆ ಸ್ವತಂತ್ರವಾಗಿ ಪರಮಾಣು ಭೌತಶಾಸ್ತ್ರದ ಸಂಶೋಧನೆಯನ್ನು ಪ್ರಾರಂಭಿಸಿ, ಆಗ ತಾನೆ ಮೊಳೆಯುತ್ತಿದ್ದ ಆ ಕ್ಷೇತ್ರದಲ್ಲಿ ತಾನೇ ಪ್ರಥಮಾನ್ವೇಷಕಿ ಎನ್ನುವ ಖ್ಯಾತಿಯನ್ನೂ ಪಡೆದಿದ್ದಳು. ಬರ್ಲಿನ್ ನಗರದ ಭೌತಶಾಸ್ತ್ರ ವಲಯದಲ್ಲಿ, ಐನಸ್ಟೈನನು ಆಕೆಯನ್ನು ಮೇರಿ ಕ್ಯೂರಿಗೆ ಹೋಲಿಸಿ ಪ್ರಶಂಸಿಸಿದ್ದ ಕಾರಣ, ಅಂದಿನ ಭೌತಶಾಸ್ತ್ರಜ್ಞರು ಆಕೆಯನ್ನು ಆ ದಿನಗಳ ಅತ್ಯುತ್ತಮ ಪ್ರಾಯೋಗಿಕ ವಿಜ್ಞಾನಿಯೆಂದು ಪರಿಗಣಿಸಿದ್ದರು. ಬಹಳ ನಾಚಿಕೆಯ ಸ್ವಭಾವದವಳಾಗಿದ್ದ ಆಕೆ, ಆತ್ಮವಿಶ್ವಾಸ ತುಂಬಿದ, ದೃಢಮನೋಭಾವದ ಪ್ರಾಧ್ಯಾಪಕಳಾಗಿ ಹೆಸರು ಗಳಿಸಿದ್ದಳು. ಅವಳ ಸೋದರ ಸಂಬಂಧಿಕರು ಅವಳನ್ನು, “ಕುಳ್ಳಕಾಯದ, ಶ್ಯಾಮಲವರ್ಣದ, ಬಲುಜೋರಿನ ಹೆಂಗಸು” ಎಂದು ಕುಚೋದ್ಯ ಮಾಡುತ್ತಿದ್ದರು. ಆದಾಗ್ಯೂ, ಅನೇಕ ಬಾರಿ ಆಕೆಯನ್ನು ಒಂದು ರೀತಿಯ ಅಸ್ಥಿರ ಮನೋಭಾವ ಕಾಡುತ್ತಿದ್ದು, ಆಕೆ ಜೀವನದಲ್ಲಿ ಮದುವೆಯಾಗಲಿಲ್ಲ, ಯಾವ ಪುರುಷನೊಡನೆಯೂ ಗಂಭೀರವಾದ ಪ್ರಣಯ ಸಂಬಂಧವನ್ನು ಬೆಳಸಲೇ ಇಲ್ಲ. ಆದರೂ ಕೂಡಾ, ಆಕೆಯ ಜೀವನ ಒಂದು ರೀತಿಯಲ್ಲಿ ಸಂಪೂರ್ಣವೆನಿಸಿದ್ದು, ಒಬ್ಬ ನಿಷ್ಠಾವಂತ ಸ್ನೇಹಿತೆಯೆನಿಸಿದ್ದ ಆಕೆಯ ಸುತ್ತಾ ಸದಾಕಾಲ “ಮಹಾನ್ ಮತ್ತು ಪ್ರೀತಿಯುಳ್ಳ ಜನರು ಇರುತ್ತಿದ್ದರು”. ಇಂತಹ ವ್ಯಕ್ತಿಗಳ ನಡುವೆ ಶೋಭಿಸುತ್ತಿದ್ದ ಲೀಸ ಮೈಟ್ನರ್ ತನ್ನ ಜೀವನವನ್ನು ವಿಜ್ಞಾನಕ್ಕೆ ಮುಡಿಪಾಗಿಟ್ಟಿದ್ದಳು. ವಿಜ್ಞಾನದ ಗೀಳು ಅವಳನ್ನು ಅದೆಷ್ಟು ಮರುಳುಮಾಡಿತ್ತೆಂದರೆ, ಆಕೆ ತಾಳ್ಮೆಯಿಂದ ಎಲ್ಲವನ್ನೂ ಎದುರಿಸುತ್ತಾ, ಸಕಲ ಅಡಚಣೆಗಳನ್ನೂ ಮೀರಿ, ವಿಜ್ಞಾನದೊಂದಿಗೆ ತನಗಿದ್ದ ಅನುರಕ್ತತೆಯನ್ನು ಬೆಳೆಸುತ್ತಾ ಮುನ್ನಡೆದಿದ್ದಳು. ೧೯೦೫ನೆಯ ಇಸವಿಯಲ್ಲಿ, ಆಸ್ಟ್ರಿಯಾ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದ ಮೈಟ್ನರ್, ಅಂದಿನ ಕಾಲಕ್ಕೆ ಅಂತಹ ಸಾಧನೆಯನ್ನು ಮಾಡಿದ್ದ ಬೆರಳೆನಿಸುವಷ್ಟು ಮಹಿಳೆಯರಲ್ಲಿ ಒಬ್ಬಳಾಗಿದ್ದಳು.

೨೯ ವಯಸ್ಸಿನ ಮೈಟ್ನರ್, ಬರ್ಲಿನ್ ನಗರಕ್ಕೆ ಬಂದಾಗ, ಜರ್ಮನಿಯ ವಿಶ್ವವಿದ್ಯಾಲಯಗಳು ಮಹಿಳೆಯರನ್ನು ಇನ್ನೂ ಒಳಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಹಾಗಾಗಿ, ಮ್ಯಾಕ್ಸ್ ಪ್ಲಾಂಕನ ಉಪನ್ಯಾಸಗಳಿಗೆ ಹಾಜರಾಗಲು, ಮೈಟ್ನರ್ ವಿಶೇಷವಾದ ಅನುಮತಿಯನ್ನು ಪಡೆಯಬೇಕಾಗಿತ್ತು. ೧೯೦೭ರ ಶರತ್ಕಾಲದಲ್ಲಿ, ಅವಳು ತನ್ನಂತೆಯೇ ವಿಕಿರಣಶೀಲತೆಯಲ್ಲಿ ಆಸಕ್ತಿಯುಳ್ಳ, ತನಗಿಂತಲೂ ೪ ತಿಂಗಳು ಕಿರಿಯವನಾಗಿದ್ದ, ಓಟ್ಟೋ ಹಾನ್ (Otto Hahn), ಎನ್ನುವ ಜರ್ಮನ್ ರಸಾಯನಶಾಸ್ತ್ರಜ್ಞನನ್ನು ಭೇಟಿಯಾದಳು. ಆಗಿನ ಸಮಯಕ್ಕೆ ಹೊರತು ಎನ್ನುವಂತಹ ವಿಶಾಲಮನೋಭಾವನೆಯನ್ನು ಹೊಂದಿದ್ದ ಹಾನ್, ಮಹಿಳೆಯೊಂದಿಗೆ ಸಂಶೋಧನೆ ನಡೆಸಲು ಯಾವ ಅಭ್ಯಂತರವನ್ನು ಹೊಂದಿರಲಿಲ್ಲ. ಆದರೆ, ಅಂದು ಮಹಿಳೆಯರಿಗೆ ಬರ್ಲಿನ್ ರಾಸಾಯನಿಕ ಪ್ರಯೋಗಾಲಯ ಸಂಸ್ಥೆಯಲ್ಲಿ ಒಳಗೆ ಪ್ರವೇಶಿಸಲು ಅನುಮತಿಯಿರಲಿಲ್ಲ. ಹಾಗಾಗಿ, ಮೈಟ್ನರ್ ಮತ್ತು ಹಾನ್, ಸಂಶೋಧನೆಯಲ್ಲಿ ಸಹಭಾಗಿತ್ವ ನಡೆಸಲು, ಅಲ್ಲಿನ ಮರಗೆಲಸದ ಅಂಗಡಿಯೊಂದರ ನೆಲಮಾಳಿಗೆಯನ್ನು ಪ್ರಯೋಗಾಲಯವಾಗಿ ಪರಿವರ್ತಿಸಿದ್ದ ಸ್ಥಳದಲ್ಲಿ ತಮ್ಮ ಪ್ರಯೋಗಗಳನ್ನು ನಡೆಸಬೇಕಾಗಿತ್ತು. “ಜೀವನದಲ್ಲಿ ಅಂದು ಮೆಟ್ಟಿಲುಗಳನ್ನು ಹತ್ತಿ ಮೇಲಕ್ಕೇರುವ ಅವಕಾಶ ಮತ್ತು ಅನುಮತಿಗಳು, ಕೇವಲ ಹಾನನಿಗೆ ಇತ್ತೇ ಹೊರತು, ಲೇಸ ಮೈಟ್ನರಳಿಗೆ ಇರಲಿಲ್ಲ”. ಇಂತಹ ಕಠೋರವಾದ ವಾಸ್ತವತೆ ರೂಪಕೋಕ್ತಿಯ ಪರಮಾವಧಿಯನ್ನೇ ಮೀರಿಸುವಂತಿತ್ತು.

ಈ ಇಬ್ಬರು ವಿಜ್ಞಾನಿಗಳ ನಡುವಿನ ಅಂತರವನ್ನು, ಅವರ ಅಭಿರುಚಿಗಳು ಮತ್ತು ವಿಜ್ಞಾನದ ಬಗ್ಗೆ ಅವರಿಗಿದ್ದ ಒಲವು ಕಡಿಮೆಮಾಡಿತ್ತು. ಭೌತಶಾಸ್ತ್ರದಲ್ಲಿ ಉತ್ತಮ ತರಬೇತಿ ಪಡೆದ ಮೈಟ್ನರ್, ಒಬ್ಬ ತಜ್ಞ ಗಣಿತಶಾಸ್ತ್ರಜ್ಞೆಯೂ ಆಗಿದ್ದಳು. ಹಾಗಾಗಿ, ಅವಳು ಕಲ್ಪನಾತ್ಮಕವಾಗಿ ಆಲೋಚಿಸುವ ಪ್ರತಿಭೆ ಇದ್ದು, ತನ್ನ ಕಲ್ಪನೆಗಳನ್ನು ಒರೆಹಚ್ಚಿನೋಡುವಂತಹ ಸೃಜನಶೀಲ ಪ್ರಯೋಗಗಳನ್ನು ಸರಾಗವಾಗಿ ವಿನ್ಯಾಸಮಾಡುವ ತಿಳುವಳಿಕೆ ಅವಳಲ್ಲಿತ್ತು. ರಸಾಯನಶಾಸ್ತ್ರದಲ್ಲಿ ಪಳಗಿದ್ದ ಹಾನನು, ಪ್ರಯೋಗಾಲಯದ ಅತಿಸೂಕ್ಷ್ಮ ಕಾರ್ಯಗಳಲ್ಲಿ ಶ್ರೇಷ್ಠತೆ ಉಳ್ಳವನಾಗಿದ್ದನು. ಸುಮಾರು ೩೦ ವರ್ಷಗಳ ಕಾಲ ಇವರಿಬ್ಬರೂ ಸಹಭಾಗಿತ್ವದಲ್ಲಿ ಕೆಲಸಮಾಡಿ, ವಿಕಿರಣಶೀಲತೆಯ ಸಂಶೋಧನಾ ಕಾರ್ಯದಲ್ಲಿ ಆದ್ಯಪ್ರವರ್ತಕ ವಿಜ್ಞಾನಿಗಳಾಗಿ ಕೀರ್ತಿಪಡೆದರು. ಅಂತಿಮವಾಗಿ ಮೈಟ್ನರ್, ಹಾನನಿಂದ ಮುಕ್ತಿಪಡೆದು, ೧೯೨೧ರಿಂದ, ೧೯೩೪ರ ನಡುವೆ, ತಾನೇ ಸ್ವತಂತ್ರವಾಗಿ ಸುಮಾರು ೫೬ ಸಂಶೋಧನಾ ಪ್ರಬಂಧಗಳನ್ನು ಬರೆದು ಪ್ರಕಟಿಸಿದ್ದಳು.

ಬರ್ಲಿನ್ನಿನಲ್ಲಿರುವ ಸ್ಮಾರಕ

ಈ ರೀತಿಯಲ್ಲಿ ಅವಳ ವೈಜ್ಞಾನಿಕ ವೃತ್ತಿಯು ಯಶಸ್ವಿಯಾಗಿ ಮುನ್ನಡೆದಿದ್ದ ಸಮಯದಲ್ಲೇ, ನಾಟ್ಝಿ ಜರ್ಮನರು, ಯೂರೋಪನ್ನು ಕಬಳಿಸಲು ಪ್ರಾರಂಭಿಸಿದ್ದರು. ಮೈಟ್ನರ್, ಹಾನ್ ಜೊತೆಗೆ ಕಾರ್ಯ ನಿರ್ವಹಿಸುತ್ತಿದ್ದ ಮೂರನೆಯ ಸಹಭಾಗಿ ವಿಜ್ಞಾನಿ, ಫ಼್ರಿಟ್ಝ್ ಸ್ಟ್ರಾಸ್ಮನ್ (Fritz Strassman), ಈ ನಾಟ್ಝಿಗಳ ಸಂಸ್ಥೆಯನ್ನು ಸೇರಲು ನಿರಾಕರಿಸಿ ಈಗಾಗಲೇ ತೊಂದರೆಯಲ್ಲಿ ಸಿಕ್ಕಿಕೊಂಡಿದ್ದನು. ೧೯೩೮ರಲ್ಲಿ ಈ ಮೂರು ಪ್ರತಿಭಾನ್ವಿತ ವಿಜ್ಞಾನಿಗಳು, ತಮ್ಮ ಅತ್ಯಂತ ಸೃಜನಶೀಲ ಪ್ರಯೋಗಗಳನ್ನು ನಡೆಸುತ್ತಿದ್ದಾಗಲೇ, ನಾಟ್ಝಿ ಸೇನೆಯವರು ಆಸ್ಟ್ರಿಯಾ ದೇಶವನ್ನು ಆಕ್ರಮಿಸಿಕೊಂಡರು. ಮೈಟ್ನರಳು ತನ್ನ ಯಹುದಿ ಪರಂಪರೆಯನ್ನು ಗೋಪ್ಯವಾಗಿಡಲು ನಿರಾಕರಿಸಿದಳು. ಆಗ ಅವಳ ಪಾಲಿಗೆ ಇದ್ದ ಒಂದೇ ಉಪಾಯವೆಂದರೆ, ಜರ್ಮನಿಯನ್ನು ತೊರೆದು ಬೇರೆ ದೇಶಕ್ಕೆ ಪಲಾಯನ ಮಾಡುವುದಾಗಿತ್ತು. ಆದರೆ ಅಷ್ಟು ಹೊತ್ತಿಗಾಗಲೇ, ನಾಟ್ಝಿ ಸರಕಾರವು, ಯಹುದಿ-ವಿರುದ್ಧವಾದ ಕಾನೂನನ್ನು ಜಾರಿಗೆ ತಂದು, ಜರ್ಮನಿಯಲ್ಲಿದ್ದ ವಿಶ್ವವಿದ್ಯಾಲಯದ ಪ್ರಾಧ್ಯಾಪಕರನ್ನು ದೇಶ ತೊರೆಯುವುದನ್ನು ಬಹಿಷ್ಕರಿಸಿದ್ದರು. ೧೯೩೮ರ ಜುಲೈ ೧೩ರಂದು, ಮೈಟ್ನರ್ ತನ್ನ ಸಹೋದ್ಯೋಗಿ ಹಾನ್ ಮತ್ತು ಇತರ ವಿಜ್ಞಾನಿ ಸ್ನೇಹಿತರ ಸಹಾಯದಿಂದ, ಕೂದಲೆಳೆಯಷ್ಟು ಅಂತರದಲ್ಲಿ ಉಪಾಯದಿಂದ ಜರ್ಮನಿಯ ಗಡಿಯನ್ನು ದಾಟಿ, ಹಾಲೆಂಡ್ ದೇಶಕ್ಕೆ ಹೊರಟುಹೋದಳು. ನಂತರ ಹಾಲೆಂಡಿನಿಂದಲೂ ಹೊರಟು, ಡೆನ್ಮಾರ್ಕ್ ದೇಶಕ್ಕೆ ವಲಸಿಗಳಾಗಿ ಪ್ರಯಾಣಮಾಡಿದಳು. ಅಲ್ಲಿ ತನ್ನ ಸ್ನೇಹಿತನಾಗಿದ್ದ ಪ್ರಸಿದ್ಧ ವಿಜ್ಞಾನಿ ನೀಲ್ಸ್ ಭೋರ್ ಕುಟುಂಬದೊಂದಿಗೆ ಸ್ವಲ್ಪಕಾಲ ವಾಸವಾಗಿದ್ದಳು. ಮುಂದೆ ಸ್ವೀಡನ್ನಿನ ನೋಬೆಲ್ ಭೌತಶಾಸ್ತ್ರ ಸಂಸ್ಥೆಯಲ್ಲಿ, ತನ್ನ ಖಾಯಂ ಆಗಿ ನೆಲಸಿದಳು.

ಅದೇ ರೀತಿಯಲ್ಲೇ, ಮೂರು ಶತಮಾನಗಳ ಹಿಂದೆ, ಗೆಲಿಲಿಯೋನಿಗೆ ವ್ಯಾಟಿಕನ್ ಚರ್ಚಿನ ಅಧಿಕಾರಿಗಳು ನೀಡಿದ ಕಿರುಕುಳವನ್ನು ಕಂಡಿದ್ದ ಡೆಸ್ಕಾರ್ಟೆಸನೂ ಸಹಾ, ಇದೇ ರೀತಿಯಲ್ಲೇ ಸ್ವೀಡನ್ನಿಗೆ ಪಲಾಯನಮಾಡಿದ್ದನಂತೆ! ಆ ವರ್ಷದ ನವೆಂಬರ್ ತಿಂಗಳಲ್ಲಿ, ಮೈಟ್ನರ್, ಹಾನ್ ಮತ್ತು ಸ್ಟ್ರಾಸ್ಮನ್ ಮೂವರೂ, ಗೋಪ್ಯವಾಗಿ ಕೋಪೆನಹೇಗಿನಲ್ಲಿ ಸಂಧಿಸಿ, ಹಾನ್ ಮತ್ತು ಸ್ಟ್ರಾಸ್ಮನ್ನರ ಪ್ರಯೋಗಗಳಲ್ಲಿ ದೊರೆತಿದ್ದ ಹಲವು ಅದ್ಭುತವಾದ ಫಲಿತಾಂಶಗಳನ್ನು ಚರ್ಚಿಸಿದರು. ಅವರ ಪ್ರಯೋಗಗಳಲ್ಲಿ, ಯುರೇನಿಯಮ್ ಪರಮಾಣುವಿನ ಬೀಜಕಣಕೇಂದ್ರವನ್ನು (Nucleus) (ಪರಮಾಣು ಸಂಖ್ಯೆ ೯೨), ಒಂದು ಒಂಟಿ ನ್ಯೂಟ್ರಾನ್ ಕಣದಿಂದ ಅಪ್ಪಳಿಸಿದಾಗ, ಅವರಿಗೆ ಪರಮಾಣು ಸಂಖ್ಯೆ ೮೮ರ ರೇಡಿಯಮ್ ಬೀಜಕಣಕೇಂದ್ರವು (Radium atomic number-88), ದೊರೆತಿತ್ತು. ಈ ಮಾಂತ್ರಿಕ ಪರಿವರ್ತನೆಯು ಅವರಿಗೆ ಭೌತಿಕವಾಗಿ ಅಸಾಧ್ಯವೆಂದು ತೋರಿತ್ತು. ಮಂದ ಗತಿಯಲ್ಲಿ ಚಲಿಸುವ, ಅಂತಹ ಒಂದು ಸಣ್ಣ ನ್ಯೂಟ್ರಾನ್ ಕಣವು, ಪರಮಾಣುವಿಂತಹ ದೃಢವಾದ ವಸ್ತುವನ್ನು ನುಚ್ಚುನೂರಾಗಿಸಿ, ಅದರ ಪರಮಾಣು ಸಂಖ್ಯೆಯನ್ನು ಕೆಳಕ್ಕಿಳಿಸಿ, ಅದರ ಸ್ವರೂಪವನ್ನು ಸಂಪೂರ್ಣವಾಗಿ ಬದಲಾಯಿಸಿ, ಅದನ್ನು ಒಂದು ಹೊಸ ಮೂಲಧಾತುವಿಗೆ ಬದಲಾಯಿಸುವ ಆ ಪ್ರಕ್ರಿಯೆಯು, ನಿಜಕ್ಕೂ ಒಂದು ಕಲ್ಪಿತ ಭ್ರಮಾಚಿತ್ರವೆನಿಸಿತ್ತು.

ಆ ಸಮಯದಲ್ಲಿ, ಮೈಟ್ನರ್ ಒಬ್ಬ ಅತ್ಯುತ್ತಮ ಭೌತಶಾಸ್ತ್ರಜ್ಞೆಯೆಂತಲೂ ಮತ್ತು ಹಾನನು ಒಬ್ಬ ಪ್ರಸಿದ್ಧ ರೇಡಿಯೋ-ರಸಾಯನಶಾಸ್ತ್ರಜ್ಞನೆನ್ನುವ ಪ್ರಖ್ಯಾತಿ ಪಡೆದಿದ್ದರು. ಮೈಟ್ನರ್ ಆಗ, ಆ ಪ್ರಯೋಗದ ರಾಸಾಯನಿಕ ಪ್ರಕ್ರಿಯೆಯು, ಭೌತಿಕವಾದ ಯಾವ ಆಧಾರದಿಂದಲೂ ಸಾಧ್ಯವಿಲ್ಲ, ಆದ್ದರಿಂದ ನೀನು ಮತ್ತೊಮ್ಮೆ ಈ ಪ್ರಯೋಗವನ್ನು ನಡೆಸು ಎಂದು ಸ್ಪಷ್ಟವಾಗಿ ಸಲಹೆ ನೀಡಿದಳು. ಈ ಅನಿರೀಕ್ಷಿತವಾದ ಫಲಿತಾಂಶಗಳಿಂದ ಸಂಪೂರ್ಣವಾಗಿ ದಿಗ್ಭ್ರಾಂತಳಾಗಿದ್ದ ಮೈಟ್ನರ್, ಇದರ ಬಗ್ಗೆ ತನ್ನ ಪರ್ಯಾಲೋಚನೆಯನ್ನು ಮುಂದುವರೆಸಿದಳು. ಕಡೆಗೆ ಕ್ರಿಸ್ಮಸ್ ಹಬ್ಬದಂದು ತನ್ನ ಸೋದರಳಿಯ ಮತ್ತು ಸಹಭಾಗಿ ರಾಬರ್ಟ್ ಫ಼್ರಿಷ್ ಜೊತೆಯಲ್ಲಿ ಹಿಮದ ಮೇಲೆ ನಡೆದಾಡುತ್ತಿದ್ದ ಸಮಯದಲ್ಲಿ ಅವಳಿಗೆ ಈ ಫಲಿತಾಂಶದ ಬಗ್ಗೆ ಸಾಕ್ಷಾತ್ಕಾರವಾಯಿತು. ಓಟ್ಟೋ ರಾಬರ್ಟ್ ಫ಼್ರಿಶ್, ತನ್ನ ಆತ್ಮಚರಿತ್ರೆಯಲ್ಲಿ ಆ ಘಟನೆಯ ಬಗ್ಗೆ ಬರೆಯುತ್ತಾ, ಯಾವ ರೀತಿಯಲ್ಲಿ ಮಹಿಳೆಯರು ವಿಜ್ಞಾನದಲ್ಲಿ ತಮ್ಮ ಪುರುಷ ಸಮಾನಸ್ಕಂದರಿಗಿಂತ ಪ್ರಗತಿ ಸಾಧಿಸುತ್ತಾರೆ ಎನ್ನುವ ಬಗ್ಗೆ, ಅನುದ್ದಿಶ್ಯವಾಗಿ ಒಂದು ಅತ್ಯಂತ ಪರಿಪೂರ್ಣವಾದ ರೂಪಕೋಕ್ತಿಯನ್ನು ನೀಡಿದ್ದಾನೆ: (“ನಾವು ಹಿಮದ ಮೇಲೆ ಹಾಗೇ ಅಡ್ಡಾಡುತ್ತಿದ್ದೆವು. ನಾನು ನೀರ್ಗಲ್ಲು-ಹಾವುಗೆಗಳನ್ನು ಧರಿಸಿದ್ದೆ, ಮೈಟ್ನರ್ ಕೇವಲ ತನ್ನ ಪಾದಗಳಲ್ಲಿಯೇ ಚಲಿಸುತ್ತಾ, ನಾನು ಹೀಗೆ ರಭಸವಾಗಿ ನಡೆದು ಮುಂದುವರೆಯುತ್ತೇನೆ ಎಂದಿದ್ದಳು”).

ತಮಗೆ ದೊರೆತಿದ್ದ ಅಸಂಬಂದ್ಧವಾದ ಫಲಿತಾಂಶಗಳನ್ನು ಪರಾಮರ್ಷಿಸುತ್ತಾ ಕಡೆಗೆ, ಮೈಟ್ನರ್ ಮತ್ತು ಫ಼್ರಿಶ್, ಆ ಪ್ರಕ್ರಿಯೆಯನ್ನು ಪರಮಾಣು ವಿದಳನವೆಂದು (Atomic Fission) ಕರೆಯಲು ತೀರ್ಮಾನಿಸಿದರು. ಆ ತಿಂಗಳ ಕೊನೆಯಲ್ಲಿ ಅವರು ಪ್ರಕಟಿಸಿದ ಪ್ರಬಂಧದ ೭ನೆಯ ಪ್ಯಾರಾದಲ್ಲಿ ಮೊದಲ ಬಾರಿಗೆ ಆ ಪದವನ್ನು ಬಳಸಿದ್ದರು. ಪರಮಾಣುವಿನ ನ್ಯೂಕ್ಲಿಯಸ್ ವಿಭಜನೆಯಾಗಿ, ಮತ್ತೊಂದು ನೂತನ ಮೂಲಧಾತುವಾಗಿ ಮಾರ್ಪಡುವ ವಿಚಾರವು ಅತ್ಯಂತ ತೀವ್ರವಾದ ಕಲ್ಪನೆಯಾಗಿತ್ತು. ಆ ಸಮಯಕ್ಕೆ ಆ ಚಿಂತನೆಯನ್ನು ಅರ್ಥಮಾಡಿಕೊಳ್ಳುವುದೇನೂ ಸುಲಭವಾದ ವಿಷಯವಾಗಿರಲಿಲ್ಲ. ಮೈಟ್ನರ್ ಈ ಪ್ರಕ್ರಿಯೆ ಹೇಗೆ ಸಂಭವಿಸುತ್ತದೆ ಎನ್ನುವುದಕ್ಕೆ ಮೊಟ್ಟಮೊದಲಬಾರಿ ತಿಳುವಳಿಕೆಯನ್ನು ನೀಡಿದ್ದಳು. ಪರಮಾಣು ವಿದಳನವು, ಮಾನವಕುಲದ ಇತಿಹಾಸದಲ್ಲಿ ಕಂಡುಹಿಡಿದ ಅತ್ಯಂತ ಅಪಾಯಕಾರಿ ಮತ್ತು ಶಕ್ತಿಶಾಲಿ ಅನ್ವೇಷಣೆಯೆಂದು ಸಾಬೀತಾಗುವುದರಲ್ಲಿತ್ತು, ಅಷ್ಟೇ ಅಲ್ಲದೆ, ಈ ಶೋಧನೆಯು ಉತ್ತಮ ಮತ್ತು ದುಷ್ಟ ಕಾರ್ಯಗಳಿಗೆ ತುತ್ತಾಗಬಹುದಾದ ಮಾನವನ ಉಭಯ ಸಾಮರ್ಥ್ಯಗಳನ್ನು ಹೊರಗೆಡುಹಿತ್ತು. ಮಾನವನ ಇತಿಹಾಸದಲ್ಲಿ ತಯಾರಾದ ಮಾರಣಾಂತಿಕ ಅಸ್ತ್ರಕ್ಕೆ ಬಲವಾದ ಅಡಿಪಾಯವನ್ನು ಹಾಕಿತ್ತು.

ಮೈಟ್ನರಳ ಈ ಅನ್ವೇಷಣೆಯು ಕೇವಲ ವೈಜ್ಞಾನಿಕವಾದ ಹಿತಾಸಕ್ತಿಯನ್ನು ಹೊಂದಿತ್ತು. ಆದರೆ, ಅದರ ಬಳಕೆಯನ್ನು ಮುಂದೇ ಅನೇಕ ವರ್ಷಗಳ ನಂತರ, ಮಾನವನ ಸರ್ವನಾಶದ ಕಾರ್ಯಕ್ಕೆ ನಡೆಸಿದರೂ ಕೂಡಾ, ಸಮಾಜ ಮಾತ್ರ ಅವಳನ್ನು, “ಪರಮಾಣು-ಬಾಂಬಿನ ಯಹುದಿ-ಮಾತೆ,” ಎಂದು ಕ್ರೂರವಾಗಿ ಉಲ್ಲೇಖಿಸಿತ್ತು. ಒಮ್ಮೆ ತನ್ನ ಅನ್ವೇಷಣೆಯ ನಿಯಮವನ್ನು ನಾಶಕಾರಿ ಕಾರ್ಯಕ್ಕೆ ಬಳಸಿದ್ದನ್ನು ಕಂಡ ಲೀಸ್ ಮೈಟ್ನರ್, ಮುಂದೆ ಪರಮಾಣು ಬಾಂಬಿನ ಕಾರ್ಯದಲ್ಲಿ ತಾನು ಭಾಗಿಯಾಗುವುದಿಲ್ಲವೆಂದು ಬಹಳ ನಿಷ್ಠುರವಾಗಿ ನುಡಿದು ಅದರಿಂದ ತನ್ನನ್ನು ದೂರವಿರಿಸಿಕೊಂಡಿದ್ದಳು. ಪ್ರಪಂಚದಲ್ಲಿ ಉಳಿದವರಂತೆ, ಅವಳೂ ಕೂಡಾ “ಪರಮಾಣು ಬಾಂಬಿನ ಪ್ರಯೋಗವು” ಮಾನವಕುಲದ ಇತಿಹಾಸದಲ್ಲಿ ಸಂಭವಿಸಿದ ಒಂದು ಚಿಂತಾಜನಕವಾದ ತಿರುವೆಂದು ಭಾವಿಸಿದ್ದಳು. ಮುಂದೆ ಅನೇಕ ವರ್ಷಗಳ ನಂತರ, ಈ ಮಹತ್ತರ ವೈಜ್ಞಾನಿಕ ಬೆಳವಣಿಗೆಯ ಮೂಲಕ, ಈ ಕಾಲಮಾನದ ಅಂತ್ಯವಾದ ಬಗ್ಗೆ ಕಹಿ-ಸಿಹಿ ಮಿಶ್ರಭಾವನೆಗಳ ವಿಷಾದವನ್ನು ವ್ಯಕ್ತಪಡಿಸಿದ್ದಳು. ಅವಳ ಸಂದೇಶದಲ್ಲಿ “ಮಹತ್ತರವಾದ ಸುಂದರ ವೈಜ್ಞಾನಿಕ ಅನ್ವೇಷಣೆಯ ದುರುಪಯೋಗವಾಗಿ, ಅದರಿಂದ ಭವಿಶ್ಯದಲ್ಲಿ ಮಾನವ ಪೀಳಿಗೆಯು ಹೆದರಿಕೆಯ ನೆರಳಿನಲ್ಲಿ ಜೀವಿಸುವಂತಾಗಬಾರದು”, ಎನ್ನುವ ಸಮ್ಮಿಶ್ರ ಭಾವನೆಗಳನ್ನು ವ್ಯಕ್ತಪಡಿಸಿದ್ದಳು.

ಪರಮಾಣು ವಿದಳನದ ಅವಿಷ್ಕಾರವು, ಮಾನವ ಸಂಶೋಧನೆಯ ಒಂದು ಸುಂದರವಾದ ಉದಾಹರಣೆಯಾಗಿದೆ. ಪ್ರಕೃತಿಯ ರಹಸ್ಯಗಳನ್ನು ಬೇಧಿಸುವಲ್ಲಿ ಮಾನವ ಗಳಿಸಿದ ಜಯಕ್ಕೆ ಹಾಗೂ ಸೃಜನಾತ್ಮಕ ಕ್ರಿಯೆಯ ವ್ಯಾಖ್ಯಾನಕ್ಕೆ ಒಂದು ಉತ್ತಮವಾದ ಪುರಾವೆಯಾಗಿದೆ. ಹಾನನ ಅಸಂಬದ್ಧವಾದ ಪ್ರಾಯೋಗಿಕ ಫಲಿತಾಂಶಗಳಿಗೆ, ಅರ್ಥವತ್ತಾದ ವಿವರಣೆ ನೀಡಿ, ಆ ಫಲಿತಾಂಶಗಳಲ್ಲಿ ಅಡಗಿದ್ದ, ಮಹೋನ್ನತವಾದ ತೊಡಕಿನ ತತ್ವವನ್ನು ಅನ್ವೇಷಿಸಿದ್ದ ಲೀಸ್ ಮೈಟ್ನರಳ ಅಭೂತಪೂರ್ವ ಒಳನೋಟದ ಫಲಿತಾಂಶವನ್ನು ಕದ್ದು ಪಲಾಯನ ಮಾಡಿದ ಹಾನನು, ಅವಳ ಹೆಸರನ್ನು ಉಲ್ಲೇಖಿಸದೆ, ಸಂಶೋಧನ ಪ್ರಬಂಧವನ್ನು ತನ್ನ ಹೆಸರಿನಲ್ಲಿ ಮಾತ್ರಾ ಪ್ರಕಟಿಸಿದನು. ವಯಕ್ತಿಕ ಮಾತ್ಸರ್ಯ ಮತ್ತು ರಾಜಕೀಯ ಹೇಡಿತನದ ವಿಶ್ವಾಸಘಾತ ಕೃತ್ಯವು ಮೈಟ್ನರಳ ಮನಸ್ಸಿಗೆ ಬಹಳ ಆಳವಾದ ಆಘಾತವನ್ನುಂಟು ಮಾಡಿತು. ಇದರ ಬಗ್ಗೆ ತನ್ನ ಸೋದರ ವಾಲ್ಟರನಿಗೆ ಪತ್ರದಲ್ಲಿ, “ನಮ್ಮ ಸಹಭಾಗಿತ್ವದಲ್ಲಿ ನಡೇದ ಸಂಶೋಧನೆಯ ಕಾರ್ಯ ಪ್ರಕಟವಾಗಿರುವುದು ನನಗೆ ಬಹಳ ಸಂತೋಷದ ವಿಷಯ. ಹಾನನಿಗೆ ಸಿಕ್ಕ ಮನ್ನಣೆ ನನ್ನಲ್ಲಿ ಹೆಮ್ಮೆಯುಂಟು ಮಾಡಿದೆ. ಆದರೆ ಈ ಕಾರ್ಯದಲ್ಲಿ ನನ್ನ ವೈಜ್ಞಾನಿಕ ಕೊಡುಗೆಗೆ ಯಾವ ಮನ್ನಣೆ ಗೌರವಗಳನ್ನು ನೀಡದ ಅವನ ಬಗ್ಗೆ ನನ್ನ ಮನದಲ್ಲಿ ಅಸಹ್ಯವಾದ ಭಾವನೆ ಮೂಡಿದೆ ಮತ್ತು ನನ್ನ ಆತ್ಮವಿಶ್ವಾಸ ಸಂಪೂರ್ಣವಾಗಿ ಕುಂದಿಹೋಗಿದೆ”, ಎಂದು ಬರೆದಿದ್ದಳು.

೧೯೪೪ರಲ್ಲಿ, ಪರಮಾಣು ವಿದಳನದ ಅವಿಷ್ಕಾರಕ್ಕೆ, ಕೇವಲ ಹಾನನಿಗೆ ನೋಬೆಲ್ ಪ್ರಶಸ್ತಿಯನ್ನು ನೀಡಲಾಯಿತು. ನಾಝಿ ಜರ್ಮನಿಯ ಆಳ್ವಿಕೆಯಲ್ಲಿ ನಡೆದ ಇಂತಹ ದುಷ್ಕೃತ್ಯಗಳು ಮತ್ತು ಅದರ ಪರಿಣಾಮಗಳನ್ನು ಹೇರಳವಾಗಿ ಕಾಣಬಹುದು. ವೈಜ್ಞಾನಿಕ ಗುಣಲಕ್ಷಣಗಳ ಯಾವುದೇ ಮಾನದಂಡದಿಂದ ಅಳೆದರೂ, ಪರಮಾಣು ವಿದಳನದ ಸಂಶೋಧನೆಯಲ್ಲಿ, ಲೀಸ್ ಮೈಟ್ನರಳು ವಹಿಸಿದ ಪಾತ್ರ ಮತ್ತು ಕೊಡುಗೆಯ ಬಗ್ಗೆ ಯಾವುದೇ ಸಂದೇಹವಿರಲಿಲ್ಲ. ಪ್ರಕಟಿತ ದಾಖಲೆಗಳು ಮತ್ತು ವೈಯಕ್ತಿಕ ಪತ್ರವ್ಯವಹಾರಗಳನ್ನು ನೋಡಿದರೆ, ಲೀಸ್ ಮೈಟ್ನರಳು ಈ ಸಂಶೋಧನೆಯ ಎಲ್ಲಾ ಹಂತಗಳಲ್ಲೂ ಪ್ರಮುಖವಾದ ಪಾತ್ರ ವಹಿಸಿದ್ದಳೆಂಬುದು ಸ್ಪಷ್ಟವಾಗಿದೆ. ಮೈಟ್ನರಳು ನಾಝಿ ಜರ್ಮನಿಯಿಂದ ಬಲಾತ್ಕಾರವಾದ ಪಲಾಯನವಿಲ್ಲದಿದ್ದರೆ, ಅವಳ ಕೊಡುಗೆಯನ್ನು ಇಷ್ಟೊಂದು ಸುಲಭವಾಗಿ ಅಲಕ್ಷಿಸಲು ಸಾಧ್ಯವಿರಲಿಲ್ಲ. ಯಾವ ರಾಜಕೀಯ ವ್ಯವಸ್ಥೆಗಳು, ಮೈಟ್ನರಳನ್ನು ಜರ್ಮನಿಯಿಂದ ಓಡಿಹೋಗುವಂತೆ ಒತ್ತಾಯಿಸಿದವೋ, ಅದೇ ವರ್ಣನೀತಿಗಳು, ಹಾನ್ ಮತ್ತು ಸ್ಟ್ರಾಸ್ಮನ್ನಿನ ಸಂಶೋಧನೆಯ ಸಹಭಾಗಿತ್ವದ ಪ್ರಕಟಿತ ಪ್ರಬಂಧದಲ್ಲೂ ಅವಳ ಕೊಡುಗೆಯನ್ನು ಸಂಪೂರ್ಣವಾಗಿ ಅಳಿಸಿಹಾಕಿತ್ತು. ಈ ಅವಿಷ್ಕಾರ ನಡೆದ ಹಲವು ವಾರಗಳಲ್ಲೇ, ಹಾನನು ಈ ಸಂಶೋಧನೆಯ ಮೇಲೆ ತನ್ನ ಹಕ್ಕನ್ನು ಸ್ಥಾಪಿಸಿದನಲ್ಲದೇ, ಅದನ್ನು ಕೇವಲ ರಸಾಯನಶಾಸ್ತ್ರದ ಅವಿಷ್ಕಾರವೆಂದು ಘೋಷಿಸಿಕೊಂಡಿದ್ದನು. ಹ್ಯಾನ್ಸನ ಈ ಅಪ್ರಾಮಾಣಿಕತೆಯು ಈ ಅವಿಷ್ಕಾರದ ದಾಖಲೆಯನ್ನು ವಿರೂಪಗೊಳಿಸಿತಲ್ಲದೇ, ಇತಿಹಾಸದಲ್ಲಿ ಲೀಸ್ ಮೈಟ್ನರಳ ಹೆಸರು ಮತ್ತು ಸ್ಥಾನವನ್ನು ಸಂಪೂರ್ಣವಾಗಿ ಅಳಿಸಿಹಾಕಿತು. ಮುಂದೆ ಮೈಟ್ನರ್ ಅನೇಕ ಪುರಸ್ಕಾರಗಳನ್ನು ಪಡೆದಳು; ಅವಳ ಮರಣಾಂನಂತರ ಮೈಟ್ನೀರಿಯಮ್ ಎನ್ನುವ ರಾಸಾಯನಿಕ ಧಾತುವನ್ನು ಅವಳ ಹೆಸರಿನಿಂದ ಕರೆದರು; ಆದರೂ, ಅವಳ ವೈಜ್ಞಾನಿಕ ವೃತ್ತಿಯಲ್ಲಿ ಸಾಧಿಸಿದ ಅದ್ಭುತವಾದ ಸಾಧನೆಯೊಂದಕ್ಕೆ ಅರ್ಹವಾದ ಮನ್ನಣೆ ದೊರಕಲಿಲ್ಲ. ಇಲ್ಲಿ ನೋಬೆಲ್ ಪುರಸ್ಕಾರ ಸಮಿತಿ ಮತ್ತೊಮ್ಮೆ ಎಡವಿತಲ್ಲದೇ, ಅರ್ಹವಾದ ಮಹಿಳೆಯ ಸಾಧನೆಯನ್ನು ಗುರ್ತಿಸಲಿಲ್ಲ. ತನ್ನ ವೈಜ್ಞಾನಿಕ ಶಿಕ್ಷಣವನ್ನು ಮುಂದುವರೆಸಲು ಪ್ರತಿಕೂಲವಾದ ಅಡಚಣೆಗಳನ್ನು ಎದುರಿಸಿದ್ದಳು; ನಾಝಿ ಶೋಷಣೆಯಲ್ಲಿ ಬದುಕುಳಿದಿದ್ದಳು; ದೇಶಭ್ರಷ್ಟತೆಯ ದುಃಖವನ್ನು ಅನುಭವಿಸಿದ್ದಳು; ಈ ಎಲ್ಲಾ ಅನ್ಯಾಯಗಳಿಗಿಂತಲೂ, ನೋಬೆಲ್ ಸಮಿತಿಯಿಂದಾದ ಅನ್ಯಾಯ ಆಕೆಯನ್ನು ಬಹಳವಾಗಿ ಕಾಡಿತ್ತು.

ಆಕೆ ತನ್ನ ಆತ್ಮಚರಿತ್ರೆಯನ್ನು ಬರೆಯಲಿಲ್ಲ; ಇತರರಿಗೆ ಬರೆಯುವ ಅಧಿಕಾರವನ್ನೂ ನೀಡಲಿಲ್ಲ; ತನ್ನ ಜೀವನದ ಹೋರಾಟದ ಬಗ್ಗೆ ಬಹಳ ಅಪರೂಪವಾಗಿ ಮಾತನಾಡಿದ್ದ ಆಕೆಯನ್ನು, ಇಳಿಯ ವಯಸ್ಸಿನಲ್ಲಿ ಅಭದ್ರತೆ ಮತ್ತು ಪ್ರತ್ಯೇಕತೆಗಳು ತೀವ್ರವಾಗಿ ಕಾಡಿದ್ದವು. ಒಬ್ಬ ಮಹಾನ್ ವಿಜ್ಞಾನಿಯಾಗಿದ್ದ ಲೀಸ್ ಮೈಟ್ನರ್, ತನ್ನ ಸಂಶೋಧನೆಯ ಎಲ್ಲಾ ವಿವರಗಳನ್ನು ಬಹಳ ನಿಖರವಾಗಿ ದಾಖಲಿಸಿದ್ದಳು. ಇಂತಹ ಶ್ರೀಮಂತವಾದ ಸಂಗ್ರಹದಿಂದ, ಆಕೆ ಜೀವನದಲ್ಲಿ ಎದುರಿಸಿದ ಅಸಾಧಾರಣವಾದ ಕಷ್ಟ-ನಷ್ಟಗಳ ಬಗ್ಗೆ ವಿವರಗಳು ದೊರಕಿವೆ. ನೋಬೆಲ್ ಸಮಿತಿಯ ಬಹಿಷ್ಕಾರವೊಂದೇ ಅಲ್ಲ, ಅವಳು ಬರ್ಲಿನ್ ಪ್ರಯೋಗಾಲಯದಲ್ಲಿ ಬಳಸಿದ್ದ ವಿದಳನ ಉಪಕರಣವನ್ನು ಮುಂದೆ ಬರ್ಲಿನ್ನಿನ ಮ್ಯೂಸಿಯಮ್ಮಿನಲ್ಲಿ ಇಟ್ಟಾಗಲೂ, ಸುಮಾರು ೩೫ ವರ್ಷಗಳ ಕಾಲ, ಅವಳ ಹೆಸರನ್ನು ಎಲ್ಲೂ ನಮೂದಿಸಿರಲಿಲ್ಲ.

ನೋಬೆಲ್ ಸಮಿತಿಯ ಈ ಲಿಂಗ ಬೇಧ ನೀತಿಯ ಅನ್ಯಾಯಕ್ಕೆ ಒಳಗಾದ ಮಹಿಳೆ ಕೇವಲ ಮೈಟ್ನರ್ ಒಬ್ಬಳೇ ಅಲ್ಲಾ, ಮುಂದೆ ೫೦ ಮತ್ತು ೬೦ರ ದಶಕದಲ್ಲಿ, ಡಾರ್ಕ್ ಮ್ಯಾಟರ್ ಅಸ್ತಿತ್ವವನ್ನು ದೃಢ ಪಡಿಸಿದ ವೆರಾ ರೂಬಿನ್, ಪಲ್ಸಾರ್ ಅನ್ವೇಷಣೆಯಲ್ಲಿ ನಿಖರವಾದ ಪಾತ್ರ ವಹಿಸಿದ ಜೋಸಲೀನ್ ಬೆಲ್ ಜೊತೆಗೂ ಇಂತಹುದೇ ರೀತಿಯಲ್ಲಿ ವರ್ತಿಸಿದ ನೋಬೆಲ್ ಸಮಿತಿ, ಇತಿಹಾಸದ ಪುಟಗಳಲ್ಲಿ ಕುರೂಪದ ದಾಖಲೆಯನ್ನು ಸೃಷ್ಟಿಸಿದರು. ಈ ಎಲ್ಲಾ ಸನ್ನಿವೇಶಗಳಲ್ಲೂ, ವೈಜ್ಞಾನಿಕ ಮನೋಭಾವನೆ ಮತ್ತು ನ್ಯಾಯದ ನೆರಳು ಕಾಣಸಿಗುವುದಿಲ್ಲ. ಜಾನಾ ಲೆವಿನ್, ಒಬ್ಬ ಭೌತಶಾಸ್ತ್ರಜ್ಞೆ ಮತ್ತು ಕಾದಂಬರಿ ಲೇಖಕಿ, ತಾನು ಬರೆದ ಅತ್ಯುತ್ತಮ ಪ್ರಬಂಧವೊಂದರಲ್ಲಿ, “ವಿಜ್ಞಾನಿಗಳು ತಮ್ಮ ಜೀವನವನ್ನೆಲ್ಲಾ ಬ್ರಹ್ಮಾಂಡದ ತನಿಖೆಯ ಸಂಶೋಧನೆಯಲ್ಲಿ ವಿನಿಯೋಗಿಸುವುದು, ಕೇವಲ ಒಂದು ಪ್ರಶಸ್ತಿಗಾಗಿ ಅಲ್ಲಾ, ಆದರೆ, ಮಹತ್ತರವಾದ ಅನ್ವೇಷಣೆಯೊಂದನ್ನು ನಡೆಸಿದಾಗ ಅದಕ್ಕೆ ನ್ಯಾಯವಾದ ಪುರಸ್ಕಾರ ಪಡೆಯುವುದು ಅವರ ಆಜನ್ಮಸಿದ್ಧ ಹಕ್ಕು; ಕೇವಲ ಮಹಿಳೆ ಎಂಬ ಕಾರಣದಿಂದಾಗಿ ಅದರಿಂದ ವಂಚಿತರಾಗುವುದು ಅತ್ಯಂತ ವಿಷಾದನೀಯ ಹಾಗೂ ಅವಮಾನಕರ ಸಂಗತಿ”, ಎಂದು ಬರೆಯುತ್ತಾಳೆ. ಏನಾದರೇನು, ಈ ೨೧ನೆಯ ಶತಮಾನದಲ್ಲೂ ಇನ್ನೂ ಮಹಿಳೆಯರ ವಿರುದ್ಧ ಇಂತಹ ದೌರ್ಜನ್ಯಗಳು ಅವ್ಯಾಹತವಾಗಿ ಜರಗುತ್ತಲೇ ಇವೆ. ಅದು ವಿಜ್ಞಾನವೊಂದೇ ಏನು, ಸಮಾಜದ ಎಲ್ಲಾ ರಂಗಗಳಲ್ಲೂ ಇಂದಿಗೂ ನಡೆಯುತ್ತಿರುವುದು ಮಾನವ ಸಂತತಿಗೆ ಅವಮಾನ!