ಗೌರಿ ಲಂಕೇಶ್ – ಬದುಕು ಮತ್ತು ಬರಹ: ಡಾ. ಪ್ರೇಮಲತ ಬಿ

ಲೇಖಕರು: ಡಾ. ಪ್ರೇಮಲತ ಬಿ

ದಂತವೈದ್ಯರಾಗಿರುವ ಡಾ. ಪ್ರೇಮಲತ ಬಿ ಕೆ ಎಸ್ ಎಸ್ ವಿ ವಿ, ಯುಕೆ (ಅನಿವಾಸಿ.ಕಾಂ) ಬಳಗದ ಅತ್ಯಂತ ಸಕ್ರಿಯ ಬರಹಗಾರರು. ಅವರು ಬರೆದ ಹಲವಾರು ಕವನಗಳು `ಅವಧಿ` ಮತ್ತು `ಕನೆಕ್ಟ್ ಕನ್ನಡ` ಜಾಲಗಳಲ್ಲಿ ಪ್ರಕಟವಾಗಿವೆ. `ಕೆಂಡಸಂಪಿಗೆ` ಜಾಲತಾಣಕ್ಕೆ ಲೇಖನಮಾಲೆಯನ್ನು ಕಳೆದ ವರ್ಷ ಬರೆದಿದ್ದಾರೆ. ಅವರು ಬರೆದ ` ಬಾಯೆಂಬ ಬ್ರಹ್ಮಾಂಡ` ಎನ್ನುವ ದಂತವೈದ್ಯಸಾಹಿತ್ಯದ ಪುಸ್ತಕವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಇತ್ತೀಚೆ ಪ್ರಕಟಿಸಿದ್ದಾರೆ. ಅಸ್ಖಲಿತ ಅಪ್ಪಟ ಕನ್ನಡದಲ್ಲಿ ಒಂದಿನಿತೂ ತಡವರಿಸದೇ ಸ್ಫಟಿಕದಂತೆ ಮಾತನಾಡುತ್ತಾರೆ. ಇತ್ತೀಚೆ ` ಕನ್ನಡ ಬಳಗ`ದ ಆಶ್ರಯದಲ್ಲಿ ನಡೆದ ಮಹಿಳಾ ಸಾಹಿತಿಗಳ ಗೋಷ್ಠಿಯಲ್ಲಿ ಪ್ರೇಮಲತ ಗೌರಿ ಲಂಕೇಶ್ ಅವರ ಬಗ್ಗೆ ಮಾತಾಡಿದರು. ಅದರ ಪೂರ್ಣರೂಪ ಇಲ್ಲಿದೆ. ದಯವಿಟ್ಟು ಓದಿ, ಪ್ರತಿಕ್ರಿಯೆ ಬರೆಯಲು ಮಾತ್ರ ಮರೆಯದಿರಿ. – ಸಂ

ವಚನ, ಕಥೆ, ಕವನ, ಕಾದಂಬರಿ, ಚರಿತ್ರೆ, ಲೇಖನ, ಚಿತ್ರ ಕಥೆ , ವಿಮರ್ಶೆ, ಹಾಸ್ಯ ಮತ್ತು ವರದಿಗಳನ್ನು ಬರೆದ ಹಲವು  ಲೇಖಕಿಯರು ಕನ್ನಡಕ್ಕೆ ಸಂದಿದ್ದಾರೆ. ಇವುಗಳಲ್ಲಿ ವಿಮರ್ಶೆ ಮತ್ತು ಚರಿತ್ರೆಯ ಸಾಹಿತ್ಯ ಪ್ರಕಾರಗಳನ್ನು ಬರೆದ ಲೇಖಕಿಯರು ಕಡಿಮೆ ಎಂತಲೇ ಹೇಳಬಹುದು. ಪತ್ರಿಕೋದ್ಯಮದಲ್ಲಿ ನಾನಾ ಸ್ತರಗಳಲ್ಲಿ ತೊಡಗಿಕೊಂಡ ಮಹಿಳಾ ವರದಿಗಾರರೂ, ಸಂಪಾದಕಿಯರೂ ಇದ್ದಾರೆ. ಆದರೆ ಪತ್ರಿಕೋದ್ಯಮವನ್ನೇ ವೃತ್ತಿಯಾಗಿ ನಡೆಸುತ್ತ ಸಾಮಾಜಿಕ ಕಳಕಳಿಗಳಲ್ಲಿ  ಭಾಷಣ ಮತ್ತು ಅಕ್ಷರ ಸ್ವರೂಪಕ್ಕಿಂತ ಹೆಚ್ಚಿನ ಮಟ್ಟದಲ್ಲಿ ತೊಡಗಿಕೊಂಡವರು ಬಹಳ ವಿರಳವಾಗಿ ಸಿಗುತ್ತಾರೆ. ವಿಮರ್ಶೆ ಮತ್ತು ಪತ್ರಿಕೋದ್ಯಮ ಎರಡೂ ಮನರಂಜನೆಯಾಗಿ ಮಾತ್ರ ಮಾಡುವ ಸಾಹಿತ್ಯ ಪ್ರಕಾರಗಳಲ್ಲ. ಇವನ್ನು ಬರಹಗಾರ/ರ್ತಿ ತಮ್ಮ ದುಡಿಮೆಯ ಮಾರ್ಗವನ್ನಾಗಿ ಮಾತ್ರ ಮಾಡಿಕೊಂಡಲ್ಲಿ ಅವು ಏಕಪ್ರಕಾರದ ವರದಿ/ಬರಹಗಳಗೋ ಅಥವಾ ಯಾವುದಾದರೊಂದು ರಾಜಕೀಯ ಪಕ್ಷ, ಧರ್ಮ ಅಥವಾ ಸಂಸ್ಥೆಗಾಗಿಯೋ ಕೆಲಸ ಮಾಡುವವರು ಬರೆದಂತಿರುತ್ತದೆ. ಇಂಥವರು ಯಶಸ್ವಿಯಾಗಬಹುದು, ಹಣವನ್ನು ಕಾಣಬಹುದು. ರಾಜಕೀಯವಾಗಿ ಮೇಲೇರಬಹುದು; ಒಟ್ಟಾರೆ, ’ಗೆದ್ದವನದೇ ದೊಣ್ಣೆ’ ಎನ್ನುವಂತೆ ಅಂತವರು ಸಲ್ಲುತ್ತಾರೆ. ಗೆಲ್ಲುತ್ತಾರೆ. ಎಲ್ಲರೂ ಅವರನ್ನು ಹಿಂಬಾಲಿಸುತ್ತಾರೆ. ಇನ್ಯಾರಾದಾರರೂ ಭಿನ್ನವಾಗಿ ನಿಂತರೆ, ಅವರು ’ಸರಿಯಿಲ್ಲ’ ಎನ್ನುವ ನಮ್ಮ ಸಾಂಪ್ರದಾಯಿಕ ಮನು ಸಂಸ್ಕೃತಿ ಅಂಥವರ ಬಾಯನ್ನು ಮುಚ್ಚಿಸಲು ಹೀನ ಕೃತ್ಯಗಳಿಗಿಳಿಯುತ್ತದೆ. ಇದು ಶತಮಾನಗಳಿಂದ ನಡೆದು ಬಂದಿರುವ ವಿಚಾರ.

ಗೌರಿ ಲಂಕೇಶ್

ಕನ್ನಡದಲ್ಲಿ ಬರೆದ ಲೇಖಕಿಯರು ಹನ್ನೆರಡನೇ ಶತಮಾನದಿಂದಲೇ ಇದ್ದಾರೆ. 12 ನೇ ಶತಮಾನ ಕಂಡ ಕ್ರಾಂತಿ, ತೋರಿದ ವಿಶ್ವರೂಪಿ ಧರ್ಮ, ಧರ್ಮಕ್ಕೆ ಮಿಗಿಲಾದ ಕಾಯಕದ ನಂಬುಗೆ, ಸ್ವತಂತ್ರ್ಯ ಮನೋಧರ್ಮ, ತ್ಯಾಗದ ಪರಮಾವಧಿಗಳು ಸಮಾಜದಲ್ಲಿ ಪ್ರವರ್ತಕರು ಬಂದು ಹಲವು ಬದಲಾವಣೆಗಳಿಗೆ ಕಾರಣರಾಗಿ ತಂದ ಸಂಘರ್ಷದ ಅಸದಳತೆಯನ್ನು ತೋರುತ್ತದೆ. ಈ ಕಾಲದಲ್ಲಿ ಒತ್ತಟ್ಟಿಗೆ ೩೬ ಕನ್ನಡ ವಚನಕಾರ್ತಿಯರು ಬರೆದ ದಾಖಲೆಗಳಿವೆ! ೧೭-೧೮ನೇ ಶತಮಾನದಲ್ಲಿ ಕೂಡ ಇಂಗ್ಲಿಷ್ ಲೇಖಕಿಯರು ಗಂಡಸರ ಹೆಸರಲ್ಲಿ ಬರೆಯಬೇಕಾದ ಅನಿವಾರ್ಯತೆಯಿದ್ದದ್ದನ್ನು ನೋಡಿದರೆ, ಸಮಾಜವೊಂದರ ವಿಕಸನ, ಆಲೋಚಿಸುವ ಕ್ರಮದಲ್ಲಿ ದಾಖಲಾದ ಉನ್ನತ ಮಟ್ಟ, ಮಹಿಳೆಯರು ಕಾಯಕ ಮಾರ್ಗದಲ್ಲಿ, ವಚನ ಸಾಹಿತ್ಯದಲ್ಲಿ ತೊಡಗಿಕೊಂಡ ಬಗೆ ಪ್ರಪಂಚದ ಇತರೆ ಸಮಾಜಗಳಿಗೆ ಹೋಲಿಸಿದರೆ ಅತ್ಯದ್ಭುತವಾಗಿ ವಿಕಸಿತವಾಗಿದ್ದು ಕನ್ನಡನಾಡಿನಲ್ಲಿ ಎಂಬುದನ್ನು ತೋರಿಸುತ್ತದೆ. ಈ ಶತಮಾನದ ಕೊನೆಯಲ್ಲಿ ನಡೆದ ಗಲಭೆಯಲ್ಲಿ ಶರಣರ ಹತ್ಯೆ ಅವ್ಯಾಹಿತವಾಗಿ ನಡೆದು ವೈಚಾರಿಕತೆಯನ್ನು ಅಧಿಕಾರ ಕೈ ತಪ್ಪುವ ಭಯದಲ್ಲಿ ಬರ್ಭರತೆ, ನುಂಗಿಹಾಕಿದ್ದನ್ನು ಕಾಣುತ್ತೇವೆ. ಆಗೆಲ್ಲ ಶರಣರು ಭಯೋತ್ಪಾದಕರೆಂದೂ, ಧರ್ಮಭ್ರಷ್ಟರೆಂದೂ ಒಂದು ನಂಬಿಕೆ ಹರಡಿ ಅವರನ್ನು ಕಂಡ ಕಂಡಲ್ಲಿ ಕೊಚ್ಚಿ ಹಾಕುವ ಕೆಲಸ ಶುರುವಾದಾಗ ಶರಣರು  ತಮ್ಮ ಕೆಲವು ವಚನದ ಪುಸ್ತಕಗಳ ಜೊತೆ ಚೆಲ್ಲಾ ಪಿಲ್ಲಿಯಾಗಿ ಓಡಿಹೋಗಬೇಕಾಯ್ತು. ಅಲ್ಲಿಂದ ಮುಂದಕ್ಕೆ, ಕಾಲ ನಡೆದದ್ದು ಹಿಂದಕ್ಕೆ! ೧೫ನೇ ಶತಮಾನದಲ್ಲಿ ಬಂದ ದಾಸ ಸಾಹಿತ್ಯ ಮತ್ತೆ ಆಶಾಕಿರಣವಾಯ್ತಾದರೂ ಮಹಿಳೆಯರು ಮಂಚೂಣಿಯಲ್ಲಿ ಕಾಣಿಸಲಿಲ್ಲ.

ಮತ್ತೆ ಒಂಭತ್ತು ಶತಮಾನಗಳು ಕಳೆದರೂ ಸಾಮಾಜಿಕ ಮಟ್ಟದಲ್ಲಿ ಅವೇ ಧರ್ಮ, ಜಾತಿ, ಲಿಂಗ, ಬೆದರಿಕೆ, ಹತ್ಯೆ, ಸಮಾಜವನ್ನು ಚಿಧ್ರಿಸಿ ಯಾವುದರಲ್ಲೂ ಐಕ್ಯತೆ ಇಲ್ಲದಂತೆ ನೋಡುವುದರ ಸುತ್ತಲೇ ರಾಜಕಾರಣ ಸುತ್ತುತ್ತಿದೆ. ಸಂಪೂರ್ಣ ಸಹಿಶ್ಣುತೆ ಬಹುಶಃ ಸಾಧ್ಯವಿಲ್ಲ ಎನ್ನುವುದು ಒಪ್ಪಬೇಕಾದ ಮಾತು. ಆದರೆ ತಮ್ಮ ರಾಜಕೀಯ ಹುನ್ನಾರಗಳಿಗೆ ಆಗೀಗ ಸುಮ್ಮನಿರುವ ವ್ಯವಸ್ಥೆಗಳನ್ನು ಕಲಕಿ ಮುಗ್ದ ಜನರ ಬದುಕನ್ನು ಕಲಕುವ ಕೆಲಸ ಅವ್ಯಾಹತವಾಗಿ ನಡೆಯುತ್ತಲೇ ಬಂದಿದೆ. ಮತಧರ್ಮ ರಾಜಕಾರಣ ವಿಜೃಂಬಿಸುತ್ತಿದೆ!

ಕೃಪೆ: ಸತೀಶ್ ಆಚಾರ್ಯ

ಹೀಗಾಗಿ ಇಂತಹ ಪ್ರಭುತ್ವವನ್ನು ಪ್ರಶ್ನಿಸಿದ ಕೆಲವರ ಬರಹಗಳು ಅವರದೇ ವಯಕ್ತಿಕ ನಿಲುವುಗಳ ಪ್ರತಿಪಾದನೆಯಾಗಿದ್ದು ಅಂತಹ ಬರಹಗಳಿಗೆ ತಮ್ಮದೇ ದೃಷ್ಟಿಕೋನವನ್ನು, ಹಿಂಬಾಲಕರನ್ನು ಸೃಷ್ಟಿಸುವ ಶಕ್ತಿಯಿರುತ್ತದೆ. ಅದು ಕೆಲವರಿಗೆ ಹಿಡಿಸುತ್ತದೆ. ಮತ್ತೆ ಕೆಲವರಿಗೆ ಹಿಡಿಸುವುದಿಲ್ಲ. ಉದಾಹರಣೆಗೆ,  ಪೂರ್ವ ಪಾಕಿಸ್ತಾನದಲ್ಲಿ ( ಈಗಿನ ಬಾಂಗ್ಲಾದೇಶದಲ್ಲಿ) ಹುಟ್ಟಿ, ಬಾಂಗ್ಲಾದೇಶದಲ್ಲಿ ಬೆಳೆದ ತಸ್ಲಿಮಾ ನಸ್ರೀನ್ ವೃತ್ತಿಯಲ್ಲಿ ಪ್ರಸೂತಿ ತಜ್ಞೆ. ಆದರೆ ತನ್ನ ಬರಹಗಳಲ್ಲಿ ಆಕೆ ತೋರಿದ ಹೊಸ ದೃಷ್ಟಿಕೋನ ಆಕೆಯ ಧರ್ಮದ ಜನರು ಆಕೆಯ ವಿರುದ್ದವೇ ಫತ್ವಾ ಹೊರಡಿಸುವಂತೆ ಮಾಡಿತು. ಆಕೆಯ ಗಂಡ ನಾಲ್ಕೇ ವರ್ಷಗಳಲ್ಲಿ ವಿಚ್ಚೇದನ ನೀಡಿದ. ಪ್ರಾಣಭಯದಿಂದಾಗಿ  ಆಕೆ ಯೂರೋಪು ಮತ್ತು ಅಮೆರಿಕಾದಲ್ಲಿ ಹತ್ತು ವರ್ಷ ಬದುಕಿ, ಭಾರತಕ್ಕೆ ಬಂದರೆ ಅಲ್ಲಿನ ಆಕೆಯದೇ ಧರ್ಮದ ಮುಖಂಡರು ಮತ್ತೆ ಆಕೆಯ ಹತ್ಯೆಯ ಸಂಚು ಮಾಡಿದರು. ಧರ್ಮ ಎನ್ನುವುದು ಸಂವಿಧಾನಕ್ಕಿಂತ, ಮನುಷ್ಯತ್ವಕ್ಕಿಂತ, ಕಾನೂನಿಗಿಂತ ಹೆಚ್ಚಿನದೆಂದು ನಂಬಿದ ಯಾವ ದೇಶಗಳಲ್ಲಿಯೂ ಆಕೆ ಸಲ್ಲುತ್ತಿಲ್ಲ. ಸಲ್ಮಾನ್ ರಶ್ದಿಯನ್ನು, ಸಾನಿಯಾ ಮಿರ್ಝಳನ್ನೂ ಇವೇ ಧರ್ಮದ ವಿಚಾರಗಳು ಕಾಡಿದವು.  ಆಗರ್ಭ ಶ್ರೀಮಂತರಾಗಿದ್ದವರು ಅಥವಾ ಪ್ರಾಣರಕ್ಷಣೆಗೆ ಮುಂದುವರೆದ ದೇಶಗಳಿಗೆ ಶರಣಾರ್ತಿ ಕೇಳಿ ಸೇರಿದವರು ಮಾತ್ರವೇ ಬದುಕುಳಿದಿರುವುದು. ಆಗೆಲ್ಲ ಇವರ ಧರ್ಮದ ಹೊರಗಿರುವ ನಾವು ’ಇವೆಲ್ಲ ಸಂಕುಚಿತ ಮನದ ಜನರ ಮತ್ತು ಅಸಹಿಷ್ಣುತೆಯ ಪ್ರತೀಕಗಳು’ ಎಂದು ಜರಿದೆವು. ಅಭಿವ್ಯಕ್ತಿ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಭಾಷಣ ಬಿಗಿದೆವು.

2017  ಸೆಪ್ಟೆಂಬರ್ ೫ನೇ ತಾರೀಖು ಸಂವಿಧಾನ ಬದ್ದ, ಸ್ವತಂತ್ರ ದೇಶ ಭಾರತದಲ್ಲಿ ವೈಚಾರಿಕತೆಯನ್ನು ಮತ್ತು ಪ್ರಭುತ್ವವನ್ನು ಪ್ರಶ್ನಿಸಿದ  ಪ್ರೊ.ಕಲ್ಬುರ್ಗಿ ಯ ನಂತರ ಮತ್ತೊಂದು ಹತ್ಯೆಯಾಯ್ತು. ಅದು ಪತ್ರಿಕೋದ್ಯಮಿ, ಬರಹಗಾರ್ತಿ ಗೌರಿ ಲಂಕೇಶರದ್ದು !

ಹಲವರು ಸತ್ತ ನಂತರ ಹೆಚ್ಚು ಬೆಳಕಿಗೆ ಬರುತ್ತಾರಂತೆ. ಗೌರಿಯ ವಿಚಾರದಲ್ಲೂ ಇದೇ ನಿಜವಾಯ್ತು. ಗೌರಿ ಲಂಕೇಶ್  ಸಣ್ಣ ವಯಸ್ಸಿಗೇ ಪತ್ರಿಕೋದ್ಯಮಕ್ಕೆ ಬಂದ ಕಾರಣ ಸಾಯುವ ವೇಳೆಗೆ ೩೨ ವರ್ಷಗಳ ಕಾಲ ಈ ಕ್ಷೇತ್ರದಲ್ಲಿ ದುಡಿದಿದ್ದರು.

ಇವರು ಹಲವು ಪುಸ್ತಕಗಳನ್ನು ಬರೆದಿದ್ದಾರೆ. ೧) ಗಿಡುಗಗಳಿಗೆ ಬಲಿಯಾದ ಬೆನಝಿರ್ ಭುಟ್ಟೋ (೨೦೦೮). ೨) ಕಂಡಹಾಗೆ-ಸಂಪಾದಕೀಯ ಬರಹಗಳ ಸಂಗ್ರಹ-೧ (೨೦೦೯). ೩) ಕಂಡಹಾಗೆ-ಸಂಪಾದಕೀಯ ಬರಹಗಳ ಸಂಗ್ರಹ-೨ (೨೦೧೧). ೪) ಕಂಡಹಾಗೆ-ಸಂಪಾದಕೀಯ ಬರಹಗಳ ಸಂಗ್ರಹ-೩ (೨೦೧೩), ೫)  ಎಲ್. ಬಸವರಾಜು ಬದುಕು ಮತ್ತು ಮಾರ್ಗ-ಸಂಪಾದನೆ (೨೦೧೦). ೬) ದರವೇಶಿ ಕಥೆಗಳು-  ಇಂದ್ರೀಶ್ ಶಾ ರ ಪುಸ್ತಕ ಅನುವಾದ (೨೦೦೨). ೭) ಕಪ್ಪು ಮಲ್ಲಿಗೆ- ಅನುವಾದಿತ ಆಧುನಿಕ  ಸಣ್ಣ ಕಥೆಗಳ ಸಂಚಯ (೨೦೧೦). ೮) ಜುಗಾರಿ ಕ್ರಾಸ್- ಪೂರ್ಣ ಚಂದ್ರ ತೇಜಸ್ವಿಯವರ ಕನ್ನಡ ಕಥೆಯ ಇಂಗ್ಲಿಷ್ ಅನುವಾದ (೨೦೦೪). ೯) ಆವರಣ (ಎಸ್. ಎಲ್. ಭೈರಪ್ಪ) ರ  ಪುಸ್ತಕ ವಿಮರ್ಶಾ ಲೇಖನಗಳ ಸಂಪಾದನೆ (೨೦೦೭) . ೧೦) ಇವೆಲ್ಲ ಪ್ರಕಟಣೆಗಳ ಜೊತೆ ಒಟ್ಟು ೩೨ ವರ್ಷಗಳ ಕಾಲದ ಪತ್ರಿಕೋದ್ಯಮ ಬರಹಗಳು ( ೧೫ ವರ್ಷ ಇಂಗ್ಲಿಷ್ ಮತ್ತು ಸಾಯುವ ದಿನಗಳವರೆಗಿನ ೧೭ ವರ್ಷಗಳ ಕನ್ನಡ ಪತ್ರಿಕೋದ್ಯಮ).

ಕೃಪೆ: ಮಂಜುಲ್

ಕನ್ನಡ ಪತ್ರಿಕೋದ್ಯಮ ಮತ್ತು ಬರವಣಿಗೆಯಲ್ಲಿ ಬಂಡಾಯ, ಹೊಸತನ, ನವೀನ ಶೈಲಿಯನ್ನು ತಂದ ಪ್ರತಿಭಾವಂತ ಪತ್ರಿಕೋದ್ಯಮಿ ಪಾಳ್ಯದ ಲಂಕೇಶ್.  ಈ ಉದ್ಯಮದ ಯಾರಿಗೂ ಸೊಪ್ಪು ಹಾಕದ ಈತ ಜಾಹೀರಾತುಗಳೇ ಇಲ್ಲದೆ 2 ಲಕ್ಷಕ್ಕೂ ಹೆಚ್ಚಿದ್ದ ಚಂದಾದಾರರ ಹಣದಿಂದಲೇ ಪತ್ರಿಕೆ ನಡೆಸಿ, ಸಿನಿಮಾ ಮಾಡಿ, `ಪ್ರಗತಿ ರಂಗ’ ಎಂಬ ರಾಜಕೀಯ ಪಕ್ಷವನ್ನೂ ಕಟ್ಟಿದ್ದ ವ್ಯಕ್ತಿ. ಹೊಸ ಬಗೆಯ ಕನ್ನಡ ಪತ್ರಿಕೋದ್ಯಮಕ್ಕೆ  ನಾಂದಿ ಹಾಡಿದ ಈತ ತನ್ನಂತೆ ಹೊಸದಾಗಿ ಬರೆಯಬಲ್ಲ, ಹೊಸದಾಗಿ ಯೋಚಿಸಬಲ್ಲ ಎಲ್ಲರಿಗೂ ಪ್ರಿಯವಾದ ವ್ಯಕ್ತಿ. ಆದರೆ ಎಲ್ಲ ಹೊಸತನ್ನೂ ವಿರೋಧಿಸುವ ನಮ್ಮ ಸಮಾಜದಲ್ಲಿ ಈತನ ವಿರುದ್ಧವಾಗಿ ನಿಂತವರು ಬಹಳ ಮಂದಿ. ಆದರೆ ಅಂಥವರ ಹಣದ ಮರ್ಜಿಗೆ ಬಿದ್ದಿಲ್ಲದ ಈತನನ್ನು ಮಿತಗೊಳಿಸುವುದು, ಕಟ್ಟಿಹಾಕುವುದು ಕಷ್ಟವಾಗಿತ್ತು. ಇವರ ಮೊದಲ ಪುತ್ರಿ ಗೌರಿ.

ಅಪ್ಪನ ಬಗ್ಗೆ ಈಕೆಗೆ ಇನ್ನಿಲ್ಲದ ಅಭಿಮಾನವಿದ್ದರೂ ಅದನ್ನು ವ್ಯಕ್ತಪಡಿಸಲು  ಈಕೆಗೆ ಲಂಕೇಶ್ ನೀಡಿದ ಅವಕಾಶಗಳು ಬಹಳ ಕಡಿಮೆ. ಆದರೆ ವಿಚಾರಶೀಲ ಮಗಳಾಗಿದ್ದ ಗೌರಿಗೆ ಪೂರ್ಣ ವ್ಯಕ್ತಿ ಸ್ವಾತಂತ್ರ್ಯ ನೀಡಿದ್ದರು. ಈಕೆ ಓದಿದ್ದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ. ಮುಂದೆ ಡೆಲ್ಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ನ ಪತ್ರಿಕೋದ್ಯಮ ವಿಭಾಗದಲ್ಲಿ. ಅದಾದ ನಂತರ ಅಮೆರಿಕಾ, ಫ್ರಾನ್ಸ್ ಮತ್ತು ಸೌತ್ ಆಫ್ರಿಕಾದಲ್ಲಿ ಪತ್ರಿಕೋದ್ಯಮದಲ್ಲಿ ತರಬೇತಿ ಪಡೆದು ಬಂದ ಗೌರಿ ಟೈಮ್ಸ್ ಆಫ್ ಇಂಡಿಯಾ, ಸಂಡೆ ಮತ್ತು ದಿಲ್ಲಿಯ ಈ ಟಿವಿ ಚಾನೆಲ್ಲಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಹದಿನೈದು ವರ್ಷಗಳ ಕಾಲ ಕೆಲಸ ಮಾಡಿದರು. ಈಕೆಯ ವಿಚಾರಗಳು ವಿದೇಶಿಯರ ಉದಾರ ನೀತಿಯ ವಿಚಾರ ಮಟ್ಟದಲ್ಲಿದ್ದು, ಸೀಮಿತವಾದ ದೇಶೀ ಅರಿವಿನ ಮಿತಿಯೊಳಗೆ ಮಾತ್ರ ಇರಲು ನಿರಾಕರಿಸುತ್ತಿತ್ತು. ಜಾತಿ ,ಮತ ಮತ್ತು ಧಾರ್ಮಿಕ ನಂಬಿಕೆಗಳು ಪ್ರಜಾಪ್ರಭುತ್ವಕ್ಕಿಂತ ದೊಡ್ಡವಲ್ಲ ಎಂಬ ಈಕೆಯ ನಂಬಿಕೆಗಳು ಹಲವರಿಗೆ ಜೀರ್ಣವಾಗಿರಲಿಲ್ಲ. ಉದಾರೀಕರಣವಾದಿ ಶಿಕ್ಷಣ, ಅಪ್ಪಟ ಜಾತ್ಯಾತೀತತೆ, ಮುಕ್ತ ಮನಸ್ಸು ಮತ್ತು ಬದುಕಿನ ಬಗ್ಗೆ ಪ್ರೀತಿ ಇದ್ದ ಗೌರಿಯಲ್ಲಿ ಸಣ್ಣತನ, ಕುಟಿಲತೆಯ ಲವಲೇಶಗಳು ಇರಲಿಲ್ಲ.

ಗೌರಿ ಲಂಕೇಶ್ ಪತ್ರಿಕೆ

ಲಂಕೇಶ್ ಆ ಕಾಲದಲ್ಲಿ ಕುವೆಂಪು ಅವರ ಸರಳ ಮದುವೆ  ’ಮಂತ್ರ ಮಾಂಗಲ್ಯ’ ವನ್ನು ಇತರರಿಗೆ ಮಾಡಿಸುತ್ತಿದ್ದರು. ಆದರೆ ತಮ್ಮದೇ ಮಗಳಾದ ಗೌರಿಗೆ ಅದ್ದೂರಿಯಾಗೇ ಮದುವೆ ಮಾಡಬೇಕೆಂದು ಅಂದುಕೊಂಡಿದ್ದರು. ಗೌರಿ ಇದನ್ನು ವಿರೋಧಿಸಿದವಳು. ಆಕೆಯನ್ನು ಒಪ್ಪಿದ ಮತ್ತು ತಾಯಿ ಅಳಿಯನಾಗಲೆಂದು ಆಸೆಪಟ್ಟ ಇಬ್ಬರು ವೈದ್ಯ ಗಂಡುಗಳನ್ನು ನಿರಾಕರಿಸಿ ತಾನು ಪ್ರೀತಿಸಿದ ವೈದ್ಯನೋರ್ವನ ಮಗ ಪತ್ರಿಕೋದ್ಯಮಿ ಚಿದಾನಂದ ರಾಜಘಟ್ಟ ಎಂಬುವವನೊಂದಿಗೆ ಸರಳವಾಗಿ ರಿಜಿಸ್ಟರ್ ಮದುವೆಯಾದವಳು. ಅದನ್ನು ಸಮ್ಮತಿಸಿದ್ದ ಲಂಕೇಶ್ ಅವರೊಡನೆ ಉತ್ತಮ ಸಂಬಂಧ ಹೊಂದಿದ್ದರು. ಆರ್ಥಿಕವಾಗಿ ಸುಖವಾಗೇ ಬೆಳೆದ ಗೌರಿ ಮತ್ತು ಚಿದಾನಂದ ಮದುವೆಯ ನಂತರ ಎರಡೂ ಕಡೆಯಿಂದ ಆರ್ಥಿಕ ಸಹಾಯವನ್ನು ನಿರಾಕರಿಸಿ ತಮ್ಮದೇ ಬದುಕನ್ನು ಕಟ್ಟಿಕೊಂಡವರು. ಅಲ್ಲಿಂದಲೆ ಗೌರಿಯ ಸ್ವತಂತ್ರ ವ್ಯಕ್ತಿತ್ವ ಶುರುವಾಗಿತ್ತು.

೨೦೦೦ದಲ್ಲಿ ಲಂಕೇಶ್ ಸತ್ತ ನಂತರ ತಂದೆಯ ಮೇಲಿನ ಅಗಾಧವಾದ ಪ್ರೀತಿಗೆ ತನ್ನ ೧೫ ವರ್ಷಗಳ ವೃತ್ತಿಪರ  ಆಂಗ್ಲ ಭಾಷಾ ಕೆಲಸವನ್ನು ಬಿಟ್ಟು, ಕನ್ನಡ ಪತ್ರಿಕೆಯನ್ನು ನಡೆಸಲು ಕರ್ನಾಟಕಕ್ಕೆ ಧಾವಿಸಿ ಬಂದಳು. ತಂದೆ ಸತ್ತ ಮರುವಾರವೂ ಪತ್ರಿಕೆ ನಿಲ್ಲದಂತೆ ನಡೆಸಿದಳು. ಇಂಗ್ಲೀಷ್ ಪತ್ರಿಕೆಯಷ್ಟೇ ನಿರ್ಭಿಡತೆಯನ್ನು ಕನ್ನಡ ಪತ್ರಿಕೆಗೂ ತರಲು ಮುಂದಾದಳು. ಆದರೆ ಅವಳಿಗೆ ಮುಂದೆ ಆಘಾತ ಕಾದಿತ್ತು. ಲಂಕೇಶ್ ಸತ್ತಾಗ ಪತ್ರಿಕೆಯ ಪೂರ್ತಿ ವಾರಸುದಾರಿಕೆಯನ್ನು ಈಕೆಯ ತಮ್ಮ ಇಂದ್ರಜಿತ್ ಗೆ ಮಾಡಿದ್ದರು. ಪತ್ರಿಕೆಗಳಲ್ಲಿ ಏನನ್ನೇ ಬರೆದರೂ ಗಂಡು ಮಗನಿಗೆ ಎಲ್ಲವನ್ನೂ ಬರೆದು ಗೌರಿ ಮತ್ತು ಕವಿತಾ ಇಬ್ಬರಿಗೂ .ಲಂಕೇಶ್ ಪತ್ರಿಕೆಯ ಪಾಲುದಾರಿಕೆಯನ್ನು ನೀಡಿರಲಿಲ್ಲ. ಗೌರಿ ’ಲಂಕೇಶ್ ಪತ್ರಿಕೆ” ಯಲ್ಲಿ ಐದು ವರ್ಷಗಳ ಕಾಲ ಕೇವಲ ಒಬ್ಬ ಕೆಲಸಗಾರಳಾಗಿದ್ದಳು. ತಾತ್ವಿಕ ಭಿನ್ನಾಭಿಪ್ರಾಯಗಳ ಕಾರಣ  ಮುಂದೆ ಗೌರಿ ಈ ಪತ್ರಿಕೆಯನ್ನು ಬಿಟ್ಟು, ಯಾವತ್ತೋ ನೋಂದಣಿ ಮಾಡಿಸಿದ್ದ ತನ್ನದೇ ಹೆಸರಿನ `ಗೌರಿ ಲಂಕೇಶ್ ಪತ್ರಿಕೆ’ಯನ್ನು ಶುರು ಮಾಡಿದಳು. ಹಾಗಾಗಿ ಅಪ್ಪನ ಪತ್ರಿಕೆಯನ್ನು ಮಾತ್ರವೇ ನಡೆಸುತ್ತಿದ್ದಳು ಎಂದುಕೊಂಡವರಿಗ ನಿಜದ ಅರಿವೇ ಇಲ್ಲದಿರುವುದು ಸ್ಪಷ್ಟ. ಆದರೆ ಅಪ್ಪ ಕೂರುತ್ತಿದ್ದ ಕುರ್ಚಿಯನ್ನು ತನ್ನ ಕುರ್ಚಿಯ ಪಕ್ಕ ಹಾಕಿಕೊಂಡು ಕೂತು ಕೆಲಸಮಾಡುತ್ತಿದ್ದ ಅವಳನ್ನು `ರಾಮನ ಪಾದುಕೆಯನ್ನು ಇಟ್ಟುಕೊಂಡು ರಾಜ್ಯ ಭಾರ ಮಾಡಿದ ಭರತನಂತೆ’ ಎಂದು ಕುಚೋದ್ಯ ಮಾಡಿ ನಗುತಿದ್ದ ಜನರೂ ಇದ್ದರು. ಸಣ್ಣದೊಂದು ಪತ್ರಿಕೆಯನ್ನು ಅಪ್ಪನ ರೀತಿಯಲ್ಲೆ ಪತ್ರಿಕೆ ನಡೆಸಬೇಕೆಂದು ಆಕೆ ಪ್ರಯತ್ನಿಸಿದ ಕಾರಣ ’ಲಂಕೇಶ್ ಪುತ್ರಿಕೆ’ ಎಂದು ಚುಡಾಯಸಿದರೂ ಇದ್ದರು. ಅಪ್ಪನ ರೀತಿಯಲ್ಲೇ ಜಾಹೀರಾತು ಇಲ್ಲದೆ ಪತ್ರಿಕೆ ನಡೆಸಲು ಮುಂದಾದ ಗೌರಿಗೆ ಕಾಡಿದ ಹಣಕಾಸಿನ ಮುಗ್ಗಟ್ಟು ಅಷ್ಟಿಷ್ಟಲ್ಲ. ಆದರೆ ರಾಜಕಾರಣಿಗಳನ್ನು ಓಲೈಸಿ ಬರೆಯಲು, ಜಾಹೀರಾತುಗಾರರ ಮುಲಾಜಿಗೆ ಬೀಳಲು ಆಕೆ ಸುತಾರಾಂ ಒಪ್ಪಲಿಲ್ಲ. ಲಂಕೇಶ್ ಪ್ರಕಾಶನದಿಂದ ಪ್ರಕಟಿಸಿದ ಪುಸ್ತಕ ಮತ್ತು ತನ್ನ ಪುಸ್ತಕಗಳ ಆದಾಯ ಎಲ್ಲವನ್ನೂ ಆಕೆ ಪತ್ರಿಕೆಗಾಗಿಯೇ ಸುರಿದಳು. ತಾನು ಸಾಯುವ ದಿನಗಳಲ್ಲಿ ತನ್ನ ಜೀವ ವಿಮೆಯ ಹಣವನ್ನೂ ತೆಗೆದು ಎಲ್ಲರಿಗೂ ಸಂಬಳ ನೀಡಿದ್ದಳು. ಹಲವು ರಾಜಕಾರಣಿಗಳ ಕುಮ್ಮಕ್ಕು, ಹಣ ಸರಬರಾಜು ಇದ್ದಿದ್ದಲ್ಲಿ ಇವೆಲ್ಲದರ ಅಗತ್ಯ ಈಕೆಗೆ ಇರಲಿಲ್ಲ. ಅದೇ ರೀತಿ ತಾನು ನಂಬಿದ ಧ್ಯೇಯಗಳಿಗಾಗಿಯಲ್ಲದಿದ್ದರೆ ನಮ್ಮ- ನಿಮ್ಮಂತೆ ಒಂದು ವೃತ್ತಿಯನ್ನು ಮಾಡಿಕೊಂಡು ದೈಹಿಕವಾಗಿ, ಸಾಮಾಜಿಕವಾಗಿ ಸುಖವಾಗಿರಲು ಯಾವ ತೊಂದರೆಗಳೂ ಇರಲಿಲ್ಲ. ಇನ್ನೊಬ್ಬರಿಗೆ ಯಾವ ಧ್ಯೇಯಗಳು ಇರಬೇಕು ಅಥವಾ ಇರಬಾರದು ಎಂಬುದನ್ನು ಅವರು ಇನ್ನೊಬ್ಬರಿಗೆ ಸಂವಿಧಾನೇತರ ರೀತಿಯಲ್ಲಿ ಕಿರುಕುಳ ಕೊಡದಿದ್ದಲ್ಲಿ ನಾವು ಹೇಳುವುದು, ನಿರ್ಣಯಮಾಡುವುದು ಸರಿಯೂ ಅಲ್ಲ. ಅಥವಾ ಆಕೆ ಹಣಮಾಡಲಿಲ್ಲ, ಪತ್ರಿಕೆಯನ್ನು ಲಾಭದಾಯಕವಾಗಿ ನಡೆಸಲಿಲ್ಲ ಎಂಬ ಕಾರಣಕ್ಕೆ ಆಕೆ ಪತಿತಳಾಗುವುದೂ ಇಲ್ಲ. ಆದರೆ ಈಕೆಯ ನಿರುಮ್ಮಳತೆಯನ್ನು ಸಹಿಸದ ಹಲವರು ಹಾಗೆಂದು ಅಪಪ್ರಚಾರ ಮಾಡುತ್ತ ಬಂದರು.

ಪತ್ರಿಕೆ ನಡೆಸುವವರಿಗೆ ಬೆದರಿಕೆಗಳು ಮತ್ತು ಮಾನನಷ್ಟ ಮೊಕದ್ದಮೆಗಳು ಬರುವುದು ಸರ್ವೇಸಾಮಾನ್ಯ. ಅವು ಬೇಡವೇ ಬೇಡವೆಂದರೆ ಸಾಹಿತ್ಯಕ, ಸಿನಿಮಾ ಅಥವಾ ಮನರಂಜನೆಯ ಪತ್ರಿಕೆಗಳನ್ನು ಮಾತ್ರ ನಡೆಸಲು ಸಾಧ್ಯ. ಗೌರಿಗೂ ಇಂತಹ ಬೆದರಿಕೆಗಳು ಬರುತ್ತಿದ್ದವು. ರಾಜಕಾರಣಿಗಳು ರಕ್ಷಣೆ ಒದಗಿಸುತ್ತೇವೆಂದಾಗಲು, ಮುಲಾಜಿಲ್ಲದೆ ಸಿಗದಿದ್ದ ಈ ರಕ್ಷಣೆಯನ್ನು ಗೌರಿ ನಿರಾಕರಿಸಿದ್ದಳು. ತನಗಿದ್ದ ಪತ್ರಿಕಾ ರಂಗದ ವಶೀಲಿಯನ್ನು ತನ್ನ ಹಣಕಾಸಿನ ವಿಚಾರಕ್ಕೆ ಉಪಯೋಗಿಸಿಕೊಳ್ಳದೆ ತಾನು ನಂಬಿದ್ದ ಧ್ಯೇಯಗಳಿಗಾಗಿ ಮಾತ್ರ ಬಳಸುತ್ತಿದ್ದಳು. ಗೌರಿಯ ಅನುಯಾಯಿಗಳು ನಾಥುರಾಂ ಗೋಡ್ಸೆಯನ್ನು ಭಾರತದ ನೇತಾರರೆಂದು ಕರೆಯಲು ತಯಾರಿಲ್ಲದವರಾಗಿದ್ದರು. ಮೋದಿ ಮಾತ್ರ ನಮ್ಮ ದೇಶದ ಮಹಾತ್ಮನೆಂದು ಕರೆಯಲು ಸಿದ್ದರಿಲ್ಲದವರು. ಹಿಂದುತ್ವ ಅಥವಾ ಹಿಂದೂವಾದಿ ರಾಷ್ಟ್ರದ ಹೆಸರಲ್ಲಿ ಸಮಾಜವನ್ನು ಹಿಂದೂ, ಮುಸಲ್ಮಾನ, ಕ್ರಿಶ್ಚಿಯನ್ನರೆಂದು ಮತೀಯವಾಗಿ ಒಡೆದು  ಭಾರತದಲ್ಲಿ ಮತ್ತೊಂದು ಮಾರಣಹೋಮ ಮಾಡುವ ವಿಚಾರವನ್ನು ವಿರೋಧಿಸಿದವರು, ನಿರಾಕರಿಸಿದವರು. ಹಾಗಾಗಿ, ಮೋದಿಯನ್ನು ಮತ್ತು ಇತ್ತೀಚೆಗಿನ ಹೊಸ ಆರ್. ಎಸ್.ಎಸ್ ಅನ್ನು ಉಗ್ರವಾಗಿ ಮತ್ತು ನೇರವಾಗಿ ಖಂಡಿಸಿದವರು. ಪ್ರತಿ ರಾಜಕೀಯ ಪಕ್ಷಕ್ಕೆ ವಿರೋಧ ಪಕ್ಷಗಳಿರುವುದು ಹೇಗೆ ಒಳಿತೋ ಹಾಗೆಯೇ ವಿರುದ್ಧವಾದ ಪತ್ರಿಕಾ ದೃಷ್ಟಿಕೋನಗಳಿರುವುದು ಮುಕ್ತ ಸಮಾಜವನ್ನು ತೋರಿಸುತ್ತದೆಯೇ ಹೊರತು ಸಂಕುಚಿತ ಸಮಾಜವನ್ನಲ್ಲ. ಅದನ್ನು ವಿರೋಧಿಸುವ ದೃಷ್ಟಿಕೋನವಷ್ಟೆ ಸಂಕುಚಿತವಾದ್ದು.

೨೦೦೨ರಲ್ಲಿ ಬಾಬಾಬುಡನ್ ಗಿರಿಯನ್ನು  ಕರ್ನಾಟಕದ ಅಯೋಧ್ಯೆ ಮಾಡುತ್ತೇನೆಂದು ಅಂದಿನ ಸರ್ಕಾರ ಹೊರಟಾಗ, ಸಾಮಾಜಿಕ ಅಭಿಪ್ರಾಯಕ್ಕಾಗಿ ಒಂದು ಸಮಿತಿಯನ್ನು ನಿರ್ಮಿಸಲಾಗಿತ್ತು. ಗಿರೀಶ್ ಕಾರ್ನಾಡ್, ಕೆ. ಮರುಳ ಸಿದ್ದಪ್ಪ, ಗೋವಿಂದರಾವ್ ಜೊತೆಯಲ್ಲಿ ಗೌರಿಯೂ ಹೋಗಿದ್ದಳು. ಈ ಹುನ್ನಾರದ ಹಿಂದಿದ್ದ ರಾಜಕೀಯ ಮತ್ತು  ಫ್ಯಾಸಿಸ್ಟ್ ಸೈದ್ದಾಂತಿಕೆಯನ್ನು ಅರಿತ ಗೌರಿಯಲ್ಲಾದ ತಳಮಳ ಆಕೆಯನ್ನು ಸಮಾಜ ಕಾರ್ಯಕರ್ತೆಯನ್ನಾಗಿಸಿತು. ಕರ್ನಾಟಕ ಕೋಮು ಸೌಹಾರ್ದಾ ವೇದಿಕೆಯನ್ನು ಸೃಷ್ಟಿಸಿತು. ಆಕೆಯನ್ನು ಕೋಮು ಸೌಹಾರ್ದತೆಯ ಹಲವು ಹೋರಾಟಗಳಿಗೆ ಮುಂದುಮಾಡಿತು. ರಾಷ್ಟ್ರಮಟ್ಟದಲ್ಲಿ ಗೌರಿ ಗುರುತಿಸಲ್ಪಟ್ಟಳು  (ಇಪ್ಪತ್ತು ವರ್ಷಗಳ ಹಿಂದೆ ಬಾಬಾಬುಡನ್ ಗಿರಿಯ ದತ್ತಾತ್ತ್ರೇಯ- ದರ್ಗಾಕ್ಕೆ ನಾನು ಹೋಗಿ ಬಂದಿದ್ದೇನೆ. ಹಿಂದೂ -ಮುಸ್ಲಿಮ ಸ್ಥಳೀಯರು ಅತ್ಯಂತ ಶಾಂತಿಯುತವಾಗಿ ಇರುವ ಈ ಜಾಗದಲ್ಲಿ ಮತಧರ್ಮ ರಾಜಕಾರಣಕ್ಕೆ ಆಗ ಯಾವ ಜಾಗವೂ ಇರಲಿಲ್ಲ).

೨೦೦೪ರ ಮತ್ತೊಂದು ತಿರುವಿನಲ್ಲಿ ಗೌರಿಗೆ ಬೆಂಗಳೂರು ಮತ್ತು ದೆಹಲಿಯಲ್ಲಿ ಪತ್ರಿಕೋದ್ಯಮ ಓದುತ್ತಿರುವಾಗ ಆಕೆಗೆ ಸೀನಿಯರ್ ಆಗಿದ್ದ ಸಾಕೇತ ರಾಜನ್ ಎನ್ನುವ ಪತ್ರಕರ್ತ ಮತ್ತು ಮಾವೋವಾದಿ ಕಾರ್ಯಕರ್ತನ ಭೇಟಿಯಾಗುತ್ತದೆ. ಈ ನಕ್ಸಲೀಯ ನಾಯಕ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಗೌರಿ ಆತನನ್ನು ಮತ್ತೆ ಭೇಟಿಯಾಗುತ್ತಾಳೆ. ನಕ್ಸಲರು ಆಗ ಕರ್ನಾಟಕದ ಪಶ್ಚಿಮ ಘಟ್ಟಗಳನ್ನು ತಮ್ಮ ಹೋರಾಟತಾಣವನ್ನಾಗಿ ಮಾಡಿಕೊಳ್ಳುವ ಉತ್ಸಾಹದಲ್ಲಿದ್ದವರು. ಅವರ ಹೋರಾಟದ ಉದ್ದೇಶ ಉತ್ತಮವೇ ಆಗಿತ್ತು ಎಂದು ಮೆಚ್ಚಿಕೊಂಡಿದ್ದ ಗೌರಿ ಅವರು ಆರಿಸಿಕೊಂಡಿದ್ದ ಸಶಸ್ತ್ರ ಹೋರಾಟವನ್ನು ಖಂಡಿಸುತ್ತಾಳೆ. ಸೌಹಾರ್ದತೆಗೆ ಕರೆ ಕೊಡುತ್ತಾಳೆ. ಸರ್ಕಾರದೊಂದಿಗೆ ಶಾಂತಿಯುತ ಹೋರಾಟ ಮಾಡಲು ಕರೆಕೊಟ್ಟು ಅವರಲ್ಲಿ ಕೆಲವರು ಶಸ್ತ್ರತ್ಯಾಗ ಮಾಡಲು ಕರೆಕೊಟ್ಟು ನೆರವಾಗುತ್ತಾಳೆ. ಈಕೆಗಿದ್ದ ಸುಭಗ ಇಂಗ್ಲೀಷ್ ಭಾಷೆ, ಪತ್ರಿಕೋದ್ಯಮದ ಮತ್ತು ಸಮಾಜ ಕಾರ್ಯಕರ್ತೆಯ ಹಿನ್ನೆಲೆಗಾಗಿ ಸರ್ಕಾರ ಈಕೆಯನ್ನು  ಮಾವೋವಾದಿ ನಕ್ಸಲೀಯರ ಜೊತೆ ಶಾಂತಿ ಸಂಧಾನ ನಡೆಸಲು ಒಪ್ಪಿಸುತ್ತದೆ. ಆದರೆ ಸರ್ಕಾರ ಇವಳು ಶಾಂತಿಯುತ ಸಂಧಾನ ನಡೆಸುತ್ತಿರುವಾಗಲೇ ೨೦೦೫ರಲ್ಲಿ ಸಾಕೇತ್ ರಾಜ್ ಮತ್ತಿತರ ನಕ್ಸಲೀಯರನ್ನು ಗುಂಡಿಟ್ಟು ಕೊಲ್ಲುತ್ತದೆ. ಇದರಿಂದ ವಿಚಲಿತಳಾದ ಗೌರಿ, ಸರ್ಕಾರ ಮತ್ತು ನಕ್ಸಲೀಯರು ಇಬ್ಬರೂ ಶಾಂತಿಯುತ ಹೋರಾಟ ಮಡುವಂತೆ ಬರೆಯುತ್ತಲೇ ಹೋಗುತ್ತಾಳೆ. ೨೦೧೦ರ ವೇಳೆಗೆ ಗೌರಿ ಮಹಿಳೆಯರು, ದಲಿತರು, ನಕ್ಸಲರು ಎಲ್ಲರಿಗೂ ದನಿಯಾಗುತ್ತ ನಡೆಯುತ್ತಾಳೆ. ಈ ವೇಳೆಗೆ ಆಕೆ ಪತ್ರಕರ್ತೆಯಾಗಿ ಮಾತ್ರವಲ್ಲದೆ ಹೋರಾಟಗಾರ್ತಿಯಾಗಿಬಿಡುತ್ತಾಳೆ. ಹಿಂದುತ್ವವಾದೀ ಹೆಸರಲ್ಲಿ ದೇಶವನ್ನು ಒಡೆಯುವುದನ್ನು ೧೯೯೦ರಿಂದಲೇ  ಲಂಕೇಶ್ ಕೂಡ ವಿರೋಧಿಸುತ್ತ ಬಂದಿದ್ದ ವ್ಯಕ್ತಿ. ಅದನ್ನೇ ಮುಂದುವರೆಸುವ ಗೌರಿ ೨೦೦೩ರಲ್ಲೇ ಸುಳ್ಳುಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾಳೆ. ಗೌರಿ ಎಂಬ ಈ ದಿಟ್ಟ ಮಹಿಳೆ ವಿವಾದಗಳೇ ಇಲ್ಲದ ವ್ಯಕ್ತಿಯೇನಲ್ಲ. ವಿವಾದಗಳೇ ಇಲ್ಲದ ಸಾಮಾಜಿಕ ಕಾರ್ಯಕರ್ತರು, ಪತ್ರಿಕೋದ್ಯಮಿಗಳು ಇಲ್ಲವೂ ಇಲ್ಲ. ನೈತಿಕತೆಯ ಲವಲೇಶವೂ ಇಲ್ಲದೆ, ರಾಜಕೀಯ ದಾಳಗಳಾಗಿ, ಆತ್ಮಗಳನ್ನು ಮಾರಿಕೊಂಡ ಸಾವಿರಾರು ಪತ್ರಿಕೋದ್ಯಮಿಗಳು ನಮ್ಮ ದೇಶದಲ್ಲದ್ದಾರೆ. ಇವರ ಬಗ್ಗೆ ಚಕಾರ ಎತ್ತದ ಸಮಾಜ ಮಹಿಳೆಯೋರ್ವಳ ದಿಟ್ಟತನವನ್ನು ಮಾತ್ರ ಸಹಿಸದೆ ಪ್ರಹಾರಗಳನ್ನು ನೀಡುತ್ತ ಹೋಯಿತು. ಇಂತಹ ಹಲವು  ಘಟನೆಗಳಿಂದ ಆಕೆ ಕಲಿಯುತ್ತಲೇ ಹೋಗುತ್ತಾಳೆ. ಸಾಮಾಜಿಕ ಕಾರ್ಯಕರ್ತೆಯಾಗಿ ಅವಿರತ ದುಡಿಯುತ್ತಾಳೆ. ಒಂದಿಷ್ಟು ಗಳಿಕೆ, ಅದರಲ್ಲೇ ಪ್ರಪಂಚ ಗೆದ್ದ ಅತ್ಯಲ್ಪ ಸುಖಗಳು ಅವಳಿಗೆ ಸುಸಲಿತವಾಗಿ ಸಿಗಲು ಯಾವ ತಡೆಗಳು ಇಲ್ಲದಿದ್ದರೂ ಅವೆಲ್ಲಕ್ಕೂ ಮೀರಿ ಸಮಾಜವನ್ನು, ರಾಜಕೀಯವನ್ನು ಬದಲಿಸುವ ಕೆಲಸಗಳಿಗೆ ಮುಂದಾಗುತ್ತಾಳೆ.

ಚಿತ್ರಕೃಪೆ: ಸ್ಕ್ರೋಲ್.ಇನ್

೨೦೧೭ರಲ್ಲಿ ಆಕೆಯ ಹತ್ಯೆಯಾದಾಗ ಬರೀ ಪತ್ರಿಕೋದ್ಯಮದ ವ್ಯಕ್ತಿಗಳು ಮಾತ್ರವಲ್ಲದೆ ಯುವಕರು, ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು ಎಲ್ಲರೂ ರಸ್ತೆಗಿಳಿದು ಅವಳ ಹತ್ಯೆಯನ್ನು ಖಂಡಿಸಿದ್ದು ಇದೇ ಕಾರಣಕ್ಕೆ. ಆಕೆ ಬರೀ ಪತ್ರಕರ್ತೆ-ಬರಹಗಾರ್ತಿಯಲ್ಲದೆ ಸಾಮಾಜಿಕ ಕಾರ್ಯಕರ್ತೆ ಮತ್ತು ಹೋರಾಟಗಾರ್ತಿಯಾಗಿದ್ದು ಪ್ರಜಾಪ್ರಭುತ್ವದಲ್ಲಿ ಸಂಪೂರ್ಣ ನಂಬಿಕೆಯಿಟ್ಟ ವ್ಯಕ್ತಿಯಾಗಿದ್ದಳು. ೨೦೧೦ ಮತ್ತು ನಂತರದ ೨೦೧೩ರ ರಾಜಕೀಯ ಪಕ್ಷಗಳು ಈ ಉದಾರಿ ಮತ್ತು ಮುಕ್ತಮನಸ್ಸಿನ ಹೆಣ್ಣನ್ನು ತಮ್ಮ ಆಟಗಳಿಗೆ ಬಳಸಿಕೊಂಡವೋ ಹೇಳಲಾಗುವುದಿಲ್ಲ. ಆದರೆ ಈ ಕಾರಣಕ್ಕೆ ಒಬ್ಬ ಧ್ಯೇಯವಂತ ಪತ್ರಕರ್ತೆಯ ಬಲಿಯಂತೂ ಆಯಿತು. ಅಸಂವಿಧಾನಕ ರೀತಿಯಲ್ಲಿ ಪ್ರತಿದಿನ ಕ್ರೌರ್ಯಗಳನ್ನು ಮಾಡುವ ಹಲವರು ಧುರೀಣರು ನಮ್ಮ ನಡುವೆ ತಲೆಯೆತ್ತಿ ಓಡಾಡುತ್ತಾರೆ. ಸಂವಿಧಾನ ಶಿಕ್ಷಿಸಬಲ್ಲಂತ ಒಂದೇ ಒಂದು ತಪ್ಪುನ್ನು ಗೌರಿ ಮಾಡಿದ್ದಿದ್ದರೆ ಆಕೆಯನ್ನು ಜೈಲಿಗೆ ತಳ್ಳಲು ಯಾವುದೇ ಅಡೆ ತಡೆಗಳಿರಲಿಲ್ಲ. ಅಂತಹ ಯಾವ ತಪ್ಪನ್ನೂ ಮಾಡದ ಗೌರಿ ಪ್ರಭುತ್ವವನ್ನು ಪ್ರಶ್ನಿಸಿದ ಒಂದೇ ಕಾರಣಕ್ಕೆ ಹತ್ಯೆಗೊಳಗಾಗಿದ್ದು ಅಭವ್ಯಕ್ತಿ ಸ್ವಾತಂತ್ರ್ಯಕ್ಕೆ ಮಾಡಿದ ಅತ್ಯಾಚಾರವಾಯ್ತು. ಆಕೆ ಬದುಕಿದ್ದಿದ್ದರೆ ಸಿಗದಷ್ಟು ಹೆಸರು ಅವಳಿಗೆ ಸಿಕ್ಕಿತು. ಈ ಕಾರಣಗಳಿಗಾಗಿ ಗೌರಿ ಧೈರ್ಯ, ಧ್ಯೇಯಗಳಿಗೆ ಬದ್ದಳಾದ ಪತ್ರಿಕೋದ್ಯಮಿ ಬರಹಗಾರ್ತಿಯಾಗಿ ಗುರುತಿಸಲ್ಪಟ್ಟಳು.

ಈಕೆಯ ಬರಹದಲ್ಲಿ ಖಂಡಿತವಾಗಿ ಕಾಲ್ಪನಿಕ ಪಾತ್ರಗಳಿಲ್ಲ. ಅವೆಲ್ಲ ಕಥೆ, ಕಾವ್ಯ ಮತ್ತು ಕಾದಂಬರಿಗಳಿಗೆ ಸೀಮಿತ. ಪತ್ರಿಕೋದ್ಯಮದ ಬರಹಗಾರ್ತಿಯಾದ ಗೌರಿಯ ವಿಚಾರದಲ್ಲಿ ಈ ಕಾರಣಕ್ಕೇ ’ಬದುಕು ಮತ್ತು ಬರಹ ’ ವನ್ನು ಒತ್ತಟ್ಟಿಗಿಟ್ಟು ನೋಡಲು ಸಾಧ್ಯವಿದೆ.

22 thoughts on “ಗೌರಿ ಲಂಕೇಶ್ – ಬದುಕು ಮತ್ತು ಬರಹ: ಡಾ. ಪ್ರೇಮಲತ ಬಿ

 1. ದೂರದ ಇಂಗ್ಲೆಂಡ್ ‌ನಲ್ಲಿದ್ದು, ನಮ್ಮ‌‌ ನೆಲದ‌ ಹೆಣ್ಣು ಮಗಳಾದ ಗೌರಿ ಲಂಕೇಶರ ‌ಬಗ್ಗೆ ಬರೆದ ಪ್ರಮಾಣಿಕ ಬರಹವಿದು. ಲೇಖನ‌ ಸುದೀರ್ಘವಾಗಿದೆ. ತುಂಬಾ ಪ್ರಾಮಾಣಿಕವಾಗಿದೆ. ಗೌರಿಯನ್ನು ಇಂಗ್ಲೆಂಡ್ ನಲ್ಲಿನ ಕನ್ನಡಿಗರಿಗೂ ಹಾಗೂ ಇತರೆ ದೇಶಗಳಲ್ಲಿನ ಕನ್ನಡಿಗರಿಗೂ ಹಾಗೂ ಕನ್ನಡ ನೆಲದವರಿಗೂ ಪರಿಚಯಿಸಿದ್ದೀರಿ. ಲೇಖನದ ನಂತರ ನಡೆದ ಚರ್ಚೆಗಳನ್ನು ಸಹ ಗಮನಿಸಿದೆ. ಜೀವ ವಿರೋಧಿ ನಿಲುವು , ಜೀವಪರ ನಿಲುವು ಎಲ್ಲಾ ಕಡೆ ಇದೆ.ಇದ್ದದ್ದೇ ಎಂದು ಅರ್ಥವಾಯಿತು. ಗಾಂಧಿಜೀಯನ್ನು ಕೊಂದ ನೆಲವಲ್ಲವೇ ಭಾರತ. ಬುದ್ಧನನ್ನು ನಾಶ ಮಾಡಲು ಯತ್ನಿಸಿ ,ಸೋತ ನೆಲ. ಬಸವಣ್ಣನನ್ನು , ಆತನ ನಿಲುವನ್ನು ಸೋಲಿಸಿದ್ದು ಸಹ ಕರ್ನಾಟಕವೇ…ಈ ಸಂಘರ್ಷ ನಿರಂತರ. ನಿಮ್ಮ ಪ್ರಮಾಣಿಕ, ಸಜ್ಜನಿಕೆಗೆ ನನ್ನೊಂದು ನಮಸ್ಕಾರ.

  Like

 2. Premalatha aware as usual you have excelled in in your writings about agouti Lankesh . most of the things i know about her is correct . Articles like this will enlighten about how our perception of life seem to change as we grow . However a small comment about mention of any particular organisation even if it is proven seems out of order. It is The Individual responsible for the horrible crime. Having said that I sincerely congratulate you for presenting the article in such detail and of course fluent language as ever.

  Like

 3. I am posting this comment despite being acutely aware that the forum of Anivasi is not meant for any political/religious discussions. I have always abided by the group rules and have been conscious not to bring my personal religious/political preferences to this forum (except once, when I asked why are we repeatedly discussing Gowri Lankesh murder in this forum when we have never discussed other similar unsolved murders and I was then reminded of the group rules that one should not be discussing political/religious views in this forum). However, I’m forced to write this comment as I feel otherwise, this thread will only represent a unilateral point of view (which defeats the very purpose of ‘freedom of speech’ and all that). I have also decided to write this after observing posts/threads that I personally found very very offensive (again, respecting the rules of the group I did not respond then). But one cannot keep offending others’ beliefs in a public forum like this, in the name of ‘freedom of speech’.

  I would like to begin by saying that murder or cruelty in any way, shape or form is wrong, whether a Hindu commits it or a Muslim, whether a ‘vichaaravaadi’ does it or a ‘non-vichaarvaadi’. We all should condemn this and I hope that we always will continue to do so irrespective of our political/religious preferences. As far as I understand, nobody yet knows who killed Gowri Lankesh and if it is proved that a RSS worker has killed her, he/she SHOULD be punished. It is essential to demand justice for Gowri and we all should do this, simply because we all are good human beings and not because we are right wing or left wing or Hindu or Muslim. Similarly, we should all be condemning extremism of any kind irrespective of who the extremist is. That is the bottom line and I hope all readers would interpret my comment keeping this in my mind (not merely interpreting me as a RSS worker or ‘balapantheeya ugravaadi’)

  Whilst I completely stand for freedom of speech, I do not agree with abusing others’ beliefs in the name of freedom of speech. That is utterly outrageous and it SHOULD be condemned TOO. I’m sure Gowri Lankesh was a great human being and she SHOULD be remembered for that. However, should we all not be questioning the extremely offensive language she used repeatedly in her writings? It was interesting to note that the article did not make a mention of that at all. Do we all justify this in the name of freedom of speech? When we are celebrating Kalburgi and Bhagavan as ‘vichaaravaadis’ why are we not saying that it is not acceptable to call Rama as a ‘womaniser’ or to burn Geetha? Do we call this ಅಭಿವ್ಯಕ್ತಿ ಸ್ವಾತಂತ್ರ್ಯ? If so, we really should be introspecting ourselves. Yes, let us all stand together and urge the Government to find the killers, but let us also stand together in educating ourselves and others on what true ಅಭಿವ್ಯಕ್ತಿ ಸ್ವಾತಂತ್ರ್ಯ is. Let us not be blinded by one ideology. Similarly, let us also demand justice for the unsolved murders of so many innocent people regardless of their political/religious background.

  I also notice the repeated use of the word ‘ಪ್ರಭುತ್ವ’. What is ‘ಪ್ರಭುತ್ವ’? Doesn’t it mean monarchy? As far as I understand since 1947 India has had ‘ಪ್ರಜಾ ಪ್ರಭುತ್ವ’ or at least we were made to believe so. I would say that a man from a poor socioeconomic background, a tea seller becoming a Prime Minister is true ‘ಪ್ರಜಾ ಪ್ರಭುತ್ವ’. A man from the so called backward caste becoming the President of India represents ‘ಪ್ರಜಾ ಪ್ರಭುತ್ವ’ Sadly a lot of us are happy to remain under the rule of a certain political family, similar to monarchy and celebrate it as ‘ಪ್ರಜಾ ಪ್ರಭುತ್ವ’. But finally when the Indians realised what democracy is and a Government was elected as a majority we repeatedly mock it as ‘ಪ್ರಭುತ್ವ’. (Again, I am not a BJP supporter or a right wing or a RSS worker. I have never even voted in India. ) Why is this? Yes, the current Government has not got everything right and no Government will ever get everything right. But why are we holding Modi Govt responsible for anything and everything that goes wrong in the country? ಗೌರಿ ಲಂಕೇಶ್ ಸಾವಿಗೆ ಹಲವಾರು ಆಯಾಮಗಳಿವೆ. Everyone knows that she was a controversial person. So why are we giving the verdict that Modi Govt killed her? Is it not misleading?

  It is very well known that people with strong political/religious ideologies die in suspicious circumstances. It has not started happening now and it is not going to stop in the future; that is the sad reality. We all know about the conspiracy theories surrounding the death of Bose and Shastri. It is very well documented that a few days before Shastri’s death a prominent political figure of India said ‘’ಯೇ ತೋ ಹಮಾರೇ ಘರ್ ಕಾ ನೌಕರ್ ಥಾ. ಅಬ್ ಪ್ರೈಮ್ ಮಿನಿಸ್ಟರ್ ಬನ್ ಗಯಾ’’. So, clearly this person could not accept that an ordinary person like Shastri could become a PM. Does that reflect true ‘ಪ್ರಜಾ ಪ್ರಭುತ್ವ’? Several politicians including CV Rajagopalachari urged the Govt to investigate the mysterious death of Shastri, but the Govt never even opened the case. Do we all say that this is democracy? This is just one example. My point again is, these things have happened time and again in history, not just in India but in the world. When this is the case, why are we holding Modi Govt responsible for everything? Why are portraying it as if all injustice has started happening in India in the last 5 yrs?

  All I can see is that we have easily fallen to the trap set by the media that is repeatedly broadcasting one-sided stories, sometimes giving twisted view of the incidents. People were always murdered and will be murdered and that will not stop. India has not all of a sudden become a terrorist land in the last 5 years. All we can do is to do our bit to ensure that we carry on being good human beings, unless we want to become politicians and change the face of the country of course.

  I strongly feel that as educated individuals we should be able to analyse the situations from all angles. We should be able to recognise and admit the good and bad aspects of our religion and beliefs; however, in doing so we should be extremely careful not to hurt the feelings of other people. Most people born in Brahmin families today condemn the caste system. They somehow feel a sense of responsibility to ‘fix’ the wrong doings of their ancestors. Inter-caste marriages are very common in Brahmin communities these days. Brahmins have suffered the brunt of the reservation system. To give a personal example, I did not get general merit seat for medicine in the first round of CET despite scoring above 90% marks in PUC whereas a lot of my friends from other castes got as low as 60% marks and got into medicine. I did not want to take a payment seat as it would have been financially very taxing on my father as he is a middle class farmer. I felt sad but I did not feel angry, for I felt I was somehow doing a ಪ್ರಾಯಶ್ಚಿತ್ತ for the wrong doings of my ancestors. It is important to note that the atrocity against the so called lower castes wasn’t solely committed by Brahmins, A lot of land lords and people in the position of power were not Brahmins, but were people from other so called higher castes. However, it is only Brahmins who are repeatedly abused today in the name of ಮನು ಸಂಸ್ಕೃತಿ and what not. Where is the basic respect? Like I said we all should be questioning the outdated practices of Hindu Dharma, but why should I be keeping quiet when my God is called a womaniser and when the idols I worship are urinated upon? Should I remain silent, when as an ordinary woman, I am doing everything that is in my power to eradicate the caste system, the gender discrimination and still be repeatedly abused and mocked as ಮನುವಾದಿ? When will the society move on? Do we call this ‘vichaarvaada’? Do we justify this in the name of freedom of speech and ಅಭಿವ್ಯಕ್ತಿ ಸ್ವಾತಂತ್ರ್ಯ? Do we celebrate these individuals as ‘writers’? I that is the case, I disagree. It has become a trend now to batter Hindu Dharma from left, right and centre, without actually understanding the basis of certain religious practices. ಕಾಳನ್ನಷ್ಟೇ ಆಯ್ದುಕೊಂಡು ಜೊಳ್ಳನ್ನು ಬಿಡುವುದು ಖಂಡಿತಾ ಅಗತ್ಯ. But that DOES NOT justify the use of offensive language.

  All I want to say is that any murder is wrong, no matter who is murdered or who the murderer is. ಅಭಿವ್ಯಕ್ತಿ ಸ್ವಾತಂತ್ರ್ಯ ಆರೋಗ್ಯಕರ ಸಮಾಜಕ್ಕೆ ಅತ್ಯಗತ್ಯ. ಹಾಗಂತ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಇನ್ನೊಬ್ಬರ ಧಾರ್ಮಿಕ/ವೈಯಕ್ತಿಕ ಭಾವನೆಗಳಿಗೆ ಧಕ್ಕೆ ಬರುವಂತಹ ಮಾತನಾಡುವುದು ಖಂಡಿತಾ ಸರಿಯಲ್ಲ. ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಒಬ್ಬ ಬಹಳ ಒಳ್ಳೆಯ ವ್ಯಕ್ತಿಯೇ ಆಗಿರಬಹುದು, ಅಂದ ಮಾತ್ರಕ್ಕೆ ಅವರು ಹೇಳಿದ್ದೆಲ್ಲಾ, ಬರೆದದ್ದೆಲ್ಲಾ ಸರಿ ಎನ್ನಲಾಗುವುದಿಲ್ಲ. ನಮ್ಮಲ್ಲಿರುವ ವಿಭಿನ್ನ ವಿಚಾರಧಾರೆಗಳನ್ನು ಸಂಸ್ಕಾರದ ಚೌಕಟ್ಟು ಮೀರದೆ, ನಾಗರಿಕ ಭಾಷೆಯಲ್ಲಿ ಚರ್ಚಿಸಬೇಕೇ ಹೊರತು ಅನಿಸಿದ್ದನ್ನೆಲ್ಲ ಹೇಳುತ್ತಾ, ಬರೆಯುತ್ತಾ ಹೋದರೆ, ಅದು ಆರೋಗ್ಯಕರ ಚರ್ಚೆಯಾಗುವುದಿಲ್ಲ, abuse ಆಗುತ್ತದೆ ಅಷ್ಟೇ.

  Like

  • We talk about suppression and oppression and use of force and how to fight this using freedom of speech. I’m very saddened to give this personal example, however I need to do this. My ancestors left Maharashtra as refugees and came to Karnataka because people from our community were getting raped, murdered and converted during the reign of Aurangajeb. I have never ever mentioned this to even closest of friends, for I have very good Muslim friends and I would never want to offend their beliefs. In reality I wouldn’t want to offend the beliefs of anyone. But if we were to advocate freedom of speech do I discuss a matter as sensitive as this in forum such as my MBBS group where there are many Muslims? Do I write articles defaming muslims, claiming Quran says this and Quran says that when I have never even read Quran? Do I call Muhammad Paigambar names? No, I do not believe in such freedom of speech. We are entitled to have our beliefs but what good is the freedom of speech if we cannot respect our fellow human beings. Therefore I feel we need to be very careful of the views of other members when we write in bigger platforms like blogs or in WhatsApp groups where individuals may have beliefs contrary to ours. I am proud of my religion that gives me the flexibility to practice the religion the way I want it and to accept every other religion. Like I said, we are so stuck in the past that we are not able to progress. I was extremely saddened to read about the murder of Shivasharanas. It is not something I have heard of, that is not to say it did not happen. However, what I CAN say is that every Brahmin child is not brought up with this hatred for people who follow sharanas. We in fact recite Vachanas in our prayers! I was very proud when my daughter dressed up as Akkamahadevi a few weeks ago and recited a Vachana beautifully. Would a ‘Manuvadi Samskruthi’ allow this to happen? I’m totally confused!

   Like

   • ನಾಸ್ತಿಕನಾಗಿಯೂ ಘನತೆಯಿಂದಿರಬಹುದು,ಆಸ್ತಿಕನಾಗಿಯೂ ಘನತೆಯಿಂದಿರಬಹುದು. ನಾಸ್ತಿಕನಾಗಿ ದೇವರು, ಧರ್ಮಗಳನ್ನು ಟೀಕಿಸುವುದೇ ಆದರೆ ಎಲ್ಲಾ ಧರ್ಮ, ದೇವರು,ಮತ ಆಚಾರಗಳನ್ನೂ ಟೀಕಿಸುವ ಎದಗಾರಿಕೆಯೂ, ಆತ್ಮವಂಚನೆ ಮಾಡಿಕೊಳ್ಳದ ಪ್ರಾಮಾಣಿಕತೆಯೂ ಇರಬೇಕು. ಅದು ಬಿಟ್ಟು ಬಹುತೇಕ ಸಹಿಷ್ಣುತೆ ತೋರುವ ಹಿಂದೂ ಧರ್ಮವನ್ನು ಮಾತ್ರ ಬಾಯಿಗೆ ಬಂದಂತೆ ಅನ್ನುವುದು ಗೌರಿಯೂ ಅವಳ ಬೆಂಬಲಿಗರೂ,ಅವಳಂಥ ಇನ್ನೂ ಅನೇಕರೂ ಅನುಸರಿಸಿಕೊಂಡು ಬಂದಿರುವ “ಏನಕೇನ ಪ್ರಾಕಾರೇನ ಪ್ರಸಿದ್ಧ ಪುರುಷೋಭವದ” ಮಾರ್ಗ. ಹೆಸರು ಹಣ,ಸರಕಾರದ ಕೃಪೆ ಇತ್ಯಾದಿ ಗಳು ದೊರೆಯಲೂ ಒಂದು ಅವಕಾಶ.
    ಮತ್ತೆ ಲ್ಲಾ “ಗುದ್ದೋಡು”ವ ಉದ್ಧಟತನವೂ ಇದೆ. ಬೇಕಾದ್ದು ಹೇಳುವುದು , ಪ್ರತಿ ಪ್ರಶ್ನೆಗೆ ಉತ್ತರಿಸದ ಧಾರ್ಷ್ಟ್ಯವೂ….

    Like

    • Rather than condemning the use of ALL offensive language, if you’re justifying it by referring to the use of foul language by other journalists and media, I have nothing else to say. Two wrongs don’t make ia right. I

     Like

  • Dear vaishali,
   Very nice to know that you agree with the main theme of the article and what is wrong in murdering Gowri. In my article I have never said Modi or BJP killed Gowri. Nor I have taken reference to religion, caste and other matters. Where are you getting these ideas from?
   If you want to discuss the wrong use of language I can give examples of various medias, papers, columns and people who have been abusing many people’s feelings and using foul language. I can give life style examples too. Hence that argument is very different to my article. I have not expressed my views but the years and names of the political parties are facts.I couldn’t change them while writing about a journalist.
   Thanks for reading and reacting .

   Like

   • Rather than condemning the use of ALL offensive language, if you are justifying it by referring to the foul language used by other journalists and media, I have nothing else to say. Two wrongs don’t make a right.

    Like

 4. ಪ್ರೇಮಲತಾ ಗೌರಿ ಲಂಕೇಶ್ ಹತ್ಯೆ ನಮ್ಮ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬಿದ್ದಿರುವ ಬಲವಾದ ಹೊಡೆತ. ಪುರುಷ ಪ್ರಧಾನ ಸಮಾಜದಲ್ಲಿ ಸಮಾನತೆಯನ್ನರಸಿ, ಪುರುಷರೊಂದಿಗೆ ಹೆಗಲು ತಗುಲಿಸಿ ನಡೆಯುವ ದಾರಿಯನ್ನನುಸರಿಸುವ ಮಹಿಳೆಯರ ಬದುಕಿನ ದಾರಿ ಸುಗಮವಲ್ಲ ಎನ್ನುವುದಕ್ಕೆ ಗೌರಿ ಲಂಕೇಶ್ ಜೀವನವೇ ಒಂದು ಸಾಕ್ಷಿ. ವಾಮ ಪಂಥೀಯ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಇಂತಹ ಹತ್ಯೆಗಳು ನಡೆಯುತ್ತಲೇ ಇರುತ್ತವೆ. ಹಿಂದೂ ಧರ್ಮದ ಆಚಾರ ವಿಚಾರಗಳ ವಿರುದ್ಧ ದನಿಯೆತ್ತಕೂಡದು. ಋಷಿಮೂಲ ನದಿಮೂಲಗಳ ಬಗ್ಗೆ ಪ್ರಶ್ನಿಸಕೂಡದು. ಅದರಲ್ಲೂ ಒಬ್ಬ ಮಹಿಳೆ ಇಂತಹ ಕಾರ್ಯವನ್ನೆಸೆಗಿದರೆ ಅದಕ್ಕೆ ಮರಣದಂಡನೆಯೇ ಶಿಕ್ಷೆ! ೭೦ರ ದಶಕದಲ್ಲಿ ತನ್ನ ಬಂಡಾಯ ಸಾಹಿತ್ಯದಿಂದ ಯುವಕರ ಮನ ಹೊಕ್ಕ ಲಂಕೇಶ್ ನಿಲುವುಗಳನ್ನು ನಾನು ಶಾಲೆಯಲ್ಲಿದ್ದಾಗೆ ನನ್ನ ಸಹೋದರ ಸಂಬಂಧಿಗಳ ಬಾಯಲ್ಲಿ ಕೇಳುತ್ತಿದ್ದೆ. ಲಂಕೇಶ್ ಪತ್ರಿಕೆ ದಿನಗಳವು. ನಮಗೆ ಮೈಸೂರಿನಲ್ಲಿ ಆ ಪತ್ರಿಕೆ ಓದುವ ಸಿಗಲಿಲ್ಲ. ಆದರೆ ಲಂಕೇಶ್ ವಿಚಾರಗಳನ್ನು ಬೆಂಬಲಿಸುವ ತರುಣರ ಗುಂಪು ಮೈಸೂರು ವಿಶ್ವವಿದ್ಯಾಲಯದಲ್ಲಿತ್ತು. ನಾನು ಕಾಲೇಜಿಗೆ ಬಂದಾಗ ಆ ಗುಂಪಿನ ಚಟುವಟಿಕೆಗಳು ಜೋರಾಗಿ ನಡೆಯುತ್ತಿದ್ದವು. ಲಂಕೇಶ ನಿರ್ಮಿಸಿ ದಿಗ್ದರ್ಶಿಸಿದ ಹಲವಾರು ಕನ್ನಡ ಚಲನ ಚಿತ್ರಗಳನ್ನು ನಾನು ನೋಡಿ ಮೆಚ್ಚಿದ್ದೆ. ಆದರೆ ಲಂಕೇಶ್ ತಮ್ಮ ಪತ್ರಿಕೆಯ ಪಾಲನ್ನು ತಮ್ಮ ಹೆಣ್ಣು ಮಕ್ಕಳಿಗೆ ಬಿಟ್ಟಿರಲಿಲ್ಲ ಎನ್ನುವುದು ಬಹಳ ಆಘಾತಕಾರಿ ಸುದ್ದಿ. ಇದು ಲಂಕೇಶರ ಮೂಲ ಚಿಂತನೆಗೆ ವಿರುದ್ಧವಾದ ನಿರ್ಧಾರವಲ್ಲವೇ? ಏನಾಗಲಿ, ಧೈರ್ಯದಿಂದ ಮುನ್ನಡೆದು ತಾನು ಒಂದು ಪತ್ರಿಕೆಯನ್ನು ನಡೆಸಲು ಮುಂದಾದ ಗೌರಿಯ ಜೀವನ ಅಂತ್ಯ ಹೀಗಾಗಿದ್ದು ನಿಜಕ್ಕೂ ದುರಂತದ ವಿಷಯ. ರಾಜಕಾರಣಿಗಳ ಬೆನ್ನತ್ತಿ ಅವರ ಕಾಲಡಿಯಲ್ಲಿ ಬೀಳುವ ನಿರ್ಧಾರ ಮಾಡಿದ್ದ ಗೌರಿಯ ದಿಟ್ಟ ನಿಲುವು ಇತರ ಮಹಿಳೆಯರಿಗೆ ಒಂದು ಉತ್ತಮ ದಾರಿದೀಪ. ಗೌರಿಯ ಜೀವನ ಶೈಲಿಯ ಬಗ್ಗೆ ಸದಾ ಕಾಲ ಬಾಯಿಗೆ ಬಂದಂತೆ ಮಾತನಾಡುತ್ತಿದ್ದ ಜನರನ್ನು ೯೦ರ ದಶಕದಲ್ಲಿ ಬೆಂಗಳೂರಿನಲ್ಲಿ ಕೇಳುತ್ತಿದ್ದೆ. ಪುರುಷರು ಇಂತಹ ಜೀವನ ಶೈಲಿಯನ್ನು ನಡೆಸುತ್ತಿದ್ದಾರೆ ಅದಕ್ಕೇನು ಹೆಚ್ಚಿನ ಮಹತ್ವ ನೀಡದ ನಮ್ಮ ಸಮಾಜ ಮಹಿಳೆಯರ ಬಗ್ಗೆ ಮಾತ್ರ ಮಾನದಂಡವನ್ನು ಉಪಯೋಗಿಸುತ್ತಿದ್ದ ವಿಚಾರ ನಿಜಕ್ಕೂ ಹೇಸಿಗೆ ತರುವಂತಹುದು. ಗೌರಿಯ ಹತ್ಯೆ ನಮ್ಮ ಸಮಾಜದ ಕುರೂಪ ಮುಖದ ಒಂದು ದರ್ಶನ. ಆಕೆಯ ಜೀವ ವಿಚಾರಗಳ ಬಗ್ಗೆ ಉತ್ತಮ ಲೇಖನ ಬರೆದಿದ್ದೀರಿ. ಧನ್ಯವಾದಗಳು. ನಮ್ಮ ಸಮಾಜದಲ್ಲಿ ಇನ್ನು ಎಷ್ಟು ಗೌರಿಗಳ ಹತ್ಯೆ ನಡೆಯಬೇಕೋ ಗೊತ್ತಿಲ್ಲ!
  ಉಮ ವೆಂಕಟೇಶ್

  Liked by 1 person

  • ನೀವಾಗಲೇ ಇದು ಬಲಪಂಥೀಯರು ಮಾಡಿದ ಕೃತ್ಯ ಎಂದು ಷರಾ ಬರೆದಂತಿದೆ!! ಗುಪ್ತಚರ, ಪತ್ತೇದಾರಿ ಇಲಾಖೆಗಳು ತಮ್ಮ ಎಲ್ಲಾ ಶಕ್ತಿ, ಪ್ರಭಾವ, ಶಿಕ್ಷೆಯ ಹಂತಗಳನ್ನು ಬಳಸಿಯೂ ಬಿಡಿಸಲಾಗದ ರಹಸ್ಯ ನಿಮಗೆಲ್ಲಾ ಅದು ಹೇಗೆ ತಿಳಿದಿದೆ? ಉಚ್ಛ ನ್ಯಾಯಾಲಯ ಗೋಧ್ರಾ ಹತ್ಯಾಕಾಂಡದಲ್ಲಿ ಮೋದಿ ನೇರವಾಗಿಯೂ ಪರೋಕ್ಷವಾಗಿಯೂ ಭಾಗಿಯಾಗಿಲ್ಲ ಎಂದರೆ ನಂಬದ ಜನ ಗೌರಿಯ ಹಂತಕರು ಇಂಥದ್ದೇ ಪಂಥದವರು ಎಂದು ಆಧಾರರಹಿತವಾಗಿ ನಂಬುವುದು,ಅದನ್ನೇ ಮತ್ತೆ ಮತ್ತೆ ಬಡಬಡಿಸುವುದೊಂದು ವಿರೋಧಾಭಾಸವೆನಿಸುತ್ತದೆ.
   ಗೌರಿಯ ಸಾವಿಗೆ ಎಷ್ಟೋ ಆಯಾಮಗಳಿವೆ. ಇದಂ ಇಥ್ಥಂ ಎನ್ನುವುದು ಸದ್ಯ ವಿಚಾರವಾದವಾಗಲಾರದು.

   Like

  • ಖಂಡಿತ ನಿಜ ಉಮ ಅವರೆ. ಯಾರೋ ಒಬ್ಬರು ಬರೆದದ್ದು, ಮಾಡಿದ್ದು ಇಷ್ಟವಾಗಲಿಲ್ಲ ಅಥವಾ ಅವರ ಜೀವನ ಶೈಲಿ ಭಿನ್ನವಾಗಿದೆ ಎಂಬ ಕಾರಣಕ್ಕೆಲ್ಲ ಮನುಷ್ಯರು ಒಬ್ಬರನ್ನೊಬ್ಬರು ಕೊಲ್ಲುತ್ತ ಹೋಗುವ ಪರಿಪಾಠ ಶುರುವಾಗುವ ಕಲ್ಪನೆಯೇ ಭೀಕರ. ಅದರಲ್ಲೂ ಹಣವಿಲ್ಲದ, ವಶೀಲಿ ಉಪಯೋಗಿಸದ ಹಿರಿಯರು ಮತ್ತು ಮಹಿಳೆಯರನ್ನು ಆರಿಸಿ ಕೊಂದ ಘಟನೆಗಳನ್ನು ಆ ನಿಟ್ಟಿನಲ್ಲಿ ನಿಜಕ್ಕೂ ಯಾರೊಬ್ಬರೂ ಸಮರ್ಥಿಸಿಕೊಳ್ಳಬಾರದು.

   Like

 5. ಪ್ರೇಮಲತಾ ಅವರೇ
  ಗೌರಿಯವರ ಬಗ್ಗೆ ನಿಮ್ಮ ಅನಿಸಿಕೆಗಳು ಪ್ರಾಮಾಣಿಕವಾಗಿದೆ. ಧೈರ್ಯ, ಕೆಚ್ಚು, ಪ್ರಭುತ್ವವನ್ನು ಪ್ರಶ್ನಿಸುವ ನಿಲುವು, ಛಲ, ಸಂಕಷ್ಟಗಳು ಇವುಗಳ ನಡುವೆ ಹೋರಾಟ ಹೀಗೆ ಗೌರಿಯವರ ಅನೇಕ ಚಹರೆ ಮತ್ತು ಅವರ ವ್ಯಕ್ತಿ ಚಿತ್ರಣದ ನಿರೂಪಣೆ ಸತ್ಯಕ್ಕೆ ಹತ್ತಿರವಾಗಿದೆ. ಒಬ್ಬ ವ್ಯಕ್ತಿಯ ಬದುಕನ್ನು ಯಥಾವತ್ತಾಗಿ ಗ್ರಹಿಸುವುದು ಕಷ್ಟ
  ಹಿಂದೆ ನಾನು ಲಂಕೇಶ್ ಕುಟುಂಬಕ್ಕೆ ಹತ್ತಿರವಾಗಿದ್ದು ಇಂಗ್ಲೆಂಡಿಗೆ ಬಂದಮೇಲೆ ಅವರ ಸಂಪರ್ಕ ಕಡಿಮೆಯಾಗಿತ್ತು. ಗೌರಿ ನನಗೆ ಒಬ್ಬ ಬಾಲ್ಯ ಗೆಳತಿ ಹಾಗು ಫ್ಯಾಮಿಲಿ ಫ್ರೆಂಡ್ . ಹೀಗೆ ಪರಿಚಯವಿದ್ದರೂ ಗೌರಿ ಯವರ ಸಾಧನೆಗಳ ಬಗ್ಗೆ ನಾನು ಅಪರಿಚಿತನಾಗಿಯೇ ಉಳಿದುಬಿಟ್ಟೆ . ಅವರಬಗ್ಗೆ ಇಷ್ಟು ವಿಚಾರಗಳನ್ನು ಸಮರ್ಪಕವಾಗಿ ಗ್ರಹಿಸಿ ಧೀರ್ಘವಾದ ಈ ಲೇಖನ ನೀವು ಬರೆದಿರುವುದು ಶ್ಲಾಘನೀಯ. ತಡವಾದರೂ ನನಗೆ ಗೌರಿಯ ವ್ಯಕ್ತಿತ್ವವನ್ನು ಮರುಪರಿಚಯ ಮಾಡಿಕೊಟ್ಟಿದ್ದಿರಿ ಧನ್ಯವಾದಗಳು. ನನ್ನ ತಂದೆಯವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನನ್ನ ಮತ್ತು ಗೌರಿ ಅವರ ಕೊನೆ ಭೇಟಿ ಎಂಬ ವಿಚಾರವನ್ನು ನಾನು ಇಲ್ಲಿ ವ್ಯಥೆಯಿಂದ ನೆನೆಯುತ್ತೇನೆ .
  ರಾಜಕೀಯ, ಧರ್ಮ, ಆಚಾರ ಮತ್ತು ವಿಚಾರಗಳ ಬಗ್ಗೆ ಹಲವು ದೃಷ್ಟಿ ಕೋನಗಳು ಮತ್ತು ಅಭಿಪ್ರಾಯವುಳ್ಳ ಸುಶೀಕ್ಷಿತ ಸದಸ್ಯರಿರುವ ಈ ಜಾಲ ತಾಣದಲ್ಲಿ ಈ ವಿಚಾರಗಳನ್ನು ಕುರಿತು ಚರ್ಚೆಮಾಡುವುದು ಸೂಕ್ಷ್ಮವಾದ ವಿಚಾರವಾದರೂ ಗೌರಿಯವರ ಬದುಕಿನಬಗ್ಗೆ ಚರ್ಚಿಸುವಾಗ ಇದು ಅನಿವಾರ್ಯವಾಗುತ್ತದೆ.
  ರಾಜಕಾರಣ ಮತ್ತು ಪತ್ರಿಕೋದ್ಯಮಕ್ಕೆ ಬಹಳ ಹಿಂದಿನಿಂದಲೂ ಪ್ರೀತಿ ಮತ್ತು ದ್ವೇಷ ಸಂಬಂಧ (Love and hate relationship) ಇರುವುದನ್ನು ಗಮನಿಸಬಹುದು. ಇದ್ದಕ್ಕೆ ಇಂಗ್ಲೆಂಡಿನ ಪತ್ರಿಕೆಗಳು ಹೊರತೇನಲ್ಲ. ಸರ್ಕಾರಕ್ಕೆ ತಮನ್ನು ಕಟುವಾಗಿ ಟೀಕಿಸಿದ ಪತ್ರಿಕೋದ್ಯಮದ ಬಗ್ಗೆ ಅಸಮಾಧಾನವಿದ್ದರೂ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುತ್ತ ಅಥವಾ ಸಮಾಜಕ್ಕೆ ಹೆದರಿ ಸರ್ಕಾರ ಕೆಲವು ಬದಲಾವಣೆಗಳನ್ನು ಒಪ್ಪಿಕೊಳ್ಳುತ್ತಿತ್ತು. ಈ ವಿಚಾರಗಳ ಬಗ್ಗೆ ಚರ್ಚೆಗಳಾಗುತ್ತಿದ್ದವು.
  ಇತ್ತೀಚಿನ ದಿನಗಳಲ್ಲಿ ಆ ಒಂದು ಆರೋಗ್ಯಕರ ನಿಲುವು ಕಂಡುಬರುತ್ತಿಲ್ಲ. ಅದರ ಬದಲಿಗೆ “ಅರಣ್ಯ ನ್ಯಾಯ” ( Law of the Jungle) ಎದ್ದು ಕಾಣುತ್ತಿದೆ. ಅಭಿವ್ಯಕ್ತ ಸ್ವಾತಂತ್ರದ ಸೋಗಿನಲ್ಲಿ ಜನರ ತೀವ್ರ ಭಾವನೆಗಳನ್ನು ಕೆಣಕಬಾರದು ಎಂಬ ವಿಚಾರ ಸರಿಯಾದರೂ ಅದನ್ನು ಚರ್ಚೆಗೆ ಒಳಪಡಿಸದೆ ಬಂದೂಕಿನಿಂದ ಸ್ತಬ್ಧ ಗೊಳಿಸುವ ಪ್ರಯತ್ನ ಮಾಡಿದಾಗ ಆ ನಿಲುವನ್ನು ನೂರಾರು “ಗೌರಿ” ಗಳು ಪ್ರಶ್ನಿಸುತ್ತಾರೆ. ಈ ರೀತಿಯ ಧೋರಣೆಯನ್ನು ಫ್ಯಾಸಿಸ್ಟ್ ನಿಲುವೆಂದು ವ್ಯಾಖ್ಯಾನಿಸುತ್ತಾರೆ.

  Liked by 1 person

  • ನೀವು ಹೇಳಿರುವುದು ಖಂಡಿತವಾಗಿ ನಿಜ. ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು .

   Like

 6. Another excellent write up from you.
  It is virtually impossible to have a view on Gauri Lankesh without being labelled as right wing or left wing. I abhor extremism of any kind , be it in thought, writing or deeds. It solves nothing but only fuels more extremism.

  Liked by 1 person

 7. ಪ್ರೇಮಲತಾ ಅವರೇ ನಿಮ್ಮ ಬರಹ ತುಂಬಾ ಚೆನ್ನಾಗಿದೆ. ತಮ್ಮ ಲೇಖನದಲ್ಲಿ ಗೌರಿ ಯಾವ ಕಾರಣದಿಂದ ಹತ್ಯೆಗೆ ಒಳಗಾದರು ಅಂತ ಬರೆದಿಲ್ಲ. ಬರೆಯದೆ ಇರುವುದಕ್ಕೆ ಹಲವು ಕಾರಣಗಳು ಇರಬಹುದು.
  ಮೋದಿ ಸರ್ಕಾರ ತಮ್ಮನ್ನು ವಿರೋಧಿಸಿದವರನ್ನು ನಿರ್ಣಾಮ ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ.
  ಪ್ರಕಾಶ್ ರೈ ಸಹ ಇಂತಹ ವಿಚಾರವಾದಿ.
  ಧನ್ಯವಾದ.

  Liked by 1 person

  • ಧನ್ಯವಾದ ಆನಂದ್ ಅವರೆ.
   ಕೊಲೆ ಯಾಕಾಯ್ತು ಎನ್ನುವುದಕ್ಕಿಂತ ಬರಹಗಾರರ ಕೊಲೆಗಳಾಗುವ ಹೊಸ ಸಂಸ್ಕೃತಿ ಬೆಳೆಯುತ್ತಿರುವುದೇ ಹೇಸಿಗೆಯ ಸಂಗತಿ. ಸಂಪಾದಕರು ಆರಿಸಿ ಹಾಕಿರುವ ಕಾರ್ಟೂನಿನಂತೆಯೇ ಯಾಕಾಯ್ತು ಎನ್ನುವುದನ್ನು ನ್ಯಾಯಾಂಗದ ಮೂಲಕವಂತೂ ತಿಳಿಯುವುದು ಸಾಧ್ಯವಿಲ್ಲ!

   Like

  • ಮೌತ್ ಕೆ ಸೌದಾಗರ್,ಚೌಕೀದಾರ್ ಚೋರ್, ಖೂನ್ ಕಿ ದಲಾಲಿ, ಚಾಯ್ ವಾಲ, ನಪುಂಸಕ್, ಇತ್ಯಾದಿ ವೈಯಕ್ತಿಕ ನಿಂದೆ ಮಾಡಿದವರೂ, ಮೋದಿಯ ಪ್ರತಿ ನಿರ್ಧಾರ ನಡೆಗಳನ್ನು ಟೀಕಿಸಿದವರೂ ಆರಾಮವಾಗಿಯೇ ಇದ್ದಾರೆ. ವ್ಯತ್ಯಾಸ ಎಂದರೆ ಮೋದಲು “ಬಾಯಿಗೆ ಬಂದಂಂತೆ ಮಾತು ಅಂಡು ಹೋದಂತೆ ಹೂಸು”ಎಔಬ ಗಾದೆಯ ರೀತಿ ಇಂತಿಪ್ಪ ವಿಚಾರವಾದಿಗಳನ್ನು ಜನ ಪ್ರಶ್ನಿಸಲು ಆರಂಭಿಸಿದ್ದಾರೆ.ಆಯಕಟ್ಟಿನ ಜಾಗಗಳಲ್ಲಿ ಗೂಟ ಹೊಡೆದು ಕುಂತಿದ್ದು ಕೇವಲ ತಮ್ಮ ತುತ್ತೂರಿ ಮಾತ್ರ ಊದುತ್ತಾ ಇತರರ ಮಾತಿಗೆ,ಅಭಿಪ್ರಾಯಗಳಿಗೆ ಕವಡೆ ಕಿಮ್ಮತ್ತು ಕೊಡದೆ ನಿರಾತಂಕವಾಗಿದ್ದ ಈ ಆಷಾಢಭೂತಿ ಅವಾರ್ಡ್ ವಾಪಸಿ ಗ್ಯಾಂಗುಗಳ ಬಣ್ಣ ಸಾಮಾಜಿಕ ಮಾಧ್ಯಮಗಳು ಪ್ರಬಲವಾದಂತೆ ಬಯಲಾದದ್ದು ಉಸಿರು ಕಟ್ಟುವ ವಾತಾವರಣ ನಿರ್ಮಿಸಿದ್ದರಲ್ಲಿ ಆಶ್ಚರ್ಯ ಏನೂ ಇಲ್ಲ. ತಮ್ಮ ಡ್ರಾಮಾ ನೋಡಿ ಜನ ಗಹಗಹಿಸಿ ನಕ್ಕು ಲೇವಡಿ ಮಾಡಿದಾಗ “ಪದವೂ ಕುಸಿದು,ನೆಲವೂ ಇರದ”ಭಾವ ಬಂದಿದ್ದರೆ ಅದು ಸರಿಯೇ.
   ಈ ನಿಟ್ಟಿನಲ್ಲಿ ಗೌರಿಯ ಜತೆಗೆ ಬಹಳಷ್ಟು ಜನ ತಮ್ಮ ಪ್ರಸ್ತುತ ದಂತಗೋಪುರದಿಂದ ಬಿದ್ದವರೇ.
   ಕುಚ್ ಭೀ ಪ್ರಕಾಶ್ ರೈ, ವಿಜ್ಞಾನ ಲೇಖಕ ನ (ನಾ)ಗೇಶ್ ಹೆಗಡೆ, ಅಮಿನ್ ಮಟ್ಟೂ, ಇತ್ಯಾದಿ ಗಳು ಬ್ಲಾಕ್ ಭಾಗ್ಯ ಕರುಣಿಸಿದ್ದೇ ಕರುಣಿಸಿದ್ದು!! ಸಹಿಷ್ಣುತೆಯೋ ಅಸಹಿಷ್ಣುತೆಯೋ ಅದನ್ನು ನೀವೇ ಹೇಳಬೇಕು ಆನಂದ್.

   Like

 8. ಬಹಳ ಪ್ರಭುದ್ಧಮಾನವಾದ ಲೇಖನ !!

  ದುಃಖಕರವಾದ ಸಂಗತಿ ಏನೆಂದರೆ, ೨೧ನೇಯಾ ಶತಮಾನದಲ್ಲೂ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿಯೂ ಸಹ ಬಲಪಂಥೀಯ ಉಗ್ರಗಾಮಿಗಳು ಪ್ರಗತಿಪರ ಚಿಂತಕರನ್ನ, ಲೇಖಕರನ್ನ, ಹತ್ತೇ ಮಾಡುವುದು. ಇದು ಎಲ್ಲಿ ನಮ್ಮನ್ನಶಿಲಾಯುಗಕ್ಕೆ ಕೊಂಡೊಹೊಯುತ್ತೋ ಅನ್ನುವ ಭಯ ನನ್ನನ್ನ ಪ್ರತಿ ದಿನವೂ ಕಾಡುತ್ತೆ.

  ಈ ರೀತಿಯ ಲೇಖನಗಳು ನನಗೆ ಭರವಸೆಯ ಆಶಾ ಕಿರಣವನ್ನು ನೀಡುತ್ತವೆ. ಮುಂದೆಯೂ ಸಹ ಈ ತರಹದ ವಿಚಾರಗಳು ಈ ಚೌಕ್ಕಟ್ಟಿನಲ್ಲಿ ಹೊರ ಹೊಮ್ಮಲಿ ಎಂದು ಆಶಿಸುತ್ತೇನೆ.

  Liked by 1 person

  • ಧನ್ಯವಾದ ವಿವೇಕ್ ಅವರೆ. ಅನಿವಾಸಿಯಲ್ಲಿ ಇದೇ ಮೊಟ್ಟ ಮೊದಲ ಬಾರಿ ಪ್ರತಿಕ್ರಿಯಿಸಿದ್ದೀರಿ. ಎಲ್ಲಿಯಾದರೂ ಒಬ್ಬರಲ್ಲ ಒಬ್ಬರು ಇಂತಹ ವಿಚಾರಗಳನ್ನು ಚರ್ಚಿಸದಿದ್ದಲ್ಲಿ , ಬರೆಯದಿದ್ದಲ್ಲಿ ಹಲವು ವಿಚಾರಗಳು ಸುಳ್ಳು ನಂಬಿಕೆಗಳಾಗಿ/ಸುದ್ದಿಗಳಾಗಿ ಹಾಗೇ ಉಳಿದುಬಿಡುತ್ತವೆ. ಗೌರಿಯ ಬಗ್ಗೆ ಹತ್ತಿರದಿಂದ ತಿಳಿದ ನಿಮ್ಮಂತಹವರಿಗೆ ಎಲ್ಲರಿಗಿನ್ನ ಹೆಚ್ಚು ಚೆನ್ನಾಗಿ ಗೊತ್ತು ಎನ್ನುವುದು ನನ್ನ ನಂಬಿಕೆ. ಮತ್ತೊಮ್ಮೆ ವಂದನೆಗಳು.

   Like

  • ತಮ್ಮನ್ನು ತಾವು ಉದಾರವಾದಿಗಳು,open minded ಎಂದೆಲ್ಲಾ ಬಿಂಬಿಸಿಕೊಳ್ಳುವ ಪಟಾಲಂಗಳು ತಾವೇ ಶೆರ್ಲಾಕು ಹೋಮ್ ಗಳಂತೆ ,ಪತ್ತೇದಾರಿ ಪುರುಷೋತ್ತಮರಂತೆ “ಬಲಪಂಥೀಯ”ರಿಂದ ಹತ್ಯೇ ಎನ್ನುವ ಫತ್ವಾ ಹೊರಡಿಸುವುದನ್ನು ಕಂಡರೆ ಇವರ ಪೂರ್ವಗ್ರಹ ಎಷ್ಟು ನೀಚಮಟ್ಟದ್ದು ಎಂದು ಅಂದಾಜಿಸಲೂ ಆಗದು. ಗೌರಿಯ ಕೊಲೆಯಾದ ಮರುಕ್ಷಣವೇ ಹೆಣದ ಲಾಭ ಪಡೆಯುವ ಕಾಗೆಗಳಂತೆ ಬರಗೂರು ರಾಮಚಂದ್ರನಿಂದ ಬಂಜಗೆರೆಯವರೆಗೂ,ದಿನೇಶನಿಂದ ಜಿಗಣೇಶನವರೆಗೂ, ಎಲ್ಲರೂ ಅದೇ ತುತ್ತೂರಿ ಊದಿದ್ದೇ ಊದಿದ್ದು. ಅದಾಗಿ ಎರಡು ವರ್ಷ ಕಳೆದರೂ ಇನ್ನೂ ತಿಣುಕುತ್ತಿರುವ ಪತ್ತೇದಾರಿ ಇಲಾಖೆ ಒಂದುಕಡೆ, ಯದ್ವಾತದ್ವಾ ಆರೋಪ ಮಾಡಿಕೊಂಡು ಓಡಾಡುತ್ತಿರುವ ಜನ ಇನ್ನೊಂದು ಕಡೆ!!
   ದೇಶದಲ್ಲಿ ವ್ಯಾಪಕವಾಗಿ ನಿರಾತಂಕವಾಗಿ ನಡೆಯುತ್ತಿದ್ದ ನಕ್ಸಲ್, ಇಸ್ಲಾಮಿಕ್ ಉಗ್ರರ ದಾಳಿಗಳನ್ನು ಹತ್ತಿಕ್ಕಲಾಗದ ವಿಷವರ್ತುಲದೊಳಗೆ ಸಿಕ್ಕುಬಿದ್ದಿದ್ದ ಹಿಂದಿನ ಮನ್ಮೋಹನ್ ಸರಕಾರ ಜನರ ದಿಕ್ಕು ತಪ್ಪಿಸುವ “ಕೇಸರಿ ಭಯೋತ್ಪಾದನೆ” ಎಂಬ red herring ಹುಟ್ಟು ಹಾಕಿದ್ದು ,ಅದರ ಷಡ್ಯಂತ್ರ ಬಯಲಾದದ್ದು ಈಗ ಎಲ್ಲರಿಗೂ ತಿಳಿದೇ ಇದೆ. ಕೊಂದವರ ಕೈ ರಕ್ತವನ್ನು ನಿಂದವರ ಕೈಗೆ ಒರೆಸಿ ಆರೋಪಿಯನ್ನಾಗಿ ಮಾಡುವ ದುರುದ್ದೇಶದ ಭಾಗವಾಗಿಯೇ ಕಲ್ಬುರ್ಗಿ ,ಗೌರಿ ಲಂಕೇಶಳಂತಹ ರಾಜಕೀಯವಾಗಿ ತಲೆನೋವು ಕೊಡದ ,ಆದರೆ ಲಾಭ ತಂದುಕೊಡಬಹುದಾದ ಜೀವಿಗಳ ಹತ್ಯೆ ಮಾಡಿರುವ ಸಾಧ್ಯತೆ ಇದೆ. ಅದೇ ಕಾರಣಕ್ಕೆ ಈ ತನಿಖೆಗಳನ್ನು ತಾರ್ಕಿಕ ಅಂತ್ಯ ಕಾಣಿಸದೆ ಜೀವಂತವಿಡುವ ಅನಿವಾರ್ಯತೆಯೂ ಪ್ರಸ್ತುತ ಸರಕಾರಕ್ಕಿದೆ.
   ಆದರೆ, ಆಗಾಗ ಹೆಲ್ಮೆಟ್ ಒಳಗೆ ರಾತ್ರಿ ಏಳರ ಕತ್ತಲಿನಲ್ಲಿ ಕುಂಕುಮ ತಿಲಕ ಇಟ್ಟವನ ರೇಖಾಚಿತ್ರ ಬಿಡುಗಡೆ ಮಾಡಿ ಕೇಸರಿ ಭಯೋತ್ಪಾದನೆ ಎಂಬ ಕಳ್ಳೇಪುರಿಯನ್ನೂ, ಬಲಪಂಥೀಯ ಕೃತ್ಯ ಎಂಬ ಬಿಸ್ಕೆಟ್ ಅನ್ನೂ ಆಗಾಗ ಮೆಲ್ಲಲು ಎಸೆಯಲಾಗುತ್ತಿದೆ.ರುಚಿ ಹತ್ತಿದವರು ಅದನ್ನು ಚಪ್ಪರಿಸುತ್ತಾ ,ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಾ, ತಾವು ಪ್ರಶ್ನಿಸಿದ್ದು ವಿಚಾರವಾದನೆ ,ಇದಿರು ಪ್ರಶ್ನಿಸಿದರೆ ಭಯೋತ್ಪಾದನೆ ಎಂದು ಪ್ರಚಾರವಾದ ಮಾಡುತ್ತಾ ಆತ್ಮರತಿಯಲ್ಲಿ ಮುಳುಗಿದ್ದಾರೆ.

   Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.