ರಾಷ್ಟ್ರ ಪ್ರಜ್ಞೆ ಮತ್ತು ಧರ್ಮಪ್ರಜ್ಞೆ

ಬ್ರೆಕ್ಸಿಟ್ಟಿನ ಬಿಸಿಯ ಇಂಗ್ಲೆಂಡಿನ ಶೆಫಿಲ್ಡ್ ವಾಸಿ ಹಿರಿಯ ವೈದ್ಯ ಶಿವಪ್ರಸಾದರು, ವಾಟ್ಸಾಪಿನ ಸಂದೇಶವೊಂದರ ಕೊನೆಯಲ್ಲಿ ಕಂಡ  ‘ಜೈ ಹಿಂದ್’ ಅವರ ಮನಸ್ಸಿನಲ್ಲಿ ಮೂಡಿಸಿದ ವಿಷಾದದ ಅಲೆಗಳಲ್ಲಿ ಮಂಥಿಸಿದ ರಾಷ್ಟ್ರವಾದ ಮತ್ತು ಧರ್ಮವಾದಗಳ ಪ್ರಸ್ತುತತೆ, ಲಾಭ ಮತ್ತು ಅಪಾಯಗಳನ್ನು ಅರ್ಥೈಸುವ ಪ್ರಯತ್ನ ಮಾಡಿದ್ದಾರೆ. ಅಮೇರಿಕಾದ ಟ್ರಂಪ್ ಉತ್ತೇಜಿಸುತ್ತಿರುವ ತೀವ್ರ-ರಾಷ್ಟ್ರವಾದ ಒಂದು ರೀತಿಯಲ್ಲಿ ರಾಷ್ಟ್ರಾಂಧ ಬಿಳಿಯರ ಅಟ್ಟಹಾಸಕ್ಕೆ ಗಾಳಿ ಹಾಕಿದ, ಹಾದಿ ತಪ್ಪಿದ ರಾಷ್ಟ್ರವಾದದಲ್ಲಿ ಹಳ್ಳ ಹಿಡಿದ ಬ್ರೆಕ್ಷಿಟ್ಟಿನಂತ ಉದಾಹರಣೆಗಳ ಇಂದಿನಲ್ಲಿ, ಬಸವಣ್ಣ, ವಿವೇಕಾನಂದರನ್ನ ಸ್ಮರಿಸುತ್ತ ಧರ್ಮ ಮತ್ತು ದೇಶಪ್ರೇಮ ಭಾರತದಲ್ಲಿ ಒಂದು ಕಾಲದಲ್ಲಿ ಒಂದೇ ಆಗಿತ್ತು ಎಂದು ಸೂಕ್ಷ್ಮವಾಗಿ ಉದಾಹರಿಸಿದ್ದಾರೆ. ಮತಾಂತರ, ಮತಾಂಧತೆಗಳ ಕಚ್ಚಾಟವನ್ನ ಮತಗಳ ಲೆಕ್ಕದ ಲಾಭದಲ್ಲಿ ಮುಚ್ಚಿಟ್ಟೋ, ಹೆಚ್ಚಿಟ್ಟೋ ಸಮಾಜವನ್ನ ಸಾಯಿಸುತ್ತಿರುವ ರಾಜಕಾರಣಿಗಳ ಇಂದಿನ ಭಾರತದ ಸಮನ್ವಯತೆಯ ಬಗ್ಗೆ, ಧಾರ್ಮಿಕತೆಯಿಂದ ದೂರ ಸರಿಯುತ್ತಿರುವ ಪಶ್ಚಿಮ ಸಮಾಜವೊಂದರ ಸದಸ್ಯನ ದೃಷ್ಟಿಯ, ಇತ್ತೀಚೆಗೆ ಪ್ರಜಾವಾಣಿಯಲ್ಲಿ ಪ್ರಕಟವಾದ, ಈ ಲೇಖನ  ಅನಿವಾಸಿಯ ಓದುಗರಲ್ಲಿ ಅರ್ಥಪೂರ್ಣ ಹಾಗು ಆರೋಗ್ಯಕರ ಚರ್ಚೆಗೆ ಅನುವು ಮಾಡಿಕೊಡುವುದೆನ್ನುವ ಸದಾಶಯದೊಂದಿಗೆ ಪ್ರಕಟಿಸುತ್ತಿದ್ದೇವೆ. ಎಂದಿನಂತೆ, ಲೇಖನದ ವಿಚಾರಗಳ ಸಂಪೂರ್ಣ ಹೊಣೆ ಲೇಖಕರದ್ದೆ. ನಿಮ್ಮ ಬಳಿಗೆ  ಒಪ್ಪವಾಗಿ ತಂದಿಡುವದಷ್ಟೇ ನಮ್ಮ ಕಾರ್ಯ. 

Emblem of the Supreme Court of India.svg

(Emblem of Supreme Court of India. Source: Google Images)

 

“ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬದುಕಿನಲಿ!”

                                                                             – ಡಾ. ಜಿ. ಎಸ್. ಎಸ್

ಪ್ರಪಂಚದಲ್ಲಿ ಸಾಕಷ್ಟು ವೈಜ್ಞಾನಿಕ ಮತ್ತು ತಾಂತ್ರಿಕ ಮುನ್ನಡೆಗಳು ಸಾಗಿದ್ದು ಗ್ಲೋಬಲೈಸೇಷನ್ ಅಥವಾ ಜಾಗತೀಕರಣದ ಪರಿಣಾಮದಿಂದ “ಪ್ರಪಂಚ ಎಂಬುದು ಈಗ ಒಂದು ಸಣ್ಣ ಜಾಗ” (World is a small place) ಎಂಬ ಉದ್ಗಾರ ಆಗಾಗ್ಗೆ ಕೇಳಿ ಬರುತ್ತದೆ. ಅಂತರ್ಜಾಲದಿಂದ ಲಭ್ಯವಾಗಿರುವ ಸಂಪರ್ಕದಿಂದಾಗಿ ಮನುಷ್ಯ ಮನುಷ್ಯರ ಸಂಬಂಧ ವೃದ್ಧಿಸಿ ನಾವೆಲ್ಲ ಹಿಂದಿಗಿಂತ ಈಗ ನಿಕಟವಾಗಿ ಬೆಸೆದುಕೊಂಡು ಇದ್ದೇವೆ ಎಂಬ ಭಾವನೆ ಸಾಮಾನ್ಯವಾಗಿದೆ. ಪ್ರಪಂಚದಲ್ಲಿ ಭೂಗೋಳಿಕವಾಗಿ ಸಾವಿರಾರು ಮೈಲಿಗಳಾಚೆ ಇದ್ದರು ಒಂದು ಕಂಪ್ಯೂಟರ್ ಅಥವಾ ಮೊಬೈಲ್ ಫೋನ್ ಬಟನ್ ಕ್ಲಿಕ್ ಮಾಡಿ ಒಬ್ಬರನ್ನೊಬ್ಬರು ಸಂಪರ್ಕಿಸಿ ಮುಖಾಮುಖಿ ಮಾತಾಡುವ ಅವಕಾಶ ಈಗ ನಮಗಿದೆ. ಈ ಒಂದು ಹಿನ್ನೆಲೆಯಲ್ಲಿ ಪ್ರಪಂಚದ ಇತ್ತೀಚಿನ ಆಗು-ಹೋಗುಗಳನ್ನು ಗಮನಿಸಿದಾಗ ಎಲ್ಲೆಡೆ ಧರ್ಮದ ಹೆಸರಲ್ಲಿ ದ್ವೇಷ , ಜಿಹಾದ್ ಹಾಗೂ ಕ್ರುಸೇಡ್ ಗಳು ಮತ್ತೆ ಪ್ರಾರಂಭವಾಗಿ ವಿಶ್ವ ಶಾಂತಿಗೆ ಧಕ್ಕೆ ಒದಗಿ ಬಂದಿದೆ. ಜಾಗತೀಕರಣದಿಂದ ಎಲ್ಲರೂ ಹತ್ತಿರವಿದ್ದರೂ ದೂರ ನಿಲ್ಲುವ ಪರಿಸ್ಥಿತಿ ಬಂದಿದೆ.

ಈ ವೈಜ್ಞಾನಿಕ ಯುಗದ ಸರ್ವತೋಮುಖ ಪ್ರಗತಿ ಮತ್ತು ವೈಚಾರಿಕ ಚಿಂತನೆಗಳ ನಡುವೆ ಧರ್ಮವು ವ್ಯಕ್ತಿ ಮಧ್ಯ ಮತ್ತು
ರಾಷ್ಟ್ರ ರಾಷ್ಟ್ರಗಳ ನಡುವಿನ ಸಂಬಂಧಗಳಲ್ಲಿ ಗೋಡೆಗಳಂತೆ ಎದ್ದಿವೆ. ಧರ್ಮವನ್ನು ನೆಪವಾಗಿಟ್ಟುಕೊಂಡು ಹಲವಾರು
ಉಗ್ರಗಾಮಿ ಶಕ್ತಿಗಳು ತಲೆಯೆತ್ತಿ ಹೊಡೆದಾಡಿದ ಪರಿಣಾಮವಾಗಿ ಹಲವು ಮಧ್ಯಪೂರ್ವ ರಾಷ್ಟ್ರಗಳು ತಮ್ಮ ಅಸ್ತಿತ್ವವನ್ನು
ಕಳೆದುಕೊಂಡು ಅಲ್ಲಿನ ಜನಸ್ತೋಮ ಭಾರಿ ಪ್ರಮಾಣದಲ್ಲಿ ಸ್ಥಳಾಂತರಗೊಂಡು ನಿರಾಶ್ರಿತರಾಗಿ ಸ್ಥಿರ ಮತ್ತು ಸುರಕ್ಷಿತವಾಗಿರುವ ಅಕ್ಕಪಕ್ಕದ ಮತ್ತು ದೂರ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಈ ಒಂದು ಮಹಾ ವಲಸೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಮತ್ತು ಅಭಿವೃದ್ಧಿಗೊಳ್ಳದೆ ಸ್ಥಗಿತವಾಗಿರುವ ದೇಶಗಳಿಂದ ಕೆಲವರು “ನಿರಾಶ್ರಿತರು” ಎಂಬ ಸುಳ್ಳು ಹಣೆಪಟ್ಟಿಯನ್ನು ಹಿಡಿದು ಸೇರಿಕೊಂಡಿದ್ದಾರೆ. ಹೀಗೆ ಭಾರಿ ಪ್ರಮಾಣದಲ್ಲಿ ವಲಸೆ ಬಂದ ನಿರಾಶ್ರಿತರಿಗೆ ಅಭಿವೃದ್ಧಿಗೊಂಡಿರುವ ರಾಷ್ಟ್ರಗಳು ಸಹಾನುಭೂತಿಯಿಂದ ಬಾಗಿಲು ತೆರದು ಆಶ್ರಯ ಕೊಟ್ಟಿದೆ. ಈ ರಾಷ್ತ್ರಗಳಲ್ಲಿ ಆರ್ಥಿಕ ಏಳಿಗೆಗಾಗಿ ಪರವಾನಗಿ ಪಡೆದುಬಂದ ಜನರೂ ಸೇರಿದ್ದಾರೆ. ಹೀಗೆ ವಲಸೆ ಬಂದ ಜನ ಒಂದು ರಾಷ್ಟ್ರವನ್ನು ತಮ್ಮದಾಗಿಸಿಕೊಂಡು ಅಲ್ಲಿ ತಮ್ಮ ಧಾರ್ಮಿಕ ಅಸ್ತಿತ್ವವನ್ನು ಉಳಿಸಿಕೊಂಡು ರಾಷ್ಟ್ರದ ಸಿಟಿಜನ್ ಶಿಪ್ ಮತ್ತು ಪಾಸ್ಪೋರ್ಟ್ ಗಳನ್ನು ಪಡೆದು ಅಲ್ಲಿನ ಭಾಷೆ ಮತ್ತು ಸಾಂಸ್ಕೃತಿಕ ವಿಷಯಗಳನ್ನು ತಮ್ಮದಾಗಿಸಿಕೊಂಡು ಒಂದು ನೂತನ ರಾಷ್ಟ್ರ ಪ್ರಜ್ಞೆ ಅಥವಾ ಅಸ್ತಿತ್ವವನ್ನು ಪಡೆದುಕೊಳ್ಳುತ್ತಾರೆ. ಈ ಅನಿವಾಸಿ ಪ್ರಜೆಗಳಿಗೆ ತಮ್ಮ ಮೂಲ ದೇಶದ ರಾಷ್ಟ್ರ ಪ್ರಜ್ಞೆ ಮತ್ತು ತಾವು ನೆಲೆಸಿರುವ ನಾಡಿನ ರಾಷ್ಟ್ರ ಪ್ರಜ್ಞೆ ಎರಡೂ ಪ್ರಸ್ತುತವಾಗುತ್ತದೆ. ಇಂಗ್ಲೆಂಡಿನಲ್ಲಿ ವಾಸ ಮಾಡುವ ನನಗೆ ನನ್ನ ಬ್ರಿಟಿಷ್ ರಾಷ್ಟ್ರ ಪ್ರಜ್ಞೆಯನ್ನು ಮತ್ತು ನಿಷ್ಠಾವಂತಿಕೆಯನ್ನು ಬಹಿರಂಗವಾಗಿ ಸಾಬೀತುಗೊಳಿಸುವ ನಿರೀಕ್ಷೆಯಾಗಲಿ ಅಥವಾ ಅಗತ್ಯ ಇಲ್ಲ. ಇದನ್ನು ಪ್ರಸ್ತಾಪಿಸುವ ಉದ್ದೇಶವೆಂದರೆ ನನ್ನ ಹಳೆ ಕಾಲೇಜಿನ ವಾಟ್ಸ್ ಆಪ್ ಗುಂಪಿನಲ್ಲಿರುವ ಕ್ರಿಶ್ಚಿಯನ್ ಸ್ನೇಹಿತರೊಬ್ಬರು ಇತ್ತೀಚಿನ ದಿನಗಳಲ್ಲಿ ತಮ್ಮ ಮೆಸೇಜ್ ಕೊನೆಯಲ್ಲಿ “ಜೈ ಹಿಂದ್” ಎಂಬ ಸಂದೇಶ ಮತ್ತು ತ್ರಿವರ್ಣ
ಧ್ವಜವನ್ನು ಸೇರಿಸುತ್ತಿದ್ದಾರೆ. ನನಗೆ ಈ ವಿಚಾರ ವಿಷಾದವಾಗಿದೆ. ಪಾಶಿಮಾತ್ಯ ದೇಶಗಳಲ್ಲಿ ಸ್ಥಳೀಯರು ತಮ್ಮ ರಾಷ್ಟ್ರಪ್ರಜ್ಞೆ ಯನ್ನು ವಿಶ್ವ ಕಪ್ ಫುಟ್ ಬಾಲ್ ಅಥವಾ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳ ಸಂದರ್ಭದಲ್ಲಿ ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ ಹಾಗೆ ತಮ್ಮ ಧಾರ್ಮಿಕ ಪ್ರಜ್ಞೆಯನ್ನು ಆಚರಣೆಯನ್ನು ತಮ್ಮ ಮನೆಗಳಲ್ಲಿ ಅಥವ ವೈಯುಕ್ತಿಕ ಪರಿಸರದಲ್ಲಿಮಾಡಿಕೊಳ್ಳುತ್ತಾರೆ. ನನ್ನ ಹಲವಾರು ಇಂಗ್ಲಿಷ್ ಸಹೊದ್ಯೋಗಿಗಳು ಮತ್ತು ಸುಶೀಕ್ಷಿತ ಸಾಮನ್ಯರು ತಮಗೆ ಧರ್ಮ ಪ್ರಸ್ತುತವಲ್ಲವೆಂದು ಹೇಳುವುದನ್ನು ಕೇಳಿದ್ದೇನೆ ಹಾಗೆಯೇ ಕ್ರಿಸ್ಮಸ್ ಮತ್ತು ಈಸ್ಟರ್ ಹಬ್ಬದ ಸಂಧರ್ಭದಲ್ಲಿ ನಾನು ಈ ವಿಚಾರವನ್ನು ಗಮನಿಸಿದ್ದೇನೆ.

ಹಲವಾರು ಧರ್ಮಗಳನ್ನು ಒಳಗೊಂಡ ಜ್ಯಾತ್ಯಾತೀತ ಸಮಾಜದಲ್ಲಿ ರಾಷ್ಟ್ರಪ್ರಜ್ಞೆ ಮತ್ತು ಧರ್ಮ ಪ್ರಜ್ಞೆ ಒಂದು ಸಮತೋಲನದ ಪರಿಸ್ಥಿತಿಯಲ್ಲಿ ಇರುವಾಗ ಅದನ್ನು ಕದಡಿದರೆ ಘರ್ಷಣೆ ಮತ್ತು ಅಶಾಂತಿ ಉಂಟಾಗುವುದು ಅನಿವಾರ್ಯ. ಸೋಷಿಯಲ್ ಮೀಡಿಯಾ ಮತ್ತು ವಾಟ್ಸಪ್ ಗಳಲ್ಲಿ ಚರ್ಚೆಯ ಮೂಲಕ ನಮ್ಮ ಸನಾತನ ಧರ್ಮದ ಬಗ್ಗೆ ಹೆಚ್ಚಿನ ಅರಿವನ್ನು ಜಾಗೃತಗೊಳಿಸಿ ಧರ್ಮದ ವಿಚಾರಗಳನ್ನು ಕೈಗೆತ್ತಿಕೊಂಡು ಪ್ರಚಾರ ಕಾರ್ಯವನ್ನು ಹೂಡಿದ್ದೇವೆ. ಭಾರತದಲ್ಲಿ ಇದ್ದಕ್ಕಿದ್ದಂತೆ ಕಳೆದ ಹಲವು ವರ್ಷಗಳಿಂದ ಧರ್ಮ ನಮಗೆ ಬಹಳ ಪ್ರಸ್ತುತ ವಾದಂತೆ ಕಾಣುತ್ತದೆ. ಮೇಲೆ ಪ್ರಸ್ತಾಪಿಸಿದ ಜಾಗತೀಕರಣ ಮತ್ತು ಪ್ರಗತಿಯ ಹಿನ್ನೆಲೆಯಲ್ಲಿ ಜನಸಾಮಾನ್ಯನಿಗೆ ನಿಲುಕದ ವಿಚಾರವೆಂದರೆ ಈ ಇಪ್ಪತ್ತೊಂದನೇ ಶತಮಾನದಲ್ಲಿ ಧರ್ಮ ಏಕೆ ಎಷ್ಟು ಪ್ರಸ್ತುತವಾಗಿದೆ?

ಧರ್ಮ ಎಂಬ ಪದವನ್ನು ಅರ್ಥೈಸುವುದು ಸುಲಭವಲ್ಲ. ಪಾಶ್ಚಿಮಾತ್ಯ ಧರ್ಮ ಶಾಸ್ತ್ರಜ್ಞರ ಪ್ರಕಾರ ಧರ್ಮವೆಂಬುದು ಮನುಷ್ಯನನ್ನು ಮೀರಿದ ದೇವರು ಅಥವಾ ದೇವತಾ ಮನುಷ್ಯ ಒಂದು ಜನಸಮುದಾಯಕ್ಕೆ ಕೊಡಬಹುದಾದ ಜೀವನ ನೀತಿ ರೀತಿ ಮತ್ತು ಆಧ್ಯಾತ್ಮ ಪರಿಕಲ್ಪನೆ. ಈ ಸಂದೇಶ ಒಂದು ಲಿಖಿತ ದಾಖಲೆಯಲ್ಲಿ ರೂಪುಗೊಂಡಿರುತ್ತದೆ. ಕ್ರೈಸ್ತ ಮತದಲ್ಲಿನ ಬೈಬಲ್ ಇದಕ್ಕೆ ಉದಾಹರಣೆ. ಹಲವು ದೇವ ದೇವತೆಯರನ್ನು ಹಲವಾರು ಪುರಾಣ, ಶಾಸ್ತ್ರ ,ವೇದ ಮತ್ತು ಗೀತೆಗಳನ್ನು ಒಳಗೊಂಡ ಹಿಂದೂ ಧರ್ಮವನ್ನು ಈ ವ್ಯಾಖ್ಯಾನಕ್ಕೆ ಒಳಪಡಿಸುವುದು ಕಷ್ಟವಾದರೂ ಸಾರ್ವತ್ರಿಕ ಅಥವಾ ವಿಶ್ವವ್ಯಾಪಿ ವ್ಯಾಖ್ಯಾನದಲ್ಲಿ (Universal definition) ಹಿಂದೂ ಧರ್ಮ ಪ್ರಪಂಚದ ಇತರ ಮುಖ್ಯ ಧರ್ಮಗಳ ಪಟ್ಟಿಯಲ್ಲಿ ಒಂದು ಎಂಬ ವಿಚಾರ ಒಪ್ಪಿಗೆ ಪಡೆದಿದೆ. ಧರ್ಮವನ್ನು ಒಪ್ಪಿಕೊಂಡ ಮತ್ತು ಅಪ್ಪಿಕೊಂಡ ವ್ಯಕ್ತಿ ಧರ್ಮ ಪ್ರಜ್ಞಾವಂತನಾಗುತ್ತಾನೆ. ಸಾವಿರಾರು ವರ್ಷಗಳಿಂದ ಧರ್ಮ ನಮ್ಮ ಸಾಮಾಜಿಕ ಮತ್ತು ವೈಯಕ್ತಿಕ ಬದುಕನ್ನು ನಿಯಂತ್ರಿಸುತ್ತಾ ಬಂದಿದೆ. ಧರ್ಮ ಸಾಮಾಜಿಕ ನೆಲೆಯಲ್ಲಿ ಜೀವನಕ್ಕೆ ಬೇಕಾದ ರೀತಿ ನೀತಿ ಮತ್ತು ಉತ್ತಮ ಮೌಲ್ಯಗಳನ್ನು ಒದಗಿಸುವುದರ ಜೊತೆಗೆ ವೈಯುಕ್ತಿಕ ನೆಲೆಯಲ್ಲಿ ಅಧ್ಯಾತ್ಮ ಚಿಂತನೆ ಮತ್ತು ಆಚರಣೆ ಇವುಗಳ ಬಗ್ಗೆ ಮಾರ್ಗದರ್ಶನ ನೀಡಿದೆ. ಕೆಲವು ಧರ್ಮಗಳು ಕಾಲಕಾಲಕ್ಕೆ ಸಮಾಜ ಸುಧಾರಕರಿಂದ ವಿಮರ್ಶೆಗೆ ಒಳಗಾಗಿ ಪ್ರವೃತ್ತಿಯ ದೆಸೆಯಿಂದ ಕೆಲವು ಬದಲಾವಣೆಗಳನ್ನು ಒಪ್ಪಿಕೊಂಡು ಸಾಗಿದೆ. ವೈಯುಕ್ತಿಕ ನೆಲೆಯಲ್ಲಿ ಧರ್ಮಾಚರಣೆಯು ಪ್ರಸ್ತುತವೇ ಎಂಬ ವಿಚಾರ ಪ್ರಶ್ನಾತೀತವಾದದ್ದು. ಒಬ್ಬ ವ್ಯಕ್ತಿಯ ನಂಬಿಕೆ ಮತ್ತು ಶ್ರದ್ಧೆಗಳನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. “ಅವರವರ ಭಾವಕ್ಕೆ ಅವರವರ ದರುಶನಕೆ” ಎಂಬ ವಚನದ ಸಾಲುಗಳನ್ನು ಇಲ್ಲಿ ಪ್ರಸ್ತಾಪ ಮಾಡುವುದು ಸೂಕ್ತ.

ಸಮಾಜದಲ್ಲಿ ಹಿಂದೆ ಧರ್ಮ ಒದಗಿಸಿದ್ದ ಸಾಮಾಜಿಕ ಜವಾಬ್ದಾರಿ, ಸ್ವಾತಂತ್ರೋತ್ತರ ಭಾರತದಲ್ಲಿ ಸಂವಿಧಾನ ನ್ಯಾಯ ಮತ್ತು ಆಡಳಿತ ವ್ಯವಸ್ಥೆಗೆ ಹಸ್ತಾಂತರಗೊಂಡಿದೆ. ಹಲವು ಧರ್ಮಗಳನ್ನು ಒಳಗೊಂಡ ಭಾರತ ಗಣರಾಜ್ಯವಾಗಿ ಹಿಂದೂಸ್ಥಾನವೆಂಬ ಪರಿಕಲ್ಪನೆ ಪಕ್ಕಕ್ಕೆ ಸರಿದು ಸರ್ವಧರ್ಮ ಸಮನ್ವಯದ ಭಾರತವಾಗಿ ರೂಪುಗೊಂಡಿದ್ದು, ಬ್ರಿಟಿಷ್ ಆಳ್ವಿಕೆಯಲ್ಲಿ ಉದ್ಭವಿಸಿದ ರಾಷ್ಟ್ರಪ್ರಜ್ಞೆ ಸ್ವಾತಂತ್ರ್ಯ ದೊರಕಿದ ನಂತರ ಸ್ವಲ್ಪ ತಣ್ಣಗಾದರೂ ಪಾಕಿಸ್ತಾನ ಮತ್ತು ಚೀನಾ ಜೊತೆ ನಡೆದ ಯುದ್ಧಗಳ ಸಮಯದಲ್ಲಿ ಮತ್ತೆ ಮತ್ತೆ ಜಾಗೃತಗೊಳ್ಳುತ್ತಿತ್ತು. ಸಾಮೂಹಿಕ ನೆಲೆಯಲ್ಲಿ ನಮಗೆಲ್ಲ ನಮ್ಮ ಧರ್ಮ ಪ್ರಜ್ಞೆಗಿಂತ ನಮ್ಮ ರಾಷ್ಟ್ರಪ್ರಜ್ಞೆ ಪ್ರಸ್ತುತವಾಗಿತ್ತು.

ಕಳೆದ ಎರಡು ದಶಕಗಳಲ್ಲಿ ಭಾರತ ಆರ್ಥಿಕವಾಗಿ ಮತ್ತು ವೈಜ್ಞಾನಿಕ, ತಾಂತ್ರಿಕ, ಕೈಗಾರಿಕ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಿ ಅಭಿವೃದ್ಧಿಗೊಂಡಿರುವ ರಾಷ್ಟ್ರಗಳ ಮನ್ನಣೆ ಪಡೆದು ಮುಂದುವರಿದಿದೆ. ಎಲ್ಲರಲ್ಲೂ ಆತ್ಮವಿಶ್ವಾಸ ಹೆಚ್ಚಾಗಿದ್ದು ನಮ್ಮ ಹೆಮ್ಮೆ ಸಂತಸಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಇಂತಹ ಯಶಸ್ಸಿನಲ್ಲಿ ನಾವು ನಮ್ಮ ರಾಷ್ಟ್ರಪ್ರಜ್ಞೆಯನ್ನು ಎತ್ತಿಹಿಡಿಯಬೇಕೆ ಹೊರತು ಧರ್ಮಪ್ರಜ್ಞೆಯನ್ನಲ್ಲ. ಈ ಒಂದು ಯಶಸ್ಸಿನಲ್ಲಿ ಸಮಾಜದ ಎಲ್ಲ ಮತಧರ್ಮದವರು ಮತ್ತು ವರ್ಗದವರು ಭಾಗಿಯಾಗಿದ್ದಾರೆ ಎಂಬ ವಿಚಾರ ಅರಿಯಬೇಕಾಗಿದೆ. ಹೆಮ್ಮೆ ಹೆಮ್ಮೆಯಾಗಿ ಉಳಿಯಬೇಕು ಏಕೆಂದರೆ ಹೆಮ್ಮೆಗೂ ಗರ್ವಕ್ಕೂ ನಡುವೆ ಇರುವ ಅಂತರ ಒಂದು ಸಣ್ಣ ರೇಖೆಯಷ್ಟೇ. ಸ್ವಾಮಿ ವಿವೇಕಾನಂದರು ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ಭಾಷಣ ಮಾಡಿ ನೂರಾ ಇಪ್ಪತ್ತೈದು ವರ್ಷಗಳು ಕಳೆದಿವೆ. ಅದನ್ನು ನಾವು ನೆನೆಸಿಕೊಂಡು ವಿಜೃಂಭಿಸುತ್ತಿರುವುದು ಸರಿಯೆ. ಭಾಷಣದ ಶುರುವಿನಲ್ಲಿ ಸ್ವಾಮೀಜಿಯವರು “ಅಮೇರಿಕಾದ ನನ್ನ ಸೋದರ ಸೋದರಿಯರೇ” ಎಂದು ಹೇಳುವ ಮಾತಿನಲ್ಲಿ ಅದೆಷ್ಟು ಸಮನ್ವಯತೆ (Inclusiveness) ಇದೆ ಎಂಬುದನ್ನು ಗಮನಿಸಬಹುದು. “ಅನ್ಯ ಧರ್ಮಗಳ ಅಸ್ತಿತ್ವದ ಅಂಗೀಕರಣ ಮತ್ತು ಸಮನ್ವಯತೆಯನ್ನು ಪ್ರಪಂಚಕ್ಕೆ ಯಾವ ಧರ್ಮ ತೋರಿದೆಯೋ ಆ ಧರ್ಮಕ್ಕೆ ಸೇರಿರುವ ಹೆಮ್ಮೆ ನನಗಿದೆ” ಎಂಬ ಸ್ವಾಮೀಜಿಯವರ ಹೇಳಿಕೆ ಅವರ ನಿಲುವನ್ನು ಸ್ಪಷ್ಟಪಡಿಸುತ್ತದೆ. ಆಗಿನ ಕಾಲಕ್ಕೆ ಅಂದರೆ ಸ್ವಾತಂತ್ರ್ಯಪೂರ್ವ ಭಾರತದಲ್ಲಿ ರಾಷ್ಟ್ರಪ್ರಜ್ಞೆ ಮತ್ತು ಧರ್ಮಪ್ರಜ್ಞೆಗಳು ಒಂದೇ ಅಂಗಗಳಾಗಿದ್ದವು.

ಇತ್ತೀಚಿಗೆ ಜನಸಾಮಾನ್ಯರಲ್ಲಿ ತಮಗೆ ರಾಷ್ಟ್ರಪ್ರಜ್ಞೆ ಮುಖ್ಯವೋ ಅಥವಾ ಧರ್ಮಪ್ರಜ್ಞೆ ಮುಖ್ಯವೋ ಎಂಬ ವಿಚಾರದಲ್ಲಿ ಗೊಂದಲ ಅಥವಾ ಕನ್ಫ್ಯೂಷನ್ ಮೂಡಿದಂತಿದೆ. ನಮಗೆಲ್ಲಾ ಅಗತ್ಯವಾಗಿ ಬೇಕಾಗಿರುವುದು ರಾಷ್ಟ್ರಪ್ರಜ್ಞೆ. ಧರ್ಮದಲ್ಲಿ ನಂಬಿಕೆ ಮತ್ತು ಶ್ರದ್ಧೆ ಇರುವವರು ತಮ್ಮ ಧರ್ಮಪ್ರಜ್ಞೆಯನ್ನು ವೈಯುಕ್ತಿಕ ನೆಲೆಯಲ್ಲಿ ಉಳಿಸಿಕೊಂಡು ಬೆಳೆಸಿಕೊಳ್ಳುವುದು ಅವರವರ ಆಯ್ಕೆ. ಒಂದು ಬಹುಮುಖಿ ಸಂಸ್ಕೃತಿಯ ರಾಷ್ಟ್ರದಲ್ಲಿ ಒಬ್ಬ ವ್ಯಕ್ತಿಗೆ ಹಲವಾರು ಅಸ್ತಿತ್ವವುಂಟು; ಇವು ರಾಷ್ಟ್ರ ಪ್ರಜ್ಞೆ, ಧರ್ಮ ಪ್ರಜ್ಞೆ, ಭಾಷಾಪ್ರಜ್ಞೆ, ಸಾಂಸ್ಕೃತಿಕ ಪ್ರಜ್ಞೆ ಮತ್ತು ಜಾತಿಪ್ರಜ್ಞೆ. ಇಷ್ಟು ವಿಭಿನ್ನತೆಗಳಿದ್ದರೂ ನಮ್ಮನ್ನು ಒಂದುಗೂಡಿಸಿರುವ ಏಕೈಕ ಶಕ್ತಿ ನಮ್ಮ ರಾಷ್ಟ್ರಪ್ರಜ್ಞೆ ಎನ್ನಬಹುದು. ರಾಷ್ಟ್ರೀಯತೆ ಎಂಬ ಲಾಂಛನವನ್ನು ಹಿಡಿದು ನಮ್ಮ ನಿಜವಾದ ಸಮಸ್ಯೆಗಳಾದ ಸ್ವಾರ್ಥ, ಭ್ರಷ್ಟಾಚಾರ ಮತ್ತು ಪರಿಸರ ಮಾಲಿನ್ಯ ಇವುಗಳನ್ನು ಭಾರತೀಯರಾದ ನಾವೆಲ್ಲರೂ ಅದರಲ್ಲೂ ಮುಂದಿನ ಪೀಳಿಗೆಯಾದ ಯುವಕರು ಎದುರಿಸಬೇಕಾಗಿದೆ.

 

ಶ್ರೀ ಚಕ್ರವರ್ತಿ ಸೂಲಿಬೆಲೆಯವರೊಡನೆ ಡಾ. ಪ್ರೇಮಲತ ಸಂವಾದ

ಲೇಖಕರು: ಡಾ. ಪ್ರೇಮಲತ ಬಿ

ನಾನು `ಅನಿವಾಸಿ` ಜಾಲದ ನಿರ್ವಹಣೆ ತೆಗೆದುಕೊಂಡ ಮೇಲೆ ಡಾ. ಪ್ರೇಮಲತಾ ಬರೆಯುತ್ತಿರುವ ಮೂರನೇ ಬರಹ ಇದು. `ಅನಿವಾಸಿ` ಗೆ ಸ್ವಪ್ರೇರಿತ ಬರಹಗಾರರ ಮತ್ತು ಬರಹಗಳ ಕೊರತೆ ಇರುವಾಗ, ಡಾ.ಪ್ರೇಮಲತ ವೃತ್ತಿಪರರಂತೆ ದೊಡ್ಡ ಲೇಖನಗಳನ್ನು ಬರೆದು `ಅನಿವಾಸಿ`ಯನ್ನು ತುಂಬಿದ್ದಾರೆ. ತಮ್ಮೆಲ್ಲ ವೃತ್ತಿ ಮತ್ತು ಮನೆ ಕೆಲಸಗಳ ಮಧ್ಯೆ ಬೇರೆ ಬೇರೆ ಕನ್ನಡ ಜಾಲಗಳಿಗೆ ಬರೆಯುವುದಲ್ಲದೇ, `ಅನಿವಾಸಿ` ಗಾಗಿಯೇ ಪರಿಶ್ರಮದ ಬರಹಗಳನ್ನು ಬರೆದು ಕಳಿಸಿದ್ದಾರೆ. ನಿರ್ವಾಹಕನಾಗಿ ನಾನು ಅವರಿಗೆ ಚಿರಋಣಿ.

`ಅನಿವಾಸಿ` (ಕೆ ಎಸ್ ಎಸ್ ವಿ ವಿ, ಯು ಕೆ) ಕನ್ನಡದ ಬಗ್ಗೆ ಆಸ್ಥೆ ಇರುವ ಯು.ಕೆ ಕನ್ನಡಿಗರ ಜಾಲಜಗುಲಿ. ಯು.ಕೆಯಲ್ಲಿ ನೆಲಸಿ ಕನ್ನಡದಲ್ಲಿ ಬರೆಯುವ ಮತ್ತು/ಅಥವಾ ಕನ್ನಡ ಪುಸ್ತಕಗಳನ್ನು ಇನ್ನೂ ಓದುವ ಮತ್ತು ಮೊದಲು ಯು.ಕೆಯಲ್ಲಿ ನೆಲೆಸಿ ಈಗ ಬೇರೆ ದೇಶಗಳಿಗೆ ವಲಸೆ ಹೋಗಿರುವವರನ್ನೂ ಒಳಗೊಂಡ ನೊಂದಾವಣೆಗೊಳ್ಳದ ಅನೌಪಚಾರಿಕವಾದ ಚಿಕ್ಕ ತಂಡ. ದೇಶಬಿಟ್ಟು ಬಂದ ಕನ್ನಡಿಗರು ಕನ್ನಡದಲ್ಲಿ ಓದುವುದು ಮತ್ತು ಬರೆಯುವುದು ತುಂಬ ಕಡಿಮೆ ಎಂದರೆ ಅತಿಶಯೋಕ್ತಿ ಅಲ್ಲವೇ ಅಲ್ಲ. ಅನಿವಾಸಿಯ ಮುಖ್ಯ ಕೆಲಸ ಯುಕೆಯಲ್ಲಿ ನೆಲೆಸಿರುವ ಕನ್ನಡಿಗರಿಗೆ ಕನ್ನಡದಲ್ಲಿ ಬರೆಯಲು ಮತ್ತು ಓದಲು ಹುರಿದುಂಬಿಸುವುದು. ಯುಕೆಯಲ್ಲಿ ಕನ್ನಡದಲ್ಲಿ ಬರೆಯುವವರು ಸಿಗುವುದೇ ಕಷ್ಟ. ಬರಹವನ್ನು ಓದಿ ಆದ ಮೇಲೆ ಇಂಗ್ಲೀಷಿನಲ್ಲಾದರೂ ಸರಿ, ನಾಕು ಮಾತು ಬರೆದು ಬರಹಗಾರರನ್ನು ಹುರಿದುಂಬಿಸಿ. ಬರಹದ ಬಗ್ಗೆ ತಕರಾರಿದ್ದರೆ ರಚನಾತ್ಮಕವಾಗಿ ಸಕಾರಾತ್ಮಕ ವಿಮರ್ಶೆ ಮಾಡಿ, ಸಮುದಾಯ ಪ್ರಜ್ಞೆಯಲ್ಲಿ ಚರ್ಚೆ ಆರಂಭಿಸಿ, ವೈಯಕ್ತಿಕ ಮಟ್ಟಕ್ಕಿಳಿಯದ ವಾದ ಮಾಡಿ ಎನ್ನುವುದು ನನ್ನ ಕೋರಿಕೆ, ಬಿನ್ನಹ. ನನ್ನ ನಿರ್ವಹಣೆ ಈ ವಾರಕ್ಕೆ ಮುಗಿಯುತ್ತದೆ. ನಿರ್ವಹಣೆಯಲ್ಲಿ ಲೋಪ ದೋಷಗಳಾಗಿದ್ದರೆ ಕ್ಷಮಿಸಿ. ಮುಂದಿನ ವಾರದಿಂದ `ಅನಿವಾಸಿ` ಶ್ರೀ ಮುರಳಿ ಹತ್ವಾರ್ ಸಾರಥ್ಯದಲ್ಲಿ. ಅನಿವಾಸಿ ನಿರಂತರವಾಗಿ ನಿರಾತಂಕವಾಗಿ ಮುಂದುವರೆಯಲಿ, ಎಲ್ಲರಿಗೂ ಶುಭವಾಗಲಿ – ಕೇಶವ (ನಿರ್ವಾಹಕ)

ಸುಮನ ಗಿರೀಶ್ ಮತ್ತು ಗಿರೀಶ್ ವಶಿಷ್ಠ ಅವರ ಮನೆಯಲ್ಲಿ.

ಚಕ್ರವರ್ತಿ ಸೂಲಿಬೆಲೆಯವರು ಇಂಗ್ಲೆಂಡಿಗೆ ಬರುತ್ತಿದ್ದುದು ಸ್ವಾಮಿ ವಿವೇಕಾನಂದರು ಶಿಕಾಗೋ ನಲ್ಲಿ 1893 ರಲ್ಲಿ ಭಾಷಣ ಮಾಡಿದ 125 ನೇ ವಾರ್ಷಿಕೋತ್ಸವದ ಆಚರಣೆಯ ಸಲುವಾಗಿ. ಲಂಡನ್, ಎಡಿನ್ಬರೋ, ಮ್ಯಾಂಚೆಸ್ಟರ್, ನ್ಯೂಕ್ಯಾಸಲ್ ಮತ್ತು ಕೊನೆಯದಾಗಿ ಡಾನ್ಕ್ಯಾಸ್ಟರ್ ನಗರಗಳಿಗೆ ಇವರ ಪ್ರವಾಸದ ವೇಳಾಪಟ್ಟಿ ನಿಗಧಿಯಾಗಿತ್ತು. ಆಯಾ ಊರುಗಳ  ಹಿಂದೂಗಳನ್ನು, ಉದ್ದೇಶಿಸಿ ಮಾತನಾಡಿದ್ದ ಇವರನ್ನು ಭೇಟಿ ಮಾಡಿದ್ದು ಡಾನ್ಕ್ಯಾಸ್ಟರ್ ನ ಸುಮನ ಗಿರೀಶ್ ಮತ್ತು ಗಿರೀಶ್ ವಶಿಷ್ಠ ಅವರ ಮನೆಯಲ್ಲಿ.

ಹಿಂದುತ್ವ, ಹಿಂದೂತ್ವದ ಬಗ್ಗೆ ಇಂದಿನ ಭಾರತದಲ್ಲಿ ಶುರುವಾಗಿರುವ ಸಾಮಾಜಿಕ ಗೊಂದಲ ಮತ್ತು  ಇತ್ತೀಚೆಗೆ ಹೆಚ್ಚಾಗಿರುವ ಮತ ಧರ್ಮೀಯತೆ ಯಾಕೆ ಅನ್ನುವುದನ್ನು ಇವರ ಅಂಬೋಣಗಳ ಬೆಳಕಲ್ಲಿ ಹೊಸದಾಗಿ ನೋಡಬಹುದೇನೋ ಎಂದು ಚಕ್ರವರ್ತಿ ಸೂಲಿಬೆಲೆಯಾರನ್ನು ನಾನು ಭೇಟಿ ಮಾಡಿದ್ದು ಇದೇ ಡಿಸೆಂಬರ್ ಹತ್ತನೆಯ ತಾರೀಖು. ನನ್ನಂತೆಯೇ ಇವರನ್ನು ಭೆಟ್ಟಿಮಾಡಲು ಹಲವು ಹತ್ತು ಜನರು ಆ ದಿನ ಸುಮನರ ಮನೆಯಲ್ಲಿ ಕೂಡಿದ್ದರು. ಕೆಲಸದ ದಿನವಾದರೂ ದೂರದ ಊರುಗಳಿಂದ ಬಂದಿದ್ದ ಎಲ್ಲರಿಗೂ ಇವರ ಮಾತುಗಳನ್ನು ಕೇಳುವ  ಕುತೂಹಲ ಮತ್ತು ಸಂವಾದದಲ್ಲಿ ಭಾಗವಹಿಸುವ ಹಂಬಲವಿದ್ದಂತಿತ್ತು.

ಚಕ್ರವರ್ತಿ ಸೂಲಿಬೆಲೆಯವರು ಹುಟ್ಟಿದ್ದು 1980, ಹೊನ್ನಾವರ ತಾಲೂಕಿನಲ್ಲಿ.ಬೆಂಗಳೂರಿನ ಹೊಸಕೋಟೆಯ ಸಮೀಪದ ಸೂಲಿಬೆಲೆಯಲ್ಲಿ ಬೆಳೆದವರು. ಹಾಗಾಗಿ ಇವರ ಹೆಸರಿಗೆ  ಆ ಊರಿನ ನಂಟಿದೆ. ಭಟ್ಕಳದ ಅಂಜುಮಾನ್ ಎಂಜಿನಿಯರಿಂಗ್ ಕಾಲೇಜಿನಿಂದ ಕಂಪ್ಯೂಟರ್ ಸೈನ್ಸ್ ಪದವೀಧರರಾದ ಇವರು ದುಡಿಮೆಗಾಗಿ ಕೆಲಸ ಮಾಡಿದ್ದು ಕೇವಲ ಮೂರು ದಿನ!

ಚರ್ಕವರ್ತಿ ಸೂಲಿಬೆಲೆ

ಸೂಲಿಬೆಲೆಯ ವಿವೇಕಾನಂದ ಹೈಸ್ಕೂಲಿನಲ್ಲಿ ಓದುವಾಗಲೇ ಉತ್ತಮ ಭಾಷಣಕಾರ ಎಂದು ಹೆಸರು ಪಡೆದಿದ್ದರು. ಇವರ ಮೇಲೆ ಹಲವರು ಹಿರಿಯರು ಪ್ರಭಾವ ಬೀರಿದರೆಂದು ಅವರು ಹೇಳಿಕೊಂಡಿದ್ದಾರೆ. ವಿದ್ಯಾನಂದ ಶೆಣೈ, ರಾಜೀವ ದೀಕ್ಷಿತರು ಮತ್ತು ಸ್ವಾತ್ಮಾನಂದ ಸ್ವಾಮೀಜಿ ಹೀಗೆ ಹಲವರನ್ನು ನೆನೆದಿರುವ ಚಕ್ರವರ್ತಿಯವರು  ಮುಖ್ಯವಾಗಿ ಸ್ವಾಮಿ ವಿವೇಕಾನಂದರ ಧ್ಯೇಯ ಮತ್ತು ಬದುಕಿನಿಂದ ಪ್ರಭಾವಿತರಾದವರು. ಕೆಲಸ , ಮದುವೆ ಇವನ್ನೆಲ್ಲ ನಿರಾಕರಿಸಿ ಹಣದ ಹಿಂದೆ ಹೋಗದೆ ಜನಜಾಗೃತಿ, ವಿವೇಕಾನಂದರ ಧ್ಯೇಯಗಳ ಪ್ರಚಾರದಲ್ಲಿ ತೊಡಗಿಕೊಂಡು ಸಮಾಜ ಸುಧಾರಣೆಯ ಕೆಲಸಗಳಲ್ಲಿ ತೊಡಗಿಕೊಂಡ ಇವರ ಬದುಕಿನ ದಿನವೊಂದರಲ್ಲಿ ಓದು, ಬರಹ, ಯೋಗ, ಧ್ಯಾನ, ಸುತ್ತಾಟ, ಜನ ಕಾಯಕ, ಮಾಧ್ಯಮಗಳ ಮೂಲಕ ಜನಜಾಗೃತಿ, ಭಾಷಣ ಎಲ್ಲವೂ  ಹಾಸು ಹೊಕ್ಕಾಗಿವೆ. ಮೊದ ಮೊದಲು ಬದುಕಿನಲ್ಲಿ ಎಲ್ಲರಂತಿರದೆ ಈ ಬಗೆಯ ತಿರುವು ತೆಗೆದುಕೊಂಡ ಮಗನ ಬಗ್ಗೆ ಎಲ್ಲ ತಂದೆ ತಾಯಿಯರಂತೆಯೇ ಕಳವಳ ವ್ಯಕ್ತಪಡಿಸಿದ ಇವರ ಪೋಷಕರು ಇದೀಗ ತಮ್ಮ ಮನೆಯನ್ನೇ ಒಂದು ಮಂದಿರವನ್ನಾಗಿ ಮಾಡಿ, ಧ್ಯಾನ, ಯೋಗಗಳಿಗೆ, ಉಪಚಾರಗಳಿಗೆ ಕೇಂದ್ರ ಮಾಡಿಕೊಂಡು ಮಗನ ಚಟುವಟಿಕೆಗಳಲ್ಲಿ ತಾವೂ ತೊಡಗಿಸಿಕೊಂಡು ಸಮಾಜದ ಏಕತಾನತೆಯಿಂದ ಹೊರಬಂದಿದ್ದಾರೆ. ಮಾತೃ ಭಾಷೆ ಕೊಂಕಣಿಯಾದರೂ ಕನ್ನಡ ಮಾಧ್ಯಮದಲ್ಲಿ ಓದಿದ ಇವರು ಕನ್ನಡ ಮತ್ತು ಹಿಂದಿ ಬಾಷೆಯಲ್ಲಿ ಹಲವು ಹತ್ತು ಪುಸ್ತಕಗಳನ್ನು ಬರೆದಿದ್ದಾರೆ. ಹಲವಾರು ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಲೇ ಬಂದಿದ್ದಾರೆ. ದೂರದರ್ಶನದ ಹಲವು ಚಾನೆಲ್ ಗಳಿಗೆ, ರೇಡಿಯೋಗಳಿಗೆ  ಕಾರ್ಯಕ್ರಮ ನೀಡಿರುವ ಇವರು ಹಲವಾರು ದೇಶಗಳಿಗೆ ಹೋಗಿ ಮಾತಾಡಿದ್ದಾರೆ. ಭಾರತದ ಸೈನಿಕರಲ್ಲಿ ರಾಷ್ಟ್ರಪ್ರೇಮ, ಅತ್ಮಾಭಿಮಾನ ಮೂಡಿಸುವ ಕಾರ್ಯಗಳನ್ನು , ಭಾಷಣಗಳನ್ನು ಮಾಡಿರುವ ಇವರು ನೊಂದ ಹಲವರು ಸೈನಿಕರ ಕುಟುಂಬಗಳಿಗೆ ದಾನಿಗಳ ನಂಟು ಕೂಡಿಸಿಕೊಟ್ಟಿದ್ದಾರೆ. ಕಾರ್ಯಕ್ರಮಗಳಲ್ಲಿ ಸೈನಿಕರಿಗೆ ಮೊದಲು ಗೌರವ ಅರ್ಪಿಸುವ ಹೊಸ ಸಂಪ್ರದಾಯಕ್ಕೆ ಕರೆಕೊಟ್ಟು ಕೆಲಸ ಮಾಡಿದ್ದಾರೆ. ಸೈನ್ಯದಿಂದ ಹಲವು ವರ್ಷಗಳ ಹಿಂದೆಯೇ ಇಚ್ಛಾ ಪೂರ್ಣ ನಿವೃತ್ತಿ ಪಡೆದಿರುವ ನನ್ನ ಭಾವ ಇತ್ತೀಚೆಗಿನ ವರ್ಷಗಳಲ್ಲಿ ಸ್ವತಂತ್ರ ದಿನಾಚರಣೆ ಬಂದಿತೆಂದರೆ ಹತ್ತು ಹಲವು ಕಾರ್ಯ ಕ್ರಮಗಳಿಗೆ ವಿಶೇಷ ಅಹ್ವಾನಿತರಾಗಿ ಹೋಗಿ ಗೌರವ ಸ್ವೀಕರಿಸುವ ಪರಿಪಾಟವನ್ನು, ಶಾಲೆಗಳಲ್ಲಿ ಭಾಷಣ ಮಾಡುವುದನ್ನು ನೋಡುತ್ತಿರುವ ನನಗೆ ಇದನ್ನು ನಂಬುವುದು ಕಷ್ಟವೇನಾಗಲಿಲ್ಲ.

ಚಕ್ರವರ್ತಿ  ತಮ್ಮದೇ ಯುವಕರ ಪಡೆ  ’ಯುವ ಬ್ರಿಗೇಡ್’ ಮತ್ತು ಯುವತಿಯರಿಗಾಗಿ  ’ಸೋದರಿ ನಿವೇದಿತ ಪ್ರತಿಷ್ಟಾನ ’ವನ್ನು ಶುರುಮಾಡಿ ಸಾವಿರಾರು ತರುಣರಿಗೆ ತಮ್ಮ ದೇಶದ ಬಗ್ಗೆ ಮೊದಲು ಅಭಿಮಾನ ಬೆಳೆಸಿಕೊಳ್ಳಲು ಕರೆಕೊಟ್ಟಿದ್ದಾರೆ. ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.

ಸಂದರ್ಶನದ ಚಿತ್ರ

ಇವೆಲ್ಲ ಕಾರಣಗಳಿಗೆ ಚಕ್ರವರ್ತಿ ಸೂಲಿಬೆಲೆ ಇವತ್ತು ಭಾಷಣಕಾರ, ಕಾರ್ಯಕರ್ತ ಮತ್ತು ಬರಹಗಾರರೆಂಬ ನಾಮ ವಿಶೇಷಣಗಳಿಂದ ಗುರುತಿಸಲ್ಪಡುತ್ತಾರೆ.  ಅತ್ತ ಸಂಪೂರ್ಣ ಸನ್ಯಾಸಿಯೂ ಅಲ್ಲದ, ಇತ್ತ ರಾಜಕಾರಣಿಯೂ ಅಲ್ಲದ, ತಾನೇನು ವಿದ್ವಾಂಸನಲ್ಲ ಎನ್ನುವ ಇವರೊಡನೆ ಸಡೆಸಿದ ಸಂದರ್ಶನದ ಸಾರಾಂಶವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

1) ಸ್ವಾಮಿ ವಿವೇಕಾನಂದರ ಭಾಷಣದ  125 ನೇ ವಾರ್ಷಿಕೋತ್ಸವದ ಸಲುವಾಗಿ ಯುಕೆಯ ಹಲವು ಜಾಗಗಳಿಗೆ ಭೇಟಿಕೊಟ್ಟು ವಿವೇಕಾನಂದರ  ಅಧ್ಯಾತ್ಮಿಕ ನಿಲುವುಗಳ ಬಗ್ಗೆ ಹಿಂದೂತ್ವದ ಬಗ್ಗೆ ಅರಿವು ಮೂಡಿಸೋ ಕೆಲಸ ಮಾಡಿದ್ದೀರ. ಇದು  ನಿಜಕ್ಕೂ ಅಭಿನಂದನೀಯ.ಈ ರೀತಿಯ ಒಂದು ಯಾತ್ರೆಯ ಅಗತ್ಯ ಇದೆ ಅಂತ ನಿಮಗೆ ಯಾಕೆ ಅನ್ನಿಸ್ತು? ಹಿನ್ನೆಲೆ ಏನು?

125 ವರ್ಷಗಳ ಹಿಂದೆ ವಿವೇಕಾನಂದರು ಶಿಕಾಗೋದಲ್ಲಿ  ಭಾಷಣ ಮಾಡಿ ಜಗತ್ತಿನ ಜನರು ಭಾರತವನ್ನು ನೋಡುವ ದೃಷಿಕೋನವನ್ನು ಬದಲು ಮಡಿದ್ರು. ಭಾತೀಯರು ಭಾರತವನ್ನು ನೋಡುವ ದೃಷ್ತಿಕೋನವನ್ನು ಬದಲಾಯಿಸಿದರು, ಉಳಿದೆಲ್ಲ ಧರ್ಮಗಳು ಹಿಂದೂ ಧರ್ಮವನ್ನು ನೊಡುವ ದೃಷ್ಟಿಕೋನವನ್ನು ಬದಲಾಯಿಸಿದ್ರು.ಹಿಂದೂಗಳೂ ತಮ್ಮನ್ನು ತಾವು ನೋಡಿಕೊಳ್ಳುವ ಬಗೆಯನ್ನೂ ಬದಲಾಯಿಸಿದ್ರು. ಇಂತಹ ಒಂದು ಲ್ಯಾಂಡ್ಮಾರ್ಕ್ ಭಾಷಣವನ್ನು ಸ್ಮರಿಸಿಕೊಳ್ಳುವ ಉದ್ದೇಶ . ಮತ್ತೆ ಭಾರತ  ಇವತ್ತು ಮತ್ತೆ ಪ್ರವರ್ಧಮಾನಕ್ಕೆ ಬರ್ತಾ ಇರೋ ಸಮಯದಲ್ಲಿ ನಾವೆಲ್ಲ ಇಂತಹ ಸಂಗತಿಗಳಿಂದ ಮತ್ತೆ ಪ್ರೇರಣೆ ಪಡೀಬೇಕು ಅಂತ ಕರ್ನಾಟಕದಲ್ಲಿ ಈ ಸಂಧರ್ಭಕ್ಕೆ ಒತ್ತು ಕೊಟ್ಟಿದ್ವಿ. ಜೊತೆಗೆ ಯು.ಕೆ.ಯವರು ಇದೇ ಕೆಲಸಕ್ಕೆ ಇಲ್ಲಿಗೆ ಬಂದು ಮಾತಾಡ್ಬೇಕು ಅಂದಾಗ ಸಹಜವಾಗೇ ಒಪ್ಕೊಂಡೆ . ಜೊತೆಗೆ ಪ್ರಪಂಚದ ಎಲ್ಲ ಹಿಂದೂ ಧರ್ಮೀಯರನ್ನು ಒಂದುಗೂಡಿಸಿ ರಾಷ್ಟ್ರದ ಕುರಿತಂತೆ ಪ್ರೇರಣೆ ಮಾಡೋ ಅವಕಾಶವನ್ನು ಬಿಟ್ಟುಕೊಡಬಾರದು ಅಂತ ಬಂದೆ. ಇದೇ ಸಮಯಕ್ಕೆ ಇಲ್ಲಿ

( KAHO ) ಕರುನಾಡ ಹಿಂದೂಗಳ ಅನಿವಾಸೀ ಒಕ್ಕೂಟ ಆರಂಭವಾಯ್ತು. ಅವರು ನನ್ನನ್ನು ಯುಕೆಗೆ ಮುಖ್ಯವಾಗಿ  ವಿವೇಕಾನಂದರ ಮತ್ತು ಹಿಂದೂತ್ವದ ಬಗ್ಗೆ ಮಾತಾಡಲು ಕರೆಸಿಕೊಂಡವರು. ಹಾಗಾಗಿ ಈ ಅವಕಾಶ ನನಗೆ ಸಿಕ್ತು.

2) ನೀವು ಡಿಸೆಂಬರ್ 1 ನೇ ತಾರೀಖಿನಿಂದ ಲಂಡನ್, ಎಡಿನ್ಬರೋ,ಮ್ಯಾಂಚೆಸ್ಟರ್ ಮತ್ತು ನ್ಯೂಕ್ಯಾಸೆಲ್ ಮತ್ತು ಡಾನ್ಕ್ಯಾಸ್ಟರ್ ನಗರಗಳಿಗೆ  ಭೇಟಿಕೊಟ್ಟಿದ್ದೀರಿ ಈ ಹತ್ತು ದಿನಗಳ ಅನುಭವದಲ್ಲಿ ವಿದೇಶದ ಹಿಂದೂ ಜನರಲ್ಲಿ ಈ ಬಗ್ಗೆ ಇರೋ ಜಾಗೃತಿಯ ಬಗ್ಗೆ ನಿಮಗೆ ಏನನ್ನಿಸ್ತು?

ಬರೀ ಇಂಗ್ಲೆಂಡ್ ಮಾತ್ರ ಅಲ್ಲ , ಜಗತ್ತಿನ ಬಹುಭಾಗಗಳಲ್ಲಿ ತಿರುಗಿ ನೋಡ್ದಾಗ್ಲು ಅನ್ನಿಸಿದ್ದು ಭಾರತಿಯರಿಗೆ ಭಾರತವನ್ನು ಬಿಟ್ಟು ಹೋದಮೇಲೆ ಭಾರತದ ಮೇಲೆ ಪ್ರೀತಿ ಜಾಸ್ತಿ ಆಗುತ್ತೆ ಅಂತ. ಅದ್ರಲ್ಲೂ ತಾವು ಏನನ್ನು ಬಾಲ್ಯದಲ್ಲಿ ಅನುಭವಿಸಿದ್ವೋ ಅದು ತಮ್ಮ ಮಕ್ಕಳಿಗೆ ಎಲ್ಲಿ ಸಿಗಲ್ವೋ ಅನ್ನೋ ಟೆನ್ಶನ್ ಇಲ್ಲಿನ ಜನರಿಗೆ ಶುರುವಾಗುತ್ತೆ. ಅದ್ರಲ್ಲೂ ಹಿಂದೂಗಳಿಗೆ. ಹಾಗಾಗಿ  ಅವರು ತಮ್ಮ ಮಕ್ಕಳಿಗೆ ಹಿಂದೂ ಮೌಲ್ಯಗಳನ್ನು ಕೊಡೋ ಪ್ರಯತ್ನ, ಧರ್ಮದ ಸೂಕ್ಷಗಳನ್ನು, ಭಾರತೀಯ ಸಂಸ್ಕೃತಿಯನ್ನು ಕೊಡೋ ಪ್ರಯತ್ನ ಮಾಡ್ತಾರೆ , ಇದನು ನೋಡೋಕೆ ತುಂಬ ಸಂತೋಷ ಆಗುತ್ತೆ. ಇಂತಹ ’ಉಳಿಸೋ’ ಮತ್ತು ಮುಂದಿನ ಪೀಳಿಗೆಗಳಿಗೆ ’ಕಲಿಸೋ ’ ಪ್ರಯತ್ನ ಮಾಡೋ ಎಲ್ಲರಿಗೂ ನನ್ನ ಅಭಿನಂದನೆಗಳನ್ನು ಸಲ್ಲಿಸಬೇಕು ಅಂತ ನಾನು ಇಚ್ಛೆಪಡ್ತೇನೆ.

3) 1893 ರಲ್ಲಿ ಸ್ವಾಮಿ ವಿವೇಕಾನಂದರು ಶಿಕಾಗೋದಲ್ಲಿ ಹಿಂದೂ ಧರ್ಮದ ವೈಶಾಲ್ಯತೆಯ ಬಗ್ಗೆ ಮತ್ತು ವಿಶಿಷ್ಟತೆಯ ಬಗ್ಗೆ  ಮಾತಾಡಿ ಪ್ರಖ್ಯಾತರಾದ್ರು. ನಂತರದ 125 ವರ್ಷಗಳಲ್ಲಿ ಹಲವು ಸಮಾಜ ಸುಧಾರಕರು, ಧರ್ಮ ಸಂಸ್ಥೆಗಳು, ಮಠ-ಮಂದಿರಗಳು ಶಾಲಾ-ಕಾಲೇಜುಗಳು ,ಸರ್ಕಾರ ಎಲ್ಲರೂ ಹಿಂದೂತ್ವದ ಬಗ್ಗೆ ಜಾ ಗೃತಿ ಮೂಡಿಸ್ತಲೇ ಬಂದಿದ್ದಾರೆ. ಆದ್ರೆ ಹಿಂದೂತ್ವದ ಬಗ್ಗೆ ಮಾತಾಡಲು ಹಿಂದೂಗಳಲ್ಲಿ ಹಿಂಜರಿಕೆ ಇದೆ. ಈ ಬಗ್ಗೆ ಅರಿವು ಕಡಿಮೆ ಇದೆ. ಇದು ಯಾಕೆ ಅಂತ ನಿಮ್ಮ ಅಭಿಪ್ರಾಯ?

ಮೊದಲಿಗೆ ಹಿಂದೂ ಧರ್ಮ ಮಾತಾಡೋ ಅಂತದ್ದಲ್ಲ ಆದ್ರೆ ಬದುಕೋದು.  ಪುಸ್ತಕಗಳನ್ನು ಓದಿ ಬರುವಂತದ್ದೂ ಅಲ್ಲ. ಹಿಂದೂಗಳಿಗೆ ಕೂಗಾಡಿ ಕೆಲಸ ಮಾಡೋ ಅಭ್ಯಾಸ ಇಲ್ಲ.  ಹಿಂದೂ ಧರ್ಮ ಜಗತ್ತಿನ ಇತರೆ ಧರ್ಮಗಳಂತೆ ಪುಸ್ತಕ ಓದೋದ್ರಿಂದ, ಕೆಲವು ವ್ಯಕ್ತಿಗಳನ್ನು ಅನುಸರಿಸೋದ್ರಿಂದ ಬರುವಂತದ್ದಲ್ಲ. ಸುಮ್ಮನಿದ್ದಾರೆ ಅಂದ ಮಾತ್ರಕ್ಕೆ ಹಿಂದೂಗಳಿಗೆ ಧರ್ಮದ ಬಗ್ಗೆ ಕಾಳಜಿ ಇಲ್ಲ ಅಂತಲೂ ಅಲ್ಲ. ಕಾಲಾನುಕ್ರಮದಲ್ಲಿ ಹಿಂದೂ ಧರ್ಮ ವಿಶ್ವ ವ್ಯಾಪ್ತಿಯಾಗ್ಬೇಕು ಅಂದಾಗ ಅದು ತಂತಾನೇ ಸ್ಪೋಟಗುಳ್ಳುತ್ತದೆ ಅಂತ ನನ್ನ ನಂಬಿಕೆ.

4)  ನಾವೆಲ್ಲ ಬೆಳೆತಾ, ಒದ್ತಾ  ಇದ್ದ ಟೈಂ ನಲ್ಲಿ , ಹಿಂದೂ , ಮುಸ್ಲಿಮ, ಕ್ರಿಶ್ಚಿಯನ್ , ಮೇಲು , ಕೀಳು ಎಲ್ಲರೂ ಒಂದೇ ತರಗತೀಲಿ ಕೂರ್ತಾ ಇದ್ವಿ. ಹಾಸ್ಟೆಲ್ ಗಳಲ್ಲಿ ಒಂದೇ ಕೋಣೆನಲ್ಲಿ ಬದುಕಿ ಜೀವಿಸಿದವರು. ಆದ್ರೆ ನಮ್ಮಲ್ಲಿ ಯಾವ ಘರ್ಷಣೆಯೂ ಇರ್ಲಿಲ್ಲ, ಯಾರೊಬ್ಬರೂ ಅತಿಧರ್ಮೀಯತೆಯನ್ನು ಪಾಲಿಸ್ತಾ ಇರದೇ ಇದ್ದದ್ದು ಮತ್ತು  ಮುಕ್ತವಾಗಿ ಯೋಚನೆ ಮಾಡ್ತಾ ಇದ್ದುದ್ದು ಕಾರಣ. ಪ್ರತಿಯೊಬ್ಬ ಸಮಾಜ ಸುಧಾರಕರೂ ಚಿಂತಕರೂ ಇದನ್ನೇ ಹೇಳಿರೋದು. ಆದ್ರೆ ಇತ್ತೀಚೆಗಿನ ವರ್ಷಗಳಲ್ಲಿ ಜನರಿಗೆ ಈ ಬಗ್ಗೆ ಬಹಳ ಗೊಂದಲ ಇದ್ದಂತೆ ಇದೆ.ಯಾಕೆ ಹೀಗೆ?

ಮೊದಲನೇದಾಗಿ ಧರ್ಮ  ರಾಜಕೀಯ ವಿಚಾರ ಆಗೋದಿಕ್ಕೆ ಶುರುವಾದಾಗ್ಲಿಂದ ಹೀಗಾಯ್ತು ಅಂತ. ಕ್ರಿಸ್ಚಿಯನ್ನರಿಗೆ  ಜಗತ್ತೆಲ್ಲ ತಾನೇ ಆಗಬೇಕೇಂತ ಆಸೆ ಇದ್ದದ್ದು ಎಲ್ಲರಿಗೂ ಗೊತ್ತಿರೋ ವಿಚಾರ. ಕ್ರಿಸ್ಚಿಯನ್ನರು ಮತ್ತು ಮುಸ್ಲಿಮರಿಂದಲೇ ಈ ಹೋರಾಟ ಶುರುವಾದದ್ದು. ಇದು ಬಹಳ ಕೆಟ್ಟದ್ದು. ಸೃಷ್ಟಿ ಎಷ್ಟು ವೈವಿಧ್ಯಪೂರ್ಣವಾಗಿರುತ್ತೋ ಹಾಗೇ ಜಗತ್ತು! ಎಲ್ಲರೂ ತಮ್ಮ ದೇವರ ಅನುಯಾಯಿಗಳೇ ಆಗಬೇಕೆಂಬುದೇ ಕೆಟ್ಟ ವಿಚಾರ. ಹಿಂದೂಗಳು ಹೇಳೋದು ಯಾರು ಯಾವ ಧರ್ಮವನ್ನು ಅನುಸರಿಸ್ತಾರೋ ಅದೇ ಧರ್ಮದಲ್ಲಿ ನೀನು ಒಳ್ಳೆಯ ವ್ಯಕ್ತಿಯಾಗಿರು ಅಂತಲೇ. ಹಾಗೆಯೇ ನನ್ನನ್ನೂ ಹಿಂದೂವಾಗಿರಲು ಬಿಡು ಅನ್ನೋದು. ಆದ್ರೆ ಹೆಚ್ಚು ಜನರನ್ನು ಮತಾಂತರಿಸಿದರೆ ತಮ್ಮ ಸಾಮ್ರಾಜ್ಯ ವಿಸ್ತಾರ ಆಗುತ್ತೆ ಅನ್ನೋ ಅಜೆಂಡ ಮತ್ತು ರಾಜಕೀಯಗಳಿಂದ  ಮತ ಧರ್ಮ ಶುರುವಾದ್ದು. ಯಾರು ಇದನ್ನು ಮಾಡ್ತಾರೋ ಅವರು ಬೇರೆ ನಿಲ್ತಾರೆ. ಮಿಕ್ಕವರನ್ನು ಪ್ರತ್ಯೇಕರ ತರ ನೋಡೋಕೆ ಶುರು ಮಾಡ್ತಾರೆ. ಇದೇ ಸಮಸ್ಯೆ ಈಗ ಜಾಸ್ತಿಯಾಗ್ತಿದೆ. ಜಗತ್ತಿನ ಮೂಲೆ ಮೂಲೆನಲ್ಲೂ ಕಂಡು ಬರ್ತಾ ಇದೆ. ಸಂತೋಷದ ವಿಚಾರ ಅಂದ್ರೆ ಹಿಂದೂ ಬಹು ಸಂಖ್ಯಾತರಿರೋ ಭಾರತದಲ್ಲಿ , ಬೇರೆ ಮತಗಳನ್ನು ಸ್ವೀಕರಿಸಿರೋ ಜನ ಕೂಡ ಭಯೋತ್ಪಾದಕ ಐಸಿಸ್ ನಂತವಕ್ಕೆ ಹೆಚ್ಚು ಸೇರಲ್ಲ. ನನಗನಿಸುತ್ತೆ ಒಂದು ದಿನ ಭಾರತದ ಮುಸ್ಲಿಮರು, ಕ್ರಿಶ್ಚಿಯನ್ನರು ಜಗತ್ತಿಗೇ ಮಾದರಿಯಾಗಿ ನಿಲ್ಲಬಲ್ಲಂತವರಾಗ್ತಾರೆ ಅಂತ.

5)  ಹಿಂದೂತ್ವ ದಲ್ಲಿ ಯಾವುದಾದ್ರೂ ಕೆಟ್ಟ ವಿಚಾರಗಳಿವೆಯಾ? ಅಂದ್ರೆ ಮೂಲಭೂತವಾಗಿ ಅಥವಾ ಆಚರಣೆಯಲ್ಲಿ?

ಗಂಗಾನದಿ ಗಂಗೋತ್ರಿಯಲ್ಲಿ ಹುಟ್ಟಿ, ಕಲ್ಕತ್ತಾದ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತೆ. ಗಂಗಾನದಿಯಲ್ಲಿ ಕೊಳಕಿಲ್ವಾ ಅಂದ್ರೆ ಖಂಡಿತ  ಇದೆ. ಅದನ್ನು ನಾವೇ ತುಂಬಿದ್ದೇವೆ, ಮೂಲ ಶುದ್ದವಾಗೇ ಇದೆ. ಹಾಗೇ ಹಿಂದೂ ಧರ್ಮದ ಚಿಂತನಾ ಪರಂಪರೆ ಹತ್ತಾರು ಸಾವಿರ ವರ್ಷಗಳಿಂದ ಬಂದಿರುವಂತದ್ದು. ಕಾಲದ ಗಣನೆಯನ್ನೂ ಮೀರಿದ ಸನಾತನ ಧರ್ಮದ ಪರಿಕಲ್ಪನೆ  ಹಿಂದೂಧರ್ಮದಲ್ಲಿ ಇದೆ. ಹಾಗಾಗಿ ಮೂಲದಲ್ಲಿ ಕೊಳಕಿಲ್ಲ. ಆದ್ರೆ ಆಚರಣೆಗಳಲ್ಲಿ ಕೊಳಕನ್ನು ನಾವೇ ತುಂಬಿದ್ದೀವಿ. ಆಗಾಗ ಮಹಾಪುರುರುಷರು ಹುಟ್ಟಿ ಬರ್ತಾರೆ ಮತ್ತು ಈ ಕೊಳಕನ್ನು ಕ್ಲೀನ್ ಮಾಡ್ತಾರೆ. ಬುದ್ಧ, ಶಂಕರ, ಮಾಧ್ವರು , ರಾಮಾನುಜರು ಹಾ ಗೆ ಅನೇಕ ದಾಸರು, ಶರಣರು ಬಂದ್ರು. ಉತ್ತರಭಾರತಕ್ಕೆ ಹೋದ್ರೆ ಚೈತನ್ಯಾದಿಗಳು ಬಂದ್ರು. ಇವರೆಲ್ಲ ನೀರನ್ನು ಕುಡಿಯಕ್ಕೆ ಯೋಗ್ಯ ಮಾಡಿದಂತೆ ಧರ್ಮವನ್ನು ಆಚರಣೆಗೆ ಯೋಗ್ಯವನ್ನಾಗಿ  ಮಾಡ್ತಲೇ ಬಂದಿದ್ದಾರೆ. ಇಂತಹ ಪ್ರಯತ್ನಗಳು ಈಗ್ಲೂ ನಡೀತಲೇ ಇವೆ ಅಂತ ನನಗನಿಸುತ್ತೆ.

ಉದಾಹರಣೆಗೆ, ಜಾತಿ ಕೊಳಕಲ್ಲ ಅದ್ರೆ ಜಾತೀಯತೆ ಕೊಳಕು ಮತ್ತು ಅದರ ಬಗೆಯ ದುರಭಿಮಾನ ಹೊಂದಿ ಇನ್ನೊಬ್ಬನ ಜಾತಿ ಕೆಟ್ಟದ್ದು ಅನ್ನೋದು ಇವೆಲ್ಲ ಅತಿ ಕೆಟ್ಟದ್ದು ಅಂತ ನನಗನಿಸುತ್ತೆ. ಸ್ತ್ರೀ ಯನ್ನು ಅತ್ಯಂತ ತುಚ್ಛವಾಗಿ ಕಾಣೋ ಅಂತ  ಇತ್ತೀಚೆಗಿನ ಆಕ್ರಮಣಕಾರೀ ಕೊಳಕುಗಳು ನಮ್ಮಲ್ಲಿ ಹಲವಾರಿವೆ ಅಂತ ನನಗನಿಸುತ್ತೆ.

6) ಯಾವುದು ನಿಜವಾದ ಹಿಂದುತ್ವ, ಹಿಂದೂಯಿಸಂ ಮತ್ತು ಹಿಂದೂ ಧರ್ಮ?

ಸ್ಪಿರುಚಿಯಾಲಿಟಿ ನನಗೆ ಅತ್ಯಂತ ಹತ್ತಿರವಾದ ಸಂಗತಿ. ಆದ್ಯಾತ್ಮಕ್ಕೆ ಸಂಬಂಧ ಪಟ್ಟಂತದ್ದು. ಯಾವುದಕ್ಕೆ ಅತ್ಮ ಸಾಕ್ಷಾತ್ಕಾರದ ಕಲ್ಪನೆಯ ಕಡೆಗೆ ಕೊಡೊಯ್ಯಬಲ್ಲ  ಶಕ್ತಿಯಿದೆಯೋ ಅದು ನನ್ನ ಹಿಂದೂ ಧರ್ಮ, ನನ್ನೊಳಗಿನ ದೇವರನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲಿಕ್ಕೆ ಅವಕಾಶ ಮಾಡಿಕೊಡುವ ಧರ್ಮ ನನ್ನ ಪಾಲಿನ ಶ್ರೇಷ್ಠ ಹಿಂದೂ ಧರ್ಮ, ಜೊತೆಗೆ ಎಲ್ಲ  ಪಥಗಳನ್ನು ಸಮಾನವಾಗಿ ನೋಡಬಲ್ಲ ತಾತ್ವಿಕ ಚಿಂತನೆಯನ್ನು ನನಗೆ ಕೊಡೋದು ನನ್ನ ಧರ್ಮ. ಹೊರಗಿನಿಂದ ಭಗವಂತನನ್ನು ಸೇರಲು ಭಿನ್ನ ಭಿನ್ನ ಮಾರ್ಗಗಳನ್ನು ಕಲ್ಪಿಸಿ, ನನ್ನೊಳಗಿನ ಭಗವಂತನನ್ನು ಸಾಕ್ಷಾತ್ಕರಿಕೊಳ್ಳಲು ಅನುವು ಮಾಡಿಕೊಡುವುದು ನನ್ನ ಧರ್ಮ. ಇದಕ್ಕಿಂತ ಹೆಚ್ಚಿನದನ್ನು ಹೇಳುವ ಧರ್ಮ ನನ್ನದಲ್ಲ. ರಾಷ್ಟ್ರೀಯತೆಯೇ ಹಿಂದೂ ಅಂತಲೂ ನನ್ನ ಭಾವನೆ.

7) ಹಿಂದೂ ಧರ್ಮಕ್ಕೆ ಪವಿತ್ರ ಗ್ರಂಥ ಇಲ್ಲ. ಒಬ್ಬನೇ ದೇವರಿಲ್ಲ. ಹಿಂದೂತ್ವ ಅನ್ನೋದು  ಜೀವನ ವಿಧಾನ ಅನ್ನೋದಾದ್ರೆ –(ಸುಪ್ರೀಂ ಕೋರ್ಟ್ ಪ್ರಕಾರ) ಅದನ್ನು ಪ್ರತಿಯೊಬ್ಬರೂ ಒಂದೇ ರೀತಿ ಪಾಲೀಸೋದಾಗ್ಲೀ ಅಥವಾ ಮಕ್ಕಳಿಗೆ ಹೇಳಿಕೊಡೋದಾಗ್ಲಿ ಹೇಗೆ ಸಾದ್ಯ?

ಶುರುವಾಗ್ತಾ ಆಚರಣೆಯಿಂದಲೇ ಶುರುವಾಗುತ್ತೆ. ಬ್ರಿಟನ್ನಿನಲ್ಲಿ ಮಕ್ಕಳಿಗೆ ಎ ಅಂತ  ಹೇಳಿಕೊಡುವಾಗ ಫೋನೆಟಿಕ್ಸ್ ಮೂಲಕವೇ ಹೇಳಿಕೊಡ್ತಾರೆ. ಹಾಗೇ ಆರಂಭದಲ್ಲಿ ಒಂದಷ್ಟು ಶ್ಲೋಕಗಳನ್ನು, ಪೂಜೆಯನ್ನು, ಹಬ್ಬವನ್ನು ಆಚರಿಸುವುದನ್ನು ನಾವು ಹೇಳಿಕೊಡ್ತೀವಿ. ಇದು ಮೊದಲನೇ ಹೆಜ್ಜೆ. ವಿಸ್ತಾರವಾದ ಎಲ್ಲವೂ ಭಗವಂತನನ್ನು ಸೇರುವ ಪರಿಕಲ್ಪನೆಯಲ್ಲಿ ಕಾಣಲು ಜಾತಿ, ಮತ, ಪಂಥಗಳನ್ನುಅಪ್ಪಿಕೊಳ್ಳುವಂತ ಚಿಂತನೆಯನ್ನು ಮಕ್ಕಳಿಗೆ ಕೊಡೋದು ಕೂಡ ಹಿಂದೂತ್ವದ ತಳಹದಿ. ಮೂರನೆಯದು ಮಕ್ಕಳಿಗೆ ತಮ್ಮನ್ನು ತಾವು ಅರ್ಥ ಮಡಿಕೊಳ್ಳಲು ಸದಾಕಾಲ ಗೈಡನ್ಸ್ ಮಾಡೋದು. ಇದು ಹಿಂದುತ್ವ.

ಅತಿಧರ್ಮೀಯತೆ  ಅಂತ ಯಾವುದೂ ಇಲ್ಲ. ಮತಾಂಧತೆ ಮಾತ್ರ ಇದೆ. ಧರ್ಮ ಮತಕ್ಕಿಂತ ಬಹಳ ಭಿನ್ನ. ಒಬ್ಬ ತಾಯಿ  ಮಗನನು ಅತಿಯಾಗಿ ಪ್ರೀತಿಸಿದ್ರೆ ಆಕೆಯದು ಅತಿ ವ್ಯಾತ್ಸಲ್ಯ ಅಂತೇನೂ ಇಲ್ಲ. ಅತಿ ಅಂತ ಸೇರಿಸಕ್ಕೆ  ಬರಲ್ಲ. ಆದ್ರೆ ತನ್ನದು ಮಾತ್ರವೇ ದೊಡ್ಡದು ಅನ್ನೋದು ತಪ್ಪು.

8)  ಇತ್ತೀಚೆಗೆ  ಮತ ಧರ್ಮ ರಾಜಕಾರಣ ಶುರುವಾಗಿದೆ. ವೋಟಿಗಾಗಿ ನಡೆಯುವಂತದ್ದು. ಸಾಮಾಜಿಕವಾಗಿ ಜನರು ಇದನ್ನು ಒಪ್ಪೋದಿಲ್ಲ. ಇಂತಹ ರಾಜಕೀಯ ಕಪಿ ಮುಷ್ಟಿಯಲ್ಲಿ ಸಿಲುಕಿದವರು ಹೇಗೆ  ಪರಾಗಬಹುದು?

ಇಂತವರ ಹಿಡಿತಕ್ಕೆ ಸಿಕ್ಕಿಕೊಳ್ಳುವುದೇ ತಪ್ಪು. ನಿರಾಕರಿಸಿ. ಸಿಕ್ಕಿಹಾಕೊಂಡಲ್ಲಿ ಪಾರಾಗೋ ಅಗತ್ಯವೇ ಇಲ್ಲ.

ಸಮಸ್ಯೆಯೊಂದರ ಪರಿಹಾರಕ್ಕೆ ಕಾಲವೇ ಮಾರ್ಗ. ಸಮಯವೇ ಇದನ್ನು ಜನರಿಗೆ ಕಲಿಸುತ್ತೆ. ರಾಜಕಾರಣಿಗಳಿಗೆ ನಾವೇ ವಸ್ತು.ಅವರೂ ನಮ್ಮವರೇ. ಎಲ್ಲರೂ ಅವರವರ ತಾತ್ಕಾಲಿಕ ಸ್ವಾರ್ಥ ಮತ್ತು ಲಾಭಕ್ಕಾಗಿ ತಪ್ಪು ಮಾಡುತ್ತಾರೆ. ಇವರಿಗೆ ಧರ್ಮವೂ ದೊಡ್ಡದಾಗಿರುವುದಿಲ್ಲ. ಸ್ವಾರ್ಥದ ಸುಳಿಯಲ್ಲಿ ಸಿಲುಕಿಕೊಳ್ಳುವುದೇ ಎಲ್ಲ ಸಮಸ್ಯೆಗಳ ಬೇರು. ಸ್ವಲ್ಪ ಎಚ್ಚರಿಕೆ ಮತ್ತು ಜಾಗೃತಿಗಳಲ್ಲಿ ಬದುಕೋ ಅಗತ್ಯವಂತೂ ಇದೆ. ಇದಕ್ಕಾಗಿ ದೊಡ್ಡ ಹೋರಾಟವನ್ನೇ ನಾವು ಮಾಡಬೇಕಿದೆ. ಆದರೂ ಒಂದೆರಡು ತಲೆಮಾರುಗಳ ಕಾಲವಾದರು ಈ ಸಮಸ್ಯೆ ನಿವಾರಣೆಯಾಗಲು ಬೇಕು.

8) ಶತಮಾನದ ಹಿಂದೆ ವಿವೇ ಕಾನಂದರು ಹೇಳಿದ ಅವೇ ಸುಧಾರಣೆಗಳು ಇವತ್ತಿಗೂ ಆಗಬೇಕಾಗಿರೋದು ವಿಶಾದದ ಸಂಗತಿ. ಈ ಬಗ್ಗೆ ನಿಮ್ಮ ಸಂಸ್ಥೆ ಮತ್ತು ನೀವು ಕಟ್ಟಿರೋ ಯುವ ಬ್ರಿಗೇಡ್ ಬೇಕಾದಷ್ಟು ಒಳ್ಳೇ ಕೆಲಸಗಳನ್ನು ಮಾಡ್ತಿವೆ ಅಂತ ಕೇಳಿದ್ದೀವಿ. ಈ ಬಗ್ಗೆ ಹೇಳಿ.

ಯುವ ಬ್ರಿಗೇಡ್ ಮೂಲಕ ತರುಣರಲ್ಲಿ ಜಾಗೃತಿ ಮೂಡಿಸೋ ಕೆಲಸ ಮಾಡ್ತಿದ್ದೇವೆ. ಪ್ರಗ್ನೆಯನ್ನು ಬೆಳೆಸೋ ಪ್ರಯತ್ನ ಇದು. ಕಂಪ್ಲೇಂಟ್ ಮಾಡೋ ಸ್ವಭಾವವನ್ನು  ಸ್ವಲ್ಪ ಕಡಿಮೆ ಮಾಡಿ ರಾಷ್ಟ್ರಕ್ಕೋಸ್ಕರ ದುಡಿಯೋ ಮನೋಭಾವವನ್ನು ಬೆಳೆಸ್ತಾ ಇದ್ದೇವೆ. ಕಳೆದ 4.5 ವರ್ಷಗಳಲ್ಲಿ 175 ಕಲ್ಯಾಣಿಗಳನ್ನು ಕ್ಲೀನ್ ಮಾಡಿದ್ದೇವೆ. 6-8  ತಿಂಗಳಲ್ಲಿ 7 ನದಿಗಳನ್ನು ಸ್ವಚ್ಛ ಮಾಡಲು ಸಾಧ್ಯವಾಗಿದೆ. ಸೈನಿಕರಲ್ಲಿ ದೇಶಭಕ್ತಿ ಬರುವಂತೆ ಕೆಲಸ ಮಾಡ್ತಿದ್ದೇವೆ. ಮಕ್ಕಳಿಗೆ ಸಣ್ಣ ಸಣ್ಣ ವಿಡೀಯೋ ಮಾಡಿ ಕಳಿಸ್ತಿದ್ದೇವೆ. ವಿವೇಕಾನಂದರ  ಮತ್ತು ನಿವೇದಿತಾ ವಿಚಾರಕ್ಕೆ ರಥಯಾತ್ರೆ ಮತ್ತು ಸಾಹಿತ್ಯ ಸಮ್ಮೇಳನವನ್ನು ಮಾಡಿದ್ದೇವೆ. ತರುಣರಲ್ಲಿ ಕುಶಲ ಕಲೆಗಳು ಬೆಳೆಯುವಂತೆ ತರಭೇತಿ ಕೊಟ್ಟು ಬೇಗ ಕೆಲಸ ಸಿಗೋ ಅಂತೆ ಪ್ರಯತ್ನ ಮಾಡ್ತಿದ್ದೇವೆ. ಜಾತಿ ಮತ ಪಂಥಗಳನ್ನು ಮೀರಬೇಕು ಅನ್ನೋ ಪ್ರಯತ್ನ  ಮತ್ತು ಡಿಜಿಟಲ್ ಸಂಸ್ಕಾರದ ಮೂಲಕ ಚಿಂತನೆಗಳನ್ನು ಸಮರ್ಥವಾಗಿ ಹೆಚ್ಚು ಜನರಿಗೆ ಮುಟ್ಟಿಸೋ ಕೆಲಸವನ್ನು ಮಾಡ್ತಾ ಇದ್ದೇವೆ. ಹೆಣ್ಣು ಮಕ್ಕಳು ಕೂಡ ನಿವೇದಿತಾ ಸಂಸ್ಥೆಯ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

9) ನೀವು  ಸೈನಿಕರನ್ನು ಭೇಟಿ ಮಾಡಿ ಅವರಲ್ಲಿ ರಾಷ್ತ್ರಪ್ರೇಮವನ್ನು ಉಜ್ವಲಗೊಳಿಸೋ ಪ್ರಯತ್ನ ಮಾಡಿದ್ದೀರಿ. ಇಂತಹ ಅಗತ್ಯ ಇದೆ ಅಂತ ನಿಮಗೆ ಯಾಕೆ ಅನ್ನಿಸ್ತು?

ಆತ್ಮ ಸ್ಥೈರ್ಯ ! ತಮಸ್ಸಿನಲ್ಲಿರುವ ಜನರನ್ನು ರಜಸ್ಸಿಗೆ ತರೋದಿಕ್ಕೆ ಉತ್ತಮ ಮಾರ್ಗ ಅಂತ ಸ್ವಾಮಿ ವಿವೇಕಾನಂದರು ಹೇಳ್ತಾರೆ. ಕಾರ್ಗಿಲ್ ಯುದ್ದ, ಚೀನಾ ಯುದ್ದ,  1965 ರ ವಾರ್ ಆಫ್ ಟ್ಯಾಂಕ್ ನೆನಪಿಸಿಕೊಂಡು ಜನರಲ್ಲಿ ರಾಷ್ತ್ರಪ್ರೇಮ ಉದ್ದೀಪನ ಗೊಳಿಸೋ ಕೆಲಸವನ್ನು ಮಾಡ್ತಾ ಇದ್ದೀವಿ.

10) ನೀವು ಮಾದ್ಯಗಳಲ್ಲಿ ಬಹಳ ತೊಡಗಿಕೊಂಡಿರೋ ವ್ಯಕ್ತಿ. ಹಲವು ಹತ್ತು ಪುಸ್ತಕ ಬರೆದಿದ್ದೀರಿ. ರೇಡಿಯೋ, ಟೀವಿ, ಪತ್ರಿಕೆಗಳು, ದಿನಪತ್ರಿಕೆಗಳು, ಸಾಮಾಜಿಕ ಜಾಲ ತಾಣಗಳಲ್ಲಿ ಬರೀತಿರ್ತೀರಿ. ವಿಜಯವಾಣಿಯಲ್ಲಿ ವಿಶ್ವಗುರು ಅನ್ನೊ ಹೆಸರಿನಲ್ಲಿ  ಅಂಕಣ ಬರೀತಿರೋ ಉದ್ದೇಶ ಏನು?

ನಾನು ನನ್ನ ಭಾರತ ಏನಾದ್ರು ಆಗಬೇಕು ಅಂತ ಕೇಳ್ಕೊಳ್ಳೊದಾದ್ರೆ, ಇಂಗ್ಲೆಂಡಿನಂತೆ ಜಗತ್ತನ್ನು ಆಳ್ಬೇಕು ಅಂತ ಯಾವತ್ತೂ ಕೇಳ್ಕೊಳ್ಳಲ್ಲ.  ಹಿಂದೆ ಭಾರತ ’ವಸುದೈವ ಕುಟುಂಬಕಂ ’ ಎನ್ನುವಷ್ಟು ಹಿರಿಮೆಯುಳ್ಳದ್ದಾಗಿತ್ತು. ನಳಂದ ತಕ್ಷ ಶಿಲ ಇವುಗಳಲ್ಲಿ ಶಿಕ್ಷಣ ಪಡೆಯಲು ಜಗತ್ತಿನ ಜನರು ಭಾರತಕ್ಕೆ ಬರ್ತಾ ಇದ್ರು. ಭಾರತ  ಯಾವತ್ತು ಬೆಳಕನ್ನು ಹುಡುಕ್ತಾ ಇದ್ದ ದೇಶ. ಮತ್ತೆ ಬಾರತ ಅದೇ ಪ್ರೌಡಿಮೆಯನ್ನು ತಲುಪಬೇಕು ಅಂತ. ನೋವು ಮತ್ತು ದುಃಖವನ್ನು ಮೀರುವಂತ ಗ್ನಾನವನ್ನು ಕೊಡುವಂತ ವಿಶ್ವಗುರುವಾಗಬೇಕು ಅಂತ . ಹಿಂದೆ ಆಗಿದ್ವಿ ಆದ್ರೆ ಇವತ್ತು ಆ ಪಟ್ಟವನ್ನು ಕಳಕೊಂಡಿದ್ದೀವಿ. ಮತ್ತೆ ಆ ಶಕ್ತಿ ನಮಗೆ ಸಿಗಲಿ ಅಂತ ಬಯಸಿಕೊಂಡು ಬರೀತಾ ಇದ್ದೀನಿ.

10) ಹಣ ಸಹಾಯ ಅಲ್ದೆ  ವಿದೇಶಿಯರಾದ ನಾವು ಇನ್ನೇನನ್ನು ಮಾಡಬಹುದು?

ವಿದೇಶದವರೆಲ್ಲ ಹಣವನ್ನು ಕೇಳಲಿಕ್ಕೇ ನಮ್ಮ ಬಳಿ ಬರ್ತಾರೆ ಅಂದ್ಕೊಂಡಿರ್ತಾರೆ. ನಮ್ಮ ಬಳಿ ಸಾಕಷ್ಟು ಹಣವಿದೆ.  ನಿಮ್ಮ ಹಣ ನಮಗೆ ಖಂಡಿತ ಬೇಡ.ಬದಲು ನೀವು ಭಾರತಕ್ಕೆ ಬಂದಾಗ ನೀವು ಓದಿದ ಶಾಲೆಗಳಿಗೆ, ಕನ್ನಡ ಮಾಧ್ಯಮದ ಸರ್ಕಾರೀ ಶಾಲೆಗಳಿಗೆ  ಭೇಟಿಕೊಟ್ಟು ಹಲವು ಹತ್ತು ಮಕ್ಕಳಲ್ಲಿ ನಾವೂ ನಿಮ್ಮಂತೆಯೇ ಓದಿ ಈಗ ಹೀಗಿದ್ದೀವಿ ಅಂತ ಹೇಳಿ ಆತ್ಮ ವಿಶ್ವಾಸ ತುಂಬಿ. ಯಾಕೆಂದರೆ ಸಾಧನೆ ಮಾಡೋ ಶಕ್ತಿ ನಮ್ಮ ಮಕ್ಕಳಲ್ಲಿದೆ. ಅವಕಾಶಗಳಿಲ್ಲ. ನಿಮ್ಮಿಂದ ಉತ್ತಮ ಪ್ರೇರಣೆ ಸಿಕ್ಕರೆ ಅಷ್ಟೇ ಸಾಕು. ಅವರಲ್ಲಿನ ಪ್ರತಿಭೆ  ಹೊರಕ್ಕೆ ಬರುವಂತ ಅವಕಾಶ ಮಾಡಿಕೊಡಿ, ಪ್ರೇರಣೆ, ಆತ್ಮವಿಶ್ವಾಸವನ್ನು ನೀಡಿ.

11)   ನಿಮ್ಮ ಮತ್ತು ನಿಮ್ಮ ಸಂಸ್ಥೆಯ ಮುಂದಿನ ಕಾರ್ಯ ಯೋಜನೆಗಳೇನು?

ಡಿಸೆಂಬರ್ 22-23  ರಂದು ಸೇವಾಕುಂಭ ಮಾಡ್ತೀದ್ದೀವಿ.  ಯಾರು ತಮಗಲ್ಲದೆ ಬೇರೆಯವರಿಗಾಗಿ ಬದುಕ್ತಾರೋ ಅಂತಹ ನೂರೈವತ್ತು ಸಂಸ್ಥೆಯ 350 ಜನ್ರನ್ನು ಸೇರಿಸ್ತಿದ್ದೀವಿ. ಪ್ರಖರವಾಗಿ ಸೇವೆ ಮಾಡಿರೋ ಹದಿನೈದು ಜನರನ್ನು ಮಾತನಾಡಿಸ್ತಿದ್ದೀವಿ. ಇಂತವರ ನೆಟ್ವರ್ಕ್ ಸೃಷ್ಟಿಸುವ ಪ್ರಯತ್ನದಲ್ಲಿದ್ದೇವೆ.

ಶಾಲಾ ಕಾಲೇಜಿನ ಮಕ್ಕಳಲ್ಲಿ ತಮ್ಮ ದೇಶದ ಕೆಲಸವನ್ನು ಮಾಡುವ ಪರಿಕಲ್ಪನೆಯನ್ನು ಹುಟ್ಟುಹಾಕುವ ವಿಚಾರಗಳನ್ನು ಬಿತ್ತಬೇಕು ಅಂತ  ವಿಚಾರ ಮಾಡ್ತಿದ್ದೇವೆ. ಮುಂದಿನ 6 ತಿಂಗಳ ಕಾರ್ಯಕ್ರಮ ಪಟ್ಟಿ ತಯಾರಿದೆ.

ಸಂದರ್ಶನದ ವೀಡಿಯೋ:

ಸಂದರ್ಶನ: ಭಾಗ ೧
ಸಂದರ್ಶನ: ಭಾಗ ೨