ಶ್ರೀ ಚಕ್ರವರ್ತಿ ಸೂಲಿಬೆಲೆಯವರೊಡನೆ ಡಾ. ಪ್ರೇಮಲತ ಸಂವಾದ

ಲೇಖಕರು: ಡಾ. ಪ್ರೇಮಲತ ಬಿ

ನಾನು `ಅನಿವಾಸಿ` ಜಾಲದ ನಿರ್ವಹಣೆ ತೆಗೆದುಕೊಂಡ ಮೇಲೆ ಡಾ. ಪ್ರೇಮಲತಾ ಬರೆಯುತ್ತಿರುವ ಮೂರನೇ ಬರಹ ಇದು. `ಅನಿವಾಸಿ` ಗೆ ಸ್ವಪ್ರೇರಿತ ಬರಹಗಾರರ ಮತ್ತು ಬರಹಗಳ ಕೊರತೆ ಇರುವಾಗ, ಡಾ.ಪ್ರೇಮಲತ ವೃತ್ತಿಪರರಂತೆ ದೊಡ್ಡ ಲೇಖನಗಳನ್ನು ಬರೆದು `ಅನಿವಾಸಿ`ಯನ್ನು ತುಂಬಿದ್ದಾರೆ. ತಮ್ಮೆಲ್ಲ ವೃತ್ತಿ ಮತ್ತು ಮನೆ ಕೆಲಸಗಳ ಮಧ್ಯೆ ಬೇರೆ ಬೇರೆ ಕನ್ನಡ ಜಾಲಗಳಿಗೆ ಬರೆಯುವುದಲ್ಲದೇ, `ಅನಿವಾಸಿ` ಗಾಗಿಯೇ ಪರಿಶ್ರಮದ ಬರಹಗಳನ್ನು ಬರೆದು ಕಳಿಸಿದ್ದಾರೆ. ನಿರ್ವಾಹಕನಾಗಿ ನಾನು ಅವರಿಗೆ ಚಿರಋಣಿ.

`ಅನಿವಾಸಿ` (ಕೆ ಎಸ್ ಎಸ್ ವಿ ವಿ, ಯು ಕೆ) ಕನ್ನಡದ ಬಗ್ಗೆ ಆಸ್ಥೆ ಇರುವ ಯು.ಕೆ ಕನ್ನಡಿಗರ ಜಾಲಜಗುಲಿ. ಯು.ಕೆಯಲ್ಲಿ ನೆಲಸಿ ಕನ್ನಡದಲ್ಲಿ ಬರೆಯುವ ಮತ್ತು/ಅಥವಾ ಕನ್ನಡ ಪುಸ್ತಕಗಳನ್ನು ಇನ್ನೂ ಓದುವ ಮತ್ತು ಮೊದಲು ಯು.ಕೆಯಲ್ಲಿ ನೆಲೆಸಿ ಈಗ ಬೇರೆ ದೇಶಗಳಿಗೆ ವಲಸೆ ಹೋಗಿರುವವರನ್ನೂ ಒಳಗೊಂಡ ನೊಂದಾವಣೆಗೊಳ್ಳದ ಅನೌಪಚಾರಿಕವಾದ ಚಿಕ್ಕ ತಂಡ. ದೇಶಬಿಟ್ಟು ಬಂದ ಕನ್ನಡಿಗರು ಕನ್ನಡದಲ್ಲಿ ಓದುವುದು ಮತ್ತು ಬರೆಯುವುದು ತುಂಬ ಕಡಿಮೆ ಎಂದರೆ ಅತಿಶಯೋಕ್ತಿ ಅಲ್ಲವೇ ಅಲ್ಲ. ಅನಿವಾಸಿಯ ಮುಖ್ಯ ಕೆಲಸ ಯುಕೆಯಲ್ಲಿ ನೆಲೆಸಿರುವ ಕನ್ನಡಿಗರಿಗೆ ಕನ್ನಡದಲ್ಲಿ ಬರೆಯಲು ಮತ್ತು ಓದಲು ಹುರಿದುಂಬಿಸುವುದು. ಯುಕೆಯಲ್ಲಿ ಕನ್ನಡದಲ್ಲಿ ಬರೆಯುವವರು ಸಿಗುವುದೇ ಕಷ್ಟ. ಬರಹವನ್ನು ಓದಿ ಆದ ಮೇಲೆ ಇಂಗ್ಲೀಷಿನಲ್ಲಾದರೂ ಸರಿ, ನಾಕು ಮಾತು ಬರೆದು ಬರಹಗಾರರನ್ನು ಹುರಿದುಂಬಿಸಿ. ಬರಹದ ಬಗ್ಗೆ ತಕರಾರಿದ್ದರೆ ರಚನಾತ್ಮಕವಾಗಿ ಸಕಾರಾತ್ಮಕ ವಿಮರ್ಶೆ ಮಾಡಿ, ಸಮುದಾಯ ಪ್ರಜ್ಞೆಯಲ್ಲಿ ಚರ್ಚೆ ಆರಂಭಿಸಿ, ವೈಯಕ್ತಿಕ ಮಟ್ಟಕ್ಕಿಳಿಯದ ವಾದ ಮಾಡಿ ಎನ್ನುವುದು ನನ್ನ ಕೋರಿಕೆ, ಬಿನ್ನಹ. ನನ್ನ ನಿರ್ವಹಣೆ ಈ ವಾರಕ್ಕೆ ಮುಗಿಯುತ್ತದೆ. ನಿರ್ವಹಣೆಯಲ್ಲಿ ಲೋಪ ದೋಷಗಳಾಗಿದ್ದರೆ ಕ್ಷಮಿಸಿ. ಮುಂದಿನ ವಾರದಿಂದ `ಅನಿವಾಸಿ` ಶ್ರೀ ಮುರಳಿ ಹತ್ವಾರ್ ಸಾರಥ್ಯದಲ್ಲಿ. ಅನಿವಾಸಿ ನಿರಂತರವಾಗಿ ನಿರಾತಂಕವಾಗಿ ಮುಂದುವರೆಯಲಿ, ಎಲ್ಲರಿಗೂ ಶುಭವಾಗಲಿ – ಕೇಶವ (ನಿರ್ವಾಹಕ)

ಸುಮನ ಗಿರೀಶ್ ಮತ್ತು ಗಿರೀಶ್ ವಶಿಷ್ಠ ಅವರ ಮನೆಯಲ್ಲಿ.

ಚಕ್ರವರ್ತಿ ಸೂಲಿಬೆಲೆಯವರು ಇಂಗ್ಲೆಂಡಿಗೆ ಬರುತ್ತಿದ್ದುದು ಸ್ವಾಮಿ ವಿವೇಕಾನಂದರು ಶಿಕಾಗೋ ನಲ್ಲಿ 1893 ರಲ್ಲಿ ಭಾಷಣ ಮಾಡಿದ 125 ನೇ ವಾರ್ಷಿಕೋತ್ಸವದ ಆಚರಣೆಯ ಸಲುವಾಗಿ. ಲಂಡನ್, ಎಡಿನ್ಬರೋ, ಮ್ಯಾಂಚೆಸ್ಟರ್, ನ್ಯೂಕ್ಯಾಸಲ್ ಮತ್ತು ಕೊನೆಯದಾಗಿ ಡಾನ್ಕ್ಯಾಸ್ಟರ್ ನಗರಗಳಿಗೆ ಇವರ ಪ್ರವಾಸದ ವೇಳಾಪಟ್ಟಿ ನಿಗಧಿಯಾಗಿತ್ತು. ಆಯಾ ಊರುಗಳ  ಹಿಂದೂಗಳನ್ನು, ಉದ್ದೇಶಿಸಿ ಮಾತನಾಡಿದ್ದ ಇವರನ್ನು ಭೇಟಿ ಮಾಡಿದ್ದು ಡಾನ್ಕ್ಯಾಸ್ಟರ್ ನ ಸುಮನ ಗಿರೀಶ್ ಮತ್ತು ಗಿರೀಶ್ ವಶಿಷ್ಠ ಅವರ ಮನೆಯಲ್ಲಿ.

ಹಿಂದುತ್ವ, ಹಿಂದೂತ್ವದ ಬಗ್ಗೆ ಇಂದಿನ ಭಾರತದಲ್ಲಿ ಶುರುವಾಗಿರುವ ಸಾಮಾಜಿಕ ಗೊಂದಲ ಮತ್ತು  ಇತ್ತೀಚೆಗೆ ಹೆಚ್ಚಾಗಿರುವ ಮತ ಧರ್ಮೀಯತೆ ಯಾಕೆ ಅನ್ನುವುದನ್ನು ಇವರ ಅಂಬೋಣಗಳ ಬೆಳಕಲ್ಲಿ ಹೊಸದಾಗಿ ನೋಡಬಹುದೇನೋ ಎಂದು ಚಕ್ರವರ್ತಿ ಸೂಲಿಬೆಲೆಯಾರನ್ನು ನಾನು ಭೇಟಿ ಮಾಡಿದ್ದು ಇದೇ ಡಿಸೆಂಬರ್ ಹತ್ತನೆಯ ತಾರೀಖು. ನನ್ನಂತೆಯೇ ಇವರನ್ನು ಭೆಟ್ಟಿಮಾಡಲು ಹಲವು ಹತ್ತು ಜನರು ಆ ದಿನ ಸುಮನರ ಮನೆಯಲ್ಲಿ ಕೂಡಿದ್ದರು. ಕೆಲಸದ ದಿನವಾದರೂ ದೂರದ ಊರುಗಳಿಂದ ಬಂದಿದ್ದ ಎಲ್ಲರಿಗೂ ಇವರ ಮಾತುಗಳನ್ನು ಕೇಳುವ  ಕುತೂಹಲ ಮತ್ತು ಸಂವಾದದಲ್ಲಿ ಭಾಗವಹಿಸುವ ಹಂಬಲವಿದ್ದಂತಿತ್ತು.

ಚಕ್ರವರ್ತಿ ಸೂಲಿಬೆಲೆಯವರು ಹುಟ್ಟಿದ್ದು 1980, ಹೊನ್ನಾವರ ತಾಲೂಕಿನಲ್ಲಿ.ಬೆಂಗಳೂರಿನ ಹೊಸಕೋಟೆಯ ಸಮೀಪದ ಸೂಲಿಬೆಲೆಯಲ್ಲಿ ಬೆಳೆದವರು. ಹಾಗಾಗಿ ಇವರ ಹೆಸರಿಗೆ  ಆ ಊರಿನ ನಂಟಿದೆ. ಭಟ್ಕಳದ ಅಂಜುಮಾನ್ ಎಂಜಿನಿಯರಿಂಗ್ ಕಾಲೇಜಿನಿಂದ ಕಂಪ್ಯೂಟರ್ ಸೈನ್ಸ್ ಪದವೀಧರರಾದ ಇವರು ದುಡಿಮೆಗಾಗಿ ಕೆಲಸ ಮಾಡಿದ್ದು ಕೇವಲ ಮೂರು ದಿನ!

ಚರ್ಕವರ್ತಿ ಸೂಲಿಬೆಲೆ

ಸೂಲಿಬೆಲೆಯ ವಿವೇಕಾನಂದ ಹೈಸ್ಕೂಲಿನಲ್ಲಿ ಓದುವಾಗಲೇ ಉತ್ತಮ ಭಾಷಣಕಾರ ಎಂದು ಹೆಸರು ಪಡೆದಿದ್ದರು. ಇವರ ಮೇಲೆ ಹಲವರು ಹಿರಿಯರು ಪ್ರಭಾವ ಬೀರಿದರೆಂದು ಅವರು ಹೇಳಿಕೊಂಡಿದ್ದಾರೆ. ವಿದ್ಯಾನಂದ ಶೆಣೈ, ರಾಜೀವ ದೀಕ್ಷಿತರು ಮತ್ತು ಸ್ವಾತ್ಮಾನಂದ ಸ್ವಾಮೀಜಿ ಹೀಗೆ ಹಲವರನ್ನು ನೆನೆದಿರುವ ಚಕ್ರವರ್ತಿಯವರು  ಮುಖ್ಯವಾಗಿ ಸ್ವಾಮಿ ವಿವೇಕಾನಂದರ ಧ್ಯೇಯ ಮತ್ತು ಬದುಕಿನಿಂದ ಪ್ರಭಾವಿತರಾದವರು. ಕೆಲಸ , ಮದುವೆ ಇವನ್ನೆಲ್ಲ ನಿರಾಕರಿಸಿ ಹಣದ ಹಿಂದೆ ಹೋಗದೆ ಜನಜಾಗೃತಿ, ವಿವೇಕಾನಂದರ ಧ್ಯೇಯಗಳ ಪ್ರಚಾರದಲ್ಲಿ ತೊಡಗಿಕೊಂಡು ಸಮಾಜ ಸುಧಾರಣೆಯ ಕೆಲಸಗಳಲ್ಲಿ ತೊಡಗಿಕೊಂಡ ಇವರ ಬದುಕಿನ ದಿನವೊಂದರಲ್ಲಿ ಓದು, ಬರಹ, ಯೋಗ, ಧ್ಯಾನ, ಸುತ್ತಾಟ, ಜನ ಕಾಯಕ, ಮಾಧ್ಯಮಗಳ ಮೂಲಕ ಜನಜಾಗೃತಿ, ಭಾಷಣ ಎಲ್ಲವೂ  ಹಾಸು ಹೊಕ್ಕಾಗಿವೆ. ಮೊದ ಮೊದಲು ಬದುಕಿನಲ್ಲಿ ಎಲ್ಲರಂತಿರದೆ ಈ ಬಗೆಯ ತಿರುವು ತೆಗೆದುಕೊಂಡ ಮಗನ ಬಗ್ಗೆ ಎಲ್ಲ ತಂದೆ ತಾಯಿಯರಂತೆಯೇ ಕಳವಳ ವ್ಯಕ್ತಪಡಿಸಿದ ಇವರ ಪೋಷಕರು ಇದೀಗ ತಮ್ಮ ಮನೆಯನ್ನೇ ಒಂದು ಮಂದಿರವನ್ನಾಗಿ ಮಾಡಿ, ಧ್ಯಾನ, ಯೋಗಗಳಿಗೆ, ಉಪಚಾರಗಳಿಗೆ ಕೇಂದ್ರ ಮಾಡಿಕೊಂಡು ಮಗನ ಚಟುವಟಿಕೆಗಳಲ್ಲಿ ತಾವೂ ತೊಡಗಿಸಿಕೊಂಡು ಸಮಾಜದ ಏಕತಾನತೆಯಿಂದ ಹೊರಬಂದಿದ್ದಾರೆ. ಮಾತೃ ಭಾಷೆ ಕೊಂಕಣಿಯಾದರೂ ಕನ್ನಡ ಮಾಧ್ಯಮದಲ್ಲಿ ಓದಿದ ಇವರು ಕನ್ನಡ ಮತ್ತು ಹಿಂದಿ ಬಾಷೆಯಲ್ಲಿ ಹಲವು ಹತ್ತು ಪುಸ್ತಕಗಳನ್ನು ಬರೆದಿದ್ದಾರೆ. ಹಲವಾರು ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಲೇ ಬಂದಿದ್ದಾರೆ. ದೂರದರ್ಶನದ ಹಲವು ಚಾನೆಲ್ ಗಳಿಗೆ, ರೇಡಿಯೋಗಳಿಗೆ  ಕಾರ್ಯಕ್ರಮ ನೀಡಿರುವ ಇವರು ಹಲವಾರು ದೇಶಗಳಿಗೆ ಹೋಗಿ ಮಾತಾಡಿದ್ದಾರೆ. ಭಾರತದ ಸೈನಿಕರಲ್ಲಿ ರಾಷ್ಟ್ರಪ್ರೇಮ, ಅತ್ಮಾಭಿಮಾನ ಮೂಡಿಸುವ ಕಾರ್ಯಗಳನ್ನು , ಭಾಷಣಗಳನ್ನು ಮಾಡಿರುವ ಇವರು ನೊಂದ ಹಲವರು ಸೈನಿಕರ ಕುಟುಂಬಗಳಿಗೆ ದಾನಿಗಳ ನಂಟು ಕೂಡಿಸಿಕೊಟ್ಟಿದ್ದಾರೆ. ಕಾರ್ಯಕ್ರಮಗಳಲ್ಲಿ ಸೈನಿಕರಿಗೆ ಮೊದಲು ಗೌರವ ಅರ್ಪಿಸುವ ಹೊಸ ಸಂಪ್ರದಾಯಕ್ಕೆ ಕರೆಕೊಟ್ಟು ಕೆಲಸ ಮಾಡಿದ್ದಾರೆ. ಸೈನ್ಯದಿಂದ ಹಲವು ವರ್ಷಗಳ ಹಿಂದೆಯೇ ಇಚ್ಛಾ ಪೂರ್ಣ ನಿವೃತ್ತಿ ಪಡೆದಿರುವ ನನ್ನ ಭಾವ ಇತ್ತೀಚೆಗಿನ ವರ್ಷಗಳಲ್ಲಿ ಸ್ವತಂತ್ರ ದಿನಾಚರಣೆ ಬಂದಿತೆಂದರೆ ಹತ್ತು ಹಲವು ಕಾರ್ಯ ಕ್ರಮಗಳಿಗೆ ವಿಶೇಷ ಅಹ್ವಾನಿತರಾಗಿ ಹೋಗಿ ಗೌರವ ಸ್ವೀಕರಿಸುವ ಪರಿಪಾಟವನ್ನು, ಶಾಲೆಗಳಲ್ಲಿ ಭಾಷಣ ಮಾಡುವುದನ್ನು ನೋಡುತ್ತಿರುವ ನನಗೆ ಇದನ್ನು ನಂಬುವುದು ಕಷ್ಟವೇನಾಗಲಿಲ್ಲ.

ಚಕ್ರವರ್ತಿ  ತಮ್ಮದೇ ಯುವಕರ ಪಡೆ  ’ಯುವ ಬ್ರಿಗೇಡ್’ ಮತ್ತು ಯುವತಿಯರಿಗಾಗಿ  ’ಸೋದರಿ ನಿವೇದಿತ ಪ್ರತಿಷ್ಟಾನ ’ವನ್ನು ಶುರುಮಾಡಿ ಸಾವಿರಾರು ತರುಣರಿಗೆ ತಮ್ಮ ದೇಶದ ಬಗ್ಗೆ ಮೊದಲು ಅಭಿಮಾನ ಬೆಳೆಸಿಕೊಳ್ಳಲು ಕರೆಕೊಟ್ಟಿದ್ದಾರೆ. ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.

ಸಂದರ್ಶನದ ಚಿತ್ರ

ಇವೆಲ್ಲ ಕಾರಣಗಳಿಗೆ ಚಕ್ರವರ್ತಿ ಸೂಲಿಬೆಲೆ ಇವತ್ತು ಭಾಷಣಕಾರ, ಕಾರ್ಯಕರ್ತ ಮತ್ತು ಬರಹಗಾರರೆಂಬ ನಾಮ ವಿಶೇಷಣಗಳಿಂದ ಗುರುತಿಸಲ್ಪಡುತ್ತಾರೆ.  ಅತ್ತ ಸಂಪೂರ್ಣ ಸನ್ಯಾಸಿಯೂ ಅಲ್ಲದ, ಇತ್ತ ರಾಜಕಾರಣಿಯೂ ಅಲ್ಲದ, ತಾನೇನು ವಿದ್ವಾಂಸನಲ್ಲ ಎನ್ನುವ ಇವರೊಡನೆ ಸಡೆಸಿದ ಸಂದರ್ಶನದ ಸಾರಾಂಶವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

1) ಸ್ವಾಮಿ ವಿವೇಕಾನಂದರ ಭಾಷಣದ  125 ನೇ ವಾರ್ಷಿಕೋತ್ಸವದ ಸಲುವಾಗಿ ಯುಕೆಯ ಹಲವು ಜಾಗಗಳಿಗೆ ಭೇಟಿಕೊಟ್ಟು ವಿವೇಕಾನಂದರ  ಅಧ್ಯಾತ್ಮಿಕ ನಿಲುವುಗಳ ಬಗ್ಗೆ ಹಿಂದೂತ್ವದ ಬಗ್ಗೆ ಅರಿವು ಮೂಡಿಸೋ ಕೆಲಸ ಮಾಡಿದ್ದೀರ. ಇದು  ನಿಜಕ್ಕೂ ಅಭಿನಂದನೀಯ.ಈ ರೀತಿಯ ಒಂದು ಯಾತ್ರೆಯ ಅಗತ್ಯ ಇದೆ ಅಂತ ನಿಮಗೆ ಯಾಕೆ ಅನ್ನಿಸ್ತು? ಹಿನ್ನೆಲೆ ಏನು?

125 ವರ್ಷಗಳ ಹಿಂದೆ ವಿವೇಕಾನಂದರು ಶಿಕಾಗೋದಲ್ಲಿ  ಭಾಷಣ ಮಾಡಿ ಜಗತ್ತಿನ ಜನರು ಭಾರತವನ್ನು ನೋಡುವ ದೃಷಿಕೋನವನ್ನು ಬದಲು ಮಡಿದ್ರು. ಭಾತೀಯರು ಭಾರತವನ್ನು ನೋಡುವ ದೃಷ್ತಿಕೋನವನ್ನು ಬದಲಾಯಿಸಿದರು, ಉಳಿದೆಲ್ಲ ಧರ್ಮಗಳು ಹಿಂದೂ ಧರ್ಮವನ್ನು ನೊಡುವ ದೃಷ್ಟಿಕೋನವನ್ನು ಬದಲಾಯಿಸಿದ್ರು.ಹಿಂದೂಗಳೂ ತಮ್ಮನ್ನು ತಾವು ನೋಡಿಕೊಳ್ಳುವ ಬಗೆಯನ್ನೂ ಬದಲಾಯಿಸಿದ್ರು. ಇಂತಹ ಒಂದು ಲ್ಯಾಂಡ್ಮಾರ್ಕ್ ಭಾಷಣವನ್ನು ಸ್ಮರಿಸಿಕೊಳ್ಳುವ ಉದ್ದೇಶ . ಮತ್ತೆ ಭಾರತ  ಇವತ್ತು ಮತ್ತೆ ಪ್ರವರ್ಧಮಾನಕ್ಕೆ ಬರ್ತಾ ಇರೋ ಸಮಯದಲ್ಲಿ ನಾವೆಲ್ಲ ಇಂತಹ ಸಂಗತಿಗಳಿಂದ ಮತ್ತೆ ಪ್ರೇರಣೆ ಪಡೀಬೇಕು ಅಂತ ಕರ್ನಾಟಕದಲ್ಲಿ ಈ ಸಂಧರ್ಭಕ್ಕೆ ಒತ್ತು ಕೊಟ್ಟಿದ್ವಿ. ಜೊತೆಗೆ ಯು.ಕೆ.ಯವರು ಇದೇ ಕೆಲಸಕ್ಕೆ ಇಲ್ಲಿಗೆ ಬಂದು ಮಾತಾಡ್ಬೇಕು ಅಂದಾಗ ಸಹಜವಾಗೇ ಒಪ್ಕೊಂಡೆ . ಜೊತೆಗೆ ಪ್ರಪಂಚದ ಎಲ್ಲ ಹಿಂದೂ ಧರ್ಮೀಯರನ್ನು ಒಂದುಗೂಡಿಸಿ ರಾಷ್ಟ್ರದ ಕುರಿತಂತೆ ಪ್ರೇರಣೆ ಮಾಡೋ ಅವಕಾಶವನ್ನು ಬಿಟ್ಟುಕೊಡಬಾರದು ಅಂತ ಬಂದೆ. ಇದೇ ಸಮಯಕ್ಕೆ ಇಲ್ಲಿ

( KAHO ) ಕರುನಾಡ ಹಿಂದೂಗಳ ಅನಿವಾಸೀ ಒಕ್ಕೂಟ ಆರಂಭವಾಯ್ತು. ಅವರು ನನ್ನನ್ನು ಯುಕೆಗೆ ಮುಖ್ಯವಾಗಿ  ವಿವೇಕಾನಂದರ ಮತ್ತು ಹಿಂದೂತ್ವದ ಬಗ್ಗೆ ಮಾತಾಡಲು ಕರೆಸಿಕೊಂಡವರು. ಹಾಗಾಗಿ ಈ ಅವಕಾಶ ನನಗೆ ಸಿಕ್ತು.

2) ನೀವು ಡಿಸೆಂಬರ್ 1 ನೇ ತಾರೀಖಿನಿಂದ ಲಂಡನ್, ಎಡಿನ್ಬರೋ,ಮ್ಯಾಂಚೆಸ್ಟರ್ ಮತ್ತು ನ್ಯೂಕ್ಯಾಸೆಲ್ ಮತ್ತು ಡಾನ್ಕ್ಯಾಸ್ಟರ್ ನಗರಗಳಿಗೆ  ಭೇಟಿಕೊಟ್ಟಿದ್ದೀರಿ ಈ ಹತ್ತು ದಿನಗಳ ಅನುಭವದಲ್ಲಿ ವಿದೇಶದ ಹಿಂದೂ ಜನರಲ್ಲಿ ಈ ಬಗ್ಗೆ ಇರೋ ಜಾಗೃತಿಯ ಬಗ್ಗೆ ನಿಮಗೆ ಏನನ್ನಿಸ್ತು?

ಬರೀ ಇಂಗ್ಲೆಂಡ್ ಮಾತ್ರ ಅಲ್ಲ , ಜಗತ್ತಿನ ಬಹುಭಾಗಗಳಲ್ಲಿ ತಿರುಗಿ ನೋಡ್ದಾಗ್ಲು ಅನ್ನಿಸಿದ್ದು ಭಾರತಿಯರಿಗೆ ಭಾರತವನ್ನು ಬಿಟ್ಟು ಹೋದಮೇಲೆ ಭಾರತದ ಮೇಲೆ ಪ್ರೀತಿ ಜಾಸ್ತಿ ಆಗುತ್ತೆ ಅಂತ. ಅದ್ರಲ್ಲೂ ತಾವು ಏನನ್ನು ಬಾಲ್ಯದಲ್ಲಿ ಅನುಭವಿಸಿದ್ವೋ ಅದು ತಮ್ಮ ಮಕ್ಕಳಿಗೆ ಎಲ್ಲಿ ಸಿಗಲ್ವೋ ಅನ್ನೋ ಟೆನ್ಶನ್ ಇಲ್ಲಿನ ಜನರಿಗೆ ಶುರುವಾಗುತ್ತೆ. ಅದ್ರಲ್ಲೂ ಹಿಂದೂಗಳಿಗೆ. ಹಾಗಾಗಿ  ಅವರು ತಮ್ಮ ಮಕ್ಕಳಿಗೆ ಹಿಂದೂ ಮೌಲ್ಯಗಳನ್ನು ಕೊಡೋ ಪ್ರಯತ್ನ, ಧರ್ಮದ ಸೂಕ್ಷಗಳನ್ನು, ಭಾರತೀಯ ಸಂಸ್ಕೃತಿಯನ್ನು ಕೊಡೋ ಪ್ರಯತ್ನ ಮಾಡ್ತಾರೆ , ಇದನು ನೋಡೋಕೆ ತುಂಬ ಸಂತೋಷ ಆಗುತ್ತೆ. ಇಂತಹ ’ಉಳಿಸೋ’ ಮತ್ತು ಮುಂದಿನ ಪೀಳಿಗೆಗಳಿಗೆ ’ಕಲಿಸೋ ’ ಪ್ರಯತ್ನ ಮಾಡೋ ಎಲ್ಲರಿಗೂ ನನ್ನ ಅಭಿನಂದನೆಗಳನ್ನು ಸಲ್ಲಿಸಬೇಕು ಅಂತ ನಾನು ಇಚ್ಛೆಪಡ್ತೇನೆ.

3) 1893 ರಲ್ಲಿ ಸ್ವಾಮಿ ವಿವೇಕಾನಂದರು ಶಿಕಾಗೋದಲ್ಲಿ ಹಿಂದೂ ಧರ್ಮದ ವೈಶಾಲ್ಯತೆಯ ಬಗ್ಗೆ ಮತ್ತು ವಿಶಿಷ್ಟತೆಯ ಬಗ್ಗೆ  ಮಾತಾಡಿ ಪ್ರಖ್ಯಾತರಾದ್ರು. ನಂತರದ 125 ವರ್ಷಗಳಲ್ಲಿ ಹಲವು ಸಮಾಜ ಸುಧಾರಕರು, ಧರ್ಮ ಸಂಸ್ಥೆಗಳು, ಮಠ-ಮಂದಿರಗಳು ಶಾಲಾ-ಕಾಲೇಜುಗಳು ,ಸರ್ಕಾರ ಎಲ್ಲರೂ ಹಿಂದೂತ್ವದ ಬಗ್ಗೆ ಜಾ ಗೃತಿ ಮೂಡಿಸ್ತಲೇ ಬಂದಿದ್ದಾರೆ. ಆದ್ರೆ ಹಿಂದೂತ್ವದ ಬಗ್ಗೆ ಮಾತಾಡಲು ಹಿಂದೂಗಳಲ್ಲಿ ಹಿಂಜರಿಕೆ ಇದೆ. ಈ ಬಗ್ಗೆ ಅರಿವು ಕಡಿಮೆ ಇದೆ. ಇದು ಯಾಕೆ ಅಂತ ನಿಮ್ಮ ಅಭಿಪ್ರಾಯ?

ಮೊದಲಿಗೆ ಹಿಂದೂ ಧರ್ಮ ಮಾತಾಡೋ ಅಂತದ್ದಲ್ಲ ಆದ್ರೆ ಬದುಕೋದು.  ಪುಸ್ತಕಗಳನ್ನು ಓದಿ ಬರುವಂತದ್ದೂ ಅಲ್ಲ. ಹಿಂದೂಗಳಿಗೆ ಕೂಗಾಡಿ ಕೆಲಸ ಮಾಡೋ ಅಭ್ಯಾಸ ಇಲ್ಲ.  ಹಿಂದೂ ಧರ್ಮ ಜಗತ್ತಿನ ಇತರೆ ಧರ್ಮಗಳಂತೆ ಪುಸ್ತಕ ಓದೋದ್ರಿಂದ, ಕೆಲವು ವ್ಯಕ್ತಿಗಳನ್ನು ಅನುಸರಿಸೋದ್ರಿಂದ ಬರುವಂತದ್ದಲ್ಲ. ಸುಮ್ಮನಿದ್ದಾರೆ ಅಂದ ಮಾತ್ರಕ್ಕೆ ಹಿಂದೂಗಳಿಗೆ ಧರ್ಮದ ಬಗ್ಗೆ ಕಾಳಜಿ ಇಲ್ಲ ಅಂತಲೂ ಅಲ್ಲ. ಕಾಲಾನುಕ್ರಮದಲ್ಲಿ ಹಿಂದೂ ಧರ್ಮ ವಿಶ್ವ ವ್ಯಾಪ್ತಿಯಾಗ್ಬೇಕು ಅಂದಾಗ ಅದು ತಂತಾನೇ ಸ್ಪೋಟಗುಳ್ಳುತ್ತದೆ ಅಂತ ನನ್ನ ನಂಬಿಕೆ.

4)  ನಾವೆಲ್ಲ ಬೆಳೆತಾ, ಒದ್ತಾ  ಇದ್ದ ಟೈಂ ನಲ್ಲಿ , ಹಿಂದೂ , ಮುಸ್ಲಿಮ, ಕ್ರಿಶ್ಚಿಯನ್ , ಮೇಲು , ಕೀಳು ಎಲ್ಲರೂ ಒಂದೇ ತರಗತೀಲಿ ಕೂರ್ತಾ ಇದ್ವಿ. ಹಾಸ್ಟೆಲ್ ಗಳಲ್ಲಿ ಒಂದೇ ಕೋಣೆನಲ್ಲಿ ಬದುಕಿ ಜೀವಿಸಿದವರು. ಆದ್ರೆ ನಮ್ಮಲ್ಲಿ ಯಾವ ಘರ್ಷಣೆಯೂ ಇರ್ಲಿಲ್ಲ, ಯಾರೊಬ್ಬರೂ ಅತಿಧರ್ಮೀಯತೆಯನ್ನು ಪಾಲಿಸ್ತಾ ಇರದೇ ಇದ್ದದ್ದು ಮತ್ತು  ಮುಕ್ತವಾಗಿ ಯೋಚನೆ ಮಾಡ್ತಾ ಇದ್ದುದ್ದು ಕಾರಣ. ಪ್ರತಿಯೊಬ್ಬ ಸಮಾಜ ಸುಧಾರಕರೂ ಚಿಂತಕರೂ ಇದನ್ನೇ ಹೇಳಿರೋದು. ಆದ್ರೆ ಇತ್ತೀಚೆಗಿನ ವರ್ಷಗಳಲ್ಲಿ ಜನರಿಗೆ ಈ ಬಗ್ಗೆ ಬಹಳ ಗೊಂದಲ ಇದ್ದಂತೆ ಇದೆ.ಯಾಕೆ ಹೀಗೆ?

ಮೊದಲನೇದಾಗಿ ಧರ್ಮ  ರಾಜಕೀಯ ವಿಚಾರ ಆಗೋದಿಕ್ಕೆ ಶುರುವಾದಾಗ್ಲಿಂದ ಹೀಗಾಯ್ತು ಅಂತ. ಕ್ರಿಸ್ಚಿಯನ್ನರಿಗೆ  ಜಗತ್ತೆಲ್ಲ ತಾನೇ ಆಗಬೇಕೇಂತ ಆಸೆ ಇದ್ದದ್ದು ಎಲ್ಲರಿಗೂ ಗೊತ್ತಿರೋ ವಿಚಾರ. ಕ್ರಿಸ್ಚಿಯನ್ನರು ಮತ್ತು ಮುಸ್ಲಿಮರಿಂದಲೇ ಈ ಹೋರಾಟ ಶುರುವಾದದ್ದು. ಇದು ಬಹಳ ಕೆಟ್ಟದ್ದು. ಸೃಷ್ಟಿ ಎಷ್ಟು ವೈವಿಧ್ಯಪೂರ್ಣವಾಗಿರುತ್ತೋ ಹಾಗೇ ಜಗತ್ತು! ಎಲ್ಲರೂ ತಮ್ಮ ದೇವರ ಅನುಯಾಯಿಗಳೇ ಆಗಬೇಕೆಂಬುದೇ ಕೆಟ್ಟ ವಿಚಾರ. ಹಿಂದೂಗಳು ಹೇಳೋದು ಯಾರು ಯಾವ ಧರ್ಮವನ್ನು ಅನುಸರಿಸ್ತಾರೋ ಅದೇ ಧರ್ಮದಲ್ಲಿ ನೀನು ಒಳ್ಳೆಯ ವ್ಯಕ್ತಿಯಾಗಿರು ಅಂತಲೇ. ಹಾಗೆಯೇ ನನ್ನನ್ನೂ ಹಿಂದೂವಾಗಿರಲು ಬಿಡು ಅನ್ನೋದು. ಆದ್ರೆ ಹೆಚ್ಚು ಜನರನ್ನು ಮತಾಂತರಿಸಿದರೆ ತಮ್ಮ ಸಾಮ್ರಾಜ್ಯ ವಿಸ್ತಾರ ಆಗುತ್ತೆ ಅನ್ನೋ ಅಜೆಂಡ ಮತ್ತು ರಾಜಕೀಯಗಳಿಂದ  ಮತ ಧರ್ಮ ಶುರುವಾದ್ದು. ಯಾರು ಇದನ್ನು ಮಾಡ್ತಾರೋ ಅವರು ಬೇರೆ ನಿಲ್ತಾರೆ. ಮಿಕ್ಕವರನ್ನು ಪ್ರತ್ಯೇಕರ ತರ ನೋಡೋಕೆ ಶುರು ಮಾಡ್ತಾರೆ. ಇದೇ ಸಮಸ್ಯೆ ಈಗ ಜಾಸ್ತಿಯಾಗ್ತಿದೆ. ಜಗತ್ತಿನ ಮೂಲೆ ಮೂಲೆನಲ್ಲೂ ಕಂಡು ಬರ್ತಾ ಇದೆ. ಸಂತೋಷದ ವಿಚಾರ ಅಂದ್ರೆ ಹಿಂದೂ ಬಹು ಸಂಖ್ಯಾತರಿರೋ ಭಾರತದಲ್ಲಿ , ಬೇರೆ ಮತಗಳನ್ನು ಸ್ವೀಕರಿಸಿರೋ ಜನ ಕೂಡ ಭಯೋತ್ಪಾದಕ ಐಸಿಸ್ ನಂತವಕ್ಕೆ ಹೆಚ್ಚು ಸೇರಲ್ಲ. ನನಗನಿಸುತ್ತೆ ಒಂದು ದಿನ ಭಾರತದ ಮುಸ್ಲಿಮರು, ಕ್ರಿಶ್ಚಿಯನ್ನರು ಜಗತ್ತಿಗೇ ಮಾದರಿಯಾಗಿ ನಿಲ್ಲಬಲ್ಲಂತವರಾಗ್ತಾರೆ ಅಂತ.

5)  ಹಿಂದೂತ್ವ ದಲ್ಲಿ ಯಾವುದಾದ್ರೂ ಕೆಟ್ಟ ವಿಚಾರಗಳಿವೆಯಾ? ಅಂದ್ರೆ ಮೂಲಭೂತವಾಗಿ ಅಥವಾ ಆಚರಣೆಯಲ್ಲಿ?

ಗಂಗಾನದಿ ಗಂಗೋತ್ರಿಯಲ್ಲಿ ಹುಟ್ಟಿ, ಕಲ್ಕತ್ತಾದ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತೆ. ಗಂಗಾನದಿಯಲ್ಲಿ ಕೊಳಕಿಲ್ವಾ ಅಂದ್ರೆ ಖಂಡಿತ  ಇದೆ. ಅದನ್ನು ನಾವೇ ತುಂಬಿದ್ದೇವೆ, ಮೂಲ ಶುದ್ದವಾಗೇ ಇದೆ. ಹಾಗೇ ಹಿಂದೂ ಧರ್ಮದ ಚಿಂತನಾ ಪರಂಪರೆ ಹತ್ತಾರು ಸಾವಿರ ವರ್ಷಗಳಿಂದ ಬಂದಿರುವಂತದ್ದು. ಕಾಲದ ಗಣನೆಯನ್ನೂ ಮೀರಿದ ಸನಾತನ ಧರ್ಮದ ಪರಿಕಲ್ಪನೆ  ಹಿಂದೂಧರ್ಮದಲ್ಲಿ ಇದೆ. ಹಾಗಾಗಿ ಮೂಲದಲ್ಲಿ ಕೊಳಕಿಲ್ಲ. ಆದ್ರೆ ಆಚರಣೆಗಳಲ್ಲಿ ಕೊಳಕನ್ನು ನಾವೇ ತುಂಬಿದ್ದೀವಿ. ಆಗಾಗ ಮಹಾಪುರುರುಷರು ಹುಟ್ಟಿ ಬರ್ತಾರೆ ಮತ್ತು ಈ ಕೊಳಕನ್ನು ಕ್ಲೀನ್ ಮಾಡ್ತಾರೆ. ಬುದ್ಧ, ಶಂಕರ, ಮಾಧ್ವರು , ರಾಮಾನುಜರು ಹಾ ಗೆ ಅನೇಕ ದಾಸರು, ಶರಣರು ಬಂದ್ರು. ಉತ್ತರಭಾರತಕ್ಕೆ ಹೋದ್ರೆ ಚೈತನ್ಯಾದಿಗಳು ಬಂದ್ರು. ಇವರೆಲ್ಲ ನೀರನ್ನು ಕುಡಿಯಕ್ಕೆ ಯೋಗ್ಯ ಮಾಡಿದಂತೆ ಧರ್ಮವನ್ನು ಆಚರಣೆಗೆ ಯೋಗ್ಯವನ್ನಾಗಿ  ಮಾಡ್ತಲೇ ಬಂದಿದ್ದಾರೆ. ಇಂತಹ ಪ್ರಯತ್ನಗಳು ಈಗ್ಲೂ ನಡೀತಲೇ ಇವೆ ಅಂತ ನನಗನಿಸುತ್ತೆ.

ಉದಾಹರಣೆಗೆ, ಜಾತಿ ಕೊಳಕಲ್ಲ ಅದ್ರೆ ಜಾತೀಯತೆ ಕೊಳಕು ಮತ್ತು ಅದರ ಬಗೆಯ ದುರಭಿಮಾನ ಹೊಂದಿ ಇನ್ನೊಬ್ಬನ ಜಾತಿ ಕೆಟ್ಟದ್ದು ಅನ್ನೋದು ಇವೆಲ್ಲ ಅತಿ ಕೆಟ್ಟದ್ದು ಅಂತ ನನಗನಿಸುತ್ತೆ. ಸ್ತ್ರೀ ಯನ್ನು ಅತ್ಯಂತ ತುಚ್ಛವಾಗಿ ಕಾಣೋ ಅಂತ  ಇತ್ತೀಚೆಗಿನ ಆಕ್ರಮಣಕಾರೀ ಕೊಳಕುಗಳು ನಮ್ಮಲ್ಲಿ ಹಲವಾರಿವೆ ಅಂತ ನನಗನಿಸುತ್ತೆ.

6) ಯಾವುದು ನಿಜವಾದ ಹಿಂದುತ್ವ, ಹಿಂದೂಯಿಸಂ ಮತ್ತು ಹಿಂದೂ ಧರ್ಮ?

ಸ್ಪಿರುಚಿಯಾಲಿಟಿ ನನಗೆ ಅತ್ಯಂತ ಹತ್ತಿರವಾದ ಸಂಗತಿ. ಆದ್ಯಾತ್ಮಕ್ಕೆ ಸಂಬಂಧ ಪಟ್ಟಂತದ್ದು. ಯಾವುದಕ್ಕೆ ಅತ್ಮ ಸಾಕ್ಷಾತ್ಕಾರದ ಕಲ್ಪನೆಯ ಕಡೆಗೆ ಕೊಡೊಯ್ಯಬಲ್ಲ  ಶಕ್ತಿಯಿದೆಯೋ ಅದು ನನ್ನ ಹಿಂದೂ ಧರ್ಮ, ನನ್ನೊಳಗಿನ ದೇವರನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲಿಕ್ಕೆ ಅವಕಾಶ ಮಾಡಿಕೊಡುವ ಧರ್ಮ ನನ್ನ ಪಾಲಿನ ಶ್ರೇಷ್ಠ ಹಿಂದೂ ಧರ್ಮ, ಜೊತೆಗೆ ಎಲ್ಲ  ಪಥಗಳನ್ನು ಸಮಾನವಾಗಿ ನೋಡಬಲ್ಲ ತಾತ್ವಿಕ ಚಿಂತನೆಯನ್ನು ನನಗೆ ಕೊಡೋದು ನನ್ನ ಧರ್ಮ. ಹೊರಗಿನಿಂದ ಭಗವಂತನನ್ನು ಸೇರಲು ಭಿನ್ನ ಭಿನ್ನ ಮಾರ್ಗಗಳನ್ನು ಕಲ್ಪಿಸಿ, ನನ್ನೊಳಗಿನ ಭಗವಂತನನ್ನು ಸಾಕ್ಷಾತ್ಕರಿಕೊಳ್ಳಲು ಅನುವು ಮಾಡಿಕೊಡುವುದು ನನ್ನ ಧರ್ಮ. ಇದಕ್ಕಿಂತ ಹೆಚ್ಚಿನದನ್ನು ಹೇಳುವ ಧರ್ಮ ನನ್ನದಲ್ಲ. ರಾಷ್ಟ್ರೀಯತೆಯೇ ಹಿಂದೂ ಅಂತಲೂ ನನ್ನ ಭಾವನೆ.

7) ಹಿಂದೂ ಧರ್ಮಕ್ಕೆ ಪವಿತ್ರ ಗ್ರಂಥ ಇಲ್ಲ. ಒಬ್ಬನೇ ದೇವರಿಲ್ಲ. ಹಿಂದೂತ್ವ ಅನ್ನೋದು  ಜೀವನ ವಿಧಾನ ಅನ್ನೋದಾದ್ರೆ –(ಸುಪ್ರೀಂ ಕೋರ್ಟ್ ಪ್ರಕಾರ) ಅದನ್ನು ಪ್ರತಿಯೊಬ್ಬರೂ ಒಂದೇ ರೀತಿ ಪಾಲೀಸೋದಾಗ್ಲೀ ಅಥವಾ ಮಕ್ಕಳಿಗೆ ಹೇಳಿಕೊಡೋದಾಗ್ಲಿ ಹೇಗೆ ಸಾದ್ಯ?

ಶುರುವಾಗ್ತಾ ಆಚರಣೆಯಿಂದಲೇ ಶುರುವಾಗುತ್ತೆ. ಬ್ರಿಟನ್ನಿನಲ್ಲಿ ಮಕ್ಕಳಿಗೆ ಎ ಅಂತ  ಹೇಳಿಕೊಡುವಾಗ ಫೋನೆಟಿಕ್ಸ್ ಮೂಲಕವೇ ಹೇಳಿಕೊಡ್ತಾರೆ. ಹಾಗೇ ಆರಂಭದಲ್ಲಿ ಒಂದಷ್ಟು ಶ್ಲೋಕಗಳನ್ನು, ಪೂಜೆಯನ್ನು, ಹಬ್ಬವನ್ನು ಆಚರಿಸುವುದನ್ನು ನಾವು ಹೇಳಿಕೊಡ್ತೀವಿ. ಇದು ಮೊದಲನೇ ಹೆಜ್ಜೆ. ವಿಸ್ತಾರವಾದ ಎಲ್ಲವೂ ಭಗವಂತನನ್ನು ಸೇರುವ ಪರಿಕಲ್ಪನೆಯಲ್ಲಿ ಕಾಣಲು ಜಾತಿ, ಮತ, ಪಂಥಗಳನ್ನುಅಪ್ಪಿಕೊಳ್ಳುವಂತ ಚಿಂತನೆಯನ್ನು ಮಕ್ಕಳಿಗೆ ಕೊಡೋದು ಕೂಡ ಹಿಂದೂತ್ವದ ತಳಹದಿ. ಮೂರನೆಯದು ಮಕ್ಕಳಿಗೆ ತಮ್ಮನ್ನು ತಾವು ಅರ್ಥ ಮಡಿಕೊಳ್ಳಲು ಸದಾಕಾಲ ಗೈಡನ್ಸ್ ಮಾಡೋದು. ಇದು ಹಿಂದುತ್ವ.

ಅತಿಧರ್ಮೀಯತೆ  ಅಂತ ಯಾವುದೂ ಇಲ್ಲ. ಮತಾಂಧತೆ ಮಾತ್ರ ಇದೆ. ಧರ್ಮ ಮತಕ್ಕಿಂತ ಬಹಳ ಭಿನ್ನ. ಒಬ್ಬ ತಾಯಿ  ಮಗನನು ಅತಿಯಾಗಿ ಪ್ರೀತಿಸಿದ್ರೆ ಆಕೆಯದು ಅತಿ ವ್ಯಾತ್ಸಲ್ಯ ಅಂತೇನೂ ಇಲ್ಲ. ಅತಿ ಅಂತ ಸೇರಿಸಕ್ಕೆ  ಬರಲ್ಲ. ಆದ್ರೆ ತನ್ನದು ಮಾತ್ರವೇ ದೊಡ್ಡದು ಅನ್ನೋದು ತಪ್ಪು.

8)  ಇತ್ತೀಚೆಗೆ  ಮತ ಧರ್ಮ ರಾಜಕಾರಣ ಶುರುವಾಗಿದೆ. ವೋಟಿಗಾಗಿ ನಡೆಯುವಂತದ್ದು. ಸಾಮಾಜಿಕವಾಗಿ ಜನರು ಇದನ್ನು ಒಪ್ಪೋದಿಲ್ಲ. ಇಂತಹ ರಾಜಕೀಯ ಕಪಿ ಮುಷ್ಟಿಯಲ್ಲಿ ಸಿಲುಕಿದವರು ಹೇಗೆ  ಪರಾಗಬಹುದು?

ಇಂತವರ ಹಿಡಿತಕ್ಕೆ ಸಿಕ್ಕಿಕೊಳ್ಳುವುದೇ ತಪ್ಪು. ನಿರಾಕರಿಸಿ. ಸಿಕ್ಕಿಹಾಕೊಂಡಲ್ಲಿ ಪಾರಾಗೋ ಅಗತ್ಯವೇ ಇಲ್ಲ.

ಸಮಸ್ಯೆಯೊಂದರ ಪರಿಹಾರಕ್ಕೆ ಕಾಲವೇ ಮಾರ್ಗ. ಸಮಯವೇ ಇದನ್ನು ಜನರಿಗೆ ಕಲಿಸುತ್ತೆ. ರಾಜಕಾರಣಿಗಳಿಗೆ ನಾವೇ ವಸ್ತು.ಅವರೂ ನಮ್ಮವರೇ. ಎಲ್ಲರೂ ಅವರವರ ತಾತ್ಕಾಲಿಕ ಸ್ವಾರ್ಥ ಮತ್ತು ಲಾಭಕ್ಕಾಗಿ ತಪ್ಪು ಮಾಡುತ್ತಾರೆ. ಇವರಿಗೆ ಧರ್ಮವೂ ದೊಡ್ಡದಾಗಿರುವುದಿಲ್ಲ. ಸ್ವಾರ್ಥದ ಸುಳಿಯಲ್ಲಿ ಸಿಲುಕಿಕೊಳ್ಳುವುದೇ ಎಲ್ಲ ಸಮಸ್ಯೆಗಳ ಬೇರು. ಸ್ವಲ್ಪ ಎಚ್ಚರಿಕೆ ಮತ್ತು ಜಾಗೃತಿಗಳಲ್ಲಿ ಬದುಕೋ ಅಗತ್ಯವಂತೂ ಇದೆ. ಇದಕ್ಕಾಗಿ ದೊಡ್ಡ ಹೋರಾಟವನ್ನೇ ನಾವು ಮಾಡಬೇಕಿದೆ. ಆದರೂ ಒಂದೆರಡು ತಲೆಮಾರುಗಳ ಕಾಲವಾದರು ಈ ಸಮಸ್ಯೆ ನಿವಾರಣೆಯಾಗಲು ಬೇಕು.

8) ಶತಮಾನದ ಹಿಂದೆ ವಿವೇ ಕಾನಂದರು ಹೇಳಿದ ಅವೇ ಸುಧಾರಣೆಗಳು ಇವತ್ತಿಗೂ ಆಗಬೇಕಾಗಿರೋದು ವಿಶಾದದ ಸಂಗತಿ. ಈ ಬಗ್ಗೆ ನಿಮ್ಮ ಸಂಸ್ಥೆ ಮತ್ತು ನೀವು ಕಟ್ಟಿರೋ ಯುವ ಬ್ರಿಗೇಡ್ ಬೇಕಾದಷ್ಟು ಒಳ್ಳೇ ಕೆಲಸಗಳನ್ನು ಮಾಡ್ತಿವೆ ಅಂತ ಕೇಳಿದ್ದೀವಿ. ಈ ಬಗ್ಗೆ ಹೇಳಿ.

ಯುವ ಬ್ರಿಗೇಡ್ ಮೂಲಕ ತರುಣರಲ್ಲಿ ಜಾಗೃತಿ ಮೂಡಿಸೋ ಕೆಲಸ ಮಾಡ್ತಿದ್ದೇವೆ. ಪ್ರಗ್ನೆಯನ್ನು ಬೆಳೆಸೋ ಪ್ರಯತ್ನ ಇದು. ಕಂಪ್ಲೇಂಟ್ ಮಾಡೋ ಸ್ವಭಾವವನ್ನು  ಸ್ವಲ್ಪ ಕಡಿಮೆ ಮಾಡಿ ರಾಷ್ಟ್ರಕ್ಕೋಸ್ಕರ ದುಡಿಯೋ ಮನೋಭಾವವನ್ನು ಬೆಳೆಸ್ತಾ ಇದ್ದೇವೆ. ಕಳೆದ 4.5 ವರ್ಷಗಳಲ್ಲಿ 175 ಕಲ್ಯಾಣಿಗಳನ್ನು ಕ್ಲೀನ್ ಮಾಡಿದ್ದೇವೆ. 6-8  ತಿಂಗಳಲ್ಲಿ 7 ನದಿಗಳನ್ನು ಸ್ವಚ್ಛ ಮಾಡಲು ಸಾಧ್ಯವಾಗಿದೆ. ಸೈನಿಕರಲ್ಲಿ ದೇಶಭಕ್ತಿ ಬರುವಂತೆ ಕೆಲಸ ಮಾಡ್ತಿದ್ದೇವೆ. ಮಕ್ಕಳಿಗೆ ಸಣ್ಣ ಸಣ್ಣ ವಿಡೀಯೋ ಮಾಡಿ ಕಳಿಸ್ತಿದ್ದೇವೆ. ವಿವೇಕಾನಂದರ  ಮತ್ತು ನಿವೇದಿತಾ ವಿಚಾರಕ್ಕೆ ರಥಯಾತ್ರೆ ಮತ್ತು ಸಾಹಿತ್ಯ ಸಮ್ಮೇಳನವನ್ನು ಮಾಡಿದ್ದೇವೆ. ತರುಣರಲ್ಲಿ ಕುಶಲ ಕಲೆಗಳು ಬೆಳೆಯುವಂತೆ ತರಭೇತಿ ಕೊಟ್ಟು ಬೇಗ ಕೆಲಸ ಸಿಗೋ ಅಂತೆ ಪ್ರಯತ್ನ ಮಾಡ್ತಿದ್ದೇವೆ. ಜಾತಿ ಮತ ಪಂಥಗಳನ್ನು ಮೀರಬೇಕು ಅನ್ನೋ ಪ್ರಯತ್ನ  ಮತ್ತು ಡಿಜಿಟಲ್ ಸಂಸ್ಕಾರದ ಮೂಲಕ ಚಿಂತನೆಗಳನ್ನು ಸಮರ್ಥವಾಗಿ ಹೆಚ್ಚು ಜನರಿಗೆ ಮುಟ್ಟಿಸೋ ಕೆಲಸವನ್ನು ಮಾಡ್ತಾ ಇದ್ದೇವೆ. ಹೆಣ್ಣು ಮಕ್ಕಳು ಕೂಡ ನಿವೇದಿತಾ ಸಂಸ್ಥೆಯ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

9) ನೀವು  ಸೈನಿಕರನ್ನು ಭೇಟಿ ಮಾಡಿ ಅವರಲ್ಲಿ ರಾಷ್ತ್ರಪ್ರೇಮವನ್ನು ಉಜ್ವಲಗೊಳಿಸೋ ಪ್ರಯತ್ನ ಮಾಡಿದ್ದೀರಿ. ಇಂತಹ ಅಗತ್ಯ ಇದೆ ಅಂತ ನಿಮಗೆ ಯಾಕೆ ಅನ್ನಿಸ್ತು?

ಆತ್ಮ ಸ್ಥೈರ್ಯ ! ತಮಸ್ಸಿನಲ್ಲಿರುವ ಜನರನ್ನು ರಜಸ್ಸಿಗೆ ತರೋದಿಕ್ಕೆ ಉತ್ತಮ ಮಾರ್ಗ ಅಂತ ಸ್ವಾಮಿ ವಿವೇಕಾನಂದರು ಹೇಳ್ತಾರೆ. ಕಾರ್ಗಿಲ್ ಯುದ್ದ, ಚೀನಾ ಯುದ್ದ,  1965 ರ ವಾರ್ ಆಫ್ ಟ್ಯಾಂಕ್ ನೆನಪಿಸಿಕೊಂಡು ಜನರಲ್ಲಿ ರಾಷ್ತ್ರಪ್ರೇಮ ಉದ್ದೀಪನ ಗೊಳಿಸೋ ಕೆಲಸವನ್ನು ಮಾಡ್ತಾ ಇದ್ದೀವಿ.

10) ನೀವು ಮಾದ್ಯಗಳಲ್ಲಿ ಬಹಳ ತೊಡಗಿಕೊಂಡಿರೋ ವ್ಯಕ್ತಿ. ಹಲವು ಹತ್ತು ಪುಸ್ತಕ ಬರೆದಿದ್ದೀರಿ. ರೇಡಿಯೋ, ಟೀವಿ, ಪತ್ರಿಕೆಗಳು, ದಿನಪತ್ರಿಕೆಗಳು, ಸಾಮಾಜಿಕ ಜಾಲ ತಾಣಗಳಲ್ಲಿ ಬರೀತಿರ್ತೀರಿ. ವಿಜಯವಾಣಿಯಲ್ಲಿ ವಿಶ್ವಗುರು ಅನ್ನೊ ಹೆಸರಿನಲ್ಲಿ  ಅಂಕಣ ಬರೀತಿರೋ ಉದ್ದೇಶ ಏನು?

ನಾನು ನನ್ನ ಭಾರತ ಏನಾದ್ರು ಆಗಬೇಕು ಅಂತ ಕೇಳ್ಕೊಳ್ಳೊದಾದ್ರೆ, ಇಂಗ್ಲೆಂಡಿನಂತೆ ಜಗತ್ತನ್ನು ಆಳ್ಬೇಕು ಅಂತ ಯಾವತ್ತೂ ಕೇಳ್ಕೊಳ್ಳಲ್ಲ.  ಹಿಂದೆ ಭಾರತ ’ವಸುದೈವ ಕುಟುಂಬಕಂ ’ ಎನ್ನುವಷ್ಟು ಹಿರಿಮೆಯುಳ್ಳದ್ದಾಗಿತ್ತು. ನಳಂದ ತಕ್ಷ ಶಿಲ ಇವುಗಳಲ್ಲಿ ಶಿಕ್ಷಣ ಪಡೆಯಲು ಜಗತ್ತಿನ ಜನರು ಭಾರತಕ್ಕೆ ಬರ್ತಾ ಇದ್ರು. ಭಾರತ  ಯಾವತ್ತು ಬೆಳಕನ್ನು ಹುಡುಕ್ತಾ ಇದ್ದ ದೇಶ. ಮತ್ತೆ ಬಾರತ ಅದೇ ಪ್ರೌಡಿಮೆಯನ್ನು ತಲುಪಬೇಕು ಅಂತ. ನೋವು ಮತ್ತು ದುಃಖವನ್ನು ಮೀರುವಂತ ಗ್ನಾನವನ್ನು ಕೊಡುವಂತ ವಿಶ್ವಗುರುವಾಗಬೇಕು ಅಂತ . ಹಿಂದೆ ಆಗಿದ್ವಿ ಆದ್ರೆ ಇವತ್ತು ಆ ಪಟ್ಟವನ್ನು ಕಳಕೊಂಡಿದ್ದೀವಿ. ಮತ್ತೆ ಆ ಶಕ್ತಿ ನಮಗೆ ಸಿಗಲಿ ಅಂತ ಬಯಸಿಕೊಂಡು ಬರೀತಾ ಇದ್ದೀನಿ.

10) ಹಣ ಸಹಾಯ ಅಲ್ದೆ  ವಿದೇಶಿಯರಾದ ನಾವು ಇನ್ನೇನನ್ನು ಮಾಡಬಹುದು?

ವಿದೇಶದವರೆಲ್ಲ ಹಣವನ್ನು ಕೇಳಲಿಕ್ಕೇ ನಮ್ಮ ಬಳಿ ಬರ್ತಾರೆ ಅಂದ್ಕೊಂಡಿರ್ತಾರೆ. ನಮ್ಮ ಬಳಿ ಸಾಕಷ್ಟು ಹಣವಿದೆ.  ನಿಮ್ಮ ಹಣ ನಮಗೆ ಖಂಡಿತ ಬೇಡ.ಬದಲು ನೀವು ಭಾರತಕ್ಕೆ ಬಂದಾಗ ನೀವು ಓದಿದ ಶಾಲೆಗಳಿಗೆ, ಕನ್ನಡ ಮಾಧ್ಯಮದ ಸರ್ಕಾರೀ ಶಾಲೆಗಳಿಗೆ  ಭೇಟಿಕೊಟ್ಟು ಹಲವು ಹತ್ತು ಮಕ್ಕಳಲ್ಲಿ ನಾವೂ ನಿಮ್ಮಂತೆಯೇ ಓದಿ ಈಗ ಹೀಗಿದ್ದೀವಿ ಅಂತ ಹೇಳಿ ಆತ್ಮ ವಿಶ್ವಾಸ ತುಂಬಿ. ಯಾಕೆಂದರೆ ಸಾಧನೆ ಮಾಡೋ ಶಕ್ತಿ ನಮ್ಮ ಮಕ್ಕಳಲ್ಲಿದೆ. ಅವಕಾಶಗಳಿಲ್ಲ. ನಿಮ್ಮಿಂದ ಉತ್ತಮ ಪ್ರೇರಣೆ ಸಿಕ್ಕರೆ ಅಷ್ಟೇ ಸಾಕು. ಅವರಲ್ಲಿನ ಪ್ರತಿಭೆ  ಹೊರಕ್ಕೆ ಬರುವಂತ ಅವಕಾಶ ಮಾಡಿಕೊಡಿ, ಪ್ರೇರಣೆ, ಆತ್ಮವಿಶ್ವಾಸವನ್ನು ನೀಡಿ.

11)   ನಿಮ್ಮ ಮತ್ತು ನಿಮ್ಮ ಸಂಸ್ಥೆಯ ಮುಂದಿನ ಕಾರ್ಯ ಯೋಜನೆಗಳೇನು?

ಡಿಸೆಂಬರ್ 22-23  ರಂದು ಸೇವಾಕುಂಭ ಮಾಡ್ತೀದ್ದೀವಿ.  ಯಾರು ತಮಗಲ್ಲದೆ ಬೇರೆಯವರಿಗಾಗಿ ಬದುಕ್ತಾರೋ ಅಂತಹ ನೂರೈವತ್ತು ಸಂಸ್ಥೆಯ 350 ಜನ್ರನ್ನು ಸೇರಿಸ್ತಿದ್ದೀವಿ. ಪ್ರಖರವಾಗಿ ಸೇವೆ ಮಾಡಿರೋ ಹದಿನೈದು ಜನರನ್ನು ಮಾತನಾಡಿಸ್ತಿದ್ದೀವಿ. ಇಂತವರ ನೆಟ್ವರ್ಕ್ ಸೃಷ್ಟಿಸುವ ಪ್ರಯತ್ನದಲ್ಲಿದ್ದೇವೆ.

ಶಾಲಾ ಕಾಲೇಜಿನ ಮಕ್ಕಳಲ್ಲಿ ತಮ್ಮ ದೇಶದ ಕೆಲಸವನ್ನು ಮಾಡುವ ಪರಿಕಲ್ಪನೆಯನ್ನು ಹುಟ್ಟುಹಾಕುವ ವಿಚಾರಗಳನ್ನು ಬಿತ್ತಬೇಕು ಅಂತ  ವಿಚಾರ ಮಾಡ್ತಿದ್ದೇವೆ. ಮುಂದಿನ 6 ತಿಂಗಳ ಕಾರ್ಯಕ್ರಮ ಪಟ್ಟಿ ತಯಾರಿದೆ.

ಸಂದರ್ಶನದ ವೀಡಿಯೋ:

ಸಂದರ್ಶನ: ಭಾಗ ೧
ಸಂದರ್ಶನ: ಭಾಗ ೨


6 thoughts on “ಶ್ರೀ ಚಕ್ರವರ್ತಿ ಸೂಲಿಬೆಲೆಯವರೊಡನೆ ಡಾ. ಪ್ರೇಮಲತ ಸಂವಾದ

 1. ಪ್ರೇಮಲತಾ ಅವರೇ ನಿಮ್ಮ ಉಳಿದ ಲೇಖನಗಳಂತೆ ಇದೂ ಸಹ ಸ್ಫುಟವಾಗಿ ಹಾಗೂ ಅಂದವಾಗಿ ಬಂದಿದೆ.
  ನನಗೆ ನನ್ನ ರಾಮಕೃಷ್ಣ ವಿದ್ಯಾರ್ಥಿ ಮಂದಿರಂ ದಿನಗಳ ನೆನಪು ಮರುಕಳಿಸುವಂತೆ ಮಾಡಿತು ಈ ಲೇಖನ.
  ಚಕ್ರವರ್ತಿ ಅವರ ಭಾಷಣ ಕೇಳಲು ಅವಕಾಶ ಆಗಲಿಲ್ಲ ನಿಮ್ಮ ಲೇಖನ ಓದಿ ಅವರ ಭಾಷಣದ ಸತ್ವ ತಿಳಿದಂತಾಯಿತು.
  ಧನ್ಯವಾದ.

  Liked by 1 person

 2. ಅಯ್ಯಪ್ಪ, ಶಿವ ಗಂಗೆ,ಗೌರಿ,RSS, ಬಲಪಂಥೀಯ ಪಂಗಡಗಳು,ಬಲಪಂಥೀಯ ವಿಚಾರಧಾರೆಯವರು ಇವರೆಲ್ಲರನ್ನು ನೇರವಾಗಿ, ಆಧಾರವಿಲ್ಲದೆ ದೂಷಿಸುವುದು ಯಾವ ಜೀವಪರ ಅಭಿವ್ಯಕ್ತಿಯ ಪ್ರತೀಕ ಅಂತಲೂ ಸ್ವಲ್ಪ ಹೇಳಿ. ಯಾವುದೇ ಒಂದು ಘಟನೆಗೆ ಇರಬಹುದಾದ ಹಲವಾರು ಕಾರಣಗಳನ್ನು ಉಲ್ಲೆಖ ಸಹಾ ಮಾಡದೆ ಇಂಥವರದ್ದೇ ಕೈವಾಡ ಎಂದು ಬರೆದರೆ ಅದು ಯಾವ ರೀತಿಯ ಮುಕ್ತ ಮನಸ್ಸು? ತಾವು ಮಾತ್ರ ಸರಿ ಎಂದು ಇಲ್ಲಿ ಭಾವಿಸಿರುವವರು ಯಾರು?

  Like

  • ಇದಕ್ಕೆ ಪ್ರತಿಕ್ರಿಯೆ ಎನ್ನಲಾಗದು, ಸುದರ್ಶನ್ ಅವರೇ. – ಕೇಶವ (ನಿರ್ವಾಹಕ)

   Like

 3. ಚಕ್ರವರ್ತಿ ಅವರ ಸಂದರ್ಶನ ಈ ಲೇಖನಕ್ಕೂ ಮುಂಚೆ ಕೇಳಿದ್ದೆ ಹಾಗೂ ಮೆಚ್ಚಿದ್ದೆ. ಪ್ರಶ್ನೋತ್ತರಗಳು ನಮ್ಮ ಭಾರತೀಯ ಪರಂಪರೆ, ಸಂಸ್ಕೃತಿ, ಸನಾತನ ಧರ್ಮ ಇವುಗಳೆಲ್ಲವನ್ನು ಏನು ತಿಳಿಯದ ಆಸಕ್ತರಿಗೂ ಅರ್ಥವಾಗುವಂತೆ ಚಕ್ರವರ್ತಯವರು ವಿವರಿಸಿದ್ದಾರೆ. ಸಂದರ್ಶನ ನಡೆಸಿದ ಪ್ರೇಮಲತಾ ಅವರು ಅಭಿನಂದನೀಯರು. ಎರಡು ಮಾತಿಲ್ಲ.
  ಅನಿವಾಸಿ ಒಂದು ಕನ್ನಡಿಗರ ಮುಖವಾಣಿ.ಹಲವಾರು ಬಗೆಯ ಲೇಖನಗಳು ಪ್ರಕಟವಾಗುತ್ತವೆ.ಆದರೆ ಪ್ರಚಲಿತ ವಿದ್ಯಮಾನಗಳನ್ನು ಕುರಿತು ಬರೆಯುವಾಗ ಬರಹಗಾರರಿಗೆ ಒಂದು ನಿಷ್ಪಕ್ಷಪಾತ ಧೋರಣೆ ಹಾಗು ತಮ್ಮ ಅಂಧಾಭಿಮಾನಗಳನ್ನು ಬದಿಗಿಟ್ಟು ತೌಲನಿಕ ಅಭಿಪ್ರಾಯಯಗಳನ್ನು ವ್ಯಕ್ತಪಡಿಸುವ ಗುರುತರ ಜವಾಬ್ದಾರಿ ಇರುತ್ತದೆ. ಇದನ್ನು ಮೀರಿ ಬರೆಯಲೇ ಬೇಕಿಂದಿದ್ದಲ್ಲಿ ವ್ಯಕ್ತಿ ಅಥವಾ ವಿಷಯವ ಕುರಿತಂತೆ ಕೇವಲ ಏಕಮುಖ ಅಭಿಪ್ರಾಯ ವ್ಯಕ್ತಪಡಿಸಬಹುದು. ಬದಲಾಗಿ ಇನ್ನೊಂದು ಬಣ, ಪಂಗಡ, ವಿಚಾರಧಾರೆ, ಧರ್ಮ ಇತ್ಯಾದಿಗಳನ್ನು ಎಳೆದು ತಂದು ಆರೋಪ ಮಾಡಿದ್ದು ಅಲ್ಲದೆ ಆಧಾರ ನೀಡುವುದಾಗಲಿ, ಪ್ರತಿಕ್ರಿಯೆಗೆ ಉತ್ತರಿಸದ ಧಾರ್ಷ್ಟ್ಯವನ್ನಾಗಲೀ ತೋರಿಸಿದರೆ ಅದನ್ನು ಬದ್ಧತೆ ಎಂದೆನ್ನಲಾಗದು- ಗುದ್ದೋಡುವ ಬೇಜವಾಬ್ದಾರಿ ಎಂದೆನ್ನಬಹುದು.
  ಪ್ರಸ್ತುತ ಗೌರಿಯನ್ನು ಕುರಿತು ಬರೆದ ಲೇಖನ ಈ ಎಲ್ಲ ಅಪಸವ್ಯಗಳನ್ನು ಘನೀಭವಿಸಿಕೊಂಡ ಒಂದು ಪ್ರಯತ್ನ. ಅನಿವಾಸಿಗೆ ಲೇಖನಗಳ ಕೊರತೆ ಇರಬಹುದು ಹಾಗು ಅದನ್ನು ಪ್ರಸ್ತುತ ಲೇಖಕರು ತುಂಬಿರಬಹುದು ; ಅದು ಒಬ್ಬ ಲೇಖಕನ ಜವಾಬ್ದಾರಿಯನ್ನು ಮುಕ್ತಗೊಳಿಸುವುದಿಲ್ಲ ಜತೆಗೆ ಗೌರಿಯನ್ನು ಕುರಿತು ಲೇಖನಕ್ಕೆ ಬಂದ ಪ್ರತಿಕ್ರಿಯೆಗಳು ಪೂರ್ವಾಗ್ರಹಪೀಡಿತ ,ಆಧಾರರಹಿತ ಹಾಗೂ ದ್ವೇಷಪೂರಿತವಾಗಿದ್ದಾಗ್ಯೂ ಲೇಖಕರು ಅವುಗಳನ್ನು ಒಪ್ಪಿಕೊಂಡ ಅಪ್ರಾಮಾಣಿಕ ನಡೆಯೂ ಪ್ರಶ್ನಾರ್ಹ. ಸಂಪಾದಕರಾಗಿ ಕೇಶವ ಅವರ ಮೌನವು ಈ ಎಲ್ಲ ಅಪಸವ್ಯಗಳಿಗೆ ಸಮ್ಮತಿ ಸೂಚಿಸಿದ್ದೆ ಆಗಿದೆ ಎಂದು ಟೀಕಿಸಿದರೆ ಅದರಲ್ಲಿ ತಪ್ಪೇನು?ನಾವು ಕಾಲು ತುಳಿಯುತ್ತೇವೆ, ಕೋಲಿನಲ್ಲಿ ಬಡಿಯುತ್ತಿರುತ್ತೇವೆ ನೀವು ಪ್ರಶ್ನಿಸದೆ ಸುಮ್ಮನಿದ್ದರೆ ಸಹಿಷ್ಣುತೆ, ಪ್ರಶ್ನಿಸಿದರೆ ಅದು ಅಸಹಿಷ್ಣುತೆ, ಹಿಂದೂ ಕೋಮುವಾದ,ವೈಯಕ್ತಿಕ ನಿಂದನೆ ಇತ್ಯಾದಿ ಪುಂಖಾನುಪುಂಖ ರೋದನೆಗಳು ಬರುವುದರ ಹಿಂದಿನ ಮನಸ್ಥಿತಿಯೇನು? ಹಿಂದೂ ಧರ್ಮ, ನಂಬಿಕೆಗಳು, ಆಚಾರಗಳನ್ನು ಬಿಡುಬೀಸಾಗಿ ಪ್ರಶ್ನಿಸಲು, ಲೇವಡಿ ಮಾಡಲು ಆ ಮೂಲಕ ಶ್ರದ್ಧೆಯಿರುವ ಜನಗಳಿಗೆ ಮನಸ್ಸಿಗೆ ಘಾಸಿ ಮಾಡಲು ಇವರುಗಳಿಗೆ ಪರವಾನಗಿ ಕೊಟ್ಟವರಾರು. ಆನಂದ್ ಕೇಶವಮೂರ್ತಿ, ವಿವೇಕ ತೋಂಟದಾರ್ಯ (ಎಂದಿಗು ಅನಿವಾಸಿಯಲ್ಲಿ ಭಾಗವಹಿಸಿರದಿದ್ದ) ಸನಾತನ ಧರ್ಮಿಯರನ್ನು /ಮೋದಿಯನ್ನು ದೂಷಿಸಿದ ಹಿಂದಿನ ಕಾರಣಗಳೇನು? ಅವರ ಉತ್ತರಗಳನ್ನು ಉತ್ತೇಜಿಸಿ, ಸಹಮತ ಸೂಚಿಸಿದ ಲೇಖಕಿಯ ವಿಚಾರವಾದ ಎಷ್ಟು ಮಟ್ಟಿಗೆ ಮುಕ್ತಭಾವದ್ದು?
  ಮಾತೆತ್ತಿದರೆ RSS ಅನ್ನು ದೂಷಿಸುವ ಇವರಲ್ಲಿ ಎಷ್ಟು ಜನ ಅದರಲ್ಲಿ ಭಾಗಿಯಾಗಿದ್ದಾರೆ, ಹತ್ತಿರದಿಂದ ಬಲ್ಲವರಾಗಿದ್ದಾರೆ? ತಾವು ಓದಿದ ಗೌರಿ, ಮತ್ತವಳ ಪಟಾಲಂ ಕಟ್ಟಿದ ಕಥೆಯನ್ನು ನಂಬಿಕೊಂಡು ಚಾರಿತ್ರ್ಯವಧೆಗೆ ಇಳಿಯುವುದು ಎಂತಹ ಪ್ರಬುಧ್ಧತೆ? ನವ ಆರ್ಎಸ್ಎಸ್ ಉಲ್ಲೇಖ ಸಹಾ ಲೇಖನದಲ್ಲಿ ಆಗಿದೆ.ನವ , ಪುರಾತನ ಎಂಬ ವರ್ಗಿಕರಣ ಯಾವಾಗ ಆಗಿದ್ದು, ಯಾರು ಮಾಡಿದ್ದು?
  ಸರಕಾರದಿಂದ ಒಂದು ಪೈಸೆ ಪಡೆಯದೇ ಜನರ ಸಂಕಷ್ಟಗಳಲ್ಲಿ ಪ್ರಾಣದ ಹಂಗು ತೊರೆದು ಜಾತಿ ಮತಗಳನ್ನು ನೋಡದೆ ಸೇವೆ ಕೊಡುವ ಆರ್ಎಸ್ಎಸ್ ಎಲ್ಲಿ, ಆರಾಮ ಖುರ್ಚಿಯ ಮೇಲೆ ಕುಳಿತು ತಮ್ಮ ಕಾಫೀ ಚಹಾಗಳಿಗೂ ಸರಕಾರದ ಭತ್ಯೆ ಪಡೆಯುವ ಗಂಜಿ ಗಿರಾಕಿಗಳೆಲ್ಲಿ. ಸಾರಾ ಸಗಟು ಮೋದಿ ವಿರೋಧಿಗಳಲ್ಲಿ ಒಬ್ಬನೇ ಒಬ್ಬ ಕೈಕೆಸರು ಮಾಡಿಕೊಂಡು, ನಿಸ್ವಾರ್ಥದಿಂದ ಸಮಾಜಕ್ಕೆ ದುಡಿದ ವ್ಯಕ್ತಿಯನ್ನು ಹೆಸರಿಸಬಲ್ಲಿರಾ? ರಚನಾತ್ಮಕವಾದ ಯಾವ ಕಾರ್ಯ ಇವರಿಂದ ಆಗಿದೆ. ಇದೇ ಚಕ್ರವರ್ತಿ ಸೂಲಿಬೆಲೆಯವರನ್ನು ಸಹಾ ದ್ವೇಷಿಸಿದ ಗೌರಿ ಮತ್ತವಳ ಬಳಗದ ಯಾವ ನ್ಯೂನತೆಗಳನ್ನು ಲೇಖನದಲ್ಲಿ ಹೇಳಲಾಗಿದೆ? ಅವರು ಅಥವಾ ಅವರಂತಹವರು ಮಾಡಿದ ಕಾರ್ಯ ಕೆಳಸಗಳ ಲಕ್ಷದ ಒಂದು ಭಾಗವನ್ನು ಈ ಪ್ರಗತಿಪರರು ಮಾಡಿರಲಾರರು. ಚಕ್ರವರ್ತಿಯವರು ಮೋದಿಯನ್ನು ಬೆಂಬಲಿಸಿರುವುದು ಮೋದಿಯ ನಿಸ್ಪೃಹ ನಾಯಕತ್ವಕ್ಕೆ ಕೊಡಬಹುದುದಾದ ಪ್ರಮಾಣ. ನಂಬುವವರು ನಂಬಬಹುದು.
  ಇದಕ್ಕೂ ಮೊದಲು ಸನಾತನ ಧರ್ಮಿಯರ ದೇವರಾದ ಅಯ್ಯಪ್ಪನ ಲಂಗೋಟಿಯ ಬಗ್ಗೆ, ಅದು ಉದುರಿ ಹೋಗುವ ಬಗ್ಗೆ ವಿಡಂಬನಾತ್ಮಕವಾದ ಪ್ರತಿಕ್ರಿಯೆಯು ಪ್ರಸ್ತುತ ಲೇಖಕಿಯಿಂದ ಬಂದಿತ್ತು. ಸಂವಿಧಾನ ಅದನ್ನು ಸರಿಮಾಡಿತು ಎಂಬ ಹೇಳಿಕೆಯೂ ಸೇರಿತ್ತು. ಸಮ್ವಿಧಾನ, ಅದನ್ನು ನಿರ್ವಹಿಸುವ ನ್ಯಾಯಾಲಯ, ತಮ್ಮನ್ನು ಮಾರಿಕೊಂಡ ನ್ಯಾಯಾಧೀಶರು, ನೈತಿಕ ಪ್ರಜ್ಞೆ ಇಲ್ಲದೆ ವಾದಿಸುವ, ತೀರ್ಪು ಕೊಡುವ ಜನಗಳು ಇರುವಲ್ಲಿ, ತಿವಳಿ ತಲಾಖ್ ತರುವಲ್ಲಿ ಅವರೆಲ್ಲರ ಚೆಲ್ಲಣಗಳು ಒದ್ದೆಯಾದದ್ದು, ರಾಮಮಂದಿರದ ಪುರಾತತ್ವ ದಾಖಲೆಗಳು ಸತ್ಯವನ್ನು ಕೂಗಿ ಹೇಳುತ್ತಿದ್ದರು ವಿಚಾರಣೆ ನಡೆಸಲು ಹೆದರಿ ಮುಂದೂಡುತ್ತಿರುವ ನಾಟಕವನ್ನೂ ನೋಡುತಿರುವ ನಮಗೆ ಅಯ್ಯಪ್ಪನ ತೀರ್ಪಿನ ಹಿಂದಿನ ಹುನ್ನಾರ ತಿಳಿಯದ್ದೇನಲ್ಲ.ಇದೆ ಸಂವಿಧಾನ ಪ್ರಣೀತ ನ್ಯಾಯಾಲಯ ಬಕ್ರೀಡಿನ ಆಚರಣೆಗೆ ನಾವು ತಲೆ ಹಾಕುವುದಿಲ್ಲ ಎಂದು ಜಾರಿಕೊಂಡದ್ದು ಆಷಾಢಭೂತಿತನಕ್ಕೆ ಸಾಕ್ಷಿ. ಅಲ್ಲಿ ಸಂವಿಧಾನ ಬರುವುದಿಲ್ಲ. ಅವರದೇನಿದ್ದರೂ ಶಾಂತ ಹಿಂದೂಗಳ ಮೇಲೆಯೇ ಬೀಸಲು ತಯಾರಾದ ಕತ್ತಿ !!
  ಇನ್ನೂ ಒಂದುಕಡೆ ಶಿವನಿಗೆ ಗಂಗೆ ಗೌರಿ ಎಂಬ ಇಬ್ಬರು ಹೆಂಡಿರು ಎಂದು ಗೋಳಾಡುವ ದೇಶ ನಮ್ಮದು ಎಂಬ ಮಾತುಗಳು ಬಂದಿದ್ದವು. ಸಂವೇದನಾರಹಿತವಾದ ಕುರುಡುಮನಸ್ಸಿಗೆ ಗೋಳಾಡುವ ದೇಶ ಕಾಣಿಸಿತೇ ಹೊರತು ಶ್ರುತಿ (ವೇದ)ಗಳಿಂದ ಹಿಡಿದು ಆಗಮಗಳ ಶಿಲ್ಪದಲ್ಲೂ, ಸಂಸ್ಕೃತದಿಂದ ಆಧುನಿಕ ಕನ್ನಡದ ಕಾವ್ಯಗಳ ವರೆಗೂ, ನಾಟ್ಯದಿಂದ ಸಂಗೀತದವರೆಗೂ, ಈಚೆಯ ಚಿತ್ರಗೀತೆಗಳ ವರೆಗೂ ಶಿವನ, ಅವನ ಪರಿವಾರದ ವರ್ಣನೆ, ಕಲಾಭಿವ್ಯಕ್ತಿ ಎಷ್ಟು ಭವ್ಯವಾಗಿದೆ, ಪರಶಿವನ ಹೊರಲಕ್ಷಣಗಳಿಗೆ ಎಷ್ಟೊಂದು ಆಳವಾದ ತಾತ್ವಿಕ ಅರ್ಥವಿದೆ. ಕಥೆಯ ಮೂಲಕ ಒಳಸೆಳೆದು ಅಧ್ಯಾತ್ಮವನ್ನು ಬೋಧಿಸುವ ವಿಶಿಷ್ಟ ಸಂಪ್ರಾದಾಯ ನಮ್ಮದು. ಬಸವಣ್ಣ ಇಷ್ಟಲಿಂಗ ಧಾರಣೆ ಮಾಡಿಸಿದ ಕಾರಣವೂ ಇದರಲ್ಲಿದೆ. ಅದು ಕಾಣದೆ ಹೋದದ್ದು ದುರದೃಷ್ಟಕರ ಪೂರ್ವಾಗ್ರಹಿ ಮನಸ್ಥಿತಿಯಲ್ಲದೆ ಮತ್ತೇನು? ಎಲ್ಲೋ ಕೆಲವರು ಸಂಸ್ಕಾರಹೀನ ಮನಸ್ಸುಗಳು ಹೆಂಗಸರಿಗೆ ಕಿರುಕುಳ ಕೊಟ್ಟ ಮಾತ್ರಕ್ಕೆ ಅಲ್ಲಿ ಶಿವ, ಗಂಗೆ ಗೌರಿ ಇತ್ಯಾದಿಗಳನ್ನು ತಂದು ಬಡಬಡಿಸುವ ಪ್ರಮೇಯವೇನಿತ್ತು? ರಚನಾತ್ಮಕ , ಧನಾತ್ಮಕ ಬರಹಗಳು ಉತ್ತೇಜಕ ಪ್ರತಿಕ್ರಿಯೆಗಳನ್ನು ಪಡೆಯಲೇಬೇಕು ಎಂಬ ಆಗ್ರಹ ನ್ಯಾಯಯುತವಾದದ್ದೇ;ಹಾಗೆಂದು ‘ಅಪದ್ದಕ್ಕೆ ಅಪ್ಪಣೆ ಕೊಟ್ಟರೆ ಬಾಯಿಗೆ ಬಂದದ್ದೇ “ ಎಂಬಂತೆ ಬರೆದರೆ ಅದಕ್ಕೆ ಸರಿಯಾದ ಪ್ರತಿಕ್ರಿಯೆಗಳನ್ನು ಸ್ವೀಕರಿಸುವ ಮುಕ್ತ ಮನಸ್ಸೂ ಇರಬೇಕು ಎಂದು ನೀವು ಕರೆ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು.

  Like

  • ಸುದರ್ಶನ್ ಅವರೆ,
   ಇತರೆ ಬರಹಗಾರರು, ಸಂಪಾದಕರು, ಓದಿ ಪ್ರತಿಕ್ರಿಯೆ ಬರೆಯುವವರು, ಹಿರಿಯ ಚಿಂತಕಕರು, ವಿಚಾರವಾದಿಗಳು,ಇತರೆ ಧರ್ಮಗಳು ,ಭಾರತದ ಸಂವಿಧಾನ ಎಲ್ಲವೂ ತಪ್ಪು, ನಾನೊಬ್ಬನೇ ಸರಿ ಹಾಗಾಗಿ ವಯಕ್ತಿಕ ಮಟ್ಟದಲ್ಲಿ ಎಲ್ಲರ ನಿಂದನೆ ಮಾಡುವ ಅಧಿಕಾರ ನಿಮಗಿದೆ ಎಂದು ಬಗೆದು ಎಲ್ಲರ ನಿಂದನೆಗೆ ತೊಡಗಿದ್ದೀರಿ. ನಿಮಗೆ ಮಾತ್ರ ಸರಿಯೆನಿಸುವ ವಿಚಾರಗಳನ್ನು ಎಲ್ಲರ ಮೇಲೆ ಬಲವಂತವಾಗಿ ಹೇರುವ ಪ್ರಯತ್ನಕ್ಕಿಳಿದಿದ್ದೀರಿ. ಇಂತದ್ದೇ ಪ್ರಯತ್ನಗಳನ್ನು ಮಾಡಿ ಬೇರೆ ಎಲ್ಲೆಡೆಯಿಂದ ಉಚ್ಛಾಟಿತರಾಗಿ ಅನಿವಾಸಿಯ ಜಾಲ ಜಗುಲಿಯನ್ನು ಗುರಿಯಾಗಿಟ್ಟುಕೊಂಡಿರುವಂತಿದೆ. ಇದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ.
   ದೇವರು ನಿಮ್ಮ ಮನಸ್ಸಿಗೆ ಶಾಂತಿಯನ್ನು ಕರುಣಿಸಲಿ ಎಂದು ಬೇಡಿಕೊಳ್ಳುತ್ತೇನೆ.

   Like

  • ಸುದರ್ಶನ್ ಅವರೇ, ಈ ಪ್ರತಿಕ್ರಿಯೆ ಈ ಲೇಖನಕ್ಕೆ ಸಂಬಂಧಿಸಿದ್ದಲ್ಲ. – ಕೇಶವ (ನಿರ್ವಾಹಕ).

   Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.