ಇನ್ಸ್ಟಾ ರೀಲ್ ಮಂಡಲದ ಹೊರಗಿನ ಐತಿಹಾಸಿಕ ರೋಮ್

  • ರಾಮಶರಣ ಲಕ್ಷ್ಮೀನಾರಾಯಣ

ರೋಮ್ ಕ್ರಿ.ಪೂ ೨೫೦ ರಿಂದ ಇಲ್ಲಿಯವರೆಗೆ ಸತತವಾಗಿ ರಾಜಧಾನಿಯಾಗಿ ಮೆರೆದ ನಗರ. ಪ್ರಜಾಪ್ರಭುತ್ವ, ರಾಜಾಡಳಿತ, ಧರ್ಮಶಾಹಿ ಹೀಗೆ ಹಲವು ರೀತಿಯ ಪ್ರಭುತ್ವಗಳ ಕೇಂದ್ರವಾಗಿತ್ತು, ರೋಮ್ ನಗರ. ಇಲ್ಲಿ ಹೆಜ್ಜೆಯಿಟ್ಟಲ್ಲೆಲ್ಲ ಇತಿಹಾಸದ ಕುರುಹು. ಕಲ್ಲೆಸೆದಲ್ಲಿ ಪುರಾತನ ಕಟ್ಟಡ; ಕಿವಿಗೊಟ್ಟರೆ ಅವು ಹೇಳುವ ಕಥೆಗಳು; ಕಣ್ಣು ಹಾಯಿಸಿದಲ್ಲೆಲ್ಲ ಕಾಣುವ ಪ್ರತಿಮೆಗಳು, ಚರ್ಚುಗಳು,  ಮಂದಿರಗಳು; ಆಘರಾಣಿಸಿದರೆ ಸವರುವ ಪುರಾತನ ಕಂಪು; ತಡವಿದರೆ ಉದುರುವ ನೆನಪುಗಳು. ಹೇಳುತ್ತಾ ಹೋದರೆ ಮುಗಿಯದ ದ್ರಶ್ಯಗಳು, ಮೊಗೆದಷ್ಟೂ ಮುಗಿಯದ ಅನುಭವಗಳು ಒಂದೇ ನಗರದಲ್ಲಿ ಸಿಗುವ ಅವಕಾಶ ಇನ್ನೊಂದೆಡೆ ಸಿಗುವುದು ಅಪರೂಪ. ಜನಪ್ರಿಯವಾದ ರೋಮ್ ನಗರದಲ್ಲಿ ಇನ್ಸ್ಟಾಗ್ರಾಮ್ ಕಣ್ಣಿಗೆ ಬೀಳದ, ಚಾಟ್ ಜಿಪಿಟಿ ಕೊಡುವ ಪ್ರಯಾಣ ಯೋಜನೆಯ ಹರವಿಗೆ ಸಿಗದ ಕುತೂಹಲಕಾರಿ ತಾಣಗಳಿವೆಯೇ?

ಯಾವುದೇ ಪ್ರವಾಸಿ ತಾಣವನ್ನು ಸಂದರ್ಶಿಸುವ ಮೊದಲು ಊರಿನ ವಿವರ, ವಸತಿ, ವಿಮಾನ ಯಾನಗಳನ್ನು ಅನ್ವೇಷಿಸಲು  ಅಂತರ್ಜಾಲದ ಮೊರೆ ಹೋಗುವುದು ಸರ್ವೇ ಸಾಮಾನ್ಯ. ನಮ್ಮ ಫೋನ್, ಕಂಪ್ಯೂಟರ್, ಗೂಗಲ್ ಹೋಮ್, ಅಲೆಕ್ಸ್ ಇವುಗಳಲ್ಲೆಲ್ಲ ಹುದುಗಿ, ನಮ್ಮ ಬದುಕಿನ ಅಂತರಂಗದ ಶೋಧನೆಗೆ ತಮ್ಮ ಬದುಕನ್ನೇ ಮುಡುಪಾಗಿಟ್ಟಿರುವ ಗೂಗಲ್, ಮೆಟಾದಂತಹ ಕಂಪನಿಗಳು, ಮಾಂತ್ರಿಕ ದೀಪದ ಗುಲಾಮನಂತೆ, ಇನ್ಸ್ಟಾ, ಯೂ ಟ್ಯೂಬ್ ಇತರ ತಾಣಗಳ ಮೂಲಕ ಆ ಊರಿನಲ್ಲಿ ನೋಡಲು ಯೋಗ್ಯವಾದ ಸ್ಥಾನಗಳು ಯಾವುದು ಎಂಬ ವಿಡಿಯೋಗಳನ್ನು ನಿಮ್ಮ ಫೋನಿಗೋ, ಟ್ಯಾಬ್ಲೆಟ್ಟಿಗೋ ಕಳಿಸುತ್ತ ತಮ್ಮ ಕೈಲಾದ ಅಳಿಲು ಸೇವೆ ಸಲ್ಲಿಸುತ್ತಲೇ ಇರುತ್ತವೆ. ಜಾಲತಾಣಗಳು ಪ್ರಚಲಿತಗೊಳಿಸಿದ ಜಾಗೆಗಳನ್ನು ಕಂಡಾಗ ಇದರ ಥಳುಕು ಇಷ್ಟೇನೆ; ಅಂತಹ ಜಾಗೆಗಳನ್ನು ಮಾತ್ರ ನೋಡಿ ಮರಳಿದರೆ ನಮ್ಮ ಲೈಫು ಇಷ್ಟೇನೇ ಎಂಬ ಅನುಮಾನ ಬಂದೀತು. ಗಿಜಿಮಿಜಿಗುಡುವ ಜಾಗೆಗಳಲ್ಲಿ ಊರಿನ ವೈಶಿಷ್ಠ್ಯವನ್ನು ಕಾಣದೇ, ಅರಿಯದೇ ‘ನಾ ಬಂದೆ, ನಾ ಕಂಡೆ, ನಾ ಹೋದೆ’ ಎಂದು ಷರಾ ಹಾಕಿ ಹೋಗುವ ಭೇಟಿಗಳು ಮನದಾಳದಲ್ಲಿ ಮನೆ ಮಾಡಲು ಸಾಧ್ಯವೇ? ಜನ ಜಂಗುಳಿಯಿಂದ ದೂರವಾಗಿಯೋ, ಗದ್ದಲದ ನಡುವೆಯೇ ಕಂಬಳಿ ಹೊದ್ದು ಅಡಗಿರುವ ಅನುಭವಗಳನ್ನು ಕೆದಕಿದಾಗ ಅವು ಹೇಳುವ ಕಥೆಗಳು ಸೃಷ್ಟಿಸುವ ನೆನಪು, ಆಪ್ತವಾಗಿ, ಬಾಳಿನುದ್ದಕ್ಕೂ ಸವಿಯುವ ಬುತ್ತಿಯಾಗುವವು. ರೋಮ್ ನ ಟ್ರೆವಿ ಕಾರಂಜಿ, ಕೊಲೋಸಿಯಂ, ವ್ಯಾಟಿಕನ್, ಪ್ಯಾಂಥಿಯನ್ ಗಳ ಹೊಳಪಿನ ನಡುವೆ ಯುಗಗಳೇ ಕಳೆದರೂ ಬದಲಾಗದ ಮಾನವನ ವರ್ತನೆಗೆ ಒಂದು ಚರ್ಚ್ ಹಾಗೂ ಒಂದು ಪ್ರತಿಮೆ ದ್ಯೋತಕವಾಗಿವೆ. ಈ ಅನುಭವಗಳನ್ನು ಅನಾವರಣಗೊಳಿಸಿದವನು ‘ರೋಮ್ ನಗರದ ಅಡಗಿದ ರತ್ನಗಳು’ ಎಂಬ ಕಾಲ್ನಡಿಗೆ ಪ್ರಯಾಣದ ಮಾರ್ಗದರ್ಶಿ. ಆತನಿಗೆ ನಾನು ಋಣಿ.

ಕ್ರಿಸ್ತನ ದೇಹತ್ಯಾಗದ ನಂತರ ಆತನ ಪ್ರಮುಖ ಶಿಷ್ಯ ಪೀಟರ್ ಕ್ರಿ.ಶ ೪೦ ರ ಸುಮಾರಿಗೆ ರೋಮ್ ನಗರದ ಹೊರ ವಲಯಕ್ಕೆ ಬಂದ ಎಂಬ ಐತಿಹ್ಯವಿದೆ. ಹಿಂದೂ ಧರ್ಮದಂತೆ, ಹಲವಾರು ದೇವರುಗಳನ್ನು ಪೂಜಿಸುವ ವಾಡಿಕೆ ರೋಮನ್ನರ ಧರ್ಮದಲ್ಲೂ ಇತ್ತು. ಮೂರ್ತಿ ಪೂಜೆ, ಸಾಂಪ್ರದಾಯಿಕ ಆಚರಣೆಗಳು ಸಾಮಾನ್ಯವಾಗಿದ್ದ ಕಾಲವದು. ಜಗತ್ತಿಗೊಬ್ಬನೇ ದೇವ, ಆತನ ಪುತ್ರ ಕ್ರಿಸ್ತ ಎಂಬ ಕ್ರಿಶ್ಚಿಯನ್ ನಂಬಿಕೆ ಆಗ ಹೊಸದು. ಹೊಸದನ್ನು ನಂಬುವುದು, ವಿಚಾರಗಳಿಗೆ ತೆರೆದುಕೊಳ್ಳುವುದು ಸುಲಭವಲ್ಲ. ಈ ವೈಚಾರಿಕತೆಯ ಸಂಘರ್ಷದಲ್ಲಿ ರೋಮನ್ನರು ಕ್ರಿಸ್ತನ ಅನುಯಾಯಿಗಳನ್ನು ಸಹಿಸಲಿಲ್ಲ. ವ್ಯವಸ್ಥಿತವಾಗಿ ಕ್ರಿಶ್ಚಿಯನ್ನರನ್ನು ಹಿಂಸಿಸಿ, ಅಟ್ಟಿಸಿಕೊಂಡು ಹೋಗಿ ಹತ್ಯೆ ಮಾಡತೊಡಗಿದರು. ಸಂತ ಪೀಟರ್ ಕೂಡ ಚಕ್ರವರ್ತಿ ನೀರೋನ ಕಾಲದಲ್ಲಿ ಈ ಹಿಂಸಾಕಾಂಡಕ್ಕೆ ಶಿಲುಬೆಯೇರಿ ಬಲಿಯಾದ.

(ನೆಲಮಳಿಗೆಯಲ್ಲಿನ ಪ್ರಾರ್ಥನಾ ಗೃಹದ ಭಿತ್ತಿಯಲ್ಲಿ ಸಿಸಿಲಿಯಾ, ವ್ಯಾಲೆರಿಯನ್ ಹಾಗೂ ಟಿಬರ್ಟಿಯಸ್ ರ ಮೊಸಾಯಿಕ್ ಭಾವಚಿತ್ರ)
ಸಂತ ಸಿಸಿಲಿಯ ಬೆಸಿಲಿಕಾದಲ್ಲಿ ಸಿಸಿಲಿಯಾಳ ಪ್ರತಿಮೆ (ಕತ್ತಿನಲ್ಲಿ ಮಚ್ಚಿನ ಗುರುತನ್ನು ನೋಡಿ )

ರೋಮ್ ನ ಒಂದು ಶ್ರೀಮಂತ ಕುಟುಂಬದಲ್ಲಿ ಕ್ರಿ.ಶ ೧೮೦ರಲ್ಲಿ ಸಿಸಿಲಿಯ ಎಂಬ ಕನ್ಯೆ ಹುಟ್ಟಿದಳು. ಕ್ರಿಸ್ತನ ಸಂದೇಶಗಳಿಂದ ಆಕರ್ಷಿತಳಾದ ಸಿಸಿಲಿಯ, ಉತ್ತಮ ಹಾಡುಗಾರ್ತಿ. ಆಕೆ ಜೀವನವಿಡೀ ಕನ್ಯೆಯಾಗಿಯೇ ಇದ್ದು, ಕ್ರಿಸ್ತನ ಸಂದೇಶವನ್ನು ಹರಡುವ ತೀರ್ಮಾನ ಮಾಡಿದಳು. ಆಕೆಯ ಪೋಷಕರಿಗೆ ಅದೇ ಊರಿನ ವ್ಯಾಲೇರಿಯನ್ ಎಂಬ ಯುವಕನಿಗೆ ಅವಳನ್ನು ಕೊಟ್ಟು ಮದುವೆ ಮಾಡುವ ಇಚ್ಛೆ. ಆಕೆ ವ್ಯಾಲೇರಿಯನ್ ಗೆ ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿದರೆ ಮಾತ್ರ ಮದುವೆ ಆಗುವೆ ಎನ್ನುವ ಷರತ್ತನ್ನೊಡ್ಡುತ್ತಾಳೆ. ಅವಳ ಪ್ರೀತಿಗೆ ಸಿಕ್ಕಿದ ವ್ಯಾಲೆರಿಯನ್ ಒಪ್ಪಿ ಅವಳನ್ನು ಮದುವೆಯಾಗುತ್ತಾನೆ. ಅದಲ್ಲದೇ ಆತನ ಸಹೋದರ ಟಿಬರ್ಟಿಯಸ್ ಕೂಡ ಆತನೊಡನೆ ಧರ್ಮಾಂತರ ಮಾಡುತ್ತಾನೆ. ಸಿಸಿಲಿಯ ಇವರೊಂದಿಗೆ ಕ್ರಿಸ್ತನ ಸಂದೇಶಗಳನ್ನು ಹಾಡುತ್ತ ಧರ್ಮ ಪ್ರಚಾರ ಮುಂದುವರೆಸಿದಳು. ರೋಮನ್ನರ ಕೆಂಗಣ್ಣಿಗೆ ಬಿದ್ದ ಮೂವರಿಗೂ ಮರಣದಂಡನೆಯಾಗುತ್ತದೆ (ಕ್ರಿ.ಶ ೨೩೦). ಸಿಸಿಲಿಯಾಳ ಹತ್ಯೆಗೈಯ್ಯುವ ಮೊದಲ ಪ್ರಯತ್ನ ವಿಫಲವಾಗುತ್ತದೆ. ನಂತರ ಅವಳ ಶಿರಚ್ಛೇದನ ಮಾಡುವ ಪ್ರಯತ್ನಗಳೂ ವಿಫಲವಾಗುತ್ತವೆ. ಆಕೆ ಮತ್ತೆ ಮೂರು ದಿನಗಳ ಕಾಲ ಬದುಕಿದ್ದು, ಹಾಡುತ್ತ ಕ್ರಿಸ್ತನ ಸಂದೇಶವನ್ನು ಪಸರಿಸುತ್ತಾಳೆ. ಪವಾಡ ಸದೃಶವಾಗಿ ಮಾರಣಾಂತಿಕ ಪ್ರಯತ್ನಗಳನ್ನು ಮೀರಿ ಬದುಕಿದ ಸಿಸಿಲಿಯಾಳನ್ನು ತದನಂತರ ಕ್ಯಾಥೋಲಿಕ್ ಚರ್ಚ್ ಸಂತಳನ್ನಾಗಿಸಿತು. ಸಂತ ಸಿಸಿಲಿಯ ಇಂದು ಸಂಗೀತದ ಪೋಷಕ ಸಂತಳೆಂದು (patron saint) ಗುರುತಿಸಲ್ಪಡುತ್ತಾಳೆ. ಆಕೆಯ ಚರ್ಚ್ ರೋಮ್ ನಗರದ ಟ್ರಾಸ್ಟವೇರ್ ಎಂಬಲ್ಲಿ ಇದೆ. ರವಿವಾರದ ಪ್ರಾರ್ಥನೆ ಕಾಲದಲ್ಲಿ ಇಲ್ಲಿನ ಕಾನ್ವೆಂಟ್ ನ ಸಾಧ್ವಿಗಳು ಹಾಡುವ ಪ್ರಾರ್ಥನೆಗಳು ವಿಶೇಷವಂತೆ. ಸಿಸಿಲಿಯಾಳ ಗೌರವಾರ್ಥ ಹಲವಾರು ಪ್ರಸಿದ್ಧ ಸಂಗೀತಕಾರರು ಕೃತಿಗಳನ್ನು ರಚಿಸಿದ್ದಾರೆ. ನೀವು ಈ ಚರ್ಚಿಗೆ ಭೇಟಿಯಿತ್ತರೆ, ಅಮೃತ ಶಿಲೆಯಲ್ಲಿ ಕಟೆದ ಸಿಸಿಲಿಯಾಳ ಪುತ್ಥಳಿಯನ್ನು ಕಾಣಬಹುದು. ಸಿಸಿಲಿಯಾಳ ಕತ್ತಿನಲ್ಲಿ ಮಚ್ಚಿನ ಗುರುತೂ ಇದೆ. ನೆಲ ಮಾಳಿಗೆಯಲ್ಲಿ ರೋಮನ್ ಬಂಗಲೆಯ ಪಳೆಯುಳಿಕೆಗಳಿವೆ (ಇದು ಸಿಸಿಲಿಯಾಳ ಮನೆಯಾಗಿತ್ತೆನ್ನುವ ಐತಿಹ್ಯವಿದೆ), ಸುಂದರವಾದ ಹೊಳೆಯುವ ಮೊಸಾಯಿಕ್ ನಿಂದ ಅಲಂಕರಿಸಿದ ಪ್ರಾರ್ಥನಾ ಗೃಹವೂ ಇದೆ.

ಸಿಸಿಲಿಯಾಳ ಅವನತಿಯೊಂದಿಗೆ ಕ್ರಿಸ್ತನ ಬೋಧನೆಗಳು ಅಂದು ಮಣ್ಣಾಗಲಿಲ್ಲ. ತದನಂತರ ಸುಮಾರು ಕ್ರಿ.ಶ ೩೩೦ ರಲ್ಲಿ ಕಾನ್ಸ್ಟಂಟಿನ್ ಚಕ್ರವರ್ತಿ ಕ್ರೈಸ್ತ ಧರ್ಮವನ್ನು ಅಂಗೀಕರಿಸುತ್ತಾನೆ (ಆ ಕಥೆಗೆ ಈಗ ಸಮಯವಿಲ್ಲ), ರೋಮನ್ನರು ಕ್ರಮೇಣ ಕ್ರೈಸ್ತ ಧರ್ಮವನ್ನನುಸರಿಸುತ್ತಾರೆ .

ರೋಮ್ ನಗರದ ಮಧ್ಯದಲ್ಲಿ (ಪ್ಯಾಂಥೆಯಾನ್ ದೇವಾಲಯದ ಸಮೀಪ) ಕ್ಯಾಮ್ಪೋ ಡಿ ಫಿಯೋರಿ ಎಂಬ ಪುರಾತನ ಸಂತೆ ಮಾಳವಿದೆ. ಇಂದಿಗೂ ಅಲ್ಲಿ ಪ್ರತಿದಿನ ಸಂತೆ ಕೂರುತ್ತದೆ. ಆ ಮಾರುಕಟ್ಟೆಯ ನಡುವೆ ಭಿಕ್ಷುವಿನ ಮೆಲುವಂಗಿ ಧರಿಸಿ ತಲೆ ತಗ್ಗಿಸಿ ನಿಂತ ವ್ಯಕ್ತಿಯ ತಾಮ್ರದ ಪುತ್ಥಳಿಯನ್ನು ಕಾಣುತ್ತೀರಿ. ಈತನೇ ಜೋರ್ಡಾನೋ ಬ್ರೂನೋ. ಈತ ೧೫೪೮ರಲ್ಲಿ ನೇಪಲ್ಸ್ ಪ್ರಾಂತ್ಯದ ನೋಲ ಎಂಬಲ್ಲಿ ಹುಟ್ಟಿದ. ಅವನನ್ನು ವಿದ್ಯಾಭ್ಯಾಸಕ್ಕಾಗಿ ನೇಪಲ್ಸಿಗೆ ಕಳಿಸುತ್ತಾರೆ. ಆಗಿನ ಕಾಲದಲ್ಲಿ ಚರ್ಚುಗಳೇ ಜ್ಞಾನಾರ್ಜನೆಯ ಕೇಂದ್ರಗಳಾಗಿದ್ದವು. ಬ್ರೂನೋ ನೇಪಲ್ಸ್ ನಲ್ಲಿ ಧರ್ಮ ಮೀಮಾಂಸೆಯನ್ನು ಅಭ್ಯಾಸ ಮಾಡಿದ. ಆತನ ಸ್ಮರಣ ಶಕ್ತಿ ಅಗಾಧ. ಅದನ್ನು ಬೆಳೆಸಲು ಆತ ತನ್ನದೇ ಆದ ವಿಶೇಷ ತಂತ್ರಗಳನ್ನು ಬೆಳೆಸಿಕೊಂಡಿದ್ದ. ಹೆಚ್ಚಿನ ಅಭ್ಯಾಸಕ್ಕಾಗಿ ಬ್ರೂನೋ ರೋಮ್ ನಗರಕ್ಕೆ ಬಂದಾಗ, ಅಂದಿನ ಪೋಪ್ ಆತನ ಸ್ಮರಣ ಶಕ್ತಿಯ ಪ್ರತಿಭೆಗೆ ಆಕರ್ಷಿತನಾಗಿ, ಬ್ರುನೋನ ಅಧ್ಯಯನಕ್ಕೆ ವಿಶೇಷ ವ್ಯವಸ್ಥೆ ಮಾಡಿಸುತ್ತಾನೆ. ಕ್ರೈಸ್ತ ಧರ್ಮದ ಉಚ್ಛ್ಛ್ರಾಯ ಕಾಲವದು. ಪೋಪ್ ಧರ್ಮಾಧಿಕಾರಿಯಾಗಿದ್ದನಲ್ಲದೇ ಮಧ್ಯ ಇಟಲಿಯ ರಾಜನೂ ಆಗಿದ್ದ. ಅದರೊಟ್ಟಿಗೆ ತನ್ನ ಪ್ರಭಾವವನ್ನು ಯೂರೋಪಿನ ಸಾಕಷ್ಟು ದೇಶಗಳ ರಾಜಕೀಯದಲ್ಲೂ ಬೀರಿದ್ದ. ಕ್ರಿಸ್ತನ ಬೋಧನೆಗೆ ವಿರುದ್ಧವಾಗಿ, ಕ್ರೈಸ್ತ ಧರ್ಮದಲ್ಲಿ ಅಸಹಿಷ್ಣುತೆ, ಕಂದಾಚಾರ, ಅಧಿಕಾರ ಲೋಲುಪತೆ ಬೇರು ಬಿಟ್ಟಿದ್ದವು. ಬ್ರೂನೋ ಪಾದ್ರಿಯಾಗಿ ಚರ್ಚ್ ಸೇರಿದ್ದರೂ, ವ್ಯಾಟಿಕನ್ ನಗರದಲ್ಲಿನ ಗ್ರಂಥಾಲಯಗಳಲ್ಲಿ ಹೆಚ್ಚು ಕಾಲ ಕಳೆದನೇ ಹೊರತು ಚರ್ಚುಗಳಲ್ಲಲ್ಲ. ಅಂದಿನ ಕ್ರೈಸ್ತ ಧರ್ಮದ ನಂಬಿಕೆಗಳಿಗೆ ವ್ಯತಿರಿಕ್ತವಾದ ವಿಚಾರಗಳತ್ತ ಬ್ರೂನೋ ಆಕರ್ಷಿತನಾಗಿ, ಆ ವಿಷಯಗಳ ಅಭ್ಯಾಸದಲ್ಲಿ ತೊಡಗಿಕೊಳ್ಳುತ್ತಾನೆ. ಎರಾಸ್ಮಸ್, ಕೋಪರ್ನಿಕಸ್ ರಂತಹ ದಾರ್ಶನಿಕರ ದೃಷ್ಟಿಕೋನವನ್ನು ತನ್ನದಾಗಿಸಿಕೊಂಡ ಬ್ರೂನೋ ಪೋಪ್ ನ ಅವಕೃಪೆಗೆ ಒಳಗಾಗಲು ತಡವಾಗಲಿಲ್ಲ.

ಸೈದ್ಧಾಂತಿಕ ರಾಜಿಗೆ ಒಪ್ಪದ ಜೋರ್ಡಾನೋ ಬ್ರೂನೋ

೧೫೭೬ ರಲ್ಲಿ  ರೋಮ್ ನಿಂದ ತಪ್ಪಿಸಿಕೊಂಡು ಓಡಿದ ಬ್ರೂನೋ, ಸ್ವಿಟ್ಝರ್ಲ್ಯಾನ್ಡ್, ಫ್ರಾನ್ಸ್, ಜರ್ಮನಿ, ಇಂಗ್ಲೆಂಡ್ ದೇಶಗಳನ್ನೆಲ್ಲ ಸುತ್ತಿ, ಪ್ರಾಚಾರ್ಯನಾಗಿ, ಹೆಚ್ಚಿನ ಅಭ್ಯಾಸ ಮಾಡಿ, ೧೫೯೧ ರಲ್ಲಿ ವೆನಿಸ್ ನಗರಕ್ಕೆ ಮರಳಿದ. ಆಗ ವೆನಿಸ್, ವ್ಯಾಟಿಕನ್ನಿನ ಆಳ್ವಿಕೆಗೆ ಒಳಪಟ್ಟಿರಲಿಲ್ಲ. ಬ್ರೂನೋ ಹಾಗಾಗೇ ತಾನು ಅಲ್ಲಿ ಸುರಕ್ಷಿತವೆಂಬ ಭಾವನೆಯಲ್ಲಿ ಹಿಂದಿರುಗಿರಬಹುದು. ‘ಕ್ರಿಸ್ತ ದೇವನ ಸೃಷ್ಟಿ – ಮಗನಲ್ಲ, ಮೇರಿ ಕನ್ಯೆಯಾಗಿರಲಿಲ್ಲ, ಪವಿತ್ರ ಟ್ರಿನಿಟಿಗೆ ಅರ್ಥವಿಲ್ಲ, ಭೂಮಿ ಸೂರ್ಯನ ಸುತ್ತು ಸುತ್ತುತ್ತಿದೆ, ಬ್ರಹ್ಮಾಂಡದಲ್ಲಿ ಹಲವಾರು ಸೌರ ಮಂಡಲಗಳಿವೆ, ಹಾಗೆಯೇ ದೇವರೂ ಹಲವಾರು ಇರಬಹುದು’ ಇವೆಲ್ಲ ಬ್ರೂನೋನ ಬೋಧನೆಗಳಾಗಿದ್ದವು. ಪೋಪ್ ಹಾಗೂ ಆತನ ಸಹಚರರರು ಇದನ್ನು ಸಹಿಸಿಯಾರೇ? ಯಾವುದೋ ತಂತ್ರ ಹೂಡಿ, ವೆನಿಸ್ ನಗರದಲ್ಲಿ ಬ್ರುನೋನನ್ನು ಬಂಧಿಸಿದರು. ಸತತವಾಗಿ ಏಳು ವರ್ಷಗಳ ಕಾಲ ವ್ಯಾಟಿಕನ್ನಿನ ಜೈಲಿನಲ್ಲಿ ಚಿತ್ರಹಿಂಸೆ ಕೊಟ್ಟರೂ ಬ್ರೂನೋ ತನ್ನ ಆತನ ವಿಚಾರಧಾರೆಯನ್ನು ಬದಲಿಸಲು, ತಾನು ಪಡೆದ ಜ್ಞಾನವನ್ನು ಅಸತ್ಯ, ಪಾಪ ಎಂದು ಒಪ್ಪಿಕೊಳ್ಳಲಿಲ್ಲ. ಬ್ರುನೋನನ್ನು ಬಗ್ಗಿಸಲಾಗದೆ ಹತಾಶೆಯಿಂದ ಪೋಪ್ ಕ್ರಿ.ಶ ೧೬೦೦ ರಲ್ಲಿ ಆತನಿಗೆ ಮರಣದಂಡನೆ ವಿಧಿಸುತ್ತಾನೆ. ಆತನನ್ನು ಕ್ಯಾಮ್ಪೋ ಡಿ ಫಿಯೋರಿಗೆ ಕರೆದೊಯ್ಯುವಾಗ, ದಾರಿಯಲ್ಲಿ ತನ್ನ ವಿಚಾರಗಳಿಂದ ಬ್ರೂನೋ ಜನರ ಮೇಲೆ ಪ್ರಭಾವ ಬೀರದಿರಲಿ ಎಂದು ಆತನ ಬಾಯಿಯನ್ನು ಹೊಲಿಯುತ್ತಾರೆ. ಮಾರುಕಟ್ಟೆಯ ಮಧ್ಯದಲ್ಲಿ ಆತನ ಸಜೀವ ದಹನವಾಗುತ್ತದೆ, ಆದರೆ ಬ್ರುನೋನ ವಿಚಾರಗಳು ಅಲ್ಲಿ ದಹನವಾಗಲಿಲ್ಲ .

೧೮೮೯ರಲ್ಲಿ ರೋಮ್ ನಗರದ ಸ್ವತಂತ್ರ ಚಿಂತಕರ ಸಂಘ; ಜಡ್ಡು ಗಟ್ಟಿದ ಚರ್ಚಿನ ಸಂಪ್ರದಾಯಗಳಿಗೆ ಸೆಡ್ಡು ಹೊಡೆದು, ವೈಚಾರಿಕತೆಯ ಪ್ರತಿಪಾದನೆಗೆ ಜೀವನವನ್ನು ಮುಡಿಪಾಗಿಸಿದ ಬ್ರುನೋನ ಪುತ್ಥಳಿಯನ್ನು ಆತನನ್ನು ಬಲಿಕೊಟ್ಟ ಜಾಗದಲ್ಲಿ ಪ್ರತಿಷ್ಠಾಪಿತು. ಬ್ರುನೋನ ಪುತ್ಥಳಿ ವ್ಯಾಟಿಕನ್ ನಗರದತ್ತ ನೋಡುವಂತೆ ನಿಲ್ಲಿಸಿದ್ದನ್ನು ಅಂದಿನ ಪೋಪ್ ಸಹಿಸಲಿಲ್ಲವಂತೆ. ಅವನ ದೃಷ್ಟಿಯನ್ನು ಕಟ್ಟಿಹಾಕಲು ಮೂರ್ತಿಯ ಎದುರು ವ್ಯಾಟಿಕನ್ ಕಾಣದಂತೆ ಒಂದು ಅಪಾರ್ಟ್ಮೆಂಟ್ ಸಂಕೀರ್ಣವನ್ನು ಕಟ್ಟಿಸಿದ ಎನ್ನುತ್ತಾರೆ. ಈ ಕಥೆಯ ಸತ್ಯಾಸತ್ಯತೆಯನ್ನು ನಾನು ಒರೆಗಿಟ್ಟಿಲ್ಲ.

ರೋಮ್ ನಗರ ಇಂತಹ ಅದ್ಭುತ ಕಥೆಗಳ ತಳವಿಲ್ಲದ ಗುಡಾಣ. ಇವನ್ನು ನೋಡಲು, ಅನುಭವಿಸಲು ಒಂದೆರಡು ದಿನಗಳು ಸಾಲವು. ಸಿಸಿಲಿಯ ಹಾಗೂ ಬ್ರೂನೋ ಅವರ ನಡುವಿನ ಅಂತರ ಸರಿ ಸುಮಾರು ಒಂದೂವರೆ ಸಾವಿರ ವರ್ಷಗಳು . ಸಮಕಾಲೀನ ವಿಚಾರಗಳಿಗೆ ವ್ಯತಿರಿಕ್ತವಾದ ವಿಚಾರಗಳನ್ನು ಸಮಾಜದ ಒಳಿತಿಗಾಗಿ ಪಸರಿಸಲು ಇಬ್ಬರೂ ತಮ್ಮ ಜೀವನವನ್ನು ಬಲಿಗೊಟ್ಟರು. ಹಳತು – ಹೊಸತುಗಳ ನಡುವಿನ ಘರ್ಷಣೆ ಕೊನೆಗೊಂಡಿಲ್ಲ. ಸಿಸಿಲಿಯ ಹಾಗೂ ಬ್ರೂನೋ ಬದಲಾಗದ ಮಾನವನ ವರ್ತನೆಗೆ ಹಿಡಿದ ಕನ್ನಡಿಗಳಾಗಿದ್ದಾರೆ, ಇಂದಿಗೂ ಪ್ರಸ್ತುತವಾಗಿದ್ದಾರೆ.   

(ಎಲ್ಲ ಚಿತ್ರಗಳು ಲೇಖಕ ಸೆರೆ ಹಿಡಿದದ್ದು )

ವೇದಕ್ಕನ ನೆನಪಿನೊಂದಿಗೆ – ಉಮೈರಾ ಬರೆದ ಲೇಖನ

ಈ ವಾರ ಪ್ರಥಮ ಬಾರಿ 'ಅನಿವಾಸಿಗೆ' ಮೂಲತಃ ಮಂಗಳೂರಿನವರಾದ ಹೊಸ ಲೇಖಕಿ  ಉಮೈರಾವನ್ನು ಸ್ವಾಗತಿಸುತ್ತಿದ್ದೇವೆ. ಅವರು ಮೂರು ವರ್ಷಗಳಿಂದ ಗ್ಲಾಸ್ಟರಿನಲ್ಲಿ ವಾಸಿಸುತ್ತಿದ್ದಾರೆ. ತಮ್ಮ ಬಗ್ಗೆ ಅವರಮಾತಿನಲ್ಲೇ ಅವರ ಪರಿಚಯವನ್ನು ಕೇಳೋಣ:
"ನಾನು ವಿವೇಕಾನಂದ ಕಾಲೇಜು ಪುತ್ತೂರಿನಲ್ಲಿ ಇಲೆಕ್ಟ್ರಾನಿಕ್ & ಕಮ್ಯುನಿಕೇಷನ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದು ಈಗ UKಯಲ್ಲಿ Aerospace Engineer ಆಗಿ ಕೆಲಸ ಮಾಡುತ್ತಿದ್ದೇನೆ‌. ಪತಿ ಹನೀಫ್ ಕೂಡ ಇಲ್ಲಿ Aerospace Engineer. ನನಗೆ ಸಾಹಿತ್ಯದಲ್ಲಿ ಅಪಾರ ಆಸಕ್ತಿಯಿದ್ದು ಉತ್ತಮ ಪುಸ್ತಕಗಳನ್ನು ಓದುವ ಅಭ್ಯಾಸ ಮೈಗೂಡಿಸಿಕೊಂಡಿದ್ದೇನೆ‌.
ನನ್ನ ಜೀವನದ ಅನುಭವಗಳನ್ನು, ಮನದಲ್ಲಿ ಮೂಡುವ ಭಾವನಾತ್ಮಕ ವಿಚಾರಗಳನ್ನು ಅಕ್ಷರಗಳಲ್ಲಿ ವ್ಯಕ್ತಪಡಿಸಿ ಬರೆಯುವಲ್ಲಿ ಆಸಕ್ತಳಾಗಿದ್ದೇನೆ. ಪುಸ್ತಕಗಳ ಓದುವುದು ಮತ್ತು ಬರವಣಿಗೆ ನನ್ನ ಪ್ರಮುಖ ಹವ್ಯಾಸಗಳು."

ತಮ್ಮ ನೆರೆಹೊರೆಯಲ್ಲೇ ವಾಸಿಸುವ ವೇದಕ್ಕನ ಹೃದಯಸ್ಪರ್ಶಿ ವ್ಯಕ್ತಿಚಿತ್ರವನ್ನು ಇಲ್ಲಿ ಬರೆದಿದ್ದಾರೆ. ಓದಿ ಪ್ರೋತ್ಸಾಹಿಸಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.

ಸಂಪಾದನೆಗೆ ಸಹಾಯ ಮಾಡಿ, ಸ್ವಲ್ಪೇ ಸಮಯದಲ್ಲಿ ಚಿತ್ರವನ್ನು ಬರೆದು ಶೋಭೆಹೆಚ್ಚಿಸಿದ ಗುಡೂರ್ ಅವರಿಗೆ ಋಣಿ. (-ಸಂ )
******************************************
ಮುಂಜಾನೆ ಹಂಡೆಯಲ್ಲಿ ಕಾದ ಬಿಸಿನೀರ ಸ್ನಾನ ಮುಗಿಸಿ ಬಂದ ನನಗೆ, ಬಿಸಿ ಬಿಸಿಯಾದ ನೀರ್ದೋಸೆ ಮಾಡಿಟ್ಟ ಅಮ್ಮ, ‘ಬೇಗ ರೆಡಿಯಾಗಿ ಇದನ್ನು ತಿಂದು ಹೋಗು’ ಅಂದಾಗ, ‘ಅಮ್ಮಾ…… ನಾನು ಮತ್ತು ಸ್ಮಿತಾ ಒಂದೇ ಬಸ್ಸಲ್ಲಿ ಹೋಗ್ಬೇಕು’ ಅಂತ ಹೇಳಿ ‘ಒಂದೇ ಒಂದು ದೋಸೆ ಸಾಕಮ್ಮ’ ಅಂದು ಬೇಗ ಬೇಗನೆ ತಿಂದು ಬಸ್ಸಿಗೆ ಓಡಿಬಿಟ್ಟೆ.

ಅಮ್ಮ ಏನೋ ಗೊಣಗುತ್ತಿರುವುದು ಕೇಳಿಸ್ತಿತ್ತು. ‘ಇವರಿಬ್ಬರ ಮಾತು ಮುಗಿಯೋದೇ ಇಲ್ಲ ಎಂದಿರಬಹುದು’ ಅಂತ ಮನಸ್ಸಲ್ಲೇ ಮುಸಿಮುಸಿ ನಗ್ತಾ ಓಡಿ ಹೋದೆ.
ನಾನು ಮತ್ತು ಸ್ಮಿತಾ ಇಬ್ಬರೂ ಮಾತಿನಲ್ಲಿ ಒಬ್ಬರನ್ನೊಬ್ಬರು ಮೀರಿಸುವವರು. ನನ್ನ ಮಾತಿನಲ್ಲಿ ನಾನು ಕಂಡದ್ದು, ಕೇಳಿದ್ದು, ಸಂಬಂಧಿಕರು, ನೆರೆಹೊರೆಯವರೆಲ್ಲರ ವಿಷಯವೂ ಒಳಗೊಂಡಿರುತ್ತಿದ್ದರೆ ಅವಳು ನನಗಿಂತಲೂ ಇನ್ನೂ ಎರಡು ಹೆಜ್ಜೆ ಮುಂದೆ. ಅದೆಷ್ಟೋ ವಿಷಯ ತಂದು ಸಾಸಿವೆ ಹುರಿದಂತೆ ಮಾತನಾಡುತ್ತಿದ್ದಳು.

ಆ ದಿನ ಕಾಲೇಜು ಮುಗಿಸಿ ಬರುವಾಗ ನಾನು ಆ ತಿಂಗಳ ‘ತುಷಾರ’ ಎತ್ತಿಕೊಂಡೆ.

ಅದೇನೋ ಮಾತಾಡುವಾಗ ಅವಳು ಕೇಳಿದ್ಲು “ಉಮೈರಾ, ಅದು ಹೇಗೆ ಮೊನ್ನೆ ನೀನು ಮಹಾಭಾರತದ ಕ್ವಿಜ್ ಅಲ್ಲಿ ಬಹುಮಾನ ತಗೊಂಡೆ? ನೀವು ನಮ್ಮ ಹಿಂದೂ ಗ್ರಂಥಗಳನ್ನು ಓದಲ್ಲ ಅಲ್ವಾ?’

‘ಹ್ಮ್, ಹಾಗೇನಿಲ್ಲ ಸ್ಮಿತಾ, ನಮ್ಮ ಕುರಾನಿನ ಮೊದಲ ಸೂಕ್ತವೇ “ಇಖ್ರಅ್” ಅಂದ್ರೆ “ಓದು” ಎಂದಾಗಿದೆ. ನಮ್ಮಜ್ಜಿಯ ಹತ್ರ ಪುರಾಣ ಸೇರಿದಂತೆ ಹಲವಾರು ಪುಸ್ತಕಗಳಿವೆ. ಅದರಲ್ಲಿದ್ದ “ಸಂಕ್ಷಿಪ್ತ ಮಹಾಭಾರತ“ ಅನ್ನುವ ಒಂದು ಪುಸ್ತಕ ನಾನು ಓದಿದ್ದೆ’ ಅಂದೆ.

ಹೀಗೆ ನಮ್ಮ ಮಾತಿನ ಸರಣಿಗಳು ದಿನದಿನವೂ ಇಂತಹ ವಿಭಿನ್ನ ಸಂಪ್ರದಾಯದ ಪರಸ್ಪರರ ನಡುವಿನ ಕೌತುಕದ ನಾನಾ ಸುದ್ದಿಗಳೊಂದಿಗೆ ಸಾಗುತ್ತಲೇ ಇರುತ್ತಿತ್ತು.

‘ಅಜ್ಜಿನೂ ಓದ್ತಾರೆ’ ಅಂತ ಕೇಳಿದಾಗ ಚಕಿತಗೊಂಡಿದ್ದ ಅವಳಿಗೆ ಅವರಿಗಿದ್ದ ಅತಿಯಾದ ಓದಿನ ಹವ್ಯಾಸವನ್ನು ನಾನು ಬಲು ಖುಶಿ ಮತ್ತು ಹೆಮ್ಮೆಯಿಂದ ಹೇಳಿದ ಆ ನೆನಪು ಮೊನ್ನೆ ಮೊನ್ನೆ ನಡೆದಂತಿದೆ.

ನನ್ನ ಮಾತುಗಳ ನಡುವೆ ಪದೇಪದೇ ಅಜ್ಜಿಯ ವಿಷಯ ಬರುತ್ತಿದ್ದರೆ, ಅವಳ ಮಾತುಗಳ ನಡುವೆ ಪದೇಪದೇ ಬರುತಿದ್ದ ಹೆಸರು ಅವಳ ಇಷ್ಟದ ‘ವೇದಾ’ ಎಂಬ ಹೆಂಗಸಿನದ್ದು.

ಆ ವೇದಕ್ಕನಿಗೂ ಅವಳು ನನ್ನ ಬಗ್ಗೆ ಹೇಳಿ ಹೇಳಿ, ವೇದಕ್ಕನಲ್ಲಿ ನನ್ನ ಬಗ್ಗೆ ಒಂದು ಕುತೂಹಲದ ಪ್ರಪಂಚವನ್ನೇ ಸೃಷ್ಟಿಸಿದ್ದಳು ಸ್ಮಿತಾ.

ನನಗಂತೂ ಆ ವೇದಕ್ಕನ್ನ ಅಲ್ಲೀ ತನಕ ನಾನು ನೋಡದೇ ಇದ್ರೂ, ಅವರಂದ್ರೆ ಅದೇನೋ ತೀವ್ರ ಕುತೂಹಲ ಹುಟ್ಟಿ ಬಿಟ್ಟಿತ್ತು. ವೇದಕ್ಕ ಏನೋ ಒಬ್ಬ ಮಹಾನ್ ಸಾಧಕಿ ಎಂಬ ಮನೋಭಾವ ಬೆಳೆದು ಬಿಟ್ಟಿತ್ತು.

ಒಂದು ದಿನ ಸ್ವಲ್ಪ ಲೇಟಾಗಿ ಶಾಲೆಗೆ ಬಂದ ಸ್ಮಿತ, ನಾನು ಸಿಕ್ಕಿದ ಕೂಡಲೇ ‘ಅಯ್ಯೋ, ಇವತ್ತೇನ್ ಗೊತ್ತ ವೇದಕ್ಕನ ಮಗಳು ಮೊದಲ ಬಾರಿ ಶಾಲೆಗೆ ಹೋಗ್ತಿದ್ದಾಳೆ. ಅವ್ಳು ಹೊರಟು ನಿಂತು ಅಳೋದೇನು, ವೇದಕ್ಕನೂ ಅಳೋದೇನು… ಅದನ್ನು ನೋಡ್ತಾ ಮನೆಯಲ್ಲಿ ನಾವೆಲ್ಲ ತಮಾಷೆ ಮಾಡ್ತಾ ನಿಂತುಕೊಂಡೆವು. ಹಾಗೆ ಸ್ವಲ್ಪ ಲೇಟ್ ಆಯಿತು’ ಅಂದಳು.

ಯಕ್ಷಗಾನದಲ್ಲಿ ಮಹಿಷಾಸುರ, ರಾವಣ ಹೀಗೆ ಯಾವುದೇ ಕಠೋರಹೃದಯಿಯ ಪಾತ್ರವನ್ನು ಕೊಟ್ರೂ ಅಚ್ಚುಕಟ್ಟಾಗಿ ನಿಭಾಯಿಸುವ ವೇದಕ್ಕ ಮಾತ್ರ ನಿಜ ಜೀವನದಲ್ಲಿ ಬಲು ಭಾವ ಜೀವಿ. ಬದುಕಿನ ಸೂಕ್ಷ್ಮಾತಿ ಸೂಕ್ಷ್ಮಗಳನ್ನು ಅರಿತವರಂತೆ ಇರುವ ಅವರ ಆಪ್ತತೆ ಉಕ್ಕಿಸುವ ಮಾತುಗಳು, ಯಾವುದೇ ಕುಹಕ-ಕುತಂತ್ರಗಳಿಲ್ಲದ ಅವರ ನೈಜ ಸಾಧುಸ್ವಭಾವ ಯಾರ ಹೃದಯದಲ್ಲೇ ಆದರೂ ಅವರ ಬಗ್ಗೆ ಪ್ರೀತಿ ಹುಟ್ಟಿಸುವಂತಿತ್ತು. ಮನಸ್ಸಲ್ಲಿರೋದನ್ನೆಲ್ವಾ ಒಮ್ಮೆಲೇ ಸುರಿಯುವ ಮಳೆಯಂತೆ ಅವರ ಮೆಲು ಮಾತುಗಳಲ್ಲೇ ಸುರಿಸಿಬಿಡುತ್ತಿದ್ದರು.

ನನ್ನ ಮತ್ತು ವೇದಕ್ಕನ ಮೊದಲ ಭೇಟಿಯನ್ನಂತೂ ನಾನೆಂದೂ ಮರೆಯಲು ಸಾಧ್ಯವೇ ಇಲ್ಲ.

“ಅಷ್ಟಮಿ ಹಬ್ಬಕ್ಕೆ ನಾವು ಕೊಟ್ಟಿಗೆ ಮಾಡ್ತೇವೆ, ಉಮೈರಾಳನ್ನು ಇನ್ವೈಟ್ ಮಾಡಿದ್ರೆ ಏನು ಅಂದ್ಕೊಂಡೆ ಆಂದ್ರಂತೆ”
ಹಾಗೆ ನಮ್ಮ‌ ಭೇಟಿ‌‌ ಅವರ ಮನೆಯಲ್ಲಿ ಅಷ್ಟಮಿ ದಿನದಂದಾಗಿತ್ತು .

ಮೂರು ಕಲ್ಲುಗಳ ಆ ಮೂಗುತಿ, ಕಣ್ಣಿಗೆ ಕಾಡಿಗೆ, ದೊಡ್ಡ ಬಿಂದಿ, ಕರ್ಲಿ (ಗುಂಗುರು) ಕೂದಲು ಮತ್ತು ಕಲಾವಿದೆ ಎಂದು ಗುರುತಿಸಲು ಸಾಧ್ಯವಾಗುವ ಅವರ ಚೈತನ್ಯಯುತ ಲವಲವಿಕೆಯ ಮಾತುಗಳು.

ಅದೆಷ್ಟು ಲವಲವಿಕೆ, ಅತಿಯಾದ ಅತಿಥಿ ಸತ್ಕಾರ, ಪ್ರೀತಿ ವಾತ್ಸಲ್ಯ ತುಂಬಿದ ವೇದಕ್ಕನ ಆಗಾಗ ತಾರಕಕ್ಕೇರುವ ನಗು ನಮ್ಮ ಆ ದಿನವನ್ನು ಸಂಪನ್ನವಾಗಿಸಿತು.

“ನಾನೆಷ್ಟು ಮಾತಾಡ್ತೇನೆ ಅಲ್ವಾ? ನನ್ನ ಗಂಡ ಹೇಗೆ ಸಹಿಸಿಕೊಳ್ತಾರೋ ಪಾಪ” ಅಂತ ತನ್ನನ್ನೇ ತಮಾಷೆ ಮಾಡಿಕೊಂಡರು.
“ನಂಗೆ ಮಾಸ್ಟರ್ಸ್ ಮಾಡ್ಬೇಕು ಅಂತ ತುಂಬಾ ಇಷ್ಟ ಇತ್ತು “

“ಇನ್ನೂ ಮಾಡ್ಬಹುದಲ್ವಾ?” ಅಂದೆ.

“ಅಯ್ಯೋ ಈ ಮರುಭೂಮಿಗೆ ಎಷ್ಟು ನೀರು ಸುರಿದರೂ ಸರಿಯೇ ಇನ್ನು” ಅಂತ ಮತ್ತೊಮ್ಮೆ ನಗು.

“ಅಲ್ಲ ಅಕ್ಕ, ಮಕ್ಕಳು ಸ್ಕೂಲ್ಗೆ ಹೋದ್ರೆ ಇಡೀ ದಿನ ನೀವೇನ್ ಮಾಡ್ತೀರ?” ಅಂತ ಅಮ್ಮನನ್ನು ಕೇಳಿದಾಗ “ಬೆಳಗ್ಗೆ ಬಂದ ಉದಯವಾಣಿಯನ್ನು ದಿನದಲ್ಲಿ ೪ ಸಲ ಓದಿ ಮುಗಿಸುತ್ತೇನೆ” ಎಂದರು.

ಯಕ್ಷಗಾನ ಲೋಕದಲ್ಲಿ ಅವರ ಸಾಧನೆಗೆ ಸಂದ ಪ್ರಶಸ್ತಿಗಳನ್ನು ತೋರಿಸಿ ಅವರ ಪ್ರೊಫೆಷನಲ್ ವಲಯದ ಬಗ್ಗೆ ಮಾತಾಡಿಕೊಂಡರು. ಅದು ಹೇಗಪ್ಪ ಆ ತರ ಪಾತ್ರಗಳೆಲ್ಲ ಮಾಡುತ್ತಾರೋ ಈಕೆ ಅಂತ ನಾನು ಯೋಚಿಸುವಂತಾಯಿತು.

ಮಾತಲ್ಲಿ ಪ್ರೀತಿ, ವಾತ್ಸಲ್ಯ ತುಂಬಿಕೊಂಡೇ ಮಾತಾಡುವ ಅವರ ಜೊತೆ ಸಮಯ ಕಳೆದದ್ದೇ ಗೊತ್ತಾಗುತ್ತಿರಲಿಲ್ಲ.


ಮನುಷ್ಯರಿಗೇನು ಬೇಕು ಮತ್ತೆ – ತನ್ನ (ಸುತ್ತಲೂ) ಸರೌಂಡಿಂಗ್ನಲ್ಲಿ ಪ್ರೀತಿ, ಕರುಣೆ, ವಾತ್ಸಲ್ಯ ತೋರುವವರಿದ್ದರೆ ಎಲ್ಲವನ್ನೂ ಜಯಿಸಿದಂತೆ ಖುಷಿ ಅಲ್ಲವೇ?

ಅದೆಷ್ಟೋ ಭೇಟಿಗಳು; ಆ ನಂತರದ ದಿನಗಳಲ್ಲಿ ನಮ್ಮದು ನಡೆಯುತ್ತಲೇ ಇತ್ತು. ಮನೆಯಲ್ಲಿ ಏನಾದ್ರೂ ತರಕಾರಿ ಬೆಳೆದ್ವಿ ಅಂದ್ರೆ ವೇದಕ್ಕನ ಮನೆಗೂ ಕಳುಹಿಸಿಕೊಡುವ ಪದ್ದತಿ ಇತ್ತು.

ಪಿಯುಸಿ ಮುಗಿದು ಮುಂದಿನ ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್ ಸೇರುವ ದಿನವೊಂದು ಬಂದಿತ್ತು. ಮನೆಯವರ ಬೀಳ್ಕೊಡುಗೆಯ ಜೊತೆಗೆ ನಮ್ಮ ಆಪ್ತರಾಗಿದ್ದ ವೇದಕ್ಕ ಕೂಡ ಬೀಳ್ಕೊಡಲು ಬಂದಿದ್ದರು. ನಮ್ಮನ್ನು ನೆನಪಿಸ್ಕೊಳ್ತಾ ಇರು, ಕಾಲ್ ಮಾಡು ನಂಗೆ, ಲ್ಯಾಂಡ್ಲೈನ್ ನಂಬರ್ ಗೊತ್ತಿದೆ ಅಲ್ವಾ ಅಂದಿದ್ದರು.


ಅದೊಂದು ದಿನ ಅಮ್ಮ ಕಾಲ್ ಮಾಡಿದವರು ’ವೇದಕ್ಕನಿಗೆ ತುಂಬಾ ಹುಷಾರಿಲ್ಲ, ಕ್ಯಾನ್ಸರ್ ಅದೇನೋ ಫೈನಲ್ ಸ್ಟೇಜಲ್ಲಿ ಇದೆ ಅಂತೆ’, ಅಂತ ಆಘಾತಕಾರಿ ಸುದ್ದಿಯನ್ನು ಹೇಳಿದ್ರು. ನನ್ನ ಮನಸ್ಸಲ್ಲೇನೋ ವೇದಕ್ಕನಿಗೇನಾಗುತ್ತೋ ಅನ್ನುವ ಭಯ. ಆ ದಿನದಿಂದ ಹಾಸ್ಟೆಲಲ್ಲಿ ಅವರದ್ದೇ ನೆನಪು, ಫ್ರೆಂಡ್ ಒಬ್ಬಳತ್ರ ನನ್ನ ದುಗುಡವನ್ನು ಹಂಚಿಕೊಂಡಿದ್ದೆ ಕೂಡ.

ದೇವ್ರೇ ಅವ್ರು ಬೇಗ ಗುಣಮುಖರಾಗಿ ಬರಲಿ ಅಂತ ಮನಸ್ಸು ಪೂರ್ತಿಯಾಗಿ ಬೇಡ್ಕೊಂಡಿದ್ದೆ.
ಕೆಲವೇ ದಿನದ ಪರಿಚಯವಾದ್ರೂ, ಮರೆಯಲಾಗದಂತಹ ಆಪ್ತತೆ ಇತ್ತು ನಮ್ಮಲ್ಲಿ.

ಮತ್ತಿನ ದಿನಗಳಲ್ಲಿ ಕಿಮೊತೆರಪಿ ಮಾಡಿಸಿಕೊಂಡ ವೇದಕ್ಕನನ್ನು ನೋಡಲು ಅಮ್ಮ ಹೋಗಿದ್ರಂತೆ.

ಆದ್ರೆ ಕೆಲವೇ ದಿನಗಳಲ್ಲಿ ವೇದಕ್ಕ ನಮ್ಮನ್ನು ಬಿಟ್ಟು ಅಗಲಿದ ಸುದ್ದಿ ಬಂದಾಗ ಅರಗಿಸಿಕೊಳ್ಳಲು ಆಗಲಿಲ್ಲ. ಕೂದಲು ಎಲ್ಲ ಹೋಯ್ತಕ್ಕ, ಟೋಪನ್ ಹಾಕಿ ಆದ್ರೂ ನಿಮ್ಮ ಮಗಳ ಮದುವೆಗೆ ಬರ್ತೇನೆ ಅಮ್ಮನಿಗೆ ಹೇಳಿದ ಅವರ ಮಾತು, ಇನ್ನೂ ನೆನಪಾಗಿಯೇ ಉಳಿದಿದೆ.

- ಉಮೈರಾ.

**************************************