ಅನಿವಾಸಿ ಬಂಧುಗಳಿಗೆ ನಮಸ್ಕಾರ. ಎರಡು ವಾರದಿಂದ ಭಾರತ ಪ್ರವಾಸದಲ್ಲಿದ್ದೇನೆ. ಗೃಹಪ್ರವೇಶ, ಮದುವೆ ಸಮಾರಂಭಗಳನ್ನು ಅಟೆಂಡ್ ಮಾಡುತ್ತ, ಬಂಧು ಬಳಗ, ಸ್ನೇಹಿತರನ್ನು ಭೇಟಿಯಾಗುತ್ತ ದೆಹಲಿ, ಮುಂಬಯಿ, ಪುಣೆ, ಧಾರವಾಡ ಎಂದೆಲ್ಲ ಸುತ್ತಾಡುತ್ತ , ದೆಹಲಿಯ ಚಳಿಗಾಲ ಕಳೆದು ಈಗಷ್ಟೇ ಆರಂಭವಾಗುತ್ತಿರುವ ಎಳೆಯ ಬಿಸಿಲನ್ನೂ, ಮುಂಬಯಿಯ ಆ humid ಶೆಕೆಯನ್ನೂ, ಪುಣೆಯ ಸಂಜೆ ಮುಂಜಾನೆಗಳ ಆಹ್ಲಾದಕರ ತಂಪು ಹವೆಯನ್ನೂ , ಧಾರವಾಡದ ಬಿಸಿಲು ಮಳೆಗಳ ಸಮ್ಮಿಶ್ರ ಹವಾಮಾನವನ್ನೂ, ಲಿಠ್ಠಿ ಛೌಕಾ, ದಾಲ್ ಮುರಾದಾಬಾದಿ, ಮಿಸಳ್ ಪಾವ್, ಭಾಕರ್ ವಡಿ, ಶ್ರೀಖಂಡ, ಗಿರಮಿಟ್, ಫೇಡೆಗಳನ್ನೂ ಸಮಸಮವಾಗಿ ಆಸ್ವಾದಿಸುತ್ತ ಜೊತೆಗೇ ಒಂದಷ್ಟು ನೆಗಡಿ, ಕೆಮ್ಮು ಎಂದು ಆರೋಗ್ಯ ಕೆಡಿಸಿಕೊಂಡು ಔಷಧಿ, ಗಳಿಗೆಯನ್ನೂ ಸೇವಿಸುತ್ತ ರಜಾದ ಮಜಾ ಸವಿಯುತ್ತಿದ್ದೇವೆ. ಹೀಗಾಗಿ ಈ ಸಲ ಅನಿವಾಸಿಯ ಓದಿಗೆ ಚಿಕ್ಕದಾದೊಂದು ವಸ್ತುವಿನ ಬಗ್ಗೆ ಒಂದು ಚಿಕ್ಕ ಲೇಖನ. ಒಪ್ಪಿಸಿಕೊಳ್ಳಿ.
~ ಸಂಪಾದಕಿ
ಸೇಫ್ಟಿ ಪಿನ್
ಕೆಲ ದಿನಗಳ ಹಿಂದೆ ಜಯಂತ ಕಾಯ್ಕಿಣಿಯವರ ‘ಅನಾರ್ಕಲಿಯ ಸೇಫ್ಟಿ ಪಿನ್’ ಓದುತ್ತಿರುವಾಗ ಈ ಸೇಫ್ಟಿ ಪಿನ್ ಗೂ, ಆ ಅನಾರ್ಕಲಿಗೂ ಅದೇನು ಸಂಬಂಧವಿರಬಹುದು ಎಂಬ ಗೊಂದಲದ ಭಾವ ನನ್ನನ್ನು ಕಾಡಿತ್ತು. ಆಮೇಲೆ ಹೊಳೆದ ಸತ್ಯವೇನೆಂದರೆ ಅನಾರ್ಕಲಿಯೋ, ಚಂಪಾಕಲಿಯೋ, ಚಮೇಲಿಯೋ ಯಾರೇ ಇರಲಿ ಸೇಫ್ಟಿ ಪಿನ್ ಮಾತ್ರ ಎಲ್ಲರಿಗೂ ಬೇಕೇ ಬೇಕು ಎಂಬುದು. ಈ ಸೇಫ್ಟಿ ಪಿನ್ ಗಳಿಗೂ ಹೆಂಗಳೆಯರಿಗೂ ಬಿಡಿಸಲಾಗದ ನೆಂಟು. ಹೆಂಗಳೆಯರ ಸೀರೆ ಬ್ಲೌಜ್ ಗಳಿಗೂ ಈ ಪಿನ್ನು ಗಳಿಗಂತೂ ಅವಿನಾಭಾವ ಸಂಬಂಧ. ‘ವಾಗರ್ಥ ವಿವ ಸಂಪ್ರೃಕ್ತೌ ವಾಗರ್ಥ ಪ್ರತಿಪತ್ತಯೇ’ ಎಂದು ಕಾಳಿದಾಸ ಹೇಳಿದಂತೆ.
ಸೀರೆಯ ಚಂದದ ಸೆರಗನ್ನು ನೀಟಾಗಿ ಹಿಡಿದಿಡಲು, ಸಡಿಲವಾದ ಬ್ಲೌಸ್ ಅನ್ನು ಫಿಟ್ ಮಾಡಲು, ಬಿಗಿಯಾದ ಬ್ಲೌಸಿನ ಒಳಮೈ ಯ್ಯ ಹೊಲಿಗೆ ಬಿಚ್ಚಲು ಸೀರೆಯ ನೆರಿಗೆಗಳನ್ನು ಒಪ್ಪವಾಗಿಸಲು ಈ ಪಿನ್ನು ಬೇಕೇ ಬೇಕು. ಬ್ಲೌಸುಗಳಂತೂ ಈ ಪಿನ್ನುಗಳ ಭರವಸೆಯ ಮೇಲೆಯೇ ಬದುಕುವುದು. ಏಕೆಂದರೆ ನೀವು ಎಷ್ಟರೇ ರೊಕ್ಕ ಸುರದು ಬೇಕಾದಂತಹ ಡಿಸೈನರ್ ಬೋಟಿಕ್ ನಾಗ ಹೊಲಿಸಿದ್ರೂ ಅವು ನಿಮ್ಮ ಮೈ ಏರುವಾಗ ಲೂಸೋ, ಬಿಗಿಯೋ, ತೋಳು ಇಳಿಯುವುದೋ ಏನೋ ಒಂದು ಆಗಲೇಬೇಕು. ನನಗಂತೂ ಒಮ್ಮೊಮ್ಮೆ ಡೌಟು..ಚಂದದ ಕಿಮ್ಮತ್ತಿನ ಸೀರೆಗಳನ್ನು ದೌಲತ್ತಿನಿಂದ ಉಟ್ಟು ದಿಮಾಕಿನಿಂದ ನಡೆವ ಲಲನಾಮಣಿಯರನ್ನು ಕಂಡು ಹೊಟ್ಟೆ ಉರಿದವರ್ಯಾರದೋ ಕೆಟ್ಟ ದೃಷ್ಟಿತಾಗಿಯೋ,ಶಾಪ ತಟ್ಟಿಯೋ ಈ ಬ್ಲೌಸ್ ಗಳು ಹಾಳಾಗಬಹುದೆಂದು. ಅಂಥ ಸಮಯದಲ್ಲಿ ಶಾಪ ವಿಮೋಚಕನಾಗಿ ನಮಗೆ ನೆರವಾಗುವುದು ಇದೇ ಸೇಫ್ಟಿ ಪಿನ್ನು.
ಈ ಪಿನ್ನಿನ ಋಣ ಭಾರವಿಲ್ಲದ ಹೆಂಗಳೆಯರೇ ಇಲ್ಲ. ಸಾಲ ಸೋಲ ಎಂದರಾಗದ ನಿಯತ್ತಿನ ಜೀವಗಳನ್ನೂ ಇವು ಕಾಡದೇ ಬಿಡುವುದಿಲ್ಲ. ಎಷ್ಟರೇ ಡಜನ್ಗಟ್ಟಲೆ ಪಿನ್ನು ಖರೀದಿ ಮಾಡಿಟ್ಟಿರಿ ಬೇಕಾದ ಸಮಯಕ್ಕೆ ಸಿಗದೇ ಪಕ್ಕದಲ್ಲಿದ್ದ ಅಕ್ಕನೋ, ಅತ್ತಿಗೆಯೋ, ಅಮ್ಮನೋ, ಗೆಳತಿಯೋ ಯಾರ ಬಳಿಯಲ್ಲಾದರೂ ‘ಒಂದು ಪಿನ್ ಇದ್ರೆ ಕೊಡ’ ಎಂದು ನೀವು ಒಮ್ಮಿಲ್ಲ ಒಮ್ಮೆ ಕೇಳೇ ಕೇಳಿರುತ್ತೀರಿ. ಆ ಪಿನ್ನಿನ ಋಣದಲ್ಲಿ ಬಿದ್ದೇ ಇರುತ್ತೀರಿ. ನಿಮಗೆ ಅತಿ ಅವಶ್ಯಕತೆ ಇದ್ದಾಗ, ಬೇಕೆಂದಾಗ ಆ ಪಿನ್ನುಗಳು ನಿಮಗೆ ಸಿಕ್ಕದಿರಲಿ ಎಂದು ಅದ್ಯಾವ ಪರಶುರಾಮ ಶಾಪ ಕೊಟ್ಟನೋ ಕಾಣೆ ಬೇಕೆಂದಾಗ ಡ್ರಾತೆಗೆದು, ಡಬ್ಬಿ ತೆಗೆದು, ಪರ್ಸ್ ತಡಕಾಡಿ ಡ್ರೆಸ್ಸಿಂಗ್ ಟೇಬಲ್ ಜಾಲಾಡಿದರೂ ಅವು ಕಾಣದಂತೆ ಅದೃಶ್ಯವಾಗಿ ಬಿಟ್ಟಿರುತ್ತವೆ. ಎಲ್ಲಿಟ್ಟಿರುವೆವೆಂಬ ನೆನಪು ಬಾರದೆ ನಾವೂ ಸಹ ಆ ಮಹಾಭಾರತದ ಕರ್ಣನಂತೆ ಒದ್ದಾಡುತ್ತಿರುತ್ತೇವೆ.
ಸ್ತ್ರೀಯರ ವ್ಯಾನಿಟಿ ಬ್ಯಾಗ್ ಅಂದ್ರೆ ಅದರಲ್ಲಿ ಏನೇ ಇರಲಿ ಬಿಡಲಿ ಈ ನಾಲ್ಕಾರು ಪಿನ್ನುಗಳಂತೂ ಇರಲೇಬೇಕು. ಒಮ್ಮೆ ನಾನು ದೆಹಲಿಯಿಂದ ಹುಬ್ಬಳ್ಳಿಗೆ ಹೊರಟಿದ್ದೆ. ಸೆಕ್ಯೂರಿಟಿ ಚೆಕ್ ನಲ್ಲಿ ನನ್ನ ವ್ಯಾನಿಟಿ ಬ್ಯಾಗ್ ತನ್ನ ನೇರ ರಸ್ತೆ ಬಿಟ್ಟು ಪಕ್ಕಕ್ಕೆ ಹೊರಳಿ ಅಲ್ಲಿದ್ದ ಅಧಿಕಾರಿಗಳ ಕೈಗೆ ಸಿಕ್ಕಿ ಬಿಟ್ಟಿತು. ಹತ್ತತ್ತು ಸಲ ಚೆಕ್ ಮಾಡಿದರೂ ಏನೂ ಸಿಗುತ್ತಿಲ್ಲವಾದರೂ ಸ್ಕ್ಯಾನ್ ನಲ್ಲಿ ಏನೋ ಇದೆಯೆಂದು ತೋರಿಸುತ್ತಿದೆ. ಅಲ್ಲಿನ ಅಧಿಕಾರಿಗಳು ನನ್ನನ್ನು ನೋಡುವ ರೀತಿಗೆ ‘ ಅಯ್ಯಾ, ನನ್ನ ಈ ಬ್ಯಾಗನ್ನು ನೀನೇ ಇಟ್ಟುಕೊಂಡುಬಿಡು’ ಎಂದು ಹೇಳಬೇಕೆನಿಸಿಬಿಟ್ಟಿತು.ಮುಂದೆ ಒಂದು ದಿನ ಅವತ್ತು ಅವರ ಕೈಗೆ ಸಿಗದ ಈ ಪಿನ್ನಿನ ಗೊಂಚಲು ಅಚಾನಕ್ಕಾಗಿ ನನಗೆ ಸಿಕ್ಕಿತ್ತು. ಬ್ಯಾಗಿನ ಒಳಭಾಗದ zip ನ ಬಟ್ಟೆಗೊಂದು ಸಣ್ಣ ತೂತಾಗಿ ಆ ಕಿಂಡಿಯಿಂದ ಹೈದರಾಲಿಯ ಸೈನಿಕನಂತೆ ನುಸುಳಿ ಅವಿತುಕೊಂಡಿದ್ದ ಆ ಪಿನ್ನಿನ ಗೊಂಚಲು ಅಂತೂ ಸೆಕ್ಯೂರಿಟಿಯ ಓಬವ್ವನ ಕೈಗೆ ಸಿಗದೆ ತಪ್ಪಿಸಿಕೊಂಡು ಹೊರಬಂದಿತ್ತು.
ಫ್ಲೈಟ್ ನಲ್ಲಿ ಕೊಡುವ ಈ ಸ್ನಾಕ್ಸ್ ಪ್ಯಾಕೆಟ್ ಹರಿಯಲು, ಕಿವಿ ಗುಳುಗುಳು ಎಂದರೆ ಇಯರ್ ಬಡ್ ನಂತೆ ಕೆಲಸ ಮಾಡಲು, ಹಲ್ಲು ಸಂದಿಯಲ್ಲಿ ಸಿಕ್ಕಿದ ಬೇಳೆಕಾಳು ಸೊಪ್ಪನ್ನು ತೆಗೆಯಲು ಟೂತ್ ಪಿಕ್ ನಂತೆಯೂ ಹಲವಾರು ರೀತಿಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತದೆ ಈ ಸೇಫ್ಟಿ ಪಿನ್. ಕಾಲಿಗೆ ನೆಟ್ಟ ಮುಳ್ಳು ತೆಗೆಯಲು, ಉಗುರು ಸಂದಿಯಲ್ಲಿ ಅವಿತ ಕೊಳಕು ತೆಗೆಯಲು, ಹಣಿಗೆಯ ಹಲ್ಲುಗಳನ್ನು ಸ್ವಚ್ಛಗೊಳಿಸಲು ಈ ಪಿನ್ನು ಬೇಕೇ ಬೇಕು . ನಿಮ್ಮ ಪ್ರೆಷರ್ ಕುಕ್ಕರ್ ಸೀಟಿಯಲ್ಲಿ ಸಿಕ್ಕಿಕೊಂಡ ಅನ್ನದ ಅಗುಳಿನ ತುಂಡನ್ನೋ, ಬೆಂದ ಬೇಳೆಯನ್ನೋ ತೆಗೆಯಲು ಇದು ಬೇಕೇ ಬೇಕು . ಕೆಲವೊಮ್ಮೆ ಹರಿದ ಚಪ್ಪಲಿಗೂ ಇದರ ನೆರವು ಬೇಕಾಗುತ್ತದೆ.
ಮನೆಯ ಅಂಗಳದಲ್ಲಿ ಅರಳುತ್ತಿದ್ದ ನಾಲ್ಕಾರು ದುಂಡು ಮಲ್ಲಿಗೆಯನ್ನು ಒಂದು ಪಿನ್ನಿನಲ್ಲಿ ವೃತ್ತಾಕಾರವಾಗಿ ಚುಚ್ಚಿ ಮುಡಿಗೇರಿಸಿಕೊಂಡು ಡೌಲು ಬಡಿಯುತ್ತಿದ್ದ, ಆ ಮಲ್ಲಿಗೆಯ ಘಮದಲ್ಲಿ ತೇಲಿ ಹೋಗುತ್ತಿದ್ದ ಬಾಲ್ಯದ ದಿನಗಳು ಈಗಲೂ ಮೆರವಣಿಗೆ ಹೊರಡುತ್ತವೆ. ಹೆರಳ ತೊಡಕು ಬಿಡಿಸುವಾಗ ಉದುರಿದ ಕೂದಲನ್ನು ಕೂಡಿಟ್ಟು ಆ ಕೂದಲ ಬದಲಿಗೆ ಈ ಪಿನ್ನುಗಳನ್ನು ಖರೀದಿಸುತ್ತಿದ್ದ ನನ್ನ ಬಾಲ್ಯಕಾಲದ ಹಳ್ಳಿಯ ಜೀವನ ಈಗಲೂ ಗುಂಗಾಗಿ ಕಾಡುತ್ತದೆ.
ಹಂಗಂತ ಈ ಸೇಫ್ಟಿ ಪಿನ್ ಗಳು ಬಹಳ ಸಾಚಾ ಅಂತನೂ ತಿಳ್ಕೋಬ್ಯಾಡ್ರಿ. ಇವುಗಳು ಮಾಡೋ ಅವಾಂತರ ನಮಗೆ ಅಂದರೆ ಹೆಂಗಳೆಯರಿಗೇ ಗೊತ್ತು. ಬೆಲೆ ಬಾಳುವ ಚಂದನೆಯ ರೇಷ್ಮೆ ಸೀರೆ, ಬ್ಲೌಜ್ ಗಳಿಗೆ ಕೆಲವೊಮ್ಮೆ ನಿರ್ದಯವಾಗಿ ತೂತು ಬೀಳಿಸಿ ಬಿಡುತ್ತವೆ. ದೊಡ್ಡ ಪಿನ್ನು ಮೊಂಡಹಡಿ ಇದ್ದು ಸೀರೆಗೆ ಚುಚ್ಚದೆ ಕೈ ನೋವು ಬರಿಸಿದರೆ ಗಿಡ್ಡ ಮೆಣಸಿನಕಾಯಿ ಅಂತಹ ಮರಿ ಪಿನ್ನು ಕಚಕ್ ನೇ ಚುಚ್ಚಿ ‘ಆ’ ಎನ್ನುವಂತೆ ಮಾಡುತ್ತದೆ. ಹೀಗಾಗಿ ನೀವು ಬೇರೆ ಯಾರದೋ ಸೀರೆಯನ್ನ ಏನಾದರೂ ಕಡ ತೆಗೆದುಕೊಂಡು ಉಡುತ್ತಿದ್ದರೆ ಬಹಳ ಹುಷಾರಾಗಿರಬೇಕಾಗುತ್ತದೆ.
ಬಹು ಉಪಯೋಗಿ ಈ ಪಿನ್ನುಗಳು ನಿಮಗೆ ಜನರನ್ನು ಯಾವ ಪ್ರಾಂತ್ಯದವರೆಂದು ಗುರುತಿಸಲು ಸಹ ನೆರವು ನೀಡುತ್ತವೆ. ಅದ್ಹೆಂಗ ಅಂತ ಹುಬ್ಬೇರಿಸಬ್ಯಾಡ್ರಿ. ಉದಾಹರಣೆ ಸಮೇತ ಹೇಳತೀನಿ ನೋಡ್ರಿ . ಒಮ್ಮೆ ದೆಹಲಿಯಲ್ಲಿ ಅಕ್ಷರಧಾಮಕ್ಕೆ ಹೋಗಿದ್ವಿ ಅಲ್ಲಿ ಪಾಳಿಯೊಳಗೆ ಇಬ್ಬರು ಮಧ್ಯವಯಸ್ಕ ಗಂಡ ಹೆಂಡತಿ ನಿಂತಿದ್ದರು. ನಾನು ನನ್ನ ಮಗನಿಗೆ ಅವರನ್ನು ಮಾತನಾಡಿಸಿ ಬರುವೆ, ಅವರು ಪಕ್ಕಾ ನಮ್ಮ ಕಡೆಯವರೇ ( ಉತ್ತರ ಕರ್ನಾಟಕ) ಇರುತ್ತಾರೆ ಅಂದೆ. ಅವನು ‘ಅದ್ಹೆಂಗ ಹೇಳತಿ’ಎಂದು ಸವಾಲೆಸೆದ. ಹೋಗಿ ಮಾತನಾಡಿಸಿದರೆ ಅವರು ಗುಲ್ಬರ್ಗದವರಿದ್ದರು. ಆ ಹೆಣ್ಣು ಮಗಳ ಕೈಯ ಕಾಜಿನ ಬಳೆ, ಪಾಟಲಿ, ಬಿಲವಾರದಲ್ಲಿ ಜೋತಾಡುತ್ತಿದ್ದ ಒಂದು ಹಳದಿ ಮರಿ ಪಿನ್ನು, ಒಂದು ಸ್ಟೀಲಿನ ದೊಡ್ಡ ಪಿನ್ನು ನೋಡಿಯೇ ನಾನು ಗುರುತು ಹಿಡಿದಿದ್ದು. ಈಗಲೂ ನಮ್ಮಮ್ಮ, ಅತ್ತೆಯರು ಪಿನ್ ಕೇಳಿದರೆ ತಕ್ಷಣ ಬಳೆ, ಮಂಗಳ ಸೂತ್ರದಿಂದ ತೆಗೆದುಕೊಡುತ್ತಾರೆ. ಮಂಗಳಸೂತ್ರ ಬಳೆ ಇರುವುದೇ ಈ ಪಿನ್ನುಗಳನ್ನು ಕಾಪಿಟ್ಟುಕೊಳ್ಳಲೇನು ಎಂಬ ಸಂಶಯ ನನ್ನನ್ನು ಕಾಡುತ್ತದೆ. ಒಮ್ಮೊಮ್ಮೆ ಈ ಶಿರಸಿ, ಮೈಸೂರು, ಬೆಂಗಳೂರು, ಮಂಗಳೂರಿನ ಹೆಂಗಳೆಯರ ಬಗ್ಗೆ ನನಗೆ ಗೊತ್ತಿಲ್ಲ ಆದರೆ ನಮ್ಮ ಕಡೆ ಹೆಣ್ಣು ಮಕ್ಕಳ ಕೈಯಲ್ಲಿ ಕೊರಳಲ್ಲಿ ಇವು ಇರಲೇಬೇಕು.. ಇರತಾವ ಕಾಸಿನ ಕಿಮ್ಮತ್ತಿನ ಈ ಪಿನ್ ಮಹಾಶಯ ಬಂಗಾರದ ಬಳೆ, ಸರಗಳಲ್ಲಿ ಮೆರೆಯುತ್ತಿರುತ್ತಾನೆ. ‘ ನಸೀಬ್ ಅಪನಾ ಅಪನಾ’ ಅನ್ನೋದು ಸುಳ್ಳಲ್ಲ ನೋಡ್ರಿ.
ಪಿಂಡಾಂಡದಲ್ಲಿ ಬ್ರಹ್ಮಾಂಡ ಎನ್ನುವ ತತ್ವ ಇವುಗಳನ್ನು ನೋಡಿಯೇ ಬಂದಿರಬೇಕು. ಆತ್ಮ ಸಂಗಾತಿಗಳು ಇವು. ಮಾನ ಕಾಯುವ, ಕಾಪಿಡುವ ಭಗವಂತನಿದ್ದಂತೆ ಗೀತೆಯ ವಿಭೂತಿ ಯೋಗದಲ್ಲಿ ಶ್ರೀ ಕೃಷ್ಣ ಹೇಳುತ್ತಾನಲ್ಲವೇ? “ನಾನು ನದಿಗಳಲ್ಲಿ ಗಂಗೆ, ಪರ್ವತಗಳಲ್ಲಿ ಮೇರು, ಯೋಧರಲ್ಲಿ ರಾಮ, ಸರ್ಪಗಳಲ್ಲಿ ಅನಂತ” ಅಂತೆಲ್ಲ.. ಈ ಪಿನ್ನುಗಳನ್ನು ಕಂಡಿದ್ದರೆ ಪಿನ್ನುಗಳಲ್ಲಿ ನಾನು ಸೇಫ್ಟಿ ಪಿನ್ನು ಎಂದು ಖಂಡಿತ ಹೇಳಿರುತ್ತಿದ್ದ.( ಸೂಜಿ, ಗುಂಡು ಸೂಜಿ, ಗುಂಡು ಪಿನ್ನು, ಪೇಪರ್ ಪಿನ್ನು, ಹೇರ್ ಪಿನ್ನು, ಸಾಡಿ ಪಿನ್ನು ಇತ್ಯಾದಿಗಳಲ್ಲಿ ). ಹೀಗೆ ಆಪತ್ಕಾಲೀನ ಸಮಯದಲ್ಲಿ ಆಪದ್ಬಾಂಧವನಂತೆ ಕಣ್ಣಿಗೆ ಕಾಣದೆ ಒಳಗೆ ಸೇರಿಕೊಂಡು ಅದೃಶ್ಯವಾಗಿ ಈ ಸೇಫ್ಟಿ ಪಿನ್ನುಗಳು ಮಾನ ಕಾಯ್ದರೆ ಇದೇ ಕುಲದ ಸಾಡಿ ಪಿನ್ನುಗಳು ಎಲ್ಲರಿಗೂ ಕಂಡು ಸೀರೆಯ, ಸೀರೆಯುಟ್ಟ ನೀರೆಯ ಸೊಬಗು ಹೆಚ್ಚಿಸುತ್ತವೆ. ನವಿಲಿನಂಥ, ಹೂವಿನಂಥ, ಎಲೆ ಬಳ್ಳಿಯಂಥ, ಮುತ್ತಿನ ನತ್ತಿನಂತ ತರಾವರಿ ಸಾಡಿಪಿನ್ನುಗಳು ಮಾರ್ಕೆಟ್ನಲ್ಲಿ ಲಭ್ಯ.
1849ರಲ್ಲಿ ಅಮೆರಿಕನ್ ಮೆಕ್ಯಾನಿಕ್ ವಾಟರ್ ಹಂಟ್ ತನ್ನ ಹೆಂಡತಿಯ ಉಡುಪಿನ ಗುಂಡಿ ಕಿತ್ತು ಹೋದಾಗ ತಕ್ಷಣಕ್ಕೆ ಉಪಯೋಗವಾಗಲಿ ಎಂದು ಇದನ್ನು ಕಂಡುಹಿಡಿದನಂತೆ. ‘ಅವನ ಹೆಂಡತಿ ಸಂತತಿ ಸಾವಿರವಾಗಲಿ’. ಅವಳ ಗುಂಡಿ ಅಂದು ಕಿತ್ತಿರದಿದ್ದರೆ ಈ ಪಿನ್ನು ಸಿಕ್ಕುತ್ತಲೇ ಇರಲಿಲ್ಲ. ಹೆಗ್ಗಳಿಕೆ ಎಂದರೆ ಅಂದಿನಿಂದ ಇಂದಿನವರೆಗೂ ಅದರ ಗಾತ್ರ ವಿನ್ಯಾಸಗಳಲ್ಲಿ ಬಹುಶ: ದರದಲ್ಲಿಯೂ ಅಂಥದೇನೂ ವಿಶೇಷ ಬದಲಾವಣೆ ಆಗಿಲ್ಲ. ಒಂಥರ ದೇಶಕಾಲಾದಿಗಳಿಗೆ ಸಿಕ್ಕಿಯೂ ಬದಲಾಗದಂತಹ ಸಂತ ಮಹಾಂತರ ಗುಣವಿದಕ್ಕೆ. ಇದರ ಮೂರ್ತಿ ಚಿಕ್ಕದಾದರೂ ಕೀರ್ತಿ ಬಲು ದೊಡ್ಡದು. ಅಂತಹ ಸೇಫ್ಟಿ ಪಿನ್ ಗೆ ಹೃದಯಾಳದ ನನ್ನಿಗಳು.
ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ- ಕಾಳಿದಾಸ ರಘುವಂಶದಲ್ಲಿ. (ಜಗತ್ತಿನ ತಂದೆ ತಾಯಿಯರಾದ ಪಾರ್ವತಿ ಪರಮೇಶ್ವರರ ಕೃಪೆ ನಮ್ಮೆಲ್ಲರ ಮೇಲಿರಲಿ.) ಸಂಸ್ಕೃತ ಅಂದ ಕೂಡಲೇ ಕೆಲವರು ಅದು ಇನ್ನೂ ಪ್ರಸ್ತುತವೆ?ಸಂಸ್ಕೃತವನ್ನು ಯಾಕೆ ಕಲಿಯಬೇಕು ಎನ್ನುವ ಚರ್ಚೆಗೆ ಶುರು ಮಾಡಿಬಿಡುತ್ತಾರೆ. ಆದರೆ ಶಾಲಿನಿಯವರ ಈ ಲೇಖನದಲ್ಲಿ ತಾವು ಕಂಡ ಸಂಸ್ಕೃತ ವಿಶ್ವವಿದ್ಯಾಲಯದ ಹಸ್ತಪ್ರತಿ ಎನ್ನಿಸಿಕೊಳ್ಳುವ ತಾಳೆಗರಿ ಸಂಗ್ರಹವನ್ನು ಕಂಡು ಪುಳಕಿತರಾದ ಆ ಅನುಭವವನ್ನು ವರ್ಣಿಸುತ್ತಿದ್ದಾರೆ. ಅಲ್ಲಿಂದ ಮರಳಿ ಬಂದ ಕೂಡಲೇ ಒಂದು ಲೇಖನವನ್ನು ಬರೆದು ಕೊಡಲೇ ಎಂದು ಕೇಳಿದರು. ಅವರಿಗೆ ಮೊದಲಿನಿಂದಲೂ ಸಂಸ್ಕೃತದ ಬಗ್ಗೆ ಒಂದು ತರಹ ಪ್ರೀತಿ ಮತ್ತು ಗೌರವ. ಇತ್ತೀಚಿಗೆ ಸಂಸ್ಕೃತ ಭಾರತಿ ಎನ್ನುವ ಸಂಘಟನೆ ಸಂಸ್ಕೃತ ಸಂಭಾಷಣೆಯ ಆನ್ ಲೈನ್ ವರ್ಗಗಳನ್ನು ಅನೇಕ ದೇಶಗಳಲ್ಲಿ ಪ್ರಾರಂಭ ಮಾಡಿದೆ. ಅದನ್ನು ಹುಟ್ಟು ಹಾಕಿದವರು ಕರ್ನಾಟಕದವರೇ ಆದ ಪದ್ಮಶ್ರೀ ಜನಾರ್ಧನ ಹೆಗಡೆ ಮತ್ತು ಚ. ಮು. ಕೃಷ್ಣ ಶಾಸ್ತ್ರಿಗಳು. ಅದರ ಹೆಡ್ ಕ್ವಾರ್ಟರ್ಸ್ ದೆಹಲಿಯಲ್ಲಿದೆ. ಕಳೆದ ಸುಮಾರು ಇಪ್ಪತ್ತು ವರ್ಷಗಳಿಂದ ಯು ಕೆ ದ ಸಂಸ್ಕೃತ ಭಾರತಿ ಅಂಗ ಸಂಭಾಷಣೆ ವರ್ಗವಲ್ಲದೆ ವರ್ಷಕ್ಕೆರಡು ಸಲ ನಾಲ್ಕು ಸಂಸ್ಕೃತ ತರಗತಿಗಳಿಗೆ ಪರೀಕ್ಷೆ ಸಹ ನಡೆಸುತ್ತಿದ್ದಾರೆ. ಉತ್ಸುಕರು ಅವರ ವೆಬ್ ಸೈಟ್ ಸಂಪರ್ಕಿಸ ಬಹುದು. ಸಂಸ್ಕೃತ ಸಂಭಾಷಣೆಗೆ ಒತ್ತು ಕೊಟ್ಟು ಸಂಸ್ಕೃತ ಶಿಬಿರವೊಂದನ್ನು ಪ್ರತಿವರ್ಷ ಏಪ್ರಿಲ್ ತಿಂಗಳಿನ ಆಸು ಪಾಸಿನ ಈಸ್ಟರ್ ರಜೆಯಲ್ಲಿ ಏರ್ಪಡಿಸುತ್ತಾರೆ. (ಈ ವರ್ಷ ಮೇ ತಿಂಗಳಲ್ಲಿ.) ಎರಡು ವರ್ಷಗಳ ಕೆಳಗೆ ಅಲ್ಲಿಯೇ ನನಗೆ ಭೇಟಿ ಮಾಡಿದ್ದರು. ಕಾರ್ಡಿಫ್ನಲ್ಲಿ ತಮ್ಮ ಪತಿ ಮತ್ತು ಒಬ್ಬಳೇ ಮಗಳೊಡನೆ ವಾಸ ಮಾಡುತ್ತಿದ್ದಾರೆ. ಎಂದಿನಂತೆ ಓದಿ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ. ಸಂಸ್ಕೃತ ಕಲಿಯಲು ಉತ್ಸುಕರಾಗಿದ್ದರೆ ಲೇಖನದ ಕೊನೆಗೆ ಕೊಟ್ಟ ಲಿಂಕ್ ಒತ್ತಿ ಯು ಕೆ ಸಂಸ್ಕೃತ ಭಾರತಿಗೆ ಸಂಪರ್ಕಿಸ ಬಹುದು. ಪರೀಕ್ಷೆಗಳಿಗೆ ಅಭ್ಯಾಸ ಮಾಡಲು ಪುಸ್ತಕಗಳನ್ನು ಸಹ ಕೊಳ್ಳ ಬಹುದು.(-ಸಂ)
ಬೆಂಗಳೂರಿನ ಚಾಮರಾಜಪೇಟೆಯ ಪಂಪಮಹಾಕವಿ ರಸ್ತೆಯ ಒಂದು ಕಡೆ ಕನ್ನಡ ಸಾಹಿತ್ಯ ಪರಿಷತ್ತು, ಅದರ ಎದುರು ಇರುವ ವಿಶಾಲವಾದ ಆವರಣ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ್ದು. ಎಂದಾದರೂ ಹೋಗೋಣವೆಂಬ ಕುತೂಹಲಕ್ಕೆ ಬೆಂಬಲ ನೀಡಿದಂತೆ ಇತ್ತೀಚಿಗೆ ಪ್ರಚಲಿತವಾದ ಹ್ಯಾಂಡ್ಸ ಆನ್ ಫೌಂಡೇಷನ್ರವರ ಸೋಶಿಯಲ್ ಮೀಡಿಯಾದಲ್ಲಾದ ವೈರಲ್ ವಿಡಿಯೋ. ಸರಿ, ನೋಡಲೇ ಬೇಕೆಂದು ನಿಶ್ಚಯಿಸಿ ಹೊರಟೆ ಹಸ್ತಪ್ರತಿ ಸಂಗ್ರಹಾಲಯದತ್ತ. ನನಗೆ ಸಂಸ್ಕೃತ ಕಲಿಯುವ ಆಸಕ್ತಿ ಮತ್ತು ಪ್ರೀತಿ ಶಾಲಾ ದಿನಗಳ ನಂತರ ಸ್ವಲ್ಪ ತಡವಾಗಿ ಆರಂಭವಾಯಿತು. ಶಾಲೆಯಲ್ಲಿ ಸಂಸ್ಕೃತವನ್ನು ಪ್ರಥಮ ಭಾಷೆಯಾಗಿ ತೆಗೆದುಕೊಳ್ಳದಿದ್ದುದರ ಪಶ್ಚಾತ್ತಾಪವನ್ನು ನಾನು ಇಂದಿಗೂ ಹೊಂದಿರುವೆ. ತದನಂತರ ಪಂಡಿತ ಸುಧಾಕರ ಚತುರ್ವೇದಿ ಮತ್ತು ಪಂಡಿತ ಸುಧಾಕರ ಶರ್ಮ ಅವರ ವೇದ ಪ್ರವಚನಗಳನ್ನು ಕೆಲ ವರ್ಷಗಳ ಹಿಂದೆ ಕೇಳುವ ಅವಕಾಶ ನನಗೆ ದೊರಕಿತ್ತು. ಸಂಸ್ಕೃತ ವ್ಯಾಕರಣ, ಧಾತುಗಳ ಕುರಿತು ಸಹ ಪಾರ್ಶ್ವವಾಗಿ ಚರ್ಚೆ ನಡೆಯುತ್ತಿತ್ತು. ಆದರೂ ಅನೇಕ ವರ್ಷಗಳ ನಂತರವೂ, ನಾನು ಅದೇ ವಲಯದಲ್ಲಿ ಸುತ್ತುತ್ತಿರುವೆ ಅಂದುಕೊಳ್ಳುತ್ತೀನಿ. ಇತ್ತೀಚೆಗೆ ನಾನು ಬೆಂಗಳೂರಿಗೆ ಹೋದಾಗ ಒಂದು ಸಂಜೆ ನಾನು ಅಲ್ಲಿ ತಲುಪುವಷ್ಟರಲ್ಲಿ ತಡವಾದರೂ ಸಹ ಕಾರ್ಯಾಲಯದಲ್ಲಿದ್ದ ಉನ್ನತ ಅಧಿಕಾರಿಯವರು ಮಂದಸ್ಮಿತರಾಗಿದ್ದರು. "ಮ್ಯೂಸಿಯಂ ಈಗ ತಾನೇ ಮುಚ್ಚಿದೆವು. ಪರವಾಗಿಲ್ಲಾ, ದೂರದಿಂದ ಬಂದಿದ್ದೀರಿ, ತೆರೆಯುತ್ತೇವೆ, ಹೋಗಿ ನೋಡಿಕೊಂಡು ಬನ್ನಿ" ಎಂದು ಸೌಹಾರ್ದತೆಯಿಂದ ಬರಮಾಡಿಕೊಂಡರು. ವಿಡಿಯೋದಲ್ಲಿ ಕಾಣಿಸಿಕೊಂಡಿದ್ದವರು ಇವರೇ ಎಂಬ ಅರಿವು ನನಗೆ ಒಂದೇ ಕ್ಷಣದಲ್ಲಿ ಉದಯಿಸಿತು- ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ರಾಮಕೃಷ್ಣ ಭಟ್ ಅವರು. ಸರಳವಾದ ವ್ಯಕ್ತಿತ್ವ, ಬಿಳಿ ಶರ್ಟ್ ಮತ್ತು ಧೋತಿ ಧರಿಸಿದ್ದ ಅವರನ್ನು ನೋಡುತ್ತಿದ್ದಂತೆ, ವಿದ್ಯೆಯನ್ನು ಧಾರೆ ಇರಿಸಲು ಸಿಧ್ಧರಾದ ಗುರುಗಳನ್ನು ಕಂಡಂತಾಯಿತು.
ಕೈಯಿಂದ ಬರೆಯಲ್ಪಟ್ಟ ಯಾವುದೇ ಪುಸ್ತಕ ಅಥವಾ ದಾಖಲೆಗಳನ್ನು ‘ಹಸ್ತಪ್ರತಿ’ ಅಥವಾ ‘ಪಾಂಡುಲಿಪಿ’ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಹಸ್ತಪ್ರತಿಗಳ ಪರಂಪರೆ ಅತ್ಯಂತ ಪ್ರಾಚೀನವಾಗಿದೆ. ದೇಶದ ಎಲ್ಲಾ ಭಾಗಗಳಲ್ಲಿ ಅವು ರಚಿಸಲ್ಪಟ್ಟಿದ್ದು, ಅನೇಕ ಭಾಷೆಗಳು ಮತ್ತು ಲಿಪಿಗಳಲ್ಲಿ, ಧಾರ್ಮಿಕ, ತತ್ತ್ವಶಾಸ್ತ್ರೀಯ, ಐತಿಹಾಸಿಕ, ಸಾಹಿತ್ಯಿಕ ಹಾಗೂ ವೈಜ್ಞಾನಿಕ ವಿಷಯಗಳ ವಿಶಾಲ ವ್ಯಾಪ್ತಿಯನ್ನು ಒಳಗೊಂಡಿವೆ. ಭಾರತ ಉಪಖಂಡ ಮತ್ತು ಆಗ್ನೇಯ ಏಷ್ಯಾದಲ್ಲಿ ಕ್ರಿಸ್ತಪೂರ್ವ 5ನೇ ಶತಮಾನದಿಂದಲೂ, ಮತ್ತು ಬಹುಶಃ ಅದಕ್ಕೂ ಮುಂಚೆಯೇ, ತಾಳೆಗರಿಗಳನ್ನು (Palm leaf; botanical name Borassus flabellifer) ಬರವಣಿಗೆ ಸಾಮಗ್ರಿಗಳಾಗಿ ಬಳಸಲಾಗುತ್ತಿತ್ತು. ದಕ್ಷಿಣ ಭಾರತದಲ್ಲಿ ತಾಳೆಗರಿಗಳನ್ನು ಬರವಣಿಗೆಯ ವಸ್ತುವಾಗಿ ಬಳಸಲಾಗುತ್ತಿತ್ತು; ಉತ್ತರ ಭಾರತದಲ್ಲಿ ಭೂರ್ಜಪತ್ರವೂ(bark of the Himalayan birch tree; botanical name Betula utilis) ವ್ಯಾಪಕವಾಗಿ ಬಳಕೆಯಲ್ಲಿತ್ತು. ಈ ಕಾರಣದಿಂದ, ಈ ಬರಹದಲ್ಲಿ ನಾನು ‘ಹಸ್ತಪ್ರತಿ’ ಮತ್ತು ‘ತಾಳೆಗರಿ’ ಪದಗಳನ್ನು ಪರಸ್ಪರ ಬದಲಾಯಿಸಿಕೊಂಡು ಬಳಸಿದ್ದೇನೆ. ಈ ತಾಳೆಗರಿಗಳು ವೈಶಿಷ್ಟ್ಯಪೂರ್ಣ. ಅವು ವಿವಿಧ ನಾಗರಿಕತೆಗಳ ಅಸ್ತಿತ್ವದ ಬಗ್ಗೆ ಮಾಹಿತಿಯನ್ನು ನೀಡುವುದರ ಜೊತೆಗೆ ಅವುಗಳ ಉಳಿವಿನ ಮಹತ್ವವನ್ನೂ ಒತ್ತಿ ಹೇಳುತ್ತವೆ. ಭಾರತೀಯ ಸಂಸ್ಕೃತಿಯ ಅದ್ಭುತ ವಿವರಗಳು ಈ ಪ್ರಾಚೀನ ತಾಳೆಗರಿಗಳಲ್ಲಿ ಅಡಗಿದೆ. ಇವುಗಳಿಂದ ಆ ಕಾಲದ ಸಂಸ್ಕೃತಿ ಬರವಣಿಗೆಯನ್ನು ತಿಳಿಯಬಹುದು. ಭಾರತವು ವಿಶ್ವದಲ್ಲೇ ಅತಿ ದೊಡ್ಡ ಹಸ್ತಪ್ರತಿ ಪರಂಪರೆಯನ್ನು ಹೊಂದಿದೆ. ಪ್ರಾಚೀನ ಭಾರತದ ಬರವಣಿಗೆಯ ಮೊದಲ ಭೌತಿಕ ಸಾಕ್ಷ್ಯ ಅಶೋಕನ ಶಾಸನಗಳಿಂದ ದೊರಕಿದ್ದು, ಅವು ಕ್ರಿ.ಪೂ. 3ನೇ ಶತಮಾನಕ್ಕೆ ಸೇರಿವೆ. ದಕ್ಷಿಣ ಭಾರತದಲ್ಲಿ ತಾಳೆ ಎಲೆಗಳ ಬಳಕೆ ಕ್ರಿ.ಪೂ. 5ನೇ ಶತಮಾನದಿಂದಲೇ ಆರಂಭವಾಗಿ, 19ನೇ ಶತಮಾನವರೆಗೆ ಮುಂದುವರಿದು, ನಂತರ ಮುದ್ರಣ ಪದ್ಧತಿಯಿಂದ ಬದಲಾಗಿತು. ಗ್ರಂಥಿ, ದೇವನಾಗರಿ, ನಂದನಾಗರಿ ಮುಂತಾದ ಅನೇಕ ಲಿಪಿಗಳಲ್ಲಿ ಮತ್ತು ಹಲವು ಭಾಷೆಗಳಲ್ಲಿ ಬರೆಯಲ್ಪಟ್ಟ ಹಸ್ತಪ್ರತಿಗಳ ಅತಿ ದೊಡ್ಡ ಸಂಗ್ರಹ ಭಾರತದಲ್ಲಿದೆ.
ಸಂಸ್ಕೃತ ಭಾಷೆಗೆ ಮೂಲತಃ ಸ್ವಂತ ಲಿಪಿ ಇರಲಿಲ್ಲ, ಏಕೆಂದರೆ ಅದು ಸಂಪೂರ್ಣವಾಗಿ ಮೌಖಿಕ ಪರಂಪರೆಯಲ್ಲೇ ಮಾತನಾಡಲ್ಪಡುತ್ತಿತ್ತು. ನಂತರ ಅದು ಬರವಣಿಗೆಯಲ್ಲಿ ಬಳಸಲ್ಪಟ್ಟಾಗ, ಪ್ರಾದೇಶಿಕ ಲಿಪಿಕಾರರು ಬಳಸುತ್ತಿದ್ದ ಲಿಪಿಗಳನ್ನೇ ಬಳಸಲಾಯಿತು. ಇಂದಿನ ಬಹುತೇಕ ಲಿಪಿಗಳು, ದೇವನಾಗರಿಯನ್ನು ಸೇರಿಸಿ, ಬ್ರಾಹ್ಮಿ ಲಿಪಿಯಿಂದ ವಂಶವಾಹಿಗಳಾಗಿವೆ. ಬ್ರಾಹ್ಮಿ ಲಿಪಿಯನ್ನು ಸಂಸ್ಕೃತ ಮತ್ತು ಸ್ಥಳೀಯ ಪ್ರಾಕೃತ ಭಾಷೆಗಳಿಗಾಗಿ ಬಳಸಲಾಗುತ್ತಿತ್ತು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮುಖ್ಯ ಕಟ್ಟಡದ ಎರಡನೇ ಮಹಡಿಯಲ್ಲಿ ಹಸ್ತಪ್ರತಿ ಸಂಗ್ರಹಾಲಯವಿದೆ. ಸಂಗ್ರಹಾಲಯವು 13 ಆಗಸ್ಟ್ 2025 ರಂದು ಸಾರ್ವಜನಿಕರಿಗೆ ತನ್ನ ಬಾಗಿಲುಗಳನ್ನು ತೆರೆಯಿತು. ಏನಿದು ಕರ್ನಾಟಕದ ಏಕೈಕ ಹಸ್ತಪ್ರತಿ ಮೂಸಿಯಮ್ ಅಂದರೆ, ಎಷ್ಟು ಹಳೆಯದ್ದು ಈ ಹಸ್ತಪ್ರತಿಗಳು, ಎಲ್ಲಿಂದ ದೊರಕಿವೆ? ಹೀಗೆ ಎಷ್ಟೊಂದು ಪ್ರಶ್ನೆಗಳು ನನ್ನ ಮನದಲ್ಲಿ! ಭಾರಿ ಕುತೂಹಲ. ಮೆಟ್ಟಿಲಿನ ಬಳಿಯಲ್ಲಿ ಸ್ಥಾಪಿತಳಾದ ಶಾರದಾ ದೇವಿಯ ಪ್ರತಿಮೆಗೆ ಪ್ರಣಾಮ ಸಲ್ಲಿಸಿ, ಎರಡನೇ ಮಹಡಿಗೆ ನಡೆದು ಹೋದೆವು. ಸಂಗ್ರಹಾಲಯದ ಗೋಡೆಗಳು ಕಲಾಕೃತಿಗಳಿಂದ ಅಲಂಕರಿಸಲ್ಪಟ್ಟಿದ್ದವು. ಪ್ರತಿಯೊಂದು ಅಕ್ಷರಕ್ಕೂ ಸಂಬಂಧಿತ ಪ್ರತ್ಯೇಕ ದೇವತೆ ಇದ್ದಾರೆ ಎಂದು ಡಾ. ಭಟ್ ವಿವರಿಸಿದರು (ಚಿತ್ರಗಳಲ್ಲಿ ತೋರಿಸಿದಂತೆ). ವಿವಿಧ ಉದ್ದ ಮತ್ತು ಗಾತ್ರಗಳ ತಾಳೆಗರಿಗಳು ಮರದ ಫಲಕಗಳ ನಡುವೆ ಹಿಡಿದಿಟ್ಟುಕೊಂಡು, ಕೆಂಪು ರೇಷ್ಮೆ ಬಟ್ಟೆಯಲ್ಲಿ ಸುವ್ಯವಸ್ಥಿತವಾಗಿ ಹೊದಿಸಿ ಕೊಠಡಿಯಾದ್ಯಂತ ಅಳವಡಿಸಲಾಗಿದ್ದವು. ಕೆಂಪು ಬಟ್ಟೆಯು ತಾಳೆಗರಿಗಳಿಗೆ ಬೆಳಕು ಮತ್ತು ಉಷ್ಣದಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ.
ಸಂಗ್ರಹಾಲಯದಲ್ಲಿ ಸುಮಾರು 500 ವರ್ಷ ಹಳೆಯದಾದ ತಾಳೆಗರಿಗಳಿವೆ, ಮತ್ತು ಇಲ್ಲಿ ಶ್ರೀರಾಮನ ಜನನದ ವಿವರಗಳನ್ನೂ ಚರ್ಚಿಸಲಾಗುತ್ತಿದೆ. ಅಂಗೈಗಿಂತಲೂ ಚಿಕ್ಕದಾದ ಒಂದು ತಾಳೆಗರಿಯೂ ಇದೆ ಎಂದು ಡಾ. ಭಟ್ ತಿಳಿಸಿದರು. ಉದಾಹರಣೆಯಾಗಿ ಕೆಲವು ತಾಳೆಗರಿಗಳನ್ನು ತೋರಿಸುತ್ತಾ, ಅತಿ ಸೂಕ್ಷ್ಮವಾದ ಅಕ್ಷರಗಳಲ್ಲಿ ಎಷ್ಟು ಜ್ಞಾನವನ್ನು ಸಂಗ್ರಹಿಸಲಾಗಿದೆ ಎಂದು ವಿವರಿಸಿದರು.
ಚಿತ್ರಣವಿಲ್ಲದ ತಾಳೆಗರಿಗಳು ಕ್ಯಾಲಿಗ್ರಫಿಕ್ ಶೈಲಿಯಲ್ಲಿದ್ದು, ಅಲಂಕಾರಿಕ ಅಕ್ಷರಗಳು ಚಿತ್ರಗಳಾಗಿ ರೂಪಾಂತರಗೊಳ್ಳುವಷ್ಟು ಸುಂದರವಾಗಿದ್ದವು. ಕೆಲವು ತಾಳೆಗರಿಗಳಲ್ಲಿ ಕೈಯಿಂದಲೇ ಅಳತೆಯಂತೆ ಬಿಡಿಸಿದ ರೇಖಾಗಣಿತ ಆಕೃತಿಗಳಂತಹ ಸೂಕ್ಷ್ಮ ಚಿತ್ರಗಳೂ ಕಂಡುಬಂದವು. ಬರಹ ಸಣ್ಣದಾಗಿದ್ದರೂ ಅತ್ಯಂತ ಸ್ವಚ್ಛವಾಗಿತ್ತು, ಮತ್ತು ಪದಗಳ ಹಾಗೂ ಸಾಲುಗಳ ನಡುವಿನ ಅಂತರವು ನಿಖರತೆಯ ಪ್ರತಿರೂಪವಾಗಿತ್ತು. ಯಾವುದೇ ತಂತ್ರಜ್ಞಾನವಿಲ್ಲದ ಕಾಲದಲ್ಲಿ ಬರೆಯಲ್ಪಟ್ಟಿದ್ದರೂ, ನಮ್ಮ ಪೂರ್ವಜರು ಕ್ಯಾಲಿಗ್ರಫಿ ಮತ್ತು ರೇಖಾಗಣಿತದ ಕಲೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದರು ಎಂಬುದು ಸ್ಪಷ್ಟವಾಗಿತ್ತು. ಪುರಾಣಗಳಿಂದ ಆಯುರ್ವೇದ, ರಸಾಯನಶಾಸ್ತ್ರ, ಭೌತಶಾಸ್ತ್ರ, ಹಾಗು ವಿಮಾನಶಾಸ್ತ್ರದವರೆಗೂ—ಪಾಠಪುಸ್ತಕಗಳು ಬರೆಯುವ ಶತಮಾನಗಳ ಹಿಂದೆಯೇ—ಎಲ್ಲವನ್ನೂ ಈ ಹಸ್ತಪ್ರತಿಗಳು ದಾಖಲಿಸಿವೆ. ಇವೆಲ್ಲವೂ ಈಗ ವಿದ್ಯಾರ್ಥಿಗಳು ಮತ್ತು ಪಂಡಿತರಿಗಾಗಿ ಲಭ್ಯವಾಗಿವೆ. ಸುಮಾರು 10,000 ಪದಗಳನ್ನು ಹೊಂದಿರುವ ಒಂದು ಚಿಕ್ಕ ಹಸ್ತಪ್ರತಿ ಮುದ್ರಿಸಿದರೆ ಮಧ್ಯಮ ಗಾತ್ರದ ಪುಸ್ತಕವಾಗಬಹುದು ಎಂದು ಡಾ. ಭಟ್ ವಿವರಿಸಿದರು. ಇಷ್ಟು ಜ್ಞಾನವನ್ನು ಈ ತಾಳೆ ಗರಿಗಳಲ್ಲಿ ಸಂಗ್ರಹಿಸಲಾಗಿತ್ತು. ಸಾವಿರಾರು ನಾಜೂಕಾದ ಪುಟಗಳು ಮರೆತುಹೋದ ವಿಜ್ಞಾನ ವನ್ನು, ಕಥೆಗಳನ್ನು ಹೊರತರುತ್ತವೆ.
ಡಾ. ರಾಮಕೃಷ್ಣ ಭಟ್ಅವರು ಬ್ರಾಹ್ಮಿ, ಶಾರದಾ, ಗ್ರಂಥ, ನಂದಿನಾಗರಿ ಮುಂತಾದ ಪ್ರಾಚೀನ ಭಾರತೀಯ ಲಿಪಿಗಳಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ಶಾಸ್ತ್ರಪಠಣದಲ್ಲಿ ನಿಪುಣರು. ವಿಶ್ವವಿದ್ಯಾಲಯದಲ್ಲಿ ಇಷ್ಟು ಹಳೆಯ ತಾಳೆಗರಿಗಳನ್ನು ಹೇಗೆ ಓದಿ ಅರ್ಥೈಸಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸುವ ಉದಾಹರಣೆಯಾಗಿ ಅವರು ಲಿಪಿಗಳ ವಿಕಾಸವನ್ನು ನಮಗೆ ವಿವರಿಸಿದರು.
ವಿಶ್ವವಿದ್ಯಾಲಯದ ಧ್ಯೇಯ ಹಸ್ತಪ್ರತಿಗಳನ್ನು ಪುನರುಜ್ಜೀವನಗೊಳಿಸಿ, ಭವಿಷ್ಯದ ಪೀಳಿಗೆಗಳಿಗೆ ಅವುಗಳನ್ನು ಲಭ್ಯವಾಗುವಂತೆ ಮಾಡುವುದಾಗಿದೆ. ನೂರಾರು ತಾಳೆಗರಿಗಳು ಈಗಾಗಲೇ ಪುನರುಜ್ಜೀವನಗೊಂಡು ಸಂಗ್ರಹಾಲಯದ ಪುಸ್ತಕ ಸಂಚಯದಲ್ಲಿ ತಮ್ಮ ಸ್ಥಾನ ಪಡೆದಿವೆ. ಸಾಕ್ಷ್ಯವನ್ನು ಕಂಡು ನಂಬುವ ಈ ಪೀಳಿಗೆಯ ಯುವಕರಿಗೆ, ನಮ್ಮ ನಾಗರಿಕತೆಯ ಅಮೂಲ್ಯ ಸಂಪತ್ತನ್ನು ಅರಿಯಲು ಈ ಸಂಗ್ರಹಾಲಯ ಸೂಕ್ತ ಸ್ಥಳ. ಮುಂದಿನ ಬಾರಿ ಕುಟುಂಬದೊಂದಿಗೆ ಬೆಂಗಳೂರಿಗೆ ಬರುವಾಗ, ಈ ಸ್ಥಳವನ್ನು ತಪ್ಪದೇ ನಿಮ್ಮ ಪಟ್ಟಿಯಲ್ಲಿ ಸೇರಿಸಿಕೊಳ್ಳಿ.
ಹಸ್ತಪ್ರತಿಗಳು ಭೂತಕಾಲದ ಅವಶೇಷಗಳಷ್ಟೇ ಅಲ್ಲ, ಭವಿಷ್ಯಕ್ಕೆ ದಾರಿದೀಪಗಳೂ ಆಗಿವೆ ಎಂಬುದನ್ನು ಒತ್ತಿ ಹೇಳುತ್ತಾ, ಭಾರತ ಸರ್ಕಾರವು ಜ್ಞಾನ ಭಾರತಂ ಯೋಜನೆಯನ್ನು 2025ರಲ್ಲಿ ಜಾರಿಗೊಳಿಸಿತು. ಈ ಯೋಜನೆ ದೇಶದಾದ್ಯಂತ—ಖಾಸಗಿ ಸ್ವಾಮ್ಯದಲ್ಲಿರುವವುಗಳನ್ನು ಸಹ ಒಳಗೊಂಡಂತೆ—ಹಸ್ತಪ್ರತಿಗಳ ಸಮಗ್ರ ಸಮೀಕ್ಷೆ, ಡಿಜಿಟೈಜೇಶನ್ ಮತ್ತು ಸಂರಕ್ಷಣೆಯ ಮೇಲೆ ಕೇಂದ್ರೀಕರಿಸಿದೆ. ಒಟ್ಟು 1 ಕೋಟಿ ಹಸ್ತಪ್ರತಿಗಳನ್ನು ಡಿಜಿಟೈಸ್ ಮಾಡುವ ಗುರಿಯನ್ನು ಇದು ಹೊಂದಿದೆ. ನಿಮ್ಮ ಮನೆಯಲ್ಲಿ ಧೂಳು ಹಿಡಿದು ಬಿದ್ದಿರುವ ಹಳೆಯ ಮನುಸ್ಕ್ರಿಪ್ಟ್ ಇದೆಯೇ? ಹಾಗಿದ್ದರೆ ಅದನ್ನು ಇಲ್ಲಿ ತಂದುಕೊಡಿ — ಅದನ್ನು ಸಂರಕ್ಷಿಸಿ, ನೋಡಿಕೊಳ್ಳಲಾಗುತ್ತದೆ.
ತಾಳೆಗರಿಗಳ ಲೋಕದ ಬಗ್ಗೆ ಏನು ಅರಿಯದ ನನಗೆ, ಅದರಲ್ಲಿ ಆಸಕ್ತಿ ಮೂಡಿಸಿ, ತಮ್ಮ ಸಮಯ ಮತ್ತು ಶ್ರಮವನ್ನು ಹಂಚಿಕೊಂಡ ಡಾ. ಭಟ್ ಅವರಿಗೆ ನಾವು ಧನ್ಯವಾದ ತಿಳಿಸಿ, ಅಲ್ಲಿಂದ ಹೊರಟೆವು. ಹೊರಟಿದ್ದೇ ತಡ, ಒಂದು ಹಾಡು ನನ್ನ ಮನಸ್ಸಿನಲ್ಲಿ ಮೃದುವಾಗಿ ಮೂಡಿಬಂದಿತು- ಪೂಜ್ಯ ಸ್ವಾಮಿ ದಯಾನಂದ ಸರಸ್ವತಿ ಅವರು ರಚಿಸಿದ:
ಭಾರತ ದೇಶ ಹಿತಾಯ ಭರತಾದಿ ಮಹಾಮತಿ ಸೇವಿತ ಕುರು ಸೇವಾಂ ತ್ವಂ
ಲೇಖನ ಮತ್ತು ಫೋಟೋಗಳು: ಶಾಲಿನಿ ಜ್ಞಾನಸುಬ್ರಹ್ಮಣಿಯನ್, ಕಾರ್ಡಿಫ್
ಪ್ರಥಮ ಫೋಟೋ: ಬ್ರಾಹ್ಮಿ ಲಿಪಿಯ ರೂಪಾಂತರ ಕೊನೆಯ ಸಾಲಿನಲ್ಲಿ: ಪ್ರತಿ ಅಕ್ಷರಕ್ಕೊಬ್ಬ ದೇವತೆ