ಒಂದು ಸುಂದರ ಪ್ರವಾಸ

ಸೂರಜ್ ಏಕ್, ಚಂದಾ ಏಕ್, ತಾರೆ ಅನೇಕ್,
ಏಕ್ ಗಿಲಹರಿ, ಅನೇಕ್ ಗಿಲಹರಿಯಾ,
ಏಕ್ ತಿತ್ಲಿ, ಅನೇಕ್ ತೀತಲಿಯಾ ,
ಏಕ್ ಚಿಡಿಯಾ, ಅನೇಕ್ ಚಿಡಿಯಾ…

ಈ ಮೇಲಿನ ಹಾಡನ್ನು ಎಲ್ಲರೂ ಕೇಳಿರಬಹುದು, ಈ ಹಾಡು ೧೯೭೪ ರಲ್ಲಿ ಜನರಲ್ಲಿ ಐಕ್ಯತೆ ಮೂಡಿಸಲು ಹೊರತಂದ ಸುಂದರ ಹಾಡು. ಇದರಲ್ಲಿ ಬರುವ ಕೆಲವು ಸಾಲು ಇಂತಿದೆ

ಹೊ ಗಯೇ ಏಕ್ … ಬನ್ ಗಯೀ ತಾಕತ್.. ಬನ್ ಗಯೀ ಹಿಮ್ಮತ್…
ಹಿಂದ್ ದೇಶ್ ಕೆ ನಿವಾಸಿ ಸಭಿ ಜನ ಏಕ್ ಹೈ,
ರಂಗ್-ರೂಪ್ ವೇಷ-ಭಾಷ ಛಾಹೀ ಅನೇಕ್ ಹೈ

ಬೇಸಿಗೆಯ ರಜೆ ಮುಂಚೆ ಮಕ್ಕಳಿಗೆ ನಮ್ಮ ವಿಸ್ತೃತ ಕುಟುಂಬ ಪರಿಚಯ ಮತ್ತು ಅವರೊಡನೆ ಹೆಚ್ಚು ಬೆರೆಯಲು ಏನು ಮಾಡಬಹುದೆಂದು ವಿಚಾರ ಮಾಡುತ್ತಿದ್ದೆವು, ಆಗ ಎಲ್ಲರನ್ನು ಒಂದು ಸ್ಥಳದಲ್ಲಿ ಸೇರಿಸುವ ವಿಚಾರ ಬಂದಿತು. ಈ ವಿಚಾರವನ್ನು ಬೇಸಿಗೆಯ ರಜೆಯಲ್ಲಿ ಯಶಸ್ವಿಯಾಗಿ ಮುಗಿಸಿದೆವು, ಅದರ ಕೆಲವು ವಿಷಯಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ.

ನಮ್ಮ ಉದ್ದೇಶ ಇಂತಿದೆ… ನಾವೆಲ್ಲೇ ಇರಲಿ, ನಾವೆಲ್ಲರೂ ಒಂದೇ…
“ಹಮಾರೆ ಕುಟುಂಬ ಕೆ ಸದಸ್ಯ ಸಭಿ ಜನ ಏಕ್ ಹೈ,
ದೇಶ್-ಭಾಷ ಛಾಹೀ ಅನೇಕ್ ಹೈ”

ನಮ್ಮ ಅಜ್ಜಿಯ ಮನೆ ಬಾಗಲಕೋಟೆಯಲ್ಲಿ ಇತ್ತು (ಮುಳುಗಡೆ ಆದ ಕಾರಣ ಈಗ ಇಲ್ಲ), ಎಲ್ಲರನ್ನು ಬಾಗಲಕೋಟೆ ಇಲ್ಲದಿದ್ದರೆ ಅದರ ಹತ್ತಿರ ಸೇರಿಸುವ ಪ್ರಯತ್ನ, ಕೊನೆಗೆ ನಾವೆಲ್ಲರೂ ಸೇರಿದ್ದು ಬಾದಾಮಿಯಲ್ಲಿ. “ದೇಶ್-ಭಾಷ ಛಾಹೀ ಅನೇಕ್ ಹೈ” ಸಾಲಿನಂತೆ ಬಂದವರು ಮುಂಬೈ, ದೆಹಲಿ, ಕರ್ನಾಟಕ, ಯು ಕೆ ತರಹ ಸ್ಥಳದಿಂದ, ಕೆಲವರಿಗೆ ಕನ್ನಡ ಭಾಷೆ ಕೂಡ ಅಪರೂಪ. ತೊಂಬತ್ತು ವರುಷದವರಿಂದ ೨ ವರುಷದ ವಯಸ್ಸಿನ್ನ ಒಟ್ಟು ೫೦ಕ್ಕೋ ಹೆಚ್ಚು ಸದಸ್ಯರು ಸೇರಿದ್ದರು. ಜೊತೆಯಾಗಿ ನೆನಪಿನ ದೋಣಿಯಲಿ ಸಾಗಲು ನಮ್ಮ ತಂಡ ಸಿದ್ದವಾಗಿತ್ತು

ನಮ್ಮ ತಂಗುದಾಣ (ರೆಸಾರ್ಟ್) ಹೊಲಗಳ ನಡುವೆ ಇತ್ತು, ಸುಂದರವಾದ ಸ್ಥಳ. ಪ್ರತಿದಿನದ ವೇಗದ ಜೀವನದಿಂದ ಹೊರಬಂದು ಇಂತಹ ಒಂದು ಸ್ಥಳದಲ್ಲಿ ನಿಂತಾಗ ನಮ್ಮ ಸುತ್ತಲಿನ ಜಗತ್ತಿನ ಕಲ್ಪನೆಯೇ ಬದಲಾಗುತ್ತದೆ. ಆ ಮಣ್ಣಿನ ವಾಸನೆ, ಸುತ್ತಲಿನ ಸದ್ದಿನ ಸಂಗೀತ, ಆಕಾಶದಲ್ಲಿ ಸೂರ್ಯನ ಬಣ್ಣ ಬಣ್ಣದ ಚಿತ್ತಾರ ಎಲ್ಲವನ್ನು ಮರೆಸುತ್ತದೆ. ನಸುಕಿನಲ್ಲಿ ಹೊರಗೆ ಬಂದು ನಿಂತಾಗ ಮನ ಗುನುಗುನುಸಿದ್ದು,

ಮೂಡಲ ಮನೆಯ ಮುತ್ತಿನ ನೀರಿನ
ಎರಕವ ಹೊಯ್ದ, ನುಣ್ಣನೆ ಎರಕವ ಹೊಯ್ದ
ಬಾಗಿಲು ತೆರೆದು ಬೆಳೆಕು ಹರಿದು
ಜಗವೆಲ್ಲ ತೊಯ್ದ, ದೇವನು ಜಗವೆಲ್ಲ ತೊಯ್ದ

ಇಂತಹ ಸುಂದರ ಪರಿಸರದಲ್ಲಿ ನಾವೆಲ್ಲರೂ ಸೇರಿದ್ದವು, ನಾವೆಲ್ಲರೂ ಎನ್ನುವ ವಿಚಾರಕ್ಕೆ ಬರೋಣ. ಹಿಂದಿನ ಒಂದು ಲೇಖನದಲ್ಲಿ ಸಾಮಾಜಿಕ ಮಾಧ್ಯಮ ಇಂದ ಈಗಿರುವ ಸಮಸ್ಯೆಗಳ ಬಗ್ಗೆ ಬರೆದಿದ್ದೆ, ಈಗಿನ ಮಕ್ಕಳು ಸಾಮಾಜಿಕ ಮಾಧ್ಯಮದ ಸ್ನೇಹಿತರನ್ನೇ ತಮ್ಮ ಹತ್ತಿರದ ಬಳಗವೆಂದು ತಿಳಿದಿದ್ದಾರೆ, ಪ್ರತಿಯೊಬ್ಬರೂ ೮೦೦ – ೧೦೦೦ ಸಾಮಾಜಿಕ ಮಾಧ್ಯಮದ ಸ್ನೇಹಿತರನ್ನು ನೋಡುತ್ತಾ ಬೆಳೆಯುತ್ತಿದ್ದಾರೆ. ಒಂದು ಸಂಶೋಧನೆ ಪ್ರಕಾರ, ಮನುಷ್ಯ ಸಂಕೀರ್ಣ ಸಮಾಜದಲ್ಲಿ ಬೆಳೆದರೂ, ಒಬ್ಬ ಮನುಷ್ಯ ೧೫೦ಕ್ಕೋ ಹೆಚ್ಚಿನ ಜನರೊಡನೆ ಸಮತೋಲಿತ ಸಾಮಾಜಿಕ ಸಂಬಂಧ ಇಟ್ಟುಕೊಳ್ಳಲು ಆಗುವದಿಲ್ಲ. ಆದುದರಿಂದ ಅವರ ಸಾಮಾಜಿಕ ಸಂಬಂಧ ಸಣ್ಣ ಪ್ರಮಾಣದಲ್ಲಿ ಮತ್ತು ಪರಿಚಿತ ಸಂಪರ್ಕದಲ್ಲಿ ಇದ್ದರೆ ಅದು ಆರೋಗ್ಯಕರ ಎಂದು ಪರಿಗಣಿಸಲಾಗಿದೆ.

ನಮ್ಮ ಮಕ್ಕಳಿಗೂ ಅವರ ದೂರದಲ್ಲಿ ನೆಲೆಸಿರುವ, ಪರಿಚಿತ ಸಂಬಂಧ ಬೆಳೆಸಲು ಅವಕಾಶ ಕೊಡುವ ಪ್ರಯತ್ನ ಮಾಡಿದೆವು. ನಮ್ಮ ಪರಿಚಯದ ವ್ಯಕ್ತಿಯೊಬ್ಬರು ಹೇಳಿದ ಮಾತು, ಭಾರತಕ್ಕೆ ಹೋದಾಗ ನಾವು ಸಂಬಂಧಿಕರನ್ನು ಭೇಟಿ ಮಾಡುತ್ತೇವೆ, ಆದರೆ ಅವರ ಮಕ್ಕಳ ಹೆಸರು ಮರೆತುಹೋಗಿರುತ್ತದೆ… ಅವಾಗ ಚಿಕ್ಕವರನ್ನು ಪುಟ್ಟ ಬಾ, ಪುಟ್ಟಿ ಬಾ ಎನ್ನಬೇಕಾಗುತ್ತದೆ. ಇಂತಹ ಒಂದು ಸಂದಿಗ್ದ ಪರಿಸ್ಥಿತಿ ಬರುವುದು ಅವರ ಸಂಪರ್ಕ ಕಳೆದುಕೊಂಡಾಗ. ವರ್ಷಕೊಮ್ಮೆ ನಮ್ಮವರೂ ಎನಿಸುವರನ್ನು ಭೇಟಿ ಮಾಡುತ್ತಿದ್ದರೆ, ಒಂದು ಆರೋಗ್ಯಕರ ಮತ್ತು ಸುಂದರ ಪರಿಸರದಲ್ಲಿ ಹೊಸ ಪೀಳಿಗೆ ಬೆಳೆಯಬಹುದು. ನಮ್ಮವರು ಎಂದರೆ ಇಲ್ಲಿ ಬಂಧುಗಳು ಆಗಬಹುದು ಅಥವಾ ಯಾರಾದರೂ ಆಪ್ತರು ಆಗಬಹದು.
ಈಗಿನ ಚಿಕ್ಕ ಸಂಸಾರ ಇರುವ ರೀತಿಯಲ್ಲಿ ನಾನು, ನನ್ನ ಹೆಂಡತಿ ಮತ್ತು ಮಕ್ಕಳು ಎಂದು ನಮ್ಮನ್ನು ಒಂದು ಸೀಮಿತದಲ್ಲಿ ಇಟ್ಟುಕೊಂಡರೆ ಅದು ಕಷ್ಟ ಆಗಬಹುದು. ನಮ್ಮಲ್ಲಿ ಬೆಳೆಯುವ ಒಂಟಿತನ; ಹೇಳದಿದ್ದರೂ, ಆಡದಿದ್ದರೂ ಕೆಳಗಿನ ಸಾಲುಗಳು ನಮ್ಮಲ್ಲಿ ಹುಟ್ಟುವ ಭಾವನೆ ಪ್ರತಿಬಿಂಬಿಸುತ್ತದೆ

ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ……..
ನಿನ್ನ ಜೊತೆಯಿಲ್ಲ,ದೆ ಮಾತಿಲ್ಲದೆ ಮನ ವಿಭ್ರಾಂತ.

ಇನ್ನೊಂದು ಹಂಚಿಕೊಳ್ಳಬೇಕಾದ ವಿಷಯ ಎಂದರೆ ನಮ್ಮ ಮುತ್ತಜ್ಜಿಯ ಸಾಹಸ ಕಥೆ. ಸುಮಾರು ೭೦ ವರುಷಗಳ ಹಿಂದೆ ಅವರು ಬದರಿ, ಕೇದಾರ, ಕಾಶಿ ಯಾತ್ರೆಗೆ ಹೋಗಿದ್ದರು. ಆಗಿನ ಬದರಿ ಯಾತ್ರೆಯಲ್ಲಿ ಅವರು ತಮ್ಮ ಅಡುಗೆ ಪಾತ್ರೆ, ಅಕ್ಕಿ, ಬೇಳೆ ಮುಂತಾದ ಸಾಮಾನು ಒಯ್ಯುತ್ತಿದ್ದರು. ಈಗಿನಂತೆ ಬಸ್ಸು, ಕುದರೆ, ಪಲ್ಲಕ್ಕಿ… ಮುಂತಾದ ವ್ಯವಸ್ಥೆ ಇರದೇ ಅವರು ಹೆಚ್ಚಿನ ಪ್ರವಾಸ ನಡೆದುಕೊಂಡು ಹೋಗುತ್ತಿದ್ದರು. ಭಾಷೆ ಬರುವದಿಲ್ಲ, ಒಬ್ಬೊಬ್ಬರೇ ಹೋಗುವಂತಿಲ್ಲ, ಆದುದರಿಂದ ಅವರು ಗುಂಪು ಮಾಡಿಕೊಂಡು ಜೊತೆ ಜೊತೆಗೆ ಪ್ರಯಾಣ ಮಾಡುತ್ತಿದ್ದರು. ಇಂತಹ ವ್ಯವಸ್ಥೆಯಲ್ಲಿ ಅವರಿಗೆ ಒಂದು ಶಿವಲಿಂಗ ಸಿಕ್ಕಿತು, ಆಗ ಅವರ ಹಳ್ಳಿಯಲ್ಲಿ ಶಿವನ ಗುಡಿ ಇರಲಿಲ್ಲ (ಸುತಗೊಂಡರ್ ಹಳ್ಳಿ ಹೆಸರು, ಇದು ಆಲಮಟ್ಟಿ ಹತ್ತಿರ ಇದೆ). ಅವರು ಅಲ್ಲಿ ಸಿಕ್ಕ ಶಿವಲಿಂಗ ಹೊತ್ತು ಉತ್ತರ ಭಾರತದಿಂದ ಕರ್ನಾಟಕದ ಸಣ್ಣ ಹಳ್ಳಿಗೆ ತಂದಿದ್ದರು. ನಾವೆಲ್ಲ ಹಳ್ಳಿಗೆ ಭೇಟಿ ಕೊಟ್ಟಾಗ ಹಳ್ಳಿಯ ಜನ ನಮೆಲ್ಲರಿಗೂ ಶಿವನ ಗುಡಿ ತೋರಿಸಿ ನಮಗೆ ಅವರ ಸಾಹಸ ಯಾತ್ರೆ ವಿವರಿಸಿ ತಿಳಿಸಿದರು. ಇದು ನಮ್ಮ ಹಳ್ಳಿ ಭೇಟಿಯ ವಿಶೇಷ ಅನುಭವ ಆಯಿತು.

ನಮ್ಮ ಬಾದಾಮಿ ಪ್ರವಾಸದಲ್ಲಿ ನೆನಪಿಸಿಕೊಳ್ಳಬೇಕಾದ ವಿಶಿಷ್ಟ ವ್ಯಕ್ತಿ ಎಂದರೆ ಡಾ|| ಶೀಲಕಾಂತ್ ಪತ್ತಾರ್, ಇವರು ನಮ್ಮ ಅಮ್ಮ ಮತ್ತು ಅವರ ಅಣ್ಣನೊಡನೆ ಓದಿದವರು, ಅವರೊಡನೆ ಮನೆಯ ಮಗನಂತೆ ಬೆಳೆದವರು. ಬಾದಾಮಿ ಮತ್ತು ಸುತ್ತು ಮುತ್ತಲಿನ ಚರಿತ್ರೆ, ಶಿಲ್ಪಕಲೆ ಬಗ್ಗೆ ಚೆನ್ನಾಗಿ ತಿಳಿದುಕೊಡವರು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ. ಕೆಲವು ವರುಷಗಳ ಹಿಂದೆ ಅವರು ತೀರಿಕೊಂಡರು. ಅವರು ಬರೆದ ಕೆಲವು ಪುಸ್ತಕಗಳು “The Singing Rocks of Badami “, “ಬಾದಾಮಿ ಶಿಲ್ಪಕಾಶಿ”, “ಸಪ್ತಕ” ಮುಂತಾದವುಗಳು. ಅವರು ಬರೆದ ಸಪ್ತಕ ಪುಸ್ತಕದ ಒಂದು ಭಾಗ ಹಂಚಿಕೊಳ್ಳುತ್ತಿದ್ದೇನೆ

“ಚಾಲುಕ್ಯ ದೊರೆಗಳು ಕಲಾರಾಧಕರಾಗಿದ್ದರು. ಅವರ ಕಾಲಾವಧಿಯಲ್ಲಿ ಪಟ್ಟದಕಲ್ಲು ವಾಸ್ತು ಹಾಗು ಶಿಲ್ಪಗಳ ಪ್ರಧಾನ ಪ್ರಯೋಗಶಾಲೆಯಾಗಿತ್ತು. ಈ ಪ್ರಯೋಗಗಳು ಬಾದಾಮಿ ಮತ್ತು ಐಹೊಳೆಯಲ್ಲೂ ನಡೆದವು. ಉತ್ತರದಲ್ಲಿ ಗುಪ್ತರು ಮತ್ತು ದಕ್ಷಿಣದಲ್ಲಿ ಪಲ್ಲವರು ತಮ್ಮದೇ ಆದ ವಾಸ್ತುಪರಂಪರೆಯನ್ನು ಪ್ರತಿಷ್ಠಾಪಿಸಿದರು. ಗುಪ್ತರ ವಾಸ್ತು ಶೈಲಿಯನ್ನು ನಾಗರ ಶೈಲಿಯೆಂದು, ಪಲ್ಲವರ ವಾಸ್ತು ಪದ್ದತಿಯನ್ನು ದ್ರಾವಿಡ ಶೈಲಿಯೆಂದು ಕರೆಯಲಾಗುತ್ತಿತ್ತು.”

ಐಹೊಳೆ ಕೆತ್ತನೆ ಪರಿಪೂರ್ಣ ವಾಸ್ತುಶಿಲ್ಪ ಅಲ್ಲವೆಂದು ನೋಡಿದರೆ ಗೊತ್ತಾಗಿ ಬಿಡುತ್ತದೆ. ಅಲ್ಲಿ ವಿಧ ವಿಧವಾದ ವಿನ್ಯಾಸ, ಕೆತ್ತನೆ ಪ್ರಯೋಗಗಳು ನಡೆಸಿ ಶಿಲ್ಪಿಗಳು ನಂತರದ ವಾಸ್ತುಶಿಲ್ಪದ ಬೆಳವಣಿಗೆಗಳಿಗೆ ಅಡಿಪಾಯ ಹಾಕಿದರು. ಅಲ್ಲಿ ಹೊರಹೊಮ್ಮಿದ ಮಿಶ್ರ ಶೈಲಿ ಕೆತ್ತನೆಗಳು ಐಹೊಳೆಗೆ “ಭಾರತೀಯ ವಾಸ್ತುಶಿಲ್ಪದ ತೊಟ್ಟಿಲು” ಎಂಬ ಬಿರುದನ್ನು ತಂದುಕೊಟ್ಟಿತು.

ಡಾ|| ಶೀಲಕಾಂತ್ ಪತ್ತಾರ್ ಅವರನ್ನು ಇಲ್ಲಿ ಪರಿಚಯಿಸಿದ ಕಾರಣ ಅವರು ಮಾಡಿದ ಸಂಶೋಧನೆ, ಪ್ರಕಟಿಸಿದ ಕೃತಿ ಬಗ್ಗೆ ತಿಳಿಸಲು. ಚಿಕ್ಯಾಗೋ ವಿಶ್ವವಿದ್ಯಾಲಯದ ಇತಿಹಾಸದ ಪ್ರೊಫೆಸರ್ ಅವರ “The Singing Rocks of Badami” ಗ್ರಂಥದ ಕುರಿತು ಈ ರೀತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ “The reader will be greatly enlightened regarding the historical context and religious meaning of the fine art at Badami”.

ಹೀಗೇ ನಾವು ಮಧುರ ಕ್ಷಣ ಜೊತೆಗೆ ಕಳೆದು, ಸುಂದರ ಸ್ಥಳಗಳನ್ನು ವೀಕ್ಷಿಸಿ, ಸಂಬಂಧಗಳನ್ನು ಹದಗೊಳಿಸಿ… ನೆನಪುಗಳೊಂದಿಗೆ ಎಲ್ಲರೂ ಮತ್ತೆ ನಮ್ಮ ಜಗತ್ತಿಗೆ ಮರಳಿದೆವು.

ಒಂದು ಮರೆಯಲಾಗದ ಪ್ರವಾಸ ಇದಾಗಿತ್ತು. ಎಲ್ಲರೂ ಮುಂದಿನ ಆಪ್ತ ಸಮಾಗಮಕ್ಕೆ ಕಾಯುತ್ತಿದ್ದಾರೆ.

ಹಾಡಿದ್ದೇ ಹಾಡೋ ಕಿಸುಬಾಯಿ ದಾಸ

ಆತ್ಮೀಯ ಓದುಗರೇ,

ಬೇಸಿಗೆ ರಜೆಯ ಶುಭಾಶಯಗಳು. ಇದೇನು ಹಬ್ಬದ ರೀತಿ ಶುಭಹಾರೈಕೆ ಕೋರುತ್ತಿದ್ದೇನೆ ಅಂತ ಕೆಲವರಿಗೆ ಅನಿಸಿರಬಹುದು. ಆದರೆ ಮಕ್ಕಳಿರುವ ಮನೆಯಲ್ಲಿ ಈ ೬ ವಾರಗಳ ಬೇಸಿಗೆಯ ರಜೆ ಒಂದು ಹಬ್ಬವೇ ಸರಿ.
ಅನಿವಾಸಿಯ ಕೆಲ ಸದಸ್ಯರು ಭಾರತ ಅಥವಾ ಬೇರೆ ಬೇರೆ ಸ್ಥಳಗಳ ಯಾತ್ರೆಯಲ್ಲಿ ಇರಬಹುದು.
ಮಕ್ಕಳು ತಿಂಗಳು ಗಟ್ಟಲೆ ಮನೆಯಲ್ಲಿ ಇದ್ದಾಗ ಆಗುವ ದಿನನಿತ್ಯದ ವ್ಯವಹಾರದ ವಿಷಯ ಬದಲಾಗಿದೆ ಹೊರತು ಸಂಭಾಷಣೆಯಲ್ಲ. ಒಂದು ಪುಟ್ಟ ಲೇಖನ ನಿಮ್ಮೆಲ್ಲರ ಓದಿಗೆ ಸಿದ್ದ.

ಇಂತಿ,
ಸಂಪಾದಕಿ

********************************************************************************************************

ಈ ಬಾರಿ ಯಾವ ವಿಷಯದ ಮೇಲೆ ಲೇಖನ ಬರೆಯುವುದು ಎಂದು ನಾನು ಕಡೆಯ ಘಳಿಗೆ ತನಕ ಯೋಚನೆ ಮಾಡುತ್ತಲೇ ಇದ್ದೆ. ಅನಿವಾಸಿಯ ಸದಸ್ಯರೊಬ್ಬರು ಕಾರಣಾಂತರದಿಂದ ಲೇಖನವನನ್ನು ಪೂರ್ಣಗೊಳಿಸಲಾಗಲಿಲ್ಲ. ಇಕ್ಕಟ್ಟಿನಲ್ಲಿ ಸಿಲುಕಿ ನನ್ನ ಹತಾಶೆಯನ್ನು ಐಪ್ಯಾಡ್ ನಲ್ಲಿ ಮುಳುಗಿದ ನನ್ನ ಮಕ್ಕಳ ಮೇಲೆ ತೋರಿಸಿದಾಗ ನಮ್ಮ ಪುರಾಣದ ಕಥೆಗಳು ಮತ್ತೆ ಬಂದವು. ಈಗ ಬ್ರಿಟನಿನ್ನ ಬೇಸಿಗೆ ಸಮಯ. ಶಾಲೆಗಳಿಗೆಲ್ಲ ರಜೆ. ನಮಗೆ ಸಜೆ. ಮಕ್ಕಳನ್ನು ಹೇಗೆ ಬ್ಯುಸಿ ಇಡೋದು ಅನ್ನೋದೇ ಸಮಸ್ಯೆ. ಮೂರು ಹೊತ್ತು ಐಪ್ಯಾಡ್ ಕಂಪ್ಯೂಟರ್ ಅಥವಾ ಗೇಮ್ ಸ್ಟೇಷನ್ ನಲ್ಲಿ ತಮ್ಮ ತಲೆ ತೂರಿಸಿಕೊಂಡು ಕೂತಿರ್ತಾರೆ. ನಮಗೆ ವರ್ಕ್ ಫ್ರಮ್ ಹೋಂ ನ ಅನುಕೂಲವಿರುವದರಿಂದ ಸ್ವಲ್ಪ ಮಟ್ಟಿಗೆ ಅವರೊಡನೆ ಏನಾದರು ಗಮನ ಕೊಡಬಹುದಾ ಅನ್ನೋ ಸಮಾಧಾನ. ಈ ಕಾಲದಲ್ಲಿ ಮಕ್ಕಳಿಗೆ ಬೈಯೋ ಹಾಗಿಲ್ಲ ಬುದ್ದಿವಾದ ಹೇಳೋ ಹಾಗಿಲ್ಲ .ಎಲ್ಲದಕ್ಕೂ ತರ್ಕಬದ್ಧವಾಗಿ ಪ್ರತಿಉತ್ತರ ತಯ್ಯಾರು. ಬಯಸದೆ ಉದ್ಧೇಶಪೂರ್ವಕವಲ್ಲದೆ ನಮ್ಮ ಬಾಲ್ಯ ನಮ್ಮ ಬೇಸಿಗೆ ರಜೆ ಬಗ್ಗೆ ಮಾತನಾಡುವು ಸಹಜವಾಗಿಯೇ ಬರುತ್ತದೆ.

ಪ್ರತಿಯೊಬ್ಬರ ಮನೆಯಲ್ಲೂ ಬಹುಷಃ ಇದೆ ಮಾತುಗಳನ್ನು ಕೇಳಿ ನಾವೆಲ್ಲರೂ ಬೆಳೆದಿದ್ದೀವಿ. ನಮ್ಮ ತಂದೆ ತಾಯಿಯರೂ ಕೂಡ ಅದೇ ಕಥೆಗಳನ್ನು ಕೇಳಿ ದೊಡ್ಡವರಾಗಿದ್ದಾರೆ. ನಾನು ಕೇವಲ ನಮ್ಮ ಮನೆಯಲ್ಲಿ ಮಾತ್ರ ಈ ರೀತಿಯ ಮಾತು ಅಂದುಕೊಡಿದ್ದೆ. ಹೀಗೆ ಶಾಲೆಯಲ್ಲಿ ಸ್ನೇಹಿತೆಯರೊಡನೆ ಮಾತನಾಡುತ್ತ ನನ್ನ ತಂದೆ ಹೇಳಿದ್ದ ಆ ಹಿತವಚನಗಳನ್ನು ಹೇಳಿಕೊಂಡಾಗ ನನ್ನ ಆಶ್ಚರ್ಯಕ್ಕೆ ಅವರ ತಂದೆಯೂ ಅದನ್ನೇ ಹೇಳಿದರಂತೆ. ಅಷ್ಟೇ ಅಲ್ಲಾ ಅವರ ತಾತಂದಿರ ಕಥೆಯೇನಾದರೂ ಕೇಳರಿದರೆ ಮುಗಿದೇ ಹೋಯ್ತು ! ಬಹಳ ರೋಚಕ ಎಂದಳು ನನ್ನ ಗೆಳತಿ.
ಆಗ ನಾವು ಬಹುಶ ನಾವೆಲ್ಲರೂ ಕರ್ನಾಟಕದಲ್ಲಿ ಬೆಳೆದ ಕಾರಣ ನಮ್ಮೆಲ್ಲರ ಮನೆಯ ವಾತಾವರಣ ಒಂದೇ ತರಹ ಇರಬಹುದೇನೋ ಅನ್ಕೊಂಡು ನಮ್ಮ ಜೀವನ ಎಷ್ಟು ಚೆನ್ನಾಗಿದೆ ಅಂತ ಸಮಾಧಾನ ಮಾಡಿಕೊಂಡ್ವಿ.
ನಂತರ ಯಾವೋದು ಒಂದು ಹಿಂದಿ ಸಿನಿಮಾ ನೋಡುವಾಗ ಅದರಲ್ಲೂ ತಂದೆ ಮಗನಿಗೆ ಇದೇ ಹಿಚವಚನಗಳ ಮಂತ್ರ ಪುಷ್ಪ ಮಾಡುತ್ತಾರೆ. ನಾನು ಚಂಗನೆ ಜಿಗಿದು ಇದೇನು ನನ್ನ ತಂದೆ ಈ ಸಿನಿಮಾದಲ್ಲಿನ ಪಾತ್ರಕ್ಕಿಂತ ಸುಮಾರು ೩೦-೪೦ ವರ್ಷಗಳು ಚಿಕ್ಕವರಿರಬೇಕು ಅದೂ ಉತ್ತರ ಭಾರತದ ಯಾವುದೊ ಮೂಲೆಯಲ್ಲಿರುವ ಒಂದು ಹಳ್ಳಿಯಲ್ಲೂ ಅದೇ ನುಡಿಗಳು.
ಬೆಳಿತಾ ಬೆಳಿತಾ ತಿಳಿಯಿತು ಇದು ಭಾರತದ ಉದ್ದಗಲಕ್ಕೂ ಪರಂಪರಾಗತವಾಗಿ ಬಂದಂತಹ ವೇದ ಉಪನಿಷದ್ಗಳಷ್ಟೇ ಪುರಾತನವಾದ ಶುಭಾಷಿತಗಳು ಅಂತ.

ಹಾಗೆ ಪಾಶ್ಚಿಮಾತ್ಯ ಸಿನಿಮ ನೋಡಲು ಶುರು ಮಾಡಿದೆ. ಮೊದಮೊದಲು ತಿಳಿಯುತ್ತಿರಲಿಲ್ಲ ! ಭಾಷೆ ಇಂಗ್ಲಿಷ್ ಆದರೂ ಆಡುನುಡಿ ವ್ಯತಾಸದಿಂದ ಹಾಗು ಉಪಶೀರ್ಷಿಕೆಗಳು ಇಲ್ಲದ ಕಾರಣ ಕಷ್ಟ ಪಟ್ಟು ಅರ್ಥ ಮಾಡಿಕೊಳ್ಳಲ್ಲು ಪ್ರಯತ್ನ ಪಡುತ್ತಿದ್ದೆ. ಹೀಗೆ ಒಂದು ಸಿನಿಮಾದಲ್ಲಿ ತಂದೆ ತನ್ನ ಆಗರ್ಭ ಶ್ರೀಮಂತ ಮಗನಿಗೆ ಇದೇ ನುಡಿಮುತ್ತಗಳ ಸರಮಾಲೆ ಪೋಣಿಸಿ ಹಾರ ಹಾಕುತ್ತಾನೆ. ಆಗ ನಾನು, ಅಯ್ಯೋ ದೇವರೇ ! ಇದೇನು ಅಮೇರಿಕಾದಲ್ಲೂ ಅದೇ ಪರಿಸ್ಥಿತಿ. ಹಾಗಿದ್ದರೆ ಈ ಮಾತುಗಳಲ್ಲಿ ಸಾವಿರ ಆಣೆ ಸತ್ಯವಿರಬೇಕು ಅಥವಾ ನಾಕಾಣೆಯ ಸತ್ಯ ಉಳದಿದ್ದೆಲ್ಲ ಉತ್ಪ್ರೇಕ್ಷೆ ಇರಬಹುದು ಅನ್ನುವ ಒಂದು ಜಿಜ್ಞಾಸೆ.

ಎಷ್ಟೆಲ್ಲಾ ಪೀಠಿಕೆಯ ನಂತರ ನೀವೆಲ್ಲ ಈಗಾಗಲೇ ಊಹಿಸಬಹುದು ನಾನು ಯಾವ ನುಡಿಮುತ್ತಗಳ ಬಗ್ಗೆ ಹೇಳಹೊರಟಿದೀನಿ ಅಂತ. ಹೌದು ! You guessed it right!

ನಾನು ಚಿಕ್ಕಂದಿನಲ್ಲಿ ೧೦ಕಿಲೋಮೀಟರ್ ನಡೆದು ಶಾಲೆಗೆ ಹೋಗುತ್ತಿದ್ದೆ! ನನ್ನ ಹತ್ತಿರ ಬರಿ ೨ ಜೋಡಿ ಅಂಗಿ ಚಡ್ಡಿ ,ಅದರಲ್ಲೇ ನನ್ನ ಬಾಲ್ಯ ಕಳೆದಿದ್ದೇನೆ. ನನ್ನ ಹತ್ತಿರ ಪಠ್ಯ ಪುಸ್ತಕಗಳಿರುತ್ತಿರಲಿಲ್ಲ, ನಿಮಗೆಲ್ಲ ಈಗಲೇ ಟೂ ವೀಲರ್ ! ವಾಚ್, ಅಲಾರ್ಮ್ ಘಡಿಯಾರ ಎಲ್ಲಾ ಶೋಕಿ ! ಪಟ್ಟಿ ಇನ್ನು ದೊಡ್ಡದಲ್ವಾ !! ನಾನು ಇಲ್ಲಿಗೆ ನಿಲ್ಲುಸುತ್ತೇನೆ.

ಇದನೆಲ್ಲಾ ಕೇಳಿ ನಾವು ತೆಪ್ಪಗೆ ಅಲ್ಲಿಂದ ಪಲಾಯನ !

ಈಗಿನ ಹಾಡು ‘ನಮ್ಮ ಕಾಲದಲ್ಲಿ ಇಂಟರ್ನೆಟ್ ಇರಲಿಲ್ಲ, ಕರೆಂಟ್ ಹೋದಾಗ ಏನು ಮಾಡೋದು ಅನ್ನೋದೇ ತಿಳಿತಿರ್ಲಿಲ್ಲ ! ಫೋನ್ ಐಪ್ಯಾಡ್ ಇತ್ಯಾದಿ ಇನ್ಫ್ಯಾಕ್ಟ್ ಟಿವಿ ಕೂಡ ! ಟಿವಿಯಲ್ಲಿ ಮಕ್ಕಳಿಗಾಗಿ ಕಾರ್ಯಕ್ರಮಗಳು ಬೆರಳೆಣಿಕೆ ಮಾತ್ರ!

ಆದರೆ ಈಗಿನ ಮಕ್ಕಳು! ಇಂತಹ ಮಾತುಗಳಿಗೆ ಸರಾಸರಿ ಉತ್ತರ ಕೊಡುತ್ತಾ ‘ಅದು ನಿಮ್ಮ ಕಾಲ , You were unlucky’ , ನೀವು ಇದ್ದ ರೀತಿ ನೀವು ಪಟ್ಟ ಕಷ್ಟ ನಿಜವಾಗಿದ್ದರೂ ಅದು ಈಗಿನ ಪೀಳಿಗೆಗೆ ಅನ್ವಯಿಸುವುದಿಲ್ಲ. ಎಂದೆಲ್ಲಾ ತರ್ಕ!

ನಮ್ಮ ತಂದೆ ತಾಯಿಯರ ಕಾಲಕ್ಕೆ ಹಾಗು ನಮ್ಮ ಬಾಲ್ಯಕ್ಕೆ ಬಹುಷಃ ಅಷ್ಟು ವ್ಯತ್ಯಾಸವಿರಲಿಲ್ಲ ೯೦ಸ್ ದಶಕದ ನಂತರ ಜಾಗತಿಕ ಮಟ್ಟದಲ್ಲಿ ಆದ ಬದಲಾವಣೆಗಳು ಹಾಗು ಈಗ ಕಳೆದ ೨ ವರ್ಷಗಳಿಂದ ನಮ್ಮನು ಅವರಿಸುತ್ತಿರಿವ ಕೃತಕ ಬುದ್ದಿಮತ್ತೆ ಎಂಬ ಕಾರ್ಮೋಡವೋ ಅಥವಾ ಒಂದು ಜಾಲವೋ ನಮ್ಮ ಮನೆಯಲ್ಲಿ, ವೃತ್ತಿಪರ ಜೀವನದಲ್ಲಿ ಸಂಭಾಷಣೆಗಳನ್ನು ಕಡಿಮೆ ಮಾಡುತ್ತಿದೆ ಅನ್ನುವ ಭಾವನೆ.
ಸರಿಯೋ ತಪ್ಪೋ ನಮ್ಮ ಕಾಲದಲ್ಲಿ ಮಾಹಿತಿಯ ಅಭಾವ. ಕೆಲ ವಿಷಯಗಲ್ಲಿ ಇದು ಒಳಿತಾದರೂ ಮತ್ತಿನ್ನು ವಿಷಯಗಳಿಗೆ ಇದು ಅಡೆಚಣೆ ಉಂಟುಮಾಡುತಿತ್ತು.

ಒಂದು ವಿಷಯದಲ್ಲಿ ಈ ‘overload of information ‘ ನ ಪ್ರತಿಕೂಲತೆ ಮಕ್ಕಳು ನಮ್ಮನ್ನು ಯಾವುದೇ ವಿಷಯದ ಬಗ್ಗೆ ಬಂದು ಕೂತು ಚರ್ಚಿಸುವುದು ಕಡಿಮೆ ಆಗಿದೆ. ಅವರಹತ್ತಿರಾ ಎಲ್ಲಾ ಮಾಹಿತಿ ಇದೆ ಅಂತ ಅಲ್ಲಾ. ಕುತೂಹಲ ಕೆರಳಿಸುವ ಮಾಹಿತಿಯೇ ಅವರಿಗೆ ಅರಿವಿಲ್ಲದಂಗಾಗಿದೆ.
ಈ ವಿಷಯದ ಬಗ್ಗೆ ನಾನು ಮಾತು ತೆಗೆದರೆ ಮತ್ತೆ ತಿರುಗಿ ಹಾಡಿದ್ದೇ ಹಾಡೋ ಕಿಸಬಾಯ್ ದಾಸನ ಕಥೆಯಾಗಿ ಕೊನೆಗೆ ನನ್ನ ತಂದೆ ನನ್ನ ಅಜ್ಜ ನನ್ನ ಬಾಲ್ಯ ನೆನಪಾಗುತ್ತದೆ.

ಲೇಖನ
ರಾಧಿಕಾ ಜೋಶಿ

Image courtesy: Internet and AI generated image