ಮಕ್ಕಳು ನರ್ಸರಿಗೆ ಹೋಗುವ ಮೊದಲದಿನ ಪೋಷಕರಿಗೆ ತಳಮಳ ಒಂದುಕಡೆಯಾದರೆ , ಆ ನೆನಪುಗಳನ್ನು ಛಾಯಾ ಚಿತ್ರಗಳಲ್ಲಿ ಸೆರೆಹಿಡಿಯುವ ಭರಾಟೆ ಇನ್ನೊಂದುಕಡೆ. ಕ್ಲಿಕ್ಕಿಸಿದ ಫೋಟೋಗಳನ್ನು ಫೇಸ್ಬುಕ್ ನಂತಹ ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳುವದನ್ನು ನಾವು ಸಾಮಾನ್ಯವಾಗಿ ನೋಡಿದ್ದೇವೆ. ಮುರಳಿ ಹತ್ವಾರರ ಮಗಳು ನರ್ಸರಿಗೆ ಹೋಗುವ ಮೊದಲನೇ ದಿನದ ಭಾವ ತರಂಗಗಳು, ಅವರ ಪೆನ್ನಿಗೆ ಸ್ಪೂರ್ತಿಯ ಸೆಲೆಯಾಗಿ, ಅವರ ಅನುಭವವನ್ನು ‘ನರ್ಸರಿ ಎಂಬ ಮೊದಲ ಶಾಲೆ‘ ಎಂಬ ಒಂದು ಸುಂದರ ಲೇಖನವಾಗಿಸುವಲ್ಲಿ ಯಶಸ್ವಿಯಾಗಿವೆ.
ಹಿಂದೂ ಸಂಸ್ಕೃತಿಯಲ್ಲಿ, ಮಕ್ಕಳಿಗಾಗಿ ಅನೇಕ ಶಾಸ್ತ್ರಗಳಿವೆ (ನಾಮಕರಣ, ಅನ್ನಶಾಸ್ತ್ರ , ಅಕ್ಷರಾಭ್ಯಾಸ ಹೀಗೆ ಮೊದಲಾದವು) ಅವುಗಳಲ್ಲಿ ಒಂದು ಅಕ್ಷರಾಭ್ಯಾಸ. ಶಾರದೆಯ ನೆನೆದು, ಮರಳಿನಲ್ಲೋ ಅಥವಾ ಅಕ್ಕಿಯಲ್ಲೋ ಮಕ್ಕಳ ಕೈ ಹಿಡಿದು ಓಂಕಾರ ಬರೆಸುವ ಮೂಲಕ ಅಕ್ಷರಾಭ್ಯಾಸದ ಶಾಸ್ತ್ರವನ್ನು ನೆರವೇರಿಸಲಾಗುತ್ತದೆ. ಮುರಳಿ ಹತ್ವಾರರು ಅಕ್ಷರಾಭ್ಯಾಸ ಎಂಬ ಕವಿತೆಯಲ್ಲಿ, ಈ ಪದ್ದತಿಯ ಹಿಂದಿನ ಅಪೇಕ್ಷೆ ಏನು ಎಂದು ತಿಳಿಸಿ ಕೊಡುತ್ತಿದ್ದಾರೆ. ಭಾಷೆಯ ಬಗೆಗಿನ ಅವರ ಧೋರಣೆಗಳು, ಅಕ್ಷರಗಳ ಬಲ, ಆ ಬಲದಿಂದ ಅವರು ನಿರೀಕ್ಷಿಸುತ್ತಿರುವ ಹೊಸತನ, ಮತ್ತು ಕಲಿಕೆ ಅಕ್ಷರಗಳಿಗಷ್ಟೇ ಸೀಮಿತವಾಗದಿರಲಿ ಎಂಬ ವಾದ, ಎಲ್ಲವೂ ಈ ಕವಿತೆಯಲ್ಲಿ ಅಡಗಿವೆ.
ಸಂಪಾದಕನಾಗಿ ಬರಹದಲ್ಲಿನ ಚಿಕ್ಕ ಪುಟ್ಟ ಲೋಪ ದೋಷಗಳನ್ನು ಬಗೆ ಹರಿಸುವ ನೆಪದಲ್ಲಿ, ಲೇಖನ ಮತ್ತು ಕವಿತೆಯನ್ನು ಹಲವು ಬಾರಿ ಓದಿ ಆಹ್ಲಾದಿಸಿದ್ದೇನೆ . ನೀವೂ ಕೂಡ ಇಷ್ಟಪಡುತ್ತೀರೆಂದು ನಂಬಿದ್ದೇನೆ. – ಶ್ರೀನಿವಾಸ ಮಹೇಂದ್ರಕರ್
ನರ್ಸರಿ ಎಂಬ ಮೊದಲ ಶಾಲೆ
ಬರೆದವರು : ಮುರಳಿ ಹತ್ವಾರ್

‘ಅಪ್ಪ, ಬ್ಯಾಗ್ ಫೋಟೋ ತೆಗೀರಿ’ ಮುದ್ದಾದ ಭಾವದಲ್ಲಿ ಅವಳಮ್ಮ ಐದು ನಿಮಿಷದ ಹಿಂದೆ ಹೇಳಿದ್ದನ್ನ ನನಗೊಪ್ಪಿಸಿ, ಠೀವಿಯಿಂದ ನಿಂತು ಫೋಟೋ ತೆಗೆಸಿಕೊಂಡು, ‘ಹಾ! ಆಯ್ತು, ಬನ್ನಿ ಹೋಗೋಣ ಸ್ಕೂಲಿಗೆ’ ಎನ್ನುತ್ತಾ ಎರಡೂಕಾಲು ವರ್ಷದ ಮಗಳು ಹೊರ ಬಾಗಿಲಿನತ್ತ ನಡೆದಳು. ಮೊದಲ ದಿನ ಶಾಲೆಗೆ ಹೋಗುವ ಸಂಭ್ರಮ ಅವಳಿಗೆ. ಹಾಗೆಂದರೇನು ಅನ್ನೊದು ಅವಳ ಕಲ್ಪನೆಯ ವಿಸ್ತಾರದಲ್ಲಿ ಹೇಗೆ ಹರಡಿಕೊಂಡಿದೆ ಎನ್ನುವದು ಅವಳಿಗೆ ಮಾತ್ರ ಗೊತ್ತು.
ಅಲ್ಲಿಲ್ಲಿ ದೊಡ್ಡ ಮಕ್ಕಳು ಬೆಳಗ್ಗೆದ್ದು ಶಾಲೆಗೆ ಹೋಗುವದನ್ನ ನೋಡಿ ಅವಳಿಗೆ ಶಾಲೆ ಎನ್ನುವದು ಒಂದಿದೆ, ಅಲ್ಲಿಗೆ ಮಕ್ಕಳು ಹೋಗಬೇಕು ಅನ್ನುವಷ್ಟು ತಿಳಿದಿದೆ. ಅವಳಮ್ಮ, ಅಲ್ಲಿ ಏನೇನು ಇರಬಹುದು, ಏನೇನು ಮಾಡುತ್ತಾರೆ ಎನ್ನುವದನ್ನ ವಿವರವಾಗಿ ಮತ್ತೆ ಮತ್ತೆ ವರ್ಣಿಸಿ ಅವಳ ಕಲ್ಪನೆಯ ಶಾಲೆಯನ್ನ ಬೆಳೆಸಿದ್ದಾಳೆ. ಅಲ್ಲದೆ, ಲೈಬ್ರರಿಯಿಂದ ನರ್ಸರಿಯ ಬಗ್ಗೆ ಮಕ್ಕಳ ಪುಸ್ತಕವೊಂದನ್ನು ತಂದು ಸುಮಾರು ಸಾರಿ ಮಗಳ ತಲೆಯಲ್ಲಿ ಚಿತ್ರ ಬಿತ್ತಿದ್ದಾಳೆ. ಮಗಳ ಕುತೂಹಲದ ಸಂಭ್ರಮ; ಅಮ್ಮನ, ನನ್ನ ಆತಂಕ ತುಂಬಿದ ಸಂತೋಷ ಇವೆರಡರ ಪರೀಕ್ಷೆಯ ದಿನ ಇವತ್ತು.
ಈ ಪರೀಕ್ಷೆಯ ತಯಾರಿ ಶುರುವಾಗಿ ಹಲವಾರು ತಿಂಗಳೇ ಆಗಿವೆ. ಯಾವಾಗ? ಹೇಗೆ? ಎಲ್ಲಿಗೆ? ಎಷ್ಟು ದಿನ? ಊಟ ತಿಂಡಿ ಹೇಗೋ? ಹೀಗೆ ಶುರುವಾಗುವ ಪ್ರಶೆಗಳ ಸರಪಳಿಗಳ ಬಂಧನದಲ್ಲಿ ಉತ್ತರ ಹುಡುಕುತ್ತ, ಕೊನೆಗೆ ಒಪ್ಪಿಗೆಯಾದ ಶಾಲೆಯೊಂದಕ್ಕೆ – ಶಾಲೆಯಂದರೆ ಶಾಲೆಗೆ-ಮುಂಚಿನ-ಶಾಲೆ ಅಥವಾ ಆಟದ-ಶಾಲೆ – ಸೇರಿಸಿ, ಅಲ್ಲಿಗೆ ಹೋಗಲು ಬೇಕಾದ ಚೀಲ ಮುಂತಾದ ಸಲಕರಣೆಗಳನ್ನ ಫೋನಿನೊಳಗಿನ ಅಂಗಡಿಗಳಿಂದ ತರಿಸಿ, ತೆಗೆದು ನೋಡಿ ಸಂಭ್ರಮಿಸಿ, ಹೇಗೇಗೆ ಬೇಕೋ ಹಾಗೆ ತುಂಬಿಟ್ಟು ತಯಾರುಮಾಡಿದ ಅವಳಮ್ಮನ ಮುಖದ ಹೊಳಪು, ಅದು ಮುಚ್ಚಿಡುತ್ತಿದ್ದ ಆತಂಕ ಇವೆಲ್ಲ ಪದಗಳಿಗೆ ಸಿಗುವ ಭಾವಗಳಲ್ಲ. ಅಪ್ಪ, ಅಮ್ಮ, ಮತ್ತು ಆಗಾಗ ಮನೆಯವರು ಇವರೆಲ್ಲರ ಹೊರತಾಗಿ ಮತ್ತು ಇವರ್ಯಾರಿಗೂ ಸಂಭಂದವೇ ಇಲ್ಲದ ಅವಳದೇ ಆದ ಹೊಸ ಜನರ ಪ್ರಪಂಚವನ್ನ ಕಟ್ಟುವ, ಅದನ್ನು ಬೆಳೆಸುವ, ಅದರಿಂದ ಕಲಿಯುವ, ಮತ್ತು ಅದರಿಂದ ಬೆಳೆಯುವ ಪಯಣದ ಮೊದಲ ಹೆಜ್ಜೆಯ ಆರಂಭ ಇಂದು. ಆ ಪಯಣ ಒಡ್ಡುವ ಪರೀಕ್ಷೆಗಳಲ್ಲೆಲ್ಲ ಯಶಸ್ಸು ಅವಳದಾಗಲಿ ಎನ್ನುವ ಆಶೀರ್ವಾದದ ಹಾರೈಕೆಯಷ್ಟೇ ಅಮ್ಮ-ಅಪ್ಪರು ಮಾಡಬಹುದಾದ ಪ್ರಾರ್ಥನೆ.
ಯಾವುದೇ ಪಯಣದ ಆರಂಭದಲ್ಲೂ ಹಿಂದಿನ ಪಯಣದ ಅನುಭವ ನೆನಪಿಗೆ ಬರುವದು ಸಾಮಾನ್ಯ. ಹಾಗೆ ಬರುವ ನೆನಪುಗಳು ಒಳ್ಳೆಯದಾಗಿದ್ದರೆ ಧೈರ್ಯವನ್ನೂ ಮತ್ತು ಉತ್ಸಾಹವನ್ನೂ; ಕೆಟ್ಟದ್ದಾಗಿದ್ದರೆ ಎಚ್ಚರಿಕೆಯನ್ನೋ, ಆತಂಕವನ್ನೋ ಹುಟ್ಟು ಹಾಕುವದು ಸಹಜ. ನನ್ನ ಅಮ್ಮ ನನ್ನ ಮೊದಲ ಶಾಲೆಯ ಮೊದಲ ದಿನಗಳ ಅನುಭವ ಆಗಾಗ ನನ್ನಲ್ಲಿ ಹೇಳಿಕೊಂಡದ್ದು ಈ ಸಂಧರ್ಭದಲ್ಲಿ ಕರೆಯದೆ ಮತ್ತೆ ನೆನಪಿಗೆ ಬಂತು. ಬಾಗಿಲ ಸಂದಿಯಲ್ಲಿ ನಾ ನಿಲ್ಲುತ್ತಿದ್ದದ್ದು, ಎಷ್ಟು ಕರೆದರೂ ಹೊರಗೆ ಬರುತ್ತಿದ್ದದ್ದು, ಶಾಲೆಗೆ ಕಳಿಸದಿದ್ದರೆ ಮನೆಯಲ್ಲಿ ಹೇಳಿದ್ದನ್ನೆಲ್ಲ ಮಾಡುತ್ತೇನೆ ಎಂದು ರಮಿಸುತ್ತಿದ್ದದ್ದು, ಮತ್ತು ಹೋ ಎಂದು ಕರುಳು ಕಿತ್ತುವ ಹಾಗೆ ಕೂಗುತ್ತಿದ್ದದ್ದು…ಇವ್ಯಾವದು ಧೈರ್ಯ ತುಂಬುವ ನೆನಪುಗಳಲ್ಲ. ನಮ್ಮ ಮಗಳು ಹೀಗೆ ಮಾಡಿದರೆ ಎನ್ನುವ ಆತಂಕ. ಮೊದಲೇ ಇಷ್ಟು ಬೇಗ ಕಳಿಸಬೇಕೇ? ಅಥವಾ ಈ ದೇಶದ ಅನಿವಾರ್ಯ ನಿಯಮದಂತೆ ಮೂರು ತುಂಬಿದ ಮೇಲೆ ಕಳಿಸುವದೇ ಎನ್ನುವ ಜಿಜ್ಞಾಸೆ ಮನಸ್ಸಿನಲ್ಲಿ ಕುಳಿತಿತ್ತು. ಅವಳಮ್ಮನಿಗೆ ಇದ್ಯಾವ ಆತಂಕವೂ ಇರಲಿಲ್ಲ. ಅವಳ ಮನೆಯಲ್ಲಿ ಯಾವ ಮಕ್ಕಳೂ ಶಾಲೆಗೆ ಹೋಗಲು ಅತ್ತಿಲ್ಲವಂತೆ. ನಮ್ಮ ಮಗಳೂ ಅವಳಮ್ಮನಂತೆ ಅಳಲಿಲ್ಲ. ಅಷ್ಟೇ ಅಲ್ಲ, ಅಳುವ ಹಾಗೆ ಮಾಡಿ ಅಮ್ಮನಿಗೆ ಸಮಾಧಾನ ಮಾಡುವ ಅವಕಾಶವನ್ನೂ ಕೊಡಲಿಲ್ಲ.
ಮೊದಲದಿನವಾದ್ದರಿಂದ ಎರಡು ಗಂಟೆಗಳು ಮಾತ್ರ. ಹೊರಗೆ ಅಮ್ಮನಿಗೆ ಕಾಯಲು ಹೇಳಿದ್ದರು. ಆ ಎರಡು ಗಂಟೆಯೂ ಮಗಳು ಅಳಲಿಲ್ಲ. ಆಗಾಗ ಅಳುತಿದ್ದ ಮಕ್ಕಳನ್ನು ಒಮ್ಮೆ ನೋಡಿ ತನ್ನ ಆಟದಲ್ಲಿ ಮತ್ತೆ ತನ್ಮಯಳಾಗುತ್ತಿದ್ದಳು. ಅವಳ ನ್ಯಾಪಿಯನ್ನೂ ಶಾಲೆಯವರೇ ಬದಲಾಯಿಸುವದಕ್ಕೂ ಅಡ್ಡಿ ಮಾಡಲಿಲ್ಲ. ಭಾಷೆಯ ತೊಡಕೂ ಅವಳ ಹೊಂದಿಕೆಗೆ ಅಡ್ಡಿ ಮಾಡಲಿಲ್ಲ. ಇಷ್ಟರ ಮಟ್ಟಿಗೆ ಅವಳಮ್ಮ ಅವಳಲ್ಲಿ ತುಂಬಿದ ಶಾಲೆಯ ಕಥೆ, ಕಲ್ಪನೆ ಕೆಲಸ ಮಾಡಿತ್ತು. ಅವಳಿಗೆ ಗೊತ್ತಿರುವ ಇಂಗ್ಲಿಷ್ ಎಂದರೆ ಹಾಡುಗಳ ಸಾಲು ಮತ್ತು ನೇಮ್, ನ್ಯಾಪಿ ಎನ್ನುವ ಒಂದಿಷ್ಟು ಪದಗಳು. ಮನೆಯಲ್ಲಿ ಮಾತನಾಡುವ ಕನ್ನಡ, ತೆಲುಗಿನ ಒಂದಿಷ್ಟು ಪದಗಳನ್ನ ಮತ್ತು ಅವುಗಳ ಅರ್ಥಗಳನ್ನ ಶಾಲೆಯವರಿಗೆ ಒಪ್ಪಿಸಿ, ಭಾಷೆಗಳ ನಡುವಿನ ಸೇತುವೆ ಕಟ್ಟಿದ್ದಾಯಿತು. ಮುಂದೇನೋ? ಮನೆಯ ಮಟ್ಟಿಗಾದರೂ ಮನೆಯ ಭಾಷೆ ಉಳಿಯುವದೇ ಎನ್ನುವ ಸಣ್ಣ ಆತಂಕ. ಹಾಗೆ ಉಳಿದ ಉದಾರಹಣೆಗಳು ಇರುವುದರಿಂದ ಒಂದಷ್ಟು ಸಮಾಧಾನ.
ಈಗಿನ ಶಾಲೆಗಳೂ ಮೊದಲಿನಂತಿಲ್ಲ. ಎರಡರಿಂದ ಐದು ವರ್ಷದವರೆಗೆ ಆಟದಿಂದ ಕಲಿಕೆ, ಆನಂತರ ಪಾಠದಿಂದ. ಹಾಡು, ಆಟಗಳಲ್ಲಿ ಮಕ್ಕಳೊಂದಿಗೆ ಬೆರೆಯುವ ಉತ್ಸಾಹದಲ್ಲಿ ಮಕ್ಕಳಿಗೆ ಅಪ್ಪ-ಅಮ್ಮರಿಂದ ಕೆಲವು ಗಂಟೆಗಳು ದೂರ ಇರುವದು ಕಷ್ಟ ಎನಿಸಲಿಕ್ಕಿಲ್ಲ. ಅಲ್ಲದೆ, ಕಲಿಯಲಿಲ್ಲ, ಹೋಮ್ವರ್ಕ್ ಮಾಡಲಿಲ್ಲ ಎಂದು ಜೋರು ಮಾಡುವ, ಹೊಡೆಯುವ ಕಷ್ಟಗಳೂ ಇಲ್ಲ. ಒಂದಿಷ್ಟು ಹಾಡು, ಮಣ್ಣಿನಾಟ, ಉಯ್ಯಾಲೆ, ಗೀಚಲೊಂದಿಷ್ಟು ಹಾಳೆ ಇನ್ನೇನು ಬೇಕು ಮಕ್ಕಳಿಗೆ. ಇಲ್ಲಿನ ಶಾಲೆಗಳಲ್ಲಿ ಊಟ ತಿಂಡಿಯನ್ನೂ ಅವರೇ ಮಾಡಿಸುವುದೂ ಮತ್ತು ನಿದ್ದೆ ಬಂದರೆ ಜೋಗುಳ ಹಾಡುವದೂ ಹೆಚ್ಚಿನ ಮಕ್ಕಳು ಸುಲಭದಲ್ಲಿ ಶಾಲೆಯ ವಾತಾವರಣವನ್ನು ಒಪ್ಪಿಕೊಳ್ಳುವ ಹಾಗೆ ಮಾಡಿರಬಹುದೇನೋ.
ಎರಡರಿಂದ ಐದು ವರ್ಷದ ಮಕ್ಕಳಿಗೆ ಮನೆಗಿಂತ ಶಾಲೆ ಉತ್ತಮವೇ? ಇದು ಎಲ್ಲರೂ ಒಪ್ಪುವ ಮಾತಲ್ಲ. ಕೆಲವು ಸಂಶೋಧಕರ ಪ್ರಕಾರ ಮನೆಯೇ ಉತ್ತಮ. ಯಾಕೆಂದರೆ ಅಲ್ಲಿ ಮಕ್ಕಳು ತಮಗೆ ತೋಚಿದ್ದನ್ನು ಸರಿಯೆನಿಸಿದ ಸಮಯದಲ್ಲಿ ಮಾಡಬಹುದು. ಆ ಅವಕಾಶ ಶಾಲೆಯಲ್ಲಿ ಸಿಗದು. ಇದರಿಂದ ಮಕ್ಕಳ ಮೇಲೆ ಆಗುವ ಪರಿಣಾಮ ಸಂಶೋಧಕರ ವಸ್ತು. ಆದರೆ, ಮಹಾನಗರಗಳ, ಎಲ್ಲರೂ ಕೆಲಸಕ್ಕೆ ಹೋಗುವ ಇಂದಿನ ವಾಸ್ತವದಲ್ಲಿ ಶಾಲೆಗಳನ್ನು ಆದಷ್ಟು ಮನೆಯಂತೆ ಮಾಡುವದಷ್ಟೇ ಉಳಿದಿರುವ ದಾರಿ.
ಮೊದಲ ದಿನದಂತೆ ಎರಡನೆಯ ದಿನವೂ ಸರಾಗವಾಗಿ ಸಾಗಿತು. ಮುಂದಿನ ವಾರದಿಂದ ಅಮ್ಮನಿಗೆ ಅಲ್ಲಿಂದ ಗೇಟ್ಪಾಸ್. ಮಗಳ ಊಟ ತಿಂಡಿಯೂ ಶಾಲೆಯಲ್ಲೇ. ಅಲ್ಲಿನ ಮೆನುವನ್ನು ಮತ್ತೆ ಮತ್ತೆ ಓದಿ ಅಲ್ಲಿ ಕೊಡುವ ಗೋಧಿಯ ತರಿ (shredded wheat) ಮತ್ತು crumpet ಗಳನ್ನ ಮೊದಲ ಬಾರಿಗೆ ಮಗಳಿಗೆ ಮನೆಯಲ್ಲಿ ಪರಿಚಯಿಸುವ ಪ್ರಯತ್ನ, ಮಗಳ ದೋಸೆ-ಉಪ್ಪಿಟ್ಟಿನ ಕೂಗಿನಲ್ಲಿ ಕೊನೆಯಾಯಿತು. ನಿಧಾವಾಗಿಯಾದರೂ ಒಪ್ಪಿಕೊಳ್ಳಬಹುದು. ಒಪ್ಪಿಕೊಳ್ಳಲೇಬೇಕಲ್ಲವೇ? ದೋಸೆ-ಉಪ್ಪಿಟ್ಟು ಶಾಲೆಯಲ್ಲಿ ಸಧ್ಯಕ್ಕಂತೂ ಸಿಗುವ ತಿಂಡಿಗಳಲ್ಲವಲ್ಲ!
ಶಾಲೆಯಲ್ಲಿ ಇವಳನ್ನು ನೋಡಿಕೊಳ್ಳುವ ಜವಾಬ್ದಾರಿಯ ಲಿಸಾ ಈಗ ಇವಳಿಗೆ ಲಿಸಾ ಅಕ್ಕ ಆಗಿದ್ದಾಳೆ. ಮನೆಯಲ್ಲಿರುವ going to nursery ಪುಸ್ತಕವನ್ನ ಈಗ ತಿರುವಿ ಹಾಕುವಾಗ ಅಲ್ಲಿನ ಪಾತ್ರಗಳನ್ನ ತನ್ನ ನರ್ಸರಿಯ ಶಾಲೆಗೆ ಹೋಲಿಸಿಕೊಳ್ಳುತ್ತಿದ್ದಾಳೆ. ‘ಅಮ್ಮ ನನ್ನನ್ನು strollerನಲ್ಲಿ schoolಗೆ ಕರ್ಕೊಂಡ್ ಹೋಗ್ತಾರೆ. ಅಲ್ಲಿ ಲಿಸಾ ಅಕ್ಕ ಬಾಗಿಲು ತೆಗೆದು ನನ್ನನ್ನ ಕರ್ಕೊಳ್ತಾರೆ. ನಾನು ಅಮ್ಮಂಗೆ bye ಮಾಡ್ತೀನಿ’ ಅಂತ ಪುಸ್ತಕದಲ್ಲಿ ಅವಳನ್ನೇ ನೋಡಿಕೊಳ್ತಾಳೆ. ಅದು ಅವಳ ಆಟವೋ, ಅಥವಾ ನಮಗೆ ಸಮಾಧಾನ ಮಾಡುವ ಮಾತುಗಳೋ ಇದು ಅವಳಿಗಷ್ಟೇ ಗೊತ್ತು. ಆದರೆ, ಆ ಮಾತುಗಳು ನಮ್ಮ ಆತಂಕವನ್ನು ಶಮನ ಮಾಡಿದ್ದಂತೂ ನಿಜ. ಇಷ್ಟರ ಮಟ್ಟಿಗೆ ನಮ್ಮ ಮಗಳು ನಮ್ಮಿಬ್ಬರನ್ನ ಚೆನ್ನಾಗಿ ನೋಡಿಕೊಳ್ಳುತಿದ್ದಾಳೆ. ಮನೆಯನ್ನು ಶಾಲೆಯಾಗಿಸಿ, ಶಾಲೆಯನ್ನು ಮನೆಯಾಗಿಸಿ ನಮ್ಮಿಬ್ಬರಿಗೂ ಕಲಿಸುತ್ತಿದ್ದಾಳೆ. ನಮ್ಮನ್ನು ಬೆಳೆಸುತ್ತಿದ್ದಾಳೆ.
ಅಕ್ಷರಾಭ್ಯಾಸ

ಅಕ್ಷರಾಭ್ಯಾಸ ಇಂದು ನಿನಗೆ.
ಶಾರದೆಯ ಪಾದ; ಅಕ್ಷತೆಯ ಹಲಗೆ.
ನಿನ್ನ ಪುಟ್ಟ ಬೆರಳುಗಳಿಗೆ ಅಪ್ಪನ ಬಲ
ಮೂಡಿಸಿದ ಮೊದಲಕ್ಷರಗಳು
ಎಳೆಯಲಿ ನಿನ್ನ ಏಳಿಗೆಯೆಡೆಗೆ ನಿರಂತರ!
ಅಪ್ಪನೆಂಬ ಅಧಿಕಾರದೆ ಹಿಡಿದದ್ದಷ್ಟೇ
ನಾ ನಿನ್ನ ಕೈಯ ಮೃದು ಬೆರಳುಗಳ
ನಾವು ಕಲಿತದ್ದು ನಿನಗುಳಿಯಲಿ
ನೀನು ಕಲಿಯುವದು ನಮಗೆ ತಿಳಿಯಲಿ
ಇದು ಈ ನೇಮದ ಹಿಂದಿನ ಹಂಬಲ!
ನೂರಾರು ಭಾಷೆಗಳ ಬೆಳೆಸಿಟ್ಟಿದ್ದೇವೆ.
ಹಳೆಯದ ಹೊಸದಾಗಿಸಿ, ಅದಕ್ಕಿದ ಬೆರೆಸಿ
ದುಡಿಸಿದ್ದೇವೆ, ದಣಿಸಿದ್ದೇವೆ ಅಕ್ಷರಗಳ.
ಸಾಕು ಕಲಿತರೊಂದು ಭಾಷೆ ಶೃದ್ಧೆಯಲಿ
ಮನಸಿನಾಳದ ಭಾಷೆಯೊಂದೇ ಭವದಲಿ!
ಅಕ್ಷರಗಳಲಿ ಕತ್ತಿಯ ಅಲುಗಿದೆ,
ಹತ್ತಿಯ ನಯದ ಸುಪ್ಪತ್ತಿಗೆಯೂ.
ಬೆಂಕಿಯೂ ಅದೇ ದೀಪವೂ ಅದೇ
ಬರೆವ ಬೆರಳಿನ ತುದಿ, ಮನದ ನುಡಿ
ಸುರಿಯಲಿ ಮಂಥನದ ಅಮೃತದಂತೆ!
ಸುಜ್ಞಾನ ಸಾಗರವದು ಅಗಾಧ.
ನಿನ್ನ ಭಾವದಾಳದ ತಿಳಿವಿನ ಹದ
ಆವಿಗಟ್ಟಿಸಲಿ ಹೊಸತನದ ನಿಧಿ
ಅರ್ಥ ತುಂಬಿದ ಮೋಡಗಳ ತೇರು
ಜಗಬೆಳೆವ ಪದ-ಪದಗಳಲಿ ಹನಿಸಲಿ!
ಅಕ್ಷರಗಳು ನಮ್ಮಂತೆ. ಕೊನೆಯುಂಟು ಅದಕೆ.
ನಾಳೆಗಳ ಬಲವೆಲ್ಲೋ: ಮಂಗಳನ ಮಾತೋ?
ಚಂದಿರನ ಚಕ್ಷುವೊ? ಯಂತ್ರಗಳ ಮಂತ್ರವೋ?
ಅಕ್ಷರಗಳಾಚೆಯೂ ಅರಳಲಿ ನಿನ್ನ ಕಲಿಕೆಯ ಸಾರ
ಸವಿಸವಿಯ ಬೆಳಕಲಿ ಜಗವನುಳಿಸಿ ನಲಿಸುತ!
