ಅನಿವಾಸಿಯಲ್ಲಿ  ಕನ್ನಡ ಕಹಳೆ

ನಮಸ್ಕಾರ. ಕನ್ನಡ ಬಳಗದ ನಲ್ವತ್ತರ ‘ಸಂಭ್ರಮ’ ನಮ್ಮ ಮಹಾರಾಜರ ಹಾಗೂ ಅನೇಕ ಹೆಸರಾಂತ  ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಯಶಸ್ವಿಯಾಗಿ ಹಾಗೂ ಅದ್ಧೂರಿಯಾಗಿ ಜರುಗಿತು.  ಜೊತೆಗೇ KSSVV, ಅನಿವಾಸಿ ಸಮಾನಾಂತರ ಸಭೆಗಳೂ ಕೂಡ ಅಷ್ಟೇ ಯಶಸ್ವಿಯಾಗಿ ಜರುಗಿದ್ದು, ಅತಿಥಿಗಳೆಲ್ಲರ ಪ್ರಶಂಸೆಗೆ ಪಾತ್ರವಾಗಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಎರಡೂ ದಿನದ ಸಭೆಯ ವಿವರವಾದ ‘ವೀಕ್ಷಕ ವಿವರಣೆ’ಯನ್ನು ತಮ್ಮೆದಿರು ಪ್ರಸ್ತುತಪಡಿಸಲಿದ್ದಾರೆ  ಶ್ರೀ ರಾಮಶರಣ ಹಾಗೂ ಶ್ರೀ ಕೇಶವ್ ಅವರು. ಅನಿವಾಸಿಯ ಸಾಧನೆಗಳು ಮುಂಬರುವ ದಿನಗಳಲ್ಲಿ ಇನ್ನೂ ಕಳೆಗಟ್ಟಲಿ ಎಂಬ ಸದಾಶಯಗಳೊಂದಿಗೆ 

–  ಸಂಪಾದಕಿ.
ಕನ್ನಡ ಬಳಗದ ಮಾಣಿಕ್ಯೋತ್ಸವಕ್ಕೆ ಕರ್ನಾಟಕದ ಮೂವರು ಅತಿಥಿಗಳು ಅನಿವಾಸಿ ಸಭೆಗೆ ಬರುವರೆಂದು ನಿಗದಿಯಾಗಿತ್ತು. ಪ್ರೊ. ಗುರುರಾಜ ಕರ್ಜಗಿಯವರು ಹೆಸರಾಂತ ಶಿಕ್ಷಣ ತಜ್ಞರು, ಉತ್ತಮ ವಾಗ್ಮಿ. ಅಧ್ಯಯನ ಮಾಡಿ, ಜಗತ್ತಿನ ಹಲವಾರು ದೇಶಗಳನ್ನು ತಜ್ಞನಾಗಿ ಸಂದರ್ಶಿಸಿದ ಅನುಭವಿ. ಶ್ರೀ. ವಿಶ್ವೇಶ್ವರ ಭಟ್ಟರು ಪ್ರಸಿದ್ಧ ಪತ್ರಕರ್ತ (ವಿಶ್ವ ವಾಣಿ ಪತ್ರಿಕೆಯ ಮಾಲಕ ಹಾಗೂ  ಪ್ರಧಾನ ಸಂಪಾದಕ) ಹಾಗೂ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದ ಬರಹಗಾರ. ಶ್ರೀ. ರವಿ ಹೆಗಡೆ ಕನ್ನಡ ಪ್ರಭಾ ದಿನ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಹಾಗೂ ಸುವರ್ಣ ಸುದ್ದಿವಾಹಿನಿಯ ಮುಖ್ಯ ಸಂಪಾದಕ. ಅತಿಥಿಗಳ ವಿಶೇಷತೆಗನುಗುಣವಾಗಿ ಅನಿವಾಸಿ ಸಭೆಗೆ ಸ್ವರೂಪ ಕೊಡುವುದೊಂದು ವಾಡಿಕೆ. ಈ ಬಾರಿ ಎರಡು ಬಗೆಯ ವಿಶೇಷತೆಗಳನ್ನು ಹೊಂದಿಸಿ ನಡೆಸುವ ಕಾರ್ಯಕ್ರಮದ ಬಗ್ಗೆ ಚರ್ಚಿಸಿ, ಎರಡು ವಿಷಯಗಳ ಮೇಲೆ ಅನಿವಾಸಿ ಸದಸ್ಯರು ವೇದಿಕೆಯ ಮೇಲೆ ಚರ್ಚಿಸುವುದೆಂದು ನಿರ್ಧರಿಸಲಾಯಿತು. ಅತಿಥಿಗಳ ವಿಶೇಷತೆಗನುಗುಣವಾಗಿ ಸದಸ್ಯರು ಎರಡು ವಿಷಯಗಳನ್ನು ಆರಿಸಿದರು: ಶಿಕ್ಷಣ ನೀತಿ ಸಮಾಜಕ್ಕೆ ಅನುಗುಣವಿರಬೇಕು; ಮಾಧ್ಯಮಗಳು ಪ್ರಬಲವಾಗುತ್ತಿವೆ. ಮೊದಲನೆಯ ವಿಷಯಕ್ಕೆ ಪರವಾಗಿ ಲೇಖಕ, ಡಾ.ಶಿವಪ್ರಸಾದ್, ಡಾ.ವತ್ಸಲಾ ರಾಮಮೂರ್ತಿ, ವಿರೋಧವಾಗಿ ಡಾ. ಕೇಶವ ಕುಲಕರ್ಣಿಯವರು; ಎರಡನೇ ವಿಷಯದ ಪರವಾಗಿ ಡಾ.ಶಿವಪ್ರಸಾದ್,  ಡಾ. ಕೇಶವ ಕುಲಕರ್ಣಿ ಹಾಗೂ  ವಿರೋಧವಾಗಿ ಲೇಖಕ ವಾದಿಸುವ ಆಯ್ಕೆ ಮಾಡಿಕೊಂಡರು.  

ಮೊದಲ ದಿನದ ಸಭೆಯ ಅಧ್ಯಕ್ಷತೆ ಹಾಗೂ ನಿರ್ವಹಣೆಯನ್ನು ಡಾ. ಪ್ರೇಮಲತಾ ವಹಿಸಿದರು. ಕಾರ್ಯಕ್ರಮ ಕು. ಅನನ್ಯ ಕದಡಿಯ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಅಧ್ಯಕ್ಷರು ಎಲ್ಲರನ್ನು ಸ್ವಾಗತಿಸಿ, ಅತಿಥಿಗಳ ಪರಿಚಯ ಮಾಡಿಕೊಟ್ಟಿದ್ದಲ್ಲದೆ, ಕಾರ್ಯಕ್ರಮದ ಸ್ವರೂಪವನ್ನು ನಿವೇದಿಸಿದರು. ಮೊದಲ ವಿಷಯದ ಪರವಾಗಿ ಮಂಡಿಸಿದ ಸದಸ್ಯರು ಸಮಾಜ ಹಾಗು ಶಿಕ್ಷಣದ ಬೆಳವಣಿಗೆಯನ್ನು ಅವಲೋಕಿಸಿದರು. ಶಿಕ್ಕ್ಷಣ ಸಮಾಜ ಮುಖಿಯಾಗಿರಬೇಕು, ಮೌಲಿಕವೂ ನೈತಿಕವಾಗಿಯೂ ಇರಬೇಕು. ಸಮಾಜದಲ್ಲಿರುವ ಸಂಬಂಧಗಳನ್ನು ಗೌರವಿಸುವಂತಿರಬೇಕು. ಶಿಕ್ಷಣ ಸಮಾಜಕ್ಕೆ ವಿಮುಖವಾಗಿದ್ದರೆ ಉತ್ತಮ ನಾಗರೀಕರನ್ನು ಬೆಳೆಸಲಾರದೆಂದು ಅಭಿಪ್ರಾಯಪಟ್ಟರು. ಶಿಕ್ಷಣದಲ್ಲಿ ರಾಜಕೀಯ ಹಾಗೂ ಧಾರ್ಮಿಕ ಹಸ್ತಕ್ಷೇಪಗಳಿಲ್ಲದೆ ಸ್ವತಂತ್ರವಾಗಿ ಬೆಳೆಯಬೇಕು ಎಂದು ಪ್ರತಿಪಾಸಿದರು. ವಿರುದ್ಧವಾಗಿ ವಾದಿಸಿದ ಕೇಶವ್ ಶಿಕ್ಷಣ ಎಂದಿಗೂ ಸಮಾಜದ ವಿರುದ್ಧವಾಗಿಯೇ ಕಾರ್ಯವಹಿಸಿದೆ ಎಂದರು. ಈ ವಿರೋಧಿ ನಿಲುವಿನಿಂದ ಶಿಕ್ಷಣ ಸಮಾಜದ ಹಲವು ಡೊಂಕುಗಳನ್ನು ತಿದ್ದುವಲ್ಲಿ ಸಫಲವಾಗಿದೆ. ಎಂದು ಶಿಕ್ಷಣ ನೀತಿ ಹಾಗೂ ಸಮಾಜದ ರೀತಿ ಅನುಸರಿಸಲು ತೊಡಗುವವೋ, ಅಂದಿನಿಂದ ಸಮಾಜ ನಿಂತ ನೀರಾಗಿ ಕೊಳೆಯುವುದೆಂದು ಅಭಿಪ್ರಾಯ ಪಟ್ಟರು. ಪ್ರೊ. ಕರ್ಜಗಿ ಎಲ್ಲರ ವಾದಸರಣಿಗಳನ್ನು ವಿಶ್ಲೇಷಿಸುತ್ತ, ತಮ್ಮ ನಿಲುವು ವಿಷಯದ ಪರ ಎಂದು ಉದಾಹರಣೆಗಳೊಂದಿಗೆ ವಿವರಿಸಿದರು. ಪರ ವಾದಿಗಳನ್ನ ಅಂಗೀಕರಿಸಿ, ಸಮಾಜ ಸದಾ ಬದಲಾಗುವ ವ್ಯವಸ್ಥೆ, ಅದಕ್ಕನುಗುಣವಾಗಿ ಶಿಕ್ಷಣ ವ್ಯವಸ್ಥೆ ಬದಲಾಗುವುದು ಅವಶ್ಯ, ಈ ವ್ಯವಸ್ಥೆ ರಾಜಕೀಯ ಯಾ ಧಾರ್ಮಿಕ ಹಸ್ತಕ್ಷೇಪದಿಂದ ಸ್ವತಂತ್ರವಾಗಿರಬೇಕೆಂಬುದನ್ನು ಅನುಮೋದಿಸಿದರು. ಶಿಕ್ಷಣ ನೀತಿ ಸಮಾಜದ ರೀತಿಗೆ ವಿರೋಧವಾಗಿದ್ದರೆ ಸಮಾಜದ ಮೂಲಭೂತ ತತ್ವಕ್ಕೆ ಧಕ್ಕೆ ತರುವ ಸಾಧ್ಯತೆಗಳಿವೆ, ಶಿಕ್ಷಣ ಸಮಾಜ ಡೊಂಕನ್ನು ತಿದ್ದುತ್ತಿರುವುದು ಅದರೊಡನೆ ಸಹಭಾಗಿಯಾಗಿರುವುದರಿಂದಲೇ ಹೊರತು ವಿರೋಧವಾಗಿರುವುದರಿಂದಲ್ಲವೆಂದು ಅಭಿಪ್ರಾಯಪಟ್ಟರು. ಶಿಕ್ಷಣ ಮಕ್ಕಳನ್ನು ಬದುಕನ್ನೆದುರಿಸಲು ತಯಾರು ಮಾಡಬೇಕು, ಸ್ವತಂತ್ರ ಮನೋಭಾವವನ್ನು ಬೆಳೆಸಬೇಕು, ಅಸಮಾನತೆಯನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ನೀಡಬೇಕೆಂದರು. ಶಿಕ್ಷಣ ಮಕ್ಕಳನ್ನು ಸುಸಂಸ್ಕೃತರನ್ನಾಗಿಸಬೇಕು, ಇಲ್ಲದಿದ್ದರೆ ಅದು ಸಮಾಜದ ಅವನತಿಗೆ ಹಾದಿಯಾದೀತೆಂದು ಎಚ್ಚರಿಸಿದರು. ಉತ್ತಮ ಶಿಕ್ಷಣದ ಬೆಳವಣಿಗೆಗೆ ಸೂಕ್ತ ಶಿಕ್ಷರನ್ನು ಬೆಳೆಸಬೇಕು; ಶಿಕ್ಷಣ ಕೇವಲ ಪರೀಕ್ಷೆಯವರೆಗೆ ಮಿತಿಯಾಗದೇ ಬಾಳಿನುದ್ದಕ್ಕೂ ಅನುಭವಗಳನ್ನು ಹೀರಿ ವ್ಯಕ್ತಿತ್ವ ಬೆಳೆಸುವ ಸಲಕರಣೆಯಾಗಿರಲಿ ಎಂದು ಆಶಿಸಿದರು.   

ಎರಡನೇ ವಿಷಯದ ಪರವಾಗಿ ವಾದ ಮಂಡಿಸಿದ ಸದಸ್ಯರು ಪ್ರಮುಖವಾಗಿ ಸಾಮಾಜಿಕ ಹಾಗೂ ದೃಶ್ಯ ಮಾಧ್ಯಮಗಳ ಹಾವಳಿ ಹಾಗೂ ಪ್ರಭಾವಗಳ ಮೇಲೆ ಹೆಚ್ಚಿನ ಒತ್ತನ್ನು ಕೊಟ್ಟಿದ್ದು ಕಂಡುಬಂದಿತು. ಸಾಮಾಜಿಕ ಮಾಧ್ಯಮಗಳ ಪ್ರಭಾವ ಹೇಗೆ ಮಾನವ ಸಂಬಂಧಗಳನ್ನು ಕಲುಷಿತಗೊಳಿಸುತ್ತಿದೆ ಎಂದು ವಿವರಿಸಿದರು. ವೈಯಕ್ತಿಕ ಭಾವನೆಗಳನ್ನು ಇತರರನ್ನು ಕೆರಳಿಸುವ ಶಕ್ತಿ ಹೊಂದಿದ್ದು, ಇತ್ತೀಚಿಗೆ ಈ ಮಾಧ್ಯಮಗಳು ಮನುಕುಲಕ್ಕೆ ಹೆಚ್ಚಿನ ಹಾನಿ ಮಾಡುತ್ತಿವೆ. ಆಧುನಿಕ ಯುಗದಲ್ಲಿ ಮಾಧ್ಯಮಗಳ ಸಂಖ್ಯೆ ಅತಿಯಾಗಿದ್ದು; ದಿನವಿಡೀ ತೋರಿಸಲ್ಪಡುವ ಸುದ್ದಿವಾಹಿನಿಗಳ ಹಾವಳಿ, ಸುದ್ದಿ ಸ್ಫೋಟದ ಮೇಲಿನ ಅತೀವ ಅವಲಂಬನೆ ಹಾಗೂ ಇದರಿಂದಾಗುವ ದುಷ್ಪರಿಣಾಮಗಳನ್ನು ವಿವರಿಸಿ, ಇಂದಿನ ಶತಮಾನದಲ್ಲಿ ಮಾಧ್ಯಮಗಳು ಅಗತ್ಯಕ್ಕಿಂತ ಹೆಚ್ಚು ಪ್ರಬಲವಾಗಿವೆ ಎಂದು ಪ್ರತಿಪಾದಿಸಿದರು. ಪಕ್ಷಪಾತಿಯಾದ ಮಾಧ್ಯಮಗಳು ಪ್ರಬಲವಾಗಿರುವುದರಿಂದಲೇ ವಿರೂಪಗೊಂಡ ಅಭಿಪ್ರಾಯಗಳು ಜನರ ಮೇಲೆ ತಪ್ಪಾದ ಪ್ರಭಾವ ಬೀರುತ್ತಿವೆ ಎಂಬುದು ಅವರ ಅಭಿಪ್ರಾಯವಾಗಿತ್ತು. ವಿರುದ್ಧವಾಗಿ ಲೇಖಕ, ಮಾಧ್ಯಮ ಇಂದಿನ ದಿನಗಳಲ್ಲಿ ದುರ್ಬಲವಾಗುತ್ತಿದೆ ಎಂದು ವಾದಿಸಿದರು. ಮಾಧ್ಯಮಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದರೂ, ಗಟ್ಟಿ ಸುದ್ದಿಗಿಂತ ಜೊಳ್ಳು ಜಾಸ್ತಿ; ಪತ್ರಿಕೆ ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಪಟ್ಟಭದ್ರ ಹಿತಾಸಕ್ತಿಗಳು ಮಾಧ್ಯಮದ ಮೇಲೆ ಹೆಚ್ಚಿನ ಹಿಡಿತ ಸಾಧಿಸುತ್ತಿದ್ದಾರೆ. ಸ್ವಾತಂತ್ರ್ಯ ಕಳೆದುಕೊಳ್ಳುತ್ತಿರುವ ಮಾಧ್ಯಮ ಸೊರಗುತ್ತಿದೆ ಎಂದು ವಾದಿಸಿದರು. ಶ್ರೀ ರವಿ ಹೆಗಡೆ ಮಾಧ್ಯಮ ಹಿಂದೆಯೂ ಪ್ರಬಲವಾಗಿತ್ತು, ಇಂದೂ ಅಷ್ಟೇ ಶಕ್ತಿಯುತವಾಗಿದೆ ಎಂದು ಉದಾಹರಣೆಗಳನ್ನು ಕೊಟ್ಟು ವಿವರಿಸಿದರು. ಸಾಮಾಜಿಕ ಮಾಧ್ಯಮಗಳು ಅಂಕೆಯಿಲ್ಲದಂತೆ ವರ್ತಿಸುತ್ತಿದ್ದರೂ ಜನ ಸಾಮಾನ್ಯರು ಆ ಮಾಹಿತಿಗಳನ್ನು ಒಪ್ಪುವ/ಬಿಡುವ, ಉಪಯೋಗಿಸುವ/ತಿರಸ್ಕರಿಸುವ ಸ್ವಾತಂತ್ರ್ಯ ಹೊಂದಿದ್ದಾರೆ. ದಿನವಿಡೀ ಬಿತ್ತರಗೊಳ್ಳುವ ಸುದ್ದಿ ನಮಗೆ ಮಾಧ್ಯಮದ ಪ್ರಬಲತೆ ಅತಿಯಾಗಿದೆ ಎಂದು ಅನಿಸುವುದು ಸಹಜ. ಸಿಗುವ ಮಾಹಿತಿಯನ್ನೋ, ಮನರಂಜನೆಯನ್ನೋ ಪಡೆಯುವ ಆಯ್ಕೆಮಾಡುವ ಅವಕಾಶ ಗ್ರಾಹಕರಲ್ಲಿದೆ. ಕೈಯಲ್ಲಿರುವ ಆಯುಧವನ್ನು ಒಳಿತಿಗೆ ಉಪಯೋಗಿಸಬೇಕೋ ಅಥವಾ ಧ್ವಂಸತ್ವಕ್ಕೆ ಬಳಸಬೇಕೋ ಎನ್ನುವುದು ನಮ್ಮ ಕೈಯಲ್ಲಿದೆ. ತಂತ್ರಜ್ನಾದ ಬಳಕೆಯನ್ನು ಉತ್ತಮವಾಗಿ ಉಪಪಯೋಗಿಸುವ ಬುದ್ಧಿವಂತಿಕೆ ನಮ್ಮಲ್ಲಿರಬೇಕೇ ಹೊರತು ಮಾಧ್ಯಮಗಳ ಪ್ರಬಲತೆ/ದುರ್ಬಲತೆಯನ್ನು ಚರ್ಚಿಸುವುದರಲ್ಲಿ ಹೆಚ್ಚಿನ ಅರ್ಥವಿಲ್ಲವೆಂದರು. ಉತ್ತಮ ಗುಣಮಟ್ಟದ ಮಾಹಿತಿಗೆ ಮುದ್ರಿತ ಮಾಧ್ಯಮಗಳು ಇಂದಿಗೂ ಶ್ರೇಷ್ಠ ಎಂದು ಅಭಿಪ್ರಾಯ ಪಟ್ಟರು.  ಶ್ರೀ. ವಿಶ್ವೇಶ್ವರ ಭಟ್ಟರು ತಮ್ಮ ದೀರ್ಘ ವೃತ್ತಿಪರ ಅನುಭವವನ್ನು ವಿಸ್ತರಿಸುತ್ತ ಮಾಧ್ಯಮ ಪ್ರಬಲವಾಗಿಯೂ ಪರಿಣಾಮಕಾರಿಯೂ ಆಗಿರಬೇಕು; ಇದ್ದರೆ ಮಾತ್ರ ದೇಶ ಸಧೃಡವಾಗಿರಲು ಸಾಧ್ಯವೆಂದರು. ಮಾಧ್ಯಮ ಸಮಾಜವನ್ನು ಪ್ರತಿಫಲಿಸುತ್ತದೆ, ಯಾವುದನ್ನೇ ಕೃತಕವಾಗಿ ಸೃಷ್ಟಿ ಮಾಡದು. ದೃಶ್ಯ ಮಾಧ್ಯಮ ವೈಚಾರಿಕತೆಯನ್ನು ಹತ್ತಿಕ್ಕುತ್ತದೆ. ಮುದ್ರಿತ ಮಾಧ್ಯಮ ಎಂದೆಂದಿಗೂ ಪ್ರಸ್ತುತ; ದೂರದರ್ಶನ ಹಾಗೂ ಸಾಮಾಜಿಕ ಮಾಧ್ಯಮಗಳು ಭಾವನೆಗಳನ್ನು ಕೆರಳಿಸುವ, ಮನೋಲ್ಲಾಸಕಾರಿ ಮನರಂಜನೆಗಷ್ಟೇ ಸೀಮಿತ ಎಂದು ಅಭಿಪ್ರಾಯಪಟ್ಟರು. ಜನರ ಅಭಿರುಚಿಗನುಗುಣವಾಗಿ ಈ ಮಾಧ್ಯಮಗಳು ಕಾರ್ಯಕ್ರಮಗಳನ್ನು ಬಿತ್ತರಿಸುತ್ತವೆಯೇ ಹೊರತು ವೈಚಾರಿಕತೆಗೆ ಹೆಚ್ಚಿನ ಪ್ರಾಧಾನ್ಯತೆ ಕೊಡುವಲ್ಲಿ ಸೋತಿವೆ ಎಂದು ಉದಾಹರಣೆಗಳೊಂದಿಗೆ ವಿವರಿಸಿದರು. ಮುದ್ರಿತ ಮಾಧ್ಯಮಗಳ ಪ್ರಾಬಲ್ಯ ಅತಿ ಆಗುತ್ತಿಲ್ಲ, ಕಡಿಮೆಯೂ ಆಗುತ್ತಿಲ್ಲ ಆದರೆ ಪ್ರಬಲ ಮಾಧ್ಯಮ ಸಮಾಜಕ್ಕೆ ಅತ್ಯವಶ್ಯಕ ಎಂದರು. 

ಈ ಬಾರಿಯ ಸಭೆ ಹಿರಿದಾದ ಕೊನೆಯಲ್ಲಿದ್ದುದ್ದಲ್ಲದೆ, ಉತ್ತಮ ಧ್ವನಿ ವ್ಯವಸ್ಥೆಯನ್ನೂ ಪಡೆದಿದ್ದು ವಿಶೇಷ. ಶ್ರೀ. ಆನಂದ ಕೇಶವಮೂರ್ತಿಯವರು ನೀಡಿದ ಉತ್ತಮ ತಂತ್ರಜ್ಞಾನ ಬೆಂಬಲ ಕೇಳುಗರಿಗೆ ಯಾವುದೇ ವ್ಯತ್ಯಯವಾಗದಂತೆ ಸಹಕರಿಸಿತು. ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ನೆರೆದ ಸಭಿಕರು ಸಕ್ರಿಯವಾಗಿ ಅತಿಥಿಗಳಿಗೆ ಪ್ರಶ್ನೆಗಳನ್ನು ಕೇಳಿ ಭಾಗವಹಿಸಿದರು. ಅವರಲ್ಲನೇಕರು ವೈಯಕ್ತಿಕವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಅನಿವಾಸಿ ಸದಸ್ಯರಿಗೆ ಮಾರನೆಯ ದಿನದ ಕಾರ್ಯಕ್ರಮಕ್ಕೆ ಹೆಚ್ಚಿನ ಹುರುಪು ನೀಡಿತು. ಶ್ರೀಮತಿ ಅನ್ನಪೂರ್ಣ ಆನಂದ್ ಚೊಕ್ಕದಾಗಿ ವಂದನಾರ್ಪಣೆ ಕಾರ್ಯ ನಿರ್ವಹಿಸಿದರು. 

- ರಾಮಶರಣ
ಎರಡನೇ ದಿನ ಅಂದುಕೊಂಡಿದ್ದಕ್ಕಿಂತ ತುಂಬ ತಡವಾಗಿ ಕಾರ್ಯಕ್ರಮ ಆರಂಭವಾದರೂ, ಅಂದುಕೊಂಡಿದ್ದಕ್ಕಿಂತ ಹೆಚ್ಚು ಜನರು ಸೇರಿದ್ದರು. ಕಾರ್ಯಕ್ರಮದ ಉಸ್ತುವಾರಿಯನ್ನು ಶ್ರೀಮತಿ ಗೌರಿ ಪ್ರಸನ್ನ ಅವರು ವಹಿಸಿಕೊಂಡಿದ್ದರು. `ದೇಶ ಸುತ್ತು ಕೋಶ ಓದು,` ಎನ್ನುವ ಗಾದೆಮಾತನ್ನು ಹೇಳಿ, ಬಹಳಷ್ಟು ದೇಶಗಳನ್ನು ಸುತ್ತಿದ, ಸಹಸ್ರಾರು ಕೋಶಗಳನ್ನು ಓದಿರುವುದಲ್ಲದೇ  ಹಲವಾರು ಕೃತಿಗಳನ್ನು ರಚಿಸಿರುವ, ವಾಗ್ಮಿಗಳಾದ ಶ್ರೀ ಗುರುರಾಜ ಕರ್ಜಗಿಯವರು ಮತ್ತು  ಶ್ರೀ ವಿಶ್ವೇಶ್ವರ ಭಟ್ಟರು, `ಕನ್ನಡ ಬಳಗ`ದ `ಕೆ ಎಸ್ ಎಸ್ ವಿ ವಿ` ಯ ಪರ್ಯಾಯ ಕಾರ್ಯಕ್ರಮಕ್ಕೆ ಬಂದಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಹೇಳಿದರು. ಸುವರ್ಣ ವಾಹಿನಿ ಮತ್ತು ಕನ್ನಡ ಪ್ರಭದ ಉಸ್ತುವಾರಿ ವಹಿಸಿಕೊಂಡಿರುವ ಶ್ರೀ ರವಿ ಹೆಗಡೆಯವರೂ ವೇದಿಕೆಯ ಮೇಲೆ ಮತ್ತೋರ್ವ ಅತಿಥಿಯಾಗಿ ಉಪಸ್ಥಿತರಿದ್ದರು. 

ಮೊದಲ ದಿನದ ಗಂಭೀರ ಚರ್ಚೆಗಳನ್ನು ಬದಿಗಿಟ್ಟು, ಎರಡನೇ ದಿನ, `ವಿದೇಶದಲ್ಲಿ ಎದುರಿಸಿದ ಪೇಚಿನ ಮತ್ತು ಮೋಜಿನ ಪ್ರಸಂಗಗಳು.` ಎನ್ನುವ ವಿಷಯದ ಬಗ್ಗೆ ಮಾತನಾಡಲು ಅತಿಥಿಗಳನ್ನು ಕೇಳಿಕೊಳ್ಳಲಾಯಿತು. 

ಮೊದಲು ಮಾತನಾಡಿದ ರವಿ ಹೆಗಡೆಯವರು, ಶ್ರೀಲಂಕಾದಲ್ಲಿ ನಡೆದ ಪೇಚಿನ ಪ್ರಸಂಗವನ್ನು ಹೇಳಿ ನಮಗೆ ಮೋಜು ನೀಡಿದರು. ಶ್ರೀಲಂಕಾದಲ್ಲಿ `ಮರಿಯಾನೆಯ ಕುಣಿತ`ವನ್ನು ತೋರಿಸುತ್ತೇನೆಂದು ಮೋಸಮಾಡಿದ ಪ್ರಸಂಗವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿ ನಮ್ಮನ್ನು ನಗಿಸಿದರು. 

ನಂತರ ಮಾತನಾಡಿದ ಶ್ರೀ ಗುರುರಾಜ ಕರ್ಜಗಿಯವರು, ಅಮೇರಿಕದಲ್ಲಿ ತಾವು ಕಣ್ಣಾರೆ ಕಂಡ `ಟು ಫಾರ್ ಅಸ್, ಒನ್ ಫಾರ್ ದ ವಾಲ್`ಪ್ರಸಂಗವನ್ನು ಹೇಳಿದರು. ಆ ಪ್ರಸಂಗದ ಬಗ್ಗೆ ಲೇಖನ ಬರೆದಾಗ, ಅದನ್ನು ಓದಿದ, `ವಿದ್ಯಾರ್ಥಿ ಭವನ`ದ ಶ್ರೀ ಅರುಣ ಅಡಿಗರು, ಕೊರೋನಾ ಸಮಯದಲ್ಲಿ ಅದರಿಂದ ಸ್ಪೂರ್ತಿಯನ್ನು ಪಡೆದು ಸಹಸ್ರಾರು ಜನರಿಗೆ ಆಹಾರ ಸರಬುರಾಜು ಮಾಡಿದ್ದನ್ನು ನೆನಪಿಸಿಕೊಂಡರು. 

ಗಂಟಲು ಕೈಕೊಟ್ಟ ಕಾರಣಕ್ಕೆ ಮಾತನಾಡಲಾರೆ ಎಂದಿದ್ದ ಶ್ರೀ ವಿಶ್ವೇಶ್ವರ ಭಟ್ಟರು ಇಬ್ಬರ ಭಾಷಣದಿಂದ ಉತ್ಸಾಹಗೊಂಡು, `ಒನ್ ಫಾರ್ ದ ಬುಕ್,` ಎನ್ನುವ ವೇಲ್ಸ್-ನಲ್ಲಿರುವ ಹೇ-ಆನ್-ವೈ ಎನ್ನುವ ಪುಸ್ತಕ ಗ್ರಾಮದ ಬಗ್ಗೆ ಮಾತನಾಡಿದರು. ಆ ಪುಸ್ತಕಗ್ರಾಮ ಪುಸ್ತಕಗಳ್ಳನ ಮೇಲೆ ಮಾಡಿದ ಅದಮ್ಯ ಪರಿಣಾಮದ ಬಗ್ಗೆ ಹೇಳಿದರು. 

ಇದಾದ ಮೇಲೆ ಸಭಿಕರ ಜೊತೆ ಪ್ರಶ್ನೋತ್ತರದ ಕಾರ್ಯಕ್ರಮ ನಡೆಯಿತು. 

ಶ್ರೀ  ರವಿ ಹೆಗಡೆಯವರು `ಅನಿವಾಸಿ ಕನ್ನಡಿಗರು ಇಲ್ಲಿಯೂ ಅಲ್ಲಿಯೂ ಸಲ್ಲದವರೋ ಅಥವಾ ಎರಡೂ ಕಡೆ ಸಲ್ಲುವವರೋ?` ಎನ್ನುವ ಪ್ರಶ್ನೆಯನ್ನು ಎತ್ತಿಕೊಂಡು, `ಜಾಗತೀಕರಣದ ಕಾಲದಲ್ಲಿ ಅನಿವಾಸಿ ಕನ್ನಡಿಗರು ಕರ್ನಾಟಕದ ರಾಯಭಾರಿಗಳು, ಎಲ್ಲೆಲ್ಲಿಯೂ ಸಲ್ಲುವವರು,` ಎಂದು ಮನಮುಟ್ಟುವಂತೆ ಹೇಳಿದರು. 

ಶ್ರೀ ವಿಶ್ವೇಶ್ವರ ಭಟ್ಟರು ಪತ್ರಕರ್ತರಿಗೆ ಭಾಷೆಯ ಸ್ವಚ್ಛತೆಯ ಬಗೆಗಿನ ಪ್ರಶ್ನೆಗೆ ಉತ್ತರಿಸುತ್ತ, ತಾವು ಇಂಗ್ಲೆಂಡಿನಲ್ಲಿ ಜರ್ನಲಿಸಂ ಓದುವಾಗ ಸನ್ ಪತ್ರಿಕೆಯು ಹೇಗೆ ಕೆಲವೇ ಪದಗಳಲ್ಲಿ ಸ್ಪಷ್ಟವಾಗಿ ಬರೆಯುವ ತರಬೇತಿಯನ್ನು ಪತ್ರಕರ್ತರಿಗೆ ಕೊಡುತ್ತದೆ ಎನ್ನುವುದರಿಂದ ಹಿಡಿದು, ತಾವು ಹೇಗೆ ಹೊಸ ಪತ್ರಕರ್ತರನ್ನು ಆಯ್ಕೆ ಮಾಡುತ್ತೇವೆ ಎನ್ನುವವರೆಗೆ ಹೇಳಿದರು. 

ಶ್ರೀ ಗುರುರಾಜ ಕರ್ಜಗಿಯವರು ಪ್ರಶೆಗಳನ್ನು ಎತ್ತಿಕೊಂಡು, ವಸುಧೈವ ಕುಟುಂಬಕಮ್, ಜಾತಿ ತಾರತಮ್ಯ, ಲಿಂಗ ಬೇಧ, ಮೀಸಲಾತಿ, ಶಿಕ್ಷಕರು ಇತ್ಯಾದಿಗಳ ಬಗ್ಗೆ ಮನಮುಟ್ಟುವಂತೆ ವಿವರಿಸಿದರು. `ಟೀನೇಜ್ ಮಗಳಿಗೆ ಏನುಪದೇಶ ಕೊಡುವುದು?` ಎನ್ನುವ ಪ್ರಶ್ನೆಗೆ, `ಅವಳು ಸರಿಯಾಗಿದ್ದಾಳೆ, ಸುಮ್ಮನೇ ತಡುವಬೇಡಿ, ನಿಯಮಗಳು ಎಲ್ಲರಿಗೂ ಒಂದೇ ಟೀನೇಜ್ ಮಗಳಿರಲಿ ಅಥವಾ ಮಗನಿರಲಿ, ಲಿಂಗಬೇಧವಿರಬಾರದು,` ಎಂದು ಹೇಳಿದರು. 

ಆಭಾರ ಮನ್ನಣೆಯನ್ನು ಶ್ರೀಮತಿ ವತ್ಸಲಾ ರಾಮಮೂರ್ತಿ ನಡೆಸಿಕೊಟ್ಟರು. 

- ಕೇಶವ್ ಕುಲಕರ್ಣಿ

ನಾಗಾಭರಣಾಯಣ

 

ಈ ವಾರ ನಿಮ್ಮ ಮುಂದಿದೆ ಕಳೆದ ಶನಿವಾರ ಹೆಸರಾಂತ ನಿರ್ದೇಶಕ, ರಂಗ ಕರ್ಮಿ ಟಿ. ಎಸ್. ನಾಗಾಭರಣರೊಡನೆ ಅನಿವಾಸಿಗಳು ನಡೆಸಿದ ಸಂವಾದದ ವರದಿ.

ನವೆಂಬರ್ ೨೬ರಂದು ಕನ್ನಡ ಬಳಗ (ಯು.ಕೆ) ಸ್ಟೋಕ್ ಆನ್ ಟ್ರೆಂಟ್ ನಗರದಲ್ಲಿ ದೀಪಾವಳಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಅಂದು ಮುಖ್ಯ ಅತಿಥಿಗಳಾಗಿ ಹೆಸರಾಂತ ನಿರ್ದೇಶಕ, ರಂಗಕರ್ಮಿ ಶ್ರೀ. ಟಿ. ಎಸ್. ನಾಗಾಭರಣ ಕರ್ನಾಟಕದಿಂದ ಆಗಮಿಸಿದ್ದರು. ಅವರು ಬರುವ ವಿಚಾರ ನಮಗೆ  ಸಪ್ಟೆಂಬರ್ ತಿಂಗಳಲ್ಲೇ ತಿಳಿದಿತ್ತು. ಅದಕ್ಕನುಗುಣವಾಗಿ ಸಂಪ್ರದಾಯದಂತೆ ಅನಿವಾಸಿ ಹುಟ್ಟಿದಾಗಿನಿಂದ ನಡೆಸಿಕೊಂಡು ಬಂದಿರುವ ಗೋಷ್ಠಿಗೆ ನಾಗಾಭರಣರ ನಾಟಕ ಹಾಗೂ ಸಿನಿಮಾಗಳ ವಿಶ್ಲೇಷಣೆ ಮಾಡುವ ನಿರ್ಧಾರಕ್ಕೆ ಬಂದಿದ್ದೆವು. ಇದರೊಡನೆ, ಅವುಗಳ ಬಗ್ಗೆ ಮಾತಾಡುವ ಸದಸ್ಯರಿಗೆ ನಾಗಾಭರಣರನ್ನು ಪ್ರಶ್ನಿಸುವ ಅವಕಾಶವನ್ನು ಕೊಡಲಾಯಿತು. 

ಅನಿವಾಸಿ ಕಾರ್ಯಕ್ರಮಕ್ಕೆ ಉತ್ತಮವಾದ ವಿಂಡ್ಸರ್ ಕೋಣೆ ಹಾಗು ಸೂಕ್ತವಾದ ಧ್ವನಿ ವ್ಯವಸ್ಥೆಯ ಅನುಕೂಲ ಮಾಡಿಕೊಟ್ಟವರು ಕನ್ನಡ ಬಳಗದ ಅಧ್ಯಕ್ಷರಾದ ಶ್ರೀಮತಿ ಸುಮನಾ ಗಿರೀಶ್. ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದವರು ಡಾ. ಲಕ್ಷ್ಮೀನಾರಾಯಣ ಗುಡೂರ್. ಆರು ಅನಿವಾಸಿಗಳು ತಮಗೆ ಬೇಕಾದ ಸಿನಿಮಾಗಳನ್ನು ಆರಿಸಿಕೊಂಡು, ವಿಶ್ಲೇಷಿಸಿದರು. ಪ್ರತಿಯೊಬ್ಬರಿಗೂ ಸರಿ ಸುಮಾರು ಹತ್ತು ನಿಮಿಷಗಳ ಕಾಲಾವಕಾಶವಿತ್ತು. ಮೊದಲ ಒಂದೆರಡು ನಿಮಿಷಗಳು ಸಿನಿಮಾ ಕಥೆಯ ವಿವರಣೆಗೆ ಮೀಸಲಿಡಲು ಸೂಚಿಸಲಾಗಿತ್ತು. ನಂತರದ ಎರಡು ನಿಮಿಷಗಳನ್ನು ಸಿನಿಮಾದ ತುಣುಕನ್ನು ತೋರಿಸಲು ಹಾಗು ಉಳಿದ ಸಮಯದಲ್ಲಿ ವಿಶ್ಲೇಷಣೆ ಹಾಗು ನಾಗಾಭರಣರೊಡನೆ ಆ ಸಿನಿಮಾ ಕುರಿತಾದ ಸಂವಾದಕ್ಕೆಂದು ಗುರುತಿಸಿಕೊಂಡಿದ್ದೆವು. ವಿಶ್ಲೇಷಕರಿಗೆ ಬೇಕಾದ ಸಿನಿಮಾ ತುಣುಕುಗಳನ್ನು ಮುತುವರ್ಜಿಯಿಂದ ತಯಾರಿಸಿ ಒದಗಿಸಿದವರು ಡಾ. ಶ್ರೀವತ್ಸ ದೇಸಾಯಿ.

ಅನಿವಾಸಿಗಳ ಆಯ್ಕೆ ಈ ಕೆಳಗಿನಂತಿದ್ದವು:

೧. ಡಾ. ಕೇಶವ ಕುಲಕರ್ಣಿ: ಅನ್ವೇಷಣೆ (ಬಿಡುಗಡೆ: ೧೯೮೩)

೨. ಡಾ. ಜಿ.ಎಸ್. ಶಿವಪ್ರಸಾದ: ಅಲ್ಲಮ (ಬಿಡುಗಡೆ: ೨೦೧೭)

೩. ಡಾ. ರಶ್ಮಿ ಮಂಜುನಾಥ: ಚಿನ್ನಾರಿ ಮುತ್ತ (ಬಿಡುಗಡೆ: ೧೯೯೩) 

೪. ಡಾ. ರಾಮಶರಣ ಲಕ್ಷ್ಮೀನಾರಾಯಣ: ನಾಗಮಂಡಲ (ಬಿಡುಗಡೆ: ೧೯೯೭) 

೫. ಡಾ. ಶ್ರೀವತ್ಸ ದೇಸಾಯಿ: ಸಿಂಗಾರೆವ್ವ (ಬಿಡುಗಡೆ: ೨೦೦೩) 

೬. ಡಾ. ಲಕ್ಷ್ಮೀನಾರಾಯಣ ಗುಡೂರ್: ಮೈಸೂರು ಮಲ್ಲಿಗೆ (ಬಿಡುಗಡೆ: ೧೯೯೧) 

ಉತ್ತಮವಾದ ಪ್ರತಿ ಸಿಗದ ಕಾರಣ ಕೇಶವ ಕುಲಕರ್ಣಿಯವರು ಸಿನಿಮಾದ ತುಣುಕನ್ನು ತೋರಿಸದಿದ್ದರೂ, ಅವರ ತಮ್ಮ ಹೇಗೆ ಸಿನಿಮಾದ ಪ್ರಾರಂಭದಲ್ಲಿನ ದೃಶ್ಯವೊಂದರ ಬಳಿಕ ಹೆದರಿ ಪರದೆಗೆ ಬೆನ್ನು ಮಾಡಿ ಕುಳಿತಿದ್ದನೆಂಬುದನ್ನು ಕೇಳಿದವರಿಗೆ ಸಿನಿಮಾ ಟ್ರೇಲರ್ ನೋಡಿದ ಅನುಭವವಾಗಿರಬಹುದು. ಜನಮನದ ಗೀತೆಗಳನ್ನು ಆಧಾರಿಸಿ ನಿರ್ಮಿಸಿದ ಸಿನಿಮಾವಾಗಿದ್ದರಿಂದ ಗುಡೂರರು ಸಿನಿಮಾದ ಹಾಡುಗಳ ಸಂಗೀತವನ್ನು ಕತ್ತರಿಸಿ ಧ್ವನಿ ಕೊಲಾಜನ್ನು ಪ್ರಸ್ತುತ  ಪಡಿಸಿದರು. ಇಡೀ ಹಾಡನ್ನು ನಿರೀಕ್ಷಿಸುತ್ತಿದ್ದವರಿಗೆ, ಒಮ್ಮೆಲೇ ಇನ್ನೊಂದು ಹಾಡು ಶುರುವಾಗಿ ತಬ್ಬಿಬ್ಬಾಗಿದ್ದು (ನಾಗಾಭರಣರನ್ನೂ ಸೇರಿ) ಈ ಪ್ರಯೋಗದ ವೈಶಿಷ್ಠ್ಯ. 

ನಮ್ಮ ಕಾರ್ಯಕ್ರಮದ ವಿಶೇಷ ನಾಗಾಭರಣರೊಂದಿಗಿನ ಸಂವಾದ.  ಅವರ ಸಿನೆಮಾಗಳ ಬೆಳವಣಿಗೆಯ ಹಿಂದಿನ ಕುತೂಹಲಕಾರಿ ಕಥೆಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದವು, ಆಶ್ಚರ್ಯಚಕಿತರಾಗಿಸಿದವು. ‘ಅನ್ವೇಷಣೆ’ ನಾಗಾಭರಣರ ಎರಡನೇ ಸಿನೆಮಾ. ಅವರ ಗುರು ಗಿರೀಶ್ ಕಾರ್ನಾಡರು. ಅವರ ಸಲಹೆಯಂತೆ ಸ್ಮಿತಾ ಪಾಟೀಲರನ್ನು ನಾಯಕಿಯಾಗಿ ಆರಿಸಿದ್ದರು ನಾಗಾಭರಣ. ಅದಕ್ಕೆ ಎರಡು ಕಾರಣಗಳು: ಆಕೆ ಚಿತ್ರಕಥೆ ಇಷ್ಟ ಪಟ್ಟು ತಾನೇ ನಾಯಕಿಯಾಗಿ ನಟಿಸುತ್ತೇನೆಂದಿದ್ದು ಹಾಗು ನಾಗಾಭರಣರ ಕಾಸಿನ ಕಷ್ಟ ನೋಡಿ ಸಂಭಾವನೆ ಇಲ್ಲದೇ ಕೆಲಸ ಮಾಡುವೆನೆಂದು ಒಪ್ಪಿದ್ದು. ನಾಯಕ ಅನಂತನಾಗ್ ಪ್ರೇಮದ ಕಡಲಲ್ಲಿ ಈಸುತ್ತ, ನಾಗಾಭರಣರನ್ನು ಇರುಸು-ಮುರಿಸಿನ ಪ್ರಸಂಗಕ್ಕೆ ಸಿಲುಕಿಸಿದ್ದನ್ನು ಹಂಚಿಕೊಂಡರು. ಕೇವಲ ೨.೫ ಲಕ್ಷದಲ್ಲಿ ತಯಾರಿಸಿದ ಚಿತ್ರವಿದಾಗಿತ್ತು. ಮಕ್ಕಳ ಚಿತ್ರ ಜಗತ್ತಿನಲ್ಲೇ ಹೆಚ್ಚು ಕಡೆಗಣಿಸಲ್ಪಟ್ಟ ಪ್ರಕಾರ ಎಂಬುದು ನಾಗಾಭರಣರ ಅಂಬೋಣ. ‘ಚಿನ್ನಾರಿ ಮುತ್ತ’ ಕ್ಕೆ ಪ್ರೇರಣೆ ಡಿಕನ್ಸ್ ನ ಓಲಿವರ್ ಟ್ವಿಸ್ಟ್. ಕವಿ ಎಚ್ಚೆಸ್ವಿಯವರಿಗೆ ಸವಾಲು ಹಾಕಿ ಕಥೆ, ಸಂಭಾಷಣೆ, ಹಾಡು ಬರೆಸಿ ತಯಾರಿಸಿದ ಸಿನಿಮಾ. ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯೂ ಸಿಕ್ಕಿತ್ತು. ಹೀಗೇ ನಾಲಕ್ಕು ಮಕ್ಕಳ ಚಿತ್ರಗಳನ್ನು ತಯಾರಿಸಿ, ಪ್ರಶಸ್ತಿ ಪಡೆದ ಹೆಗ್ಗಳಿಕೆ ನಾಗಾಭರಣರದ್ದು. 

ಸಂಗೀತ ನಾಗಾಭರಣರ ಚಿತ್ರಗಳ ಜೀವಾಳ. ಅದಕ್ಕೆ ಅವರಿಗೆ ಹೆಗಲು ಕೊಟ್ಟಿದ್ದು ಹೆಸರಾಂತ ಕಲಾವಿದ ಸಿ. ಅಶ್ವಥ್. ಇವರ ಯಮಳ ಪ್ರಯೋಗಗಳನ್ನು ಹೆಚ್ಚಿನ ಪ್ರಸಿದ್ಧ ಸಿನಿಮಾಗಳಲ್ಲಿ ಕಾಣುತ್ತೇವೆ (ಮೈಸೂರು ಮಲ್ಲಿಗೆ, ಚಿನ್ನಾರಿ ಮುತ್ತ, ಸಂತ ಶಿಶುನಾಳ ಶರೀಫ, ನಾಗಮಂಡಲ, ಸಿಂಗಾರೆವ್ವ). ‘ಮೈಸೂರು ಮಲ್ಲಿಗೆ’ ನಾಗಾಭರಣರಿಗೆ ವಿಶೇಷ ಸವಾಲನ್ನು ಒಡ್ಡಿದ ಪ್ರಯೋಗ. ಕೇವಲ ಹಾಡುಗಳನ್ನು ಆಧರಿಸಿ ಹೊಸೆದ ಕಥೆಯಿದು. ಸುಮಾರು ಹದಿನೈದು ಹೆಸರಾಂತ ಕವಿಗಳೊಡನೆ ಸಮಾಲೋಚಿಸಿದರೂ, ದಾರಿ ಕಾಣದಾದಾಗ, ನಾಗಾಭರಣರೇ ಕಥೆಯನ್ನು ಹೊಸೆಯುವ ನಿರ್ಧಾರ ಮಾಡಿದರು. ಹಲವು ಆವೃತ್ತಿಗಳನ್ನು ಕವಿತೃಯರಾದ ಎಚ್ಚೆಸ್ವಿ, ನರಹಳ್ಳಿ ಬಾಲಸುಬ್ರಹ್ಮಣ್ಯ ಹಾಗು ವ್ಯಾಸರಾಯರೊಡನೆ ಚರ್ಚಿಸಿದ್ದರಂತೆ. ಒಂದು ಬೆಳಗಿನ ಝಾವ ಬುಲ್ ಟೆಂಪಲ್ ಎದುರಿನ ಕಟ್ಟೆಯ ಮೇಲೆ ಅಶ್ವಥ್ ಜೊತೆ ಕುಳಿತಿದ್ದಾಗ ಬಲ್ಬ್ ತಟ್ಟನೆ ಫ್ಲಾಶ್ ಆಗಿ ಕಥೆಗೊಂದು ರೂಪ ಬಂದಿತ್ತೆಂದು ವಿವರಿಸಿದರು. ಇದರಲ್ಲಿ ಅವರು ಕಾಣುವುದು ಸಂಘರ್ಷ: ಸ್ವಾತಂತ್ರ್ಯ ಹೋರಾಟ, ಸರಕಾರದ ಪರವಾದ ಶಾನುಭೋಗರೊಂದೆಡೆ, ಸಂಗ್ರಾಮದ ಪರವಾದ ಅವರ ಅಳಿಯ, ಇವರ ನಡುವೆ ಬಳಲುವ ಪದುಮ. ಈ ಸಿನೆಮಾದ ತೆರೆಯ ಮರೆಯಲ್ಲಿ ಆದ ಸಂಘರ್ಷ ನಮಗೆಲ್ಲ ನಾಗಾಭರಣರ ಜಿದ್ದು, ಸಿನಿಮಾ ಕ್ಷೇತ್ರದಲ್ಲಿ ಅವರಿಗಿದ್ದ ಪ್ರಭಾವಗಳನ್ನೂ ಪರಿಚಯ ಮಾಡಿಸಿತು. ಮೈಸೂರು ಮಲ್ಲಿಗೆ ಧ್ವನಿ ಸುರುಳಿಯ ಯಶಸ್ಸಿನ ಹಿಂದಿನ ರೂವಾರಿ ಅಶ್ವಥ್ ಎಂಬುದು ಎಲ್ಲರಿಗೂ ಗೊತ್ತಿದ್ದದ್ದೇ. ಆದರೆ ನಾಗಾಭರಣರಿಗೆ ಬೇಕಿದ್ದುದು ಯುವಕನಿಗೆ ಹೊಂದುವ ಧ್ವನಿ. ಹೇಗೆ ಅವರು ಎಸ್ಪಿ ಬಾಲಸುಬ್ರಹ್ಮಣ್ಯರನ್ನು ಅಶ್ವಥ್ ಬದಲು ಅಶ್ವಥ್ ನಿರ್ದೇಶನದಲ್ಲೇ ಹಾಡಿಸಿದರು ಎಂಬುದನ್ನು ಕೇಳಿ ಪ್ರೇಕ್ಷಕರೆಲ್ಲ ದಿಗ್ಭ್ರಂತರಾದರು, ಮನಸಾರೆ ನಕ್ಕರು. 

‘ನಾಗಮಂಡಲದ’ ಲ್ಲಿ ಅವರು ತೋರಬಯಸುವುದು ರಾಣಿಯ ಬಯಕೆ, ಮುಗ್ಧತೆ, ಸಂವೇದನೆಗಳು. ಇದರಲ್ಲಿ ಬರುವ ಹಲವು ಸನ್ನಿವೇಶಗಳು, ಬದುಕಿನ ವಿಪರ್ಯಾಸಗಳಿಗೆ ರೂಪಕಗಳು. ನಾಗಪ್ಪ – ಅಣ್ಣಪ್ಪ ಎರಡು ಪಾತ್ರಗಳಲ್ಲ. ಒಬ್ಬನೇ ವ್ಯಕ್ತಿಯ ಎರಡು ಮನಸ್ಥಿತಿಗಳ ಸಂಕೇತ, ಅವುಗಳ ನಡುವಿನ ಸಂಘರ್ಷ. ಕೊನೆಯಲ್ಲಿ ಕಂಡುಬರುವುದು ರಾಣಿಯ ಪ್ರೀತಿಯ ಗೆಲುವು. ಕಾರ್ನಾಡರ ಪ್ರಸಿದ್ಧ ನಾಟಕವನ್ನಾಧರಿಸಿದ ನಾಗಮಂಡಲವನ್ನು ನೋಡಿ ಮೆಚ್ಚಿದ ಕಾರ್ನಾಡರು ನೀಡಿದ ಪ್ರತಿಕ್ರಿಯೆಯೇ ನಾಗಾಭರಣರಿಗೆ ಚಿತ್ರಕ್ಕೆ ಸಿಕ್ಕ ಇತರ ಪ್ರಶಸ್ತಿಗಳಿಗಿಂತ ಅತ್ಯಮೂಲ್ಯವಾಗಿದ್ದರಲ್ಲಿ ಸಂದೇಹವೇ ಇಲ್ಲ. ‘ಸಿಂಗಾರೆವ್ವ’ ದಲ್ಲಿ ನಾಗಾಭರಣರು ಕಾಣುವುದು ವರ್ಗ ಸಂಘರ್ಷ, ಇರುವವರ-ಇಲ್ಲದವರ ನಡುವಿನ ಸಂಘರ್ಷ, ಹೆಣ್ಣು-ಗಂಡಿನ ನಡುವಿನ ಸಂಘರ್ಷ. ಇಲ್ಲಿ ಸಿಂಗಾರೆವ್ವ ಪ್ರಕೃತಿಯ ಸಂಕೇತ. ಪ್ರಕೃತಿ ನಾಶವಾದಂತೆ ಹೇಗೆ ಪುರುಷ ನಾಶವಾಗುತ್ತಾನೆ ಎಂಬುದನ್ನು ಅವರು ಈ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ‘ಅಲ್ಲಮ’ ದಲ್ಲಿ ಆತನ ಚಿಂತನೆಗಳನ್ನು ಪ್ರಸ್ತುತಕ್ಕೆ ಹೊಂದಿಸುವ ಪ್ರಯತ್ನ ಮಾಡಿದ್ದಾರೆ. ಅವಧೂತನಾದ ಅಲ್ಲಮನ ವಚನಗಳನ್ನೇ ಸಂಭಾಷಣೆಯನ್ನಾಗಿ ಉಪಯೋಗಿಸಿದ್ದಾರೆ. ಅವನ ವಚನಗಳನ್ನು ದೃಶ್ಯ ರೂಪದಲ್ಲಿ ನೋಡುಗರ ಕಣ್ಮುಂದೆ ತಂದಿದ್ದಾರೆ. ಈ ಪ್ರಯೋಗವು ಅವರಿಗೆ ಹೊಸ ಸವಾಲನ್ನೆಸೆದಿತ್ತು. ಅದನ್ನು ಯಶಸ್ವಿಯಾಗಿ ನಿಭಾಯಿಸಿದ ತೃಪ್ತಿ ಅವರಿಗಿದೆ. 

ಸುದೀರ್ಘವಾಗಿ, ನಗೆ ಚಾಟಿಕೆಗಳ ನಡುವೆ ತಮ್ಮ ಸಿನಿಮಾ ಪಯಣವನ್ನು ಹಂಚಿಕೊಂಡ ನಾಗಾಭರಣರು, ತಮ್ಮ ಪ್ರತಿಭೆ, ಸರಳತೆ, ಯೋಚನಾ ಲಹರಿಯ ಹರಿವು – ದಿಕ್ಕುಗಳನ್ನು ಪರಿಚಯಿಸಿದರು. ಬಂದ ಪ್ರೇಕ್ಷಕರೆಲ್ಲ ಸಂವಾದವನ್ನು ತುಂಬು ಹೃದಯದಿಂದ ಅನುಭವಿಸಿದರು. ಅವರಿಗೂ ಸಂವಾದಿಸುವ ಅವಕಾಶ ಸಮಯಾಭಾವದಿಂದ ಸಿಗದೇ ನಿರಾಶರಾಗಿದ್ದು ಪ್ರಯೋಜಕರಿಗೆ ವೇದ್ಯವಾಗಿತ್ತು. 

-ರಾಂ