ಯು ಕೆ ಕನ್ನಡ ಬಳಗದ ಯುಗಾದಿ ಉತ್ಸವ – ಗುರುರಾಜ ಅಸ್ರೋಳ್ಳಿ ಗಣೇಶ್ ವರದಿ

(ಲೇಖಕರ ಪರಿಚಯ: ಗುರುರಾಜ ಅಸ್ರೋಳ್ಳಿ ಗಣೇಶ್. ಹೊನ್ನಾವರ ತಾಲೂಕಿನ ಖರ್ವ ಎಂಬ ಪುಟ್ಟ ಗ್ರಾಮದವರು. ವಿಧ್ಯಾಬ್ಯಾಸ ಕರ್ನಾಟಕದಲ್ಲಿ ಮುಗಿಸಿ ಹೊಟ್ಟೆಪಾಡಿಗಾಗಿ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿ ಕೆಲಸ. ಯು ಕೆ ಗೆ ಬಂದು ೪-೫ ವರ್ಷಗಳಾಗುತ್ತ ಬಂದಿತು. ಮ್ಯಾಂಚೆಸ್ಟರ್ನಲ್ಲಿ ಹೆಂಡತಿ ಮತ್ತು ೧ ವರ್ಷದ ಮಗುವಿನೊಂದಿಗೆ ವಾಸ.  ಬೀchi ಯವರ ಸಾಹಿತ್ಯ ಓದುವ ಆಸಕ್ತಿ ಇದೆ.

ಚಿತ್ರಕಾರರ ಪರಿಚಯ: ಡಾ ಲಕ್ಷ್ಮೀನಾರಾಯಣ ಗುಡೂರ್, ರೋಗನಿದಾನಶಾಸ್ತ್ರಜ್ಞ, ಪ್ರೆಸ್ಟನ್ನಿನಲ್ಲಿ ಕೆಲಸ. ಮೂಲತಃ ಗುಲ್ಬರ್ಗದವರು. ೨೦೦೧ರಿಂದ ಯುಕೆಯಲ್ಲಿ ವಾಸ.)

2016 04 KBUKಯುಗಾದಿ ಎಂದಾಕ್ಷಣ ಕನ್ನಡದ ಬಹುತೇಕ ಎಲ್ಲ ಜನರಿಗೂ ನೆನಪಾಗುವುದು ದ ರಾ ಬೇಂದ್ರೆಯವರ ‘ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ’ ಎಂಬ ಸುಂದರ ರಸವತ್ತಾದ ಕವನ. ಯು ಕೆ ಕನ್ನಡ ಬಳಗದ ದುರ್ಮುಖಿ ನಾಮ ಸಂವತ್ಸರದ ೩೩ನೆಯ ಯುಗಾದಿ ಉತ್ಸವವು ದಿನಾಂಕ ೧೬-೦೪-೨೦೧೬, ಶನಿವಾರದಂದು ಇಂಗ್ಲೆಂಡಿನ ಮ್ಯಾಂಚೆಸ್ಟರನ ಪಾರ್ಸ್ ವುಡ್ ಶಾಲೆಯ ಆವರಣದಲ್ಲಿ ನಡೆಯಿತು. ಹೇಗೆ ಬಳ್ಳಾರಿ ಎಂದರೆ ನೆನಪಾಗುವದು ಬಿಸಿಲು ಮತ್ತು ಕಡು ಬಿಸಿಲೋ, ಹಾಗೆಯೇ ಇತ್ತೀಚಿನ ದಿನಗಳಲ್ಲಿ ಮ್ಯಾಂಚೆಸ್ಟರ್ ಎಂದರೆ ಫುಟ್ಬಾಲ್ನ ಹೊರತಾಗಿ ನೆನಪಾಗುವದು ಮಳೆ ಮತ್ತು ವಿಪರೀತ ಮಳೆ! ಆದರೆ ಕಾರ್ಯಕ್ರಮದ ದಿನದಂದು ಶುಭ್ರವಾದ ಆಗಸ ಮತ್ತು ಮೈಯಿಗೆ ಮುದನೀಡುವ ಹದವಾದ ಬಿಸಿಲು ಬಂದಿರುವದು ಕಾರ್ಯಕ್ರಮದ ರುಚಿಯನ್ನು ಸವಿಯಲು ಬಂದ ಸಭಿಕರಿಗೆ ತುಂಬಾ ಸಹಕಾರಿಯಾಯಿತು. ಕಾರ್ ಪಾರ್ಕ್ ಮಾಡಲು, ಬಹು ವಿಶಾಲವಾದ ಸ್ಥಳವಿದ್ದದು ಜನರಿಗೆ ಅನೂಕೂಲವಾಯಿತು.

ಕುಮಾರ್ ರಮಾನಂದ್, ಆರತಿ, ಶಾದ್ವಾಲ, ನವೀನ ಮುಂತಾದವರನ್ನೊಳಗೊಂಡ ತಂಡ, ಕಾರ್ಯಕ್ರಮಕ್ಕೆ2016 04 KBUK 3 ಸಾಮಾಜಿಕ ತಾಣಗಳನ್ನು ಬಳಸಿಕೊಂಡು ದಾಖಲೆಯ ಸಂಖ್ಯೆಯಲ್ಲಿ ಸರಿ ಸುಮಾರು ೬೦೦ಕ್ಕೂ ಅಧಿಕ ಜನರು ಸೇರುವಂತೆ ಮಾಡಿದರು. ಹಣಕಾಸನ್ನು ಆರತಿಯವರ ತಂಡ ಬಹು ಸಮರ್ಥವಾಗಿ ನಿಭಾಯಿಸಿದರು. ಇದೆ ಮೊದಲ ಬಾರಿಗೆ ನೋಂದಣಿಯನ್ನು ೨ ವಾರಗಳ ಮೊದಲೇ ಮುಕ್ತಾಯ ಮಾಡಿದುದರಿಂದ, ಆರಂಭದಲ್ಲಿ ನೋಂದಣಿ ಸಮಯದಲ್ಲಿ ಆಗುತ್ತಿದ್ದ ವಿಳಂಬವನ್ನು ತಪ್ಪಿಸಿದರು. ಈ ತಂಡದ ಮಾರ್ಗದರ್ಶನವನ್ನು ಮುಂದಿನ ಕಾರ್ಯಕ್ರಮಕ್ಕೆ ಉಪಯೋಗಿಸಿಕೊಂಡರೆ ಭವಿಷ್ಯದಲ್ಲಾಗುವ ಕಾರ್ಯಕ್ರಮಗಳು ಇನ್ನಷ್ಟು ಯಶಸ್ವಿಯಾಗಲು ಕಾರಣವಾಗುತ್ತದೆ. ಪ್ರವೇಶದ್ವಾರದಲ್ಲಿದ್ದ ಸ್ವಾಗತ ಕಮಿಟಿ ಸದಸ್ಯರು ಸಭಿಕರನ್ನು ಮಂದಹಾಸದಿಂದ ಬರಮಾಡಿಕೊಂಡರೆ, ಅಲ್ಲಲ್ಲಿ ಹಚ್ಚಿದ್ದ ಮಾರ್ಗದರ್ಶಿ ಫಲಕಗಳು ತುಂಬಾ ಉಪಕಾರವಾದವು.

ಕಾರ್ಯಕ್ರಮವು ಅವಿನಾಶ್ ಅಧ್ಯಾಪಕ್ ರವರ ವೇದ ಘೋಷದೊಂದಿಗೆ ಆರಂಭವಾಯಿತು. ಆ ಬಳಿಕ ಗೀತಾ ಗಾಯನ ಮತ್ತು ದೀಪ ಬೆಳಗಿಸಿ ಉದ್ಘಾಟನಾ ಕಾರ್ಯಕ್ರಮವು ನಡೆಯಿತು. ನಂತರ ಇತ್ತೀಚಿಗಷ್ಟೆ ನಮ್ಮನ್ನಗಲಿದ KBUKಯ ಗಣ್ಯ ವ್ಯಕ್ತಿಗಳಿಗೆ ಶ್ರದ್ಧಾಂಜಲಿಯ ಸೂಚಿಸಿ, ಬಳಗದ ಅಧ್ಯಕ್ಷ ಗೌಡಗೆರೆ ಜಯರಾಂ ಅವರು ಚಿಕ್ಕ ಮತ್ತು ಚೊಕ್ಕದಾದ ಭಾಷಣ ಮಾಡಿದರು. ಸ್ಥಳೀಯರಾದ ಶಿಲ್ಪ ಮತ್ತು ರಶ್ಮಿ, ಸಭಾಂಗಣವನ್ನು ಬಹಳ ಮುತುವರ್ಜಿಯಿಂದ ಸಿಂಗರಿಸಿದ್ದರು.

2016 04 KBUK 4ಸಾಂಸ್ಕೃತಿಕ ಕಾರ್ಯಕ್ರಮದ ಪ್ರಾರಂಭದಲ್ಲಿ ತುಸು ಸಮಯ ತಾಂತ್ರಿಕ ಅಡಚಣೆಯಾದರೂ ಸಹ, ಕಾರ್ಯಕ್ರಮದ ನಿರೂಪಣೆ ನಡೆಸಿದ ಕುಮಾರಿ ದಿಲ್ಲು ಮತ್ತು ನೀತುರವರ ಸಮಯ ಪ್ರಜ್ಞೆ ಮತ್ತು ಮುಖ್ಯ ನಿರೂಪಕರದಾದ ರಮೇಶ್ ಮತ್ತು ರಷ್ಮಿಯವರ ಮಾತನಾಡಿಸುವ ಕಲೆ, ಆಗಬಹುದಾದಂತಹ ಮುಜುಗರವನ್ನು ತಪ್ಪಿಸಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವವರು ನಿಗದಿಯ ಕಾರ್ಯಕ್ರಮದ ಕನಿಷ್ಠ ೧ ವಾರ ಮುಂಚಿತವಾಗಿ ತಮ್ಮ ನೃತ್ಯಕ್ಕೆ ಪೂರಕವಾದ ಗಾಯನವನ್ನು ಸಂಘಟಿಕರಿಗೆ ತಲುಪಿಸಿದರೆ ಇಂತಹ ಅಡಚಣೆಗಳನ್ನು ತಡೆಯಲು ಸಾಧ್ಯ ಮತ್ತು ಕಾರ್ಯಕ್ರಮವೂ ನಿಗದಿಯಾದಂತೆ ಮುಂದುವರಿಯಲು ಸಹಕಾರಿಯಾಗುತ್ತದೆ ಎಂಬುದು ನನ್ನ ಅಭಿಪ್ರಾಯ. ತದನಂತರರ ವಾರಿಂಗ್ಟನ್, ವೊರ್ಸ್ಲೆ, ನಾಟಿಂಗ್ಹ್ಯಾಮ್, ಸ್ಥಳೀಯ ಮ್ಯಾಂಚೆಸ್ಟರ್ ಮತ್ತು ಹಲವಾರು ಕಡೆಯಿಂದ ಬಂದ ಚಿಣ್ಣರು ಹಾಡು, ನೃತ್ಯಗಳ ಮೂಲಕ ರಂಜಿಸಿದರು.

ಕನ್ನಡ ಬಳಗದ ”ಅನಿವಾಸಿ” ಜಾಲ ಜಗುಲಿಯಲ್ಲಿ ಈ ವರೆಗೆ ಪ್ರಕಟವಾಗಿರುವ ಹಲವಾರು 2016 04 KBUK 6 ಲೇಖಕರ ಲೇಖನಗಳಲ್ಲಿ ಕೆಲವನ್ನು ಆಯ್ದು ಪುಸ್ತಕದ ರೂಪದಲ್ಲಿ ಹೊರತಂದಿದೆ. ಇದಕ್ಕೆ ಜಾಲಜಗುಲಿಯನ್ನು ಎರಡು ವರ್ಷಗಳ ಕೆಳಗೆ ಉದ್ಘಾಟಿಸಿದ ಹೆಚ್ ಎಸ್ ವೆಂಕಟೇಶಮೂರ್ತಿಯವರೇ ಮುನ್ನುಡಿ ಬರೆದು ಆಶೀರ್ವದಿಸಿದ್ದಾರೆ. ಪುಸ್ತಕವನ್ನು ಅಧಿಕೃತವಾಗಿ ಇತ್ತೀಚೆಗೆ ನಮ್ಮನ್ನಗಲಿದ KBUKಯ ಹಿರಿಯ ಸದಸ್ಯ ಡಾ ರಾಜಾರಾಂ ಕಾವಳೆಯವರ ಪತ್ನಿ ಶ್ರೀಮತಿ ಪದ್ಮಾ ಅವರು ಸಭಿಕರ ಮುಂದೆ ಬಿಡುಗಡೆ ಮಾಡಿದರು. ನಂತರ ಪರ್ಯಾಯ ಕಾರ್ಯಕ್ರಮಗಳಲ್ಲೊಂದಾದ ಬಳಗದ ಸಾಹಿತ್ಯಾಸಕ್ತರು ಕೆಲವರು ತಮ್ಮ ಹಾಸ್ಯ ಕವನಗಳನ್ನು ಶ್ರೀಯುತರಾದ ಗಂಗಾವತಿ ಪ್ರಾಣೇಶ್ ಮತ್ತು ಬಸವರಾಜ್ ಮಹಾಮನಿಯವರ ಉಪಸ್ಥಿತಿಯಲ್ಲಿ ಓದಿದರು. ಇದನ್ನು ನೆರೆದ ಪ್ರೇಕ್ಷಕರು ಮೆಚ್ಚಿಕೊಂಡರು.

ಸರ್ವ ಸದಸ್ಯರ ಸಭೆಯಲ್ಲಿ ಹೊಸ ಸಂವಿಧಾನವನ್ನು ಗಂಭೀರವಾಗಿ ಚರ್ಚಿಸಿ ಅಂಗೀಕರಿಸಲಾಯಿತು.

2016 04 KBUK 5ಹೆಚ್ಚಿನ ಸಂಖ್ಯೆಯಲ್ಲಿ ಸಭಿಕರು ಆಗಮಿಸಿದುದರಿಂದ ಮೊದಲೇ ನಿಗದಿಯಾದಂತೆ, ಭೋಜನ ವ್ಯವಸ್ಥೆಯನ್ನು ಎರಡು ಪ್ರತ್ಯೇಕ ಕೊಠಡಿಗಳಲ್ಲಿ ಆಯೊಜಸಲಾಗಿತ್ತು. ಭೋಜನ ಕೊಠಡಿಯಲ್ಲಿ ಕಾರ್ಯಕ್ರಮದ ಪ್ರಾಯೋಜಕರಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸ್ಟಾಲ್ ವಯಸ್ಕರನ್ನು ಆಕರ್ಷಿಸುತ್ತಿದ್ದರೆ, ಟ್ಯಾಂಜೆಂಟಿಕ್ಸ್ ಆಟದ ಸಂಸ್ಥೆಯ (Tangentix GameSession) ಮಕ್ಕಳನ್ನು ತನ್ನೆಡೆಗೆ ಆಕರ್ಷಿಸುತ್ತಿತ್ತು. ‘ಚೆನ್ನೈ ದೋಸ’ದ ಬೋರ್ಡ್ ತನ್ನತ್ತ ಭೇಟಿ ಕೊಡುವಂತೆ ಕೇಳಿಕೊಳ್ಳುತ್ತಿತ್ತು. ಪ್ರಾಯೋಜಕರನ್ನು ಕರೆತರಲು ಅಶ್ವಿನ್ ಪಟ್ಟ ಶ್ರಮವು ಶ್ಲಾಘನೀಯ. ಮಕ್ಕಳಿಗಾಗಿ ಪ್ರತ್ಯೇಕ ಬಗೆಯ ಆಹಾರಗಳನ್ನು ತಯಾರಿಸಿದುದು ವಿಶೇಷವಾಗಿತ್ತು. ಊಟದ ಸಮಯದಲ್ಲಿ ಜನರು ಟ್ರಾಫಿಕ್ ಜಾಮ್ ನಂತೆ ನಿಲ್ಲುವುದು ಬಹುತೇಕ ಕಾರ್ಯಕ್ರಮದಲ್ಲಿ ಸರ್ವೇ ಸಾಮಾನ್ಯ. ಅದಕ್ಕೆ ಅಪವಾದವೇನೋ ಎಂಬಂತೆ, ಈ ಕಾರ್ಯಕ್ರಮದಲ್ಲಿ ಎಲ್ಲೂ ಸ್ವಲ್ಪವೂ ಅಡಚಣೆಯಾಗದಂತೆ ಸವಿತಾ ಹಳ್ಳಿಕೇರಿ, ರಾಜೀವ್, ಚಿತ್ತರಾಜನ್ ಮತ್ತು ನಟರಾಜರನ್ನು ಒಳಗೊಂಡ ಸುಮಾರು ೩೦ ಜನರ ತಂಡ ತುಂಬಾ ಅಚ್ಚುಕಟ್ಟಾಗಿ ಎಲ್ಲ ಜನರನ್ನು ನಗು ಮುಖದಿಂದ ಮಾತನಾಡಿಸಿ ಪದಾರ್ಥಗಳನ್ನು ಬಡಿಸುತ್ತಿದ್ದರು. ಉಪ್ಪು ತಿಂದವರು ನೀರು ಕುಡಿಯುತ್ತಾರೆ ಎಂಬುದು ವಾಡಿಕೆ, ಆದರೆ ಬಿಸಿಬೇಳೆ ಬಾತ್ ತಿಂದವರೆಲ್ಲ ನೀರು ಕುಡಿಯುತ್ತಿದ್ದುದು ಇಲ್ಲಿ ಸಾಮಾನ್ಯವಾಗಿತ್ತು. ಕೆಲವು ಚಲನಚಿತ್ರಗಳಲ್ಲಿ ನಾಯಕ ನಟನಿಗಿಂತ ಖಳ ನಾಯಕನ ಅಬ್ಬರವೇ ಜೋರಾಗಿರುವಂತೆ, ಇಲ್ಲಿ ಬಿಸಿ – ಬೇಳೆ ಬಾತಿನ ಮಾತು ಅಲ್ಲಲ್ಲಿ ಕೆಳಿಬರುತ್ತಿದ್ದುದು ಸಾಮಾನ್ಯವಾಗಿತ್ತು. ಆಹಾರದ ರುಚಿ ಮತ್ತು ಗುಣಮಟ್ಟದ ಬಗ್ಗೆ ಋಣಾತ್ಮಕ ಟೀಕೆಗಳು ಅಲ್ಲಲ್ಲಿ ಕೇಳಿಬರುತ್ತಿದ್ದುದು ಸರ್ವೇಸಾಮಾನ್ಯವಾಗಿತ್ತು. ಒಬ್ಬ ಆಂಗ್ಲ ಛಾಯಾಗ್ರಾಹಕರು ಅವರಿಗೆ ಖಾರವಾದ ಊಟದ ಬಗ್ಗೆ ಕೊಟ್ಟ ಸೂಚನೆಯನ್ನು ತಳ್ಳಿಹಾಕಿ, ಮಕ್ಕಳ ಊಟ ಮಾಡಲು ನಾನೇನು ಚಿಕ್ಕವನೇ? ನಾನು ದೊಡ್ಡವರ ಊಟವನ್ನೇ ಮಾಡುತ್ತೇನೆ ಎಂದು ಧೈರ್ಯ ತೋರಿದುದು ಮೆಚ್ಚಲೇಬೇಕು! ಸಂಜೆಯ ಮೆಣಸಿನಕಾಯಿ ಬಜ್ಜಿ ಸಹ ಇದಕ್ಕಿಂತ ಭಿನ್ನವಾಗಿರಲಿಲ್ಲ, ರಾತ್ರಿಯ ಊಟ ಸಮಧಾನಕರವಾಗಿತ್ತು. ಸಾಯಿ ಸ್ಪೈಸ್ ರೆಸ್ಟೋರಂಟ್ ನವರು ತಯಾರಿಸಿದ ಅಡುಗೆಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಆದೀತು. ಆದ ಕಾರಣ, ಅಡುಗೆಯ ವಿಷಯವನ್ನು ಪುನಃ ಪುನಃ ಪ್ರಸ್ತಾಪಿಸದೆ ಇಲ್ಲಿಗೆ ಮುಗಿಸುತ್ತಿದೇನೆ.

Yakshagaana
ಚಿತ್ರಕಾರರು: ಡಾ ಲಕ್ಷ್ಮೀನಾರಾಯಣ ಗುಡೂರ್

ಊಟದ ನಂತರ ಸರ್ರೆ ತಂಡದವರಿಂದ ನೃತ್ಯ ಕಾರ್ಯಕ್ರಮ, ನಾರ್ಥ್-ಈಸ್ಟ್ ಕಲಾವಿದರ ಸುಮಾರು ೨೫ ಜನರ ತಂಡ ‘ವಿನಾಶ ಕಾಲೇ ವಿಪರೀತ ಬುದ್ಧಿ’ ಎಂಬ ನೃತ್ಯದಲ್ಲಿ ಭರತನಾಟ್ಯ, ಮೋಹಿನಿ ಆಟ, ಯಕ್ಷಗಾನಗಳ ಪರಿಚಯಗಳನ್ನು ಮಾಡಿಕೊಟ್ಟಿತು. ಈ ನೃತ್ಯವು ‘ಮಾತೃದೇವೋ ಭವ’ ಹಾಗೂ ತಾಯಿಯ ಮಾತನ್ನು ಮಕ್ಕಳು ಪಾಲಿಸುವುದರ ಮಹತ್ವವನ್ನು ವಿವರಿಸುತ್ತಿದ್ದವು. ನಂತರದಲ್ಲಿ ನಡೆದ ಈಸ್ಟ್ ಲಂಡನ್ ಎಸ್ಸೆಕ್ಸಿನ ಶ್ರೀವಿದ್ಯ, ವಿದುಷಿ ಶ್ರೀಧನ್ಯ ಮತ್ತು ತಂಡದವರಿಂದ ಮೂಡಿಬಂದ ‘ಕನ್ನಡ ನಾಡಿ’ ಕಾರ್ಯಕ್ರಮವು ಕರ್ನಾಟಕದ ಸಂಸ್ಕೃತಿ, ಇತಿಹಾಸ, ಸಾಹಿತ್ಯ, ಜಾನಪದ, ಶಿಲ್ಪಕಲೆ ಮತ್ತು ಅಲ್ಲಿಯ ಜನರ ಬದುಕಿನ ಕಿರುಪರಿಚಯವನ್ನು ಮಾಡಿಕೊಟ್ಟಿತು. ಡಾರ್ಬಿ ತಂಡದವರ ಚಲನಚಿತ್ರವಾಧರಿಸಿದ ‘ಬೊಂಬೆ ಆಟ’ ಪ್ರೇಕ್ಷಕರನ್ನು ಮಂತ್ರ ಮುಗ್ದರನ್ನಾಗಿಸಿದುದು ಬಹಳ ವಿಶೇಷವಾಗಿತ್ತು. ನಾಟಿಂಗ್ಹ್ಯಾಮ್ ತಂಡದವರು ಭರತನಾಟ್ಯವನ್ನು ನಡೆಸಿಕೊಟ್ಟರು. ಯಾರ್ಕ್ಶೈರ್ ತಂಡದವರಿಂದ ಮೂಡಿಬಂದ ‘ಚೈತ್ರದ ಚಿಗುರು’, ಕನ್ನಡದ ಹೆಸರಾಂತ ಚಲನಚಿತ್ರಗೀತೆಗಳ ನೃತ್ಯ ಪ್ರದರ್ಶನ ಮಾಡಿದರು. ಸವಿತಾ ಸುರೇಶ, ವೀಣಾ ಕಲ್ಲಿನಾಥ್ ಮತ್ತು ಹರೀಶ್ ಚಿಕ್ಕಣ್ಣ ತಮ್ಮ ಸುಮಧುರವಾದ ಕಂಠದಿಂದ ಜನಪ್ರಿಯ ಕನ್ನಡ ಗೀತೆಗಳನ್ನು ಹಾಡಿ, ಸಭಿಕರ ಮನದೂಗಿಸಿದರು. ಇದಾದ ಮೇಲೆ ಸ್ನೇಹ ಕುಲಕರ್ಣಿಯವರು ತಮ್ಮ ಕವನಗಳನ್ನು ಮಂಡಿಸಿದರೆ, ಸರ್ರೆ ತಂಡದವರು ಹಳೆಯ ಕನ್ನಡ ಹಾಡುಗಳಿಗೆ ನೃತ್ಯ ಮಾಡಿದರು. ಖ್ಯಾತ ಹಾಡುಗಾರ್ತಿ ಅಂಜಲಿ ಹಳಿಯಾಳ್ ಅವರು ತಮ್ಮ ಹಾಡಿನ ಮೂಲಕ ಕಾರ್ಯಕ್ರಮದ ಸೊಬಗನ್ನು ಇನ್ನಷ್ಟು ಹೆಚ್ಚಿಸಿದರು. ಚಿಕ್ಕ ಮಕ್ಕಳನ್ನು ಮನೋರಂಜಿಸಲು ಜಾದು ಪ್ರದರ್ಶನ ಮತ್ತು ಆಟದ ವ್ಯವಸ್ಥೆಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಚಹಾ ಸವಿದ ನಂತರ, KBUKಯ ಹಿರಿಯ ಚೇತನ ಅಪ್ಪಾಜಿಯವರ ಸನ್ಮಾನ ಕಾರ್ಯಕ್ರವನ್ನು ಎಲ್ಲ ಜನರ ಸಮ್ಮುಖದಲ್ಲಿ ನಡೆಸಲಾಯಿತು. ಮೊದಲ ಬಾರಿಗೆ ಕನ್ನಡ ಬಳಗದ ಕಾರ್ಯಕ್ರಮ ನಡೆದಾಗ ಅಪ್ಪಾಜಿಯವರು ಮಾಡಿದ ಸಹಾಯವನ್ನು ಬಳಗದ ಸದಸ್ಯರು ಕೊಂಡಾಡಿದರು. ಇದೆ ಸಮಯದಲ್ಲಿ, ಪ್ರೊ|| ಕೃಷ್ಣೆ ಗೌಡರು ಅಪ್ಪಾಜಿಯವರ ಮತ್ತು ಬಳಗದ ಬಗ್ಗೆ ಬರೆದ ಲೇಖನವನ್ನು ಓದಿ ಅವರನ್ನು ಗೌರವಿಸಲಾಯಿತು.

ಸ್ಥಳೀಯ ಮ್ಯಾಂಚೆಸ್ಟರ್ ಕನ್ನಡಿಗರು (ಮಂಕು) ನಡೆಸಿಕೊಟ್ಟ ಕನ್ನಡದ ಆಧುನಿಕ ‘SHOLAY’ ಎಂಬ ಕಿರು ನಾಟಕ ಜನ ಸಾಗರವನ್ನು ರಂಜಿಸಿತು. ಅದರಲ್ಲಿನ ‘ವೀರು’ ಪಾತ್ರವನ್ನು ಮಾಡಿದ ರಮೇಶರವರು, ಕಾರ್ಯಕ್ರಮದ ನಂತರವೂ ಸಹ ‘ವೀರು’ವಾಗಿಯೇ ಗುರುತಿಸಲ್ಪಟ್ಟುದು ವಿಶೇಷವಾಗಿತ್ತು. ಕಾರ್ಯಕ್ರಮದ ಎಲ್ಲ ಪಾತ್ರಗಳ ಅಭಿನಯವೂ ಚಲನಚಿತ್ರ ನಟರನ್ನೂ ಸಹ ನಾಚುವಂತಿಸುತ್ತಿತ್ತು. ಸ್ಥಳೀಯ ಕನ್ನಡ ಮಹಿಳಾ ಸದಸ್ಯರು ಪ್ರಜ್ಯೋತಿಯವರ ಮಾರ್ಗದರ್ಶನದಲ್ಲಿ ಅಭಿನಯಿಸಿದ ‘ರಾಸಲೀಲ’ ನೃತ್ಯ ಬಹು ಸೊಗಸಾಗಿ ಮೂಡಿಬಂದಿತು. ಪುಟಾಣಿಗಳಾದ, ನೀತಿ ಮತ್ತು ಸ್ನೇಹ Raffle Tickets ಗಳನ್ನು ಹಂಚಿದರು.

Gangavati Pranesh
ಗಂಗಾವತಿ ಪ್ರಾಣೇಶ: ಚಿತ್ರ ರಚನೆ: ಡಾ.ಲಕ್ಷ್ಮೀನಾರಾಯಣ ಗುಡೂರ್

 

ಇದಾಗುತ್ತಿದ್ದಂತೆಯೇ, ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಬಸವರಾಜ್ ಮಹಾಮನಿ ಮತ್ತು ಕನ್ನಡದ ಅಭಿನವ ಬೀಚಿ ಗಂಗಾವತಿಯ ಪ್ರಾಣೇಶರವರ   ಕಾರ್ಯಕ್ರಮವು ನಡೆಯಿತು. ಇದೆ ಮೊದಲ ಬಾರಿಗೆ ಯುಕೆಯಲ್ಲಿ ಕಾರ್ಯಕ್ರಮ ಕೊಟ್ಟ ಇಬ್ಬರು ಮಹನೀಯರೂ ತಮ್ಮ ಹಾಸ್ಯ ಚಟಾಕಿಯ ಮೂಲಕ ಸೇರಿದ್ದ ಸಭಿಕರನ್ನು ಹೊಟ್ಟೆ ಹುಣ್ಣಾಗುವಂತೆ ನಗೆಸಾಗರದಲ್ಲಿ ಮುಳುಗಿಸಿದರು. ಇಲ್ಲಿ ಹುಟ್ಟಿ ಬೆಳೆಯುವ ಮಕ್ಕಳಿಗೆ ಮನೆಯಲ್ಲಿ ಕನ್ನಡ ಮಾತನಾಡುವುದನ್ನೇ ಕಲಿಸಲು ಈ ಮೂಲಕ ತಮ್ಮ ಹಾಸ್ಯದ ಮೂಲಕವೇ ಕೇಳಿಕೊಂಡರು. ಕಾರ್ಯಕ್ರಮ ನಿಗದಿಯಾದ ಸಮಯಕ್ಕಿಂತ ತಡವಾಗಿ ಪ್ರಾರಂಭವಾದುದು ಸ್ವಲ್ಪ ವಿಷಾದನೀಯ. ಕಾರ್ಯಕ್ರಮದ ಮುಗಿಯುವ ಹಂತದಲ್ಲಿ ಚಿಕ್ಕ ಮಕ್ಕಳ ಹುಡುಗಾಟ ಸ್ವಲ್ಪ ಹೆಚ್ಚಾಗಿದ್ದರಿಂದ, ಮಕ್ಕಳ ಪೋಷಕರ ಹತ್ತಿರ ಅವರನ್ನು ಸ್ವಲ್ಪ ಸುಮ್ಮನಿರಲು ಸೂಚಿಸುವದನ್ನೂ ಸಹ ಪ್ರಾಣೇಶರವರು ಹಾಸ್ಯವಾಗಿಯೇ ಮನವಿ ಮಾಡಿಕೊಂಡರು.

ನಂತರ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು. ಊಟದ ಬಗ್ಗೆ ನಾನೇನು ಹೇಳುವದಿಲ್ಲ!! ಲೋಪದೋಷಗಳನ್ನು ಎತ್ತಿ ಹೇಳಿದರೆ ತಪ್ಪಾಗುವದಿಲ್ಲವೆಂದು ನನ್ನ ಅನಿಸಿಕೆ. ಮುಂದಿನ ಕಾರ್ಯಕ್ರಮಗಳಲ್ಲಿ, ‘ಅತಿಥಿ ದೇವೋ ಭವ’ ಎಂಬಂತೆ ಕಾರ್ಯಕ್ರಮಕ್ಕೆ ವಿದೇಶದಿಂದ ನಮ್ಮ ಸಲುವಾಗಿ ಬಂದಿರುವ ಅತಿಥಿಗಳಿಗೆ ಮೊದಲು ಊಟ ಮಾಡಲು ಅವಕಾಶಮಾಡಿಕೊಡುವದು ಉತ್ತಮವಾದ ನಡೆವಳಿಕೆ ಎಂಬುದು ನನ್ನ ಅಭಿಪ್ರಾಯ. ಹಾಗೆಯೇ, ಊಟದ ನಂತರ ಊಟದ ತಟ್ಟೆ, ಲೋಟಗಳನ್ನು ಬಹುತೇಕ ಮಂದಿ ಅಲ್ಲಲ್ಲೇ ಇಟ್ಟು ಹೋಗಿರುವ ದೃಶ್ಯ ಸರ್ವೇಸಾಮಾನ್ಯವಾಗಿತ್ತು. ಹೀಗೆ ಇದು ಮುಂದಿನ ಕಾರ್ಯಕ್ರಮಗಳಲ್ಲಿ ಮುಂದುವರೆದರೆ ‘ಸ್ವಚ್ಚ KBUK ಕಾರ್ಯಕ್ರಮ’ದ ಫಲಕವನ್ನು ಹಾಕುವ ದಿನ ಬಹು ದೂರವಿಲ್ಲದಿರುವದು ಬಹಳ ವಿಪರ್ಯಾಸದ ಸಂಗತಿ!

Mahamani
ಮಹಾಮನಿ: ಚಿತ್ರರಚನೆ: ಡಾ ಲಕ್ಷ್ಮೀನಾರಾಯಣ ಗುಡೂರ

ಕಾರ್ಯಕ್ರಮದ ಕೊನೆಯ ಹಂತವಾಗಿ ಖ್ಯಾತ ಹಾಡುಗಾರ್ತಿ ಹಳಿಯಾಳ್ ರವರ ಸುಶ್ರಾವ್ಯ ಕಂಠದಿಂದ ಬಂದ ಸುಮಧುರ ಚಲನಚಿತ್ರ ಗೀತೆಗಳಿಗೆ ಸಭಿಕರು ಹೆಜ್ಜೆ ಹಾಕಿದ್ದುದು ವಿಶೇಷವಾಗಿತ್ತು. ಧ್ವನಿ ಮತ್ತು ಬೆಳಕಿನ ಕಾರ್ಯವನ್ನು ಬಹು ಅಚ್ಚುಕಟ್ಟಾಗಿ ನಿರ್ವಹಿಸಿದ ‘Parswood’ ನ ಜ್ಯಾಕ್ ತಮ್ಮದೇ ಶೈಲಿಯಲ್ಲಿ ಕೆಲವು ಹೆಜ್ಜೆಗಳನ್ನು ಹಾಕಿದುದು ಬಹು ಸೊಗಸಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮದ ರುವಾರಿ ಮತ್ತೂ ಹಾಸ್ಯಕಲಾವಿದರನ್ನು ಯು ಕೆ ಗೆ ಕರೆತರುವಲ್ಲಿ ಶ್ರಮ ಪಟ್ಟ ಆನಂದ್ ಕುಲಕರ್ಣಿಯವರು ಬಹಳ ತಾಳ್ಮೆಯಿಂದ ಕಾರ್ಯಕ್ರಮದ ಆರಂಭದಿಂದ ಮುಕ್ತಾಯದವರೆಗೂ ತಮ್ಮ ಕಾರ್ಯಕ್ರಮವನ್ನು ನಿರ್ವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು, ವಿಶ್ವನಾಥ್ ಮತ್ತು ಅರವಿಂದ್ ಅವರು ಕಾರ್ಯಕ್ರಮದ ಪ್ರತಿಯೊಂದು ಹಂತದಲ್ಲೂ ಬಹಳ ಆಸಕ್ತಿ ಮತ್ತು ಮಾರ್ಗದರ್ಶನ ನೀಡುತ್ತ ಕಾರ್ಯಕ್ರಮದ ಯಶಸ್ಸಿಗೆ ಸಹಕಾರಿಯಾದರು. ಇನ್ನು ಬಹುತೇಕ ಮಂದಿ ಪರದೆಯ ಹಿಂದೆ ಮತ್ತು ಪರದೆಯ ಮುಂದೆ ಈ ಕಾರ್ಯಕ್ರಮದ ಯಶಸ್ಸಿಗಾಗಿ ಕ್ಷಮಿಸಿದ್ದಾರೆ. ಅವರ ಹೆಸರನ್ನು ನಾನು ಇಲ್ಲಿ ಉಲ್ಲೇಖಿಸದಿದ್ದರೆ, ದಯವಿಟ್ಟು ಕ್ಷಮೆ ಇರಲಿ.

ಮುಂದಿನ ದಿನಗಳಲ್ಲಿ ಬಳಗವು ಇನ್ನೂ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿ ಕನ್ನಡ ಭಾಷೆ ಮತ್ತೂ ಸಂಸ್ಕೃತಿಯ ಕಂಪನ್ನು ಶ್ರೀಗಂಧದಂತೆ  ಯು ಕೆ ಯಲ್ಲಿ ಇನ್ನಷ್ಟು ಬೀರಲಿ ಎಂದು ಹಾರೈಸುವೆ.

“ಕನ್ನಡಕ್ಕೊಬ್ಬನೇ ಕೈಲಾಸಮ್” ಎಂದ ಚೆಲ್ಟನಮ್ ದೀಪಾವಳಿಯ ಸಮಾರಂಭ 2015! ವರದಿ ಡಾ ಉಮಾ ವೆಂಕಟೇಶ್

‘ಚೆಲ್ಟ್’ ಎಂಬ ಸಣ್ಣದೊಂದು ನದಿಯ ಹೆಸರನ್ನಾಧಾರಿಸಿ ತನ್ನ ಹೆಸರನ್ನು ಪಡೆದ ಚೆಲ್ಟನಮ್, ಇಂಗ್ಲೆಂಡಿನ ಪ್ರಸಿದ್ಧ ಖನಿಜ ಜಲದ ಊಟೆಗಳು ಮತ್ತು ಚೆಲುವಿನ ಕಾಟ್ಸವೋಲ್ಡ್ ಬೆಟ್ಟಗಳಿಗೆ ಎಷ್ಟು ಪ್ರಸಿದ್ಧವೋ, ಅಷ್ಟೇ ಕುದುರೆ ರೇಸಿನ ಪಂದ್ಯಗಳು, ಜಾಝ್ ಸಂಗೀತದ ಹಬ್ಬ, ಸಾಹಿತ್ಯ ಮೇಳ, ವಿಜ್ಞಾನ ಮೇಳ ಹಾಗೂ ಆಹಾರ ಮತ್ತು ಪಾನೀಯ ಮೇಳಗಳಿಗೂ ಸಹಾ ಪ್ರಸಿದ್ಧವಾದ ಸ್ಥಳ. 13ನೆಯ ಶತಮಾನದಿಂದಲೂ ಬ್ರಿಟಿಷರ ಚರಿತ್ರೆಯಲ್ಲಿ ತನ್ನ ಮಹತ್ವದ ಸ್ಥಾನವನ್ನು ಉಳಿಸಿಕೊಂಡೇ ಬಂದಿರುವ ಈ ಸಣ್ಣ ನಗರವು ತನ್ನ Regency ವಾಸ್ತುವಿನ್ಯಾಸ, ಕಲೆ ಮತ್ತು ಸಂಸ್ಕೃತಿಗಳ ಆಗರವೆನಿಸಿದೆ.

Cheltenham_Municiapl_Offices
Municipal Offices  Photo:   CC Wiki

 

 

 

ಇಂತಹದೊಂದು ಸುಂದರ ನಗರದಲ್ಲಿ, ಈ ವರ್ಷದ ದೀಪಾವಳಿಯನ್ನು ಯು.ಕೆ ಕನ್ನಡ ಬಳಗದ ಪ್ರಸ್ತುತ ಕಾರ್ಯದರ್ಶಿ ಆನಂದ್ ಕೇಶವಮೂರ್ತಿ ಅವರು ಅಚ್ಚುಕಟ್ಟಾಗಿ ಆಯೋಜಿಸಿದ್ದರು. ಚೆಲ್ಟನಮ್ಮಿನ ಆಲ್ ಸೈಂಟ್ಸ್ ಅಕಾಡೆಮಿಯಲ್ಲಿ ಇದೇ ಅಕ್ಟೋಬರ್ ತಿಂಗಳ 31ರ ಬೆಳಿಗ್ಗೆ ಸುಮಾರು 11 ಗಂಟೆಗೆ ಸದಸ್ಯರು Poojaಒಟ್ಟುಗೂಡಿ ದೀಪಾವಳಿಯನ್ನು ಎಂದಿನಂತೆ ಲಕ್ಷ್ಮಿ ಪೂಜೆ ಮತ್ತು ಪ್ರಾರ್ಥನೆಯಿಂದ ಪ್ರಾರಂಭಿಸಿದರು. ಬೆಳಗಿನ ನೋಂದಣಿ ಮುಗಿಯುತ್ತಿದ್ದ ಹಾಗೆ, ಸ್ವಾದಿಷ್ಟವಾದ ಭೋಜನದ. ನಂತರ ಬಳಗದ ಎಳೆಯ ಸದಸ್ಯರಾದ ಯಶ್ ಮತ್ತು ರಿಯಾ ಮಂಕರಗೋಡ್ ಅವರ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಅಂದಿನ ಕಾರ್ಯಕ್ರಮ ಮೊದಲಾಯಿತು. ಮಾಮೂಲಿನಂತೆ ಬಳಗದ ಅಧ್ಯಕ್ಷ ಡಾ ಜಯರಾಮ್ ತಮ್ಮ ಚಿಕ್ಕ ಮತ್ತು ಚೊಕ್ಕವಾದ ಭಾಷಣ ಮುಗಿಸಿದರು. ಕನ್ನಡ ಬಳಗದ ಆಶ್ರಯದಲ್ಲಿ ತನ್ನ ಸಾಹಿತ್ಯದ ಚಟುವಟಿಕೆಗಳನ್ನು, ತನ್ನದೇ ಆದ “ಅನಿವಾಸಿ” ಎಂಬ ತಕ್ಕ ಹೆಸರಿನ ಜಾಲ-ಜಗುಲಿಯಲ್ಲಿ ನಡೆಸಿಕೊಂಡು ಬಂದಿರುವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ, ಯು.ಕೆ.ಯ ಸಂಪಾದಕೀಯದ ಸದಸ್ಯರಲ್ಲಿ ಒಬ್ಬರಾದ ಡಾ ಉಮಾ ವೆಂಕಟೇಶ್, ಹಲವಾರು ಕಂಪ್ಯೂಟರ್ ಚಿತ್ರಗಳ ಸಹಾಯದಿಂದ, ಅಲ್ಲಿ ನೆರದಿದ್ದ ಬಳಗದ ಸದಸ್ಯರಿಗೆ ತಮ್ಮ ವೇದಿಕೆಯ ಚಟುವಟಿಕೆಗಳ ಬಗ್ಗೆ ಒಂದು ಸಣ್ಣ ನಿರೂಪಣೆ ನೀಡಿ, ಹೆಚ್ಚಿನ ಸಂಖ್ಯೆಯಲ್ಲಿ ಬಳಗದ ಕನ್ನಡಿಗರು ಕನ್ನಡದಲ್ಲಿ ಬರೆಯುವ ಹವ್ಯಾಸವನ್ನು ಮುಂದುವರೆಸಿ ಪ್ರೋತ್ಸಾಹಿಸಲು ಮನವಿ ಮಾಡಿಕೊಂಡರು.,m

ಮದ್ಯಾನ್ಹದ ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಣೆಯನ್ನು ನಡೆಸಿಕೊಟ್ಟ ಡಾ ಮೋಹನ್ ಹೊಸಳ್ಳಿ ಅವರು, ತಮ್ಮದೇ ಆದ ಒಂದು ಶೈಲಿಯಲ್ಲಿ, ಆಗಾಗ್ಗೆ ಕನ್ನಡದ ರಸಪ್ರಶ್ನೆಗಳು ಮತ್ತು ಅಂತಾಕ್ಷರಿಗಳ ನೆರವಿನಿಂದ ಅಲ್ಲಿ ನೆರದಿದ್ದ ಪ್ರೇಕ್ಷಕರ ಗಮನವನ್ನು ತಮ್ಮೊಡನೆ ಭದ್ರವಾಗಿ ಹಿಡಿದಿಟ್ಟು, ಅವರಿಗೆ ಬೇಸರ ಬರದಂತೆ ನೋಡಿಕೊಂಡರು. ಯು.ಕೆ ಕನ್ನಡ ಬಳಗದ ಸ್ಥಳೀಯ ಹಿರಿಯ ಮತ್ತು ಕಿರಿಯ ಕಲಾವಿದರಿಂದ ವಿವಿಧ ಮನೋರಂಜೆನೆ ಕಾರ್ಯಕ್ರಮಗಳು ನಡೆದವು. ಅವುಗಳಲ್ಲಿ ಕನ್ನಡ ಬಳಗದ ಯಾರ್ಕಶೈರ್ ಚಾಪ್ಟರಿನ ಸದಸ್ಯರಾದ ಸವಿತಾ ಸುರೇಶ್, ಹರೀಶ್ ಚಿಕ್ಕಣ್ಣ ಮತ್ತು ತಂಡದವರ ಜಾನಪದ ಗೀತೆಗಳು, ಅಲ್ಲಿಯವರೇ ಆದ ಡಾ ಸುಮನಾ ನಾರಾಯಣ್ ಮತ್ತು ಅವರ ಗುಂಪಿನ ಸದಸ್ಯರ ಅತ್ಯಾಕರ್ಷಕ ಜಾನಪದ ನೃತ್ಯ, ಅರುಣ್ ಕುಕ್ಕೆ ಮತ್ತು ತಂಡದ ಹಾಡುಗಳು, ಪ್ರೇಕ್ಷಕರ ಮನಸೆಳೆದವು. ಡಾರ್ಬಿ ಕನ್ನಡ ಅಭಿಮಾನಿಗಳು ಕನ್ನಡ ಚಿತ್ರಗೀತೆಗಳನ್ನಾಧರಿಸಿ ಸೂತ್ರದ ಗೊಂಬೆಗಳುನಡೆಸಿಕೊಟ್ಟ “ಬೊಂಬೆ ಆಟ” ರಂಜನೀಯವಾಗಿತ್ತು. ಸ್ಪಷ್ಟವಾದ ಕನ್ನಡ ಉಚ್ಚಾರಣೆಯಿಂದ ಕೂಡಿದ ಕು. ರುಜಾಲಾಳ ಹಾಡು ನೆರದಿದ್ದವರನ್ನು ಆಶ್ಚರ್ಯಚಕಿತರನ್ನಾಗಿಸಿತು.

ಅಂದಿನ ಸಾಂಸ್ಕೃತಿಕ ಕಾರ್ಯಕ್ರಮದ ಮುಖ್ಯ ಆಕರ್ಷಣೆ ಎಂದರೆ, ಈ ಬಾರಿ ಅಮೆರಿಕೆಯ ನ್ಯೂಜರ್ಸಿಯಿಂದ ಆಗಮಿಸಿದ್ದ ಹವ್ಯಾಸಿ ಮನರಂಜನೆಯ ತಂಡವಾದ “ಕಲಾತರಂಗದ” ಕಲಾವಿದರು ಪ್ರದರ್ಶಿಸಿದ, ಕನ್ನಡ ನಾಟಕ ಜಗತ್ತಿನ ಪ್ರಹಸನ ಪ್ರಪಿತಾಮಹ, ಟಿ.ಪಿ.ಕೈಲಾಸಮ್ ಅವರ ಅತ್ಯಂತ ಜನಪ್ರಿಯ ನಾಟಕಗಳಲ್ಲಿ  ಒಂದಾದ “ನಮ್ ಕಂಪ್ನಿ” ಮತ್ತು “ಬಂಡವಾಳವಿಲ್ಲದ ಬಡಾಯಿ” ಎಂದರೆ ಅಚ್ಚರಿಯೇನಿಲ್ಲ. ಈಗ ಜನಗಳಲ್ಲಿ ಮನೆಮಾತಾಗಿರುವ ಕಂಗ್ಲೀಷನ್ನು, ನಲವತ್ತರ ದಶಕದಲ್ಲೇ ತಮ್ಮ ನಾಟಕಗಳಲ್ಲಿ ಸುಲಲಿತವಾಗಿ ಬಳಸಿ ಮೆರೆಸಿದ ಅಪ್ರತಿಮ ನಾಟಕಕರ್ತೃ. ಸುಮಾರು 80ರ ದಶಕದಲ್ಲಿ, ಮೈಸೂರಿನ ಹೆಸರಾಂತ ನಾಟಕ ತಂಡ “ಸಮತೆಂತೋ” ಅವರು ಪ್ರದರ್ಶಿಸಿದ್ದ ನಮ್ ಕಂಪ್ನಿ ನಾಟಕ ನೋಡಿದ್ದ ನನಗೆ, ಮತ್ತೊಮ್ಮೆ ಅದನ್ನು ನೋಡುವ ಅವಕಾಶ ಸಿಕ್ಕಿದ್ದು ಸೌಭಾಗ್ಯವೆನಿಸಿತ್ತು. ಅಮೆರಿಕೆಯ ಮೂರು ಭಿನ್ನ ರಾಜ್ಯಗಳಾದ ನ್ಯೂಯಾರ್ಕ್, ನ್ಯೂ ಜರ್ಸಿ ಮತ್ತು ಕನೆಟಿಕಟ್ ನಿವಾಸಿಗಳಾಗಿದ್ದುಕೊಂಡು, ತಮ್ಮ ಹವ್ಯಾಸದಿಂದ ತ್ರಿವೇಣಿ ಸಂಗಮದಂತೆ ಒಂದುಗೂಡಿ, ಈ ನಾಟಕಗಳನ್ನು ಪ್ರಸ್ತುತಿ ಪಡಿಸಿದ ಕಲಾತರಂಗದ ಕಲಾವಿದರು ನಿಜಕ್ಕೂ ಪ್ರತಿಭಾವಂತರು.Kailasam Drama

ತಂಡದ ಕಲಾವಿದರನ್ನು ಪ್ರದರ್ಶನಕ್ಕೆ ಮುಂಚೆಯೇ ಒಮ್ಮೆ ಭೇಟಿ ಮಾಡಿ ಅವರ ಬಗ್ಗೆ ಅಲ್ಪಸ್ವಲ್ಪ ಮಾಹಿತಿ ಪಡೆದಿದ್ದೆ. ತಂಡದ ಸದಸ್ಯರುಗಳಾದ ಶ್ರೀ. ಸತ್ಯನಾರಾಯಣ, ಶ್ರೀಮತಿ. ವಸುಧಾ, ಶ್ರಿ.ಬ.ರಾ.ಸುರೇಂದ್ರ, ಶ್ರೀ. ಮಲ್ಲಿ ಸಣ್ಣಪ್ಪನವರ್, ಕು.ಸುಷ್ಮಾ ನಾರಾಯಣ್, ಶ್ರೀ. ಸುಘೋಷ್ ನಾರಾಯಣ್ ಮತ್ತು ಶ್ರೀ.ಕೃಷ್ಣಮೂರ್ತಿ ವೆಂಕಟರಾಮನ್ ಇವರೆಲ್ಲರೂ ವೃತ್ತಿಪರರು. ಆದರೆ ತಮ್ಮ ನೆಚ್ಚಿನ ಹವ್ಯಾಸವಾದ ನಾಟಕವನ್ನು ಕೇಂದ್ರವನ್ನಾಗಿಸಿಕೊಂಡು ಕನ್ನಡದ ಪ್ರಸಿದ್ಧ ನಾಟಕಗಳನ್ನು ವಿವಿಧ ಸ್ಥಳಗಳಲ್ಲಿ ಪ್ರದರ್ಶಿಸುವ ಅಭ್ಯಾಸವುಳ್ಳವರು. ಕೈಲಾಸಮ್ ಕನ್ನಡದ ಸೊಗಡೇ ಬೇರೆ. ಇಂಗ್ಲೀಷಿನೊಂದಿಗೆ ಕನ್ನಡವನ್ನು ಬೆರಸಿ ಬರೆದ ಅವರ ಸಂಭಾಷಣೆಗಳನ್ನು ಕೇಳಿ ಪಡೆಯುವ ಆನಂದವನ್ನು ಅನುಭವಿಸಿಯೇ ತಿಳಿಯಬೇಕು. ಆ ಆನಂದವನ್ನು ನಮಗೆ ಒದಗಿಸಿದ ಕಲಾತರಂಗದ ಕಲಾವಿದರು ಕೈಲಾಸಮ್ ಅವರ “ಬಂಡವಾಳವಿಲ್ಲದ ಬಡಾಯಿ” ನಾಟಕವನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿ ನಮ್ಮೆಲ್ಲರ ಮನವನ್ನೂ ಸೂರೆಗೊಂಡರು.

ಇದಾದ ನಂತರ ಕಾಲಾಯ ತಸ್ಮೈ ನಮಃ ಎಂಬಂತೆ, ಅಂದಿನಿಂದ ಇಂದಿನವರೆಗೆ ಕಾಲಕ್ಕನುಗುಣವಾಗಿ ಬದಲಾಗಿರುವ ಸಮಾಜ ಮತ್ತು ಪ್ರಾಕೃತಿಕ ಬದಲಾವಣೆಗಳ ಸುತ್ತಮುತ್ತಾ ಹೆಣೆದ ಮೂರು ಹಾಸ್ಯಮಿಶ್ರಿತ ಸನ್ನಿವೇಶಗಳಾದ ೧. ಕಾಲಕ್ಕೆ ತಕ್ಕಂತೆ ನಲಿದಾಡು, ೨. ನಿತ್ಯಾನಂದ ಮಹಾತ್ಮೆ ಮತ್ತು ೩. ಐ.ಟಿ ಟೆಕ್ನಾಲಜಿ ಹೈಬ್ರಿಡ್ ಪ್ರಪಂಚ ಎನ್ನುವ ಹೆಸರಿನ ಮೂರು ಪ್ರಹಸನಗಳನ್ನು “ನಮ್ಮ ನಮ್ಮಲ್ಲಿ” ಕಾರ್ಯಕ್ರಮದ ಮೂಲಕ ಬಳಗದ ಶ್ರೋತೃಗಳನ್ನು ರಂಜಿಸಿ ನಗೆಯಲ್ಲಿ ಮುಳುಗಿಸಿದ ಕಲಾತರಂಗದ ಕಲಾವಿದರು ನಮ್ಮ ಮನಗಳಲ್ಲಿmalli ಅಮೆರಿಕನ್ನಡಿಗರ ಛಾಪನ್ನು ಒತ್ತಿದರೆನ್ನಬಹುದು. ಅವರ ಕಾರ್ಯಕ್ರಮದ ಅಂತ್ಯದಲ್ಲಿ, ಕಲಾತರಂಗದ ಕಲಾವಿದ ಶ್ರೀ. ಬ.ರಾ. ಸುರೇಂದ್ರ ಅವರು ಯು.ಕೆ ಕನ್ನಡ ಬಳಗವನ್ನು ಕುರಿತು ರಚಿಸಿದ ಕವನವೊಂದನ್ನು ಎಲ್ಲರ ಮುಂದೆ ವಾಚಿಸಿ, ಕಟ್ಟುಹಾಕಿದ್ದ ಅದರ ಫಲಕವನ್ನು ಅಧ್ಯಕ್ಷ ಡಾ ಜಯರಾಮ್ ಅವರಿಗೆ ಸಮರ್ಪಿಸಿ, ತಮ್ಮ ಸೌಜನ್ಯಿಕೆಯನ್ನು ಮೆರೆದರು.

ಕನ್ನಡ ಬಳಗದ ಅಧ್ಯಕ್ಷರಾದ ಡಾ ಜಯರಾಮ್ ತಾವೇ ಸ್ವತಃ ರಚಿಸಿದ ಸ್ವಾಮಿ ವಿವೇಕಾನಂದರ ರೇಖಾಚಿತ್ರವನ್ನು ಸದಸ್ಯರ ಮುಂದೆ ಹರಾಜಿಗಿಟ್ಟು, ಅದರಿಂದ ಸಂಗ್ರಹಿಸಿದ ಹಣವನ್ನು ಕನ್ನಡ ಬಳಗದ ದತ್ತಿ ಕಾರ್ಯಕ್ರಮಕ್ಕೆ ದಾನವಿತ್ತರು. ಒಟ್ಟಿನಲ್ಲಿ ಉತ್ತಮವಾದ ಸ್ಥಳ, ಚೊಕ್ಕವಾದ ಭೋಜನ ಮತ್ತು ರಂಜನೀಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದ ಚೆಲ್ಟನಾಮ್ ದೀಪಾವಳಿ, ಬಹಳ ಹೆಚ್ಚಿನ ಸಂಖ್ಯೆಯ ಸದಸ್ಯರನ್ನು ಆಕರ್ಷಿಸಿರಲಿಲ್ಲವಾದರೂ, ಅಂದು ಅಲ್ಲಿ ನೆರದಿದ್ದವರಿಗೆ ಉತ್ತಮ ಮನರಂಜನೆ ನೀಡುವಲ್ಲಿ ಯಶಸ್ವಿಯಾಯಿತು ಎನ್ನಬಹುದು.

(All other photos: Dr Rajaram Cavale)

ಡಾ ಉಮಾ ವೆಂಕಟೇಶ್