(ಲೇಖಕರ ಪರಿಚಯ: ಗುರುರಾಜ ಅಸ್ರೋಳ್ಳಿ ಗಣೇಶ್. ಹೊನ್ನಾವರ ತಾಲೂಕಿನ ಖರ್ವ ಎಂಬ ಪುಟ್ಟ ಗ್ರಾಮದವರು. ವಿಧ್ಯಾಬ್ಯಾಸ ಕರ್ನಾಟಕದಲ್ಲಿ ಮುಗಿಸಿ ಹೊಟ್ಟೆಪಾಡಿಗಾಗಿ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿ ಕೆಲಸ. ಯು ಕೆ ಗೆ ಬಂದು ೪-೫ ವರ್ಷಗಳಾಗುತ್ತ ಬಂದಿತು. ಮ್ಯಾಂಚೆಸ್ಟರ್ನಲ್ಲಿ ಹೆಂಡತಿ ಮತ್ತು ೧ ವರ್ಷದ ಮಗುವಿನೊಂದಿಗೆ ವಾಸ. ಬೀchi ಯವರ ಸಾಹಿತ್ಯ ಓದುವ ಆಸಕ್ತಿ ಇದೆ.
ಚಿತ್ರಕಾರರ ಪರಿಚಯ: ಡಾ ಲಕ್ಷ್ಮೀನಾರಾಯಣ ಗುಡೂರ್, ರೋಗನಿದಾನಶಾಸ್ತ್ರಜ್ಞ, ಪ್ರೆಸ್ಟನ್ನಿನಲ್ಲಿ ಕೆಲಸ. ಮೂಲತಃ ಗುಲ್ಬರ್ಗದವರು. ೨೦೦೧ರಿಂದ ಯುಕೆಯಲ್ಲಿ ವಾಸ.)
ಯುಗಾದಿ ಎಂದಾಕ್ಷಣ ಕನ್ನಡದ ಬಹುತೇಕ ಎಲ್ಲ ಜನರಿಗೂ ನೆನಪಾಗುವುದು ದ ರಾ ಬೇಂದ್ರೆಯವರ ‘ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ’ ಎಂಬ ಸುಂದರ ರಸವತ್ತಾದ ಕವನ. ಯು ಕೆ ಕನ್ನಡ ಬಳಗದ ದುರ್ಮುಖಿ ನಾಮ ಸಂವತ್ಸರದ ೩೩ನೆಯ ಯುಗಾದಿ ಉತ್ಸವವು ದಿನಾಂಕ ೧೬-೦೪-೨೦೧೬, ಶನಿವಾರದಂದು ಇಂಗ್ಲೆಂಡಿನ ಮ್ಯಾಂಚೆಸ್ಟರನ ಪಾರ್ಸ್ ವುಡ್ ಶಾಲೆಯ ಆವರಣದಲ್ಲಿ ನಡೆಯಿತು. ಹೇಗೆ ಬಳ್ಳಾರಿ ಎಂದರೆ ನೆನಪಾಗುವದು ಬಿಸಿಲು ಮತ್ತು ಕಡು ಬಿಸಿಲೋ, ಹಾಗೆಯೇ ಇತ್ತೀಚಿನ ದಿನಗಳಲ್ಲಿ ಮ್ಯಾಂಚೆಸ್ಟರ್ ಎಂದರೆ ಫುಟ್ಬಾಲ್ನ ಹೊರತಾಗಿ ನೆನಪಾಗುವದು ಮಳೆ ಮತ್ತು ವಿಪರೀತ ಮಳೆ! ಆದರೆ ಕಾರ್ಯಕ್ರಮದ ದಿನದಂದು ಶುಭ್ರವಾದ ಆಗಸ ಮತ್ತು ಮೈಯಿಗೆ ಮುದನೀಡುವ ಹದವಾದ ಬಿಸಿಲು ಬಂದಿರುವದು ಕಾರ್ಯಕ್ರಮದ ರುಚಿಯನ್ನು ಸವಿಯಲು ಬಂದ ಸಭಿಕರಿಗೆ ತುಂಬಾ ಸಹಕಾರಿಯಾಯಿತು. ಕಾರ್ ಪಾರ್ಕ್ ಮಾಡಲು, ಬಹು ವಿಶಾಲವಾದ ಸ್ಥಳವಿದ್ದದು ಜನರಿಗೆ ಅನೂಕೂಲವಾಯಿತು.
ಕುಮಾರ್ ರಮಾನಂದ್, ಆರತಿ, ಶಾದ್ವಾಲ, ನವೀನ ಮುಂತಾದವರನ್ನೊಳಗೊಂಡ ತಂಡ, ಕಾರ್ಯಕ್ರಮಕ್ಕೆ ಸಾಮಾಜಿಕ ತಾಣಗಳನ್ನು ಬಳಸಿಕೊಂಡು ದಾಖಲೆಯ ಸಂಖ್ಯೆಯಲ್ಲಿ ಸರಿ ಸುಮಾರು ೬೦೦ಕ್ಕೂ ಅಧಿಕ ಜನರು ಸೇರುವಂತೆ ಮಾಡಿದರು. ಹಣಕಾಸನ್ನು ಆರತಿಯವರ ತಂಡ ಬಹು ಸಮರ್ಥವಾಗಿ ನಿಭಾಯಿಸಿದರು. ಇದೆ ಮೊದಲ ಬಾರಿಗೆ ನೋಂದಣಿಯನ್ನು ೨ ವಾರಗಳ ಮೊದಲೇ ಮುಕ್ತಾಯ ಮಾಡಿದುದರಿಂದ, ಆರಂಭದಲ್ಲಿ ನೋಂದಣಿ ಸಮಯದಲ್ಲಿ ಆಗುತ್ತಿದ್ದ ವಿಳಂಬವನ್ನು ತಪ್ಪಿಸಿದರು. ಈ ತಂಡದ ಮಾರ್ಗದರ್ಶನವನ್ನು ಮುಂದಿನ ಕಾರ್ಯಕ್ರಮಕ್ಕೆ ಉಪಯೋಗಿಸಿಕೊಂಡರೆ ಭವಿಷ್ಯದಲ್ಲಾಗುವ ಕಾರ್ಯಕ್ರಮಗಳು ಇನ್ನಷ್ಟು ಯಶಸ್ವಿಯಾಗಲು ಕಾರಣವಾಗುತ್ತದೆ. ಪ್ರವೇಶದ್ವಾರದಲ್ಲಿದ್ದ ಸ್ವಾಗತ ಕಮಿಟಿ ಸದಸ್ಯರು ಸಭಿಕರನ್ನು ಮಂದಹಾಸದಿಂದ ಬರಮಾಡಿಕೊಂಡರೆ, ಅಲ್ಲಲ್ಲಿ ಹಚ್ಚಿದ್ದ ಮಾರ್ಗದರ್ಶಿ ಫಲಕಗಳು ತುಂಬಾ ಉಪಕಾರವಾದವು.
ಕಾರ್ಯಕ್ರಮವು ಅವಿನಾಶ್ ಅಧ್ಯಾಪಕ್ ರವರ ವೇದ ಘೋಷದೊಂದಿಗೆ ಆರಂಭವಾಯಿತು. ಆ ಬಳಿಕ ಗೀತಾ ಗಾಯನ ಮತ್ತು ದೀಪ ಬೆಳಗಿಸಿ ಉದ್ಘಾಟನಾ ಕಾರ್ಯಕ್ರಮವು ನಡೆಯಿತು. ನಂತರ ಇತ್ತೀಚಿಗಷ್ಟೆ ನಮ್ಮನ್ನಗಲಿದ KBUKಯ ಗಣ್ಯ ವ್ಯಕ್ತಿಗಳಿಗೆ ಶ್ರದ್ಧಾಂಜಲಿಯ ಸೂಚಿಸಿ, ಬಳಗದ ಅಧ್ಯಕ್ಷ ಗೌಡಗೆರೆ ಜಯರಾಂ ಅವರು ಚಿಕ್ಕ ಮತ್ತು ಚೊಕ್ಕದಾದ ಭಾಷಣ ಮಾಡಿದರು. ಸ್ಥಳೀಯರಾದ ಶಿಲ್ಪ ಮತ್ತು ರಶ್ಮಿ, ಸಭಾಂಗಣವನ್ನು ಬಹಳ ಮುತುವರ್ಜಿಯಿಂದ ಸಿಂಗರಿಸಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಪ್ರಾರಂಭದಲ್ಲಿ ತುಸು ಸಮಯ ತಾಂತ್ರಿಕ ಅಡಚಣೆಯಾದರೂ ಸಹ, ಕಾರ್ಯಕ್ರಮದ ನಿರೂಪಣೆ ನಡೆಸಿದ ಕುಮಾರಿ ದಿಲ್ಲು ಮತ್ತು ನೀತುರವರ ಸಮಯ ಪ್ರಜ್ಞೆ ಮತ್ತು ಮುಖ್ಯ ನಿರೂಪಕರದಾದ ರಮೇಶ್ ಮತ್ತು ರಷ್ಮಿಯವರ ಮಾತನಾಡಿಸುವ ಕಲೆ, ಆಗಬಹುದಾದಂತಹ ಮುಜುಗರವನ್ನು ತಪ್ಪಿಸಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವವರು ನಿಗದಿಯ ಕಾರ್ಯಕ್ರಮದ ಕನಿಷ್ಠ ೧ ವಾರ ಮುಂಚಿತವಾಗಿ ತಮ್ಮ ನೃತ್ಯಕ್ಕೆ ಪೂರಕವಾದ ಗಾಯನವನ್ನು ಸಂಘಟಿಕರಿಗೆ ತಲುಪಿಸಿದರೆ ಇಂತಹ ಅಡಚಣೆಗಳನ್ನು ತಡೆಯಲು ಸಾಧ್ಯ ಮತ್ತು ಕಾರ್ಯಕ್ರಮವೂ ನಿಗದಿಯಾದಂತೆ ಮುಂದುವರಿಯಲು ಸಹಕಾರಿಯಾಗುತ್ತದೆ ಎಂಬುದು ನನ್ನ ಅಭಿಪ್ರಾಯ. ತದನಂತರರ ವಾರಿಂಗ್ಟನ್, ವೊರ್ಸ್ಲೆ, ನಾಟಿಂಗ್ಹ್ಯಾಮ್, ಸ್ಥಳೀಯ ಮ್ಯಾಂಚೆಸ್ಟರ್ ಮತ್ತು ಹಲವಾರು ಕಡೆಯಿಂದ ಬಂದ ಚಿಣ್ಣರು ಹಾಡು, ನೃತ್ಯಗಳ ಮೂಲಕ ರಂಜಿಸಿದರು.
ಕನ್ನಡ ಬಳಗದ ”ಅನಿವಾಸಿ” ಜಾಲ ಜಗುಲಿಯಲ್ಲಿ ಈ ವರೆಗೆ ಪ್ರಕಟವಾಗಿರುವ ಹಲವಾರು ಲೇಖಕರ ಲೇಖನಗಳಲ್ಲಿ ಕೆಲವನ್ನು ಆಯ್ದು ಪುಸ್ತಕದ ರೂಪದಲ್ಲಿ ಹೊರತಂದಿದೆ. ಇದಕ್ಕೆ ಜಾಲಜಗುಲಿಯನ್ನು ಎರಡು ವರ್ಷಗಳ ಕೆಳಗೆ ಉದ್ಘಾಟಿಸಿದ ಹೆಚ್ ಎಸ್ ವೆಂಕಟೇಶಮೂರ್ತಿಯವರೇ ಮುನ್ನುಡಿ ಬರೆದು ಆಶೀರ್ವದಿಸಿದ್ದಾರೆ. ಪುಸ್ತಕವನ್ನು ಅಧಿಕೃತವಾಗಿ ಇತ್ತೀಚೆಗೆ ನಮ್ಮನ್ನಗಲಿದ KBUKಯ ಹಿರಿಯ ಸದಸ್ಯ ಡಾ ರಾಜಾರಾಂ ಕಾವಳೆಯವರ ಪತ್ನಿ ಶ್ರೀಮತಿ ಪದ್ಮಾ ಅವರು ಸಭಿಕರ ಮುಂದೆ ಬಿಡುಗಡೆ ಮಾಡಿದರು. ನಂತರ ಪರ್ಯಾಯ ಕಾರ್ಯಕ್ರಮಗಳಲ್ಲೊಂದಾದ ಬಳಗದ ಸಾಹಿತ್ಯಾಸಕ್ತರು ಕೆಲವರು ತಮ್ಮ ಹಾಸ್ಯ ಕವನಗಳನ್ನು ಶ್ರೀಯುತರಾದ ಗಂಗಾವತಿ ಪ್ರಾಣೇಶ್ ಮತ್ತು ಬಸವರಾಜ್ ಮಹಾಮನಿಯವರ ಉಪಸ್ಥಿತಿಯಲ್ಲಿ ಓದಿದರು. ಇದನ್ನು ನೆರೆದ ಪ್ರೇಕ್ಷಕರು ಮೆಚ್ಚಿಕೊಂಡರು.
ಸರ್ವ ಸದಸ್ಯರ ಸಭೆಯಲ್ಲಿ ಹೊಸ ಸಂವಿಧಾನವನ್ನು ಗಂಭೀರವಾಗಿ ಚರ್ಚಿಸಿ ಅಂಗೀಕರಿಸಲಾಯಿತು.
ಹೆಚ್ಚಿನ ಸಂಖ್ಯೆಯಲ್ಲಿ ಸಭಿಕರು ಆಗಮಿಸಿದುದರಿಂದ ಮೊದಲೇ ನಿಗದಿಯಾದಂತೆ, ಭೋಜನ ವ್ಯವಸ್ಥೆಯನ್ನು ಎರಡು ಪ್ರತ್ಯೇಕ ಕೊಠಡಿಗಳಲ್ಲಿ ಆಯೊಜಸಲಾಗಿತ್ತು. ಭೋಜನ ಕೊಠಡಿಯಲ್ಲಿ ಕಾರ್ಯಕ್ರಮದ ಪ್ರಾಯೋಜಕರಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸ್ಟಾಲ್ ವಯಸ್ಕರನ್ನು ಆಕರ್ಷಿಸುತ್ತಿದ್ದರೆ, ಟ್ಯಾಂಜೆಂಟಿಕ್ಸ್ ಆಟದ ಸಂಸ್ಥೆಯ (Tangentix GameSession) ಮಕ್ಕಳನ್ನು ತನ್ನೆಡೆಗೆ ಆಕರ್ಷಿಸುತ್ತಿತ್ತು. ‘ಚೆನ್ನೈ ದೋಸ’ದ ಬೋರ್ಡ್ ತನ್ನತ್ತ ಭೇಟಿ ಕೊಡುವಂತೆ ಕೇಳಿಕೊಳ್ಳುತ್ತಿತ್ತು. ಪ್ರಾಯೋಜಕರನ್ನು ಕರೆತರಲು ಅಶ್ವಿನ್ ಪಟ್ಟ ಶ್ರಮವು ಶ್ಲಾಘನೀಯ. ಮಕ್ಕಳಿಗಾಗಿ ಪ್ರತ್ಯೇಕ ಬಗೆಯ ಆಹಾರಗಳನ್ನು ತಯಾರಿಸಿದುದು ವಿಶೇಷವಾಗಿತ್ತು. ಊಟದ ಸಮಯದಲ್ಲಿ ಜನರು ಟ್ರಾಫಿಕ್ ಜಾಮ್ ನಂತೆ ನಿಲ್ಲುವುದು ಬಹುತೇಕ ಕಾರ್ಯಕ್ರಮದಲ್ಲಿ ಸರ್ವೇ ಸಾಮಾನ್ಯ. ಅದಕ್ಕೆ ಅಪವಾದವೇನೋ ಎಂಬಂತೆ, ಈ ಕಾರ್ಯಕ್ರಮದಲ್ಲಿ ಎಲ್ಲೂ ಸ್ವಲ್ಪವೂ ಅಡಚಣೆಯಾಗದಂತೆ ಸವಿತಾ ಹಳ್ಳಿಕೇರಿ, ರಾಜೀವ್, ಚಿತ್ತರಾಜನ್ ಮತ್ತು ನಟರಾಜರನ್ನು ಒಳಗೊಂಡ ಸುಮಾರು ೩೦ ಜನರ ತಂಡ ತುಂಬಾ ಅಚ್ಚುಕಟ್ಟಾಗಿ ಎಲ್ಲ ಜನರನ್ನು ನಗು ಮುಖದಿಂದ ಮಾತನಾಡಿಸಿ ಪದಾರ್ಥಗಳನ್ನು ಬಡಿಸುತ್ತಿದ್ದರು. ಉಪ್ಪು ತಿಂದವರು ನೀರು ಕುಡಿಯುತ್ತಾರೆ ಎಂಬುದು ವಾಡಿಕೆ, ಆದರೆ ಬಿಸಿಬೇಳೆ ಬಾತ್ ತಿಂದವರೆಲ್ಲ ನೀರು ಕುಡಿಯುತ್ತಿದ್ದುದು ಇಲ್ಲಿ ಸಾಮಾನ್ಯವಾಗಿತ್ತು. ಕೆಲವು ಚಲನಚಿತ್ರಗಳಲ್ಲಿ ನಾಯಕ ನಟನಿಗಿಂತ ಖಳ ನಾಯಕನ ಅಬ್ಬರವೇ ಜೋರಾಗಿರುವಂತೆ, ಇಲ್ಲಿ ಬಿಸಿ – ಬೇಳೆ ಬಾತಿನ ಮಾತು ಅಲ್ಲಲ್ಲಿ ಕೆಳಿಬರುತ್ತಿದ್ದುದು ಸಾಮಾನ್ಯವಾಗಿತ್ತು. ಆಹಾರದ ರುಚಿ ಮತ್ತು ಗುಣಮಟ್ಟದ ಬಗ್ಗೆ ಋಣಾತ್ಮಕ ಟೀಕೆಗಳು ಅಲ್ಲಲ್ಲಿ ಕೇಳಿಬರುತ್ತಿದ್ದುದು ಸರ್ವೇಸಾಮಾನ್ಯವಾಗಿತ್ತು. ಒಬ್ಬ ಆಂಗ್ಲ ಛಾಯಾಗ್ರಾಹಕರು ಅವರಿಗೆ ಖಾರವಾದ ಊಟದ ಬಗ್ಗೆ ಕೊಟ್ಟ ಸೂಚನೆಯನ್ನು ತಳ್ಳಿಹಾಕಿ, ಮಕ್ಕಳ ಊಟ ಮಾಡಲು ನಾನೇನು ಚಿಕ್ಕವನೇ? ನಾನು ದೊಡ್ಡವರ ಊಟವನ್ನೇ ಮಾಡುತ್ತೇನೆ ಎಂದು ಧೈರ್ಯ ತೋರಿದುದು ಮೆಚ್ಚಲೇಬೇಕು! ಸಂಜೆಯ ಮೆಣಸಿನಕಾಯಿ ಬಜ್ಜಿ ಸಹ ಇದಕ್ಕಿಂತ ಭಿನ್ನವಾಗಿರಲಿಲ್ಲ, ರಾತ್ರಿಯ ಊಟ ಸಮಧಾನಕರವಾಗಿತ್ತು. ಸಾಯಿ ಸ್ಪೈಸ್ ರೆಸ್ಟೋರಂಟ್ ನವರು ತಯಾರಿಸಿದ ಅಡುಗೆಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಆದೀತು. ಆದ ಕಾರಣ, ಅಡುಗೆಯ ವಿಷಯವನ್ನು ಪುನಃ ಪುನಃ ಪ್ರಸ್ತಾಪಿಸದೆ ಇಲ್ಲಿಗೆ ಮುಗಿಸುತ್ತಿದೇನೆ.

ಊಟದ ನಂತರ ಸರ್ರೆ ತಂಡದವರಿಂದ ನೃತ್ಯ ಕಾರ್ಯಕ್ರಮ, ನಾರ್ಥ್-ಈಸ್ಟ್ ಕಲಾವಿದರ ಸುಮಾರು ೨೫ ಜನರ ತಂಡ ‘ವಿನಾಶ ಕಾಲೇ ವಿಪರೀತ ಬುದ್ಧಿ’ ಎಂಬ ನೃತ್ಯದಲ್ಲಿ ಭರತನಾಟ್ಯ, ಮೋಹಿನಿ ಆಟ, ಯಕ್ಷಗಾನಗಳ ಪರಿಚಯಗಳನ್ನು ಮಾಡಿಕೊಟ್ಟಿತು. ಈ ನೃತ್ಯವು ‘ಮಾತೃದೇವೋ ಭವ’ ಹಾಗೂ ತಾಯಿಯ ಮಾತನ್ನು ಮಕ್ಕಳು ಪಾಲಿಸುವುದರ ಮಹತ್ವವನ್ನು ವಿವರಿಸುತ್ತಿದ್ದವು. ನಂತರದಲ್ಲಿ ನಡೆದ ಈಸ್ಟ್ ಲಂಡನ್ ಎಸ್ಸೆಕ್ಸಿನ ಶ್ರೀವಿದ್ಯ, ವಿದುಷಿ ಶ್ರೀಧನ್ಯ ಮತ್ತು ತಂಡದವರಿಂದ ಮೂಡಿಬಂದ ‘ಕನ್ನಡ ನಾಡಿ’ ಕಾರ್ಯಕ್ರಮವು ಕರ್ನಾಟಕದ ಸಂಸ್ಕೃತಿ, ಇತಿಹಾಸ, ಸಾಹಿತ್ಯ, ಜಾನಪದ, ಶಿಲ್ಪಕಲೆ ಮತ್ತು ಅಲ್ಲಿಯ ಜನರ ಬದುಕಿನ ಕಿರುಪರಿಚಯವನ್ನು ಮಾಡಿಕೊಟ್ಟಿತು. ಡಾರ್ಬಿ ತಂಡದವರ ಚಲನಚಿತ್ರವಾಧರಿಸಿದ ‘ಬೊಂಬೆ ಆಟ’ ಪ್ರೇಕ್ಷಕರನ್ನು ಮಂತ್ರ ಮುಗ್ದರನ್ನಾಗಿಸಿದುದು ಬಹಳ ವಿಶೇಷವಾಗಿತ್ತು. ನಾಟಿಂಗ್ಹ್ಯಾಮ್ ತಂಡದವರು ಭರತನಾಟ್ಯವನ್ನು ನಡೆಸಿಕೊಟ್ಟರು. ಯಾರ್ಕ್ಶೈರ್ ತಂಡದವರಿಂದ ಮೂಡಿಬಂದ ‘ಚೈತ್ರದ ಚಿಗುರು’, ಕನ್ನಡದ ಹೆಸರಾಂತ ಚಲನಚಿತ್ರಗೀತೆಗಳ ನೃತ್ಯ ಪ್ರದರ್ಶನ ಮಾಡಿದರು. ಸವಿತಾ ಸುರೇಶ, ವೀಣಾ ಕಲ್ಲಿನಾಥ್ ಮತ್ತು ಹರೀಶ್ ಚಿಕ್ಕಣ್ಣ ತಮ್ಮ ಸುಮಧುರವಾದ ಕಂಠದಿಂದ ಜನಪ್ರಿಯ ಕನ್ನಡ ಗೀತೆಗಳನ್ನು ಹಾಡಿ, ಸಭಿಕರ ಮನದೂಗಿಸಿದರು. ಇದಾದ ಮೇಲೆ ಸ್ನೇಹ ಕುಲಕರ್ಣಿಯವರು ತಮ್ಮ ಕವನಗಳನ್ನು ಮಂಡಿಸಿದರೆ, ಸರ್ರೆ ತಂಡದವರು ಹಳೆಯ ಕನ್ನಡ ಹಾಡುಗಳಿಗೆ ನೃತ್ಯ ಮಾಡಿದರು. ಖ್ಯಾತ ಹಾಡುಗಾರ್ತಿ ಅಂಜಲಿ ಹಳಿಯಾಳ್ ಅವರು ತಮ್ಮ ಹಾಡಿನ ಮೂಲಕ ಕಾರ್ಯಕ್ರಮದ ಸೊಬಗನ್ನು ಇನ್ನಷ್ಟು ಹೆಚ್ಚಿಸಿದರು. ಚಿಕ್ಕ ಮಕ್ಕಳನ್ನು ಮನೋರಂಜಿಸಲು ಜಾದು ಪ್ರದರ್ಶನ ಮತ್ತು ಆಟದ ವ್ಯವಸ್ಥೆಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಚಹಾ ಸವಿದ ನಂತರ, KBUKಯ ಹಿರಿಯ ಚೇತನ ಅಪ್ಪಾಜಿಯವರ ಸನ್ಮಾನ ಕಾರ್ಯಕ್ರವನ್ನು ಎಲ್ಲ ಜನರ ಸಮ್ಮುಖದಲ್ಲಿ ನಡೆಸಲಾಯಿತು. ಮೊದಲ ಬಾರಿಗೆ ಕನ್ನಡ ಬಳಗದ ಕಾರ್ಯಕ್ರಮ ನಡೆದಾಗ ಅಪ್ಪಾಜಿಯವರು ಮಾಡಿದ ಸಹಾಯವನ್ನು ಬಳಗದ ಸದಸ್ಯರು ಕೊಂಡಾಡಿದರು. ಇದೆ ಸಮಯದಲ್ಲಿ, ಪ್ರೊ|| ಕೃಷ್ಣೆ ಗೌಡರು ಅಪ್ಪಾಜಿಯವರ ಮತ್ತು ಬಳಗದ ಬಗ್ಗೆ ಬರೆದ ಲೇಖನವನ್ನು ಓದಿ ಅವರನ್ನು ಗೌರವಿಸಲಾಯಿತು.
ಸ್ಥಳೀಯ ಮ್ಯಾಂಚೆಸ್ಟರ್ ಕನ್ನಡಿಗರು (ಮಂಕು) ನಡೆಸಿಕೊಟ್ಟ ಕನ್ನಡದ ಆಧುನಿಕ ‘SHOLAY’ ಎಂಬ ಕಿರು ನಾಟಕ ಜನ ಸಾಗರವನ್ನು ರಂಜಿಸಿತು. ಅದರಲ್ಲಿನ ‘ವೀರು’ ಪಾತ್ರವನ್ನು ಮಾಡಿದ ರಮೇಶರವರು, ಕಾರ್ಯಕ್ರಮದ ನಂತರವೂ ಸಹ ‘ವೀರು’ವಾಗಿಯೇ ಗುರುತಿಸಲ್ಪಟ್ಟುದು ವಿಶೇಷವಾಗಿತ್ತು. ಕಾರ್ಯಕ್ರಮದ ಎಲ್ಲ ಪಾತ್ರಗಳ ಅಭಿನಯವೂ ಚಲನಚಿತ್ರ ನಟರನ್ನೂ ಸಹ ನಾಚುವಂತಿಸುತ್ತಿತ್ತು. ಸ್ಥಳೀಯ ಕನ್ನಡ ಮಹಿಳಾ ಸದಸ್ಯರು ಪ್ರಜ್ಯೋತಿಯವರ ಮಾರ್ಗದರ್ಶನದಲ್ಲಿ ಅಭಿನಯಿಸಿದ ‘ರಾಸಲೀಲ’ ನೃತ್ಯ ಬಹು ಸೊಗಸಾಗಿ ಮೂಡಿಬಂದಿತು. ಪುಟಾಣಿಗಳಾದ, ನೀತಿ ಮತ್ತು ಸ್ನೇಹ Raffle Tickets ಗಳನ್ನು ಹಂಚಿದರು.

ಇದಾಗುತ್ತಿದ್ದಂತೆಯೇ, ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಬಸವರಾಜ್ ಮಹಾಮನಿ ಮತ್ತು ಕನ್ನಡದ ಅಭಿನವ ಬೀಚಿ ಗಂಗಾವತಿಯ ಪ್ರಾಣೇಶರವರ ಕಾರ್ಯಕ್ರಮವು ನಡೆಯಿತು. ಇದೆ ಮೊದಲ ಬಾರಿಗೆ ಯುಕೆಯಲ್ಲಿ ಕಾರ್ಯಕ್ರಮ ಕೊಟ್ಟ ಇಬ್ಬರು ಮಹನೀಯರೂ ತಮ್ಮ ಹಾಸ್ಯ ಚಟಾಕಿಯ ಮೂಲಕ ಸೇರಿದ್ದ ಸಭಿಕರನ್ನು ಹೊಟ್ಟೆ ಹುಣ್ಣಾಗುವಂತೆ ನಗೆಸಾಗರದಲ್ಲಿ ಮುಳುಗಿಸಿದರು. ಇಲ್ಲಿ ಹುಟ್ಟಿ ಬೆಳೆಯುವ ಮಕ್ಕಳಿಗೆ ಮನೆಯಲ್ಲಿ ಕನ್ನಡ ಮಾತನಾಡುವುದನ್ನೇ ಕಲಿಸಲು ಈ ಮೂಲಕ ತಮ್ಮ ಹಾಸ್ಯದ ಮೂಲಕವೇ ಕೇಳಿಕೊಂಡರು. ಕಾರ್ಯಕ್ರಮ ನಿಗದಿಯಾದ ಸಮಯಕ್ಕಿಂತ ತಡವಾಗಿ ಪ್ರಾರಂಭವಾದುದು ಸ್ವಲ್ಪ ವಿಷಾದನೀಯ. ಕಾರ್ಯಕ್ರಮದ ಮುಗಿಯುವ ಹಂತದಲ್ಲಿ ಚಿಕ್ಕ ಮಕ್ಕಳ ಹುಡುಗಾಟ ಸ್ವಲ್ಪ ಹೆಚ್ಚಾಗಿದ್ದರಿಂದ, ಮಕ್ಕಳ ಪೋಷಕರ ಹತ್ತಿರ ಅವರನ್ನು ಸ್ವಲ್ಪ ಸುಮ್ಮನಿರಲು ಸೂಚಿಸುವದನ್ನೂ ಸಹ ಪ್ರಾಣೇಶರವರು ಹಾಸ್ಯವಾಗಿಯೇ ಮನವಿ ಮಾಡಿಕೊಂಡರು.
ನಂತರ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು. ಊಟದ ಬಗ್ಗೆ ನಾನೇನು ಹೇಳುವದಿಲ್ಲ!! ಲೋಪದೋಷಗಳನ್ನು ಎತ್ತಿ ಹೇಳಿದರೆ ತಪ್ಪಾಗುವದಿಲ್ಲವೆಂದು ನನ್ನ ಅನಿಸಿಕೆ. ಮುಂದಿನ ಕಾರ್ಯಕ್ರಮಗಳಲ್ಲಿ, ‘ಅತಿಥಿ ದೇವೋ ಭವ’ ಎಂಬಂತೆ ಕಾರ್ಯಕ್ರಮಕ್ಕೆ ವಿದೇಶದಿಂದ ನಮ್ಮ ಸಲುವಾಗಿ ಬಂದಿರುವ ಅತಿಥಿಗಳಿಗೆ ಮೊದಲು ಊಟ ಮಾಡಲು ಅವಕಾಶಮಾಡಿಕೊಡುವದು ಉತ್ತಮವಾದ ನಡೆವಳಿಕೆ ಎಂಬುದು ನನ್ನ ಅಭಿಪ್ರಾಯ. ಹಾಗೆಯೇ, ಊಟದ ನಂತರ ಊಟದ ತಟ್ಟೆ, ಲೋಟಗಳನ್ನು ಬಹುತೇಕ ಮಂದಿ ಅಲ್ಲಲ್ಲೇ ಇಟ್ಟು ಹೋಗಿರುವ ದೃಶ್ಯ ಸರ್ವೇಸಾಮಾನ್ಯವಾಗಿತ್ತು. ಹೀಗೆ ಇದು ಮುಂದಿನ ಕಾರ್ಯಕ್ರಮಗಳಲ್ಲಿ ಮುಂದುವರೆದರೆ ‘ಸ್ವಚ್ಚ KBUK ಕಾರ್ಯಕ್ರಮ’ದ ಫಲಕವನ್ನು ಹಾಕುವ ದಿನ ಬಹು ದೂರವಿಲ್ಲದಿರುವದು ಬಹಳ ವಿಪರ್ಯಾಸದ ಸಂಗತಿ!

ಕಾರ್ಯಕ್ರಮದ ಕೊನೆಯ ಹಂತವಾಗಿ ಖ್ಯಾತ ಹಾಡುಗಾರ್ತಿ ಹಳಿಯಾಳ್ ರವರ ಸುಶ್ರಾವ್ಯ ಕಂಠದಿಂದ ಬಂದ ಸುಮಧುರ ಚಲನಚಿತ್ರ ಗೀತೆಗಳಿಗೆ ಸಭಿಕರು ಹೆಜ್ಜೆ ಹಾಕಿದ್ದುದು ವಿಶೇಷವಾಗಿತ್ತು. ಧ್ವನಿ ಮತ್ತು ಬೆಳಕಿನ ಕಾರ್ಯವನ್ನು ಬಹು ಅಚ್ಚುಕಟ್ಟಾಗಿ ನಿರ್ವಹಿಸಿದ ‘Parswood’ ನ ಜ್ಯಾಕ್ ತಮ್ಮದೇ ಶೈಲಿಯಲ್ಲಿ ಕೆಲವು ಹೆಜ್ಜೆಗಳನ್ನು ಹಾಕಿದುದು ಬಹು ಸೊಗಸಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮದ ರುವಾರಿ ಮತ್ತೂ ಹಾಸ್ಯಕಲಾವಿದರನ್ನು ಯು ಕೆ ಗೆ ಕರೆತರುವಲ್ಲಿ ಶ್ರಮ ಪಟ್ಟ ಆನಂದ್ ಕುಲಕರ್ಣಿಯವರು ಬಹಳ ತಾಳ್ಮೆಯಿಂದ ಕಾರ್ಯಕ್ರಮದ ಆರಂಭದಿಂದ ಮುಕ್ತಾಯದವರೆಗೂ ತಮ್ಮ ಕಾರ್ಯಕ್ರಮವನ್ನು ನಿರ್ವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು, ವಿಶ್ವನಾಥ್ ಮತ್ತು ಅರವಿಂದ್ ಅವರು ಕಾರ್ಯಕ್ರಮದ ಪ್ರತಿಯೊಂದು ಹಂತದಲ್ಲೂ ಬಹಳ ಆಸಕ್ತಿ ಮತ್ತು ಮಾರ್ಗದರ್ಶನ ನೀಡುತ್ತ ಕಾರ್ಯಕ್ರಮದ ಯಶಸ್ಸಿಗೆ ಸಹಕಾರಿಯಾದರು. ಇನ್ನು ಬಹುತೇಕ ಮಂದಿ ಪರದೆಯ ಹಿಂದೆ ಮತ್ತು ಪರದೆಯ ಮುಂದೆ ಈ ಕಾರ್ಯಕ್ರಮದ ಯಶಸ್ಸಿಗಾಗಿ ಕ್ಷಮಿಸಿದ್ದಾರೆ. ಅವರ ಹೆಸರನ್ನು ನಾನು ಇಲ್ಲಿ ಉಲ್ಲೇಖಿಸದಿದ್ದರೆ, ದಯವಿಟ್ಟು ಕ್ಷಮೆ ಇರಲಿ.
ಮುಂದಿನ ದಿನಗಳಲ್ಲಿ ಬಳಗವು ಇನ್ನೂ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿ ಕನ್ನಡ ಭಾಷೆ ಮತ್ತೂ ಸಂಸ್ಕೃತಿಯ ಕಂಪನ್ನು ಶ್ರೀಗಂಧದಂತೆ ಯು ಕೆ ಯಲ್ಲಿ ಇನ್ನಷ್ಟು ಬೀರಲಿ ಎಂದು ಹಾರೈಸುವೆ.
ಯುಗಾದಿ ಆಚರಣೆಯ ರಸವತ್ತಾದ ವರದಿ ಓದಿ ಆ ಸಂಭ್ರಮದಲ್ಲಿ ಗುರುರಾಜ ಅಸ್ರೋಳ್ಳಿಯವರನ್ನ ಅಭಿನಂದಿಸಲು ಮರೆಯುವಷ್ಟು ಸಂತೋಷದಲ್ಲಿ ಮುಳುಗಿಬಿಟ್ಟೆ. ತುಂಬಾ ಯಥಾವತ್ತಾದ ವರ್ಣನೆ. ಅಭಿನಂದನೆಗಳು ಗುರುರಾಜ ಅವರೇ
ಸರೋಜಿನಿ ಪಡಸಲಗಿ
LikeLike
tumba chennagide varadi… Gururajaravare chochhala prayatnadalle sogasagi barediddira.
LikeLike
ಯುಗಾದಿ ಸಮಾರಂಭ ಮುಗಿಯುತ್ತಿದ್ದಂತೆಯೇ ಸವಿಸ್ತಾರವಾಗಿ, ರೋಚಕವಾಗಿ ಗುರುರಾಜರು ಬರೆದ ವರದಿ ಓದಿಸಿಕೊಂಡು ಹೋಗುತ್ತದೆ. ದಿನದ ನಡಾವಳಿಗಳನ್ನು ಕಣ್ಣಿಗೆ ಕಟ್ಟುತ್ತದೆ. ಇವರಿಗೆ ಬರೆಯುವ ಹವ್ಯಾಸವನ್ನು ಮುಂದುವರೆಸಿಕೊಳ್ಳಲಿ ಕೇಳಿಕೊಳ್ಳುತ್ತೇನೆ. ಮೊದಲ ಸಲ ಜಾಲಜಗುಲಿಯಲ್ಲಿ ಲೇಖನಕ್ಕೆಂದೇ ಬರೆದಪೂರಕ ಚಿತ್ರಗಳನ್ನು ಒದಗಿಸಿದ (ವ್ಯಂಗ್ಯ)ಚಿತ್ರಕಾರರಿಗೂ ಧನ್ಯವಾದಗಳು.
LikeLike
ಸಖತ್ತಾದ , ರಸವತ್ತಾದ ವರದಿ. ಓದಿ ಸಮಾರಂಭಕ್ಕೆ ಹೋಗಿ ಬಂದಂತಯೇ ಅನಿಸಿತು!.
ಚಿತ್ರಗಳು ಮತ್ತು ಫೋಟೊಗಳು ಪೂರಕವಾಗಿವೆ. ಶ್ರೀಯುತ ಗಣೇಶರಿಂದ ಇನ್ನೂ ಹೆಚ್ಚಿನ ಬರಹಗಳು ಬರಲಿ. ದೇಸಾಯಿಯವರು ಲೇಖಕರ ಪರಿಚಯವನ್ನೂ ಸೇರಿಸಬಹುದಾಗಿತ್ತು.
LikeLike
ಕಿರುಪರಿಚಯ ಕೊನೆಯಲ್ಲಿದೆ.
( Desai)
LikeLike
ಈ ಹೊತ್ತಿನ ಹನುಮ ಜಯಂತಿಯ ಶುಭದಿನದಂದು ಅನಿವಾಸಿ ಬಳಗದ ಯುಗಾದಿ ಆಚರಣೆಯ ವರದಿ ಓದಿ ತುಂಬಾ ಖುಷಿಯಾಯ್ತ. ತಾಯ್ನಾಡನ್ನ ಬಿಟ್ಟು ದೂರ ಇದ್ದಷ್ಟೂ ಅದರ ಹಂಬಲ, ತುಡಿತ, ಮಿಡಿತ ಹೆಚ್ಚು.ಇಂಥ ಆಚರಣೆಗಳು ಎಲ್ಲರನ್ನೂ ಇನ್ನೂ ಹತ್ತಿರ ತರುತ್ತವಲ್ಲ? ಚಿಣ್ಣರಿಗೂ ನಮ್ಮ ಹಬ್ಬ-ಹರಿದಿನಗಳ ಸುಂದರ ಪರಿಕಲ್ಪನೆ. ಎಲ್ಲೇ ಇರು,ಎಂತೇ ಇರು, ಎಂದೆಂದಿಗೂ ನೀ ಕನ್ನಡಿಗ (ಭಾರತೀಯ)ನಾಗಿರು. ಎಂಬಂತೆ ಅನಿವಾಸಿ ಕನ್ನಡ ಬಳಗದ ನನ್ನ ಎಲ್ಲ ಬಂಧುಗಳಿಗೂ ನನ್ನ ಹಾರ್ದಿಕ ಶುಭೇಚ್ಛೆಗಳು ಹಾಗೂ ಧನ್ಯವಾದಗಳು
ಸರೋಜಿನಿ ಪಡಸಲಗಿ
LikeLiked by 1 person
Dear Gururaj
Thank you very much for such a succinct report of Ughadhi Uttasava.
Kannada language is like a Kasturi. The wonderful Suvasane
Ellelu parimala beeruvante ede.
Nimma basha shyli thumbha saralavagi haredu bandede.
Neevu vivaresudara KBUK Manchester thada davaru achareseda
Samarambha kannige kattuva hage lekana da moolaka rasavattagi
Varnishedera.
Nanage Kannadadalli type madalu thumbha saamaya tegudokollutade.
Dayavittu Kshamisi.
Athmeyelada
VathsalaRamamurthy
Sent from my iPad
>
LikeLiked by 1 person
ಮ್ಯಾಂಚೆಸ್ಟರ್ ಉಗಾದಿ ಸಮಾರಂಭದ ನಡುವಳಿಕೆಗಳನ್ನು ಉತ್ತಮವಾಗಿ ವರ್ಣಿಸಿ ಬರೆದ ವರದಿ. ನೂತನ ಶೈಲಿಯಲ್ಲಿ ಶ್ರೀ ಗುರುರಾಜ್ ಆಸ್ರೊಳ್ಳಿ ಅವರು, ಅಂದು ನಡೆದ ಕಾರ್ಯಕ್ರಮಗಳನ್ನು ತಿಳಿಸಿದ್ದಾರೆ. ವರದಿಯಲ್ಲಿ ಸೇರಿಸಿರುವ ಪ್ರಾಣೇಶ್, ಬಸವರಾಜ್ ಮಹಾಮನಿ ಅವರ ವ್ಯಂಗ್ಯಚಿತ್ರಗಳು ಬಹಳ ಚೆನ್ನಾಗಿವೆ. ಕಲಾವಿದನಿಗೆ ನನ್ನ ಅಭಿನಂದನೆಗಳು.
ಉಮಾ ವೆಂಕಟೇಶ್
LikeLike
ಮ್ಯಾಂಚೆಸ್ಟರಿನಲ್ಲಿ ನಡೆದ ಈ ವರ್ಷದ ಉಗಾದಿ ಸಮಾರಂಭ ನಿಜಕ್ಕೂ ವಿಜೃಂಭಣೆಯಿಂದ ನಡೆಯಿತು. ಒಂದು ಪೂರ್ಣದಿನದ ಮನೋರಂಜನೆಯನ್ನು ಸ್ಥಳೀಯ ಕಾರ್ಯಕಾರಿ ಸಮಿತಿಯ “ಮಂಕರು“ ಬಹಳ ಸುಸೂತ್ರವಾಗಿ ನಿರ್ವಹಿಸಿದರು. ನಮ್ಮ ವೇದಿಕೆಯ ಪರ್ಯಾಯ ಸಭೆಯು ಈ ಬಾರಿ ಹೆಚ್ಚಿನ ಪ್ರೇಕ್ಷಕರನ್ನು ಆಕರ್ಷಿಸಿತ್ತು ಎನ್ನುವುದು ಸಂತೋಷ ಮತ್ತು ಆಶಾದಾಯಕ ಸುದ್ದಿ. ಸದಸ್ಯರ ಕವನಗಳು ಮುಖ್ಯ ಅತಿಥಿಗಳಾದ ಗಂಗಾವತಿ ಪ್ರಾಣೇಶರಿಂದ ಹೊಗಳಿಕೆಗೆ ಪಾತ್ರವಾಗಿ, ಅವರಿಂದ ಅನೇಕ ರಚನಾತ್ಮಕ ಸಲಹೆಗಳನ್ನೂ ಪಡೆಯಿತು. “ಅನಿವಾಸಿಗಳ-ಅಂಗಳದಿಂದ“ ಪುಸ್ತಕದ ಬಿಡುಗಡೆ, ನಮ್ಮ ಎರಡು ವರ್ಷಗಳ ಪರಿಶ್ರಮಕ್ಕೆ ಉತ್ತಮ ಫಲನೀಡಿತು. ಒಟ್ಟಾರೆ ಸಮಾರಂಭ ನಮ್ಮ ಮನಗಳಲ್ಲಿ ಉಗಾದಿಯ ಕಂಪನ್ನು ಬೀರುವಲ್ಲಿ ಯಶಸ್ವಿಯಾಗಿತ್ತು.
ಉಮಾ ವೆಂಕಟೇಶ್
LikeLike