ಅನಿವಾಸಿ ಕನ್ನಡಿಗರಿಗೆ ಜಯದೇವ್ ಅವರು ಈಗಾಗಲೇ ಚಿರಪರಿಚಿತರು. ಒಬ್ಬ ಸಮಾಜ ಸೇವಕನಾಗಿ, ದೀನಬಂಧುವಾಗಿ, ಪರಿಸರ ಪ್ರೇಮಿಯಾಯಾಗಿ, ಶಿಕ್ಷಣ ತಜ್ಞನಾಗಿ, ಲೇಖಕನಾಗಿ, ಅಂಕಣಕಾರನಾಗಿ ಅವರು ಹಲವಾರು ಕ್ಷೇತ್ರಗಳಲ್ಲಿ ಸಾಧನೆ ನಡೆಸಿದ್ದಾರೆ. ವೈಜ್ಞಾನಿಕ ಸತ್ಯ ಮತ್ತು ಅಧ್ಯಾತ್ಮ ಇವೆರಡನ್ನೂ ಒಂದೇ ದೃಷ್ಟಿಕೋನದಲ್ಲಿಟ್ಟುಕೊಂಡು ಇವೆರಡರ ನಡುವೆ ಇರುವ ಸಮಾನಾಂಶಗಳ ಬಗ್ಗೆ ಚಿಂತಿಸಿದ್ದಾರೆ. ಮೂಲದಲ್ಲಿ ವಿಜ್ಞಾನ ವಿದ್ಯಾರ್ಥಿಯಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ, ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡ ಜಯದೇವ್ ಅವರು ಚಾಮರಾಜನಗರದ ಜೆ ಎಸ್ ಎಸ್ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ಕೆಲಸಮಾಡಿ, ಮುಂಚಿತವಾಗಿಯೇ ನಿವೃತ್ತಿ ಪಡೆದು ಬಿಳಿಗಿರಿ ರಂಗನ ಬೆಟ್ಟದಲ್ಲಿ ವಿವೇಕಾನಂದ ಗಿರಿಜನ ಕಲ್ಯಾಣಕೇಂದ್ರದಲ್ಲಿ ಕಾರ್ಯಕರ್ತರಾಗಿ ದುಡಿದಿದ್ದಾರೆ. ಗಿರಿಜನರ ಸಂಪರ್ಕದಿಂದ ಒದಗಿದ ಅಮೂಲ್ಯವಾದ ಅನುಭವ ಅವರಿಗೆ ಪರಿಸರದ ಅಳಿವು ಉಳಿವಿನ ಬಗ್ಗೆ ಚಿಂತಿಸಲು ಅನುವುಮಾಡಿಕೊಟ್ಟಿತು. ಇಲ್ಲಿಂದ ಮುಂದೆ ಹಲವಾರು ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ಅವರು ತೊಡಗಿಕೊಂಡರು. ಗಿರಿಜನರ ಸಂಪರ್ಕದಿಂದ ಒದಗಿದ ಹಲವಾರು ಅಮೂಲ್ಯ ಅನುಭವಗಳನ್ನು, ಪರಿಸರದ ಬಗ್ಗೆ ವಿಶೇಷ ಮಾಹಿತಿಗಳನ್ನು ಸಂಗ್ರಹಿಸಿ "ಸೋಲಿಗ ಚಿತ್ರಗಳು" ಎಂಬ ಕೃತಿಯನ್ನು ರಚಿಸಿದ್ದು ಅದು ಸಾಹಿತ್ಯ ಕ್ಷೇತ್ರದಲ್ಲಿ ಎಲ್ಲರ ಪ್ರಶಂಸೆಯನ್ನು ಪಡೆಯಿತು.
ಮಕ್ಕಳ ಬಗ್ಗೆ ವಿಶೇಷ ಪ್ರೀತಿ ಇರುವ ಜಯದೇವ್ ಅವರು ಅನಾಥ ಮಕ್ಕಳ ಬಗ್ಗೆ ತೀವ್ರವಾದ ಕಾಳಜಿಯಿಂದ ಮತ್ತು ಅನುಕಂಪೆಯಿಂದ ದೀನಬಂಧು ಎಂಬ ಸಂಸ್ಥೆಯನ್ನು ಪ್ರಾರಂಭಿಸಿದ್ದು ಅಲ್ಲಿ ನೂರಾರು ಗಂಡು ಮತ್ತು ಹೆಣ್ಣು ಮಕ್ಕಳ ಆಶ್ರಯ, ವಿದ್ಯಾಭ್ಯಾಸ, ವ್ಯಕ್ತಿವಿಕಾಸ ಇವುಗಳಿಗೆ ಅನುವುಮಾಡಿಕೊಟ್ಟು ಈ ಮಕ್ಕಳ ಪೋಷಣೆ ನಿರಂತರವಾಗಿ ನಡೆದಿದೆ. ನೊಂದ ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಂಡು ಮನಶಾಸ್ತ್ರ ತಜ್ಞರ ಜೊತೆ ಸಮಾಲೋಚನೆ ನಡೆಸಿ ಮಾನಸಿಕವಾಗಿ ಘಾಸಿಗೊಂಡ ಮಕ್ಕಳನ್ನು ಸೂಕ್ಷ್ಮವಾಗಿ ನಿಭಾಯಿಸಿದ್ದಾರೆ. ಅವರಿಗೆ ಈ ದಿಕ್ಕಿನಲ್ಲಿ ದೊರೆತ ಅನುಭವವನ್ನು "ನಾವೇಕೆ ಹೀಗೆ?" ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ. ಗಾಂಧಿ, ವಿವೇಕಾನಂದ, ರಾಮಕೃಷ್ಣ ಪರಮಹಂಸ, ಬುದ್ಧ, ಜೀಸಸ್ ಮುಂತಾದ ಮಹಾತ್ಮರ ಬದುಕು ಬರಹವನ್ನು ದೀರ್ಘವಾಗಿ ಅವಲೋಕಿಸಿ ತಮ್ಮ ಬದುಕಿನಲ್ಲಿ ಮತ್ತು ತಮ್ಮ ಆಶ್ರಮದಲ್ಲಿ ಈ ಮೌಲ್ಯಗಳನ್ನು ಅನುಷ್ಠಾತಾನಕ್ಕೆ ತಂದಿದ್ದಾರೆ. ಮೈಸೂರಿನ ಶಕ್ತಿ ಧಾಮ ಎಂಬ ಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿ ಅಸಹಾಯಕ ಶೋಷಿತ ಮಹಿಳೆಯರಿಗೆ ಪುನರ್ವಸತಿಯನ್ನು ನೀಡಿ ಅವರಿಗೆ ಆಶ್ರಯನೀಡಿದ್ದಾರೆ. ಹೀಗೆ ಮಹಿಳೆಯರ ಅಭಿವೃದ್ಧಿ ಕಾರ್ಯದಲ್ಲೂ ತಮನ್ನು ತೊಡಗಿಕೊಂಡಿದ್ದಾರೆ.
ಅವರು ಮೈಸೂರಿನ ವಿಶ್ವ ವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ಜಯದೇವ ಅವರ ನಿಸ್ವಾರ್ಥ ಸಮಾಜ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಮತ್ತು ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಯನ್ನು ನೀಡಿದೆ. ಹಲವಾರು ಸಂಘ ಸಂಸ್ಥೆಗಳು ಅವರಿಗೆ ಪ್ರತಿಷ್ಠಿತ ಪುರಸ್ಕಾರಗಳನ್ನು ನೀಡಿವೆ. ಅಮೇರಿಕ, ಯುರೋಪ್ ಮತ್ತು ಯುಕೆ ದೇಶಗಳಿಂದ ಅವರಿಗೆ ಆರ್ಥಿಕ ನೆರವು ಬಂದಿರುವುದಲ್ಲದೆ ಹಲವಾರು ವಿದೇಶಿಯರು ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿ ಕೆಲಕಾಲ ಕೆಲಸ ಮಾಡಿದ್ದಾರೆ. ಜರ್ಮನಿಯ ಹಲವಾರು ವಿದ್ಯಾರ್ಥಿನಿಯರು ಕಳೆದ ಹಲವಾರು ವರ್ಷಗಳಿಂದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ವಿನಿಮಯ ಕಾರ್ಯಕ್ರಮದಲ್ಲಿ ದೀನಬಂಧುವಿನಲ್ಲಿ ಸೇವೆ ಸಲ್ಲಿಸಿದ್ದಾರೆ.
ಜಯದೇವ್ ಅವರಿಗೆ ನಿವೃತ್ತಿ ಎನ್ನುವುದಿಲ್ಲ, ಅವರ ತಮ್ಮನಾಗಿ ನಾನು ಅವರನ್ನು ಇಂಗ್ಲೆಂಡಿಗೆ ಹಲವಾರು ಬಾರಿ ಆಹ್ವಾನಿಸಿದ್ದು, ಕೊನೆಗೂ ಈ ಬೇಸಿಗೆಯಲ್ಲಿ ದೀನಬಂಧು ಸಂಸ್ಥೆ ಯಿಂದ ತಾತ್ಕಾಲಿಕವಾಗಿ ಬಿಡುಗಡೆ ಪಡೆದು ತಮ್ಮ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಿ ಯುಕೆ ಮತ್ತು ಯುರೋಪ್ ಪ್ರವಾಸ ಕೈಗೊಂಡಿದ್ದಾರೆ. ಬದುಕಿನಲ್ಲಿ ದಟ್ಟವಾದ ಅನುಭವವನ್ನು ಪಡೆದ ಜಯದೇವ್ ಅವರು ಯುಕೆ ಮತ್ತು ಯೂರೋಪಿನ ಬಗ್ಗೆ ಅವರ ಮೊಟ್ಟ ಮೊದಲ ಭೇಟಿಯ ಅನಿಸಿಕೆಗಳೇನು ಎಂದು ಹಲವಾರು ಅನಿವಾಸಿ ಮತ್ತು ವಿದೇಶಿ ಮಿತ್ರರು ಕೇಳಿದ್ದು ಜಯದೇವ್ ಅವರು ತಮ್ಮ ವಿಶೇಷ ಒಳನೋಟಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದನ್ನು ಒಂದು ಲೇಖನವಾಗಿ ಬರೆಯಬೇಕೆಂದು ನಾನು ಒತ್ತಾಯಿಸಿದರೆ ಫಲವಾಗಿ, ಈ ಹಿನ್ನೆಲೆಯಲ್ಲಿ ಅವರ ಕೆಳಗಿನ ಲೇಖನವನ್ನು ಪ್ರಕಟಿಸಿಲಾಗಿದೆ, ದಯವಿಟ್ಟು ಓದಿ ಮತ್ತು ಪ್ರತಿಕ್ರಿಯಿಸಿ.
-ಸಂಪಾದಕ
* * *
ಅಮೇರಿಕಾ ದೇಶಕ್ಕಿಂತಲೂ ಸಾಂಸ್ಕೃತಿಕವಾಗಿ ಸಮೃದ್ಧವಾಗಿರುವ ಯೂರೋಪ್ ದೇಶಗಳನ್ನು ನೋಡಬೇಕೆಂಬ ಬಯಕೆ ನನಗೆ ಆಗಾಗ ಮೂಡುತ್ತಿತ್ತು. ಆದರೆ ಸಾಧ್ಯವಾಗಿದ್ದು ಈಗ. ಕಳೆದ ಇಪ್ಪತೈದು ವರ್ಷಗಳಿಂದಲೂ ನನ್ನ ತಮ್ಮ, ಅವನ ಕುಟುಂಬದ ಎಲ್ಲರೂ ನನ್ನನ್ನು ಕರೆಯುತ್ತಲೇ ಇದ್ದಾರೆ. ದೀನಬಂಧು ಸಂಸ್ಥೆಯ ಜವಬ್ದಾರಿಯಿಂದ ಬಿಡಿಸಿಕೊಂಡು ನನ್ನ ತಂಗಿಯ ನೆರವಿನಿಂದ ಈಗ ಪ್ರಯಾಣ ಸಾಧ್ಯವಾಗಿದೆ. ಕಳೆದ ದಶಕಗಳಿಗೆ ಹೋಲಿಸಿದರೆ ಈಗ ಪ್ರಯಾಣ ಬಹಳ ಸುಲಭ. ಮೊಬೈಲ್-ಇಂಟರ್ ನೆಟ್ ಗಳಿಂದಾಗಿ ಪ್ರತಿ ಹೆಜ್ಜೆಯನ್ನು ಪ್ಲಾನ್ ಮಾಡಿ ಪ್ರಯಾಣ ಮಾಡಬಹುದು.
ಹೊಸ ಸ್ಥಳಗಳನ್ನು ಅಲ್ಲಿಯ ಜನರನ್ನು ಅವರ ರೀತಿ ನೀತಿಗಳನ್ನು ನೋಡಿ ವಸ್ತು ನಿಷ್ಠವಾಗಿ ಗ್ರಹಿಸಬೇಕೆಂದರೆ ಅದಕ್ಕೆ ಹೊಸ ಕಣ್ಣುಗಳೇ ಬೇಕು. ಭಾರತೀಯ ಸಂಸ್ಕೃತಿ ಮತ್ತು ಅದರ ನೀತಿ ರೀತಿಗಳನ್ನೇ ಕಣ್ಣಿನ ತುಂಬಾ ತುಂಬಿಕೊಂಡಿದ್ದರೆ ನಾವು ಈ ಆಗಂತುಕ ಸಂಸ್ಕೃತಿಯ ಬಗ್ಗೆ ತೀರ್ಪು ನೀಡಲು ಪ್ರಾರಂಭಿಸುತ್ತೇವೆ. ಮೊದಲನೆಯದಾಗಿ ಯಾರೂ ನಮ್ಮನ್ನು ನ್ಯಾಯಾಧೀಶರನ್ನಾಗಿ ನೇಮಕ ಮಾಡಿಲ್ಲ; ಎರಡನೆಯದಾಗಿ ಇಂತಹ ಪೂರ್ವಾಗ್ರಹಗಳಿಂದಾಗಿ ನಾವು ಹೊಸದನ್ನು ನೋಡುವ ಸುಂದರ ಅವಕಾಶವನ್ನೇ ಕಳೆದುಕೊಂಡುಬಿಡುತ್ತೇವೆ. ಇಂತಹ ಒಂದು ಮುಕ್ತಮನಸ್ಸು ನನಗಿದ್ದರೂ ಮೊದಲು ಕೆಲವು ದಿನ ನನಗೆ ಕಷ್ಟವಾಯಿತು. ಭಾರತೀಯ ದೃಶ್ಯಾವಳಿಗಳಿಗೆ ಬಂಧಿಯಾಗಿದ್ದ ನನ್ನ ನೋಟವನ್ನು ನನ್ನ ಗ್ರಹಿಕೆಯ ಕ್ರಮವನ್ನು, ಸರಿ-ತಪ್ಪುಗಳ ನಿಷ್ಕರ್ಷೆಯನ್ನು ಬಹಿಷ್ಕರಿಸಿ ಮುಕ್ತ ಮನಸ್ಸಿನಿಂದ ನೋಡಲು ಪ್ರಾರಂಭಿಸಿದೆ. ಆಗ ಆತಂಕಕ್ಕೆ ಕಾರಣವಿಲ್ಲದ, ಸುಂದರವಾದ ಇಂಗ್ಲೆಂಡ್-ಯೂರೋಪ್ ಗಳು ಗೋಚರಿಸಲು ಪ್ರಾರಂಭವಾಯಿತು. ಹಿಂದೆ ಬ್ರಿಟಿಷರು ನಮ್ಮನ್ನು ಆಳುತ್ತಿದ್ದರು. ಇತ್ಯಾದಿ ಇತ್ಯಾದಿ ವಿಚಾರಗಳು ಚರಿತ್ರೆಗೆ ಸಂಬಂಧಪಟ್ಟ ವಿಷಯಗಳು; ಚರಿತ್ರೆಯ ಪಾಠಗಳಾಗಿ ಇವನ್ನು ಬ್ರಿಟಿಷರು-ಭಾರತೀಯರು ಇಬ್ಬರೂ ತಿಳಿಯಬೇಕು. ಆದರೆ ವರ್ತಮಾನದ ಮನುಷ್ಯ ಸಂಬಂಧಗಳಲ್ಲಿ ಈ ವಿವರಗಳಿಗೆ ಯಾವ ಸ್ಥಾನವೂ ಇರಬೇಕಾಗಿಲ್ಲ ಎಂಬ ವಿವೇಕ ನಮಗೆ ಹುಟ್ಟಬೇಕು. ಈ ನನ್ನ ಗಾಢವಾದ ನಂಬಿಕೆ ನನಗೆ ಮತ್ತಷ್ಟು ತೆರೆದ ಮನಸ್ಸನ್ನು ದಯಪಾಲಿಸಿದೆ. ಹಾಗಾಗಿ ಪ್ರವಾಸದ ತುಂಬ ಸುಂದರ ಚಿತ್ರಗಳೇ ಪ್ರಧಾನವಾಗಿವೆ. ಯಾವುದೇ ಸಮಾಜದ ಒಟ್ಟಾರೆ ಮಾನಸಿಕ ಸ್ವಾಸ್ಥ್ಯವನ್ನು ಕಲುಕುವ ಆಚಾರ ವಿಚಾರಗಳ ಬಗ್ಗೆ ನನಗೆ ಕಳಕಳಿ ಇದೆ, ಮುಚ್ಚುಮರೆ ಇಲ್ಲದೆ ಇವುಗಳನ್ನು ವಿರೋಧಿಸುತ್ತೇನೆ. ಭಾರತದಲ್ಲಂತೂ ಇಂತವುಗಳನ್ನು ವಿರೋಧಿಸುತ್ತಲೇ ಬಂದಿದ್ದೇನೆ. ಪಾಶ್ಚತ್ಯ ದೇಶಗಳಲ್ಲಿ ಕಂಡುಬಂದರೆ ಅವುಗಳನ್ನೂ ಸಹ ಪ್ರಶ್ನಿಸುತ್ತೇನೆ
ಪಶ್ಚಿಮಕ್ಕೆ ಬಂದನಂತರ ಯೂರೋಪಿನ ಕಿರು ಪ್ರವಾಸ ಹೊರತುಪಡಿಸಿದರೆ ನಾನು ಹೆಚ್ಚಾಗಿ ಓಡಾಡಿದ್ದು ನನ್ನ ತಮ್ಮನ ಮನೆ ಇರುವ ಶಫೀಲ್ಡ್ ನಲ್ಲಿ. ಇದೊಂದು ಸುಂದರವಾದ ಹಸಿರಿನಿಂದ ಕಂಗೊಳಿಸುವ ಊರು. ಮತ್ತೊಂದು ವಿಶೇಷ ಎಂದರೆ ನಿಶ್ಶಬ್ದತೆ.. ಮನೆಯೊಳಗಿದ್ದಾಗಲಂತೂ ನಿರಂತರವಾದ ನಿಶ್ಶಬ್ದತೆಯನ್ನು ಅನುಭವಿಸಿ ಆನಂದಪಟ್ಟಿದ್ದೇನೆ. ಭಾರತದ ಉದ್ದಗಲಕ್ಕೂ ಅಸಹನೀಯವಾದ ಗದ್ದಲವನ್ನು ಅನುಭವಿಸಿದ ನನಗೆ ಇದೊಂದು ಆಪ್ಯಾಯ ಮಾನವಾದ ಅನುಭವ. ಬ್ರಿಟಿಷರು ಸ್ನೇಹಜೀವಿಗಳು ಎದುರಿಗೆ ಎಲ್ಲರಿಗೂ ನಗುಮುಖದಿಂದ ಹಲೋ ಹೇಳುತ್ತಾರೆ, ಸರಿದು ದಾರಿಬಿಡುತ್ತಾರೆ. ಪ್ರತಿಯೊಬ್ಬ ವಾಹನ ಚಾಲಕನೂ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾನೆ. ಇಕ್ಕಾಟ್ಟಾದ ರಸ್ತೆಗಳಲ್ಲಿ ಇದುರಿನಿಂದ ವಾಹನ ಬಂದಾಗ ನಿಲ್ಲಿಸಿ ಇತರರಿಗೆ ಅನುವು ಮಾಡಿ ಕೊಡುವ ಸಭ್ಯತೆಯ ಸಂಪ್ರದಾಯವಂತೂ ಅನುಕರಣಯೋಗ್ಯವಾದುದು. ಬ್ರಿಟಿಷರ ಈ ಶಿಸ್ತಿನ ಒಂದನೇ ಹತ್ತುಭಾಗವಾದರೂ ನಮ್ಮ ದೇಶದಲ್ಲಿ ಆಚರಣೆಗೆ ಬರುವುದಾದರೆ ನಮ್ಮ ದೇಶದ ಹಾರನ್ ಹೊಂಕಾರಗಳು ಸ್ವಲ್ಪವಾದರೂ ಕಡಿಮೆಯಾಗಬಹುದು. ನನ್ನ ಅನಿಸಿಕೆ ಏನೆಂದರೆ ನಿಶ್ಯಬ್ದತೆಯಿಂದ ಮನಃಶಾಂತಿ ಉಂಟಾಗುತ್ತದೆ. ಕರ್ಕಶವಾದ ಶಬ್ದಗಳ ನಡುವೆ ಬಹಳಕಾಲ ಸಂಚಾರ ಮಾಡಿದರೆ ಮನಶ್ಯಾಂತಿ ಹಾರಿಹೋಗುತ್ತದೆ, ಮತ್ತು ಮಾನಸಿಕ ಅನಾರೋಗ್ಯಕ್ಕೂ ಕಾರಣವಾಗಬಹುದು.
ಇರಲಿ ಬ್ರಿಟಿಷರು ಸ್ನೇಹಜೀವಿಗಳು ಎಂದೆ. ನೆನ್ನೆಯ ದಿನ ಲಿನ್ ಮತ್ತು ಜೇನ್ ಇಬ್ಬರು ಧೀಮಂತ ಮಹಿಳೆಯರು ಸ್ಕಾಟ್ ಲ್ಯಾಂಡ್ ನಿಂದ ನೂರಾರು ಮೈಲು ಡ್ರೈವ್ ಮಾಡಿಕೊಂಡು ನನ್ನನ್ನು ನೋಡಲು ನನ್ನ ತಮ್ಮನ ಮನೆಗೆ ಬಂದಿದ್ದರು. ದೀನಬಂಧುವಿನಲ್ಲಿ ಕೆಲವು ತಿಂಗಳುಗಳ ಕಾಲ ವಾಲಂಟರಿ ಸರ್ವಿಸ್ ಮಾಡಿದ್ದ ಇವರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತ ಗಂಟೆಗಳನ್ನೇ ಕಳೆದರು. ಒಂದೂವರೆ ದಶಕದ ನಂತರವೂ ತಾವು ಒಡನಾಡಿದ ಎಷ್ಟೊಂದು ಮಕ್ಕಳ, ಸಿಬ್ಬಂದಿಗಳ ಹೆಸರುಗಳನ್ನು ನೆನಪಿಟ್ಟುಕೊಂಡು ಅತ್ಯಂತ ಪ್ರೀತಿಯಿಂದ ನೆನೆದರು. ಇಲ್ಲಿಯ ಸರಾಸರಿ ಜೀವನವನ್ನು ನೋಡಿದಾಗ ಈ ಜನ ನೆರೆಹೊರೆಯವರನ್ನು ಅಷ್ಟಾಗಿ ಹಚ್ಚಿಕೊಳ್ಳುವುದಿಲ್ಲ ಎಂದು ಅನ್ನಿಸುವುದುಂಟು. ಆದರೆ ಮತ್ತೊಬ್ಬರಿಗೆ ನೆರವಾಗುವ ಸಂದರ್ಭ ಒದಗಿಬಂದಾಗ ತಮ್ಮ ಶಿಷ್ಟಾಚಾರವನ್ನು ಬದಿಗೊತ್ತಿ ಮನುಷ್ಯ ಸಂಬಂಧಗಳಿಗೆ ಮಿಡಿಯುತ್ತಾರೆ. ಬೂಟಾಟಿಕೆ ಎಂಬುದು ಎಳ್ಳಷ್ಟು ಇರುವುದಿಲ್ಲ. ಕೆಲವೊಮ್ಮೆ ವ್ಯತಿರಿಕ್ತ ಪ್ರಕರಣಗಳೂ ಕಂಡುಬರಬಹುದು, ಆದರೆ ಅಪರೂಪ.
ಬ್ರಿಟಿಷ್ ಜನ ಮಕ್ಕಳ ರಕ್ಷಣೆಗಾಗಿ ಅತಿಯಾದ ಕಾನೂನು, ಕಟ್ಟಳೆಗಳನ್ನು ಮಾಡಿಕೊಂಡಿದ್ದಾರೆ ಎಂದೆನಿಸುತ್ತದೆ. ಇದಕ್ಕೆ ಕಾರಣಗಳೂ ಇವೆ ಎಂಬುದು ಒಂದು ಸಮಜಾಯಿಷಿ. ಎಲ್ಲೆಲ್ಲೂ ಅಪಾಯಗಳನ್ನೇ ನೋಡುತ್ತ, ಸದಾಕಾಲವೂ ಗುರಾಣಿಯನ್ನು ಅಡ್ಡಹಿಡಿದೇ ಬದುಕುವ ಜೀವನ ವಿಧಾನ ಬದುಕಿನ ಪ್ರೀತಿಯನ್ನು ನಂಬಿಕೆಯನ್ನು ಗಟ್ಟಿಗೊಳಿಸುವ ಬದಲು ಸ್ವರಕ್ಷಣೆಯ ಗೀಳನ್ನು ಹೆಚ್ಚಿಸಬಹುದಲ್ಲವೆ? ನಂಬಿಕೆ ಮತ್ತು ಪರಸ್ಪರತೆಗಳಿಗೆ ಸ್ಥಳವಿಲ್ಲದೆ ಜೀವನ ಶುಷ್ಕವಾಗಿ ಬಿಡಬಹುದಲ್ಲವೆ? ನಂಬಿಕೆ ಭರವಸೆಗಳಿಲ್ಲದ ಜೀವನದಲ್ಲಿ ಪರಕೀಯತೆ (Alienation) ಹತಾಶೆಗಳು ಸುಪ್ತವಾಗಿ ಮನೆಮಾಡಿ ಆತ್ಮವನ್ನೇ ಕೊರೆಯಬಹುದೋ ಏನೋ? ಈ ಪ್ರಶ್ನೆಗೆ ನನಗೆ ಉತ್ತರ ದೊರೆತಿಲ್ಲ.
ಪಾಶ್ಚಿತ್ಯ ಜಗತ್ತಿನ ಇಂದಿನ ವ್ಯವಸ್ಥೆ ಮತ್ತು ಸಂಸ್ಕೃತಿ ‘ಅನುಭಾವ’ ಎಂದು ನಾವು ಯಾವುದನ್ನು ಕರೆಯುತ್ತೇವೆಯೊ ಆ ಮನಸ್ಥಿತಿಯನ್ನು ಕೆಲವರಾದರೂ ಪಡೆಯಬಹುದಾದ ಸಾಧ್ಯತೆಯನ್ನು ದೂರ ಸರಿಸುತ್ತದೆ. ಬ್ರದರ್ ಲಾರೆನ್ಸ್ ಅಥವಾ ಸೇಂಟ್ ಫ್ರಾನ್ಸಿಸ್ ಆಫ್ ಅಸಿಸ್ಸಿ ಅವರಂತಹ ಅನುಭಾವಿಗಳು ಪಶ್ಚಿಮದಲ್ಲೂ ಇದ್ದುದು ಉಂಟು. ಆದರೆ ಇಂದಿನ ವಾತಾವರಣದಲ್ಲಿ ಭೌತಿಕತೆಯೇ ಪ್ರಧಾನವಾಗಿದ್ದು ಅಂತರ್ಮುಖತೆ ಗೌಣವಾಗಿದೆ. ಹಾಗಾಗಿ ಒಂದು ಮಿತಿಯೊಳಗೆ ಇವರು ಅಧ್ಯಾತ್ಮವನ್ನು ಮೆಚ್ಚುತ್ತಾರಾದರೂ ತಮ್ಮ ನಡುವೆಯೇ ಇರಬಹುದಾದ ರಮಣಮಹರ್ಷಿಯವರಂತಹ ಅನುಭಾವಿಯನ್ನು ಮಾನಸಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಬಹದೋ ಏನೋ! ಭಾರತೀಯ ಸಂಸ್ಕೃತಿಯಲ್ಲಿ ನೆಲೆಯೂರಿದ ನನ್ನಂತಹವರಿಗೆ ಇದೊಂದು ದೊಡ್ಡ ಕೊರತೆಯಾಗಿ ಕಾಣುತ್ತದೆ. ಬದುಕಿನ ನಿರರ್ಥಕತೆಯ ಅರಿವು ನಮ್ಮನ್ನು ಆಧ್ಯಾತ್ಮಿಕತೆಗೆ ಕೊಂಡೊಯ್ದರೆ ಆಲ್ಬರ್ಟ ಕಾಮು ಅವರಂತಹ ಪಾಶ್ಚಾತ್ಯ ಚಿಂತಕರನ್ನು ಅಸಂಗತ (Absurd) ತತ್ತ್ವಕ್ಕೆ ಕೊಂಡೊಯ್ದು ಆತ್ಮಹತ್ಯೆಯ ಪ್ರಶ್ನೆಯನ್ನು ಎದುರಿಸಬೇಕಾದ ಅನಿವಾರ್ಯತೆಯನ್ನುಂಟು ಮಾಡುತ್ತದೆ. ಕರ್ಮ ಮಾಡುತ್ತಲೇ ನೂರು ವರ್ಷಕಾಲ ಬಾಳಬೇಕು ಎಂದು ಹೇಳುವ ನಮ್ಮ ಈಶೋಪನಿಷತ್ತಿನ ಮಂತ್ರಕ್ಕೂ ಬದುಕಿನ ನಿರರ್ಥಕತೆಯನ್ನು ಆತ್ಮಹತ್ಯೆಯ ಪ್ರಶ್ನೆಯಾಗಿ ಎದುರಿಸುವುದಕ್ಕೂ ಎಷ್ಟು ವೆತ್ಯಾಸವಿದೆ!
ಸರಾಸರಿಯಾಗಿ ಬ್ರಿಟಿಷ್ ಜನ ತಮ್ಮ ಪರಂಪರೆಯ ಬಗ್ಗೆ, ಗತಕಾಲದ ಸಂಸ್ಕೃತಿಯ ಬಗ್ಗೆ ಹೆಮ್ಮೆಪಡುತ್ತಾರೆ. ಯಾವಾಗಲೂ ಗೆಲ್ಲುಗರಾಗಿಯೇ ಬೆಳೆದು ಬಂದ ಈ ಜನಾಂಗ ಹೆಮ್ಮೆ ಪಡುವುದರಲ್ಲಿ ಆಶ್ಚರ್ಯವಿಲ್ಲ. ಇಂದಿನ ಅವರ ವ್ಯವಸ್ಥೆಯ ಆದ್ಯತೆಗಳನ್ನು ಗಮನಿಸಿದರೆ ಇದು ಅರಿವಾಗುತ್ತದೆ. ಜೊತೆಗೆ ಸಾಂಸ್ಕೃತಿಕ ಪ್ರಜ್ಞೆಯನ್ನು ಉಳಿಸಲು ಸ್ವಯಂಪ್ರೇರಣೆಯಿಂದ ಸಂಘಟಿತ ಪ್ರಯತ್ನಗಳೂ ನಡೆಯುವುದುಂಟು. ನ್ಯಾಷನಲ್ ಟ್ರಸ್ಟ್ ಇಂತಹ ಒಂದು ಸಾರ್ವಜನಿಕ ಸಂಸ್ಥೆ. ಹಳೆಯ ಕಾಲದ ಮನೆಯನ್ನು ಹಣದ ಮುಗ್ಗಟ್ಟು ಅಥವಾ ಇತರ ಕಾರಣಗಳಿಗಾಗಿ ಯಾರಾದರೂ ಮಾರಿಬಿಟ್ಟಿದ್ದರೆ ಅದನ್ನು ಟ್ರಸ್ಟ್ ಹೆಚ್ಚು ಹಣ ಕೊಟ್ಟು ಕೊಂಡು ಕೊಂಡು ಹಾಗೇಯೇ ಉಳಿಸುತ್ತದೆ. ಹಳೆಯ ಕಾಲದ ಮನೆಗಳನ್ನು ಹಾಗೆಯೇ ಉಳಿಸಿಕೊಂಡು ಮುಂದಿನ ಪೀಳಿಗೆಯವರಿಗೆ ಗತ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವುದು ಈ ಟ್ರಸ್ಟ್ ನ ಉದ್ದೇಶ. ಈ ಮನೆಗಳ ಜೊತೆ ಹಿಂದೆ ಬಳಸುತ್ತಿದ್ದ “ಮಿಲ್ ಸ್ಟೋನ್” ಅಥವಾ ಹಿಟ್ಟು ಮಾಡುವ ಬೃಹತ್ ಬೀಸೆ ಕಲ್ಲುಗಳನ್ನು ಸಂರಕ್ಷಿಸಿದ್ದಾರೆ. ಇಷ್ಟೆ ಅಲ್ಲ ಹಿಂದೆ ಕುರಿಗಳನ್ನು ಕಟ್ಟುತ್ತಿದ್ದ ರೊಪ್ಪವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಜೊತೆಗೆ ಇವುಗಳ ಸಾಂಸ್ಕೃತಿಕ ಚರಿತ್ರೆಯನ್ನು ಹೇಳುವ ಚಿಕ್ಕ ಚಿಕ್ಕ ಫಲಕಗಳು, ಆಯಾ ಪ್ರದೇಶಗಳ ಚಿತ್ರ ಸಹಿತ ನಕ್ಷೆಗಳು ಎಲ್ಲೆಲ್ಲೂ ಕಾಣಸಿಗುತ್ತವೆ. ಜೊತೆಗೆ ಜೀವ ವೈವಿಧ್ಯದ ರಕ್ಷಣೆಗೂ ಬಹಳ ಮಹತ್ವ ನೀಡಿದ್ದಾರೆ. ನ್ಯಾಷನಲ್ ಟ್ರಸ್ಟ್ ವಿಶಾಲವಾದ ಭೂಮಿಯನ್ನು ಕೊಂಡುಕೊಂಡು ಇರುವ ನೈಸರ್ಗಿಕ ಸಂಪತ್ತನ್ನು ಕಾಪಾಡುತ್ತದೆ. ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುವುದನ್ನು ತಡೆದರೆ ಸಾಕು ಆ ಪ್ರದೇಶದ ಜೀವ ವೈವಿಧ್ಯ ಮತ್ತು ಪ್ರಕೃತಿ ಸಂಪತ್ತು ಉಳಿಯುತ್ತದೆ. ಭಾರತದಂತಹ ಅದ್ಭುತ ಜೀವವೈವಿಧ್ಯದ ತಾಣದಿಂದ ಬಂದ ನನ್ನಂತಹವರಿಗೆ ಇವರ ಜೀವ ವೈವಿಧ್ಯ ಸಂರಕ್ಷಣೆಯ ಕಾನೂನುಗಳು ಸ್ವಲ್ಪ ಅತಿ ಎನಿಸುವುದುಂಟು. ಆದರೆ ಪಶ್ಚಿಮ ಘಟ್ಟಗಳಂತಹ ಅಮೂಲ್ಯ ಜೀವ ವೈವಿಧ್ಯದ ಬಿಸಿ ತಾಣಗಳ (Hot spot) ಸಂರಕ್ಷಣೆಯ ಬಗ್ಗೆ ನಮ್ಮ ಸರ್ಕಾರಗಳೇ ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವುದು, ಶ್ರೀ ಸಾಮಾನ್ಯರು ಸ್ವಲ್ಪವೂ ಸಹಕರಿಸದಿರುವುದು ಅತ್ಯಂತ ಆತಂಕದ ಸಂಗತಿ. ಅಲ್ಲದೆ ಅನೇಕ ಶತಮಾನಗಳ ಸಾಂಸ್ಕೃತಿಕ ಚರಿತ್ರೆಯಿರುವ ನಮ್ಮ ಸಾವಿರಾರು ದೇವಸ್ಥಾನಗಳು, ಸಾಂಸ್ಕೃತಿಕ ತಾಣಗಳ ರಕ್ಷಣೆಯ ಬಗ್ಗೆ ಕಾಳಜಿ ವಹಿಸದೇ ಇರುವುದು ವಿಷಾದನೀಯ. ಹೊರಗಿನಿಂದ ಬಂದ ದಾಳಿಕೋರರು ನಮ್ಮ ದೇಶದ ಸಾಂಸ್ಕೃತಿಕ ತಾಣಗಳನ್ನು ನಾಶಪಡಿಸಿದರೆಂದು ನಿರಂತರವಾಗಿ ದೂರುತ್ತಲೇ ಕುಳಿತುಕೊಳ್ಳುವುದಕ್ಕಿಂತ ಇರುವ ಸಾಂಸ್ಕೃತಿಕ ತಾಣಗಳ ರಕ್ಷಣಾ ಕಾರ್ಯವನ್ನು ಮುತುವರ್ಜಿಯಿಂದ ಮಾಡುವುದು ಹೆಚ್ಚು ಲಾಭದಾಯಕವಾದೀತು.
ಬ್ರಿಟಿಷರಂತೆ ಯೂರೋಪಿನ ಇತರ ಕೆಲವು ದೇಶದ ಜನರು ತಮ್ಮ ಪಾರಂಪರಿಕ ಕಟ್ಟಡಗಳನ್ನು ಬಹುವಾಗಿ ಪ್ರೀತಿಸುತ್ತಾರೆ. ನೆದರ್ಲ್ಯಾಂಡ್ ದೇಶದ ಆಮ್ ಸ್ಟರ್ ಡ್ಯಾಮ್ ನ ಕಟ್ಟಡಗಳಂತೂ ಇನ್ನೂರು-ಮುನ್ನೂರು ವರ್ಷ ಹಳೆಯವು. ಈ ಜನ ತಮ್ಮ ಹಳೆಯ ಮನೆಗಳನ್ನು ಅವು ಇದ್ದ ಹಾಗೆಯೇ ಕಾಪಾಡಿಕೊಂಡು ಬರಲು ಕಂಕಣ ಬದ್ಧರಾಗಿರುವಂತೆ ಕಂಡುಬರುತ್ತದೆ. ಆಮ್ ಸ್ಟರ್ ಡ್ಯಾಮ್ ನ ಒಂದು ಕಡೆ ಒಂದರ ಪಕ್ಕ ಒಂದು ಇರುವ ಮೂರು ಮನೆಗಳು ವಾಲಿಕೊಂಡಿವೆ. ಇವುಗಳು ಬಹುಶಃ ಮುನ್ನೂರು ವರ್ಷ ಹಳೆಯ ಮನೆಗಳು. ಇವುಗಳನ್ನು “ಡ್ಯಾನ್ಸಿಂಗ್ ಹೌಸಸ್” ಎನ್ನುತ್ತಾರೆ. ಕೆಲವು ಕಡೆ ನಾಲ್ಕು ಮಹಡಿ ಏರಿ ಹೋಗಬೇಕು. ಆದರೆ ಅವರಿಗೆ ಲಿಫ್ಟ್ ಹಾಕಿಸಿಕೊಳ್ಳಲು ಸರ್ಕಾರ ಅನುಮತಿ ಕೊಡುವುದಿಲ್ಲ. ಏಕೆಂದರೆ ಇಂತಹ ಯಾವುದೇ ಪುನರ್ ನವೀಕರಣ ಕಾರ್ಯಕ್ಕೆ ಹಳೆಯ ರಚನೆಗಳನ್ನು ಒಡೆಯಬೇಕಲ್ಲ! ಹಾಗಾಗಿ ಈ ಇಕ್ಕಾಟ್ಟಾದ ಮೆಟ್ಟಿಲುಗಳನ್ನು ಹತ್ತಿಯೇ ಹೋಗಬೇಕು. ಫ್ರಾನ್ಸ್ ಆಧುನಿಕ ನಗರವಾದರೂ ಅಲ್ಲಿಯೂ ಸಹ ನೂರಾರು ಹಳೆಯ ಕಟ್ಟಡಗಳನ್ನು ಉಳಿಸಿಕೊಂಡಿದ್ದಾರೆ. ಯೂರೋಪಿನ ವಿಶೇಷವೆಂದರೆ ಆಧುನಿಕತೆ ಅವರ ಸಾಂಸ್ಕೃತಿಕ ಸ್ಮೃತಿಗಳಿಗೆ, ಸಾಂಸ್ಕೃತಿಕ ಅಸ್ಮಿತೆಗೆ ಮಾರಕವಾಗಿಲ್ಲ. ಆದರೆ ನಮ್ಮ ದೇಶದಲ್ಲ್ಲೋ ಆಧುನಿಕತೆ ಮತ್ತು ಸಾಂಸ್ಕೃತಿಕ ಅಸ್ಮಿತೆಗಳು ಒಂದಕ್ಕೊಂದು ವಿರುದ್ಧವೋ ಎಂಬಂತೆ ಭಾವಿಸುತ್ತೇವೆ. ಆಧುನಿಕತೆ ಎಂಬುದು ಹಳೆಯದೆಲ್ಲದರ ಮೇಲೆ ಕಟ್ಟಿದ ಗೋರಿಯೋ ಎಂಬಂತೆ ನಾವು ವರ್ತಿಸುತ್ತೇವೆ.
ಭಾರತ ಬಹು ಸಂಸ್ಕೃತಿಗಳ ದೇಶ. ನಾಲ್ಕು ಪ್ರಮುಖ ಜಾಗತಿಕ ಧರ್ಮಗಳ ಉಗಮಸ್ಥಾನ. ವಿಭಿನ್ನ ಸಂಸ್ಕೃತಿಗಳು, ಉಪಸಂಸ್ಕೃತಿಗಳು, ನೂರಾರು ಆಚಾರ ವಿಚಾರಗಳು ಒಟ್ಟಿಗೆ ಸಾವಿರಾರು ವರ್ಷಗಳ ಪರ್ಯಂತ ಬೆಳೆದು ಬಂದ ದೇಶ. ಅನ್ಯ ವಿಚಾರಗಳು, ಅನ್ಯ ಸಂಸ್ಕೃತಿಯ ಪದ್ಧತಿ ಆಚರಣೆಗಳು ಈ ದೇಶದಲ್ಲಿ ಅಕ್ಕಪಕ್ಕದಲ್ಲೇ ಇರುವುದನ್ನು ನೋಡಬಹುದು. ಪ್ರತಿರೋಧಗಳು ಬಹಳ ಕಡಿಮೆ ಎಂದೇ ಹೇಳಬಹುದು. ಈ ಅನಿವಾರ್ಯವಾದ ಸಹ ಬಾಳ್ವೆ ಭಾರತೀಯರಿಗೆ ಅಪಾರವಾದ ತಾಳ್ಮೆ, ಸಹಿಷ್ಣುತೆಯ ಮನೋಧರ್ಮವನ್ನು ಕೊಟ್ಟಿದೆ. ಏಕರೂಪ ಸಂಸ್ಕೃತಿಯ ವಾತಾವರಣ ‘ಅನ್ಯ’ ರನ್ನು ಸಹಿಸುವ ಸಹಿಷ್ಣುತೆಯ ಮನೋಧರ್ಮವನ್ನು ನೀಡಲಾರದು. ಸಾವಿರಾರು ವರ್ಷಗಳ ಪರ್ಯಂತ ‘ಅನ್ಯ’ರಾರೂ ಇಲ್ಲದ, ನಮ್ಮವರಷ್ಟೇ ಇರುವ ವಾತಾವರಣದಲ್ಲಿ ಬೆಳೆದ ಮನೋಧರ್ಮ ‘ಅನ್ಯ’ ಎಂಬ ಎಲ್ಲವನ್ನೂ ಗುಮಾನಿಯಿಂದಲೇ ನೋಡುವುದನ್ನು ಅಭ್ಯಾಸಮಾಡಿಕೊಂಡಿರುತ್ತದೆ. ಭಾರತೀಯ ಪರಿಸರದ ಸಹಿಷ್ಣುತೆಯ ಮನೋಧರ್ಮವನ್ನು ಸ್ವಾಮಿ ವಿವೇಕಾನಂದರು ಸುಮಾರು ನೂರ ಮೂವತ್ತು ವರ್ಷದ ಹಿಂದೆಯೇ ತಮ್ಮ ಭಾಷಣದಲ್ಲಿ ಹೀಗೆ ಹೇಳಿದರು. “I am proud to belong to religion which has taught the world both tolerance and universal acceptance. We believe not only in universal toleration but we accept all religions as true. I am proud to belong to a nation which has sheltered the persecuted and the refugees of all religions and all nations of the earth.
ಇಂದಿನ ಭಾರತದ ರಾಜಕೀಯ ಸಾಮಾಜಿಕ ಪರಿಸರದಲ್ಲಿ “ಅನ್ಯರು –ನಮ್ಮವರು ಎಂಬ ಭಿನ್ನತೆಯ ಮನೋಧರ್ಮವನ್ನು ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ದೌರ್ಭಾಗ್ಯವೇ ಸರಿ. ಈ ಭಿನ್ನತೆಯ ಮನೋಧರ್ಮ ನಮ್ಮ ಸಹಜ ಧರ್ಮವಲ್ಲ ಎಂಬುದನ್ನು ಎಂಟನೆಯ ಶತಮಾನದ ಕವಿರಾಜ ಮಾರ್ಗದ ಈ ಸಾಲುಗಳನ್ನು ಗಮನಿಸಿದರೆ ತಿಳಿಯುತ್ತದೆ” “ಕಸವರಮೆಂಬುದು ನೆರೆಸೈರಿಸಲಾರ್ಪೊಡೆ ಪರವಿಚಾರಮುಮಂ, ಧರ್ಮಮುಮಂ” ಕಸವರ ಎಂದರೆ ಚಿನ್ನ ಅಥವಾ ಸಂಪತ್ತು. ಇದು ಯಾವುದು ಎಂದರೆ ಪರವಿಚಾರವನ್ನು, ಪರಧರ್ಮದ ಸಾನಿಧ್ಯವನ್ನು ಸಹಿಸಿಕೊಳ್ಳುವುದು ಅಥವಾ ಸಹಿಷ್ಣುತೆಯೇ ಆಗಿದೆ ಎಂಬುದು ಈ ಸಾಲುಗಳತಾತ್ಪರ್ಯ. ಇಂದು ಬ್ರಿಟನ್ ಮತ್ತು ಯೂರೋಪಿನ ಅನೇಕ ದೇಶಗಳು ವಲಸಿಗರನ್ನು ಉದಾರವಾಗಿ ಸ್ವೀಕರಿಸುತ್ತಿರುವುದು ಆದರಣೀಯ. ಯಾವುದೇ ಜನಾಂಗವಾಗಲಿ, ದೇಶವಾಗಲಿ ತನ್ನ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿ, ದ್ವೀಪ ದೋಪಾದಿಯಲ್ಲಿ ತಾನಷ್ಟೇ ಸುಖ ಸಮೃದ್ಧಿಯಲ್ಲಿ ಬದುಕಲು ಸಾಧ್ಯವಿಲ್ಲ. ಎಲ್ಲರನ್ನು, ಎಲ್ಲವನ್ನೂ ಒಳಗೊಳ್ಳುವುದೇ ಬದುಕು. ನಿಧಾನವಾಗಿಯಾದರೂ ಈ ಸತ್ಯಕ್ಕೆ ತೆರೆದುಕೊಳ್ಳುತ್ತಿರುವ ಪಾಶ್ಚಾತ್ಯ ಜಗತ್ತು ಸರಿಮಾರ್ಗದಲ್ಲೇ ಇದೆ ಎಂಬುದು ನನ್ನ ಅಭಿಪ್ರಾಯ.
- ಜಿ. ಎಸ್. ಜಯದೇವ್
* * *
ಗ್ರೇಟ್ ಬ್ರಿಟನ್ನಿಗೆ ತುರಾಯಿಯಂತಿರುವ ಸ್ಕಾಟ್ ಲ್ಯಾನ್ಡ್, ಪ್ರಕೃತಿ ಸೌಂದರ್ಯಕ್ಕೂ ಶಿಖರಪ್ರಾಯವಾಗಿದೆ ಈ ದೇಶಕ್ಕೆ ಎನ್ನುವುದರಲ್ಲಿ ಸಂಶಯವಿಲ್ಲ. ಇಲ್ಲಿನ ಉತ್ತರದ ನಗರವಾದ ಇನ್ವರ್ನೆಸ್ ನ ಉತ್ತರಕ್ಕೆ ಗುಡ್ಡ ಹಾಗು ಸರೋವರಗಳೇ (ಇಲ್ಲಿ ಇದಕ್ಕೆ ಲಾಕ್ ಎಂದು ಕರೆಯುತ್ತಾರೆ) ತುಂಬಿರುವ ಹರವಾದ ಭೂ ಪ್ರದೇಶ ಪ್ರಕೃತಿ ಆರಾಧಕರಿಗೆ, ಚಾರಣಿಗರಿಗೆ ಆತ್ಮೀಯವಾಗಿರುವುದರಲ್ಲಿ ಆಶ್ಚರ್ಯವಿಲ್ಲ. ಈ ಭೂ ಪ್ರದೇಶವನ್ನು ಸುತ್ತಿರುಗಲು ಸ್ಕಾಟ್ ಲ್ಯಾನ್ಡ್ ರೂಟ್ ೫೦೦ ಎಂಬ ರಸ್ತೆಯನ್ನು ನಿರ್ಮಿಸಿ, ಇಲ್ಲಿನ ಪ್ರವಾಸಿ ಇಲಾಖೆಯ ಮುಖಾಂತರ ಪ್ರಚಲಿತಗೊಳಿಸಲಾಗಿದೆ. ಈ ರಸ್ತೆಗೆ ಹಲವು ಟಿಸಿಲುಗಲ್ಲಿದ್ದು, ಕೆಲವೇ ದಿನಗಳಿಂದ, ತಿಂಗಳುಗಳ ಕಾಲ ಈ ಭಾಗದ ವಿಹಂಗಮ ನೋಟವನ್ನೋ, ವಿವರವಾದ ಪರಿಚಯವನ್ನೋ ನಮಗಾದಷ್ಟು ಮಾಡಿಕೊಳ್ಳ ಬಹುದು. ಪತ್ರಿಕೆಯೊಂದರ ಪ್ರವಾಸೀ ವಿಭಾಗದಲ್ಲಿ ಈ ಪಯಣ ಜಗತ್ತಿನ ಅತಿ ಸುಂದರ ಹತ್ತು ರಸ್ತೆ ಪಯಣಗಲ್ಲಿ ಒಂದು ಎಂದು ಓದಿದ್ದೆ. ಹಿತ್ತಲಲ್ಲೇ ರಸ್ತೆ ಪಯಣಕ್ಕೆ ಇಂತಹ ಅವಕಾಶವಿರುವಾಗ ಹೋಗಿಯೇ ಬಿಡೋಣ ಎಂದು ನನ್ನ ಗೆಳೆಯರ ಮುಂದೆ ಪ್ರಸ್ತಾವಿಸಿದೆ. ಗೆಳೆಯರಾದ ಕೇಶವ ಕುಲಕರ್ಣಿ ಹಾಗು ದೇವ್ ಪೈ ಪರಿವಾರದೊಂದಿಗೆ ಹಿಂದೆ ಕೆಲವು ಪ್ರವಾಸಗಳನ್ನು ಜೊತೆಯಲ್ಲಿ ಮಾಡಿದ್ದೆವು. ನಮ್ಮ ಅಭಿರುಚಿಗಳು, ಮಕ್ಕಳ ನಡುವಿನ ಗೆಳೆತನಗಳೂ ಈ ಪ್ರವಾಸಗಳಿಗೆ ಪೂರಕವಾಗಿದ್ದು ಅನುಕೂಲವೇ ಆಗಿತ್ತು. ಇನ್ನೊಬ್ಬ ಗೆಳೆಯ ದಿನೇಶ್ ಯಾವುದೋ ಕಾರಣಕ್ಕಾಗಿ ನಮಗೆ ಸಾಥ್ ನೀಡಲಾಗದು ಎಂದು ಕೈಕೊಟ್ಟ.
ಇಂತಹ ಪ್ರಯಾಣ ಮಾಡಲು ಕೆಲವು ಮುಹೂರ್ತಗಳನ್ನು ಹಾಕಿಕೊಳ್ಳುವುದು ಅವಶ್ಯ ಎಂಬುದು ನಮ್ಮ ಅನುಭವ. ಪ್ರಯಾಣದ ರಸ್ತೆಯ ಸಮೀಕ್ಷೆಯಾಗಬೇಕು. ಈಗ ಅಂತರ್ಜಾಲದಲ್ಲೇ ಈ ಸಮೀಕ್ಷೆ ಸುಲಭ ಸಾಧ್ಯ. ದಾರಿ ಗುರುತು ಹಾಕಿಕೊಂಡರೆ ಸಾಕೇ? ಆ ರಸ್ತೆಯಗುಂಟ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಮಾಹಿತಿ ಬೇಕು; ಇಳಿದುಕೊಳ್ಳಲು ವಸತಿ ಗೃಹಗಳ ವ್ಯವಸ್ಥೆಯಾಗಬೇಕು. ಎಲ್ಲಕ್ಕಿಂತಲೂ ಹೆಚ್ಚು ಪ್ರವಾಸದಗುಂಟ ಮೆಲ್ಲಲು, ಮೆಲಕು ಹಾಕಲು ಪ್ರಶಸ್ತವಾದ ಜಾಗಗಳ ಆಯ್ಕೆಯೂ ಆಗಬೇಕು. ಇದ್ಕಕೆಂದೇ ಒಂದು ದಿವಸವನ್ನು ಮೀಸಲಾಗಿಡುತ್ತೇವೆ. ಮೂರು ಲ್ಯಾಪ್ ಟಾಪ್ ಗಳನ್ನು ಇಟ್ಟುಕೊಂಡು, ಚಹಾ ಕುಡಿಯುತ್ತ, ವಿವರವಾದ ಯೋಜನೆ ಸುಮಾರು ಮೂರು ನಾಲ್ಕು ತಿಂಗಳುಗಳ ಮೊದಲು ತಯಾರಾಗುತ್ತದೆ. ವಸತಿ ಗೃಹಗಳ ಆರಕ್ಷಣೆ ಈ ಹಂತದಲ್ಲೇ ಮುಗಿದುಹೋಗುತ್ತದೆ. ಪ್ರೇಕ್ಷಣೀಯ ಸ್ಥಳಗಳ ಆಯ್ಕೆ ರಮಣೀಯರು ಉತ್ಸಾಹದಿಂದ ಮಾಡುವುದರಿಂದ, ಅವರಿಗೆ ಅದರ ಜವಾಬ್ದಾರಿ ಕೊಡುವುದರಿಂದ ಪ್ರವಾಸ ಸುರಳೀತವಾಗುತ್ತದೆ ಎಂಬುದು ನಮ್ಮ ಅನುಭವ.
ಮೇ ತಿಂಗಳ ಕೊನೆಯ ಬ್ಯಾಂಕ್ ಹಾಲಿಡೇ ವಾರಾಂತ್ಯದಲ್ಲಿ ಈ ಪ್ರವಾಸ ಕೈಕೊಳ್ಳುವುದು ಎಂಬ ನಿರ್ಧಾರ ಮಾಡಿದೆವು. ಮಕ್ಕಳ ವಾರ್ಷಿಕ ಪರೀಕ್ಷೆ ಮುಗಿದಿರುವುದರಿಂದ ಅವರಿಗೂ ಶಾಲಾ ಕೆಲಸದಿಂದ ಮನಸ್ಸು ನಿರಾಳವಾಗಿರುವುದು ಇದಕ್ಕೆ ಇನ್ನೊಂದು ಕಾರಣವಾಗಿತ್ತು. ಹೊರಡುವ ಹಿಂದಿನ ದಿನ ರಾತ್ರಿ ಎಲ್ಲರು ಡಾರ್ಬಿಯಲ್ಲಿರುವ ನಮ್ಮ ಮನೆಯಲ್ಲಿ ಒಟ್ಟಾಗುವುದು ಎಂದು ನಿಶ್ಚಯಿಸಿದೆವು. ಪ್ರವಾಸದ ದಿನ ಎರಡು ಕಾರುಗಳಲ್ಲಿ ಹತ್ತು ಜನ ಡಾರ್ಬಿಯಿಂದ ಇನ್ವರ್ನೆಸ್ಸಿಗೆ ಪ್ರಯಾಣ ಮಾಡಿ ತಂಗುವುದು ನಮ್ಮ ಯೋಜನೆ. ಎರಡನೇ ದಿನ ಬೆಳಿಗ್ಗೆ ನಗರಕ್ಕೊಂದು ಸುತ್ತು ಹಾಕಿ, ಗ್ಲೆನ್ ಮೊರಂಜಿ ವ್ಹಿಸ್ಕಿ ಭಟ್ಟಿ ಕೇಂದ್ರಕ್ಕೆ ಭೇಟಿ. ಅದಾದಮೇಲೆ ಡನ್ರೋಬಿನ್ ಕಾಸಲ್ ನೋಡಿ, ತುತ್ತ ತುದಿಯಲ್ಲಿರುವ ಹಳ್ಳಿ ಜಾನ್ ಓ ಗ್ರೋಟ್ಸ್ ನ್ನು ಕಂಡು ಪಕ್ಕದ ಹಳ್ಳಿಯಲ್ಲಿ ತಂಗುವುದೆಂದು ನಿಶ್ಚಯಿಸಿದೆವು. ಮೂರನೇ ದಿನ ಸ್ಕಾಟ್ ಲ್ಯಾನ್ಡ್ ನ ಉತ್ತರ ತೀರದಗುಂಟ ಚಲಿಸಿ, ಪಶ್ಚಿಮ ಭಾಗದಲ್ಲಿ ಕೆಳಗಿಳಿದು ಉಲ್ಲಾಪೂಲ್ ಎಂಬ ಊರಿನಲ್ಲಿ ಮುಕ್ಕಾಂ ಹಾಕಲು ವಸತಿ ಗೃಹದ ಬುಕ್ಕಿಂಗ್ ಮಾಡಿದೆವು. ನಾಲ್ಕನೇ ದಿನ ಉಲ್ಲಾಪೂಲ್ ಹತ್ತಿರದ ನದಿಯ ಕಣಿವೆಯಲ್ಲಿ ನಿರ್ಮಿಸಿರುವ ಪ್ರಕೃತಿಧಾಮವನ್ನು ವೀಕ್ಷಿಸಿ ಮನೆಗೆ ಮರಳುವುದೆಂದು ನಿರ್ಧರಿಸಿದೆವು. ಪ್ರವಾಸದ ಹಿಂದಿನ ದಿನ ನಮ್ಮನೆಯಲ್ಲಿ ಹಬ್ಬದ ವಾತಾವರಣ. ಬೆಳಗ್ಗೆ ಬೇಗ ಎದ್ದು ಹೊರಟಾಗ, ಮಕ್ಕಳ ಕಣ್ಣಲ್ಲಿನ್ನೂ ಜೋಂಪು. ನಮ್ಮಲ್ಲಿಂದ ಸ್ಕಾಟ್ ಲ್ಯಾನ್ಡ್ ಗೆ M6 ಮುಖ್ಯ ಹೆದ್ದಾರಿ. ಮುಕ್ಕಾಲು ಗಂಟೆಯಲ್ಲಿ ಗೆಳೆಯ ದಿನೇಶನ ಮನೆ. ಅಲ್ಲಿಗೇ ನಮ್ಮ ಬೆಳಗಿನ ತಿಂಡಿಗಾಗಿ ದಾಳಿ ಮಾಡುವುದಾಗಿ ಮುನ್ಸೂಚನೆ ಕೊಟ್ಟಿದ್ದೆವು. ತಲುಪಿದಾಗ ಎಲ್ಲರ ಮೆಚ್ಚಿನ ಶಲನ್ ಮಾಡಿದ ಬಿಸಿ ಬಿಸಿ ಮಂಗಳೂರು ಬನ್ಸ್, ಖಡಕ್ ಚಹಾ ನಮ್ಮನ್ನು ಕಾಯುತ್ತಿತ್ತು. M6 ಲ್ಯಾನ್ಕಾಸ್ಟರ್ ದಾಟಿದ ಮೇಲೆ, ಗುಡ್ಡಗಳ ನಡುವೆ ಬಳಕುತ್ತ, ತಬ್ಬಿಕೊಂಡು ಸಾಗುವಾಗ ಬೇಂದ್ರೆ ಅಜ್ಜನ “ಹರನ ತೊಡೆಯಿಂದ ನುಸುಳಿ ಬಾ” ಎಂಬ ಸಾಲು ನೆನಪಾಗುತ್ತದೆ. ಹೆದರ್ ಪೊದೆಗಳ ಹೊದಿಕೆಯಲ್ಲಿ ಮಲಗಿರುವ ನುಣುಪಾದ ಬೆಟ್ಟಗಳ ಸೌಂದರ್ಯ ಹೆದರ್ ಹೂ ಬಿಟ್ಟಾಗ ನೂರ್ಪಾಲು ಹೆಚ್ಚಾಗುತ್ತದೆ. ಹೆದ್ದಾರಿಯಲ್ಲಿ ಸಿಗುವ ಆನಂಡೇಲ್ ಸರ್ವೀಸ್ ಸ್ಥಾನ ಪ್ರಯಾಣಿಗರ ಪಾಲಿಗೆ ಓಯಸಿಸ್. ಇಲ್ಲಿರುವ ಕೆರೆಯನ್ನು ನೋಡುತ್ತಾ, ಹಬ್ಬಿದ ಹಸಿರನ್ನು ಆಸ್ವಾದಿಸುತ್ತ, ಕಾಫಿ ಹೀರುತ್ತ, ರಸ್ತೆಯ ಏಕತಾನತೆಯನ್ನು ಮರೆಯಬಹುದು.
ಮಧ್ಯಾಹ್ನದ ಊಟದ ಸಮಯಕ್ಕೆ ಗ್ಲ್ಯಾಸ್ಗೋ ನಗರದ ಬುಡ ತಲುಪಿದ್ದೆವು. ಊಟದ ನಂತರ ಒಂದು ಚಿಕ್ಕ ನಿದ್ದೆ ಬೇಕೆಂದು ದೇವ್ ನ ಮನಸ್ಸು ಬಯಸುತ್ತದೆ, ಡ್ರೈವ್ ಮಾಡುವಾಗ ಜೋಂಪು ಹತ್ತದಿರಲೆಂದು. ಆತ ಕಾರಿನಲ್ಲಿ ಪವಡಿಸಿದರೆ, ನಮ್ಮ ಕ್ರಿಕೆಟ್ ಹುಚ್ಚಿನ ಚಿಣ್ಣರು (ಕೇಶವ್ ಈ ವಿಷಯದಲ್ಲಿ ಚಿಣ್ಣನೇ) ಸರ್ವಿಸ್ ಸ್ಟೇಷನ್ ಪಕ್ಕದ ಹುಲ್ಲು ಹಾಸಿನಲ್ಲಿ ಆಡಿ ಮೈ ಕೈ ಚುರುಕಾಗಿಸಿಕೊಂಡರು. ಗ್ಲಾಸ್ಗೋ ಸಮೀಪಿಸುತ್ತಿದ್ದಂತೆ ಕಾಣುವ ಗಾಳಿ ಗಿರಣಿಗಳ ಮಂದೆ ಪರ್ಯಾಯ ವಿದ್ಯುಚ್ಛಕ್ತಿ ಕೊಯ್ಲಿನ ಅನುಭವ, ನಮ್ಮ ಕಾರಿನ ಪ್ರದೂಷಣೆ ಇವನ್ನೆಲ್ಲ ತೂಗಿಸಿ ನೋಡುವ ಅವಕಾಶ ಮಾಡಿಕೊಡುತ್ತದೆ. ಹಾಡುಗಳನ್ನು ಕೇಳುತ್ತ, ಸ್ಕಾಟ್ ಲ್ಯಾನ್ಡ್ ನ ಹಸಿರಿನ ಹಾವೇ ಕುಡಿಯುತ್ತ ಸ್ಟರ್ಲಿಂಗ್ ನಗರವನ್ನು ದಾಟುತ್ತಿದ್ದಂತೆ ಹೈಲ್ಯಾನ್ಡ್ ಘಟ್ಟ ಶುರುವಾಗುತ್ತದೆ. ಕಣಿವೆಯ ಬುಡದಲ್ಲಿ ತೆವಳುವ ನದಿಗಳು, ಪಕ್ಕದಲ್ಲಿ ಮಲಗಿರುವ ರೈಲಿನ ಹಳಿಗಳು, ಥಟ್ಟನೆ ಎದುರಾಗುವ ಮೋಡದ ತುಣುಕುಗಳು, ಆಗಾಗ ಮುಖಕ್ಕೆ ಬಡಿಯುವ ತುಂತುರು ಹನಿಗಳು ಯಾವುದೇ ಅರಸಿಕನನ್ನೂ ಭಾವುಕನಾಗಿಸುವ ದೃಶ್ಯಗಳು.
(ನಕ್ಷೆ ಕೃಪೆ : ವಿಕಿಪೀಡಿಯಾ)
ನಮ್ಮ ಮೂಲ ಧ್ಯೇಯ ರೂಟ್ ೫೦೦ನ ಅನ್ವೇಷಣೆ ಯಾಗಿದ್ದರಿಂದ, ಇನ್ವರ್ನೆಸ್ ನಗರದ ಕಾಸಲ್ ದರ್ಶನ ಮುಗಿಸಿ ಟೈನ್ ಎಂಬಲ್ಲಿರುವ ಗ್ಲೆನ್ ಮೊರಂಜಿ ವ್ಹಿಸ್ಕಿ ಭಟ್ಟಿಗೆ ಹೊರಟೆವು. ಗ್ಲೆನ್ ಮೊರಂಜಿ ವ್ಹಿಸ್ಕಿಯ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ವಿಶಿಷ್ಟ ಹಳದಿ ಬಣ್ಣದ ಲೇಬಲ್ ಇದರ ಗುರುತಿನ ಚೀಟಿ, ವ್ಹಿಸ್ಕಿ ಅಭಿಮಾನಿಗಳಿಗೆ ಚಿರಪರಿಚಿತ. ಇದರ ಸುತ್ತಲೂ ಸುಂದರ ಉದ್ಯಾನವನವಿದೆ. ನಾವು ಹೋದ ದಿನ ಇದು ಮುಚ್ಚಿದ್ದರಿಂದ ಭಟ್ಟಿಯ ಒಳಗಡೆ ಹೋಗುವ, ವ್ಹಿಸ್ಕಿಯ ರುಚಿ ಅನುಭವಿಸುವ ಅವಕಾಶದಿಂದ ವಂಚಿತರಾದೆವು. ಮಕ್ಕಳು ಭಟ್ಟಿಯ ಹೊರಗಿನ ಹುಲ್ಲಿನ ದಿಬ್ಬದಿಂದ ಉರುಳಿ ಮಜಾ ತೆಗೆದುಕೊಂಡರು. ಇಲ್ಲಿಗೆ ಬರುವ ಹಾದಿಯಲ್ಲಿ ವಿಶೇಷವಾದದ್ದೇನೂ ಕಾಣಲಿಲ್ಲ. ಗ್ಲೆನ್ ಮೊರಂಜಿಯಿಂದ ಮುಂದಿನ ಹಾದಿ ಮನಮೋಹಕವಾಗಿತ್ತು. ಬಲ ಭಾಗದಲ್ಲಿ ಸಮುದ್ರ ಮರಗಳ ನಡುವೆ ಕಣ್ಣಾಮುಚ್ಚಾಲೆ ಆಡುತ್ತ ತುಂಟ ನಗೆ ಬೀರುತ್ತಿತ್ತು. ಮತ್ತೆ, ಥಟ್ಟನೆ ಖಾರಿಯಾಗಿ ರಸ್ತೆಗೆ ಅಡ್ಡಾಗಿ ಮಲಗುತ್ತಿತ್ತು. ಇದೇನು ಅಲೆಗಳ ಅಬ್ಬರದ ಸಮುದ್ರವಲ್ಲ, ನಮ್ಮಲ್ಲಿ ನದಿಯೊಂದು ಅಡ್ಡ ಬಂದಂತನಿಸುತ್ತದೆ.
(ಖಾರಿಯ ನೋಟ)
(ಗ್ಲೇನ್ ಮೊರಂಜಿ ಭಟ್ಟಿಯ ಪ್ರವೇಶದ್ವಾರ)
ಡನ್ರೋಬಿನ್ ಕಾಸಲ್ : ಸದರ್ಲೆಂಡ್ ಎಂಬ ವಂಶಕ್ಕೆ ಸೇರಿದ ಈ ಅರಮನೆ ರೂಟ್ ೫೦೦ ರಲ್ಲಿರುವ ಎರಡು ಪ್ರಮುಖ ಮಾನವ ನಿರ್ಮಿತ ರಚನೆಗಳಲ್ಲಿ ಒಂದೆಂಬುದು ನನ್ನ ಅಭಿಪ್ರಾಯ. ಡಿಸ್ನಿ ಅರಮನೆಯನ್ನು ಹೋಲುವ ರಚನೆ ಇದಾಗಿದ್ದು, ಯಾವುದೇ ಪಾಶ್ಚಾತ್ಯ ಪಾಳೇಗಾರರ ನಿವಾಸದಂತೇ ಇದೆ. ೧೫ನೇ ಶತಮಾನದಲ್ಲಿ ನಿರ್ಮಿತ ಅರಮನೆಯ ಒಳ ಹೊರಗನ್ನು ನೋಡುವ ಅವಕಾಶವಿದೆ. ದಿಬ್ಬದ ಮೇಲಿರುವ ಅರಮನೆ, ಸಮುದ್ರ ವೀಕ್ಷಣೆಗೆ ಆಯಕಟ್ಟಿನ ಜಾಗದಲ್ಲಿದೆ. ಬುಡದಲ್ಲಿರುವ ಫ್ರೆಂಚ್ ಪ್ರಭಾವಿತ ತೋಟ ಹಸಿರಾಗಿ ನಳನಳಿಸುತ್ತಿತ್ತು. ಇಲ್ಲಿ ನಡೆಯುವ ಹದ್ದು-ಗಿಡುಗಗಳ ಪ್ರದರ್ಶನ ನಮಗೆ ಈ ಭವ್ಯ ಪಕ್ಷಿಗಳನ್ನು ಮುಟ್ಟಿ ಮಾತಾಡಿಸುವ ಅವಕಾಶ ಮಾಡಿಕೊಟ್ಟಿತು, ಮಕ್ಕಳಿಗೆ ಇದು ಉತ್ತಮ ಅನುಭವ.
ಡನ್ರೋಬಿನ್ ಕಾಸಲ್ ನಿಂದ ಜಾನ್ ಓ ಗ್ರೋಟ್ಸ್ ಗೆ ಹೋಗುವ ಹಾದಿ ರುದ್ರರಮಣೀಯವಾದದ್ದು. ರಸ್ತೆಯ ಬಲಬದಿಗೆ ಆಳವಾದ ಪ್ರಪಾತದ ಬುಡದಲ್ಲಿ ಸಮುದ್ರ ಬಾಯ್ತೆರೆದು ಕಾಯುತ್ತಿರುತ್ತದೆ. ಈ ರಸ್ತೆಗಳ ತಿರುವುಗಳು ನನಗೆ ಖಂಡಾಲಾ ಘಾಟಿಯನ್ನು ನೆನಪಿಸಿದವು. ಮಧ್ಯದಲ್ಲಿ ವಿಕ್ ಎಂಬ ಪುಟ್ಟ ಊರೊಂದು ಸಿಗುತ್ತದೆ. ಇಲ್ಲಿ ಬ್ರಿಟನ್ನಿನ ಉತ್ತರ ತುದಿಯ ಆಸ್ಪತ್ರೆ ಇದೆ (ಶೆಟ್ ಲ್ಯಾನ್ಡ್ ಆಸ್ಪತ್ರೆ ದ್ವೀಪ ಸಮೂಹಗಳಲ್ಲಿದ್ದು, ವಿಕ್ ನ ಆಸ್ಪತ್ರೆ ಬ್ರಿಟನ್ನಿನ ಮುಖ್ಯ ಭಾಗದ ಉತ್ತರ ತುದಿಯಲ್ಲಿದೆ). ೧೯೯೯ ರಲ್ಲಿ ಉದ್ಯೋಗಾರ್ಥಿಯಾಗಿ ಗುಜರಾಯಿಸಿದ ನೂರಾರು ಆಸ್ಪತ್ರೆಗಳ ಲಿಸ್ಟಿನಲ್ಲಿ ವಿಕ್ ಆಸ್ಪತ್ರೆಯೂ ಇದ್ದದ್ದು ನೆನಪಾಯಿತು. ಆಗ, ನಾನೊಮ್ಮೆ ಈ ಊರನ್ನು ಹಾದು ಹೋಗುತ್ತೇನೆಂದೂ ಊಹಿಸಿರಲಿಲ್ಲ.
ಜಾನ್ ಓ ಗ್ರೋಟ್ಸ್ : ಸಾಹಸ ಪ್ರಿಯರಿಗೆ, ಆಂಗ್ಲರಿಗೆ, ಇಲ್ಲಿ ನೆಲೆಸಿರುವ ಪರಕೀಯರಿಗೆ ಈ ಊರು ಪರಿಚಿತ. ಇದು ಬ್ರಿಟನ್ನಿನ ತುತ್ತ ತುದಿಯ ಊರು. ನೈಋತ್ಯ ಮೂಲೆಯಲ್ಲಿರುವ ಲ್ಯಾನ್ಡ್ಸ್ ಎಂಡ್ ನಿಂದ ಇಲ್ಲಿಗೆ ಸಾಹಸದ ತೆವಲಿನವರು, ಉತ್ತಮ ಕೆಲಸಕ್ಕೆ ಚಂದಾ ಎತ್ತುವವರು ನಡೆದೋ, ಸೈಕಲ್ ಸವಾರರಾಗಿ ಬರುವುದು ವಾಡಿಕೆ. ಇದು ಚಿಕ್ಕ ಮೀನುಗಾರಿಕಾ ಬಂದರು. ಇಲ್ಲಿಂದ ಒರ್ಕ್ನಿ ದ್ವೀಪಗಳಿಗೆ ಹೋಗಲು ಅನುಕೂಲತೆ ಇದೆ. ಇಲ್ಲಿ ನಿಲ್ಲಿಸಿರುವ ಕೈಕಂಬ ಜಗತ್ತಿನ ಇತರ ಪ್ರಮುಖ ನಗರಗಳಿಗಿರುವ ದೂರವನ್ನು, ದಿಕ್ಸೂಚಿಯಾಗಿ ಇಲ್ಲಿನ ನೀರವತೆಯಲ್ಲೂ ನಗರಗಳ ಗಿಜಿಗಿಜಿಯನ್ನು ಮಾರ್ದನಿಸುವ ಪ್ರಯತ್ನ ಮಾಡುತ್ತದೆ. ನನಗೆ ಪಕ್ಕದ ದಿಬ್ಬದಾಚೆ ಸಮುದ್ರದಲ್ಲಿ ಶತಮಾನಗಳ ಕೊರೆತದ ಪರಿಣಾಮವಾಗಿ ಉದ್ಭವಿಸಿದ ಮೂರು ಸಹೋದರಿ ಶಿಖರಗಳು ಮುಖ್ಯ ಆಕರ್ಷಣೆ ಎನಿಸಿತು. ಸೂರ್ಯೋದಯದ ಕಾಲದಲ್ಲಿ ಇಲ್ಲಿನ ನೋಟ ಅದ್ಭುತವಾಗಿದ್ದೀತು. ನಾವು ತಲುಪಿದಾಗ ಸೂರ್ಯನ ಕಿರಣಗಳು ಸಹೋದರಿಯರ ಬೆನ್ನನ್ನು ಮುತ್ತಿಕ್ಕುತ್ತಿದ್ದವು. ಇಲ್ಲೇ ಹತ್ತಿರದ ಊರೊಂದರಲ್ಲಿ ಹೋಟೆಲ್ ಕಾದಿರಿಸಿಟ್ಟಿದ್ದೆವು ರಾತ್ರಿ ತಂಗಲು. ಪಕ್ಕದಲ್ಲೊಂದು ಬಾಂಗ್ಲಾ ದೇಶದವರ ಊಟದ ಹೋಟೆಲ್ ಇತ್ತು. ಅದು ರಂಜಾನ್ ತಿಂಗಳು. ಅಲ್ಲಿನ ಕೆಲಸದವರು ತಮ್ಮ ಸಂಜೆಯ ಪ್ರಾರ್ಥನೆ ಮುಗಿಸಿ ಸ್ವಾದಿಷ್ಟ ಭೋಜನ ಆದರದಿಂದ ಬಡಿಸಿದ್ದು ನನಗಿನ್ನೂ ಕಣ್ಮುಂದೆ ನಿಂತಿದೆ.
ಇಲ್ಲಿಂದ ಉಲ್ಲಾಪೂಲ್ ನ ಯಾನವನ್ನು ಶಬ್ದಗಳಿಂದ ಬಣ್ಣಿಸಲಸದಳ. ಮುಗಿಲ ಮುತ್ತುವ ಬೋಳು ಗುಡ್ಡಗಳು, ಅವುಗಳ ಪಾದ ತೊಳೆಯುವ ನಿರ್ಮಲ ನೀರಿನ ತೊರೆಗಳು, ದಾರಿಯುದ್ದಕ್ಕೂ ಕಾಣುವ ಪಚ್ಚೆ ಬಣ್ಣದ ಸಮುದ್ರ, ನಿಷ್ಕಲ್ಮಶ ಶುಭ್ರ ನಿರ್ಜನ ತೀರ ಯಾವುದನ್ನ ವರ್ಣಿಸುವುದು, ಯಾವುದನ್ನ ಬಿಡುವುದು? ಎಲ್ಲವೂ ಎಸ್. ದಿವಾಕರರು ಹೇಳುವಂತೆ ಕ್ಲೀಷೆಗಳಲ್ಲೇ ಕೊನೆ ಗಂಡೀತು. ಶಬ್ದಗಳ ಬದಲು ಚಿತ್ರಗಳನ್ನೇ ನಿಮ್ಮೆದುರಿಡುವೆ. ನಿಮಗನಿಸಿದಂತೆ ವರ್ಣಿಸಿಕೊಳ್ಳಬಹುದು. ದಾರಿಯಲ್ಲಿ ಸಿಕ್ಕಿದ ತೀರದಲ್ಲಿಳಿದಾಗ ತೀರದ ಮೇಲೆ ಝಿಪ್ ವಯರ್ ಮೇಲೆ ಜಾರುವ ಸಿಕ್ಕಿದ್ದು ಅವಕಾಶ ಅಪುರ್ವವಾಗಿತ್ತು. ಇಲ್ಲಿ ತೀರದ ಮೇಲೆ ಆಡಿದ ಕ್ರಿಕೆಟ್ ಆಟ ನಮ್ಮ ಜೀವನದಲ್ಲಿ ಜಗತ್ತಿನ ಉತ್ತರ ತುದಿಯಲ್ಲಿ ಆಡಿದ ದಾಖಲೆಯಾಗಿದೆ.
ಹಾದಿಯಲ್ಲಿ ಸಿಗುವ ಕೇಯರ್ನ್ ಭಾಯನ್ ಲಾಕ್ ಮೇಲೆ ಕಟ್ಟಿರುವ ಕೈಲೆಸ್ಕು ಸೇತುವೆ ಇನ್ನೊಂದು ಮಾನವ ನಿರ್ಮಿತ ರಚನೆಗಳಲ್ಲಿ ನೋಡುವಂಥದ್ದು ಈ ಭೂಭಾಗದಲ್ಲಿ. ಇದರ ಚಿತ್ರ ಮೇಲಿದೆ.
ಉಲ್ಲಾಪೂಲ್ ತಲುಪಿದಾಗ ಸರಿಸುಮಾರು ಮಧ್ಯರಾತ್ರಿ. ಅಲ್ಲಿನ ಹೊಟೆಲ್ ಲಾಕ್ ಒಂದರ ತೀರದಲ್ಲಿತ್ತು. ಆ ಹೊತ್ತಿನಲ್ಲಿ ಕಂಡ ಚಿತ್ತಾರದ ಆಗಸದ ಚಿತ್ರ ನಾನೆಂದೂ ಮರೆಯಲಾರೆ. ಆ ಚಿತ್ರವನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿಯುವಾಗ ಸ್ಕಾಟ್ ಲ್ಯಾಂಡಿನ ವಿಶೇಷ ನುಸಿ (ಮಿಡ್ಜಸ್) ಗಳ ದಾಳಿಯನ್ನೂ ಮರೆಯಲಾರೆ.
ರೂಟ್ ೫೦೦ ರ ಕೊನೆಯ ಭಾಗವನ್ನು ಸಮಯಾಭಾವದಿಂದ ಮೊಟಕುಗೊಳಿಸಿದರೂ ಸುಮಾರು ೯೦% ಭಾಗವನ್ನು ಕ್ರಮಿಸಿ, ಮನಸೋ ಇಚ್ಛೆ ಆನಂದಿಸಿದ್ದಕ್ಕೆ ಮಕುಟವಿಟ್ಟಿದ್ದು ಗೆಳೆಯರ ಗುಂಪಿನ ಒಡನಾಟ.