ಪ್ರಿಯರೇ, ಪ್ರತಿಯೊಂದು ಪ್ರಾಚೀನ ಇತಿಹಾಸವುಳ್ಳ ಸಮಾಜದ ಬಗ್ಗೆ, ಅಲ್ಲಿನ ಜನರ ನಡೆ-ನುಡಿಗಳ, ಜೀವನಶೈಲಿಯ ಬಗ್ಗೆ ಜಗತ್ತಿನ ಉಳಿದ ಭಾಗಗಳ ಜನರ ಕುತೂಹಲ ಸಹಜವಾದದ್ದೇ. ಅದರಲ್ಲೂ, ಅಲ್ಲಿನ ಜನರ ಬದುಕಿನ ಮೇಲೆ ಅ ಶೈಲಿಯ ಪರಿಣಾಮ ಒಳ್ಳೆಯದಾಗಿದ್ದು, ಶತಾಯುಷಿಗಳಾಗಿ ಉತ್ತಮ ಅರೊಗ್ಯದಿಂದ ಬದುಕುತ್ತಿದ್ದರಂತೂ, ಸರಿಯೇ ಸರಿ. ಈ ಬಗ್ಗೆ ಅಭ್ಯಸಿಸುವ, ಬರೆಯುವ ಆಸಕ್ತರ ತಂಡವೇ ಹುಟ್ಟಿಬಿಡುತ್ತದೆ. ಮೆಡಿಟರೇನಿಯನ್ ದೇಶಗಳಾಗಲಿ, ಪೂರ್ವ ಏಶಿಯಾದ ದೇಶಗಳಾಗಲಿ ಅಲ್ಲಿಗೆ ಹೋಗಿ, ನೆಲೆಸಿ, ಜೀವನಕ್ರಮವನ್ನು ಅಭ್ಯಾಸ ಮಾಡಿ, ಅದನ್ನು ಉಳಿದ ಜಗತ್ತಿನೊಂದಿಗೆ ಹಂಚುವ ಪ್ರಯತ್ನದ ಬಗೆಗಿನ ಒಂದು ಇಂತಹುದೇ ಪುಸ್ತಕದ ಪರಿಚಯ ಕೊಡಲಿದ್ದಾರೆ, ಶ್ವೇತ ಕಿರಣ್. ಓದಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ - ಸಂಪಾದಕ.
ಕಿರುಪರಿಚಯ: ಶ್ವೇತ ಕಿರಣ್: ನಾನು ಮೂಲತಃ ಬೆಂಗಳೂರಿನ ಹುಡುಗಿ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ನಾನು ಎಂ ಎಸ್ ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿಯನ್ನು ಪೂರ್ಣಗೊಳಿಸಿದೆ. ೨೦೧೦ ನೇ ಇಸವಿಯಿಂದ ನಾನು ಇಂಗ್ಲೆಂಡ್‌ನಲ್ಲಿ ನೆಲಸಿದ್ದೇನೆ. ಕಳೆದ ಕೆಲವು ವರ್ಷಗಳಿಂದ, ನಾನು ಸಾಮಾನ್ಯ ವೈದ್ಯೆಯಾಗಿ (GP) ಆಗಿ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ನನ್ನ ಪತಿ ಹಾಗು ಮಗಳೊಂದಿಗೆ ಲಂಕಾಷೈರಿನ ಒಂದು ಸುಂದರವಾದ ಪುಟ್ಟ ಹಳ್ಳಿಯಲ್ಲಿ ವಾಸಿಸುತ್ತಿದ್ದೇನೆ. ನಾನು ಕೆಲಸದಲ್ಲಿ ಇಲ್ಲದಿರುವಾಗ ಪ್ರಕೃತಿಯ ಮಡಿಲಲ್ಲಿ ಅಥವಾ ಒಳ್ಳೆಯ ಪುಸ್ತಕದಲ್ಲಿ ಮುಳುಗಿರುವುದನ್ನು ನೋಡಬಹುದು. ಇದಲ್ಲದೆ ನೃತ್ಯ, ತೋಟಗಾರಿಕೆ, ವಿವಿಧ ರೀತಿಯ ವ್ಯಾಯಾಮ, ಜೀವನಶೈಲಿ ವಿಧಾನಗಳು- ಇವುಗಳ ಬಗ್ಗೆ ಕೂಡ ಬಹಳ ಆಸಕ್ತಿ ಹೊಂದಿದ್ದೇನೆ.
೨೦೨೨ ನೇ ವರ್ಷ ಮುಗಿದು ಹೊಸ ವರ್ಷ ಆರಂಭವಾಗಿದೆ. ತಿಳಿದು ತಿಳಿಯದಂತೆ ಕಾಲ ಎಷ್ಟು ವೇಗವಾಗಿ ಸರಿಯುತ್ತಿದೆ ಅಲ್ಲವೇ? ಈಗ ತಾನೆ ೨೦೨೨ ನೇ ವರ್ಷದ ಸಂಕಲ್ಪಗಳನ್ನು ಶುರು ಮಾಡಿದ ಹಾಗಿದೆ. ಆದರೆ ೨೦೨೩ ನೇ ವರ್ಷ ಶುರುವಾಗಿ ಆಗಲೆ ಆರು ತಿಂಗಳು ಕಳೆದಿವೆ. ವರ್ಷಾಂತ್ಯದಲ್ಲಿ ನಾವು ಕಳೆದ ೧೨ ತಿಂಗಳುಗಳ ಬಗ್ಗೆ ಪ್ರತಿಫಲಿಸುತ್ತೇವೆ. ನಾವು ಯಾರು, ಇಲ್ಲಿಗೆ ಬಂದಿರುವ ಉದ್ದೇಶವೇನು? ನಾವು ಏನು ಮಾಡಬೇಕು, ಹೇಗೆ ಬದುಕಬೇಕು, ಜೀವನದ ಅರ್ಥ ಏನು? ಈ ತರಹದ ಪ್ರಶ್ನೆಗಳು ಇಂತಹ ಸಂದರ್ಭದಲ್ಲಿ ನಮ್ಮನ್ನು ಕಾಡುವುದು ಸಹಜ. ತತ್ವಶಾಸ್ತ್ರಕ್ಕೆ ಸಂಬಂಧಿಸಿದ ಈ ವಿಷಯಗಳ ಬಗ್ಗೆ ಬಹಳಷ್ಟು ಪುಸ್ತಕಗಳು ಕೂಡ ಪ್ರಕಟವಾಗಿವೆ. ಸ್ವಸಹಾಯ ಹಾಗೂ ಸ್ವಾವಲಂಬನೆಯನ್ನು ಪ್ರೇರೇಪಿಸುವ ಪುಸ್ತಕಗಳನ್ನು ಓದಿ ಜ್ಞಾನ ವೃದ್ಧಿಗೊಳಿಸಿಕೊಳ್ಳುವುದು ಸಮಂಜಸವೆ. ಇತ್ತೀಚೆಗೆ ನಾನು ಓದಿದ ಪುಸ್ತಕ ಇಕಿಗಾಯ್ ಈ ಗುಂಪಿಗೆ ಸೇರಿದೆ.
ಇಕಿಗಾಯ್ ಪುಸ್ತಕವನ್ನು ಬರೆದವರು ಹೆಕ್ಟರ್ ಗಾರ್ಸಿಯಾ ಮತ್ತು ಫ್ರಾಂಚೆಸ್ಕ್ ಮಿರಾಯೆ. ಇವರು ಜಪಾನ್ ದೇಶದ “ಒಕಿನಾವ” ಎನ್ನುವ ಪ್ರದೇಶಕ್ಕೆ ಭೇಟಿಕೊಟ್ಟು ಅಲ್ಲಿನ ಜನರ ನಡೆ-ನುಡಿ ದಿನನಿತ್ಯದ ಅಭ್ಯಾಸಗಳನ್ನು ಪರಿಶೀಲಿಸಿ ಇವುಗಳ ಬಗ್ಗೆ ಈ ಕೃತಿಯಲ್ಲಿ ಮಾತನಾಡುತ್ತಾರೆ. ಒಕಿನಾವ ಪ್ರದೇಶದ ವಿಶಿಷ್ಟತೆ ಏನೆಂದರೆ, ಅದು ಜಗತ್ತಿನಲ್ಲಿ ಅತಿ ಹೆಚ್ಚು ದೀರ್ಘಾಯುಷಿಗಳಿರುವಂತಹ ಜಾಗ. ಬಹಳ ಜನ ಅಲ್ಲಿ ಶತಾಯುಷಿಗಳಾಗಿದ್ದಾರೆ. ಇವರುಗಳ ದೀರ್ಘಾಯುಷ್ಯದ ಗುಟ್ಟೇನು ಎನ್ನುವುದೇ ಈ ಪುಸ್ತಕದ ಸಾರಾಂಶ.
ಜನರು ಆರೋಗ್ಯವಂತರಾಗಿ, ಸಂತಸದಿಂದ ದೀರ್ಘಕಾಲ ಬದುಕಿರಬೇಕಾದರೆ ಏನು ಮಾಡಬೇಕು ಎಂಬುದನ್ನು ಲೇಖಕರು ಈ ಪುಸ್ತಕದಲ್ಲಿ ವಿಸ್ತಾರವಾಗಿ ಪ್ರಸ್ತುತಪಡಿಸಿದ್ದಾರೆ. ನಮಗೆಲ್ಲ ಇದರ ಬಗ್ಗೆ ಆಗಲೇ ಅಲ್ಪ ಸ್ವಲ್ಪ ಗೊತ್ತಿರಬಹುದು. ಆದರೆ, ಇವುಗಳ ಬಗ್ಗೆ, ಉದಾಹರಣೆಗಳ ಮೂಲಕ ಅರ್ಥಗರ್ಭಿತವಾಗಿ ಹೇಳುವುದು ಒಂದು ರೀತಿಯ ಕಲೆ ಅಂತಾನೆ ಹೇಳಬಹುದು. ಲೇಖಕರು ಆಹಾರ ಪದ್ಧತಿ, ವ್ಯಾಯಾಮ, ಪ್ರಕೃತಿ, ಸಾಮಾಜಿಕ ಬೆಂಬಲ, ಶಾಂತಿಯುತ ಜೀವನದ ಮೌಲ್ಯಗಳು - ಹೀಗೆ ಹಲವಾರು ವಿಷಯಗಳ ಬಗ್ಗೆ ಬಹಳ ಚೆನ್ನಾಗಿ ವಾದಿಸಿದ್ದಾರೆ. ಉದಾಹರಣೆಗೆ, ನಾವು ವ್ಯಾಯಾಮ ಮಾಡಬೇಕು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ನಾವೇನು ಮ್ಯಾರಥಾನ್ ಓಡಬೇಕಿಲ್ಲ ಅಥವಾ ಪ್ರತಿದಿನ ಜಿಮ್ ಗೆ ಹೋಗಿ ಬೆವರು ಸುರಿಸಬೇಕಾಗಿಲ್ಲ. ನಾವು ಆದಷ್ಟು ಸಕ್ರಿಯರಾಗಿರಬೇಕು. ಕಾಲ್ನಡಿಗೆ, ತೋಟಗಾರಿಕೆ, ನೃತ್ಯ, ಯೋಗ ಹಾಗೂ ತಾಯ್‌ಚಿ, ತರಹದ ಸರಳ ಅಭ್ಯಾಸಗಳನ್ನು ಮಾಡಿದರೆ ಸಾಕು, ಎಷ್ಟೊ ಅನುಕೂಲವಾಗುತ್ತದೆ. ಊಟದಲ್ಲಿ ಕೂಡ ವಿಧವಿಧವಾದ ಆಹಾರಗಳನ್ನು ಸೇವಿಸಬೇಕು. ಹೊಟ್ಟೆ ೮೦ ಪ್ರತಿಶತ ತುಂಬಿದಾಗಲೇ ಊಟ ಮಾಡುವುದನ್ನು ನಿಲ್ಲಿಸಬೇಕು. ಈ ರೀತಿ ಹಲವಾರು ಉತ್ತಮ ಅಭ್ಯಾಸಗಳ ಬಗ್ಗೆ ಮಾತನಾಡುತ್ತಾ, ಲೇಖಕರು, ಜಪಾನ್ ದೇಶದ ಜನರ ಅಭಿಪ್ರಾಯಗಳನ್ನು ತಿಳಿಸುತ್ತಾರೆ.
ಇಕಿಗಾಯ್ ಅಂದರೇನು? “ಬದುಕು” ಹಾಗೂ “ಸಾರ್ಥಕ ಪಡಿಸುವುದು” ಎನ್ನುವ ಎರಡು ಪದಗಳ ಜೋಡಣೆಯಿಂದ ಮೂಡಿರುವ ಪದವೇ ಇಕಿಗಾಯ್. ಜೀವನದಲ್ಲಿ ನಾವು ಆರೋಗ್ಯವಾಗಿ, ಸಂತೋಷದಿಂದ, ಶಾಂತಿಯುತ ಬಾಳ್ವೆ ನಡೆಸಬೇಕಾದರೆ ನಾವು ನಮ್ಮ ಜೀವನದ ಉದ್ದೇಶವನ್ನು ಹಾಗು ಧ್ಯೇಯವನ್ನು ಕಂಡುಕೊಳ್ಳಬೇಕು. ಇದೇ ನಮ್ಮ ಇಕಿಗಾಯ್. ಹಾಗಾದರೆ ನಾವು ಇಕಿಗಾಯನ್ನು ಹೇಗೆ ಹುಡುಕುವುದು? ಇದನ್ನು ಲೇಖಕರು ಪುಸ್ತಕದಲ್ಲಿ ಒಂದು ಚಿತ್ರದ ಮೂಲಕ ವ್ಯಕ್ತಪಡಿಸುತ್ತಾರೆ. ಈ ಕೆಳಕಂಡ ೪ ಪ್ರಶ್ನೆಗಳಿಗೆ ನಾವು ಉತ್ತರ ಕಂಡುಹಿಡಿಯಬೇಕಾಗಿದೆ:
೧) ನೀವು ಏನನ್ನು ಪ್ರೀತಿಸುತ್ತೀರಿ? (ಧ್ಯೇಯ)
೨) ನೀವು ಯಾವುದರಲ್ಲಿ ಪರಿಣಿತರಿದ್ದೀರಿ? (ಗೀಳು)
೩) ನಿಮಗೆ ಏತಕ್ಕಾಗಿ ಸಂಭಾವನೆ ನೀಡಬಲ್ಲರು? (ಉದ್ಯೋಗ)
೪) ಲೋಕದ ಅಗತ್ಯವೇನು? (ವೃತ್ತಿ)
ಧ್ಯೇಯ, ಗೀಳು, ಉದ್ಯೋಗ ಹಾಗೂ ವೃತ್ತಿ, ಇವುಗಳಿಗೆ ನಮ್ಮಲ್ಲಿ ಒಂದೇ ಉತ್ತರವಿದ್ದರೆ, ಅದು ನಮ್ಮ ಇಕಿಗಾಯ್ ಆಗುತ್ತದೆ. ಪ್ರತಿಯೊಬ್ಬರ ಇಕಿಗಾಯ್ ಬೇರೆಯಾದರೂ ಜೀವನದ ಅರ್ಥದ ಹುಡುಕಾಟದಲ್ಲಿ ನಾವೆಲ್ಲರೂ ಒಂದೇ. ನಿಮ್ಮಲ್ಲಿ ಕೆಲವರಿಗೆ ಆಗಲೇ ಇಕಿಗಾಯ್ ದೊರಕಿರಬಹುದು, ಇನ್ನು ಕೆಲವರು ಹುಡುಕಾಡುತ್ತಿರಬಹುದು, ಕೆಲವರಿಗೆ ಇದರ ಬಗ್ಗೆ ಅರಿವಿರದಿರಬಹುದು. ಈ ಪಯಣದಲ್ಲಿ ನಾವು ಎಲ್ಲೇ ಇದ್ದರೂ ಈ ಪುಸ್ತಕ ನಿಮಗೆ ಸ್ಪೂರ್ತಿಯಾಗುವುದರಲ್ಲಿ ಸಂದೇಹವೇ ಇಲ್ಲ. ನಿಮಗೆ ಸಾಧ್ಯವಾದಲ್ಲಿ ಈ ಪುಸ್ತಕವನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸಲು ಮರೆಯಬೇಡಿ.
ಇಂತಿ ನಿಮ್ಮ,
ಶ್ವೇತ
ಬ್ರಿಸ್ಟಲ್ ಏರ್ ಬಸ್ ಸಂಸ್ಥೆಯಲ್ಲಿ ವಿಮಾನ ಶಾಸ್ತ್ರ ತಂತ್ರಜ್ಞರಾದ ಯೋಗಿಂದ್ರ ಮರವಂತೆ ಅನಿವಾಸಿ ಕನ್ನಡಿಗರಿಗೆ ಚಿರಪರಿಚಿತರು. ಹಲವಾರು ವರ್ಷಗಳಿಂದ ದಿನಪತ್ರಿಕೆಗಳಿಗೆ ಮತ್ತು ಅಂತರ್ಜಾಲ ತಾಣಗಳಿಗೆ ಅಂಕಣ ಬರೆಯುತ್ತ, ಆಗೊಮ್ಮೆ ಈಗೊಮ್ಮೆ ಅನಿವಾಸಿ ತಾಣದಲ್ಲೂ ಕೆಲವು ಪ್ರಬಂಧಗಳನ್ನು ಬರೆಯುತ್ತ ನಮಗೆಲ್ಲ ಚಿರಪರಿಚಿತರಾಗಿದ್ದಾರೆ. ಅವರ ಲೇಖನಗಳು ನಮ್ಮ ಸಮಕಾಲೀನ ಬದುಕಿನ ಹಲವಾರು ವಿಷಯಗಳಿಗೆ ಸಂಬಂಧಿಸಿದ್ದು ಅವರ ಸೃಜನಾತ್ಮಕ ಬರಹಗಳು ಅನೇಕ ಚಿಂತನೆಗಳಿಗೆ ಅನುವು ಮಾಡಿಕೊಟ್ಟಿದೆ. ಲಂಡನ್ ಡೈರಿ ಅವರ ಮೊದಲನೇ ಕೃತಿ. ಇದಲ್ಲದೆ ಅವರು 'ಮುರಿದು ಬಿದ್ದ ಸೈಕಲ್ ಮತ್ತು ಹೂಲ ಹೂಪ್ಸ್ ಹುಡುಗಿ’,'ನನ್ನ ಕಿಟಕಿ' ಎಂಬ ಪುಸ್ತಕಗಳನ್ನು ಬರೆದಿದ್ದಾರೆ. ಒಂದೆರಡು ಸಾಕ್ಷ್ಯಚಿತ್ರವನ್ನೂ ನಿರ್ಮಿಸಿದ್ದಾರೆ. ಯೋಗಿಂದ್ರ ಮರವಂತೆ ಮತ್ತು ಇನ್ನೂ ಅನೇಕ ಅನಿವಾಸಿ ಕನ್ನಡಿಗರು ವಿದೇಶದಲ್ಲಿ ಕುಳಿತು ಉತ್ತಮವಾದ ಪುಸ್ತಕಗಳನ್ನು ಬರೆದಿದ್ದಾರೆ. ಅವರ ಕೃತಿಗಳನ್ನು ಅನಿವಾಸಿ ಕನ್ನಡಿಗರು ಓದಬೇಕು ಮತ್ತು ಓದಿ ಅವರ ಅಭಿಪ್ರಾಯಗಳನ್ನು ದಾಖಲಿಸಿದರೆ ಲೇಖಕರಿಗೆ ಮುಂದಕ್ಕೆ ಬರೆಯಲು ಉತ್ತೇಜನ ದೊರೆಯುತ್ತದೆ ಎಂಬುದು ನನ್ನ ಅಭಿಪ್ರಾಯ. ಈ ಒಂದು ಹಿನ್ನೆಲೆಯಲ್ಲಿ ನಾನು ಯೋಗಿಂದ್ರ ಅವರ ಲಂಡನ್ ಡೈರಿ ಪುಸ್ತಕ ಪರಿಚಯದ ಪ್ರಯತ್ನ ಮಾಡಿದ್ದೇನೆ. ನನ್ನ ಒಂದು ಕಾದಂಬರಿ ಕೃತಿಯನ್ನು ಅನಿವಾಸಿ ಮಿತ್ರರು ಹಿಂದೆ ಓದಿ ಅದರ ವಿಮರ್ಶೆ ಒದಗಿಸಿದ್ದು ನನಗೆ ಓದುಗರ ದೃಷ್ಟಿಕೋನ ದೊರಕಿದಂತಾಯಿತು. ನನ್ನ ಸಾಮರ್ಥ್ಯಗಳ ಬಗ್ಗೆ ಒಂದು ಒಳನೋಟವೂ ದೊರಕಿತು. ಕನ್ನಡ ನೆಲದಿಂದ ದೂರವಿರುವ ನಮ್ಮಂಥ ಅನಿವಾಸಿ ಲೇಖಕರುಗಳು ಒಬ್ಬರು ಇನ್ನೊಬ್ಬರ ಕೃತಿಗಳನ್ನು ಓದಿ ವಿಚಾರ ವಿನಿಮಯ ಮಾಡಿಕೊಳ್ಳುವ ಅವಶ್ಯಕತೆ ನನಗೆ ಕಂಡಿದೆ. ಈ ಪ್ರಯತ್ನವನ್ನು ಮುಂದಕ್ಕೆ ನಡೆಸಿಕೊಡಲು ನಾನು ಪ್ರಯತ್ನಿಸುತ್ತೇನೆ.
ನಾವುಗಳು ಬರೆದ ಕನ್ನಡ ಪುಸ್ತಕಗಳು ಕರ್ನಾಟಕದಲ್ಲಿ ಪ್ರಕಟಗೊಂಡು ಅದನ್ನು ಇಂಗ್ಲೆಂಡಿನ ಕನ್ನಡ ಓದುಗರಿಗೆ ಒದಗಿಸುವುದು ಸ್ವಲ್ಪ ಕಷ್ಟದ ಕೆಲಸವೇ. ಪುಸ್ತಕದ ಬೆಲೆಗೆ ಸಾಗರದಾಚೆಗೆ ರವಾನಿಸುವ ಮತ್ತು ಅಂಚೆಯಲ್ಲಿ ವಿತರಿಸುವ ಬೆಲೆಯನ್ನು ಸೇರಿಸುವುದು ಅನಿವಾರ್ಯವಾಗುತ್ತದೆ. ಮುಂದಕ್ಕೆ ಯುಕೆ ಕನ್ನಡ ಬಳಗ ಮತ್ತು ಇತರ ಕನ್ನಡ ಸಂಘ ಸಮಾರಂಭದಲ್ಲಿ ಅನಿವಾಸಿ ಲೇಖಕರ ಪ್ರಕಟಿತ ಪುಸ್ತಕಗಳ ಬಗ್ಗೆ ಅರಿವು ಮೂಡಿಸಿ ಅದನ್ನು ಒಂದು ಕಡೆ ಮಾರಾಟ ಮಾಡುವ ಅವಕಾಶವನ್ನು ಈ ಸಂಘಗಳು ಕಲ್ಪಿಸಿ ಕೊಡಬೇಕಾಗಿದೆ. ಇದನ್ನು ಬರಿ ವಾಣಿಜ್ಯ ವಹಿವಾಟಾಗಿ ನೋಡದೆ ಕನ್ನಡ ಬೆಳೆಸುವ ಯತ್ನವೆಂದು ಪರಿಗಣಿಸಬೇಕು. ಅನಿವಾಸಿ ಲೇಖಕರು ತಾವು ಬರೆದ ಕೃತಿಗೆ ಅನಿವಾಸಿ ಓದುಗರ ಬೆಂಬಲವನ್ನು ನಿರೀಕ್ಷಿಸುವುದು ಸಹಜವೇ.
-ಸಂಪಾದಕ
ಯೋಗಿಂದ್ರ ಮರವಂತೆ ಅವರು ಅಂಕಣಕಾರರಾಗಿ ಉದಯವಾಣಿ, ಪ್ರಜಾವಾಣಿ, ಕೆಂಡ ಸಂಪಿಗೆ ಮುಂತಾದ ತಾಣಗಳಲ್ಲಿ ಬರೆದ ಪ್ರಬಂಧಗಳನ್ನು ಒಟ್ಟುಗೂಡಿಸಿ ‘ಲಂಡನ್ ಡೈರಿ’ (ಅನಿವಾಸಿಯ ಪುಟಗಳು) ಎಂಬ ಸಂಕಲನವನ್ನು ೨೦೧೯ರಲ್ಲಿ ಹೊರತಂದಿದ್ದು ಅದನ್ನು ಕರ್ನಾಟಕದ ಯಾಜಿ ಪ್ರಕಾಶನ ಪ್ರಕಟಿಸಿದೆ. ಈ ಪುಸ್ತಕವನ್ನು ಹಿಂದೆ ನಾನು ಕೊಂಡಿದ್ದು ಅದು ನನ್ನ ಇಂಡಿಯಾ ಪ್ರವಾಸದಲ್ಲಿ ಕಳೆದುಹೋಗಿ, ಇತ್ತೀಚಿಗೆ ಬೆಂಗಳೂರಿನ ನವಕರ್ನಾಟಕ ಪುಸ್ತಕ ಮಳಿಗೆಗೆ ಭೇಟಿ ನೀಡಿದಾಗ ಮತ್ತೆ ನನಗೆ ದಕ್ಕಿದೆ. ಇದೀಗ ಈ ಪುಸ್ತಕವನ್ನು ಓದಿ ಮುಗಿಸಿದ್ದೇನೆ. ಹಳೆಯ ಪುಸ್ತಕಕ್ಕೊಂದು ಹೊಸ ದೃಷ್ಟಿಕೋನವನ್ನು ಒದಗಿಸುವ ಪ್ರಯತ್ನ ನನ್ನದಾಗಿದೆ. "ಹಾಡು ಹಳೆಯದಾದರೇನು ಭಾವ ನವನವೀನ" ಎನ್ನುವ ಹಾಗೆ ಎಂದು ತಿಳಿಯಿರಿ. ಈ ಪುಸ್ತಕವನ್ನು ಎರಡೇ ಸಾಲುಗಳಲ್ಲಿ ಸಂಕ್ಷಿಪ್ತವಾಗಿ ಪರಿಚಯ ಮಾಡುವುದಾದರೆ ಪುಸ್ತಕದ ಮೊದಲನೇ ಪುಟದಲ್ಲೇ ಲೇಖಕರೇ ತಿಳಿಸಿರುವಂತೆ; "ಮುಖಾಮುಖಿಗಳು ಹುಟ್ಟಿಸುವ ಬೆರಗು, ಕುತೂಹಲ, ತಳಮಳ, ವೈರುಧ್ಯಗಳ ನಡುವೆ ಅಲೆಯುತ್ತ ನೆನೆಯುತ್ತ ಕಾಲ ಘಟನೆಗಳಿಗೆ ಹೊಂದಿಸಿ ಮನಸ್ಸಿನಲ್ಲಿ ಅಕ್ಷರ ಪೋಣಿಸಿದರೆ, ಹಾಳೆಯ ಮೇಲೆ ಮೂಡಿಸಿದರೆ, ಮತ್ತು ಆ ಹಾಳೆಗಳನ್ನು ಪುಟಗಳಾಗಿ ಜೋಡಿಸಿದರೆ ಅದು ಲಂಡನ್ ಡೈರಿ". ಇದರಲ್ಲಿ ಒಂದು ಮುಖ ಇಂಗ್ಲೆಂಡ್, ಇನ್ನೊಂದು ಮುಖ ಭಾರತ. ಈ ಹೊತ್ತಿಗೆಗೆ ಬೆನ್ನುಡಿ ಬರೆದ ಖ್ಯಾತ ಲೇಖಕಿ ಪುಸ್ತಕದಲ್ಲಿನ ವೈವಿಧ್ಯತೆ ಮತ್ತು ಸೂಕ್ಷ್ಮ ವಿವರಗಳನ್ನು ಗಮನಿಸಿ ಯೋಗಿಂದ್ರ ಅವರಿಗೆ "ಕಾಣುವ ಕಣ್ಣುಗಳು" ಇವೆಯೆಂದು ಪ್ರಶಂಸಿಸಿದ್ದಾರೆ. ಇಂಗ್ಲೆಂಡಿನಲ್ಲಿ ವಾಸ ಮಾಡುತ್ತಿರುವ ಅನಿವಾಸಿಗಳಿಗೆ ಸಾಧಾರಣ ಎನಿಸುವ ದಿನ ನಿತ್ಯ ಬದುಕಿನ ಕ್ಷಣಗಳನ್ನು ಯೋಗಿಂದ್ರ ಅವರು ಗ್ರಹಿಸಿ ಆಳವಾಗಿ ಚಿಂತಿಸಿರುವುದರ ಬಗ್ಗೆ ಖ್ಯಾತ ಲೇಖಕ ಅಬ್ದುಲ್ ರಶೀದ್ ಅವರು ಬೆನ್ನುಡಿಯಲ್ಲಿ ಬರೆಯುತ್ತ “ಯೋಗಿಂದ್ರ ಅವರಿಗೆ ಪತ್ರಕರ್ತನ ಗುಣವಿದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಈ ಪುಸ್ತಕದ ಶೀರ್ಷಿಕೆ ‘ಲಂಡನ್ ಡೈರಿ’ ಎಂತಿದ್ದರೂ ಇದು ಲಂಡನ್ ನಗರವನ್ನೂ ದಾಟಿ ಇಂಗ್ಲೆಂಡಿನ ಬದುಕಿನ ಚಿತ್ರವಾಗಿದೆ. ಕರ್ನಾಟಕದ ಕನ್ನಡಿಗರು ಲಂಡನ್ ಮತ್ತು ಇಂಗ್ಲೆಂಡ್ ಎಂಬ ಹೆಸರಿನಲ್ಲಿ ನಿರ್ದಿಷ್ಟವಾದ ವ್ಯತಾಸವನ್ನು ಕಾಣದೆ ನಗರ ಮತ್ತು ದೇಶವನ್ನು ಒಂದೇ ಹೆಸರಿನಲ್ಲಿ ಸಂಬೋಧಿಸುವುದರಿಂದ ಈ ಶೀರ್ಷಿಕೆ ಇಂಗ್ಲೆಂಡನ್ನು ಕನ್ನಡಿಗರಿಗೆ ಪರಿಚಯಿಸುವ ದೃಷ್ಟಿಯಿಂದ ಸೂಕ್ತವಾಗಿದೆ. ಅಂದ ಹಾಗೆ ಈ ಹೊತ್ತಿಗೆಯ ಮುಖಪುಟವನ್ನು ಗಮನಿಸಿದರೆ ಇಲ್ಲಿ ಇರುವ ಲಂಡನ್ ಬಿಗ್ ಬೆನ್, ಜಿನುಗುತ್ತಿರುವ ಮಳೆ, ಮಬ್ಬು ಕವಿದ ಮೋಡಗಳು ಇಂಗ್ಲೆಂಡಿನ ಒಂದು ಪರಿಪೂರ್ಣ ಚಿತ್ರಾತ್ಮಕ ಸಂಕೇತದಂತೆ ತೋರುತ್ತದೆ. ಈ ಮುಖಪುಟವೇ ಈ ಹೊತ್ತಿಗೆಯ ಒಂದು ಕಿರುಪರಿಚಯ!
ಈ ಪ್ರಬಂಧ ಸಂಕಲನದ ಮೂಲ ಉದ್ದೇಶ ಬ್ರಿಟನ್ನಿನ್ನ ನಿವಾಸಿ ಮತ್ತು ಅನಿವಾಸಿಗಳ ಬದುಕನ್ನು ಕನ್ನಡಿಗರಿಗೆ ಪರಿಚಯಿಸುವುದು ಎಂದು ಶುರಿವಿನಲ್ಲೇ ಪ್ರಸ್ತಾಪಿಸಿಸುವುದು ಉಚಿತ. ಓದುತ್ತ ಹೋದಂತೆ ಲೇಖಕರ ಮೂಲ ಆಶಯ ಮತ್ತು ಹಂಬಲ ತೆರೆದುಕೊಳ್ಳುತ್ತದೆ. ನಾಲ್ಕೈದು ದಶಕಗಳ ಹಿಂದೆ ವಿದೇಶದಲ್ಲಿ ನೆಲೆಸಿದ್ದ ವೈದ್ಯರು ಮತ್ತು ಇಂಜಿನೀಯರ್ಗಳು ಕನ್ನಡದಲ್ಲಿ ಒಂದು ಲೇಖನವಿರಲಿ ಒಂದೆರಡು ಸಾಲುಗಳನ್ನು ಬರೆಯಲು ಹಿಂಜರಿಯುತ್ತಿದ್ದ ಕಾಲದಲ್ಲಿ ಶಿವರಾಮ ಕಾರಂತ, ಮೂರ್ತಿರಾಯರು, ಗೋರೂರ್, ಗೋಕಾಕ ಮತ್ತು ಜಿ.ಎಸ್.ಎಸ್ ಮುಂತಾದ ಸಾಹಿತಿಗಳು ವಿದೇಶ ಪರ್ಯಟನೆ ಮಾಡಿ ಮರಳಿದಾಗ ಅವರ ಪ್ರವಾಸದ ಅಲ್ಪ ಸಮಯದಲ್ಲಿ ಕಂಡದ್ದನ್ನು ಕೇಳಿದ್ದನ್ನು ಅನುಭವಿಸಿದ್ದನು ಪ್ರವಾಸ ಕಥನವಾಗಿ ದಾಖಲಿಸಿ ಇಂಗ್ಲೆಂಡ್ ಮತ್ತು ಅಮೆರಿಕಗಳನ್ನು ಕನ್ನಡಿಗರಿಗೆ ಪರಿಚಯಿಸುತ್ತಿದ್ದರು. ಕವಿ- ಸಾಹಿತಿಗಳಾದ ಅವರು ಮಾಹಿತಿಗಳೊಡನೆ ತಮ್ಮ ವಿಶೇಷ ಒಳನೋಟವನ್ನು ಒದಗಿಸುತ್ತಿದ್ದರು. ಆದರೆ ಆ ಬರಹಗಳಲ್ಲಿ ಆಯಾ ದೇಶಗಳ ಜನ ಜೀವನದ ಪೂರ್ಣ ಪರಿಚಯ ಸಿಗುವುದು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗಿನ ಕಾಲದಲ್ಲಿ ಯೋಗಿಂದ್ರ ರೀತಿಯ ಅನೇಕ ಅನಿವಾಸಿ ಎಂಜಿನೀಯರ್ಗಳು, ವೈದ್ಯರು, ವೃತ್ತಿಪರರೂ, ಗೃಹಿಣಿಯರು ವಿದೇಶಗಳಲ್ಲಿ ದಶಕಗಳ ಕಾಲ ಬದುಕಿ ಇಲ್ಲಿಯ ಜನ ಜೀವನ, ಸಾಂಸ್ಕೃತಿಕ ವೈಶಿಷ್ಟ್ಯತೆ, ವಿಲಕ್ಷಣ, ದಿನ ನಿತ್ಯ ಆಗು-ಹೋಗುಗಳನ್ನು ಸವಿವರವಾಗಿ ಕೂಲಂಕುಷವಾಗಿ ಗಮನಿಸಿ ಪ್ರಬಂಧಗಳನ್ನು ಬರೆಯುತ್ತಿದ್ದಾರೆ. ಇನ್ನು ಅಮೇರಿಕಾದ ಅನಿವಾಸಿ ಕನ್ನಡಿಗ ಗುರುಪ್ರಸಾದ್ ಕಾಗಿನೆಲೆ ತಮ್ಮ ಕಥೆ ಕಾದಂಬರಿಗಳಲ್ಲಿ ವಿದೇಶದ ಬದುಕನ್ನೇ ಕಥೆಯ ಹಂದರದಲ್ಲಿ ಅಳವಡಿಸಿದ್ದಾರೆ. ಪ್ರವಾಸ ಕಥನ ಒದಗಿಸಲಾರದ ವಿಷಯ ವಿವರಗಳನ್ನು ಯೋಗಿಂದ್ರ ತಮ್ಮ ಪ್ರಬಂಧಗಳಲ್ಲಿ ವಿಶೇಷ ಒಳನೋಟಗಳ ಜೊತೆ ದಾಖಲಿಸಿದ್ದಾರೆ. ಕರ್ನಾಟಕದ ಅನೇಕ ಕನ್ನಡಿಗರಿಗೆ, ಟಿವಿ ಇನ್ನಿತರ ಮಾಧ್ಯಮಗಳ ಮೂಲಕ, ವಿದೇಶದಲ್ಲಿ ನೆಲೆಸಿರುವ ಬಂಧುಗಳ ಮೂಲಕ, ಬ್ರಿಟನ್ನಿನ್ನ ಬಗ್ಗೆ ಸಾಕಷ್ಟು ತಿಳುವಳಿಕೆ ಇರುತ್ತದೆ. ಆದರೂ ಅನಿವಾಸಿ ಕನ್ನಡಿಗರು ಹೇಗೆ ಬಾಳಿ ಬದುಕುತ್ತಿದ್ದಾರೆ ಎಂಬ ಕುತೂಹಲ ಅವರಿಗಿರುವುದು ಸಹಜವೇ. ಆ ಕೂತುಹಲವನ್ನು ತಣಿಸಲು ಲಂಡನ್ ಡೈರಿ ಒಂದು ಉತ್ತಮ ಪರಿಚಯ ಪ್ರವೇಶ ಎನ್ನಬಹುದು. ಅಷ್ಟೇ ಏಕೆ ಬ್ರಿಟನ್ನಿನ್ನ ಸ್ವಾರಸ್ಯಕರವಾದ ವಿಚಾರಗಳು ಇಲ್ಲಿರುವುದರಿಂದ ಇಂಗ್ಲೆಂಡಿನಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರಿಗೂ ಈ ಪುಸ್ತಕ ಪ್ರಸ್ತುತವಾಗಿದೆ.
ಈ ಪ್ರಬಂಧವನ್ನು ಒಟ್ಟಾರೆ ನೋಡಿದಾಗ ಇಲ್ಲಿ ಎದ್ದು ಕಾಣುವ ವಿಷಯಗಳೆಂದರೆ; ಆಂಗ್ಲರ ದೃಷ್ಟಿಯಲ್ಲಿ ಭಾರತೀಯರು ಮತ್ತು ಭಾರತ, ಅನಿವಾಸಿ ದೃಷ್ಟಿಯಲ್ಲಿ ಆಂಗ್ಲರು ಮತ್ತು ಅವರ ಸಂಸ್ಕೃತಿ, ಕೊನೆಯದಾಗಿ ಈ ಎರಡೂ ದೃಷ್ಟಿಯಲ್ಲಿ ಇರುವ ಸಮಾನಾಂತರಗಳ, ವೈರುಧ್ಯಗಳ ಬಗ್ಗೆ ಇರುವ ತೌಲನಿಕ ಚಿಂತನೆಗಳು. ಇಲ್ಲಿ 'ಆಂಗ್ಲರ ಕನ್ನಡಕದಲ್ಲಿ ಭಾರತ' ಎಂಬ ಮೊದಲನೇ ಪ್ರಬಂಧದಲ್ಲಿ ಆಂಗ್ಲರು ನಮ್ಮನ್ನು ನೋಡುವಾಗ ವಸ್ತುನಿಷ್ಠವಾಗಿ ನಮನ್ನು ನೋಡುತ್ತಾರೆ, ಇಲ್ಲಿ ಹೊಗಳಿಕೆ ತೆಗಳಿಕೆ ಎರಡು ಅವರ ತಕ್ಕಡಿಯಲ್ಲಿ ಸಮಾನವಾಗಿ ತೂಗುತ್ತದೆ. ನಾವು ನಮ್ಮ ದೇಶ ಎಷ್ಟು ಶ್ರೇಷ್ಠ, ಎಷ್ಟು ಪ್ರಗತಿಯನ್ನು ಸಾಧಿಸಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವಾಗ ಆಂಗ್ಲರು ಬಿಬಿಸಿ ಕಾರ್ಯಕ್ರಮದಲ್ಲಿ, ಬರಹಗಳಲ್ಲಿ ನಮ್ಮ ಹುಳುಕುಗಳನ್ನು ಎತ್ತಿ ತೋರಿಸಿ ಮುಖಕ್ಕೆ ಕನ್ನಡಿ ಹಿಡಿಯುತ್ತಾರೆ ಎಂದು ಹೇಳುವಲ್ಲಿ ಯೋಗಿಂದ್ರ ಹಿಂಜರಿಯುವುದಿಲ್ಲ, ಈ ಪ್ರಬಂಧಗಳಲ್ಲಿ ಪ್ರಾಮಾಣಿಕತೆ ಮತ್ತು ಆತ್ಮಶೋಧನೆಗಳಿವೆ. ಆಂಗ್ಲರು ನಮ್ಮ ಸಂಸ್ಕೃತಿಯನ್ನು ಮೆಚ್ಚಿಕೊಂಡಿರುವ ಉಲ್ಲೇಖಗಳೂ ಸಾಕಷ್ಟಿವೆ. ಇನ್ನು ಬ್ರಿಟನ್ ಬದುಕಿನ ವಿಶೇಷ ಮೌಲ್ಯಗಳು ಮತ್ತು ವಿಚಿತ್ರ ಎನ್ನಿಸುವ ವಿಚಾರಗಳು, ಇಲ್ಲಿಯ ರಾಜ ಮನೆತನ, ರಾಜಕೀಯ ವ್ಯವಸ್ಥೆ, ನಗರ ಮತ್ತು ಗ್ರಾಮೀಣ ಬದುಕು, ಅನಿಶ್ಚಿತವಾದ ಹವಮಾನ ಮತ್ತು ಸದಾ ಜಿನುಗುವ ಮಳೆ, ಇಂಗ್ಲಿಷ್ ಸಾಹಿತ್ಯ; ಹೀಗೆ ಅನೇಕ ವಿಚಾರಗಳ ಬಗ್ಗೆ ಪ್ರಬಂಧಗಳಿವೆ.
ನನಗೆ ಈ ಕೃತಿಯಲ್ಲಿ ವಿಶೇಷವಾಗಿ ಕಂಡ ಒಂದೆರಡು ಲೇಖನದ ಬಗ್ಗೆ ಪ್ರತ್ಯೇಕವಾಗಿ ಹೇಳಬಯಸುತ್ತೇನೆ. ‘ಮಲೆನಾಡ ಮಳೆದಿನದ ಮಾತುಗಳು ಮೌನಗಳು’ ಎಂಬ ಪ್ರಬಂಧದಲ್ಲಿ ಯೋಗಿಂದ್ರ ಅವರು ಇಂಗ್ಲೆಂಡ್ ವಿಷಯವನ್ನು ಪಕ್ಕಕ್ಕಿಟ್ಟು ತಮ್ಮ ಹುಟ್ಟೂರಾದ ಮರವಂತೆಯಿಂದ ಹೊರಟು ಕೊಲ್ಲೂರು ಘಾಟಿಯನ್ನು ದಾಟಿ ಒಳ ಮಲೆನಾಡಿನ ಹಿಂಸೋಡಿಗೆ ಹೋಗಿಬರುವ ಪ್ರಸಂಗ ವಿಶೇಷವಾಗಿದೆ. ಇಲ್ಲಿ ಮಲೆನಾಡಿನ ಮುಂಗಾರು ಮಳೆಯ ವರ್ಣನೆ, ದಟ್ಟವಾದ ಹಸಿರು ಕಾಡುಗಳು, ಮಳೆಯ ಹೊದಿಕೆಯಲ್ಲಿ ಮುಸುಕು ಹಾಕಿಕೊಂಡು ಮಾತನಾಡುವ ಮರಗಳು, ಕತ್ತಲಿಗೂ ಧ್ವನಿ ಭಾಷೆ ನೀಡುವ ಕಪ್ಪೆ ಜೀರುಂಡೆಗಳು, ಶರಾವತಿಯ ಹಿನ್ನೀರಿನ ದಡದಲ್ಲಿ ಚುರುಮುರಿ ಅಂಗಡಿ ಇಟ್ಟುಕೊಂಡಿರುವಾಕೆಯ ಅನಾನುಕೂಲಗಳು, ಸಮಸ್ಯೆಗಳು, ಅವಳ ದುಃಖದ ಮಾತುಗಳಿಗೆ ಹೊಂ ಹೌದು ಎಂದು ಧ್ವನಿಗೂಡಿಸುವ ಸೌತೆಕಾಯಿ, ಮೆಣಸು ಮತ್ತು ಮಂಡಕ್ಕಿಗಳು; ಹೀಗೆ ಅಲ್ಲಿ ಅನೇಕ ಸುಂದರ ಚಿತ್ರಗಳು ರೂಪಕಗಳು ತೆರೆದು ನಿಲ್ಲುತ್ತವೆ. ಇನ್ನೊಂದು ಮರವಂತೆ ಮಳೆಗೆ ಸಂಬಂಧಿಸಿದ ಪ್ರಬಂಧದಲ್ಲಿ ಕರಾವಳಿಯಲ್ಲಿ ಸುರಿಯುವ ಮಳೆಯ ವರ್ಣನೆ ಅದ್ಭುತವಾಗಿದೆ, ಹಾಗೆ ಲೇಖಕರಿಗೆ ಬೀಳುವ ಕನಸೊಂದರಲ್ಲಿ ಮಳೆ ಒಂದು ಕನ್ಯೆಯಾಗಿ ಬಂದು ಅವಳ ಮತ್ತು ಲೇಖಕನ ಪ್ರೇಮ ಪ್ರಸಂಗ ತೆರೆದುಕೊಂಡು ಅಲ್ಲಿ ಸಂವಾದ ಆತ್ಮೀಯವಾಗಿ ಶೃಂಗಾರ ಕಾವ್ಯವೇ ಸೃಷ್ಟಿಯಾಗಿದೆ. ಯೋಗಿಂದ್ರ ಅವರು ಬ್ರಿಟನ್ನಿನ ಬಗ್ಗೆ ಬರೆಯುವ ವಿಚಾರಕ್ಕಿಂತ ಅವರ ಊರಾದ ಮರವಂತೆಯ ಬಗ್ಗೆ ಬರೆಯುವಾಗ ಅವರ ಬರಹ ಇನ್ನು ಉಜ್ವಲವಾಗುತ್ತದೆ. ಹಾಗೆಯೇ ಯೋಗಿಂದ್ರ ಅವರು ತಮ್ಮ ವೈಯುಕ್ತಿಕ ಬದುಕಿನ ಅನುಭವಗಳನ್ನು ಸೇರಿಸಿ ಬರೆದಾಗ ಅದು ಓದುಗರಿಗೆ ಆತ್ಮೀಯವಾಗುತ್ತದೆ.
'ಭಾನುವಾರದ ಇಟಾಲಿಯನ್ ಕಟಿಂಗ್' ಬಹಳ ಶ್ರೇಷ್ಠವಾದ ಪ್ರಬಂಧ. ಈ ಪ್ರಬಂಧಕ್ಕೆ ಸುಧಾ ಪತ್ರಿಕೆಯ ಯುಗಾದಿ ವಿಶೇಷಾಂಕದಿಂದ ಬಹುಮಾನ ದಕ್ಕಿದೆ. ಇಲ್ಲಿ ಹೇರ್ ಕಟಿಂಗ್ ಎಂಬ ಸಾಧಾರಣ ವಿಷಯದಲ್ಲಿ ಯೋಗಿಂದ್ರ ಅವರು ಅನೇಕ ಚಿಂತನೆಗಳನ್ನು, ಪ್ರತಿಮೆಗಳನ್ನು, ರೂಪಕಗಳನ್ನು ತಂದು ನಿಲ್ಲಿಸಿದ್ದಾರೆ. ತಗ್ಗಿಸಿದ ತಲೆ, ತಗ್ಗಿಸದೆ ಉಳಿದು ಕೊನೆಗೂ ತಗ್ಗಿಸಬೇಕಾದ ತಲೆ, ಅಹಂಕಾರ, ಅಜ್ಞಾನ, ಅರಿವಿನ ವಿಸ್ತಾರ, ಸಾಂಸ್ಕೃತಿಕ ವೈವಿಧ್ಯತೆ, ಸಂಘರ್ಷಗಳು, ಇವುಗಳನ್ನು ಒಳಗೊಂಡು ಕೊನೆಗೆ ಹೇರ್ ಕಟ್ ಮಾಡಿದಾಗ ಉರುಳಿದ ಎಲ್ಲ ಬಣ್ಣಗಳ, ಊರುಗಳ, ದೇಶಗಳ, ಜಾತಿಗಳ ಕೂದಲನ್ನು ನುಂಗಿಬಿಡುವ ಕಸದ ಬುಟ್ಟಿ ಇಲ್ಲಿ ಬಾಹ್ಯಾಕಾಶದ ಬ್ಲಾಕ್ ಹೋಲಿನ (Cosmic Black Hole) ಪ್ರತಿಮೆಯಾಗಿ ನಿಲ್ಲುತ್ತದೆ. ಇಲ್ಲಿ ಕಾಲನ ಮಹಿಮೆಯಿದೆ. ಒಂದು ಸಣ್ಣ ಪ್ರಸಂಗದಲ್ಲಿ ಇಡೀ ಬದುಕಿನ ಅನುಭವವನ್ನು ಸಾರಾಂಶವನ್ನು ಯೋಗಿಂದ್ರ ಈ ಶ್ರೇಷ್ಠ ಪ್ರಬಂಧದಲ್ಲಿ ಹಿಡಿದಿಟ್ಟಿದ್ದಾರೆ.
ಈ ಬರಹಗಳಲ್ಲಿ ಯೋಗಿಂದ್ರ ಅವರ ಸೌಂದರ್ಯ ಪ್ರಜ್ಞೆ, ಕಾವ್ಯ ಪ್ರಜ್ಞೆ, ಎದ್ದು ನಿಲ್ಲುತ್ತವೆ. ಕೆಲವು ಕಡೆ ಅವರು ಬಳಸುವ ಪದಗಳು, ಆದಿಪ್ರಾಸಗಳು, ರೂಪಕಗಳು, ಮತ್ತು ಉಂಟಾಗಿರುವ ಛಂದಸ್ಸು ಒಂದು ಗದ್ಯವನ್ನು ಪದ್ಯವಾಗಿ ನಿರೂಪಿಸುತ್ತದೆ, ಯೋಗಿಂದ್ರ ಇಲ್ಲಿ ಒಬ್ಬ ಕವಿಯೂ ಆಗಿದ್ದಾರೆ. ಕೆಲವೆಡೆ ಅವರು ಪದಗಳನ್ನು ಬಳಸಿ ಒಂದು ಸನ್ನಿವೇಶವನ್ನು ಕಟ್ಟುವಾಗ ಅಲ್ಲಿ ಒಂದು ಚಲನ ಶೀಲತೆ ಉಂಟಾಗುತ್ತದೆ. ಸ್ಥಾವರವು ಜಂಗಮವಾಗುತ್ತದೆ. ಬರಹದಲ್ಲಿಯ ನೋಟ, ಶಬ್ದ, ವಾಸನೆ, ಕ್ರಿಯೆ ಇವುಗಳಿಂದ ಒಂದು ಚಪ್ಪಟ್ಟೆಯಾಗಿರುವ ಸಾಲುಗಳು ಹಲವಾರು ಆಯಾಮಗಳನ್ನು ಪಡೆದುಕೊಂಡು ಒಂದು ಒಂದು ವರ್ಚುಯಲ್ (4D) ಅನುಭವ ಉಂಟಾಗುತ್ತದೆ. ಈ ರೀತಿಯ ವಿಶೇಷ ಅನುಭವವನ್ನು ಅರುಂಧತಿ ರಾಯ್ ಅವರ 'ಗಾಡ್ ಆಫ್ ಸ್ಮಾಲ್ ಥಿಂಗ್ಸ್ 'ಎಂಬ ಎಂಬ ಕೃತಿಯಲ್ಲೂ ಕಂಡಿದ್ದನ್ನು ಇಲ್ಲಿ ನೆನೆಯ ಬಯಸುತ್ತೇನೆ.
ಒಂದು ಬರಹ ಯಾವಾಗ ಪ್ರಬಂಧ ಸಂಕಲನವಾಗುತ್ತದೆ? ಮತ್ತು ಯಾವಾಗ ಬಿಡಿ ಬರಹವಾಗುತ್ತದೆ? ಎಂಬ ಆಲೋಚನೆ ಒಬ್ಬ ಓದುಗನಾಗಿಯೂ ಮತ್ತು ಲೇಖಕನಾಗಿಯೂ ನನ್ನನು ಕಾಡಿರುವ ವಿಚಾರ. ಸಾಮಾನ್ಯವಾಗಿ ಪ್ರಬಂಧ ಸಂಕಲನ ಒಂದು ವಿಷಯ ಮಾದರಿಯನ್ನು ಕುರಿತಾದ ಧೀರ್ಘವಾದ ಮತ್ತು ಆಳವಾದ ಅಧ್ಯಯನ. ಅಲ್ಲಿ ವೈವಿಧ್ಯತೆ ಇದ್ದರೂ ಅದು ಒಂದು ನಿರ್ದಿಷ್ಟ ವಿಷಯದ ಚೌಕಟ್ಟಿನೊಳಗೇ ಇರುತ್ತದೆ. ಬಿಡಿ ಬರಹಕ್ಕೆ ಆ ಬದ್ಧತೆ ಇರುವುದಿಲ್ಲ. ಅಲ್ಲಿ ವ್ಯಕ್ತಿ ಚಿತ್ರಣ, ಒಂದು ಸಂಸ್ಕೃತಿಯ ಪರಿಚಯ, ಸಾಹಿತ್ಯ, ಕಲೆ, ವಿಜ್ಞಾನ, ವಿಮರ್ಶೆ, ಹೇಗೆ ಅನೇಕ ವಿಚಾರಗಳ ಕಲಸು ಮೇಲೋಗರವಾಗಿರುತ್ತದೆ. ವೈಯುಕ್ತಿಕ ಅನುಭವಗಳನ್ನು, ಸನ್ನಿವೇಶಗಳನ್ನು ಒಳಗೊಂಡು ಲೇಖಕನ ವೈಯುಕ್ತಿಕ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಬಿಡಿ ಬರಹದಲ್ಲಿ ಹೆಚ್ಚು ಅವಕಾಶವಿರಬಹುದು. ಅಂದಹಾಗೆ ಒಂದು ಕಥೆ ಕಾದಂಬರಿಯನ್ನು ಬರೆಯುವುದಕ್ಕಿಂತ ಪ್ರಬಂಧ ಮತ್ತು ಬಿಡಿ ಬರಹವನ್ನು ಬರೆಯುವುದು ಸುಲಭ ಎನ್ನುವುದು ನನ್ನ ಅನಿಸಿಕೆ. ಒಂದು ಉತ್ತಮ ಪ್ರಬಂಧವನ್ನು ಬರೆಯಬೇಕಿದ್ದಲ್ಲಿ ಯೋಗಿಂದ್ರ ಅವರ "ಕಾಣುವ ಕಣ್ಣು" ಅಗತ್ಯ. ಹಾಗೆಯೇ ಅಲ್ಲಿ ಹಿನ್ನೆಲೆ ವಿಚಾರಗಳನ್ನು ಸಂಶೋಧನೆ ಮಾಡಿ ಮಾಹಿತಿಗಳನ್ನು ರಸವತ್ತಾಗಿ ಸ್ವಾರಸ್ಯಕರವಾಗಿ ಕಾವ್ಯಮಯವಾಗಿ ವ್ಯಕ್ತಪಡಿಸಿ ಹಲವಾರು ದೃಷ್ಠಿಕೋನಗಳನ್ನು ತರಬೇಕಾಗುತ್ತದೆ. ಇಲ್ಲದಿದ್ದಲ್ಲಿ ಅದು ಮಾಹಿತಿಗಳನ್ನು ವೈಕಿಪೀಡಿಯಾದಿಂದ ಓದಿದ ಶೈಕ್ಷಣಿಕ ಒಣ ಅನುಭವವಾಗುತ್ತದೆ. ಯೋಗಿಂದ್ರ ಅವರ ಇತರ ಕೃತಿಗಳನ್ನು ಹೊತ್ತು ತಂದಿದ್ದೇನೆ. ಅವುಗಳನ್ನು ಓದಲು ಕಾತರನಾಗಿದ್ದೇನೆ. ಒಟ್ಟಾರೆ ಹೇಳುವುದಾದರೆ 'ಲಂಡನ್ ಡೈರಿ' ಎಂಬ ಪ್ರಬಂಧ ಸಂಕಲನ ನನ್ನ ಅರಿವಿನ ವಿಸ್ತಾರವನ್ನು ಹೆಚ್ಚಿಸಿದೆ. ಎಲ್ಲರೂ ಓದಬೇಕಾದ ಪುಸ್ತಕ.
***