(ಎರಡು-ಮೂರು ದಶಕಗಳ ನಂತರ ಅನಿವಾಸಿಗಳು ಒಮ್ಮೊಮ್ಮೆಯಾದರೂ ಈ ತರಹದ ವಿಚಾರಕ್ಕೆ ತುತ್ತಾಗಿರುತ್ತಾರೇನೋ!)
ಜೀವನ ಸಂಗ್ರಾಮದಲ್ಲಿ ಇಳಿದವರು ನಾವು
ತಾಯಿನಾಡು ಕನ್ನಡ ನಾಡು ಬಿಟ್ಟ ಪರದೇಶಿಗಳು
ಮಹತ್ವಾಕಾಂಕ್ಷೆಯ ಮೃಗಜಲದ ಬೆನ್ನು ಹತ್ತಿದವರು ಕೆಲವರು
ಲಕ್ಷ್ಮಿಯ ಕಟಾಕ್ಷೆಯ ಆಸೆಯಲ್ಲಿ ಹಲವರುRead More »
ಹೊಸ ವರುಷ ನಮಗೆ ಜನೆವರಿ ಒಂದಾಗಿ
ಆಗಲೇ ಇದು ಎರಡನೇ ತಲೆಮಾರು.
ವಸಂತ ಮಾಸ ಯಾಕೆ ಯಾವಾಗಲೂ
ಮಾರ್ಚ್ ಯಾ ಎಪ್ರಿಲ್ ಒಂದನೇ ತಾರೀಖು
ಶುರುವಾಗಬಾರದು? ಎನ್ನುವ ಜನಾಂಗ ನಾವು.
ನಿಮ್ಮ ಈ ‘ಸಂವತ್ಸರ’
ಪ್ರನೌನ್ಸ್ ಮಾಡೋದೂ ಕಷ್ಟ ನೋಡಿ.
ಹೊಂಗೆ ಹೇಗಿರುತ್ತೇಂತ ನೋಡಿಲ್ಲ ಭೃಂಗದಿಂದ ಕಚ್ಚಿಸಿಕೊಂಡಿದ್ದು ಮಾತ್ರ ಗೊತ್ತು. ಬೇವಿನ ಮರ ಬಿಡಿ, ಜಾಲಿ ಮರಕ್ಕೂ ಈ ನಗರಗಳಲ್ಲಿ ಜಾಗವಿಲ್ಲ. ಅಷ್ಟಕ್ಕೂ ಬೇವಿನ ಮರ ಹೂ ಬಿಟ್ಟಿದೆ ಅಂದುಟ್ಟುಕೊಳ್ಳಿ! ಅದಕ್ಕೇನು ವೆನಿಲಾದ ತರ ಬೇರೆ ದೇಶದಲ್ಲಿ ಬೆಲೆ ಇದೆಯೇ?
ಮಾವಿನ ಹಣ್ಣಿಗೆ ಈಗ ವಸಂತ ಬರಲು
ಕಾಯಬೇಕಾಗಿಲ್ಲ
ವರ್ಷದ ಹನ್ನೆರಡೂ ತಿಂಗಳೂ
ಫ್ರೂಟಿ ಲಭ್ಯ
ಹಾಗೆಂದು ನಮಗೆ ವಸಂತ, ಚೈತ್ರ ಅಂದು ಕನ್ಫೂಸ್ ಮಾಡಬೇಡಿ ಅವು ಹುಡುಗಿ ಹೆಸರು ಅಂದುಕೋತೀವಿ ನಿಯತ್ತಾಗಿ ’ಸ್ಪ್ರಿಂಗ್’ ಎನ್ನಲು ಆಗೋದಿಲ್ಲವೇ ನಿಮಗೆ?
ಈ ಜನ್ಮದಲ್ಲಿ ಒಂದೇ ಬಾಲ್ಯ ಒಂದೇ ಹರೆಯ
ಅದೆಲ್ಲ ಬೇಂದ್ರೆಯಲ್ಲೇ ಕಾಲವಾಯಿತು
ಈಗ ನಮಗೋ
ಯಾವಾಗ ಬೇಕೋ ಆವಾಗ ಹೊಸ ಜನ್ಮ
ಹೊಸ ಮುಖ ಹೊಸ ತಿಕ
ಅರವತ್ತರ ಮಡೋನಾ ಕೂಡ ಕಾಸ್ಮೆಟಿಕ್ ಸರ್ಜರಿಯಲ್ಲಿ ಮೂವತ್ತರ ಬೆಡಗಿ ಮುದಿ ಯಯಾತಿಯ ಜೇಬಿನಲ್ಲಿ ವಯಾಗ್ರ ಸಾವಿನ ಕಟೆಕಟೆಯಲ್ಲಿ ಕೂಡ ನಮಗೆ ಸನತ್ಕುಮಾರ ನೆನಪಾಗುವುದಿಲ್ಲ ಬಿಡಿ