ಮೊದಲನೆಯ ಮಹಾಯುದ್ಧದ ಅಪರಿಚಿತ ಕನ್ನಡಿಗ ಯೋಧ –ಡಾ. ರಾಜಾರಾಮ್ ಕಾವಳೆ ಬರೆದ ಲೇಖನ

RRCavaleGreyScale
The Author

ಡಾ ರಾಜಾರಾಂ ಕಾವಳೆಯವರು ಈಗಾಗಲೇ ತಮ್ಮ ಲೇಖನಗಳಿಂದ ‘ಅನಿವಾಸಿ’ಗೆ ಚಿರಪರಿಚಿತರು. ಯು ಕೆ ಕನ್ನಡಬಳಗದ ಪ್ರಾರಂಭದಿಂದ ಅದರ ಬೆಂಬಲಿಗರಾಗಿ, ಪೋಷಕರಾಗಿ ಅಲ್ಲದೇ ಈಗಲೂ ಸತತವಾಗಿ ಅದರ ಸಂವಹನದ ಸೂತ್ರಧಾರರಾಗಿ ಅವಿರತ ದುಡಿಯುತ್ತಿದ್ದಾರೆ. ಅವರು ಇಲ್ಲಿಯ ಕನ್ನಡಿಗರ ಹೆಮ್ಮೆ. ಎಂತಲೇ ಕಳೆದ ಬಳಗದ ಕೂಟದಲ್ಲಿ ಅವರಿಗೆ ಸನ್ಮಾನ ಮಾಡಲಾಗಿದೆ. ಈ ಅಪರೂಪದ ಲೇಖನದಲ್ಲಿ ಹೆಚ್ಚಿನ ಜನರಿಗೆ ಪರಿಚಯವಿಲ್ಲದ ಆಧುನಿಕ ಅಂದರೆ ಇಪ್ಪತ್ತನೆಯ ಶತಮಾನದ ಕನ್ನಡ ಯೋಧನ ಬಗ್ಗೆ ಸ್ವಾರಸ್ಯಕರ ಬರವಣಿಗೆಯನ್ನು ಉಣಪದಿಸಿದ್ದಾರೆ. ಇನ್ನು ಓದಿರಿ …
ನಮ್ಮ ಬೆಂಗಳೂರು ಮೆಡಿಕಲ್‌ಕಾಲೇಜು 2005ನೆಯ ಡಿಸಂಬರಿನಲ್ಲಿ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸಿತು. ಈ ಮೂರು ದಿನಗಳ ಆಚರಣೆಯಲ್ಲಿ ನಾನು ಪಾಲ್ಗೊಂಡಿದ್ದೆ. ಹಲವುದಿವಸಗಳ ಮೊದಲು ಕಾಲೇಜಿಗೆ ತೆರಳಿ ಆ ಮಹೋತ್ಸವಕ್ಕೆ ನೊಂದಣೆಮಾಡಿ, ಊರಿನ ಬದಲಾವಣೆಗಳನ್ನು ನೋಡಲು ಬಸವನಗುಡಿಯಲ್ಲಿದ್ದ ನನ್ನ ತಮ್ಮನ ಮನೆಗೆ ನಡೆದುಕೊಂಡೇ ಹೋದೆನು. ಪ್ರಸಿದ್ಧವಾದ ಕೆ ಆರ್ ರೋಡಿನಲ್ಲಿಇದ್ದ ಬೃಹತ್ ಸಾಲುಮರಗಳು ಮಾಯವಾಗಿದ್ದವು. ಅವುಗಳ. ಬದಲು ಹಾಕಿದ್ದ ಇತರ ಮರಗಳೂ ದೊಡ್ಡದಾಗಿ ಬೆಳೆದಿದ್ದವು. ಇವುಗಳು ನಾನು ಬೆಂಗಳೂರನ್ನು ಬಿಟ್ಟು ಎಷ್ಟು ವರ್ಷಗಳಾಗಿದ್ದವು ಎಂಬುದನ್ನು ಸೂಚಿಸುತ್ತದೆ. ಆ ರಸ್ತೆಯಲ್ಲಿ ಗುರುತೇ ಸಿಗದಂತಹ ಅನೇಕ ಕಟ್ಟಡಗಳೂ ಗಿಡಗಳು ಉದಯಿಸಿ ನಾನು ಎಲ್ಲಿದ್ದೇನೆಂಬುದೂ ನನಗೆ ಸಂಶಯ ಬಂದಿತ್ತು. ಗಡಿಯಾರದ ಗೋಪುರವಿದ್ದ ನನ್ನ ನೆಚ್ಚಿನ ನ್ಯಾಷನಲ್ ಹೈಸ್ಕೂಲಿನ ಕಟ್ಟಡವು ಅಡ್ಡಲಾಗಿ ಬಂದ ಹೊಸಕಟ್ಟಡದಿಂದ ಮರೆಯಾಗಿದ್ದಿತು. ಹತ್ತಿರವೇ ಇದ್ದ ವಾಣಿವಿಲಾಸ್ ವೃತ್ತವು ಪಾಳುಬಿದ್ದು ಅದರಲ್ಲಿ ಇದ್ದ ’ಐದು ಲಾಂದ್ರದ ಕಂಬ’ ಮುರಿದು ಅಡ್ಡಲಾಗಿ ಬಿದ್ದಿತ್ತು. ಈಗ ಆ ಜಾಗದಲ್ಲಿ ಒಂದು ಮೇಲುಹಾದಿಯನ್ನು ಕಟ್ಟುತ್ತಿದ್ದರು, ಅದಕ್ಕೆ ’ನರಸಿಂಹಯ್ಯಫ್ಲಯ್‍ಒವರ್’ ಎಂಬ ಹೆಸರನ್ನು ಇಟ್ಟಿದ್ದಾರೆ. ಈ ಜಾಗವನ್ನು ದಾಟಿ ಅದೇ ರಸ್ಥೆಯಲ್ಲಿ ಮುಂದುವರೆದು ನನ್ನ ತಮ್ಮನ ಮನೆಗೆ ತೆರಳಿದೆನು. ಅಲ್ಲೇ ಇದ್ದ ಅಡ್ಡರಸ್ಥೆ ಹೆಚ್ ಬಿ ಸಮಾಜ ರಸ್ಥೆಯ ಮೂಲೆಗೆ ಬಂದು ನಿಲ್ಲಲು, ನನ್ನ ಮನಸ್ಸಿನಲ್ಲಿ ಹಳೆಯ ನೆನಪುಗಳು ಹರಿಯತೊಡಗಿದವು. ನನ್ನ ಕಣ್ಣುಗಳು ಮಂಜಾದವು, ನನ್ನ ಕಿವಿಗಳು ಮಂದವಾದವು, ಚಲಿಸುತ್ತಿದ್ದ ವಾಹನಗಳು ನಿಶ್ಶಬ್ದವಾದವು. ನನ್ನ ಮನಸ್ಸು ನನ್ನನ್ನು ನನ್ನ ಬಾಲ್ಯಕ್ಕೆ ಕೊಂಡೊಯ್ಯಿತು.

ಪೊಲೀಸಿನ ಗುಂಡಿಗೆ ಹತನಾದ ಯುವಕ  

The Spot
ದಾಸಪ್ಪನ ಮಗ ಪೊಲೀಸಿನ ಗುಂಡಿಗೆ ಬಲಿಯಾದ ಸ್ಥಳ. ಹೆಚ್ ಬಿ ಸಮಾಜ ರಸ್ಥೆ ಮತ್ತು ಕೆ ಆರ್ ರೋಡು ಸೇರುವ ಜಾಗದಲ್ಲಿ (Photo t by Sundar Raj Cavale taken on 5th October 2015)

ಆ ದಿನ ವರಮಹಾಲಕ್ಷ್ಮಿಯ ಹಬ್ಬದ ದಿನವಾಗಿದ್ದಿತು ನಮಗೆಲ್ಲರಿಗೂ ಸಂಭ್ರಮವೇ ಸಂಭ್ರಮ. ನಮ್ಮ ಮನೆ, ಚಿಕ್ಕಪ್ಪನವರ ಮನೆ ಮತ್ತು ಸೋದರತ್ತೆಯ ಮನೆಗಳು ಒಂದರ ಪಕ್ಕದೊಂದರಲ್ಲಿದ್ದವು. ಒಳ ಕಾಂಪೌಂಡುಗಳಲ್ಲಿದ್ದ ಗೇಟುಗಳ ಮೂಲಕ ನೆಂಟರೆಲ್ಲರೂ ಮಕ್ಕಳ ಸಮೇತ ತೆರಳಿ ನಮ್ಮ ಸೋದರತ್ತೆಯವರ ಮನೆಯಲ್ಲಿ ಊಟಕ್ಕೆ ಕುಳಿತ್ತಿದ್ದೆವು. ರುಚಿಯದ ಊಟವನ್ನು ಎಲ್ಲರೂ ಸವಿಯುತ್ತಿದ್ದೆವು. ನಾವು ಮಕ್ಕಳೂಸೇರಿ ಎಲ್ಲರೂ ನಿಶ್ಯಬ್ಧವಾಗಿ ಊಟಮಾಡುತ್ತಿದ್ದೆವು. ಜನ ಮತ್ತು ವಾಹನಗಳ ಸಂಚಾರವಿಲ್ಲದುದರಿಂದ ಊರೇ ನಿಶ್ಯಬ್ಧವಾಗಿತ್ತು. ಹೀಗಿರುವಲ್ಲಿ ಇದ್ದಕ್ಕಿದ್ದಹಾಗೆ, ’ಠಫಾರ್, ಠಫಾರ್’ ಎಂಬ ಶಬ್ಧವು ಆಕಾಶದಲ್ಲಿನ ಮರುಧ್ವನಿಗಳ ಅಲ್ಲದೆ ಕಾಗೆಗಳ ’ಕಾ-ಕಾ’ ಗಳೊಂದಿಗೆ ಕೇಳಿಸಿದವು. ಹಿರಿಯರು ಅದು ಬಂದೂಕದ ಶಬ್ದವೆಂದರು. ಊಟಮಾಡುತ್ತಿದ್ದವರೆಲ್ಲರೂ ಕೈಗಳನ್ನು ಅರ್ಧಕ್ಕೇ ನಿಲ್ಲಿಸಿ ಹಿರಿಯರೆಲ್ಲರೂ ಮಕ್ಕಳಾದ ನಮ್ಮೆಲ್ಲರ ಕಡೆಗೆ ಕಣ್ಣು ಹಾಯಿಸಿದರು. ಎಲ್ಲಾ ಸಣ್ಣ ಮಕ್ಕಳುಗಳು ಅಲ್ಲಿದ್ದವು, ಆದರೆ ಸ್ವಲ್ಪ ಹಿರಿಯರಾದ ನಮ್ಮ ಅಣ್ಣರಿಬ್ಬರೂ ಮತ್ತು ಸೋದರತ್ತೆಯ ಮಗನೂ ಸೇರಿ ಮೂವರು ಅಲ್ಲಿ ಇರಲಿಲ್ಲ!   ನಮ್ಮ ತಂದೆಯವರು, ಚಿಕ್ಕಪ್ಪನವರು ಮತ್ತು ಸೊದರತ್ತೆಯವರು ಊಟವನ್ನು ಅರ್ಧಕ್ಕೇ ನಿಲ್ಲಿಸಿ ಈ ಮೂರು ಮಕ್ಕಳನ್ನು ಹುಡುಕಲು ಹೊರಟರು. ಬಸವನಗುಡಿಯಲ್ಲಿರುವ ಮನೆಗಳಿಗೆಲ್ಲಾ ಕಾಂಪೌಂಡುಗಳಿದ್ದು, ಎಲ್ಲಾ ಮನೆಗಳ ಹಿಂಬದಿಯಲ್ಲಿ ಕನ್ಸರ್ವೆನ್ಸಿ ರಸ್ಥೆಯೆಂಬ ಸಣ್ಣ ರಸ್ಥೆಗಳಿರುವವು. ಈ ರಸ್ಥೆಗಳ ಮೂಲಕ ಈ ಹಿರಿಯರು ಈ ಅಲೆಮಾರಿ ಮಕ್ಕಳನ್ನು ಕೆ ಆರ್ ರಸ್ಥೆಯ ಹಿಂಬದಿಯ ರಸ್ಥೆಯಲ್ಲಿ ಕಂಡು ಅವರನ್ನು ಒದೆಗಳೊಂದಿಗೆ ಎಳೆದುಕೊಂಡು ಮನೆಗೆ ಸೇರಿದರು. ಅಲ್ಲಿ ಪೊಲೀಸಿನ ಗುಂಡಿಗೆ ಹತನಾದ ಯುವಕನು ನಮ್ಮ ಮನೆಯ ಬಳಿ ವಾಸಮಾಡುತ್ತಿದ್ದ ’ದಾಸಿ’ ಎಂಬ ಜಟಕಗಾಡಿಯ ಚಾಲಕನ ಮಗನೆಂದೂ, ಗುಂಡಿನೇಟಿಗೆ ರಸ್ಥೆಯಲ್ಲಿ ಬಿದ್ದಿದ್ದ ಆ ಯುವಕನನ್ನು ಪೊಲೀಸಿನವರು ಎಳೆದು ತಮ್ಮ ವ್ಯಾನಿನೊಳಗೆ ಹೇರಿಸಿದ್ದನ್ನು ತಾನು ಸ್ವತಹ ನೋಡಿದೆನೆಂದು ನಮ್ಮ ದೊಡ್ಡಣ್ಣನಿಂದಲೇ ತಿಳಿಯಿತು. ಪೊಲೀಸಿನವರು ಏತಕೆ ಗುಂಡುಹಾರಿಸಿದರು? ಅಲ್ಲದೇ ಆ ಬಡಪಾಯಿ ಜಟಕ ಗಾಡಿಯ ಚಾಲಕನ ಮಗನನ್ನೇಕೆ ಕೊಂದರು? ಎಂಬ ವಿಚಾರಗಳಿಗೆ ’ದಾಸಿ’ ಎಂಬ ಆ ಚಾಲಕನ ವಿಚಾರ ಮತ್ತು ಅಂದಿನ ಮೈಸೂರು ರಾಜ್ಯದ ಚರಿತ್ರೆಯನ್ನು ಸ್ವಲ್ಪ ಅರಿಯುವುದು ಅವಶ್ಯಕ.

ಮೊದಲನೆಯ ಮಹಾಯುದ್ಧದ ಶತಾಬ್ಧಿ

ಮಹಿಳೆಯು ಪುಷ್ಪ ಹಾರೈಸುತ್ತಿರುವವನ ಎಡಪಕ್ಕದಲ್ಲಿರುವ ಯೋಧನ ಹಾಗೆ ’ದಾಸಪ್ಪನು’ ಇದ್ದನು. (photo from BBC website)
ಮಧ್ಯದಲ್ಲಿರುವ ಯೋಧ ’ದಾಸಪ್ಪ’ನ ತದ್ರೂಪ! (ಕೃಪೆ : BBC website)

ಈಗ ಯೂರೋಪಿನಾದ್ಯಂತ ಮೊದಲನೆಯ ಮಹಾಯುದ್ಧದ 1914-1918   ಶತಾಬ್ಧಿಯನ್ನು ಆಚರಿಸುತ್ತಿದ್ದಾರೆ. ಆ ಯುದ್ಧದಲ್ಲಿ ಭಾರತದ ಲಕ್ಷಾಂತರ ಸಾಮಾನ್ಯ ಯೋಧರು ಬ್ರಿಟಿಷರ ಸೈನ್ಯಕ್ಕೆ ಸೇವೆ ಸಲ್ಲಿಸಿದ್ದರು. ಅವರಲ್ಲಿ ಅನೇಕ ಕನ್ನಡಿಗರೂ ಇದ್ದರು. ಆದರೂ ಈ ಭಾರತದ ಯೋಧರನ್ನು ಆಗ ಮತ್ತು ಈಗಲೂಕೂಡ ಭಾರತದಲ್ಲಿ ಮನ್ನಿಸಿ ಗಣನೆಗೆ ತೆಗೆದುಕೊಳ್ಳುವವರು ಅತಿವಿರಳ. ಅದೇಕೆಂದರೆ ಬ್ರಿಟಿಷರ ಮತ್ತು ಅವರಿಗೆ ಸಂಭಂಧಪಟ್ಟ ಯಾವುದೇ ವಿಚಾರಗಳನ್ನು ಒಂದೇ ಹೊಡೆತದಲ್ಲಿ ತಿರಸ್ಕರಿಸುವುದು ಅವರಿಗೆ ಒಂದು ಭೂಷಣ. ಈ ತಿರಸ್ಕಾರದಲ್ಲಿ ತ್ಯಾಗಮಾಡಿದ ಭಾರತದ ಈ ಯೋಧರು ಮರೆತು ಹೋಗಿದ್ದಾರೆ. ಮಹಾತ್ಮ ಗಾಂಧಿಯವರೂಕೂಡ ಈ ಯೋಧರನ್ನು ಯುದ್ಧಕ್ಕೆ ಕಳುಹಿಸುವುದಕ್ಕೆ ತಮ್ಮ ಸಮ್ಮತವನ್ನು ನೀಡಿದ್ದರು. ಆದರೂ ಆಗಿನ ಜನತೆಯು ಸ್ವಾತಂತ್ರ್ಯಗಳಿಸಲು ಪ್ರೇರಿತರಾಗಿ, ಬ್ರಿಟಿಷರ ಆಡಳಿತದ ಸರ್ಕಾರ ಮತ್ತು ಸೈನ್ಯದಲ್ಲಿ ಕೆಲಸಮಾಡುವವರನ್ನು ಭಾರತದ ವೈರಿಗಳು ಎಂದು ಪರಿಗಣಿಸುತ್ತಿದ್ದರು. ಆದುದರಿಂದ ಈ ಯೋಧರನ್ನು ಮರೆತಿರುವುದು ಆಶ್ಚರ್ಯವಲ್ಲ. ಒಂದು ಸಮಯ ಭಾರತಕ್ಕೆ ಬ್ರಿಟಿಷರು ಅಥವ ಇತರ ಯೂರೋಪಿಯನ್ನರು ಬರದೇ ಹೋಗಿದ್ದರೆ ಭಾರತವು ಯಾವತರಹದ ವಿವಿಧ ವಿಭಾಗಗಳಾದ ರಾಜ್ಯಗಳಾಗುತ್ತಿತ್ತು ಅಥವ ಯಾವ ರೀತಿಯ ದೇಶವಾಗುತ್ತಿತ್ತು ಎಂಬುದನ್ನು ಯೋಚಿಸುವುದು ಈ ನನ್ನ ಲೇಖನಕ್ಕೆ ಸಂಗತವಾದುದಲ್ಲ.

ದಾಸಪ್ಪ

ಮೊದಲನೆಯ ಮಹಾಯುದ್ಧದ  ಒಬ್ಬ ಭಾರತದ ನಿವೃತ್ತ ಯೋಧನನ್ನು ನಾನು ಕಂಡಿದ್ದೆ ಅಲ್ಲದೆ ಆತನು ನಮ್ಮ ಮನೆತನ ಮತ್ತು ಸಮುದಾಯಕ್ಕೆ ಬಹಳ ಬೇಕಾದವನಾಗಿದ್ದ. ಆತನ ಹೆಸರು ದಾಸಪ್ಪ ಎಂದು. ಆತನು ಈಜಿಪ್ಟಿನ ಕದನದಲ್ಲಿ ಎಡಗಾಲಿಗೆ ಗಾಸಿಗೊಂಡು ಊನನಾಗಿ ಕುಂಟುತ್ತಿದ್ದನು. ನಡೆಯುವಾಗ ಅವನು ಬಗ್ಗಿ ಎಡಗಾಲಿನ ಮಂಡಿಯಮೇಲೆ ತನ್ನ ಕೈಯನ್ನು ಊರಿ ನಡೆಯುತ್ತಿದ್ದನು. ಅವನು ಖಾಕಿಬಟ್ಟೆಯ ರುಮಾಲನ್ನು ಕಟ್ಟಿದ್ದನು. ಅದರ ಮುಂಭಾಗದಲ್ಲಿ ಬಟ್ಟೆಯ ಒಂದು ಕೊನೆ ಕಿರೀಟದ ಗರಿಯಂತೆ ನಿಂತಿರುತಿತ್ತು ಮತ್ತು ಬಟ್ಟೆಯ ಹಿಂಭಾಗವು ಬಾಲದಂತೆ ಇಳಿಬಿಟ್ಟಿತ್ತು. ಆತನು ಬಹು ದಟ್ಟವಾದ ಕಪ್ಪಾದ ಹುರಿಮೀಸೆಯನ್ನು ಬಿಟ್ಟಿದ್ದನು. ಅವನ ಖಾಕಿ ಅಂಗಿ ಮತ್ತು ಶರಾಯಿಗಳಿಗೆ ಹೊಳೆಯುವ ಹಿತ್ತಾಳೆ ಗುಂಡಿಗಳಿದ್ದವು. ಒಂದು ಸಣ್ಣ ಪದಕವನ್ನೂ ತನ್ನ ಅಂಗಿಗೆ ಸಿಗಿಸಿದ್ದನು. ಅವನು ನಿವೃತ್ತನಾಗಿದ್ದರೂ ಸೈನ್ಯದ ಸಮವಸ್ತ್ರವನ್ನು ಧರಿಸುತ್ತಿದ್ದನು. ಈ ಸುಯೋಗಕ್ಕೆ ಬ್ರಿಟಿಷಿನ ಮಿಲಿಟರಿಯು ವಿಶೇಷ ಸವಲತ್ತನ್ನು ಅವನಿಗೆ ಕೊಟ್ಟಿದ್ದರು. ಆತನು ಮಾಗಡಿ ಕೇಂಪೇಗೌಡನ(2) ಸಂತತಿಯವನೆಂದೂ ಮತ್ತು ಆತನ ಮನೆತನದಲ್ಲಿ ಎಲ್ಲರೂ ಸೈನಿಕರೆಂತಲೂ ಹೇಳುತ್ತಿದ್ದನು. ಆತನನ್ನು ನಾನು ಮೊದಲು ನೋಡಿದ್ದು ಯಾವಾಗ ಎಂಬುದು ನನಗೆ ಜ್ಞಾಪಕವಿಲ್ಲ, ಏಕೆಂದರೆ ನನಗೆ ಆಗಿನ್ನೂ ಎರಡು ಅಥವ ಮೂರು ವರ್ಷಗಳ ವಯಸ್ಸು. ನನಗೆ ಅರಿವು ಮತ್ತು ತಿಳುವಳಿಕೆಗಳು ಬಂದಾಗಿನಿಂದಲೂ ದಾಸಪ್ಪನನ್ನು ನೋಡಿದ್ದೆನು. ಆದುದರೀಂದಲೇ ಆತನ ಲಕ್ಷಣದ ವಿವರಣೆಯು ನನಗೆ ಇನ್ನೂ ಸ್ಪಷ್ಟವಾಗಿ ಜ್ಞಾಪಕವಿದೆ. ಆತನು ಯಾವ ಬಿರುದು ಸನ್ಮಾನಗಳನ್ನು ಗಳಿಸಿದ ಸೇನಾಧಿಕಾರಿಯಲ್ಲ, ಯುದ್ಧದ ಯೋಧರಿಗೆ ಆಸರೆ ನೀಡುತ್ತಿದ್ದ ಸೈನ್ಯದ ಕಾಲಾಳು, ಬ್ರಿಟಿಷ್ ಸೈನ್ಯದ ’ಅಶ್ವಪಡೆ’ (Cavalry)ಯಲ್ಲಿ ಕುದುರೆಗಳನ್ನು ನೋಡಿಕೊಳ್ಳುವ ಪ್ಯಾದೆಯಾಗಿದ್ದನು.

 ’ದಾಸಿ’

Kudure Bandi
ದಾಸಪ್ಪನ ಕುದುರೆಗಾಡಿ ಈ ತರದ್ದು    CC Wiki

ದಾಸಪ್ಪನನ್ನು ಎಲ್ಲರೂ ’ದಾಸಿ’ ಎಂದು ಕರೆಯುತ್ತಿದ್ದರು. ಅದು ಅವನ ಬ್ರಿಟಿಷ್ ಅಧಿಕಾರಿಗಳು ಇಟ್ಟ ಅಡ್ಡನಾಮವಿದ್ದಿರಬಹುದು. ನಾವೆಲ್ಲರೂ ಅವನನ್ನು ಯಾವಾಗಲೂ ’ದಾಸಿ’ಎಂದೇ ಕರೆಯುತ್ತಿದ್ದೆವು. ಯುದ್ಧದಲ್ಲಿ ಊನನಾಗಿದ್ದುದರಿಂದ ಆತನನ್ನು ಬ್ರಿಟಿಷ್ ಮಿಲಿಟರಿಯು ನಿವೃತ್ತಗೊಳಿಸಿ ಆತನಿಗೆ ಮೈಸೂರು ಟಾಂಗತಹದ ಒಂದು ದೊಡ್ಡ ಜಟಕಾ ಬಂಡಿಯನ್ನು ಕುದುರೆಯ ಸಹಿತ ಪಿಂಚಿಣಿಯೊಂದಿಗೆ ಕೊಟ್ಟಿದ್ದರು. ಅದರ ಜೊತೆಗೆ ಗಾಡಿಯ ದುರಸ್ತಿಗೆ, ಕುದುರೆಯ ಸಂರಕ್ಷಣೆಗೆ ಮತ್ತು ಆತನ ಮೀಸೆಯನ್ನು ಆಗಿನ ಮಿಲಿಟರಿಯ ನಿಯಮದಂತೆ ಬೆಳೆಸಿ ಅದಕ್ಕೆ ಕಪ್ಪುರಂಗನ್ನು ಲೇಪಿಸಲು ’ಮೀಸೆಯ ಭತ್ಯ’ವನ್ನೂ ಅವನಿಗೆ ಜೀವನಾಂಶದೊಂದಿಗೆ ಕೊಡುತ್ತಿದ್ದರು. ಬ್ರಿಟಿಷಿನ ದಂಡು ನೇರವಾಗಿ ಇಂಗ್ಲೆಂಡಿನ ಸರ್ಕಾರದ ಆಳ್ವಿಕೆಯಲ್ಲಿದ್ದುದರಿಂದ ಈ ಪಿಂಚಿಣಿಗಳು ದಾಸಪ್ಪನಿಗೆ ನೇರವಾಗಿ ಲಂಡನ್ನಿನಿಂದ ಬರುತ್ತಿದ್ದವು. ಬಸವನಗುಡಿಯಲ್ಲಿದ್ದ ನಮ್ಮ ಮನೆಯ ಹತ್ತಿರವೇ ಇದ್ದ ಪಕ್ಕದ ರಸ್ಥೆಯ ಒಳಭಾಗದ ಓಣಿಯಲ್ಲಿದ್ದ ಒಬ್ಬರ ಮನೆಯ ಗಾಡೀಖಾನೆಯಲ್ಲಿ ಆತನು ತನ್ನ ಹೆಂಡತಿ ಮತ್ತು ಮಗನೊಂದಿಗೆ ವಾಸವಾಗಿದ್ದನು. ಬೆಂಗಳೂರಿನ ಬಸವನಗುಡಿಯಲ್ಲಿ ಅನೇಕ ನಿವೃತ್ತ ಉನ್ನತ ಸರ್ಕಾರಾಧಿಕಾರಿಗಳೂ ಅಲ್ಲದೆ ನಮ್ಮ ಮನೆತನದಹಾಗೆ ಅನೇಕ ಮಧ್ಯಮ ವರ್ಗದವರು ನೆಲೆಸಿದ್ದರು. ಹಲವಾರು ಗಣ್ಯರು ಮೋಟಾರುವಾಹನಗಳನ್ನು ಮತ್ತು ಕುದುರೆಯ ಕೋಚ್‌ಗಾಡಿಗಳನ್ನು ಹೊಂದಿದ್ದರು. ಆದರೆ ನಮ್ಮ ಮನೆತನದವರ ಹಾಗೆ ಇದ್ದ ಅನೇಕ ಸಂಸಾರಗಳಿಗೆ ’ದಾಸಿ’ಯ ಗಾಡಿ ಮತ್ತು ಇತರ ಜಟಕಾಗಾಡಿಗಳೇ ಮುಖ್ಯ ಸಾರಿಗೆಗಳಾಗಿದ್ದವು. ದಾಸಿಯು ನಮಗೆ ಎಷ್ಟು ಪರಿಚಿತನಾಗಿದ್ದನೆಂದರೆ ಅನೇಕಸಲ ನಾನು ನನ್ನ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ದಾಸಿಯೂ ತನ್ನಗಾಡಿಯಲ್ಲಿ ತನ್ನ ಮನೆಗೆ ಹಿಂತಿರುಗುತ್ತಿದ್ದನು. ಅವನು ನನ್ನನ್ನು ನೋಡಿ, ’ಏಯ್ ರಾಜಪ್ಪಾ, ಬಾಪ್ಪ, ನನ್‌ಗಾಡಿಯಾಕ್ಕೆ ಕೂಂಡ್ರಪ್ಪ’ ಎಂದು ಕರೆಯುತ್ತಿದ್ದನು. ಅದ್ದಕ್ಕೆ ನಾನು, ’ಪರವಾಗಿಲ್ಲ ದಾಸೀ ನಾನು ನಡಕೊಂಡೇ ಮನೆಗೆ ಹೋಗುತ್ತೀನಿ’ ಅಂದ್ರೆ ಅವನು, ’ಅದ್ಯಾಕ್ಕ? ನೀನು ಕುಂಡ್ರೂನೂ ನನ್ ಕುದ್ರೆ ಮನೀಕಡೆ ಓಯ್ತದೆ, ಕುಂಡ್ರ್‌ದೇ ಇದ್ರೂನು ಓಯ್ತದೆ, ಬಾ ಇತ್ಲಾಗ್ ಬಂದ್ ಕುಂಡ್ರು’ ಎಂದು ನನಗೆ ಒತ್ತಾಯಿಸುತ್ತಿದ್ದನು.

ಬೆಂಗಳೂರಿನ ಕರಗ

BengaluruKaraga GreyScale
ಬೆಂಗಳೂರು ಕರಗ

ನಾನು ಮತ್ತು ನನ್ನ ಸಹೋದರ ಸಹೋದರಿಯರೆಲ್ಲರೂ ಬಹಳ ಚಿಕ್ಕ ವಯಸ್ಸಿನವರಾಗಿದ್ದುದರಿಂದ ನಾವೆಲ್ಲ ಎಂಟುಮಕ್ಕಳೂ ದಾಸಿಗಾಡಿಯಲ್ಲಿ ಒಟ್ಟಾಗಿ ನಮ್ಮ ಅಮ್ಮಳೊಂದಿಗೆ ಕೂಡುತ್ತಿದ್ದೆವು. ನನ್ನ ಇಬ್ಬರು ಅಣ್ಣಂದಿರು ದಾಸಿಯ ಪಕ್ಕದಲ್ಲಿ ಜಟಕಾದ ಮುಂಭಾಗದಲ್ಲಿ ಮುಮ್ಮುಖವಾಗಿ ಕೂರುತ್ತಿದ್ದರು. ನಮ್ಮ ತಂದೆ ಮತ್ತು ಸೋದರಮಾವ ತಮ್ಮ ಸೈಕಲ್ಲುಗಳಮೇಲೆ ನಮ್ಮನ್ನು ಹಿಂಬಾಲಿಸುತ್ತಿದ್ದರು. ಹೀಗಿತ್ತು ನಮ್ಮ ಮೆರವಣಿಗೆ. ಮಿನರ್ವ ಟಾಕಿಸ್, ಶಿವಾಜಿ ಟಾಕಿಸ್, ಸಿಟಿಟಾಕಿಸ್, ಪ್ರಭಾತ್ ಟಾಕಿಸ್‍ಗಳಂತಹ ಸಿನಿಮಾಗಳಿಗೆ ಪ್ರತಿ ತಿಂಗಳೂ ಹೊಸದಾಗಿ ಬರುತ್ತಿದ್ದ ಸಿನಿಮಾಗಳಿಗೆ ನಮ್ಮ ಮೆರವಣಿಗೆ ಸಾಗುತ್ತಿತ್ತು. ಸಿಟಿ ಮಾರ್ಕೆಟ್ಟಿನ ಪಕ್ಕದಲ್ಲೇ ಇದ್ದ ಡಾಕ್ಟರಾಗಿದ್ದ ನಮ್ಮ ತಂದೆಯವರ ಶಾಪಿಗೆ ಹೋಗುವುದೆಂದರೆ ನಮಗೆ ಬಹಳ ಸಂಭ್ರಮ. ಇದನ್ನು ಯಾವಾಗಲೂ ಎದುರು ನೋಡುತ್ತಿದ್ದೆವು. ಏಕೆಂದರೆ ನಮ್ಮ ತಂದೆಯವರ ಶಾಪಿನ ಪಕ್ಕದಲ್ಲೇ ಒಂದು ’ಹೊಟೆಲ್’ ಇದ್ದಿತು. ಶಾಪಿನ ಒಳ ಕೊಠಡಿಯ ಹಿಂಭಾಗದಲ್ಲಿ ಒಂದು ಬಾಗಿಲಿತ್ತು. ಅದನ್ನು ತೆರೆದರೆ ಹೊಟೆಲ್ಲಿನ ಅಡುಗೆಮನೆಗೆ ಒಯ್ಯುತ್ತಿತ್ತು. ಅಲ್ಲಿಂದ ನೇರವಾಗಿ ನಮ್ಮೆಲ್ಲರಿಗೂ ಸರಾಗವಾಗಿ ದೋಸೆಗಳು ಒದಗುತ್ತಿದ್ದವು. ಆ ದೋಸೆಗಳಂಥಹ ರುಚಿಯನ್ನು ಯಾವ ಸ್ಥಳದಲ್ಲೂ ಇನ್ನೂ ಕಂಡಿಲ್ಲ. ದೋಸೆಯ ರುಚಿಯೊಂದೇ ಅಲ್ಲ ನಮಗೆ ಆಕರ್ಷಕ, ಬೆಂಗಳೂರಿನ ಕರಗದ ರಥಗಳ ಮೆರವಣಿಗೆಯನ್ನು ನೋಡುವುದೂ ನಮಗೆ ವಿಶೇಷ. ಪ್ರಸಿದ್ಧವಾದ ಬೆಂಗಳೂರಿನ ಕರಗ ದೊಡ್ಡಪೇಟೆಯ ಧರ್ಮರಾಯನ ದೇವಸ್ಥಾನದಿಂದ ಹೊರಟು ಸಿಟಿಮಾರ್ಕೆಟ್ಟಿನ ಮುಂದೆ ಸಾಗಿ ನಮ್ಮ ತಂದೆಯವರ ಶಾಪಿನ ಮುಂದೆ ಬಂದು, ಅರಳೇ ಪೇಟೆ, ಚಿಕ್ಕಪೇಟೆ, ಬಳೇಪೇಟೆ ಮತ್ತು ಬೆಂಗಳೂರಿನ ಇತರ ಹಳೆಯಪೇಟೆಗಳನ್ನು ಸುತ್ತಿ ವಾಪಸ್ಸು ಧರ್ಮರಾಯನ ದೇವಸ್ಥಾನಕ್ಕೆ ಹಿಂತಿರುಗುತ್ತಿತ್ತು. ’ಕರಗವು’ ಸಾಮಾನ್ಯವಾಗಿ ಮಧ್ಯರಾತ್ರಿ ಹೊರಟು ಸೂರ್ಯೋದಯಕ್ಕೆ ಮುಂಚೆ ತನ್ನ ಚಾಲನೆಯನ್ನು ಮುಗಿಸುವುದು. ನಾವುಗಳೆಲ್ಲರೂ ಬಹು ಚಿಕ್ಕವರಾಗಿದ್ದುದರಿಂದ ನಮ್ಮನ್ನು ಕರಗ ನೋಡಲು ನಮ್ಮ ತಂದೆಯವರು ಕರೆದೊಯ್ಯುತ್ತಿರಲಿಲ್ಲ. ಪ್ರತಿ ವರ್ಷವೂ ಬೆಳಗ್ಗೆ ಎಂಟು ಗಂಟೆಯಮೇಲೆ ಹೊರಡುತ್ತಿದ್ದ ವಿವಿಧ ಅಲಂಕೃತ ರಥಗಳ ಮೆರವಣಿಗೆಯನ್ನು ನೋಡುತ್ತಿದ್ದೆವು ಜೊತೆಗೆ ದೋಸೆಯ ಸ್ವಾದವೂ ಲಭಿಸುತ್ತಿತ್ತು.

ಕರಗದ ಹುಣ್ಣಿಮೆಗೆ ಹಿಡಿದ ‘ಗ್ರಹಣ’! 

ಒಂದು ಸಲ ಕರಗದ ಹುಣ್ಣಿಮೆಯ ರಾತ್ರಿ ಚಂದ್ರ ಗ್ರಹಣವೂ ಆಗಿತ್ತು. ಆದುದರಿಂದ ’ಕರಗ’ವು ಗ್ರಹಣ ಮುಗಿದಮೇಲೆ ಬೆಳಗ್ಗೆ ಐದುವರೆಗೆ ಹೊರಡುವುದಾಗಿತ್ತು. ಇದರಿಂದ ನಮ್ಮಂತಹ ಸಣ್ಣ ಮಕ್ಕಳಿಗೆ ನಿಜವಾದ ’ಕರಗ’ವನ್ನು ನೋಡುವ ಅವಕಾಶ ಒದಗಲು ನಮ್ಮ ತಂದೆಯವರು ’ದಾಸಿ’ಗೆ ನಮ್ಮನ್ನೊಯ್ಯಲು ಬೆಳಗ್ಗೆ ಐದು ಗಂಟೆಗೇ ನಮ್ಮ ಮನೆಗೆ ಬರಲು ಹೇಳಿದ್ದರು. ನಿಷ್ಠಾವಂತ ದಾಸಿಯು ಬಳಗ್ಗೆ ನಾಲ್ಕು ಗಂಟೆಯ ಕತ್ತಲೆಯಲ್ಲೇ ತನ್ನ ಗಾಡಿಯೊಂದಿಗೆ ನಮ್ಮ ಮನೆಯಮುಂದೆ ಬಂದು ತೂಕಡಿಸುತ್ತಾ ಕಾಯುತ್ತಿದ್ದನು. ನಾವೆಲ್ಲರೂ ಐದುಗಂಟೆಗೆ ಗಾಡಿಯನ್ನೇರಿ ಹೊರಟು ವಿಶ್ವೇಶ್ವರಪುರದ ಬಳಿಬಂದಾಗ ಇನ್ನೇನೂ ಬೆಳಕು ಹರಿಯತೊಡಗಿತು ಎನ್ನುವಾಗ ಅದೇವೇಳೆಗೆ ಒಬ್ಬಪೊಲೀಸಿನವನು ನಾವಿದ್ದಗಾಡಿಯನ್ನು ನಿಲ್ಲಿಸಿ, ಗಾಡಿಗೆ ಲೈಟಿಲ್ಲದೆ ಓಡಿಸುತ್ತಿರುವುದರಿಂದ ಜುಲ್ಮಾನೆಯನ್ನು ಕೋಡಬೇಕೆಂದು ದಾಸಿಗೆ, ಒತ್ತಾಯಿಸಿದನು. ಹಿಂದಿನ ವರ್ಷದಲ್ಲಿ ಆಗತಾನೇ ಭಾರತಕ್ಕೆ ಸ್ವಾತಂತ್ರ್ಯ ಬಂದು ಸರ್ಕಾರವು ಬದಲಾಗಿತ್ತು. ಈ ಬದಲಾವಣೆಯ ಅಲ್ಲೋಲ ಕಲ್ಲೋಲದಲ್ಲಿ ದಾಸಿಯ ಪಿಂಚಿಣಿಗಳೆಲ್ಲವೂ ಮಾಯವಾಗಿದ್ದವು. ದಾಸಿಗೆ ದಾರಿದ್ರ್ಯವು ಎದುರುನೋಡುತ್ತಿತ್ತು. ಈ ಪೊಲೀಸಿನ ಕಿರುಕುಳಕ್ಕೆ ರೋಸಿಹೋಗಿ ದಾಸಿಯು ಅವನಿಗೆ ಬಯ್ಯತೊಡಗಿದನು, ’ಈ ಸರ್ಕಾರ ಬಂದು ನನ್ನ ಪಿಂಚಿಣಿಗಳನ್ನೆಲಾ ಕಸಿದು ನನ್ನನ್ನು ದರಿದ್ರನನ್ನಾಗಿ ಮಾಡಿದ್ದಲ್ಲದೇ ಈಗ ನನ್ನ ಬಳಿಯಿರುವ ಪುಡಿಕಾಸಿನ ಮೇಲೂ ನಿನ್ನ ಕಣ್ಣು’ ಎಂದು ಹೇಳಿ, ಬರಿಯುವುದಕ್ಕಾಗದ ವಾಕ್ಯಗಳಿಂದ ಅವನನ್ನು ಬಯ್ಯತೊಡಗಿದನು. ಅಷ್ಟು ಹೊತ್ತಿಗೆ ಸ್ವಲ್ಪ ಬೆಳಕು ಹರಿಯಲು ಹಲವು ಜನ ಸೇರಲು ಪೊಲೀಸಿನವನು ಅಲ್ಲಿಂದ ಕಾಲ್ತೆಗೆದನು. ಆದರೂ ನಾವುಗಳೆಲ್ಲಾ ಕರಗವನ್ನು ಮೊಟ್ಟಮೊದಲು ನೋಡಿದೆವು.

ಅದೇ ವರ್ಷ ಅಂದರೆ ೧೯೪೮ರ ಸೆಪ್ಟೆಂಬರ್ ಇರಬಹುದು ಮೈಸೂರು ಮಹಾರಾಜರು ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದರೂ ತಮ್ಮ ರಾಜ್ಯಭಾರವನ್ನು ಭಾರತ ಸರ್ಕಾರಕ್ಕೆ ಅಧೀನವಾಗಿ ಒಪ್ಪಿಸಲು ತಡಮಾಡಿದ್ದರು. ಬ್ರಿಟಿಷರ ಆಳ್ವಿಕೆಯಲ್ಲಿದ ಇಂಡಿಯಾದ ಅನೇಕ ರಾಜರುಗಳಾಳುತ್ತಿದ್ದ ರಾಜ್ಯಗಳನ್ನು, ಯೂರೋಪಿನಲ್ಲಿದ್ದಂತಹ ಸ್ವತಂತ್ರ ರಾಜ್ಯಗಳಹಾಗೆ ಮಾರ್ಪಡಿಸಲು ಅಂದಿನ ಮಹಾರಾಜರುಗಳು ಭಾರತ ಸರ್ಕಾರದೊಂದಿಗೆ ಸಂಧಾನಮಾಡಲು ವ್ಯವಹರಿಸುತ್ತಿದ್ದರು. ಆದರೆ ಆ ಮಹಾರಾಜರುಗಳಲ್ಲೇ ಒಪ್ಪಿಗೆಗಳಿಲ್ಲದಿರಲು ಆ ಸಂಧಾನ ಕುಸಿದುಬಿದ್ದಿತು. ಇದೇ ಕಾರಣದಿಂದ ಮೈಸೂರು ಮಹಾರಾಜರು ತಡಮಾಡಿದ್ದರು ಎಂಬುದು ಒಂದು ಮಾತು. ಆದುದರಿಂದ ಮೈಸೂರು ಪ್ರಾಂತ್ಯದ ಬೆಂಗಳೂರು, ಮೈಸೂರು ಮತ್ತು ಇತರ ನಗರಗಳಲ್ಲಿ ಮಹಾರಾಜರ ಸರ್ಕಾರದ ವಿರುದ್ಧ ತೀವ್ರವಾದ ಚಳುವಳಿಗಳು ಆರಂಭವಾದವು. ಬೆಂಗಳೂರಿನಾದ್ಯಂತ ಕರ್ಫ್ಯೂ ಆರ್ಡರನ್ನು ಹಾಕಿದ್ದರು. ಬೆಂಗಳೂರಿನ ಬಸವನಗುಡಿಯ ನ್ಯಾಶನಲ್ ಹೈಸ್ಕೂಲಿನ ಬಳಿ ಮತ್ತು ಫೋರ್ಟ್ ಹೈಸ್ಕೂಲಿನ ಬಳಿ ಈ ಚಳುವಳಿಯು ವೈಪರಿತ್ಯವಾಗಿ ಏರಿದ್ದು ಪೊಲೀಸಿನವರ ಹತೋಟಿಗೆ ಮೀರಿ ಜನಗಳ ಪ್ರಾಣ ಮತ್ತು ಸ್ವತ್ತುಗಳಿಗೆ ಹಾನಿಯ ಸಂಭವವು ತೀವ್ರವಾಗಿರಲು, ಪೊಲೀಸಿನವರು ಚಳುವಳಿಗಾರರನ್ನು ’ವೀಕ್ಷಿದಾಕ್ಷಣ ಗುಂಡೇರಿಸಿ ಕೊಲ್ಲುವ’ ಆಜ್ಞೆಯನ್ನು ಜಾರಿಗೆ ತಂದಿದ್ದರು.

Dasi's Shed
ದಾಸಪ್ಪನು ವಾಸವಾಗಿದ್ದ ನವೀಕರಿಸಿದ ಗಾಡೀಖಾನೆ (Photo by Sundar Raj Cavale taken on 5th October 2015

Old soldiers never die, they just fade away!

ಆ ವರಮಹಾಲಕ್ಷ್ಮಿಯ ಹಬ್ಬದ ಪ್ರಯುಕ್ತ ದಾಸಿಯು ಸ್ನಾನ ಮಾಡಲು ಸಿದ್ಧನಾದನು. ಸ್ನಾನ ಮಾಡಲು ಸೋಪಿಲ್ಲದುದರಿಂದ ಆತನು ತನ್ನ ಮಗನನ್ನು ಸೋಪನ್ನು ತರಲು ಅಂಗಡಿಗೆ ಕಳುಹಿಸಿದ್ದನು. ಹತ್ತಿರವೇ ಇದ್ದ ಸಣ್ಣ ಅಂಗಡಿಯು ಮುಚ್ಚಿದ್ದುದರಿಂದ ಆ ಮಗನು ಗಾಂಧಿಬಜಾರಿಗೆ ತೆರಳಿದನು. ಹೋಗುವ ದಾರಿಯಲ್ಲಿ ಹೆಚ್ ಬಿ ಸಮಾಜ ರಸ್ಥೆ ಮತ್ತು ಕೆ ಆರ್ ರೋಡು ಸೇರುವ ಜಾಗದಲ್ಲಿ ವೀಕ್ಷಿದಾಕ್ಷಣ ಗುಂಡಿಟ್ಟು ಕೊಲ್ಲುವ ಆಜ್ಞೆಯು ಜಾರಿಯಲ್ಲಿದ್ದುದರಿಂದ ಅವನು ಪೊಲೀಸಿನ ಗುಂಡಿಗೆ ಬಲಿಯಾಗಿದ್ದನು. ಆ ದಿನ ಸಾಯಂಕಾಲ ಹತ್ತಿರದಲ್ಲೇ ಇದ್ದ ಕನಕನ ಪಾಳ್ಯದಲ್ಲಿದ್ದ ತನ್ನ ತಾಯಿಯ ಮನೆಯಿಂದ, ಹೊಸದಾಗಿ ಮದುವೆಯಾಗಿದ್ದ ಆ ಯುವಕನ ಹೊಸ ಪತ್ನಿಯು ಅತಿ ರೋಧನದಿಂದ ತನ್ನ ಸಂಭಂದಿಗಳೋಂದಿಗೆ ದಾಸಿಯ ಮನೆಗೆ ತೆರಳುತ್ತಿದ್ದ ದೃಷ್ಯಯು ನನಗೆ ಇನ್ನೂ ಮನದಲ್ಲಿ ಸ್ಥಿರವಾಗಿ ನಿಂತಿದೆ. ಅದೇ ವರ್ಷದ ಕೊನೆಯಲ್ಲಿ ದಾಸಿಯ ಹೆಂಡತಿಯು ಮೃತಪಟ್ಟಳು. ದಾಸಿಯು ಯಾವ ಪಿಂಚಿಣಿಗಳಿಲ್ಲದೆ ಬದುಕಲು ತನ್ನ ಕುದುರೆ ಮತ್ತು ಗಾಡಿಯನ್ನು ಮಾರಿ ತನ್ನ ಊರಾದ ಮಾಗಡಿಗೆ ತೆರಳಿದನು. ಯಾವುದೋ ಒಂದು ಹಳೆಯ ಗುಡುಸಿಲಿನಲ್ಲಿ ವಾಸವಾಗಿದ್ದು ಮಾಗಡಿಯ ದೇವಸ್ಥಾನಗಳ ಬಳಿ ಭಿಕ್ಷೆಬೇಡಿ ಹಲವು ವರ್ಷಗಳನಂತರ ದಾಸಿಯು ಒಬ್ಬೊಂಟಿಗನಾಗಿ ಅತಿದಾರಿದ್ರ್ಯದಲ್ಲಿ ಮೃಪಟ್ಟನೆಂದು ತಿಳಿಯಿತು

ನನ್ನಜ್ಜ, ಅಜ್ಜನ ಕೃತಿಗಳು

ನನ್ನಜ್ಜನ ಜನ್ಮಶತಾಬ್ಧಿ ಈ ವರ್ಷ. ಈ ಲೇಖನ ಓದುತ್ತ ಹೋದಂತೆ ಇವರು ಯಾರು ಅಂತ ನಿಮಗೆ ಗೊತ್ತಾಗುತ್ತೆ. ಅವರ ವ್ಯಕ್ತಿತ್ವವನ್ನು ಪ್ರತಿಫಲಿಸುವ ಎರಡು ಕೃತಿಗಳ ಪರಿಚಯ ಮಾಡಿಕೊಡುತ್ತಾರೆ ಪ್ರತಿಭಾ ಭಾಗ್ವತ್. ಪ್ರತಿಭಾ ನನ್ನಕ್ಕ; ಅಜ್ಜನ ನೂರನೇ ಹುಟ್ಟುಹಬ್ಬದ ಸದವಕಾಶದಲ್ಲಿ ಕನ್ನಡಿಗರಿಗೆ ಅವರ ನೆನಪು ಮಾಡಿಕೊಡುತ್ತಾ, ಇನ್ನೂ ಎಲೆಯ ಮರೆಯಲ್ಲಿರುವ ಮಹತ್ವದ ಕಾದಂಬರಿಗಳನ್ನು ಪರಿಚಯ ಮಾಡಿಕೊಡುವ ಮೊಮ್ಮಕ್ಕಳ ಪ್ರಯತ್ನ ಇದು.

ಪ್ರತಿಭಾ ಭಾಗ್ವತ್ ಅಮೇರಿಕೆಯಲ್ಲಿ ನೆಲೆಸಿರುವ ಅಭಿಯಂತೆ. ಸಾಹಿತ್ಯ ಪ್ರೇಮಿ, ಕನ್ನಡ ಹಾಗೂ ಆಂಗ್ಲ ಭಾಷೆಯ ಕಥೆ, ಕಾದಂಬರಿ ಓದುವುದು ಅವರ ಹವ್ಯಾಸ. ಇದು ಅಂತರ್ಜಾಲದಲ್ಲಿ ಪ್ರಕಟವಾಗುತ್ತಿರುವ ಅವರ ಚೊಚ್ಚಲ ಲೇಖನ.

ಲೇಖನದ ಮೊದಲ ಭಾಗ, ಕನ್ನಡ ಬಳಗ (ಯು.ಕೆ) ಯ “ಸಂದೇಶ”ದಲ್ಲಿ ಪ್ರಕಟವಾಯಿತು, ಈಗ ಅನಿವಾಸಿಯಲ್ಲಿ ವಿಶ್ವದಾದ್ಯಂತ. ಅಜ್ಜನ ಜನ್ಮ ಶತಾಬ್ದಿಯಂದು ಈ ಸದವಕಾಶ ಸಿಕ್ಕಿದ್ದು ನನ್ನ ಪುಣ್ಯ, ಹೃದಯ ತುಂಬಿ ಬರುತ್ತಿದೆ; ಅವಕಾಶ ದೊರಕಿಸಿಕೊಟ್ಟ ಕನ್ನಡ ಬಳಗ (ಯು.ಕೆ) ಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.

(೧೫.೫.೧೫ - ೪.೪.೭೬)
(೧೫.೫.೧೫ – ೪.೪.೭೬)

ರಾತ್ರೆ ಮಲಗೋ ಮೊದಲು ಅಜ್ಜಿ ಪಕ್ಕ ಬಿದ್ಕೊಂಡು ಕಥೆ ಕೇಳೋದನ್ನ ಕತ್ಲೆ ಆಗ್ತಾ ಇದ್ದ ಹಾಗೇ ಎದುರು ನೋಡ್ತಾ ಇರ್ತಿದ್ವು. ಹಾಗೊಂದು ರಾತ್ರೆ ಅಜ್ಜಿ ಹೇಳಿದ ಅಜ್ಜನ ಕಥೆ ನಿಮ್ಮ ಜೊತೆಗೆ ಹಂಚಿಕೊಳ್ಳೋಣ ಅಂತ ಅನ್ನಿಸ್ತಿದೆ. ಈ ವರ್ಷ ಅಜ್ಜನ ಜನ್ಮ ಶತಾಬ್ಧಿ. ಇದಕ್ಕಿಂತ ಒಳ್ಳೇ ಮುಹೂರ್ತ ಬರೋದಿಲ್ಲ. ನಾವು ಆರು ಜನ ಮೊಮ್ಮಕ್ಕಳಲ್ಲಿ ಕಿರಿಯ ಮೂರು ಜನ ಹುಟ್ಟೇ ಇರಲಿಲ್ಲ. ನಾವು ಮೂವರಲ್ಲಿ ನನ್ನಕ್ಕ, ಅಜ್ಜ-ಅಜ್ಜಿ ಜೊತೆ ಬೆಳೆದವಳು. ಅಜ್ಜಿ ಜೊತೆ ಅವಳೂ ಧ್ವನಿಗೂಡಿಸ್ತಿದ್ಲು. ಜೊತೆಗೆ ಅಮ್ಮ, ಚಿಕ್ಕಮ್ಮಂದ್ರೂ ಸೇರ್ಕೊಂಡ್ರು. ಅವರೆಲ್ಲರ ಮನದಲ್ಲಿ ಅಜ್ಜನ ಛಾಪು ಗಾಢ್ವಾಗಿದ್ರೂ; ಮನೆಯ ಹಜಾರದ ಮೂಲೆಯ ಮೇಜು, ಅಲ್ಲಿ ಕೂತು ಬರಿತಾ ಇರ್ತಿದ್ದ ಅಜ್ಜನ ಮಸುಕಾದ ಬಿಂಬ ಮಾತ್ರ ನನ್ನ ಮನಸಿನ ಪರದೆ ಮೇಲೆ. ಈ ಅಜ್ಜ ಯಾರೂ ಅಂತ ಒದ್ತಾ ಹೋದ ಹಾಗೇ ನಿಮಗೂ ಗೊತ್ತಾಗುತ್ತೆ.

“ಅವರಿಗಿನ್ನೂ ಹದಿ ಹರೆಯ, ಮೀಸೆ ಮೂಡ್ತಿತ್ತು. ಒಂದೆಡೆ ಶಾಲೆ ಕರೀತಿತ್ತು, ಅಮ್ಮನ ಕನಸು ನನಸಾಗುವ ಕ್ಷಣ ಹತ್ತಿರ ಬರ್ತಾ ಇತ್ತು. ಅಪ್ಪಯ್ಯ ಅವರು ಏಳು ವರ್ಷದವನಿದ್ದಾಗ್ಲೇ ಜ್ವರಕ್ಕೆ ಬಲಿಯಾಗಿದ್ರು. ತನ್ನ ಮಗನ್ನ ವೆಂಕಟೇಶ್ವರ ವಿಶ್ವವಿದ್ಯಾಲಯದಲ್ಲಿ ಓದಿಸ್ಬೇಕು ಅಂತ ಅವರಿಗಾಸೆ. ಓದ್ನಲ್ಲಿ ಚುರುಕಾಗಿದ್ದ ಮಗನನ್ನ ಓದಿಸಿ, ಗಂಡನ ಕನಸನ್ನ ತನ್ನ ಕನಸಾಗಿ ಬೆಳಿಸಿ, ಗದ್ದೆಯಲ್ಲಿ ದುಡಿದು, ಅವನನ್ನ ಬೋರ್ಡಿಂಗ್ ಶಾಲೆಗೆ ಕಳಿಸ್ತಾ ಇದ್ದಾಳೆ ನಿನ್ನ ಮುತ್ತಜ್ಜಿ. ಇನ್ನೊಂದ್ಕಡೆ ತಾಯ್ನೆಲ ಹೊತ್ತುರಿತಾ ಇದೆ, ಪರಕೀಯರ ಆಳ್ವಿಕೆಯ ಬೇಡಿ ಹರಿಯಲು ನಾಯಕರು ರಣ ಕಹಳೆ ಊದಿದ್ದಾರೆ. ನಾಡಿನ ಜನರನ್ನೆಲ್ಲ ಹುರಿದುಂಬಿಸುತ್ತಿದ್ದಾರೆ. ಇದೊಂದು ಕವಲು ದಾರಿ. ಓದು ಮುಂದುವರೆಸಿ ಮ್ಯಾಟ್ರಿಕ್ ಪಾಸ್ ಆದರೆ ಉದ್ಯೋಗ ಖಚಿತ, ಅಮ್ಮ, ತಮ್ಮನ ಬಡತನ ಹರಿದು ನೆಮ್ಮದಿಗೆ ಅವಕಾಶ.   ಇದು ೧೯೩೦, ಅಸಹಕಾರ ಆಂದೋಲನಕ್ಕೆ ಗಾಂಧೀಜಿ ಕರೆ ಕೊಟ್ಟಿದ್ದಾರೆ. ಮಡಿಕೇರಿಯ ಸೆಂಟ್ರಲ್ ಸ್ಕೂಲಿನಲ್ಲಿ ಓದುತ್ತಿದ್ದ ನಾರಾಯಣರಾಯ ಚೋಟುದ್ದವಿದ್ದರೂ ಗಾಂಧಾರಿ ಮೆಣಸು. ಆದರ್ಶಾನೇ ಹಾಸಿ ಹೊದೆಯುವ ಸಾಹಸಿ. ಹೆತ್ತ ತಾಯಿಯಷ್ಟೇ ಹುಟ್ಟಿದ ದೇಶದ ಮೇಲೆ ಪ್ರೀತಿ, ಅಭಿಮಾನ. “ಭಾರತ ಮಾತೆಗೆ ಜೈ, ಗಾಂಧೀಜಿಗೆ ಜೈ,” ಎಂದು ಘೋಷಿಸಿದ್ದಕ್ಕೆ, ಛಡಿ ಏಟು ತಿಂದರೂ ಬಗ್ಗದೇ, ಡಿಬಾರ್ ಆಗಿ, ಸ್ವಾತಂತ್ರ್ಯ ಚಳುವಳಿಗೆ ಹಿಂದೆ ಮುಂದೆ ನೋಡದೇ ಧುಮುಕಿದ್ರು. ಅಮ್ಮನಿಗೆ ತಾಳಲಾರದ ಆಘಾತ. ನಾರಾಯಣನಿಗೆ ಮನೆಯಿಂದ, ಸಮಾಜದಿಂದ ಬಹಿಷ್ಕಾರ. ಬ್ರಿಟಿಷ್ ಸರಕಾರದ ವಿರುದ್ಧ ನಡೆಸಿದ ಹೋರಾಟದ ಪರಿಣಾಮ ಕೇರಳದಲ್ಲಿ ತುರಂಗವಾಸ.

“ಅಜ್ಜ ಹುಟ್ಟಿ ಬೆಳೆದದ್ದು ಮಡಿಕೇರಿ ಬಳಿ ಹಳ್ಳಿ ಬಿಳಿಗೇರಿಯಲ್ಲಿ. ಓದಿನಲ್ಲಿ ಬಹಾಳ ಚುರುಕು. ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಪಂಜೆ ಮಂಗೇಶರಾಯರಿಂದ ಪ್ರಭಾವಿತರಾಗಿ ಕಥೆ ಬರ್ದು ಸೈ ಎನಿಸಿಕೊಂಡಿದ್ರು. ಸಾಹಿತ್ಯ ಕೂಟ ಕಟ್ಟಿ, ಕಥೆ, ಕವನಗಳನ್ನು ರಚಿಸಿ ಗೆಳೆಯರನ್ನೂ ಹುರಿದುಂಬಿಸ್ತಿದ್ರು. ಶಾಲೇಲಿದ್ದಾಗ್ಲೇ “ಪೃಥ್ವಿರಾಜ” ಎನ್ನೊ ಕಾದಂಬರಿ ಬರದ್ರು. ಸ್ವಾತಂತ್ರ್ಯ ಸಂಗ್ರಾಮದ ಗರಡಿಯಲ್ಲಿ ಪಳಗಿ; ಮಾರ್ಕ್ಸ್, ಲೆನಿನ್, ಟೊಲ್ಸ್ಟಾಯ್ರನ್ನೆಲ್ಲ ಅಧ್ಯಯನ ಮಾಡಿ; ನಂಬೂದರಿಪಾಡ್, ಪೂಣಚ್ಚರಂಥ ನಾಯಕರೊಡನೆ ಚರ್ಚಿಸಿ ಹೊರಬಂದ ಅಜ್ಜ “ಭಾರತೀಸುತ” ಎಂದು ತನ್ನನ್ನು ಕರೆದುಕೊಂಡಿದ್ದು ಸಹಜವೇ.

“ಜೈಲಿನಿಂದ ಹೊರ ಬಂದ ಮೇಲೆ ಅವರಿಗೆ ಹಿಂದಿಲ್ಲ, ಮುಂದಿಲ್ಲ. ಕಲ್ಲಿಕೋಟೆಯ ಬಂದರಿನಲ್ಲಿ ಕೂಲಿ ಕೆಲಸ. ಬಡತನದ ಜೀವನ, ಸಮಾಜದ ಕೆಳಸ್ತರದಲ್ಲಿ ಬಾಳುವ ಜನರ ಬದುಕಿನ ಬವಣೆ ಅವರಿಗೆ ಸ್ವಾನುಭವ. ಅಲ್ಲಿಂದ ಹೊರಟು ಮುಂದೆ ವೈನಾಡಿಗೆ ಪಯಣ. ಅಲ್ಲಿ ಜಿನರಾಜ ಗೌಡರ ಕಾಫಿ ತೋಟದಲ್ಲಿ ರೈಟರ್ ಆಗಿ ಉದ್ಯೋಗ, ಗಿರಿಜನ ಫಣಿಯರ ಸಹವಾಸ; ಅವರ ನೋವು, ಬವಣೆ ಇದೆಲ್ಲ ಹತ್ತಿರದಿಂದ ನೊಡುವ, ಅನುಭವಿಸುವ ಅವಕಾಶ. ವೈನಾಡಿನಿಂದ ಕೊಡಗಿಗೆ ಮರಳಿದಾಗ, ತಾಯಿಯಾಗಲಿ, ಸಮಾಜವಾಗಲಿ ಅವರನ್ನು ಬರಮಾಡಿಕೊಳ್ಳಲಿಲ್ಲ. ಆಗ ಹಿತೈಷಿ ರಘುನಾಥರಾಯರು ಆಶ್ರಯ ಕೊಟ್ಟು, ಮುಂದೆ ನಿಂತು ಮದುವೆ ಮಾಡಿದ್ರು. ವೈನಾಡಿಗೆ ವಾಪಾಸ್ ಆಗುವಾಗ, ಆನೆ ಬೆನ್ಹತ್ತಿ, ಅಜ್ಜ ತಪ್ಪಿಸಿಕೊಂಡು ಬಂದ ಮೇಲೆ, ಅಜ್ಜಿ ಒತ್ತಾಸೆಗೆ, ಕನ್ನಡ ಶಿಕ್ಷಕರಾಗಿ ಕೊಡಗು ಬಿಟ್ಟು ಹೋಗಲಿಲ್ಲ.

“ಅಜ್ಜ-ಅಜ್ಜಿ ಜೋಡಿ ಸ್ವರ್ಗದಲ್ಲಿ ಮಾಡಿದಂತಿತ್ತು. ಅಜ್ಜ ಒಂದು ಸಲಾನೂ ನನ್ನ ಮೇಲೆ ಧ್ವನಿ ಎತ್ತಿದವರಲ್ಲ,” “ಅವರಿಬ್ಬರೂ ಜಗಳ ಮಾಡಿದ್ದನ್ನ ನಾವು ಮಕ್ಕಳು ನೋಡೇ ಇರಲಿಲ್ಲ,” ಅಂತ ಅಮ್ಮ ಟಿಪ್ಪಣಿ ಹಾಕಿದ್ಲು. “ಅವರ ಬರಹಕ್ಕೆಲ್ಲ ನಾನೇ ಮೊದಲ ವಿಮರ್ಶಕಿ. ಮಿತ ಭಾಷಿಯಾದರೂ ಮಹಾನ್ ಸ್ನೇಹ ಜೀವಿ. ಜಾತಿ, ಅಂತಸ್ತು ನೋಡದೇ ಎಲ್ಲರೊಟ್ಟಿಗೂ ಬೆರೆತು ಗೆಳೆತನ ಬೆಳೆಸುವ ಕಲೆ  ಅವರಿಗೆ ಕರಗತವಾಗಿತ್ತು. ಅಜ್ಜ ಹೆಣ್ಣು-ಗಂಡು ಮಕ್ಕಳಲ್ಲಿ ಭೇದ ಕಂಡವರಲ್ಲ. ಮನೆ ತುಂಬಾ ಮಕ್ಕಳಿದ್ದರೂ ಎಲ್ಲರಿಗೂ ತಮಗೆ ಶಕ್ತಿ ಇದ್ದಷ್ಟು ಓದಿಸಿ, ಸ್ವಾವಲಂಬಿಗಳನ್ನಾಗಿ ಬೆಳೆಸಿದರು. ಅವರು ಯಾವಾಗಲೂ ಸ್ವಂತ ಲಾಭಕ್ಕಾಗಿ ಪರ ಯಾಚನೆ ಮಾಡಿದವರಲ್ಲ, ಸ್ವಾತಂತ್ರ್ಯೋತ್ತರ ಕೊಡಗಿನ ಮುಖ್ಯಮಂತ್ರಿ ಪೂಣಚ್ಚನವರೇ ಮುಂದೆ ಬಂದು ಸರಕಾರಿ ಹುದ್ದೆ ಕೊಟ್ಟರೂ ನಯವಾಗೇ ತಿರಸ್ಕರಿಸಿದ ಸ್ವಾಭಿಮಾನಿ. ಕೊನೇ ಉಸಿರಿನವರೆಗೂ ಖಾದಿ ತೊಟ್ಟಿದ್ದು ತೋರಿಕೆಗಲ್ಲ; ಬೆನ್ನ ಮೇಲೆ ಚಳುವಳಿಯಲ್ಲಿ ತಿಂದ ಲಾಠಿ ಏಟಿನ ಕಲೆ, ತನ್ನ ಮೇಲಲ್ಲ, ಭಾರತ ಮಾತೆಯ ಮೇಲಾದ ದೌರ್ಜನ್ಯದ ಕುರುಹು ಎಂದ ದೇಶಾಭಿಮಾನಿ. “ನಾನು ಹೋರಾಡಿದ್ದು ದೇಶದ ಸ್ವಾತಂತ್ರ್ಯಕ್ಕಾಗಿ, ಪಿಂಚಣಿಗಲ್ಲ,” ಅಂತ ಸ್ವಾತಂತ್ರ್ಯ ಯೋಧರ ಪೆನ್ಶನ್ ಕೂಡ ತೊಗೊಳ್ಲಿಲ್ಲ. ಇದೇ ಆದರ್ಶಗಳನ್ನ ತನ್ನ ಮಕ್ಕಳಲ್ಲೂ ಬೆಳೆಸಿದ್ರು.” ಅದನ್ನ ಇಂದಿಗೂ ನಾನು ನನ್ನಮ್ಮನಲ್ಲಿ ಕಾಣ್ತೇನೆ.

“ಸಾಹಿತ್ಯದ ಕಾರ್ಯಕ್ಕೆ ಮೈಸೂರು, ಬೆಂಗಳೂರಿಗೆ ಹೋದಾಗಲೆಲ್ಲ ದೇಶ-ವಿದೇಶದ ಪ್ರಮುಖ ಲೇಖಕರ ಮಣಗಟ್ಟಲೆ ಪುಸ್ತಕಗಳನ್ನ ತಂದು ಓದಿದ್ದಲ್ದೆ, ಮಕ್ಕಳ ಪುಸ್ತಕಗಳನ್ನೂ ತಂದು ಮಕ್ಕಳಲ್ಲೂ ಓದುವ ಗೀಳು ಹಚ್ಚಿದ್ರು.” “ನಾನು ಕಥೆ ಹೇಳು ಅಂದಾಗ್ಲೆಲ್ಲ, ತನ್ನ ಕೋಣೆಗೆ ಕರ್ಕೊಂಡು ಹೋಗಿ, ಕಥೆ ಪುಸ್ತಕ ಕೊಟ್ಟು, ಒದಿಸ್ತಿದ್ರು,” ಅಂತ ಅಕ್ಕ ನೆನಪು ಮಾಡ್ಕೊಂಡ್ಲು. “ಮತ್ತೆ, ಅಜ್ಜ ಯಾಕೆ ಅಷ್ಟೊಂದು ಕಥೆ ಬರದ್ರು?” ನನ್ನ ತಮ್ಮನ ಪ್ರಶ್ನೆ. “ತಾನು ಕಂಡ ದಲಿತರ ಬವಣೆ; ಗಿರಿಜನರ ದುಃಸ್ಥಿತಿ; ಮಹಿಳೆಯರ ಮೇಲೆ ಆಗುವ ದಬ್ಬಾಳಿಕೆ, ಅತ್ಯಾಚಾರ ಇದನ್ನೆಲ್ಲ ಹೇಳಿಕೊಳ್ಬೇಕು, ತೋಡಿಕೊಳ್ಬೇಕು ಎನ್ನೊದೇ ಅವರ ಬರಹಗಳ ಹಿಂದಿನ ಸ್ಫೂರ್ತಿ. ಯಾವ ಇಸಂಗಳಿಗೂ ಒಳಗಾಗ್ದೇ, ಕಂಡ ಸತ್ಯನ ಬರೆಯೋ ಛಾತಿ ಅವರಿಗಿತ್ತು. ತಾನೇ ಕಂಡ ನಾಡು, ನುಡಿ,ಜೀವನ ಆಧಾರಿಸಿ ಬರೆದ ಅವರ ಕೃತಿಗಳಲ್ಲಿ ಮಣ್ಣಿನ ಸೊಗಡು ಸಹಜವಾಗೇ ಅಡಕವಾಗಿತ್ತು. ಹೆಣ್ಣಿನ ನೋವನ್ನ ಬಿಂಬಿಸಿ ಬರೆದ “ಎಡಕಲ್ಲು ಗುಡ್ಡದ ಮೇಲೆ” ಕಾದಂಬರಿಗೆ ಸುಧಾ ಪತ್ರಿಕೆ ನಡೆಸಿದ ಕಾದಂಬರಿ ಸ್ಫರ್ದೆಯಲ್ಲಿ ಮೊದಲ ಬಹುಮಾನ ಸಿಕ್ತು. ಕನ್ನಡದಲ್ಲಿ ಗಿರಿಜನರ ಮೇಲೆ ಮೊಟ್ಟ ಮೊದಲು “ಗಿರಿಕನ್ನಿಕೆ” ಎನ್ನೋ ಕಾದಂಬರಿ ಬರೆದ್ರು. ಬಂಡಾಯ ಸಾಹಿತ್ಯ ಅನ್ನೋ ಮಾಧ್ಯಮ ಬರೋ ಎಷ್ಟೊ ವರ್ಷಗಳ ಮೊದಲೇ ಬಂಡಾಯ ಸಾಹಿತ್ಯ ಸೃಷ್ಟಿ ಮಾಡಿದ್ರು ನಿನ್ನಜ್ಜ. ಓದೋ ಚಟ ಮಕ್ಕಳಲ್ಲಿ ಬೆಳೆಸ್ಬೇಕು ಅಂತ ೨೦ಕ್ಕೂ ಹೆಚ್ಚು ಮಕ್ಕಳ ಕಥೆ ಪುಸ್ತಕಗಳನ್ನ ಬರೆದ್ರು. ನಿನಗೆ ತುಂಬಾ ಪ್ರೀತಿಯಾಗಿರೋ “ಸಿಗೋರ” ಬರೆದದ್ದೂ ನಿನ್ನಜ್ಜಾನೇ. ಓದು ಬರದ ವಯಸ್ಕರಿಗೂ ಓದು ಕಲಿಸ್ಬೇಕೂ ಅಂತ ಶಾಲೆ ಮಾಡಿದ್ದಲ್ದೇ ಅದಕ್ಕಾಗೇ ಪುಸ್ತಕಗಳನ್ನ ರಚಿಸಿದ್ರು.

“ಬಾಲ್ಯದಲ್ಲಿ ಹೇಗೆ ಸಾಹಿತ್ಯ ಕೂಟ ಕಟ್ಟಿದ್ರೋ, ಹಾಗೇ ಕಾವೇರಿ ಪ್ರಕಾಶನ ಕಟ್ಟಿ, ತಾನು ಬರೆದದ್ದು, ಗೆಳೆಯರು ಬರೆದಿದ್ದನ್ನೆಲ್ಲ ಪ್ರಿಂಟ್ ಹಾಕ್ಸಿ, ಹೊತ್ತು ಮಾರ್ತಿದ್ರು. ರಿಟೈರ್ ಆದ್ಮೇಲೆ ತನ್ನ ಪಾಲಿಗೆ ಬಂದ ಬರಡು ಗುಡ್ಡದಲ್ಲಿ ಕಾಫಿ ತೋಟ ಸಸಿ ನೆಟ್ಟು ಮಾಡಿದ್ರು.” ಪಾಲಿಥಿನ್ ಚೀಲಗಳಲ್ಲಿ ಮಣ್ಣು ತುಂಬಿ ಸಣ್ಣ ಕಾಫಿ ಸಸಿಗಳನ್ನ ನೆಡ್ತಿದ್ದದ್ದು ನನ್ನ ಕಣ್ಣ ಮುಂದೆ ಈಗಲೂ ಕುಣಿತಾ ಇದೆ. “ಕಾಫಿ ತೋಟದಲ್ಲಿ ಕೆಲಸದವರಿಗೆ ಅಂತ ಮನೆ ಕಟ್ಟಿ ಕೊಟ್ರು. ಒಂದಿನಾನೂ ಪ್ರಶಸ್ತಿ ಬೇಕು, ಹುದ್ದೆ ಬೇಕು ಅಂತ ರಾಜಕೀಯ ಮಾಡ್ದೇ, ಆದರ್ಶ ಬಿಡ್ದೆ ನನ್ಗಂಡ ಬಾಳಿದ್ದಲ್ದೇ, ನನ್ಜೊತೆ ತುಂಬಾ ಪ್ರೀತ್ಯಿಂದ ಸಂಸಾರ ಮಾಡಿದ್ರು. ಇನ್ನೂ ತುಂಬಾ ಬರೀಬೇಕು, ಓದ್ಬೇಕು ಅಂತ ಆಸೆ ಇದ್ದಾಗ್ಲೇ ೬೧ರ ವಯಸ್ಸಿಗೇ ಪಾರ್ಶ್ವವಾಯುಗೆ ತುತ್ತಾಗಿ ದೂರ ಹೋಗ್ಬಿಟ್ರು,” ಅಂತ ಅಜ್ಜಿ ಕಥೆ ಮುಗ್ಸಿದಾಗ ಎಲ್ಲರ ಕಣ್ಣಲ್ಲಿ ನೀರು. ಆದ್ರೆ ಅಜ್ಜಿ ಕಣ್ಣಂಚಿನ ಹನಿ ಹೊಳಿತಾ ಇತ್ತು, ತುಟಿಯಂಚಲ್ಲಿ ತೃಪ್ತಿಯ ಮುಗುಳ್ನಗೆ ಇತ್ತು.

ಅಜ್ಜನ ಕಥೆ ನನ್ನಜ್ಜಿಯ ಬಾಯಲ್ಲಿ ಕೇಳಿದ್ರಿ. ಚಲನಚಿತ್ರಗಳಾದ ಎಡಕಲ್ಲು ಗುಡ್ಡದ ಮೇಲೆ, ಬಯಲು ದಾರಿ, ಗಿರಿಕನ್ಯೆ ಹಾಗೂ ಹುಲಿಯ ಹಾಲಿನ ಮೇವು ಅವರ ಚಿರಪರಿಚಿತ ಕಾದಂಬರಿಗಳು. ಅಜ್ಜ ಬರೆದ ಕೃತಿಗಳು ೭೩; ೩೩ ಕಾದಂಬರಿಗಳು, ೩ ಅನುವಾದಗಳು, ೧೦ ಸಣ್ಣ ಕಥೆಗಳ ಗುಛ್ಛ, ೨೪ ಮಕ್ಕಳ ಕೃತಿಗಳು ಹಾಗೂ ೩ ವಯಸ್ಕರ ಶಿಕ್ಷಣಕ್ಕಾಗಿ ರಚಿಸಿದ ಪುಸ್ತಕಗಳು. ಅಜ್ಜನ ಕಾದಂಬರಿಗಳಲ್ಲಿ ನನಗೆ ತುಂಬಾ ಇಷ್ಟವಾದವು ವಕ್ರರೇಖೆ, ವೈದ್ಯನ ಮಗಳು ಹಾಗೂ ಬಂಗಾರದ ಕುಲುಮೆ.

ಅಜ್ಜನ ಪರಿಚಯ ಕನ್ನಡಿಗರಿಗೆ ಹೆಚ್ಚಾಗಿ ಅವರ ಚಲನಚಿತ್ರಗಳಾದ ಕಾದಂಬರಿಗಳ ಮೂಲಕ. ಅವರ ಕಾದಂಬರಿಗಳು ಜೀವನದ ಹಲವು ಆಯಾಮಗಳನ್ನು, ಸೂಕ್ಷ್ಮತೆಗಳನ್ನು ಅನ್ವೇಷಿಸುತ್ತವೆ. ಈ ಲೇಖನದ ಎರಡನೆ ಭಾಗದಲ್ಲಿ ನನ್ನಕ್ಕ ಅವಳ ಮನಕ್ಕೆ ಹತ್ತಿರದ ಎರಡು ಕಾದಂಬರಿಗಳ ಪರಿಚಯ ಮಾಡಿಕೊಡುತ್ತಿದ್ದಾಳೆ…

ಗಿಳಿ ಪಂಜರದೊಳಿಲ್ಲ

ಹಿಂದೆ ಕೇರಳಕ್ಕೆ ದಕ್ಷಿಣ-ಕನ್ನಡದ ಪುರೊಹಿತರು ಪೌರೋಹಿತ್ಯಕ್ಕೆ ಹೋಗೋದು ವಾಡಿಕೆ ಇತ್ತು. ಅವರು ಅಲ್ಲಿಯ ನಾಯರ್ ಜನಾಂಗಕ್ಕೆ ಸೇರಿದ ಹುಡುಗಿಯರನ್ನು ಮದುವೆಯಾಗುವ ಪದ್ಧತಿಯನ್ನು ಮುಂದಿಟ್ಟುಕೊಂಡು ಬರೆದ ಕಾದಂಬರಿಯಿದು.  ಕಥೆಯ ನಾಯಕ ಮಾಧವ ಯಂಬ್ರಾದ್ರಿಯ ತಂದೆಯೂ ಕೇರಳ ದೇಶಕ್ಕೆ ಹೋದ ಬ್ರಾಹ್ಮಣ.  ಮಾಧವ ದೊಡ್ಡವನಾಗುವಾಗಲೇ ಆತನ ತಂದೆಯೂ ಗತನಾಗಿದ್ದಾನೆ.  ಆತನಿಗೆ ಆತನ ತಂದೆಯ ಪರಿಚಯ, ಅಟ್ಟದಲಿಟ್ಟ ತಂದೆ ಬರೆದ ತಾಳೆಯ ಎಲೆಯ ಮೇಲೆ ಬರೆದ ಶಾಸ್ತ್ರ ಗ್ರಂಥಗಳಿಂದಲಷ್ಟೇ.  ಹೊಟ್ಟೆ ಪಾಡಿಗೆ ಮಾಧವನೂ ಕೇರಳ ದೇಶಕ್ಕೆ ಹೊರಡುತ್ತಾನೆ.  ಅಲ್ಲೊಂದು ದೇವಸ್ಥಾನ ಅವನಿಗೊಂದು ನೆಲೆ ಕೊಡುತ್ತದೆ. ಮಾಧವ, ಮಾಧವ ಯಂಬ್ರಾದ್ರಿ ಆಗುತ್ತಾನೆ. ಗಿಳಿಯೊಂದನ್ನು ಸಾಕುತ್ತಾನೆ. ಜೀವನ ಆರಕ್ಕೇಳದೇ ಮೂರಕ್ಕಿಳಿಯದೇ ಇರುವಾಗಲೇ, ಆತನಿಗೆ ನಾಯರ್ ಹುಡುಗಿಯ ಮದುವೆಯ ಪ್ರಸ್ತಾಪ ಬರುತ್ತದೆ. ಗುಪ್ತವಾಗಿ ಇಷ್ಟಪಟ್ಟ ಹುಡುಗಿಯದೇ ಪ್ರಸ್ತಾಪವದು. ಈ ಮದುವೆ ಹುಡುಗಿಯ ಅಣ್ಣನಿಗಾಗಲೀ, ಹುಡುಗಿಗಾಗಲೀ ಇಷ್ಟವಿಲ್ಲ. ಏಕೆಂದರೆ ಯಂಬ್ರಾದ್ರಿಗಳು ಹಗಲಿಗೆ ಈ ಹುಡುಗಿಯರನ್ನು ಮುಟ್ಟುವುದಿರಲೀ, ಮಾತೂ ಆಡಿಸಲಾರರು. ಇಬ್ಬರ ಸಂಬಂಧ ಹಾಸಿಗೆಗಷ್ಟೇ ಮೀಸಲು. ಈ ಇಬ್ಬರ ವಿರೋಧದ ನಡುವೆಯೂ ಮದುವೆಯಾಗುತ್ತದೆ. ಮಾಧವ ಹೆಂಡತಿಯನ್ನು ಸಂಪ್ರದಾಯಕ್ಕೆ ಮೀರಿ ಪ್ರೀತಿಯಿಂದ ಕಾಣುತ್ತಾನೆ. ಇಬ್ಬರೂ ಸಂತೋಷವಾಗಿ ಜೀವನ ಮಾಡುತ್ತಿರುತ್ತಾರೆ. ಒಮ್ಮೆ ಮಾಧವ ಹೆಂಡತಿಯ ತವರು ಮನೆಯ ಅಟ್ಟ ಹತ್ತಿದಾಗ, ಅವನಿಗಲ್ಲಿ ತಾಳೆಗರಿಯ ಶಾಸ್ತ್ರ ಪುಸ್ತಕಗಳು ಸಿಗುತ್ತದೆ. ಆತನ ಪತ್ನಿ, ನನ್ನ ಅಪ್ಪನೂ ದಕ್ಷಿಣ-ಕನ್ನಡದ ಬ್ರಾಹ್ಮಣ,  ಅವೆಲ್ಲಾ ಅವನ ಪುಸ್ತಕಗಳು ಎಂದು ತಿಳಿಸುತ್ತಾಳೆ. ಮಾಧವ ಅದನ್ನೆಲ್ಲ ಅಭ್ಯಸಿಸಲು ಮನೆಗೆ ತರುತ್ತಾನೆ.  ಅದೇ ರೀತಿಯ ಪುಸ್ತಕಗಳನ್ನು, ಆತ ಕನ್ನಡ ಜಿಲ್ಲೆಯ ತನ್ನ ಮನೆಯಲ್ಲಿ ಅಭ್ಯಸಿಸಿದ್ದ; ಅದೇ ಬರವಣಿಗೆ. ಅವನಿಗೆ ತಾನು ಮದುವೆಯಾದ ಹುಡುಗಿ ತನ್ನ ತಂಗಿಯೇ ಎಂದು ತಿಳಿಯುತ್ತದೆ. ಏನೂ ಮಾಡಲು ತೋಚದೇ ಹೋಗುತ್ತದೆ. ತನ್ನ, ದುಃಖ, ದಿಗ್ಭ್ರಮೆ, ಅಸಹಾಯಕತೆಗಳನ್ನು ಮನಸಾ ಪ್ರೀತಿಸಿದ ಪತ್ನಿಯೊಂದಿಗೆ ತೋಡಿಕೊಳ್ಳಲಾರ, ಬಿಡಲಾರ. ಈ ಸಂಧಿಗ್ದತೆಯಿಂದ ಹೊರಬರಲಾರದೆ, ಮರುದಿನ ಬಿದಿರಿನ ಹಿಂಡಿಗೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಅವನು ಸಾಕಿದ ಪ್ರೀತಿಯ ಗಿಳಿಯೂ ಬೆಕ್ಕಿಗೆ ಆಹಾರವಾಗುತ್ತದೆ.

ಭಾರತೀಸುತರು ಪ್ರಾಯಶಃ ಈ ಪುಸ್ತಕ ಬರೆದಿದ್ದು 50 ಯಾ 60ರ ದಶಕದಲ್ಲಿ. ಭಾರತದಲ್ಲೇನೂ, ಪಾಶ್ಚಾತ್ಯ ದೇಶದಲ್ಲೂ ಇನಸೆಸ್ಟ್ (ಆಗಮ್ಯಗಮನ) ಬಗ್ಗೆ ಮಾತನಾಡದ ಕಾಲವಾದು. ಕಠಿಣವಾದ ವಿಷಯನ್ನು ಸೂಕ್ಷ್ಮವಾಗಿ ಬರೆದದ್ದು ಅವರ ವಿಶೇಷ. ಕಥೆ ಓದಿ ಪುಸ್ತಕ ಕೆಳಗಿಟ್ಟ ಮೇಲೆ, ಬಹುದಿನಗಳವರೆಗೆ ಮನಸ್ಸು ನಿರ್ದೋಷಿಗಳಾದ ಮಾಧವ, ಮತ್ತು ಆತನ ಮುದ್ದಿನ ಮಡದಿಯರಿಗಾಗಿ ಕಂಬನಿಗರೆಯುತ್ತದೆ. ಮಾಧವನನ್ನು ನೆನಪಿಸಿಕೊಂಡು ಕರಳು ಕಿವುಚುತ್ತದೆ.

ವಕ್ರರೇಖೆ

ವಕ್ರರೇಖೆ ಉತ್ತರ-ಕನ್ನಡದ ಹವ್ಯಕ ಸಮಾಜದ ಮೇಲೆ ಆಧಾರಿತ ಕಾದಂಬರಿ. ಕಥೆಯ ಮೂಲಪಾತ್ರವೇ ಎಂಟು ವರ್ಷದ ಬಾಲೆ ವೇಣಿ. ಆಕೆ ತಂದೆ ತಾಯಿಯರಿಲ್ಲದ ಅನಾಥೆ. ಆದರೆ, ಅವಳ ಅಣ್ಣ ದೇವರು ಹೆಗಡೆಯಾಗಲೀ, ಬಾಲವಿಧವೆ ಪರಮತ್ತೆಯಾಗಲೀ, ಅಪ್ಪ, ಅಮ್ಮನಿಗೆ ಏನೂ ಕಡಿಮೆ ಇಲ್ಲದಂತೆ ಅವಳನ್ನು ಸಾಕುತ್ತಾರೆ. ದೇವರು ಹೆಗಡೆಗೆ ತಂಗಿ ಎಂದರೆ ಬಲು ಪ್ರೀತಿ, ಪರಮತ್ತೆ ಎಂದರೆ ಪ್ರೀತಿ, ಹಾಗೂ ಗೌರವ, ಆದರೆ ಹೆಂಡತಿ ಎಂದರೆ ಮಾತ್ರ ಅಸಡ್ಢೆ. ಆತನಿಗೆ ಜಾಜಿ ಎಂಬ ಗೋಕರ್ಣದ ವೇಶ್ಯೆಯ ಸಂಬಂಧ. ಎಷ್ಟೋ ಬಾರಿ ಗೋಕರ್ಣಕ್ಕೆ ಹೋಗುವಾಗ, ಪರಮತ್ತೆ, ವೇಣಿ, ಹಾಗೂ ಮಗ ಶೀನನನ್ನು ಜಾಜಿಯ ಮನೆಯಲ್ಲಿ ಉಳಿಸಿ ತನ್ನ ಕೆಲಸಕ್ಕೆ ಹೋದ ದಿವಸಗಳೆಷ್ಟೋ. ಬಾಲವಿವಾಹದ ಕಾಲವದು. ವೇಣಿಗೆ ಗಂಡು ಹುಡುಕುವ ಸಿದ್ಧತೆ ಮನೆಯಲ್ಲಿ. ತಮ್ಮ ಅಂತಸ್ತಿಗೆ ತಕ್ಕುದಾದ ಹುಡುಗನನ್ನೇ ಹೆಗಡೇರು ಹುಡುಕುತ್ತಾರೆ. ಭಟ್ಟರ ಮಗ ಶಿವರಾಮ 14-15ರ ಹರೆಯದವನು. ವೇಣಿಗೆ ಅವನೆಂದರೆ ಬಲು ಸಲಿಗೆ. ಶಿವರಾಮನಿಗೆ ವೇಣಿಯನ್ನು ವರಿಸುವ ಇಚ್ಛೆ. ಆದರೆ ಅವನಿಗೆ ಗೊತ್ತು, ಅವನಂಥ ಬಡವನಿಗೆ ದಕ್ಕದ ಹೆಣ್ಣು ವೇಣಿಯೆಂದು. ಪರಮತ್ತೆಯ ಸೂಕ್ಷ್ಮ ಕಣ್ಣಗಳು ಈ ಪ್ರೀತಿಯ ದೃಷ್ಟಿ ತಪ್ಪಿಸಿಕೊಳ್ಳಲಾರದು. ಈ ಸಂದರ್ಭ ಪರಮತ್ತೆಯನ್ನು ತನ್ನ ಮದುವೆಯ ದಿನಗಳಿಗೆ ಕೊಂಡೊಯ್ಯುತ್ತದೆ.  ಅವಳು ಇಷ್ಟಪಟ್ಟ ಹುಡುಗನೊಬ್ಬ, ಆದರೆ ಮದುವೆಯಾದದ್ದೇ ಮತ್ತೊಬ್ಬ. ಆಕೆ ಮದುವೆಯಾದ ಹುಡುಗ, ಮದುವೆಯಾಗಿ ವಾರದೊಳಗೇ ತೀರಿ ಹೋಗುತ್ತಾನೆ. ವಯಸ್ಸಿಗೆ ಬಂದೊಡನೇ ಪರಮತ್ತೆ ತಲೆ ಬೋಳಿಸಬೇಕಾಗುತ್ತದೆ. ಹರೆಯದಲ್ಲಿ ಅವಳೂ, ಅವಳ ಬಾಲ್ಯದ ಪ್ರೇಮಿ ಹಲವು ಬಾರಿ ದೈಹಿಕವಾಗಿಯೂ ಒಂದಾದನ್ನು ಪರಮತ್ತೆ ನೆನಪಿಸಿಕೊಳ್ಳುತ್ತಾಳೆ. ಆದರೆ ಈಗ ಆಕೆ ಅಸಹಾಯಕಿ. ವೇಣಿಯ ಮದುವೆ ಭರ್ಜರಿಯಾಗಿ 4 ದಿವಸ ನಡೆಯುತ್ತದೆ. ಮದುವೆ ಮುಗಿದ ಮೇಲೆ ವೇಣಿಯ ಗಂಡ ತೆಂಗಿನ ಮರದಿಂದ ಬಿದ್ದು ತೀರಿ ಹೋಗುತ್ತಾನೆ. ಮದುವೆ ಅಂದರೇ ಏನು ಎಂದು ತಿಳಿಯದ ಮುಗ್ಧೆ ವೇಣಿ ವಿಧವೆಯಾಗುತ್ತಾಳೆ.

ಸರಳವಾಗಿ ಬರೆದ ಈ ಕಾದಂಬರಿ ನಮಗೆ ಉತ್ತರ-ಕನ್ನಡದ ಅಡಿಕೆ ತೋಟ, ಪ್ರಕೃತಿ ಸೌಂದರ್ಯದ ದರ್ಶನ ಮಾಡಿಕೊಡುತ್ತದೆ. ವೇಣಿಯ ಬಾಲ್ಯ ನಮ್ಮ ಬಾಲ್ಯಕ್ಕೆ ಹತ್ತಿರವಾದದ್ದರಿಂದ ಅವಳು ನಮ್ಮವಳೆನಿಸಿ ಬಿಡುತ್ತಾಳೆ. ಅವಳು ನಗುವಾಗ ನಾವೂ ನಗುತ್ತೇವೆ, ಅತ್ತಾಗ ಅಳುತ್ತೇವೆ.  ದೇವರು ಹೆಗಡೆ ಹೆಂಡತಿಯನ್ನು ದನದಂತೆ ಹೊಡೆದಾಗ ನಮಗೂ ಆತನಿಗೆ ಹೊಡೆಯಬೇಕೆನಿಸಿದರೆ; ಆತ ತಂಗಿಯನ್ನು, ಅತ್ತೆಯನ್ನು ಪ್ರೀತಿಯಿಂದ ಕಂಡಾಗ ಮನುಷ್ಯ ಅಡ್ಡಿಯಿಲ್ಲ ಅನಿಸುತ್ತಾನೆ. ಪರಮತ್ತೆ ಎಲ್ಲರನ್ನೂ ಪ್ರೀತಿಯಿಂದ ನೋಡುವಾಗ ಮನಸ್ಸಲ್ಲಿ ಎಷ್ಟು ದು:ಖವಿದ್ದರೂ ಬದುಕನ್ನು ಪ್ರೀತಿಸುವ ಅವಳ ಸ್ವಭಾವಕ್ಕೆ ಕಣ್ಣು ತೇವವಾಗುತ್ತದೆ. ಅವಳು ಓದುಗನೊಡನೆ ವಿಧವೆಯಾದ ಮೇಲೆ ಮಾಡಿದ ದೈಹಿಕ ಸಂಬಂಧ ಹಂಚಿಕೊಂಡಾಗ ಅವಳ ಮೇಲೆ ತಿರಸ್ಕಾರ ಹುಟ್ಟುವುದಿಲ್ಲ. ವೇಣಿಯ ಗಂಡ ತೀರಿದಾಗ ಎಲ್ಲರೊಡನೆ ಓದುಗನ ಮನಸ್ಸು ಬಿಕ್ಕಿ ಬಿಕ್ಕಿ ಅಳುತ್ತದೆ. ಈ ಅನ್ಯಾಯಕ್ಕೆ ಕೊನೆ ಇಲ್ಲವೇ ಎಂದು ಆಕ್ರೋಷಗೊಳ್ಳುತ್ತದೆ. ಅವಳನ್ನು ಅಷ್ಟೊಂದು ಪ್ರೀತಿಸಿದ ಶಿವರಾಮ ಸಮಾಜವನ್ನು ಮೀರಿ ಮದುವೆಯಾಗಬಾರದೇ ಎಂಬ ಆಸೆ ಆಸೆಯಾಗಿಯೇ ಉಳಿಯುತ್ತದೆ. 

– ರಾಂ ಹಾಗೂ ಪ್ರತಿಭಾ ಭಾಗ್ವತ್