ಏನಿದೇನಿದು ಜನವರಿ ೨೬ರ ಕಹಾನಿ!! – ವಿನತೆ ಶರ್ಮ ಬರೆದ ಲೇಖನ

ಇಂದು ಜನವರಿ ೨೬, ಭಾರತೀಯರಿಗೆ ಹಬ್ಬ; ದೇಶ ಪ್ರಜಾಪ್ರಭುತ್ವವನ್ನು ಅಧಿಕೃತವಾಗಿ ಆಲಂಗಿಸಿದ ಸುದಿನ. ಅದೇ ದಿನ ಸಾವಿರಾರು ಮೈಲಾಚೆಯ ದಕ್ಷಿಣ ಗೋಳಾರ್ಧದ ದೇಶ ಖಂಡ ಆಸ್ಟ್ರೇಲಿಯಾಕ್ಕೆ ದುಃ ಸ್ವಪ್ನದ ನೆನಪನ್ನು ಕೆದಕುವ ದಿನವಾಗಿದೆಯೇ? ನಮಗರಿಯದ ವಾಸ್ತವವನ್ನು ನಮ್ಮೆದುರು ತೆರೆದಿಡುತ್ತಿದ್ದಾರೆ ವಿನತೆ. ವಸಾಹತುಶಾಹಿಯ ಬರ್ಬರತೆ, ಕುಟಿಲತೆ ಹಾಗೂ ಅನುಕೂಲ ಸಿಂಧು ಇತಿಹಾಸ ಬರೆಯುವ ಮುಖಗಳನ್ನು ಆಸ್ಟ್ರೇಲಿಯಾದಲ್ಲಿ ಬಾಳಿ, ಈಗ ಇಂಗ್ಲೆಂಡ್ ನಲ್ಲಿರುವ ವಿನತೆ ಶರ್ಮ ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ. ಲೇಖನಕ್ಕೆ ಪೂರಕವಾದ ಚಿತ್ರಗಳನ್ನು ಹಾಗೂ ಯು-ಟ್ಯೂಬ್ ಕ್ಲಿಪ್ಪನ್ನು ಕೂಡ ಅಳವಡಿಸಿದ್ದಾರೆ. ಓದಿ, ನಿಮ್ಮ ಅನಿಸಿಕೆಗಳನ್ನು ನಮ್ಮೊಡನೆ ಹಂಚಿಕೊಳ್ಳಿ. 

 

ಕ್ಯಾಲೆಂಡರ್ ನ ಸಾಮಾನ್ಯ ದಿನಾಂಕವೊಂದು ಎರಡು ದೇಶಗಳ ರಾಜಕೀಯ ಸ್ಥಿತಿ-ಗತಿಗಳನ್ನು ವಿಭಿನ್ನವಾಗಿ ಬದಲಾಯಿಸಬಹುದೇ?  ಹೌದೆನ್ನುತ್ತದೆ, ಈ ಜನವರಿ ೨೬!! ನಾವೆಲ್ಲರೂ ದಿನನಿತ್ಯ ಬಳಸುವ ಐವತ್ತೆರಡು ವಾರಗಳ ಕ್ಯಾಲೆಂಡರ್ ನಲ್ಲಿ ಅಗೋ ಮತ್ತೊಂದು ಎಂಬಂತೆ ಸುಮ್ಮನೆ ಕುಳಿತಿದ್ದ ಜನವರಿ ೨೬ ರನ್ನು ನಾಟಕದ ಪ್ರಮುಖ ಪಾತ್ರಧಾರಿಯನ್ನಾಗಿ ಮಾಡಿ ಪಟ್ಟಕ್ಕೇರಿಸಿದ್ದು ಇಂಗ್ಲೀಷರು – ಅದು ಆಸ್ಟ್ರೇಲಿಯಾದಲ್ಲಿ ನಡೆದ ನಾಟಕದ ಒಂದು ಅಂಕ. ಇಂದು January ೨೬, Australia Day ಎಂದು ಆಚರಿಸಲ್ಪಡುತ್ತಿದೆ.

೧೯೫೦ರ ಭಾರತದಲ್ಲಿ ಅದೇ ದಿನಾಂಕವು ಸಂವಿಧಾನವನ್ನು ಪರಿಚಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೆ ತಂದಿತು. ಆ ದಿನ ಆ ರೂಪದಲ್ಲಿ ಹುಟ್ಟಲು ಕೂಡ ಪರೋಕ್ಷವಾಗಿ ಕಾರಣರಾದದ್ದು ವಸಾಹತುಶಾಹಿಗಳಾಗಿ ಭಾರತವನ್ನು ಆಕ್ರಮಿಸಿದ್ದ ಇಂಗ್ಲೀಷರು. ಹಾಗಾಗಿ Indian Republic Day, ಭಾರತೀಯ ಗಣರಾಜ್ಯೋತ್ಸವ ಎಂದರೆ ಭಾರತೀಯರಿಗೆ ಹಬ್ಬ. ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುವ ವಿಜೃಂಭಣೆಯ ಕಾರ್ಯಕ್ರಮಗಳು ಬಹು ಪ್ರಸಿದ್ಧಿ. ಭಾರತೀಯರೆಲ್ಲರಿಗೂ ಅಷ್ಟೇ ಹೆಮ್ಮೆ ತರುವ ದಿನ ಈ ತಾರೀಕು.

ಆದರೆ ಆಸ್ಟ್ರೇಲಿಯಾದಲ್ಲಿ ಜನವರಿ ೨೬ ಎಲ್ಲರಿಗೂ ಹೆಮ್ಮೆ ತರುವ ದಿನವಲ್ಲ. ದೇಶದಾದ್ಯಂತ ಅದು Australia Day ಆದರೂ ಸುಮಾರು ಜನ ಆಸ್ಟ್ರೇಲಿಯನ್ ಮೂಲನಿವಾಸಿಗಳು (Aboriginal) ಅಥವಾ ಸ್ವದೇಶೀಯರು (Indigenous = Aboriginal and Torres Straight Islanders) ಈ ದಿನವನ್ನು Occupation Day, Foundation Day, Settlers Day ಎಂದು ಕರೆಯುತ್ತಾರೆ. ಕೆಲವರಿಗೆ ಹಬ್ಬವಾದರೆ ಹಲವರಿಗೆ ಅದು ಶೋಕಾಚರಣೆಯ ಸಂಕೇತ. ಇದರ ಹಿನ್ನೆಲೆ ಬರೀ ವಸಾಹತುಶಾಹಿ ಆಳ್ವಿಕೆ ಅಷ್ಟೇ ಅಲ್ಲ; ಅದರ ಜೊತೆಗೆ ನೋವು, ಸಾವು, ನಷ್ಟ, ಮತ್ತು ಪೀಳಿಗೆಗಳಿಗೆ ಅಂಟಿರುವ, ಬೇಕೋ ಬೇಡವೋ ಆದರೂ ಶಾಶ್ವತ ತಿಥಿ.

Aboriginal Australia ವನ್ನು ತೋರಿಸುವ ಭೂಪಟ; ಹಲವಾರು ವರ್ಷಗಳ ಕಾಲ ಬಹು ಶ್ರಮ ಪಟ್ಟು ೧೯೮೮ರಲ್ಲಿ ಸಿದ್ಧಪಡಿಸಿದ್ದು. ಈ ಭೂಪಟ ಅವರ ಭಾಷಾಗುಂಪು ಮತ್ತು ಪ್ರಾದೇಶಿಕವಾಗಿ ವಾಸಿಸಿದ್ದ Blood Line ಜನ ಸಮುದಾಯಗಳನ್ನು ಸೂಚಿಸುತ್ತದೆ. ಕೃಪೆ ಮೂಲ: Australian Institute of Aboriginal and Torres Islanders Studies.

ನಾನು ಆಸ್ಟ್ರೇಲಿಯಾದಲ್ಲಿ ಕಾಲಿಟ್ಟದ್ದು ಫೆಬ್ರವರಿ ತಿಂಗಳಲ್ಲಿ. ಅದಾಗಲೇ Australia Day ವಾರ್ಷಿಕ ಆಚರಣೆ ಮುಗಿದಿತ್ತು. ವಿಶ್ವವಿದ್ಯಾನಿಲಯದಲ್ಲಿ ಹೊಸದಾಗಿ ಪರಿಚಯವಾದ ಆಸ್ಟ್ರೇಲಿಯನ್ನರು ಮತ್ತು ಇತರೆ ದೇಶಗಳ ವಿದ್ಯಾರ್ಥಿಗಳು ಬಹು ಗಮ್ಮತ್ತಾದ ಆ ದಿನದ ಪಾರ್ಟಿಗಳ ಬಗ್ಗೆ, ಎಲ್ಲೆಲ್ಲೂ ನಡೆಯುವ ಬಾಜಾಭಜಂತ್ರಿ, ಪೆರೇಡ್ ಗಳು, ಸಮುದ್ರ ತೀರದಲ್ಲಿ ಏರ್ಪಡುವ BBQ ಗಳ ಬಗ್ಗೆ ವಿವರಣೆ ಕೊಟ್ಟಿದ್ದರು. ಅದರ ಚಾರಿತ್ರಿಕ ಹಿನ್ನೆಲೆಯ ಬಗ್ಗೆ ಹೇಳಿದ್ದು ಈ ದಿನ ಈ ದೇಶವು ಆಸ್ಟ್ರೇಲಿಯಾ ಎಂದು ಅಸ್ತಿತ್ವಕ್ಕೆ ಬಂತು ಎಂದು. ನಾನು ಹೌದಾ ಎಂದು ಸುಮ್ಮನಾದರೂ ಮನಸ್ಸೆಲ್ಲಾ ನಮ್ಮ ಗಣರಾಜ್ಯೋತ್ಸವ ದಿನಕ್ಕೇ ಹೋಲಿಕೆ ಮಾಡುತ್ತಿತ್ತು. ಹಾಗೆ ಇರಬಹುದೇನೋ ಅನ್ನಿಸಿತ್ತು. ಮರು ವರ್ಷ ನಾನೂ ಕೂಡ BBQ ನೋಡಲು ಹೋದರೂ ಸಸ್ಯಾಹಾರಿಯಾದ್ದರಿಂದ ಉಪವಾಸವಿದ್ದು ಮನೆಗೆ ವಾಪಸ್ಸಾಗಿದ್ದೆ. ಆಗಲೂ ನನಗೆ Australia Day ಬಗ್ಗೆ ಹೆಚ್ಚು ಜ್ಞಾನವಿರಲಿಲ್ಲ. ಆಗಾಗ ಜನ ನನ್ನನ್ನು”Are you Aboriginal?” ಎಂದು ಕೇಳಿದಾಗ ವಿಚಿತ್ರವೆನಿಸಿತ್ತು. ನನ್ನ ಬಿಳಿ ಬಣ್ಣದ ಸ್ನೇಹಿತರು, “ಚಿಂತೆ ಮಾಡಬೇಡ, ನೀನು Aboriginals ಥರ ಕಾಣುವುದಿಲ್ಲ”, ಎಂದು ಸಮಾಧಾನ ಪಡಿಸಿದ್ದರು. ನಾನೇನು ಅಷ್ಟು ತಲೆಗೆ ಹಚ್ಚಿಕೊಳ್ಳಲಿಲ್ಲ, ಅಧ್ಯಯನದಲ್ಲಿ ಮುಳುಗಿದ್ದೆ.

ಆ ಪ್ರಶ್ನೆ ನನ್ನ ತಲೆ ತಾಕಿ ಒಳ ಹೊಕ್ಕು ತಿವಿದಿದ್ದು ಮುಂಬರುವ ವರ್ಷಗಳಲ್ಲಿ. ನಾನು ಹೆಚ್ಚು ಹೆಚ್ಚು ಜನನಿಬಿಡ (public spaces) ಪ್ರದೇಶಗಳಿಗೆ ಹೋದಷ್ಟೂ ನನಗೆ ವರ್ಣಬೇಧದ ಪರಿಚಯ ನೇರವಾಗಿ ಆಗಲಾರಂಭಿಸಿತು; ಆ ಪ್ರಶ್ನೆ ಕೇಳುವ ಜನ ಹೆಚ್ಚಾದರು. ಅದರ ಕೂಡ ನನಗೆ ಬಳುವಳಿಯಾಗಿ ಬಂದದ್ದು ಜನಾಂಗದ್ವೇಷದ ಅನುಭವ. ಆಗ ನಾನು ಆಸ್ಟ್ರೇಲಿಯ ದೇಶದ ಇತಿಹಾಸ, ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಗಳ ಬಗ್ಗೆ ತಿಳಿಯುವ ಪ್ರಯತ್ನ ಮಾಡಿದೆ. ಆ ಕಾಲದಲ್ಲಿ ನನಗೆ ದೊರೆತ ಅಪರೂಪದ ಸ್ನೇಹಿತೆಯೊಬ್ಬಳು ತನ್ನದೇ ಅನುಭವ ಕತೆಗಳ ಮೂಲಕ ಒಂದಷ್ಟು ಬೆಳಕು ಚೆಲ್ಲಿದಳು. ಮುಂದೆ ನಾನು ಬ್ರಿಸ್ಬನ್ ನಗರದಲ್ಲಿ ಕಳೆದ ವರ್ಷಗಳಲ್ಲಿ ಕೆಲ ಕಾಲ ಒಂದು Aboriginal and Torres Straight Islanders education ವಿಭಾಗದಲ್ಲಿ ಕೆಲಸ ಮಾಡಿದ್ದೆ. ಅಲ್ಲಿ ನನಗೆ ಮುಖಾಮುಖಿಯಾಗಿದ್ದು ಆ ದೇಶದ ಕರಾಳ ಚಾರಿತ್ರಿಕ ಘಟನೆಗಳು, ವರ್ಣಬೇಧ ಮತ್ತು ಜನಾಂಗದ್ವೇಷದ ಕುಲುಮೆಗಳಲ್ಲಿ ಬೆಂದು ಹೋದ ಕುಟುಂಬಸ್ಥರ ನೋವು, ಮತ್ತು ಈ ಎಲ್ಲದರ ಮಧ್ಯೆ ನನ್ನ ನಿಲುವು ಮತ್ತು ಅಸ್ಮಿತೆ ಏನು ಎಂಬ ಪ್ರಶ್ನೆ.

ಬ್ರಿಟಿಷರು ಭಾರತ ಬಿಟ್ಟು ಹೊರ ನಡೆದ ಕಾಲಘಟ್ಟದಲ್ಲಿ ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಹಂತಹಂತವಾಗಿ ರೂಪುಗೊಂಡಿತು. ಅದನ್ನೆಲ್ಲಾ ನಾವುಗಳು ಶಾಲಾ ಪಠ್ಯದಲ್ಲಿ ಓದಿದ್ದೆವು. ಸ್ವತಂತ್ರ ಭಾರತದಲ್ಲೇ ಹುಟ್ಟಿದ್ದರಿಂದ ನನ್ನಂತಹವರಿಗೆ ಸ್ವಾತಂತ್ರ್ಯವಿಲ್ಲದ ಬದುಕು ಎಂದರೆ ಏನು ಎಂಬ ಕಲ್ಪನೆ ಮೂಡುವುದಿಲ್ಲ.

ಅಂತಹ ಕಲ್ಪನೆ ನನಗೆ ಬ್ರಿಸ್ಬನ್ ನಗರ ವಾಸದಲ್ಲಿ ಮೂಡಿತು. ನನ್ನ ಮೈ ಚರ್ಮ ಕಂದು/ಕಪ್ಪು ಬಣ್ಣ ಎಂಬ ಕಾರಣಕ್ಕೆ ನನ್ನ ಪಕ್ಕದ ಮನೆಯವರು ಐದು ವರ್ಷಗಳು ನನ್ನನ್ನು, ನನ್ನ ಮಕ್ಕಳನ್ನು ದೂರ ಇಟ್ಟು ಮಾತುಗಳಿಂದ, ನಡತೆಯಿಂದ, ಅವರ ಉಪೇಕ್ಷೆಯಿಂದ ಕಾಟ ಕೊಟ್ಟಿದ್ದರು. ನಾನು ಧೈರ್ಯವಾಗಿ ದೃಢತೆಯಿಂದ ನಿಂತಿದ್ದರಿಂದ ನನ್ನ ಮಕ್ಕಳು ಸಂತೋಷವಾಗಿ ನಮ್ಮ ಮನೆಯ ಹಿತ್ತಲಲ್ಲಿ ಆಟವಾಡಲು ಸಾಧ್ಯವಾಗಿತ್ತು. ಧೈರ್ಯವನ್ನೇ ನಿರ್ಮೂಲನೆ ಮಾಡಿ, ಜನರ ಅಂತಃಶಕ್ತಿಯನ್ನೇ ನಿರ್ನಾಮ ಮಾಡಲೆತ್ನಿಸಿದರೆ ಏನಾಗುತ್ತದೆ?

ಏನಾಯಿತು ಎಂಬ ಕತೆಗಳನ್ನು ನಾನು Aboriginal ಸ್ನೇಹಿತರ ಬಾಯಿಂದ, ಅವರ ಹಿರಿಯರಿಂದ, ಮತ್ತು ಕಿರಿಯ ವಿದ್ಯಾರ್ಥಿಗಳಿಂದ ಕೇಳಿದೆ.

ಈ ಕಾರ್ಟೂನ್ ಎಲ್ಲವನ್ನೂ ಹೇಳುತ್ತದೆ! ಕೃಪೆ: Lefty Cartoons

ಚಾರಿತ್ರಿಕವಾಗಿ ಹೇಳುವುದಾದರೆ ೧೬೦೦-ರಲ್ಲೇ ಆಸ್ಟ್ರೇಲಿಯಾ ದೇಶಕ್ಕೆ ವ್ಯಾಪಾರದ ಮತ್ತು ಚಿನ್ನದ ನಿಕ್ಷೇಪಗಳ ಆಸೆಯಿಂದ ಚೀನಿಯರು ಮತ್ತು ಡಚ್ಚರು ಬಂದಿದ್ದರು. ಚಿನ್ನದ ನಿಕ್ಷೇಪಗಳ ಕತೆ ಯೂರೋಪಿನ ಇತರ ದೇಶಗಳಿಗೂ ಹಬ್ಬಿತ್ತು. ೧೬೦೦ ಮತ್ತು ೧೭೦೦ ರ ಶತಮಾನಗಳಲ್ಲಿ ಯುರೋಪಿಯನ್ನರು ಉತ್ತರ ಮತ್ತು ದಕ್ಷಿಣ ಅಮೇರಿಕ ಖಂಡಗಳನ್ನು ಆಕ್ರಮಿಸಿ ತಮ್ಮ ಆಳ್ವಿಕೆಯನ್ನು ಸ್ಥಾಪಿಸಲು ಹೆಣಗಾಡುತ್ತಿದ್ದರು.  ಏಷ್ಯಾದ, ಆಫ್ರಿಕಾದ ಭಾಗಗಳಲ್ಲಿ ತಮ್ಮ ಅಧಿಕಾರವನ್ನು ಸ್ಥಾಪಿಸಿ ಆ ಭೂಭಾಗಗಳ ಸಂಪತ್ತನ್ನು ಕೊಳ್ಳೆ ಹೊಡೆಯುವ ಪ್ರಯತ್ನದಲ್ಲಿ ಡಚ್ಚರು, ಪೋರ್ಚುಗೀಸರು, ಫ್ರೆಂಚರು, ಇಂಗ್ಲೀಷರು, ಬೆಲ್ಜಿಯನ್ನರು ಎಂಬಂತೆ ಎಲ್ಲರೂ ಕಚ್ಚಾಡುತ್ತಿದ್ದರು. ಭಾರತದಲ್ಲಿ ಇಂಗ್ಲೀಷರ East India Company ತನ್ನ ‘ಒಡೆದು ಆಳು’ ನೀತಿಯನ್ನು ಚಾಣಾಕ್ಷತೆಯಿಂದ ಕಾರ್ಯರೂಪಕ್ಕೆ ತಂದಿತ್ತು.

ಅದೇ ಕಾಲದಲ್ಲಿ ೧೭೭೦ ರಲ್ಲಿ ದೂರದ ಆಸ್ಟ್ರೇಲಿಯಾ – ಈಗಿನ ಸಿಡ್ನಿ ಅಂದರೆ ಪೂರ್ವ ಕರಾವಳಿಗೆ ಬಂದಿಳಿದು, ಕ್ಯಾಪ್ಟನ್ ಕುಕ್ ಆ ಪ್ರದೇಶಕ್ಕೆ New South Wales ಎಂದೂ ಕೂಡ ನಾಮಕರಣ ಮಾಡಿದ್ದ. ಅಲ್ಲಿದ್ದ Aboriginal ಜನ ಸಮುದಾಯಗಳನ್ನು ಭೇಟಿಯಾಗಿ ಒಂದಷ್ಟು ಭಾಂದವ್ಯವನ್ನು ಆರಂಭಿಸಿದ್ದ. ಅದಾದ ನಂತರ ಉತ್ತರ ಅಮೆರಿಕೆಯಲ್ಲಿ ಇಂಗ್ಲಿಷ್ ಸೈನ್ಯಕ್ಕೆ ಹಲವಾರು ಕಡೆ ಪರಾಭವವಾಗಿತ್ತು; ಭಾರತದಲ್ಲೂ ಸವಾಲು, ಪ್ರತಿಭಟನೆಗಳು ಬೆನ್ನುಬಿಡದೆ ಎದುರಾಗಿದ್ದವು. ಬಿಗಡಾಯಿಸಿದ್ದ ಆಂತರಿಕ ಸಮಸ್ಯೆಗಳಿಂದ ನಲುಗಿದ್ದ ಇಂಗ್ಲೆಂಡ್ ತುಂಬಿತುಳುಕಿದ್ದ ಕಾರಗ್ರಹಗಳಿಂದ ಒಂದಷ್ಟು ಜನರನ್ನು ಹಡಗುಗಳಲ್ಲಿ ತುಂಬಿಸಿ ದೂರದ ದ್ವೀಪ ಆಸ್ಟ್ರೇಲಿಯಾಕ್ಕೆ ರವಾನಿಸಲು ಮುಂದಾಗಿತ್ತು.

೧೭೮೮ ರ ಮೊದಲ ತಿಂಗಳಲ್ಲಿ ಕ್ಯಾಪ್ಟನ್ ಆರ್ಥರ್ ಫಿಲಿಪ್ ತನ್ನ ಹಡಗನ್ನು ಸಿಡ್ನಿ ಕರಾವಳಿಗೆ ತಂದು ನಿಲ್ಲಿಸಿದ. ಅದಾಗಲೇ ಅಲ್ಲಿ ಫ್ರೆಂಚರು ತಮ್ಮ ಹಡಗಿನೊಂದಿಗೆ ಠಿಕಾಣಿ ಹೂಡಿದ್ದರು. ಇಂಗ್ಲೆಂಡ್ ರಾಜ ಮೂರನೇ ಜಾರ್ಜ್ ನೌಕಾಪಡೆಗೆ ಖಚಿತ ಆಜ್ಞೆಯಿತ್ತಿದ್ದರು – ಆ ಕರಾವಳಿಯ ಪ್ರದೇಶದಲ್ಲಿ ಇರುವ ಸ್ಥಳೀಯ ಜನರೊಂದಿಗೆ ಮಾತುಕತೆ ನಡೆಸಿ ಸಾಧ್ಯವಾದಷ್ಟೂ ಸನ್ನಿವೇಶದ ಲಾಭ ಪಡೆದು ಭೂಭಾಗಗಳನ್ನ ತಮ್ಮದಾಗಿಸಿಕೊಳ್ಳಬೇಕು. ಫಿಲಿಪ್ ಗೆ ತನ್ನದೇ ಆದ ರಾಜಕೀಯ ಉದ್ದೇಶಗಳೂ ಇದ್ದವು. ಫ್ರೆಂಚರನ್ನು ಹಿಂದಿಕ್ಕಿ ಇಂಗ್ಲೆಂಡ್ ಬಾವುಟವನ್ನು ಹಾರಿಸುವ ಮಹದಾಕಾಂಕ್ಷೆ ಹವಾಮಾನ ವ್ಯಪರೀತ್ಯವಿದ್ದರೂ ದೋಣಿಯಲ್ಲಿ ಸಾಗಿ ಜನವರಿ ೨೫ರಂದು ಸಿಡ್ನಿ ಕೊಲ್ಲಿಗೆ (Cove) ಬರುತ್ತಾನೆ. ಮರುದಿನ ಬೆಳಗ್ಗೆ ಅಂದರೆ ೨೬ರಂದು ಇಂಗ್ಲೆಂಡ್ ಯೂನಿಯನ್ ಜಾಕ್ ಬಾವುಟವನ್ನು ಹಾರಿಸಿ, ಆ ಭೂಪ್ರದೇಶ ನಮ್ಮ ಇಂಗ್ಲೆಂಡ್ ರಾಜನಿಗೆ ಸೇರಿದ್ದು ಎಂದು ಘೋಷಿಸುತ್ತಾನೆ. ಯಾರ ಲೆಕ್ಕದಲ್ಲಿ, ಯಾಕೆಂದು ಯಾರೂ ಕೇಳಲಿಲ್ಲವೇ?!

ಕ್ಯಾಪ್ಟನ್ ಆರ್ಥರ್ ಫಿಲಿಪ್ ಬ್ರಿಟನ್ನಿನ ಬಾವುಟವನ್ನು ೧೭೮೮, ಜನವರಿ ೨೬ ರಂದು ಸಿಡ್ನಿ ಕೊಲ್ಲಿಯಲ್ಲಿ ಹಾರಿಸುತ್ತಿರುವುದು. ಚಿತ್ರ ಕೃಪೆ: Algernon Talmadge R.A, 1937, ನ್ಯೂ ಸೌತ್ ವೇಲ್ಸ್ ರಾಜ್ಯ ಗ್ರಂಥಾಲಯ.

ಅಲ್ಲಿಂದ ನಿಧಾನವಾಗಿ ಆಸ್ಟ್ರೇಲಿಯಾವನ್ನು ಆಕ್ರಮಿಸುವ ಕಾಲಘಟ್ಟ ಆರಂಭವಾಯಿತು. ಮೊದಮೊದಲು ಸ್ಥಳೀಯರೊಂದಿಗೆ ಸಂಧಾನ, ಮಾತುಕತೆ ನಡೆದರೂ ನಂತರ ಬದಲಾದ ರಾಜಕೀಯ ನಿರ್ಧಾರಗಳು, ಇಂಗ್ಲೆಂಡ್ ಕಾರಾಗೃಹಗಳಿಂದ ಬಂದು ಇಲ್ಲಿ ಸೇರಿಕೊಂಡ ಚಿಕ್ಕ ಪುಟ್ಟ ಖೈದಿಗಳ ಧೋರಣೆಯಿಂದಲೂ, No man’s land, no humans ever lived here ಎಂದು ಸ್ವಲಾಭಕ್ಕಾಗಿ ಸೃಷ್ಟಿಸಿದ ಸುಳ್ಳಿನಿಂದಲೂ, White Supremacy ಕಾನೂನಿನಿಂದಲೂ ಮುಂದಿನ ಶತಮಾನಗಳು ಸ್ವದೇಶಿಯರಿಗೆ ದುಃಸ್ವಪ್ನವಾದವು.

Aboriginal ಜನಸಮುದಾಯಗಳ ಸಾಮೂಹಿಕ ಕಗ್ಗೊಲೆಗಳಾದವು. ಅಮೆರಿಕೆಯಲ್ಲಿ ಆಫ್ರಿಕನ್ ಜನಾಂಗವನ್ನು ಹೇಗೆ ಗುಲಾಮರು ಎಂದು ಹೇಳಿ ಬಲಿಪಶುಗಳನ್ನಾಗಿ ಮಾಡಿದರೋ ಹಾಗೆಯೇ ಆಸ್ಟ್ರೇಲಿಯಾದ ಸ್ವದೇಶಿಯರ ಸ್ಥಿತಿಯಾಯ್ತು. ಕೆಲವರು ಮನರಂಜನೆಗಾಗಿ Aboriginal ಜನರನ್ನು ಸಾಲು ನಿಲ್ಲಿಸಿ ಗುಂಡಿಟ್ಟು ಕೊಲ್ಲುತ್ತಿದ್ದರಂತೆ. ಕಾಲಕ್ರಮೇಣ ಅವರನ್ನು ‘ಸುಧಾರಿಸಿಲು’ ಕೆಲ ಕ್ರಮಗಳನ್ನು ತರಲಾಯಿತು. ಮಕ್ಕಳನ್ನು ಒಟ್ಟು ಕುಟುಂಬ ವ್ಯವಸ್ಥೆಯಿಂದ ಬೇರ್ಪಡಿಸಿ ಹಾಸ್ಟೆಲ್ ಗಳಿಗೆ ಸೇರಿಸಿ ಇಂಗ್ಲಿಷ್ ಭಾಷೆ, ಸಂಸ್ಕೃತಿ ಮತ್ತು ಸಾಕ್ಷರತೆಯನ್ನು ಕೊಡಲಾಯಿತು. ದೇಶದ ತುಂಬಾ ಹುಟ್ಟಿಕೊಂಡ ಬಿಳಿ ಯುರೋಪಿಯನ್ನರ ವ್ಯಾಪಾರ ಮತ್ತು ವ್ಯವಸಾಯ ಸಂಬಂಧಗಳ ಕೆಲಸಗಳಲ್ಲಿ ಗಂಡಸರನ್ನು, ಹೆಂಗಸರನ್ನು ಬಳಸಿಕೊಳ್ಳಲಾಯ್ತು. ಆಗ ನಡೆದ Stolen Generations ಮತ್ತು Stolen Wages ಯುಗದ ಕರಾಳ ಕತೆಗಳನ್ನು ೧೯೮೦ ರ ದಶಕದವರೆಗೂ ಹೊರ ಪ್ರಪಂಚಕ್ಕೆ ಕಾಣಿಸದ ಹಾಗೆ ಮುಚ್ಚಿಡಲಾಗಿತ್ತು. ಉದಾಹರಣೆಗೆ, ನಗರಗಳ ನಿಗದಿತ ಬೀದಿಗಳಲ್ಲಿ, ಅಂಗಡಿ, ಮನರಂಜನೆ, ಸಮುದ್ರ ತಟ ಮುಂತಾದ ಜಾಗಗಳಿಗೆ ಅವರಿಗೆ ಪ್ರವೇಶವಿರಲಿಲ್ಲ. ಅವರು ತಾವು Aboriginal ಎಂದು ಎಲ್ಲೂ ಹೇಳಿಕೊಳ್ಳುವ ಹಾಗಿರಲಿಲ್ಲ. ಈಗಲೂ ಸ್ವದೇಶೀಯರ ಒಟ್ಟು ಜನಸಂಖ್ಯೆ ಎಷ್ಟು ಎಂದು ನಿಖರವಾಗಿ ತಿಳಿದಿಲ್ಲ. ಯಾಕೆಂದರೆ ಕಾಗದದ ಮೇಲೆ ಅವರು ತಮ್ಮ ಅಸ್ಮಿತೆಯನ್ನು ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಸರ್ಕಾರಕ್ಕೆ ತಿಳಿದರೆ ಇನ್ನಿಲ್ಲದಷ್ಟು ಕಿರುಕುಳ ಶುರುವಾಗುತ್ತದೆ, ಪೊಲೀಸರು ಮನೆಗೆ ಬರುತ್ತಾರೆ, ಕಿರಿಯರನ್ನು ವಿನಾಕಾರಣ ಲಾಕಪ್ಪಿಗೆ ಹಾಕುತ್ತಾರೆ, ಇತ್ಯಾದಿ. ಹೆಚ್ಚಿನ ಪಾಲು ಕಳೆದುಹೋಗಿರುವ ಸಂಸ್ಕೃತಿಗಳು, ಬಲವಂತವಾಗಿ ಅಳಿಸಿದ ಭಾಷಾ ಸ್ವಂತಿಕೆ, ದುಃಖದಲ್ಲಿ ಮುಳುಗಿದ ಹಿರಿಯರು, ತಮ್ಮ ಅಸ್ಮಿತೆಯ ಬಗ್ಗೆ ಅರೆಬರೆ ತಿಳಿದಿರುವ ಕಿರಿಯರು, ಕಾಡುವ ಆರೋಗ್ಯ ಸಮಸ್ಯೆಗಳು, ಅಷ್ಟೊಇಷ್ಟು ಕೈಗೆಟಕುವ ಶಿಕ್ಷಣ, ಸದಾ ಹಿಂಬಾಲಿಸುವ ಸಮಾಜದ ಅನುಮಾನದ ನೋಟ – ಲೆಕ್ಕ ಇಟ್ಟಿರುವ ಒಟ್ಟು ಜನಸಂಖ್ಯೆಯ ಶೇಕಡ ೪ ರಷ್ಟು ಇರುವ ಸ್ವದೇಶೀಯರ ಸದ್ಯದ ಪರಿಸ್ಥಿತಿ ಇದು. ನ್ಯಾಯಕ್ಕಾಗಿ ದನಿ ಎತ್ತುವ ಜನರಿದ್ದರೂ ಅದು ಸಮುದ್ರದಲ್ಲಿ ಕಳೆದುಹೋಗುವ ಒಂದು ಮಳೆ ಹನಿ.

ಆಸ್ಟ್ರೇಲಿಯನ್ ಸ್ವದೇಶಿಯರಿಗೆ (Indigenous) ೧೯೬೨ ಮಾರ್ಚ್ ತಿಂಗಳಲ್ಲಿ ಚುನಾವಣೆಗಳಲ್ಲಿ ತಮ್ಮ ಮತವನ್ನು ಚಲಾಯಿಸುವ ಹಕ್ಕು ಬಂದಿತು ಎಂದರೆ ಅದುವರೆಗೂ ನಡೆದ ಹೋರಾಟ ನಿಮಗೆ ಅರ್ಥವಾಗಬಹುದು. ೧೯೯೦ ರ ದಶಕದಿಂದ ಈಚೆಗೆ ರಾಜಕೀಯ ಪರಿಸ್ಥಿತಿಯಲ್ಲಿ ಸುಧಾರಣೆಗಳು ಬಂದಿವೆ. ೨೦೦೮ ರಲ್ಲಿ ಆಗಿನ ಪ್ರಧಾನ ಮಂತ್ರಿ ಕೆವಿನ್ ರಡ್ ಸ್ವದೇಶೀಯರಿಗೆ sorry ಎಂದು ಹೇಳಿದರು. ಆದರೂ ನಿಜ ಜೀವನದಲ್ಲಿ ಈಗಲೂ Aboriginal ಜನರು ಎಂದರೆ ಅನಾಗರೀಕರು, ಭಾಷೆಯಿಲ್ಲದವರು, ಕುಡುಕರು, ಸರ್ಕಾರ ಕೊಡುವ Dole (welfare benefits) ಹಣಕ್ಕೆ ಬಾಯಿ ಬಿಡುವವರು, ವಿದ್ಯೆಯಿಲ್ಲ, ಕೆಲಸ ಮಾಡದ ಸೋಮಾರಿಗಳು ಎಂದೆಲ್ಲಾ ಹೇಳುತ್ತಾರೆ. ಮೂರು ಶತಮಾನಗಳ ಕಾಲ ಅವರಲ್ಲಿ ತುಂಬಿದ ಅಧೈರ್ಯ, ಕೀಳರಿಮೆ, ಭಯ, ತಮ್ಮತನವನ್ನು ಬಿಟ್ಟು ಬೇರೆಯವರ ನಿರೀಕ್ಷೆಯಂತೆ ಇರಬೇಕಾದ ಅನಿವಾರ್ಯಗಳನ್ನ ಓದಿದರೆ ಇನ್ನೆಷ್ಟು ಶತಮಾನಗಳು ಕಳೆದರೂ ಪರಿಸ್ಥಿತಿ ಸರಿಹೋಗುವುದಿಲ್ಲ ಎನ್ನಿಸುತ್ತದೆ.

ಜನವರಿ ೨೬ ಒಂದು ಕಾಲಕ್ಕೆ ಫೌಂಡೇಶನ್ ಡೇ, ಆನಿವರ್ಸರಿ ಡೇ, Mourning Day, Survival Day, Invasion Day ಎಂಬಂತೆ ಬೇರೆ ಬೇರೆ ಹೆಸರುಗಳಿದ್ದರೂ ಸುಮಾರು ೧೯೩೫ರ ಹೊತ್ತಿಗೆ ಆಸ್ಟ್ರೇಲಿಯಾ ಡೇ ಎಂಬುದು ಸ್ಥಿರವಾಯಿತು. ದೇಶದ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ೧೯೯೪ ನೇ ವರ್ಷ ಜನವರಿ ೨೬ರಂದು ಸರ್ಕಾರಿ ರಜಾ ದಿನ ಎಂದು ಅಂಗೀಕರಿಸಿದವು. ಅಲ್ಲಿಂದ ಆ ದಿನವನ್ನು ಬಹಳ ಸಡಗರದಿಂದ ಆಚರಿಸಿದರು. ನಾನು ಕಂಡ ಹಾಗೆ ಆಸ್ಟ್ರೇಲಿಯಾ ದೇಶದ ಯೂನಿಯನ್ ಜಾಕ್ ಬಾವುಟವನ್ನು ಹಿಡಿದುಕೊಂಡು, ಇದು ನಮ್ಮ ದೇಶ, ನಾವು ಇಲ್ಲಿನ ವಾಸಿಗಳು ಎಂದು ಬೀದಿಗಳಲ್ಲಿ, ಬೀಚ್ ಗಳಲ್ಲಿ, ವ್ಯಾಪಾರ ಸ್ಥಳಗಳಲ್ಲಿ ಸಾದರಪಡಿಸುತ್ತಾರೆ. ನೇರವಾಗಿ, ಪರೋಕ್ಷವಾಗಿ ಸ್ವದೇಶೀಯರಿಗೆ ಇದು ನಿಮ್ಮ ನೆಲವಲ್ಲ ಎಂದು ಸಾರುತ್ತಾರೆ.

ಮೊದಮೊದಲು ಅಂತಹ ಆಚರಣೆಗಳಿಗೆ ಸ್ವದೇಶಿ ಜನರಿಂದ ತೀವ್ರ ಪ್ರತಿರೋಧ ಬಂದಿತ್ತು. Aboriginal ಮತ್ತು Torres Straight Islanders ಬಾವುಟಗಳನ್ನು ರಾಷ್ಟ್ರ ಬಾವುಟಗಳೆಂದು ಈಗ ಅಂಗೀಕರಿಸಲಾಗಿದೆ, ಆದರೆ ಅವಕ್ಕೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ. ಹೆಚ್ಚು ಬಿಳಿಜನರು ಆ ಬಾವುಟಗಳನ್ನು ತಿರಸ್ಕರಿಸುತ್ತಾರೆ ಇಲ್ಲವೇ ಮುಖ ದಪ್ಪ ಮಾಡಿಕೊಂಡು ‘ಸಹಿಸಿ’ಕೊಳ್ಳುತ್ತಾರೆ.

Babakiueria ಎಂಬ ಈ ಕಿರುಚಿತ್ರವನ್ನು ವಿಶ್ವವಿದ್ಯಾಲಯಗಳಲ್ಲಿ ಪಠ್ಯವಸ್ತುವನ್ನಾಗಿ ಉಪಯೋಗಿಸುತ್ತಾರೆ.  Aboriginal ಜನರ ಸ್ಥಾನದಲ್ಲಿ ಬಿಳಿಜನರನ್ನು (white fella) ಹಾಕಿ, ಪಾತ್ರ ಅದಲುಬದಲು ಮಾಡಿದರೆ ಏನಾಗುತ್ತದೆ ಎಂದು ಮಾಡಿರುವ ವಿಡಂಬನಾತ್ಮಕ ಕಿರುಚಿತ್ರ ಇದು. ಇಲ್ಲಿ ಅದರ ಸಣ್ಣ ತುಣುಕನ್ನ ಮಾತ್ರ ಬಳಸಲಾಗಿದೆ.

ಕ್ರಮೇಣ ನಗರಗಳಲ್ಲಿ ಸ್ವದೇಶೀಯರು (Indigenous), ಅವರ ಬೆಂಬಲಿಗರು ಶಾಂತಿಯಿಂದ ತಮ್ಮದೇ ಆದ ಬೇರೆ ಪೆರೇಡ್ ನಡೆಸುತ್ತಾರೆ. “ನಾವು ನೀವು ಇಬ್ಬರೂ ಕೂಡಿ ಶಾಂತಿಯಿಂದ ಬದುಕೋಣ, ನಮ್ಮನ್ನು ಹೀನಾಯಿಸಿ ನೋಡುವುದನ್ನು ಬಿಡಿ, ಗೌರವದಿಂದ ಇಬ್ಬರೂ ಸಹಬಾಳ್ವೆ ನಡೆಸೋಣ” ಎನ್ನುವ ಮಾತುಗಳು ಬರುಬರುತ್ತಾ ಹೆಚ್ಚಾಗಿ ಕೇಳುತ್ತಿವೆ. ಅವರನ್ನು ಬೆಂಬಲಿಸುವ ಇತರೇ ದೇಶಗಳ ಜನರ ಸಂಖ್ಯೆ ಹೆಚ್ಚುತ್ತಿದೆ. ಬ್ರಿಸ್ಬನ್ ನಗರದಲ್ಲಿ ೨೬ರಂದು ನಡೆಯುವ Settlers Day/Survival Day ಪೆರೇಡ್ ನಲ್ಲಿ ಭಾರತೀಯ ಮುಖಗಳು ಹೆಚ್ಚುತ್ತಿವೆ. ಪರಸ್ಪರರನ್ನು ಒಪ್ಪಿಕೊಂಡು, ಇಬ್ಬರ ಸಂಸ್ಕೃತಿಯನ್ನೂ ಬಿಂಬಿಸುವ ಜನಜೀವನದ ನಿರೀಕ್ಷೆ ಮತ್ತಷ್ಟು ಗರಿಕೆದರುತ್ತದೆ.

ನಾನು ಭಾರತೀಯಳು; ಒಂದಷ್ಟು ವರ್ಷ ಆಸ್ಟ್ರೇಲಿಯಾದಲ್ಲಿ ಇದ್ದು ಜೀವನ ಮಾಡಿದವಳು. ಸಂಸ್ಕೃತಿಗಳ ಮಿಲನ, ಜನಸೌಹಾರ್ದತೆ, ಶಾಂತಿ-ಸಾಮರಸ್ಯದಿಂದ ಪರಸ್ಪರ ಗೌರವ ತೋರುವ ಆಸ್ಟ್ರೇಲಿಯಾ ಸಮಾಜವನ್ನು ಮತ್ತು ಭಾರತೀಯತೆಯನ್ನು ಎದುರು ನೋಡುವವಳು. ಆ ಎರಡೂ ರಾಷ್ಟ್ರಗಳಲ್ಲಿ ಜನವರಿ ೨೬ ಎಂಬ ಸಾಮಾನ್ಯ ದಿನಾಂಕವು ವಿಶೇಷ ದಿನವಾಗಿ ಪರಿವರ್ತನೆಯಾಗಲು ಕಾರಣವಾದ ಇಂಗ್ಲೆಂಡ್ ದೇಶದಲ್ಲಿ ಕೂತು ನಾನು ಇದನ್ನು ಬರೆಯುತ್ತಿರುವುದರ ಬಗ್ಗೆ ನನಗೆ ಎಡಬಿಡದ ಅಚ್ಚರಿ!!

ವಿನತೆ ಶರ್ಮ

ಹನಿಗವನಗಳ ಹೆಜ್ಜೆ ಹಿಡಿದು… ಕೇಶವ ಕುಲಕರ್ಣಿ ಬರಹ

(ನವೆಂಬರ್ ನಾಕರಂದು ನಡೆದ `ಕನ್ನಡ ಬಳಗ, ಯು.ಕೆ` ಕಾರ್ಯಕ್ರಮದ `ಹನಿವನ ಗೋಷ್ಠಿ`ಯಲ್ಲಿ ಸ್ವಲ್ಪ ಬದಲಾವಣೆಗಳೊಂದಿಗೆ ಶ್ರೀ ಡುಂ ಡಿರಾಜರ ಸಮ್ಮುಖದಲ್ಲಿ ಭಾಷಣ ಮಾಡಿದ್ದು)

ಹನಿಗವನಗಳು ಪುಟ್ಟ ಪುಟ್ಟ ಸಾಲುಗಳ ಚಿಕ್ಕ ಚಿಕ್ಕ ಪದ್ಯಗಳು. ಹಾಗೆಂದು ಈ ಲಘುಗವನಗಳನ್ನು ಲಘುವಾಗಿ ಪರಿಗಣಿಸಬೇಕಾಗಿಲ್ಲ.

ಕೆಲವೇ ಕೆಲವು ಸಾಲುಗಳಲ್ಲಿ ತಿಳಿ ಹಾಸ್ಯವನ್ನೋ, ಒಂದು ಚಿತ್ರವನ್ನೋ, ಒಂದು ಗೊಂದಲವನ್ನೋ, ಆತಂಕವನ್ನೋ, ದ್ವಂದ್ವವನ್ನೋ, ಚಟಾಕೆಯನ್ನೋ, ಶಬ್ದದ ಮಾಂತ್ರಿಕತೆಯನ್ನೋ, ವಿಸ್ಮಯವನ್ನೋ, ಅನಿರೀಕ್ಷಿತ ಪ್ರಾಸವನ್ನೋ, ಶ್ಲೇಷ (ಪನ್)ಯನ್ನೋ ಮೂಡಿಸುವ ಹನಿಕವಿತೆಗಳು ಕನ್ನಡ ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರವೇ.

ಮುಕ್ತಕ, ಬಿಡಿಗವನ, ಹನಿಗವನ, ಹನಿಕವಿತೆ, ಚುಟುಕು ಎಂದೆಲ್ಲ ಹೆಸರಿನಿಂದ ಕರೆಯಲ್ಪಡುವ ಈ ಸಾಹಿತ್ಯ ಪ್ರಕಾರ ಇತ್ತೀಚೆ ಹುಟ್ಟಿಕೊಂಡಿದ್ದಲ್ಲ.

ಬೇರೆ ಭಾಷೆಗಳಲ್ಲಿ ಹನಿಗವನಗಳು:

ಜಗತ್ತಿನ ಪ್ರತಿ ಭಾಷೆಯಲ್ಲೂ ಹನಿಗವನಗಳು ಇರಲೇಬೇಕು. ಎರಡರಿಂದ ಆರು ಸಾಲುಗಳವರೆಗೆ ಪುಟ್ಟ ಮಕ್ಕಳಿಗೆ ಹಾಡಲು ಹನಿಗವನಗಳು ಇರದ ಭಾಷೆ ಇರಲು ಸಾಧ್ಯವೆ?.

ಸಂಸ್ಕೃತ ಸುಭಾಷಿತಗಳು ಅಥವಾ ದೇವರ ಸ್ತುತಿಗಳು ವ್ಯಾಕರನ ಬದ್ಧವಾಗಿ ಸಿಗುವ ಜಗತ್ತಿನ ಮೊಟ್ಟಮೊದಲ ಹನಿಕವಿತೆಗಳಿರಬಹುದು ಎಂದು ನನ್ನ ಊಹೆ..

`यस्यास्ति वित्तं स नर:कुलीन: स पण्डित: स श्रुतवान् गुणज्ञाम्प;: |
स एव वक्ता स च दर्शनीय: सर्वे गुणा: काञ्चनमाश्रयन्ते ||`

(ಯಾರಲ್ಲಿ ವಿತ್ತವಿದೆಯೋ ಅವನೇ ನರಕುಲೀನ, ಅವನೇ ಪಂಡಿತ, ಅವನೇ ಶ್ರುತವಾನ್ ಗುಣಜ್ಞ
ಅವನೇ ವಾಗ್ಮಿ, ಅವನೇ ಸುಂದರ – ಎಲ್ಲ ಗುಣಗಳೂ ಕಾಂಚನವನ್ನು ಆಶ್ರಯಿಸುತ್ತವೆ)

ಎನ್ನುವ ಈ ಸುಭಾಷಿತ ಎರಡೇ ಸಾಲುಗಳಲ್ಲಿ ಏನೆಲ್ಲ ಹೇಳಿಬಿಡುತ್ತದಲ್ಲವೇ?

ಮೂರೇ ಸಾಲುಗಳಲ್ಲಿ ಒಂದು ಪ್ರಕೃತಿಯ ಚಿತ್ರವನ್ನೂ ಮನಸಿನ ಭಾವವನ್ನೂ ಏಕಕಾಲದಲ್ಲಿ ಚಿತ್ರಿಸುವ ಜಪಾನಿನ `ಹೈಕು`ಗಳಿಗೆ ಮಾರುಹೋಗದ ಹೈಕಳಿಲ್ಲ. ೫-೭-೫ ಉಚ್ಚಾರಗಳ (syllables) ಮೂರು ಸಾಲುಗಳು ಬಹುಷಃ ಪ್ರಪಂಚದ ಅತಿ ಚಿಕ್ಕ ಹನಿಗವನಗಳಿರಬಹುದು. ಜಪಾನಿನ ಉಚ್ಚಾರದ ಛಂದಸ್ಸನ್ನು ಇಂಗ್ಲೀಷಿಗಾಗಲಿ ಕನ್ನಡಕ್ಕಾಗಲಿ ತರುವುದು ತುಂಬ ಕಷ್ಟ.

古池1
蛙飛び込む
水の音

(ಫುರು ಇಕೆ ಯಾ
ಕವಝು ತೊಬಿಕೊಮು
ಮಿಝು ನೊ ಒತೊ

ಹಾ! ಹಳೆ ಕೆರೆ
ಕಪ್ಪೆಯು ಜಿಗಿಯಲು
ನೀರಿನ ಧ್ವನಿ)

`ಇಂಗ್ಲೀಷಿನ ಲಿಮಿರಿಕ್ಕುಗಳು ಐದು ಸಾಲಿನ ಪುಟ್ಟ ಕವನಗಳು. ಹೆಚ್ಚು ಮಟ್ಟಿಗೆ ತಮಾಷೆಯನ್ನೇ ಬಿಂಬಿಸುವ ಕವನಗಳು.

“Hickory, dickory, dock,
The mouse ran up the clock.
The clock struck one,
And down he run,
Hickory, dickory, dock.”

ಎನ್ನುವ ನರ್ಸರಿ ಪದ್ಯ ಕೇಳದವರುಂಟೆ?

ಹಿಂದಿಯಲ್ಲಿ ಉರ್ದುವಿನಲ್ಲಿ ಹನಿಕವನ ಸಾಹಿತ್ಯವೆಂದರೆ ಎರಡು ಸಾಲುಗಳಲ್ಲಿ ಹಾಸ್ಯವನ್ನು, ದುಃಖವನ್ನು, ನೆನಪನ್ನು, ವಿರಹವನ್ನು, ಪ್ರೇಮವನ್ನು ಹೇಳುವ ಶಾಯರಿಗಳು.

होश वालों को ख़बर क्या बेख़ुदी क्या चीज़ है
इश्क़ कीजे फिर समझिये ज़िन्दगी क्या चीज़ है

(ಶ್ಯಾಣ್ಯಾ ಮಂದಿಗೇನ್ ಗೊತ್ತು ಹುಚ್ಚತನ ಅಂದ್ರೇನಂತ
ಪ್ರೀತ್ಯಾಗ್ ಬೀಳ್ರಿ ಮತ್ತ ತಿಳ್ಕೋರ್ರಿ ಜೀವನ ಅಂದ್ರೇನಂತ)

ಎನ್ನುವ ವಿರುದ್ಧ ಅರ್ಥಗಳ ಸಾಲುಗಳಿಗೆ ಮಾರುಹೋಗದವರಾರು?

ಹೀಗೆ ನೋಡುತ್ತ ಹೋದರೆ ಪ್ರತಿ ಭಾಷೆಯಲ್ಲೂ ಹನಿಗವನಗಳು ಸಿಗುತ್ತವೆ.

ಕನ್ನಡದಲ್ಲಿ ಹನಿಗವನದ ಇತಿಹಾಸ:

ಕನ್ನಡದಲ್ಲಿ ಹನಿಗವನಗಳ ಉಗಮ ಮಕ್ಕಳನ್ನು ಆಡಿಸುವ ಮಾತೆಯರ ಮಾತುಗಳಿಂದಲೇ ಎನ್ನುವುದರಲ್ಲಿ ನನಗಂತೂ ಸಂಶಯವಿಲ್ಲ.

`ಆನಿ ಬಂತೊಂದಾನಿ
ಇದ್ಯಾ ಊರ ಆನಿ
ವಿಜಾಪುರದ ಆನಿ
ಇಲ್ಲಿಗ್ಯಾಕ ಬಂತು
ಹಾದಿ ತಪ್ಪಿ ಬಂತು
ಹಾದಿಗೊಂದು ದುಡ್ಡು
ಬೀದಿಗೊಂದು ದುಡ್ಡು`

ಎಂದು ಮಗುವನ್ನು ತೊಡೆಯ ನಡುವೆ ಮಲಗಿಸಿ, ಗಲ್ಲ ತಟ್ಟುತ್ತ, ಚಿಟಿಕೆ ಹೊಡೆಯುತ್ತ ನಗಿಸುವ ಇಂಥ ಪುಟ್ಟ ಹಾಡುಗಳು ಕನ್ನಡದ ಹನಿಗವನದ ಉದಾಹರಣೆಗಳು.

ಬಹುಷಃ ಕನ್ನಡದ ಪ್ರಕಟಿತ ಮೊಟ್ಟಮೊದಲ ಹನಿಗವನ ಸಾಹಿತ್ಯ ಸಿಗುವುದು ಶಿಲಾಶಾಸನಗಳಲ್ಲಿ.

1`ಸಾಧುಂಗೆ ಸಾಧುಂ ಮಾಧುರ್ಯಂಗೆ ಮಾಧುರ್ಯಂ
ಬಾಧಿಪ್ಪ ಕಲಿಗೆ ಕಲಿಯುವ ವಿಪರೀತನ್
ಮಾಧವನೀತನ್ ಪೆರನಲ್ಲ`

ಎನ್ನುವ ಚಲುಕ್ಯರ (ಇದನ್ನು ಚಾಲುಕ್ಯರು ಎಂದು ಬರೆಯುವುದು ವಾಡಿಕೆ) ಕಾಲದ ಶಾಸನ ಇದಕ್ಕೊಂದು ನಿದರ್ಶನ.

ಕನ್ನಡದ ಕಂದ ಪದ್ಯಗಳು ಕೂಡ ಹನಿಕವಿತೆಗಳೇ. ಕನ್ನಡದಲ್ಲಿ ನಮಗೆ ದೊರೆತಿರುವ ಮೊಟ್ಟಮೊದಲ ಕೃತಿ `ಕವಿರಾಜಮಾರ್ಗ`ದಲ್ಲೇ ಕಂದಪದ್ಯಗಳಿಲ್ಲವೇ?

ಕನ್ನಡ ಜನಪದ ತ್ರಿಪದಿಗಳು ಕನ್ನಡ ಸಾಹಿತ್ಯದ ಸುಂದರ ಹನಿಗವಿತೆಗಳ ತವರು:

“ಕೂಸು ಇದ್ದ ಮನಿಗೆ ಬೀಸಣಿಗೆ ಯಾತಕ
ಕೂಸು ಕಂದವ್ವ ಒಳ ಹೊರಗ ಆಡಿದರ
ಬೀಸಣಿಗಿ ಗಾಳಿ ಸುಳಿದಾವ”

ಸರ್ವಜ್ಞನ ವಚನಗಳು ಇದೇ ತ್ರಿಪದಿಯ ಸಾಲುಗಳಲ್ಲಿ ಬರೆದ ತತ್ತ್ವಶಾಸ್ತ್ರದ ಕಿರು ಪದ್ಯಗಳು:

`ಬೆಚ್ಚನ ಮನೆಯಿರಲು ವೆಚ್ಚಕ್ಕೆ ಹೊನ್ನಿರಲು
ಇಚ್ಛೆಯನರಿವ ಸತಿಯಿರಲು। ಸ್ವರ್ಗಕ್ಕೆ
ಕಿಚ್ಚು ಹಚ್ಚೆಂದ ಸರ್ವಜ್ಞ॥`
೧೨ನೇ ಶತಮಾನದ ಆಚೆ ಈಚೆ ಬರೆದ ಶರಣರ ವಚನಗಳು ಕೂಡ ಹನಿಕವಿತೆಗಳೇ:

`ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ1
ಮುನಿಯಬೇಡ ಅನ್ಯರಿಗೆ ಅಸಹ್ಯಪಡಬೇಡ
ತನ್ನ ಬಣ್ಣಿಸಬೇಡ ಇದಿರ ಹಳಿಯೇಲು ಬೇಡ
ಇದೇ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ದಿ
ಇದೇ ನಮ್ಮ ಕೂಡಲಸಂಗಮ ದೇವರ ನೊಲೆಸುವ ಪರಿ`

ಎಂದು ಬಸವಣ್ಣನವರು ಕೆಲವೇ ಕೆಲವು ಸಾಲುಗಳಲ್ಲಿ ಅಗಾಧ ಕಾವ್ಯವನ್ನೇ ತುಂಬುತ್ತಾರೆ.

ಮುಂದೆ ವೈಷ್ಣವ ಪಂಥದ ದಾಸರು ಕೀರ್ತನಗಳನ್ನು ಹಾಡಿದರೂ ಉಗಾಭೋಗಗಳೆಂಬ ಸಣ್ಣ ಹಾಡುಗಳನ್ನು ಬರೆದರು:

`ಇಂದಿನ ದಿನವೇ ಶುಭದಿನವು
ಇಂದಿನ ವಾರ ಶುಭವಾರ
ಇಂದಿನ ತಾರೆ ಶುಭತಾರೆ
ಇಂದಿನ ಯೋಗ ಶುಭಯೋಗ
ಇಂದಿನ ಕರಣ ಶುಭ ಕರಣ
ಇಂದು ಪುರಂದರ ವಿಟ್ಠಲ ರಾಯನ
ಸಂದರ್ಶನ ಫಲವೆಮಗಾಯಿತು!`

ಇಂಥ ಧೀರ್ಘ ಇತಿಹಾಸವಿರುವ ಹನಿಗವನ ಸಾಹಿತ್ಯವನ್ನು ವಿಮರ್ಶಕರು ಲಘುವಾಗಿ ಕಾಣುತ್ತಾರೆ. ಹನಿಗವನಗಳು ಅರ್ಥವನ್ನು ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸುವುದಿಲ್ಲ ಎನ್ನುವ ಕಾರಣಕ್ಕೆ ವಿಮರ್ಶಕರಿಗೆ ಹೆಚ್ಚಿಗೆ ಹೇಳಲು ಏನೂ ಇರುವುದಿಲ್ಲ ಅನ್ನುವುದೂ ಒಂದು ಕಾರಣವಿರಬಹುದು.

ಹೊಸಕನ್ನಡದಲ್ಲಿ ಹನಿಗವನಗಳು:

ಹೊಸ ಕನ್ನಡದಲ್ಲಿ ಮೊಟ್ಟಮೊದಲು ಚುಟುಕು ಸಾಹಿತ್ಯದ ಪುಸ್ತಕವನ್ನ್ನು ಹೊರತಂದವರು ಜಿ ಪಿ ರಾಜರತ್ನಂ ಇರಬೇಕು. ೧೯೪೦ ರಲ್ಲಿ ಪ್ರಕಟಗೊಂಡ `ನೂರು ಪುಟಾಣಿ; ಬಹುಷಃ ಕನ್ನಡ ಪ್ರಪ್ರಥಮ ಹೊಸಗನ್ನಡದ ಚುಟುಕು ಸಂಕಲನ.

ಆದರೂ ಹನಿಗವನ ಸಾಹಿತ್ಯಕ್ಕೆ ಮೊಟ್ಟಮೊದಲು `ಚುಟುಕು` ಎನ್ನುವ ಶಬ್ದವನ್ನು ಕೊಟ್ಟ ಇತಿಹಾಸ ನನಗೆ ಸಿಗಲಿಲ್ಲ!

ಮುಕ್ತಕಗಳು ಎಂದು ಕರೆದಿರುವ ಡಿ ವಿ ಜಿವಯರ `ಮಂಕುತಿಮ್ಮನ ಕಗ್ಗ` ಮತ್ತು `ಮರಳುಮುನಿಯನ ಕಗ್ಗ` ಸಂಕಲನಗಳು ಬಿಡಿ-ಚಿಕ್ಕ ಪದ್ಯಗಳ ಸಂಕಲನಗಳೇ! ಇಲ್ಲಿನ ಆದಿಪ್ರಾಸವನ್ನು ಗಮನಿಸಬೇಕು.

`ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು

1
ಡಿ ವಿ ಜಿ

ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ
ಎಲ್ಲರೊಳಗೊಂದಾಗು – ಮಂಕುತಿಮ್ಮ`

ಕನ್ನಡ ಪ್ರಸಿದ್ಧ ಕವಿಗಳೆಲ್ಲ ಹನಿಗವನ ಬರೆದವರೇ. `ರಾಮಾಯಣ ದರ್ಶನ` ಮಹಾಕಾವ್ಯ ಬರೆದಿರುವ ಕುವೆಂಪು ಅವರ `ಮಂತ್ರಾಕ್ಷತೆ` ಕವನ ಸಂಕಲನದಲ್ಲಿ ೧೧೭ ಬಿಡಿಗವನಗಳಿವೆಯಂತೆ!

ಹತ್ತು ಸಾವಿರಕ್ಕೂ ಹೆಚ್ಚು ಚೌಪದಿ ಬರೆದಿರುವ ದಿನಕರ ದೇಸಾಯಿಗೆ ಚುಟುಕ ಬ್ರಹ್ಮನೆಂದೇ ಕರೆದಿದ್ದಾರೆ. ಮುಖ್ಯವಾಗಿ ರಾಜಕೀಯವನ್ನು ವಿಡಂಬಣೆ ಮಾಡುತ್ತ ದಿನ ನಿತ್ಯದ ಆಗುಹೋಗುಗಳಿಗೆ ನಾಕುಸಾಲಿನ ಪುಟ್ಟಪದ್ಯಗಳಲ್ಲಿ ಸಾಹಿತ್ಯ ಬರೆದರು:

`ಕಲ್ಲಿಗೂ ದೃಢವಾಗಿ ಮನುಜ ಸಂಕಲ್ಪ |
ಹೂವಾಗಿ ಅರಳಿದರೆ ಗೊಮ್ಮಟನ ಶಿಲ್ಪ |
ಉಕ್ಕಿಗೂ ಬಿರುಸಾಗಿ ಮಾನವನ ಹೃದಯ |
ಬೆಣ್ಣೆಯೊಲು ಕರಗಿದರೆ ಗೌತಮನ ಉದಯ |`

ಪ್ರಜಾವಾಣಿಯ ಸಂಪಾದಕರಾಗಿದ್ದ ವೈ ಎನ್ ಕೆಯವರದು ಇಂಗ್ಲೀಷ್ ಮತ್ತು ಕನ್ನಡ ಎರಡು ಭಾಷೆಗಳ ಜೊತೆ ಆಡುತ್ತ, ಪದಗಳನ್ನು ಮುರಿಯುತ್ತ, ಶ್ಲೇಷೆ (ಪನ್)ಗಳನ್ನು ಹುಡುಕುತ್ತ ಚುಟುಕುಗಳನ್ನು ನಿರ್ಮಿಸಿದರು:

`ಕವಿತೆ,
ನೀನೇಕೆ ಪದಗಳಲಿ
ಅವಿತೆ?`

ಎಂದು ಕವಿತೆಗೇ ಪ್ರಶ್ನೆ ಹಾಕಿದರು.

ಲಂಕೇಶ ಪತ್ರಿಕೆಯ ಜಾಗಗಳನ್ನು ತುಂಬಲು, ಲಂಕೇಶರು `ನೀಲು` ಎನ್ನುವ ಹೆಸರಿನಲ್ಲಿ ಸಣ್ಣ ಪದ್ಯಗಳನ್ನು ಬರೆದರು. ಅವುಗಳನ್ನು `ನೀಲುಗಳು` ಎಂದೇ ಕರೆದು ನೀಲು-ಸಂಕಲನಗಳನ್ನು ಹೊರತಂದಿದ್ದಾರೆ. ಲಂಕೇಶರ ಹನಿಗವನಗಳಲ್ಲಿ ಪ್ರಾಸ, ಛಂದಸ್ಸುಗಳಿಲ್ಲ. ವಾಕ್ಯವನ್ನು ತುಂಡರಿಸಿ ಬರೆದಂತಿರುವ ಸಾಲುಗಳು ಕೆಲವೊಮ್ಮೆ ಅಗಾಧ ಅರ್ಥವನ್ನು ಹೊಮ್ಮಿಸುತ್ತವೆ.

ಕನ್ನಡದ ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳಲ್ಲಿ ಚುಟುಕುಗಳಿಗೆ ವಿಶಿಷ್ಟ ಜಾಗವಿದೆ. ಪ್ರತಿವಾರ ಹತ್ತಾರು ಚುಟುಕುಗಳು ಪ್ರತಿ ಪತ್ರಿಕೆಯನ್ನು ತುಂಬುತ್ತವೆ.

1ಡುಂಡಿರಾಜರು ಹನುಗವನಗಳ ರಾಜನೆಂದೇ ಹೇಳಬಹುದು. ಅವರು ಬರೆದ ಕೆಲವು ಹನಿಗವಿತೆಗಳು ಕನ್ನಡಿಗರ ಬಾಯಲ್ಲಿ ಬಾಯಿಪಾಠ. ಅವರು `ಹನಿಗಾರಿಕೆ` ಎಂದು ಹನಿಗವನಗಳಿಗೆ ಹೊಸ ಶಬ್ದೋತ್ಪತ್ತಿ ಮಾಡಿದ್ದಾರೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಸಂಸಾರಗಳು ಇವರ ಮೆಚ್ಚಿನ ವಸ್ತುಗಳು.

`ನಾವಿಬ್ಬರು
ನಮಗಿಬ್ಬರು
ಮೂರಾಗದಂತೆ ರಬ್ಬರು`

ಎಂದು ಮೂರೇ ಸಾಲುಗಳಲ್ಲಿ ಧಸಕ್ಕೆಂದು ಬರುವ ಅನಿರೀಕ್ಷಿತ ಪ್ರಾಸದಿಂದ ನಮ್ಮನ್ನು ನಗಿಸಿಬಿಡುತ್ತಾರೆ.

ಹನಿಗವನಗಳ ವರ್ತಮಾನ/ಭವಿಷ್ಯ:

ಈಗಿನ ಕಾಲದಲ್ಲಿ ದೊಡ್ಡ ದೊಡ್ಡ ಕವನಗಳನ್ನು ಓದಲು ಯಾರಿಗೂ ಪುರುಸೊತ್ತಿಲ್ಲ. ಕ್ಲಿಷ್ಟದ ಕವಿತಗಳನ್ನು ಎರಡೆರಡು ಸಲ ಓದುವ ತಾಳ್ಮೆ ಇರುವವರು ಕಮ್ಮಿ. ಹನಿಗವನಗಳು ಈಗಿನ ಸ್ಮಾರ್ಟ್ ಫೋನಿನ ಕಾಲದಲ್ಲಿ, ಸೋಶಿಯಲ್ ಮೀಡಿಯಾದ ಜಗತ್ತಿನಲ್ಲಿ ತುಂಬ ಚೆನ್ನಾಗಿ ಒಗ್ಗುತ್ತವೆ. ಅವಕ್ಕೆ ಎಸ್ಸೆಮ್ಮೆಸ್ ಕವನಗಳು, ಟ್ವಿಟರ್ ಚುಟುಕುಗಳು, ಫೇಸ್-ಬುಕ್ ಕವನಗಳು, ಇನ್ಸ್ಟಾಗ್ರಾಮ್ ಕವಿತೆಗಳು, ಟಂಬ್ಲರ್ ಸಾಲುಗಳು ಎಂದೆಲ್ಲ ಕರೆದರೂ ತಪ್ಪಿಲ್ಲ.

ಇಷ್ಟೆಲ್ಲ ಬರೆದ ಮೇಲೆ ನನ್ನದೊಂದು ಹನಿಗವನದಿಂದ ಈ ಲೇಖನವನ್ನು ಮುಗಿಸದಿದ್ದರೆ ಆದೀತೆ?

ಭಾರತಕ್ಕೂ ಇಂಗ್ಲಂಡಿಗೂ
ಏನು ಅಂತರ?
ಭಾರತದಾಗ ನೀರ
ಇಂಗ್ಲಂಡದಾಗ ಪೇಪರ

ಗ್ರಂಥಋಣ:
ಸುಬ್ರಮ್ರಣ್ಯ ನಾರಾಯಣ ಹೆಗಡೆ. `ಕನ್ನಡದಲ್ಲಿ ಚುಟುಕು ಸಾಹಿತ್ಯ`: ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೨೦೦೯