(ನವೆಂಬರ್ ನಾಕರಂದು ನಡೆದ `ಕನ್ನಡ ಬಳಗ, ಯು.ಕೆ` ಕಾರ್ಯಕ್ರಮದ `ಹನಿವನ ಗೋಷ್ಠಿ`ಯಲ್ಲಿ ಸ್ವಲ್ಪ ಬದಲಾವಣೆಗಳೊಂದಿಗೆ ಶ್ರೀ ಡುಂ ಡಿರಾಜರ ಸಮ್ಮುಖದಲ್ಲಿ ಭಾಷಣ ಮಾಡಿದ್ದು)
ಹನಿಗವನಗಳು ಪುಟ್ಟ ಪುಟ್ಟ ಸಾಲುಗಳ ಚಿಕ್ಕ ಚಿಕ್ಕ ಪದ್ಯಗಳು. ಹಾಗೆಂದು ಈ ಲಘುಗವನಗಳನ್ನು ಲಘುವಾಗಿ ಪರಿಗಣಿಸಬೇಕಾಗಿಲ್ಲ.
ಕೆಲವೇ ಕೆಲವು ಸಾಲುಗಳಲ್ಲಿ ತಿಳಿ ಹಾಸ್ಯವನ್ನೋ, ಒಂದು ಚಿತ್ರವನ್ನೋ, ಒಂದು ಗೊಂದಲವನ್ನೋ, ಆತಂಕವನ್ನೋ, ದ್ವಂದ್ವವನ್ನೋ, ಚಟಾಕೆಯನ್ನೋ, ಶಬ್ದದ ಮಾಂತ್ರಿಕತೆಯನ್ನೋ, ವಿಸ್ಮಯವನ್ನೋ, ಅನಿರೀಕ್ಷಿತ ಪ್ರಾಸವನ್ನೋ, ಶ್ಲೇಷ (ಪನ್)ಯನ್ನೋ ಮೂಡಿಸುವ ಹನಿಕವಿತೆಗಳು ಕನ್ನಡ ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರವೇ.
ಮುಕ್ತಕ, ಬಿಡಿಗವನ, ಹನಿಗವನ, ಹನಿಕವಿತೆ, ಚುಟುಕು ಎಂದೆಲ್ಲ ಹೆಸರಿನಿಂದ ಕರೆಯಲ್ಪಡುವ ಈ ಸಾಹಿತ್ಯ ಪ್ರಕಾರ ಇತ್ತೀಚೆ ಹುಟ್ಟಿಕೊಂಡಿದ್ದಲ್ಲ.
ಬೇರೆ ಭಾಷೆಗಳಲ್ಲಿ ಹನಿಗವನಗಳು:
ಜಗತ್ತಿನ ಪ್ರತಿ ಭಾಷೆಯಲ್ಲೂ ಹನಿಗವನಗಳು ಇರಲೇಬೇಕು. ಎರಡರಿಂದ ಆರು ಸಾಲುಗಳವರೆಗೆ ಪುಟ್ಟ ಮಕ್ಕಳಿಗೆ ಹಾಡಲು ಹನಿಗವನಗಳು ಇರದ ಭಾಷೆ ಇರಲು ಸಾಧ್ಯವೆ?.
ಸಂಸ್ಕೃತ ಸುಭಾಷಿತಗಳು ಅಥವಾ ದೇವರ ಸ್ತುತಿಗಳು ವ್ಯಾಕರನ ಬದ್ಧವಾಗಿ ಸಿಗುವ ಜಗತ್ತಿನ ಮೊಟ್ಟಮೊದಲ ಹನಿಕವಿತೆಗಳಿರಬಹುದು ಎಂದು ನನ್ನ ಊಹೆ..
`यस्यास्ति वित्तं स नर:कुलीन: स पण्डित: स श्रुतवान् गुणज्ञाम्प;: |
स एव वक्ता स च दर्शनीय: सर्वे गुणा: काञ्चनमाश्रयन्ते ||`
(ಯಾರಲ್ಲಿ ವಿತ್ತವಿದೆಯೋ ಅವನೇ ನರಕುಲೀನ, ಅವನೇ ಪಂಡಿತ, ಅವನೇ ಶ್ರುತವಾನ್ ಗುಣಜ್ಞ
ಅವನೇ ವಾಗ್ಮಿ, ಅವನೇ ಸುಂದರ – ಎಲ್ಲ ಗುಣಗಳೂ ಕಾಂಚನವನ್ನು ಆಶ್ರಯಿಸುತ್ತವೆ)
ಎನ್ನುವ ಈ ಸುಭಾಷಿತ ಎರಡೇ ಸಾಲುಗಳಲ್ಲಿ ಏನೆಲ್ಲ ಹೇಳಿಬಿಡುತ್ತದಲ್ಲವೇ?
ಮೂರೇ ಸಾಲುಗಳಲ್ಲಿ ಒಂದು ಪ್ರಕೃತಿಯ ಚಿತ್ರವನ್ನೂ ಮನಸಿನ ಭಾವವನ್ನೂ ಏಕಕಾಲದಲ್ಲಿ ಚಿತ್ರಿಸುವ ಜಪಾನಿನ `ಹೈಕು`ಗಳಿಗೆ ಮಾರುಹೋಗದ ಹೈಕಳಿಲ್ಲ. ೫-೭-೫ ಉಚ್ಚಾರಗಳ (syllables) ಮೂರು ಸಾಲುಗಳು ಬಹುಷಃ ಪ್ರಪಂಚದ ಅತಿ ಚಿಕ್ಕ ಹನಿಗವನಗಳಿರಬಹುದು. ಜಪಾನಿನ ಉಚ್ಚಾರದ ಛಂದಸ್ಸನ್ನು ಇಂಗ್ಲೀಷಿಗಾಗಲಿ ಕನ್ನಡಕ್ಕಾಗಲಿ ತರುವುದು ತುಂಬ ಕಷ್ಟ.
古池
蛙飛び込む
水の音
(ಫುರು ಇಕೆ ಯಾ
ಕವಝು ತೊಬಿಕೊಮು
ಮಿಝು ನೊ ಒತೊ
ಹಾ! ಹಳೆ ಕೆರೆ
ಕಪ್ಪೆಯು ಜಿಗಿಯಲು
ನೀರಿನ ಧ್ವನಿ)
`ಇಂಗ್ಲೀಷಿನ ಲಿಮಿರಿಕ್ಕುಗಳು ಐದು ಸಾಲಿನ ಪುಟ್ಟ ಕವನಗಳು. ಹೆಚ್ಚು ಮಟ್ಟಿಗೆ ತಮಾಷೆಯನ್ನೇ ಬಿಂಬಿಸುವ ಕವನಗಳು.
“Hickory, dickory, dock,
The mouse ran up the clock.
The clock struck one,
And down he run,
Hickory, dickory, dock.”
ಎನ್ನುವ ನರ್ಸರಿ ಪದ್ಯ ಕೇಳದವರುಂಟೆ?
ಹಿಂದಿಯಲ್ಲಿ ಉರ್ದುವಿನಲ್ಲಿ ಹನಿಕವನ ಸಾಹಿತ್ಯವೆಂದರೆ ಎರಡು ಸಾಲುಗಳಲ್ಲಿ ಹಾಸ್ಯವನ್ನು, ದುಃಖವನ್ನು, ನೆನಪನ್ನು, ವಿರಹವನ್ನು, ಪ್ರೇಮವನ್ನು ಹೇಳುವ ಶಾಯರಿಗಳು.
होश वालों को ख़बर क्या बेख़ुदी क्या चीज़ है
इश्क़ कीजे फिर समझिये ज़िन्दगी क्या चीज़ है
(ಶ್ಯಾಣ್ಯಾ ಮಂದಿಗೇನ್ ಗೊತ್ತು ಹುಚ್ಚತನ ಅಂದ್ರೇನಂತ
ಪ್ರೀತ್ಯಾಗ್ ಬೀಳ್ರಿ ಮತ್ತ ತಿಳ್ಕೋರ್ರಿ ಜೀವನ ಅಂದ್ರೇನಂತ)
ಎನ್ನುವ ವಿರುದ್ಧ ಅರ್ಥಗಳ ಸಾಲುಗಳಿಗೆ ಮಾರುಹೋಗದವರಾರು?
ಹೀಗೆ ನೋಡುತ್ತ ಹೋದರೆ ಪ್ರತಿ ಭಾಷೆಯಲ್ಲೂ ಹನಿಗವನಗಳು ಸಿಗುತ್ತವೆ.
ಕನ್ನಡದಲ್ಲಿ ಹನಿಗವನದ ಇತಿಹಾಸ:
ಕನ್ನಡದಲ್ಲಿ ಹನಿಗವನಗಳ ಉಗಮ ಮಕ್ಕಳನ್ನು ಆಡಿಸುವ ಮಾತೆಯರ ಮಾತುಗಳಿಂದಲೇ ಎನ್ನುವುದರಲ್ಲಿ ನನಗಂತೂ ಸಂಶಯವಿಲ್ಲ.
`ಆನಿ ಬಂತೊಂದಾನಿ
ಇದ್ಯಾ ಊರ ಆನಿ
ವಿಜಾಪುರದ ಆನಿ
ಇಲ್ಲಿಗ್ಯಾಕ ಬಂತು
ಹಾದಿ ತಪ್ಪಿ ಬಂತು
ಹಾದಿಗೊಂದು ದುಡ್ಡು
ಬೀದಿಗೊಂದು ದುಡ್ಡು`
ಎಂದು ಮಗುವನ್ನು ತೊಡೆಯ ನಡುವೆ ಮಲಗಿಸಿ, ಗಲ್ಲ ತಟ್ಟುತ್ತ, ಚಿಟಿಕೆ ಹೊಡೆಯುತ್ತ ನಗಿಸುವ ಇಂಥ ಪುಟ್ಟ ಹಾಡುಗಳು ಕನ್ನಡದ ಹನಿಗವನದ ಉದಾಹರಣೆಗಳು.
ಬಹುಷಃ ಕನ್ನಡದ ಪ್ರಕಟಿತ ಮೊಟ್ಟಮೊದಲ ಹನಿಗವನ ಸಾಹಿತ್ಯ ಸಿಗುವುದು ಶಿಲಾಶಾಸನಗಳಲ್ಲಿ.
`ಸಾಧುಂಗೆ ಸಾಧುಂ ಮಾಧುರ್ಯಂಗೆ ಮಾಧುರ್ಯಂ
ಬಾಧಿಪ್ಪ ಕಲಿಗೆ ಕಲಿಯುವ ವಿಪರೀತನ್
ಮಾಧವನೀತನ್ ಪೆರನಲ್ಲ`
ಎನ್ನುವ ಚಲುಕ್ಯರ (ಇದನ್ನು ಚಾಲುಕ್ಯರು ಎಂದು ಬರೆಯುವುದು ವಾಡಿಕೆ) ಕಾಲದ ಶಾಸನ ಇದಕ್ಕೊಂದು ನಿದರ್ಶನ.
ಕನ್ನಡದ ಕಂದ ಪದ್ಯಗಳು ಕೂಡ ಹನಿಕವಿತೆಗಳೇ. ಕನ್ನಡದಲ್ಲಿ ನಮಗೆ ದೊರೆತಿರುವ ಮೊಟ್ಟಮೊದಲ ಕೃತಿ `ಕವಿರಾಜಮಾರ್ಗ`ದಲ್ಲೇ ಕಂದಪದ್ಯಗಳಿಲ್ಲವೇ?
ಕನ್ನಡ ಜನಪದ ತ್ರಿಪದಿಗಳು ಕನ್ನಡ ಸಾಹಿತ್ಯದ ಸುಂದರ ಹನಿಗವಿತೆಗಳ ತವರು:
“ಕೂಸು ಇದ್ದ ಮನಿಗೆ ಬೀಸಣಿಗೆ ಯಾತಕ
ಕೂಸು ಕಂದವ್ವ ಒಳ ಹೊರಗ ಆಡಿದರ
ಬೀಸಣಿಗಿ ಗಾಳಿ ಸುಳಿದಾವ”
ಸರ್ವಜ್ಞನ ವಚನಗಳು ಇದೇ ತ್ರಿಪದಿಯ ಸಾಲುಗಳಲ್ಲಿ ಬರೆದ ತತ್ತ್ವಶಾಸ್ತ್ರದ ಕಿರು ಪದ್ಯಗಳು:
`ಬೆಚ್ಚನ ಮನೆಯಿರಲು ವೆಚ್ಚಕ್ಕೆ ಹೊನ್ನಿರಲು
ಇಚ್ಛೆಯನರಿವ ಸತಿಯಿರಲು। ಸ್ವರ್ಗಕ್ಕೆ
ಕಿಚ್ಚು ಹಚ್ಚೆಂದ ಸರ್ವಜ್ಞ॥`
೧೨ನೇ ಶತಮಾನದ ಆಚೆ ಈಚೆ ಬರೆದ ಶರಣರ ವಚನಗಳು ಕೂಡ ಹನಿಕವಿತೆಗಳೇ:
`ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ
ಮುನಿಯಬೇಡ ಅನ್ಯರಿಗೆ ಅಸಹ್ಯಪಡಬೇಡ
ತನ್ನ ಬಣ್ಣಿಸಬೇಡ ಇದಿರ ಹಳಿಯೇಲು ಬೇಡ
ಇದೇ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ದಿ
ಇದೇ ನಮ್ಮ ಕೂಡಲಸಂಗಮ ದೇವರ ನೊಲೆಸುವ ಪರಿ`
ಎಂದು ಬಸವಣ್ಣನವರು ಕೆಲವೇ ಕೆಲವು ಸಾಲುಗಳಲ್ಲಿ ಅಗಾಧ ಕಾವ್ಯವನ್ನೇ ತುಂಬುತ್ತಾರೆ.
ಮುಂದೆ ವೈಷ್ಣವ ಪಂಥದ ದಾಸರು ಕೀರ್ತನಗಳನ್ನು ಹಾಡಿದರೂ ಉಗಾಭೋಗಗಳೆಂಬ ಸಣ್ಣ ಹಾಡುಗಳನ್ನು ಬರೆದರು:
`ಇಂದಿನ ದಿನವೇ ಶುಭದಿನವು
ಇಂದಿನ ವಾರ ಶುಭವಾರ
ಇಂದಿನ ತಾರೆ ಶುಭತಾರೆ
ಇಂದಿನ ಯೋಗ ಶುಭಯೋಗ
ಇಂದಿನ ಕರಣ ಶುಭ ಕರಣ
ಇಂದು ಪುರಂದರ ವಿಟ್ಠಲ ರಾಯನ
ಸಂದರ್ಶನ ಫಲವೆಮಗಾಯಿತು!`
ಇಂಥ ಧೀರ್ಘ ಇತಿಹಾಸವಿರುವ ಹನಿಗವನ ಸಾಹಿತ್ಯವನ್ನು ವಿಮರ್ಶಕರು ಲಘುವಾಗಿ ಕಾಣುತ್ತಾರೆ. ಹನಿಗವನಗಳು ಅರ್ಥವನ್ನು ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸುವುದಿಲ್ಲ ಎನ್ನುವ ಕಾರಣಕ್ಕೆ ವಿಮರ್ಶಕರಿಗೆ ಹೆಚ್ಚಿಗೆ ಹೇಳಲು ಏನೂ ಇರುವುದಿಲ್ಲ ಅನ್ನುವುದೂ ಒಂದು ಕಾರಣವಿರಬಹುದು.
ಹೊಸಕನ್ನಡದಲ್ಲಿ ಹನಿಗವನಗಳು:
ಹೊಸ ಕನ್ನಡದಲ್ಲಿ ಮೊಟ್ಟಮೊದಲು ಚುಟುಕು ಸಾಹಿತ್ಯದ ಪುಸ್ತಕವನ್ನ್ನು ಹೊರತಂದವರು ಜಿ ಪಿ ರಾಜರತ್ನಂ ಇರಬೇಕು. ೧೯೪೦ ರಲ್ಲಿ ಪ್ರಕಟಗೊಂಡ `ನೂರು ಪುಟಾಣಿ; ಬಹುಷಃ ಕನ್ನಡ ಪ್ರಪ್ರಥಮ ಹೊಸಗನ್ನಡದ ಚುಟುಕು ಸಂಕಲನ.
ಆದರೂ ಹನಿಗವನ ಸಾಹಿತ್ಯಕ್ಕೆ ಮೊಟ್ಟಮೊದಲು `ಚುಟುಕು` ಎನ್ನುವ ಶಬ್ದವನ್ನು ಕೊಟ್ಟ ಇತಿಹಾಸ ನನಗೆ ಸಿಗಲಿಲ್ಲ!
ಮುಕ್ತಕಗಳು ಎಂದು ಕರೆದಿರುವ ಡಿ ವಿ ಜಿವಯರ `ಮಂಕುತಿಮ್ಮನ ಕಗ್ಗ` ಮತ್ತು `ಮರಳುಮುನಿಯನ ಕಗ್ಗ` ಸಂಕಲನಗಳು ಬಿಡಿ-ಚಿಕ್ಕ ಪದ್ಯಗಳ ಸಂಕಲನಗಳೇ! ಇಲ್ಲಿನ ಆದಿಪ್ರಾಸವನ್ನು ಗಮನಿಸಬೇಕು.
`ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು

ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ
ಎಲ್ಲರೊಳಗೊಂದಾಗು – ಮಂಕುತಿಮ್ಮ`
ಕನ್ನಡ ಪ್ರಸಿದ್ಧ ಕವಿಗಳೆಲ್ಲ ಹನಿಗವನ ಬರೆದವರೇ. `ರಾಮಾಯಣ ದರ್ಶನ` ಮಹಾಕಾವ್ಯ ಬರೆದಿರುವ ಕುವೆಂಪು ಅವರ `ಮಂತ್ರಾಕ್ಷತೆ` ಕವನ ಸಂಕಲನದಲ್ಲಿ ೧೧೭ ಬಿಡಿಗವನಗಳಿವೆಯಂತೆ!
ಹತ್ತು ಸಾವಿರಕ್ಕೂ ಹೆಚ್ಚು ಚೌಪದಿ ಬರೆದಿರುವ ದಿನಕರ ದೇಸಾಯಿಗೆ ಚುಟುಕ ಬ್ರಹ್ಮನೆಂದೇ ಕರೆದಿದ್ದಾರೆ. ಮುಖ್ಯವಾಗಿ ರಾಜಕೀಯವನ್ನು ವಿಡಂಬಣೆ ಮಾಡುತ್ತ ದಿನ ನಿತ್ಯದ ಆಗುಹೋಗುಗಳಿಗೆ ನಾಕುಸಾಲಿನ ಪುಟ್ಟಪದ್ಯಗಳಲ್ಲಿ ಸಾಹಿತ್ಯ ಬರೆದರು:
`ಕಲ್ಲಿಗೂ ದೃಢವಾಗಿ ಮನುಜ ಸಂಕಲ್ಪ |
ಹೂವಾಗಿ ಅರಳಿದರೆ ಗೊಮ್ಮಟನ ಶಿಲ್ಪ |
ಉಕ್ಕಿಗೂ ಬಿರುಸಾಗಿ ಮಾನವನ ಹೃದಯ |
ಬೆಣ್ಣೆಯೊಲು ಕರಗಿದರೆ ಗೌತಮನ ಉದಯ |`
ಪ್ರಜಾವಾಣಿಯ ಸಂಪಾದಕರಾಗಿದ್ದ ವೈ ಎನ್ ಕೆಯವರದು ಇಂಗ್ಲೀಷ್ ಮತ್ತು ಕನ್ನಡ ಎರಡು ಭಾಷೆಗಳ ಜೊತೆ ಆಡುತ್ತ, ಪದಗಳನ್ನು ಮುರಿಯುತ್ತ, ಶ್ಲೇಷೆ (ಪನ್)ಗಳನ್ನು ಹುಡುಕುತ್ತ ಚುಟುಕುಗಳನ್ನು ನಿರ್ಮಿಸಿದರು:
`ಕವಿತೆ,
ನೀನೇಕೆ ಪದಗಳಲಿ
ಅವಿತೆ?`
ಎಂದು ಕವಿತೆಗೇ ಪ್ರಶ್ನೆ ಹಾಕಿದರು.
ಲಂಕೇಶ ಪತ್ರಿಕೆಯ ಜಾಗಗಳನ್ನು ತುಂಬಲು, ಲಂಕೇಶರು `ನೀಲು` ಎನ್ನುವ ಹೆಸರಿನಲ್ಲಿ ಸಣ್ಣ ಪದ್ಯಗಳನ್ನು ಬರೆದರು. ಅವುಗಳನ್ನು `ನೀಲುಗಳು` ಎಂದೇ ಕರೆದು ನೀಲು-ಸಂಕಲನಗಳನ್ನು ಹೊರತಂದಿದ್ದಾರೆ. ಲಂಕೇಶರ ಹನಿಗವನಗಳಲ್ಲಿ ಪ್ರಾಸ, ಛಂದಸ್ಸುಗಳಿಲ್ಲ. ವಾಕ್ಯವನ್ನು ತುಂಡರಿಸಿ ಬರೆದಂತಿರುವ ಸಾಲುಗಳು ಕೆಲವೊಮ್ಮೆ ಅಗಾಧ ಅರ್ಥವನ್ನು ಹೊಮ್ಮಿಸುತ್ತವೆ.
ಕನ್ನಡದ ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳಲ್ಲಿ ಚುಟುಕುಗಳಿಗೆ ವಿಶಿಷ್ಟ ಜಾಗವಿದೆ. ಪ್ರತಿವಾರ ಹತ್ತಾರು ಚುಟುಕುಗಳು ಪ್ರತಿ ಪತ್ರಿಕೆಯನ್ನು ತುಂಬುತ್ತವೆ.
ಡುಂಡಿರಾಜರು ಹನುಗವನಗಳ ರಾಜನೆಂದೇ ಹೇಳಬಹುದು. ಅವರು ಬರೆದ ಕೆಲವು ಹನಿಗವಿತೆಗಳು ಕನ್ನಡಿಗರ ಬಾಯಲ್ಲಿ ಬಾಯಿಪಾಠ. ಅವರು `ಹನಿಗಾರಿಕೆ` ಎಂದು ಹನಿಗವನಗಳಿಗೆ ಹೊಸ ಶಬ್ದೋತ್ಪತ್ತಿ ಮಾಡಿದ್ದಾರೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಸಂಸಾರಗಳು ಇವರ ಮೆಚ್ಚಿನ ವಸ್ತುಗಳು.
`ನಾವಿಬ್ಬರು
ನಮಗಿಬ್ಬರು
ಮೂರಾಗದಂತೆ ರಬ್ಬರು`
ಎಂದು ಮೂರೇ ಸಾಲುಗಳಲ್ಲಿ ಧಸಕ್ಕೆಂದು ಬರುವ ಅನಿರೀಕ್ಷಿತ ಪ್ರಾಸದಿಂದ ನಮ್ಮನ್ನು ನಗಿಸಿಬಿಡುತ್ತಾರೆ.
ಹನಿಗವನಗಳ ವರ್ತಮಾನ/ಭವಿಷ್ಯ:
ಈಗಿನ ಕಾಲದಲ್ಲಿ ದೊಡ್ಡ ದೊಡ್ಡ ಕವನಗಳನ್ನು ಓದಲು ಯಾರಿಗೂ ಪುರುಸೊತ್ತಿಲ್ಲ. ಕ್ಲಿಷ್ಟದ ಕವಿತಗಳನ್ನು ಎರಡೆರಡು ಸಲ ಓದುವ ತಾಳ್ಮೆ ಇರುವವರು ಕಮ್ಮಿ. ಹನಿಗವನಗಳು ಈಗಿನ ಸ್ಮಾರ್ಟ್ ಫೋನಿನ ಕಾಲದಲ್ಲಿ, ಸೋಶಿಯಲ್ ಮೀಡಿಯಾದ ಜಗತ್ತಿನಲ್ಲಿ ತುಂಬ ಚೆನ್ನಾಗಿ ಒಗ್ಗುತ್ತವೆ. ಅವಕ್ಕೆ ಎಸ್ಸೆಮ್ಮೆಸ್ ಕವನಗಳು, ಟ್ವಿಟರ್ ಚುಟುಕುಗಳು, ಫೇಸ್-ಬುಕ್ ಕವನಗಳು, ಇನ್ಸ್ಟಾಗ್ರಾಮ್ ಕವಿತೆಗಳು, ಟಂಬ್ಲರ್ ಸಾಲುಗಳು ಎಂದೆಲ್ಲ ಕರೆದರೂ ತಪ್ಪಿಲ್ಲ.
ಇಷ್ಟೆಲ್ಲ ಬರೆದ ಮೇಲೆ ನನ್ನದೊಂದು ಹನಿಗವನದಿಂದ ಈ ಲೇಖನವನ್ನು ಮುಗಿಸದಿದ್ದರೆ ಆದೀತೆ?
ಭಾರತಕ್ಕೂ ಇಂಗ್ಲಂಡಿಗೂ
ಏನು ಅಂತರ?
ಭಾರತದಾಗ ನೀರ
ಇಂಗ್ಲಂಡದಾಗ ಪೇಪರ
ಗ್ರಂಥಋಣ:
ಸುಬ್ರಮ್ರಣ್ಯ ನಾರಾಯಣ ಹೆಗಡೆ. `ಕನ್ನಡದಲ್ಲಿ ಚುಟುಕು ಸಾಹಿತ್ಯ`: ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೨೦೦೯
ಲೇಖನ ಓದಿದ ಮತ್ತು ಪ್ರತಿಕ್ರಿಯೆ ಮಾಡಿದ ಎಲ್ಲರಿಗೂ ವಂದನೆಗಳು – ಕೇಶವ
LikeLike
ಹನಿಗವನಗಳ ಹೆಜ್ಜೆ ಹಿಡಿದು,,,, ಎನ್ನುವ ಚ೦ದದ ಶೀರ್ಷಿಕೆಯನ್ನು ಹೊತ್ತ ಈ ವಾರದ ತಮ್ಮ ಬರಹದಲ್ಲಿ, ಕೇಶವರವರು ಹನಿಗವನಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನಮ್ಮ ಮು೦ದಿಟ್ಟಿದ್ದಾರೆ. ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೆ, ಬೇರೆ ಭಾಷೆಯ ಹನಿಗವನಗಳ ಪರಿಚಯವನ್ನು ಸಹ ಮಾಡಿಕೊಟ್ಟಿದ್ದಾರೆ. ವಚನ ಸಾಹಿತ್ಯ ಮತ್ತು ದಾಸರ ಸಾಹಿತ್ಯವನ್ನು ನಾವು ಹೇಗೆ ಬೇಕಾದರೂ ಪರಿಗಣಿಸಬಹುದು, ಚಿಕ್ಕದಿದ್ದರೆ ಹನಿಹವನವೆ೦ದು ಕರೆದು, ೮-೧೦ ಸಾಲುಗಳಿದ್ದರೆ ಕವನವೆ೦ದು ಕರೆದು, ಪುಟಗಟ್ಟಲೆಯ ಬರಹವಾದರೆ ಕಾವ್ಯವೆ೦ದೆನ್ನಬಹುದಲ್ಲವೆ?
ಬಹಳ ಸ೦ಶೋಧನೆ ನೆಡೆಸಿ ಬರೆದ ಈ ಉತ್ತಮ ಲೇಖನವನ್ನು ನಮ್ಮ ಮು೦ದಿಟ್ಟ ಕೇಶವ ಕುಲಕರ್ಣಿಯವರಿಗೆ ಧನ್ಯವಾದಗಳು
LikeLike
ಹನಿಗವನಕ್ಕೆ ಶತಮಾನಗಳ ಇತಿಹಾಸವಿದ್ದು ಅದರ ಅಸ್ತಿತ್ವವನ್ನು ಸಾಧ್ಯತೆಗಳನ್ನು ಅಷ್ಟಾಗಿ ಗಮನಿಸದ ನಮಗೆ ಇತ್ತೀಚಿನ ದಶಕಗಳಲ್ಲಿ ಅದರ ಸೊಗಸು, ಸ್ವರೂಪ ಹಾಗೂ ಸಾಮರ್ಥ್ಯಗಳನ್ನು ಪರಿಚಯಿಸಿ ಜನಪ್ರಿಯಗೊಳಿಸಿದ ದಿನಕರ ದೇಸಾಯಿ, ಲಂಕೇಶ್, ಡುಂಡಿರಾಜ್, ಬಿ ಆರ್ ಎಲ್ ಹಾಗೂ ಇತರ ಸಾಹಿತಿಗಳಿಗೆ ನಾವು ಕೃತಜ್ಞರಾಗಿದ್ದೇವೆ.
ಅನಿವಾಸಿ ಬಳಗದ ಈ ಹಿನಿಗವನದ ಗೀಳು ನಮ್ಮನ್ನೆಲ್ಲಾ ಆವಾರಿಸಿರುವ ಸಂದರ್ಭದಲ್ಲಿ ಕೇಶವ್ ಅವರು ಸಮಯೋಚಿತವಾಗಿ ಹನಿಗವನದ ಬಗ್ಗೆ ಸಂಕ್ಷಿಪ್ತವಾದ ಬರವಣಿಗೆಯಲ್ಲಿ ಅದರ ಹಿನ್ನೆಲೆಯನ್ನು ಒದಗಿಸಿರುವುದು ಸೂಕ್ತವಾಗಿದೆ. ಇದೆ ಒಂದು ಗುಂಗಿನಲ್ಲಿ ಬರೆದ ನನ್ನ ಹನಿಗವನ ಹೀಗಿದೆ;
ಡುಂಡಿರಾಜ್
ಆಡುತ್ತಾರೆ ಪದಗಳ ಜೊತೆ ಆಟ
ಚಿತ್ತದಲ್ಲಿ ನಿರಂತರ ಹುಡುಕಾಟ
ಮೇಲ್ನೋಟಕ್ಕೆ ಹುಡುಗಾಟ
ಅಡಗಿದೆ ಗಂಭೀರ ಒಳನೋಟ
LikeLiked by 2 people
ಹನಿಗವನಗಳ ಹೆಜ್ಜೆಯೊಂದಿಗೆ ಹೆಜ್ಜೆ ಹಾಕಿ ಬಲು ದೂರ ಸಾಗಿ ಆ ಸಾಲು ಗಳಲ್ಲಿ ಹುದುಗಿರುವ ಜೀವನಸತ್ಯ ಹೇಳುವ ಸುಂದರ ಬರಹ.ಕನ್ನಡ ಹನಿಗವನಗಳ ತವರು ಮಾತೆಯರ ಮಾತುಗಳಲ್ಲಿ ಎಂಬುದು ತಾಯಂದಿರಿಗೆ ಒಂದು ಗರಿ ಇಟ್ಟಂತೆ.ನಿಜ .ಮೂರೇ ಮೂರು ಸಾಲುಗಳಲ್ಲಿ ಪ್ರಪಂಚ ವನ್ನೇ ಹಿಡಿದಿಟ್ಟುಕೊಳ್ಳುವ ತ್ರಿಪದಿ ಗಳವು.
“ಆಡುತಾಡುತ ಬಂದು ಜೋಡೆರಡು ಮನಿ ಕಟ್ಟಿ ಮಾಡ್ಯಾನೆ/ಳ ಗೊಂಬೀ ಮದವಿಯ
ಮದವೀಮಂಟಪದಾಗ ಬೇಡುತ್ತಾನೆ/ಳ
ಬ್ಯಾಳಿ ಬೆಲ್ಲವ ”
“ಮನೀ ಕಟ್ಟಿ ನೋಡು ಮದುವೆ ಮಾಡಿ ನೋಡು”ಎಂಬ ಗಾದೆಯ ಮಾತು.ಆ ಕಠಿಣ ಕೆಲಸಾನ ನನ್ನ ಕಂದ ಆಡಾಡ್ತ ಮಾಡ್ತು ಅಂತಾಳೆ ತಾಯಿ.ಎಂಥ ಕಲ್ಪನೆ ಈ ಮೂರು ಸಾಲುಗಳಲ್ಲಿ!!! ಈ ಹನಿಗವನ ಗಳಂದ್ರೆ “ಗಾಗರ ಮೆ ಸಾಗರ ಕಾ ಪಾನಿ” ಎಂಬಂತೆ ಅನ್ನೋದ್ರಲ್ಲಿ ಸಂಶಯವಿಲ್ಲ.ಜೀವನದ ವಿವಿಧ ರೂಪಗಳು ಕೆಲವೇ ಕೆಲವು ಸಾಲುಗಳಲ್ಲಿ!!.ಅವುಗಳ ಇತಿಹಾಸ, ಹುಟ್ಟು, ಬೆಳವಣಿಗೆ, ನಡೆದು ಬಂದ ದಾರಿಯ ಮಾಹಿತಿ ನೀಡುವ ಚೆಂದದ ಲೇಖನ.ಅಭಿನಂದನೆಗಳು ಜೊತೆಗೇ ಧನ್ಯವಾದಗಳು ಕೇಶವ ಕುಲಕರ್ಣಿಯವರೇ.
ಸರೋಜಿನಿ ಪಡಸಲಗಿ
LikeLiked by 1 person
ಆಹಾ, ಲೇಖನ ಸ್ವಾರಸ್ಯವಾಗಿದೆ, ಮಾಹಿತಿಪೂರ್ಣವಾಗಿದೆ; ಲವಲವಿಕೆ ತುಂಬಿದೆ.
ವಿನತೆ ಶರ್ಮ
LikeLike
ಸಾಹಿತ್ಯದಲ್ಲಿ ಚುಟುಕು ಕವನಗಳ ಪರಂಪರೆಯ ಇತಿಹಾಸ ನಿಜಕ್ಕೂ ಆಸಕ್ತಿಪೂರ್ಣವಾಗಿದೆ. ಸಂಸ್ಕೃತದ ಸುಭಾಷಿತವಾಗಲಿ, ಸರ್ವಜ್ನನ ವಚನವಾಗಲಿ, ದಾಸರ ದೇವರನಾಮಗಳಾಗಲಿ, ಜೀವನದ ಸಾರವನ್ನು ಸುಂದರವಾದ ಪದಗಳಲ್ಲಿ ಹೆಣೆದು ಅದನ್ನೂ ಅರ್ಥಪೂರ್ಣವಾಗಿ ಹಲವೇ ಸಾಲುಗಳಲ್ಲಿ, ಪ್ರಾಸಬದ್ಧವಾಗಿ ವ್ಯಾಕರಣಬದ್ಧವಾಗಿ ಹೇಳುವ, ವಿವರಿಸುವ ಕಲೆ ಎಲ್ಲರಿಗೂ ಇರುವುದಿಲ್ಲ. ದುಂಡಿರಾಜರ ಹನಿಗವನಗಳನ್ನು ನನ್ನ ಶಾಲೆ-ಕಾಲೇಜಿನ ದಿನಗಳಿಂದಲೂ ಓದಿದ್ದು ನೆನಪಿದೆ. ಓದುವಾಗ ಮುಖದಲ್ಲಿ ಮಂದಹಾಸವನ್ನು ಮೂಡಿಸುವ ಅವರ ಹನಿಗವನಗಳು, ಪ್ರಸಕ್ತ ರಾಜಕೀಯವಾಗಲಿ, ಸಾಮಾಜಿಕ ಸಮಸ್ಯೆಗಳಾಗಲೀ, ಎಲ್ಲವನ್ನೂ ಹಲವೇ ಸಾಲುಗಳಲ್ಲಿ ಹಿಡಿದಿಟ್ಟು ಓದುಗರನ್ನು ನಗೆಗಡಲಲ್ಲಿ ಮುಳುಗಿಸುವ ದುಂಡಿರಾಜರ ಸಾಮರ್ಥ್ಯಕ್ಕೆ ಭಲೇ ಎನ್ನಲೇ ಬೇಕು! ಹನಿಗವನದ ಇತಿಹಾಸವನ್ನು ನಮಗೆಲ್ಲಾ ತಿಳಿಸುವ ಉತ್ತಮ ಪ್ರಯತ್ನ ಕೇಶವ್ ಅವರದು. ಇಂತಹ ಲೇಖನಗಳು ಮತ್ತಷ್ಟು ಬರಲಿ. ಧನ್ಯವಾದಗಳು ಕೇಶವ್.
ಉಮಾ ವೆಂಕಟೇಶ್
LikeLiked by 1 person
ಕೇಶವ್ ಅವರಿಗೆ
ನಮಸ್ಕಾರ. ನನಗೆ ಅಪರಿಚಿತವಾದ ಹನೆಗವನಗಳ ವಿಷಯದ ಬಗ್ಗೆ ಆಳವಾಗಿ ಸಂಶೋಧಿಸಿ ನೀವು ಬರೆದಿರುವ ಲೇಖನ ಬಲು ಚೆನ್ನಾಗಿದೆ.
ಅಭಿನಂದನೆಗಳು. ನೀಲು,ಚುಟುಕಗಳಲ್ಲಿ ಪಾರಂಗತರೆಂದು ಹೆಸರು ಘಳಿಸಿದ ನಿಮಗೆ ಈಗ ಹಳೆಗವನ ಪ್ರವೀಣರೆಂದು ಕರೆಯಲು ಅಭಿಮಾನವೆನಿಸುತ್ತಿದೆ.
ಅರವಿಂದ ಕುಲ್ಕರ್ಣಿ
LikeLike
Keshav, nice article and compilation !!!!
LikeLike
ಬಹಳಷ್ಟು ಸಂಶೋಧನೆ ಮಾಡಿ ಬರೆದಿರುವ ಕೇಶವ ಅವರ ಈ ಲೇಖನ ಓದುಗರಿಗೆ ಕನ್ನಡ ಹಾಗೂ ಇತರ ಭಾಷೆಗಳ ಹನಿಗವನಗಳ ಬಗ್ಗೆ ಪೂರ್ಣ ಪರಿಚಯ ಮಾಡುತ್ತದೆ. ಇದಕ್ಕಾಗಿ ಕೇಶವ ಅವರಿಗೆ ಅಭಿನಂದನೆಗಳು.
ತಮಗೆ ತಲುಪಿದ ಲೇಖನ ಇತ್ಯಾದಿಗಳನ್ನು ಸ್ವಲ್ಪವೂ ತಡ ಮಾಡದೆ ಅನಿವಾಸಿಯಲ್ಲಿ ಪ್ರಕಾಶಿಸುತ್ತಿರುವ ಡಾಕ್ಟರ್ ದಾಕ್ಷಾಯಣಿ ಅವರಿಗೆ ನನ್ನ ಹೃತ್ಪೂರ್ವಕ ವಂದನೆಗಳು.
LikeLike
ಚುಟುಕಗಳ ಬಗ್ಗೆ ಬಂದಿರುವ ಚುರುಕಾದ ಲೇಖನ!! ತುಂಬ ಚೆನ್ನಾಗಿದೆ.
ಈ ಬಗ್ಗೆ ಪುಸ್ತಕವೇ ಇರುವುದು ನನಗೆ ಅಚ್ಚರಿಯ ಸಂಗತಿ .
LikeLike
ಅದು ಪುಸ್ತಕವಲ್ಲ. ಪಿ.ಎಚ್.ಡಿ ಪ್ರಬಂಧ
LikeLike
ಹನಿಗವನಗಳ ಹೆಜ್ಜೆ ಹಿಡಿದು ಅದರ ಉದ್ದ, ಅಗಲ, ವಿಸ್ತಾರವನ್ನೆಲ್ಲ ಅಳೆದ ಸಂಕೀರ್ಣ ಲೇಖನ, ಕೇಶವ ಅವರೇ! ಅಭಿನಂದನೆಗಳು. ಇನ್ನೂ ಎಷ್ಟೋ ಬರೆಯಬಹುದು. ಚುಟುಕಾಗಿ ಇಲ್ಲಿಗೇ ಮುಗಿಸುವೆ! ಶ್ರೀವತ್ಸ ದೇಸಾಯಿ (ದಿನಕರರಿಗೆ ಸಂಬಂಧವಿಲ್ಲ)
LikeLike