ಬ್ರಿಟನ್ ಪಾರ್ಲಿಮೆಂಟ್ ನ ಇತಿಹಾಸ ಮತ್ತು ಕೆಲವು ಆಸಕ್ತಿದಾಯಕ ಸಂಗತಿಗಳು: ಲೇಖನ– ರಾಮಮೂರ್ತಿ

(ಎಷ್ಟೋ ಸಲ ನಮ್ಮ ನಾಡಿನ ಬಗ್ಗೆಯಾಗಲಿ ವಾಸಿಸುವ ಊರು ಅಥವಾ ದೇಶದ ಬಗೆಗಿನ ಸಂಗತಿಗಳೇ ನಮಗೆ ಗೊತ್ತಿರುವದಿಲ್ಲ – ಇನ್ನೊಬ್ಬರು ಎತ್ತಿ ತೋರಿಸುವ ತನಕ. ಬ್ರಿಟಿಶ್ ಪಾರ್ಲಿಮೆಂಟಿನಲ್ಲಿ ಪ್ರಜೆಗಳಿಗೆ Strangers galleryಯಲ್ಲಿ ಉಚಿತ ಪ್ರವೇಶವಿದೆ. ಅಲ್ಲಿಗೆ ಭೆಟ್ಟಿ ಕೊಟ್ಟು ಟೂರ್ ಮಾಡುವಾಗ ಸಂಗ್ರಹಿಸಿದ ಸ್ವಾರಸ್ಯಕರ  ಸಂಗತಿಗಳನ್ನು ಈ ಲೇಖನದಲ್ಲಿ ನಮ್ಮ ಹಿರಿಯ ಮಿತ್ರರಾದ ರಾಮಮೂರ್ತಿ ಹಂಚಿಕೊಂಡಿದ್ದಾರೆ. ಜೊತೆಗೆ ಓದುಗರಲ್ಲಿ ಹೊಸಬರಿದ್ದರೆ ಅವರಿಗಾಗಿ”ಪಾರ್ಲಿಮೆಂಟುಗಳ ತವರಿನ’ potted history ಸಹ ಕೊಟ್ಟಿದ್ದಾರೆ. ನಿಮ್ಮ ಅನಿಸಿಕೆಗಳಿಗೆ ಸ್ವಾಗತವಿದೆ. ಅವಶ್ಯ ಬರೆಯಿರಿ. -ಸಂ)

ಈ ದೇಶದ ಪಾರ್ಲಿಮೆಂಟ್ ನ  ಇತಿಹಾಸ ಮತ್ತು ಕೆಲವು ಆಸಕ್ತಿದಾಯಕ ಸಂಗತಿಗಳು

ನಾವೆಲ್ಲಾ ಬಹುಪಾಲು ಲಂಡನ್ ನಲ್ಲಿ ಇರುವ ಪಾರ್ಲಿಮೆಂಟ್ ನೋಡಿದ್ದೀವಿ ಮತ್ತು ಕೆಲವರು ಒಳಗೂ ಹೋಗಿ ಅದರ ಚರಿತ್ರೆ ಮತ್ತು ವಾಸ್ತುಶಿಲ್ಪವನ್ನು ನೋಡಿ ಆಶ್ಚರ್ಯ ಪಟ್ಟಿರಬಹುದು. ಅಂದರೆ ಬಹುಶಃ ಈ ಬರಹ ನಿಮಗಲ್ಲ. ಆದರೂ ಓದಿ ಪರವಾಗಿಲ್ಲ !

ಬ್ರಿಟಿಷ್ ಪಾರ್ಲಿಮೆಂಟ್ ಈ ದೇಶದ ಸರ್ವೋಚ್ಛ ಸಂಸ್ಥೆ. ಇಲ್ಲಿ  ಎರಡು ಭಾಗಗಳಿವೆ -ಹೌಸ್ ಆಫ್ ಲಾರ್ಡ್ಸ್ ಮತ್ತು ಹೌಸ್ ಆಫ್  ಕಾಮನ್ಸ್. ಇಂಡಿಯಾದಲ್ಲಿ ರಾಜ್ಯಸಭಾ ಮತ್ತು ಲೋಕ್ ಸಭಾ ಇದ್ದಹಾಗೆ. ಹೌಸ್ ಆಫ್ ಲಾರ್ಡ್ಸ್ ನಲ್ಲಿ ೭೯೯ ಮತ್ತು ಕಾಮನ್ಸ್ ನಲ್ಲಿ ೬೫೦ ಸದಸ್ಯರಿದಾರೆ. ಲಾರ್ಡ್ಸ್ನನ  ಸದಸ್ಯರು ಚುನಾವಣೆಯಿಂದ ಗೆದ್ದವರಲ್ಲ. ಚರ್ಚ್ ಆಫ್ ಇಂಗ್ಲೆಂಡ್ ನ ಬಿಷಪ್ ಗಳು ಮತ್ತು ತಲಾಂತರ  ಅಥವಾ ಅನುವಂಶಿಕ   (hereditary) ಹಕ್ಕಿನವರು. ಮಿಕ್ಕವರು ಪ್ರಧಾನ ಮಂತ್ರಿ ಗಳು ನೇಮಿಸದವರು. ಆದರೆ ಕಾಮನ್ಸ್ ನ ಸದಸ್ಯರು ಚುನಾವಣೆ ಯಲ್ಲಿ ಗೆದ್ದವರು.

Palace of Westminster

ಬ್ರಿಟನ್ನಿನ ಪಾರ್ಲಿಮೆಂಟಿನ ಸಂಕ್ಷಿಪ್ತ ಇತಿಹಾಸ

ಪಾರ್ಲಿಮೆಂಟ್  ಮೂಲ ೧೦೬೬ ಅಂದರೆ ತಪ್ಪೇನಿಲ್ಲ. ಆ ವರ್ಷದಲ್ಲಿ  ನಾರ್ಮಂಡಿಯ ವಿಲಿಯಮ್ಮ್ಸ್ ಈ ದೇಶದಲ್ಲಿ   ಬ್ಯಾಟಲ್ ಆಫ್ ಹೇಸ್ಟಿಂಗ್ಸ್  ಯುದ್ಧದ ನಂತರ ತನ್ನ ಆಡಳಿತವನ್ನು ಸ್ಥಾಪಿಸಿದ. ಹೊಸ ಕಾನೂನು ಜಾರಿಗೆ ಬರುವ ಮುಂದೆ ತಾನು ನೇಮಿಸಿದ ಸಲಹಾ ಸಮಿತಿ ಜೊತೆ ಚರ್ಚೆ್ ಮಾಡುತಿದ್ದ .  ಆದರೆ  ಸುಮಾರು ೨೦೦ ವರ್ಷಗಳ ಮೇಲೆ ಬಂದ ಕಿಂಗ್ ಜಾನ್ ತನಗೆ ಬೇಕಾದಹಾಗೆ ರಾಜ್ಯಭಾರ ಮಾಡುವ ರೀತಿಯಿಂದ ಅವನ  ಸಲಹಾ ಸಮಿತೆಗೆ  ತೀರಾ ಅಸಮಾಧಾನ ವಾಗಿ  ೧೨೧೫ ರಲ್ಲಿ ಮಾಗ್ನಾ ಕಾರ್ಟ(Magna Carta ) ಅನ್ನುವ ಕಾನೂನು ಜಾರಿಗೆ ತಂದರು. ಇದರ ಪ್ರಕಾರ ಕಿಂಗ್ ಜಾನ್ ಈ ಸಮಿತಿಗೆ ಒಪ್ಪಿಗೆ

Magna_Carta_(British_Library_Cotton_MS_Augustus_II_106)
ಮ್ಯಾಗ್ನಾ ಕಾರ್ಟಾ (ಬ್ರಿಟಿಶ್ ಲೈಬ್ರರಿಯಲ್ಲಿಯ ಪ್ರತಿ)

ಇಲ್ಲದೆ ಏನೂ ಮಾಡಲು ಅಧಿಕಾರ ಇರಲಿಲ್ಲ. ನೀವು ಈ ಒಪ್ಪಂದ ಪತ್ರವನ್ನು  ಸಾಲಿಸ್ಬರಿ ಮತ್ತು  ಲಿಂಕನ್  ಕ್ಯಥೀಡ್ರಲ್  (Salisbury and Lincoln Cathedral ) ನಲ್ಲಿ   ನೋಡಬಹುದು. ಇನ್ನೆರಡು ಪ್ರತಿಗಳು ಬ್ರಿಟಿಷ್ ಲೈಬ್ರರಿನಲ್ಲಿ  ಇವೆ. ಈ ಒಪ್ಪಂದ ಥೇಮ್ಸ್ ನದಿಯ ದಡಲ್ಲಿರುವ ರನ್ನಿಮೀಡ್ ಅನ್ನುವ ಸ್ಥಳ ದಲ್ಲಿ ನಡೆಯಿತು. (೧೫ ಜೂನ್ ೧೨೧೫)

ಹಿಂದಿನ ಕಾಲದಲ್ಲಿ, ರಾಜರು ಬಹಳ ಬಲಿಶಾಲಿಗಳಾಗಿದ್ದರು. ಅವರು ಹೇಳಿದ್ದೇ ವೇದವಾಕ್ಯ. ಆಗಾಗ್ಗೆ ಇವರು ದೇಶದ ಶ್ರೀಮಂತರು ಮತ್ತು ಪ್ರಭಾವಶಾಲಿ ಜನಗಳನ್ನೂ ಸೇರಿಸಿ ಚರ್ಚೆ ನಡೆಸುತ್ತಿದ್ದರು.  ಮುಖ್ಯವಾಗಿ ರಾಜರಿಗೆ ಇತರೆ ದೇಶದಮೇಲೆ ನಡೆಸುವ ಯುದ್ಧಕ್ಕೆ ಧನಸಹಾಯ ಬೇಕಿತ್ತು ಅಷ್ಟೆ. ಜನಗಳ ಕಲ್ಯಾಣ ಅಥವಾ ಯೋಗಕ್ಷೇಮ ಇವರ ಗಮನಕ್ಕೆ ಬರುತ್ತಿರಲಿಲ್ಲ ಇಂತಹ ಸಭೆಗಳಿಗೆ Parliament ಅಂತ  ನಾಮಕರಣ ಮಾಡಿದರು.

೧೨೬೫ ರಲ್ಲಿ ಸೈಮನ್  ಮಂಟಫರ್ಡ್ ಅನ್ನುವರು ಮೊಟ್ಟ ಮೊದಲನೆಯ ಚುನಾಯಿತ ಸಲಹಾ ಮಂಡಳಿ  Westminster ಪಾರ್ಲಿಮೆಂಟ್ ( ಹೌಸ್ ಆಫ್ ಕಾಮನ್ಸ್ )ಆರಂಭಿಸಿದರು. ೧೫೩೫-೪೨ ರಲ್ಲಿ ವೇಲ್ಸ್ ದೇಶವವನ್ನು ವಶಪಡಿಸಿಕೊಂಡು ಅಲ್ಲಿನ ಸದಸ್ಯರನ್ನು ಇಂಗ್ಲೆಂಡ್  ಪಾರ್ಲಿಮೆಂಟ್ಗೆ ಸೇರಿಸಿದರು

೧೫೪೧ ರಲ್ಲಿ ೮ನೇ ಹೆನ್ರಿ ಐರ್ಲೆಂಡ್ ದೇಶವನ್ನು ತನ್ನ ರಾಜ್ಯವೆಂದು ಘೋಷಿಸಿ ಅದರ ಸದಸ್ಯರನ್ನು ಇಂಗ್ಲೆಂಡ್ ಪಾರ್ಲಿಮೆಂಟ್ ಬರುವುದಕ್ಕೆ ಅಪ್ಪಣೆ ಕೊಟ್ಟ. ಅವನ ಮಗಳು  ಪ್ರಥಮ ಎಲಿಜಬೆತ್ ರಾಣಿ  ತೀರಿಕೊಂಡ ಮೇಲೆ  ೧೬೦೩ನಲ್ಲಿ  ಸ್ಕಾಟ್ಲೆಂಡ್ ನ  ೬ನೆಯ ಜೇಮ್ಸ್, ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ಎರಡಕ್ಕೂ ರಾಜರಾದರೂ ಈ ದೇಶಗಳ  ಪಾರ್ಲಿಮೆಂಟ್ಗಳು ಒಂದುಗೂಡಲಿಲ್ಲ

೧೬೪೨ರಲ್ಲಿ ನಡೆದ ಆಂತರಿಕ ಯುದ್ಧದ (ಸಿವಿಲ್ ವಾರ್ ) ನಂತರ ಆಲಿವರ್ ಕ್ರಾಮವೆಲ್  ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ದೇಶಗಳನ್ನು ಕೂಡಿಸಿ ಒಂದೇ ಪಾರ್ಲಿಮೆಂಟ್ ಸ್ಥಾಪಿಸಲು ಮಾಡಿದ ಪ್ರಯತ್ನ ಅನೇಕ ಕಾರಣಗಳಿಂದ ಸಾಧ್ಯವಾಗಲಿಲ್ಲ.  ಇವನ ಕಾಲದಲ್ಲಿ  ಪಾರ್ಲಿಮೆಂಟ್ ಮತ್ತು ರಾಜಪ್ರಭುತ್ವ (Monarchy) ಸಹ ರದ್ದಾಯಿತು ಮತ್ತು ದೇಶದ್ರೋಹದ ಅಪರಾದದ ಮೇಲೆ ೧೬೪೯ ಜನವರಿ ೩೦ರಂದು ಮೊದಲನೆಯ ಚಾರ್ಲ್ಸ್ ದೊರೆಯ ಶಿರಚ್ಛೇದ ಆಯಿತು

ಬಹಳ ವರ್ಷ ಹೌಸ್ ಆಫ್ ಲಾರ್ಡ್ಸ್ ನವರು ತುಂಬಾ  ಪ್ರಬಲಶೀಲರಾಗಿದ್ದರು.  ಆದರೆ ೧೯ನೇ ಶತಮಾನದಲ್ಲಿ ಹೊಸ ಶಾಸನಗಳು ಬಂದು ಎಲ್ಲಾ ಕ್ಷೇತ್ರದಿಂದ ಸರಿಯಾದ ಚುನಾವಣೆ ನಡೆಸಿದ ಮೇಲೆ  ಹೌಸ್ ಆಫ್ ಕಾಮನ್ಸ್ ಗೆ  ಬಲ ಬಂತು.

೧೭೦೭ ನಲ್ಲಿ( Act of  Union ) ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ದೇಶಗಳು ಒಂದಾಗಿ  ಪಾರ್ಲಿಮೆಂಟ್  ಆಫ್  ಗ್ರೇಟ್ ಬ್ರಿಟನ್  ಪ್ರಾರಂಭವಾಯಿತು. ೧೯ ನೇ ಶತಮಾನದಲ್ಲಿ ಬಲವಂತದಿಂದ  ಐರ್ಲೆಂಡ್ ಸಹ ಸೇರಿಸಿ  ಪಾರ್ಲಿಮೆಂಟ್ ಆಫ್ ಗ್ರೇಟ್ ಬ್ರಿಟನ್ ಮತ್ತು ಐರ್ಲೆಂಡ್ ಆಯಿತು. ಆದರೆ ಕ್ಯಾಥೋಲಿಕ್ ಪಂಗಡದ ಐರ್ಲೆಂಡ್ ದೇಶದಲ್ಲಿ ಸ್ವಾತಂತ್ರದ ಹೋರಾಟ ಪ್ರಭಲವಾಗಿ ನಡೆದು ೧೯೨೨ರಲ್ಲಿ ಈ ದೇಶ ಎರಡು ಭಾಗವಾಗಿ ಉತ್ತರ ಐರ್ಲೆಂಡ್ ಮಾತ್ರ ಬ್ರಿಟಿಷ್ ಸರ್ಕಾರಕ್ಕೆ ಸೇರಿತು. ೧೯೨೭ ರಲ್ಲಿ  ಪಾರ್ಲಿರ್ಮೆಂಟ್ ಆಫ್  ಗ್ರೇಟ್ ಬ್ರಿಟನ್ ಮತ್ತು ನಾರ್ದನ್ ಐರ್ಲೆಂಡ್ ಆಗಿ ಮುಂದೆ ವರೆಯಿತು.

೧೮೩೪ ರಲ್ಲಿ ಭಾರಿ ಅಗ್ನಿ ಅನಾಹುತವಾಗಿ  ಪಾರ್ಲಿಮೆಂಟಿನ  ಮುಕ್ಕಾಲು ಭಾಗ ನಾಶವಾಯಿತು. ನಂತರ  ಹೊಸ ಕಟ್ಟಡದ  ಕೆಲಸ ಶುರುಮಾಡಿ ಸುಮಾರು ಹತ್ತು ವರ್ಷಗಳ ಮೇಲೆ ಸಂಪೂರ್ಣ ಮಾಡಿದರು. ಆದರೆ ಎರಡನೇ ಮಹಾಯುದ್ಧದಲ್ಲಿ ಬಾಂಬ್ ದಾಳಿಯಿಂದ ಹಾನಿಯಾದ ಈ ಕಟ್ಟಡದ ಕೆಲವು ಭಾಗಗಳನ್ನು  ಪುನಃ ನಿರ್ಮಾಣ ಮಾಡಬೇಕಾಯಿತು.

೧೯೧೮ ನಲ್ಲಿ ೩೦ ವರ್ಷದ ಮೇಲಿನ ಮಹಿಳೆಯರಿಗೆ ಮಾತ್ರ ಮತದಾನದ ಹಕ್ಕು ಬಂತು. ಪಾರ್ಲಿಮೆಂಟಿನ  ಮೊಟ್ಟ ಮೊದಲನೆಯ ಮಹಿಳಾ ಸದೆಸ್ಯೆ ಐರ್ಲೆಂಡ್ ಇಂದ  ಆಯ್ಕೆಯಾದರೂ ಈಕೆ ಕ್ಯಾಥೋಲಿಕ್ ಮತ್ತು  ಶಿನ್ಫೇನ್ ಪಕ್ಷದವಳಾಗಿದ್ದರಿಂದ ಪಾರ್ಲಿಮೆಂಟ್ ನಲ್ಲಿ ಕೂರಲಿಲ್ಲ. ಇವತ್ತಿಗೂ ಉತ್ತರ ಐರ್ಲೆಂಡ್ ನಿಂದ ಚುನಾವಣಾ ಯಲ್ಲಿ ಗೆದ್ದ  ಶಿನ್ಫೇನ್ ಪಕ್ಷದ  ಸದಸ್ಯರು ಪಾರ್ಲಿಮೆಂಟಿಗೆ

ಬರುವುದಿಲ್ಲ.  ಕಾರಣ ಅವರು ಬ್ರಿಟಿಷ್ ರಾಣಿಯ ಹೆಸರಿನಲ್ಲಿ  ಪ್ರಮಾಣವಚನ ಸ್ವೀಕರಿಸುವುದಿಲ್ಲ.  ೧೯೧೯ ರಲ್ಲಿ ಲೇಡಿ ಆಸ್ಟರ್ ಅನ್ನುವರು ಪ್ಲಿಮತ್ ಕ್ಷೇತ್ರದಿಂದ ಆಯ್ಕೆ ಆಗಿ  ಪಾರ್ಲಿಮೆಂಟ್ ಪ್ರವೇಶಿಸಿದ ಮೊದಲೆಯ ಮಹಿಳಾ ಸದಸ್ಯೆ ಆದರುRead More »

ಮೊದಲನೆಯ ಮಹಾಯುದ್ಧದ ಅಜ್ಞಾತ ಯೋಧರಿಗೆ ಯು. ಕೆ. ಕನ್ನಡತಿಯ ನೃತ್ಯಾಂಜಲಿ -ಶ್ರೀವತ್ಸ ದೇಸಾಯಿ ಬರೆದ ಲೇಖನ

ಒಂದು ಶತಮಾನವಾಯಿತು ಮೊದಲ ಮಹಾಯುದ್ಧ ಮುಗಿದು. ಅಂದು ಪರಂಗಿಗಳ ಆಳ್ವಿಕೆಯಲ್ಲಿದ್ದ ಭಾರತದ ಸೈನಿಕರು ಅಪಾರ ಬೆಲೆ ತೆತ್ತರು. ಆದರೆ ಅವರ ಬಲಿದಾನ ಯಾವ ಮಾನ್ಯತೆಯನ್ನೂ ಪಡೆಯಲಿಲ್ಲ. ದಿಲ್ಲಿಯ ಇಂಡಿಯಾ ಗೇಟ್ ನಲ್ಲಿ ಮೊದಲ ಮಹಾಯುದ್ಧದಲ್ಲಿ ಮಡಿದ ಯೋಧರ ಹೆಸರು ಕೆತ್ತಿದ್ದರೂ ಹೆಚ್ಚಿನ ಭಾರತೀಯರಿಗೆ ಇದರ ಮಾಹಿತಿಯೂ ಇಲ್ಲ. ಈ ವಾರ ಮರೆವಿನಂಗಳದಿಂದ ಈ ಕೆಚ್ಚೆದೆಯ ಕಲಿಗಳ ನೆನಪನ್ನು ಹೊರತರುತ್ತಿರುವ ಶಾಂತಾ ರಾವ್ ಅವರ ಪ್ರಯತ್ನವನ್ನು ನಮ್ಮ ಮುಂದೆ ಹಂಚಿಕೊಡಿದ್ದಾರೆ ಶ್ರೀವತ್ಸ ದೇಸಾಯಿಯವರು. ಮಹಾಯುದ್ಧದ ಯೋಧರ ಬಗ್ಗೆ ಸಂಶೋಧನೆ ಮಾಡಿ, ಅಂದು ಹೋರಾಡಿದ ಕನ್ನಡಿಗರನ್ನೂ ನಮಗೆ ಪರಿಚಯ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಿಮಗೆ ಸಾಧ್ಯವಾದರೆ ನೃತ್ಯರೂಪಕವನ್ನೂ ವೀಕ್ಷಿಸಿ.(ಸಂ)

ಇಂಗ್ಲಂಡಿನ  ಹ್ಯಾಲಿಫ್ಯಾಕ್ಸ್ ನ ಶಾಂತಾ ರಾವ್ ಅವರ ನೃತ್ಯ ರೂಪಕದಲ್ಲಿ ಬರುವ ಒಂದು ಹೃದ್ರಾವಕ ದೃಶ್ಯ: ಯುದ್ಧಕ್ಕೆ ಸಜ್ಜಾಗಿ ಹೊರಟ ಆಜಾನಬಾಹು ಸಿಖ್ ಯುವಕನನ್ನು ಹರಸಿ ಕಣ್ಣೀರು ತುಂಬಿ ಬೀಳ್ಕೊಡುತ್ತಿದ್ದಾಳೆ ಹೆತ್ತ ತಾಯಿ. ಆಗಷ್ಟೇ ತಾನೆ ತನ್ನ ಕೈಯಾರೆ ತನ್ನೆದೆಯ ಪ್ರೀತಿ, ವಾತ್ಸಲ್ಯ ಬೆರೆಸಿ ತನ್ನ ಕೈಯಿಂದ ಮಾಡಿದ ಸ್ವಾದಿಷ್ಟ ಊಟ ಕೊನೆಯ ಬಾರಿ ತನ್ನ ಕರುಳ ಕುಡಿಗೆ ತಿನಿಸಿ, ಕೊನೆಯ ಬಾರಿ ಹಾಲಿನ ಜೊತೆಗೆ ಬಹುಶಃ ತನ್ನ ಕಣ್ಣೀರನ್ನೂ ಬೆರೆಸಿದ್ದಾಳೆ! ತಾಯಿಯ ಕಾಲಿಗೆ ನಮಸ್ಕರಿಸಿ ಅಳಬೇಡವೆಂದು ಬಾಯಿ ಮೇಲೆ ಬೊಟ್ಟಿಟ್ಟು ಬೇಡಿ ಹೊರಟ ಆತನ ತಲೆಮೇಲೆ ಸಿಖ್ಕ ಧರ್ಮಗ್ರಂಥ ‘ಗುರುಗ್ರಂಥ ಸಾಹಿಬ್’. ಅದನ್ನು ಭಕ್ತಿಪೂರ್ವಕವಾಗಿ ಶಿರೋಧಾರಣ ಮಾಡಿ ತಾಳಕ್ಕೆ ಸರಿಯಾಗಿ ಹೆಜ್ಜೆಯಿಡುತ್ತ ನೇಪಥ್ಯದತ್ತ ಸರಿಯುವಾಗ ಹಿನ್ನೆಲೆಯಲ್ಲಿ ಮಿಡಿವ ಆರ್ದ್ರತೆಯಲ್ಲಿ ಮಿಂದ ವೇಣು ಗಾನ. ಪ್ರೇಕ್ಷಕರ ಎದೆಯಲ್ಲಿ ಏನೋ ಕಸಿವಿಸಿ, ಕಣ್ಣಂಚಿನ ಕೊನೆಯಲ್ಲಿ ಒಂದು ಅಶ್ರುಬಿಂದು. ಆತನ ಹಿಂದೆ ಬಿಳಿ ಪರದೆಯ ಮೇಲೆ ಮೊದಲ ಮಹಾಯುದ್ಧದಲ್ಲಿ ಭಾಗವಹಿಸಿದ ಭಾರತೀಯ ಯೋಧರು ಮರಳುಗಾಡಿನಲ್ಲಿ ಪ್ರಾರ್ಥನೆಗೆ ಹೊರಟ ಕಪ್ಪು-ಬಿಳಿ

Unknown becomes Knownದಲ್ಲಿಯ ಒಂದು ದೃಶ್ಯ (ಚಿತ್ರಕೃಪೆ: annapurnadance.com)

ಛಾಯಾಚಿತ್ರದ ಪ್ರೊಜೆಕ್ಷನ್. ಪ್ರೇಕ್ಷಕರ ಸುದೀರ್ಘ ಕರತಾಡನದೊಂದಿಗೆ ಕಾರ್ಯಕ್ರಮ ಕೊನೆಗೊಳ್ಳುತ್ತದೆ.

ಈ ನಿರೂಪಣೆ ಬರೀ ಕಾಲ್ಪನಿಕ ಕಟ್ಟು ಕಥೆಯಲ್ಲ. ಈ ಸನ್ನಿವೇಶ ಆ 18 ವರ್ಷದ ತರುಣನಂತೆಯೇ ಬ್ರಿಟಿಷ್ ಸೈನ್ಯದಲ್ಲಿ ಸೇರಿ ಅವರ ಪರವಾಗಿ ಯುದ್ಧ ಮಾಡಿ ಮಡಿದ 74,000 ಅವಿಭಾಜಿತ ಭಾರತದ ಯೋಧರ ಕಥೆಯನ್ನು ಹೇಳುತ್ತಿದೆ ಎಂಬ ಸತ್ಯದ ಮನವರಿಕೆ ಮೊದಲ ಸಲ ಆದಾಗ ಸಭಿಕರ ಮೈನವಿರೇಳುತ್ತದೆ! ಮೊದಲನೆಯ ಮಹಾಯುದ್ಧದ (1914-18) ಶತಾಬ್ದಿಯ ಸಂದರ್ಭದಲ್ಲಿ ಈ ನೃತ್ಯ ರೂಪಕವನ್ನು ಯುಕೆ ದಲ್ಲಿf ಕಳೆದೆರಡು ವರ್ಷಗಳಲ್ಲಿ ಹತ್ತಾರು ಕಡೆ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದಾರೆ ನಿರ್ದೇಶಕಿ ಶಾಂತಾ ರಾವ್. ಇದಲ್ಲದೆ ತಾವೇ ಹುಟ್ಟು ಹಾಕಿದ ಅನ್ನಪೂರ್ಣ ಡಾನ್ಸ್ ಕಂಪನಿಯ ವತಿಯಿಂದ ಶಾಲೆಗಳಲ್ಲಿ, ಸಂಘ ಸಂಸ್ಥೆಗಳಲ್ಲಿ, ಅಂಗ ವಿಕಲ (ಡಿಸೆಬಲ್ಡ್) ಗ್ರುಪ್, ಮಹಿಳಾ ಸಂಘ (Womens Institute) ಗಳಲ್ಲಿ ನೂರಾರು ಪ್ರಾತ್ಯಕ್ಷಿಕೆ, ಕಥಾರೂಪಕಗಳನ್ನು (story telling) ಪ್ರದರ್ಶಿಸಿದ ಹೆಗ್ಗಳಿಕೆ ಇವರದಾಗಿದೆ. ಯು.ಕೆ.ದ ಯಾರ್ಕ್ ಶೈರಿನಲ್ಲಿ 1975 ರಿಂದಲೂ ವಾಸಿಸುತ್ತಿರುವ ಕುಂದಾಪುರದ ಮೂಲದವರಾದ ಶಾಂತಾ ರಾವ್ ಅವರು ಯು ಕೆ ಕನ್ನಡ ಬಳಗದ ಆಜೀವ ಸದಸ್ಯೆ ಸಹ. ಭರತ ನಾಟ್ಯದಲ್ಲಿ ಪಾರಂಗತರಾದ ಶಾಂತಾ ಅವರಿಗೆ ಅ ಮಹಾಯುದ್ಧದಲ್ಲಿ ಮಡಿದು ಮಣ್ಣಾಗಿ ’ನಿರ್ನಾಮವಾಗಿ’ ಹೋದ ಅಜ್ಞಾತ ಯೋಧರಿಗೆ ತಮ್ಮಿಂದ ಒಂದು ಶ್ರದ್ಧಾಂಜಲಿಯಾದರೂ ಸಲ್ಲಬೇಕು ಎಂದು ಪಣ ತೊಟ್ಟು ಕಳೆದ ವರ್ಷ ಕಾರ್ಯಪ್ರವೃತ್ತರಾದರು. ಅದರ ಫಲವೇ ಈ ”Unknown becomes Known” ಎನ್ನುವ ನಾಟ್ಯ ರೂಪಕ.
Read More »