ಬ್ರಿಟನ್ ಪಾರ್ಲಿಮೆಂಟ್ ನ ಇತಿಹಾಸ ಮತ್ತು ಕೆಲವು ಆಸಕ್ತಿದಾಯಕ ಸಂಗತಿಗಳು: ಲೇಖನ– ರಾಮಮೂರ್ತಿ

(ಎಷ್ಟೋ ಸಲ ನಮ್ಮ ನಾಡಿನ ಬಗ್ಗೆಯಾಗಲಿ ವಾಸಿಸುವ ಊರು ಅಥವಾ ದೇಶದ ಬಗೆಗಿನ ಸಂಗತಿಗಳೇ ನಮಗೆ ಗೊತ್ತಿರುವದಿಲ್ಲ – ಇನ್ನೊಬ್ಬರು ಎತ್ತಿ ತೋರಿಸುವ ತನಕ. ಬ್ರಿಟಿಶ್ ಪಾರ್ಲಿಮೆಂಟಿನಲ್ಲಿ ಪ್ರಜೆಗಳಿಗೆ Strangers galleryಯಲ್ಲಿ ಉಚಿತ ಪ್ರವೇಶವಿದೆ. ಅಲ್ಲಿಗೆ ಭೆಟ್ಟಿ ಕೊಟ್ಟು ಟೂರ್ ಮಾಡುವಾಗ ಸಂಗ್ರಹಿಸಿದ ಸ್ವಾರಸ್ಯಕರ  ಸಂಗತಿಗಳನ್ನು ಈ ಲೇಖನದಲ್ಲಿ ನಮ್ಮ ಹಿರಿಯ ಮಿತ್ರರಾದ ರಾಮಮೂರ್ತಿ ಹಂಚಿಕೊಂಡಿದ್ದಾರೆ. ಜೊತೆಗೆ ಓದುಗರಲ್ಲಿ ಹೊಸಬರಿದ್ದರೆ ಅವರಿಗಾಗಿ”ಪಾರ್ಲಿಮೆಂಟುಗಳ ತವರಿನ’ potted history ಸಹ ಕೊಟ್ಟಿದ್ದಾರೆ. ನಿಮ್ಮ ಅನಿಸಿಕೆಗಳಿಗೆ ಸ್ವಾಗತವಿದೆ. ಅವಶ್ಯ ಬರೆಯಿರಿ. -ಸಂ)

ಈ ದೇಶದ ಪಾರ್ಲಿಮೆಂಟ್ ನ  ಇತಿಹಾಸ ಮತ್ತು ಕೆಲವು ಆಸಕ್ತಿದಾಯಕ ಸಂಗತಿಗಳು

ನಾವೆಲ್ಲಾ ಬಹುಪಾಲು ಲಂಡನ್ ನಲ್ಲಿ ಇರುವ ಪಾರ್ಲಿಮೆಂಟ್ ನೋಡಿದ್ದೀವಿ ಮತ್ತು ಕೆಲವರು ಒಳಗೂ ಹೋಗಿ ಅದರ ಚರಿತ್ರೆ ಮತ್ತು ವಾಸ್ತುಶಿಲ್ಪವನ್ನು ನೋಡಿ ಆಶ್ಚರ್ಯ ಪಟ್ಟಿರಬಹುದು. ಅಂದರೆ ಬಹುಶಃ ಈ ಬರಹ ನಿಮಗಲ್ಲ. ಆದರೂ ಓದಿ ಪರವಾಗಿಲ್ಲ !

ಬ್ರಿಟಿಷ್ ಪಾರ್ಲಿಮೆಂಟ್ ಈ ದೇಶದ ಸರ್ವೋಚ್ಛ ಸಂಸ್ಥೆ. ಇಲ್ಲಿ  ಎರಡು ಭಾಗಗಳಿವೆ -ಹೌಸ್ ಆಫ್ ಲಾರ್ಡ್ಸ್ ಮತ್ತು ಹೌಸ್ ಆಫ್  ಕಾಮನ್ಸ್. ಇಂಡಿಯಾದಲ್ಲಿ ರಾಜ್ಯಸಭಾ ಮತ್ತು ಲೋಕ್ ಸಭಾ ಇದ್ದಹಾಗೆ. ಹೌಸ್ ಆಫ್ ಲಾರ್ಡ್ಸ್ ನಲ್ಲಿ ೭೯೯ ಮತ್ತು ಕಾಮನ್ಸ್ ನಲ್ಲಿ ೬೫೦ ಸದಸ್ಯರಿದಾರೆ. ಲಾರ್ಡ್ಸ್ನನ  ಸದಸ್ಯರು ಚುನಾವಣೆಯಿಂದ ಗೆದ್ದವರಲ್ಲ. ಚರ್ಚ್ ಆಫ್ ಇಂಗ್ಲೆಂಡ್ ನ ಬಿಷಪ್ ಗಳು ಮತ್ತು ತಲಾಂತರ  ಅಥವಾ ಅನುವಂಶಿಕ   (hereditary) ಹಕ್ಕಿನವರು. ಮಿಕ್ಕವರು ಪ್ರಧಾನ ಮಂತ್ರಿ ಗಳು ನೇಮಿಸದವರು. ಆದರೆ ಕಾಮನ್ಸ್ ನ ಸದಸ್ಯರು ಚುನಾವಣೆ ಯಲ್ಲಿ ಗೆದ್ದವರು.

Palace of Westminster

ಬ್ರಿಟನ್ನಿನ ಪಾರ್ಲಿಮೆಂಟಿನ ಸಂಕ್ಷಿಪ್ತ ಇತಿಹಾಸ

ಪಾರ್ಲಿಮೆಂಟ್  ಮೂಲ ೧೦೬೬ ಅಂದರೆ ತಪ್ಪೇನಿಲ್ಲ. ಆ ವರ್ಷದಲ್ಲಿ  ನಾರ್ಮಂಡಿಯ ವಿಲಿಯಮ್ಮ್ಸ್ ಈ ದೇಶದಲ್ಲಿ   ಬ್ಯಾಟಲ್ ಆಫ್ ಹೇಸ್ಟಿಂಗ್ಸ್  ಯುದ್ಧದ ನಂತರ ತನ್ನ ಆಡಳಿತವನ್ನು ಸ್ಥಾಪಿಸಿದ. ಹೊಸ ಕಾನೂನು ಜಾರಿಗೆ ಬರುವ ಮುಂದೆ ತಾನು ನೇಮಿಸಿದ ಸಲಹಾ ಸಮಿತಿ ಜೊತೆ ಚರ್ಚೆ್ ಮಾಡುತಿದ್ದ .  ಆದರೆ  ಸುಮಾರು ೨೦೦ ವರ್ಷಗಳ ಮೇಲೆ ಬಂದ ಕಿಂಗ್ ಜಾನ್ ತನಗೆ ಬೇಕಾದಹಾಗೆ ರಾಜ್ಯಭಾರ ಮಾಡುವ ರೀತಿಯಿಂದ ಅವನ  ಸಲಹಾ ಸಮಿತೆಗೆ  ತೀರಾ ಅಸಮಾಧಾನ ವಾಗಿ  ೧೨೧೫ ರಲ್ಲಿ ಮಾಗ್ನಾ ಕಾರ್ಟ(Magna Carta ) ಅನ್ನುವ ಕಾನೂನು ಜಾರಿಗೆ ತಂದರು. ಇದರ ಪ್ರಕಾರ ಕಿಂಗ್ ಜಾನ್ ಈ ಸಮಿತಿಗೆ ಒಪ್ಪಿಗೆ

Magna_Carta_(British_Library_Cotton_MS_Augustus_II_106)
ಮ್ಯಾಗ್ನಾ ಕಾರ್ಟಾ (ಬ್ರಿಟಿಶ್ ಲೈಬ್ರರಿಯಲ್ಲಿಯ ಪ್ರತಿ)

ಇಲ್ಲದೆ ಏನೂ ಮಾಡಲು ಅಧಿಕಾರ ಇರಲಿಲ್ಲ. ನೀವು ಈ ಒಪ್ಪಂದ ಪತ್ರವನ್ನು  ಸಾಲಿಸ್ಬರಿ ಮತ್ತು  ಲಿಂಕನ್  ಕ್ಯಥೀಡ್ರಲ್  (Salisbury and Lincoln Cathedral ) ನಲ್ಲಿ   ನೋಡಬಹುದು. ಇನ್ನೆರಡು ಪ್ರತಿಗಳು ಬ್ರಿಟಿಷ್ ಲೈಬ್ರರಿನಲ್ಲಿ  ಇವೆ. ಈ ಒಪ್ಪಂದ ಥೇಮ್ಸ್ ನದಿಯ ದಡಲ್ಲಿರುವ ರನ್ನಿಮೀಡ್ ಅನ್ನುವ ಸ್ಥಳ ದಲ್ಲಿ ನಡೆಯಿತು. (೧೫ ಜೂನ್ ೧೨೧೫)

ಹಿಂದಿನ ಕಾಲದಲ್ಲಿ, ರಾಜರು ಬಹಳ ಬಲಿಶಾಲಿಗಳಾಗಿದ್ದರು. ಅವರು ಹೇಳಿದ್ದೇ ವೇದವಾಕ್ಯ. ಆಗಾಗ್ಗೆ ಇವರು ದೇಶದ ಶ್ರೀಮಂತರು ಮತ್ತು ಪ್ರಭಾವಶಾಲಿ ಜನಗಳನ್ನೂ ಸೇರಿಸಿ ಚರ್ಚೆ ನಡೆಸುತ್ತಿದ್ದರು.  ಮುಖ್ಯವಾಗಿ ರಾಜರಿಗೆ ಇತರೆ ದೇಶದಮೇಲೆ ನಡೆಸುವ ಯುದ್ಧಕ್ಕೆ ಧನಸಹಾಯ ಬೇಕಿತ್ತು ಅಷ್ಟೆ. ಜನಗಳ ಕಲ್ಯಾಣ ಅಥವಾ ಯೋಗಕ್ಷೇಮ ಇವರ ಗಮನಕ್ಕೆ ಬರುತ್ತಿರಲಿಲ್ಲ ಇಂತಹ ಸಭೆಗಳಿಗೆ Parliament ಅಂತ  ನಾಮಕರಣ ಮಾಡಿದರು.

೧೨೬೫ ರಲ್ಲಿ ಸೈಮನ್  ಮಂಟಫರ್ಡ್ ಅನ್ನುವರು ಮೊಟ್ಟ ಮೊದಲನೆಯ ಚುನಾಯಿತ ಸಲಹಾ ಮಂಡಳಿ  Westminster ಪಾರ್ಲಿಮೆಂಟ್ ( ಹೌಸ್ ಆಫ್ ಕಾಮನ್ಸ್ )ಆರಂಭಿಸಿದರು. ೧೫೩೫-೪೨ ರಲ್ಲಿ ವೇಲ್ಸ್ ದೇಶವವನ್ನು ವಶಪಡಿಸಿಕೊಂಡು ಅಲ್ಲಿನ ಸದಸ್ಯರನ್ನು ಇಂಗ್ಲೆಂಡ್  ಪಾರ್ಲಿಮೆಂಟ್ಗೆ ಸೇರಿಸಿದರು

೧೫೪೧ ರಲ್ಲಿ ೮ನೇ ಹೆನ್ರಿ ಐರ್ಲೆಂಡ್ ದೇಶವನ್ನು ತನ್ನ ರಾಜ್ಯವೆಂದು ಘೋಷಿಸಿ ಅದರ ಸದಸ್ಯರನ್ನು ಇಂಗ್ಲೆಂಡ್ ಪಾರ್ಲಿಮೆಂಟ್ ಬರುವುದಕ್ಕೆ ಅಪ್ಪಣೆ ಕೊಟ್ಟ. ಅವನ ಮಗಳು  ಪ್ರಥಮ ಎಲಿಜಬೆತ್ ರಾಣಿ  ತೀರಿಕೊಂಡ ಮೇಲೆ  ೧೬೦೩ನಲ್ಲಿ  ಸ್ಕಾಟ್ಲೆಂಡ್ ನ  ೬ನೆಯ ಜೇಮ್ಸ್, ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ಎರಡಕ್ಕೂ ರಾಜರಾದರೂ ಈ ದೇಶಗಳ  ಪಾರ್ಲಿಮೆಂಟ್ಗಳು ಒಂದುಗೂಡಲಿಲ್ಲ

೧೬೪೨ರಲ್ಲಿ ನಡೆದ ಆಂತರಿಕ ಯುದ್ಧದ (ಸಿವಿಲ್ ವಾರ್ ) ನಂತರ ಆಲಿವರ್ ಕ್ರಾಮವೆಲ್  ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ದೇಶಗಳನ್ನು ಕೂಡಿಸಿ ಒಂದೇ ಪಾರ್ಲಿಮೆಂಟ್ ಸ್ಥಾಪಿಸಲು ಮಾಡಿದ ಪ್ರಯತ್ನ ಅನೇಕ ಕಾರಣಗಳಿಂದ ಸಾಧ್ಯವಾಗಲಿಲ್ಲ.  ಇವನ ಕಾಲದಲ್ಲಿ  ಪಾರ್ಲಿಮೆಂಟ್ ಮತ್ತು ರಾಜಪ್ರಭುತ್ವ (Monarchy) ಸಹ ರದ್ದಾಯಿತು ಮತ್ತು ದೇಶದ್ರೋಹದ ಅಪರಾದದ ಮೇಲೆ ೧೬೪೯ ಜನವರಿ ೩೦ರಂದು ಮೊದಲನೆಯ ಚಾರ್ಲ್ಸ್ ದೊರೆಯ ಶಿರಚ್ಛೇದ ಆಯಿತು

ಬಹಳ ವರ್ಷ ಹೌಸ್ ಆಫ್ ಲಾರ್ಡ್ಸ್ ನವರು ತುಂಬಾ  ಪ್ರಬಲಶೀಲರಾಗಿದ್ದರು.  ಆದರೆ ೧೯ನೇ ಶತಮಾನದಲ್ಲಿ ಹೊಸ ಶಾಸನಗಳು ಬಂದು ಎಲ್ಲಾ ಕ್ಷೇತ್ರದಿಂದ ಸರಿಯಾದ ಚುನಾವಣೆ ನಡೆಸಿದ ಮೇಲೆ  ಹೌಸ್ ಆಫ್ ಕಾಮನ್ಸ್ ಗೆ  ಬಲ ಬಂತು.

೧೭೦೭ ನಲ್ಲಿ( Act of  Union ) ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ದೇಶಗಳು ಒಂದಾಗಿ  ಪಾರ್ಲಿಮೆಂಟ್  ಆಫ್  ಗ್ರೇಟ್ ಬ್ರಿಟನ್  ಪ್ರಾರಂಭವಾಯಿತು. ೧೯ ನೇ ಶತಮಾನದಲ್ಲಿ ಬಲವಂತದಿಂದ  ಐರ್ಲೆಂಡ್ ಸಹ ಸೇರಿಸಿ  ಪಾರ್ಲಿಮೆಂಟ್ ಆಫ್ ಗ್ರೇಟ್ ಬ್ರಿಟನ್ ಮತ್ತು ಐರ್ಲೆಂಡ್ ಆಯಿತು. ಆದರೆ ಕ್ಯಾಥೋಲಿಕ್ ಪಂಗಡದ ಐರ್ಲೆಂಡ್ ದೇಶದಲ್ಲಿ ಸ್ವಾತಂತ್ರದ ಹೋರಾಟ ಪ್ರಭಲವಾಗಿ ನಡೆದು ೧೯೨೨ರಲ್ಲಿ ಈ ದೇಶ ಎರಡು ಭಾಗವಾಗಿ ಉತ್ತರ ಐರ್ಲೆಂಡ್ ಮಾತ್ರ ಬ್ರಿಟಿಷ್ ಸರ್ಕಾರಕ್ಕೆ ಸೇರಿತು. ೧೯೨೭ ರಲ್ಲಿ  ಪಾರ್ಲಿರ್ಮೆಂಟ್ ಆಫ್  ಗ್ರೇಟ್ ಬ್ರಿಟನ್ ಮತ್ತು ನಾರ್ದನ್ ಐರ್ಲೆಂಡ್ ಆಗಿ ಮುಂದೆ ವರೆಯಿತು.

೧೮೩೪ ರಲ್ಲಿ ಭಾರಿ ಅಗ್ನಿ ಅನಾಹುತವಾಗಿ  ಪಾರ್ಲಿಮೆಂಟಿನ  ಮುಕ್ಕಾಲು ಭಾಗ ನಾಶವಾಯಿತು. ನಂತರ  ಹೊಸ ಕಟ್ಟಡದ  ಕೆಲಸ ಶುರುಮಾಡಿ ಸುಮಾರು ಹತ್ತು ವರ್ಷಗಳ ಮೇಲೆ ಸಂಪೂರ್ಣ ಮಾಡಿದರು. ಆದರೆ ಎರಡನೇ ಮಹಾಯುದ್ಧದಲ್ಲಿ ಬಾಂಬ್ ದಾಳಿಯಿಂದ ಹಾನಿಯಾದ ಈ ಕಟ್ಟಡದ ಕೆಲವು ಭಾಗಗಳನ್ನು  ಪುನಃ ನಿರ್ಮಾಣ ಮಾಡಬೇಕಾಯಿತು.

೧೯೧೮ ನಲ್ಲಿ ೩೦ ವರ್ಷದ ಮೇಲಿನ ಮಹಿಳೆಯರಿಗೆ ಮಾತ್ರ ಮತದಾನದ ಹಕ್ಕು ಬಂತು. ಪಾರ್ಲಿಮೆಂಟಿನ  ಮೊಟ್ಟ ಮೊದಲನೆಯ ಮಹಿಳಾ ಸದೆಸ್ಯೆ ಐರ್ಲೆಂಡ್ ಇಂದ  ಆಯ್ಕೆಯಾದರೂ ಈಕೆ ಕ್ಯಾಥೋಲಿಕ್ ಮತ್ತು  ಶಿನ್ಫೇನ್ ಪಕ್ಷದವಳಾಗಿದ್ದರಿಂದ ಪಾರ್ಲಿಮೆಂಟ್ ನಲ್ಲಿ ಕೂರಲಿಲ್ಲ. ಇವತ್ತಿಗೂ ಉತ್ತರ ಐರ್ಲೆಂಡ್ ನಿಂದ ಚುನಾವಣಾ ಯಲ್ಲಿ ಗೆದ್ದ  ಶಿನ್ಫೇನ್ ಪಕ್ಷದ  ಸದಸ್ಯರು ಪಾರ್ಲಿಮೆಂಟಿಗೆ

ಬರುವುದಿಲ್ಲ.  ಕಾರಣ ಅವರು ಬ್ರಿಟಿಷ್ ರಾಣಿಯ ಹೆಸರಿನಲ್ಲಿ  ಪ್ರಮಾಣವಚನ ಸ್ವೀಕರಿಸುವುದಿಲ್ಲ.  ೧೯೧೯ ರಲ್ಲಿ ಲೇಡಿ ಆಸ್ಟರ್ ಅನ್ನುವರು ಪ್ಲಿಮತ್ ಕ್ಷೇತ್ರದಿಂದ ಆಯ್ಕೆ ಆಗಿ  ಪಾರ್ಲಿಮೆಂಟ್ ಪ್ರವೇಶಿಸಿದ ಮೊದಲೆಯ ಮಹಿಳಾ ಸದಸ್ಯೆ ಆದರು

ಭಾರತದಲ್ಲಿ ಹುಟ್ಟಿದ ಮೊದಲನೆಯ ಸದಸ್ಯ ದಾದಾಭಾಯ್ ನವರೋಜಿ ಅವರು. ಲಂಡನ್ ಫಿನ್ಸ್ ಬರಿ ಕ್ಷೇತ್ರದಿಂದ ೧೮೯೨ ಲಿಬರಲ್ ಪಕ್ಷ ದಿಂದ ಆಯ್ಕೆ ಆದರು. ಇವರು ೧೯ನೇ ಶತಮಾನದ ಕೊನೆಗೆ ಭಾರತಕ್ಕೆ ವಾಪಸ್ಸು ಬಂದು ಕೆಲವರ ಜೊತೆ ಸೇರಿ ಕಾಂಗ್ರೆಸ್ ಪಕ್ಷವನ್ನು ಪ್ರಾರಂಭಿದರು

Dadabhai
ದಾದಾಭಾಯ್ ನವರೋಜಿ

ಪಾರ್ಲಿಮೆಂಟ್ ನ  ಕುತೂಲಕಾರಿ ಸಂಗತಿಗಳು 

೫೦೦ ವರ್ಷದಿಂದ ಇದುವರೆಗೆ ಯಾವ ರಾಜ ಅಥವಾ ರಾಣಿ ಹೌಸ್ ಆಫ್  ಕಾಮನ್ಸ್ ಒಳಗೆ ಕಾಲಿಟ್ಟಿಲ್ಲ, ಯಾಕಂದರೆ, ೧೭ನೇ ಶತಮಾನದಲ್ಲಿ ಪ್ರಥಮ ಚಾರ್ಲ್ಸ್ ದೊರೆ ಒಳಗೆ ನುಗ್ಗಿ ೫ ಸದಸ್ಯರನ್ನು ಸೆರೆ ಹಿಡಿಯುವ ಪ್ರಯತ್ನ ಪಟ್ಟ. ನಂತರ ಅವನ ಶಿರಚ್ಛೇದನ ಆಯಿತು ! ಈಗಿನ ರಾಣಿ ಎಲಿಜಬೆತ್ ಬಕಿಂಗ್ಹ್ಯಾಮ್ ಅರಮನೆಯಿಂದ ವೆಸ್ಟ್ಮಿಮಿನ್ಸ್ಟರ್ ಗೆ ಬಹಳ ಅದ್ಭುತವಾದ ಕುದರೆ ಗಾಡಿಯಲ್ಲಿ(State Coach ) ತನ್ನ ಅಂಗರಕ್ಷಕರ ಜೊತೆಯಲ್ಲಿ ಬಂದು ಹೌಸ್ ಆಫ್ ಲಾರ್ಡ್ಸ್ ನಲ್ಲಿ ಕುಳಿತು ತನ್ನ ಪ್ರತಿನಿಧಿಯಾದ ಬ್ಲಾಕ್ ರಾಡ್ (Black  Rod) ಎನ್ನುವರನ್ನು ಹೌಸ್ ಆಫ್ ಕಾಮನ್ಸ್ ಸದಸ್ಯರನ್ನು ಕರೆಯಲು ಹೇಳಿ ಕಳಿಸುತ್ತಾರೆ. ಈತ  ಹೌಸ್ ಆಫ್  ಕಾಮನ್ಸ್ ಬಂದಾಗ ಅವರ ಮುಖದ ಮೇಲೆ ಬಾಗಲು ಮುಚ್ಚುತ್ತಾರೆ. ನಂತರ ಬ್ಲಾಕ್ ರಾಡ್  ಮೂರು ಸಲಿ ಬಾಗಿಲು ತಟ್ಟಿ ಬಾಗಿಲು ತೆಗದಮೇಲೆ ಒಳಗೆ ಹೋಗಿ ಸಭಾಧಿಪತಿಯವರನ್ನು ಮತ್ತು ಸದಸ್ಯರನ್ನು ’ರಾಣಿ ಅವರು ಬರಮಾಡಲು ಹೇಳಿದ್ದಾರ” ಅಂತ ಅರಿಕೆ ಮಾಡುತ್ತಾರೆ. ಆಗ ಎಲ್ಲರೂ ಅವರ ಹಿಂದೆ ಹೋಗಿ ಹೌಸ್ ಆಫ್ ಲಾರ್ಡ್ಸ್ ನಲ್ಲಿ ನಿಲ್ಲುತ್ತಾರೆ. ಇವರಿಗೆ ಅಲ್ಲಿ ಕೂರಲು ಅನುಮತಿ ಇಲ್ಲ. ನಿಂತೇ ರಾಣಿ ಅವರ ಭಾಷಣವನ್ನು ಕೇಳಬೇಕು. ಈ ಕ್ವೀನ್ಸ್ ಸ್ಪೀಚ್ (Queen’s Speech ) ನಲ್ಲಿ ಅವರ ಸರ್ಕಾರ ಏನೇನು ಕಾನೂನುಗಳು ಜಾರಿಗೆ ಬರುತ್ತೆ ಅನ್ನುವುದನ್ನ ತಿಳಿಸುತ್ತಾರೆ. ಈ ಭಾಷಣ ಪ್ರಧಾನ ಮಂತ್ರಿ ಅವರು ಬರೆದಿದ್ದು  ಆದರೆ ರಾಣಿಯ ಕೆಲಸ ಓದುವುದು ಅಷ್ಟೆ!! ನಂತರ ಸದಸ್ಯರು ತಮ್ಮ ಸಭೆ ಗೆ ತೆರಳಿ “ರಾಣಿಯವರ ಭಾಷಣ “ದ ಮೇಲೆ ಚರ್ಚೆ ನಡೆಸುತ್ತಾರೆQueen's speech.

ಹೌಸ್ ಆಫ್ ಕಾಮನ್ಸ್ ನಲ್ಲಿ ೬೫೦ ಸದಸ್ಯರಿದ್ದರೂ ಕೂಡಲು ಸ್ಥಳ ಇರುವದು ಇಲ್ಲ ೪೨೭ ಜನರಿಗೆ ಮಾತ್ರ. ಉಳಿದವರು ನಿಂತಿರಬೇಕು.

ಆ ಕೆಂಪು ಗೆರೆಗಳ ರಹಸ್ಯ:

House of commons red line
ಎರಡು ಕೆಂಪು ಗೆರೆಗಳು

ಎರಡು ಪಕ್ಷಗಳು  ಕೂಡುವ ಬೆಂಚ್ ಮುಂದೆ ಎರಡು ಕೆಂಪು ಬಣ್ಣದ ಗೆರೆಗಳು ಕೋಣೆಯ ಉದ್ದಕ್ಕೂ ಇವೆ. ಇವುಗಳ ನಡುವಿನ ಅಂತರ ಎರಡು ಕತ್ತಿಗಳ ಅಳತೆ (Two swords and an inch) !! ಸದಸ್ಯರು ಆ ರೇಖೆಗಳ ಮಧ್ಯೆ ನಿಂತು (ಕತ್ತಿ ಮಸೆದು)ವಾದಿಸ ಕೂಡದು! ಸದಸ್ಯರು ತಮ್ಮ ಕೋಟುಗಳನ್ನು ನೇತುಹಾಕುವ ಜಾಗದಲ್ಲಿ ಕತ್ತಿಗಳನ್ನು ನೇತುಹಾಕುವುದಕ್ಕೂ ಕೊಕ್ಕೆಗಳು ಇವೆ (hooks ). ಸದ್ಯ ಕತ್ತಿಗಳು ಈಗಿಲ್ಲ ಆದರೆ ೧೮ನೇ ಶತಮಾನದ ಹಿಂದೆ ಅನೇಕರು ತಮ್ಮ ಕತ್ತಿಯ ಸಮೇತ ಬರುತಿದ್ದರು  ಅಂತ ಕಾಣತ್ತೆ. ತಮಾಷೆಗೆಂದು ಈಗ ಕೆಲ ಸದಸ್ಯರು ಪ್ಲಾಸ್ಟಿಕ್ ಕತ್ತಿಗಳನ್ನು ಜೋತು ಬಿಟ್ಟಿದ್ದುಂಟು!

ನಶ್ಯದ ಡಬ್ಬಿ!

ಸುಮಾರು ೨೦೦ ವರ್ಷದ ಹಿಂದೆ ಈ ಕೋಣೆಯಲ್ಲಿ ಧೂಮಪಾನ ನಿಷೇಶಿದೆ. ಆದರೆ  ಸದಸ್ಯರಿಗೆ ತಂಬೂಕ ಬೇಕಾಗಿದ್ದ ರೆ ಬಾಗಿಲನಲ್ಲಿ ಒಂದು ಡಬ್ಬಿ ಯಲ್ಲಿ ನಶ್ಯ ಈಗಲೂ ಇದೆ ! ವಿವರಣೆಗೆ ಕೆಳಗಿನ ಕೊಂಡಿ: http://www.bbc.co.uk/news/uk-politics-24713932

ಸಭಾಪತಿ ಅಂದರೆ Speaker ಚುನಾವಣೆ ಆದಮೇಲೆ ಅವರನ್ನು ಅವರ ಕುರ್ಚಿ ಗೆ ಎಳಕೊಂಡು ಬರುವುದು ಪದ್ಧತಿ ಈಗಲೂ ಇದೆ. ಹಿಂದಿನ ಕಾಲದಲ್ಲಿ ರಾಜರು ಅಥವಾ ರಾಣಿಯವರು ಹೇಳಿದ್ದನ್ನು ಕೇಳದೆ ಇದ್ದ ರೆ ಇವರನ್ನು ಟವರ್ (Tower of London) ನಲ್ಲಿ ಬಂಧಿಸಿ ಶಿಕ್ಷೆ ಕೊಡುತ್ತಿದ್ದರು. ಈ ಕಾರಣದಿಂದ ಸಭಾಪತಿ ಸ್ಥಾನಕ್ಕೆ ಬರುವುದಕ್ಕೆ ಹಿಂದೇಟು ಹೊಡೆಯುತ್ತಿದ್ದರು.

ಕ್ರಿಶ್ಚಿಯನ್ ಪ್ರಾರ್ಥನೆ

ಈ ದೇಶ ಜಾತ್ಯತೀತ (secular) ಆದರೂ ಸಭೆ ಶುರು ಆಗುವ ಮುಂದೆ ಕ್ರಿಶ್ಚಿಯನ್ ಪ್ರಾರ್ಥನೆ ಉಂಟು ಇದನ್ನು ಸಭಾತಿಪತಿಗಳ Chaplain ನಡೆಸುತ್ತಾರೆ. ಕೆಲವು ಸದ್ಯಸರು ಬೇಗ ಬಂದು ಪ್ರಾರ್ಥನೆ ಆದಮೇಲೆ ತಮ್ಮ ಜಾಗವನ್ನು ರಿಸರ್ವ್ ಮಾಡುವ ಪದ್ಧತಿ ಇದೆ. ತಮ್ಮ ಹೆಸರು ಬರೆದು ಆ ಜಾಗದಲ್ಲಿ ಅಂಟಿಸುತ್ತಾರೆ!!

ಹೌಸ್ ಆಫ್ ಲಾರ್ಡ್ಸ್ ನ ಸಭಾತಿಪತಿಗಳು ಕೂಡುವುದು ಉಣ್ಣೆ (wool ) ತುಂಬಿರುವ ಚೀಲದಮೇಲೆ.  ಈ ಸಂಪ್ರದಾಯ ೧೪ನೇ ಶತಮಾನದಿಂದ ಆಚರಣೆಯಲ್ಲಿದೆ.  ಏತಕ್ಕೆ ಅಂತ ಕೇಳಿದ್ರ? ಆ ಕಾಲದಲ್ಲಿ ವೂಲ್ ಟ್ರೇಡ್ ಬಹಳ ದೊಡ್ಡದಾಗಿತ್ತು ಮತ್ತು ಆ ಕಾಲದ ಜಿಡಿಪಿ (G D P ) ಇದರ ಮಾರಾಟದ ಮೇಲೆ ಆಧಾರವಾಗಿತ್ತು.

ನೀವು  Strangers Gallery ನಿಂದ   ಪಾರ್ಲಿರ್ಮೆಂಟ್ ನಲ್ಲಿ  ನಡೆಯುವ ಚರ್ಚೆ ಯನ್ನು  ನಡೆಯುವುದು ನೋಡಬಹುದು.  ಪಾರ್ಲಿರ್ಮೆಂಟ್ ನಲ್ಲಿ ಕೆಲಸ ಮಾಡುವವರನ್ನು ಬಿಟ್ಟು ಮಿಕ್ಕವರನ್ನ Strangers ಅಂತ ಪರಿಗಣಿಸುತ್ತಾರೆ.

I'm sure it is helen mirren
ರಾಣಿಯ ಸ್ಪೀಚ್ ಕೇಳುವ ಸಭಿಕರು! (ವ್ಯಂಗ ಚಿತ್ರ)

ಈ ಕಟ್ಟಡದಲ್ಲಿ ೧೦೦೦ ಕೊ ಹೆಚ್ಚು ಕೊಠಡಿಗಳಿವೆ ಮತ್ತು ೧೦೦ ಪಾವಟಿಗಳಿವೆ (stair case )

ಹೌಸ್ ಆಫ್ ಕಾಮನ್ಸ್ ನ ಸದಸ್ಯರು ಮತ (Vote )ಮಾಡುವುದು ಯೇ (ok ) ಅಥವಾ ನೇ (ಇಲ್ಲ) ಅಂತ ಕೂಗುವುದು. ಇದು ಸ್ಪಷ್ಟ ವಾಗಿಲ್ಲದಿದ್ದರೆ ಸಭಾಪತಿಗಳು “ಡಿವಿಷನ್” ಅಂತ ಕೂಗುತ್ತಾರೆ ಆಗ ಎರಡು ಪಂಗ್ತಿ ಗಳಲ್ಲಿ ಸದಸ್ಯರು ನಿಂತಾಗ ಎಣಿಸುತ್ತಾರೆ. ಈ ಕಾಲದಲ್ಲಿ  ಈ ಕೆಲಸ ಕೆಲವೇ ಸೆಕಂಡ್ ನಲ್ಲಿ ನಡೆಸಬಹುದು ಆದರೆ ಇಲ್ಲಿ ಹಳೆ ಪದ್ದತಿಗಳು ಹಳಸುವುದಿಲ್ಲ!

ಸದಸ್ಯರು ಮಾತನಾಡಬೇಕಾದರೆ ಅವರು ಸಭಾಪತಿಗಳ ಗಮನಕ್ಕೆ ಬರಬೇಕು, ಆಗ ಅವರ ಹೆಸರನ್ನು ಕೂಗುತ್ತಾರೆ.  ಕೆಲವು ಸದಸ್ಯರು ಪ್ರೀವಿ ಕೌನ್ಸಿಲ್ (Privy Council ) ಅನ್ನುವ ಹಿರಿಯ ಸಂಸ್ಥೆಗೆ ಸೇರಿರುತ್ತಾರೆ. ಅಂತಹ  ಸದಸ್ಯರಿಗೆ Right Honourable Gentleman ಅಥವಾ Lady  ಅಂತ ಸಂಭೋದಿಸಬೇಕು. ಇವೆಲ್ಲವೂ ನೂರಾರು ವರ್ಷಗಳಿಂದ ಬಂದ ಪದ್ದತಿಗಳು. ಇನ್ನೊಂದು ಆಸಕ್ತಿದಾಯಕ ವಾದ ವಿಚಾರ, ಪಾರ್ಲಿರ್ಮೆಂಟ್ ಅಧಿವೇಶದಲ್ಲಿ  ಇದ್ದಾಗ ಪ್ರತಿ ಬುಧುವಾರ ೧೨ ಗಂಟೆಗೆ ಪಿ ಎಮ್ ಕ್ಯು ( PMQ) ಅಂದರೆ ಪ್ರಧಾನ ಮಂತ್ರಿಗಗಳು  ಪ್ರಶ್ನೆ ಗಳಿಗೆ ಉತ್ತರಕೊಡುವುದು. ಇದು ಅನೇಕ ಸಲಿ ಎದುರು ಪಕ್ಷದ ನಾಯಕರಿಗೂ ಮತ್ತು ಪ್ರಧಾನಿಗಳಿಗೂ ಆಗುವ ಸಂಭಾಷಣೆ, ಟೀಕೆ- ಚಕಮಕಿಗಳು ಬಹಳ ಸ್ವಾರಸ್ಯವಾಗಿರುತ್ತೆ.

Mother of all  Parliaments?

ಈ ಪಾರ್ಲಿಮೆಂಟ್ Mother of all  Parliaments  ಎಂದೇ ಪ್ರಸಿದ್ಧವಾಗಿದೆ. ಆದರೆ ಇದು ತಪ್ಪು ಉಲ್ಲೇಖ. ೧೮೬೫ರಲ್ಲಿ ಜಾನ್ ಬ್ರೈಟ್ ಎಂಬ ರಾಜಕಾರಣ ಸುಧಾರಕ ಅಂದದ್ದು:

ಎಮಿಲಿ ಡೇವಿಸನ್ ಅವಳ ಜನಗಣತಿ ಫ಼ಾರ್ಮ್ದಲ್ಲಿ ಆಕೆಯ ವಿಳಾಸ: Found hiding in the crypt of Westminster Hall ಎಂದಿದೆ!

England is the mother of parliaments. (ಇಂಗ್ಲಂಡ್ ಪಾರ್ಲಿಮೆಂಟುಗಳ ತಾಯಿ); ’‘ಈ ಪಾರ್ಲಿಮೆಂಟ” ಅನ್ನಲಿಲ್ಲ!

ಸಫ್ರಜೆಟ್ ಆಂದೋಲನದ (suffragettes) ಫಲಸ್ವರೂಪದಿಂದ ಈ ಫ಼ೆಬ್ರುವರಿ ೬ಕ್ಕೆ ಮಹಿಳೆಯರಿಗೆ ವೋಟಿನ ಹಕ್ಕು ದೊರಕಿ ಸರಿಯಾಗಿ ನೂರು ವರ್ಷಗಳದವು. ಅದಕ್ಕು ಕೆಲವರ್ಷಗಳ ಹಿಂದೆ (೧೯೧೧) ಜನಗಣತಿ ನಡೆಯುವಾಗ ಅದನ್ನು ಪ್ರತಿಭಟಿಸಿ ಎಮಿಲಿ ವೈಲ್ಡಿಂಗ್ ಡೇವಿಸನ್ ಎಂಬ ಮಹಿಳೆ ಪಾರ್ಲಿಮೆಂಟಿನ ತಳಭಾಗದ ಚಪೆಲ್ಲಿ(chapel)ನಲ್ಲಿದ್ದ ಐದೂವರೆ ಅಡಿಯೆತ್ತರದ ಕಪಾಟಿನಲ್ಲಿ ಇಡೀ ರಾತ್ರಿ ಬಚ್ಚಿಟ್ಟುಕೊಂಡಿದ್ದಳು. ಆಕೆಯ ಉದ್ದೇಶ: ಸೆನ್ಸಸ್ ಫಾರ್ಮ್ ನಲ್ಲಿ ತನ್ನ ವಸತಿಯ ಜಾಗ ಯಾವುದು ಅಂದರೆ ’ಪಾರ್ಲಿಮೆಂಟಿನ ಮನೆ’ಯೆಂದು ನೋಂದಣಿ ಮಾಡಿಸಲು!

ನಿಮಗೆ ಗೊತ್ತಿರುವ ಹಾಗೆ ಈ ದೇಶದಲ್ಲಿ ಸಂಪ್ರದಾಯ ಮತ್ತು ಐತಿಹಾಸಕ ಸಂಗತಿಗಳಿಗೆ ತುಂಬಾ ಪ್ರಾಮುಖ್ಯತೆ ಇದೆ. ಈ ಒಂದು ಸಣ್ಣ ದೇಶ ಪ್ರಪಂಚದ ನಾನಾ ಭಾಗಗಳಲ್ಲಿ ತನ್ನ ಆಡಳಿತವನ್ನು ಸ್ಥಾಪನೆ ಮಾಡಿತ್ತು . ಆದರೆ ಹೇಗೆ ಇದನ್ನು ಗಳಿಸಿದರು ಅನ್ನುವುದು ವಿವಾದಾತ್ಮದ ವಿಚಾರ. ಇದನ್ನು ಚರ್ಚಿಸುವ ಅಗತ್ಯ ಇಲ್ಲಿಲ್ಲ. ಆದರೆ ಒಂದು ಶೋಚನೀಯವಾದ ವಿಷಯ – ಶಾಲೆಗಳಲ್ಲಿ ಈಗ  ಚರಿತ್ರೆ ಯನ್ನು ಸರಿಯಾಗಿ ಹೇಳುವುದಿಲ್ಲ ಆದ್ದರಿಂದ ಮಕ್ಕಳಿಗೆ ಈ ದೇಶದ ಅನೇಕ ವಿಚಾರದ ತಿಳುವಳಿಕೆ ಇಲ್ಲ Political Correctness ಕಾರಣ  ಇರಬಹುದೇ  ನನಗೆ ಗೊತ್ತಿಲ್ಲ!

ನೀವೇನಂತೀರಾ ?

ಲೇಖಕರು: ರಾಮಮೂರ್ತಿ, ಬೇಸಿಂಗ್ ಸ್ಟೊಕ್

3 thoughts on “ಬ್ರಿಟನ್ ಪಾರ್ಲಿಮೆಂಟ್ ನ ಇತಿಹಾಸ ಮತ್ತು ಕೆಲವು ಆಸಕ್ತಿದಾಯಕ ಸಂಗತಿಗಳು: ಲೇಖನ– ರಾಮಮೂರ್ತಿ

  1. ಈ ದೇಶದಲ್ಲಿ ಇಷ್ಟು ದಿನ ವಾಸಮಾಡಿ ಜನರ ಜೀವನ, ನಡಾವಳಿಗಳ ಒಳ್ಳೆಯ ಪರಿಚಯ, ಬ್ರಿಟಿಶರ ತಮ್ಮ’ಸಂಸ್ಕಾರ, ಸಂಪ್ರದಾಯಗಳ ಪ್ರೇಮ’ಎಲ್ಲವನ್ನು ಅರಿತ ಲೇಖಕರ ಸುಂದರ ನಿರೂಪಣೆ.ಅಭಿನಂದನೆಗಳು ಮತ್ತು ಧನ್ಯವಾದಗಳು.

    Like

  2. ವಿಶಿಷ್ಟ ವಿಷಯವನ್ನು ಆರಿಸಿಕೊಂಡು ಬರೆದಂತ ಲೇಖನ. ಬಹಳಷ್ಟು ಮಾಹಿತಿ ನೀಡುತ್ತದೆ. ಈ ಲೇಖನವನ್ನು ಓದದಿದ್ದರೆ ಬ್ರಿಟಿಷ್ ಪಾರ್ಲಿಮೆಂಟಿನ ಬಗ್ಗೆ ನನಗೆ ಇದನ್ನೆಲ್ಲ ತಿಳಿಯಲು ಸಾದ್ಯವಿರಲಿಲ್ಲ. ಅಭಿನಂದನೆಗಳು ಮತ್ತು ಧನ್ಯವಾದಗಳು..

    Like

  3. ಸಾಕಷ್ಟು ಸಂಶೋಧನೆ ಮಾಡಿ ಬರೆದಿರುವ ಲೇಖನ .
    ಇಂದಿನ ಜಗತ್ತಿನಲ್ಲಿ ಬ್ರಿಟಿಷ್ ಪಾರ್ಲಿಮೆಂಟಿನ ಪ್ರಾಚೀನ ಸಂಪ್ರದಾಯಗಳಿಗೆ ಏನಾದರೂ ಬೆಲೆ ಉಂಟೆ ?

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.