ಬಾಸ್ವರ್ತ್ ಯುದ್ಧರಂಗ ಎನ್ನುವ ಇಂಗ್ಲೆಂಡಿನ ಪ್ರೇಕ್ಷಣೀಯ ಸ್ಥಳ -ಶ್ರೀವತ್ಸ ದೇಸಾಯಿ

ಒಂದು ರೀತಿಯಿಂದ ಇದು ಇಂಗ್ಲೆಂಡಿನ ದೊರೆ ಮೂರನೆಯ ರಿಚರ್ಡ್ ನ ಇತಿಹಾಸದ ಬಗ್ಗೆ ನಾನು ಬರೆದ ಲೇಖನದ (https://wp.me/p4jn5J-3Sw) ಹಿಂದೆ ಸರಿದ ಭಾಗ! ಅದರಲ್ಲಿ ಆತನ ಮರಣದ ನಂತರದ ಘಟನೆಗಳ ವಿಶ್ಲೇಷಣೆಯಿದ್ದರೆ ಇದರಲ್ಲಿ ಆತ ಸಾವನ್ನಪ್ಪಿದ ಜಾಗದ ಸ್ಥಳಪುರಾಣ ಇದೆ. ಅಲ್ಲಿ ನೋಡುವದೇನು ಇದೆ? ಇದೇ ಪ್ರಶ್ನೆಯನ್ನು ಸ್ಟೇನ್ಸ್ಟಪಕ್ಕದ ರನ್ನಿಮೀಡ್ ಬಗ್ಗೆಯೂ ಕೇಳಬಹುದು. ಅಲ್ಲಿ ಮ್ಯಾಗ್ನಾ ಕಾರ್ಟಾದ ಮೇಲೆ ಸಹಿ ಆಗಿತ್ತು. ಅಲ್ಲಿ ಇತಿಹಾಸವಿದೆ. ಇಂಥ ಐತಿಹಾಸಿಕ ಸ್ಥಳಗಳಲ್ಲೆಲ್ಲ ಅದರ ಹಿಂದಿನ ಐತಿಹಾಸಿಕ ಸಂಗತಿಗಳೇ ರೋಚಕ. ಇತಿಹಾಸ ಎದ್ದು ಬರುತ್ತದೆ; ವ್ಯಕ್ತಿಗಳು, ರಾಜರು ಜೀವ ತಳೆದು ಮಾತಾಡುತ್ತಾರೆ! ಒಂದು ವಿಷಯ: ನಾವು ಲ್ಯಾಂಕಾಸ್ಟರಿನ ಕೆಂಪು ಮತ್ತು ಯಾರ್ಕ್ ಶೈರಿನ ಬಿಳಿ ಗುಲಾಬಿ ಲಾಂಛನಗಳ ಬಗ್ಗೆ ಓದುತ್ತೇವೆ. ಆದರೆ ಅವುಗಳು ಆಗ ಲಾಂಛನವಾಗಿರಲಿಲ್ಲ. ಸೈನಿಕರು ಹೊತ್ತ ಬಿಳಿ ಬ್ಯಾಜಿನ ದಾಖಲೆ ಮಾತ್ರ ಇದೆ. ಶೇಕ್ಸ್ಪಿಯರನ ನಾಟಕದಲ್ಲಿ ಮತ್ತು ನಂತರದ ಹತ್ತೊಂಬತ್ತನೆಯ ಶತಮಾನದ ಬರವಣಿಗೆಗಳಲ್ಲಿ ಈ ಸಂಜ್ಞೆಗಳಿಗೆ ಪ್ರಚಾರ ಬಂದಿತು. -(ತತ್ಕಾಲ ಸಂ!)
king-richard-iii-
ಮೂರನೆಯ ರಿಚರ್ಡ್               ಮೊದಲು ಸ್ವಲ್ಪ ಇತಿಹಾಸ

ಮೇಲಿನ ಮಾತುಗಳ ಅರ್ಥವಾಗಲು ಕೆಲವು ಐತಿಹಾಸಿಕ ವಿಷಯಗಳನ್ನು ಅರಿತುಕೊಳ್ಳಬೇಕಾಗುತ್ತದೆ. ಬಹಳಷ್ಟು ಜನರಿಗೆ ಇಂಗ್ಲೆಂಡಿನ ಎರಡು ಎರಡು ಪ್ರಮುಖ ರಾಜವಂಶ ಪಂಗಡಗಳಾದ ಲ್ಯಾಂಕಾಸ್ಟರ್ ಮನೆತನ (ಲಾಂಛನ ಕೆಂಪು ಗುಲಾಬಿ) ಮತ್ತು ಯಾರ್ಕ್ ಮನೆತನಗಳ (ಬಿಳಿ ಗುಲಾಬಿ) ಮಧ್ಯೆ 30 ವರ್ಷಗಳ ಕಾಲ ನಡೆದ 15 ಯುದ್ಧಗಳ ಬಗ್ಗೆ (”ದ ಬ್ಯಾಟಲ್ ಆಫ್ ದಿ ರೋಸಸ್”) ಗೊತ್ತಿದ್ದರೂ ಅದು ಮುಕ್ತಾಯವಾದ ಬಾಸ್ವರ್ತ್ಎನ್ನುವ ಊರಿನ ಹತ್ತಿರದ ಈ ತಗ್ಗು, ದಿನ್ನೆ ಮತ್ತು ಚೌಗು ಪ್ರದೇಶದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿರಲಿಕ್ಕಿಲ್ಲ. ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಕಾದ ದಾಯಾದಿಗಳಾದ ಕೌರವ ಪಾಂಡವರಂತೆಯೇ ಇಂಗ್ಲೆಂಡಿನ ಕಿರೀಟಕ್ಕಾಗಿ ಹೋರಾಡಿದ ಈ ಎರಡೂ ಮನೆತನಗಳೂ 14 ನೆಯ ಶತಮಾನದಲ್ಲಿ ಆಳಿದ ಮೂರನೆಯ ಎಡ್ವರ್ಡ್ ಪ್ಲಾಂಟಾಂಜನೆಟ್ ದೊರೆಯ ಸಂತತಿಗಳೇ! ಅ ಕರಾಳ ದಿನ ಬೆಳಗಿನ ಸಮಯ (22ನೆಯ ಆಗಸ್ಟ್, 1485) ಬಾಸ್ವರ್ತ್ ಯುದ್ಧದಲ್ಲಿ ಮೂರನೆಯ ರಿಚರ್ಡ್ ಇಂಗ್ಲೆಂಡಿನ ಪಟ್ಟಕ್ಕಾಗಿ ಎದುರಾಳಿಯಾದ (ಮುಂದೆಏಳನೆಯ ಹೆನ್ರಿ ಎಂದು ಕರೆಯಲ್ಪಡಲಿರುವ) ಹೆನ್ರಿ ಟ್ಯೂಡರ್ ನ ದಂಡಿನ ಮೇಲೆ ರಾಜ ಸ್ವತಃ ಏರಿ ಹೋದಾಗ ತಲೆಗೆ ವೈರಿಯ ಹ್ಯಾಲ್ಬರ್ಡ್ (halberd) ಎನ್ನುವ ಭೀಕರ ಶಸ್ತ್ರದ ಪ್ರಹಾರದಿಂದ ಮರಣಹೊಂದಿದ. ಆತನ ಕುದುರೆಯ ಕಾಲುಗಳು ಕೆಸರಿನಲ್ಲಿ ಸಿಕ್ಕಿಕೊಂಡಿದ್ದರಿಂದ ಕೆಳಗಿಳಿಯಬೇಕಾಗಿ ಅಲ್ಲಿಂದಲೆ ಧೈರ್ಯದಿಂದ ಮುನ್ನುಗ್ಗಿದ್ದ ರಿಚರ್ಡ್ ಯುದ್ಧರಂಗದಲ್ಲಿ ಮೃತನಾದ ಇಂಗ್ಲೆಂಡಿನ ಕೊನೆಯ ಅರಸನೂ ಆಗಿದ್ದಾನೆ. ಆತ ಆಳಿದ್ದು ಬರೀ ಹದಿನಾಲ್ಕು ವರ್ಷ ಮಾತ್ರ.

ಬಾಸ್ವರ್ತ್ ಯುದ್ಧರಂಗ

ನೆರಳು ಗಡಿಯಾರ (Sun dial with the crown of Richard III)

ಧರ್ಮಕ್ಷೇತ್ರೇ ಕುರುಕ್ಷೇತ್ರೇ!

ಆಗ ಪ್ರಾಟೆಸ್ಟೆಂಟ್ ಮತ ಹುಟ್ಟಿರಲಿಲ್ಲ. ರಿಚರ್ಡನ ಪೂರ್ವಜರಿಗೆ ಫ್ರಾನ್ಸ್ ದೇಶದ ಸಂಬಂಧವಿತ್ತು ಅಂತ ಆತನೂ ಕ್ಯಾಥಲಿಕ್ ಆಗಿದ್ದ. ಆತ ಮೃತನಾದ ಮೇಲೆ ಆತನ ದೇಹವನ್ನು ಹತ್ತಿರದ ಲೆಸ್ಟರಿನ ಫ್ರಾನ್ಸಿಸ್ಕನ್ ಫ್ರಯರಿ ಚರ್ಚಿನಲ್ಲಿ ಗಡಿಬಿಡಿಯಿಂದ ಮಣ್ಣು ಮಾಡಲಾಗಿತ್ತು. ಅದರ ಗುರುತುಗಳೆಲ್ಲ ಮಾಯವಾಗಿದ್ದವು. ಮುಂದೆ ಆ ಸ್ಥೂಲಕಾಯದ, ಷಟ್ಪತ್ನಿವ್ರತ (!) ಎಂಟನೆಯ ಹೆನ್ರಿ ಪೋಪನನ್ನು ಮಾನ್ಯ ಮಾಡದೆ ಪ್ರಾಟೆಸ್ಟೆಂಟ್ ಆದ. ಆತ ಫ್ರಯರಿಗಳನ್ನು (Friary) ರದ್ದುಗೊಳಿಸಿದ. ಸೋರ್ ನದಿಯಲ್ಲಿ ರಿಚರ್ಡನ ಅಸ್ಥಿಯನ್ನು ಚೆಲ್ಲಲಾಯಿತೆಂದೆಲ್ಲ ವದಂತಿ ಹಬ್ಬಿತ್ತು. ಅದಕ್ಕೆ ಅದನ್ನು ಪತ್ತೆ ಹಚ್ಚಲು ಐದು ಶತಮಾನಗಳೇ ಬೇಕಾಯಿತು. ಆತನ ನಿಷ್ಟ ಅಭಿಮಾನಿಗಳ ಪ್ರಯತ್ನದಿಂದ ಸಂಶೋಧನೆ ಪ್ರಾರಂಭವಾಗಿ ಆ ಚರ್ಚಿನ ಗುರುತು ಹಿಡಿದು ಕಾರ್ ರ್ಪಾರ್ಕಿನಡಿ ಉತ್ಖನನ ಮಾಡಿ ರಿಚರ್ಡನನ್ನು ವಿಜೃಂಭ್ಹಣೆಯಿಂದ ಲೆಸ್ಟರ್ ಕೆಥಿಡ್ರಲ್ನಲ್ಲಿ ಸಮಾಧಿ ಮಾಡಿದ್ದು ಕ್ಯಾಥಲಿಕ್ ಮತದ ಕ್ರಿಶ್ಚಿಯನ್ನರಿಗೆ ಅಸಮಾಧಾನವಾಗಿತ್ತು! 

ಕೊನೆಯುಸಿರೆಳೆದವರೆಷ್ಟು ಜನ?

ಹಾಗೆ ನೋಡಿದರೆ ಒಂದು ಸಾವಿರ ಜನ ಮೃತರಾದರೂ, ಎರಡೂ ಕಡೆ ಸೇರಿ ಪಾಲುಗೊಂಡ 22,000 ಯೋಧರ ಸಂಖ್ಯೆ ಕುರುಕ್ಷೇತ್ರದ ಹದಿನೆಂಟು ಅಕ್ಷೌಹಿಣಿ ಸೈನ್ಯಕ್ಕೆ ಹೋಲಿಸಲಾಗದು. ಅದರಲ್ಲಿ ಎರಡುಸಾವಿರ ಯೋಧರು ಫ್ರಾನ್ಸಿನಿಂದ ಬಂದ ಕೂಲಿ ಸೈನಿಕರು (mercenaries). ಈ ದೇಶದ ಅತ್ಯಂತ ಭೀಕರವಾದ ಯಾದವೀ ಕಾಳಗವೆಂದು ಪ್ರಸಿದ್ಧವಾದ ಐವತ್ತು ಸಾವಿರ ಜನ ಭಾಗವಹಿಸಿದ್ದ ಟೌಟನ್ ಯುದ್ಧಕ್ಕೆ ಸಮ ಇದು ಆಗಿರಲಿಲ್ಲ. ಆದರೂ ಇದು ಈ ದೇಶದ ಇತಿಹಾಸಕ್ಕೆ ಅತ್ಯಂತ ಮಹತ್ವದ ತಿರುವು ಕೊಟ್ಟಿತ್ತು. ರಿಚರ್ಡನ ಪತನದಿಂದ ಇಂಗ್ಲೆಂಡಿನ ದೊರೆಯಾದ ಏಳನೆಯ ಹೆನ್ರಿ ಯಾರ್ಕ್ ಮಹಿಳೆಯನ್ನು ಮದುವೆಯಾಗಿ ಎರಡೂ ಪಂಗಡಗಳನ್ನು ಒಂದುಗೂಡಿಸಿದ. ಆತನ ಲಾಂಛನವೇ ಮುಂದೆ ಬಿಳಿ-ಕೆಂಪು ಎರಡೂ ಬಣ್ಣದ ಹೂಗಳೊಂದಿಗೆ ಟ್ಯೂಡರ್ ರೋಸ್ ಆಯಿತು.

ರಿಚರ್ಡನ ಕೊನೆಯ ಮಾತುಗಳು

ಬಾಸ್ವರ್ತ್ ರಣರಂಗದ ಸುತ್ತಲೂ ನಡೆದಾಡಲು ಅನುಕೂಲವಾಗುವ ಪಥ ಅದೆ. ಅಲ್ಲಲ್ಲಿ ಉತ್ತಮ ಮಾಹಿತಿ ಫಲಕಗಳನ್ನು ನಿರ್ಮಿಸಿದ್ದರಿಂದ 500 ವರ್ಷಗಳ ಹಿಂದಿನ ಇತಿಹಾಸ ಜೀವ ತಳೆದು ಸಮರ ಇದುರಿಗೇ ನಡೆಯುತ್ತಿದೆಯೇನೋ ಅಂತ ರೋಮಾಂಚನವಾಗುತ್ತದೆ. ಕುದುರೆಗಳ ಖುರಪುಟ, ಕತ್ತಿ ಗುರಾಣಿಗಳ ಘರ್ಷಣೆಯ ಖಟ್ – ಖಡಲ್, ಮರಣವನ್ನಪ್ಪುತ್ತಿರುವ, ಗಾಯಗೊಂಡ ಸೈನಿಕರ ಆರ್ತ ನಾದ, ಕಿವಿಯನ್ನು ಗಡಚಿಕ್ಕುತ್ತವೆ. ಇಂಥ ಕಾಳಗಗಳಲ್ಲಿ ಕುದುರೆ ಸವಾರರದೇ ಮೇಲುಗೈಯೆಂದ ಮೇಲೆ ಕುದುರೆಯನ್ನು ಕಳೆದುಕೊಂಡು ಕುದುರೆಯಿಂದ ಕೆಳಕ್ಕುರುಳಿದ ರಿಚರ್ಡ್ ದೊರೆ ’ಒಂದು ಕುದುರೆಗಾಗಿ ಏನನ್ನು (ನನ್ನ ರಾಜ್ಯವನ್ನೂ) ಕೊಡಲಾರೆ” ಅಂದನಂತೆ. ಆತನ ಕಿರೀಟ ಹಾರಿತ್ತು ಎದುರಾಳಿಗಳ ಭರ್ಚಿ-ಕೊಡಲಿ ಕೂಡಿದ ಹ್ಯಾಲ್ಬರ್ಡ್ ಶಸ್ತ್ರದಿಂದ ಭೀಕರ ಹತ್ಯೆಯಾಯಿತು..ಶೇಕ್ಸ್ಪಿಯರನ ನಾಟಕದ ಪ್ರಸಿದ್ಧ ಸಾಲುಗಳ ಪ್ರಕಾರ “A horse, a horse, My kingdom for a horse” ಅಂತ ಕನವರಿಸುತ್ತ ಮಡಿದನಂತೆ

ರಾಜನ ಕೊನೆಯ ನೀರಿನ ಗುಟುಕು?

ಬಾಸ್ವರ್ತ್ ರಣಭೂಮಿಯ ಸುತ್ತಿನ ದಾರಿಯ ಹದಿನೇಳನೆಯ ಮತ್ತು ಕೊನೆಯ ವೀಕ್ಷಣಾ ಸ್ಥಾನದಲ್ಲಿ ಹತ್ತೊಂಬತ್ತನೆ ಶತಮಾನದಲ್ಲಿ ಊರ್ಜಿತವಾದ ಒಂದು ಕಲ್ಲುಗುಡ್ಡೆ (Cairn) ಇದೆ. ಅದು ಅಲ್ಲಿ ಹರಿವ ನೀರಿನ ಸೆಲೆಯ ಮೇಲೆ ಕಟ್ಟಲಾಗಿದೆ ಅನ್ನುತ್ತದೆ ಒಂದು ಫಲಕ. ಅದರ ಪಕ್ಕದಲ್ಲೇ ರಿಚರ್ಡನ ಸೈನ್ಯಯುದ್ಧ ಪೂರ್ವ ’ಡೇರೆ’ ಹಾಕಿತ್ತು. ಅಲ್ಲಿಯೇ ಆತ ಕೊನೆಯ ಬಾರಿ ನೀರು ಕುಡಿದನೆಂದು ಪ್ರತೀತಿ. ಆ ಸ್ಥಳವನ್ನು ಇಂದಿಗೂ ನೋಡಿ ನಿಮ್ಮ ಇತಿಹಾಸ ಪಿಪಾಸೆಯನ್ನು ತಣಿಸಿಕೊಳ್ಳಬಹುದು.

ಕೊನೆಗೂ ವಿಜ್ಞಾನದ ತೀರ್ಪು

ಯುದ್ಧದ ನಾಮೋ ನಿಶಾನೆ ಎಲ್ಲ ಅಳಿಸಿ ಹೋಗಿರುವಾಗ ಈ ಜಾಗದಲ್ಲೇ ಆ ರಣರಂಗವಿತ್ತು ಅಂತ ಹೇಗೆ ಸಾಬೀತು ಮಾಡಲಾಯಿತು? ಅದಕ್ಕೆ ಸಹಾಯ ಬಂದುದು ಆಧುನಿಕ ಕಾರ್ಬನ್ ಡೇಟಿಂಗ್ ವಿಜ್ಞಾನ. ಈ ದೇಶದಲ್ಲಿ ಅತ್ಯಂತ ಹಳೆಯ ಚರ್ಚುಗಳಲ್ಲೂ ಉಳಿದಿರುವ ದಾಖಲೆಗಳು ಇತಿಹಾಸವನ್ನು ಜೋಡಿಸಲು ಬಹಳ ಸಹಾಯ ಮಾಡುತ್ತವೆ. ಹುಟ್ಟು, ಬಾಪ್ಟಿಸಮ್ (ನಾಮಕರಣ), ಮದುವೆ, ಶವಸಂಸ್ಕಾರದ ದಾಖಲೆಗಳನ್ನು ಮುತವರ್ಜಿಯಿಂದ ಕಾದಿಡಲಾಗುತ್ತದೆ. ಪಕ್ಕದ ಡಾಡ್ಲಿಂಗ್ಟನ್ ಚರ್ಚಿನ ಶವಸಂಸ್ಕಾರ ದಾಖಲೆಗಳಿಂದ ಇತಿಹಾಸದ ತುಣುಕುಗಳನ್ನು ಜೋಡಿಸಿದ ಮೇಲೆಯೂ ಉಳಿದಿರಬಹುದಾದ ಸಂಶಯಗಳನ್ನು ನಿವಾರಿಸಲು ಆಧುನಿಕ ವಿಜ್ಞಾನ ಸಹಾಯಕ್ಕೆ ಬಂದಿದೆ. ಶತಮಾನಗಳ ಹಿಂದೆ ಲೆಸ್ಟರಿನ ಮಧ್ಯೆ ನೆಲಸಮವಾಗಿ ಹೂತುಹೋದ ಫ್ರಯರಿ ಚರ್ಚಿನಲ್ಲಿ ಸಿಕ್ಕ ಎಲುಬುಗಳು ರಿಚರ್ಡ್ ದೊರೆಯದೇ ಅಂತ ಹಲ್ಲಿನ ಡಿ ಎನ್ ಏ ಸಾಬೀತು ಮಾಡಿದಂತೆ ಬಾಸ್ವರ್ತ್ ಹತ್ತಿರದ ಆಳದ ಮಣ್ಣಿನ ಪೀಟ್ (peat) ಸ್ಯಾಂಪಲ್ಲುಗಳನ್ನು ಕಾರ್ಬನ್ ಡೇಟಿಂಗ್ ಮಾಡಿ ಪರೀಕ್ಷಿಸಿದ ಅಮೇರಿಕೆಯ ಲ್ಯಾಬೋರಟರಿ ಐದು ನೂರು ವರ್ಷಗಳ ಹಿಂದೆ ಇಲ್ಲಿರುವುದೇ ಜವುಳು ಪ್ರದೇಶ (marshland) ಅಂತ ಖಚಿತಪಡಿಸಿತು. ಅದರಿಂದ ರಣರಂಗದ ಸರಿಯಾದ ಜಾಗ ಇದು ಅಂತ ನಿಶ್ಚಿತವಾಯಿತು.ಇವೆಲ್ಲ ಮಾಹಿತಿ ಪಕ್ಕದಲ್ಲಿರುವ ವಿಸಿಟರ್ ಸೆಂಟರ್ ನಲ್ಲಿರುವ ಉತ್ತಮ ಮ್ಯೂಸಿಯಮ್ ದಲ್ಲಿ ದೊರಕುತ್ತವೆ.

ಕೊನೆಯ ಮಾತು

ಇತಿಹಾಸದಿಂದ ಏನು ಉಪಯೋಗ ಎಂದು ಅನೇಕರ ಅಭಿಪ್ರಾಯವಾದರೂ ಜಾರ್ಜ್ ಸಾಂಟಾಯನ ಹೇಳಿದಂತೆ ಇತಿಹಾಸವನ್ನರಿಯದವರು ಮತ್ತೆ ಮತ್ತೆ ಅವೇ ತಪ್ಪುಗಳನ್ನು ಮಾಡುವ ಶಾಪಗ್ರಸ್ತರಾಗುತ್ತಾರೆ! ಇತಿಹಾಸವನ್ನು ತುಳಿದರೆ ಅದು ನಿನ್ನನ್ನು ನೆಲಸಮಮಾಡುತ್ತದೆ! ಆದರೆ ಮಾನವ ಇತಿಹಾಸದ ತುಂಬೆಲ್ಲ ಈರ್ಷೆ, ದ್ವೇಷಗಳಿಂದ ಯುದ್ಧಗಳಾಗುತ್ತಿರುವಾಗ ಅತ್ಯಂತ ಪುರಾತನ ಉಪನಿಷತ್ತಿನ ವಾಕ್ಯ ’ಮಾ ವಿದ್ವಿಷಾವಹೈ’ (ವೈಮನಸ್ಸು, ದ್ವೇಷ ಬೇಡ) ಯನ್ನು ಯಾರೂ ಕೇಳಿಸಿಕೊಂಡಿಲ್ಲವೇ? ಎಂದೆನಿಸುತ್ತದೆ

ಶ್ರೀವತ್ಸ ದೇಸಾಯಿ.

(ಈ ವಾರದ ಕನ್ನಡಪ್ರಭದಲ್ಲಿಯ ನನ್ನ ಲೇಖನದ ವಿಸ್ತೃತ ಆವೃತ್ತಿ)

ಫೋಟೋಗಳು: ಲೇಖಕರವು; Photo of Peat: CC BY-SA 3.0, https://commons.wikimedia.org/w/index.php?curid=244694

Links: My article: https://wp.me/p4jn5J-3Sw

https://www.bosworthbattlefield.org.uk/

ಬೇಸಿಂಗ್ ಹೌಸ್ ಮುತ್ತಿಗೆ ಪ್ರಕರಣ – ರಾಮಮೂರ್ತಿ, ಬೇಸಿಂಗ್ ಸ್ಟೋಕ್

ಈ ದೇಶದಲ್ಲಿ (ಯುನೈಟೆಡ್ ಕಿಂಗ್ಡಮ್) ನೀವು ಎಲ್ಲೇ ಇರಿ, ನಿಮಗೆ ಹತ್ತಿರದಲ್ಲೇ ಒಂದು ಐತಿಹಾಸಿಕ ಸ್ಥಳ ಇರುವ ಸಾಧ್ಯತೆ ಇರುತ್ತದೆ.  ಅದು ನೂರಾರು ವರ್ಷಗಳ ಹಿಂದೆ ಕಟ್ಟಿದ ಮನೆ ಇರಬಹುದು, ಹೆಸರಾಂತ ಪುರುಷ ಅಥವಾ ಮಹಿಳೆ ಬದುಕಿದ್ದ ಊರು ಇರಬಹುದು ಅಥವಾ ಯುದ್ಧ ನಡೆದ ಸ್ಥಳ ಇರಬಹುದು. ಇವು ಯಾವುವೂ ಇಲ್ಲದಿದ್ದರೆ ನೂರಾರು ವರ್ಷಗಳ ಹಳೆಯ ಆದರೆ ಇನ್ನೂ ಬದುಕಿಕೊಂಡು ಬಂದಿರುವ ಒಂದು ಪಬ್ ಅಂತೂ ಇದ್ದೇ ಇರುತ್ತದೆ!

ಇಲ್ಲಿನ ಅನೇಕ ಸಂಸ್ಥೆಗಳು (ಉದಾ: English Heritage, National Trust) ಇಂಥ ಜಾಗಗಳ ಸಂರಕ್ಷಣೆಯ ಹೊರೆಯನ್ನು ತೆಗೆದುಕೊಂಡಿರುತ್ತಾರೆ. ಅದಲ್ಲದೇ, ನೂರಾರು ವರ್ಷಗಳ ಹಿಂದಿನ ಮೂಲದಾಖಲೆಗಳನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದಿರುವ ಅನೇಕ ಸಂಸ್ಥೆಗಳಿವೆ (ಉದಾ: National Archives, Public Records Office, British Library). ಅಷ್ಟೇ ಅಲ್ಲದೇ ಬಹುಷಃ ಎಲ್ಲ ಚರ್ಚುಗಳೂ ಸಹ ಸ್ಥಳೀಯ ದಾಖಲೆಗಳನ್ನು ಕಾಪಾಡಿಕೊಂಡು ಬಂದಿರುತ್ತವೆ.  

ನಾವಿರುವ ಹತ್ತಿರದ ಊರಿನಲ್ಲಿ, ಕೇವಲ ಎರಡು ಮೈಲಿ ದೂರದಲ್ಲಿ ೧೬ನೇ ಶತಮಾನದ ಬೇಸಿಂಗ್ ಮನೆ (Basing House) ಮತ್ತು ಹತ್ತು ಮೈಲಿ ದೂರದಲ್ಲಿ ಚಾವ್ಟನ್ ವಿಲೇಜ್ (Chawton village)ನಲ್ಲಿ ೧೯ನೇ ಶತಮಾನದಲ್ಲಿದ್ದ ಪ್ರಸಿದ್ಧ ಸಾಹಿತಿ ಜೇನ್ ಆಸ್ಟೆನ್ (Jane Austen) ವಾಸವಾಗಿದ್ದ ಮನೆ ಇದೆ.  ಅಂದ ಹಾಗೆ ಸಮೀಪದಲ್ಲಿ ಡಮ್ಮರ್ ಅನ್ನುವ ಹಳ್ಳಿಯಲ್ಲಿ ೪೦೦ ವರ್ಷಗಳಷ್ಟು ಹಳೆಯ Queen Inn PUB ಇದೆ!

ಬೇಸಿಂಗ್ ಮನೆ

ಈ ಲೇಖನ `ಬೇಸಿಂಗ್ ಹೌಸ್` ಬಗ್ಗೆ. ಸ್ಥಳೀಯ ಚರಿತ್ರೆಯಲ್ಲಿ ಇಲ್ಲಿ ಕ್ರಿ.ಶ. ೧೧೦೦ ನಲ್ಲಿ `ಡಿ ಪೋರ್ಟ್` ಮನೆತನದವರು ೧೫ ಎಕರೆ ಜಾಗದಲ್ಲಿ ಒಂದು ವಿಶಾಲವಾದ ಕೋಟೆಯನ್ನು ಕಟ್ಟಿದ ವಿವರಗಳಿವೆ. ಇವರು ೧೦೬೬ರಲ್ಲಿ ಬಂದ ವಿಲಿಯಂ (William, the Conqueror)ನ ಕಡೆಯವರು. ಕೋಟೆಯ ಸುತ್ತಲೂ ರಕ್ಷಣೆಗಾಗಿ ಅನೇಕ ಗುಂಡಿ ಮತ್ತು ಕಾಲುವೆಗಳನ್ನು ಕಟ್ಟಿದರು. ನಂತರ ಬಂದವನು ವಿಲಿಯಂ ಪ್ಯಾಲೆಟ್. ಈತ ಹೆನ್ರಿ-೮ನ  ಆಸ್ಥಾನದಲ್ಲಿ   ಉನ್ನತ ಹುದ್ದೆಯಲ್ಲಿ ಇದ್ದವನು. ಕಾರ್ಡಿನಲ್ ವುಲ್ಸಿ (Cardinal Woolsey) ಜೊತೆಯಲ್ಲಿ ಕೆಲಸ ಮಾಡಿದ ನಂತರ ಹಣಕಾಸಿನ ಸಚಿವನಾದವನು (ಈಗಿನ Chancellor of the Exchequer ತರಹ). ಕ್ರಿ.ಶ. ೧೫೩೫ರಲ್ಲಿ ಹಳೆಯ ಕೋಟೆಯ ಪಕ್ಕದಲ್ಲಿ ೩೬೫ ಕೊಠಡಿಗಳ ಅರಮನೆಯನ್ನು ಕಟ್ಟಿಸಿದ. ಈ ಮನೆ ಆಗ ರಾಜ್ಯದಲ್ಲೇ ಅತ್ಯಂತ ದೊಡ್ಡ ಮನೆ ಆಗಿತ್ತು. ಅನೇಕ ರಾಜ್ಯವಂಶದ ಮನೆಯವರು ಇಲ್ಲಿಗೆ ಬರುತ್ತಿದ್ದರು. ಹೆನ್ರಿ-೮ ಸಹ ಭೇಟಿ ಕೊಟ್ಟಿದ್ದ. ರಾಣಿ ಎಲಿಝಬೆತ್-೧, ೧೫೬೦, ೧೫೬೯ ಮತ್ತು ೧೬೦೧ ನಲ್ಲಿ ಇಲ್ಲಿ ಬಂದು ಅನೇಕ ದಿನಗಳನ್ನು ಕಳೆದಿದ್ದಳು. ೧೫೫೧ರಲ್ಲಿ ಎಡ್ವರ್ಡ್-೬ ಈತನಿಗೆ Marquess of Winchester ಅನ್ನುವ ಬಿರುದನ್ನು ಕೊಟ್ಟು ಗೌರವಿಸಿದ. 

ಈ ವಂಶದ  ಜಾನ್ ಪೌಲೆಟ್, ಐದನೇಯ Marquess of Winchester, ಕಾಲದಲ್ಲಿ ಈ ಮನೆ ನಾಶವಾಯಿತು. ಇದರ ಕಾರಣ,  English Civil War (೧೬೪೨-೧೬೫೧); ಇದರ ಬಗ್ಗೆ ಇಲ್ಲಿ ಸಂಕ್ಷಿಪ್ತ ವಿವರಣೆ ಸೂಕ್ತ.

ಕ್ಯಾಥೋಲಿಕ್ ಮತ್ತು ಪ್ರಾಟೆಸ್ಟೆಂಟ್ ಪಂಗಡದವರ ಮನಸ್ತಾಪ, ಚಾರ್ಲ್ಸ್-೧ನ ಅತೃಪ್ತಿಕರ ರಾಜ್ಯಭಾರ ಮತ್ತು ಆಡಳಿತ ತನ್ನ ಹಕ್ಕು ಮಾತ್ರ ಎಂಬ ಅಹಂಕಾರ, ಪಾರ್ಲಿಮೆಂಟಿಗೆ  ರಾಜನ  ಆಡಳಿತದ ಅಧಿಕಾರ ಕಡಿಮೆ ಮಾಡುವ ಪ್ರಯತ್ನ, ಪ್ರಜಾಪ್ರಭುತ್ವ ಪಂಗಡದ ಮುಖ್ಯಸ್ಥನಾದ ಆಲಿವರ್ ಕ್ರಾಂವೆಲ್-ಗೆ ಇಂಗ್ಲೆಂಡ್ ದೇಶದಲ್ಲಿ ಪ್ರಾಟೆಸ್ಟಂಟ್ ಜಾತಿ ಮಾತ್ರ ಉಳಿಯಬೇಕೆಂಬ ಉದ್ದೇಶ – ಇವು ಕೆಲವು ಮುಖ್ಯ ಕಾರಣಗಳು.

ವಿಲಿಯಂ ಪೌಲೆಟ್

ಚಾರ್ಲ್ಸ್-೧ ಕ್ಯಾಥೋಲಿಕ್ ಪಂಗಡದವರ ಹಿತೈಷಿ ಮತ್ತು ಈ ಜಾತಿಗೆ ಸೇರಿದ್ದ ಹೆನ್ನಿರೀತ ಮರಿಯ ಮದುವೆ ಆಗಿದ್ದು ಅನೇಕರಿಗೆ ಅಸಮಾಧಾನ ಉಂಟಾಯಿತು. ಕ್ಯಾಥೋಲಿಕ್ ಪಂಗಡದವರ ಮಾದರಿಯ ಚರ್ಚುಗಳಿಗೆ  ಹೆಚ್ಚು ಸ್ವಾತಂತ್ರ ಕೊಡುವ,  ಪಾರ್ಲಿಮೆಂಟಿನ ಅನುಮತಿ ಇಲ್ಲದೇ ಹಣವನ್ನು ತನ್ನ ಯುದ್ಧಗಳಿಗೆ ಬಳಸುವ ಮತ್ತು ಅನೇಕ ಸಲ ಪಾರ್ಲಿಮೆಂಟನ್ನೇ ರದ್ದುಮಾಡಿ ಸರ್ವಾಧಿಕಾರಿಯಾಗಿ ರಾಜ್ಯವನ್ನು ಆಳುವ ಪ್ರಯತ್ನಗಳನ್ನು ಮಾಡಿದ. 

ಪ್ರಾಟೆಸ್ಟಂಟ್ ಪಂಗಡದ ನಾಯಕ ಆಲಿವರ್ ಕ್ರಾಂವೆಲ್  ಪ್ರಜಾಪ್ರಭುತ್ವದ ಮುಂದಾಳಾಗಿ ಚಾರ್ಲ್ಸ್ ಮೇಲೆ ಹೋರಾಟ ಆರಂಭಿಸಿದ. ಆದರೆ ಕ್ಯಾಥೋಲಿಕ್ ಪಂಗಡವರು ರಾಜನ ನೆರವಿಗೆ   ಮುಂದೆ ಬಂದರು. ಹೀಗಾಗಿ ೧೬೪೨ ರಿಂದ ೧೬೫೧ ಈ ದೇಶದಲ್ಲಿ ಅನೇಕ ಕಡೆ ಯುದ್ಧಗಳಾದವು. ಇದಲ್ಲದೆ ಹಲವಾರು ಪ್ರಬಲ ಕ್ಯಾಥೋಲಿಕ್ ಮನೆತನದವರ ಮೇಲೂ ಧಾಳಿ ನಡೆಯಿತು. ಅದರಲ್ಲಿಈ ಬೇಸಿಂಗ್ ಹೌಸ್ ಕೂಡ ಒಂದು. ಇದರ ಮಾಲಿಕ, ಜಾನ್ ಪೌಲೆಟ್, ಕ್ಯಾಥೋಲಿಕ್ ಪಂಗಡಕ್ಕೆ ಸೇರಿದವರು ಮತ್ತು ಚಾರ್ಲ್ಸ್-೧ನ ಹಿತೈಷಿ. 

ಚಾರ್ಲ್ಸ್-೧

ಈ ಮನೆಯ ಮೇಲೆ ಮೊದಲ ಬಾರಿಗೆ ೧೬೪೨ರಲ್ಲಿ, ಕರ್ನಲ್ ನಾರ್ಟನ್-ನ ನೇತೃತ್ವದಲ್ಲಿ ಪ್ರಜಾಪ್ರಭುತ್ವದ ಸೇನೆ ಧಾಳಿ ನಡೆಸಿತು. ಆದರೆ ಚಾರ್ಲ್ಸ್ ತನ್ನ ಸೈನ್ಯದ  ಒಂದು ತುಂಡನ್ನು ಜಾನ್ ಪೌಲೆಟ್ ಸಹಾಯಕ್ಕೆ ಕಳಿಸಿದ್ದರಿಂದ ಧಾಳಿ ಯಶಸ್ವಿ ಆಗಲಿಲ್ಲ. 

೧೬೪೩ ರಲ್ಲಿ ಸರ್ ವಿಲಿಯಂ ವಾಲ್ಲರ್ ೫೦೦ ಸೈನಿಕರು ಮತ್ತು ೫೦೦ ಕುದುರೆಗಳ ಪಡೆಯನ್ನು ತಂದು ಮೂರು ದಿನ ಈ ಮನೆ ಮುತ್ತಿಗೆ ಹಾಕಿ, ಮನೆಯ ಪಕ್ಕದಲ್ಲಿದ್ದ ದೊಡ್ಡ ಕೊಟ್ಟಿಗೆಯನ್ನು ಆಕ್ರಮಿಸಿಕೊಂಡ. ಜಾನ್ ಪೌಲೆಟ್  ಶರಣಾಗತನಾದರೆ ರಕ್ತಪಾತ  ತಪ್ಪಿಸಬಹುದು ಎಂದು ಸಂದೇಶವನ್ನು ಕಳಿಸಿದ.  ಆದರೆ ಇದನ್ನು ನಿರಾಕರಿಸಿ ರಾಜ್ಯವಂಶದ ಬೆಂಬಲಿಗರಿಂದ ಹೋರಾಟ ಮುಂದುವರೆಸಿ  ಮನೆಯ ಮೇಲಿನಿಂದ ಫಿರಂಗಿಗಳನ್ನು ನಿಲ್ಲಿಸಿ ಎದುರಾಳಿಗಳ ಮೇಲೆ ಹಲ್ಲೆ ಮಾಡಿದರು. ಈ ಕದನದಲ್ಲಿ ಪ್ರಜಾಪ್ರಭುತ್ವದ ಕ್ಯಾಪ್ಟನ್ದ ಕ್ಲಿನ್ಸನ್ ಮರಣ ಹೊಂದಿದ. ಇದನ್ನು ತಡೆಯಲಾರದೆ ಮರುಗುಂಪು ಮಾಡುವುದಕ್ಕೆ  ಈ ಸೈನ್ಯ ಹತ್ತಿರದ ಬೇಸಿಂಗ್ ಸ್ಟೋಕ್-ನಲ್ಲಿ ಸೇರಿದರು. ಪದೇ ಪದೇ ಧಾಳಿ ನಡೆಸಿದರೂ  ಬೇಸಿಂಗ್ ಮನೆಯನ್ನು ವಶಪಡೆಯುವುದಕ್ಕೆ ಸಾಧ್ಯವಾಗಲಿಲ್ಲ. 

ಕೊನೆಗೆ, ಮೂರು ವರ್ಷದ ನಂತರ, ಆಲಿವರ್ ಕ್ರಾಂವೆಲ್ ಸ್ವತಃ ತನ್ನ ಸೈನ್ಯದೊಂದಿಗೆ ಬಂದು (೧೪/೧೦/೧೬೪೫ ) ಮನೆಯ ಮುಂದಿನ ಹೆಬ್ಬಾಲಿಗೆ ಫಿರಂಗಿನಿಂದ ಹೊಡೆದು ಓಳಗೆ ನುಗ್ಗಿ ಮನೆಯನ್ನು ಲೂಟಿ ಮಾಡಿದ ನಂತರ ಕರ್ನಲ್ ಡಾಲ್ಬಿರ್ ಈ ಮನೆಗೆ ಬೆಂಕಿ ಹಚ್ಚಿ  ನಾಶ ಮಾಡಿದ.  ಸ್ಥಳೀಯ ಜನರು ಬಂದು ಈ ಮನೆಯನ್ನು ಲೂಟಿ ಮಾಡಿದರೆ ಅಪರಾಧ ಇಲ್ಲ ಅನ್ನುವ ಸಂದೇಶವನ್ನು ಆಲಿವರ್ ಕ್ರಾಂವೆಲ್ ಕೊಟ್ಟ. 

ಆಲಿವರ್ ಕ್ರಾಂವೆಲ್

ಜಾನ್ ಪೌಲೆಟ್ ಶರಣಾಗತನಾದ ಮೇಲೆ ಲಂಡನ್ ಟವರಿನಲ್ಲಿ (London Tower) ಅನೇಕ ವರ್ಷ ಸೆರೆಯಲ್ಲಿದ್ದ. ೧೬೫೮ರಲ್ಲಿ ಆಲಿವರ್ ಕ್ರಾಂವೆಲ್ ಮರಣವಾದ ನಂತರ ಒಳಜಗಳಗಳು ಶುರುವಾಗಿ ರಾಜ್ಯವಂಶದವರನ್ನು ಬಿಟ್ಟು ಪ್ರಜಾಪ್ರಭುತ್ವ ಮಾತ್ರದಿಂದ ರಾಜ್ಯವನ್ನು ಆಳುವುದು  ಸಾಧ್ಯವಾಗಲಿಲ್ಲ. ಈ ಕಾರಣದಿಂದ, ಚಾರ್ಲ್-೧ನ ಮಗ ಸ್ಕಾಟ್ಲೆಂಡಿನಲ್ಲಿ ರಾಜನಾಗಿದ್ದ. ಚಾರ್ಲ್ಸ್-೨ನನ್ನು  ೧೬೬೦ರಲ್ಲಿ ಪಟ್ಟಕ್ಕೆ ತಂದರು. ರಾಜಪ್ರಭುತ್ವ ಪುನಃ ಮರಳಿ ಬಂತು ಮತ್ತು  ಪ್ರಜಾಪ್ರಭುತ್ವದ  ಪ್ರಭಾವವೂ  ಹೆಚ್ಚಾಯಿತು. 

ಈ ಯುದ್ದದ ನಂತರ, ಚಾರ್ಲ್ಸ್ ಮೇಲೆ  ದೇಶದ್ರೋಹಿ ಎಂಬ ಅಪರಾಧಕ್ಕೆ ಮರಣ ದಂಡನೆ ಶಿಕ್ಷೆ ವಿಧಿಸಿ, ಜನವರಿ ೩೦, ೧೬೪೯ರಲ್ಲಿ ಬಹಿರಂಗವಾಗಿ ಈಗಿನ White Hall ನಲ್ಲಿ ಶಿರಚ್ಛೇದನ ಮಾಡಲಾಯಿತು. 

ಚರ್ಲ್ಸ್-೨ನು ಜಾನ್ ಪೌಲೆಟ್ ಮೇಲಿನ ಅಪರಾಧಗಳನ್ನು ರದ್ದು ಮಾಡಿ ಸೆರೆಯಿಂದ ಬಿಡುಗಡೆ  ಮಾಡಿದ.  ಬೇಸಿಂಗ್ ಮನೆಯನ್ನು ವಶ ಮಾಡಿಕೊಂಡ, ಆದರೆ ಈ ನೆಲಸಮವಾದ ಮನೆಯನ್ನು ಪುನಃ ಕಟ್ಟುವ ಆರ್ಥಿಕ ಶಕ್ತಿ ಇರಲಿಲ್ಲ. ಇವನ ಮಗ  ಚಾರ್ಲ್ಸ್ ಹತ್ತಿರದಲ್ಲಿ ಬೇರೆ ಮನೆ  ಕಟ್ಟಿದ. ಈಗ ಉಳಿದಿರುವುದು  ಅಡಿಪಾಯ ಮತ್ತು ಒಂದು ದೊಡ್ಡ ಕೊಟ್ಟಿಗೆ. ಈ ಮನೆಗೆ ಸಂಬಂಧಪಟ್ಟ ವಸ್ತುಸಂಗ್ರಾಲಯ. ಇದರ ಆಡಳಿತ Hampshire Cultural Trust ನೋಡಿಕೊಳ್ಳುತ್ತದೆ. 

(ಚಿತ್ರಗಳು: ವಿವಿಧ ಮೂಲಗಳಿಂದ)