ಬೇಸಿಂಗ್ ಹೌಸ್ ಮುತ್ತಿಗೆ ಪ್ರಕರಣ – ರಾಮಮೂರ್ತಿ, ಬೇಸಿಂಗ್ ಸ್ಟೋಕ್

ಈ ದೇಶದಲ್ಲಿ (ಯುನೈಟೆಡ್ ಕಿಂಗ್ಡಮ್) ನೀವು ಎಲ್ಲೇ ಇರಿ, ನಿಮಗೆ ಹತ್ತಿರದಲ್ಲೇ ಒಂದು ಐತಿಹಾಸಿಕ ಸ್ಥಳ ಇರುವ ಸಾಧ್ಯತೆ ಇರುತ್ತದೆ.  ಅದು ನೂರಾರು ವರ್ಷಗಳ ಹಿಂದೆ ಕಟ್ಟಿದ ಮನೆ ಇರಬಹುದು, ಹೆಸರಾಂತ ಪುರುಷ ಅಥವಾ ಮಹಿಳೆ ಬದುಕಿದ್ದ ಊರು ಇರಬಹುದು ಅಥವಾ ಯುದ್ಧ ನಡೆದ ಸ್ಥಳ ಇರಬಹುದು. ಇವು ಯಾವುವೂ ಇಲ್ಲದಿದ್ದರೆ ನೂರಾರು ವರ್ಷಗಳ ಹಳೆಯ ಆದರೆ ಇನ್ನೂ ಬದುಕಿಕೊಂಡು ಬಂದಿರುವ ಒಂದು ಪಬ್ ಅಂತೂ ಇದ್ದೇ ಇರುತ್ತದೆ!

ಇಲ್ಲಿನ ಅನೇಕ ಸಂಸ್ಥೆಗಳು (ಉದಾ: English Heritage, National Trust) ಇಂಥ ಜಾಗಗಳ ಸಂರಕ್ಷಣೆಯ ಹೊರೆಯನ್ನು ತೆಗೆದುಕೊಂಡಿರುತ್ತಾರೆ. ಅದಲ್ಲದೇ, ನೂರಾರು ವರ್ಷಗಳ ಹಿಂದಿನ ಮೂಲದಾಖಲೆಗಳನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದಿರುವ ಅನೇಕ ಸಂಸ್ಥೆಗಳಿವೆ (ಉದಾ: National Archives, Public Records Office, British Library). ಅಷ್ಟೇ ಅಲ್ಲದೇ ಬಹುಷಃ ಎಲ್ಲ ಚರ್ಚುಗಳೂ ಸಹ ಸ್ಥಳೀಯ ದಾಖಲೆಗಳನ್ನು ಕಾಪಾಡಿಕೊಂಡು ಬಂದಿರುತ್ತವೆ.  

ನಾವಿರುವ ಹತ್ತಿರದ ಊರಿನಲ್ಲಿ, ಕೇವಲ ಎರಡು ಮೈಲಿ ದೂರದಲ್ಲಿ ೧೬ನೇ ಶತಮಾನದ ಬೇಸಿಂಗ್ ಮನೆ (Basing House) ಮತ್ತು ಹತ್ತು ಮೈಲಿ ದೂರದಲ್ಲಿ ಚಾವ್ಟನ್ ವಿಲೇಜ್ (Chawton village)ನಲ್ಲಿ ೧೯ನೇ ಶತಮಾನದಲ್ಲಿದ್ದ ಪ್ರಸಿದ್ಧ ಸಾಹಿತಿ ಜೇನ್ ಆಸ್ಟೆನ್ (Jane Austen) ವಾಸವಾಗಿದ್ದ ಮನೆ ಇದೆ.  ಅಂದ ಹಾಗೆ ಸಮೀಪದಲ್ಲಿ ಡಮ್ಮರ್ ಅನ್ನುವ ಹಳ್ಳಿಯಲ್ಲಿ ೪೦೦ ವರ್ಷಗಳಷ್ಟು ಹಳೆಯ Queen Inn PUB ಇದೆ!

ಬೇಸಿಂಗ್ ಮನೆ

ಈ ಲೇಖನ `ಬೇಸಿಂಗ್ ಹೌಸ್` ಬಗ್ಗೆ. ಸ್ಥಳೀಯ ಚರಿತ್ರೆಯಲ್ಲಿ ಇಲ್ಲಿ ಕ್ರಿ.ಶ. ೧೧೦೦ ನಲ್ಲಿ `ಡಿ ಪೋರ್ಟ್` ಮನೆತನದವರು ೧೫ ಎಕರೆ ಜಾಗದಲ್ಲಿ ಒಂದು ವಿಶಾಲವಾದ ಕೋಟೆಯನ್ನು ಕಟ್ಟಿದ ವಿವರಗಳಿವೆ. ಇವರು ೧೦೬೬ರಲ್ಲಿ ಬಂದ ವಿಲಿಯಂ (William, the Conqueror)ನ ಕಡೆಯವರು. ಕೋಟೆಯ ಸುತ್ತಲೂ ರಕ್ಷಣೆಗಾಗಿ ಅನೇಕ ಗುಂಡಿ ಮತ್ತು ಕಾಲುವೆಗಳನ್ನು ಕಟ್ಟಿದರು. ನಂತರ ಬಂದವನು ವಿಲಿಯಂ ಪ್ಯಾಲೆಟ್. ಈತ ಹೆನ್ರಿ-೮ನ  ಆಸ್ಥಾನದಲ್ಲಿ   ಉನ್ನತ ಹುದ್ದೆಯಲ್ಲಿ ಇದ್ದವನು. ಕಾರ್ಡಿನಲ್ ವುಲ್ಸಿ (Cardinal Woolsey) ಜೊತೆಯಲ್ಲಿ ಕೆಲಸ ಮಾಡಿದ ನಂತರ ಹಣಕಾಸಿನ ಸಚಿವನಾದವನು (ಈಗಿನ Chancellor of the Exchequer ತರಹ). ಕ್ರಿ.ಶ. ೧೫೩೫ರಲ್ಲಿ ಹಳೆಯ ಕೋಟೆಯ ಪಕ್ಕದಲ್ಲಿ ೩೬೫ ಕೊಠಡಿಗಳ ಅರಮನೆಯನ್ನು ಕಟ್ಟಿಸಿದ. ಈ ಮನೆ ಆಗ ರಾಜ್ಯದಲ್ಲೇ ಅತ್ಯಂತ ದೊಡ್ಡ ಮನೆ ಆಗಿತ್ತು. ಅನೇಕ ರಾಜ್ಯವಂಶದ ಮನೆಯವರು ಇಲ್ಲಿಗೆ ಬರುತ್ತಿದ್ದರು. ಹೆನ್ರಿ-೮ ಸಹ ಭೇಟಿ ಕೊಟ್ಟಿದ್ದ. ರಾಣಿ ಎಲಿಝಬೆತ್-೧, ೧೫೬೦, ೧೫೬೯ ಮತ್ತು ೧೬೦೧ ನಲ್ಲಿ ಇಲ್ಲಿ ಬಂದು ಅನೇಕ ದಿನಗಳನ್ನು ಕಳೆದಿದ್ದಳು. ೧೫೫೧ರಲ್ಲಿ ಎಡ್ವರ್ಡ್-೬ ಈತನಿಗೆ Marquess of Winchester ಅನ್ನುವ ಬಿರುದನ್ನು ಕೊಟ್ಟು ಗೌರವಿಸಿದ. 

ಈ ವಂಶದ  ಜಾನ್ ಪೌಲೆಟ್, ಐದನೇಯ Marquess of Winchester, ಕಾಲದಲ್ಲಿ ಈ ಮನೆ ನಾಶವಾಯಿತು. ಇದರ ಕಾರಣ,  English Civil War (೧೬೪೨-೧೬೫೧); ಇದರ ಬಗ್ಗೆ ಇಲ್ಲಿ ಸಂಕ್ಷಿಪ್ತ ವಿವರಣೆ ಸೂಕ್ತ.

ಕ್ಯಾಥೋಲಿಕ್ ಮತ್ತು ಪ್ರಾಟೆಸ್ಟೆಂಟ್ ಪಂಗಡದವರ ಮನಸ್ತಾಪ, ಚಾರ್ಲ್ಸ್-೧ನ ಅತೃಪ್ತಿಕರ ರಾಜ್ಯಭಾರ ಮತ್ತು ಆಡಳಿತ ತನ್ನ ಹಕ್ಕು ಮಾತ್ರ ಎಂಬ ಅಹಂಕಾರ, ಪಾರ್ಲಿಮೆಂಟಿಗೆ  ರಾಜನ  ಆಡಳಿತದ ಅಧಿಕಾರ ಕಡಿಮೆ ಮಾಡುವ ಪ್ರಯತ್ನ, ಪ್ರಜಾಪ್ರಭುತ್ವ ಪಂಗಡದ ಮುಖ್ಯಸ್ಥನಾದ ಆಲಿವರ್ ಕ್ರಾಂವೆಲ್-ಗೆ ಇಂಗ್ಲೆಂಡ್ ದೇಶದಲ್ಲಿ ಪ್ರಾಟೆಸ್ಟಂಟ್ ಜಾತಿ ಮಾತ್ರ ಉಳಿಯಬೇಕೆಂಬ ಉದ್ದೇಶ – ಇವು ಕೆಲವು ಮುಖ್ಯ ಕಾರಣಗಳು.

ವಿಲಿಯಂ ಪೌಲೆಟ್

ಚಾರ್ಲ್ಸ್-೧ ಕ್ಯಾಥೋಲಿಕ್ ಪಂಗಡದವರ ಹಿತೈಷಿ ಮತ್ತು ಈ ಜಾತಿಗೆ ಸೇರಿದ್ದ ಹೆನ್ನಿರೀತ ಮರಿಯ ಮದುವೆ ಆಗಿದ್ದು ಅನೇಕರಿಗೆ ಅಸಮಾಧಾನ ಉಂಟಾಯಿತು. ಕ್ಯಾಥೋಲಿಕ್ ಪಂಗಡದವರ ಮಾದರಿಯ ಚರ್ಚುಗಳಿಗೆ  ಹೆಚ್ಚು ಸ್ವಾತಂತ್ರ ಕೊಡುವ,  ಪಾರ್ಲಿಮೆಂಟಿನ ಅನುಮತಿ ಇಲ್ಲದೇ ಹಣವನ್ನು ತನ್ನ ಯುದ್ಧಗಳಿಗೆ ಬಳಸುವ ಮತ್ತು ಅನೇಕ ಸಲ ಪಾರ್ಲಿಮೆಂಟನ್ನೇ ರದ್ದುಮಾಡಿ ಸರ್ವಾಧಿಕಾರಿಯಾಗಿ ರಾಜ್ಯವನ್ನು ಆಳುವ ಪ್ರಯತ್ನಗಳನ್ನು ಮಾಡಿದ. 

ಪ್ರಾಟೆಸ್ಟಂಟ್ ಪಂಗಡದ ನಾಯಕ ಆಲಿವರ್ ಕ್ರಾಂವೆಲ್  ಪ್ರಜಾಪ್ರಭುತ್ವದ ಮುಂದಾಳಾಗಿ ಚಾರ್ಲ್ಸ್ ಮೇಲೆ ಹೋರಾಟ ಆರಂಭಿಸಿದ. ಆದರೆ ಕ್ಯಾಥೋಲಿಕ್ ಪಂಗಡವರು ರಾಜನ ನೆರವಿಗೆ   ಮುಂದೆ ಬಂದರು. ಹೀಗಾಗಿ ೧೬೪೨ ರಿಂದ ೧೬೫೧ ಈ ದೇಶದಲ್ಲಿ ಅನೇಕ ಕಡೆ ಯುದ್ಧಗಳಾದವು. ಇದಲ್ಲದೆ ಹಲವಾರು ಪ್ರಬಲ ಕ್ಯಾಥೋಲಿಕ್ ಮನೆತನದವರ ಮೇಲೂ ಧಾಳಿ ನಡೆಯಿತು. ಅದರಲ್ಲಿಈ ಬೇಸಿಂಗ್ ಹೌಸ್ ಕೂಡ ಒಂದು. ಇದರ ಮಾಲಿಕ, ಜಾನ್ ಪೌಲೆಟ್, ಕ್ಯಾಥೋಲಿಕ್ ಪಂಗಡಕ್ಕೆ ಸೇರಿದವರು ಮತ್ತು ಚಾರ್ಲ್ಸ್-೧ನ ಹಿತೈಷಿ. 

ಚಾರ್ಲ್ಸ್-೧

ಈ ಮನೆಯ ಮೇಲೆ ಮೊದಲ ಬಾರಿಗೆ ೧೬೪೨ರಲ್ಲಿ, ಕರ್ನಲ್ ನಾರ್ಟನ್-ನ ನೇತೃತ್ವದಲ್ಲಿ ಪ್ರಜಾಪ್ರಭುತ್ವದ ಸೇನೆ ಧಾಳಿ ನಡೆಸಿತು. ಆದರೆ ಚಾರ್ಲ್ಸ್ ತನ್ನ ಸೈನ್ಯದ  ಒಂದು ತುಂಡನ್ನು ಜಾನ್ ಪೌಲೆಟ್ ಸಹಾಯಕ್ಕೆ ಕಳಿಸಿದ್ದರಿಂದ ಧಾಳಿ ಯಶಸ್ವಿ ಆಗಲಿಲ್ಲ. 

೧೬೪೩ ರಲ್ಲಿ ಸರ್ ವಿಲಿಯಂ ವಾಲ್ಲರ್ ೫೦೦ ಸೈನಿಕರು ಮತ್ತು ೫೦೦ ಕುದುರೆಗಳ ಪಡೆಯನ್ನು ತಂದು ಮೂರು ದಿನ ಈ ಮನೆ ಮುತ್ತಿಗೆ ಹಾಕಿ, ಮನೆಯ ಪಕ್ಕದಲ್ಲಿದ್ದ ದೊಡ್ಡ ಕೊಟ್ಟಿಗೆಯನ್ನು ಆಕ್ರಮಿಸಿಕೊಂಡ. ಜಾನ್ ಪೌಲೆಟ್  ಶರಣಾಗತನಾದರೆ ರಕ್ತಪಾತ  ತಪ್ಪಿಸಬಹುದು ಎಂದು ಸಂದೇಶವನ್ನು ಕಳಿಸಿದ.  ಆದರೆ ಇದನ್ನು ನಿರಾಕರಿಸಿ ರಾಜ್ಯವಂಶದ ಬೆಂಬಲಿಗರಿಂದ ಹೋರಾಟ ಮುಂದುವರೆಸಿ  ಮನೆಯ ಮೇಲಿನಿಂದ ಫಿರಂಗಿಗಳನ್ನು ನಿಲ್ಲಿಸಿ ಎದುರಾಳಿಗಳ ಮೇಲೆ ಹಲ್ಲೆ ಮಾಡಿದರು. ಈ ಕದನದಲ್ಲಿ ಪ್ರಜಾಪ್ರಭುತ್ವದ ಕ್ಯಾಪ್ಟನ್ದ ಕ್ಲಿನ್ಸನ್ ಮರಣ ಹೊಂದಿದ. ಇದನ್ನು ತಡೆಯಲಾರದೆ ಮರುಗುಂಪು ಮಾಡುವುದಕ್ಕೆ  ಈ ಸೈನ್ಯ ಹತ್ತಿರದ ಬೇಸಿಂಗ್ ಸ್ಟೋಕ್-ನಲ್ಲಿ ಸೇರಿದರು. ಪದೇ ಪದೇ ಧಾಳಿ ನಡೆಸಿದರೂ  ಬೇಸಿಂಗ್ ಮನೆಯನ್ನು ವಶಪಡೆಯುವುದಕ್ಕೆ ಸಾಧ್ಯವಾಗಲಿಲ್ಲ. 

ಕೊನೆಗೆ, ಮೂರು ವರ್ಷದ ನಂತರ, ಆಲಿವರ್ ಕ್ರಾಂವೆಲ್ ಸ್ವತಃ ತನ್ನ ಸೈನ್ಯದೊಂದಿಗೆ ಬಂದು (೧೪/೧೦/೧೬೪೫ ) ಮನೆಯ ಮುಂದಿನ ಹೆಬ್ಬಾಲಿಗೆ ಫಿರಂಗಿನಿಂದ ಹೊಡೆದು ಓಳಗೆ ನುಗ್ಗಿ ಮನೆಯನ್ನು ಲೂಟಿ ಮಾಡಿದ ನಂತರ ಕರ್ನಲ್ ಡಾಲ್ಬಿರ್ ಈ ಮನೆಗೆ ಬೆಂಕಿ ಹಚ್ಚಿ  ನಾಶ ಮಾಡಿದ.  ಸ್ಥಳೀಯ ಜನರು ಬಂದು ಈ ಮನೆಯನ್ನು ಲೂಟಿ ಮಾಡಿದರೆ ಅಪರಾಧ ಇಲ್ಲ ಅನ್ನುವ ಸಂದೇಶವನ್ನು ಆಲಿವರ್ ಕ್ರಾಂವೆಲ್ ಕೊಟ್ಟ. 

ಆಲಿವರ್ ಕ್ರಾಂವೆಲ್

ಜಾನ್ ಪೌಲೆಟ್ ಶರಣಾಗತನಾದ ಮೇಲೆ ಲಂಡನ್ ಟವರಿನಲ್ಲಿ (London Tower) ಅನೇಕ ವರ್ಷ ಸೆರೆಯಲ್ಲಿದ್ದ. ೧೬೫೮ರಲ್ಲಿ ಆಲಿವರ್ ಕ್ರಾಂವೆಲ್ ಮರಣವಾದ ನಂತರ ಒಳಜಗಳಗಳು ಶುರುವಾಗಿ ರಾಜ್ಯವಂಶದವರನ್ನು ಬಿಟ್ಟು ಪ್ರಜಾಪ್ರಭುತ್ವ ಮಾತ್ರದಿಂದ ರಾಜ್ಯವನ್ನು ಆಳುವುದು  ಸಾಧ್ಯವಾಗಲಿಲ್ಲ. ಈ ಕಾರಣದಿಂದ, ಚಾರ್ಲ್-೧ನ ಮಗ ಸ್ಕಾಟ್ಲೆಂಡಿನಲ್ಲಿ ರಾಜನಾಗಿದ್ದ. ಚಾರ್ಲ್ಸ್-೨ನನ್ನು  ೧೬೬೦ರಲ್ಲಿ ಪಟ್ಟಕ್ಕೆ ತಂದರು. ರಾಜಪ್ರಭುತ್ವ ಪುನಃ ಮರಳಿ ಬಂತು ಮತ್ತು  ಪ್ರಜಾಪ್ರಭುತ್ವದ  ಪ್ರಭಾವವೂ  ಹೆಚ್ಚಾಯಿತು. 

ಈ ಯುದ್ದದ ನಂತರ, ಚಾರ್ಲ್ಸ್ ಮೇಲೆ  ದೇಶದ್ರೋಹಿ ಎಂಬ ಅಪರಾಧಕ್ಕೆ ಮರಣ ದಂಡನೆ ಶಿಕ್ಷೆ ವಿಧಿಸಿ, ಜನವರಿ ೩೦, ೧೬೪೯ರಲ್ಲಿ ಬಹಿರಂಗವಾಗಿ ಈಗಿನ White Hall ನಲ್ಲಿ ಶಿರಚ್ಛೇದನ ಮಾಡಲಾಯಿತು. 

ಚರ್ಲ್ಸ್-೨ನು ಜಾನ್ ಪೌಲೆಟ್ ಮೇಲಿನ ಅಪರಾಧಗಳನ್ನು ರದ್ದು ಮಾಡಿ ಸೆರೆಯಿಂದ ಬಿಡುಗಡೆ  ಮಾಡಿದ.  ಬೇಸಿಂಗ್ ಮನೆಯನ್ನು ವಶ ಮಾಡಿಕೊಂಡ, ಆದರೆ ಈ ನೆಲಸಮವಾದ ಮನೆಯನ್ನು ಪುನಃ ಕಟ್ಟುವ ಆರ್ಥಿಕ ಶಕ್ತಿ ಇರಲಿಲ್ಲ. ಇವನ ಮಗ  ಚಾರ್ಲ್ಸ್ ಹತ್ತಿರದಲ್ಲಿ ಬೇರೆ ಮನೆ  ಕಟ್ಟಿದ. ಈಗ ಉಳಿದಿರುವುದು  ಅಡಿಪಾಯ ಮತ್ತು ಒಂದು ದೊಡ್ಡ ಕೊಟ್ಟಿಗೆ. ಈ ಮನೆಗೆ ಸಂಬಂಧಪಟ್ಟ ವಸ್ತುಸಂಗ್ರಾಲಯ. ಇದರ ಆಡಳಿತ Hampshire Cultural Trust ನೋಡಿಕೊಳ್ಳುತ್ತದೆ. 

(ಚಿತ್ರಗಳು: ವಿವಿಧ ಮೂಲಗಳಿಂದ)

ಊರಿಂದ ಕಾಗದ ಬಂತು

  • ವತ್ಸಲ ರಾಮಮೂರ್ತಿ

ನಾನು ಈ ಸಲ ಬೆಂಗಳೂರಿಗೆ ಹೋದಾಗ ನಮ್ಮ ಫ್ರೆಂಡ್ ಮನೆಗೆ ಹೋಗಿದ್ದೆ. ಇದು ಅವರು ಹೇಳಿದ ಕಥೆ. ಆ ಮಾವಿನ ಕಾಯಿಗೆ ಒಂದಿಷ್ಟು ಉಪ್ಪು ಖಾರ ಹಚ್ಚಿ ಇಟ್ಟಿದ್ದೇನೆ. ಮೆಲ್ಲಿ, ಎಂಜಾಯ್ ಮಾಡಿ, ಚೆನ್ನಾಗಿತ್ತ ಹೇಳಿ.

ಚಳಿಗಾಲದ ದಿನ, ಹೊರಗಡೆ ಬೆಳಿಗ್ಗೆಯಷ್ಟೇ ಬಿದ್ದ ತೆಳ್ಳನೆಯ, ನವಿರಾದ ಹಿಮದ ಪದರದಲ್ಲಾವರಿಸಿದ ಹೊರಾಂಗಣ, ಒಣಗಿ ನಿಂತ ಮರಗಳು ಕಪ್ಪು-ಬಿಳುಪಿನ ಸುಂದರ ಚಿತ್ರದಂತಿತ್ತು. ಹಲವು ಕಾಲ ಮೋಡದ ಹಚ್ಚಡವನ್ನು ಹೊದ್ದು ಬಿದ್ದಿದ್ದ ಸೂರಜ್ ಕುಮಾರ್ ಈ ಮನೋಹರ ದೃಶ್ಯವನ್ನು ವೀಕ್ಷಿಸಲೆಂದೇ ಹಣಕಿ ಹಾಕಿದ್ದ. ಆತ ತಂದ ಹೊಂಬಿಸಿಲನ್ನು ಆಸ್ವಾದಿಸುತ್ತ ನಾನು ಕಿಟಕಿಯ ಪಕ್ಕದ ಆರಾಮಾಸನದಲ್ಲಿ ಒರಗಿ ತೂಕಡಿಸುತ್ತಿದ್ದೆ. ಬಾಗಿಲ ಬಳಿ ಟಪ್ ಎಂದು ಟಪಾಲು ಬಿದ್ದ ಸದ್ದಾಯಿತು. ಕುತೂಹಲ ತಾಳಲಾರದೇ ಹೋಗಿ ನೋಡಿದರೆ, ಇಂಡಿಯಾದಿಂದ ಬಂದ ಪತ್ರ! ಅದರಲ್ಲೂ ನನ್ನ ಪ್ರಿಯ ತಂಗಿಯ ಕೈಬರಹದಲ್ಲಿರುವ ಅಡ್ರೆಸ್!! ತೆಗೆದರೆ, ೬ ಪೇಜುಗಳ ಕಾಗದ. ಏನಪ್ಪಾ! ಅಂಥ ಮಹತ್ವದ್ದು, ಇಷ್ಟೂದ್ದದ್ದು ಎಂದು ಓದ ತೊಡಗಿದೆ. 

ಮಾತೃಶ್ರೀ ಸಮನಾಳದ ಅಕ್ಕನಿಗೆ ನಿನ್ನ ತಂಗಿಯಾದ ಗುಂಡಮ್ಮ ಮಾಡುವ ನಮಸ್ಕಾರಗಳು. ಉllಕುllಶಲೋಪರಿ ಸಾಂಪ್ರತ (ಪರವಾಗಿಲ್ವೇ, ಗೌರವಯುತವಾಗಿ ಬರೆದಿದ್ದಾಳೆ). ನಾವೆಲ್ಲ ಇಲ್ಲಿ ತಿಂದು, ಉಂಡು, ಹರಟೆ ಹೊಡೆದು, ಸಿನಿಮಾ ನೋಡಿಕೊಂಡು ಚೆನ್ನಾಗಿದ್ದೇವೆ (ನನಗೆ ಹೊಟ್ಟೆ ಉರಿ, ಈ ಚಳಿ ದೇಶದಲ್ಲಿ ಯಾವ ಕನ್ನಡ ಸಿನಿಮಾ ಬರುತ್ತೆಂತ). 

ಮುಖ್ಯ ವಿಷಯವೆಂದರೆ, ನಾನು, ನನ್ನೆಜಮಾನರು ವಿದೇಶ ಪ್ರವಾಸ ಮಾಡೋದಂತ ನಿಶ್ಚಯಿಸಿದ್ದೇವೆ. ನಿನಗೆ ಗೊತ್ತಿರುವ ಹಾಗೆ ನನ್ನ ಗಂಡನಿಗೆ ಪಿಂಚಣಿ ದೊರಕಿದೆ. ನೀನೇ  ಎಷ್ಟೋ ಸಲ “ಬಾರೆ, ನಮ್ಮೂರಿಗೆ, ಬೇಕಾದರೆ ಟಿಕೆಟ್ ಕಳಿಸ್ತೇನೆ” ಅಂತ ಕರೀತ್ಲೇ ಇರ್ತೀಯ. ನಾನೇ, “ಬೇಡ ಕಣೇ, ನಾವಿಬ್ಬರೂ ಬಹಳ ಮಡಿ, ಆಚಾರವಂತರು, ಸರಿ ಹೋಗಲ್ಲ” ಅಂತ ದೂಡಿದ್ದೇನೆ. ನೀನು, “ಪರವಾಗಿಲ್ಲ, ನಾನು ನೋಡ್ಕೋತೀನಿ” ಅಂತ ಧೈರ್ಯ ಕೊಟ್ಟಿದೀಯ. ನಮ್ಮ ಮಠದವರು ಮುದ್ರೆ ಒತ್ತಿ, ಪಂಚಗವ್ಯ ಕುಡಿಸಿ, “ದೇವರು ಕ್ಷಮಿಸುತ್ತಾನೆ, ಪರಂಗಿ ದೇಶ ಪ್ರವಾಸ ಮಾಡಿದ್ದಕ್ಕೆ” ಅಂತ ಅಭಯ ನೀಡಿದ್ದಾರೆ. ಈಗ ಹೊರಟಿದ್ದೇವೆ. ಟಿಕೆಟ್ಟಿಗೆ ೨ ಲಕ್ಷ ಆಗುತ್ತೆ. ನೀನೇ ಮಾಡಿಸಿ ಕಳಿಸಿಬಿಡು, ರಾಹು ಕಾಲದಲ್ಲಿ ಮಾತ್ರ ಟಿಕೆಟ್ ತೊಗೋಬೇಡ (ಗ್ರಹಚಾರ, ನನಗೇನು ಗೊತ್ತು, ರಾಹು ಕಾಲ ಯಾವಾಗ ಅಂತ). ನಾನು ಇಳಕಲ್ ಸೀರೆ ಕಚ್ಚೆ ಉಟ್ಟು,  ಗುಂಡಗೆ ಕುಂಕುಮ ಹಚ್ಚಿ, ಎಣ್ಣೆ ತೀಡಿ ತಲೆ ಬಾಚಿ, ಹೂವ ಮುಡಿದಿರುತ್ತೇನೆ. ಪ್ರತಿದಿನ ನನಗೆ ಮಲ್ಲಿಗೆ ಹೂವ ಬೇಕು, ತೆಗೆದಿಟ್ಟಿರು. ಬಾವನವರಿಗೆ ಗಂಧ ತೇಯ್ದು ಮುದ್ರೆ ಹಾಕಿಕೊಳ್ಳಲು ರೆಡಿ ಮಾಡಿಟ್ಟಿರು. ನಿಮ್ಮೂರಲ್ಲಿ ವಿಪರೀತ ಚಳಿ, ನಮ್ಮ ರೂಮು ಬಿಸಿಯಾಗಿರಬೇಕು. ನಮಗೆಂತ ೬ ಜೊತೆ ಕಾಲು ಚೀಲ, ಟೋಪಿ ಮತ್ತು ಮಫ್ಲರ್ ಇಟ್ಟಿರು. 

ನಮ್ಮ ದಿನಚರಿ ಹೀಗಿರುತ್ತೆ: ಬೆಳಗ್ಗೆ ೫ ಗಂಟೆಗೆ ಸುಪ್ರಭಾತ. ಸ್ನಾನಕ್ಕೆ ಬಿಸಿ ಬಿಸಿ ನೀರು ರೆಡಿ ಇರಲಿ. ಆಮೇಲೆ ಜೋರಾಗಿ ವಿಷ್ಣು ಸಹಸ್ರನಾಮ ಪಠನ (ದೇವರೇ ಗತಿ, ಪಕ್ಕದ ಮನೆ ಪೀಟರ್ ಏನೆಂದಾನು). ೬:೩೦ಕ್ಕೆ ಬೆಳಗಿನ ತಿಂಡಿ. ಉಪ್ಪಿಟ್ಟು, ದೋಸೆ, ಗೊಜ್ಜವಲಕ್ಕಿ, ಅಕ್ಕಿ ರೊಟ್ಟಿ-ಮಾವಿನಕಾಯಿ ಚಟ್ನಿ ಏನಾದರೂ  ಮಡಿಯಲ್ಲಿ ಮಾಡಿಟ್ಟಿರು. ಫಿಲ್ಟರ್ ಕಾಫಿ ಮರೀಬೇಡ. ೧೦:೩೦ಕ್ಕೆ ಒಂದು ರವೇ ಉಂಡೆ, ಒಂದು ಗ್ಲಾಸ್ ಬಾದಾಮಿ ಹಾಲು ಸಾಕು. ೧:೩೦ಕ್ಕೆ ಊಟ. ಈರುಳ್ಳಿ-ಗೀರುಳ್ಳಿ, ಕ್ಯಾರೆಟ್, ಬೀಟ್ ರೂಟ್ ಮಡಿಗೆ ಆಗಲ್ಲ. ಹುಳಿಗೆ ಪಡವಲ ಕಾಯಿ, ಗೋರಿಕಾಯಿ, ಸುವರ್ಣ ಗಡ್ಡೆ ಆದೀತು. ಖಾರವಾಗೇ ಇರಲಿ. ಜೊತೆಗೆ ಸಂಡಿಗೆ ಕರಿದು ಬಿಡು. ಚಟ್ನಿಪುಡಿ, ಮಾವಿನಕಾಯಿ ಮಿಡಿ ಉಪ್ಪಿನಕಾಯಿ, ಗೊಜ್ಜು ಎಲ್ಲ ಇಟ್ಟಿರು. ಬೆಣ್ಣೆ ಕಾಸಿದ ತುಪ್ಪ ಅವಶ್ಯ. ಊಟವಾದ ಮೇಲೆ ಮಲಗಲು ಚಾಪೆ, ದಿಂಬು ಸಾಕು. ಎದ್ದ ಮೇಲೆ, ಬಿಸಿ ಕಾಫಿ, ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು, ಕೊಬ್ರಿ ಮಿಠಾಯಿ ಬಯೋ ಆಡ್ಸೋಕಿದ್ರೆ ಒಳ್ಳೇದು. ರಾತ್ರಿ ಊಟ ಸಿಂಪಲ್ಲಾಗೇ  ಇರಬೇಕು. ಅನ್ನ-ಸಾರು, ತೊವ್ವೆ, ಚಪಾತಿ, ಮೊಸರು. ಮಲಗೋಕ್ಮುಂಚೆ ಒಂದ್ಲೋಟ ಹಾಲು. ಇನ್ನೇನೂ ಬೇಡ ಕಣೆ, ನಿನಗೆ ತೊಂದ್ರೆ ಆಗ್ಬಿಡತ್ತೆ. ಆಮೇಲೆ ಊರು ತೋರಿಸ್ಬೇಕು. ರಾಣಿ ಅರಮನೇ, ಒಡವೆ ಎಲ್ಲಾನೂ ಬೆಚ್ಚಗಿನ ಕಾರಲ್ಲಿ ಕರಕೊಂಡು ಹೋಗೇ ಅಕ್ಕಮ್ಮ.

ಇನ್ನ ೩ ಪೇಜ್ ಇದೇರಿ. ಬರೀ  ಊಟ ತಿಂಡಿಗೇ ಈ ಪಾಟಿ ಗಲಾಟೆ ಮಾಡಿದ್ದಾಳಲ್ಲ! ನಮ್ದೋ ಸೆಮಿ ಡಿಟ್ಯಾಚ್ಡ್ ಮನೆ; ದೇವರ ಮನೆಯಿಲ್ಲ, ತುಳಸಿ ಗಿಡವಿಲ್ಲ. ಏನಂತಾಳೋ, ಯಾರಿಗ್ಗೊತ್ತು? ಅದಕ್ಕೆ ಒಂದು ಪಿಲಾನು ಮಾಡಿದೆ. ತಕ್ಷಣವೇ, ಉತ್ತರ  ಬರೆಯಲು ಕುಳಿತೆ. 

ಪ್ರೀತಿಯ ತಂಗಚ್ಚಿಯಾದ ಗುಂಡು ಬಾಯಿಗೆ, ನಿನ್ನ ಅಕ್ಕ ಮಾಡುವ ಅನಂತ ಆಶೀರ್ವಾದಗಳು. ನೀನು ಬರುತ್ತಿ ಅಂತ ತಿಳಿದು, ವಿಪರೀತ ಸಂತೋಷವಾಗಿ ಕುಣಿದುಬಿಟ್ಟೆ. ನಮ್ಮ ಮನೆಗೆ ಖಂಡಿತ ಬಾರೆ. ಭಾವನವರನ್ನು ಕರೆದು ತಾರೆ. ನಮ್ಮ ಕುಟೀರ ನಿಮಗೆ ಇಷ್ಟವಾಗಬಹುದೆಂದು ಆಶಿಸುವೆ. ನಾವಿರುವುದು ಸೆಮಿ ಡಿಟ್ಯಾಚ್ಡ್ ಮನೆ, ಅಂದರೆ ಒಂದಕ್ಕೆ ಒಂದು ಅಂಟಿಕೊಂಡಿರುವ ಎರಡು ಮನೆಗಳಲ್ಲಿ ಒಂದು. ಪಕ್ಕದ ಮನೆಯಲ್ಲಿರುವವರು ಇಂಗ್ಲೀಷ್ ಜನ. ಅವರಿಗೆ ಕನ್ನಡ ಬರಲ್ಲ. ನೀನು ಬೆಳ್ಳಂಬೆಳಗ್ಗೆ ವಿಷ್ಣು ಸಹಸ್ರನಾಮ ಪಠಿಸಿದರೆ, ಪೋಲೀಸಿಗೆ ಕಂಪ್ಲೇಂಟ್ ಕೊಟ್ಟಾರು. ಒಳ್ಳೇ ಚಳಿಗಾಲದಲ್ಲಿ ಬರಬೇಕು ಅಂತೀಯ. ಇಲ್ಲಿ ಈಗ ಕಿಟಕಿ ಮೇಲೆಲ್ಲಾ ಮಂಜು ಮುಸುಕಿದೆ. ಗಡಗಡ ನಡುಗಿಸುವ ಅಸಾಧ್ಯ ಚಳಿ ಕಣೆ. ಹಲ್ಲು ಕಟಕಟಗುಟ್ಟುತ್ತೆ. ನಿನ್ನ ಕಚ್ಚೆ ಸೀರೆ ನಡಿಯಲ್ಲ. Trousers, leggings, sweaters ಅತ್ಯವಶ್ಯ. ಕಾಲಿಗೆ ದೊಡ್ಡ ಬೂಟು ಹಾಕಬೇಕು. ಮನೆ ಹೊರಗೆ ಕಾಲಿಟ್ಟಾಗ, ಮಂಜಿನ ಮೇಲೆ ಕಾಲು ಜಾರಿ ಬಿದ್ದು, ನಿನ್ನ, ಭಾವನವರ ಸೊಂಟ, ಮಂಡಿ ಮೂಳೆ ಮುರಿದ್ರೇನು ಮಾಡೋದು? ಆಸ್ಪತ್ರೇಲಿ ಮ್ಲೇಚ್ಛರ ಮಧ್ಯ ಬಿದ್ಕೊಂಡು ಸೂಪು, ಬ್ರೆಡ್ಡು ತಿನ್ಬೇಕಷ್ಟೇ; ಮೇಲಿಂದ ಚೀಸ್ ಉದುರಿಸಿ ಕೊಟ್ಟೇನು. ಮನೆಯಲ್ಲಿ ಟಿ.ವಿ ಬಿಟ್ಟರೆ ಇನ್ನೇನಿಲ್ಲ. ಅದರಲ್ಲೂ ಕನ್ನಡ ಬರಲ್ಲ; ಹತ್ರದಲ್ಲೆಲ್ಲೂ ಕನ್ನಡ ಸಿನಿಮಾ ಬರಲ್ಲ ಕಣೇ. ಪಕ್ಕದ ಮಾನೆಯವರ್ಯಾರೂ ಹರಟೆ ಕೊಚ್ಕೋಕೆ ಬರಲ್ಲ ಕಣೇ, ಅವಕ್ಕೆ ಕನ್ನಡ ಬಂದ್ರೆ ತಾನೇ? ಆದ್ರೂನೆ, ನೀನು ಅಪರೂಪಕ್ಕೆ ಬರೋದು ಅಪಾರ ಸಂತೋಷ ಕಣೆ. ಖಂಡಿತ ಬಾರೆ. ಎಲ್ಲ ರೆಡಿ ಮಾಡಿಟ್ಟಿರ್ತೇನೆ. ಇತಿ ನಿನ್ನ ಪ್ರೀತಿಯ ಅಕ್ಕ, ವೆಂಕೂಬಾಯಿ 

ಈ ಪತ್ರಕ್ಕಿನ್ನೂ ಗುಂಡಮ್ಮನ ಉತ್ತರ ಬಂದಿಲ್ಲ. ಹ್ಹ, ಹ್ಹ, ಹ್ಹ ! ಹೇಗಿದೆ ನನ್ನ ಪಿಲ್ಯಾನು?