ಹೀಗೊಂದು (ಹಾಳು) ಹರಟೆ

ನಮಸ್ಕಾರ ಅನಿವಾಸಿ ಬಂಧುಗಳಿಗೆ. ತಮಗೆಲ್ಲ  ಅಕ್ಷಯತೃತೀಯಾ ಹಾಗೂ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು.
‘ಭಕ್ತಿ ಇಲ್ಲದ ಬಡವನು ನಾನಯ್ಯ
ಕಕ್ಕಯ್ಯನ ಮನೆಯಲೂ ಬೇಡಿದೆ,
ದಾಸಯ್ಯನ ಮನೆಯಲೂ ಬೇಡಿದೆ,
ಚೆನ್ನಯ್ಯನ ಮನೆಯಲೂ ಬೇಡಿದೆ,
ಎಲ್ಲ ಪುರಾತನರು ನೆರೆದು
ಭಕ್ತಿ ಭಿಕ್ಷವನಿಕ್ಕಿದರೆ ಎನ್ನ ಪಾತ್ರೆ ತುಂಬಿತ್ತು
ಕೂಡಲ ಸಂಗಮದೇವಾ’.
ವಚನದಲ್ಲಿ ನಾಮಾಮೃತ ತುಂಬಿದ ಬಸವಣ್ಣನವರನ್ನು ತುಂಬು ಮನದಿಂದ ನೆನೆಯೋಣ. ಲೋಕದ ಡೊಂಕ ತಿದ್ದುವ ಉಸಾಬರಿ ಬಿಟ್ಟು ನಮ್ಮ ನಮ್ಮ ತನುವ- ಮನವ ಸಂತೈಸಿಕೊಂಡು , ಇವನಾರವ ಎನ್ನದೇ ಇವ ನಮ್ಮವ ಎಂದು ಜಗವನಪ್ಪಿಕೊಂಡು ಜಗದೀಶನಿಗೆ ಪ್ರಿಯರಾಗೋಣ. ಏನಂತೀರಿ?
ಇಂದಿನ ಓದಿಗಾಗಿ ಹಳೆಯ ಹರಟೆಯೊಂದನ್ನು ನಾನು ಹಂಚಿಕೊಳ್ಳುತ್ತಿರುವೆ. ಓದಿ ನಿಮ್ಮ ಅನಿಸಿಕೆಗಳನ್ನು ನೀವು ಹಂಚಿಕೊಳ್ಳಿ.

~ ಸಂಪಾದಕಿ

ಆಕಳಿಕೆ – ತೂಕಡಿಕೆ

‘ಸಮಯಾ ಸಮಯವುಂಟೇ ಭಕ್ತವತ್ಸಲ ನಿನಗೆ’ಅಂತ ಕನಕದಾಸರು ಹಾಡಿದ್ಹಂಗ ಈ ಆಕಳಿಕಿಗೆ ಸಮಯಾಸಮಯ ಅಂತ ಏನೂ ಇಲ್ಲ...ಕಾರ್ಯಕಾರಣ ಸಂಬಂಧವೂ ಇಲ್ಲ.ಎಲ್ಲೆ ಬೇಕಾದರೂ ಯಾವಾಗ ಬೇಕಾದ್ರೂ ಬಂದಬಿಡತಾವ;ಮಾನ ಕಳೆದುಬಿಡತಾವ.ಯಾವುದರೇ ಕಾರ್ಯಕ್ರಮದಾಗ ಭಾಷಣಕಾರರು ಗಂಭೀರವಾಗಿ ವಿಷಯ ಮಂಡಸೂ ಮುಂದ ಮುಂದಿನ ಸೀಟಿನಾಗ ವಕ್ಕರಿಸಿದ ನೀವು  ‘ಆsss’ಅಂತ ಆಕಳಿಸಿ ಬಾಯಾಗs ವಿಶ್ವರೂಪ ತೋರಿಸಿದ್ರ ಎದುರಿಗಿನವರು ಕಕ್ಕಾಬಿಕ್ಕಿ ಆಗಿಬಿಡತಾರರೀ..ಕ್ಲಾಸ್ ರೂಮ್ ನಾಗ ಟೀಚರ್ ಏನೋ ಗಹನವಾದ ವಿಷಯವನ್ನು ನಿಮ್ಮ ತಲೆಬುರುಡಿನಾಗ ತುಂಬಲಿಕ್ಕೆ ಅಂತ ಹರಸಾಹಸ ಮಾಡಕೋತ ಹೆಣಗಾಡತಿರಬೇಕಾದ್ರ ನೀವು’ಆsss’ ಅಂತ ಆಕಳಿಸಿದ್ರ ಅವರ ಸಿಟ್ಟು ನೆತ್ತಿಗೇರಿ ನಿಮ್ಮನ್ನು ಸ್ಟ್ಯಾಂಡ್ ಅಪ್ ಆನ್ ದ ಬೆಂಚೋ ಇಲ್ಲ ಗೆಟ್ ಔಟ್‌ ಫ್ರಾಮ್ ಮೈಕ್ಲಾಸೋ ಖಂಡಿತ ಮಾಡಿಬಿಡತಾರರೀ. ಇನ್ನ ಕೆಲವೊಮ್ಮೆ ವಯಸ್ಸಾದ ಹಿರಿಯರು ನೀವು ಮಾತಿಗೆ ಸಿಕ್ಕದ್ದೇ ತಡ ತಮ್ಮ ಪುರಾನಾ ಜಮಾನಾದ ಪುರಾಣದ ಕಂತಿ ಬಿಚ್ಚಿದ್ರು ಅಂದ್ರ...ನಿಮ್ಮೂ ಶುರುವಾಗತಾವ ಆಕಳಿಕಿ ಸಾಲಾಗಿ.ಆದ್ರ ಪಾಪ! ಕೆಲವೊಬ್ಬರಂತೂ ಅವನ್ನ ಸಂಪೂಣ೯ ದಿವ್ಯನಿಲ೯ಕ್ಷ್ಯ ಮಾಡಿ ತಮ್ಮ ಕಥಿ ಹಂಗೇ ಮುಂದುವರೆಸಿರತಾರ ಅನ್ರಿ..ನೀವೋ ಆಕಳಿಸಿ ಆಕಳಿಸಿ ಬಾಯಿನೋವು ಬಂದು ಕಣ್ಣೀರು ಕಪಾಳಕ್ಕ ಹರಿಸಿ ದಣಿಯುತ್ತೀರಿ.ಮತ್ತ ಯಾವಾಗರೇ ಯಾರದರೇ  ಪರಿಚಿತರ ಮನಿಗೆ ಹೋಗಿರತೀರಿ ಅಂತಿಟ್ಟುಕೋರಿ.ಅವರ ಮನ್ಯಾಗ ಆಗಷ್ಟೇ  ಮಗಂದೋ ,ಮಗಳದೋ ಮದುವಿ ಆಗಿರತದ..ಮದುವಿ ಫರಾಳ ತಿನ್ನಲಿಕ್ಕೆ ಕೊಡದಿದ್ದರೂ ಸರಿ ಮದುವಿ ಆಲ್ಬಂ- ವಿಡಿಯೋ ತಪ್ಪಲಾರದ ತೋರಸತಾರ.ಆ ಹುಡುಗನೋ ಹುಡುಗಿನೋ ಬಿಟ್ರ ನಿಮಗ ಯಾರೂ ಗೊತ್ತಿರಂಗಿಲ್ಲ..ಆದ್ರೂ ಮೂರಮೂರ ತಾಸು ಕೂತ ಅದನ್ನ ನೋಡ ಅಂದ್ರ ಆಕಳಿಕಿ ಬರದ s ಬಿಟ್ಟಾವ?!
ಹೀಂಗ ಆಕಳಿಸೋದು ಸಭ್ಯತೆ ಅಲ್ಲ ಅಂತ ನಾನೂ ಒಪ್ಪಗೋತಿನಿ.ಆದ್ರ ಅವುಗಳ ನಿಯಂತ್ರಣ ನಮ್ಮಕೈಯಾಗ ಇಲ್ಲ ಅಲ್ರೀ.ತಮ್ಮ ಮನಸ ಬಂದಾಗ ಹಿಂದಮುಂದ ಏನೂ ಸೂಚನೆ ಕೊಡದ ಧಬಕ್ ಅಂತ ಬಂದಿಳಿಯೋ ಅತಿಥಿಗಳಗತೆ ನುಗ್ಗಿ ಬಂದ್ರ ಅದರಾಗ ನಮ್ಮ ತಪ್ಪೇನದ ಅಲ್ಲೇನ್ರಿ? ಇದೆಲ್ಲ ಎಲ್ಲಾರಿಗೂ ಗೊತ್ತಿದ್ರೂ ನಾವು ಮಾತಾಡೂಮುಂದ ಎದುರಿಗಿನವರು ಆಕಳಿಸಿದ್ರ ನಮ್ಮ ಕಣ್ಣು ಕೆಂಪಾಗೋದಂತೂ ಗ್ಯಾರಂಟಿ .ಎಷ್ಟೋ ಸಲ ನಾನೇ ನನ್ನ ಮಕ್ಕಳಿಗೆ ಬಯ್ಯತಿರತೀನಿ...’ನಾನಿಲ್ಲೆ ಗಂಟಲ ಒಣಗಿಸಿಕೊಂಡು ,ತಲಿ ಕೆಡಿಸಿಕೊಂಡು ಇಷ್ಟ ಸೀರಿಯಸ್ಸಾಗಿ ಏನೋ ಹೇಳಲಿಕ್ಹತ್ತೀನಿ..ನೀವು ಆಕಳಿಸಕೋತ ಹೆಂಗ ಕೂತೀರಿ ನೋಡ್ರಿ ನಿಲ೯ಜ್ಜರ ಹಂಗ ‘ಅಂತ.
ಕಳೆದ ಸಲ ವಲ್ಡ್೯ ಕಪ್ ಮ್ಯಾಚ್ ನಡದಾಗ ಪಾಕಿಸ್ತಾನದ ಕ್ರಿಕೆಟ್ ಟೀಮಿನ ಕಪ್ತಾನ್ ಸರಫರಾಜ್ ಆಕಳಿಸಕೋತ ಕೂತಿದ್ದು ಒಂದು ಬ್ರೇಕಿಂಗ್ ನ್ಯೂಸೇ ಆಗಿಬಿಟ್ಟಿತ್ತಲಾ....ಪಾಪ! ಅವರೂ ಮನಷಾರೇ.ಇಷ್ಟೆಲ್ಲಾ ಹಗಲೂ ರಾತ್ರಿ ಪ್ರಾಕ್ಟೀಸ್ ಮಾಡಿ ಆಡೂಮುಂದಾಗ ಸೋಲೂ ಹಂತದಾಗ ಬ್ಯಾಸರಕೀಲೇ ಒಂದು ಆಕಳಿಸೋ ಸ್ವಾತಂತ್ರ್ಯನೂ ಅವರಿಗಿಲ್ಲ ಅಂದ್ರ ಹೆಂಗರೀ?
ಇನ್ನ ಆಫೀಸಿನಾಗ ಬಾಸ್ ಏನರೇ ಲೆಕ್ಚರ್ ಕೊಡೂಮುಂದ ಆಕಳಿಸಿದ್ರೋ ಮುಗೀತು.ನಿಮ್ಮ ಭತ್ಯೆ ಕಟ್ ಅಂತನೇ ಲೆಖ್ಖ.ಮುಂದ ನಿಮಗ್ಯಾವ ಸಿ.ಎಲ್.ಸ್ಯಾಂಕ್ಷನ್ ಆಗಂಗಿಲ್ರಿ.ನಿಮ್ಮ ಆಕಳಿಕೆ ಸೀದಾ ಅವನ ಅಹಂನ್ನೇ ನುಂಗಿಬಿಟ್ಟಿರತದ.ಅದಕ್ಕಽ ಎಚ್ಚರಿಕೆಲೆ ಇರಬೇಕು.ಆದ್ರ ಮಜಾ ಅಂದ್ರ ಯಾವಾಗ ನೀವು ಎಚ್ಚರಕಿಲೇ ಇರಬೇಕು ಅನಕೋತಿರೋ ಅವಾಗೇ ಇವುಗಳ ಹಾವಳಿ ಭಾಳ ಇರತದ.ಬೆಳತನಕಾ ದೋಸ್ತ್ ರ ಜೋಡಿ ಹರಟಿ ಹೊಡಿಯೂಮುಂದ ,ರಾತ್ರೆಲ್ಲ ನಿದ್ದಿಗೆಟ್ಟು ಓಣ್ಯೋಣಿ ತಿರಗೂಮುಂದ,ಟಿವಿ ಮುಂದ ಕೂತು ಸುಟ್ಟು ಸುಡುಗಾಡು ಸಿನೆಮಾ ನೋಡೂಮುಂದ,ಮೊಬೈಲ್ ನಾಗ ಕ್ಯಾಂಡಿಕ್ರಷ್ ,ಪಬ್ಜಿ ಆಡೂಮುಂದ ತಪ್ಪಿನೂ ಒಂದರೇಽ ಆಕಳಿಕಿ ಬಂದ್ರ ಕೇಳ್ರಿ.
ಸೂರ್ಯೋದಯಕ್ಕ ಮುಂಚೆ ಅರುಣನ ಆಗಮನ ಆಗೂಹಂಗ ನಿದ್ದಿ ಬರೂದರ ಮುನ್ಸೂಚನೆ ಈ ಆಕಳಿಕೆಗಳು ಅನ್ನಬಹುದು.ಆದ್ರ ಇದಕ್ಕ ತೀರ ವಿರುದ್ಧವಾಗಿ ಒಂದೊಂದುಸಲ ಮಧ್ಯಾಹ್ನಮೂರಮೂರು ತಾಸು ಮಲಕೊಂಡು ಎದ್ದಮ್ಯಾಲೂ ಒಂದರಹಿಂದ ಒಂದು ಹಂಗೇ ಸಾಲುಹಿಡದು ಬರತಿರತಾವ.ಕೆಲವೊಮ್ಮೆ ಬ್ಯಾಸರ ಆಗಿದ್ರನೂ ಬರತಾವ.ಕೆಲವೊಮ್ಮೆ ವಿಪರೀತ ದಣಿದಾಗ,ದೇಹ ಬಳಲಿದಾಗ ಬಂದ್ರ ಕೆಲವೊಮ್ಮೆ ಏನೂ ಕೆಲಸ ಇಲ್ಲದಽ ಸೋಮಾರಿಗಳಾಗಿ ಸೋಫಾದ ಮ್ಯಾಲೆ ಮೈ ಚೆಲ್ಲಿದಾಗನೂ ಬರತಾವ...ಅತೀ ಬ್ಯಾಸಗ್ಯಾಗ..ಅತೀ ಥಂಡ್ಯಾಗ....ಹೀಂಗs ಅಂತ ಹೇಳಲಿಕ್ಕೆ ಬರಂಗಿಲ್ರಿ .
ಯಾರರೇ ಪ್ರೀತಿಪಾತ್ರರು ಭೆಟ್ಟಿ ಆಗಿ ವಾಪಸ್ ಹೋದಾಗನೂ ಹೀಂಗಽ ಆಕಳಿಕಿ ಬರತಾವ.ಮೈತುಂಬ ,ಮನಿತುಂಬ ಕೆಲಸ ನೋಡಿ ತಲಿ ದಿಮ್ ಅಂದನೂ ಆಕಳಿಕಿ ಬರತಾವ.ಕೆಲವೊಮ್ಮೆ ಸುಮ್ಮೇ ನಮ್ಮ ಬಾಜೂಕಿನವರು ಆಕಳಿಸತಾರ ಅಂತ ನಮಗೂ ಆಕಳಿಕಿ ಬರತಾವ.ಇನ್ನ ಕೆಲವೊಮ್ಮೆ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಾಗ ,ಹರಿದಾಸರ ಹರಿಕಥಿಯೊಳಗ,ಸತ್ಯನಾರಾಯಣ ಕಥಿ ಅಂತಹ ದೀರ್ಘ ಪೂಜಾಕಥಿಗಳನ್ನು ಕೇಳೂಮುಂದ ಎಲ್ಲಿರತಾವೋ ಏನೋ ಓಡೋಡಿ ಬರತಾವ.ಅದಕ್ಕಽ ಅಂಥಾ ಕಾರ್ಯಕ್ರಮದಾಗೆಲ್ಲ ನಾ ಆದಷ್ಟು ಹಿಂದಿನ ಸೀಟೇ ಪ್ರಿಫರ್ ಮಾಡತೀನ್ರಿ.ನಂಗ ಈ ಪೂಜಾವಿಧಿಗಳೆಲ್ಲ ಝಟ್ ಪಟ್ ಅಂತ ಮುಗದ್ರ ಭಾಳ ಭಕ್ತಿ,ಏಕಾಗ್ರತೆ ಎಲ್ಲಾ ಇರತದರಿ.ಅದೇನರೆ ಅಧ೯ತಾಸಕಿಂತ ಜಾಸ್ತಿ ಇತ್ತೋ ....ಆಕಳಿಕಿ ಶುರುನೇ.ಸತ್ಯನಾರಾಯಣ ಪೂಜಾದ ಆ ಕಲಾವತಿ – ಲೀಲಾವತಿ ಕಥಿ ಕೇಳಕೋತ ಆಕಳಿಕಿ ಬಂದ್ರ ಒಳಗೊಳಗೇ ಪುಕಪುಕ ಆಗತಿರತದ್ರಿ.’ನನ್ನ ಕಥಿ ಕೇಳೂಮುಂದ ಆಕಳಿಸಿ ನನಗ ಅಪಮಾನ ಮಾಡಿದಿ’ ಅಂತ ಸತ್ಯನಾರಾಯಣ ಎಲ್ಲರೇಽ ಸಿಟ್ಟಿಗೆದ್ದು ಹಡಗಿನಲ್ಲಿದ್ದ ಧನಕನಕಗಳನ್ನು ಎಲಿ-ತೊಪ್ಪಲು-ಕಲ್ಲುಗಳನ್ನಾಗಿ ಪರಿವತ೯ನೆ ಮಾಡಿದ್ಹಂಗ ಇರೋ ಒಂದೆರಡು ನನ್ನ ಬಂಗಾರದೊಡವೆಗಳನ್ನುಹಿತ್ತಾಳೆಯನ್ನಾಗಿ,ಇರೋ ಒಂದೆರಡು ರೇಶ್ಮೆಸೀರೆಗಳನ್ನು ಹಳೆಯ ಹರಿದ ಸೀರೆಗಳನ್ನಾಗಿ ಮಾಡಿಬಿಟ್ಟ್ರ.....ಅಂತ ಗಾಭರಿ ಆಗತಿರತದ.ಆದ್ರ ಆ ಗಾಭರಿಗೆ ಇನ್ನೊಂದೆರಡು ಆಕಳಿಕೆ ಹೆಚ್ಚಿಗೆ ಬರತಾವು ನೋಡ್ರಿ...

ನಿಮಗೊಂದು ಮಜಾ ಸುದ್ದಿ ಗೊತ್ತೇನ್ರಿ? ತಾಯಿ ಗಭ೯ದಾಗಿರೋ ಮಗು ಸಹಿತ ಆಕಳಸತದಂತ.ವೈದ್ಯಕೀಯ ಶಾಸ್ತ್ರದ ಪ್ರಕಾರ ಅದು ಮೆದುಳಿನ ಒಳ್ಳೆಯ ಬೆಳವಣಿಗೆಯ ಲಕ್ಷಣ ಅಂತ.ಈ ಆಕಳಿಸೋ ಪ್ರಕ್ರಿಯೆ ಬರೇ ನಮ್ಮ ಮನುಷ್ಯ ಜಾತಿಯೊಳಗ ಅಲ್ರೀ...ಭಾಳಷ್ಟು ಪ್ರಾಣಿಗಳೊಳಗೂ ಅದ ಅಂತ.
ಇನ್ನ ಈ ಆಕಳಿಕೆಗಳಿಗೂ ಮತ್ತ ಪರೀಕ್ಷಾಗೂ ನೇರಾನೇರ ಸಂಬಂಧ ಅದನೋಡ್ರಿ.ಪರೀಕ್ಷಾ ಟೈಮದಾಗ ಕೈಯಾಗ ಪುಸ್ತಕ ಹಿಡದ್ರ ಸಾಕು ಆಕಳಿಕಿ ಶುರು..ನಂಗಂತೂ ಗಣಿತದ ಪ್ರಶ್ನೆಪತ್ರಿಕೆ ನೋಡಿದರ ಸಾಕು..ಅದರಾಗ ಎಷ್ಟು ಲೆಖ್ಖ ಮಾಡಲಿಕ್ಕೆ ಕೊಟ್ಟಾರೋ ಅದರ ದುಪ್ಪಟ್ಟು ಆಕಳಿಕೆ ಬರೂವರೀ.
ನಿಮಗೆಲ್ಲ ರಾಮಾಯಣದ ಕಥಿ ಗೊತ್ತೇ ಇರತದ.ಅದರಾಗ ನಮ್ಮಹನುಮಂತ ಲಂಕಾಪ್ರವೇಶ ಮಾಡೂಮುಂದ ಸುರಸಾ ಎಂಬ ರಕ್ಕಸಿಯ ಕಥಿ ಬರತದ.ನನ್ನ ಬಾಯಲ್ಲಿ ಪ್ರವೇಶಿಸಿ ಹೊರಬಂದರೆ ಮಾತ್ರ ನಿನಗೆ ಲಂಕಾಪ್ರವೇಶ ಅಂತ ಹೇಳಿದ ಅಕಿ ಆ ಅಂತ ಆಕಳಿಸತಾಳ.ಹನುಮ ತನ್ನ ಗಾತ್ರವನ್ನುಬೃಹದಾಕಾರವಾಗಿ ಬೆಳೆಸತಾನ.ಅದಕ್ಕ ತಕ್ಕಂಗ ‘ಆ’ಅಂತ ಬಾಯಿ ಅಗಲಿಸಿದ ಅಕಿನ ಬಾಯೊಳಗೆ ಹೋದ ಹನುಮ ತಕ್ಷಣವೇ ಪೂತಿ೯ ಸಣ್ಣವನಾಗಿ ಅಕಿ ಬಾಯಿ ಮುಚ್ಚುವುದರೊಳಗಾಗಿ ಹೊರಬಂದುಬಿಡುವ ಕಥಿ ಭಾಳ ಸ್ವಾರಸ್ಯಕರವಾಗೇದ.ಅಂದ್ರ ಜೀವನ-ಮೃತ್ಯುಗಳೆರಡೂ ಒಂದು ಆಕಳಕಿ ಅಳತೀ ಒಳಗಽ ಅವ ಅನ್ನೂ ತತ್ವ ನಮಗ ಅಥ೯ ಆಗತದ.
ಆಕಳಿಕಿ ಸುದ್ದಿ ಆತು..ಇನ್ನ ತೂಕಡಿಕಿ ಸುದ್ದಿನೂ ಒಂಚೂರು ಮಾತಾಡೇ ಬಿಡೂಣು.ಇವೆರಡೂ ಒಂಥರಾ ಅವಳಿ ಸೋದರರು ಇದ್ಹಂಗ. ಈ ತೂಕಡಿಕಿನೂ ಅಷ್ಟೇ ...ಯಾವ ಮಾಯದಾಗ ಬರತದೋ ಗೊತ್ತೇ ಆಗಂಗಿಲ್ಲರೀ.ಒಂಥರಾ ಗಾಢನಿದ್ದೆನೂ ಅಲ್ಲದ,ಎಚ್ಚರಿಕೆನೂ ಅಲ್ಲದ ಈ ತೂಕಡಿಕಿ ಮಜಾ ಅನುಭವಿಸಿದವರಿಗೇ ಗೊತ್ತು..ಎಷ್ಟೋ ಸಲ ಸಂತ್ಯಾಗ ತೂಕಡಿಸೋ ಮಂದಿನೂ ಇರತಾರ.ಕೆಲವು ಸಲ ನಮ್ಮ ಮನ್ಯಾಗ ಟಿವಿ ಜೋರ್ ದನಿ ತಗದು ಒದರತಿರತದ್ರಿ.ಅಡಿಗಿ ಮನ್ಯಾಗ ನನ್ನ ಮಿಕ್ಸಿ,ಕುಕ್ಕರ್ ಸೀಟಿ ಧಾಂಧಲೆ ನಡದಿರತದ.ನನ್ನ ಅವಳಿ ಮಕ್ಕಳದು ಯಾವುದೋ ಸಣ್ಣ ವಿಷಯಕ್ಕೆ ಜೋರ ಜಗಳ ನಡದಿರತದ.ಆದ್ರ ನಮ್ಮ ಮನಿಯವರು ಹಂಗಽ ಸೋಫಾಕ್ಕೊರಗಿ ತೂಕಡಿಸತಿರತಾರ. ಕೆಲವೊಬ್ಬರಿಗೆ ಈ ಗದ್ದಲದ ಬ್ಯಾಗ್ರೌಂಡ್ ನಾಗ ಭಾಳ ಛಂದ ನಿದ್ದಿ ಬರತದರಿ....ಪುಷ್ಪಕ ವಿಮಾನದ ಕಮಲಹಾಸನಗತೆ.ಈ ಬಸ್ಸು-ಟ್ರೇನುಗಳ ಪ್ರವಾಸ ಅಂತೂ ತೂಕಡಿಕೆಯ ತವರು ಎನ್ನಬಹುದು.ನಾ ಅಂತೂ ಎಷ್ಟೋ ಸಲ ಸಿಟಿ ಬಸ್ ನಾಗೂ ತೂಕಡಿಸಕೋತ ಓಡಾಡಿ ಎರಡೆರಡು ಸ್ಟಾಪ್ ದಾಟಿ ಇಳಿದ ಪ್ರಸಂಗಗಳೂ ಭಾಳ ಅವರೀ.ಎಷ್ಟೋ ಸಲ ನಮ್ಮ ಬಾಜೂಕ ಕೂತವರು ತೂಕಡಿಸಕೋತ ನಮ್ಮ ಮೈಮ್ಯಾಲ ತಮ್ಮ ಭಾರ ಹಾಕಿ ,ಎಷ್ಟೋ ಸಲ ನಾವು ತೂಕಡಿಸಕೋತ ಅವರ ಮ್ಯಾಲೆ ಜೋಲಿ ಹೊಡೆದು ಭಯಂಕರ ಮುಜುಗರದ ಪ್ರಸಂಗಗಳನ್ನೂ ಅನುಭವಿಸುವುದಾಗತದ.ಇನ್ನಽ ಎಷ್ಟೋ ಬಾಲಿವುಡ್ ಮೂವಿಗಳೊಳಗ ಹೀಂಗಽ ಬಸ್ ನಾಗ ತೂಕಡಿಸಿ ಹಿರೋನ ಹೆಗಲ ಮೇಲೆ ತಲೆಯಿಡೋ ಹಿರೋಯಿನ್ ,ಅವಳ ಹಾರಾಡುತ್ತಿರೋ ಮುಂಗುರುಳನ್ನು ನೇವರಿಸೋ ಹಿರೋ ..ಹಿನ್ನೆಲೆಯಲ್ಲಿ ಒಂದು ಹಾಡು...ಲವ್ ಸ್ಟೋರಿಗೆ ನಾಂದಿ ಆಗಿಬಿಡತದ್ರಿ ಈ ತೂಕಡಿಕಿ.
ಆದ್ರ ಎಷ್ಟೋ ಸಲ ಈ ತೂಕಡಿಕಿಯಿಂದ ಅವಘಡಗಳೂ ಆಗತಾವ.ರಾತ್ರಿ ಬಸ್ ಡ್ರೈವ್ ಮಾಡುತ್ತಿರುವ ಡ್ರೈವರ್ ತೂಕಡಿಸಿದರ ಮುಗೀತು..ಲಕ್ಷ್ಮಿ ರಮಣ ಗೋವಿಂದ..ನೈಟ್ ಡ್ಯೂಟಿ ಮಾಡುವ ನಸ್೯ ಡಾಕ್ಟರ್ ತೂಕಡಿಸಿದ್ರ ಪೇಶಂಟ್ ಗಳ ಗತಿ ಅಧೋಗತಿ.ತೂಕಡಿಸುತ್ತ ಮಗುವಿಗೆ ಹಾಲೂಡಿಸಿದ ತಾಯಿ...ಉಸಿರುಗಟ್ಟಿದ ಮಗು ಇಂಥವೆಲ್ಲ ಸುದ್ದಿಗಳನ್ನು ಆಗಾಗ ಕೇಳಕೋತನ ಇರತೀವಿ.ತೂಕಡಿಸಿಕೋತ ಕೂತ ಸೆಕ್ಯೂರಿಟಿ ಗಾಡ್೯ಗಳ ಮುಂದೆನೇ ಮನೆ ,ATM ಗಳ ಕಳ್ಳತನಗಳೂ ನಡೆಯುವುದುಂಟು.
ತೂಕಡಿಕಿ ಮಾತು ಬಂದಾಗ ನಮ್ಮ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಮರೆಯುವ ಹಾಗೆಯೇ ಇಲ್ಲ.ಸಭೆ -ಸಮಾರಂಭಗಳಲ್ಲಿ ,ಸದನದ ಕಲಾಪಗಳಲ್ಲಿ ಅವರು ತೂಕಡಿಸಿ ಸುದ್ದಿಯಾಗುವುದು ಸವೇ೯ಸಾಮಾನ್ಯವಾಗಿತ್ತು.ಅದಕ್ಕಽ ಬಲ್ಲವರು ‘ತೂಕಡಿಸಿ ತೂಕಡಿಸಿ ಬೀಳದಿರೋ ತಮ್ಮಾ ...ಓ ಮಂಕುತಿಮ್ಮಾ ‘ಅಂತ ಹಾಡಿರಬೇಕು.
ಏನ ಇರಲಿ ,ಮನಷಾ ಅಂದಮ್ಯಾಲೆ ದಿನಕ್ಕ ಒಮ್ಮೆರೆ ಆಕಳಿಸಲಾರದ,ತೂಕಡಿಸಲಾರದ ಇರಲಿಕ್ಕೆ ಆದೀತ?ಈಗ ಈ ಬರಹವನ್ನು ಓದಕೋತ ನೀವೆಲ್ಲಾರೂ ಅದೆಷ್ಟು ಸಲ ಆಕಳಿಸಿ..ತೂಕಡಿಸಿರತೀರೋ ಭಗವಂತಗಽ ಗೊತ್ತು.
ಇತಿ ಶ್ರೀ ಮಾನವೇತಿಹಾಸ ವತ೯ಮಾನ ಪುರಾಣೇ ಆಕಳಿಕಿ-ತೂಕಡಿಕಿ ಅಧ್ಯಾಯಂ ಸಂಪೂರ್ಣಂ..


~ ಗೌರಿಪ್ರಸನ್ನ

ಬದಲಾಗುತ್ತಿರುವ ಸಂಯುಕ್ತ ಅರಬ್ ಸಂಸ್ಥಾನಗಳು (UAE) ಭಾಗ ೨
ಡಾ. ಜಿ. ಎಸ್. ಶಿವಪ್ರಸಾದ್





ಕಳೆದ ವಾರ ಪ್ರಕಟಿತವಾದ ‘ಬದಲಾಗುತ್ತಿರುವ ಸಂಯುಕ್ತ ಅರಬ್ ಸಂಸ್ಥಾನಗಳು’ ಎಂಬ ಲೇಖನದ ಎರಡನೇ ಭಾಗವನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ. ಈ ಎರಡನೇ ಸಂಚಿಕೆಯಲ್ಲಿ ಅರಬ್ ಜನರ ಸಂಸ್ಕೃತಿಯ ಬಗ್ಗೆ , ಇಲ್ಲಿಯ ವಿಶಿಷ್ಟತೆಯ ಬಗ್ಗೆ, ಈ ರಾಷ್ಟ್ರದ ಹೆಮ್ಮೆಯ ಮಹಾನಗರವಾದ ದುಬೈ ಮತ್ತು ಅಲ್ಲಿಯ ಜನಜೀವನವನ್ನು ಕುರಿತಾಗಿ ಲೇಖಕರ ಅನಿಸಿಕೆಗಳಿವೆ. ದಯವಿಟ್ಟು ಓದಿ ಸ್ಪಂದಿಸಿ – ಸಂ

ಅಲೈನ್ ನಗರದ ಮಧ್ಯೆ ಇರುವ ಅಲೈನ್ ಓಯಸಿಸ್ ಒಂದು ಮುಖ್ಯ ಆಕರ್ಷಣೆ. ಮರಳುಗಾಡಿನ ಹಸಿರು ತಾಣಗಳ ಬಗ್ಗೆ ನನಗೆ ಹಿಂದಿನಿಂದ ಕುತೂಹಲ. ಬೆಟ್ಟದ ಆಸುಪಾಸಿನಲ್ಲಿರುವ ಈ ಓಯಸಿಸ್ ನೂರಾರು ಎಕರೆ ವಿಸ್ತಾರವಾಗಿದ್ದು ಇಲ್ಲಿ ಹಲವಾರು ಜಾತಿಯ ಹಸಿರುಮರಗಳಿದ್ದು ಡೇಟ್ಸ್ ಮರಗಳೇ ಹೆಚ್ಚು. ಬೆಟ್ಟದಿಂದ ಹರಿದುಬರುವ ನೀರನ್ನು ಪುರಾತನವಾದ 'ಫಲಾಜ್ ನೀರಾವರಿ ' ತಂತ್ರಜ್ಞಾನದಲ್ಲಿ ಇಲ್ಲಿ ನೀರನ್ನು ಹಾಯಿಸಿದ್ದಾರೆ. ಇಟಲಿ ಮತ್ತು ಇಂಗ್ಲೆಂಡಿನಲ್ಲಿ ರೋಮನ್ನರು ಕಟ್ಟಿದ್ದ ಅಕ್ವಾಡಕ್ಟ್ ಗಳನ್ನು ಹೋಲುವ ಈ ಮಾನವ ನಿರ್ಮಿತ ಕಾಲುವೆಗಳು ಒಳಚರಂಡಿಯಂತೆ ಮುಚ್ಚಿದ್ದು ಒಂದು ರೀತಿ ಗುಪ್ತಗಾಮಿನಿಗಳಾಗಿ ಹರಿಯುತ್ತವೆ. ಬಹುಶ ಓಪನ್ ವ್ಯವಸ್ಥೆಯಲ್ಲಿ ನೀರು ಸೆಖೆಗೆ ಆವಿಯಾಗಬಹುದು ಮತ್ತು ಮುಚ್ಚಿರುವ ಕಾಲುವೆಯಲ್ಲಿ ನೀರು ತಣ್ಣಗಿರುವ ಸಾಧ್ಯತೆ ಹೆಚ್ಚು. ಅಲ್ಲಲ್ಲೇ ಸಣ್ಣ ಸಣ್ಣ ಕಟ್ಟೆಗಳನ್ನು ಕಟ್ಟಿ ನೀರನ್ನು ಎಲ್ಲ ದಿಕ್ಕುಗಳಿಗೆ ಹಾಯಿಸಿದ್ದಾರೆ. ಇನ್ನೊಂದು ಸ್ವಾರಸ್ಯಕರವಾದ ಸಂಗತಿ ಎಂದರೆ ಇಲ್ಲಿ ಸಾವಿರಾರು ಸಂಖ್ಯೆಯಲ್ಲಿರುವ ಡೇಟ್ಸ್ ಮರಗಳನ್ನು ಗಂಡು ಮತ್ತು ಹೆಣ್ಣು ಮರಗಳು ಎಂದು ವಿಂಗಡಿಸಿ ಗುರುತಿಸಬಹುದು. ಗಂಡು ಮರಗಳಲ್ಲಿ ಬಿಜೋತ್ಪತ್ತಿಯಾಗುತ್ತದೆ ಆದರೆ ಅವು ಫಲವನ್ನು ಕೊಡುವುದಿಲ್ಲ. ನಿಸರ್ಗದಲ್ಲಿ ಗಾಳಿಯು, ಗಂಡು ಮತ್ತು ಹೆಣ್ಣು ಮರಗಳ ನಡುವೆ ಪರಾಗ ಸ್ಪರ್ಶವನ್ನು ಮಾಡುತ್ತದೆ, ಆದರೆ ಅಧಿಕ ಸಂಖ್ಯೆಯಲ್ಲಿ ಸಮರ್ಥವಾಗಿ ಹಣ್ಣುಗಳನ್ನು ಪಡೆಯುವ ಉದ್ದೇಶದಿಂದ ಗಂಡು-ಹೆಣ್ಣು ಮರಗಳ ನಡುವೆ ಪರಾಗಸ್ಪರ್ಶವನ್ನು ಇಲ್ಲಿ ಮನುಷ್ಯ ಮಾಡುತ್ತಿದ್ದಾನೆ. ಇದಕ್ಕೆ ಬೇಕಾದ ಬೀಜಗಳು ಮಾರ್ಕೆಟ್ಟಿನಲ್ಲಿ ದೊರೆಯುತ್ತವೆ. ಹೀಗಾಗಿ ಹೆಣ್ಣು ಡೇಟ್ಸ್ ಮರಗಳನ್ನು ಕೃಷಿ ಮಾಡುವವರೇ ಜಾಸ್ತಿ. ಸಿಹಿಯಾದ ಡೇಟ್ಸ್ ಹಣ್ಣು ಬಿಡುವುದು ಮೇ ತಿಂಗಳಾದ ಮೇಲೆ. ನಾವು ಓಯಸಿಸ್ ಉದ್ದಗಲಕ್ಕೂ ವಿಹರಿಸಿದೆವು. ಇದು ಬಹಳ ಸುಂದರ, ಪ್ರಶಾಂತವಾದ ತಾಣ.  ನಾವು ಅಗ್ಗದ ದರದಲ್ಲಿ ಸಿಗುವ ಸಿಹಿಯಾದ ಡೇಟ್ಸ್ ಗಳನ್ನು ಕೊಂಡುಕೊಂಡೆವು.

ನಾವು ಅರಬ್ಬರನ್ನು ಹತ್ತಿರದಿಂದ ಕಂಡದ್ದು ಅಲೈನ್ ನಗರದ ಪ್ರತಿಷ್ಠಿತ 'ಲಾ ಬ್ರಯೋಷ್' ಎಂಬ ಫ್ರೆಂಚ್ ಕೆಫೆಯಲ್ಲಿ. ಇಲ್ಲಿ ಗಂಡಸರು ಅಡಿಯಿಂದ ಮುಡಿಯವರೆಗೆ ಶುಭ್ರವಾದ ನೀಟಾಗಿ ಇಸ್ತ್ರಿ ಮಾಡಿದ ಬಿಳಿ ನಿಲುವಂಗಿಯನ್ನು ತೊಟ್ಟು ತಲೆಗೆ ಒಂದು ಬಿಳಿ ವಸ್ತ್ರವನ್ನು ಇಳಿಬಿಟ್ಟು ಅದನ್ನು ತಲೆಸುತ್ತಳತೆಗೆ ಹೊಂದುವಂತಹ ಕರಿಪಟ್ಟಿಯಲ್ಲಿ ನೀಟಾಗಿ ತಲೆಯಮೇಲೆ ನಿಲ್ಲುವಂತೆ ಕಟ್ಟಿರುತ್ತಾರೆ. ತಮ್ಮ ಗಡ್ಡಗಳನ್ನು ಟ್ರಿಮ್ ಮಾಡಿ, ದೃಢಕಾಯರಾಗಿ, ಕೂಲಿಂಗ್ ಗ್ಲಾಸ್ ಏರಿಸಿ, ಘಮ ಘಮಿಸುವ ಪರ್ಫ್ಯೂಮ್ ಧರಿಸಿ ನೋಡಲು ಸ್ಮಾರ್ಟ್ ಆಗಿರುತ್ತಾರೆ. ಗಂಡಸರು ತೊಡುವ ಈ ನಿಲುವಂಗಿಗೆ ಕಂದೂರವೆಂದು ಕರೆಯಲಾಗುತ್ತದೆ. ಇಲ್ಲಿ ಬಹಳಷ್ಟು ಜನ ಶ್ರೀಮಂತರಾಗಿ, ಶಿಕ್ಷಿತರಾಗಿರುವಂತೆ ಕಂಡರು. ಇಲ್ಲಿ ಜೋರಾಗಿ ಮಾತನಾಡುವ, ಕ್ಯಾಕರಿಸಿ ಉಗಿಯುವ, ಗುಡುಗುಡಿ ಸೇದುವ ಜನರು ಕಾಣಲಿಲ್ಲ. ಹೆಂಗಸರು ತೆಳ್ಳಗೆ ಬೆಳ್ಳಗೆ ಇದ್ದು, ಮುಖಕ್ಕೆ ಮೇಕಪ್, ಲಿಪ್ಸ್ಟಿಕ್ ಹಾಕಿಕೊಂಡು ಅಬಯ್ ಎಂಬ ಕರಿ ನಿಲುವಂಗಿಯನ್ನು ತೊಟ್ಟು ತಲೆಗೆ ಹಿಜಾಬ್ ಧರಿಸಿರುತ್ತಾರೆ. ಇಲ್ಲಿಯ ಜನರು ಬೇರೆಯವರ ಜೊತೆ ದೃಷ್ಠಿ ಹಾಯಿಸಿ ‘ಹಾಯ್’ ಎನ್ನುವವರಲ್ಲ. ಕಿರುನಗೆಯನ್ನು ಬಿರುವವರಲ್ಲ, ಹೊರಗಿನವರ ಬಗ್ಗೆ ಅವರಿಗೆ ಆಸಕ್ತಿ ಇರುವಂತೆ ಕಾಣಲಿಲ್ಲ. ಇದು ಸರಿ ತಪ್ಪುಗಳ ವಿಮರ್ಶೆಯಲ್ಲ, ಅವರವರ ಸಂಸ್ಕೃತಿಗೆ ಸಂಬಂಧ ಪಟ್ಟ ವಿಚಾರವಷ್ಟೇ. ಸ್ಥಳೀಯರು ಅವರಪಾಡಿಗೆ ಅವರಿದ್ದು ಇಲ್ಲವೇ ಅವರ ಜನರ ಜೊತೆ ಬೆರೆತು ಮಾತನಾಡುತ್ತಾರೆ. ಹೆಂಗಸರ ಬಗ್ಗೆ ವಿಶೇಷವಾದ ಗೌರವ ಮತ್ತು ಮಡಿವಂತಿಕೆ ಇದೆ. ಅರಬ್ಬರಿಗೆ ಸಂಜೆಯಾದ ಮೇಲೆ ಅಥವಾ ವಾರಾಂತ್ಯದಲ್ಲಿ ನಗರದ ಪಾರ್ಕುಗಳಲ್ಲಿ, ಸಮುದ್ರ ತೀರಗಳಲ್ಲಿ ಕಾಲಕಳೆಯುವುದೆಂದರೆ ಬಲು ಖುಷಿ. ಇವರ ಜೀವನ ಪ್ರೀತಿ ಅದಮ್ಯವಾದದ್ದು. ಅವರ ಸಂಸಾರ ಕೂಡ ದೊಡ್ಡದು. ಕುಟುಂಬದ ಹಿರಿಯ ಕಿರಿಯ ಗಂಡಸರು ಹೆಂಗಸರು ಸದಸ್ಯರು ದೊಡ್ಡ ದೊಡ್ಡ ಕಾರುಗಳಲ್ಲಿ ಬಂದು ಪಿಕ್ನಿಕ್ ಮಾಡುತ್ತಾರೆ. ಹೊರಾಂಗಣದಲ್ಲಿ ತಿನ್ನುವುದು ಇಲ್ಲಿ ಸಾಮಾನ್ಯ. ಎಲ್ಲಿಯೂ ಒಂದಿಷ್ಟು ಕಸವನ್ನು ಎಸೆಯದೆ ಎಲ್ಲಿಯೂ ಗಲೀಜು ಮಾಡದ ಹಾಗೆ ಎಚ್ಚರಿಕೆ ವಹಿಸುತ್ತಾರೆ. ಒಂದು ಸಂಜೆ ಸೂರ್ಯಾಸ್ತವನ್ನು ನೋಡಿ ನಂತರ ಝಬೀಲ್ ಹಫೀತ್ ಬೆಟ್ಟದ ಬುಡದಲ್ಲಿರುವ ಸಂತೆಯಲ್ಲಿ ಚಾ ಮತ್ತು ಜಾಮೂನಿನಂತೆ ಕಾಣುವ ಲಗೈಮತ್ ಎಂಬ ಸಿಹಿ ಖಾದ್ಯವನ್ನು, ಬಿಸಿಬಿಸಿಯಾದ ಫಲಾಫಲ್ ಎಂಬ ಚೆನ್ನಾಕಾಳಿನ ಮಸಾಲೆ ಉಂಡೆಗಳನ್ನು ಸೇವಿಸಿದೆವು. ಇವರಿಗೆ ಮೀನು, ಲ್ಯಾಮ್ಬ್ ಮತ್ತು ಬಿರಿಯಾನಿ ಅನ್ನವೆಂದರೆ ಇಷ್ಟವೆಂದು, ಅದು ಇಲ್ಲಿಯ ಆಹಾರವೆಂದು ಕೇಳಿದೆ.

ಮೇಲೆ ಪ್ರಸ್ತಾಪಿಸಿದ ಬದಿಕಿನ ಚಿತ್ರಣ ಅರಬ್ ದೇಶದ ಒಳನಾಡಿನದ್ದಾದರೆ, ಇಲ್ಲಿಯ ಮಹಾ ನಗರಗಳಾದ ದುಬೈ ಅಬುದಾಬಿಯಲ್ಲಿನ ಜೀವನ ಸ್ವಲ್ಪ ಭಿನ್ನ ವಾಗಿದೆ. ಇವುಗಳನ್ನು ಪಾಶ್ಚಿಮಾತ್ಯ ನಗರಗಳಾದ ಲಂಡನ್ ಅಥವಾ ನ್ಯೂಯಾರ್ಕ್ ನಗರಗಳಿಗೆ ಹೋಲಿಸಬಹುದು. ಇಲ್ಲಿ ಸ್ಥಳೀಯ ಎಮಿರಾಟಿ ಗಳು ಯಾರು? ಹೊರಗಿನಿಂದ ವಲಸೆ ಬಂದವರು ಯಾರು? ಪ್ರವಾಸಿಗರು ಯಾರು? ಎಂದು ಗುರುತಿಸುವುದು ಕಷ್ಟ. ಈ ನಗರದಲ್ಲಿ ೩.6 ಮಿಲಿಯನ್ ಜನರು ವಾಸವಾಗಿದ್ದಾರೆ. ಯಾರು ಕಾರ್ಮಿಕ ವರ್ಗದವರು, ಯಾರು ವೈಟ್ ಕಾಲರ್ ಹುದ್ದೆಗಳಲ್ಲಿರುವವರು ಎಂದು ಸುಲಭವಾಗಿ ಗುರುತಿಸಬಹುದು. ಇಲ್ಲಿ ಹಲವಾರು ದೇಶಗಳಿಂದ ವಲಸೆ ಬಂದ ಜನರಿದ್ದಾರೆ. ಇದು ಬಹುಮುಖಿ ಸಂಸ್ಕೃತಿಯ ನಗರ. ತೀವ್ರಗತಿಯಲ್ಲಿ ನಗರ ಬೆಳೆಯುತ್ತಿದೆ. ಇಲ್ಲಿಯ ಜನಗಣತಿ
(ಡೆಮೊಗ್ರಾಫಿ) ಮಾಹಿತಿಗಳು ಸ್ವಾರಸ್ಯಕರವಾಗಿದೆ. ಇಲ್ಲಿ ಸುಮಾರು ೬೦% ದಕ್ಷಿಣ ಏಷ್ಯಾ ಮೂಲದವರು; ಭಾರತೀಯರು ೪೦%, ಪಾಕಿಸ್ತಾನಗಳು ೧೦%, ಬಾಂಗ್ಲಾದೇಶದವರು ೧೦%, ಈಜಿಪ್ಟಿನವರು ೧೦%, ಫಿಲಿಫೈನ್ಸ್ ೬%, ಪಶಿಮತ್ಯ ಮತ್ತು ಇತರರು ೧೩%. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಸ್ಥಳೀಯ ಎಮಿರಾಟಿಗಳು ೧೨% ಅಷ್ಟೇ! ಒಟ್ಟಾರೆ ನೋಡಿದಾಗ ಹೊರಗಿನಿಂದ ವಲಸೆ ಬಂದವರು ೮೮%, ಮತ್ತು ಸ್ಥಳೀಯರು ಕೇವಲ ೧೨%. ಅಂದರೆ ಸಂಖ್ಯೆ ಲೆಕ್ಕದಲ್ಲಿ ಇಲ್ಲಿ ಎಮಿರಾಟಿಗಳೇ ಅಲ್ಪಸಂಖ್ಯಾತರು! ಪಾಶ್ಚಿಮಾತ್ಯ ದೇಶಗಳಲ್ಲಿ ವಲಸೆ ಬರುವವರ ಬಗ್ಗೆ ಅಂಜಿಕೆ ಇರುವವವರು ಈ ಡೆಮೊಗ್ರಾಫಿಯನ್ನು ಗಮನಿಸಬೇಕು. ವಲಸೆ ಬಂದವರು ಒಂದು ದೇಶಕ್ಕೆ ಹೊರೆಯಾಗದೇ ಅದರ ಆರ್ಥಿಕ ಉನ್ನತಿಗೆ ಕಾರಣರಾಗಬಹುದು ಎಂಬ ವಿಚಾರವನ್ನು ಈ ಅರಬ್
ರಾಷ್ಟ್ರದ ಮಾದರಿಯ ಹಿನ್ನೆಲೆಯಲ್ಲಿ ಕಲಿಯಬೇಕು. ಸಂಯುಕ್ತ ಅರಬ್ ಸಂಸ್ಥಾನಗಳ ಈ ದೇಶದ ಮತ್ತು ಪಾಶ್ಚಿಮಾತ್ಯದೇಶಗಳ ಹೋಮ್ ಆಫೀಸ್ ಮತ್ತು ವೀಸಾ ನಿಯಮಗಳನ್ನು, ಅರ್ಹತೆ ಮತ್ತು ಹಕ್ಕುಗಳನ್ನು ಹೋಲಿಸಲು ಸಾಧ್ಯವಿಲ್ಲವಾದರೂ ಈ ಮಾಹಿತಿಗಳು ಗಮನಾರ್ಹ. ಪಾಶ್ಚಿಮಾತ್ಯ ದೇಶಗಳಲ್ಲಿ ವಲಸೆ ಎಂಬುದುನ್ನು ನೇತ್ಯಾತ್ಮಕವಾಗಿ ಕಾಣಲಾಗುತ್ತಿದೆ ಮತ್ತು ಅಲ್ಲಿನ ಬಿಳಿಯರು ವಲಸಿಗರನ್ನು ಅನ್ಯರೆಂಬ ಭಾವನೆಯಲ್ಲಿ ಕಂಡು ಅವರು ತಮ್ಮ ದೇಶದ ಸಂಪನ್ಮೂಲಗಳನ್ನು ಕಬಳಿಸುತ್ತಾರೆ, ತಮ್ಮ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಾರೆ ಎಂಬ ಊಹೆಯಲ್ಲಿ ಆತಂಕಗೊಂಡಿದ್ದಾರೆ. ಪಾಶ್ಚಿಮಾತ್ಯ ದೇಶಗಳಲ್ಲಿ ವಲಸೆ ಎಂಬುದು ಜನಾಂಗಭೇಧ (ರೇಸಿಸಂ) ಭಾವನೆಗಳನ್ನು ಮೂಡಿಸಿ ಘರ್ಷಣೆಗೆ ಕಾರಣವಾಗಿದೆ. ಯು.ಕೆ ಯಲ್ಲಿ ಮಧ್ಯ ಪೂರ್ವ ರಾಷ್ಟ್ರಗಳ ಮತ್ತು ಆಫ್ರಿಕಾ ದೇಶಗಳ ಬಡ ನಿರಾಶ್ರಿತರು ಮಿತಿಮೀರಿದ ಸಂಖ್ಯೆಯಲ್ಲಿ ವಲಸೆ ಬಂದಾಗ ಎಲ್ಲರನ್ನೂ ಒಳಗೆ ಬಿಟ್ಟುಕೊಳ್ಳಲು ಸಾಧ್ಯವಿಲ್ಲ, ಈ ನಿಟ್ಟಿನಲ್ಲಿ ಬ್ರಿಟನ್ನಿನ ಆತಂಕ ಅರ್ಥವಾಗುವಂತಹುದು. ಆದರೆ ಕಳೆದ ಕೆಲವು ವರ್ಷಗಳ ಹಿಂದೆ ತಮ್ಮದೇ ಸಂಸ್ಕೃತಿಯ, ತಮ್ಮದೇ ಧರ್ಮದ, ತಮ್ಮದೇ ಬಣ್ಣದ ಯೂರೋಪಿನ್ ವಲಸಿಗರ ಯು.ಕೆಗೆ ಉದ್ಯೋಗವನ್ನು ಅರಸಿ ಬರುತ್ತಿರುವಾಗ ಅವರ ಬಗ್ಗೆ ಸಂಶಯಾಸ್ಪದಗಳು ಮೂಡಿ ಅದು ಬ್ರೆಕ್ಸಿಟ್ಟಿಗೆ ಕಾರಣವಾಯಿತು. ಬಹುಶ ಇಂಡಿಯಾ ಮತ್ತು ಇತರ ಉಪ ರಾಷ್ಟ್ರಗಳಿಂದ ಉದ್ಯೋಗ ಅರಸಿ ದುಬೈಗೆ ಬರುವ ವಲಸಿಗರ ಬಗ್ಗೆ ಅರಬ್ಬರಿಗೆ ಸಧ್ಯಕ್ಕೆ ಆ ಆತಂಕವಿಲ್ಲವೆನ್ನಬಹುದು. ಈ ರಾಷ್ಟ್ರಗಳು ಇನ್ನು ಅಭಿವೃದ್ಧಿಗೊಳ್ಳುತ್ತಿವೆ, ಉದ್ಯೋಗ ಅವಕಾಶ ಇನ್ನೂ ಇದೆ, ಮುಂದೆ ಇವರ ನಿಲುವು ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕು.

ದುಬೈ ಮತ್ತು ಇತರ ನಗರಗಳ ಬಹು ಅಂತಸ್ತಿನ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿರುವವರು ಬಹುಪಾಲು ದಕ್ಷಿಣ ಏಷ್ಯಾದಿಂದ ಬಂದ ಬಡ ವಲಸಿಗರು. ಅದರಲ್ಲೂ ಕೇರಳದಿಂದ ಬಂದ ಜನರು ಅಧಿಕ. ಕೇರಳದಲ್ಲಿ ಟ್ರೇಡ್ ಯೂನಿಯನ್ ಗಳು ಬಲವಾಗಿದ್ದು ಅಲ್ಲಿ ಕಾರ್ಮಿಕರು ತಮ್ಮ ಹಕ್ಕುಗಳನ್ನು ಚಲಾಯಿಸಿ ಹೆಜ್ಜೆ ಹೆಜ್ಜೆಗೂ ಹರತಾಳವನ್ನು ಕೈಗೊಳ್ಳುತ್ತಾರೆ ಎಂದು ತಿಳಿದಿದ್ದೇನೆ. ಅರಬ್ ರಾಷ್ಟ್ರಗಳಲ್ಲಿ ಈ ಕಾರ್ಮಿಕರಿಗೆ ಯಾವ ಟ್ರೇಡ್ ಯೂನಿಯನ್ ಗಳನ್ನೂ ಕಟ್ಟಿಕೊಳ್ಳುವ ಹಕ್ಕಿಲ್ಲ. ಇವರಲ್ಲಿ ಕೆಲವರು ಶೋಷಣೆಗೆ ಒಳಗಾಗಿದ್ದಾರೆ ಎಂದು ಕೆಲವು ಮಾನವೀಯ ಹಕ್ಕುಗಳ ಸಂಘ ಸಂಸ್ಥೆಗಳು ಅಸಮಾಧಾನವನ್ನು ವ್ಯಕ್ತಪಡಿಸಿವೆ. ಅವರ ಕ್ಷೇಮಾಭಿವೃದ್ಧಿಯನ್ನು ಗಮನಿಸ ಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಇಲ್ಲಿ ಹರತಾಳ ಮಾಡುವ ಕಾರ್ಮಿಕರನ್ನು ಡಿಪೊರ್ಟ್ ಮಾಡಲಾಗುತ್ತದೆ. ನನ್ನ ಮಿತವಾದ ಅರಿವಿನಲ್ಲಿ, ಇಲ್ಲಿಯ ಭಾರತೀಯ ಮೂಲದವರೊಡನೆ ಮಾತನಾಡಿದ ಬಳಿಕ ಇಲ್ಲಿ ವಲಸೆ ಬಂದ ಉದ್ದಿಮೆದಾರರು, ವೃತ್ತಿಪರರು, ಕೆಳವರ್ಗದ ಕಾರ್ಮಿಕರು ಎಲ್ಲರೂ ಖುಷಿಯಿಂದ ಇದ್ದಾರೆ ಎಂದೆನಿಸಿತು. ಅವರವರ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಇಲ್ಲಿ ಊಟ, ತಿಂಡಿ, ಮನೋರಂಜನೆ ಬಟ್ಟೆ ಬರೆ ದೊರೆಯುತ್ತದೆ. ಸಾರ್ವಜನಿಕ ಸಾರಿಗೆ ಸೌಲಭ್ಯಗಳು ಇನ್ನು ಉತ್ತಮವಾಗಬಹುದು. ದುಬೈ ಮೆಟ್ರೋವನ್ನು ಎಲ್ಲರೂ ಬಳಸುತ್ತಿದ್ದಾರೆ. ದುಬೈ, ಅಬುದಾಬಿ ಮತ್ತು ಇತರ ನಗರಗಳಲ್ಲಿ ಪ್ರಪಂಚದ ಎಲ್ಲರೀತಿ ಊಟ ತಿಂಡಿ ದೊರೆಯುತ್ತದೆ. ಹಲವು ಸಂಸ್ಕೃತಿಗಳು ಕರಗುವ ಕಡಾಯಿ ಅಮೇರಿಕ ಮತ್ತು ಯುರೋಪ್ ನಗರಗಳಷ್ಟೇ ಅಲ್ಲ, ದುಬೈ ಕೂಡ ಅದರಲ್ಲಿ ಒಂದು ಎಂದು ಪರಿಗಣಿಸಬಹುದು. ದುಬೈ ಕ್ರೀಕ್ ಪಕ್ಕದಲ್ಲೇ ಇರುವ ಹಳೇ ಬರ್ ದುಬೈ ಪ್ರದೇಶದಲ್ಲಿರುವ ಮೀನಾ ಬಜಾರನ್ನು ನಾವು ಪ್ರವೇಶಿಸಿದಾಗ ಅಲ್ಲಿ ಕಾಣುವುದು ನಮ್ಮ ಭಾರತದ ಉಡುಪು, ತಿಂಡಿ, ಚಿನ್ನ, ಆಭರಣ, ದಿನ ನಿತ್ಯ ಬಳಕೆ ವಸ್ತು ಇವುಗಳನ್ನು ಮಾರುವ ನೂರಾರು ಅಂಗಡಿಗಳು! ಗ್ರಾಹಕರನ್ನು ಹಲವಾರು ಭಾರತೀಯ ಭಾಷೆಗಳಲ್ಲಿ 'ಬನ್ನಿ ಸಾರ್, ಬನ್ನಿ ಮೇಡಂ; ಪರ್ಸ್ ನೋಡಿ, ವಾಚ್ ನೋಡಿ' ಎಂದು ದುಂಬಾಲು ಬೀಳುವ ವ್ಯಾಪಾರಿಗಳನ್ನು, ಅವರ ಸೇಲ್ಸ್ ಏಜೆಂಟುಗಳನ್ನು ಗಮನಿಸಿದಾಗ ನಾವು ಬೆಂಗಳೂರಿನ ಚಿಕ್ಕಪೇಟೆಯಲ್ಲೋ ಅಥವಾ ಚೆನ್ನಾಯಿನ ಮಾರ್ಕೆಟ್ಟಿನಲ್ಲೊ ಇದ್ದಂತೆ ಅನಿಸುತ್ತದೆ. ಇವುಗಳ ನಡುವೆ ನಮಗೆ ದೊರಕಿದ ಹಲ್ದಿರಾಮ್, ಪೂರಣಮಲ್, ಕೊನೆಗೆ ನಮ್ಮ ದಕ್ಷಿಣ ಭಾರತದ ಸರ್ವಾಣ ಭವನ್ ಖುಷಿ ತಂದಿತು. ಈ ಪ್ರದೇಶವನ್ನು ಬಿಟ್ಟು ಮೆಟ್ರೋ ಹತ್ತಿ ದುಬೈ ಮಾಲ್ ಆಸುಪಾಸನ್ನು ತಲುಪಿದರೆ ಅಲ್ಲಿ ಲೆಕ್ಕವಿಲ್ಲದ ನೂತನ ವಿನ್ಯಾಸದ ಕಟ್ಟಡಗಳು, ನಗರ ಮಧ್ಯದ ಕಾಲುವೆಗಳು, ಕಾರಂಜಿಗಳು, ಥಳ ಥಳಿಸುವ ದೀಪಾಲಂಕಾರಗಳು, ದುಬಾರಿ ಬೆಲೆ ವಸ್ತುಗಳನ್ನು ಮಾರುವ ಹೈ ಎಂಡ್ ಶೋ ರೂಂಗಳು ಕಾಣುತ್ತವೆ. ಇಲ್ಲಿ ಪಾಶ್ಚಿಮಾತ್ಯರು ಅಧಿಕ ಸಂಖ್ಯೆಯಲ್ಲಿ ಕಾಣುತ್ತಾರೆ. ಇವೆಲ್ಲಾ ನೋಡಿದಾಗ ನಾವು ಯೂರೋಪಿನಲ್ಲೋ ಅಥವಾ ಅಮೆರಿಕದಲ್ಲೋ ಇರುವ ಭಾವನೆ ಉಂಟಾಗುತ್ತದೆ. ಹೀಗೆ ದುಬೈ ಏಷ್ಯಾ ಮತ್ತು ಪಾಶ್ಚಿಮಾತ್ಯ ದೇಶಗಳ ಸೇತುವೆಯಾಗಿ ನಿಂತಿದೆ. ಇಲ್ಲಿ ನೆಲೆಸಿರುವ ಪ್ರಪಂಚದ ಎಲ್ಲ ಜನರು ತಮ್ಮ ತಮ್ಮ ಸಾಂಸ್ಕೃತಿಕ ಪ್ರಜ್ಞೆಗೆ ನಿಲುಕುವ ಈ ನಗರವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇಲ್ಲಿಯ ಎಮಿರಾಟಿಗಳು ಸ್ಥಳೀಯರಾಗಿದ್ದು ಜನಸಂಖ್ಯೆಯಲ್ಲಿ ಅವರೇ ಮೈನಾರಿಟಿಗಳಾಗಿದ್ದರೂ ಸರ್ಕಾರದ ಮತ್ತು ಆಡಳಿತದ ಸ್ಥಾನ ಅವರಿಗಷ್ಟೇ ಮೀಸಲಾಗಿದೆ. ವಲಸೆ ಬಂದವರಿಗೆ ಕೆಲಸಕ್ಕೆ ಹೊಂದುವಂತಹ ವೀಸಾ ಕೊಡಲಾಗುತ್ತದೆ. ವೀಸಾ ಪಡೆದನಂತರ ಸ್ಥಳೀಯ ನೌಕರಿ ನೀಡಿದ್ದ ಸಂಸ್ಥೆ ಒಂದರಿಂದ ಮೂರು ವರ್ಷದ ವರೆಗೆ ರೆಸಿಡೆನ್ಸ್ ಸ್ಟೇಟಸ್ ನೀಡುತ್ತದೆ. ಅದನ್ನು ಮತ್ತೆ ಮತ್ತೆ ವಿಸ್ತರಿಸಬೇಕಾಗುತ್ತದೆ. ಇಲ್ಲಿ ಖಾಯಂ ಆಗಿ ನೆಲೆಸಲು ಸಾಧ್ಯವಿಲ್ಲ. ಬಹುಶ ಈ ಕಾರಣಕ್ಕಾಗಿ ಹೆಚ್ಚಿನ ಜನ ಈ ದೇಶಗಳಿಗೆ ನಿರಾಶ್ರಿತರಾಗಿ ಬರುವುದಿಲ್ಲ. ವಿಶೇಷ ತಜ್ಞರಿಗೆ ೧೦ ವರ್ಷಗಳ ಮಟ್ಟಿಗೆ ರೆಸಿಡೆನ್ಸಿ ದೊರಕಬಹುದು. ನಿವೃತ್ತಿ ನಂತರ ಉದ್ಯೋಗಿಗಳು ತಮ್ಮ ದೇಶಕ್ಕೆ ಮರಳಬೇಕಾಗುತ್ತದೆ. ಇಲ್ಲಿ ಕೆಲವು ಹೊರತುಗಳು ಇರಬಹುದು. ಸ್ಥಳೀಯ ಎಮಿರಾಟಿಗಳಿಗೆ ವಿಶೇಷ ಸೌಲಭ್ಯಗಳಿವೆ. ಹೀಗಾಗಿ ಅರಬ್ಬರು “ಹುಟ್ಟಿದರೇ….ಎಮಿರಾಟಿಗಳಾಗಿ ಹುಟ್ಟಬೇಕು"! ಎಂದು ಹಾಡಬಹುದು.

ಈ ಒಂದು ಹಿನ್ನೆಲೆಯಲ್ಲಿ ಒಂದು ಲಘು ಹಾಸ್ಯ ಪ್ರಸಂಗವನ್ನು ಹಂಚಿಕೊಳ್ಳುತ್ತಿದ್ದನೇ. ನಾವು, ರಮೇಶ್ ಮತ್ತು ಅವರ ಮಿತ್ರರಾದ ಪ್ರತಾಪ್ ಮತ್ತು ವಿಜಯ ಅವರ ಅಬುದಾಬಿ ಮನೆಯಲ್ಲಿ ತಂಗಿದ್ದೆವು. ಒಂದು ಬೆಳಗ್ಗೆ ಉಪಹಾರದ ವೇಳೆಯಲ್ಲಿ ನಾನು ರೆಡಿಯಾಗಿ ಗರಿ ಗರಿಯಾಗಿ ಇಸ್ತ್ರಿಮಾಡಿದ್ದ ಪ್ಯಾಂಟ್, ಶರ್ಟ್ ಮತ್ತು ಥಳ ಥಳಿಸುವ ಶೂ ಕಟ್ಟಿ ಕೆಳಗೆ ಬಂದೆ. ನನ್ನನ್ನು ಗಮನಿಸಿದ ಪ್ರತಾಪ್ ಕೂಡಲೇ "ನೋಡಿ ಪೂರ್ಣಿಮಾ, ಪ್ರಸಾದ್ ಅವರು ಯಂಗ್ ಆಗಿ, ಸ್ಮಾರ್ಟ್ ಆಗಿ ಕಾಣುತ್ತಿದ್ದಾರೆ, ಅವರಿಗೆ ಇನ್ನೊಂದು ಮಾಡುವೆ ಮಾಡಿಬಿಡಬಹುದು" ಎಂದು ಕೀಟಲೆಯ ಮಾತುಗಳನ್ನಾಡಿದರು. ನಾನು ಕೂಡಲೇ "ಪ್ರತಾಪ್ ನನಗೊಂದು ಎಮಿರಾಟಿ ಹೆಣ್ಣನ್ನು ನೋಡಿ, ನಾನು ಮದುವೆಯಾಗಿ ಅಬುದಾಬಿಯಲ್ಲಿ ಶೇಕ್ ಆಗಿ, ನಿಶ್ಚಿಂತೆಯಾಗಿ, ಖಾಯಂ ಆಗಿ ಇದ್ದು ಬಿಡುತ್ತೇನೆ" ಎಂದೆ. ಅಂದಹಾಗೆ ಎಮಿರಾಟಿ ಹೆಂಗಸರು ಹೊರಗಿನವರನ್ನು ಮದುವೆಯಾಗುವುದು ನಿಷಿದ್ಧ. ಕಾನೂನು ಬಾಹಿರವಾದದ್ದು.

ಇಲ್ಲಿ ಎಮಿರಾಟಿಗಳೇ ಆಗಿರಲಿ ಅಥವಾ ಹೊರಗಿನವರೇ ಆಗಿರಲಿ ಗಂಡು ಹೆಣ್ಣುಗಳು ಬಹಿರಂಗವಾಗಿ ತಮ್ಮ ಪ್ರೀತಿಯನ್ನು ಮುಕ್ತವಾಗಿ ವ್ಯಕ್ತಪಡಿಸಲು ಸಾಧ್ಯವಿಲ್ಲ, ಇತ್ತೀಚಿಗೆ ಕಾನೂನು ಸ್ವಲ್ಪ ಸಡಿಲಗೊಂಡು ಕೈ ಕೈ ಹಿಡಿಯಬಹುದು. ಹಿಂದೆ ಇಲ್ಲಿ ಬಹಿರಂಗವಾಗಿ ಚುಂಬನದಲ್ಲಿ ತೊಡಗಿದ್ದ ಪಾಶ್ಚಿಮಾತ್ಯ ಗಂಡು ಹೆಣ್ಣು ಜೋಡಿಯನ್ನು ಅಪರಾಧಿಗಳೆಂದು ಪರಿಗಣಿಸಲಾಗಿತ್ತು. ದುಬೈ, ಅಬುದಾಬಿಗೆ ಬರುವ ಪ್ರವಾಸಿಗಳು ಇಲ್ಲಿಯ ಧಾರ್ಮಿಕ ಮತ್ತು ಸಾಂಸ್ಕೃತಿಕ ನಿಯಮಗಳನ್ನು ಅರಿತುಕೊಳ್ಳುವುದು ಒಳಿತು. ಧಾರ್ಮಿಕ ಸ್ಥಳಗಳನ್ನು ಹೊರತಾಗಿ ಇಸ್ಲಾಂ ಧರ್ಮದ ಹೊರಗಿನ ಗಂಡಸರ ಮತ್ತು ಹೆಂಗಸರ ಉಡುಗೆ ತೊಡುಗೆಗಳ ಬಗ್ಗೆ ಹೆಚ್ಚಿನ ನಿರ್ಬಂಧೆಗಳು ಇಲ್ಲ. ಆದರೂ ಹೆಂಗಸರು ತಮ್ಮ ಉಡುಗೆಯ ಬಗ್ಗೆ, ಸಭ್ಯತೆಯ ಬಗ್ಗೆ, ಗಮನ ನೀಡುವುದು ಒಳಿತು. ಇಲ್ಲಿಯ ನ್ಯಾಯಾಂಗದಲ್ಲಿ ಇಸ್ಲಾಂ ಧರ್ಮದವರಿಗೆ ಮದುವೆ, ವಿವಾಹ ವಿಚ್ಛೇದನೆ, ಅಸ್ತಿ ವಿಸರ್ಜನೆ ಈ ವಿಷಯಗಳಲ್ಲಿ ಷರಿಯಾ ಕಾನೂನು ಅನ್ವಯವಾಗುತ್ತದೆ. ಅನ್ಯ ಧರ್ಮಿಗಳಿಗೆ ಸಿವಿಲ್ ಕಾನೂನು ಅನ್ವಯವಾಗುತ್ತದೆ. ಹಿಂದೆ ಇದ್ದ ಭಯಂಕರ ಉಗ್ರ ಶಿಕ್ಷೆಗಳಾದ ಕೈ ಕಡಿಯುವುದು, ಚಾಟಿ ಏಟು ಮುಂತಾದ ಹಿಂಸಾತ್ಮಕ ಶಿಕ್ಷೆಗಳನ್ನು ರದ್ದುಮಾಡಲಾಗಿದೆ. ನಾಸ್ತಿಕ ವಾದ ಮತ್ತು ಧರ್ಮ ನಿರಪೇಕ್ಷೆ ಒಂದು ಆಯ್ಕೆ ಅಲ್ಲ. ಇಲ್ಲಿ ಅದು ಅಪರಾಧ. ಇಲ್ಲಿ ಹೊರಗಿನವರು ಪರ್ಮಿಟ್ ಇರುವ ನಿಗದಿತ ಬಾರುಗಳಲ್ಲಿ, ಹೋಟೆಲಿನಲ್ಲಿ, ಮನೆಗಳಲ್ಲಿ ಮದ್ಯಪಾನ ಮಾಡಬಹುದು. ಇಲ್ಲಿ ಎಲ್ಲ ದೇಶಗಳ ವಿಸ್ಕಿ, ವೈನ್ ಇತ್ಯಾದಿ ದೊರೆಯುವ ಅಂಗಡಿಗಳು ತೆರೆಯಲ್ಪಟ್ಟಿವೆ. ಇಲ್ಲಿ ವಾರಾಂತ್ಯವನ್ನು ಶುಕ್ರವಾರದ ಬದಲಿಗೆ ಪ್ರಪಂಚದ ಇತರ ದೇಶಗಳ ಅಂತರರಾಷ್ಟ್ರೀಯ ಕೆಲಸ ಕಾರ್ಯಗಳಿಗೆ ಹೊಂದುವಂತೆ ಶನಿವಾರ ಮತ್ತು ಭಾನುವಾರ ರಜಾದಿನಗಳಾಗಿ ಬದಲಾಯಿಸಲಾಗಿದೆ. ಇಸ್ಲಾಂ ಧರ್ಮಾದವರಿಗೆ ಶುಕ್ರವಾರ ಪ್ರಾರ್ಥನೆ ಮಾಡಲು ಅನುವು ಮಾಡಿಕೊಡಲಾಗಿದೆ. ನಿಧಾನವಾಗಿ ಹೊರಗಿನ ಸಂಸ್ಕೃತಿಯನ್ನು ಒಪ್ಪಿಕೊಳ್ಳುತ್ತಾ ಒಂದು ಹದವಾದ ಹತೋಟಿಯಲ್ಲಿ ಈ ರಾಷ್ಟ್ರ ಬದಲಾಗುತ್ತಿದೆ.

ನಾನು ಪ್ರವಾಸ ಮಾಡುವ ಸಂದರ್ಭದಲ್ಲಿ ಭಾರತದ ಪ್ರಧಾನಿ ಮೋದಿ ಅವರು ಆಗಮಿಸಿ ಅಬುದಾಬಿಯ ಹಿಂದೂ ದೇವಾಲಯದ ಪ್ರತಿಷ್ಠಾಪನೆಯಲ್ಲಿ ಭಾಗವಹಿಸಿದರು ಎಂದು ಸುದ್ದಿವಾಹಿನಿಯಿಂದ ತಿಳಿದೆ. ಇಸ್ಲಾಂ ಧರ್ಮದ ಕಟ್ಟು ನಿಟ್ಟುಗಳ ಮಧ್ಯೆ ಸಂಯುಕ್ತ ಅರಬ್ ರಾಷ್ಟ್ರದಲ್ಲಿ (UAE) ಪ್ರಸಕ್ತ ಭಾರತಕ್ಕಿಂತ ಹೆಚ್ಚು ಧಾರ್ಮಿಕ ಸಹಿಷ್ಣುತೆ ಇದೆಯೆಂದು ಅರಿತ್ತಿದ್ದೇನೆ. ಇಲ್ಲಿ ಮಸೀದಿ, ಮಂದಿರ ಮತ್ತು ಚರ್ಚುಗಳು ಒಂದರ ಪಕ್ಕ ಇನ್ನೊಂದಿದ್ದು ಜನ ಧಾರ್ಮಿಕ ಸೌಹಾರ್ದತೆಯನ್ನು ಉಳಿಸಿಕೊಂಡಿದ್ದಾರೆ, ಎಲ್ಲರಿಗೂ ಅವರವರ ಧಾರ್ಮಿಕ ನಂಬಿಕೆಗಳ ಜೊತೆ ಅನ್ಯ ಧರ್ಮದವರ ಬಗ್ಗೆ ಗೌರವವಿದೆ ಎಂದು ನಮನ್ನು ದುಬೈ ನಗರದಿಂದ ಅಲೈನ್ ನಗರಕ್ಕೆ ಕರೆತಂದ ಪಾಕಿಸ್ತಾನದ ಪೇಶಾವರ್ ಮೂಲದ ಪಠಾಣ್ ಖಾನ್ ಎಂಬ ಟ್ಯಾಕ್ಸಿ ಡ್ರೈವರ್ ಮೂಲಕ ತಿಳಿಯಿತು. ಈತನಿಗೆ ಭಾರತೀಯ ಮೂಲದ ಜನರ ಬಗ್ಗೆ ಸ್ನೇಹ ವಿಶ್ವಾಸ ಗೌರವಗಳಿರುವುದನ್ನು ಕಂಡು ಸಂತೋಷವಾಯಿತು. ಇಂದಿನ ಭಾರತದಲ್ಲಿ ಧರ್ಮವೆಂಬ ಅಮಲಿನಲ್ಲಿ ನಾವು ಹಿಂದೂ ಅಲ್ಲದವರನ್ನು, ಅದರಲ್ಲೂ ಇಸ್ಲಾಂ ಧರ್ಮದವರನ್ನು ಹೀಯಾಳಿಸಿ ಎರಡನೇದರ್ಜೆ ಪ್ರಜೆಗಳಂತೆ ಕಾಣುತ್ತಿರುವ ಪರಿಸ್ಥಿತಿಯಲ್ಲಿ ಪಠಾಣ್ ಖಾನ್ ಒಬ್ಬ ಆಪ್ತನಾಗಿ ಕಂಡುಬಂದ. ಅವನು ತನ್ನ ಪಾಕಿಸ್ತಾನದ ರಾಜಕೀಯ ಹುಳುಕುಗಳನ್ನು, ಅಲ್ಲಿಯ ಅಸಮರ್ಥ ಆಡಳಿತವನ್ನು ಮತ್ತು ತನ್ನ ಸ್ವಂತ ಕಷ್ಟಗಳನ್ನು ನಮ್ಮೊಂದಿಗೆ ಹಂಚಿಕೊಂಡ. “ಹಿಂದೊಮ್ಮೆ ನಾವು ಒಂದೇ ಅವಿಭಾಜ್ಯ ದೇಶದ ಪ್ರಜೆಗಳಾಗಿದ್ದೆವು, ವೈಯುಕ್ತಿಕ ನೆಲೆಯಲ್ಲಿ ನಾವೆಲ್ಲಾ ಮಿತ್ರರೇ ಆಗಿದ್ದರೂ, ಎರಡೂ ದೇಶಗಳ ರಾಜಕಾರಣ ನಮ್ಮನ್ನು ದೂರವಾಗಿಸಿದೆ” ಎಂದು ವ್ಯಥೆ ಪಟ್ಟ. ಅವನ ಪ್ರಾಮಾಣಿಕ ಅನಿಸಿಕೆಗಳನ್ನು ನಾವು ಒಪ್ಪಿಕೊಂಡೆವು. ಒಂದು ದೇಶದ ಒಳಗೇ ಬದುಕುತ್ತಿರುವಾಗ ಒಂದು ಸಂಕುಚಿತ ಐಡಿಯಾಲಾಜಿಗೆ ಬದ್ಧರಾಗಿ, ನಮ್ಮ ಆಲೋಚನಾಕ್ರಮಗಳ ಆಚೆಗೆ ನಾವು ವಿಚಾರ ಮಾಡುವುದಿಲ್ಲ. ನಮಗೆ ತಿಳಿದದ್ದೇ ಸರಿ, ಎಲ್ಲರು ಹೇಳುತ್ತಿರುವುದು ಸರಿ ಎಂದು ಕುರಿಯ ಮಂದೆಯ ಹಾಗೆ ಪರಿಣಾಮಗಳನ್ನು ಚಿಂತಿಸದೆ ಅನುಸರಿಸುತ್ತೇವೆ. ದೇಶ, ಗಡಿ ಸಂಸ್ಕೃತಿಗಳನ್ನು ದಾಟಿ ಹೊಸ ದಿಂಗಂತದಲ್ಲಿ ಕಾಲಿಟ್ಟಾಗ ಹಳೇ ಬ್ಯಾಗೇಜುಗಳಾದ ದೇಶಭಕ್ತಿ, ದೇಶಪ್ರೇಮಗಳು ತಮ್ಮ ಪ್ರಸ್ತುತತೆಯನ್ನು ಕಳೆದುಕೊಂಡು ಅಲ್ಲಿ ವಿಶ್ವ ಮಾನವ ಪ್ರಜ್ಞೆ ಉಂಟಾಗುತ್ತದೆ. ಈ ವಿಚಾರವನ್ನು ಅರಿಯಲು ದೇಶದ ಹೊರಗೇನು ಕಾಲಿಡಬೇಕಾಗಿಲ್ಲ. ಒಂದು ಬಹುಮುಖಿ ಸಂಸ್ಕೃತಿಯಲ್ಲಿ ಬದುಕುವವರಿಗೆ ಹೊಳೆಯಬೇಕು. ಕೆಲವರಿಗೆ ಈ ವಿಚಾರಗಳು ಸುಲಭದಲ್ಲಿ ಹೊಳೆಯುತ್ತವೆ, ಕೆಲವರಿಗೆ ಹೊಳೆಯುವುದಿಲ್ಲ. ಮುಸ್ಲಿಂ ಧರ್ಮಾಂದತೆ, ಐಸಿಸ್ ಭಯೋತ್ಪಾದನೆ, ಹಿಂದೂಗಳ ಹಿಂದುತ್ವ ವಾದ, ಜಾತಿವಾದ, ಬಿಳಿಯರ ರೇಸಿಸಂ ಹೀಗೆ ಒಂದೊಂದು ಐಡಿಯಾಲಜಿಯ ಆಳಕ್ಕೆ ಇಳಿದವರನ್ನು ಕಂಡಾಗ ಒಂದು ಉಕ್ತಿ ನೆನಪಾಗುತ್ತದೆ ಅದು ಹೀಗಿದೆ; "ಭಾವಿಯ ಒಳಗೇ ಇರುವ ಕಪ್ಪೆಗಳಿಗೆ ಸಾಗರದ ವಿಸ್ತಾರವನ್ನು ತೋರಿಸುವುದಾದರೂ ಹೇಗೆ?"

ಅಂದಹಾಗೆ ಅರಬ್ ಸಂಯುಕ್ತ ರಾಷ್ಟ್ರವು ವಾಸಿಸಲು ಯೋಗ್ಯಸ್ಥಳವಾಗಿ ಇಲ್ಲಿ ಹಲವಾರು ಉದ್ಯೋಗ ಅವಕಾಶಗಳು ಇರುವಾಗ ಮಧ್ಯಪೂರ್ವ ದೇಶಗಳಾದ ಸಿರಿಯಾ, ಲಿಬಿಯಾ, ಇರಾಕ್ ಮುಂತಾದ ದೇಶಗಳಲ್ಲಿ ಯುದ್ಧಗಳಾಗಿ ಸ್ಥಳಾಂತರಗೊಂಡ ನಿರಾಶ್ರಿತರಿಗೆ ಈ ಶ್ರೀಮಂತ ಅರಬ್ ರಾಷ್ಟ್ರಗಳು ಏಕೆ ಆಶ್ರಯ ನೀಡುತ್ತಿಲ್ಲ? ಅವರು ಇಸ್ಲಾಂ ಧರ್ಮದವರಲ್ಲವೇ? ದೂರದಲ್ಲಿರುವ ಮತ್ತು ಭಿನ್ನ ಸಂಸ್ಕೃತಿಯುಳ್ಳ ಅಮೇರಿಕ, ಯು.ಕೆ, ಯುರೋಪ್ ದೇಶಗಳಿಗೆ ಏಕೆ ಈ ನಿರಾಶ್ರಿತರು ಲಗ್ಗೆ ಇಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಅರಬ್ ರಾಷ್ಟ್ರಗಳಿಗೂ ಸಾಮಾಜಿಕ ಜವಾಬ್ದಾರಿಗಳು ಇರಬೇಕಲ್ಲವೇ?

ಸಂಯುಕ್ತ ಅರಬ್ ಸಂಸ್ಥಾನಗಳ ಈ ರಾಷ್ಟ್ರವು ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಅಧಿಕವಾದ ಅನಿಲ ಮತ್ತು ತೈಲ ಸಂಪನ್ಮೂಲಗಳನ್ನು ಒಳಗೊಂಡು ಅದನ್ನು ಸರಿಯಾಗಿ ವ್ಯವಸ್ಥಿತವಾಗಿ ಬಳಸಿ, ದಕ್ಷ ಆಡಳಿತವನ್ನು ನೀಡುತ್ತಾ ಬಂದಿದೆ. ಈ ಸಂಯುಕ್ತ ಅರಬ್ ರಾಷ್ಟ ಇಷ್ಟರ ಮಟ್ಟಿಗೆ ಬೆಳೆಯಲು ನೈಸರ್ಗಿಕ ಸಂಪನ್ಮೂಲಗಳಷ್ಟೇ ಕಾರಣವಲ್ಲ. ಇಲ್ಲಿ ಸ್ಥಿರವಾದ ರಾಜಕಾರಣವಿದೆ, ನಾಯಕತ್ವವಿದೆ. ಅಬುದಾಬಿಯ ರಾಜರು ಈ ಸಂಯುಕ್ತ ದೇಶದ ಅಧ್ಯಕ್ಷರು. ದುಬೈ ರಾಜ ಇಲ್ಲಿಯ ಪ್ರಧಾನಿ. ಅಬುದಾಬಿ ಈ ರಾಷ್ಟ್ರದ ರಾಜಧಾನಿ. ಇಲ್ಲಿಯಾ ಫೆಡರಲ್ ನ್ಯಾಷನಲ್ ಕೌನ್ಸಿಲ್ ಆಡಳಿತ ನಡೆಸುತ್ತದೆ. ೫೦% ಸದಸ್ಯರನ್ನು ನೇಮಕ ಮಾಡಲಾಗುತ್ತದೆ, ಉಳಿದರ್ಧ ಸದಸ್ಯರನ್ನು ಚುನಾಯಿಸಲಾಗುತ್ತದೆ. ಕೆಲವು ಮಧ್ಯಪೂರ್ವ ರಾಷ್ಟ್ರಗಳಲ್ಲಿ ಅರಬ್ ಸ್ಪ್ರಿಂಗ್ ಎಂಬ ಸರಕಾರದ ವಿರುದ್ಧ ನಡೆದ ಚಳುವಳಿ ಮತ್ತು ಪ್ರತಿಭಟನೆ ಈ ಅರಬ್ ಸಂಯುಕ್ತ ರಾಷ್ಟ್ರದಲ್ಲಿ ನಡೆದಿಲ್ಲ ಎಂಬುದನ್ನು ಗಮನಿಸಬೇಕು. ಇದಕ್ಕೆ ಕಾರಣವೆಂದರೆ ಇಲ್ಲಿರುವ ಹೆಚ್ಚಿನ ನಿವಾಸಿಗಳಲ್ಲಾ ಹೊರಗಿನವರೇ, ಅವರಿಗೆ ಪ್ರತಿಭಟಿಸುವ ಹಕ್ಕಿಲ್ಲ. ಪ್ರತಿಭಟಿಸಿದರೆ ಎಮಿರಾಟಿಗಳೇ ಪ್ರತಿಭಟಿಸಬೇಕು. ಎಮಿರಾಟಿ ಸಮುದಾಯದ ಕೆಲವರು ಪ್ರಭುತ್ವವನ್ನು ಪ್ರಶ್ನಿಸಿರುವ ಪ್ರಸಂಗಗಳಿವೆ, ಅದನ್ನು ಹತ್ತಿಕ್ಕಿ ಹತೋಟಿಯಲ್ಲಿಡಲಾಗಿದೆ. ಅನಿಲ ಮತ್ತು ತೈಲ ಸಂಪನ್ಮೂಲಗಳು ಶಾಶ್ವತವಲ್ಲ. ಮೇಲಾಗಿ ವಿಶ್ವದಲ್ಲೇ ಫಾಸ್ಸಿಲ್ ಇಂಧನ ಬಳಕೆ ಕಡಿಮೆ ಮಾಡಿ ಜಾಗತಿಕ ತಾಪಮಾನವನ್ನು ಹತೋಟಿಯಲ್ಲಿ ಇಡಲು ನಿರ್ಬಂಧನೆಗಳು ಮೂಡುತ್ತಿವೆ. ಈ ಹಿನ್ನಲೆಯಲ್ಲಿ ಅರಬ್ ಸಂಯುಕ್ತ ರಾಷ್ಟ್ರವು ಪ್ರವಾಸೋದ್ಯಮ, ವಿಮಾನ ಸಾರಿಗೆ, ಟೆಕ್ ಕಂಪನಿಗಳ ಉದ್ಯಮ, ಕೃಷಿ ಮತ್ತು ಇನ್ನಿತರ ಆದಾಯಗಳ ಕಡೆ ಗಮನ ಹರಿಸಬೇಕಾಗಿದೆ. ಹೊಸ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳಬೇಕಾಗಿದೆ, ಇವುಗಳ ನಡುವೆ ಮಾನವೀಯ ಹಕ್ಕುಗಳನ್ನು, ಇಸ್ಲಾಂ ಧರ್ಮದ ಕಟ್ಟು ನಿಟ್ಟುಗಳನ್ನು, ಜಾಗತೀಕರಣ ತರುವ ಬದಲಾವಣೆಗಳನ್ನು, ಮತ್ತು ಇತರ ಸವಲಗಳನ್ನು ಎದುರಿಸಬೇಕಾಗಿದೆ. ಉದಾರವಾದ ನೀತಿಗಳನ್ನು ಒಪ್ಪಿಕೊಳ್ಳುವುದು ಅನಿವಾರ್ಯವಾಗಿದೆ. 'ಪರಿವರ್ತನೆ ಜಗದ ನಿಯಮ' ಎಂಬ ವಿಚಾರ ಅರಬ್ಬರನ್ನೂ ತಟ್ಟುತ್ತಿದೆ.

***