ತಸ್ಮೈಶ್ರೀಗುರವೇನಮಃ

ಫೋಟೋ ಕೃಪೆ ಗೂಗಲ್ L>R ರಾಧಾ ಕೃಷ್ಣನ್, ಬಿಎಂಶ್ರೀ, ಕುವೆಂಪು, ಹೆಚ್ ಏನ್
ಕಳೆದ ಕೆಲವು ದಿನಗಳ ಹಿಂದೆ ನಾವೆಲ್ಲಾ ಶಿಕ್ಷಕರ ದಿನಾಚರಣೆಯನ್ನು ಆಚರಿಸಿ ನಮ್ಮ ಬದುಕಿನಲ್ಲಿ ನಮಗೆ ಸ್ಫೂರ್ತಿ ನೀಡಿ, ಜ್ಞಾನ ದೀವಿಗೆಯನ್ನು ಕೈಗಿತ್ತ ಗುರುಗಳನ್ನು ಸ್ಮರಿಸಿಕೊಂಡಿದ್ದೇವೆ. ಇಂದು ಗೌರಿ ಪ್ರಸನ್ನ ಮತ್ತು ಡಾ. ದೇಸಾಯಿಯವರು ತಮ್ಮ ಗುರುವಿನ ಬಗ್ಗೆ ಆತ್ಮೀಯವಾದ ಬರಹಗಳನ್ನು ಇಲ್ಲಿ ಸಮರ್ಪಿಸಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ಗುರು-ಶಿಷ್ಯರ ಪರಂಪರೆಗೆ, ಸಂಬಂಧಗಳಿಗೆ ಉಚ್ಚ ಸ್ಥಾನಮಾನಗಳಿವೆ. 'ಗುರು ಸಾಕ್ಷಾತ್ ಪರಬ್ರಹ್ಮ' ಎಂದು ಪರಿಗಣಿಸುತ್ತೇವೆ. ಇದು ಒಂದು ಪವಿತ್ರವಾದ ನಂಟು. ಗುರುವಿಗೆ ಒಂದು ಜವಾಬ್ದಾರಿಯಿದೆ, ಜ್ಞಾನಾರ್ಜನೆಯ ಕರ್ತವ್ಯ ಮತ್ತು ಕೈಂಕರ್ಯವಿದೆ. ನಿಜವಾದ ಗುರುವಿಗೆ ತನ್ನ ಶಿಷ್ಯರ ಬಗ್ಗೆ ಪಕ್ಷಪಾತವಿರಬಾರದು, ಅಲ್ಲಿ ಜಾತಿ ಮತಗಳ ಭಾವನೆಗಳು ನುಸುಳಿ ಬರಬಾರದು. ಬಹಳ ಹಿಂದೆ ಗುರುಕುಲಗಳಲ್ಲಿ ಕೆಳಜಾತಿ ವರ್ಗದವರಿಗೆ, ಹೆಂಗಸರಿಗೆ ವಿದ್ಯೆಯನ್ನು ಪಡೆಯುವ ಅರ್ಹತೆ ಇಲ್ಲವೆಂದು ಅವರನ್ನು ದೂರ ಇಡಲಾಗಿತ್ತು. ಏಕಲವ್ಯನಂಥವರು ತಮ್ಮ ಕಲಿಕೆಯನ್ನು ತ್ಯಜಿಸಬೇಕಾಯಿತು. ಅದು ಗುರುಭಕ್ತಿಯ ಪರಾಕಾಷ್ಠೆ ಹಾಗೂ ಉತ್ತಮ ನಿದರ್ಶನವೂ ಹೌದು. ಸ್ವಾತಂತ್ರ್ಯ ಭಾರತದಲ್ಲಿ ಶಿಕ್ಷಣ ಎಲ್ಲರ ಹಕ್ಕು. ಹಿಂದೆ ಮತ್ತು ಇಂದಿಗೂ ಕೆಲವೆಡೆ ಶಿಕ್ಷಕರು ಶಿಷ್ಯನಿಗೆ ಬಹಳ ಅಸಡ್ಡೆಯಿಂದ, ಕೆಲವೊಮ್ಮೆ ಎಲ್ಲರ ಮುಂದೆ ತೇಜೋವಧೆ ಮಾಡಿ ಹೀನೈಸಿ ವಿದ್ಯೆ ಕಲಿಸುವ ವಿಧಾನ ಸರಿಯೆಂದು ಭಾವಿಸಿದ್ದಾರೆ. (Learning by humiliation) ಇಂತಹ ಗುರುಗಳು ಮತ್ತು ಇಂತಹ ಶಿಕ್ಷಣ ವ್ಯವಸ್ಥೆ ಕಲಿಕೆಗೆ ತದ್ವಿರುದ್ಧ ಪರಿಣಾಮಗಳನ್ನು ತರಬಹುದು. ನಿಜವಾದ ಗುರು ಶಿಷ್ಯನ ಸರ್ವತೋಮುಖ ಬೆಳವಣಿಗೆಗೆ 
(Holistic Development) ಪೂರಕವಾಗುವ ಶಿಕ್ಷಣವನ್ನು ಆಸ್ಥೆಯಿಂದ, ಪ್ರೀತಿಯಿಂದ ನೀಡಬೇಕಾಗಿದೆ. ಶಿಷ್ಯನನ್ನು ಗೌರವದಿಂದ ಕಂಡು, ಅವನು ತನ್ನ ಪೈಪೋಟಿ ಎಂದೆನಿಸದೆ ಶಿಷ್ಯನು ತನ್ನಷ್ಟೇ ಅಥವಾ ತನಗಿಂತ ಉನ್ನತ ಸ್ಥಾನವನ್ನು ಏರಬೇಕೆಂದು ನೀರೀಕ್ಷೆಯಿಟ್ಟುಕೊಂಡಲ್ಲಿ ಅದು ಶಿಕ್ಷಣದ ಉದ್ದೇಶವನ್ನು ಪೂರೈಸುತ್ತದೆ. ಶಿಷ್ಯರಿಂದ ಶಿಷ್ಯರಿಗೆ ಜ್ಞಾನದ ಬೆಳಕು ಇನ್ನು ಪ್ರಖರವಾಗಿ ಬೆಳಗಬೇಕೆ ಹೊರತು ಅದು ಕುಂದಬಾರದು. ಈ ಜ್ಞಾನದಿಂದ ಒಬ್ಬ ವ್ಯಕ್ತಿಯ ವಿಕಾಸದ ಜೊತೆಗೆ ಒಂದು ಸಮಾಜದ ವಿಕಾಸವೂ ಆಗಬೇಕು, ಅಲ್ಪ ಮಾನವ ವಿಶ್ವಮಾನವನಾಗಬೇಕು, ಅದೇ ಶಿಕ್ಷಣದ ಗುರಿ. ಕೆಲವು ವಿಶೇಷ ಗುರು-ಶಿಷ್ಯ ಸಂಬಂಧಗಳು, ಶಿಷ್ಯ ಗುರುವಿಗೆ ಸಲ್ಲಿಸಿರುವ ಕಾಣಿಕೆಗಳು ಕಾವ್ಯ ರೂಪದಲ್ಲೂ ಅಭಿವ್ಯಕ್ತಗೊಂಡಿವೆ. ಗೌರಿ ಅವರು ಕೆಳಗೆ ತಮ್ಮ ಬರಹದ ಕೊನೆಯಲ್ಲಿ ಪ್ರಸ್ತಾಪಿಸಿರುವಂತೆ, ಜಿ ಎಸ್ ಎಸ್ ತಮ್ಮ ಗುರುಗಳಾದ ಕುವೆಂಪು ಅವರನ್ನು ಗೌರವದಿಂದ, ನಿಶ್ಶಬ್ದದಲ್ಲಿ ನಿಂತು ನೆನೆಯುತ್ತಾರೆ. ಗುರುಗಳು ಕೊಟ್ಟ ಹೊಸ ಹುಟ್ಟುಗಳನ್ನು ಹಿಡಿದು, ದೋಣಿಯೇರಿ ಜ್ಞಾನವೆಂಬ ಸಾಗರವನ್ನು ಪ್ರವೇಶಿಸುತ್ತಾರೆ. ಅವರ ಗುರುಗಳಾದ ಕುವೆಂಪುರವರು ತಮ್ಮ ಮೇರುಕೃತಿ ಶ್ರೀ ರಾಮಾಯಣ ದರ್ಶನಂ ಮುಗಿಸಿ ಅದನ್ನು ತಮ್ಮ ಗುರುಗಳಾದ ಶ್ರೀ ವೆಂಕಣ್ಣಯ್ಯನವರಿಗೆ ಅರ್ಪಿಸಿ; 

"ಇದೋ ಮುಗಿಸಿ ತಂದಿಹೆನ್ ಈ ಬೃಹದ್ ಗಾನಮಂ, 
ನಿಮ್ಮ ಸಿರಿಯಡಿಗೆ ಒಪ್ಪಿಸಲ್ಕೆ, ಓ ಪ್ರಿಯ ಗುರುವೇ, ಕರುಣಿಸಿಂ 
ನಿಮ್ಮ ಹರಕೆಯ ಬಲದ ಶಿಷ್ಯನಂ" 

ಎಂದು ವಿನಂತಿಸುತ್ತಾರೆ. ಹೀಗೆ ಗುರು ಶಿಷ್ಯರ ಪ್ರೀತಿ ವಿಶ್ವಾಸಗಳ ಪರಂಪರೆಯನ್ನು ಮತ್ತು ಅದರ ಸಮೃದ್ಧಿಯನ್ನು ಕನ್ನಡ ಸಾಹಿತ್ಯದಲ್ಲಿ ಕಾಣಬಹುದು. ಆದರ್ಶ ಗುರುಗಳು ನಮಗೆ ಸ್ಫೂರ್ತಿಯನ್ನು ನೀಡಿ ಬದುಕಿನ ದಿಕ್ಕನ್ನೇ ಬದಲಾಯಿಸುತ್ತಾರೆ. ಸಮರ್ಥಗುರುಗಳು ನಮ್ಮ ಸ್ಮೃತಿಯಲ್ಲಿ ಅಮರರಾಗಿರುತ್ತಾರೆ. ಇಂತಹ ಮಹಾನುಭಾವಿ ಮಹನೀಯರನ್ನು ಮಹಿಳೆಯರನ್ನು ಶಿಕ್ಷಕರ ದಿನದಂದು ಸ್ಮರಿಸುವುದು, ನಮನಗಳನ್ನು ಅರ್ಪಿಸುವುದು ನಮ್ಮ ಕರ್ತವ್ಯ. 

***

ನಮ್ಮೆಲ್ಲರ ನೆಚ್ಚಿನ ರಾಣಿ ಎಲಿಝಬೆತ್ ಇಂದು ತೀರಿಕೊಂಡಿದ್ದಾಳೆ. ಅವಳ ಕರ್ತವ್ಯ ನಿಷ್ಠೆ ನಮಗೆಲ್ಲ ಆದರ್ಶಪ್ರಾಯವಾಗಿದೆ. ತನಗೆ ದೊರಕಿದ ಆಯುಷ್ಯದುದ್ದಕ್ಕೂ ಜನರ ಸೇವೆಯನ್ನು ಮಾಡುವುದಾಗಿ ಪಣತೊಟ್ಟಿದ್ದು ಅದನ್ನು ಇಂದು ಪೂರೈಸಿದ್ದಾಳೆ. ಕಳೆದ ಕೆಲವು ತಿಂಗಳ ಹಿಂದೆ ರಾಣಿಯ ೭೦ ವರ್ಷ ಆಳ್ವಿಕೆಯ ಸಂದರ್ಭದಲ್ಲಿ ಅನಿವಾಸಿ ಬಳಗ ವಿಶೇಷ ಸಂಚಿಕೆ ತಂದಿದ್ದನು ಇಲ್ಲಿ ಸ್ಮರಿಸಬಹುದು. ರಾಣಿಯ ಆತ್ಮಕ್ಕೆ ಶಾಂತಿಯನ್ನು ಕೊರೋಣ. 

 - ಸಂಪಾದಕ 

*************
ಫೋಟೋ ಕೃಪೆ ಗೂಗಲ್ L>R ಅನಿ ಬೆಸೆಂಟ್, ರೋಮಿಲಾ ಥಾಪರ್ ಮತ್ತು ಚೀ.ನಾ. ಮಂಗಳ
ಶಿಕ್ಷಕರ ದಿನಾಚರಣೆ – ಶ್ರೀಮತಿ ಗೌರಿ ಪ್ರಸನ್ನ 

ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಹ 
 ಸುಮಾರು ೩-೫ ವರುಷಗಳ ಹಿಂದಿನ ಮಾತು. ಅದೊಂದು ಸುಂದರ ಶಾಲೆ. ಅಂದು ಶಿಕ್ಷಕರ ದಿನಾಚರಣೆ. ಹತ್ತನೆಯ ತರಗತಿಯ ವಿದ್ಯಾಥಿ೯ನಿಯರೆಲ್ಲ ತಮ್ಮ ನೆಚ್ಚಿನ ಗುರುವೃಂದಕ್ಕಾಗಿ ಒಂದು ಪುಟ್ಟ ಸಮಾರಂಭವನ್ನೇಪ೯ಡಿಸಿದ್ದರು. ಗುರುಶಿಷ್ಯರ ನಡುವಿನ ಸಂಬಂಧ ಅದೂ ಆ ಹದಿವಯಸ್ಸಿನಲ್ಲಿ ಬಹಳ ಮನೋಹರವೂ, ಆತ್ಮೀಯವೂ ಆಗಿರುತ್ತದೆಯಲ್ಲವೇ? ತಮ್ಮ ಪ್ರೀತಿಯ ಗುರುಗಳಿಗೊಂದು ಕೃತಜ್ಞತೆ ಸಲ್ಲಿಸುವ ಸದಾವಕಾಶ. ಜೀವನದ ವಕ್ರತೆಗಿನ್ನೂ ಅಪರಿಚಿತರಾದ ಆ ಹುಡುಗಿಯರ ಮೊಗದ ತುಂಬ ಮುಗ್ಧತೆಯ ಮುಗುಳ್ನಗು; ಹೃದಯಗಳಲ್ಲಿ ಪ್ರೀತಿ-ಗೌರವಗಳ ಮಹಾಪೂರ. ತಮ್ಮ ಪ್ರೀತ್ಯಾದರಗಳ ದ್ಯೋತಕವಾಗಿ ತಮಗೆ ತಿಳಿದಂತೆ ನಾಲ್ಕಾರು ಮಾತಾಡಿ, ಎಲ್ಲ ಶಿಕ್ಷಕವೃಂದಕ್ಕೂ ಒಂದೊಂದು ಗುಲಾಬಿ ಹೂ ಕೊಟ್ಟರು. ಶಿಕ್ಷಕರೆಲ್ಲ ಅವರ ಖುಷಿಯಲ್ಲಿ ತಾವೂ ಪಾಲ್ಗೊಂಡು ತಮ್ಮ ತಮ್ಮ ಅಂಗಿಯ ಕಿಸೆಗೆ ಸಿಕ್ಕಿಸಿಕೊಂಡರೆ ಶಿಕ್ಷಕಿಯರೆಲ್ಲ ತಮ್ಮ ಮುಡಿಗೆ ಮುಡಿದುಕೊಂಡರು. ಆದರೆ ಯಾವಾಗಲೂ ಬಳೆ-ಕುಂಕುಮವಿಲ್ಲದೇ, ಬರೀ ಸಾಧಾರಣ ಸೀರೆಗಳನ್ನುಟ್ಟು ಸೈಕಲ್ ಮೇಲೆ ಶಾಲೆಗೆ ಬರುವ ಒಬ್ಬ P.E .ಟೀಚರ್, ದೈಹಿಕ ಶಿಕ್ಷಕಿ ಮಾತ್ರ ಅದನ್ನು ಮುಡಿಯದೇ ಕೈಯಲ್ಲಿ ಹಿಡಿದು ಯಾವುದೋ ಚಿಂತನೆಯಲ್ಲಿ ಮುಳುಗಿದ್ದಾರೆ. 'ಪಾಪ! ಗಂಡ ಇರಲಿಕ್ಕಿಲ್ಲ. ಅದು ಹೇಗೆ ತಾನೇ ಮುಡಿದಾರು?!' ಎನ್ನುವ ಅನುಕಂಪ ನನಗೆ. ಆಷ್ಟರಲ್ಲೇ ಮತ್ತೋವ೯ ಹುಡುಗಿ ಜಯಶ್ರೀ ಯಾಳವಾರ ಅನ್ನುವವಳು ಕೇಳಿಯೇಬಿಟ್ಟಳು.' ಮೇಡಂ,ನಾವಷ್ಟು ಪ್ರೀತಿಯಿಂದ ಕೊಟ್ಟೇವಿ. ನೀವು ಇಟ್ಟುಕೊಳ್ಳಲೇ ಇಲ್ಲ?' ನಸುನಕ್ಕ ಅವರು ಉತ್ತರಿಸಿದರು - ' ಇಲ್ಲ ಮರೀ,ಖಂಡಿತ ನಿಮ್ಮ ಪ್ರೀತಿಗೆ ಸರಿಯಾದ ಸ್ಥಾನವನ್ನೇ ಅದು ಸೇರುತ್ತದೆ'. ಶಾಲೆಯಲ್ಲಿದ್ದ ಅರವಿಂದರ ಫೋಟೋವನ್ನದು ಅಲಂಕರಿಸಿತು. ನಮಗೆಲ್ಲ 'ಅಯ್ಯೋ! ಜಯಶ್ರೀ ಎಂಥ ಅನಾಹುತದ ಪ್ರಶ್ನೆ ಕೇಳಿಬಿಟ್ಟಳಲ್ಲ?' ಎಂಬ ಆತಂಕ.

   ಮರುದಿನ ೧೧ ಗಂಟೆ. ಕಿಲಕಿಲ ನಗುತ್ತ , ಜೋರುಜೋರಾಗಿ ಹರಟೆ ಹೊಡೆಯುತ್ತ ನಮ್ಮೆಲ್ಲ ಗೆಳತಿಯ ಸವಾರಿ ಇಡಿಯ ರೋಡನ್ನೇ block ಮಾಡಿಕೊಂಡು ಶಾಲೆಗೆ ಹೊರಟಿತ್ತು. 'ಟ್ರಿಣ್..ಟ್ರಿಣ್..' ಹಿಂದೆ ಮ್ಯಾಡಂ ನ ಸೈಕಲ್ ನ ಬೆಲ್ ದನಿ. ಹಿಂತಿರುಗಿ ನೋಡಿ ದಾರಿ ಮಾಡಿಕೊಟ್ಟ ನಮ್ಮ ಪಕ್ಕದಲ್ಲೇ ಸೈಕಲ್ ನಿಂದ ಇಳಿದ ಅವರು ನನ್ನನ್ನೇ ನೋಡುತ್ತ ಗಂಭೀರವಾಗಿ ' ನಿನ್ನೆ ಹೂವು ಯಾಕೆ ಮುಡಿದುಕೊಳ್ಳಲಿಲ್ಲ ಎಂದು ನೀನಲ್ಲವೇ ಕೇಳಿದ್ದ?' ಎಂದರು. ನನಗೋ ಒಮ್ಮೆಲೇ ಎದೆ ಝಲ್ಲೆಂದಿತು, ಖಂಡಿತ ಬಯ್ಯುತ್ತಾರಿವರು ಎಂದು. ಕೆಲಸಮಯದ ಹಿಂದೆ ಅಮ್ಮ ಅರಿಶಿನ-ಕುಂಕುಮಕ್ಕೆ ಎಲ್ಲರನ್ನೂ ಕರೆದು ಬಾ ಎಂದು ಹೇಳಿಕಳಿಸಿದಾಗ ನಮ್ಮೂರಿನ ಮಡಿಹೆಂಗಸು ಪದ್ದಕ್ಕಜ್ಜಿಯನ್ನೂ 'ಅರಿಶಿನ-ಕುಂಕುಮಕ್ಕ ಬರಬೇಕಂತ್ರಿ' ಎಂದು ಕರೆದು ' ನಿಮ್ಮವ್ವ ಹೇಳಿದ್ಲಾ ನನ್ನ ಕರಿ ಅಂತ. ಹುಚ್ಚು ಮುಂಡೆದೇ..' ಅಂತ ಅವರಿಂದ ಬಯ್ಯಿಸಿಕೊಂಡದ್ದು ನೆನಪಾಗಿ ಕಟ್ಟಾ ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದಿದ್ದ ನಾನು ಹೆದರಿದ್ದೆ.' ಓಹೋ! ಇವರು ಆ ಪ್ರಶ್ನೆ ಕೇಳಿದವಳು ನಾನೇ ಅಂದುಕೊಂಡಿದ್ದಾರೆ. ನಾನಲ್ಲ; ಜಯಶ್ರೀ ಎಂದು ಅವಳ ಹೆಸರು ಹೇಳಿ ಅವಳಿಗೆ ಬಯ್ಯಿಸಬಾರದು. ಪಾಪಾ! ಅವಳು ಮೊದಲೇ ಮೆತ್ತನೆಯ ಹುಡುಗಿ. ಏನೋ ತಿಳಿಯದೇ ಕೇಳಿದ್ದಾಳೆ' ..ಎಂದೆಲ್ಲ ಅನ್ನಿಸಿ 'ಹೌದ್ರಿ.ನಾನೇ' ಎಂದುಬಿಟ್ಟೆ. ನಾನಂದುಕೊಂಡಂತೆ ಅವರು ಬಯ್ಯಲಿಲ್ಲ;ರೇಗಲೂ ಇಲ್ಲ. ''ನೋಡು ಮರೀ, ನೀನಿನ್ನೂ ಸಣ್ಣವಳು.ಪ್ರಪಂಚದಲ್ಲಿ ಹುಟ್ಟಿದ ಪ್ರತಿಯೊಂದು ವ್ಯಕ್ತಿ , ವಸ್ತುವೂ ತನ್ನ ಆತ್ಯಂತಿಕ ಗುರಿಯನ್ನು ಮುಟ್ಟಲು ಉದ್ಯುಕ್ತವಾಗಿರುತ್ತದೆ; ಸಾಥ೯ಕತೆಯನ್ನು ಪಡೆಯಲು ತುಡಿಯುತ್ತಿರುತ್ತದೆ. ನೀವು ನಿನ್ನೆ ಕೊಟ್ಟ ಹೂ ..ದೇವನ, ಗುರುವಿನ ಶಿರವನ್ನೋ, ಪಾದವನ್ನೋ ಸೇರುವುದೇ ಅದರ ತಪಸ್ಸು. ನಾ ಮುಡಿದುಕೊಂಡರೆ ಒಂದೆರಡು ಗಂಟೆಯಲ್ಲಿ ಒಣಗಿ ಮುದುರಿ ಹೋಗುತ್ತಿತ್ತು. ಅದಕ್ಕೆಂದೇ ನಿಮ್ಮೆಲ್ಲರ ಯಶಸ್ಸಿಗಾಗಿ, ಶ್ರೇಯಸ್ಸಿಗಾಗಿ ಪ್ರಾಥಿ೯ಸಿ ಅದನ್ನು ಅರವಿಂದರ ಭಾವಚಿತ್ರಕ್ಕೆ ಸಮಪಿಸಿದ್ದು' ಎಂದರು. ಅವರು ಹೇಳಿದ್ದು ಬಹಳಷ್ಟೇನೂ ಅಥ೯ವಾಗದಿದ್ದರೂ ಅವರ ದನಿಯಲ್ಲಿನ ನೈಜ ಕಳಕಳಿ, ಪ್ರೀತಿ ನೇರವಾಗಿ ನನ್ನ ಹೃದಯವನ್ನು ಸ್ಪಶಿ೯ಸಿತು. ಅವರ ಆ ರೀತಿಯ ವಿಚಾರ-ಚಿಂತನೆ ನಮ್ಮ ಆಗಿನ ಬೌದ್ಧಿಕ ವಲಯಕ್ಕೊಂದು ಕ್ರಾಂತಿ ಎಂದರೂ ಸರಿಯೇ. 'ಮಗೂ, ಸಸ್ಯಗಳಿಗೆ, ಹೂಗಳಿಗೆ, ಗಿಡಮರಬಳ್ಳಿಗಳಿಗೆ ಎಲ್ಲಕ್ಕೂ ಜೀವವಿರುತ್ತದೆ. ಅವಕ್ಕೂ ನಮ್ಮಂತೆಯೇ ಭಾವನೆಗಳಿರುತ್ತವೆ. ನಿಮ್ಮ ಪಾಠದಲ್ಲಿ ಜಗದೀಶ್ ಚಂದ್ರ ಬೋಸ್ ರ ವಿಷಯ ಬಂದಿಲ್ಲವೇ? ಇವತ್ತು ಶಾಲೆ ಬಿಟ್ಟ ಮೇಲೆ ನನ್ನನ್ನು ಕಾಣು. ಅವರ ಪುಸ್ತಕ ಕೊಡುತ್ತೇನೆ.'' ಎಂದರು. ಆ ಪುಸ್ತಕ, ಅದರಲ್ಲಿ ಅವರು ನನಗೆಂದು ಬರೆದಿಟ್ಟ ಚಂದದ ಪತ್ರ ನಂತರದ ಕತೆಯೇ ಬೇರೆ.ಆ ಶರಾವತಿ ಹೆಗಡೆ ಮ್ಯಾಡಂ ನನ್ನ ಪ್ರೀತಿಯ ಶತ೯ಕ್ಕನಾಗಿ ಜೀವನದ ಎತ್ತರದ ಸ್ತರಗಳನ್ನು ತೋರಿಸಿಕೊಟ್ಟು, ನೈತಿಕತೆ, ಪ್ರಾಮಾಣಿಕತೆ, ಪ್ರೀತಿ, ಅಧ್ಯಾತ್ಮ, ಸಾಹಿತ್ಯ, ಸಂಗೀತದಂಥ ಧನಾತ್ಮಕ ಚಿಂತನೆಗಳ ಸಹಸ್ರ ಗರಿ ಮೂಡಿಸಿ, ಅಂತ:ಕರಣದ ಹೊಳೆಯಲ್ಲಿ ನನ್ನನ್ನು ಮೀಯಿಸಿ, ತೊಯ್ಯಿಸಿ, ಮೈ-ಮನ-ಚೇತನಗಳನ್ನೆಲ್ಲ ಸಂತೃಪ್ತಗೊಳಿಸಿ , ಜೀವನದ ಇಂದಿನ ಹಂತದವರೆಗೂ ತನ್ನ ಕೃಪಾ ಶಕ್ತಿಯಿಂದಲೇ ಎಲ್ಲ ಕಷ್ಟಗಳಲ್ಲೂ ಪಾರುಮಾಡಿ ...ಓಹ್! ಅದ್ಭುತ!! ಅದನ್ನೆಲ್ಲ ಬರೆಯಲಾಗದು. ಬರೆದು,ಮಾತಾಡಿ ಅದರ ಭಾವತೀವ್ರತೆಯ ಸೊಗವನ್ನು ಕಡಿಮೆ ಮಾಡಿಕೊಳ್ಳಲಾಗದು.

''ಸದ್ದುಗದ್ದಲದ ತುತ್ತೂರಿ ದನಿಗಳಾಚೆಗೆ ನಿಂತು 
ನಿಶ್ಶಬ್ದ ದಲ್ಲಿ ನೆನೆಯುತ್ತೇನೆ ಗೌರವದಿಂದ.
ನಕ್ಷತ್ರ ಖಚಿತ ನಭವಾಗಿ ತಬ್ಬಿಕೊಂಡಿದ್ದೀರಿ ನನ್ನ ಸುತ್ತ.
ಪಟಬಿಚ್ಚಿ ದೋಣಿಯನ್ನೇರಿ ಕುಳಿತಿದ್ದೇನೆ
ನೀವಿತ್ತ ಹೊಸ ಹುಟ್ಟುಗಳ ಹಾಕುತ್ತ'' 
 ( ಮೂಲ ಡಾ. ಜಿ. ಎಸ್. ಎಸ್ )

***********************************************
ನಾಡಗೀರ ಮಾಸ್ತರ್ (1915-2011)

ನನ್ನಶಾಲೆ ಮತ್ತು ನನ್ನ ಇಂಗ್ಲಿಷ್ ಟೀಚರ್ ನಾಡಗೀರ ಮಾಸ್ತರ್ (1915-2011) ಶ್ರೀವತ್ಸ ದೇಸಾಯಿ

ಪ್ರತಿ ವರ್ಷ ಭಾರತದಲ್ಲಿ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವೆಂದು ಸಾಮೂಹಿಕವಾಗಿ ಆಚರಿಸುತ್ತೇವೆಯಾದರೂ ಪ್ರತಿದಿನದ ಯೋಗಾಭ್ಯಾಸದ ಪ್ರಾರಂಭದಲ್ಲಿ ನಮ್ಮ ಯೋಗಾಮಾ ಹೇಳಿದಂತೆ ನನ್ನ ಶಾಲಾಗುರುಗಳು ನನಗೆ ಪ್ರಾತಃಸ್ಮರಣೀಯರಾಗುತ್ತಾರೆ. ಸುಮಾರು ಎಂಬತ್ತು ವರ್ಷಗಳ ಕೆಳಗೆ ಕರ್ನಾಟಕ ಎಜುಕೇಶನ್  ಸೊಸೈಟಿ ಎನ್ನುವ  ಹೆಸರಿನಿಂದ ಸ್ಥಾಪಿತವಾಗಿ ಮುಂದೆ ಮಹತ್ವದ ಶೈಕ್ಷಣಿಕ ಸಂಸ್ಥೆ ಯ(K E Board) ಧಾರವಾಡದ ಮಾಳಮಡ್ಡಿಯಲ್ಲಿರುವ ಕೆ ಇ ಬೋರ್ಡ್ ಹೈಸ್ಕೂಲಿನ ವಿದ್ಯಾರ್ಥಿ ನಾನು. ಗುರುರಾಜ ಕರಜಗಿಯವರು ಅನೇಕ ಸಲ ಹೇಳಿದಂತೆ ನಿಸ್ವಾರ್ಥ, ಅಪ್ಪಟ ದೇಶಪ್ರೇಮಿ ಆದರ್ಶ ಮಾಸ್ತರರ ಪಡೆಯೇ ಅಲ್ಲಿ ಇತ್ತು. ನಮಗೆ ಪಾಠ ಕಲಿಸಿದ ಮತ್ತು ನಮ್ಮ ವ್ಯಕ್ತಿತ್ವವನ್ನು ರೂಪಿಸಿದ ಗುರುಗಳೆಲ್ಲರ ಹೆಸರು ತೊಗೊಳ್ಳದೆ ಅವರೆಲ್ಲರಿಗೂ ವಂದಿಸಿ ಈ ಚಿಕ್ಕ ಲೇಖನದಲ್ಲಿ ಇಂಗ್ಲಿಷ್ ಟೀಚರ್ ನಾಡಗೀರವರ ಬಗ್ಗೆಯಷ್ಟೇ ಸ್ವಲ್ಪ ಬರೆಯುತ್ತೇನೆ. ಬರೆಯುತ್ತ ಹೋದರೆ ಪರೀಕ್ಷೆಯ ದಿನ ಕೊಡುತ್ತಿದ್ದ ’ಸಪ್ಲಿಮೆಂಟೆಲ್ಲ’ ತುಂಬಿಸುವಷ್ಟಿದೆ. ನಮ್ಮೆಲ್ಲ ಗೆಳೆಯರಿಗೆ ’ಮಾಸ್ತರ್’ ಅಂದರೆ ಅವರೊಬ್ಬರೇ – ಶಿವರಾವ್ ಜಿ ನಾಡಗೀರ್ ಮಾಸ್ತರರು. ಇನ್ನೂ ಹತ್ತಿರದವರು ಅವರನ್ನು ’ಶಿವಣ್ಣ ಕಾಕಾ’ ಅಂತ ಕರೆಯುತ್ತಿದ್ದರು. ನಮ್ಮ ’ಸಾಲಿ” ಅಂದರೆ ಉತ್ತರ ಕರ್ನಾಟಕ ಭಾಷೆಯಲ್ಲಿ ಶಾಲೆ -ನಾಡಗೀರ್ ಮಾಸ್ತರರ ಸಾಲಿ ಅಂತ ಎಲ್ಲೆಡೆ  ಪ್ರಸಿದ್ಧವಾಗಿತ್ತು. ಕೆ ಇ ಬೋರ್ಡ್ ಹೈಸ್ಕೂಲಿನಲ್ಲಿ ಅವರು ಸೇವೆ ಸಲ್ಲಿಸಿದ ನಾಲ್ಕು ದಶಕಗಳಲ್ಲಿ (1938-1976) ಅದೆಷ್ಟೊಂದು ಕೆಲಸ ಮಾಡಿದ್ದರು! ಅದರಲ್ಲಿ 20 ವರ್ಷ ಹೆಡ್ಮಾಸ್ಟರ್ ಆಗಿದ್ದರು. ಅವರು ಕಲಿಸಿದ ವಿದ್ಯಾರ್ಥಿಗಳು ಸಾವಿರಾರು. ಅವರೆಲ್ಲರ ಮನದಲ್ಲಿ ಅವರು ಸ್ಥಿರವಾಗಿ ನೆಲೆಸಿದ್ದಾರೆಂದರೆ ಅತಿಶಯೋಕ್ತಿಯಲ್ಲ. 1975ರಲ್ಲಿ ರಾಷ್ಟ್ರಪತಿಗಳ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಯಿಂದ ಭೂಷಿತರಾದರು. ಅವರ ಪ್ರಯತ್ನ ಮತ್ತು ಪ್ರೋತ್ಸಾಹದಿಂದ ವಿದ್ಯಾರ್ಥಿಗಳು ಪ್ರತಿವರ್ಷ ಉತ್ತಮ ಶ್ರೇಣಿಯಲ್ಲಿ ಪಾಸಾಗುತ್ತಿದ್ದರು. ಹೆಚ್ಚಿನ ಕೋಚಿಂಗಿನಿಂದ ನೂರಕ್ಕೂ ಹೆಚ್ಚು ’ರಾಂಕ್’ ಗಳಿಸಿ Rank Bank ಅಂತ ನಮ್ಮ ಶಾಲೆ ಕರೆಸಿಕೊಳ್ಳಲಾರಂಭಿಸಿತು.

ಕೆ. ಯೀ. ಬೋರ್ಡ್ ಮಹಾವಿದ್ಯಾಲಯ, ಧಾರವಾಡ
ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಸ್ವೀಕಾರ – ನಾಡಿಗೇರ್ ಮಾಸ್ತರ್ ಮತ್ತು ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್
 ’ನನ್ನ ಮಾಸ್ತರ್-ನನ್ನ ಪೆನ್ ಫ್ರೆಂಡ್ ಸಹ’.
ಆ ಶಾಲೆಯಲ್ಲಿ ನಾನು ಕಲಿತದ್ದು ಮೂರೇ ವರ್ಷಗಳಾದರೂ ಅವರೊಡನೆ ನನ್ನ ಸಂಬಂಧ, ಮತ್ತು ಪತ್ರ ವ್ಯವಹಾರ ಅವರು ನಿಧನರಾಗುವ ತನಕ ಇತ್ತು. ಅವರು ಅತ್ಯಂತ ಶಿಸ್ತಿನ ಮನುಷ್ಯ. ವ್ಯತಿರಿಕ್ತವಾಗಿ ನಡೆದರೆ ಶಿವನ ಮೂರನೆಯ ಕಣ್ಣಿಗೆ ಆಹುತಿಯೇ ಸೈ. ನಾವೆಲ್ಲ ಅವರೆದುರು ಥರ ಥರ ನಡುಗುತ್ತಿದ್ದೆವು. ನಾನು ಸಾಲಿ ಬಿಟ್ಟ ನಂತರವೇ ಅವರು ನನಗೆ ಇನ್ನೂ ಹತ್ತಿರವಾದರು. ತಮ್ಮ ತೊಂಬತ್ತಾರನೆಯ ವಯಸ್ಸಿನವರೆಗೆ ನನ್ನೂಡನೆ ಪತ್ರವ್ಯವಹಾರ ನಡೆಸುತ್ತಿದ್ದರು: ಅದರಲ್ಲಿ ಹಾಸ್ಯವಿರುತ್ತಿತ್ತು, ಬೋಧನೆಯಿರುತ್ತಿತ್ತು; ಚೇಷ್ಟೆ ಸಹ! ಅದೇ ತರಹ ಇನ್ನುಳಿದ ಅಗಣಿತ ಹಳೆಯ ವಿದ್ಯಾರ್ಥಿಗಳಿಗೂ ಸ್ವಹಸ್ತದಿಂದಲೇ ಪತ್ರಗಳನ್ನು ಬರೆಯುತ್ತಿದ್ದರೆಂದು ನನಗೆ ಆಮೇಲೆ ಗೊತ್ತಾಯಿತು.ಅವರು ನಮಗೆ ಇಂಗ್ಲಿಷ್ ಕಲಿಸುತ್ತಿದ್ದರು. ಅವರ ಸ್ಖಾಲಿತ್ಯವಿರದ ಪತ್ರಗಳ ತುಂಬ ಶೇಕ್ಸ್ಪಿಯರಿನ ನಾಟಕಗಳ, ಥಾಮಸ್ ಗ್ರೇ, ಕಾರ್ಲೈಲ್, ಟೆನ್ನಿಸನ್ ಮುಂತಾದ ಆಂಗ್ಲ ನಾಡಿನ ಸಾರಸ್ವತ ಪುತ್ರರ ಕೊಟೇಶನ್ ಗಳಿರುತ್ತಿದ್ದವು. ಅವರ ಜನ್ಮಶತಾಬ್ದಿಯ ಸ್ಮರಣಸಂಚಿಕೆಗಾಗಿ ಆ ’ಪತ್ರ ಪರಾಚಿಯ’ ಆಧಾರದ ಮೇಲೆಯೇ ಒಂದು ಲೇಖನ ಬರೆದಿದ್ದೆ. ಅದರ ಶೀಷಿಕೆ: 'Nadgir master -my guru and my pen pal!' ಅಂತ! "A good teacher teaches well at school; a great teacher continues to teach even after you've left the school!" ಅಂತ ಉಲ್ಲೇಖಿಸಿದ್ದೆ.
’ಆರಂಕು”ಶಮಿಟ್ಟೊಡಂ ...

ಅವರ ಇಂಗ್ಲಿಷ್ ಪಾಠದಿಂದಲೆ ನನಗೆ ಆ ಭಾಷೆಯ ಮೇಲಿನ ಒಲವು ಶುರುವಾಗಿತ್ತು. ಅವರು ಕನ್ನಡ ಸಹ ಕಲಿಸುತ್ತಿದ್ದರು. ನಾನು ಪರದೇಶಕ್ಕೆ ಬಂದ ಮೇಲೆ ಒಂದು ವರ್ಷ ಇನ್ನೊಬ್ಬ ಸಹಪಾಠಿಯ ಜೊತೆ ಸೇರಿ ನಾವೇ ಹೊಸದಾಗಿ ಕಲಿತ ಕಂಪ್ಯೂಟರಿನಿಂದ ಅವರಿಗೊಂದು ಬರ್ತ್ ಡೇ ಕಾರ್ಡ್ ಮಾಡಿ ಪ್ರಿಂಟ್ ಕಳಿಸಿಕೊಟ್ಟಿದ್ದೆವು. ಅವರ ಸೂಕ್ಷ್ಮ ಕಣ್ಣು ನಾವು ಟೈಪು ಮಾಡುವಾಗ ಒಂದಕ್ಷರ ('r') ಬಿಟ್ಟು ಹೋಗಿ ”ಅದು ’ಬಿಥ ಡೇ’ ಆಗಿತ್ತಲ್ಲೋ,” ಅಂತ ಅವರು ಟೀಕಿಸಿ ತಿದ್ದಿದ್ದನ್ನು ಮರೆಯುವಂತಿಲ್ಲ. ಈಗಲೂ ಪ್ರತಿ ಸಲ ನಾನು 'Happy birthday' ಅಂತ ಬರೆಯುವಾಗಲೆಲ್ಲ ಅಂಕುಶದಿಂದ ತಿವಿದು ಮರೆಯ ಬೇಡ ’’r' ಅಂತ ”ಏಡಿಸಿ ಕಾಡುತ್ತದೆ, ಶಿವನ ಡಂಗುರ!” ಅದಕ್ಕೇ ಎಚ್ಚರಿಕೆಯಿಂದ ತಪ್ಪು ಮಾಡದೆ ಬರೆಯಲು ಪ್ರಯತ್ನಿಸುತ್ತೇನೆ. ಆರಂಕುಶಮಿಟ್ಟೊಡಮ್ ನೆನೆವುದೆನ್ನ ಮನಂ ಧಾರವಾಡ ದೇಶಮಮ್!

ನಾಡಗೀರ್ ಸರ್ ತಮ್ಮನ್ನು ಶಾಲೆಯ ಉನ್ನತಿಗಾಗಿಯೇ ಹಗಲು ರಾತ್ರಿ ತೂಡಗಿಸಿಕೊಂಡಿರುತ್ತಿದ್ದರು. ಉಳಿದವರಿಂದಲೂ ಅದೇ ಶಿಸ್ತನ್ನೇ ಅಪೇಕ್ಷಿಸುತ್ತಿದ್ದರು. ಅವರ ಮೇಜಿನ ಮೇಲಿನ ಮರದ ತುಂಡಿನಮೇಲೆ ಎರಡೂ ಬದಿಯಲ್ಲಿ ಭಾರತದ ಹಿಂದಿನ ಒಬ್ಬ ಪ್ರಧಾನಿ ಹೇಳಿದ ಬರಹವನ್ನು ಬರೆಸಿ ಇಟ್ಟಿದ್ದರು, ಮತ್ತು ಅದರಂತೆ ನಡೆದುಕೊಳ್ಳುತ್ತಿದ್ದರು. ಅದು ಹೀಗೆ ಇತ್ತು: I am interested in getting things done. I am not interested in the cause of delay.
ಉಪದೇಶ ಮಾಡುವದಕ್ಕಿಂತ ಮಾಡಿ ತೋರಿಸುವದು ಅವರ ಮಾದರಿಯಾಗಿತ್ತು. ಎಲ್ಲಿಯೇ ಇದ್ದರೂ ರಾಷ್ಟ್ರಗೀತೆ ಹಾಡುತ್ತಿರುವಾಗ ಇದ್ದಲ್ಲೇ ನಿಂತು ಗೌರವ ತೋರಿಸುವದನ್ನು ಬಿಂಬಿಸಲು ಒಂದಿ ದಿನ ಬೇಕಂತಲೇ ತಡವಾಗಿ ಶಾಲೆಯ ಮೈದಾನದ ಮಧ್ಯ ಬಂದು ತಲುಪಿದಾಗ ಎಂದಿನಂತೆ ಶಾಲೆಯ ಪ್ರಾರ್ಥನೆ ಆರಂಭವಾಯಿತೆಂದು ಎಲ್ಲರಿಗೂ ಕಾಣುತ್ತಿದ್ದಂತೆಯೇ ಅಲ್ಲೇ ನಿಂತುಬಿಟ್ಟರು, ಮುಗಿಯುವ ವರೆಗೆ. ನನಗೆ ಇನ್ನೂ ನೆಪಿನಲ್ಲಿರುವ ಆ ನಿದರ್ಶನ ಎಲ್ಲ ಶಾಲಾ ಮಕ್ಕಳ ಮೇಲೆಯೂ ಪರಿಣಾಮ ಬೀರಿತ್ತು ಮತ್ತು ಆ ಆದರ್ಶವನ್ನು ಪಾಲಿಸಲು ಪ್ರೇರಿಸಿತು. ಶಾಲೆಯಲ್ಲಿ ಅವರು ಎಲ್ಲರಿಗೂ ಕಾಣಿಸುವಂತೆಒಂದು ಬರಹವನ್ನು ಬರೆಸಿ ಹಾಕಿದ್ದರು. ಅದನ್ನು ಚಾಚೂ ತಪ್ಪದೆ ಪಾಲಿಸಿದರು ಸಹ. ಅದು ಹೀಗಿತ್ತು: 
"Henceforth you and the school are one, what you are, the school shall be. Here shall beat the heart of us, the best school of all. Your alma mater expects everyone to do their duty. For her, no contribution is too great and no sacrifice is too small."

ಆಗ ಶಾಲೆಗಳಿಗೆ ಸರಕಾರದ ಅನುದಾನದ ವ್ಯವಸ್ಥೆ ಇರುತ್ತಿರಲಿಲ್ಲ. ಮಕ್ಕಳು ಕೊಡುವ ಫೀಸ್ ಹಣದಿಂದಲೇ ಶಾಲೆಯ ಖರ್ಚು, ಸಿಬ್ಬಂದಿಯ ಸಂಬಳ, ಇವೆಲ್ಲವನ್ನು ನೋಡಿಕೊಳ್ಳಬೇಕು, ಹೆಡ್ಮಾಸ್ಟರ್. ಹೆಡ್ ಮಾಸ್ಟರ್ ಆಗಿದ್ದ ಅವರ ಮನೆ ಶಾಲೆಯ ಆವರಣದಲ್ಲಿಯೇ ಇತ್ತು. ಅವರ ಮಗ ಅರುಣನೂ ನನ್ನ ಕ್ಲಾಸಿನಲ್ಲಿಯೇ ಇದ್ದ. ಅವನಲ್ಲದೆ ಇನ್ನೂ ಹದಿನೈದು ಮಾಸ್ತರರ ಮಕ್ಕಳೂ ನನ್ನ ಕ್ಲಾಸಿನಲ್ಲಿದ್ದರು. ಅವರಿಗೆ ಫೀ ಮಾಫಿ ಇತ್ತು. ಅನೇಕ ಬಡ ವಿದ್ಯಾರ್ಥಿಗಳಿಗೂ ಅದೇ ತರಹ ರಿಯಾಯತಿ ಕೊಡುತ್ತಿದ್ದರಿಂದ ಹಲವಾರು ಸಲ ಶಿಕ್ಷಕರಿಗೆ ಪೂರ್ತಿ ಸಂಬಳ ಕೊಡಲು ಕಷ್ಟವಾಗುತ್ತಿತ್ತು. ತಾವು ಮಾತ್ರ ತಮ್ಮ ಅವಧಿಯ ಪೂರ್ತಿ ಅರ್ಧ ಪಗಾರ ಅಷ್ಟೇ ತೆಗೆದುಕೊಂಡು ಪೂರ್ತಿ ಸ್ವೀಕರಿಸಿದೆ ಅಂತ ಸಹಿಮಾಡುತ್ತಿದ್ದರು. ಅದೆಷ್ಟೋ ಸಲ ಬಡಮಕ್ಕಳು ಹಸಿದ ಹೊಟ್ಟೆಯಲ್ಲಿ ಬಂದಿದ್ದನ್ನು ಗಮನಿಸಿ ಆವರಣದಲ್ಲಿದ್ದ ತಮ್ಮ ಮನೆಗೇ ತಿಂಡಿ ತಿಂದು ಬರಲು ಕಳಿಸಿ ಕೊಡುತ್ತಿದ್ದರು. ”ಎಷ್ಟೋ ಸಲ ಇಂತಹ ಮಕ್ಕಳೊಂದಿಗೆ ನಾನು ನನ್ನ ರೊಟ್ಟಿಯನ್ನು ಹಂಚಿಕೊಂಡಿದ್ದೇನೆ”’ ಅಂತ ಸನ್ನ ಸಹಪಾಠಿಯಾಗಿದ್ದ ಅರುಣ ತನ್ನ ಸ್ಮರಣೆಯನ್ನು ಇತ್ತೀಚೆಗೆ ಒಂದು ಪುಸ್ತಕದಲ್ಲಿ ಹಂಚಿಕೊಂಡಿದ್ದಾನೆ. National scholarship ಪರೀಕ್ಷೆಯಲ್ಲಿ ಉತ್ತಮ ತರಗತಿಯಲ್ಲಿ ಪಾಸಾಗಿದ್ದರೂ means tested ಇದ್ದುದರಿಂದ ಸ್ವತಃ ಅರ್ಧ ಸಂಬಳವನ್ನೇ ಮನೆಗೆ ಒಯ್ಯುತ್ತಿದ್ದರೂ ಆ ಶಿಷ್ಯವೇತನದ ಪೂರ್ಣ ಫಲ ತನಗೆ ಲಭ್ಯವಾಗಿರಲಿಲ್ಲ ಅಂತ ಮಾಸ್ತರರ ಎರಡನೆಯ ಮಗನಿಗೆ ಇತ್ತು ಕೊರಗು! 

ಬಡತನ ಕಷ್ಟ ಕಾರ್ಪಣ್ಯಗಳೊಡನೆ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದ ಅನೇಕ ಗುರುಗಳು ಶಾಲೆಯಲ್ಲಿದ್ದರು. ಬದುಕಿದ್ದಷ್ಟು ದಿನ ಬಡತನ. ಅವರ ಆಸ್ತಿಯೆಂದರೆ ಅವರ ಶಿಷ್ಯವೃಂದ. ಆ ದಿನಗಳ ನೆನಪಿನ ಭಂಡಾರವೇ ನಮ್ಮ ಜೀವನಕ್ಕೆ ಭಂಡವಲು. ಅವರ ಆದರ್ಶ ನಮಗೆ ದಿಕ್ಸೂಚಿ.
'ವಾತ್ಸಲ್ಯ’ ಎನ್ನುವ ಅಭಿನಂದನಾ ಗ್ರಂಥದಲ್ಲಿ ತಮ್ಮ ಆತ್ಮಚರಿತ್ರೆ ಬರೆಯುತ್ತ ತಮ್ಮ ’ಪ್ರಸಿದ್ಧ’ ಸಿಟ್ಟಿನ ಬಗ್ಗೆ ಹೀಗೆ ಬರೆದಿದ್ದಾರೆ (’ವಾತ್ಸಲ್ಯ’; ಪು. 9): ’ನನ್ನದು ಸಿಟ್ಟಿನ ಸ್ವಭಾವ. ಅದು ಅಪ್ಪನಿಂದ ಬಂದ ಆನುವಂಶಿಕ ಗುಣವೂ ಇರಬಹುದು, ಅಥವಾ (ಎಳೆವಯಸ್ಸಿನಲ್ಲೇ ತಾಯಿಯನ್ನೆ ಕಳೆದುಕೊಂಡ) ಮಾತೃವಾತ್ಸಲ್ಯದ ಅಭಾವದಿಂದಲೂ ಇರಬಹುದು. ಏನೇ ಇರಲಿ, ”ಹೊಲೆಸಿಟ್ಟು” ನನ್ನ ಜೀವನದ ಬಹುಭಾಗವನ್ನು ನುಂಗಿ ಹಾಕಿದೆ. ಬರೆದ ಚಿತ್ರವೆಲ್ಲ ಮಸಿ ನುಂಗಿದಂತೆ, ಸ್ವಚ್ಛ ಮನಸ್ಸಿನಿಂದ ಮಾಡಿದ ಒಳ್ಳೇ ಕೆಲಸಗಳು ನಿಷ್ಪ್ರಯೋಜಕವಾಗಿರುವುದರ ಅರಿವೂ ನನಗಾಗಿದೆ. ನನ್ನ ಸಿಟ್ಟಿನ ರುಚಿಯನ್ನು ವಿದ್ಯಾರ್ಥಿಗಳು, ಸಹಶಿಕ್ಷಕರು ಹಾಗೂ ಕುಟುಂಬದವರೂ ಸಾಕಷ್ಟು ಉಂಡಿದ್ದಾರೆ'.

 ಶಿಸ್ತಿನ ಸಾಕಾರ ಸ್ವರೂಪರಾಗಿದ್ದ ಅವರು ಆಗಾಗ್ಗೆ ಸಿಟ್ಟಿನ ಪ್ರತಿರೂಪ ತಳೆದು ’ದೂರ್ವಾಸ ಮುನ್ನಿ’ ಅನ್ನುವ ಉಪನಾಮ ಗಳಿಸಿದ್ದರೂ ಅವರ ಶಿಷ್ಯ ವಾತ್ಸಲ್ಯ ಅಪಾರ. ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ಇಂಥ ಒಂದು ಪ್ರಸಂಗದಲ್ಲಿ ತಮಗೆ ಕಪಾಳ ಮೋಕ್ಷ ಕೊಟ್ಟಿದ್ದ ನಾಡಗೀರ್ ಮಾಸ್ತರರೇ ತಾವು ಪ್ರಸಿದ್ಧ ವಾಗ್ಮಿಗಳಾಗಲು ಕಾರಣವೇನೋ ಎಂದು ನನ್ನ ಶಾಲೆಯಲ್ಲೇ ಕಲಿತ ಗುರುರಾಜ ಕರಜಗಿಯವರು ಒಂದು ಲೇಖನದಲ್ಲಿ ಉದ್ಗಾರ ತೆಗೆದಿದ್ದಾರೆ! 

ಕೆಲವು ಸ್ವಾರಸ್ಯಕರ ಘಟನೆಗಳೊಂದಿಗೆ ಈ ಲೇಖನವನ್ನು ಮುಗಿಸುವೆ.

ಮೂರು ವರ್ಷಗಳ ಕೆಳಗೆ 75 ದಾಟಿದ (ಒಬ್ಬರನ್ನು ಬಿಟ್ಟು) ಇಪ್ಪತ್ತೆರಡು ಹಳೆಯ ವಿದ್ಯಾರ್ಥಿಗಳು ಧಾರವಾಡದಲ್ಲಿ ಸೇರಿ ನಮ್ಮ ಶಾಲೆಗೆ ಹೋಗಿ ಹಳೆಯ ನೆನಪುಗಳನ್ನು ತಾಜಾ ಮಾಡಿಕೊಂಡೆವು. ಶಾಲಾ ವಾರ್ಷಿಕ ಪರೀಕ್ಷೆಯ ಸಮಯದಲ್ಲಿ ಮೋಹನನಿಗೆ ’ಟೆನ್ಷನ್.’ ತನಗೆ ಏನೂ ನೆನಪಾಗುವದಿಲ್ಲ ಅಂತ ಬೆವರಿಳಿಯುತ್ತದೆ. ಪ್ರಶ್ನೆಪತ್ರಿಕೆಯನ್ನು ಹಂಚುತ್ತಿದ್ದ ಕುಲಕರ್ಣಿ ಮಾಸ್ತರರು ಆತನ ಬಿನ್ನು ಸವರುತ್ತ, ”ಡೋಂಟ್ ವರ್ರಿ; ಬಂದಷ್ಟು ಬರಿ!” ಅಂತ ಅರಿಪ್ರಾಸವನ್ನು (ಅರಿಸಮಾಸದಂತೆ, ಆಂಗ್ಲ-ಕನ್ನಡ ಭಾಷೆಯ ಕಲಬೆರಕೆ) ಜೋಡಿಸಿ ಹೇಳಿದ್ದನ್ನು ಒಬ್ಬರು ನೆನೆದಾಗ ಕೋಣೆಯ ತುಂಬ ನಗು.
ಶ್ಲೇಷಾಲಂಕಾರ, homonym ಗಳನ್ನು ಮೊದಲ ಬಾರಿ ನಾಡಗೀರ್ ಮಾಸ್ತರ್ ಕಲಿಸಿದ್ದು ನನಗೆ ಇಂದೂ ನೆನಪಿದೆ: The vicar told the sexton (ಚರ್ಚಿನ ಗಂಟೆಯನ್ನು ಬಾರಿಸುವವ) and he tolled the bell (ಬಾರಿಸಿದ). Who is going to bell the cat ಅನ್ನುವ ಪದಗುಚ್ಛದ ಅರ್ಥವನ್ನು ಅವರೇ ಕಲಿಸಿದ್ದು:'to undertake a very dangerous mission.' ಅದರ ಪ್ರಾತ್ಯಕ್ಷಿಕೆಯನ್ನೂ ಮಾಡಬೇಕಾದ ಪ್ರಸಂಗವೂ ಒಮ್ಮೆ ಒದಗಿ ಬಂದಿತ್ತು.

ಕತ್ತಲೆ-ಬೆಳಕು
Epitaph (ಗೋರಿ ಬರಹ) ಅಂದರೇನು ಅಂತ ಕಲಿಸುವಾಗ ಮಾಸ್ತರರು ಹೇಳಿದ’ಕಥೆ.’ ಶೋಕಗ್ರಸ್ತ ಪಾಶ್ಚಿಮಾತ್ಯ ವಿಧವೆಯೊಬ್ಬಳು ಪತಿಯ ಅಗಲುಕೆಯಿಂದ ತನ್ನ ಬದುಕನ್ನು ಆವರಿಸಿದ ಅಂಧಕಾರವನ್ನು ಸೂಚಿಸಲು ಚರ್ಚಿನ ಸೆಮೆಟ್ರಿಯಲ್ಲಿ ಕಲ್ಲಿನ ಮೇಲೆ ಕೆತ್ತಿಸಿದ್ದು: Since the demise of my husband, I'm left in utter darkness ಅಂತ. ಎರಡು ವರ್ಷಗಳ ನಂತರ ಚೇತರಿಸಿಕೊಂಡು ಪುನರ್ವಿವಾಹ ಆದಾಗ ಆ epitaph ಗೆ ಇನ್ನೊಂದು ಸಾಲು ಸೇರಿಸಿದಳಂತೆ: But now I have struck a match!
ಕ್ಷಮಾಪಣೆ ಕೇಳಲು 36 ವರ್ಷಗಳ ಕಾಲ ಕಾಯ್ದ ಪ್ರೀತಿಯ ವಿದ್ಯಾರ್ಥಿ!

’ತಪ್ಪು ಮಾಡುವದು ಸಹಜವೇ. ಆದರೆ ಅದನ್ನು ಒಪ್ಪಿಕೊಂಡು ಕ್ಷಮಾಪಣೆ ಬೇಡಲು ಸಿದ್ಧರಿರುವುದು ದೊಡ್ಡ ಗುಣ ಅಂತ ಅವರು ಕಲಿಸಿದರು. 1977ರಲ್ಲಿ ನಡೆದ ಒಂದು ಘಟನೆಯನ್ನು ನೆನೆದು ನನ್ನ ಸಹಪಾಠಿ ಅರುಣ ಬರೆದದ್ದನ್ನು ಇಲ್ಲಿ ಕೊಡುವೆ:
” 1960ರಲ್ಲಿ ಕನ್ನಡ ಹಾಗೂ ಇಂಗ್ಲಿಷ್ ವಿಷಯಗಳನ್ನು (ನಾಡಗೀರ್ ಮಾಸ್ತರರು) ಕಲಿಸುತ್ತಿದ್ದರು.ಆವಾಗ ಒಂದು ಅಹಿತಕರ ಘಟನೆ ನಡೆದು ನಮ್ಮ ಸಹಪಾಠಿಗಳಿಗೆ ಬೇಸರವಾಯಿತು. ಅವರೆಲ್ಲಾ ಸೇರಿ ನಾಡಗೀರ ಮಾಸ್ತರರು ನಮಗೆ ಕಲಿಸುವದು ಬೇಡ ಎಂದು ಅರ್ಜಿ ಬರೆದು ನಾಡಗೀರ ಮಾಸ್ತರರ ಮೇಜಿನ ಮೇಲೆ ಇಟ್ಟು ಬಂದರು. ಮರುದಿನ ವರ್ಗದಲ್ಲಿ ಎಲ್ಲರಿಗೂ ಬಲು ಭಯ. ಯಾಕೆಂದರೆ ಮಾಸ್ತರ ಸಿಟ್ಟಿಗೆ ಎಲ್ಲರೂ ಅಂಜುತ್ತಿದ್ದರು. ಆದರೆ ಮಾಸ್ತರರು ಏನೂ ಆಗಲಿಲ್ಲ ಎಂಬಂತೆ ಆ ದಿನದ ಪಾಠ ಮಾಡಿದರು. ಎಲ್ಲರಿಗೂ ಅಚ್ಚರಿ ಹಾಗೂ ನಿರಾಳ. ಎಲ್ಲರೂ ಈ ಘಟನೆಯನ್ನು ಮರೆತರು. (Who will bell the cat? ಅಂತ ಕೊನೆಗೆ ಆ ಚೀಟಿಯನ್ನು ಇಟ್ಟು ಬಂದಿದ್ದ ವಿದ್ಯಾರ್ಥಿ ಮಾತ್ರ ಆ ಅಪರಾಧವನ್ನು ಎಂದೂ ಮರೆತಿರಲಿಲ್ಲ. ಅದನ್ನು ಬಚ್ಚಿಟ್ಟಿದ್ದ ಆತನ ಎದೆಯಗೂಡಿನ ಭಾರ ಅವನಿಗೇ ಗೊತ್ತು!) ಮುಂದೆ 1997ರಲ್ಲಿ ಮಾಸ್ತರರಿಗೆ 82 ವರ್ಷ ತುಂಬಿದ ಪ್ರಯುಕ್ತ ಅವರಿಗೆ ವಿದ್ಯಾರ್ಥಿಗಳು ಸಹಸ್ರ ಚಂದ್ರ ದರ್ಶನ ಸಮಾರಂಭ ಏರ್ಪಡಿಸಿದ್ದರು. ಆ ಸಮಾರಂಭದಲ್ಲಿ ಭಾಗವಹಿಸಲೆಂದೇ ನಮ್ಮ ಇಬ್ಬರು ಸಹಪಾಠಿಗಳು ಇಂಗ್ಲೆಂಡ್ ನಿಂದ ಬಂದಿದ್ದರು. ಸಮಾರಂಭ ಮುಗಿದ ಮೇಲೆ ಗುರು-ಶಿಷ್ಯಂದಿರ ಸ್ನೇಹಕೂಟ ಒಂದು ಹೋಟೆಲ್ಲಿನಲ್ಲಿ ಏರ್ಪಾಡಾಗಿತ್ತು. ಹೋಟೆಲ್ ಧಾರವಾಡಕ್ಕೆ ಅವರು ಬಂದಾಗ ಇಲಿಯಾಗಿ ’ಬೆಕ್ಕಿಗೆ ಗಂಟೆ ಕಟ್ಟಿದ’ ಆ ಸಹಪಾಠಿ 36 ವರ್ಷಗಳ ಕೆಳಗೆ ತಾನೇ ಆ ಕಾಗದ ಇಟ್ಟಿದ್ದಕ್ಕೆ ಕ್ಷಮೆ ಬೇಡಿ ಎದೆ ಹಗುರು ಮಾಡಿಕೊಂಡ. ಆಗ ಅವರು ಉತ್ತರಿಸಿದ್ದು ಅತ್ಯಂತ ಮಾರ್ಮಿಕವಾಗಿತ್ತು: ”ಹೌದು, ಅದರ ಹಿಂದಿನ ಅಹಿತಕರ ವರ್ತನೆಗೆ ಕಾರಣನಾದ ... ಎಂಬ ಹುಡುಗನ ವರ್ತನೆ ಸಹಿಸದೆ ನಾನು ಅವನ ಕಪಾಳಕ್ಕೆ ಜೋರಾಗಿ ಹೊಡೆದೆ, ಅದರಿಂದ ಅವನ ಶ್ರವಣ ಶಕ್ತಿ ಕ್ಷೀಣಿಸಿತು. ನಿಮಗೆ ಸಿಟ್ಟು ಬಂದು ಅರ್ಜಿ ಬರೆದಿರಿ. ನಾನು ಸಿಟ್ಟಿನಿಂದ ಆ ರೀತಿ ಮಾಡಬಾರದಾಗಿತ್ತು. ಅವನಿಗೆ ನಾನು ಕ್ಷಮೆ ಕೇಳಲುತಯಾರಿದ್ದೇನೆ.” ಎಂದು ಅವರೂ ತಮ್ಮ ವ್ಯಥೆ ವ್ಯಕ್ತಪಡಿಸಿದರು. ಎಂಥ ದೊಡ್ಡ ಗುಣ!”
ಇಂಗ್ಲೆಂಡಿನಿಂದ ಸಮಾರಂಭಕ್ಕೆಂದು ಧಾರವಾಡಕ್ಕೆ ಹೋಗಿ ಕ್ಷಮಾಪಣೆ ಬೇಡಿದ ವಿದ್ಯಾರ್ಥಿಯೇ ಈ ಲೇಖನದ ಲೇಖಕ!
ಶ್ರೀವತ್ಸ ದೇಸಾಯಿ
ಡೋಂಕಾಸ್ಟರ್, ಯು ಕೆ

ಆಕರ ಪುಸ್ತಕಗಳು: ೧.ವಾತ್ಸಲ್ಯ (1997) :ಎಸ್ ಜಿ ನಾಡಗೀರ ಅವರ ಅಭಿನಂದನಾ ಗ್ರಂಥ ಸಂ: ಡಾ ಕೆ ಹೆಚ್ ಕಟ್ಟಿ
 ೨: ವಿದ್ಯಾ ವಿಕಾಸ (2002) ಲೇ: ಪ್ರಿ. ಎಸ್ ಜಿ ಣಾಡಗೀರ
೩: ಅಪ್ಪನು ನನಗಿಷ್ಟ: (2021) ಸಂ: ಡಾ ಶರಣಮ್ಮ ಅ. ಗೋರೇಬಾಳ

*******************


ಗೌರಿ ಗಣೇಶ ಹಬ್ಬದ ವಿಶೇಷಾಂಕ ಭಾಗ ೨ – ನೆನಪುಗಳ ಮೆರವಣಿಗೆ

ರೇಖಾ ಚಿತ್ರ ಕೃಪೆ – ಡಾ ಲಕ್ಷ್ಮಿ ನಾರಾಯಣ ಗುಡೂರ್
ಪ್ರಪಂಚದ ಯಾವುದೇ ದೇಶ, ಧರ್ಮ, ಸಂಸ್ಕೃತಿಯನ್ನು ಗಮನಿಸಿದಾಗ ಅಲ್ಲಿ ಹಬ್ಬಗಳು ಉತ್ಸವಗಳು ಕಂಡುಬರುತ್ತದೆ. ಯಾಂತ್ರಿಕವಾಗಿರುವ ನಮ್ಮ ಬದುಕಿನಲ್ಲಿ ಒಂದೆರಡು ದಿನ ದೇವರ ಹೆಸರಿನಲ್ಲಿ ನೆಪದಲ್ಲಿ ಮೈ ಮನಸ್ಸಿಗೆ ಮುದ ನೀಡುವ ಸಮಯವನ್ನು ಕಳೆಯುವುದು ಒಂದು ಅಗತ್ಯವೇ ಸರಿ. ಒಂದು ಹಬ್ಬ ನಮ್ಮ ಕೌಟುಂಬಿಕ ಬಾಂಧವ್ಯಗಳನ್ನು ಗಟ್ಟಿಗೊಳಿಸುತ್ತದೆ. ಮನೆಯ ಹೊರಗಿನ ಸಾಮೂಹಿಕ ಆಚರಣೆಯು ಒಂದು ಸಮುದಾಯದಲ್ಲಿ ಸ್ನೇಹ, ಸಹಕಾರ ಮತ್ತು ಒಮ್ಮತಗಳ ಬೆಸುಗೆಯನ್ನು ವೃದ್ಧಿಸುತ್ತದೆ. ಒಂದು ಹಬ್ಬಕ್ಕೆ ಧಾರ್ಮಿಕ ವಿಧಿ, ಪೂಜೆ ಪುನಸ್ಕಾರಗಳು ಬುನಾದಿಯಾಗಿದ್ದರೂ ಅದು ನಿಜವಾಗಿ ಪ್ರಸ್ತುತವಾಗಿರುವುದು ಸಾಂಸ್ಕೃತಿಕ ಆಚರಣೆಯ ಕಾರಣಕ್ಕೆ ಎನ್ನಬಹುದು. ಮನೆ ಮನೆಗಳಲ್ಲಿ ಗಣೇಶನ ವಿಗ್ರಹ ಕೊಂಡು ತರುವುದು, ಅದನ್ನು ಹಬ್ಬದ ದಿನ ಕುಳ್ಳಿರಿಸಿ ಸಿಂಗರಿಸುವುದು, ಮಂಟಪ, ತೋರಣ, ರಂಗೋಲೆ ಹೂವಿನ ಅಲಂಕಾರ, ಪೂಜೆ, ನೈವೇದ್ಯ, ನಂತರ ರುಚಿಯಾದ ಭೋಜನ ಹೀಗೆ ಅನೇಕ ಕಾರ್ಯಗಳು ನಡೆಯುತ್ತವೆ, ಮನೆ ಮಂದಿಯಲ್ಲಾ ಈ ಕಾರ್ಯದಲ್ಲಿ ಭಾಗಿಗಳಾಗಿ ಒಟ್ಟಿಗೆ ಬರುವುದು, ಸೇರುವುದು ಈ ಹಬ್ಬಗಳ ಮುಖ್ಯ ಉದ್ದೇಶ. ಒಂದು ಹಬ್ಬ ನಮ್ಮ ಹಳೆ ಸಂಪ್ರದಾಯಗಳನ್ನು ಉಳಿಸುವ ಬೆಳೆಸುವ ಅವಕಾಶವನ್ನು ಒದಗಿಸುತ್ತದೆ. ನಮ್ಮ ಹಿಂದೂ ಧರ್ಮದ, ಸಂಸ್ಕೃತಿಯ ವಿಶೇಷವೆಂದರೆ ಅಲ್ಲಿ ಹಬ್ಬದ ಆಚರಣೆಗೆ, ಹೊಸ ಹೊಸ ಸಾಧ್ಯತೆಗಳನ್ನು ತರುವ ಅವಕಾಶವಿದೆ. ಅನ್ಯ ಧರ್ಮಗಳ ರೀತಿಯಲ್ಲಿ ಕಟ್ಟು ನಿಟ್ಟಾದ ನಿಬಂಧನೆಗಳಿಲ್ಲ. ಕಾಲಕ್ಕೆ ತಕ್ಕಂತೆ, ಸಮಾಜ ಬದಲಾದಂತೆ ನಮ್ಮ ಆಚಾರ ವಿಚಾರಗಳೂ ಬದಲಾವಣೆಗಳನ್ನು ಕಂಡಿವೆ. ಗಣೇಶ ಹಬ್ಬದ ಮೆರೆವಣಿಗೆಯಲ್ಲಿ ಸಿನಿಮಾ ಹಾಡುಗಳೂ ಸಲ್ಲುತ್ತವೆ! (ಈ ವಿಚಾರವನ್ನು ಕೆಳಗಿನ ಲೇಖನಗಳಲ್ಲಿ ಕಾಣಬಹುದು) ಒಂದು ಸಂಸ್ಕೃತಿಯು ಜೀವಂತವಾಗಿರಬೇಕಾದರೆ ಅದು ನಿಂತ ನೀರಾಗದೆ ಮುಂದಕ್ಕೆ ಹರಿಯಬೇಕು. 

ಗಣೇಶ ಹಬ್ಬದ ಸಾಮೂಹಿಕ ಭಾವನೆ ಹಬ್ಬದ ಎರಡನೇ ಅರ್ಧದಲ್ಲಿ ಮನೆಯಿಂದಾಚೆಗೆ ತಲುಪಿ ಬೀದಿಗಿಳಿಯುತ್ತದೆ. ಬೀದಿ ಬೀದಿಗಳಲ್ಲಿ ಪೆಂಡಾಲು, ಸಜ್ಜಿಗೆ, ಅದರ ಮೇಲೆ ಕುಳಿತ, ನಿಂತ, ಮಲಗಿದ, ಹಲವು ಭಂಗಿಗಳ ಗಣಪತಿ ಮೂರ್ತಿ, ಪೂಜೆ, ಸಂಗೀತ, ನೃತ್ಯ ಕೊನೆಗೆ ವಿಸರ್ಜನೆ ಮೆರವಣಿಗೆ ಇವುಗಳಲ್ಲಿ ಒಂದು ಸಮುದಾಯವೇ ಒಟ್ಟಿಗೆ ಬರುತ್ತದೆ. ಗಣೇಶ ಹಬ್ಬ ಈ ನಿಟ್ಟಿನಲ್ಲಿ ನಮಗೆಲ್ಲ ಸಾಮೂಹಿಕ ಹಬ್ಬವಾಗಿಯೂ ಪರಿಣಮಿಸಿದೆ. ಹಲವಾರು ಕಡೆ ಸಂಗೀತೋತ್ಸವಗಳು ನಡೆಯುತ್ತವೆ. ಗಣೇಶ ನಮ್ಮಲ್ಲಿನ ಕಲೆ ಮತ್ತು ಸಾಹಿತ್ಯ ಪ್ರಜ್ಞೆಯನ್ನು ಬಡಿದೆಬ್ಬಿಸಿದ್ದಾನೆ. ಹಬ್ಬದ ಆಚೆಯೂ ಒಂದು ನಾಟಕ, ನೃತ್ಯ ಮುಂತಾದ ಸಾಂಸ್ಕೃತಿಕ ಸನ್ನಿವೇಶಗಳಲ್ಲಿಯೂ ಗಣೇಶನನ್ನು ನಾವು ಸ್ಮರಿಸುತ್ತೇವೆ. ಕರ್ನಾಟಕ ಸಂಗೀತದಲ್ಲಿ ವಾತಾಪಿ ಗಣಪತಿಮ್ ಭಜೇ ಎನ್ನುವ ಜನಪ್ರೀಯ ಶಾಸ್ತ್ರೀಯ ಸಂಗೀತ ಅವನಿಗೆ ಮುಡುಪಾಗಿದೆ. ಅವನ ಆನೆತಲೆ, ಡೊಳ್ಳು ಹೊಟ್ಟೆ, ಮುರಿದ ದಂತ ಕಲಾವಿದರ ಕಲ್ಪನೆಗಳಿಗೆ ಸ್ಫೂರ್ತಿ ನೀಡಿದೆ.

ಈ ಹಬ್ಬ ನಾವು ಮಕ್ಕಳಾಗಿದ್ದಾಗ ನಮ್ಮಲ್ಲಿನ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದ್ದು, ನಾವು ಸಕ್ರಿಯವಾಗಿ ಭಾಗವಹಿಸಿದ್ದು ಅದು ಒಂದು ಸ್ಮರಣೀಯ ಅನುಭವವಾಗಿ ನಮ್ಮ ಸ್ಮೃತಿಯಲ್ಲಿ ಸವಿನೆನಪುಗಳಾಗಿ ದಾಖಲಾಗಿದೆ. ಗೌರಿ ಪ್ರಸನ್ನ, ಮುರಳಿ, ರಾಮ್ ಶರಣ್ ಮತ್ತು ಅಮಿತ ಅವರ ಇಂದಿನ ಬರಹಗಳೇ ಇದಕ್ಕೆ ಸಾಕ್ಷಿ. ಈ ಲೇಖಕರೆಲ್ಲ ಗೌರಿ ಗಣೇಶ ಹಬ್ಬದ ತಮ್ಮ ಹಳೇ ಸವಿ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಇವರ ಬರಹಗಳನ್ನು ಗಮನಿಸಿದಾಗ ಗಣೇಶ ಹಬ್ಬದ ಮೂಲ ದೈವ ಒಂದೇ ಆದರೂ ಅದರ ಆಚರಣೆಯಲ್ಲಿ ಕಂಡುಬರುವ ಪ್ರಾದೇಶಿಕ ವಿಶೇಷತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಗಳು ಕಂಡುಬರುತ್ತದೆ. ಈ ವಿಶೇಷ ಸಂದರ್ಭದಲ್ಲಿ ಡಾ. ಗುಡೂರ್ ಅವರು ಗಣೇಶನ ಒಂದು ಸುಂದರ ಚಿತ್ರವನ್ನು ಬರೆದುಕೊಟ್ಟು ಅದರ ಕಲಾವಿದನ ಕೈ ಬೆರಳುಗಳನ್ನು ನವುರಾದ ಕುಂಚವನ್ನು ಚಿತ್ರಿಸಿ ಅದಕ್ಕೆ ಇನ್ನೊಂದು ಆಯಾಮವನ್ನು ಕೊಟ್ಟು ಮತ್ತು ಒಂದು ಪರ್ಸನಲ್ ಟಚ್ ಒದಗಿಸಿದ್ದಾರೆ. ಇನ್ನು ವಿಶೇಷ ಸಂಗತಿಯೆಂದರೆ ಡಾ. ಗುಡೂರ್ ಅವರ ಪುತ್ರಿ ಯಾಮಿನಿ ಗುಡೂರ್ ಗಣೇಶನ ಸುಂದರವಾದ ರೇಖಾ ಚಿತ್ರವನ್ನು ಬರೆದುಕೊಟ್ಟಿದ್ದಾಳೆ. ಈ ಹನ್ನೆರಡು ವರ್ಷದ ಬಾಲಕಿ ಕಲಾ ಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಯಶಸ್ಸನ್ನು ಕಾಣಲಿ ಎಂದು ಹಾರೈಸೋಣ. ಇಂದಿನ ಲೇಖಕರು ತಮ್ಮ ಬರಹಕ್ಕೆ ಪೂರಕವಾದ ಚಿತ್ರಗಳನ್ನು ಒದಗಿಸಿದ್ದಾರೆ, ಅವರಿಗೆಲ್ಲ ಅನಿವಾಸಿ ಬಳಗದ ಪರವಾಗಿ ಕೃತಜ್ಞತೆಗಳು. ಶ್ರೀರಂಜನಿ ಅವರು ಈ ಸಂಚಿಕೆಯಲ್ಲಿ ಗಣೇಶನಿಗೆ ಗೀತ ನಮನವನ್ನು ಸಲ್ಲಿಸಿದ್ದಾರೆ, ಅವರ ಸುಶ್ರ್ಯಾವ ಗೀತೆಯನ್ನು ಕೆಳಗಿನ ವಿಡಿಯೋದಲ್ಲಿ ಕೇಳಬಹುದು. ಅವರಿಗೂ ಅನಂತ ವಂದನೆಗಳು.ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.
  -ಸಂಪಾದಕ 
ಫೋಟೋ ಕೃಪೆ – ಗೌರಿ ಪ್ರಸನ್ನ
ಗಣೇಶ ಚೌತಿ..
 ಗೌರಿ ಪ್ರಸನ್ನ 

 ಗಣೇಶಚೌತಿಯೆಂದರೆ ಎರಡೆರಡು ಸಂಭ್ರಮ ನನಗೆ. ಪಟಾಕಿ,ಗಣಪ್ಪ,ಕಡಬು – ಮೋದಕಗಳ ಸಂಭ್ರಮ ಒಂದೆಡೆಯಾದರೆ ನನ್ನ ಹುಟ್ಟು ಹಬ್ಬದ ಸಡಗರ ಇನ್ನೊಂದೆಡೆ. ಹೌದು; ಗೌರಿ-ಗಣೇಶರೊಂದಿಗೇ ನಾನೂ ಈ ಭೂಮಿಗೆ ಬಂದದ್ದು. 1970ರಲ್ಲಿ ತದಿಗೆ-ಚೌತಿ ತಿಥಿಗಳೊಟ್ಟಿಗಿದ್ದು ಸ್ವರ್ಣಗೌರಿ ಹಾಗೂ ಗಣೇಶ ಹಬ್ಬಗಳೆರಡೂ ಒಂದೇ ದಿನ ಇದ್ದವಂತೆ. ಅವತ್ತು ಆಸ್ಪತ್ರೆಯಲ್ಲಿ ನನ್ನಮ್ಮನ ಡೆಲಿವರಿ ಮಾಡಿಸಿದ ಡಾಕ್ಟರ್ ‘ ಗಣೇಶನ ಹಬ್ಬದಂದು ಗೌರಿ ಬಂದಳಲ್ಲ’ ಎಂದರಂತೆ. ಅವತ್ತಿನಿಂದಲೇ, ಸೋದರತ್ತೆ ಎಲ್ಲರಿಂದ ಗುದ್ದು ತಿನ್ನುತ್ತ, ತೊಟ್ಟಿಲಿಗೆ ಹಾಕಿ ‘ಕುಟುಕುಟು ಕುರ್’ ಎಂದು  ಹೆಸರಿಡುವ ಮೊದಲೇ ಎಲ್ಲರ ಬಾಯಲ್ಲಿ ‘ ಗೌರಿ’ ಎಂಬ ನನ್ನ ಹೆಸರು ನಲಿದಾಡುತ್ತಿತ್ತೆನ್ನಿ. ಸ್ವಚರಿತ್ರೆ ಬಹಳವಾಯಿತಲ್ಲವೇ? ಆದರೆ ನನಗೆ ಗಣೇಶಚೌತಿ ಎಂದೊಡನೇ ಇವೆಲ್ಲ default ಆಗಿ ನೆನಪಾಗೇ ಬಿಡುವುದರಿಂದ ನಿಮಗೂ ಹೇಳಿದೆ ಅಷ್ಟೇ.

 ನನ್ನೂರು ಬಿಜಾಪೂರದ ಗಣಪ್ಪನ ಆರ್ಭಟ, ಗದ್ದಲ,ವೈಭವ ಅನುಭವಿಸಿಯೇ ತಿಳಿಯಬೇಕು. ತಿಂಗಳುಗಟ್ಟಲೆಯಿಂದ ಗಣಪತಿ ಪಟ್ಟಿ ಕೇಳಲು ಬರುವವರ ಧಾಂಧಲೆ, ವಾರಗಟ್ಟಲೆಯಿಂದ ಮಂಟಪದ ತಯಾರಿ, ಬ್ಯಾಂಡು-ಭಜಂತ್ರಿ, ಮೈಕಾಸುರರ ಗದ್ದಲ, ಗಣೇಶೋತ್ಸವದ ಸಲುವಾಗಿ ವಿವಿಧ ಸಂಘಸಂಸ್ಥೆಗಳಿಂದ ಆಯೋಜಿಸಲಾಗುವ ಹತ್ತುಹಲವು ಸ್ಪರ್ಧೆಗಳು, ಮನರಂಜನಾ ಕಾರ್ಯಕ್ರಮಗಳು, ಗಜೇಂದ್ರಮೋಕ್ಷ, ರಾಮಾಂಜನೇಯ ಯುದ್ಧ, ಗೀತೋಪದೇಶದಂಥ ಪೌರಾಣಿಕ ಕತೆಗಳಿಂದ ಹಿಡಿದು ಇಂದಿರಾ ಗಾಂಧಿ ಹತ್ಯೆ, ಹಸಿರುಕ್ರಾಂತಿ, ಕ್ರಿಕೆಟ್, ರಾಕೆಟ್ ಉಡ್ಡಯನದಂಥ ಪ್ರಸ್ತುತ ರಾಜಕೀಯ – ಸಾಮಾಜಿಕ ವಿಷಯಗಳು,ಕಲಾವಿದರ ಕೈಯಲ್ಲಿ ಬೆಂಡು-ಬ್ಯಾಗಡಿಯಿಂದ ಅಚ್ಚುಕಟ್ಟಾಗಿ ಮೈದಳೆದ ಮೈಸೂರಿನ ಅರಮನೆ, ಬೆಂಗಳೂರಿನ ಲಾಲ್ ಬಾಗ್, ಅಮೃತಸರದ ಸ್ವರ್ಣಮಂದಿರದಂಥ ಇತಿಹಾಸ ಪ್ರಸಿದ್ಧ ಸ್ಥಳ-ಸ್ಮಾರಕಗಳಂಥ ನಾನಾ ವಿಧದ ಥೀಮಿನ ನಾನಾ ನಮೂನೆಯ ಗಣೇಶರಿಂದ ಅಲಂಕೃತಗೊಂಡ ಗಲ್ಲಿ ಗಲ್ಲಿಗಳು..ಎಲ್ಲಿ ನೋಡಿದರೂ ಹೊಳೆಹೊಳೆವ ಬಣ್ಣಬಣ್ಣದ ಲೈಟಿನ ಬೆಳಕು, ನಾರೀಮಣಿಯರ , ಮಕ್ಕಳ ರೇಶ್ಮೆ, ಜರೀ ಸೀರೆ-ಲಂಗಗಳ ಥಳಕು, ವಿನಾಕಾರಣ ಹಲ್ಲು ಕಿಸಿವ, ಪಿಸಿಪಿಸಿ- ಗುಸುಗುಸು ಮಾಡುವ ಹದಿಹರೆಯದ ಹುಡುಗಿಯರು, ಅವರ ಹಿಂದೆ ಎಲ್ಲಿಯೂ ಸಭ್ಯತೆಯ ಎಲ್ಲೆ ಮೀರದಂತೆ ಕುಚೋದ್ಯ, ಉಡಾಳತನದ ಜೋರು ನಗು ಗದ್ದಲದ ಹುಡುಗರ ದಂಡು..ಹೀಗೆ ಇಡೀ ಊರಿಗೆ ಊರೇ ಹಬ್ಬದ ಸಡಗರದಲ್ಲಿ ತಲ್ಲೀನ. ಯಾವ ಜಾತಿಮತ ಲಿಂಗ ವರ್ಗಗಳ ತಾರತಮ್ಯವಿಲ್ಲದೇ ನಾವೆಲ್ಲ ಮನೆಯ ಗಣಪ್ಪ, ಓಣಿಯ ಗಣಪ್ಪ, ಊರಿನೆಲ್ಲ ಗಣಪ್ಪರನ್ನು ಅಷ್ಟೇ ಆದರದಿಂದ ಬರಮಾಡಿಕೊಳ್ಳುತ್ತಿದ್ದೆವು. ಮಂಟಪದ ತೆಂಗಿನ ಗರಿ, ಬಾಳೆಕಂಬ ಕಟ್ಟಲು, ಡೆಕಾರೇಶನ್ ಮಾಡಲು ನಮ್ಮೋಣಿಯ ಅತ್ತಾರ ಸಾಬರ ಮಕ್ಕಳಾದ ಸಲ್ಯಾ,ಸಪ್ಪ್ಯಾ(ಸಲೀಂ, ಸಫೀಕ್ ಅಂತ ಅವರ ಹೆಸರು. ಚಂದನೆಯ ಹೆಸರನ್ನು ಕೆಡಿಸಿ ಕರೆದರಷ್ಟೇ ನಮ್ಮ ಉತ್ತರ ಕರ್ನಾಟಕದ ಮಂದಿಗೆ ಆತ್ಮೀಯ ಭಾವ, ಅಪನಾಪನ್ ಅನ್ನಿಸುವುದು ಸುಳ್ಳಲ್ಲ) ಸದಾ ಸಿದ್ಧರಾಗಿರುತ್ತಿದ್ದರು. ಅವರಕ್ಕ ಜೈದಾನ ಫ್ರೀಹ್ಯಾಂಡ್ ರಂಗೋಲಿಯಲ್ಲಿ ಮಂಟಪದ ಮುಂದೆ ಚಂದದ ಕಮಲಗಳು ಅರಳುತ್ತಿದ್ದವು; ಸುಂದರ ನವಿಲುಗಳು ನರ್ತಿಸುತ್ತಿದ್ದವು; ಬಣ್ಣಬಣ್ಣದ ಚಿಟ್ಟೆಗಳು ಹಾರಾಡುತ್ತಿದ್ದವು. ಗಣಪತಿ ತರುವಾಗ ಹಿಂದು-ಮುಸ್ಲಿಂ ಅನ್ನದೇ ಎಲ್ಲರ ತಲೆಯಮೇಲೆ ಬಿಳಿಯ ವಾರೆ ಟೋಪಿ, ಬಾಯಲ್ಲಿ ಗಣಪತಿ ಬಪ್ಪಾ ಮೋರಯಾ ಇದ್ದೇ ಇರುತ್ತಿತ್ತು. ಅಂತೆಯೇ ಅದೇ ಸಮಯದಲ್ಲಿ ಬರುವ ಮೊಹರಂದ ಆಚರಣೆಯಲ್ಲಿ ಅವರ ಮನೆಗೆ ಬರುವ ಮುಲ್ಲಾ(ಮೌಲ್ವಿ)ನ ನವಿಲುಗರಿ ಹರಕೆ ನಮ್ಮ ತಲೆಯ ಮೇಲೇ ಮೊದಲು ನಲಿದಾಡಬೇಕಿತ್ತು. ಸಾಲಾಗಿ ಬರುವ ಡೋಲಿಗಳನ್ನು ನೋಡುವುದಕ್ಕಾಗಿ ಎತ್ತರದ ಮನೆ-ಮಾಳಿಗೆಯೇರಿ ಮುಂದಿನ ಜಾಗ ಹಿಡಿವುದು, ಮೊಹರಂ ಹುಲಿವೇಷ, ಕುಣಿತಗಳನ್ನು ಬಾಯ್ ತೆರೆದು ಅಚ್ಚರಿಯಿಂದ ನೋಡುವುದು ನಮ್ಮ ನೆಚ್ಚಿನ ಕೆಲಸವಾಗಿದ್ದವು. ‘ಅಸಹಿಷ್ಣುತೆ’ ಎಂಬ ಪದದ ಪರಿಚಯವೇ ಇರದ ನಮ್ಮ ಆ ಬಾಲ್ಯದ ದಿನಗಳು ಅದೆಂಥ ದಿವಿನ!!


 ಇನ್ನು ಮನೆಯ ಹಬ್ಬದ ತಯಾರಿಯೂ ಅಷ್ಟೇ ಹಬ್ಬದ ಮೊದಲ ರವಿವಾರದ ಸಂತೆಯಿಂದಲೇ ಆರಂಭವಾಗುತ್ತಿತ್ತು. ಊಟಕ್ಕೆ ಬೇಕಾಗುವ ಬಾಳೆಲೆ, ವೀಳ್ಯದೆಲೆಗಳು, ಹಣ್ಣು-ಹಂಪಲಗಳು, ತೆಂಗಿನಕಾಯಿಗಳು, ಬಾಳೆಕಂಬ-ಕೇದಿಗೆಗಳು, ಗಣಪ್ಪನಿಗೆ ಪ್ರಿಯವಾದ ಕೆಂಪುಹೂ, ಗೌರಿಗೆಂದೇ ಇರುವ ಕಡುಗೆಂಪಿನ ಗೌರಿ ಹೂವು, ಸಣ್ಣಸಣ್ಣ ನೀಲಿ- ಗುಲಾಬಿ -ಹಸಿರು ಬ್ಯಾಂಗಡಿಗಳಿಂದ ಅಲಂಕರಿಸಿ ಕಟ್ಟಿದ ಕತ್ತೆ ಶ್ಯಾವಂತಿಗೆ ಹೂವಿನ ಮಾಲೆ, ಬಿಡಿ ಕಾಕಡಾ ಮಲ್ಲಿಗೆ ಹೂಗಳು, ಕರಕಿ-ಪತ್ರಿಗಳು, ತೋರಣಕ್ಕಾಗಿ ಮಾವಿನೆಲೆ, ಗಣಪ್ಪನ ಮಾಡದ ಅಲಂಕಾರಕ್ಕಾಗಿ ಬಂಗಾರ ಬಣ್ಣದ ಸೋನೇರಿ ಪೇಪರ್, ಗುಲಾಬಿ ಬಣ್ಣದ ಪರಪರಿ ಹಾಳೆ, ಬ್ಯಾಂಗಡಿ,ಹರಳು-ಟಿಕಳಿ, ಅಂಟು-ಫೆವಿಕಾಲ್ ಗಳು..ಹೀಗೆ ದಂಡಿಯಾಗಿ ಸಾಮಾನು ಬಂದು ಬೀಳುತ್ತಿದ್ದವು. ಚೌತಿಗಿಂತ ಮೊದಲು ಬರುವ ಸ್ವರ್ಣಗೌರಿಯನ್ನು ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದಳು ನನ್ನಾಯಿ ಓಣ್ಯಾಯಿ. ಹತ್ತಾರು ದಿನ ಮೊದಲೇ ಅಡುಗೆಯ ಅಹಲ್ಯಾಬಾಯಿಯನ್ನೋ, ರಮಾಬಾಯಿಯನ್ನೋ ಮನೆಗೆ ಕರೆಸಿ ಅವಲಕ್ಕಿ-ಚಹಾ, ಆತ್ಮೀಯ ಹರಟೆಯೊಂದಿಗೆ ಅವರನ್ನು ಬುಕ್ ಮಾಡುತ್ತಿದ್ದಳು. ನಂತರ ಮೆನ್ಯುದ ಡಿಸ್ಕಶನ್..ಗಣಪ್ಪಗ ಮರುದಿನ ಹೂರಣಗಡಬು ಹೇಗೂ ಇರುವುದರಿಂದ ಅವತ್ತು ಹೂರಣ ಆರತಿ ಮತ್ತ ನೈವೇದ್ಯಪೂರ್ತೇಕ್ಕ(ಅಂದರೂ ಸೇರೋ, ಸೊಲಿಗೆಯೋ ಬೇಳೆ ಹಾಕಲಾಗುತ್ತಿತ್ತು) ಮಾಡಿ ಬೇಸನ್ ಉಂಡಿಯ ಜೊತೆಗೆ ಪಾಕಿನ ಚಿರೋಟಿಯನ್ನೋ, ಮಂಡಿಗೆ, ಬಾದಾಮಿ ಪೂರಿಯನ್ನೋ ಮಾಡುವ ನಿರ್ಧಾರ ಕೈಗೊಳ್ಳಲಾಗುತ್ತಿತ್ತು. ನಾವು ಮಕ್ಕಳು ಆ ಮಹತ್ವಪೂರ್ಣ ನಿರ್ಣಯಕ್ಕಾಗಿ ನಮ್ಮದೇ ಆದ ಸಲಹೆ-ಸೂಚನೆಗಳನ್ನು ಮಧ್ಯೆ ಮಧ್ಯೆ ಕೊಡುತ್ತ, ಹಿರಿಯರಿಂದ ಗದ್ದರಿಸಿಕೊಳ್ಳುತ್ತ ಕಾತರದಿಂದ ಕಾಯುತ್ತಿದ್ದೆವು. ನಂತರ ಗೆಸ್ಟ್ ಗಳ ಊಟದ ಲಿಸ್ಟಿನ ತಯಾರಿ. ತಪ್ಪಿಲ್ಲದೇ ಒಪ್ಪಾದ ಅಕ್ಷರ ಬರೆವ ಮಕ್ಕಳು ಉದ್ದನೆಯ ಹಾಳೆ ಪೆನ್ನು ತೆಗೆದುಕೊಂಡು ಅವಳೆದಿರು ಕೂತರೆ ‘ ಮದಲ ಮ್ಯಾಲೆ ಶ್ರೀಕಾರ ಬರಿ. ಆಮ್ಯಾಲ ಊಟಕ್ಕ ಕರೆವ ಯಾದಿನಾಗ ಶ್ರೀ ಲಕ್ಷ್ಮೀನಾರಾಯಣ ಅಂತ ಬರಿ’ ಎಂದು ಶುರುಮಾಡಿದರೆ ನಮ್ಮಲ್ಯಾರಾದರೂ ಕಿಡಿಗೇಡಿಗಳು ‘ ಅವರಿಗೆ ಎಣ್ಣಿ-ಕುಂಕುಮಾ ಕೊಡಲಿಕ್ಕೆ ಯಾರ ಹೋಗವರು ವೈಕುಂಠಕ್ಕ?’ ಅಂತಲೋ, ‘ಅವರು ಆ ದೊಡ್ಡ ಗರುಡನ ಮ್ಯಾಲೆ ಕೂತು ಬಂದ್ರಂತಿಟ್ಕೋ..ಆಮ್ಯಾಲೆ ಆ ಗರುಡಪ್ಪನ್ನ ಎಲ್ಲಿ ಕೂಡಸತೀ’ ಅಂತಲೋ ಕಾಡುತ್ತಿದ್ದರೆ ‘ ಹುಚ್ಚ ಮುಂಡೆವೇ’ ಅಂತ ಜಬರಿಸಿ, ತಾನೂ ನಮ್ಮೊಡನೆ ದೊಡ್ಡ ನಗು ನಕ್ಕು ‘ ಹೂಂ ಬರಕೋ ದೇಶಪಾಂಡೆ ಡಾಕ್ಟರ್ ಮನಿಯಿಂದ ಇಬ್ಬರು..ವಕೀಲರ ಮನ್ಯಾಗ ಮೂರುಮಂದಿ..ಶಿವಮೊಗ್ಗಿ ಅವರ ಮನ್ಯಾಗ ಅತ್ತಿ-ಸೊಸಿ, ಮಗಳೇನರ ಬಂದ್ರ ಅಕಿನ್ನೂ ಕರಕೊಂಡ ಬರಲಿಕ್ಕೆ ಹೇಳ್ರಿ..ಅಂದ್ರ ಅವರ ಮನ್ಯಾಗ ಮೂರಂತ ಹಿಡೀರಿ, ಇನ್ನ ಉಕ್ಕಲಿ ಅವರ ಮನ್ಯಾಗ ಇರವರೇ ನಾಕ ಮಂದಿ’.. list at least ಮೀಟರ್ ಉದ್ದ ಆಗಲೇಬೇಕಿತ್ತು.

ಬೆಳ್ಳಿಯ ತಂಬಿಗೆಯ ಮೇಲೆ ಇಡಿಗಾಯಿಯೊಂದನ್ನಿಟ್ಟು ಬೆಳ್ಳಿಯ ಕಣ್ಣುಬೊಟ್ಟು, ಮೂಗು ಮೂಗಿಗೆ ನತ್ತು ಎಲ್ಲ ಮೇಣದ ಸಹಾಯದಿಂದ ಅಂಟಿಸಿ, ಉದ್ದನೆಯ ಗಿರಿಕುಂಕುಮದ ಬೊಟ್ಟು ತೀಡಿ, ಒಂದು ಉದ್ದನೆಯ ಚೌರಿಜಡೆಗೆ ಕೇದಗೆ ಹೆಣೆದು ಗೌರಮ್ಮನ ಹೆಗಲ ಮೇಲಿಂದ ಇಳಿಬಿಟ್ಟರೆ ಸಾಕ್ಷಾತ್ ಶಿವೆಯೇ ಕೈಲಾಸದಿಂದಿಳಿದು ಬಂದಂತೆ ತೋರುತ್ತಿತ್ತು. ಪಾಂಕ್ತವಾಗಿ ಪೂಜೆ, ಪಂಕ್ತಿಯೂಟ ಮುಗಿಸಿ ಮತ್ತೆ ಮರುದಿನದ ಗಣಪ್ಪನ ತಯಾರಿ. ನಾವೆಲ್ಲ ಮಕ್ಕಳೂ ಬೇಗನೆದ್ದು, ‘ಕಲ್ಲಾಗು..ಗುಂಡಾಗು..ಅಗಸಿಮುಂದಿನ ಬೋರ್ಗಲ್ಲಾಗು’ ಅಂತ ಅಜ್ಜಿಯೋ, ಅಮ್ಮನೋ, ಮಾಮಿಯೋ ಯಾರಾದರೊಬ್ಬರಿಂದ ಹರಸಿ ಎಣ್ಣೆ ಹಚ್ಚಿಸಿಕೊಂಡು (ಆ ಹರಕೆಯ ಫಲವಾಗಿಯೇ ಇಂದಿಗೂ ಗುಂಡುಕಲ್ಲಿನಂತೆ ಗುಂಡುಗುಂಡಾಗಿರುವುದು) ಅಭ್ಯಂಜನ ಮುಗಿಸಿ ಗಣಪತಿ ತರಲು ರೆಡಿಯಾಗುತ್ತಿದ್ದೆವು. ಜಾಗಟೆ, ಗಂಟೆ, ಪಟಾಕ್ಷಿ, ಮಣೆ, ಪಂಚಪಾಳ ..ಎಲ್ಲವನ್ನೂ ಒಬ್ಬೊಬ್ಬರು ಹಿಡಿದುಕೊಂಡು ಪೂರ್ತಿ ಸನ್ನದ್ಧರಾಗಿ ಮಾಮನೊಡನೆ ಬಳಿಗಾರ ಓಣಿಗೆ ಹೋಗಿ ಜನಿವಾರ, ಇಲಿ, ಎಡಕ್ಕೆ ಸೊಂಡಿಲು, ಹಸ್ತದಲ್ಲಿ ಮೋದಕ, ಅಂಕುಶ, ಮುಖಲಕ್ಷಣ ಎಲ್ಲ ಇರೂ ಗಣಪತಿಯನ್ನ ಆರಿಸಿಕೊಂಡು ಅತ್ಯಂತ ಹುರುಪಿನಿಂದ ಜೈಕಾರ ಹಾಕುತ್ತ ಮನೆಗೆ ತಂದು ಅವನಿಗೆಂದು ಅಲಂಕರಿಸಿದ ಮಾಡದಲ್ಲಿ ಅಕ್ಕಿಯ ಪೀಠದಲ್ಲಿ ಕುಳ್ಳಿರಿಸಿದರೆ ನಂತರ ಗಣಪ್ಪ ಅಜ್ಜನ ಸುಪರ್ದಿಗೆ. ವಿಧಿವಿಧಾನಪೂರ್ವಕವಾಗಿ ಅಜ್ಜನ ಪೂಜೆ, ಆರತಿಯೆಲ್ಲ ಆದಮೇಲೆ ತರಗು,ಲಡ್ಡಿಗೆ, ಮೋದಕ, ಕರಿಗಡಬು,ಪಾಯಸ,ಬುರಬುರಿ,ಚಿತ್ರಾನ್ನಗಳ ಬಾಳೆಲೆ ಊಟ. ಅವತ್ತು ಹುಟ್ಟುಹಬ್ಬವೆಂದು ಸ್ವಲ್ಪ ಹೆಚ್ಚಿಗೇ ಅಚ್ಛಾ. ಅವತ್ತು ಕಸಬಳಿವ, ಎಂಜಲುಗೋಮಯ ಮಾಡುವ ಕೆಲಸದಿಂದಲೂ ರಜಾ ಇರುತ್ತಿತ್ತು. ಸಂಜೆ ಗಣಪ್ಪನ ಮುಂದೆ ಕೈಮುಗಿದು ‘ ಪ್ರಣಮ್ಯ  ಶಿರಸಾ ದೇವಂ ಗೌರಿಪುತ್ರಂ ವಿನಾಯಕಂ’ ಎಂದು ಸಂಕಷ್ಟಹರ ಮಂತ್ರ ಅಂದು ಗಣಪ್ಪನೆದಿರು ಯಥಾಶಕ್ತಿ ಉಠಾಬಸಿ ತೆಗೆದಾದ ಮೇಲೆ ಸೊಂಡಿಲಿಗೆ ಮೊಸರವಲಕ್ಕಿ ಹಚ್ಚಿ ಉತ್ತರ ಪೂಜಾ ಮುಗಿಸಿದ ಮೇಲೆ ನಮ್ಮ ಬರ್ತಡೇ ಸೆಲಿಬ್ರೇಷನ್ನು. ಹಾಸಿದ ಹೊಸ ಜಮಖಾನೆಯ ಮೇಲೆ ನಮ್ಮನ್ನು ಕೂಡಿಸಿ( ನಮ್ಮಜ್ಜಿ ಚೌತಿಯ ಆಚೀಚೆ ಹುಟ್ಟಿದ ತನ್ನ ಮಕ್ಕಳು ಹಾಗೂ ಮೊಮ್ಮಕ್ಕಳನ್ನೆಲ್ಲ ಸೇರಿಸಿ ಹೋಲ್ ಸೇಲ್ ಬರ್ತಡೇ ಮಾಡಿಬಿಡಾಕಿ.) ಆರತಿ ಮಾಡಿ ಕೈಗೆ ಖೊಬ್ರಿಸಕ್ರಿ ಹಾಕಿ, ನಮಸ್ಕಾರ ಮಾಡಿಸಿಕೊಂಡು ‘ಉದ್ಧಂಡ ಆಯುಷ್ಯವಂತಾಗು’ಅಂತ ಆಶೀರ್ವಾದ ಮಾಡಿದ್ರ ಮುಗೀತು ಅಕಿನ್ನ ಕೆಲಸ. ಆಮ್ಯಾಲೆ ನಮ್ಮಜ್ಜ ಮುನ್ನಾದಿನವೇ ಬ್ಯಾಂಕಿನಿಂದ ತೆಗೆಸಿಕೊಂಡು ತಂದಿಟ್ಟ ಹೊಚ್ಚ ಹೊಸ ಎರಡು ರೂಪಾಯಿಯ ನೋಟನ್ನು ತಪ್ಪದೇ ಕೊಡುವವರು. ಅಲ್ಲದೇ ಎಲ್ಲ ಮಕ್ಕಳು, ಮೊಮ್ಮಕ್ಕಳ ಹೆಸರೂ ಬರೂಹಂಗ ನಿಂತನಿಂತಲ್ಲೇ ಒಗಟು ಕಟ್ಟಿ ಹೇಳುವವರು. ನಮ್ಮ ಉತ್ತರ ಕರ್ನಾಟಕದಲ್ಲಿ ಯಾವುದೇ ಶುಭಸಂದರ್ಭದಲ್ಲೂ ಈ ಒಗಟಿನ ಕಾರ್ಯಕ್ರಮ ಇರಲೇಬೇಕು. ನಾವೆಲ್ಲ ನಮ್ಮ ಹೆಸರು ಬರುತ್ತಿದ್ದಂತೆಯೇ ಖುಷಿಯಿಂದ ಹೋ ಎಂದರಚಿ ಇನ್ನೊಂದು, ಮತ್ತೊಂದು ಅಂತ ಕಾಡಿಸಿ ಹತ್ತಾರು ಒಗಟು ಹೇಳಿಸಿಕೊಳ್ಳುವುದು ನಡೆಯುತ್ತಿತ್ತು.
ನಂತರ ಮನೆಯ ಹತ್ತಿರವಿರುವ ಗುಂಡಬಾವಡಿಗೆ ಗಂಟೆ-ಜಾಗಟೆ-ಪಟಾಕ್ಷಿಗಳ ಸದ್ದಿನೊಂದಿಗೆ ಅವನ ವಿಸರ್ಜನಾ ಮೆರವಣಿಗೆ. ಅಂದು ಚೌತಿಯ, ಚಂದಿರನನ್ನು ನೋಡಬಾರದೆಂದು ಎಷ್ಟೇ ಮುನ್ನೆಚ್ಚರಿಕೆವಹಿಸಿದರೂ ಯಾವುದೋ ಮಾಯೆಯಲ್ಲಿ ಅವ ನಮ್ಮನ್ನು ಅಡ್ಡಗಟ್ಟಿ ನಕ್ಕೇ ಬಿಡುತ್ತಿದ್ದ. ಮನೆಗೆ ಬಂದು ಶ್ಯಮಂತೋಪಾಖ್ಯಾನ ಕೇಳಿ ಅಪವಾದದ ಭಯ ಪರಿಹರಿಸಿಕೊಂಡಾದ ಮೇಲೆ ಹಸಿವಿರದಿದ್ದರೂ ಹಬ್ಬದಂದು ರಾತ್ರಿ ಉಪವಾಸ ಮಲಗಬಾರದು ..ಬಾಯಿ ಮುಸುರಿ ಮಾಡಬೇಕು ಎನ್ನುವ ಬಲವಂತಕ್ಕೆಊಟಕ್ಕೆ ಕುಳಿತರೂ ಕೂತಾದ ಮೇಲೆ  ಬಿಸಿ ಅನ್ನದೊಂದಿಗೆ ಕಟ್ಪಿನ ಸಾರು, 2-3 ಕಡಬು, ಮೊಸರನ್ನದ ಫುಲ್ ಮೀಲ್ಸ್ ನೊಂದಿಗೇ ಊಟ ಮುಕ್ತಾಯವಾಗುವುದರೊಂದಿಗೆ ನಮ್ಮ ಗಣೇಶ ಹಬ್ಬದಾಚರಣೆ ಸಂಪನ್ನವಾಗುತ್ತಿತ್ತು.

 ಹೀಗೆ ಅವು ನನಗೆ ಕೇವಲ ಹಬ್ಬಗಳಾಗಿರದೇ ನನ್ನ ಭಾವಕೋಶದಲ್ಲಿ ಹಾಸುಹೊಕ್ಕಾದ ಜೀವತಂತುಗಳು. ಈಗಲೂ ಸಾಕಷ್ಟೇ ಅದ್ಧೂರಿಯಾಗಿ,ವಿಧಿಬದ್ಧವಾಗೇ ಗಣೇಶಚೌತಿಯ ಆಚರಣೆ ಜರಗುತ್ತದಾದರೂ ಯಾಕೋ ಆ ಮುಗ್ಧ ಸಂಭ್ರಮ ಕೈಗೆಟುಕದೇ ನುಣುಚಿಕೊಳ್ಳುತ್ತಿರುವ ಆಭಾಸ. ನಿಮಗೂ ಹಾಗೇನಾ?!
ಆದಿ ಪೂಜಿತ, ವಿಘ್ನವಿನಾಶಕ ಗಣಪತಿ ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ.
ತಮಗೆಲ್ಲರಿಗೂ ಗೌರಿ-ಗಣೇಶ ಹಬ್ಬದ ಶುಭಾಶಯಗಳು.
  
*******
ರೇಖಾ ಚಿತ್ರ- ಯಾಮಿನಿ ಗುಡೂರ್ ( ೧೨ ವರ್ಷ ವಯಸ್ಸು)
ಗಣಪತಿಗಳ ಮೆರವಣಿಗೆ 
- ಡಾ ಮುರಳಿ ಹತ್ವಾರ್ 

ನೆನಪುಗಳೇ ಹಾಗೆ. ಒಮ್ಮೆ ತಲೆಯೊಳಗೆ ಕುಳಿತರೆ ಆಯಿತು, ಹೊಸತೆಲ್ಲವನ್ನು ಅವುಗಳ ಕನ್ನಡಕದಲ್ಲೇ ನೋಡುವಂತೆ ಒತ್ತಾಯಿಸುತ್ತವೆ. ಅದರಲ್ಲೂ, ಬೆಳೆಯುವ ವಯಸ್ಸಿನಲ್ಲಿ, ಕುತೂಹಲವೋ ಆಸಕ್ತಿಯೋ ತುಂಬಿಸಿಕೊಂಡ ನೆನಪುಗಳಂತೂ ತಮ್ಮ ಅಳತೆಗೋಲಲ್ಲಿ ಪಾಸಾದ ಹೊಸ ನೆನಪುಗಳಿಗಷ್ಟೇ ಸಂಭ್ರಮದ ಜಾಗ ಕೊಡೋದು. ಹಾಗೆ ನಿತ್ಯದ ಪಯಣದಲ್ಲಿ ಸೇರಿಕೊಂಡ ನೆನಪುಗಳು, ಹೆಚ್ಚು ಹೆಚ್ಚು ನಿನ್ನೆಗಳು ಕಳೆದಂತೆ ಪದರ ಪದರಗಳ ಸಿಹಿ ಸೋನಪಾಪಡಿಯಂತೊ, ಅಥವಾ ಕಹಿ ಹಾಗಲಕಾಯಿ ಉಪ್ಪಿನಕಾಯಿಯಂತೋ ನೆನಪಿನ ಜಾಡಿಯಲ್ಲಿ ಶೇಖರವಾಗುತ್ತವೆ. ಅವು ಅವುಗಳಿಷ್ಟದಂತೆ ಆಗಾಗ ಕಣ್ಮುಂದೆ ಬಂದು ನಿಲ್ಲುತ್ತವೆ: ಕೆಲವೊಮ್ಮೆ ಒಂಟಿ ಸಲಗದಂತೆ; ಕೆಲವೊಮ್ಮೆ ವಿಸರ್ಜನೆಗೆ ಹೊರಟ ಗಣಪತಿಗಳ ಮೆರವಣಿಗೆಯಂತೆ. 

ಗಣಪತಿ ಎಂದಾಗ ನೆನಪಿಗೆ ಬರೋದು, ಬಳ್ಳಾರಿ ಮುನಿಸಿಪಲ್ ಸ್ಕೂಲ್ ಮೈದಾನದಲ್ಲಿ ಕೇಳಿದ ಭದ್ರಗಿರಿ ಅಚ್ಯುತದಾಸರ ಹರಿಕಥೆ. ಅವರ ಕಂಚಿನ ಕಂಠದ ಏರಿಳಿತದ ಲಯದಲ್ಲಿ ಭೀಮ-ಅರ್ಜುನರ ಅಹಂಕಾರ ಕಟ್ಟು ಹಾಕಿದ ಕೃಷ್ಣ ಗಾರುಡಿಯ ಕಥೆ, ಕೇಳಿ ಮೂವತ್ತು-ಮೂವತ್ತೈದು ವರ್ಷಗಳಾದರೂ, ನೆನಪಿನ ಅಂಗಳದಲ್ಲಿ ಇನ್ನೂ ಹೂಬಿಡುತ್ತ, ಮತ್ತೆ ಮತ್ತೆ ಚಿಗುರುವ ಬಳ್ಳಿ ಅದು. ಅವರ ಕಥೆಗಳಲ್ಲಿ ಹೇಳಿದ, ದಾಸರು ಮಳೆ ಬರುತ್ತೆ ಎಂದು ಹೇಳಿದರೆಂದು ಮೋಡದ ಕುರುಹಿಲ್ಲದಿದ್ದರೂ ಕೊಡೆ ತಂದ ಬಾಲಕನೊಬ್ಬನ ಗಟ್ಟಿ ನಂಬಿಕೆ, ಅದಕ್ಕೆ ತಕ್ಕಂತೆ ಮಳೆ ಸುರಿದ ಕಥೆಯೊಂದು ನಿನ್ನೆಯಷ್ಟೇ ಕೇಳಿದಷ್ಟು ಹಸಿಯಾಗಿ ನೆನಪಿನ ಕುಡಿಕೆಯಲ್ಲಿ ಕುಳಿತಿದೆ. ಅವರ ಹರಿಕಥೆಗಳ ಸುತ್ತ, ಆ ವಾರವಿಡೀ ಸಡೆಯುತ್ತಿದ್ದ ತರತರದ ಕಾರ್ಯಕ್ರಮಗಳಿಗೆ ಉತ್ಸಾಹದಿಂದ, ಬೇರಾವುದೇ ಒತ್ತಾಯವಿಲ್ಲದೇ, ಸೇರುತ್ತಿದ್ದ ಸಾವಿರಾರು ಜನ, ಆ ಜಂಗುಳಿಯಲ್ಲಿ ಮನೆಯವರೊಟ್ಟಿಗೋ. ಗೆಳೆಯರೊಟ್ಟಿಗೋ ಹಾಕಿದ ಹೆಜ್ಜೆಗಳ ಸದ್ದು ಇನ್ನೂ ಕೇಳಿಸುತ್ತಿದೆ. 

ಆ ಕಾಲದ ಎಲ್ಲ ಗಣಪತಿಗಳ ಲೆಕ್ಕವಿಟ್ಟಿವೆ ಆ ಹೆಜ್ಜೆಗಳು. ಮುನಿಸಿಪಲ್ ಮೈದಾನದ ಪಕ್ಕದ ಸೆಂಟೆನರಿ ಹಾಲಿನ ದೊಡ್ಡ ಗಣಪನಿಂದ ಹಿಡಿದು, ಸಣ್ಣ ಮಾರ್ಕೆಟ್, ದೊಡ್ಡ ಮಾರ್ಕೆಟ್, ಮೇದಾರ ಓಣಿ, ಕುಂಬಾರ ಓಣಿ, ಗೌಳಿ ಹಟ್ಟಿ, ಸಿಂಧಿಗಿ ಕಂಪೌಂಡ್, ತೇರು ಬೀದಿ, ಕಾಳಮ್ಮ ಬೀದಿ. . . ಹೀಗೆ ಪಂಡಾಲಿನಿಂದ ಪಂಡಾಲಿಗೆ ಓಡುತ್ತಿದ್ದ, ಅಲ್ಲಿ ಯಾವ ದಿನ ಯಾವ ಕಾರ್ಯಕ್ರಮವಿದೆ, ಎಷ್ಟು ಹೊತ್ತಿಗೆ ಏನೇನು ಎಲ್ಲ ಪಟ್ಟಿ ಮಾಡುತ್ತಾ, ಆ ಪಂಡಾಲಿನಲ್ಲಿ ಕೊಡುತ್ತಿದ್ದ ಸಿಹಿ ಹಿಟ್ಟು ಇಲ್ಲ ಗುಗ್ಗರಿ ತಿನ್ನುತ್ತಾ ಮುಂದೋಡುವುದು, ಸಂಜೆಯ ಹೊತ್ತಿಗೆ ಆ ಪಟ್ಟಿಯನ್ನ ಮನೆಯವರಿಗೆ ತಲುಪಿಸಿ ಅವರೊಟ್ಟಿಗೆ ಯಾವ ಕಾರ್ಯಕ್ರಮಕ್ಕೆ ಹೋಗುವದು, ಗೆಳೆಯರೊಟ್ಟಿಗೆ ಯಾವ ಕಾರ್ಯಕ್ರಮಕ್ಕೆ ಹೋಗುವದು ಎನ್ನುವ 'ನೆಗೋಷಿಯೇಷನ್' ಮಾಡಿಕೊಂಡರೆ ಹಬ್ಬದ ಡೈರಿ ಫುಲ್. 

ಎಲ್ಲ ಗಣಪತಿಗಳಿಗಿಂತ, ಕಾಳಮ್ಮ ಬೀದಿಯ ಗಣಪ ಸ್ವಲ್ಪ ಹತ್ತಿರ. ನಮ್ಮ ಸ್ಕೂಲ್ ಹತ್ತಿರವಿದ್ದುದು ಒಂದು ಕಾರಣವಾದರೆ, ಆ ವಿನಾಯಕನನ್ನ ಕಟ್ಟುವ 'ಅಣ್ಣಂದಿರ' ತಮ್ಮಂದಿರು ಕ್ಲಾಸಿನಲ್ಲಿದ್ದುದು ಮುಖ್ಯ ಕಾರಣ. ಹಬ್ಬಕ್ಕೆ ಸುಮಾರು ಮೊದಲೇ ಶುರುವಾಗುತ್ತಿತ್ತು 'ಲೀಕ್ಸು': 'ಜೇಡಿ ಮಣ್ಣು ತಂದವ್ರೆ', ' ಈ ಸಲ ಕ್ರಿಕೆಟ್ ಗಣಪ, ಗ್ಯಾರಂಟಿ', 'ಇಲ್ಲಲೇ, ಸಿದ್ದಿ-ಬುದ್ದಿ ಗಣಪ, ನಂಗ್ ಗೊತ್ ಲೇ'. . . ಆಗಾಗ ಇನ್ನೂ ರೂಪು ತಾಳುತ್ತಿರುವ ಗಣಪನ ಸೀಕ್ರೆಟ್ ದರ್ಶನದ ಅವಕಾಶ ಬೇರೆ. ನೆನಪಿನಲ್ಲಿ ಉಳಿಯದೆ ಇನ್ನೇನು?

ಸಂಜೆಯ ಕಾರ್ಯಕ್ರಮಗಳಲ್ಲಿ, 'ಸ್ಟೇಟ್ ಲೆವೆಲ್' ಹಾಡು, ಹರಿಕಥೆ, ಡಾನ್ಸ್ ಎಲ್ಲ ಮುನಿಸಿಪಲ್ ಮೈದಾನದಲ್ಲಿ. ಸಣ್ಣ ಸ್ಟೇಜುಗಳ ಪಂಡಾಲುಗಳಲ್ಲಿ ಒಂದೋ ಉತ್ತರ ಕರ್ನಾಟಕದ ಉದಯೋನ್ಮುಖ ಗಾಯಕರ ಜಾನಪದ ಹಾಡು, ಇಲ್ಲ ಲೋಕಲ್ ಹುಡುಗರ ಹಾಡು, ಡ್ಯಾನ್ಸು. ಆಗ ಕೇಳಿದ, 'ಕುದುರೆಯ ತಂದೀವ್ನಿ, ಜೀನಾವ ಬಿಗಿದಿವ್ನಿ,,,' ತಾಯಿ ಸತ್ತಮೇಲೆ ತವರಿಗೆ ಎಂದೂ ಹೋಗಬಾರದವ್ವ. . .', 'ಕಲಿತ್ತ ಹುಡುಗಿ ಕುದುರಿ ನಡಿಗಿ, , ,' ಹಾಡುಗಳು ಇನ್ನೂ ಆಗಾಗ ಪ್ರಸಾರ ಆಗುತ್ತಿರುತ್ತವೆ ನನ್ನ ನೆನಪಿನ ರೇಡಿಯೋದಲ್ಲಿ. 

ಆ ಸ್ಟೇಜುಗಳಲ್ಲಷ್ಟೇ ಆಗ ನೋಡಲು ಸಿಗುತ್ತಿದ್ದದ್ದು ತರತರದ 'ಬ್ರೇಕು' ಡಾನ್ಸುಗಳು. ಮಿಥುನ್ ಚಕ್ರವರ್ತಿಯ ಡಿಸ್ಕೊ ಡಾನ್ಸ್ ಹಾಡುಗಳು; ಮೈಕೆಲ್ ಜಾಕ್ಸನ್ನನ ಈಗಲೂ ಅರ್ಥವಾಗದ ಹಾಡುಗಳಿಗೆ ಅವನ ಅವತಾರವೆಂದುಕೊಂಡು ಕುಣಿಯುತ್ತಿದ್ದ ಬಾಲಕರು, ಯುವಕರು ಈಗಲೂ ನೆನಪಿನ ತೆರೆಯ ಮೇಲೆ ಕುಣಿದು ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. 

ಈ ಕಾರ್ಯಕ್ರಮಗಳೆಲ್ಲ ಹೆಚ್ಚು ಪಂಡಾಲಿನಲ್ಲಿ ಐದು ದಿನಗಳಷ್ಟೇ. ಐದನೇ ರಾತ್ರಿ ವಿಸರ್ಜನೆ, ವಿಜೃಂಭಣೆಯ ಮೆರವಣಿಗೆಯಲ್ಲಿ. ನೂರಾರು ಗಣಪತಿಗಳು, ತೇರು ಬೀದಿಯ ಮೊದಲಿಗೆ ಸೇರಿ, ಆ ಬೀದಿಯ ಅಂಗಡಿ, ದೇವಸ್ಥಾನ, ಚರ್ಚು, ಮಸೀದಿಗಳ ದಾಟಿ, ಮೋತಿ ಸರ್ಕಲ್ಲಿನಲ್ಲಿ ಬೆಂಗಳೂರು ರೋಡಿಗೆ ತಿರುಗಿ, ಮೂರ್ನಾಕು ಕಿಲೋಮೀಟರ್ ದೂರದ ತುಂಗಭದ್ರೆಯ ದೊಡ್ಡ ಕಾಲುವೆಗೆ ಗಣಪತಿಯನ್ನ ಒಪ್ಪಿಸೋದು ಆ ಮೆರವಣಿಗೆಯ ಕೊನೆ. ಸಂಜೆಗೆ ಶುರುವಾಗುವ ಮೆರವಣಿಗೆ ಮುಗಿಯುವದು ಮುಂಜಾವಿಗೆ ಹತ್ತಿರಕ್ಕೆ. ನಮ್ಮ ಮನೆ ಮೋತಿ ಸರ್ಕಲ್ಲಿನ ತಿರುವಿನಲ್ಲಿ ಇದ್ದದರಿಂದ ಅದೊಂದು ವಾಂಟೇಜ್ ಪಾಯಿಂಟ್ ನಮ್ಮ ಹತ್ತಿರದವರಿಗೆ. 

ಆ ದಿನ, ಕತ್ತಲೇರುತ್ತಿದ್ದಂತೆ ಮನೆ ತುಂಬಾ ಜನ. ಎಷ್ಟೆಂದರೆ, ೧೩ಮನೆ ದಾಯ್ ಆಟಕ್ಕೆ ಬೇಕಾಗುವಷ್ಟು ಕೈ, ಮತ್ತೆ ಅವರಿಗೆ ಬೇಕಾದಂತೆ, ಕಾಫಿ ಚಾ ಮಾಡಲಿಕ್ಕೆ, ಹೊರಗಡೆ ನಿಲ್ಲುತ್ತಿದ್ದ ಮಂಡಕ್ಕಿ ಗಾಡಿಯಿಂದ ಮಸಾಲೆ ಮಂಡಕ್ಕಿ ತಂದು ಕೊಡೋಕೆ, ಮತ್ತೆ, ದೊಡ್ಡ-ದೊಡ್ಡ ಗಣಪತಿಗಳ ಮೆರವಣಿಗೆ ಬಂದಾಗ ಅವರಿಗೆ ಹೇಳಲಿಕ್ಕೆ ಬೇಕಾದಷ್ಟು ಜನ. ದಾಯ್ ಆಟದ ಮಂದಿ ಪಳಗಿದ ಕೈ ಗಳಾದ್ದರಿಂದ, ನಮ್ಮಂತ ಮಕ್ಕಳು ಒಂದೋ ಆಟಕ್ಕುಂಟು ಲೆಕ್ಕಕಿಲ್ಲ ಅಥವಾ ಅರ್ಜೆಂಟಿಗೆ ಒಂದಿಷ್ಟು ನಿಮಿಷ ಬೇಕಾದಾಗ ಕವಡೆಯ ಕರಡಿಗೆ ಮಗಚುವ ಕೈ. ಉಳಿದ ಸಮಯದಲ್ಲಿ, ಮಂಡಕ್ಕಿ-ಸೋಡಾ ಮಜಾ ಮಾಡುತ್ತಾ, ಗಣಪತಿಗಳ ಟ್ರಾಕ್ಟರ್ ಜೊತೆಗೆ, ತಿನ್ನುತ್ತಿದ ಮಂಡಕ್ಕಿ ಪ್ಯಾಕೇಟಿನ ಲೆಕ್ಕ ಇಡುವದು ನಮ್ಮ ಕೆಲಸ. 

ಹದಿಮೂರು ಮನೆಯ ದಾಯ್ ಆಟಕ್ಕೆ, ಮನೆಗೆ ಮೂರು ಕೈ. ಕೈ ತುಂಬುವಷ್ಟು ಕವಡೆಯಾದ್ದರಿಂದ ದಾಳ ಉರುಳಿಸಲು ಒಂದು ಕರಡಿಗೆ. ಮೊದಮೊದಲು ಕೈ ಬೇಗ ಬೇಗ ಬದಲಿಸುತ್ತಾ ಮನೆಯ ಕಾಯಿಗಳನ್ನ ಹೊರಡಿಸುತ್ತವೆ. ಆ ಕಾಯಿಗಳು ಇನ್ನೊಬ್ಬರನ್ನು ಹೊಡೆಯದೆ ಹಣ್ಣಾಗಲು ಸಾಧ್ಯವಿಲ್ಲದ ಕಾರಣ, ಹೊಡೆಯುವ ಆಟ ಒಂದಿಷ್ಟು ಸುತ್ತಿನಲ್ಲಿ ಶುರುವಾಗುತ್ತದೆ. ಪಳಗಿದ ಕೈಗಳಿಗೆ ಶಕ್ತಿ, ಉತ್ಸಾಹ ಉಕ್ಕುವದು ಆಗಲೇ. 'ನಾಲ್ಕ್ ಹಾಕಿ', ' ಹೊಡಿ, ಬಿಡ್ಬೇಡ ಹಣ್ ಆಪ್ಕೆ', 'ಹ್ವಾಯ್, ತುಂಬಾ ಗೆರ್ಚ್ ಬೇಡಿ'. . .ಹೀಗೆ ಕೈಯಿಂದ ಕೈ ಗೆ ಸಾಗುವ ಕವಡೆಗಳ ರಿಥಮ್, ಆಟ ರಂಗೇರಿದಂತೆ ತಾರಕ್ಕೇರುವ ಆ ಕೈಗಂಟಿದ ಗಂಟಲುಗಳ ದನಿ, ಹೊರಗಿನ ಮೆರವಣಿಗೆಯ ವಾಲಗ, ಬ್ಯಾಂಡು, ಅದಕ್ಕೆ ಕುಣಿಯುವ ಜನ, ಅದನ್ನು ನೋಡುತ್ತಾ, ಬಾಯೊಳಿಳಿದ ಮಂಡಕ್ಕಿಯ ಖಾರಕ್ಕೆ ಸುರಿಯುತ್ತಿದ್ದ ಕಣ್ಣು ಮೂಗುಗಳನ್ನು ಒರೆಸಿಕೊಳ್ಳುತ್ತ ಕಳೆಯುತ್ತಿದ್ದ ರಾತ್ರಿಗಳು, ಆಗಾಗ ನೆನಪಿನ ತೆರೆಯಲ್ಲಿ 4D ಸಿನೆಮಾ ರೂಪದಲ್ಲಿ ಮೂಡುತ್ತವೆ. ಸ್ವಲ್ಪ ನಗುವಿನ ಜೊತೆಗೆ ಒಂದಿಷ್ಟು ಪ್ರಶೆಗಳನ್ನ ಬಿಟ್ಟು ಹೋಗುತ್ತವೆ. 

ಮತ್ತೆ ಸಿಕ್ಕಬಲ್ಲುದೆ ಆ ಹಬ್ಬಗಳ ಸಮಯ, ಹಳ್ಳಿಗಳೆಲ್ಲ ನಗರಗಳಾಗಿ, ಮನೆಗಳೆಲ್ಲ ಪೆಟ್ಟಿಗೆಗಳಾಗಿ, ನಮಗೂ ನಾವು ಸಿಕ್ಕದಷ್ಟು ಮೊಬೈಲಿನಲ್ಲಿ ಕಳೆದು ಹೋಗಿರುವ ಈ ದಿನಗಳಲ್ಲಿ? ಆಸೆಯ ಕೈಗಳ ಲೆಕ್ಕಾಚಾರದ ಕವಡೆಯಾಟದಲ್ಲಿ ಊರೂರೇ ದಾಯ್ ಆಟದ ಮನೆಗಳಾಗಿ; ದೇವರೂ, ಹಬ್ಬಗಳೂ ಕಾಯಿಗಳಾಗಿ, ಹೊಡಿ-ಬಡಿ ಆಟದಲ್ಲಿ ಒಂದಿಷ್ಟು ಹಣ್ಣಾಗಿ, ಒಂದಿಷ್ಟು ಸುಣ್ಣವಾಗಿ ಸುತ್ತುತ್ತಿರುವ ಈ ಕಾಲದಲ್ಲಿ, ಹಳೆಯ ಕೌಟುಂಬಿಕ ಸಿನೆಮಾವೊಂದರ ಸೆಟ್ಟೊಂದನ್ನು ಮತ್ತೆ ಕಟ್ಟಿ ಅದೇ ಸಿನಿಮಾ ಶೂಟಿಂಗಿನ ಬಯಕೆಯೇ ಅರ್ಥವಿಲ್ಲದ, ಮೌಲ್ಯವಿಲ್ಲದ ಆಲೋಚನೆ ಎನ್ನುವದು ಮನದೊಳಗಿನ ಸಿನಿಕನ ವಾದ. ಅಥವಾ, ಹಾಗೆನ್ನಿಸುವುದೇ ಹಳೆಯ ನೆನಪುಗಳ ದೋಷವೋ? . 

ಮೊಬೈಲಿನ ಸಣ್ಣ-ದೊಡ್ಡ ಬೀದಿಗಳಲ್ಲಿ, ಹತ್ತು ಹಲವು ರೂಪದಲ್ಲಿ ಈ ಕಾಲದ ಜನ-ಜನ ಸೇರುತ್ತಿದ್ದರೂ, ಹಳೆಯ ಆಪ್ತತೆ ಕಳೆದುಹೋಗಿದೆ ಎನ್ನಿಸುತ್ತಿದೆ. ಕಳೆದುಹೋಗಿರುವ ಆ ಆಪ್ತತೆಯನ್ನ ಮತ್ತೆ ಹುಟ್ಟಿಸಿ, ಬೆಳೆಸಿ; ಗಣಪತಿಗಳ ಕುಳಿಸಿ, ಮೆರೆಸಿ, ಮೆರವಣಿಗೆ ಮಾಡಿಸಿ, ಹಳೆಯ ನೆನಪುಗಳು ಮೆಚ್ಚಿ, ಒಂದು ವೇಳೆ ಮೆಚ್ಚದಿದ್ದರೆ ಕೊಚ್ಚಿ ಹೋಗುವಷ್ಟು, ಹೊಸ ನೆನಪುಗಳು ಮೂಡಿಸುವ ಗಾರುಡಿಯೊಬ್ಬ ಎಲ್ಲಿಂದಾದರೂ -- appಪಿನಿಂದಾದರೂ ಅಡ್ಡಿಯಿಲ್ಲ -- ಹಾರಿಬಂದು, ಬರುವದು ತಡವಾದರೆ, ಬರುವವರೆಗೆ, ಬರುವರೆಂಬ ನಂಬಿಕೆಯ ಕೊಡೆ ಕಳೆದು ಹೋಗದೆ ಜೊತೆಯಲ್ಲೇ ಇಟ್ಟುಕೊಳ್ಳುವಷ್ಟು ನೆನಪಿನ ಮನೆಯಲ್ಲಿ ಜಾಗ ಇರಲಿ . . . ಹೀಗೆ ಓಡುತ್ತಿದ್ದ ಆಲೋಚನಯ ಲಯದ ತಾಳಕ್ಕೆ, ಹಳೆಯ ನೆನಪಿನ ಜ್ಯೂಕ್ ಬಾಕ್ಸ್ ಹಾಡೊಂದನ್ನು ಹುಡುಕಿಕೊಟ್ಟಿತು:

ಗಜಮುಖನೆ ಗಣಪತಿಯೇ ನಿನಗೆ ವಂದನೆ 
ನಂಬಿದವರ ಪಾಲಿನ ಕಲ್ಪತರು ನೀನೆ. . . 


*****
ಫಲಾವಳಿ (ಚಿತ್ರ ಕೃಪೆ: ಗೂಗಲ್)
ನಯನ ಮನೋಹರ ಅಂಕೋಲೆಯ ಚೌತಿ ಹಬ್ಬ 
 - ಡಾ. ರಾಮ್ ಶರಣ್ 

ಭಾರತದಲ್ಲಿ ಗಣಪ ಸೂಪರ್ ಸ್ಟಾರ್ ದೇವ. ನಾನು ಹುಟ್ಟಿ, ಬೆಳೆದು, ಓದಿದ ಸ್ಥಳಗಳಲ್ಲೆಲ್ಲ ಗಣೇಶ ಚತುರ್ಥಿ ಅತ್ಯಂತ ಜನಪ್ರಿಯ ಹಬ್ಬ. ಉತ್ತರ ಕನ್ನಡ ಜಿಲ್ಲೆಯಲ್ಲಿ ಗಣೇಶ ಚತುರ್ಥಿ, ಚೌತಿ ಹಬ್ಬ ಎಂದೇ ಕರೆಯಲ್ಪಡುತ್ತದೆ. ದಾಂಡೇಲಿಯಲ್ಲಿದ್ದಾಗ ಚೌತಿ ಹಬ್ಬದ ಸಮಯದಲ್ಲಿ ಅರ್ಧಕ್ಕರ್ಧ ಊರೇ ಕರಾವಳಿಗೆ ಗುಳೆ ಹೋಗುತ್ತಿದ್ದುದು ಬೇರೆ ಹಬ್ಬಗಳಲ್ಲಿ ಕಾಣುತ್ತಿರಲಿಲ್ಲ. ನಾನು ಬಾಲ್ಯವನ್ನು ಕಳೆದಿದ್ದು ಕರಾವಳಿಯ ಅಂಕೋಲ ಎಂಬ ಊರಿನಲ್ಲಿ. ಅಂಕೋಲೆಯ ಚೌತಿ ಹಬ್ಬದ ಸೊಗಡನ್ನು ನಾನು ಬೇರೆಡೆ ನೋಡಿಲ್ಲ. ಚೌತಿ ಹಬ್ಬ ಎಂದರೆ ಈಗಲೂ ನನಗೆ ಅಂಕೋಲೆಯದೇ ನೆನಪು. 

ಶಾಲೆಯ ಮಕ್ಕಳಾದ ನಮಗೆ ಚೌತಿ ಹಬ್ಬದ ಮೊಗ್ಗರಳುತ್ತಿದ್ದುದು ಮಹಾಲೆ ಮನೆಯಲ್ಲಿ ಮೂಡುತ್ತಿದ್ದ ಗಣೇಶನ ಮೂರ್ತಿಗಳಲ್ಲಿ. ಪೇಟೆಯ ಮುಖ್ಯ ರಸ್ತೆಯ ಹಿಂದೆ ಅಡಗಿದ್ದ ಓಣಿಯಲ್ಲಿತ್ತು ಮಹಾಲೆ ಮನೆ. ಗಣಪತಿ ಮಾಡುವುದರಲ್ಲಿ ಈ ಮನೆಯವರು ಸಿದ್ಧ ಹಸ್ತರು. ದೂರದ ಭದ್ರಾವತಿಗೂ ಗಣಪತಿ ಮೂರ್ತಿಯನ್ನು ಸಪ್ಲಾಯ್ ಮಾಡುವಷ್ಟು ಪ್ರಸಿದ್ಧರು ಅವರು. ಕಟಾಂಜನದ ಹಿಂದಿನ ಮನೆಯ ಹಜಾರದ ಮೇಲೆ ಕಪ್ಪು ಮಣ್ಣಿನ ಕಣಗಳು ಒತ್ತಟ್ಟಿಗೆ ಬಂದು, ಅಡಿಯೆತ್ತರದಿಂದ ಆಳೆತ್ತರದವರೆಗೆ ಸಾಲಾಗಿ ತಯಾರಾಗುವ ಮೂರ್ತಿಗಳ ಪ್ರಗತಿಗೆ ದಿನವೂ ಹಾಜರಿ ಹಾಕದಿದ್ದರೆ ತಿಂದ ಅನ್ನ ಗಂಟಲಿನಿಂದ ಕೆಳಗೆ ಇಳಿಯುತ್ತಿರಲಿಲ್ಲ. 

ಚೌತಿ ಹಬ್ಬಕ್ಕೆ ಊರಾದ ಕುಮಟೆಗೆ ಹೋದರೂ ಮನಸ್ಸೆಲ್ಲ ಅಂಕೋಲೆಯಲ್ಲೇ. ಚೌತಿ ರಜೆ ಮುಗಿಸಿ ವಾಪಸ್ಸಾದ ಕೂಡಲೇ ಗಣಪತಿ ದರ್ಶನ ಯಾತ್ರೆ ಶುರುವಾಗುತ್ತಿತ್ತು. ಕರಾವಳಿಯಲ್ಲಿ ಗಣಪತಿ ಪ್ರತಿಷ್ಠಾಪಿಸಿದಲ್ಲೆಲ್ಲ ಮಂಟಪದ ಎದುರಿನ ಮಾಡಿಗೆ ಫಲಾವಳಿ ಕಟ್ಟುವುದು ಪದ್ಧತಿ. ಚಚ್ಚೌಕ ಆಕಾರದ ಬಣ್ಣಬಣ್ಣದ ಬಟ್ಟೆಯ ಹಿನ್ನೆಲೆಗೆ ಥರಾವರಿ ತರಕಾರಿ, ಹಣ್ಣುಗಳನ್ನು ತೂಗು ಬಿಡುವುದೇ ಫಲಾವಳಿ. 
(ಮೇಲಿನ ಚಿತ್ರವನ್ನು ಗಮನಿಸಿ) 

ಗಣಪತಿ ಮಂಟಪದ ಅಲಂಕಾರ ಮಾಡುವುದು ಎಲ್ಲಡೆ ಸಾಮಾನ್ಯ. ಇದರೊಟ್ಟಿಗೆ ಗಣಪತಿಯ ಮುಂಭಾಗದಲ್ಲಿ ಪೌರಾಣಿಕ ಕಥಾನಕಗಳ ಗೊಂಬೆಗಳ ಅಲಂಕಾರವೂ ನಮಗೆ ಹೆಚ್ಚಿನ ಆಕರ್ಷಣೆಯಾಗಿತ್ತು. ಭಕ್ತ ಮಾರ್ಕಂಡೇಯ, ಅಹಲ್ಯೆಯ ಶಾಪ ವಿಮೋಚನೆ ಇತ್ಯಾದಿ ಕಥೆಗಳ ರಿವಿಶನ್ ಆಗುತ್ತಿತ್ತು. ವೆಂಕಟರಮಣ ದೇವಸ್ಥಾನದ ಸಿಂಧೂರ ಗಣಪತಿ; ನಾರ್ವೇಕರ್ ಮಾಸ್ತರ್ ಮನೆಯ ಭಜನೆ, ಸಂಗೀತ ಕಾರ್ಯಕ್ರಮ, ಗುಮಟೆ ಪಾಂಗು (ಅಂಕೋಲೆ ಕಡೆಯ ವಿಶಿಷ್ಟ ಚರ್ಮ ವಾದ್ಯ); ಶೇಟ್ ಮಾಸ್ತರ್ (ನಮಪ್ಪ-ಅಮ್ಮನ ಶಾಲೆಯ ಮಾಸ್ತರ್) ಮನೆಯಲ್ಲಿ ಶಾಲೆಯ ಮಾಸ್ತರರ ಕುಟುಂಬದವರಿಗೆ ನೀಡುತ್ತಿದ್ದ ಸ್ಪೆಷಲ್ ಔತಣ; ಸಾರ್ವಜನಿಕ ಗಣಪತಿ ಮಂಡಲದಲ್ಲಿ ನಡೆಯುವ ನಾಟಕ - ಆರ್ಕೆಸ್ಟ್ರಾಗಳು; ಒಂದೇ, ಎರಡೇ? ಚೌತಿಯಿಂದ ಅನಂತನ ನೋಪಿಯವರೆಗೂ ನಮಗೆ ಹಬ್ಬ ಎಳೆದು ಹೋಗುತ್ತಿತ್ತು. ಶಾಲೆ ಹೆಸರಿಗೆ ಮಾತ್ರ. 

ಅನಂತನ ಚತುರ್ದಶಿಯಂದು ಹಲವಾರು ಮನೆಗಳ ಗಣಪತಿ ವಿಸರ್ಜನೆಯಾಗುತ್ತಿದ್ದುದು ಸಂಜೆ ಕೇಣಿ ಹಳ್ಳದಲ್ಲಿ. ಹಳ್ಳಕೆ ಹೋಗುವ ಹಾದಿ ನಮ್ಮ ಮನೆಯ ಪಕ್ಕದಲ್ಲೇ ಸಾಗುತ್ತಿತ್ತು. ಪಾಗಾರದ ಮೇಲೆ ಕುಳಿತು ಸಾಗುವ ಗಣಪತಿಗಳನ್ನು ಯಾರ ಮನೆಯದೆಂದು ಗುರುತಿಸುವ ಸ್ಪರ್ಧೆ ನಮ್ಮಲ್ಲೇ ನಡೆಯುತ್ತಿತ್ತು. ಮನೆಯವರೆಲ್ಲ ಒಟ್ಟಾಗಿ, ಜಾಗಟೆ ಬಡಿಯುತ್ತ ಗಣಪತಿಯನ್ನು ಹೊಳೆಯತ್ತ ಹೊತ್ತು ನಡೆಯುತ್ತಿದ್ದರು. ಮಳೆ ಬಡಿಯುತ್ತಿದ್ದರೆ, ಗಣಪತಿಗೆ ಕೊಡೆಯ ಆಶ್ರಯವಿರುತ್ತಿತ್ತು. ರಾತ್ರಿ ಒಂಭತ್ತರ ನಂತರ ಬರುವವು ಸಾರ್ವಜನಿಕ ಗಣಪತಿಗಳ ಮೆರವಣಿಗೆ. ಅವುಗಳ ಅಬ್ಬರವೇ ಬೇರೆ. ಬಾಜಾ - ಭಜಂತ್ರಿಗಳ ನಡೆದಾಡುವ ಆರ್ಕೆಸ್ಟ್ರಾ, ಟ್ಯೂಬ್ ಲೈಟ್- ಬಣ್ಣದ ಲೈಟುಗಳಿಂದ ಅಲಂಕೃತ ಲಾರಿಗಳ ಮೇಲೆ ಆಸೀನನಾಗಿ ವಿಸರ್ಜನೆಗೆ ಸಜ್ಜಾಗಿ ಬರುತ್ತಿದ್ದ ಗಣಪ. ಆ ಲಾರಿಗಳ ಎದುರು ಕುಣಿದು ಕುಪ್ಪಳಿಸುವವರ ತಂಡವೇ ಇರುತ್ತಿತ್ತು. ಕಡೆಯಲ್ಲಿ ಬರುತ್ತಿದ್ದ ಕೆ.ಈ.ಬಿ ಆಫೀಸಿನ ಗಣಪತಿಯ ಮೆರವಣಿಗೆಯ ಜರ್ಬು ಎಲ್ಲದವುಕ್ಕಿಂತ ಜಾಸ್ತಿ. ಅವರು ಹುಬ್ಬಳ್ಳಿಯಿಂದ ಬ್ಯಾಂಡ್ ಸೆಟ್ ತರಿಸುತ್ತಿದ್ದರು. ಅವರ ಹಾಡಿಗೆ ನರ್ತಿಸುವವರೂ ಆ ಸೆಟ್ ಜೊತೆಗೇ ಬರುತ್ತಿದ್ದರು. ಹೊಸ ಸಿನಿಮಾ ಹಾಡುಗಳನ್ನೆಲ್ಲ ಅವರು ನುಡಿಸುತ್ತಿದ್ದುದು ನಮಗೆ ಹೆಚ್ಚಿನ ಆಕರ್ಷಣೆಯಾಗಿತ್ತು. ನಾವೂ ಸ್ವಲ್ಪ ದೂರ ಆ ಮೆರವಣಿಗೆಯ ಜೊತೆಗೂಡಿ ಆದಷ್ಟು ಹೆಚ್ಚು ಹಾಡುಗಳನ್ನು ಕೇಳಿ ಸಮಾಧಾನ ಪಟ್ಟು, “ಗಣಪತಿ ಬಪ್ಪ ಮೋರೆಯಾ ಪುಡಚೆ ವರ್ಷೇ ಲವ್ಕರ್ ಯಾ” ಎಂದು ಭಾರವಾದ ಮನಸಿನಿಂದ ಗಣಪತಿಗೆ, ಚೌತಿ ಹಬ್ಬಕ್ಕೆ ವಿದಾಯ ಹೇಳಿ ಮುಸುಕೆಳೆಯುತ್ತಿದ್ದೆವು. 

ಸುಮಾರು ಆರು ವಾರಗಳ ಕಾಲ ನಮ್ಮನ್ನು ಕನಸಿನ ಲೋಕದಲ್ಲೇ ತೇಲಿಸುತ್ತಿದ್ದ ಅಂಕೋಲೆಯ ಗಣಪತಿ ಹಬ್ಬವನ್ನು ಇಂದಿಗೂ ಮೆಲುಕು ಹಾಕುತ್ತಲೇ ಆಚರಿಸುವುದು ಸಂಪ್ರದಾಯದ ಭಾಗವಾಗಿದೆ. 

*****
ಫೋಟೋ ಕೃಪೆ ಗೂಗಲ್
ಚಕ್ಕುಲಿ ಚರಿತ್ರೆ 
- ಅಮಿತ ರವಿಕಿರಣ್ 

 ನಾವು ವರ್ಷ ಪೂರ್ತಿ ಹಲವಾರು ಹಬ್ಬಗಳನ್ನ ಆಚರಿಸುತ್ತೇವೆ. ಪ್ರತಿ ಹಬ್ಬ ಹೊತ್ತು ತರುವ ಸಂಭ್ರಮ ಮತ್ತು ಅದು ಉಳಿಸಿ ಹೋಗುವ ನೆನಪು, ಕೊಡಮಾಡುವ ಚೈತನ್ಯ, ಸಾಮಾನ್ಯ ದಿನಗಳಿಗೂ ಹರುಷ ತುಂಬುತ್ತದೆ.
 ಹಬ್ಬಗಳು ಬರುವುದೇ ನಮ್ಮ ತನು ಮನಗಳಲ್ಲಿನ ಜಡತ್ವವನ್ನು ದೂರ ಮಾಡಲೇ ಇರಬೇಕು.ಹಬ್ಬ ಯಾವುದಾದರಾಗಲಿ ಅದು ಒಂದಷ್ಟು ತಯಾರಿ ಸಮಯ,ಮತ್ತು ಏಕಾಗ್ರತೆ ಬೇಡುತ್ತದೆ. ಪ್ರತಿಬಾರಿ ಮಾಡುವುದಕ್ಕಿಂತ ಚನ್ನಾಗಿ ಮಾಡಬೇಕು ಅನ್ನೋ ಒಂದು ಹುಮ್ಮಸ್ಸು ಇದ್ದರೇನೇ ಹಬ್ಬದ ವಾತಾವರಣ ಇನ್ನೂ ಚಂದಗಾಣುವುದು. 

ಹಬ್ಬಗಳಿಗೂ ತಿಂಡಿಗಳಿಗೂ ಅವಿನಾಭಾವ ಸಂಬಂಧ. ಪ್ರತಿ ಹಬ್ಬಕ್ಕೂ, ಆ ದಿನ ಮಾಡಲೇ ಬೇಕಾದ ವಿಶೇಷ ಪದಾರ್ಥ ತಿಂಡಿ ತಿನಿಸುಗಳಿವೆ. ಇವತ್ತು ಗಣಪತಿ ನಮ್ಮೆಲ್ಲರ ಮನೆಗೆ ಬರುತ್ತಾನೆ ಅವನು ಬರುವ ಮೊದಲೇ ನಾವು ಅವನಿಗಿಷ್ಟ ಎಂದು ಉಂಡೆ,ಚಕ್ಕುಲಿ,ಕಡಬು,ಕೋಡುಬಳೆ, ಕರ್ಚಿಕಾಯಿ,ಕಜ್ಜಾಯ,ಮೋದಕ ಅಂತೆಲ್ಲ ಖುಷಿಯಿಂದಲೋ ಅಥವಾ ಮಾಡಲೇ ಬೇಕು ಅನ್ನುವ ಕಾಟಾಚಾರಕ್ಕೋ ಒಟ್ಟಿನಲ್ಲಿ ಮಾಡಿಯೇ ಮಾಡುತ್ತೇವೆ. 
 
 ಊಟ ತಿಂಡಿ ಎಂದರೆ ಜೀವ ಬಿಡುವ,ಅದಕ್ಕೆಂದೇ ಜೀವ ಹಿಡಿದುಕೊಂಡಿರುವ ನನ್ನಂಥವರು ಯಾವ ತಿನಿಸಿನ ಬಗ್ಗೆಯೂ ಪುಟಗಟ್ಟಲೆ ಬರೆಯಬಹುದು,ಘಂಟೆಗಟ್ಟಲೆ ಮಾತಾಡಬಹುದು. ಆದರೆ ಇವತ್ತು ನನ್ನ ಮನಸ್ಸನ್ನು ಚಕ್ಕುಲಿ ಎಂಬ ದಿವ್ಯ ತಿನಿಸು ಆವರಿಸಿಕೊಂಡಿದೆ.

ಚಕ್ಕುಲಿ ಮತ್ತು ಹೊಳಿಗೆ (ಪೂರನ ಪೋಳಿ) ಇವೆರಡು ತಿಂಡಿಗಳಿಗೆ ನಾವು ಹಬ್ಬಗಳನ್ನೂ ಬ್ರಾಂಡ್ ಮಾಡಿದ್ದೇವೆ ,ಅಮ್ಮ ಚವತಿಗೆ ಚಕ್ಕುಲಿ, ಯುಗಾದಿಗೆ ಹೊಳಿಗೆ ಮಾಡೋದು ವಾಡಿಕೆ.ಆದರೆ ಆ ಚಕ್ಕುಲಿಯ ಕತೆಗಳು ಮಾತ್ರ ಸಿಕ್ಕಾಪಟ್ಟೆ ರಸವತ್ತಾಗಿವೆ. ಚಕ್ಕುಲಿಯ ಪ್ರತಿ ಸುತ್ತಿಗೂ ನನ್ನ ಹತ್ತಿರ ಕತೆಯೊಂದಿದೆ. ಒಂದಷ್ಟು ನಿಮ್ಮೊಂದಿಗೂ ಹಂಚಿಕೊಳ್ಳುವ ಅನಿಸಿತು. 

ಊರಿನಲ್ಲಿ ನಮ್ಮ ಮನೆ ಮುಂದೆ ಸಾರಸ್ವತ ಕುಟುಂಬವೊಂದು ನೆಲೆಸಿತ್ತು ಅವರ ಮನೆಯನ್ನ ನಾವು 'ಎದುರುಮನೆ' ಅನ್ನೋದೇ ರೂಡಿ. ಆ ಮನೆಯ ಹಿರಿಯರನ್ನ ಅವರ ಮಕ್ಕಳು ಕರೆದಂತೇ ನಾವು ಕೂಡ ಆಯಿ, ಪಪ್ಪಾ ಅಂತಲೇ ಕರೆಯುತ್ತಿದ್ದೆವು. ನಮ್ಮಲ್ಲಿ ಗಣಪತಿ ಇಲ್ಲದ ಕಾರಣ ಚವತಿಯ ಸಕಲ ಸಂಭ್ರಮ ನಾನು ಕಂಡಿದ್ದು ಅವರ ಮನೆಯಲ್ಲಿ. ಚವತಿಗೆ ಚಕ್ಕುಲಿ ಮಾಡುತ್ತಿದ್ದಾಗ ಅವರು ಹರಕೆ ಹೊರುತಿದ್ದರು, ಕೆಲವೊಮ್ಮೆ ಸರಿ ಆಗದಿದ್ದರೆ ''ಯಾವಳ್ ಹಾಳಾದ ಕಣ್ಣೋ ......'' ಅಂತ ಬೈಯ್ಯೋಕ್ ಶುರು ಮಾಡಿದ್ರೆ ಕೂತ ಗಣಪ್ಪ ಎದ್ದು ಓಡಿ ಹೋಗಿ ಮತ್ತೆರಡು ವರ್ಷ ಬರಬಾರದು ಆ ರೀತಿ ವಟ ವಟ ಮಾಡೋರು. 

ಇನ್ನೊಂದು ಚಕ್ಕುಲಿ ಕತೆ ನನ್ನ ಅಕ್ಕವರ (ಟೀಚರ್) ಮನೇದು. ಅವರು 'ಅಮಿತಾ ನಮ್ಮನೆ ಚಕ್ಕುಲಿ ರುಚಿ ನೋಡ್ತೀಯ?' ಅಂತ ಕೇಳಿ ೨ ಚಕ್ಕುಲಿ ಅದೇ ಸೈಜಿನ ಪ್ಲೇಟ್ ನಲ್ಲಿ ಹಾಕಿ ತಂದು ಮುಖದ ಮುಂದೆ ಆರತಿ ತಟ್ಟೆ ಥರ ಹಿಡಿಯೋರು. ಈ ಮೊದಲೇ ಹೇಳಿದಂತೆ ಅದು ರುಚಿ ನೋಡೋಕಷ್ಟೆ ಸಿಗೋ ಚಕ್ಕುಲಿ, ಅಪ್ಪಿ ತಪ್ಪಿ ರುಚಿ ಇಷ್ಟ ಆಗಿ ನಿಮಗೆ ಮತ್ತೆ ಆ ರುಚಿ ಕಾಣಬೇಕೆಂದರೆ ಒಂದ ವರ್ಷ ಕಾಯಬೇಕು. ಕಾಯುವಿಕೆಯ ಸುಖದ ಅಂತ್ಯಕ್ಕೆ ಮತ್ತೆ ಸಿಗುವುದು ಮತ್ತೆರಡೆ ಚಕ್ಕುಲಿ. 

ನಾನು ತಿಂದ ಸೂಪರ್ ಡ್ಯೂಪರ ಚಕ್ಕುಲಿ ಅಂದರೆ ನನ್ನ ಪಪ್ಪನ ಆತ್ಮೀಯ ಸ್ನೇಹಿತ ವಾಮನ್ ಮಾಮನ ಮನೇದು ಅದೇನು ಹಾಕ್ತಿದ್ರೋ, ಬಾಯಲ್ಲಿಟ್ಟರೆ ನೀರು ಆಗೋದು ಚವತಿಯಲ್ಲಿ ಗಣಪ್ಪನಿಗಿಂತ ನಾನು ನನ್ನ ತಂಗಿ ಅವರ ಮನೇ ಚಕ್ಕಲಿ ಬರೋದೆ ಕಾಯುತ್ತಿದ್ದೆವು.

 ಮತ್ತೊಂದು ಚಕ್ಕುಲಿ ನೆನಪು ನನ್ನ ಮಮ್ಮಮ್ಮ (ಅಮ್ಮಮ್ಮ ) ಮಾಡೋ ಚಕ್ಕುಲಿದು. ಆಕೆ ಚಕ್ಕುಲಿಗಿಂತ ತೆಂಗೊಳೋಲು ಅನ್ನೋ ಚಕ್ಕುಲಿಯ ಸೋದರ ಸಂಬಂಧಿಯನ್ನು ಜಾಸ್ತಿ ತಯಾರಿಸೋಳು.ಅಕ್ಕಿ ನೆನೆಸಿಟ್ಟು ಮಾಡುವ ಈ ತಿಂಡಿಗೆ ಬೇಕಾಗೋ ಹಿಟ್ಟನ್ನು ಆ ಬಾವಿ ಬಾಯಿಯ ಒರಳಲ್ಲಿ ರುಬ್ಬಿ ರುಬ್ಬಿಯೇ ಇರಬೇಕು ನನ್ನ ಮಮ್ಮಮ್ಮ ೧೨ ಹೆತ್ತರೂ ಆಕೆಯ ಹೊಟ್ಟೆ ಸಪಾಟು. 

 ಈ ಚಕ್ಕುಲಿ ಬಗೆಗೆ ತೀರದ ಆಕರ್ಷಣೆ ಹುಟ್ಟಿಸಿದ್ದು ಅವರಿವರ ಬಯಕೆ ಊಟದ ಆರತಿಗೆಂದು ಮಾಡುತ್ತಿದ್ದ ೫/೭/೯ ಸುತ್ತಿನ ಚಕ್ಕುಲಿಗಳು. ಒಮ್ಮೆ ಅಷ್ಟು ದೊಡ್ಡ ಚಕ್ಕುಲಿ ಮಾಡಿ ಒಬ್ಬಳೇ ತಿನ್ನಬೇಕು ಅನ್ನೋ ಕನಸು ಇನ್ನೂ ನನಸಾಗಿಲ್ಲ. 

ಇನ್ನು ನನ್ನ ಅಮ್ಮನ ಚಕ್ಕುಲಿ ತಯಾರಿ ಬಗ್ಗೆ ಹೇಳದಿದ್ದರೆ ನನ್ನ ಬರಹ ಅಪೂರ್ಣ ,ಅಮ್ಮ ಚವತಿಗೆ ಒಂದು ವಾರ ಮೊದಲು ಅಕ್ಕಿ,ಹುರಿದ ಉದ್ದಿನಬೇಳೆ ಸ್ವಲ್ಪ ಪುಟಾಣಿ ಸೇರಿಸಿ ದೊಡ್ದ ಸ್ಟೀಲಿನ ಡಬ್ಬಿಯಲ್ಲಿ ಹಾಕಿ ಗಿರಣಿಗೆ ಒಯ್ಯಲು ಆಜ್ಞೆ ಮಾಡುತ್ತಿದ್ದಳು. ಅದರೊಂದಿಗೆ ಪಾಲಿಸಲೇ ಬೇಕಾದ ಕೆಲವು ನಿಯಮ/ಕಂಡೀಷನ್ ಇರುತ್ತಿದ್ದವು 

1.ಆ ಡಬ್ಬಿಯನ್ನು ನಮ್ಮ ಪಟಾಲಂ ನ ಯಾರು ಮುಟ್ಟಬಾರದು.

2.ಆ ಚಕ್ಕುಲಿ ಹಿಟ್ಟು ಬೀಸುವ ಮೊದಲು ನಮ್ಮದೇ ಮನೆಯ ಅಕ್ಕಿ ಅಥವಾ ಗೋದಿ ಬೀಸಬೇಕು.

3.ತಪ್ಪಿಯೂ ಕೂಡ ಅದರಲ್ಲಿನ ಅಕ್ಕಿಗೂ ನಮ್ಮ ಬಾಯಿಗೂ ಯಾವುದೇ ಮುಖಾ ಮುಖಿ ಆಗಬಾರದು .

4.ಚಕ್ಕುಲಿ ಸರಿಯಾಗದಿದ್ದರೆ ಸಿದ್ದ ಮಾಡಿದ ಹಿಟ್ಟಾದರೂ ಸರಿ ಅದನ್ನ ಗಿರಣಿಯವನ ತಲೆಗೆ ತಂದು ತಿಕ್ಕುತ್ತೇವೆ ಎಂದು ಹೇಳು. ಅನ್ನುವ ಮಾತು ಹೇಳಿದ ನಂತರ.
 ೨ ನಿಮಿಷ ಬಿಟ್ಟು ,ಹೇಳಗೀಳೀಯ ಜಾಗ್ರತೆ! ಅಂದಾಗ ಅಮ್ಮ ತುಂಬ ಮುದ್ದಾಗಿ ಕಾಣಿಸುತ್ತಿದ್ದಳು.

ಈ ೪ ಆಜ್ಞೆಗಳಲ್ಲಿ ನಾವು ಎರಡನೆಯ ಮಾತನ್ನು ಮಾತ್ರ ಪಾಲಿಸುತ್ತಿದ್ದುದು. 
ಉಳಿದಿದ್ದು ನಮ್ಮ ಮತ್ತು ಗಣಪನ understanding. ಅಕ್ಕಿಯೊಂದಿಗೆ ಹುರಿದ ಉದ್ದಿನಬೇಳೆ ಬರಿ ಬಾಯಲ್ಲಿ ಎಂದಾದರೂ ತಿಂದಿದ್ದೀರ? ಅದೊಂಥರ ಸಿನಿಮ ನೋಡ್ತಾ ಕಡಲೆ ಬೀಜ ತಿಂದಂತ ಅನುಭವ ಕೊಡುತ್ತೆ.ಗಿರಣಿಯಲ್ಲಿ ನಮ್ಮ ಸರದಿ ಬರೊ ತನಕ ನಾವು ಅದನ್ನು ಅಷ್ಟೇ ಅಪ್ಯಾಯಮಾನವಾಗಿ ಸವಿಯುತ್ತಿದ್ದೆವು.ಉಳಿದದ್ದು ಅಮ್ಮನ ಬಾಯಲ್ಲಿ ಕೇಳಲಷ್ಟೇ ಚಂದ.ಇದು ಚಕ್ಕುಲಿ ತಯಾರಾಗುವ ಕತೆ. ತಯಾರಾದ ಮೇಲೆ ಅದರ ನಿಜವಾದ ಮಜ ಅಲ್ವೇ??

ಚಕ್ಕುಲಿ ಯಾವತ್ತು ಬಿಸಿ ಬಿಸಿ ತಿನ್ನಬಾರದು,ರವೆ ಉಂಡೆ ಕಡಬು ಕರ್ಜಿಕಾಯಿ ,ಚಕ್ಕುಲಿ ಹಿಟ್ಟಲ್ಲಿ ಮಾಡಿದ ಪೈಸೆ ವಡೆ ಎಲ್ಲವು ಖಾಲಿ ಆಗುತ್ತಿದ್ದಾಗ ,ಮಾತ್ರ ಆ ಚಕ್ಕುಲಿಯ ನಿಜ ರುಚಿ ಅರಿವಾಗೋದು. ಚಕ್ಕುಲಿ ಡಬ್ಬಿ ತಳ, ಪಾತಾಳ ರಸಾತಳ ಅನ್ನೋ ಶಬ್ಧಗಳ ಮೂರ್ತ ರೂಪ.

ಇನ್ನು ಚಕ್ಕುಲಿಯನ್ನು ಹೇಗೆ ಹೇಗೆ ತಿನ್ನಬಹುದು?('ಬಾಯಿಂದ' ಅನ್ನೋ Funny ಉತ್ತರದ ನಂತರ ಮುಂದೆ ಓದಿಕೊಳ್ಳಿ ) ಹಸಿ ಕೊಬ್ಬರಿ ತುರಿಯೊಂದಿಗೆ ಮೊದಲ ಪ್ರಯೋಗ ,ಅಮ್ಮ ಸಾರಿಗೆ ಅಂತ ತುರಿದಿಟ್ಟ ಕೊಬ್ಬರಿ ಇಟ್ಟಲ್ಲೇ ಮಾಯ. ನಂತರ ಆ ದಿನದ ಸಾಂಬಾರ್ ಜೊತೆಗೆ ಅದ್ದಿ ಚಕ್ಕುಲಿಯನ್ನ ಸಾಂಬಾರನಲ್ಲಿ ಸ್ವಿಮ್ಮಿಂಗ್ ಮಾಡಿಸಿ ತಿನ್ನದಿದ್ದರೆ ಅದನ್ನು ಚಕ್ಕುಲಿ ಸೀಸನ್ ಅನ್ನೋದೇ ಇಲ್ಲ ಬಿಡಿ. 
ಪಂಚಕಜ್ಜಾಯದಲ್ಲಿ ಚಕ್ಕುಲಿಯನ್ನ ಚಮಚೆಯಂತೆ ಬಳಸಿ ತಿನ್ನುವುದು ಇನ್ನೊಂದು ರೀತಿ.
ಚಕ್ಕುಲಿ ಘಟ್ಟಿ ಇದ್ದರು ,ನುರಿ ನುರಿ ಆಗಿ ಬಾಯಲ್ಲೇ ನೀರಾಗುತ್ತಿದ್ದರೂ ಯಾವುದೇ ಭೇದವಿಲ್ಲದೆ ಪ್ರಯೋಗಿಸಬಹುದಾದ ರುಚಿ ಚಹಾ ಕಪ್ಪಿನಲ್ಲಿ ಚಕ್ಕುಲಿ ಹಾಕಿ 1 ನಿಮಿಷ ವಿರಮಿಸಲು ಬಿಟ್ಟು ಚಹಾ ಕುಡಿಯುತ್ತಲೇ ಅದರಲ್ಲೇ ನೆನೆದ ಚಕ್ಕುಲಿ ತಿನ್ನುವುದು. ವಿಚಿತ್ರ ಅನ್ನಿಸಿದರೂ ಇದರ ರುಚಿ ಸವಿದವನಿಗೆ ಈಗಾಗಲೇ ಚಕ್ಕುಲಿ ಚಹಾ ಕೈಬೀಸಿ ಕರೆದಿರುತ್ತದೆ. 

ಇನ್ನು, ನನ್ನ ಅಜ್ಜಿ! ಆಕೆಗೆ ಹಲ್ಲಿಲ್ಲ ಆದರವಳು ನನ್ನಜ್ಜಿ! ನನ್ನಲ್ಲಿ ಅಡುಗೆ ಬಗೆಗೆ ಪ್ರೀತಿ, ಊಟ ತಿಂಡಿಗಳ ಬಗ್ಗೆ ಅಪರಿಮಿತ ಭಕ್ತಿ ಬರಲು ಅವಳೇ ಕಾರಣ. ಅವಳ ನಾಲಿಗೆಗೂ ಅಮಿತ ರುಚಿಯ ಬಯಕೆ ,ಬಾವಿ ಮುಖದ ಅಷ್ಟೇ ಆಳದ ಆ ರುಬ್ಬುಗುಂಡಿನ ಮೇಲೆ ಇಟ್ಟಿರುವ ಪುಟ್ಟ ಗುಂಡಕಲ್ಲನ್ನು ಉರುಟುರೂಟು ಚಕ್ಕುಲಿ ಮೇಲೆ ನಿರ್ದಯತೆಯಿಂದ ಜಜ್ಜಿ ಜಜ್ಜಿ ಅದರ ಪುಡಿ ತಿಂದು ಆಸ್ವಾಧಿಸುತ್ತಾಳೆ,ಮತ್ತೆ ಆ ಚಕ್ಕುಲಿಯ ಬಗ್ಗೆ ಧೀರ್ಘವಾದ ಅನಿಸಿಕೆ ವ್ಯಕ್ತಪಡಿಸಿ ಇನ್ನೆರಡು ಚಕ್ಕುಲಿ ಜಜ್ಜಿ ಸಮಾರೋಪ ಸಮಾರಂಭವನೂ ನಡೆಸಿ ಬಿಡ್ತಾಳೆ. 
 .
ಇನ್ನು ನಾನು ಮೊದಲ ಬಾರಿ ಚಕ್ಕುಲಿ ಮಾಡಿದ ಕಥೆ ಇಂತಿದೆ. ೨೦೧೧ ರಲ್ಲಿ ನಾವು ನ್ಯೂರಿ ಎಂಬ ಊರಿನಲ್ಲಿ ಇದ್ದೆವು. ಚವತಿಗೆ ಒಂದಷ್ಟು ಸ್ನೇಹಿತರನ್ನು ನಮ್ಮ ಮನೆಗೆ ಊಟಕ್ಕೆ ಕರೆದಿದ್ದೆವು. ಚವತಿ ಅಂದ ಮೇಲೆ ಚಕ್ಕುಲಿ ಇಲ್ಲದಿದ್ದರೆ? ಇಲ್ಲಿ ಗಿರಣಿಯು ಇಲ್ಲ ಮಿಕ್ಸಿಯೂ ಇಲ್ಲ ಎರಡರ ಅಗತ್ಯ ಇರದೇ ಆಗುವಂಥ ರೆಸಿಪಿಯನ್ನು youtube ಅಲ್ಲಿ ಹುಡುಕಿ, ಒಟ್ಟಿನಲ್ಲಿ ಚಕ್ಕುಲಿ ಹಿಟ್ಟು ರೆಡಿ ಮಾಡಿದೆ, ಚಕ್ಕುಲಿ ಅಚ್ಚು ,ಒತ್ತು ಎರಡು ಇರಲಿಲ್ಲ ಅದಕ್ಕೇನಂತೆ ಅನ್ನೋ ಉಡಾಫೆಯಲ್ಲಿ ಕೇಕ್ ಡೆಕೋರೇಟ್ ಮಾಡುವ ಪೈಪಿಂಗ್ ಬ್ಯಾಗ್ ನಲ್ಲಿ ಚಕ್ಕುಲಿ ಹಿಟ್ಟು ಹಾಕಿ ಕೊನೆಪಕ್ಷ ಚಕ್ಕುಲಿಯಂತೆ ಕಾಣುವಂಥದ್ದು ಏನಾದರೊಂದು ಮಾಡೋಣ ಅಂತ ಪ್ರಯತ್ನಿಸಿದೆ , ಆದರೆ ಅದು ಜಲೆಬಿಯಂತೆ ಕಾಣುತಿತ್ತು, ಸಿಹಿಯಲ್ಲದ ಜಲೇಬಿ! ಚಕ್ಕುಲಿ ಪ್ರಯೋಗ ವಿಫಲವಾಗಿದ್ದಕ್ಕೆ ಖೇದವಾಗಿತ್ತು. 

ಆ ನಂತರದ ವರುಷ ಭಾರತಕ್ಕೆ ಹೋದಾಗ ತಂದ ಚಕ್ಕುಲಿ ಅಚ್ಚಿನಲ್ಲಿ ಚಕ್ಕುಲಿ ತಯಾರಿಗೆ ಬೋಣಿ ಮಾಡಿ ಬಿಡೋಣ ಅನ್ನಿಸಿತು ,ಆಗ ಮಾತ್ರ ಚಕ್ಕುಲಿ ಚಕ್ಕುಲಿಯಂತೆಯೇ ಕಂಡು ರುಚಿಯು ಅದರಂತೆಯೇ ಇತ್ತು. 

 ಆ ದಿನ ಚಕ್ಕುಲಿ ತುಂಬಿದ ಡಬ್ಬಿಯನ್ನ ಪಕ್ಕದಲ್ಲಿ ಇಟ್ಟುಕೊಂಡು ನನ್ನ ಕಾರ್ಯಕ್ರಮದ ರಿಹರ್ಸಲಗೆಂದು ನಾನು, ಪತಿದೇವ, ಮತ್ತು ಮಗ ಬೆಲ್ಫಾಸ್ಟ್ ಗೆ ಹೊರಟೆವು, ಆ ದಿನ ಆ ಚಕ್ಕುಲಿ ಡಬ್ಬಿಯಲ್ಲಿ ಕೈಯ್ಯಾಡಿಸಿದಷ್ಟು ಮದುವೆ ದಿನ ಓಕುಳಿ ನೀರಿನಲ್ಲಿ ಚಿನ್ನದುಂಗುರಕ್ಕೂ ನಾವಿಬ್ಬರು ತಡಕಾಡಿರಲಿಲ್ಲ, ಶತಶತಮಾನಗಳಿಂದ ಹಸಿದಿರುವವರಂತೆ ವರ್ತಿಸುವ ನಮ್ಮಿಬ್ಬರ ಮುಖ ನೋಡುತ್ತಿದ್ದ ನನ್ನ ಮಗ, 'ಅಷ್ಟು ಹಸಿವೆ ಆಗಿದ್ರೆ ಹೋಟೆಲ್ ಗೆ ಹೋಗೋಣ್ವ?' ಅನ್ನೋ ಪ್ರಸ್ತಾಪ ಮುಂದಿಟ್ಟಿದ್ದ .

ಉಪಸಂಹಾರ 
ಚಕ್ಕುಲಿ ಅನ್ನೋದು ಸೊಕ್ಕು ಮುರಿಯೋ ಖಾದ್ಯ, ಎಷ್ಟು ಅನುಭವವಿದ್ದರೂ ಒಮ್ಮೊಮ್ಮೆ ಕೈಕೊಡುವುದುಂಟು. ಒಮ್ಮೆ ಕಲ್ಲುಗುಂಡು , ಮತ್ತೊಮ್ಮೆ ಹೂವಿನಂತೆ ಹಗುರ , ಕೆಲವೊಮ್ಮೆ ಎಣ್ಣೆಯಲ್ಲಿ ಹಾಕಿದ ಚಕ್ಕುಲಿ ಅಲ್ಲೇ ಮಾಯ, ಮಗದೊಮ್ಮೆ ಎಣ್ಣೆ ಕುಡಿದು ಫುಲ್ ಟೈಟ್ ಆದ ಚಕ್ಕುಲಿಗಳು, ಈ ಚಕ್ಕುಲಿ ನಮ್ಮ ಮನಸ್ಥಿತಿಯನ್ನು ಸೂಚಿಸುತ್ತವಾ? ಮಹತ್ತರ ಜೀವನ ಪಾಠ ಕಲಿಸುತ್ತವಾ? ಅನ್ನೋ ಉಚ್ಛ ಆಲೋಚನೆ ತಲೆಯಲ್ಲಿ ಬಂದಾಗ ನಾನು ನನ್ನನು ತತ್ವ ಬಾರದ ಜ್ಞಾನಿ ಆದೇನೇನೋ ಅನ್ನುವ ಭಯವು ಕಾಡುವುದುಂಟು. 

ಮೊದಲ ಚಕ್ಕುಲಿ ರೆಸಿಪಿ ನಂತರ ನಾನು ಏನೇನೋ ಪ್ರಯೋಗ ಮಾಡಿ ಬಹುಮಟ್ಟಿಗೆ ಅದನ್ನ ಒಲಿಸಿಕೊಂಡಿದ್ದೇನೆ. ರೆಸಿಪಿ ಇಲ್ಲಿದೆ.ಹಬ್ಬಕ್ಕೆ ಕಾಯಬೇಕಂತ ಇಲ್ಲ ಮನಸು ಬಂದಾಗ ಮಾಡಿ ಸವಿಯಿರಿ. ಚನ್ನಾಗಿ ಬಂದರೆ ನನ್ನ ನೆನೆಸಿಕೊಳ್ಳಿ, ಹಿಟ್ಟಿನ ಹದ ತಪ್ಪಿ ಚಕ್ಕುಲಿ ಸರಿ ಬರಲಿಲ್ಲ ಅಂತಾದರೆ ಈ ರೆಸಿಪಿಗೂ ನನಗೂ ಸಂಬಂಧ ಇಲ್ಲ ಅಂತ ಮೊದ್ಲೇ ಹೇಳಿಬಿಡ್ತೀನಿ!

೩ಕಪ್ ಅಕ್ಕಿ ಹಿಟ್ಟು 
೧ ಕಪ್ ಉದ್ದಿನಬೇಳೆ ಹುರಿದು ಮಾಡಿದ ಪುಡಿ.
ಬಿಳಿ ಎಳ್ಳು, ಜೀರಿಗೆ ,ಒಂದೊಂದು ಚಮಚ , ಚಿಟಿಕೆ ಇಂಗು
ಸ್ವಲ್ಪ ಬೆಣ್ಣೆ 
ಉಪ್ಪು ರುಚಿಗೆ ,
(optional - ಶುಂಟಿ ಬೆಳ್ಳುಳ್ಳಿ ಕರಿಬೇವು ಹಸಿಮೆಣಸು ಜೀರಿಗೆ ಕೊತ್ತಂಬರಿ ಸೊಪ್ಪು ಹಾಕಿ ನುಣ್ಣಗೆ ರುಬ್ಬಿಕೊಂಡ್ ಮಸಾಲೆ ಸೇರಿಸಬಹುದು.)

 ೧, ಅಕ್ಕಿ ಹಿಟ್ಟು +ಉದ್ದಿನ ಹಿಟ್ಟು+ಬೆಣ್ಣೆ +ಜೀರಿಗೆ+ಬಿಳಿ ಎಳ್ಳು +ಉಪ್ಪು=ಎಲ್ಲ ಸೇರಿಸಿ 
 ಚನ್ನಾಗಿ ಕಲಿಸಿಕೊಳ್ಳಿ ,ಈಗ ಮಿದುವಾದ ಹಿಟ್ಟು ಸಿದ್ಹವಾಗುತ್ತದೆ,
ಚಕ್ಕುಲಿ ಒತ್ತಲ್ಲಿ ಹಾಕಿ ಚಕ್ಕುಲಿ ಮಾಡಿ ಗರಿ ಗರಿಯಾಗಿ ಕರಿದು ಸವಿಯಿರಿ. 

 ಈ ಬರಹ ಓದಿದ ಮೇಲೆ ನಾನು ಅದೆಷ್ಟು ಭೂಕಿ ಪ್ಯಾಸಿ ,ಅನ್ನೋದು ನಿಮಗೇ ಗೊತ್ತಾಗಿರುತ್ತದೆ ಇನ್ನುಮೇಲೆ ಯಾರಾದರು ತಮ್ಮ ಮನೆಗೆ ನನ್ನ ಕರೆಯುವ ಮುನ್ನ ನೂರು ಬಾರಿ ಯೋಚಿಸೋದಂತು ಖಂಡಿತ. ಆದರೂ ನನ್ನಂಥ ಮನಸವರು ಬಹಳಷ್ಟು ಜನ ಇರ್ತಾರೆ ಅನ್ನೋ ಭರವಸೆ ಮೇಲೆ ಇದನ್ನು ಬರೆಯುವ ಧೈರ್ಯ ಮಾಡಿದೆ. 
ಅನಿವಾಸಿ ಬಳಗದ ಸರ್ವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. 
*****
ಶ್ರೀರಂಜನಿ ಅವರ ಗೀತ ನಮನ