ವರಮನೋಹರೆ ಕೇಳು ಪಾರಿಜಾತವಿದು – ಯೋಗೀಂದ್ರ ಮರವಂತೆ

ಆಶ್ವೀಜ ಮಾಸದ ಸಂಜೆಯ ಹೊತ್ತಿಗೆ ಮರವಂತೆ ಮನೆಯ ಹೊರಗೆ ಯಾರದೋ  ಕಾಲ ಸದ್ದು ಕೇಳಿದರೂ ಇವರೇ ಬಂದರೇನೋ ಎಂದು ರೋಮಾಂಚನಗೊಳ್ಳುವುದು; ಬಗಲಿಗೆ ಮದ್ದಳೆ, ಹಾರ್ಮೋನಿಯಂ ಧರಿಸಿದ ಗುಂಪು , ಕೈಯಲ್ಲಿ ಅಲಂಕಾರಗೊಂಡ ಪುಟ್ಟ ಕೋಲನ್ನು ಹಿಡಿದ ಇಬ್ಬರು ಮಕ್ಕಳನ್ನು ಕೂಡಿಕೊಂಡು  ಮನೆಯ ಗೇಟು ದೂಡಿಕೊಂಡು ಯಾವಾಗ ಒಳಬರುತ್ತಾರೆ ಎಂದು ಕಾಯುವುದು. ನಮ್ಮಮನೆಗೆ ಬರುವ ಮೊದಲು ಮದ್ದಳೆಯ ‘ತೋಂ ತೋಂ’ ನೆರೆಮನೆಯಲ್ಲಿ ಕೇಳುವಾಗ, ಇನ್ನೊಂದು ಅರ್ಧ ಘಂಟೆಯಲ್ಲಿ ಇವರು ನಮ್ಮ ಮನೆಗೂ ಬರುತ್ತಾರಲ್ಲ ಎಂಬ ಖುಷಿಯಲ್ಲಿ ನಿಂತಲ್ಲಿ ನಿಲ್ಲಲಾಗದೆ , ಬಾಗಿಲ ಅಡ್ಡ ನಿಂತು ಎರಡು ತೈ ತೈ ಹೆಜ್ಜೆ ಹಾಕುವುದು.  ಕೇರಿಯ ಮಕ್ಕಳಿಗೆ ನವರಾತ್ರಿ ಎಂದರೆ  ಪ್ರತೀಕ್ಷೆಯಾದ ನನ್ನ ಬಾಲ್ಯ ಕಾಲದ  ನೆನಪುಗಳಿವು. ನರಸಿಂಹದಾಸರ ತಂಡದ ಹರಿದ ಚಪ್ಪಲಿಗಳ ಚರಪರ ಸದ್ದು, ಇನ್ನೊಂದು ಮನೆಯಲ್ಲಿ ಹಾಡಲು ಸಿದ್ಧ ಆಗುತ್ತಿರುವಾಗ ಅವರ ಹೊಟ್ಟೆಯಿಂದ ಗಂಟಲವರೆಗೆ ತುಂಬಿಕೊಂಡು ಹೊರಬರುವ ಕೆಮ್ಮು , ನಮ್ಮ ಮನೆಯ ಆವರಣದ  ಒಳಗೆ ಕೇಳಿಸಿತೆಂದರೆ ಮೈಯೆಲ್ಲಾ ಕಿವಿಯಾಗಿ , ಮನಸೆಲ್ಲ ಖಾಲಿಯಾಗಿ ನಾವು ತಯಾರು.

“ಗುರುದೈವ ಗಣಪತಿಗೆ ಶರಣು ಶರಣೆಂದು ” ಎನ್ನುತ್ತಾನೆ ಕುಳಿತ ಒಬ್ಬ ಹುಡುಗ
“ಲೇಸಾಗಿ ಹರಸಿದರು ಬಾಲಕರು ಬಂದು …” ಎಂದು ಮೊದಲಿನವನ ಎದುರು ಕುಳಿತ ಇನ್ನೊಬ್ಬ ಹುಡುಗ .

ಬಿಳಿ ಟೊಪ್ಪಿ, ಬಿಳಿ ವಸ್ತ್ರ  ಧರಿಸಿ, ಬೆಂಡು ಬಣ್ಣದ ಕಾಗದಗಳಿಂದ ಅಲಂಕಾರಗೊಂಡ ಹೂವಿನ ಕೋಲನ್ನು ಹಿಡಿದು ಎದುರು ಬದುರು ಕುಳಿತ ಮಕ್ಕಳಿಬ್ಬರು ಸವಾಲು ಜವಾಬುಗಳ ಧಾಟಿಯಲ್ಲಿ ಹೇಳುವ ಚೌಪದಿಯ  ಸಾಲುಗಳವು. ಅದು ಮುಗಿಯುವ ಹೊತ್ತಿಗೆ, ಮಕ್ಕಳ ಹತ್ತಿರದಲ್ಲಿ ಕುಳಿತ ನರಸಿಂಹದಾಸರು ಶ್ರುತಿ ಮೀಟುವವನ ಕಡೆಗೊಮ್ಮೆ , ಮದ್ದಲೆಗಾರನ ಕಡೆಗೊಮ್ಮೆ ಓರೆ ನೋಟ ಬೀರಿ , ಗತ್ತಿನಲ್ಲಿ ಹಾಡು ಆರಂಭಿಸುತ್ತಾರೆ ….

” ವಹ್ಹವ್ವಾರೆ ನೋಡಿರೋ ಈ ಕಡೆಯ
ಬಹ ನಾರಿ ಯಾರ್ ಇವಳು ನೀವ್ ಪೇಳಿರಯ್ಯ ,
ಉಡುಗಳ ಮಧ್ಯದಿ ಶಶಿಯಂತೆ
ಸ್ತ್ರೀಯರ ನಡುವೆ ದಂಡಿಗೆ ಏರಿ ಮಿಂಚಿನಂತೆ “

ಉದ್ಯಾನವದಲ್ಲಿ ಸಖಿಯರೊಂದಿಗೆ ತಿರುಗುತ್ತಿರುವ ಚಂದ್ರಾವಳಿಯನ್ನು ಮರೆಯಲ್ಲಿ ನಿಂತು ನೋಡಿದ ಕೃಷ್ಣ ,ಗೆಳೆಯರೊಂದಿಗೆ ಆಡುವ ಮಾತುಗಳಿವು. ಅವಳ ಸೌಂದರ್ಯಕ್ಕೆ ಸೋತವನು, ನಂತರ ಧೈರ್ಯ ಮಾಡಿ ಚಂದ್ರಾವಳಿಯ ಎದುರಿಗೇ ಬಂದು ನಿಂತು, ಅಳುಕು, ಭಂಡತನ, ಪ್ರೀತಿ, ಸೇರಿದ ಭಾವದಲ್ಲಿ ತನಗುಂಟಾಗಿರುವ ಪ್ರೇಮವನ್ನು ತಿಳಿಸುತ್ತಾನೆ. “ಭಳಿರೆ ಚಂದ್ರಾವಳಿ ನಿನ್ನನು ಕಾಣದೆ ಕಳವಳಿಸಿದೆ ಮನವು ….” ಎಂದು ಆ ಸಂದರ್ಭಕ್ಕೆ ಭಾಗವತರು ಹಾಡುತ್ತಾರೆ. ಕೃಷ್ಣ ಮತ್ತು ಚಂದ್ರಾವಳಿಯರ ಪಾತ್ರವಾಗಿರುವ ಮಕ್ಕಳು ಹಾಡುಗಳಿಗೆ ಅನುಗುಣವಾಗಿ  ಸಂಭಾಷಿಸುತ್ತಾರೆ.  ರಾಧೆಯ ತಂಗಿ ಚಂದ್ರಾವಳಿಯನ್ನು, ಕೃಷ್ಣನು ಕಾಡುವ ಶೃಂಗಾರಭರಿತ ಸನ್ನಿವೇಶ ಇರುವ  “ಚಂದ್ರಾವಳಿ ವಿಲಾಸ”  ಪ್ರಸಂಗದ ಕಥೆ ಹೀಗೆ “ಹೂವಿನ ಕೋಲು” ಎಂದು ಕರೆಯಲ್ಪಡುವ ಯಕ್ಷಗಾನದೊಳಗಿನ ಸಣ್ಣ ಪ್ರಕಾರದ ಮೂಲಕ ಮುಂದುವರಿಯುತ್ತದೆ. ಯಕ್ಷಗಾನ ತಾಳಮದ್ದಳೆಯಲ್ಲಿ ಕಾಣುವಂತಹ  ಕಥಾ ವಿಸ್ತಾರ, ಪಾತ್ರ ಚಿತ್ರಣ, ಪಾಂಡಿತ್ಯ, ಜಿಜ್ಞಾಸೆ, ವಿಮರ್ಶೆಗಳಿಗೆ  “ಹೂವಿನ ಕೋಲು” ಹೋಲಿಕೆ ಅಲ್ಲದಿದ್ದರೂ ವೇಷವನ್ನು ಧರಿಸದೇ ಎದುರು ಬದುರು ಕುಳಿತು, ಭಾಗವತರ ಹಾಡನ್ನು ಹೊಂದಿಕೊಂಡು ಪಾತ್ರಗಳಾಗಿ ಮಾತನಾಡುವ ಕಾರಣಕ್ಕೆ ತಾಳಮದ್ದಲೆಯನ್ನು ಈ ಪ್ರಕಾರ ನೆನಪಿಸುತ್ತದೆ.  “ಹೂವಿನ ಕೋಲು” ಸಂಪ್ರದಾಯದಲ್ಲಿ, ಯಕ್ಷಗಾನ ಪ್ರಸಂಗಗಳ ಸಣ್ಣ
ತುಣುಕುಗಳನ್ನು ಆಯ್ದು, ಚಿಕ್ಕ ಮಕ್ಕಳನ್ನು ತರಬೇತುಗೊಳಿಸುತ್ತಾರೆ. ಅವರನ್ನು ಕರೆದುಕೊಂಡು ನವರಾತ್ರಿಯ ಸಮಯದಲ್ಲಿ ಊರೆಲ್ಲ ತಿರುಗುತ್ತಾರೆ. ಪಾರಿತೋಷಕವಾಗಿ ಹಣ ತೆಂಗಿನಕಾಯಿ ಅಕ್ಕಿಯನ್ನು  ಪಡೆಯುತ್ತಾರೆ.

ನರಸಿಂಹದಾಸರು ಯಕ್ಷಗಾನ ಮೇಳಗಳಲ್ಲಿ ಹಾಡುವುದು ದುರಾದೃಷ್ಟವಶಾತ್ ನಿಲ್ಲಿಸಿದ ಮೇಲೆ, ನವರಾತ್ರಿಗೆ ಹೂವಿನಕೊಲಿನ ತಂಡ ಕಟ್ಟಿಕೊಂಡು ತಿರುಗುತ್ತಿದ್ದರು. ಹಾಗಾಗಿಯೇ ನರಸಿಂಹ ದಾಸರ ನೆನಪಾದಾಗಲೆಲ್ಲ ನವರಾತ್ರಿಯಲ್ಲಿ ಅವರು ಮನೆಗೆ ಬರುತ್ತಿದ್ದ ದಿನಗಳ
ನೆನಪಾಗುತ್ತದೆ.  ಒಂದು ಕಾಲಕ್ಕೆ ಯಕ್ಷಗಾನದ ತೆಂಕು ಬಡಗು ತಿಟ್ಟುಗಳ ಅಪೂರ್ವಸಿದ್ಧಿಯೊಂದಿಗೆ ಅಪ್ರತಿಮ ಭಾಗವತರೆನಿಸಿಕೊಂಡಿದ್ದ (ಯಕ್ಷಗಾನ ಹಾಡುಗಾರ ಮತ್ತು ಸೂತ್ರಧಾರ)  ನರಸಿಂಹದಾಸರು ಬದುಕಿನ ಕೊನೆಯ ಮೂವತ್ತು ವರ್ಷಗಳಲ್ಲಿ ಯಕ್ಷಗಾನದೊಟ್ಟಿಗೆ
ನಿರಂತರ ಸಂಬಂಧ ಇಟ್ಟುಕೊಂಡದ್ದು ನವರಾತ್ರಿಯ ಹೂವಿನಕೋಲಿನ ಮೂಲಕ ಮಾತ್ರ. ನರಸಿಂಹದಾಸರು ಕಲಾಸಂಪನ್ನತೆಯ  ಉತ್ತುಂಗದ ದಿನಗಳಲ್ಲಿ ಇರುವಾಗಲೇ ತಮ್ಮ ಅತ್ಯಮೂಲ್ಯವಾದ ಧ್ವನಿಯನ್ನು ಕಳೆದು ಕೊಂಡವರು. ಇಂದಿಗೆ ಸುಮಾರು 70 ವರ್ಷಗಳ ಹಿಂದೆ,
ಧ್ವನಿವರ್ಧಕಗಳು ಇಲ್ಲದ ಕಾಲದ ರಾತ್ರಿ ಬೆಳಗಿನವರೆಗೆ ಯಕ್ಷಗಾನ. ಇನ್ನು ಎರಡು ಮೇಳಗಳು ಜಿದ್ದಿನಲ್ಲಿ ಪ್ರದರ್ಶಿಸುವ ಜೋಡಾಟಗಳಲ್ಲಂತೂ ಎದುರಿನ ಮೇಳದ ಸದ್ದನ್ನು ಅಡಗಿಸಿ ದೂರದೂರದವರೆಗೆ ತನ್ನ ಕಂಠವನ್ನು ಮುಟ್ಟಿಸ ಬೇಕಾದ ಅನಿವಾರ್ಯತೆ, ಅವರ ಅತ್ಯಂತ ಬೇಡಿಕೆಯ ದಿನಗಳಾದ್ದರಿಂದ ಅವಿರತ ತಿರುಗಾಟ. ಮತ್ತೆ ಆಟ ಮುಗಿದ ಮೇಲೆ ಬೆಳಿಗ್ಗೆ ನಿದ್ರೆ ಮಾಡುವ ಗೋಜಿಗೆ ಹೋಗದೆ ಅನಾರೋಗ್ಯದ ದಿನಗಳನ್ನು ಹತ್ತಿರ ತರುವಂತಹ ಕಾಲಹರಣದ ಮಾಧ್ಯಮಗಳ ಸಹವಾಸ, ತನ್ನ ಪ್ರತಿಭೆಯ ಬಗ್ಗೆ ಅವರಿಗೇ  ಇದ್ದ ನಿರ್ಲಕ್ಷ್ಯ ಅಸಡ್ಡೆ … ಇಂತಹ ದಿನಚರಿ-ದುಡಿತದಲ್ಲಿ ನರಸಿಂಹದಾಸರ ಸುಸ್ವರ ಅನಿರೀಕ್ಷಿತವಾಗಿ ಬಿದ್ದುಹೋಯಿತು. ಮಾತನಾಡಿದರೂ ಕ್ಷೀಣವಾಗಿ ಕೇಳಿಸುವಂತಹ ಭಗ್ನ ಸ್ವರೂಪಕ್ಕೆ
ಮಾರ್ಪಾಟಾಯಿತು. ಇಂತಹ  ಆಕಸ್ಮಿಕ ಸನ್ನಿವೇಶದಲ್ಲಿ ಮೇಳಗಳ ತಿರುಗಾಟದಿಂದ ಅವರು ಹೊರಬರಬೇಕಾಯಿತು .

ಮರವಂತೆ ನರಸಿಂಹದಾಸರು, ಯಕ್ಷಗಾನ ವಲಯದಲ್ಲಿ ಕರೆಯಲ್ಪಡುತ್ತಿದ್ದುದು ದಾಸ ಭಾಗವತರೆಂದು. 1955-70 ರ ನಡುವೆ ದಾಸಭಾಗವತರು ಉತ್ತರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಪ್ರಮುಖ ಯಕ್ಷಗಾನ ಮೇಳಗಳಲ್ಲಿ ಮುಖ್ಯ ಭಾಗವತರಾಗಿ
ಅಲ್ಲದಿದ್ದರೆ ಅತಿಥಿ ಕಲಾವಿದರಾಗಿ ಭಾಗವಹಿಸುತ್ತಿದ್ದರು. ಆಗ ದಾಸಭಾಗವತರ ಆಟ ಎಂದರೆ ಜನರು ದುಂಬಾಲು ಬೀಳುತ್ತಿದ್ದರಂತೆ. ಸಾರಿಗೆ ಸಂಪರ್ಕ ಸುಸೂತ್ರ ಇಲ್ಲದ ಕಾಲದಲ್ಲಿ, ಕಾರು ಮಾಡಿಕೊಂಡಾದರೂ ಅವರ ಆಟ ನೋಡಿ ಬರುತ್ತಿದ್ದವರ ದೊಡ್ಡ ಸಂಖ್ಯೆ ಇತ್ತಂತೆ. ತೆಂಕು ಮತ್ತು ಬಡಗು ತಿಟ್ಟುಗಳಲ್ಲಿ ಅದ್ಭುತವಾಗಿ ಹಾಡಬಲ್ಲವರಾಗಿದ್ದ ದಾಸಭಾಗವತರು, ಬಡಗು ತಿಟ್ಟಿನೊಳಗಿನ ವಿಶಿಷ್ಟ ಪ್ರಬೇಧಗಳಾದ ಬಡಾಬಡಗು  ಮತ್ತು ಕುಂದಾಪುರ ಮಟ್ಟು ಎರಡನ್ನೂ ಸಮವಾಗಿ ನಿರ್ವಹಿಸಬಲ್ಲವರಾಗಿದ್ದರು. ಮೂವತ್ತಕ್ಕಿಂತ ಹೆಚ್ಚು ಪ್ರಸಂಗಗಳ ಕಂಠಪಾಠ, ತಾವೇ ಬೆಳೆಸಿಕೊಂಡ ಯಕ್ಷಗಾನಕ್ಕೊಪ್ಪುವ ಆಕರ್ಷಕ ಹಾಡಿನ ಶೈಲಿ, ಸಮುದ್ರದ ಭೋರ್ಗರೆತಕ್ಕೆ ಹೋಲಿಸಲ್ಪಡುತ್ತಿದ್ದ ತುಂಬು ಸ್ವರ, ಅಪ್ರತಿಮ ಲಯ ಸಿದ್ಧಿ ಮತ್ತು
ರಂಗಸ್ಥಳದ ಮೇಲಿನ ಬಿಗಿ ಹಿಡಿತಗಳಿಂದ ಅಪಾರ ಯಕ್ಷಗಾನ ಪ್ರೇಮಿಗಳ ಮಾತ್ರವಲ್ಲದೇ ಯಕ್ಷಗಾನದ ಇತಿಹಾಸದಲ್ಲಿ ಅತ್ಯಂತ ಹೆಸರು ಗೌರವ ಪಡೆದ ಕಲಾವಿದರ ಮೆಚ್ಚಿನ ಭಾಗವತರು ಕೂಡ ಆಗಿದ್ದರು. ಆ ಸಮಯದಲ್ಲಿ ಮೋಡಿಯ ಕುಣಿತ, ಭಾವಪೂರ್ಣ ಅಭಿನಯಗಳಿಂದ ಪ್ರೇಕ್ಷಕರಿಗೆ ವಿದ್ಯುತ್ ಸಂಚಾರ ಮಾಡಿಸುತ್ತಿದ್ದ ಕೆರೆಮನೆ ಶಿವರಾಮ ಹೆಗಡೆ (ಬಡಾಬಡಗು ಶೈಲಿ ) ಮತ್ತು ಅದ್ಭುತ ಚಲನೆಯ ವಿಶಿಷ್ಟ ಕುಣಿತದ ಕಲಾವಿದ ಎನ್ನುವ ಕೀರ್ತಿ ಇದ್ದ ವೀರಭಧ್ರನಾಯ್ಕರನ್ನು (ಕುಂದಾಪುರದ ಮಟಪಾಡಿ ಮಟ್ಟು ) ದಾಸ ಭಾಗವತರು ಕುಣಿಸಿದವರು. ನರಸಿಂಹದಾಸರ ಭಾಗವತಿಕೆಗೆ ತಿಮ್ಮಪ್ಪ ನಾಯ್ಕರ ಮದ್ದಳೆ, ಯಕ್ಷಗಾನ ಹಿಮ್ಮೇಳದಲ್ಲಿ ಜನರು ಬಯಸುವ ಚಿರಂತನ ಜೋಡಿಯಾಗಿತ್ತು. ದಾಸಭಾಗವತರ ಕಲಾ ಜೀವನದ ಉಚ್ಚ್ರಾಯದ ಕಥೆಗಳನ್ನು ನಮ್ಮ ಹಿಂದಿನ ತಲೆಮಾರಿನ ಪ್ರೇಕ್ಷಕರಿಂದ, ಹಿರಿಯ ಕಲಾವಿದರಿಂದಲೇ ಕೇಳಬೇಕು. ನನ್ನ ಪೀಳಿಗೆಯವರಿಗೆ ದಾಸ ಭಾಗವತರ ಹಾಡುಗಾರಿಕೆ ಕೇಳಲು ಸಿಕ್ಕಿರುವ ಸಾಧ್ಯತೆಗಳು ಬಹಳ ಕಡಿಮೆ. 1992ರಲ್ಲಿ  ಮಂಗಳೂರಿನಲ್ಲಿ ನಡೆದ
“ಯಕ್ಷಧ್ವನಿ” ಎನ್ನುವ  ಶ್ರುತಿ ರಾಗ ಲಯ ತಾಳಗಳ ವಿಶಿಷ್ಟ ಕಾರ್ಯಕ್ರಮದಲ್ಲಿ ಇವರು ಹಾಡಿದ “ಶ್ರೀಕೃಷ್ಣ  ಪಾರಿಜಾತ” ಪ್ರಸಂಗದ ಹಾಡುಗಳ ವಿಡಿಯೋಗಳು ಈಗಲೂ ವಾಟ್ಸಾಪ್ ಮುಖಾಂತರ ಸುತ್ತು ಹೊಡೆಯುತ್ತವೆ.  ಕೃಷ್ಣ ಸತ್ಯಭಾಮೆಯರು  ಸುರಲೋಕಕ್ಕೆ ಹೋದಾಗ ಅಲ್ಲೆಲ್ಲ  ತುಂಬಿರುವ ಪರಿಮಳದ ಬಗ್ಗೆ ಸತ್ಯಭಾಮೆಗೆ ಮೂಡುವ ಕುತೂಹಲ, ಕೃಷ್ಣನು ಉತ್ತರಿಸುವ ಸಂದರ್ಭದ ಹಾಡುಗಳು ಅವು.  ದಾಸ ಭಾಗವತರ ಸ್ವರ ಮಾಧುರ್ಯ ಶಿಥಿಲಗೊಂಡಿದ್ದರೂ  ಅಂದಿನ  ಕಾರ್ಯಕ್ರಮದಲ್ಲಿ  ಹಾಡಿದ ಎಲ್ಲ ಹಾಡುಗಳೂ ಅವರ ಕಲಾ ಔನ್ನತ್ಯದ ಕಾಲವನ್ನು  ನೆನಪಿಸಿತ್ತು. “ವರಮನೋಹರೆ ಕೇಳು ಪಾರಿಜಾತವಿದು” ಎನ್ನುವ ಪದ್ಯ ಹಾಡುವಾಗ ಪುರಾಣ ಪ್ರಪಂಚಕ್ಕೆ ಎಳೆದೊಯ್ದು  ಶರಧಿ ಮಥನದಲ್ಲಿ
ಹುಟ್ಟಿದ ಅತ್ಯಂತ ಅಪೂರ್ವವಾದ  ಪಾರಿಜಾತ ವೃಕ್ಪದೆದುರು ನಮ್ಮನ್ನೂ ನಿಲ್ಲಿಸುವ ಪ್ರಯತ್ನ ನಡೆಯುತ್ತದೆ. ತೆಂಕು ಬಡಗು ತಿಟ್ಟುಗಳ ಹಿರಿಯ ಕಿರಿಯ ಭಾಗವತರ ಹಾಡುಗಾರಿಕೆಯ ಸಮ್ಮಿಲನದ ಆ ಕಾರ್ಯಕ್ರಮ ಯಕ್ಷಗಾನ ಲೋಕದಲ್ಲಿ ಲಭ್ಯ ಇರುವ ಒಂದು ಅಮೂಲ್ಯ ಅಪೂರ್ವ ದಾಖಲೀಕರಣವೂ ಹೌದದು. ಅಂದಿನ ಕಾರ್ಯಕ್ರಮದಲ್ಲಿ ನರಸಿಂಹ ದಾಸರನ್ನು ಪರಿಚಯಿಸುವಾಗ  ಹಿರಿಯ ಅರ್ಥಧಾರಿಗಳೂ ವಿದ್ವಾಂಸರೂ ಆದ ಪ್ರಭಾಕರ ಜೋಶಿಯವರು, ಅವರನ್ನು ಯಕ್ಷಗಾನ ಕಂಡ “ಸರ್ವಶ್ರೇಷ್ಠ ಭಾಗವತರು ಎಂದು ತರ್ಕಿಸಬಹುದು” ಎಂದಿದ್ದರು
(arguably the greatest ). ದಾಸ ಭಾಗವತರು ರಂಗಸ್ಥಳದಲ್ಲಿ ಸಾಮ್ರಾಟರಾಗಿ ಮೆರೆಯುತ್ತಿದ್ದ ಕಾಲದಲ್ಲಿ ಅವರ ಭಾಗವತಿಕೆ ಕೇಳಲೆಂದೇ ಪಾರಿಜಾತ ಪ್ರಸಂಗವನ್ನು ಆಡಿಸುತ್ತಿದ್ದರು ಎಂದಿದ್ದರು. ಯಕ್ಷಗಾನದ ವಿಮರ್ಶಕರು ಪತ್ರಕರ್ತರು ಆದ ರಾಘವನ್ ನಂಬಿಯಾರ್ ಮತ್ತು ಹೆಸರಾಂತ ಹಿರಿಯ ಮದ್ದಲೆಗಾರ ಹಿರಿಯಡ್ಕ ಗೋಪಾಲರಾಯರು ಕೂಡ, ದಾಸಭಾಗವತರ ಲಯಗಾರಿಕೆಗೆ ಯಕ್ಷಗಾನ ಲೋಕದಲ್ಲಿ ಸಾಟಿಯೇ ಇರಲಿಲ್ಲ ಎಂದು ಬೇರೆ ಬೇರೆ ಸಂದರ್ಭಗಳಲ್ಲಿ ಹೇಳಿದ್ದಾರೆ ಬರೆದಿದ್ದಾರೆ .

ದಾಸ ಭಾಗವತರು ತಮ್ಮ ಭಗ್ನ  ಸ್ವರದಲ್ಲೂ ಅಂದಿನ ಕಾರ್ಯಕ್ರಮದಲ್ಲಿ ಹಾಡಿದ ಹಾಡುಗಳನ್ನು ನೇರವಾಗಿ ಕೇಳಿದ  ಪ್ರೇಕ್ಷಕರು ಈಗಲೂ ಆ ಕಾರ್ಯಕ್ರಮದ ರಸಘಳಿಗೆಗಳನ್ನು ಮೆಲುಕು ಹಾಕುತ್ತಾರೆ.  ಯೂಟ್ಯೂಬ್  ಮೂಲಕ ಮತ್ತೆ ಮತ್ತೆ ಅಂದಿನ ಕಾರ್ಯಕ್ರಮದ ಮರುವೀಕ್ಷಣೆ ಮಾಡುತ್ತಾರೆ. ಮಂಗಳೂರಿನಲ್ಲಿ “ಯಕ್ಷಧ್ವನಿ” ಕಾರ್ಯಕ್ರಮ ನಡೆದ ನಂತರ ಉಡುಪಿಯಲ್ಲಿ  ಹಳೆಯ ಹೊಸ ತಲೆಮಾರಿನ ಭಾಗವತರ ಕೂಟದಲ್ಲಿ ನಡೆದ ಗಾನ ವೈವಿಧ್ಯ ಕಾರ್ಯಕ್ರಮದಲ್ಲೂ ದಾಸಭಾಗವತರ   ಹಾಡುಗಾರಿಕೆ ಅತ್ಯಂತ ಪ್ರಶಂಸೆಯನ್ನು ಪಡೆದಿತ್ತು .
ಧ್ವನಿಮುದ್ರಣ ಕಂಡು ಅಂಗಡಿಯಲ್ಲಿ ಮಾರಾಟವಾದ ದಾಸ ಭಾಗವತರ ಏಕೈಕ ಅಥವಾ ಬೆರಳೆಣಿಕೆಯ ಆಡಿಯೋ ಕ್ಯಾಸೆಟ್ ಗಳಲ್ಲಿ  ಅದೂ ಒಂದು ಇರಬೇಕು. ಇನ್ನು ದಾಸ ಭಾಗವತರು ಆಕಾಶವಾಣಿಯಲ್ಲಿ ಅನೇಕ ಪ್ರಸಂಗಗಳನ್ನು ಹಾಡಿದ್ದರಾದರೂ  ಅವ್ಯಾವುವೂ  ಈ ಕಾಲದ
ಪ್ರೇಕ್ಷಕರನ್ನು ತಲುಪದಿದ್ದುದು ದಾಸಭಾಗವತರನ್ನು ಸುತ್ತುವರಿದಿದ್ದ ಹಲವು ದುರಂತಗಳಲ್ಲಿನ ಒಂದು ದುರಂತ ಮತ್ತೆ ಯಕ್ಷಗಾನ ಪ್ರೇಕ್ಷಕರ  ದೌರ್ಭಗ್ಯ.   ೯೦ರ ದಶಕದ ಆ ಎರಡು ದಾಖಲೀಕರಣಗಳ ಸಮಯದಲ್ಲಿ ತಮ್ಮ ಆಕರ್ಷಕವಾದ ಸ್ವರವನ್ನು ಕಳೆದುಕೊಂಡಿದ್ದರೂ, ದಾಸ ಭಾಗವತರ  ವರ್ಚಸ್ಸು ಲಯ ಹುಮ್ಮಸ್ಸು, ಸಿದ್ಧಿ, ಆತ್ಮ ವಿಶ್ವಾಸ  ಕುಂದಿರಲಿಲ್ಲ. ಅವರು  ಪ್ರತಿ ಹಾಡನ್ನು ನಿರ್ವಹಿಸಿದ ರೀತಿಯೂ ಯಕ್ಷಗಾನದ ಇತಿಹಾಸದಲ್ಲಿ ಎಲ್ಲೋ ಮರೆಯಾಗಿರುವ ಪುರಾತನ ಸುವರ್ಣ ಕಾಲವನ್ನು ನೆನಪಿಸುತ್ತಿತ್ತು.  ಹಾಡಿನ ನಡುವೆ, ಅತ್ಯಂತ ಸ್ಪಷ್ಟವಾಗಿ ಕೇಳಿಸುವ  ತಾಳದ ಪ್ರತಿ ಪೆಟ್ಟಿನ  ಸದ್ದು, ನಿಧಾನದಲ್ಲಿಯೂ ವೇಗದಲ್ಲಿಯೂ ನಿಖರವಾಗಿರುವ ತಾಳದ ಚಲನೆ, ಗತಿ ಅವರ ಲಯಗಾರಿಕೆಯ ಕಿರು ಝಲಕ್
ಒದಗಿಸುತ್ತಿದ್ದವು.  ಹಾಡುವಾಗ ಸುತ್ತಲಿನ ವಿದ್ಯಮಾನವನ್ನು ಕುತ್ತಿಗೆ ಕಣ್ಣುಗಳ ನಿಧಾನ  ಚಲನೆಯಲ್ಲಿ  ಗಮನಿಸುವ, ಯಾರಿಗೂ ಯಾವುದಕ್ಕೂ ಅಂಜದ ಅಳುಕದ ಆತ್ಮವಿಶ್ವಾಸ ಹೊತ್ತು  ಇಲ್ಲಿ ನಾನೇ  ಸೂತ್ರಧಾರ ಎನ್ನುವ ನಿಲುವಿನಲ್ಲಿ  ಅವರು ಭಾಗವತಿಕೆ ನಡೆಸುತ್ತಿದ್ದ ರೀತಿ  ಕಣ್ಣಿಗೆ ಕಟ್ಟುತ್ತಿತ್ತು. ಪದ್ಯ ಸಾಹಿತ್ಯದ ಸ್ಪಷ್ಟತೆಯ ಬಗ್ಗೆ ಶಬ್ದಗಳ ರೂಪದ ಕುರಿತು ಅವರಿಗಿದ್ದ ಎಚ್ಚರ ಕಾಳಜಿ ಆ ಪ್ರಸ್ತುತಿಗಳಲ್ಲೂ ಕಾಣಿಸುತ್ತಿತ್ತು.

 ಒಮ್ಮೆ ಮೇರು ಕಲಾವಿದ, ಕುಣಿತದ ಗುರು ವೀರಭಧ್ರನಾಯ್ಕರಿಗೂ ಅವರನ್ನು ಕುಣಿಸುವ ದಾಸಭಾಗವತರಿಗೂ ಸ್ಪರ್ಧೆ ಬಿದ್ದಿದ್ದಂತೆ. ಅಂದಿನ ಯಕ್ಷಗಾನದಲ್ಲಿ ದಾಸ ಭಾಗವತರು ಮತ್ತು ಮದ್ದಲೆಗಾರ ತಿಮ್ಮಪ್ಪ ನಾಯ್ಕರು ಸೇರಿ ವೀರಭಧ್ರನಾಯ್ಕರ ಕುಣಿತದ ತಾಳ
ತಪ್ಪಿಸುತ್ತೆವೆಂದು ಪಂಥ ಹಾಕಿಕೊಂಡಿದ್ದರಂತೆ. ಭಾಗವತ ಮತ್ತು ಮದ್ದಲೆಗಾರರ ಸಾಮರ್ಥ್ಯ ಮತ್ತು  ನಾಜೂಕಿನ ಹೊಂದಾಣಿಕೆಯಲ್ಲಿ ಅಂದು ವೀರಭಧ್ರನಾಯ್ಕರು ತಾಳ ತಪ್ಪಿದರಂತೆ. ಅನಿರೀಕ್ಷಿತ ಮುಖಭಂಗದಿಂದ ಬೇಸರಗೊಂಡ ವೀರಭಧ್ರ ನಾಯ್ಕರು ದಾಸಭಾಗವತರಲ್ಲಿ ಮಾತು ಬಿಟ್ಟರಂತೆ. ಕೆಲವು ಸಮಯದ ನಂತರ ಮಾರಣಕಟ್ಟೆ ದೇವಸ್ಥಾನದ ಮೊಕ್ತೇಸರರ ಸಮಕ್ಷಮದಲ್ಲಿ ಮೇರು ಕಲಾವಿದರ ನಡುವೆ ರಾಜಿ ಆಯಿತಂತೆ. ಇನ್ನು ನಮ್ಮ ಕಾಲದ ಶ್ರೇಷ್ಠ ಭಾಗವತರಲ್ಲೊಬ್ಬರಾಗಿದ್ದ ಕಡತೋಕ ಮಂಜುನಾಥ ಭಾಗವತರಿಗೆ ದಾಸಭಾಗವತರು
ಪ್ರೇರಣೆ ಆಗಿದ್ದವರು. ಇಡುಗುಂಜಿ ಮೇಳದಲ್ಲಿ ಕೆರೆಮನೆಯ ನಾಲ್ಕು ತಲೆಮಾರುಗಳನ್ನು ಕುಣಿಸಿದ, ಇನ್ನೋರ್ವ ಅತ್ಯುತ್ತಮ  ಭಾಗವತ  ನೆಬ್ಬೂರು ನಾರಾಯಣ ಭಾಗವತರನ್ನು ಸಂದಶನವೊಂದರಲ್ಲಿ ನಿಮ್ಮ ನೆಚ್ಚಿನ ಭಾಗವತರು ಯಾರು ಎಂದು ಕೇಳಿದಾಗ, ಅವರು ಮೊದಲು
ಹೇಳಿದ್ದ  ಹೆಸರು ದಾಸಭಾಗವತರದು .ದಾಸ ಭಾಗವತರ ಭಾಗವತಿಕೆಯ ತಾಳಮದ್ದಲೆಯೊಂದರಲ್ಲಿ ಪ್ರಸಿದ್ಧ ಅರ್ಥದಾರಿಯಾಗಿದ್ದ ಶೇಣಿ ಗೋಪಾಲಕೃಷ್ಣ ಭಟ್ಟರು ತಮ್ಮ ಒಂದು ಪದ್ಯಕ್ಕೆ ಸರಿಯಾದ ಅರ್ಥ ಹೇಳಲಿಲ್ಲ ಎನ್ನುವ ಕಾರಣಕ್ಕೆ, ಮುಂದಿನ ಪದವನ್ನು ಹಾಡದೇ, ಶೇಣಿಯವರಿಗೆ “ಈಗ ನನ್ನ ಪದಕ್ಕೊಂದು ಅರ್ಥ ಹೇಳಿ” ಎಂದು ಸೂಚಿಸಿದ ಘಟನೆಯನ್ನು ಹಿರಿಯ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರು ಒಮ್ಮೆ ನೆನಪು ಮಾಡಿಕೊಂಡಿದ್ದರು. ಅಪ್ರತಿಮ ಪ್ರತಿಭೆ, ಕಲಾ ಸಂಪನ್ನತೆ, ಸಿದ್ಧಿಯ ಔನ್ನತ್ಯ ಎಲ್ಲವೂ ಮೇಳೈಸಿದ ಪ್ರಸಂಗವನ್ನು ಬಿಗಿ ಕಳೆದುಕೊಳ್ಳದಂತೆ ಪ್ರಸ್ತುತ ಪಡಿಸುವ, ರಂಗದಲ್ಲಿ ಭಾಗವತನಾಗಿರುವ ತಾನೇ ನಿರ್ದೇಶಕ ಎಂದು ಆತ್ಮವಿಶ್ವಾಸದಲ್ಲಿ  ಸಾರಿಹೇಳುವ ಹಲವು ಘಟನೆಗಳು ಹುಡುಕುತ್ತ ಹೋದರೆ ಕಣ್ಣು ಮುಂದೆ ಬರುತ್ತವೆ. ದಾಸ ಭಾಗವತರ ನೇರ ಅನುಭವ ಭಾಗ್ಯ ಈ ಕಾಲದ ಯಕ್ಷಗಾನ ಆಸಕ್ತರಿಗೆ  ಇಲ್ಲದಿದ್ದರೂ, ಅವರನ್ನು ಗೌರವಿಸುತ್ತಿದ್ದ ಅವರ ಸಿದ್ಧಿ ಪ್ರಸಿದ್ಧಿಗಳನ್ನು ಹತ್ತಿರದಿಂದ ಕಂಡು ಆಕರ್ಷಿತರಾಗಿದ್ದ ಪ್ರಭಾವಿಸಲ್ಪಟ್ಟಿದ್ದ ಕೆಲವು ಹಿರಿಯ ಕಲಾವಿದರು, ಪ್ರೇಕ್ಷಕರ ಮೂಲಕವಷ್ಟೇ ದಾಸ ಭಾಗವತರು  ಸದ್ಯಕ್ಕೆ ಸಿಗುತ್ತಾರೆ. ಇಲ್ಲದಿದ್ದರೆ, ವೃದ್ಧಾಪ್ಯದ ಸಮಯದಲ್ಲಿ ದಾಖಲೀಕರಣಗೊಂಡ ಕೆಲವು ಹಾಡುಗಳ ಮೂಲಕ, ವೈಭವದಲ್ಲಿ ಹಿಂದೆಂದೋ ನಳನಳಿಸುತ್ತಿದ್ದ ಅರಮನೆಯೊಂದು ಅಕಸ್ಮಾತ್ ಕುಸಿದುಬಿದ್ದು ಅವಶೇಷವಾಗಿರುವುದನ್ನು ನೆನಪಿಸುತ್ತಾರೆ.

ತನ್ನ ಪ್ರತಿಭೆ, ವರ್ಚಸ್ಸುಗಳಿಂದ ಚಿರಸ್ಮರಣೀಯ ಪ್ರದರ್ಶನಗಳನ್ನು ನೀಡುತ್ತಾ ಜನರಿಗೆ ಕಥೆ ಪಾತ್ರಗಳನ್ನು ಸಾಕ್ಷಾತ್ಕರಿಸುತ್ತಿದ್ದ ದಾಸ ಭಾಗವತರು ರಂಗದ ಮೇಲೆ ಸಾಮ್ರಾಟರಾಗಿದ್ದವರು. ದಂತಕತೆಯಾಗಿ ಯಕ್ಷಗಾನದ ಸೀಮೆಯಲ್ಲಿ ಹಬ್ಬಿಹರಡಿದವರು. ಇಂದಿಗೆ
60-70ವರ್ಷಗಳ ಹಿಂದೆ ಅಪಾರ ಜನಾಕರ್ಷಣೆ, ಮೇರು ತಾರಾಮೌಲ್ಯವನ್ನು ಪಡೆದಿದ್ದವರು. ಆದರೆ ರಂಗಸ್ಥಳದಿಂದ ಕೆಳಗೆ,ಚೌಕಿಯ ಹೊರಗೆ  ಬದುಕಿನ ಬಹುತೇಕ ಕಾಲವನ್ನು ಹುಲ್ಲಿನ ಸೋರುವ ಮಾಡು ಮುರುಕು ಮನೆಯಲ್ಲಿ ತೀವ್ರ ಬಡತನದಲ್ಲಿ ಕಳೆದವರು. ಬದುಕಿನ ಕೊನೆಯ
ಕಾಲದಲ್ಲಿ ಗ್ರಾಮಸ್ಥರು ಹಣ ಸಂಗ್ರಹಿಸಿ ಮತ್ತೆ ಸರಕಾರದಿಂದ ಸಹಾಯ ಪಡೆದು ಅವರಿಗೊಂದು ಮನೆ ಕಟ್ಟಿಸಿಕೊಟ್ಟರು. ರಂಗದ ಮೇಲೆ ಚಕ್ರವರ್ತಿಗಳಂತೆ ಮೆರೆಯುವ ಅಪ್ರತಿಮ ಪ್ರತಿಭಾನ್ವಿತರ ಬಣ್ಣದ ಹೊರಗಿನ ಬದುಕಿನಲ್ಲಿ ದಾರಿದ್ಯ್ರ ದುರಂತಗಳೇ ತುಂಬಿರುವ
ಉದಾಹರಣೆಗಳಲ್ಲಿ ದಾಸಭಾಗವತರೂ ಒಬ್ಬರು. ಏರು ತಗ್ಗಿನ ಬದುಕಿನ ನಡುವೆಯೇ ಕಲೆಯ ಒಟ್ಟಿಗೆ ಸಂಬಂಧವನ್ನು ಬದುಕಿದಷ್ಟು ಕಾಲ ಮುಂದುವರಿಸಿದರು. ಹೊಳೆಯುವ ಬೆಳಕಿನ ರಂಗಸ್ಥಳದ ವೈಭವದದಲ್ಲಿ, ಗುಂಗು ಹತ್ತಿಸಿಕೊಂಡು ಅವರನ್ನೇ ಹುಡುಕಿಕೊಂಡು ಬರುತ್ತಿದ್ದ
ಪ್ರೇಕ್ಷಕರ ಕರತಾಡನದ ನಡುವೆ, ಅಲ್ಲದಿದ್ದರೆ ನವರಾತ್ರಿಯ ಹೂವಿನಕೋಲು ತಿರುಗಾಟದಲ್ಲಿ. ದಾಸ ಭಾಗವತರಿಗೆ ಕಂಠಪಾಠವಾಗಿದ್ದ, ಅವರು ಇಷ್ಟಪಟ್ಟು ಆಡಿಸುತ್ತಿದ್ದ, ಪ್ರೇಕ್ಷಕರು ಅವರ ಭಾಗವತಿಕೆಗೋಸ್ಕರ ಮುಗಿಬಿದ್ದು  ನೋಡಬಯಸುತ್ತಿದ್ದ  ಅನೇಕ ಪ್ರಸಂಗಗಳು ಈಗಲೂ
ಬೇರೆಬೇರೆ ರಂಗಸ್ಥಳಗಳಲ್ಲಿ ಆಡಲ್ಪಡುತ್ತವೆ. ಚಂದ್ರಾವಳಿ ವಿಲಾಸ, ಪಾರಿಜಾತ ಪ್ರಸಂಗದ ಹಾಡುಗಳೂ ಕೇಳಿಸುತ್ತವೆ. ಮತ್ತೆ ನವರಾತ್ರಿಯೂ  ಈ ವರ್ಷ ಇನ್ನೇನು ಬರುವ ತಯಾರಿಯಲ್ಲಿದೆ; ಆದರೆ ದಾಸಭಾಗವತರು ಮರಳಿ ಬರಲಾರು, ಮುನಿಸಿಕೊಂಡು ಎಂದೋ ಬಿಟ್ಟು ಹೋದ ಅವರ ಸ್ವರದಂತೆ.

ದಾಸ ಭಾಗವತರ ಕೊನೆಯ ಕಾಲದ ಒಂದು ವಿಡಿಯೋ:

ಹೂವಿನ ಕೋಲು ಪ್ರಕಾರ:

ಕಪಡೋಕಿಯ ಎಂಬ ವಿಸ್ಮಯ! – ಅನ್ನಪೂರ್ಣಾ ಮತ್ತು ಆನಂದ್ ಬರೆದ ಚಾರಣ ಚಿತ್ರ-ಕಥನ

ಟರ್ಕಿದೇಶದ ಅನಾಟೋಲಿಯಾ (Anatolia) ಪ್ರಾಂತ್ಯದಲ್ಲಿರುವ ಕಪಡೋಕಿಯ (Cappadocia) ಪ್ರಾಂತ್ಯವು ಚಾರಣಿಗರ ಸ್ವರ್ಗವೆಂದರೆ ಅತಿಶಯೋಕ್ತಿಯಾಗದು! ಅಗ್ನಿಪರ್ವತದ ವಿಸ್ಫೋಟ ಮತ್ತು ಹಲವಾರು ಸಹಸ್ರಮಾನ ವರ್ಷಗಳ ಕ್ಷರಣದಿಂದ ಭೂಮಿಯು ಮಾರ್ಪಟ್ಟು ಸಾವಿರಾರು ಕಣಿವೆಗಳ (valley) ಬೀಡಾಗಿದೆ ಈ ಪ್ರಾಂತ್ಯ. ಎಲ್ಲಿ ನೋಡಿದರಲ್ಲಿ ಕಣಿವೆಗಳು, ಕೊರೆದ ಬೃಹದಾಕಾರದ ಬಂಡೆಗಳು, ಹಲವಾರು ಆಕಾರಗಳ ಚಿಮಣಿಗಳ ನೆಲವಾಗಿದೆ. ಈ ಎಲ್ಲ ಭೌಗೋಳಿಕ ಅದ್ಭುತಗಳನ್ನು ಕಾಲ್ನಡಿಗೆಯಲ್ಲಿ ನಡೆದು ಈ ರುದ್ರ ರಮಣೀಯ ಪ್ರದೇಶವನ್ನು ನೋಡಿ ವಿಸ್ಮಿತರಾದೆವು!

ಗೋರೇಮೇ (Goreme) ಮತ್ತು ಉಚೈಸರ್ (Uchisar), ಈ ಪ್ರಾಂತ್ಯದ ಪ್ರಮುಖ ಊರುಗಳು. ಗೋರೇಮೇ ಉಚೈಸರ್-ಗಿಂತ ದೊಡ್ಡ ಊರು ಮತ್ತು ಪ್ರಖ್ಯಾತ ಕೂಡ . ಇಲ್ಲಿ ಉಳಿದುಕೊಂಡು ಸುತ್ತ ಮುತ್ತಲ ಜಾಗಗಳನ್ನು ನೋಡಬಹುದು. ನಮ್ಮದೇ ವಾಹನವಿದ್ದರೆ ಅನುಕೂಲ. ಇಲ್ಲವಾದರೆ ಸಾಕಷ್ಟು ಸ್ಥಳೀಯ ಪ್ರವಾಸಿ ಸಂಸ್ಥೆಗಳು ಬಸ್ಸಿನಲ್ಲಿ ಕರೆದೊಯ್ಯುವ ವ್ಯವಸ್ಥೆ ಇದೆ. ರೆಡ್ ಟೂರ್ ಮತ್ತು ಗ್ರೀನ್ ಟೂರ್ ಮೂಲಕ ಕಪಡೋಕಿಯದ ಪ್ರಮುಖ ಸ್ಥಳಗಳನ್ನು ನೋಡಬಹುದು. ಆದರೆ ಕಣಿವೆಗಳಲ್ಲಿ ನಡೆದು ಹತ್ತಿರದಿಂದ ನೋಡುವ ಅವಕಾಶವಿಲ್ಲ! ಸಮಯದ ಅಭಾವದಿಂದ view point ಗಳಲ್ಲಿ ಬಸ್ ನಿಲ್ಲಿಸುತ್ತಾರೆ, ಅಷ್ಟೇ.

ನಮ್ಮ ಬಳಿ ಕಾರು ಇದ್ದಿದ್ದರಿಂದ ನಾವು ಬಸ್-ಟೂರ್ ತೆಗೆದುಕೊಳ್ಳಲಿಲ್ಲ. ಕಾರಿನಲ್ಲಿ ಕಣಿವೆಗಳ ಬಳಿ ಕಾರು ನಿಲ್ಲಿಸಿ ನಡೆದೆವು. ರಸ್ತೆಗಳು ಬಹಳ ಚೆನ್ನಾಗಿವೆ ಮತ್ತು ಜನರು ಸಂಚಾರಿ ನಿಯಮಗಳನ್ನು ಪಾಲಿಸುತ್ತಾರೆ. ಊರುಗಳಲ್ಲಿ ಸ್ವಲ್ಪ ನುಗ್ಗಾಟವಿದೆ, ಆದರೆ ಹೆದ್ದಾರಿಗಳಲ್ಲಿ ಶಿಸ್ತಿದೆ.

ಉಚೈಸರ್ ಕೋಟೆ (castle) ಬಹಳ ಚೆನ್ನಾಗಿದೆ. ನಮ್ಮ ಹೋಟೆಲಿನಿಂದ ೧೦ ನಿಮಿಷದ ನಡಿಗೆ. ಟಿಕೆಟ್ ತೆಗೆದುಕೊಂಡು ಕೋಟೆಯನ್ನು ಹತ್ತಿ, ಸೂರ್ಯಾಸ್ತವನ್ನು ನೋಡಿದೆವು. ಅಚ್ಚುಕಟ್ಟಾದ ಮೆಟ್ಟಿಲುಗಳಿವೆ. ಹಾಗಾಗಿ ಕಷ್ಟವಿಲ್ಲದೆ ಹತ್ತಬಹುದು. ಮೋಡಗಳಿಲ್ಲದ ದಿನವಾದ್ದರಿಂದ ಸೂರ್ಯಾಸ್ತ ಬಹಳ ಚೆನ್ನಾಗಿ ಕಂಡಿತು.

ಗೋರೇಮೇ ಸುತ್ತ ಬಹಳಷ್ಟು ಕಣಿವೆಗಳಿವೆ: Love Valley, Mushroom Valley, Pigeon Valley – ಆಕಾರಕ್ಕೆ ತಕ್ಕಂತೆ ಹೆಸರು! Red Valley, Rose Valley, White Valley – ಮಣ್ಣಿನ ಬಣ್ಣಕ್ಕೆ ತಕ್ಕಂತೆ ಹೆಸರು! ಕಣ್ಮನ ತಣಿಸುವ ಪ್ರಕೃತಿಯ ವಿಸ್ಮಯ! ಪ್ರತಿಯೊಂದು ಕಣಿವೆಗೂ ಅದರದೇ ಆದ ಅಂದ ಚಂದ ಮತ್ತು ವಿಶಿಷ್ಟತೆ ಇದೆ.

ಕಣಿವೆಗಳಲ್ಲಿ ಬಂಡೆಗಳನ್ನು ಕೊರೆದು, ಮನೆ ಮಾಡಿಕೊಂಡು ಜನರು ಜೀವನ ನಡೆಸುತ್ತಿದ್ದರಂತೆ! ಆ ಮನೆಗಳು ಈಗಲೂ ಇವೆ. ಹಗ್ಗ ಮತ್ತು ಹಗ್ಗದ ಏಣಿಗಳ ಸಹಾಯದಿಂದ ಮನೆಗೆ ಹೋಗುತ್ತಿದ್ದರೇನೋ?

Love Valley-ಗೆ ಪ್ರವೇಶ ಉಚಿತ. ಗೋರೇಮೇ ಊರಿನ ಹೊರಗೆ ರಸ್ತೆಯ ಬದಿ ಕಾರು ನಿಲ್ಲಿಸಿ ಸುಮಾರು ೩ ಗಂಟೆ ನಡೆದೆವು. ಇನ್ನೂ ಹೆಚ್ಚು ನಡೆಯಲಿಚ್ಛಿಸಿವವರು ನಡೆಯಲು ಬಹಳ ಹಾದಿಗಳಿವೆ. ಈ ಹಾದಿ ಬಹಳವೇ ಸಮತಟ್ಟಾಗಿತ್ತು. ಸುಮಾರು ೪೦ – ೫೦ ಮೀಟರ್ ಉದ್ದದ ನೂರಾರು ಚಿಮಣಿಗಳು! ಈ ಕಣಿವೆ ಬಹುಪ್ರಖ್ಯಾತ. ಗೂಗಲಿಸಿದರೆ ಈ ಕಣಿವೆಯ ಚಿತ್ರಗಳು ಅಂತರಜಾಲದಲ್ಲಿ ತುಂಬಿದೆ! ಇಲ್ಲಿ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಅವರ ಟೈಗರ್ ೩ ಚಿತ್ರದ ‘ಲೇಕೆ ಪ್ರಭು ಕಾ ನಾಮ್’ ಚಿತ್ರಗೀತೆಯ ಚಿತ್ರೀಕರಣ ನಡೆದಿದೆ.

Mushroom Valley-ಗೆ ಟಿಕೆಟ್ ತೆಗೆದುಕೊಳ್ಳಬೇಕು. ಇಲ್ಲಿನ ಚಿಮಣಿಗಳ ತಲೆ ನಾಯಿಕೊಡೆಯಾಕಾರದಲ್ಲಿದೆ. Love Valley ಅಷ್ಟು ಉದ್ದದ ಚಿಮಣಿಗಳಲ್ಲ ಮತ್ತು ಸಂಖ್ಯೆಯೂ ಕಡಿಮೆ. ಸುಮಾರು ಒಂದೂವರೆ ಗಂಟೆಯಲ್ಲಿ ಎಲ್ಲವನ್ನೂ ನೋಡಲಾಯಿತು.

Pigeon Valley-ಗೆ ಪ್ರವೇಶ ಉಚಿತ. ಇಲ್ಲಿಯ ಚಿಮಣಿಗಳ ತಲೆ ಸ್ವಲ್ಪ ಪಾರಿವಾಳದ ಆಕಾರದಲ್ಲಿದೆ. ಊಹಿಸಿಕೊಳ್ಳಲು ಸ್ವಲ್ಪ ಕಲ್ಪನಾಶಕ್ತಿಯೂ ಬೇಕು. ಉಚೈಸರ್-ನಿಂದ ಪ್ರಾರಂಭವಾಗುವ ಹಾದಿಯನ್ನು ಹುಡುಕಲು ಸ್ವಲ್ಪ ಕಷ್ಟವಾಯಿತು. ಸ್ವಲ್ಪ ಹುಡುಕಾಡಿ, ಕಡೆಗೆ ಸರಿಯಾದ ದಾರಿಯನ್ನು ಹುಡುಕಿ ಕಣಿವೆಯ ಸುತ್ತ ಓಡಾಡಿದೆವು. ಉಚೈಸರ್-ನಿಂದ ಪ್ರಾರಂಭಿಸಿ ಗೋರೇಮೇ ಮುಟ್ಟಿ ಹಿಂದಿರುಗಿದೆವು. ಸುಮಾರು ೬ -೭ km ನಡಿಗೆ. ಇದು ಸ್ವಲ್ಪ ಕಡಿದಾದ ಕಣಿವೆ. ನಡೆಯಲು ಸ್ವಲ್ಪ ಶ್ರಮ ಪಡಬೇಕು. ಕೆಲವೊಂದು ಜಾಗಗಳಲ್ಲಿ ಹಗ್ಗ ಹಿಡಿದುಕೊಂಡು ಇಳಿಯಬೇಕು ಮತ್ತು ಹತ್ತಬೇಕು.

Red/Rose Valley-ಯ ಮಣ್ಣು ತಿಳಿ ಕೆಂಪು/ಕೆಂಪು ಬಣ್ಣದ್ದಾಗಿದೆ. ಗೋರೇಮೇ ಇಂದ ಸ್ವಲ್ಪ ದೂರದಲ್ಲಿರುವ ಕಾವುಸಿನ್ (Cavusin) ಅನ್ನುವ ಊರಿನ ಹತ್ತಿರ ಕಾರು ನಿಲ್ಲಿಸಿ ನಡಿಗೆ ಶುರು ಮಾಡಿದೆವು. ತಪ್ಪು ಕೈಮರದಿಂದ ಸ್ವಲ್ಪ ಹಾದಿ ತಪ್ಪಿ, ಜಾಸ್ತಿ ನಡೆದು, ಕಡೆಗೆ ಸರಿಯಾದ ದಾರಿಯಲ್ಲಿ ಹೋದೆವು. Rose Valley ನೋಡಲು ಹೋಗಿ, ದಾರಿ ತಪ್ಪಿ, ಕಡೆಗೆ Rose ಮತ್ತು Red Valley ಎರಡನ್ನೂ ನೋಡಿದೆವು. ಸುಮಾರು ೧೪ ಕಿಮಿ ನಡಿಗೆ! ಈ ಹಾದಿ ಬಹಳ ಕಡಿದಾಗಿತ್ತು ಮತ್ತು ಜಾರಿಕೆ ಕೂಡ! ನೆತ್ತಿಯ ಮೇಲಿನ ಸೂರ್ಯನ ಝಳ ಇನ್ನಷ್ಟು ತೊಂದರೆ ಕೊಟ್ಟಿತೆಂದರೆ ತಪ್ಪಾಗಲಾರದು. ಕಡೆಗೆ ಸುಮಾರು ೫ ಘಂಟೆಗಳ ಕಾಲ ನಡೆದಿದ್ದೆವು!

ನಮ್ಮ ಹಾಗೆ ದಾರಿ ತಪ್ಪಿ ಬಹಳಷ್ಟು ಜನ ನಮ್ಮೊಂದಿಗಿದ್ದಿದ್ದು, ನಾವೊಬ್ಬರೆ ಅಲ್ಲ ಎನ್ನುವ ಸಮಾಧಾನ ಕೊಟ್ಟಿತು. ಈ ಕಣಿವೆಯಲ್ಲಿ ನಮಗೆ ಅತ್ಯಂತ ರಮಣೀಯ ದೃಶ್ಯಗಳನ್ನು ನೋಡುವ ಅವಕಾಶ ಸಿಕ್ಕಿತು. Breathtaking views ಅನ್ನಬಹುದು. Rose Valley-ಇಂದ Red Valley-ಗೆ ಹೋದರೆ ಪ್ರವೇಶ ಉಚಿತ. ವಿರುದ್ಧ ದಿಕ್ಕಿನಲ್ಲಿ ಹೋದರೆ ಟಿಕೆಟ್ ತೆಗೆದುಕೊಳ್ಳಬೇಕು! ಕೆಲವು ಕಡೆ ಚಾರಣದ ಹಾದಿ ಬಹಳ ಕಡಿದಾಗಿದೆ. ಜಾರಿಕೆ ಕೂಡ !! ಒಳ್ಳೆಯ trekking shoes ಬೇಕೇ ಬೇಕು . walking poles ಇದ್ದರೆ ಇನ್ನೂ ಉತ್ತಮ.

ಕೆಲವಕ್ಕೆ ಪ್ರವೇಶ ಶುಲ್ಕವಿದೆ, ಮತ್ತೆ ಕೆಲವು ಉಚಿತ. ಮೂರು ದಿನದ ಪಾಸ್ ತೆಗೆದುಕೊಂಡರೆ ಸ್ವಲ್ಪ ಕಡಿಮೆ ವೆಚ್ಚದಲ್ಲಿ ಬಹಳಷ್ಟು ಜಾಗಗಳನ್ನು ನೋಡಬಹುದು. ಈ ಪಾಸ್-ನಲ್ಲಿ ಕೆಲವು ಕಣಿವೆಗಳಿಗೆ, ಕೆಲವು ಸಂಗ್ರಹಾಲಯಗಳಿಗೆ ಮತ್ತು ಕೆಲವು ಭೂಗತ (underground) ನಗರಗಳಿಗೆ ಪ್ರವೇಶವಿದೆ.

ಕಪಡೋಕಿಯ ಪ್ರಾಂತ್ಯದಲ್ಲಿ ಸುಮಾರು ನಲವತ್ತಕ್ಕೂ ಹೆಚ್ಚು ಭೂಗತ ನಗರಗಳಿವೆ. ಡೆರಿನ್-ಕುಯು (Derinkuyu) ಮತ್ತು ಕಾಯ್ಮಲ್ಕಿ (Kaymakli) ಎರಡು ಸುಪ್ರಸಿದ್ಧವಾದವು. ಉಚೈಸರ್-ನಿಂದ ಸುಮಾರು ೨೦ ಕಿಮಿ ದೂರದಲ್ಲಿ Kaymakli ಮತ್ತು ೩೦ ಕಿಮಿ ದೂರದಲ್ಲಿ ಡೆರಿನ್-ಕುಯು. ಮೊದಲ ಶತಮಾನದಲ್ಲಿ ನಿರ್ಮಿಸಿರುವ ಈ ಭೂಗತ ನಗರಗಳು ಈಗಲೂ ಸುಸ್ಥಿತಿಯಲ್ಲಿವೆ. ಯುದ್ಧಗಳಿಂದ ರಕ್ಷಣೆ ಪಡೆಯಲು ನಿರ್ಮಿಸಿದ ಈ ನಗರಗಳಲ್ಲಿ ಸುಮಾರು ೨೦೦೦೦ ಜನ, ಅವರ ಹಸುಕರುಗಳೆಲ್ಲ ತಿಂಗಳುಗಟ್ಟಲೆ ಇರುತ್ತಿದ್ದರಂತೆ! ಡೆರಿನ್-ಕುಯುನಲ್ಲಿ ೮ ಮಾಳಿಗೆಗಳಿವೆ, ಭೂಮಿಯ ಕೆಳಗೆ! ಶಾಲೆ, ಚರ್ಚು, ಅಡಿಗೆಮನೆ, ಕೊಠಡಿಗಳು, wine cellar ಎಲ್ಲ ಇದೆ! ಗಾಳಿಯಾಡಲು ಮೇಲಿನಿಂದ ಕೆಳಗಿನವರೆಗೂ ಚಿಮಣಿ ಕೂಡ ಇದೆ. ಶೌಚಕ್ಕೆ ಏನು ಮಾಡ್ತಿದ್ರೋ ದೇವರಿಗೇ ಗೊತ್ತು!

ಇಹ್ಲಾರ (Ihlara ) ಕಣಿವೆ ಉಚೈಸರ್-ನಿಂದ ೭೦ ಕಿಮಿ ದೂರವಿದೆ. ಮೇಲೆ ಹೆಸರಿಸಿರುವ ಕಣಿವೆಗಳಿಗಿಂತ ತುಂಬಾ ಭಿನ್ನವಾಗಿದೆ. ಹಸ್ಸನ್ ಪರ್ವತದಿಂದ ಹಿಮ ಕರಗಿ ನದಿ ಹರಿಯುವುದರಿಂದ ಇಲ್ಲಿ ಸಸ್ಯ ಸಂಪತ್ತು ಹೇರಳವಾಗಿದೆ. ಸುಮಾರು ೧೪ ಕಿಮಿ ನಡಿಗೆಯ ದಾರಿ ಇದೆ. ನದಿಯ ಪಕ್ಕದಲ್ಲೇ, ಎರಡೂ ಕಡೆ ಸುವ್ಯವಸ್ಥಿತ ಹಾದಿ. ಅಲ್ಲಲ್ಲಿ ಕುಳಿತುಕೊಳ್ಳಲು ಬೆಂಚುಗಳು, ಟೀ/ಹಣ್ಣಿನ ರಸ ಮಾರುವ ಅಂಗಡಿಗಳು, ಶೌಚಾಲಯಗಳ ಸೌಲಭ್ಯವಿದೆ.

ಅಕ್ಸಾರ್ಸೆ (Aksaray) ಇಂದ ಇಹ್ಲಾರದವರೆಗೂ ಸುಮಾರು ೧೪ ಕಿಮಿ ದೂರದ ಹಾದಿ. ನಾವು ಬಿಲಿಸಿರ್ಮಾ (bilisirma) ಎಂಬ ಊರಲ್ಲಿ ಕಾರು ನಿಲ್ಲಿಸಿ, ೭ km ನಡೆದು ಇಹ್ಲಾರ ತಲುಪಿ, ಅಲ್ಲಿ ಸ್ಥಳೀಯ ರೆಸ್ಟಾರಂಟಿನಲ್ಲಿ ನಿಜವಾದ ಟರ್ಕಿಷ್ ಊಟ ಮಾಡಿ ಮತ್ತೆ ೭ km ನಡೆದು ಕಾರು ತಲುಪಿ ಹಿಂದಿರುಗಿದೆವು, ಒಟ್ಟು ೪ ಗಂಟೆಗಳ ಹಾದಿ. ಈ ಕಣಿವೆಯಲ್ಲಿ ಹಲವಾರು ಮಾನವ ನಿರ್ಮಿತ ಗುಹೆಗಳು ಹಾಗೂ ಗುಹೆಗಳಲ್ಲಿ ಈಗರ್ಜಿಗಳು ಇವೆ. ಈಗರ್ಜಿಗಳಲ್ಲಿನ ಬಣ್ಣ ಬಣ್ಣದ ಚಿತ್ತಾರಗಳು ಈಗಲೂ ಉಳಿದಿವೆ.

ಇಷ್ಟೆಲ್ಲಾ ನಡೆದಮೇಲೆ ಕೈ ಕಾಲುಗಳಿಗೆ ವಿಶ್ರಾಂತಿ ಕೊಡಲು ಟರ್ಕಿಷ್ ಹಮಾಮಿ ಒಂದು ಒಳ್ಳೆಯ ಸಾಧನ. ಮೈ, ಕೈಗಳಿಗೆ ಎಣ್ಣೆ ತೀಡಿ, ಮಸಾಜ್ ಮಾಡಿ, sauna ನಲ್ಲಿ ಕೂರಿಸಿ ಬೆವರಿಳಿಸಿ, ಸೋಪಿನ ನೊರೆ ನೊರೆಯಲ್ಲಿ ಮುಳುಗಿಸಿ ಸ್ನಾನ ಮಾಡಿಸಿಕೊಳ್ಳುವ ಐಷಾರಾಮ ಯಾರಿಗೆ ಬೇಡ!

Hot air ಬಲೂನ್ ಗಳಿಗೆ ಕಪಡೋಕಿಯ ಬಹಳ ಪ್ರಸಿದ್ಧ. ಬೆಳಗಿನ ಜಾವ ೫ ಘಂಟೆಗೆ ಹೊರಟು, ೬ ಘಂಟೆಗೆ ಬಲೂನಿನ ಬುಟ್ಟಿಗಳಲ್ಲಿ ನಿಂತು, ನಿಧಾನವಾಗಿ ಗಾಳಿಯಲ್ಲಿ ತೇಲುತ್ತಾ, ಮೇಲೇರುವ ನೂರಾರು ಬಲೂನ್ ಗಳನ್ನು ನೋಡುವುದೇ ಒಂದು ಆನಂದ, ವಿಸ್ಮಯ! ಸುತ್ತ ಮುತ್ತ ನಡೆದು ನೋಡಿದ valley ಗಳನ್ನು ಮೇಲಿನಿಂದ, ಹಕ್ಕಿಯಂತೆ ನೋಡುವ ಮಜವೇ ಬೇರೆ! Quad bike ride, range rover ride, ಕುದುರೆ ಸವಾರಿ, microlight flying – ಹೀಗೆ ಹಲವು ಹತ್ತಾರು ಚಟುವಟಿಗೆಗಳಿಗೆ ಅವಕಾಶವಿದೆ .

ಇದ್ದ ಏಳು ದಿನಗಳಲ್ಲಿ ತಾಪಮಾನ ೧೭ರಿಂದ ೨೭ ಡಿಗ್ರಿ ಸೆಲ್ಸಿಯಸ್ ತಲುಪಿತ್ತು! ಆದರೆ ಬೆಳಿಗ್ಗೆ ಮತ್ತು ರಾತ್ರಿ ತಂಪಾಗಿರುತ್ತದೆ. ಒಂದು ಶಾಲ್/ಜಾಕೆಟ್ ಬೇಕೆನಿಸುತ್ತದೆ . ಒಂದೆರಡು ದಿನ ೧೦ -೧೫ ನಿಮಿಷ ಮಳೆಯೂ ಬಂತು. ಬೇಸಿಗೆಯಲ್ಲಿ ೩೨ ಡಿಗ್ರಿವರೆಗೂ ಹೋಗತ್ತದೆ, ಆದರೆ ಅಷ್ಟು ಸೆಖೆ ಆಗಲ್ಲ ಎಂಬುದು ಸ್ಥಳೀಯರ ಅಂಬೋಣ.

ಒಟ್ಟಿನಲ್ಲಿ ಚಾರಣಿಗರು ಸುಲಭವಾಗಿ ೫ -೬ ದಿನಗಳನ್ನ ಕಪಡೋಕಿಯದಲ್ಲಿ ಕಳೆಯಬಹುದು . ಗೋರೇಮೇ ಮತ್ತು ಉಚೈಸರ್ ನಲ್ಲಿ ಬಹಳಷು ಹೋಟೆಲ್ ಮತ್ತು ರೆಸ್ಟೋರೆಂಟುಗಳಿವೆ . ಭಾರತೀಯ ರೆಸ್ಟೋರೆಂಟುಗಳೂ ಇವೆ . ಕೊಮ್ಗೆನೆ (Komgene) ಅನ್ನುವ ಸ್ಥಳೀಯ food chain ನಲ್ಲಿ ‘ದುರಂ’ (veg wrap) ಮತ್ತು ayran (ಮಜ್ಜಿಗೆ) ನಮ್ಮ ಮಧ್ಯಾಹ್ನದ ಊಟವಾಗಿತ್ತು. ಕಡಿಮೆ ವೆಚ್ಚ, ರುಚಿಕರ ಊಟ, ಕಡಿಮೆ ಸಮಯದಲ್ಲಿ! ಪ್ರವಾಸಿಗರ ಜಾಗವಾಗಿರುವುದರಿಂದ, ಎಲ್ಲ ದರಗಳೂ ಯುರೋ ಅಥವಾ ಯುಎಸ್ ಡಾಲರುಗಳಲ್ಲಿ! ಸ್ವಲ್ಪ ದುಬಾರಿ ಎಂದೇ ಹೇಳಬಹುದು. ಆದರೂ ಈ ಪ್ರಕೃತಿಯ ಅದ್ಭುತವನ್ನು ಒಮ್ಮೆ ಖಂಡಿತ ನೋಡಬೇಕಾದ್ದೇ.