ರಾಜಕುಮಾರಿ ಸೋಫಿಯಾ ದುಲೀಪ್ ಸಿಂಗ್ (೧೮೭೬-೧೯೪೮) – ರಾಮಮೂರ್ತಿ ಎಚ್ ಎನ್.

ನಮಸ್ಕಾರ.  ನಮ್ಮ ಅನಿವಾಸಿ ಬಳಗದ ಉತ್ಸಾಹಿ ಬರಹಗಾರ, ಇತಿಹಾಸದ ಅಧ್ಯೇತೃ (ಬೇಸಿಂಗ್‍ಸ್ಟೋಕ್) ರಾಮಮೂರ್ತಿ ಅವರು ಬರೆದಿರುವ ಇನ್ನೊಂದು ಲೇಖನ. ಪಂಜಾಬಿನ ಕೊನೆಯ ರಾಜ ದುಲೀಪ್ ಸಿಂಹರ ಮಗಳು ರಾಜಕುಮಾರಿ ಸೋಫಿಯಾ ಅವರ ಜೀವನ ಚಿತ್ರಣ ಇಲ್ಲಿದೆ.  ಬರಿಯ ರಾಜಕುಮಾರಿಯಾಗಿ ಉಳಿಯದೇ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದ, ಮೊದಲ ಮಹಾಯುದ್ಧದ ವೇಳೆಯಲ್ಲಿ ಹಲವಾರು ಉತ್ತಮ ಕಾರ್ಯಗಳನ್ನು ಮಾಡಿದ, ಆ ಕಾರಣಕ್ಕಾಗಿ ಬ್ರಿಟಿಷ್ ಸರಕಾರದಿಂದ ಗೌರವಿಸಲ್ಪಟ್ಟ ಮಹಿಳೆ.  
ಎಂದಿನಂತೆ ಓದಿ, ಪ್ರತಿಕ್ರಯಿಸಿ, ನಿಮ್ಮ ಅನಿಸಿಕೆಗಳನ್ನು ಬ್ಲಾಗಿನಲ್ಲಿ ಹಂಚಿಕೊಳ್ಳಿ. ಧನ್ಯವಾದಗಳೊಂದಿಗೆ - ಲಕ್ಷ್ಮೀನಾರಾಯಣ ಗುಡೂರ್ (ಈ ವಾರದ ಸಂಪಾದಕಿ ಅಮಿತಾ ರವಿಕಿರಣ ಅವರ ಪರವಾಗಿ).

********************

ದುಲೀಪ್ ಸಿಂಹ ಮತ್ತು ರಾಜಕುಮಾರಿ ಸೋಫಿಯಾ (ಚಿತ್ರಕೃಪೆ: ವಿವಿಧ ಅಂತರ್ಜಾಲತಾಣಗಳು)
೨೦ನೇ ಶತಮಾನದ ಆದಿಯಲ್ಲಿ ಇಂಗ್ಲೆಂಡ್ ದೇಶದ ಮಹಿಳೆಯರು ಮೂಲಭೂತ ಮತ್ತು ಮತದಾನದ ಹಕ್ಕು ಪಡೆಯಲು ನಡೆಸಿದ ಚಳುವಳಿಗಳಿಗೆ (Suffragette Movement) ಹೋರಾಡಿದ ಭಾರತ ಮೂಲದ ರಾಜಕುಮಾರಿ ಸೋಫಿಯಾ.  ಈಕೆ, ಭಾರತದ ಮತ್ತು ಇಂಗ್ಲೆಂಡಿನ ಶ್ರೀಮಂತ ಕುಟುಂಬದ ಆಶ್ರಯದಲ್ಲಿ ಬೆಳೆದರೂ ಅವಳ ಹೋರಾಟ ರಾಜಕೀಯ ಚಟುವಟಿಕೆಯಲ್ಲೇ ಇತ್ತು.

ಇವಳ ತಂದೆ ಪಂಜಾಬಿನ ಕೊನೆಯ ಮಹಾರಾಜ ದುಲೀಪ್ ಸಿಂಗ್. ಪಂಜಾಬಿನ “ಸಿಂಹ” ಮಹಾರಾಜ ರಂಜಿತ್ ಸಿಂಗ್‍ರ (೧೭೮೦-೧೮೩೯) ನಿಧನವಾದಮೇಲೆ ಆ ಪಟ್ಟಕ್ಕೇರಲು ಅನೇಕರು ಹೋರಾಡಿ, ಕೊನೆಗೆ ಐದು ವರ್ಷದ ದುಲೀಪ್ ಸಿಂಗ್‍ನನ್ನು ರಾಜನನ್ನಾಗಿ ಮಾಡಿದರು. ಆದರೆ ರಾಜ್ಯದಲ್ಲಿ ಅಸ್ಥಿರತೆ ಇರುವುದನ್ನು ಕಂಡು ೧೮೪೯ ರಲ್ಲಿ ಈಸ್ಟ್ ಇಂಡಿಯಾ ಕಂಪನಿಯವರು ಎರಡನೆಯ ಆಂಗ್ಲೋ-ಸಿಖ್ ಯುದ್ಧದ ನಂತರ ಪಂಜಾಬ್ ಪ್ರಾಂತ್ಯವನ್ನು ಆಕ್ರಮಿಸಿಕೊಂಡು ಹತ್ತು ವರ್ಷದ ದುಲೀಪ್ ಸಿಂಗ್‍ನಿಂದ ಅವನ ಜಮೀನು ಮತ್ತು ಕೊಹಿನೂರ್ ವಜ್ರವನ್ನು ಕಸಿದುಕೊಂಡರು. ನಂತರ ದುಲೀಪ್ ಸಿಂಗನಿಗೆ ಪಿಂಚಿಣಿ ಕೊಟ್ಟು ಇಂಗ್ಲೆಂಡ್‍ನಲ್ಲಿ ವಾಸಮಾಡುವುದಕ್ಕೆ ಏರ್ಪಾಡು ಮಾಡಿದರು, ಇದಲ್ಲದೆ ಸಿಖ್ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರ, ಬಹುಶಃ ಬಲವಂತದಿಂದ, ಮಾಡಿದರು.

ಸೋಫಿಯಾ ೮/೦೮/೧೮೭೬ ರಂದು ಲಂಡನ್ ನಗರದ ಬೆಲ್‍ಗ್ರೇವಿಯದಲ್ಲಿ ಜನಿಸಿದಳು. ತಾಯಿ, ಬಾಂಬ ಮುಲ್ಲರ್ (ಜರ್ಮನ್ ಮತ್ತು ಇಥಿಯೋಪಿಯಾ ಮೂಲದವಳು). ದುಲೀಪ್ ಸಿಂಗ್ ೧೮೬೩ರಲ್ಲಿ Suffolk ನಲ್ಲಿ ಇರುವ ೧೭,೦೦೦ ಎಕರೆ Elvedon Hall ಕೊಂಡಿದ್ದ (ಲಂಡನ್‍ನಲ್ಲಿದ್ದ India Office ನ ಸಹಾಯದಿಂದ). ಅವನ ಕುಟುಂಬ ಲಂಡನ್‍ನಿಂದ ಇಲ್ಲಿಗೆ ಬಂದು ನೆಲೆಸಿದರು. ರಾಣಿ ವಿಕ್ಟೊರಿಯಾ ದುಲೀಪ್ ಸಿಂಗನ ಮಕ್ಕಳನ್ನು, ಅದರಲ್ಲೂ ಸೋಫಿಯಾಳನ್ನು, ಸಾಕುಮಕ್ಕಳಂತೆ ಪರಿಗಣಿಸಿ ಅವರ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಳು.

೧೮೮೭ ರಲ್ಲಿ ಬಾಂಬ ಮುಲ್ಲರ್ ಜ್ವರದಿಂದ ನಿಧನಳಾದ ಮೇಲೆ, ದುಲೀಪ್ ಸಿಂಗ್ ೧೮೮೯ರಲ್ಲಿ ಪುನಃ ಮದುವೆಯಾದ. ಆದರೆ ಇವನ ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿ ಹದಗೆಟ್ಟು ೧೮೮೦ ರಲ್ಲಿ Elvendon Hall ಬಿಡಬೇಕಾಯಿತು. ಸೋಫಿಯಾ ಹತ್ತು ವರ್ಷವಾಗಿದ್ದಾಗ, ದುಲೀಪ್ ಸಿಂಗ್ ತನ್ನ ಸಂಸಾರದ ಜೊತೆಯಲ್ಲಿ ಪಂಜಾಬಿಗೆ ಹಿಂತಿರುಗಲು ಮಾಡಿದ ಪ್ರಯತ್ನ ವಿಫಲವಾಯಿತು. ಹಡಗು ಏಡನ್ ತಲಪಿದಾಗ ಇವರ ಬಂಧನಕ್ಕೆ ಬ್ರಿಟಿಷ್ ಸರ್ಕಾರದ ವಾರಂಟ್ ಕಾದಿತ್ತು. ನಂತರ ದುಲೀಪ್ ಸಿಂಗ್ ಪ್ಯಾರಿಸ್ ನಗರದಲ್ಲಿ ಹಲವು ವರ್ಷಗಳನ್ನು ಕಳೆದು ೫೫ ನೇ ವಯಸ್ಸಿನಲ್ಲಿ ೧೮೯೩ರಲ್ಲಿ ನಿಧನನಾದ.

ರಾಣಿ ವಿಕ್ಟೋರಿಯಾ ಈ ಮಕ್ಕಳ ಯೋಗಕ್ಷೇಮವನ್ನು ಆಲಿಫಂಟ್ ಕುಟುಂಬಕ್ಕೆ ವಹಿಸಿ, ಬ್ರೈಟನ್ ನಗರದಲ್ಲಿ ವಿದ್ಯಾಭ್ಯಾಸ ಮುಂದುವರೆಸುವುದಕ್ಕೆ ಮತ್ತು ವಾಸಕ್ಕೆ ರಾಜ ಮನೆತನದ ಹ್ಯಾಂಪ್ಟನ್ ಕೋರ್ಟ್ ಆವರಣದಲ್ಲಿ ಏರ್ಪಾಡು ಮಾಡಲಾಯಿತು.

ಸೋಫಿಯಾ ಮೊದಲ ಕೆಲವು ವರ್ಷಗಳು ಅತ್ಯಂತ ಆರಾಮದ ಜೀವನವನ್ನು ಕಳೆದಳು. ಆದರೆ ೧೯೦೭ ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ಭೇಟಿ ಕೊಟ್ಟಾಗ, ಅಲ್ಲಿನ ಜನರ ಬಡತನ ಮತ್ತು ಸಮಾಜದಲ್ಲಿ ನಡೆಯುತ್ತಿದ್ದ ಅನ್ಯಾಯಗಳನ್ನು ನೋಡಿ ಅವಳ ಮನಸ್ಸು ಪರಿವರ್ತನೆ ಆಯಿತು.
೧೯೧೦ ರವರೆಗೂ ಇಂಗ್ಲೆಂಡಿನಲ್ಲಿ ಮಹಿಳೆಯರಿಗೆ ಯಾವ ರೀತಿಯ ಹಕ್ಕುಗಳೂ ಇರಲಿಲ್ಲ. ಇದನ್ನು ಪ್ರತಿಭಟಿಸಿ "Women's Social and Political Union" (WSPU) ಅನ್ನುವ ಸಂಸ್ಥೆ ಎಮೆಲೀನ್ ಪ್ಯಾಂಕ್‍ಹರ್ಸ್ಟ್ (Emmeline Pankhurst) ಳ ನೇತೃತ್ವದಲ್ಲಿ ಪ್ರಾರಂಭವಾಗಿತ್ತು. ಸೋಫಿಯಾ ಈ ಚಳುವಳಿಯಲ್ಲಿ ಭಾಗವಹಿಸಿವುದಕ್ಕೆ ನಿರ್ಧರಿಸಿ, ಈ ಸಂಸ್ಥೆಯ ಸದಸ್ಯೆ ಆಗಿ ಅನೇಕ ರೀತಿಯಲ್ಲಿ ಸಹಾಯ ಮಾಡಿದಳು. ಸೋಫಿಯಾ ತಾನು ವಾಸವಾಗಿದ್ದ ಹ್ಯಾಂಪ್ಟನ್ ಕೋರ್ಟ್ ಹೆಬ್ಬಾಗಿಲಿನ ಮುಂದೆ ನಿಂತು The Suffragette ಪತ್ರಿಕೆಯ ಮಾರಾಟವನ್ನು ಸಹ ಮಾಡುತಿದ್ದಳು.

೧೯೧೦ ರಲ್ಲಿ ಲಂಡನ್ ನಗರದಲ್ಲಿ ನಡೆದ Black Friday ಪ್ರತಿಭಟನೆಯಲ್ಲಿ ೩೦೦ ಮಹಿಳೆಯರ ತಂಡದೊಂದಿಗೆ ಸೋಫಿಯಾ ಭಾಗವಹಿಸಿ ಕ್ಯಾಸ್ಟನ್ ಹಾಲ್‍ನಿಂದ ಪಾರ್ಲಿಮೆಂಟಿನವರೆಗೆ ನಡೆದು, ಅಲ್ಲಿ ಪ್ರಧಾನ ಮಂತ್ರಿಗಳನ್ನು ಭೆಟ್ಟಿಯಾಗಲು ಪ್ರಯತ್ನಿಸಿದರು. ಆದರೆ ಅವರು ನಿರಾಕರಿಸಿದ್ದರಿಂದ ಈ ತಂಡ ಅಲ್ಲೇ ಕುಳಿತು ಘೋಷಣೆಗಳನ್ನು ಕೂಗುವುದಕ್ಕೆ ಪ್ರಾರಂಭಿಸಿದಾಗ ಪೊಲೀಸರು ಇವರ ಮೇಲೆ ಅತ್ಯಂತ ದೌರ್ಜನ್ಯದಿಂದ ವರ್ತಿಸಿದರು. ಈ ತಂಡದ ಅನೇಕರು ಗಾಯಗೊಂಡು ಇಬ್ಬರ ಮರಣಕ್ಕೂ ಪೋಲೀಸರ ದೌರ್ಜನ್ಯ ಕಾರಣವಾಯಿತು. ಅಂದಿನ ಗೃಹಮಂತ್ರಿ ಸರ್ ವಿನ್ಸ್ಟನ್ ಚರ್ಚಿಲ್ ಪೊಲೀಸರಿಗೆ ಉತ್ತೇಜನ ಕೊಟ್ಟರು ಅನ್ನುವ ಆರೋಪ ಸಹ ಬಂದಿತ್ತು.

೧೯೧೧ ರಲ್ಲಿ ನಡೆದ ಜನಗಣತಿಯಲ್ಲಿ (Census) ಭಾಗವಹಿಸುವುದಕ್ಕೆ ಸೋಫಿಯಾ ಮತ್ತು ಸಂಸ್ಥೆಯವರು ನಿರಾಕರಿಸಿದರು. ಸೋಫಿಯಾ ಜನಗಣತಿಯ ಚೀಟಿಯ ಮೇಲೆ ಈ ರೀತಿ ಬರೆದು ಚೀಟಿಯನ್ನು ಹಿಂತಿರಿಗಿಸಿದಳು (ಕೆಳಗೆ ಚಿತ್ರ ನೋಡಿ) - No Vote, No Census. As women do not count, they refuse to be counted; I have a conscientious objection to filling up this form.
No Vote, No Tax.

ಮತದಾನದ ಹಕ್ಕು ಇಲ್ಲದೆ ವರಮಾನ ತೆರಿಗೆ ಕೊಡುವುದಕ್ಕೂ ಸೋಫಿಯಾ ನಿರಾಕರಿಸಿದ್ದರಿಂದ ನ್ಯಾಯಾಲಯ £೧೨ ದಂಡ ಹಾಕಿತು. ಆದರೆ ಇದನ್ನು ಪ್ರತಿಭಟಿಸಿ ದಂಡವನ್ನು ಕಟ್ಟಲಿಲ್ಲವಾದ ಕಾರಣದಿಂದಿಂದ ಅವಳ ಕೆಲವು ಆಭರಣಗಳನ್ನು ವಶಪಡಿಸಿಕೊಂಡು ಹರಾಜು ಮಾಡಲಾಯಿತು. ಆದರೆ WSPUನ ಕಾರ್ಯದರ್ಶಿ ಈ ಹರಾಜಿನಲ್ಲಿ ಭಾಗವಹಿಸಿ ಆಭರಣಗಳನ್ನು ಕೊಂಡುಕೊಂಡು ಸೋಫಿಯಾಗೆ ವಾಪಸ್ಸು ಕೊಟ್ಟರು.

೧೯೧೪ ನಲ್ಲಿ ಮೊದಲನೇ ಮಹಾಯುದ್ಧ ಪ್ರಾರಂಭವಾದ್ದರಿಂದ ಮಹಿಳೆಯರು ತಮ್ಮ ಹೋರಾಟವನ್ನು ನಿಲ್ಲಿಸಿ, ದೇಶದ ಮತ್ತು ಸರಕಾರದ ಪರವಾಗಿ ನಿಂತು ಸಹಾಯ ಮಾಡುವುದಕ್ಕೆ ಸಿದ್ದರಾದರು. ಲಕ್ಷಾಂತರ ಭಾರತೀಯ ಸೈನಿಕರು ಈ ಯುದ್ಧದಲ್ಲಿ ಭಾಗವಹಿಸಿದ್ದರು, ಇವರ ಯೋಗಕ್ಷೇಮ ಕಾಯಲು ಸೋಫಿಯಾ ನೆರವಾಗಿ Red Cross ಸಂಸ್ಥೆಯ ಪರವಾಗಿ ಹಣ ಸಂಗ್ರಹಣೆ ಮಾಡಿದಳು. ಸ್ವತಃ ೧೯೧೫ರಲ್ಲಿ ಮಿಲಿಟರಿ ಆಸ್ಪತ್ರೆಯಲ್ಲಿ ಬ್ರಿಟಿಷ್ ರೆಡ್‍ಕ್ರಾಸ್ ನರ್ಸ್ ಆಗಿ ಸೇರಿ ಸೇವೆ ಮಾಡಿದಳು. ೧೯೧೮ ರಲ್ಲಿ YMCA War Emergency Committee ಯ ಕಾರ್ಯದರ್ಶಿಯಾಗಿ, ಲಂಡನ್‍ನಲ್ಲಿ “ಧ್ವಜ ದಿವಸ” (Flag Day) ನಡೆದ ನಂತರ “ಭಾರತೀಯ ದಿವಸ” (India day)ದ ಆಚರಣೆಯನ್ನು ಮಾಡಿ, ೫೦೦೦೦ ವಸತಿಗೃಹಗಳನ್ನು ಗಾಯಗೊಂಡ ಭಾರತೀಯ ಸೈನಿಕರು ವಾಸಕ್ಕೆ ಒದಗಿಸಲು ಕಾರಣಳಾದಳು.
ಯುದ್ಧ ಮುಗಿದ ಮೇಲೆ (೧೯೧೮) ಆಂಗ್ಲ ಸರ್ಕಾರ "The Representation of the People Act" ಕಾನೂನು ಜಾರಿಯಾದಾಗ ೩೦ ವರ್ಷ ಮೀರಿದ ಮಹಿಳೆಯರಿಗೂ, ೧೯೨೮ ರ “Franchise Act” ಕಾನೂನು ಹೊರಬಂದಾಗ ೨೧ ವರ್ಷ ಮೀರಿದ ಮಹಿಳೆಯರಿಗೂ ಮತದಾನದ ಹಕ್ಕು ಬಂತು.

ಈ ದೇಶದಲ್ಲಿ ಇಂದಿನ ಸಮಾಜದಲ್ಲಿ ಮಹಿಳೆಯರಿಗೆ ಇರುವ ಹಕ್ಕು ಮತ್ತು ಸ್ವಾತಂತ್ರಕ್ಕೆ ಕಾರಣ ಸೋಫಿಯಾ ಮತ್ತು ಅವಳ ಸಂಗಡಿಗರ ಹೋರಾಟವೇ ಕಾರಣ ಅನ್ನುವುದರಲ್ಲಿ ಸಂದೇಹವೇ ಇಲ್ಲ.
೨೨/೦೮/೧೯೪೮ ರಲ್ಲಿ ಸೋಫಿಯಾ ಬಕಿಂಗ್‍ಹ್ಯಾಮ್‍ಶೈರ್ನಲ್ಲಿರುವ ಪೆನ್ನ್ ಊರಿನಲ್ಲಿ ಅವಳ ತಂಗಿಯ ಮನೆಯಲ್ಲಿ ತನ್ನ ೭೨ನೇ ವಯಸ್ಸಿನಲ್ಲಿ ನಿಧನಾದಳು.  ರಾಜಕುಮಾರಿ ಸೋಫಿಯಾಳ ಅಂತ್ಯಕ್ರಿಯೆ Golders Green crematorium ನಲ್ಲಿ ೨೬/೦೮/೧೯೪೮ ರಂದು ನಡೆಯಿತು. ಅವಳ ಕೊನೆ ಇಚ್ಛೆ ತನ್ನ ಅಂತಕ್ರಿಯೆಯು ಸಿಖ್ ಪದ್ಧತಿಯಲ್ಲಿ ನಡೆಯಬೇಕೆಂದು ಇತ್ತು. 

ಸೋಫಿಯಾಗೆ ದೊರೆತ ಮರಣೋತ್ತರ ಮಾನ್ಯತೆಗಳು ಅನೇಕ; ರಾಯಲ್ ಮೇಲ್‍ನವರ "Votes for Women" ದಿನಾಚರಣೆಯಲ್ಲಿ ೧೫/೦೨/೨೦೧೮ ಸೋಫಿಯಾ The Suffragette ಪತ್ರಿಕೆಯನ್ನು ಮಾರುತ್ತಿರುವ ಚಿತ್ರವುಳ್ಳ ಅಂಚೆಚೀಟಿ (postage stamp) ಬಿಡುಗಡೆ ಆಯಿತು.

ಏಪ್ರಿಲ್ ೨೦೧೮ ರಲ್ಲಿ ಪಾರ್ಲಿಮೆಂಟ್ ಮುಂದಿರುವ ಕಂಬದ ಮೇಲೆ ಸೋಫಿಯಾಳ ಚಿತ್ರ ಮತ್ತು ಹೆಸರನ್ನು ಕೆತ್ತಲಾಗಿದೆ.
A Princess' Guide to Burning Issue ಅನ್ನುವ ಮಕ್ಕಳಿಗಾಗಿ ಮಾಡಿದ ನಾಟಕ ಅನೇಕ ಶಾಲೆಗಳಲ್ಲಿ ಪ್ರದರ್ಶಿಸಲ್ಪಟ್ಟಿದೆ.
English Heritage ನವರು ಹ್ಯಾಂಪ್ಟನ್ ಕೋರ್ಟ್‍ನ ಹತ್ತಿರದ ಮನೆಯ ಮೇಲೆ ನೀಲಿ ಫಲಕದ (Blue Plaque) ಅನಾವರಣೆಯನ್ನು ೨೦೨೩ರಲ್ಲಿ ಮಾಡಿದರು.

ಸೋಫಿಯಾ ಜೀವನ ಚರಿತ್ರೆಯ ಬಗ್ಗೆ ಅನೇಕ ಲೇಖನಗಳು ಮತ್ತು ಪುಸ್ತಕಗಳು ಪ್ರಕಟವಾಗಿವೆ. ಉದಾಹರಣೆಗೆ, ಅನಿತಾ ಆನಂದ್ ಅವರ Suffragette Revolutionary (೨೦೧೫, ISBN ೯೭೮೧೪೦೮೮೩೫೪೫೬).

ಕೊನೆಯ ಮಾತು: ಇಂಗ್ಲೆಂಡಿನಲ್ಲಿ ಮಹಿಳೆಯರಿಗೆ ಮತದಾನ ಮಾಡುವ ಹಕ್ಕು ೧೯೨೮ರಲ್ಲಿ, ಅದೂ ೨೧ ವರ್ಷಕ್ಕೆ ಮೀರಿದವರಿಗೆ ಮಾತ್ರ ದೊರೆತಿತ್ತು; ದಕ್ಷಿಣ ಭಾರತದಲ್ಲಿ, ಮೈಸೂರು ರಾಜ್ಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾರಾಜರು ೧೯೨೩ ರಲ್ಲಿಯೇ ಮಹಿಳೆಯರಿಗೆ ಈ ಹಕ್ಕನ್ನು ಕೊಟ್ಟಿದ್ದರ ಮಹತ್ವವನ್ನು ಇಲ್ಲಿ ಮರೆಯಬಾರದು.

- ರಾಮಮೂರ್ತಿ ಎಚ್ ಎನ್.
ಕಾಂಗಲ್‍ಟನ್, ಚೆಶೈರ್.

********************

4 thoughts on “ರಾಜಕುಮಾರಿ ಸೋಫಿಯಾ ದುಲೀಪ್ ಸಿಂಗ್ (೧೮೭೬-೧೯೪೮) – ರಾಮಮೂರ್ತಿ ಎಚ್ ಎನ್.

  1. ಅದ್ಭುತ ಲೇಖನ, ರಾಮಮೂರ್ತಿಯವರೇ.

    ಮರೆತುಹೋದ ಇತಿಹಾಸದ ಪುಟಗಳಿಂದ ಅದ್ಭುತ ವ್ಯಕ್ತಿಗಳ ಜೀವನವನ್ನು ನಮ್ಮೆದುರು ನಿಲ್ಲಿಸಿ — ‘ಇವರೆಲ್ಲ ನಮ್ಮವರೇ, ಇವರೆಲ್ಲ ಪ್ರೇರಣಾದಾಯಕರು’ ಎಂದು ನೆನಪಿಸುತ್ತಾರೆ. ರಾಮಮೂರ್ತಿಯವರು ಗಮನಹರಿಸುವ ವಿಷಯಗಳು ಕೇವಲ ಇತಿಹಾಸವಾಗಿದ್ದರೆ ಲೇಖನಗಳಲ್ಲ, ಒಳಸುಳಿವುಗಳಿವೆ, ಸೂಕ್ಷ್ಮತೆಯಿದೆ. ರಾಜಕುಮಾರಿ ಸೋಫಿಯಾದ ಬದುಕು, ಅವಳ ಹೋರಾಟ, ಅವಳ ಅಚಲ ನಿಲುವುಗಳನ್ನು ವಿವರಿಸುತ್ತಾರೆ. ಅಲ್ಲದೆ, ಮೈಸೂರು ರಾಜ್ಯವು ೧೯೨೩ ರಲ್ಲೇ ಮಹಿಳೆಯರಿಗೆ ಮತದಾನದ ಹಕ್ಕು ನೀಡಿದ ಹಿನ್ನೆಯನ್ನು ಲೇಖಕರು ಕೊನೆಯಲ್ಲಿ ಜೋಡಿಸಿರುವುದು, ಭಾರತದ ಇತಿಹಾಸದ ಒಳನೋಟಕ್ಕೂ ಬೆಳಕು ಚೆಲ್ಲುತ್ತದೆ.

    ‘ಅನಿವಾಸಿ’ಗೆ ಬರೆಯುತ್ತಿರುವುದು ನಮ್ಮ ಭಾಗ್ಯ. ಮುಂದಿನ ಬಾರಿ ಅವರು ಯಾರನ್ನು ಪರಿಚಯಿಸುತ್ತೀರೋ ಅನ್ನುವ ಕುತೂಹಲ ಶುರುವಾಗಿದೆ! ನಿಮ್ಮ ಎಲ್ಲ ಬರಹಗಳನ್ನು ಒಟ್ಟುಗೂಡಿಸಿ ಒಂದು ಪುಸ್ತಕವಾಗಿ ಹೊರತಂದರೆ ಅದು ನಮ್ಮ ಸಾಹಿತ್ಯಲೋಕಕ್ಕೆ ಅಮೂಲ್ಯ ಕೊಡುಗೆ ಆಗುತ್ತದೆ.

    – ಕೇಶವ

    Like

  2. ರಾಮಮೂರ್ತಿಯವರ ಈ ಲೇಖನದಲ್ಲಿ ಈಕೆ ಅಪರೂಪದ ದಿಟ್ಟ ರಾಜಕುಮಾರಿ ಸೋಫಿಯ ದುಲೀಪಸಿಂಗ ಅವರ ಸ್ವಾರಸ್ಯಕರ ಇತಿಹಾಸವನ್ನು ತೆರೆದಿಟ್ಟಿದ್ದಾರೆ. ಅವಳ ಹೆಸರನ್ನು ಕೇಳಿದ್ದರೂ ಇಷ್ಟೊಂದು ವಿವರಗಳು ಗೊತ್ತಿರಲಿಲ್ಲ. ವಿಕ್ಟೊರಿಯಾ ರಾಣಿ ಆಶ್ರಯ ಕೊಟ್ಟಿದ್ದರೂ ಬ್ರಿಟಿಷರ ತಾರತಮ್ಯ ಎದ್ದು ಕಾಣುತ್ತದೆ. ಎಮಿಲಿ ಪ್ಯಾಂಕ್ ಹರ್ಸ್ಟ್ ಹೆಸರು ಮನೆಮಾತಾಗಿದ್ದರೂ ಅಷ್ಟೇ ಮಹತ್ವದ ಸಫ್ರಾಜೆಟ್ ಮಹಿಳೆಯ ಇತಿಹಾಸ ಅಷ್ಟು ಪ್ರಸಿದ್ಧವಾಗಿರಲಿಲ್ಲ. ಆಕೆಯ ಸೆನ್ಸಸ್ ಪಾತ್ರದ ಮೇಲೆ ಬರೆದ ಪ್ರತಿಭಟನೆಯ ಚಿತ್ರವಂತೂ ಅತಿ ಮಹತ್ವದ ದಾಖಲೆ. ಅದನ್ನು ಇಲ್ಲಿ ಪ್ರಕಟಿಸಿದ್ದು ಶ್ಲಾಘನೀಯ. Well illustrated article produced at a short notice with care and effort. Commendable.. ಶ್ರೀವತ್ಸ ದೇಸಾಯಿ

    Like

    • Ramamurthy replies:
      ವಂದನೆಗಳು ಶ್ರೀವಾಸ್ತ
      ಮಹಿಳೆಯರ ಹಕ್ಕುಗಳಿಗೆ ಇಲ್ಲಿ ಹೊಡದಾಡಬೇಕಾಯಿತು ಆದರೆ ನಮ್ಮ ಮೈಸೂರು ಮಹಾರಾಜರು ಯಾವ ಹೋರಾಟ ಇಲ್ಲದೆ ಮಹಿಳೆಯರಿಗೆ ಈ ಹಕ್ಕನ್ನು ಕೊಟ್ಟಿದ್ದು ಎಲ್ಲಾ ಕನ್ನಡಿಗರು ಹೆಮ್ಮ ಪಡುವಂತಹ ವಿಷಯ
      I wrote this in the comments but not to my surname it vanished!
      Can you insert it please

      Like

      • ಧನ್ಯವಾದಗಳು, ರಾಮಮೂರ್ತಿಯವರೇ.
        ಅಷ್ಟೇ ಅಲ್ಲ Faraday house (Hampton Court )ನಲ್ಲಿದ್ದಾಗ ಅವರು ವಿದ್ಯುತ್ತಿಗೆ ಸಹ ಬಡಿದಾಡಿದರಂತೆ! Office of Works files show tensions between the Duleep Singh family and the authorities, as they requested modern conveniences like electric lights, hot water and separate bathrooms.(nationalarchives.gov.uk ಕೃಪೆಯಿಂದ. ಇಲ್ಲಿ ಇನ್ನಷ್ಟು ಮಾಹಿತಿ ಇದೆ.)ಮೈಸೂರಲ್ಲಿ ಅನತಿ ಸಮದಲ್ಲೇ ಶಿವಸಮುದ್ರದಿಂದ ಬಂದ ವಿದ್ಯುತ್ತು ಬೀದಿ ದೀಪ ಹತ್ತಿಸಿತ್ತು! ಆಕೆ 1902 ರಲ್ಲಿ ಭಾರತ ಬಂದಾಗ ನೋಡಿದ ಜನರ ಸ್ಥಿತಿ, ಸ್ವಾತಂತ್ರ್ಯ ಚಳುವಳಿಯ ಗೋಖಲೆಯವರ ಮಾತು ಮನಸ್ಸಿನ ಮೇಲೆ ಆಳವಾದ ಪರಿಣಾಮ ಮಾಡಿತಂತೆ.

        Liked by 1 person

Leave a Reply to shrivatsadesai Cancel reply

Your email address will not be published. Required fields are marked *