ಲ್ಯಾಂಕಶಾಯರಿನ ಭಾರತೀಯ ನೃತ್ಯ ಪರಂಪರೆ

ನಮ್ಮ ಕನಸನ್ನು ಮಕ್ಕಳ ಮೂಲಕ ನನಸಾಗಿಸುವುದು ಒಂದು ಪ್ರಶ್ನಾರ್ಹ ಪ್ರಯತ್ನ ಅನ್ನುತ್ತಾರೆ.  ಆದರೆ ಮಕ್ಕಳ ಶ್ರಮದ ಯಶಸ್ಸು ತಾಯ್ತಂದೆಯರಿಗೆ ಹೆಮ್ಮೆಯ ವಿಷಯ ಅನ್ನುವುದರಲ್ಲಿ ಎರಡು ಮಾತಿಲ್ಲ. 

ನಮಸ್ಕಾರ. ವಿಶ್ವಾವಸು ಸಂವತ್ಸರದ ಹೊಸವರ್ಷದ ಶುಭಾಶಯಗಳು. ಈ ಸಲದ ಆವೃತ್ತಿಯಲ್ಲಿ ನಮ್ಮ ಕೌಂಟಿಯ ನೃತ್ಯ ಶಾಲೆಗಳಲ್ಲಿ ಒಂದಾದ ಅಭಿನಂದನಾ ಡಾನ್ಸ್ ಅಕ್ಯಾಡೆಮಿಯ ಮತ್ತು ಅದರ ಸಂಚಾಲಕರಾದ ಶ್ರೀಮತಿ ಅಭಿನಂದನಾ ಕೋದಂಡ ಅವರ ಒಂದು ಕಿರು ಪರಿಚಯ – ವಿದ್ಯಾರ್ಥಿಯೊಬ್ಬಳ ಪಾಲಕರ ಅನುಭವದ ಸಹಿತ.  ಓದಿ ತಮ್ಮ ಅಭಿಪ್ರಾಯವನ್ನು ತಿಳಿಸುವುದು. ಧನ್ಯವಾದಗಳೊಂದಿಗೆ – ಲಕ್ಷ್ಮೀನಾರಾಯಣ ಗುಡೂರ (ವಾರದ ಸಂಪಾದಕ).
****************************
ಅಭಿನಂದನಾ ಡಾನ್ಸ್ ಅಕ್ಯಾಡೆಮಿ – ನಾಟ್ಯರಸ

*********************************

ಇಂಗ್ಲಂಡಿನಲ್ಲಿ ನನ್ನ ಕಲಿಕೆಯ ಸುತ್ತನ್ನು (training rotation) ಮುಗಿಸಿ ಪ್ರೆಸ್ಟನ್ನಿಗೆ ಬಂದು ಕನ್ಸಲ್ಟಂಟ್ ಆಗಿ ಸೇರಿದಾಗ ನಮ್ಮ ಮಗಳಿಗೆ ೩ ವರ್ಷ. ಎಲ್ಲಾ ಅನಿವಾಸಿ ಭಾರತೀಯರಂತೆ ನಾವೂ ನಮ್ಮೂರಿನಲ್ಲಿರುವ ಹಿಂದಿನ ಪೀಳಿಗೆಗೂ, ಇಲ್ಲಿ ಹುಟ್ಟಿರುವ ಮುಂದಿನ ಪೀಳಿಗೆಗೂ ಮಧ್ಯ ಪೂರ್ವ – ಪಶ್ಚಿಮಗಳಿಗೆ ಸೇತುವೆಯಾಗಿ ಬದುಕುವ ಜೀವನದ ಹಂತದಲ್ಲಿ ಇದ್ದೆವು ಅನ್ನಿ. ಆದಷ್ಟು ಭಾರತೀಯ ಪರಂಪರೆಯ ಕುರುಹುಗಳನ್ನು ಮಕ್ಕಳಿಗೆ ಪರಿಚಯಿಸಬೇಕೆಂಬ ಆಶಯವನ್ನು ನಮ್ಮ ಜೀವನದ ಓಟದ ಜೊತೆಗೇ ಹೊತ್ತುಕೊಂಡು ಓಡುತ್ತಿದ್ದೆವು.  ಮಕ್ಕಳು ಇಲ್ಲಿಯ ಸಂಗೀತ, ನೃತ್ಯ, ಸಂಸ್ಕೃತಿಯನ್ನು ಹೇಗೋ ಕಲಿತುಬಿಡುತ್ತವೆ.  ಭಾರತೀಯ ಸಂಗೀತ – ನೃತ್ಯದ ಹುಚ್ಚು ಹತ್ತಿಸಬೇಕೆಂದರೆ, ಮೊದಲು ನಮಗೆ ಆ ಹುಚ್ಚಿರಬೇಕು, ಹತ್ತಿರದಲ್ಲಿ ಎಲ್ಲಾದರೂ ಕಲಿಯುವ ಅವಕಾಶವಿರಬೇಕು ಮತ್ತು ಛಲ ಬಿಡದೆ ವಾರವೂ ಪ್ರತಿ ತರಗತಿಗೆ ಕರೆದೊಯ್ಯುವ ತಾಳ್ಮೆಯಿರಬೇಕು. ಇದು ಬೀಜ ಬಿತ್ತಿ, ನೀರು-ಗೊಬ್ಬರ ಹಾಕಿ ಸಸಿ ಏಳುವವರೆಗಿನ ಹಂತ ಅಷ್ಟೇ.  ಅಲ್ಲಿಂದ ಮುಂದೆ ಅದು ಬೆಳೆದು ಮರವೂ ಆಗಬಹುದು ಇಲ್ಲವೇ, ಮುರುಟಿ ಮಾಯವೂ ಆಗಬಹುದು.  ಆರಂಭದಲ್ಲಿ ಆಟ-ಸಂಗೀತ-ನೃತ್ಯ ಅಲ್ಲದೇ ಇನ್ನೂ ಇತರ ಪಠ್ಯೇತರ ತರಗತಿಗಳಿಗೆ ವಾರದಲ್ಲಿ ೮ ಬಾರಿ (ಶನಿವಾರ ಎರಡು!) ಕರೆದೊಯ್ದರೂ, ೧೦ನೆಯ ತರಗತಿಗೆ ಬರುವ ಹೊತ್ತಿಗೆ ಒಂದೆರಡು ಮಾತ್ರ ಉಳಿಯುತ್ತವೆ ಅನ್ನುವುದು ಸತ್ಯ; ಎಲ್ಲಾ ಅನಿವಾಸಿ ತಂದೆ-ತಾಯಂದಿರ ಅನುಭವವೂ ಹೆಚ್ಚು ಕಡಿಮೆ ಇದೇ ಇರಲಿಕ್ಕೆ ಸಾಕು. 

ಹೀಗಿರುವಾಗ, ಪ್ರೆಸ್ಟನ್ನಿನಲ್ಲಿ ಕೇಳಿಬಂದ ಹೆಸರು ಅಭಿನಂದನಾ. ಶ್ರೀಮತಿ ಅಭಿನಂದನಾ ಕೋದಂಡ ಅವರು ನಡೆಸುತ್ತಿದ್ದ ಕುಚಿಪುಡಿ ತರಗತಿಗಳಿಗೆ ನಮ್ಮ ಪರಿಚಯದ ಹಲವರ ಮಕ್ಕಳು ಹೋಗುತ್ತಿದ್ದದ್ದು ತಿಳಿದು, ನಮ್ಮ ಮಗಳನ್ನೂ ಸೇರಿಸಿದೆವು. ಅಭಿನಂದನಾ ಅವರು ಮಕ್ಕಳೊಂದಿಗೆ ನಡೆದುಕೊಳ್ಳುತ್ತಿದ್ದ ರೀತಿ, ಶಿಸ್ತು, ಕಲಿಸುವ ಶೈಲಿ ಇವೆಲ್ಲ ಕ್ರಮೇಣ ನಮಗೂ, ಮುಖ್ಯವಾಗಿ ಮಗಳಿಗೂ ಮೆಚ್ಚುಗೆಯಾಗಿ ಅವಳ ಕಲಿಕೆ ನಿಲ್ಲದೆ ಮುಂದುವರೆಯಿತು. ವರ್ಷದಲ್ಲಿ ಹಲವಾರು ಚಿಕ್ಕಪುಟ್ಟ ಪ್ರದರ್ಶನಗಳೊಂದಿಗೆ ಶುರುವಾಗಿದ್ದು ಅದೊಂದು ನಮ್ಮ ಜೀವನಕ್ರಮವೇ ಆಗಿಹೋಯಿತೆನ್ನಬಹುದು. ವಾರದ ತರಗತಿಗಳು ಅಷ್ಟೇ ಅಲ್ಲದೇ ಸಂಕ್ರಾಂತಿ, ೨೬ ಜನವರಿಯ ಗಣತಂತ್ರ ದಿವಸ, ಯುಗಾದಿ, ೧೫ ಆಗಸ್ಟ್, ದೀಪಾವಳಿ, ಹೊಸ ವರ್ಷ ಹೀಗೆ ಅನೇಕ ಕಾರ್ಯಕ್ರಮಗಳಿಗೆ ತಯಾರಿ ನಮ್ಮನ್ನೂ, ಮಕ್ಕಳನ್ನೂ ವಾರಾಂತ್ಯದಲ್ಲಿ ಸಮಯವೇ ಇಲ್ಲದಂತೆ ಇಟ್ಟವು. ಎಲ್ಲ ಪಾಲಕರಂತೆ ನಮ್ಮ ಜೀವನದ ಪರಿಕ್ರಮಣವೂ ಮಕ್ಕಳ ಚಟುವಟಿಕೆಗಳ ಸುತ್ತಲೇ ಸುತ್ತುವಂತಾಯಿತು. ಹೀಗಿದ್ದರೂ, ಪ್ರತಿಯೊಂದು ಕಾರ್ಯಕ್ರಮದ ಯಶಸ್ಸು ನಮ್ಮ ಹೆಮ್ಮೆಯನ್ನು ಹೆಚ್ಚಿಸಿತೆಂದೇ ಹೇಳಬಹುದು.

ಕುಚಿಪುಡಿಯ ನೃತ್ಯ ಪ್ರಕಾರದಲ್ಲಿ, ವಿದ್ಯಾರ್ಥಿಗೆ ಮೊದಲಿನಿಂದ ಕಾಲ್ಗೆಜ್ಜೆ ದೊರೆಯದು. ಅದನ್ನು ವಿದ್ಯಾರ್ಥಿ ಗಳಿಸಬೇಕು. ಅಂದರೆ, ಒಂದು ಹಂತ ತಲುಪಿದಾಗ ಮಕ್ಕಳಿಗೆ ಗುರುವಿನಿಂದ ಗೆಜ್ಜೆ ಕಟ್ಟಿಸಲಾಗುತ್ತದೆ, ನಟರಾಜನ ಪೂಜೆಯೊಂದಿಗೆ. ಇದುವರೆಗೆ ಗುಂಪಿನಲ್ಲಿ ನಾಟ್ಯಪ್ರದರ್ಶನ ಮಾಡಿದ್ದ ವಿದ್ಯಾರ್ಥಿ, ಮೊದಲ ಬಾರಿಗೆ ಸ್ಪಾಟ್‍ಲೈಟ್‍ನಲ್ಲಿ ಬರುತ್ತಾರೆ; ಸೋಲೋ ನೃತ್ಯ ಮಾಡುತ್ತಾರೆ; ಮಾಡಬಲ್ಲೆನೆಂಬ ಆತ್ಮಸ್ಥೈರ್ಯ ಗಳಿಸುತ್ತಾರೆ. ನಾನು ನೋಡಿದಂತೆ, ಮಕ್ಕಳು ನೃತ್ಯದ ಬಗ್ಗೆ ಹೆಚ್ಚು ಗಮನ ಕೊಡುವುದು ಅಲ್ಲಿಂದಲೇ. ಅಲ್ಲಿಂದ ಪ್ರತಿ ಹಾವ-ಭಾವದಲ್ಲಿ, ಪ್ರತಿಯೊಂದು ಪ್ರದರ್ಶನದಲ್ಲಿ ಮನಸುಕೊಟ್ಟು ಮಾಡಿದ ಪ್ರಯತ್ನದ ಫಲ ಕಾಣಲು ಶುರುವಾಗುತ್ತದೆ.

ಅಲ್ಲಿಂದ ಮುಂದಿನ ಹಂತ ರಂಗಪ್ರವೇಶದ್ದು. ಭರತನಾಟ್ಯದಿಂದಾಗಿ ಆರಂಗೇಟ್ರಮ್ ಎಂದು ಹೆಚ್ಚು ಪ್ರಚಲಿತವಾಗಿರುವ ಈ ಹಂತ, ವಿದ್ಯಾರ್ಥಿಯ ಕಲಿಕೆ ಪೂರ್ಣವಾಯಿತು ಅನ್ನುವುದಕ್ಕೆ ಸಮ. ಸುಮಾರು ೩ ಗಂಟೆಗಳ ಕಾಲ ನಡೆಯುವ ಈ ಕಾರ್ಯಕ್ರಮ ವಿದ್ಯಾರ್ಥಿಯ ಪರಿಶ್ರಮವನ್ನು ಒರೆಗೆ ಹಚ್ಚುತ್ತದೆ. ಲೈವ್ ಹಾಡುಗಾರ ಮತ್ತು ಸಂಗೀತಗಾರರೊಂದಿಗೆ ನಡೆಯುವ ನೃತ್ಯ ವಿದ್ಯಾರ್ಥಿಯನ್ನು, ಅಲ್ಲಾಗಬಹುದಾದ ಹೆಚ್ಚು-ಕಡಿಮೆಗಳಿಗೆ ಹೊಂದಿಕೊಂಡು ಕಾರ್ಯಕ್ರಮವನ್ನು ಸರಿಯಾಗಿ ನಡೆಸಿ, ಮುಗಿಸುವ ಚಾಣಾಕ್ಷತೆಯನ್ನು ಕಲಿಸುತ್ತದೆ. ಕಾರ್ಯಕ್ರಮಕ್ಕೆ ಸುಮಾರು ೧೦-೧೨ ತಿಂಗಳ ಮುಂಚೆ ಆರಂಭವಾಗುವ ರಂಗಪ್ರವೇಶದ ತಯಾರಿ, ವಿದ್ಯಾರ್ಥಿ ಮತ್ತು ಗುರು ಇಬ್ಬರ ಸಮಯ, ಸಾಮರ್ಥ್ಯ ಎರಡರಲ್ಲೂ ಸಂಪೂರ್ಣ ಹೊಂದಾಣಿಕೆ, ತಾಳ್ಮೆ ಮತ್ತು ಸಮರ್ಪಣೆಯನ್ನು ನಿರೀಕ್ಷಿಸುತ್ತದೆ. ಪಾಲಕರಿಗೆ ಇದೊಂದು ಸಣ್ಣ ಪ್ರಮಾಣದಲ್ಲಿ ಮದುವೆಯನ್ನೇ ಮಾಡಿದ ಅನುಭವ – ತಯಾರಿ, ಖರೀದಿ ಎಲ್ಲದರಲ್ಲೂ. ಕೊನೆಯ ವಾರವಂತೂ, ದಿನಕ್ಕೆ ೮-೧೦ ಗಂಟೆಗಳ ಕಾಲ ಸಂಗೀತಗಾರರೊಂದಿಗೆ ನಡೆಯುವ ನೃತ್ಯದ ಅಭ್ಯಾಸ ನೋಡುವ ಪಾಲಕರಿಗೇ ಬೆವರಿಳಿಸುತ್ತದೆ! ಎಲ್ಲ ಯಶಸ್ವಿಯಾಗಿ ಮುಗಿದು, ನೆರೆದ ಪ್ರೇಕ್ಷಕವೃಂದದ ಚಪ್ಪಾಳೆಗಳನ್ನು ಕೇಳಿದಾಗ ಆಗುವ ಹೆಮ್ಮೆಯ ಅನುಭವ ಬರೆದು ಹೇಳಿ ವರ್ಣಿಸಲಾಗದು.

ಮೇಲಿನ ಎರಡು ಹಂತಗಳಲ್ಲೂ ಒಬ್ಬೊಬ್ಬಳು ಮಗಳು ಇರುವ ನಮಗೆ, ಈಗ ಕುಚಿಪುಡಿಯಿಲ್ಲದ ವಾರ ಏನೆಂದೇ ನೆನಪಿಲ್ಲ. ಯೂನಿವರ್ಸಿಟಿಯಲ್ಲಿರುವ ದೊಡ್ಡ ಮಗಳು ಕಲಿತ ವಿದ್ಯೆಯನ್ನು ಉತ್ಸಾಹದಿಂದ ಅಲ್ಲೂ ಪ್ರದರ್ಶನ ಮಾಡುತ್ತಿದ್ದಾಳೆ. ಕುಚಿಪುಡಿ ಕಲಿಸಿದ ಶಿಸ್ತು, ಏಕಾಗ್ರತೆಯ ಅರಿವು ಜೀವನಕ್ಕೆ ಎಷ್ಟು ಉಪಯುಕ್ತ ಎನ್ನುವ ಅರಿವು ಅವಳಿಗಿದೆ. ಇದಕ್ಕೆ ಕಾರಣವಾದ ಗುರು ಶ್ರೀಮತಿ ಅಭಿನಂದನಾ ಕೋದಂಡ ಮತ್ತು ಅವರು ನಡೆಸುವ ಅಭಿನಂದನಾ ಡಾನ್ಸ್ ಅಕ್ಯಾಡೆಮಿಗೆ ನಮ್ಮ ಧನ್ಯವಾದಗಳು.

ಅಭಿನಂದನಾ ಡಾನ್ಸ್ ಅಕ್ಯಾಡೆಮಿ (ADA):
ಸಧ್ಯಕ್ಕೆ ಇಂಗ್ಲೆಂಡಿನಲ್ಲಿ ಮುಂಚೂಣಿಯಲ್ಲಿರುವ ಭಾರತೀಯ ಶಾಸ್ತ್ರೀಯ ನಾಟ್ಯ ಕಲಿಸುವ ಶಾಲೆಗಳಲ್ಲಿ ಒಂದು. ೨೦೦೭ರಲ್ಲಿ ಆರಂಭವಾದ ಈ ಶಾಲೆ ತನ್ನ ಶಿಸ್ತು ಮತ್ತು ಕಲಿಕೆಯ ವಿಧಾನದಿಂದಾಗಿ ಹಿರಿಮೆಯನ್ನು ಕಾಯ್ದುಕೊಂಡು ಬಂದಿದೆ. ದಕ್ಷಿಣ ಭಾರತದ ಆಂಧ್ರಪ್ರದೇಶದಲ್ಲಿ ತನ್ನ ಬೇರುಗಳನ್ನು ಹೊಂದಿರುವ ಕುಚಿಪುಡಿ ನೃತ್ಯವನ್ನು ಕಲಿಸುವ ಈ ಶಾಲೆ, ವಾಯವ್ಯ ಇಂಗ್ಲಂಡಿನ ಲ್ಯಾಂಕಶಾಯರ್‌ನ ವಿವಿಧ ಭಾಗಗಳಿಂದ ಬರುವ ವಿದ್ಯಾರ್ಥಿಗಳನ್ನು ಹೊಂದಿದೆ. ಇಲ್ಲಿನ ವಿದ್ಯಾರ್ಥಿಗಳು ಕಲಿತ ವಿದ್ಯೆಯನ್ನು ದೇಶದಾದ್ಯಂತ ಹಲವಾರು ಪ್ರಮುಖ ವೇದಿಕೆಗಳಲ್ಲಿ ಪ್ರದರ್ಶಿಸಿದ್ದಾರೆ – ಉದಾಹರಣೆಗೆ, ಲಂಡನ್ ಇಂಟರ್ನ್ಯಾಶನಲ್ ಆರ್ಟ್ಸ್ ಫೆಸ್ಟಿವಲ್, ಟೂರ್ ಡಿ ಫ್ರಾನ್ಸ್ ಫೆಸ್ಟಿವಲ್ (ಹ್ಯಾಲಿಫ್ಯಾಕ್ಸ್), ಬ್ಯಾರೊ ಫೆಸ್ಟಿವಲ್ ಆಫ್ ಕಲರ್ಸ್, ಲ್ಯಾಂಕಶಾಯರ್ ಎನ್ಕೌಂಟರ್, ಪ್ರೆಸ್ಟನ್ ಗಿಲ್ಡ್ ಮತ್ತು ಹೌಸ್ ಆಫ್ ಕಾಮನ್ಸ್ ದೀಪಾವಳಿ ಉತ್ಸವ.

ಅಭಿನಂದನಾ ಅಕ್ಯಾಡೆಮಿಯ ಮೂಲಮಂತ್ರ ಸಂಪ್ರದಾಯಬದ್ಧ ಕುಚಿಪುಡಿ ನಾಟ್ಯವನ್ನು ಕಲಿಸುವ, ಈ ನೆಲದಲ್ಲಿ ಬೆಳೆಸುವ ಅವಿಚ್ಚಿನ್ನ ಆಶಯ. ವಿದ್ಯಾರ್ಥಿಗಳನ್ನು ಥಿಯರಿ ಮತ್ತು ಪ್ರಾಕ್ಟಿಕಲ್‍ಗಳೆರಡರಲ್ಲೂ ಪ್ರವೀಣರನ್ನಾಗಿಸುವ ಅವಿರತ ಪ್ರಯತ್ನ. ೧೫ ವರ್ಷಗಳಿಂದ ಕಲಿಯುತ್ತಿರುವ ಮೊದಲೆರಡು ತರಗತಿಗಳ ವಿದ್ಯಾರ್ಥಿನಿಯರು ಕಳೆದ ಹಲ ವರ್ಷಗಳಲ್ಲಿ ತಮ್ಮ ರಂಗಪ್ರವೇಶವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಪ್ರತಿಯೊಂದು ರಂಗಪ್ರವೇಶದಲ್ಲೂ ಇದ್ದಂತಹ ಕಾಮನ್ ಫ್ಯಾಕ್ಟರ್ ಅಂದರೆ ಲಂಡನ್ನಿನಿಂದ ಬರುವ ಕರ್ನಾಟಿಕ್ ಸಂಗೀತಗಾರರು – ಹಾಡುಗಾರ ಶ್ರೀ ವಂಶೀಕೃಷ್ಣ ವಿಷ್ಣುದಾಸ್, ವೇಣುವಾದಕ ಶ್ರೀ ವಿಜಯ ವೆಂಕಟ ಮತ್ತು ಮೃದಂಗ ವಾದಕ ಶ್ರೀ ಪ್ರತಾಪ ರಾಮಚಂದ್ರ. ಈ ಮೂವರ ಸಂಗತಿ ರಂಗಪ್ರವೇಶದ ಕಾರ್ಯಕ್ರಮಕ್ಕೆ ಖಳೆ ತರುವುದರಲ್ಲಿ ಸಂದೇಹವೇ ಇಲ್ಲ.

ಕೆಳಗೆ ಕೊಟ್ಟಿರುವ ಹಲವು ಲಿಂಕುಗಳಲ್ಲಿ ವಿದ್ಯಾರ್ಥಿನಿಯರ ಇತ್ತೀಚಿನ ಕಾರ್ಯಕ್ರಮದ ಪಟಚಿತ್ರಗಳೂ, ಯುಟ್ಯೂಬ್ ಲಿಂಕ್ ಇವೆ. ಮಿತ್ರ ರಾಮಶರಣ ಬರೆದಿದ್ದ ನನ್ನ ಮಗಳು ಅದಿತಿಯ ರಂಗಪ್ರವೇಶದ ವಿವರಣೆಯನ್ನೂ ನೋಡಬಹುದು.

ಶೀಮತಿ ಅಭಿನಂದನಾ ಕೋದಂಡ:
ಆಭಿನಂದನಾ ಅವರೊಬ್ಬ ಅತ್ತ್ಯುತ್ತಮ ಕಲಾವಿದೆ, ನೃತ್ಯಸಂಯೋಜಕಿ ಮತ್ತು ಕಲಾನಿರ್ದೇಶಕಿ. ಭಾರತದಲ್ಲಿ ಹೆಸರಾಂತ ಗುರುಗಳಾದ ಶ್ರೀ ಪಸುಮರ್ತಿ ವೆಂಕಟೇಶ್ವರ ಶರ್ಮ, ಶ್ರೀ ವೇದಾಂತಂ ರಾಘವ ಮತ್ತು ಪದ್ಮಭೂಷಣ ಡಾ. ವೆಂಪಟಿ ಚಿನ್ನ ಸತ್ಯಮ್ ಅವರೊಂದಿಗೆ ಕಲಿತಿದ್ದಾರೆ, ಕೆಲಸ ಮಾಡಿದ್ದಾರೆ. ಎಂಟು ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ ಹೆಗ್ಗಳಿಕೆ ಅವರದು. ದೂರದರ್ಶನ, ಈ-ಟಿವಿ, ಸ್ಟಾರ್ ಪ್ಲಸ್, ಜೆಮಿನಿ ಟಿವಿ ಮುಂತಾದ ಹಲವಾರು ಚಾನಲ್‍ಗಳಲ್ಲಿ ಇವರ ನೃತ್ಯಗಳು ಪ್ರದರ್ಶಿತವಾಗಿವೆ. ಭಾರತ, ಯುನೈಟೆಡ್ ಕಿಂಗ್‍ಡಮ್ ಮತ್ತು ಅಮೆರಿಕಗಳಲ್ಲಿ ಪ್ರದರ್ಶನ ಮತ್ತು ಕಮ್ಮಟಗಳನ್ನ ನಡೆಸಿಕೊಟ್ಟಿದ್ದಾರೆ. ತಮ್ಮ ಪ್ರತಿಭೆ ಮತ್ತು ಕೊಡುಗೆಗೆ ಹಲವಾರು ಬಾರಿ ಪ್ರಶಸ್ತಿ ಮತ್ತು ಬಿರುದು ಗಳಿಸಿದ್ದಾರೆ (Indian National Award for dance, Outstanding Young Person, Ugaadi puraskaar, Yuva Tarang puraskaar, Woman of the Future award to name a few). ದಿ. ಶ್ರೀ ಪಿ ವಿ ನರಸಿಂಹ ರಾವ್, ದಿ. ಶ್ರೀ ಅಬ್ದುಲ್ ಕಲಾಮ್ ಆಜಾದ್ ಮುಂತಾದವರಿಂದ ಸನ್ಮಾನಿತರಾಗಿದ್ದಾರೆ.

ಎಮ್ ಬಿ ಎ ಪದವೀಧರೆಯಾಗಿರುವ ಅಭಿನಂದನಾ ಪ್ರೆಸ್ಟನ್ನಿನ ಗುಜರಾತ್ ಹಿಂದು ಸೊಸೈಟಿಯ ಮಂದಿರದಲ್ಲಿ ಮುಖ್ಯಸ್ಥೆಯಾಗಿ ದಿನದ ಕೆಲಸ ಮಾಡುತ್ತಾರೆ. ಇವರ ಯಶಸ್ಸಿನ ಹಿಂದೆ ಪತಿ ಡಾ. ಪ್ರಫುಲ್ ಅವರ ಸಂಪೂರ್ಣ ಸಹಕಾರ ಇರುವುದು ವಿದಿತ.

ಕೈಬೆರಳಿಂದ ಎಣಿಸಬಹುದಾದಷ್ಟು ವಿದ್ಯಾರ್ಥಿಗಳೊಂದಿಗೆ ಅಭಿನಂದನಾ ಅವರ ಮನೆಯಲ್ಲಿ ಶುರುವಾದ ಈ ಶಾಲೆಯ ಸಸಿ ಈಗ ನೂರಕ್ಕೂ ಹೆಚ್ಚು ಮಕ್ಕಳೊಂದಿಗೆ ಬೆಳೆದು ಹೆಮ್ಮರವಾಗಿದೆ. ಹೊಸ ಪೀಳಿಗೆಯ ಯುವ ನಾಟ್ಯಗಾತಿಯರ ಪ್ರದರ್ಶನ ನೋಡಿದಾಗ ಪಾಲಕರ, ವಿದ್ಯಾರ್ಥಿಗಳ ಮತ್ತು ಗುರುವಿನ ಶ್ರಮ ಖಂಡಿತ ಫಲ ಕೊಡುತ್ತಿವೆ ಅನ್ನಿಸುತ್ತದೆ. ಕಾರಣಾಂತರಗಳಿಂದ ನಮಗಿರದ ಅವಕಾಶಗಳು ಮಕ್ಕಳಿಗೆ ದೊರೆತು, ಅವರ ಕನಸು ನನಸಾಗುವುದನ್ನು ನೋಡುವ ನಮ್ಮ ಆಸೆ ಪೂರೈಸುತ್ತಿದೆ. ಇದು ಹೀಗೆಯೇ ಮುಂದುವರೆಯಲಿ ಎಂದು ಹಾರೈಸುವಾ.

- ಲಕ್ಷ್ಮೀನಾರಾಯಣ ಗುಡೂರ.

*********************************

ಗುರು ಶ್ರೀಮತಿ ಅಭಿನಂದನಾ ಕೋದಂಡ

********************************

ಶುಭ ಶುಕ್ರವಾರ (Good Friday) ಪ್ರಯುಕ್ತ ಪ್ರಸಾದ್ ನಂಜನಗೂಡು ಅವರು ರಚಿಸಿರುವ ಕವನ.

ಶುಭ ಶುಕ್ರವಾರ

ಮೇರಿ-ಜೋಸೆಫರ ಮುದ್ದು ಕುವರ
ಯೇಸು ಕ್ರಿಸ್ತ ನೀ ಅಜರಾಮರ

ಭುವಿಗೆ ಇಳಿದೆ ನೀ ಬೆತ್ಲೆಹೇಮಿನಲಿ
ನಡು ರಾತ್ರಿಯ ನೀರವದಿ
ಸತ್ಯವನರಸುತ ದೇಶವ ಸುತ್ತಿದೆ
ಸುವಾರ್ತೆ ನುಡಿದೆ ಸರಳದಲಿ

ತನ್ನಂತೆಯೇ ನೆರೆಯವರನ್ನು
ಪ್ರೀತಿಯಿಂದಲೇ ಕಾಣೆಂದೆ
ಒಂದು ಕೆನ್ನೆಗೆ ಹೊಡೆದವರಿಗೆ ನೀ
ಇನ್ನೊಂದು ಕೆನ್ನೆಯ ತೋರೆಂದೆ

ಶಿಲುಬೆಗೆ ಏರಿಸಿದವರಾ ಪಾಪವ
ಮನ್ನಿಸಿಬಿಡೆಂದ ಶಾಂತಿದೂತ
ಹಿಂಸಿಸಿದವರ ರೋಮ್ ನಗರವ
ಪುನೀತಗೊಳಿಸಿದ ಪವಾಡ ಪುರುಷ

ಕರ್ತನ ವಚನವ ಪಾಲನೆ ಮಾಡಲು
ಭಯ ಆಮಿಷಗಳು ಬೇಕಿಲ್ಲ
ಕ್ರಿಸ್ತನ ಪ್ರೀತಿ ಸಂದೇಶವ ಸಾರಲು
ವಿದ್ಯಾ-ವೈದ್ಯ ಸೇವೆಗಿಂತಿಲ್ಲಾ !

- ಪ್ರಸಾದ್ ನಂಜನಗೂಡು

*******************************

4 thoughts on “ಲ್ಯಾಂಕಶಾಯರಿನ ಭಾರತೀಯ ನೃತ್ಯ ಪರಂಪರೆ

  1. ಅಭಿನಂದನ ಕೋದಂಡ ಎಲೆ ಮರೆಯ ಕಾಯಿಯಂತೆ ಕೂಚಿಪುಡಿಯಂತಹ ವಿಶೇಷ ನೃತ್ಯ ಪರಂಪರೆಯನ್ನು ಮುಂದಿನ ತಲೆಮಾರಿಗೆ ಯಶಸ್ವಿಯಾಗಿ ತಲುಪಿಸುವ ಕಾರ್ಯವನ್ನು ಮಾಡುತ್ತಿರುವುದು ಸ್ತ್ಯುತ್ತರ್ಹ್ಯ. ಅವರ ಕಲಾಸೇವೆ ಹೀಗೆಯೇ ಮುಂದುವರಿಯಲಿ ಎಂಬುದು ನಮ್ಮ ಹಾರೈಕೆ.

    ಪ್ರಸಾದ್ ಅವರ ಕವನ ಯೇಸುವಿನ ಪ್ರೀತಿ, ಕರುಣೆ, ಸಂದೇಶಗಳನ್ನು ಸುಂದರವಾಗಿ ಬಿಂಬಿಸಿದೆ.

    -ರಾಂ

    Like

  2. ಅಭಿನಂದನ ಕೋದಂಡ ಅವರ ಬಗ್ಗೆ ಮತ್ತು ಕುಚಿಪುಡಿ ನೃತ್ಯ ಶಾಲೆಯ ಬಗ್ಗೆ ಕಳೆದ ಎರಡು ದಶಕಗಳಿಂದ ಕೇಳುತ್ತಿದ್ದೇನೆ, ಅವರನ್ನರಿತವರಿಂದಲೂ.ಅವರ ಕೆಳಗೆ ಪಳಗಿದ ವಿದ್ಯಾರ್ಥಿಗಳೆಲ್ಲ ಸುದೈವಿಗಳು, ಗುಡೂರ್ ಅವರ ಸುಪುತ್ರಿ ಸಹ. ಆಕೆಯ ಅರಂಗೇಟ್ರದ ತುಣುಕು ಸಹ ನೋಡಿ ಮೆಚ್ಚಿದ್ದೇನೆ, ಅಂದಿನ ಮುಖ್ಯ ಅತಿಥಿ ಸಹ ಗುರು-ಶಿಷ್ಯೆಯನ್ನು ಅಂದು ಶ್ಲಾಘಿಸಿದ್ದರು. ಇಂದಿನ ಸಂಚಿಕೆಯಲ್ಲಿ ಅಪರೂಪದ ಸಾಮೂಹಿಕ ಕೂಚಿಪುಡಿ ತರಂಗಮ್ ನೋಡಿದ್ದು ಮೊದಲ ಸಲ. ನರ್ತನ ವಿದ್ಯಾರ್ಥಿಗಳ ತಂದೆತಾಯಂದಿರ ತ್ಯಾಗಮತ್ತು ಶ್ರಮದ ವಿವರ ಓದಿ ಅವರಿಗೊಂದು ಸಲಾಂ! ಝಾಕಿರ್ ಹುಸೇನರ ತಬಲಾವನ್ನು ‘ಹಿತ್ತಾಳೆ ತಟ್ಟೆ ಮೇಲಿನ ಡಾನ್ಸ್’ ಗೆ ಸಂಯೋಜಿಸಿದ್ದು ಅಭಿನಂದನಾ ಅವರ ಅಪರೂಪದ ಸಾಧನೆ. ‘ಸಿಂಹನಂದಿನಿ ಡ್ಯಾನ್ಸ್”ಸಹ ಅವರದೊಬ್ಬರದೇ ವಿಡಿಯೋ ನೋಡಿದ್ದು. ಆ ಶಾಲೆಯನ್ನು ಪರಿಚಯಿಸಿದ ಗುಡೂರ್ ಅವರಿಗೆ ಧನ್ಯವಾದಗಳು.

    Like

  3. My comment _

    From Shantha Rao

    Comment for the article

    You are indeed very fortunate to get a dedicated and dynamic teacher like Abhinandana Kodanda for both of your daughters. As a parent you are determined to give a solid foundation of your own culture and heritage to your children. Congratulations that both your daughters have a wonderful teacher like Abhinandana Kodanda who is helping them to reach their full potential and aiming to equip them with knowledge and skills for success in various fields too.

    Enjoyed reading your article especially on this World Heritage day today and celebrating teachers like Abhinandana Kodanda who are working hard and contributing to preserve world’s cultural and natural heritage.

    Like

Leave a reply to shrivatsadesai Cancel reply