ಬೆಕ್ಕಿನ ಬಾಣಂತನ – ಅನುಭವ ಕಥನ

ಬೆಕ್ಕಿನ ಬಾಣಂತನ
ಆಕೆಯ ಹೆಸರು ಐಶ್ವರ್ಯ!
ಮನೆಯ ಹತ್ತಿರವಿದ್ದ ಫಾರೆಸ್ಟ್ ಡಿಪೋ ದಾರಿಯಿಂದ ಹಾದು ಬರುತ್ತಿದ್ದಾಗ ನನ್ನ ಗೆಳತಿ ಮಂಗಲಾ ನನ್ನ ಕರೆದು. 'ಅಮಿತಾ ನಿನಗೆ
ಬೆಕ್ಕಿನ ಮರಿ ಬೇಕಾ?' ಎಂದು ಕೇಳಿದಳು. ಬೆಕ್ಕು, ನಾಯಿ ಎಂದರೆ ನಮ್ಮ ಜನ್ಮದ ಬಂಧುಗಳು. ಅವರನ್ನು ಬೇಡ ಎಂದು ಹೇಳಿ
ನಾನ್ಯಾವ ನರಕ ನೋಡಲಿ?

ಮನೆಯಲ್ಲಿ ಬೆಕ್ಕಿನ ಮರಿ ಇತ್ತಾದರೂ, ಮಂಗಲಾ ತೋರಿಸಿದ ಆ ಪುಟ್ಟ ಪುಟಾಣಿ ಮುದ್ದಿನ ಸೊಕ್ಕನ್ನ ನೋಡಿದ ಮೇಲೆ
ಇಲ್ಲವೆನ್ನಲು ಆಗಲೇ ಇಲ್ಲ.
ದಪ್ಪ ಬಾಲದ ಉದ್ದ ರೋಮಗಳ ಆ ಬೆಕ್ಕಿನ ಮರಿಯನ್ನ ಎತ್ತ್ಕೊಂಡ್ ಬಂದುಬಿಟ್ಟೆ.

ಆದರೆ ಈ ವಿಷಯವನ್ನು ಮನೆಯಲ್ಲಿ ಅಮ್ಮನ ಎದುರು ಹೇಳುವ ಧೈರ್ಯ ನಮ್ಮಲ್ಲಿ ಯಾರಿಗೂ ಇರ್ಲಿಲ್ಲ. ಈ ಸಾಕು ಪ್ರಾಣಿ
ವಿಷಯದಲ್ಲಿ ನನ್ನ ಅಮ್ಮನಿಗೆ ಅವಳದೇ ಆದ ಕೆಲವು ನಿಲುವು, ನಿಯಮಗಳಿದ್ದವು, ಈಗಲೂ ಆಕೆ ಅವನ್ನೆಲ್ಲ ಹಾಗೆಯೇ
ಪಾಲಿಸಿಕೊಂಡು ಬಂದಿದ್ದಾಳೆ.
ಆಕೆಯ ಪ್ರಕಾರ ಸಾಕು ಪ್ರಾಣಿಗಳನ್ನು ಪ್ರಾಣಿಗಳಂತೆಯೇ ನೋಡಬೇಕು, ಅವನ್ನು ಮನುಷ್ಯರಂತೆ ಒಳಮನೆ, ಅಡುಗೆಮನೆ, ಹಾಸಿಗೆ
ತನಕ ಕರೆದೊಯ್ದು ಮುದ್ದು ತೋರಿಸುವ ಅಗತ್ಯ ಇಲ್ಲ. ನೀವು ಹಾಸಿಗೆ ಕೊಡಿ, ಗೋಣಿಚೀಲ ಕೊಡಿ ಅವಕ್ಕೆ ಎರಡೂ ಒಂದೇ!
ಎಂದು ವಾದ ಮಂಡಿಸುವ ನನ್ನ ಅಮ್ಮ,
ಕೊಟ್ಟಿಗೆಯಲ್ಲಿದ್ದ ಬೆಳ್ಳಿ ಭಾಮು, ಪುಟ್ಟಿ, ಆದಿ ಎಂಬ ನಾಮಾಂಕಿತ ಗೋವುಗಳ ಜೊತೆಗೆ ಗಂಟೆಗಟ್ಟಲೆ ಏಕಮುಖ ಸಂವಹನ
ನಡೆಸುತ್ತಿದ್ದಳಾದರೂ, ಬೆಕ್ಕು, ನಾಯಿಗಳ ನೆರಳೂ ಆಕೆಗೆ ಆಗುತ್ತಿರಲಿಲ್ಲ.

ಇಂತಿಪ್ಪ ನನ್ನ ಅಮ್ಮನ ಸಮ್ಮುಖ ಈ ಹೊಸ ಬೆಕ್ಕನ್ನು ತಂದಿದ್ದನ್ನು ಅರುಹಿ ಸಂಭಾಳಿಸೋದು ಯಾರು ಎಂಬುದು ನಮ್ಮ
ಮುಂದಿದ್ದ ದೊಡ್ಡ ಪ್ರಶ್ನೆಯಾಗಿತ್ತು. ಜೊತೆಗೆ ಮನೆಯಲ್ಲಿ ಅದಾಗಲೇ ಗಿಳ್ಳಿ ಎಂಬ ಹಿಂದೆಂದೂ ಒಂದೂ ಇಲಿ ಹಿಡಿಯದ ಬೆಕ್ಕು
ಒಲೆಯ ಹಿಂದೆ, ಕೆಲವೊಮ್ಮೆ ಬೆಚ್ಚಗಿನ ಬೂದಿಯ ಮೇಲೆ ಮಲಗಲೆಂದು ಒಲೆಯನ್ನು ಕೆದರಿ ಹಾಕಿ ಅಮ್ಮನ ಕೋಪ ಕಟಾಕ್ಷಕ್ಕೆ
ಆಗಾಗ್ಯೆ ಗುರಿಯಾಗುತ್ತಿತ್ತು.

ಅಡಿಗೆ ಕೊಣೆಯಲ್ಲಿ ಓಡಾಡೋ ಅದನ್ನು ಅಮ್ಮ ಎಲ್ಲ ರೀತಿಯಿಂದಲೂ ಹೀಯಾಳಿಸುತ್ತಿದ್ದರೆ ಅದು ಮಾತ್ರ ನನಗೂ ಈ
ಬೈಗುಳಿಗೂ ಯಾವ ಸಂಬಂಧ ಇಲ್ಲ ಸರ್ ನಾ ತುಂಬಾ ಒಳ್ಳೆಯವನು ಎನ್ನುತ್ತಾ ಚಕ್ಕುಲಿಯಾಗಿ ಮತ್ತೂ ಗಾಢ ನಿದ್ದೆ
ಮಾಡುತ್ತಿತ್ತು.

ಹೀಗೆ ಹೊತ್ತಲ್ಲದ ಹೊತ್ತಲ್ಲಿ ಮತ್ತೊಂದು ಬೆಕ್ಕು ತಂದು ಮನೆಗೆ ಸೇರಿಕೊಳ್ಳುವ ಬಯಕೆ ಆದಾಗಲೆಲ್ಲ ನಮ್ಮದೊಂದು
ಪುಟ್ಟ ಡ್ರಾಮಾ ಟೀಂ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿತ್ತು. ಅಮ್ಮ ಒಬ್ಬಳು ಬಿಟ್ಟು ಇನ್ನುಳಿದವರಿಗೆಲ್ಲ ಅವರವರ ಪಾತ್ರ,
ಸಂಭಾಷಣೆ ನೀರು ಕುಡಿದಷ್ಟೇ ಸರಳವಾಗಿ ರೂಢಿಯಾಗಿತ್ತು.

ಹಿತ್ತಲ ಬಾಗಿಲಿಂದ ಬೆಕ್ಕನ್ನು ಒಳಗೆ ಬಿಟ್ಟು, ಮುಂದಿನ ಪಡಸಾಲೆಯಲ್ಲಿ ಏನೇನೂ ಗೊತ್ತಿಲ್ಲದವರಂತೆ ಬಂದು ಕೂತು
ಬಿಡುತ್ತಿದ್ದೆವು. ಮನೆಗೆ ಬೆಕ್ಕು ತಾನಾಗೇ ಬಂದು ಸೇರಿದರೆ ಒಳ್ಳೇದು ಎಂದು ಅಮ್ಮನಿಗೆ ಅವರಮ್ಮ ಅದ್ಯಾವುದೋ ಕಾಲದಲ್ಲಿ
ಹೇಳಿದ ಮಾತನ್ನು, ಅದ್ಯಾವುದೋ ಒಂದು ಗಳಿಗೆಯಲ್ಲಿ ನಮ್ಮ ಮುಂದೆ ಹೇಳಿದ್ದೇ ತಪ್ಪಾಗಿತ್ತು. ನಾವು ಹೀಗೆ ಹಿತ್ತಲ
ಬಾಗಿಲಿನಿಂದ ಮನೆಗೆ ಸೇರಿಸಿ ತಾನಾಗೇ ಬೆಕ್ಕು ಬಂತು ಎಂದಾಗ ಉಪಾಯ ಇಲ್ಲದೆ ಪಾಪದ ನನ್ನಮ್ಮ, ಅವರಮ್ಮನ ಮಾತನ್ನು
ನೆನೆದು, ಬೆಕ್ಕನ್ನು ಒಲ್ಲದ ಮನಸಲ್ಲೇ ಆದರೂ ಒಳಗೆ ಸೇರಿಸಿಕೊಳ್ಳಲೇ ಬೇಕಾಗುತ್ತಿತ್ತು.

ಆಮೇಲೆ ಬೆಕ್ಕಿನ ತಲೆಗೆ ಸ್ವಲ್ಪ ತೆಂಗಿನ ಎಣ್ಣೆ ಸವರಿ ಅಡಿಗೆ ಒಲೆಯ ಸುತ್ತ ೩ ಬಾರಿ ಅದನ್ನ ಹಿಡಿದು ತಿರುಗಿಸಿದರೆ ಆ ದಿನದಿಂದ
ಅದು ನಮ್ಮ ಬೆಕ್ಕು.

ಹಾಗೆ ಬಂದ ನಂತರ ಅದಕ್ಕೆ ನಾಮಕರಣವೂ ಆಗಬೇಕಲ್ಲ. ಸಾಮಾನ್ಯವಾಗಿ ಯಾವ ದಿನ ತಂದಿದ್ದೆವೋ ಆ ವಾರದ ಹೆಸರಿನ
ಆರಂಭದ ಅಕ್ಷರದಲ್ಲೇ ಹೆಸರಿಡೋದು ನಮ್ಮ ಮನೆಯ ಅಲಿಖಿತ ನಿಯಮ. ಆದರೆ ಈ ಬಾರಿ ಆ ಬೆಕ್ಕಿನ ಮರಿಯ ಅದಾ,ನಜಾಕತ್,
ನೋಡಿ ಅದಕ್ಕೆ ಐಶ್ವರ್ಯ ಅನ್ನೋ ಹೆಸರಿಟ್ಟಿದ್ದೆವು. ಆಕೆ ನಾವು ಆ ತನಕ ನೋಡಿದ, ನಮ್ಮ ಮನೆಯಲ್ಲಿ ಸಾಕಿದ ಬೆಕ್ಕುಗಳಲ್ಲಿ
ಚಂದ ರೂಪಿನವಳು. ಜಗದೇಕ ಸುಂದರಿ

ಹಾಗೆ ಬಂದು ಮನೆ ಸೇರಿದ ‘ಬಿಲ್ಲಿ’ ನಮ್ಮ ಮನೆಯ ಎಲ್ಲರ ಮುದ್ದು ಮರಿಯಾಗಿಬಿಟ್ಟಳು.
ಆಕೆಯನ್ನ ಹೇಗೆ ಮುದ್ದೆ ಮಾಡಿ ತೀಡಿ ಹೇಗೆ ತಿರುಚಿ ಮಲಗಿಸಿದರು ಆಕೆ ಅದೇ ಆಕಾರದಲ್ಲಿ ಮಲಗಿರುತ್ತಿದ್ದಳು. ಮೈ ಶಾಖ,
ಅಡುಗೆ ಒಲೆಯ ಹಿಂದಿನ ಬಿಸಿಗೆ ಮಲಗುವುದೆಂದ್ರೆ ಅದಕ್ಕೆ ಪ್ರಾಣ...
ದಿನಕಳೆದಂತೆ ಇನ್ನು ಚಂದ, ಮತ್ತೂ ಚಂದ ಆಗುತ್ತಾ ಹೋದಳು. ಅವತ್ತು ಪಪ್ಪನ ಸ್ನೇಹಿತರು ಮನೆಗೆ ಬಂದಾಗ ಐಶ್ವರ್ಯಳನ್ನು
ನೋಡಿ, ಅರೇ ಈ ಬೆಕ್ಕು ಎಲ್ಲಿಂದ ತಂದಿರಿ? ಇದು German long hair ಅನ್ನುವ ತಳಿ, ಭಾರತದಲ್ಲಿ ಅಪರೂಪವೇ, ಎಂದು
ಆಶ್ಚರ್ಯ ಪಟ್ಟಾಗ. ಆಕೆಗೆ ಐಶ್ವರ್ಯ ಎಂದು ಹೆಸರಿಟ್ಟಿದ್ದು ಸಾರ್ಥಕ ಅನಿಸಿತ್ತು.

ಹಾಗೆ ಲಾಸ್ಯ, ಲಾವಣ್ಯಗಳಿಂದ, ನಯ ನಾಜೂಕನ್ನೇ ಹೊದ್ದು ಆಕರ್ಷಣೀಯವಾಗಿ ಇದ್ದ ಐಶ್ವರ್ಯಾ ಹೊಟ್ಟೆ ದಿನದಿಂದ ದಿನಕ್ಕೆ
ದೊಡ್ಡದಾಗುತ್ತಾ ಬಂತು.
ನಮಗೆಲ್ಲರಿಗೂ ಖುಷಿ! ಬೆಕ್ಕು ಮುಚ್ಚಿಟ್ಟ ಮರಿಗಳನ್ನು ಹುಡುಕಿ, ಕಣ್ಣು ಬಿಡುವ ತನಕ ದಿನವೂ ಅವನ್ನು ಎಣಿಸಿ ಮುದ್ದಿಸಿ
ಬರುವ ಕಾತುರದಲ್ಲಿ ನಾವಿದ್ದೆವು. (ನಾವು=ನಾನು,ತಂಗಿ, ಅತ್ತೇ, ಅಜ್ಜಿ, ಪಪ್ಪ, ಚಿಕ್ಕಪ್ಪ)
ಥೇಟ್ ಮುದ್ದಿನ ಮಗಳು ಬಾಣಂತನಕ್ಕೆ ಬಂದಂಥ ಸಂಭ್ರಮ ಅದು.

ಬೆಕ್ಕುಗಳು ಕತ್ತಲಲ್ಲೇ ಮರಿ ಹಾಕುತ್ತವೆ ಹಾಕಿದ ಮೊದಲ ಮರಿ ತಿಂದು ಮುಗಿಸುತ್ತವೆ, ೭ ಜಾಗೆ ಬದಲಿಸುತ್ತವೆ ಹೀಗೆ ಬೆಕ್ಕಿನ
ಬಾಣಂತನದ ಕುರಿತು ಏನೇನೋ ನಂಬಿಕೆಗಳಿವೆ ಐತಿಹ್ಯಗಳೂ ಇವೆ. ಆದರೆ ಅದೆಲ್ಲ ಸುಳ್ಳು ಅನ್ನೋದನ್ನ ನನಗೆ ಮನವರಿಕೆ
ಮಾಡಿಕೊಟ್ಟಿದ್ದೆ ಐಶ್ವರ್ಯ.

ಆ ದಿನ ನಮ್ಮ ಮನೆಯ ಮೂಲೆಯ ಕೋಣೆಯಲ್ಲಿ ಓದುತ್ತ ಕುಳಿತಿದ್ದೆ. ನಮ್ಮ ಮುದ್ದು ಐಶು ಬಂದು ನನ್ ಕಾಲ್ ಮೇಲೆ
ಮಲಗಿತು. ಅದು ಆಕೆಯ ಯಾವತ್ತಿನ ರೂಡಿ. ಆದರೆ ಇವತ್ತು ಪ್ರತಿದಿನದಂತಲ್ಲ ಏನೋ ಹೇಳೋರ್ ಥರ ಪುಸ್ತಕ ವನ್ನ
ಪರಚೋದು ಕಾಲು ಒಮ್ಮೆಲೇ ನೆಟ್ಟಗೆ ಮಾಡಿ ವಿಚಿತ್ರ ದನಿಯಲ್ಲಿ ಕೂಗೋದು. ಮಲಗಿದ ಕಡೆಯೇ ಕಾಲಿನಿಂದ ಕೆದರಿ ಉಗುರು
ಹೊರ ತೆಗೆಯುವುದು ಹೀಗೆಲ್ಲ ವಿಚಿತ್ರ ವರ್ತನೆ ಮಾಡೋಕೆ ಶುರು ಮಾಡಿತು.

ಅದು ಮಾಡ್ತಿರೋದನ್ನ ನೋಡಿದ್ರೆ ಅದಕ್ಕೆ ಹೊಟ್ಟೆನೋವು ಬಂದಿದೆ ಎಂದು ಅನಿಸತೊಡಗಿತ್ತು ಆದರೆ ಆಯಾ ತನಕ ಕೇಳಿದ
ಕಥೆಗಳ ಪ್ರಕಾರ ಮರಿ ಹಾಕಲು ಬೆಕ್ಕಿಗೆ ಕತ್ತಲೆ ಜಾಗ ಬೇಕಲ್ಲ? ಇದನ್ನ ನಾನೇ ಒಯ್ದು ಅಟ್ಟದ ಮೇಲಿದ್ದ ಹಳೇ ಹಿತ್ತಾಳೆ
ಹಂಡೆಯ ಒಳಗೆ ಇಟ್ಟು ಬರಲಾ? ಎದ್ದು ಬಿಡಲ? ಎನ್ನುವ ಯೋಚನೆ ಬಂತಾದರೂ, ನನ್ನ ಮೈಯ್ಯ ಮೇಲಂತೂ ಮರಿ ಹಾಕಲ್ಲ
ಅನ್ನೋ ಒಂದು ವಿಶ್ವಾಸದೊಂದಿಗೆ ಅದನ್ನ ತೊಡೆಯ ಮೇಲೆ ಮಲಗಿಸಿ ಕೊಂಡು ಸುಮ್ಮನೆ ಅದರ ತಲೆ, ಹೊಟ್ಟೆ ಕೊರಳನ್ನ ಸವರುತ್ತ ಕುಳಿತೆ. ಹೀಗೆ ಅಂದುಕೊಂಡು ಗಳಿಗೆಯೂ ಕಳೆದಿಲ್ಲ ನನ್ನ ಅರಿವಿಗೆ ಬರುವ ಮೊದಲೇ ನನ್ನ ತೊಡೆಮೇಲೆ ನಮ್ಮ ಬಿಲ್ಲು, ಮರಿ ಹಾಕಿಬಿಟ್ಟಿತ್ತು. ಆ ಅನುಭವ ಬೇಕೆಂದರೂ ಸಿಗುವಂತದ್ದಲ್ಲ.
ಕೆಲವರಿಗೆ ಹೇಸಿಗೆ, ಕೆಲವರಿಗೆ ಅಯ್ಯೋ ರಾಮ್ ರಾಮನ ನೆನಪು, ಕೆಲವರಿಗೆ ನನ್ ಡ್ರೆಸ್ ಚಿಂತೆ,ನಾನು ಮಾತ್ರ ಆ ಗಳಿಗೆಗಳನ್ನು ಆಸ್ವಾಧಿಸುವುದರಲ್ಲಿ ಮಗ್ನಳಾಗಿದ್ದೆ.
ನನಗೆ ಆ ಅನುಭವ ಎಷ್ಟು ರೋಮಾಂಚನ ತಂದಿತ್ತು ಎಂದರೆ, ಮುಂದಿನ ೩ ಮರಿಗಳನೂ ಅದು ನನ್ ತೊಡೆ ಮೇಲೆ ಹೆತ್ತು, ಕೆಳಗೆ
ನಿಂತು ಹೊಕ್ಕಳ ಬಳ್ಳಿಯನ್ನು ತನ್ನ ಹಲ್ಲಿನಿಂದ ತುಂಡು ಮಾಡಿ ಮತ್ತೆ ತೊಡೆ ಮೇಲೆ ಬಂದು ಮಲಗಿ ಮತ್ತೆ ನೋವು
ಕೊಡುತ್ತಿತ್ತು. ನಾನು ಪ್ರತಿಸಲ ಅದು ಹುಡುಗಿಯಿಂದ ಅಮ್ಮನಾಗಿ ಪರಿವರ್ತನೆ ಗೊಂಡ ರೀತಿಯನ್ನು ಆ ಜವಾಬ್ದಾರಿ
ನಿರ್ವಹಿಸುತ್ತಿದ್ದ ಪರಿ ಕಂಡು ಮೂಕ ವಿಸ್ಮಿತಳಾಗಿದ್ದೆ.

ಯಾರು ಹೇಳಿಕೊಟ್ಟರು ಅದಕ್ಕೆ? ಕಣ್ಣು ಬಿಡದ ಆ ಮರಿಗಳನ್ನು ತನ್ನ ಮೊಲೆಗೆ ಅಂಟಿಸಿಕೊಂಡು ಹಾಲುಣಿಸುವ ಪರಿಯ,
ಮರಿಯ ಮಯ್ಯಸುತ್ತ ಇರೋ ಜಿಡ್ಡು ನೆಕ್ಕಿ ಅದನ್ನ ಶುಭ್ರ ಗೊಳಿಸೋ ಕ್ರಮವ? ಪ್ರಕೃತಿ ಅದೆಷ್ಟು ಅಧ್ಭುತ ಅಲ್ವಾ ?
ನನಗನಿಸಿದ ಮಟ್ಟಿಗೆ ಬೆಕ್ಕಿನ ಬಾಣಂತನದಷ್ಟು ಸ್ವಚ್ಛ ಶುಭ್ರ ಹೆರಿಗೆ, ಮತ್ತ್ಯಾವ ಜೀವಿಯೂ ಮಾಡಿಕೊಳ್ಳಲು ಸಾಧ್ಯವೇ
ಇಲ್ಲವೇನೋ.
ಏನೇ ಹೇಳಿ, ಇದೊಂದು ಜೀವಕಾಲದ ಅಮೂಲ್ಯ ಅನುಭವ. ಅದಕ್ಕೆ ಅಕ್ಷರ ರೂಪ ಕೊಡುವುದು ಕಷ್ಟ ಅನಿಸುತ್ತದೆ. ಆದರೆ ನೀವು
ನನ್ನನ್ನ ಎಂದಾದರೂ ಭೇಟಿ ಆದಾಗ, ಅದನ್ನ ಮಾತಲ್ಲಿ ವಿವರಿಸೋ ಪ್ರಯತ್ನ ಖಂಡಿತ ಮಾಡೇನು! ಆದರೆ ಅಕ್ಷರಗಳಿಗೆ ದಕ್ಕದ
ಭಾವಗಳನ್ನು ಮಾತಿನ ಮಾಲೆಯಲ್ಲಿ ಕಟ್ಟಿ ಹಾಕಲಾದೀತೆ?

ಅಲ್ಲಾದರೂ ನಾನೆ ಸೋಲುತ್ತೇನೆ!
ಐಶು ಈಗಿಲ್ಲ. ಆದ್ರೆ ಅವಳ ನೆನೆಪು, ನನಗೆ ಮೊದಲ ಬಾರಿ ಹೆರಿಗೆ ನೋವು ಬಂದಾಗ ಕಾಡಿದ್ದಂತೂ ನಿಜ.
ಇದು ನಮ್ಮ ಬೆಕ್ಕು ಐಶ್ವರ್ಯಳ ಚೊಚ್ಚಲ ಬಾಣಂತನದ ಕಥೆ.
- ಅಮಿತಾ ರವಿಕಿರಣ್
ಚಿತ್ರ ಕೃಪೆ: ಅಂತರ್ಜಾಲ

One thought on “ಬೆಕ್ಕಿನ ಬಾಣಂತನ – ಅನುಭವ ಕಥನ

  1. ಅಮಿತಾ ಅವರೇ,
    ನೀವೊಬ್ಬ ಪಕ್ಕಾ ಐಲುರೋಫೈಲ್ , (ailurophile) ಅಂದರೆ ಮಾರ್ಜಾಲಪ್ರಿಯೆ! ಕನ್ನಡದಲ್ಲೇ ಚಂದ ಅನಿಸುತ್ತದೆಯೇ? ತೊಡೆಮೇಲೆ ಕೂಡಿಸಿ ಪ್ರಸವ ಮಾಡಿಸಿದ ಸೂಲಗಿತ್ತಿ! ಆದರೂ ತಾನೇ ಎದ್ದು ಕರುಳಬಳ್ಳಿ ಕತ್ತರಿಸಿದ್ದನ್ನು ಓದಿ ಪ್ರಥಮ ಸಲ ಅದನ್ನರಿತೆ . ಪ್ರಾಣಿಗಳು ಎಷ್ಟು ಸ್ವಾವಲಂಬಿಗಳು! ಪ್ರಸವದ ಮುಂದಿನ ಝೂಮಿಗಳನ್ನೂ ಚೆನ್ನಾಗಿ ವರ್ಣನೆ ಮಾಡಿರುವಿರಿ. ಪ್ಹ್ರಾಪ್ (FRAP -frequent rapid action period ಅಂತ ವೈಜ್ಞಾನಿಕ ಪದ ಅಂತೆ ) ಗಾಲ ಬಗ್ಗೆಯೂ ತಿಳಿಯಿತು. ನಾನು ಚಿಕ್ಕವನಾಗಿದ್ದಾಗ ಒಂದು ಹಳದಿ ಪಟ್ಟೆಯಾ ಬೆಕ್ಕು ಸಾಕಿದ್ದೆವು. ಬೇಗನೆ ಸತ್ತು ಹೋಯಿತು . ಆ ದುಃಖ ತಡೆಯಲಾರದೆ ಮತ್ತೆ ಒಂದೂ ಸಾಕು ಪ್ರಾಣಿ ಮತ್ತೆ ಮನೆಗೆ ತರಲಿಲ್ಲ. ಆದರೆ ನಿಮ್ಮ ಬರಹ ಬಹಳ ಸ್ವಾರಸ್ಯಕರವಾಗಿದೆ. ಅದೆಷ್ಟು ಸಹಜವಾಗಿ ಚಕ್ಕಲಿಯಾಯಿತು (curve ಪೊಸಿಷನ್. ಅಂತ ಬರೆಯುತ್ತೀರಿ! Cat-o- 9 lives ಕಥೆಗಳು ಹೇರಳ. ಅಂತೂ ಲಿಫ್ಟ್ ಕೆಟ್ಟು ತಾಸುಗಟ್ಟಲೆ ನಲ್ಲಿ ನಿಂತರೆ ನಿಮ್ಮಂಥವರ ಜೊತೆಗೇನೇ ಹತ್ತಿಳಿಯುತ್ತಿರಬೇಕು! ಮ್ಯಾವ್ ಅಂತ ಮುಗಿಸುವೆ! 👏👏👏

    Like

Leave a Reply

Your email address will not be published. Required fields are marked *