ಕಳೆದೆರೆಡು ವಾರಗಳಿಂದ ಶುರುವಾದ ಅನಿವಾಸಿಯಲ್ಲಿ ಕವನಗಳ ಸುರಿಮಳೆ ಇನ್ನೂ ನಿಲ್ಲುವ ಹಾಗೆ ಕಾಣುತ್ತಿಲ್ಲ. ಈ ವಾರವೂ ಕೂಡ ಇತ್ತೀಚೆ ಜರುಗಿದ ಅನಿವಾಸಿ ವೈದ್ಯ ಕವಿಗೋಷ್ಠಿಯ ಎರಡು ಕವನಗಳಿವೆ; ಅದಕ್ಕೆ ಪೂರಕವಾಗಿ ನಾನು ಅನುವಾದಿಸಿದ ಕವನವನ್ನೂ ಪ್ರಕಟಿಸುತ್ತಿದ್ದೇನೆ. ಜೊತೆಗೆ ತುಂಬ ದಿನಗಳಾದ ಮೇಲೆ ಮತ್ತೆ ಪ್ರೇಮಲತ ಅವರು ಅನಿವಾಸಿಗೆ ಕವನವೊಂದನ್ನು ಕಳಿಸಿದ್ದಾರೆ. ಪ್ರತಿಕ್ರಿಯೆಗಳನ್ನು ಮಾತ್ರ ಮರೆಯಬೇಡಿ. – ಕೇಶವ
ಇದು ತರವೇ? – ಡಾ ಪ್ರೇಮಲತ
ಕನ್ನಡ ಸಾಹಿತ್ಯದಲ್ಲಿ ದಿಟ್ಟವಾದ ಹೆಜ್ಜೆಗುರುತು ಮೂಡಿಸಿದ ಕೆಲವೇ ಕೆಲವು ಅನಿವಾಸಿ ಕನ್ನಡಿಗರಲ್ಲಿ ಡಾ ಪ್ರೇಮಲತ ಮುಖ್ಯವಾಗಿ ಕಾಣುತ್ತಾರೆ. ಯು ಕೆ ಯಲ್ಲಿದ್ದು ಕಥಾಸಂಕಲನಗಳನ್ನು ಪ್ರಕಟಿಸಿದವರು ಇವರೊಬ್ಬರೆ. ಇವರು ಬರೆಯುವ ಕವಿತೆಗಳು ತುಂಬ ಉತ್ಕಟ, ಒಂದೇ ಉಸುರಿಗೆ ಬರೆದಂತೆ ಇರುತ್ತವೆ, ಹೊಸ ಪ್ರತಿಮೆಗಳನ್ನು ಹಠಾತ್ತಾಗಿ ತರುತ್ತಾರೆ, ಹಳೆಯ ಪ್ರತಿಮೆಗಳನ್ನು ಒಡೆಯುತ್ತಾರೆ. ಅವರ ಕವನ ಸಂಕಲನವೊಂದು ಬೇಗ ಬರಲಿ ಎಂದು ಹಾರೈಸುತ್ತ, ಅವರ ಒಂದು ಕವಿತೆ ನಿಮ್ಮ ಓದಿಗೆ.

ಯಾವಾಗ.. ಯಾಕೆ.. ಹುಟ್ಟಿತೋ ಪ್ರೀತಿ
ಇವನಿಗೆಂದು ಎಲ್ಲಿ ಹುದುಗಿತ್ತೋ ತಿಳಿದಿದ್ದರೆ
ಮನ ಬರಿದುಮಾಡಿಕೊಂಡೇ ಭೇಟಿ ಮಾಡುತ್ತಿದ್ದೆ
ಹಗಲು, ರಾತ್ರಿ ಕಣ್ಣೆವೆ ಬಿಚ್ಚಿಕೊಂಡೇ ಕಾಣುವ
ಕನಸುಗಳಲಿ ಇವನು ತುಂಬಿಕೊಳ್ಳುವನೆಂದು ಗೊತ್ತಿದ್ದರೆ
ಕಟ್ಟಿಹಾಕಿ, ಹೊರದೂಡಲು ಅನುವಾಗುತ್ತಿದ್ದೆ
ಹೃದಯ ಕಂಗೆಡಿಸಿರುವ ಮರುಳ ಮನಸಿನ ಪ್ರೀತಿ
ನನ್ನಲಿ ಮಾತ್ರ ಮನೆಮಾಡಿ, ಇಡಿಯಾಗಿ ದಹಿಸಿ
ಇವನ ಹಾಯಾಗಿರಲು ಬಿಡುವುದಾದರೂ ತರವೇ?
ಎದುರಿಲ್ಲದೆ, ಕೈಗೆ ಸಿಗದೆ, ಮೈ ಹಿಂಡುವ ಇವನ
ಮನಕೂ ನನ್ನಂಥದೇ ಬಾಣ ತಗುಲಿ ಘಾಸಿಯಾಗಲಿ
ಎಂದು ಬಯಸಿ, ದೀಪ ಹಚ್ಚಿಡಬಹುದೇ?
ಬರುವಾಗ ಬರಲೇನೆಂದು ಕೇಳಿ ಬರಲಿಲ್ಲ
ಹಿಂತಿರುಗಿಬಿಡೆಂದರೆ ಕೇಳುವುದೂ ಇಲ್ಲ
ಈ ಪ್ರೀತಿಯ ಹೊರದಬ್ಬಲು ನನ್ನ ತರ್ಕಕೆ ಶಕ್ತಿಯಿಲ್ಲ
ವಾಸ್ತವಕ್ಕೇನು ಗೊತ್ತು ಕನಸುಗಳ ರಂಗು
ಬೆರಗಿನ ಮೈ-ಮರೆಸುವ ಸೆಳೆತದ ಕವನದ ಗುಂಗು
ಗಟ್ಟಿಯಾಗಿ ತಬ್ಬಿರುವಾಗ ಬಿಡುಗಡೆಯಾದರೂ ಹೇಗೆ?
——————————————————————-
ಇಂಚರ – ಡಾ. ಗುರುಪ್ರಸಾದ್ ಪಟ್ವಾಲ್
ಈ ವಾರದ ಅನಿವಾಸಿಯಲ್ಲಿ ಡಾ. ಗುರುಪ್ರಸಾದ್ ಪಟ್ವಾಲ್ ಬರೆದ, ಪ್ರಾಸಬದ್ಧವಾದ, ನವೋದಯ ಕಾಲದ ಕವನಗಳನ್ನು ನೆನಪಿಸುವ ಅನಿವಾಸಿಗಳ ಪಾಡಿನ ಕವಿತೆಯಿದೆ. ಡಾ. ಗುರುಪ್ರಸಾದ್ ಅನಿವಾಸಿಗೆ ಹೊಸಬರಲ್ಲ. ವೃತ್ತಿಯಿಂದ ವೈದ್ಯರು, ಪ್ರವೃತ್ತಿಯಿಂದ ಯಕ್ಷಗಾನ ಪ್ರವೀಣರು. ಗಾಯಕರು ಮತ್ತು ನಾಟಕಕಾರರು. ಇನ್ನೂ ಹೀಗೇ ಹೆಚ್ಚು ಹೆಚ್ಚು ಕವನಗಳನ್ನು ಬರೆಯಬೇಕೆಂದು ಆಶಿಸುತ್ತೇನೆ.

ಮರದ ಕೊಂಬೆಯಲಿ ಕೂತು ಅಣಕಿಸಿದಳಾ ಹಕ್ಕಿ
ಇಂಚರದಲೇ ಹೇಳಿದಳು ಮಾತನು ನನ್ನೆದೆಯನು ಕುಕ್ಕಿ
ನಿನ್ನನೆಲ್ಲೋ ನೋಡಿಹೆ ನಿಮ್ಮೂರಿಂದಲೇ ನಾ ಬಂದಿಹೆ
ಕೇಳಿದಳು ಆ ಸಪ್ತ ಸಾಗರ ನೀ ದಾಟಿ ಬಂದು
ಹಂಗಿಸಿದಳು ಅರಿತೆಯಾ ನೀ ಯಾರು ಎಂದು
ನಾ ಹಾರಿದೆ ಕಾಳನ್ನರಸಿ ನೀ ಓಡಿದೆ ಏನನ್ನರಸಿ
ತೆಂಗು ಮತ್ತಲಿ ನಲಿದಿದೆ ತೆರೆಯ ಅಲೆಯ ಸಂಗೀತಕೆ
ಇಂದಿಗೂ ಅಷ್ಟೇ ಸೊಬಗು ನೋಡುವ ಬವಣೆ ನಿನಗೇತಕೆ
ಆಡಿದ ಬಯಲು ಓಡುತ ನಲಿದಿಹ ಗದ್ದೆಯ ಅಂಚು
ಕಾಯುತಿದೆ ಬೆಳಕ ಚೆಲ್ಲಲು ಮುಂಗಾರಿನ ಕೋಲ್ಮಿಂಚು
ಹಬ್ಬದಿ ಅಪ್ಪನೊಡೆ ಕೊಯ್ದ ಆ ಬತ್ತದ ತೆನೆ
ಅಮ್ಮ ಹಾಲಿಟ್ಟು ಮರೆತಳು ಉಕ್ಕಿತು ನೆನೆಪಿನೆ ಕೆನೆ
ಮಂಗ ಬಾಳೆ ಕೀಳಲು ಅಟ್ಟಿದಳಮ್ಮ ಕೂಗಿ
ಮಗ ಬಂದರೆ ತಿಂದಾನು ಕಾಯುವಳು ಮಾಗಿ
ಅಷ್ಟಮಿಯ ಉಂಡೆಯಿಲ್ಲ ಚೌತಿಗೆ ಕೊಟ್ಟೆ ಕಡಬಿಲ್ಲ
ಆ ಮರೆತ ಲೋಕದ ಅವಧಾನಕ್ಕೆ ನಿನಗಿಂದು ಬಿಡುವಿಲ್ಲ
ಮನೆ ಮುಂದೆ ನಲಿಯರಿಂದು ಹುಲಿ ವೇಷದ ಗುಂಪು
ಸಂಜೆಗೆಂಪಲಿ ನಿನ್ನ ನೆನಪೇ ಅವಳೊಡಲಿನ ತಂಪು
ನಿಮ್ಮೂರಿನ ಮುಂಗಾರಿನ ಹೊನ್ನೀರಲಿ ನೀ ಚಿಗುರಿ
ನಿನ್ನೆಲ್ಲಿಗೆ ಕೊಂಡೊಯ್ದಿತೋ ತಿರುಗುವ ಕಾಲದ ಬುಗುರಿ
ಇದಾವ ಪಂಜರ ಈ ಮಾಯೆ ನಾನೊಲ್ಲೆ
ಇದ ಮುರಿಯೆ ನೀ ಅರಿವೆ ನಾ ನಿನ್ನ ಬಲ್ಲೆ
ಇಲ್ಲಿ ನನಗೊಂದು ಮರ ನನಗಾವುದೋ ದೇಶ
ಅಲ್ಲಿ ನಿನ್ನೊಲವಿನ ರಂಗಸ್ಥಳ ಕಾದಿದೆ ನಿನ್ನ ಪ್ರವೇಶ
—————————————————————
ಚಳಿಗಾಲದ ಚಿತ್ರಗಳು – ಡಾ ರಾಮಶರಣ ಲಕ್ಷ್ಮೀನಾರಾಯಣ
ಇತ್ತೀಚೆಗೆ ಜರುಗಿದ ಅನಿವಾಸಿ ವೈದ್ಯರ ಕವಿಗೋಷ್ಠಿಯಲ್ಲಿ ಡಾ ರಾಮಶರಣ ಲಕ್ಷ್ಮೀನಾರಾಯಣ ಅವರು ಎರಡು ಕವನಗಳನ್ನು ವಾಚಿಸಿದರು. ಅವುಗಳಲ್ಲಿ ಒಂದು ಕವನ ನಿಮ್ಮ ಓದಿಗೆ. ರಾಮಶರಣ ಅನಿವಾಸಿಯ ಸಕ್ರಿಯ ಸದಸ್ಯರು. ಲೇಖನ ಮತ್ತು ಸಂಘಟನೆಯಲ್ಲಿ ಎತ್ತಿದ ಕೈ. ಆಗಾಗ ಕವನಗಳನ್ನೂ ಬರೆಯುತ್ತಾರೆ. ತುಂಬ ಓದಿಕೊಂಡಿದ್ದಾರೆ ಮತ್ತು ಚಿಂತಕ.

ಹಸಿರಿಲ್ಲದ ರೆಂಬೆಗಳು, ಕಳೆ ಇಲ್ಲದ ತೋಟಗಳು
ಮಂಜಿನ ಹಾದಿಯಲಿ ಕಪ್ಪು ಜಾಕೆಟ್ಟಿನ ಕಂದಮ್ಮಗಳು
ಕರ್ಟನ್ ತೆರೆಯದ ಮುಚ್ಚಿದ ಕಿಟಕಿಗಳು
ಹಗಲಲ್ಲೇ ದೀಪ ಹತ್ತಿಸಿ-ಹರಿಯುವ ಕಾರುಗಳು
ಫ್ರಿಜ್ಜಿನಲ್ಲಿಟ್ಟ ಗ್ಲಾಸದುವೆ ಕೊರೆಯುವ ತಂಗಾಳಿ
ತುಳುಕಲು ಕಾದಿವೆ ಮೋಡ ತೊಟ್ಟಿಗಳ ಪಾಳಿ
ಕಮರಿದ ಜೀವಕ್ಕೆ ಬೇಕೆನಿಸಿದೆ ಹಿಮಪಾತ
ಎಂದೊಡನೆ ಹಿಮದ ಕಣ ಕೆನ್ನೆಗಿತ್ತಿದೆ ಮುತ್ತ
ಬೆಂಚು-ಕೊಂಬೆಗಳ ಮೇಲೆಲ್ಲ ಬೆಳ್ಮಣ್ಣಿನ ಚಾದರ
ಅಂಗಳದ ತುಂಬೆಲ್ಲ ರಾಬಿನ್, ರೆನ್ ಗಳ ಇಂಚರ
ಇಳಿಜಾರುಗಳಲಿ ಚಿಣ್ಣರ ಸ್ಲೆಡ್ಜ್ಜುಗಳ ಕಾರುಬಾರು
ಹಿತ್ತಲು, ಮೈದಾನಗಳಲಿ ಸ್ನೋ ಮೆನ್ನುಗಳದೇ ದರಬಾರು
ಇರುಳೆಲ್ಲ ಹಗಲಾಯಿತು ಹಿಮಗನ್ನಡಿಯಲ್ಲಿ
ಐಸ್ ರಿಂಕಿನ ಅನುಭವವದು ನೆಲಗನ್ನಡಿಯಲ್ಲಿ
ಮಳೆರಾಯನು ಧಾವಿಸುವ ಬಿರುಗಾಳಿಯ ಬೆನ್ನೇರಿ
ಎಲ್ಲೆಡೆ ಹಾಹಾಕಾರ ತೊರೆ ನದಿಗಳು ಉಕ್ಕೇರಿ
—————————————————————-
ನೀರುಮುಳುಕ – ಕೇಶವ ಕುಲಕರ್ಣಿ
ಕ್ಯಾಥಲೀನ್ ಜೇಮೀ ಬರೆದಿರುವ ದ ಡಿಪ್ಪರ್ ಎನ್ನುವ ಕವನದ ಭಾವಾನುವಾದದ ಸಣ್ಣ ಪ್ರಯತ್ನ. ಕ್ಯಾಥಲೀನ್ ಜೇಮೀ ಸ್ಕಾಟ್-ಲ್ಯಾಂಡಿನ ಕವಿ. ಡಿಪ್ಪರ್ ಅಥವಾ ನೀರುಮುಳುಕ ನೀರಿನ ಆಸುಪಾಸಿನಲ್ಲೇ ಇರಿವ ಪುಟ್ಟ ಹಕ್ಕಿ. ಕ್ಯಾಥಲೀನ್ ಜೇಮೀ ಅವರು ಈ ಕವನವನ್ನು ಅನುವಾದಿಸಿ ಅನಿವಾಸಿಯಲ್ಲಿ ಪ್ರಕಟಿಸಲು ಅನುಮತಿಯನ್ನು ಕೊಟ್ಟಿದ್ದಾರೆ. ಮೇಲಿನ ಎರಡು ಕವನಗಳಲ್ಲಿ, ಒಂದರಲ್ಲಿ ಹಕ್ಕಿಯಿದೆ, ಇನ್ನೊಂದರಲ್ಲಿ ಚಳಿಗಾಲವಿದೆ. ನಾನು ಆರಿಸಿಕೊಂಡಿರುವ ಈ ಕವನ ಚಳಿಗಾಲದಲ್ಲೂ ಹಾಡುವ ಹಕ್ಕಿಯ ಬಗ್ಗೆ. ಕೆಲವೇ ಸಾಲುಗಳಲ್ಲಿ ಒಂದು ಚಿಕ್ಕ ದೃಶ್ಯವನ್ನೇ ರೂಪಕವಾಗಿಸುವಂಥ ಹತ್ತಾರು ಅರ್ಥಗಳನ್ನು ಹೊಮ್ಮಿಸುವ ಕವನವಿದೆ. ಮೂಲ ಕವಿತೆಯ ಕೊಂಡಿ ಇಲ್ಲಿದೆ: https://www.poetryfoundation.org/poetrymagazine/poems/42188/the-dipper

ಹೆಪ್ಪುಗಟ್ಟುವಂಥ ಚಳಿಗಾಲ
ನಡೆದೆ ದೇವದಾರುಗಳ ಕಾಡಿನಲ್ಲಿ
ಕಂಡೆ ಜಲಪಾತದಡಿಯಲ್ಲಿ
ಒಂಟಿ ಹಕ್ಕಿ.
ಹಸಿಬಂಡೆ ಮೇಲೆ ಹೊಳೆಯುತ್ತಿತ್ತು
ಹುಚ್ಚು ನೀರು ಸೋಕಿದಾಗ
ಹೊರ ಹಿಂಡಿತು ಕೊರಳಿಂದ
ಮೈಮರೆತಂತೆ ನಿಲ್ಲದ ಗಾನ
ಕೊಟ್ಟೆನೆನಲು ನನ್ನದಲ್ಲದು
ಹೇಗೆ ಪುಸಲಾಯಿಸಲಿ ಕೈಗೆ ಸಿಗೆಂದು
ಅದಕ್ಕೆ ನೀರನಾಳವೂ ಗೊತ್ತು
ನೆಲದ ಮೇಲೆ ನಿಂತು ಕೊರಳೆತ್ತಲೂ
————————————————-
ಅನಿವಾಸಿಯಲ್ಲಿ ಈಗ ಕವನಗಳ ಜಡಿ ಮಳೆ ಆದರೆ ಇವು ನಾಲ್ಕೂ ಒಂದೊಂದೂ ತಮ್ಮದೇ ರೀತಿಯಲ್ಲಿ ಭಿನ್ನ.
ಪ್ರಬುದ್ಧ ಬರಗಾರ್ತಿ, ಕವಯಿತ್ರಿ ಪ್ರೇಮಲತಾ ಅವರ ಕವನಗಳು ಯಾವಾಗಲೂ ಸಂಕೀರ್ಣ;ಅವನ್ನು ನಾನಂತೂ ಮತ್ತೆ ಮತ್ತೆ ಓದಿಯೇ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ.ಇದೂ ಸಹ ಅದಕ್ಕೆ ಹೊರತಾಗಿಲ್ಲ. ಮೇಲು ನೋಟಕ್ಕೆ ಪ್ರೇಮಕವನದಂತಿದ್ದರೂ ಕೊನೆಯ ಚರಣದಲ್ಲಿ ಧುತ್ತೆಂದು ಬರುವ ಕವನದ ಗುಂಗು ಅದೇ ಕವನದ ಕೇಂದ್ರಬಿಂದುವೇನೋ ಅನ್ನುವ ’ಅನುಮಾನದಿಂದ ಹೊರದಬ್ಬಲು ನನ್ನ ತರ್ಕಕ್ಕೆ ಶಕ್ತಿಯಿಲ್ಲ’!
ಗುರುಪ್ರಸಾದ್ ಪಟ್ವಾಲರ ಕವನದಲ್ಲಿ ಇಂಚರ ಹೊರದೀಸಿದ ಪಕ್ಷಿ ಮುಗ್ಧ ಪ್ರಶ್ನೆಗಳಲ್ಲಿ ಕವಿಯ ಮನಸ್ಸಾಕ್ಷಿಯನ್ನು ಕೆದಕುವ ಪರಿ ಯಾವ ಅನಿವಾಸಿಯನ್ನೂ ಸ್ಪರ್ಶಿಸದೇ ಇರುವದಿಲ್ಲ. ’ನಮ್ಮ ಪ್ರವೇಶಕ್ಕಾಗಿ ಆ ಒಲವಿನ ರಂಗಸ್ಥಳ ನಮಗಾಗಿ ಕಾದಿದೆಯೇ? ಒಬ್ಬೊಬ್ಬರ ಉತ್ತರ ಅವರವರ ಮನಸ್ಥಿತಿಯ ಮೇಲೆ!
ಪಳಗಿದ ಲೇಖಕ ರಾಂಶರಣ್ ಅವರು ಅನಿವಾಸಿಯ ಕಣ್ಣಲ್ಲಿ ಕಂಡ ಶಿಶಿರದ ಪೋಸ್ಟ್ ಕಾರ್ಡ್ ದೃಶ್ಯವನ್ನು ಚಿತ್ರಿಸುತ್ತ ಅದರಡಿಯಲ್ಲಿ ಹುದುಗಿದ ನೀರಸತೆಯನ್ನು ಬಿಚ್ಚಿಡುತ್ತಾರೆ. ’ ಇರುಳೆಲ್ಲ ಹಗಲಾಯಿತು ಹಿಮಗನ್ನಡಿಯಲ್ಲಿ, ಐಸ್ ರಿಂಕಿನ ಅನುಭವವದು ನೆಲಗನ್ನಡಿಯಲ್ಲಿ’ ಸಾಲು ಬಹಳ ಹಿಡಿಸಿತು.
ಕೊನೆಯ ಕವನ ಒಂದು ಚಿಕ್ಕ ಆಂಗ್ಲ ಕವನದ ಅಂದದ ಅನುವಾದ. ಮೂಲದ ಎಲ್ಲ ಭಾವಗಳನ್ನೂ ಅದುಮಲಾರದೆ ಆ ಹಕ್ಕಿಯಂತೆ ’ಕಂಠ ಬಿರಿಯುವಂತೆ ಹಿಂಡಿ ಹಾಡಿ ಬಿತ್ತರಿಸುವದು’ ಸುಲಭವಲ್ಲ. ಅದನ್ನು ಯಶಸ್ವಿಯಾಗಿ ಸಾಧಿಸಿದ್ದಾರೆ, ಕೇಶವ ಅವರು ಈ ಕವಿತೆಯಲ್ಲಿ. ಡಿಪ್ಪರ್ ಎನ್ನುವ ಅದರ ಹೆಸರೇ ಸೂಚಿಸುವಂತೆ ನೀರಲ್ಲಿ ಮುಳುಗಿ ಆಳವನ್ನು ಅಳೆದು ಪುಟಿದೇಳುವಾಗ ಅದರ ಒದ್ದೆಯಾದ ರೆಕ್ಕೆಗಳ ಮೇಲೆ ಬೀಳುವ ಚಳಿಗಾಲದ ಎಳೆಬಿಸಿಲಲ್ಲಿ ಅದು ಲೈಟ್ ಬಲ್ಬಿನಂತೆ ಹೊಳೆಯುವಂತೆ ಕಂಡಿದೆ ಕವಯಿತ್ರಿಗೆ. ಆ ರೂಪಕವನ್ನು ’ಲಿಟ್’ಎನ್ನುವ ಒಂದೇ ಶಬ್ದದಲ್ಲಿ ಮೂಡಿಸುವ ಮೋಡಿಗೆ ಭಲೇ ಎಂದೆ.ಚಳಿಗಾಲದಲ್ಲಿ ಕವಿ ಮನಸ್ಸುಗಳನ್ನು ಬೆಚ್ಚಗೆ ಮಾಡುವ ನಾಲ್ಕು ಕನಗಳು.
ಶ್ರೀವತ್ಸ
LikeLike