ಜೀವನದಲ್ಲಿ ಒಮ್ಮೆಯಾದರೂ ಜೋಗುಳ ಕೇಳದ, ಜೋಗುಳ ಹಾಡದ ವ್ಯಕ್ತಿಗಳು ಇರಲಿಕ್ಕಿಲ್ಲ. ಇಂದಿನ ಸಂಚಿಕೆಯ ಬರಹಗಳು ಹಾಗೂ ನಮ್ಮ ಅನಿವಾಸಿಯ ಹೆಮ್ಮೆಯ ಹಾಡುಗಾರ್ತಿ ಅಮಿತಾ ಅವರ ಅತ್ಯಪರೂಪದ ಜೋಗುಳ ಪದ ನಿಮ್ಮನ್ನೂ ನಿಮ್ಮ ಬಾಲ್ಯಕ್ಕೋ,ನಿಮ್ಮ ಮಕ್ಕಳ ಬಾಲ್ಯಕ್ಕೋ ಖಂಡಿತ ಕರೆದೊಯ್ಯಬಹುದೆಂಬ ನಂಬಿಕೆಯೊಂದಿಗೆ, ~ ಸಂಪಾದಕಿ
ಈ ‘ಜೋ ಜೋ ಜೋ ಜೋ’ ಜೋಗುಳ, ಲಾಲಿ ಅನ್ನೋ ಪದ ಕೇಳಿದ್ರೇನೇ ಒಂಥರಾ ತೂಗಿದ್ಹಂಗ ಅನಿಸಿ ಕಣ್ರೆಪ್ಪೆ ಭಾರ ಆದ್ಹಂಗ ಆಗತದ. ದಾಸರ ಭಕ್ತಿ ಗೀತೆಗಳು, ಜಾನಪದ, ಕವಿಗಳ ಭಾವಗೀತೆಗಳು ಕೊನೆಗೆ ಸಿನೆಮಾ ಹಾಡುಗಳು..ಹೀಂಗ ಎಲ್ಲ ಪ್ರಕಾರಗಳಲ್ಲೂ ಲಾಲಿ ಹಾಡು, ಜೋಗುಳ ಅಷ್ಟೇ ಸಶಕ್ತವಾಗಿ, ಸುಂದರವಾಗಿ ಮೂಡಿ ಬಂದಿದ್ದು ಭಾಳ ಸೋಜಿಗ ಅನಸತದ ನನಗ. ‘ಜೋ ಜೋ ಶ್ರೀ ಕೃಷ್ಣಾ ಪರಮಾನಂದ’ ಎಂಬಂಥ ದಾಸರ ಪದಗಳಿರಲಿ, ‘ಅತ್ತರೆ ಅಳಲವ್ವಾ ಈ ಕೂಸು ನನಗಿರಲಿ’ ಎಂಬಂಥ ಜಾನಪದವಿರಲಿ, ‘ತಾರೆಗಳ ಜರತಾರಿ ಅಂಗಿ ತೊಡಿಸುವರಂತೆ’ ಎನ್ನುವ ಕವಿ ಭಾವವಿರಲಿ, ‘ಲಾಲಿ ಲಾಲಿ ಸುಕುಮಾರ ಲಾಲಿ ಮುದ್ದು ಬಂಗಾರ’ ಎನ್ನುವಂಥ ಚಲನಚಿತ್ರ ಗೀತೆಗಳಿರಲಿ ..ಅಲ್ಲೆಲ್ಲಾ ಹರಿದಿರುವುದು ವಾತ್ಸಲ್ಯದ ಹೊನಲೇ. ಮಾಂಸದ ಮುದ್ದೆಯೊಂದು ಕಣ್ಣು-ಮೂಗುಗಳ ಚಿತ್ರ ಬರೆಸಿಕೊಂಡು ಈ ಜಗತ್ತಿಗೆ ಬಂದು ನಮ್ಮ ‘ ಜಗತ್ತೇ’ ಆಗಿ ಬಿಡುವುದು ಅದ್ಯಾವ ಮಾಯೆಯೋ ಕಾಣೆ.
ನಾನು ಇಲ್ಲಿ ಗಮನಿಸಿದ್ದು ಎರಡು ಅಂಶಗಳನ್ನು. ಒಂದು ತಾಯಿ ಆದಾಕಿ ತನ್ನ ಕಂದನಲ್ಲೇ ಭಗವಂತನನ್ನು ಕಂಡು ಆ ಭಾವವನ್ನು ದೈವೀಕತೆಗೇರಿಸುವ ಪರಿ .
“ ಅಳುವ ಕಂದನ ತುಟಿಯು ಹವಳದ ಕುಡಿಹಂಗ
ಕುಡಿಹುಬ್ಬು ಬೇವಿನೆಸಳ್ಹಂಗ| ಕಣ್ಣೋಟ ಶಿವನ ಕೈಯಲಗು ಹೊಳೆದ್ಹಂಗ|”
ಇಲ್ಲಿ ಮರ್ತ್ಯವನ್ನು ಅಮರ್ತ್ಯಕ್ಕೇರಿಸುತ್ತಿದ್ದಾಳೆ. ತನ್ನ ಕಂದನ ಕಣ್ ಹೊಳಪಲ್ಲಿ ಕೈಲಾಸದ ಪರಶಿವನ ಕೈಯ ತ್ರಿಶೂಲದ ಹೊಳಪು ಕಾಣುತ್ತಿದ್ದಾಳೆ .
ಇನ್ನೊಂದು ಇದಕ್ಕೆ ವಿಪರೀತವಾಗಿ ಮೂಲೋಕದೊಡೆಯನನ್ನು ಭೂಮಿಗೆಳೆತಂದು ಅವನಿಗೆ ಶಿಶುತನವನ್ನು ಆರೋಪಿಸುವುದು.
‘ ಗುಣನಿಧಿಯೇ ನಿನ್ನನೆತ್ತಿಕೊಂಡಿದ್ದರೆ ಮನೆಯ ಕೆಲಸವನಾರು ಮಾಡುವರಯ್ಯ? ಮನಕೆ ಸುಖನಿದ್ರೆ ತಂದುಕೋ ಬೇಗ ಫಣಿಶಯನನೇ ನಿನ್ನ ಪಾಡಿ ತೂಗುವೆನಯ್ಯ”
ಇಲ್ಲಿ ತಾಯ ಕೈಬಿಡದೇ ರಗಳೆ ಮಾಡುವ ಕಂದನ ಗುಣವನ್ನು ಭಗವಂತನಿಗೆ ಆರೋಪಿಸಲಾಗಿದೆ.
ಈ ಜೋಗುಳಗಳಲ್ಲಿ ತಾಯ್ತನದ ಧನ್ಯತೆಯ ಭಾವ, ಮುಂದಿನ ಹಸನಾದ ಭವಿತವ್ಯದ ಹಾರೈಕೆ- ಹರಕೆಗಳು, ತನ್ನ ಮಗುವಿನ ಬಗೆಗಿನ ಅಭಿಮಾನ ಎಲ್ಲವುಗಳನ್ನೂ ಕಾಣಬಹುದಾಗಿದೆ. ಈ ಕೆಳಗಿನ ಪದ್ಯಗಳನ್ನು ನೋಡಿ..
1) ‘ಅತ್ತು ಕಾಡುವನಲ್ಲ, ಮತ್ತೆ ಬೇಡುವನಲ್ಲ, ‘ಎತ್ತಿಕೋ’ ಎಂಬಂಥ ಹಟವಿಲ್ಲ..ಕಂದನ(ತನ್ನ ಮಗುವಿನ ಹೆಸರನ್ನು ಇಲ್ಲಿ ಹೇಳಬಹುದು ‘ಕಂದನ’ ಬದಲಿಗೆ) ಲಕ್ಷಣಕ ಲಕ್ಷ್ಮಿ ಒಲತಾಳು.(ಅಭಿಮಾನ,ಹೆಮ್ಮೆಯ ಭಾವ)
2) ‘ಅತ್ತರೆ ಅಳಲವ್ವಾ ಈ ಕೂಸು ನನಗಿರಲಿ.
ಕೆಟ್ಟರೆ ಕೆಡಲವ್ವ ಮನೆಗೆಲಸ
ಕಂದಮ್ಮನಂಥ ಮಕ್ಕಳಿರಲವ್ವ ಮನೆತುಂಬ’ (ವಾತ್ಸಲ್ಯದ ಧನ್ಯತಾ ಭಾವ)
3) ಆಡುತಾಡುತ ಹೋಗಿ ಜೋಡೆರಢು ಮನೆಕಟ್ಟಿ ಬೇಡ್ಯಾಳ ಬೆಲ್ಲ-ಬ್ಯಾಳಿಯ..ಮಾಡ್ಯಾಳ ಮಾಮಾನ ಮದುವೀಯ..(ಭವಿಷ್ಯದ ಹಾರೈಕೆ)
ಇಲ್ಲಿ ಸಂದರ್ಭಕ್ಕನುಸಾರವಾಗಿ ಅಣ್ಣನ ಮುಂಜಿ, ಸೋದರತ್ತೆಯೋ, ಮಾಂಶಿಯರದೋ ಮದುವೆ, ಸೀಮಂತವೋ ಯಾವುದನ್ನಾದರೂ ಸೇರಿಸಿಕೊಳ್ಳಬಹುದು. ಮನೆಗೆ ಬಂದ ಹೊಸ ಕಂದಮ್ಮ ಸುತ್ತಲಿನವರ ಭಾಗ್ಯದ ಬೆಳಕಾಗಲಿ ಎಂಬುದು ಹಡೆದವಳ ಆಶಯ.
ತೀರ ಪುಟ್ಟ ಮಗುವಿಗೆ ಜೋಗುಳದ ರಿದಮ್, ಅಮ್ಮನ ದನಿ, ಮತ್ತು ಆ ಲಯಬದ್ಧವಾದ ಜೋಳಿಗೆಯ ತೂಗುವಿಕೆಗೆ ನಿದ್ದೆ ಬರುತ್ತದೇನೋ? ಸ್ವಲ್ಪ ದೊಡ್ಡವರಾಗುತ್ತಿದ್ದಂತೆ ‘ಹಂಗಂದ್ರ’ ಅಂತ ಹಾಡಿನ ಅರ್ಥವನ್ನೂ ಕೇಳಿ ತಮಗೆ ತಿಳಿದ ನೆಲೆಯೊಳಗೆ ಕಲ್ಪನಾವಿಸ್ತಾರ ಮಾಡಿಕೊಳ್ಳುತ್ತವೇನೋ ಮಕ್ಕಳು.
ನನ್ನ ಅವಳಿ ಮಕ್ಕಳಿಬ್ಬರಿಗೂ ‘ಪಾಲಗಡಲದೊಳು ಪವಡಿಸಿದವನೇ, ಆಲದೆಲೆಯ ಮೇಲೆ ಮಲಗಿದ ಶಿಶುವೆ’ ಎನ್ನುವ ಪುರಂದರ ದಾಸರ ಹಾಡು ಇಷ್ಟ ವಾಗುತ್ತಿತ್ತು. ಅಷ್ಟಿಷ್ಟು ಅರ್ಥವನ್ನೂ ಹೇಳಿದ್ದೆ. ಅವರು ಸುಮಾರು ಮೂರು- ಮೂರೂವರೆ ವರ್ಷ ದವರಿದ್ದಾಗ ಮಾತು ಮಾತಿಗೊಮ್ಮೆ ಸಿಪ್ಪರ್ ನಲ್ಲಿ ಹಾಲು ಕುಡಿಯಲು ಕೇಳವ್ರು. ಹಾಲು ಕುಡಿದರೆ ಊಟಕ್ಕೆ ಕಿರಿಕಿರಿ ಮಾಡುತ್ತಾರೆಂದು ನಾನು ‘ಹಾಲು ಖಾಲಿ ಆಗ್ಯಾವ’ ಅಂತಲೋ , ‘ಸ್ವಲ್ಪೇ ಅವ ಅಜ್ಜಾಗ ಛಾಕ್ಕ ಬೇಕು’ ಅಂತಲೋ, ‘ಅಯ್ಯ , ಈಗಷ್ಟೇ ಎಲ್ಲಾ ಹೆಪ್ಪು ಹಾಕಿದೆ’ ಅಂತಲೋ ಹೇಳಿ ಜಬರದಸ್ತಿ ಅನ್ನ, ಚಪಾತಿ ಊಟ ಮಾಡಿಸುತ್ತಿದ್ದೆ. ಒಮ್ಮೆ ನನ್ನ ಮಗಳು ಅಕ್ಷತಾ ‘ಅವಾ ಕೃಷ್ಣ ಎಷ್ಟು ಲಕ್ಕಿ ಇದ್ದಾನಲಾ ಅಮ್ಮಾ, ಅವರ ಮನ್ಯಾಗ ಹಾಲಿನ ಸಮುದ್ರನೇ ಇರತದ. ಹಾಲು ಖಾಲಿನೇ ಆಗಂಗಿಲ್ಲ. ಯಾವಾಗ ಬೇಕು ಆವಾಗ ಮಂಚದ ಮ್ಯಾಲಿಂದ ಬಗ್ಗೂದು..ಸಿಪ್ಪರ್ ತುಂಬಿಕೊಳ್ಳೂದು.. ಹಾಲು ಕುಡಿಯೂದು..ಮಸ್ತ್ ಅಲಾ ಅಮ್ಮಾ?” ಎಂದು ಹೊಳೆವ ಕನಸುಗಂಗಳಿಂದ ನುಡಿದು ನಂಗ ದಂಗ ಬಡಿಸಿದ್ಲು.
ಒಟ್ಟಿನಲ್ಲಿ ದೇಶ-ಭಾಷೆಗಳ ಹಂಗಿಲ್ಲದ ಸುಂದರ ಭಾವಯಾನ ಈ ಜೋಗುಳ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಮ್ಮನ ಮಡಿಲೋ, ಜೋಳಿಗೆಯೋ, ತೊಟ್ಟಿಲೋ, ಕ್ಯ್ರಾಡಲ್ಲೋ, ಕ್ರಿಬ್ಬೋ, ಬೆಡ್ಡೋ ಏನೇ ಇರಲಿ ಜೋಗುಳದ ಸೊಗಡೆಂದೂ ಮಾಸದಿರಲಿ. ಅಂತೆಯೇ ತುಂಬ ಆಪ್ತವಾದ ಈ ರಕ್ಷೆಗಳು-ಹರಕೆಗಳು ತಮ್ಮ ಧನಾತ್ಮಕ ತರಂಗಗಳನ್ನು ವಿಶ್ವದೆಲ್ಲೆಡೆ ಪಸರಿಸುತ್ತಿರಲಿ.
“ಆ ರಕ್ಷಿ, ಈ ರಕ್ಷಿ , ಕಣ್ಣಿಗೆ ಕಾಮನ ರಕ್ಷಿ, ಬೆನ್ನಿಗೆ ಭೀಮನ ರಕ್ಷಿ, ಮೂಗಿಗೆ ಮುಕುಂದನ ರಕ್ಷಿ, ಮಂಡಿಗೆ ಮಾಧವನ ರಕ್ಷಿ, ಕುಂಡಿಗೆ ಕೂರ್ಮನ ರಕ್ಷಿ, ರಟ್ಟಿಗೆ ರಾಮನ ರಕ್ಷಿ, ಹೊಟ್ಟಿಗೆ ವಿಠಲನ ರಕ್ಷಿ, ಕೈಗೆ ಕೃಷ್ಣನ ರಕ್ಷಿ, ಕಾಲಿಗೆ ಕಲ್ಕಿ ರಕ್ಷಿ..ಎಲ್ಲಾರ ರಕ್ಷಿ ನಮ್ಮ ಕಂದಮ್ಮಗ”.. ಅಳ್ನೆತ್ತಿಗೆ ನಸುಬಿಸಿ ಎಣ್ಣೆಯೊತ್ತಿಸಿಕೊಂಡು, ಅಜ್ಜಿಯ ತೊಡೆಯ ಮೇಲೆ ಮಲಗಿ ಹದವಾದ ಬಿಸಿನೀರೆರೆಸಿಕೊಂಡು ‘ಹೋ’ ಎಂದು ದನಿ ತೆಗೆದು ಅತ್ತು ಸುಸ್ತಾದ ಕಂದಮ್ಮನನ್ನು ಅಜ್ಜನ ಹಳೆಯ ಮೆತ್ತನೆಯ ಧೋತರ ತುಂಡಿನಲ್ಲಿ ಹೊರಕೋಣೆಗೆ ಸುತ್ತಿ ತಂದಾದ ಮೇಲೆ ಘಮ್ಮನೆಯ ಲೋಬಾನದ ಹೊಗೆ ಹಾಕುತ್ತ ಅಜ್ಜಿಯೋ, ಅಮ್ಮನೋ, ಮತ್ತ್ಯಾರೋ ತಾಯಂಥಕರಣದವರೋ ಈ ರಕ್ಷಾ ಮಂತ್ರವನ್ನು ಹೇಳೇ ಹೇಳುತ್ತಿದ್ದರು.
ಸಾಕಷ್ಟು ದೊಡ್ಡವರಾದ ಮೇಲೂ ‘ ಕಲ್ಲಾಗು, ಗುಂಡಾಗು, ಕರಕಿ ಬೇರಾಗು, ಅಗಸಿ ಮುಂದಿನ ಬೋರ್ಗಲ್ಲಾಗು..ಶ್ರೀರಾಮ ರಕ್ಷಿ..ಜಯರಾಮ ರಕ್ಷಿ” ಎನ್ನುವ ಈ ರಕ್ಷೆ ಇಲ್ಲದೇ ಹಬ್ಬ- ಹುಣ್ಣಿಮೆಗಳಂದು, ರವಿವಾರದ ರಜಾ ದಿನಗಳಂದು ನಮ್ಮ ನೆತ್ತಿಗೂ ಎಣ್ಣೆ ಬಿಸಿನೀರು ಬೀಳುತ್ತಿರಲಿಲ್ಲ.
‘ರೋಮರೋಮಗಳಲ್ಲಿ ಭೀಮರಕ್ಷಿಯ ಬಲ ಕೊರಳಾಗ ಕಟ್ಟೀರಿ ಒಂದಾನ’ ತಮ್ಮ ‘ಕರಡಿ ಕುಣಿತ’ದಲ್ಲಿ ಬೇಂದ್ರೆಯವರು ಹಾಡಿದಂತೆ ನಾವೂ ಕೂಡ ಸಣ್ಣವರಿದ್ದಾಗ ಕರಿದಾರದ ಕೊರಳ ತಾಯತದಲ್ಲಿ ಈ ಕರಡಿ ಕೂದಲಿನ ಭೀಮರಕ್ಷೆಯನ್ನು ಕಟ್ಟಿಕೊಂಡೇ ಬೆಳೆದವರು.
“ ನೀನಾವ ಧರ್ಮಂ ಗುರಿಗೆಯ್ದು ಹೊರಟಿಹೆಯೋ ಆ ಧರ್ಮದೇವತೆಯೇ ರಕ್ಷೆಯಾಗಲಿ ನಿನಗೆ!
ನೀಂ ಪೂಜೆಗೈದಿರ್ಪ ದೇವಾನುದೇವತೆಗಳೆಲ್ಲರೂ ನಿನಗಕ್ಕೆ ರಕ್ಷೆ!
ಮಾತಾಪ್ರೀತಿ,ಪಿತೃಭಕ್ತಿ, ಜನದೊಲ್ಮೆಗಳ್ ಚಿರಜೀವವಂ ನಿನಗೆ ದಯೆಗೈಯ್ಯೆ!
ಗಿರಿವನಂ ಪಕ್ಷಿಪನ್ನಗರೆಲ್ಲರುಂ ರಕ್ಷೆಯಕ್ಕಯ್ ನಿನಗೆ!
ರಕ್ಷಿಸಲಿ ಹಗಲಿರುಳು ಬೈಗುಬೆಳಗುಗಳಿನಂ ಶಶಿ ತಾರೆ ಸಪ್ತರ್ಷಿ ಮಂಡಲಂ ದಿಕ್ಪಾಲ ದೇವದಾನವರೆಲ್ಲರುಂ ರಕ್ಷಿಸಲಿ!
ಕ್ರಿಮಿಕೀಟ ಕಪಿ ಚೇಳುಗಳ್ ಹುಲಿ ಸಿಂಹನಕ್ಕಲಂ ಕಾಳ್ಕೋಣ ಮೊದಲಪ್ಪ ವಿಷಜಂತು ಕೋಳ್ಮಿಗಂಗಳ್ ಕಾಪಾಡಲಿ ನನ್ನ ಮೊಲೆವಾಲ ಮೂರ್ತಿಯಂ ರವಿಕುಲ ಲಲಾಮನೀ ರಾಮಾಭಿರಾಮನುಂ !
ಮಗುವು ಮಜ್ಜನಕಿಳಿಯುವಂದು ಜಲದೇವಿಯರೇ, ಮಕರ ನಕ್ರಗಳಿಂದೆ ರಕ್ಷಿಸಿಂ! ರಕ್ಷಿಸಿಂ ಕಾಂತಾರದಧಿದೇವಿಯರೇ, ಕಂದನಡವಿಯೊಳ್..ಪುತ್ತಿನೆಡೆ ಪವಡಿಸಿರೆ, ಮತ್ತೆ ಮರಗಳ ಕೆಳಗೆ ತಂಪು ನೆಳಲೊಳ್ ಮಲಗಿರಲ್ಕೆ! ತಾಯೊಲವಾಣೆ ನಿಮಗೆ, ಓ ಸಿಡಿಲ್ಮಿಂಚು, ಬಿರುಗಾಳಿಗಳೇ ಕೇಳಿಮ್ ಹೆತ್ತು ಹೊರೆದೀ ಹೃದಯದಭಿಶಾಪಂ ನಿಮಗಕ್ಕೆ ಹಸುಳೆ ರಾಮಗೆ ನಿಮ್ಮ ಕತದಿಂದೆ ಭವಿಸಿದಡೆ ಕೇಡು! ಓ ವಿಧಿಯೇ, ಹೇ ಸರ್ವಲೋಕಪ್ರಭೂ, ಕೊಳ್ಳಿದೋ ನಿವೇದಿಸುವೆನಾತ್ಮದೊಲುಮೆಯಂ ರಾಮ ಮಂಗಲ ಕಾರಣಂ ತವ ಚರಣ ತಲಕೆ”!
ವನವಾಸಕ್ಕೆ ಹೊರಟುನಿಂತ ರಾಮಚಂದ್ರನಿಗೆ ಕೌಸಲ್ಯೆ ನೀಡಿದ ಹರಕೆ-ರಕ್ಷೆಯಿದು. ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ದ ಅಯೋಧ್ಯಾ ಸಂಪುಟದಲ್ಲಿ ಬರುವ ಅತ್ಯಂತ ಹೃದಯಸ್ಪರ್ಶಿ ಭಾಗವಿದು. ಮಗನಾದವನು ದೇವಾಧಿದೇವನಾದರೇನು ತಾಯ್ ಕರುಳಿಗೆ ಅವನು ಹಸುಳೆಯೇ ತಾನೇ?
ಇಡಿಯ ಭರತವರ್ಷ ಅಯೋಧ್ಯಾನಗರಿಯ ರಾಮಲಲ್ಲಾನ ಸಂಭ್ರಮೋತ್ಸಾಹದಲ್ಲಿದೆ. ಜಾತಿ-ವರ್ಗ-ವರ್ಣ-ಪಂಥ-ರಾಜಕಾರಣ ಎಲ್ಲ ರಾಜಕೀಯಗಳಾಚೆಯೂ ಪುರುಷೋತ್ತಮನಾದ ಆ ‘ಶ್ರೀ ಸಂಸಾರಿ’ ಯ ರಕ್ಷೆ ಮನುಷ್ಯತ್ವವನ್ನು, ಜೀವನ ಮೌಲ್ಯಗಳನ್ನು ಪೊರೆಯಲೆಂಬ ಸದಾಶಯಗಳೊಂದಿಗೆ..
ನಾವು ಕೇಳಿ ಬೆಳೆದದ್ದನ್ನು ಹಾಡಿ ಮುಂದಿನ ಪೀಳಿಗೆಗೆ ದಾಟಿಸುವ ಮಧುರ ಶಬ್ದಗಳಲ್ಲಿರುವ ವೈವಿಧ್ಯತೆಯನ್ನು ಸುಂದರವಾಗಿ ಮೂಡಿಸಿದ್ದೀರಿ. ವಿಶ್ವದ ಯಾವ ಮೂಲೆಗೆ ಹೋದರೂ ಜೋಗುಳವಿಲ್ಲದ ಜಾಗವಿಲ್ಲ.
ಅಮಿತಾ ಅವರ ಜೋಗುಳ ಕೇಳುತ್ತ ನಿದ್ರಿಸಿದವನಿಗೆ ಎಚ್ಚರಾದಾಗ ರವಿವಾರ ಸಂಜೆ!
ಜೋಗುಳಗಳು ಎಂದೂ ಮಾಸೋದಿಲ್ಲ ಎಂದೂ ಬೇಸರ ತರೋದಿಲ್ಲ. ಯಾವವೂ ಹಳೆಯದಾಗೋದಿಲ್ಲ. ತಲೆತಲಾಂತರಗಳಿಂದ ಮತ್ತು ದೇಶಾಂತರಗಳಿಗೆ ವಲಸೆ ಹೋಗಿ ಮಕ್ಕಳನ್ನು ಮಲಗಿಸುತ್ತವೆ, ಭಾಷೆಯ ಮುಲಾಜಿಲ್ಲದೆ. ತಾಯಿಯ ದನಿಯೊಂದಿಗೆ ಆಕೆಯ ಸ್ಪರ್ಷ್, ಗೋಣಾಡಿಸುವ ರೀತಿ, ಮಗುಗೆ ಅರ್ಥ ತಿಳಿದರೂ ತಿಳಿಯದಿದ್ದರೂ ಅನುಭವಿಸುತ್ತದೆ. ಅದನ್ನರಿತ ತಾಯಿಯ ಸಂತೋಷಕ್ಕೆ ಎಣೆಯೇ ಇಲ್ಲ. ಆ ದೈವೀ ಬಾಂಧವ್ಯ ಆಗಲಿಂದಲೇ ಪ್ರಾರಂಭ. ಜೋಗುಳಗಳನ್ನು ಬರೆದು ಕೊಟ್ಟು ಜೊತೆಗೆ ಗೌರಿಯವರು ತಮ್ಮ ಅವಳಿಗಳ ಮಾತನ್ನೂ ಬರೆದು ಮುದ ತಂದಿದ್ದಾರೆ. ಅದು ‘ಪಾರ್ಕಡಲ್ ಅಲೈಮೇಲೆ’ (ತಮಿಳಿನಲ್ಲಿ ಕ್ಷೀರಸಾಗರ) ಪ್ರಸಿದ್ಧ ಹಾಡನ್ನು ಸಹ ನೆನಪಿಸಿತು.
ಅಮಿತಾ ಅವರ ಹಾಡಿನಲ್ಲಿ ಬಂದ ಕಾಯಿಗಳಲ್ಲಿ ಹೆಚ್ಚು ಕಡಿಮೆ ಅರ್ಧದಷ್ಟೂ ನನಗೆ ಗುರುತು ಹಿಡಿಯಲಾಗಲಿಲ್ಲ. ಜೋಗುಳ ಮಾತ್ರ ಹಿಂದೆ ಕೇಳಿದ್ದರೂ ಮತ್ತೆ ಕೇಳಿ ಆನಂದಿಸಿದೆ. ಜೋಗುಳಗಳು ನಮ್ಮನ್ನು ಬೇರೆಯ ಲೋಕಕ್ಕೇ ಕರೆದೊಯ್ಯುತ್ತವೆಯಲ್ಲವೇ?
ನಾವು ಕೇಳಿ ಬೆಳೆದದ್ದನ್ನು ಹಾಡಿ ಮುಂದಿನ ಪೀಳಿಗೆಗೆ ದಾಟಿಸುವ ಮಧುರ ಶಬ್ದಗಳಲ್ಲಿರುವ ವೈವಿಧ್ಯತೆಯನ್ನು ಸುಂದರವಾಗಿ ಮೂಡಿಸಿದ್ದೀರಿ. ವಿಶ್ವದ ಯಾವ ಮೂಲೆಗೆ ಹೋದರೂ ಜೋಗುಳವಿಲ್ಲದ ಜಾಗವಿಲ್ಲ.
ಅಮಿತಾ ಅವರ ಜೋಗುಳ ಕೇಳುತ್ತ ನಿದ್ರಿಸಿದವನಿಗೆ ಎಚ್ಚರಾದಾಗ ರವಿವಾರ ಸಂಜೆ!
-ರಾಂ
LikeLike
ಜೋಗುಳಗಳು ಎಂದೂ ಮಾಸೋದಿಲ್ಲ ಎಂದೂ ಬೇಸರ ತರೋದಿಲ್ಲ. ಯಾವವೂ ಹಳೆಯದಾಗೋದಿಲ್ಲ. ತಲೆತಲಾಂತರಗಳಿಂದ ಮತ್ತು ದೇಶಾಂತರಗಳಿಗೆ ವಲಸೆ ಹೋಗಿ ಮಕ್ಕಳನ್ನು ಮಲಗಿಸುತ್ತವೆ, ಭಾಷೆಯ ಮುಲಾಜಿಲ್ಲದೆ. ತಾಯಿಯ ದನಿಯೊಂದಿಗೆ ಆಕೆಯ ಸ್ಪರ್ಷ್, ಗೋಣಾಡಿಸುವ ರೀತಿ, ಮಗುಗೆ ಅರ್ಥ ತಿಳಿದರೂ ತಿಳಿಯದಿದ್ದರೂ ಅನುಭವಿಸುತ್ತದೆ. ಅದನ್ನರಿತ ತಾಯಿಯ ಸಂತೋಷಕ್ಕೆ ಎಣೆಯೇ ಇಲ್ಲ. ಆ ದೈವೀ ಬಾಂಧವ್ಯ ಆಗಲಿಂದಲೇ ಪ್ರಾರಂಭ. ಜೋಗುಳಗಳನ್ನು ಬರೆದು ಕೊಟ್ಟು ಜೊತೆಗೆ ಗೌರಿಯವರು ತಮ್ಮ ಅವಳಿಗಳ ಮಾತನ್ನೂ ಬರೆದು ಮುದ ತಂದಿದ್ದಾರೆ. ಅದು ‘ಪಾರ್ಕಡಲ್ ಅಲೈಮೇಲೆ’ (ತಮಿಳಿನಲ್ಲಿ ಕ್ಷೀರಸಾಗರ) ಪ್ರಸಿದ್ಧ ಹಾಡನ್ನು ಸಹ ನೆನಪಿಸಿತು.
ಅಮಿತಾ ಅವರ ಹಾಡಿನಲ್ಲಿ ಬಂದ ಕಾಯಿಗಳಲ್ಲಿ ಹೆಚ್ಚು ಕಡಿಮೆ ಅರ್ಧದಷ್ಟೂ ನನಗೆ ಗುರುತು ಹಿಡಿಯಲಾಗಲಿಲ್ಲ. ಜೋಗುಳ ಮಾತ್ರ ಹಿಂದೆ ಕೇಳಿದ್ದರೂ ಮತ್ತೆ ಕೇಳಿ ಆನಂದಿಸಿದೆ. ಜೋಗುಳಗಳು ನಮ್ಮನ್ನು ಬೇರೆಯ ಲೋಕಕ್ಕೇ ಕರೆದೊಯ್ಯುತ್ತವೆಯಲ್ಲವೇ?
LikeLike