ಬಾಲಿ : ಹಿಂದೂ ಮಹಾಸಾಗರದಲ್ಲೊಂದು ಅದ್ಭುತ ದ್ವೀಪ 

  • ರಾಮಶರಣ ಲಕ್ಷ್ಮೀನಾರಾಯಣ

(ಚಿತ್ರ ಕೃಪೆ: ವಿಕಿಪೀಡಿಯ)

ಬಾಲಿ ಪ್ರಧಾನವಾಗಿ ಹಿಂದೂ ದೇಶ. ಸಹಜವಾಗಿಯೇ ಇಲ್ಲಿನ ಸಂಸ್ಕೃತಿಯ ಮೇಲೆ ಭಾರತದ ಪ್ರಭಾವ ಅಗಾಧವಾಗಿದೆ. ಸುಮಾರು ಕ್ರಿ.ಶ ೧ನೇ ಶತಮಾನದಲ್ಲಿ ವ್ಯಾಪಾರಿಗಳು ಭಾರತದಿಂದ ಪಕ್ಕದ ದ್ವೀಪ ಜಾವಾಕ್ಕೆ ಬಂದಿಳಿದು, ತಮ್ಮೊಡನೆ ಭಾರತದ ಸಂಸ್ಕೃತಿಯನ್ನು ತಂದರು. ತದನಂತರ ಹಿಂದೂ ರಾಜ ಮನೆತನಗಳು ಬಾಲಿಯನ್ನೂ ಆಳಿದವು. ಇವೆರಡೂ ದ್ವೀಪಗಳ ನಡುವಿನ ಅಂತರ ಕೇವಲ ೨.೫ ಕಿ.ಮೀ ಅಷ್ಟೇ. ಆ ಹಾದಿಯಲ್ಲೇ ಭಾರತದ ನೃತ್ಯ ಪ್ರಕಾರಗಳೂ ಬಾಲಿಗೆ ಬಂದಿಳಿದವು. ನರ್ತಕರ ವೇಷಭೂಷಣಗಳು, ನೃತ್ಯ ರೂಪಕದ ಕಥಾ ಹಂದರ ಇವೆಲ್ಲ ಇದಕ್ಕೆ ಸಾಕ್ಷಿ. ಈ ಚಿಕ್ಕ ನಾಡಿನಲ್ಲಿ ಹಲವಾರು ಪ್ರಕಾರದ ನೃತ್ಯಗಳು ಪ್ರಚಲಿತವಾಗಿವೆ. ಕೆಲವು ಸಾಂಪ್ರದಾಯಿಕ ನೃತ್ಯಗಳನ್ನು ಇಲ್ಲಿನ ದೇವಸ್ಥಾನದ ಒಳ ಆವಾರಗಳಲ್ಲಿ ಕೇವಲ ಸ್ಥಳೀಯರ ಎದುರು ಪ್ರದರ್ಶಿಸಲ್ಪಡುತ್ತವೆ. ಇವುಗಳನ್ನು ನೋಡಲು ಪ್ರವಾಸಿಗರಿಗೆ ಅನುಮತಿ ಇಲ್ಲ.

ನಮ್ಮಂತಹ ಪ್ರವಾಸಿಗರಿಗೆ ಇಲ್ಲಿನ ಕೆಲವು ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರದರ್ಶಿಸುವ ನೃತ್ಯಗಳನ್ನು ವೀಕ್ಷಿಸುವ ಉತ್ತಮ ಅವಕಾಶಗಳಿವೆ. ಇವುಗಳ ಬಗ್ಗೆ ಬಾಲಿಗೆ ಹೋಗುವ ಮೊದಲು ಸ್ವಲ್ಪ ಮಾಹಿತಿ ತೆಗೆದುಕೊಂಡಿದ್ದೆವು. ನಾವು ಮೊದಲು ಪಯಣಿಸಿದ್ದು ದ್ವೀಪದ ದಕ್ಷಿಣ ತುದಿಯಲ್ಲಿದ್ದ ಬಿಂಗಿನ್ ಎಂಬಲ್ಲಿಗೆ. ಇಲ್ಲಿಂದ ಸುಮಾರು ೬ ಕಿ.ಮೀ ದೂರದಲ್ಲಿ ಉಲುವಾಟು ಎಂಬ ಊರಿದೆ. ಬಾಲಿ ಪ್ರವಾಸಿಗಳ ಆಯಸ್ಕಾಂತವಾಗಿದ್ದಲ್ಲದೇ, ತಿರುವು ಮುರುವಿನ ರಸ್ತೆಗಳೂ ಕಿರಿದಾಗಿರುವುದರಿಂದ ಈ ದೂರ ಕ್ರಮಿಸಲು ಸುಮಾರು ೩೦ ನಿಮಿಷ ಬೇಕಾಗುತ್ತದೆ. ಉಲುವಾಟು, ಸಾಗರ ತಟದ ಪ್ರಪಾತದಂಚಿನಲ್ಲಿ ನೇತಾಡುತ್ತಿರುವ ದೇವಸ್ಥಾನಕ್ಕೆ ಪ್ರಸಿದ್ಧವಾಗಿದೆ. ಇತ್ತೀಚೆಗೆ ಬಿ.ಬಿ.ಸಿ ಯಲ್ಲಿ ಪ್ರಸಾರವಾದ “ಅರ್ಥ್” ಸರಣಿಯಲ್ಲಿ, ಪ್ರವಾಸಿಗಳೊಡನೆ ಆಹಾರಕ್ಕೆ ವಿನಿಮಯದಾಟವಾಡುವ ಕೋತಿಗಳನ್ನು ನೀವು ನೋಡಿರಬಹದು. ಈ ಕೋತಿಗಳು  ಈ ದೇವಸ್ಥಾನದ ಆವಾರದಲ್ಲಿಯೇ ನೆಲಸಿವೆ. ಇದು ಸೂರ್ಯಾಸ್ತವನ್ನು ವೀಕ್ಷಿಸಲು ಪ್ರಶಸ್ತ ಸ್ಥಳ. ಇಲ್ಲಿ ಸೂರ್ಯಾಸ್ತದ ಸಮಯ “ಕೆಚಕ್” ನೃತ್ಯವನ್ನು ಪ್ರದರ್ಶಿಸುತ್ತಾರೆ. ಸೀತಾಪಹರಣದಿಂದ ರಾವಣ ವಧೆಯವರೆಗಿನ ರಾಮಾಯಣದ ಕಥಾವಸ್ತು ಈ ರೂಪಕದ ಮೂಲ ಹಂದರ. ಯಾವುದೇ ಹಾಡು, ವಾದ್ಯಗಳ ಉಪಯೋಗ ಇಲ್ಲಿಲ್ಲ; ಸುಮಾರು ೩೦-೪೦ ಪುರುಷರು ಲಯಬದ್ಧವಾಗಿ ಚಕ್-ಚಕ್ ಎಂದು ಬಾಯಲ್ಲಿ ಮಾಡುವ ಶಬ್ದವೇ ಇಡೀ ರೂಪಕಕ್ಕೆ ವಿಶಿಷ್ಟ ಅನುಭವ ಕೊಡುತ್ತದೆ. ಈ ಧ್ವನಿ ಕೋತಿ ಮಾಡುವ ಶಬ್ದವನ್ನು ಹೋಲುವುದರಲ್ಲಿ ಅನುಮಾನವಿಲ್ಲ. ರಾಮಾಯಣದ ಕಥೆ, ಕೋತಿಗಳ ಧ್ವನಿಯ ಹಿಮ್ಮೇಳ, ತುಂಟ ಕೋತಿಗಳ ಸಮ್ಮುಖದಲ್ಲಿ ನಡೆಯುವ ನೃತ್ಯ, ಇವನ್ನೆಲ ಗಮನಿಸಿದವರಿಗೆ ಇದು ಕಾಕತಳಿಯವೇ, ಇದೆಲ್ಲ ವಿಶೇಷವಾಗಿ ವಿನ್ಯಾಸಮಾಡಿದ್ದೇ ಎಂಬ ವಿಚಾರಗಳು ನೋಡುಗರ ಮನದಲ್ಲಿ ಮೂಡಿದರೆ ಆಶ್ಚರ್ಯವಿಲ್ಲ. ನನಗೆ ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿಲ್ಲ. ಹಿಮ್ಮೇಳದ ಪುರುಷರು ವರ್ತುಲಾಕಾರದ ವೇದಿಕೆಯ ಸುತ್ತ ಕುಳಿತಿರುತ್ತಾರೆ, ಇವರ ಮಧ್ಯದಲ್ಲಿ ನರ್ತಕರು ನರ್ತಿಸುತ್ತಾರೆ. ಹಿಮ್ಮೇಳದವರ ಧ್ವನಿಯಲ್ಲಿನ ಏರಿಳಿತವೇ ದೃಶ್ಯದ ಭಾವನೆಗಳನ್ನು ಸಮರ್ಥವಾಗಿ ಪ್ರತಿಬಿಂಬಿಸುತ್ತದೆ. ಚಕ್ ಶಬ್ದಗುಚ್ಛಗಳ ವಿಶಿಷ್ಟ ಉಪಯೋಗ, ಸೂರ್ಯಾಸ್ತದ ಅದ್ಭುತ ಹಿನ್ನೆಲೆ ನೋಡುಗರಿಗೆ ಮರೆಯಲಾರದ ಅನುಭವವನ್ನು ಕೊಡುತ್ತದೆ; ನನಗಂತೂ ಕೊಟ್ಟಿತು (ವಿಡಿಯೋ ೧). 

(ಪ್ರಪಾತದಂಚಿನ ದೇವಸ್ಥಾನ, ಸೂರ್ಯಾಸ್ತಗಳ ಹಿನ್ನಲೆಯಲ್ಲಿ ಕೆಚಕ್ ನೃತ್ಯ; ಬಲಕ್ಕೆ – ಹನುಮಂತ ಕಟ್ಟೆಯೇರಿ ನಿಂತಿರುವುದು)

ಬಾಲಿ ದ್ವೀಪದ ಸರಿ ಸುಮಾರು ಮಧ್ಯ ಭಾಗದಲ್ಲಿರುವ ಉಬಡ್ ಇಲ್ಲಿನ ಸಾಂಸ್ಕೃತಿಕ ರಾಜಧಾನಿಯೆಂದೇ ಹೇಳಬಹುದು. ಹಚ್ಚ ಹಸಿರಿನ ಬೆಟ್ಟ ಗುಡ್ಡಗಳ ತಪ್ಪಲಿನಲ್ಲಿ ತಣ್ಣಗೆ ನೆಲೆಸಿರುವ ಊರು ಪ್ರವಾಸಿಗರಿಂದ ಗಿಜಿಗುಟ್ಟುತ್ತದೆ. ಇಲ್ಲಿ ಸರಸ್ವತಿ ದೇವಸ್ಥಾನ, ಕರಕುಶಲ ಕಲೆ, ಸುಂದರ ಚಿತ್ರಗಳನ್ನು ಮಾರುವ ಅಸಂಖ್ಯಾತ ಅಂಗಡಿಗಳು ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರಗಳು. ಉಬಡ್ ಅರಮನೆಯ ಪ್ರಾಕಾರದಲ್ಲಿ ಪ್ರತಿ ಸಂಜೆ “ಲೆಗೊಂಗ್” ಎಂಬ ನೃತ್ಯ ಪ್ರಕಾರದ ಪ್ರದರ್ಶನ ನಡೆಯುತ್ತದೆ. ಇದು ಇಲ್ಲಿನ ಅತ್ಯಂತ ಹಳೆಯ ನೃತ್ಯ ಪದ್ಧತಿ. ಇದನ್ನು ರಾಜ ಮನೆತನದ ಮನರಂಜನೆಗಾಗಿ ಮೀಸಲಾಗಿತ್ತು. ಪ್ರತಿದಿನ ಬೇರೆ ಬೇರೆ ಕಥೆಗಳನ್ನಾಧರಿಸಿದ ರೂಪಕಗಳನ್ನು ಪ್ರದರ್ಶಿಸುತ್ತಾರೆ. ಈ ಪ್ರಕಾರದಲ್ಲಿ ಗಂಡಸರು- ಹೆಂಗಸರು ಜೊತೆಯಾಗಿಯೇ ನರ್ತಿಸುತ್ತಾರೆ. ನರ್ತಕರು ಚಿನ್ನದ ರೇಖೆಗಳಿಂದ ನವಿರಾದ ಕಸೂತಿ ಹಾಕಿದ ಹೊಳೆಯುವ ರೇಷ್ಮೆಯ ಬಟ್ಟೆಯನ್ನು, ಸೂಕ್ಷ್ಮವಾದ ವಿನ್ಯಾಸದ ಆಭರಣಗಳನ್ನು ಧರಿಸರುತ್ತಾರೆ. ಕಣ್ಣಿನ, ಹಸ್ತದ ಚಲನೆಗಳು ಈ ನೃತ್ಯದ ವೈಶಿಷ್ಟ್ಯ. ಗಮೆಲಾನ್ ಎಂಬ ಸ್ಥಳೀಯ ವಾದ್ಯ ಹಾಗೂ ಮೃದಂಗದಂತಹ ತಾಳ ವಾದ್ಯವನ್ನು ಹಿಮ್ಮೇಳವಾಗಿ ಉಪಯೋಗಿಸುತ್ತಾರೆ (ವಿಡಿಯೋ ೨). ನನಗೆ ಮುಖ್ಯವಾಗಿ ಕಂಡು ಬಂಡ ವ್ಯತ್ಯಾಸವೆಂದರೆ ಹಿಮ್ಮೇಳದಲ್ಲಿ ಹಾಡುಗಾರರಿರಲಿಲ್ಲ; ನಮ್ಮಲ್ಲಿನ ನೃತ್ಯ ಪ್ರಕಾರಗಳಲ್ಲಿರುವಷ್ಟು ಮುದ್ರೆಗಳ ಅಥವಾ ಹೆಜ್ಜೆಗಳ ವೈವಿಧ್ಯತೆ ಇರಲಿಲ್ಲ. ಸುಮಾರು ೯೦ ನಿಮಿಷಗಳ ಕಾಲ ಉಬಡ್ ಅರಮನೆಯ ಹಿನ್ನಲೆಯಲ್ಲಿ ಕಂಡ ಮನೋಹರ ನೃತ್ಯ ಪ್ರದರ್ಶನ ಬಾಲಿಯ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಬಾಗಿಲನ್ನು ತೆರೆದಿತ್ತು. ಇನ್ನೊಮ್ಮೆ ಈ ದೇಶಕ್ಕೆ ಭೇಟಿ ಕೊಡಬೇಕು, ಇನ್ನಷ್ಟು ಇಲ್ಲಿನ ಸಂಪತ್ತನ್ನು ಅನುಭವಿಸಬೇಕೆಂಬ ಅದಮ್ಯ ಬಯಕೆಗೆ ಒತ್ತಾಸೆ ಕೊಟ್ಟಿತು. ನಾವು ನೋಡಿದ ಪ್ರದರ್ಶನದಲ್ಲಿ ಮುಖ್ಯವಾಗಿ ಗರುಡ-ವಿಷ್ಣು ನೃತ್ಯವಿದ್ದರೂ (ವಿಡಿಯೋ ೩). ಅಂದು, ಮುಖವಾಡ ಧರಿಸಿ ಮಾಡುವ ಟೊಪೆಂಗ್ ನೃತ್ಯ, ಬೀಸಣಿಗೆಯನ್ನು ಉಪಯೋಗಿಸಿ ಮಾಡುವ ನೃತ್ಯ ಹಾಗೂ ಯುವ ದ್ವಯರ ಯೋಧ ನೃತ್ಯ (ಬಾರಿಸ್) ಪ್ರದರ್ಶನಗಳೂ ಸೇರಿದ್ದು, ವಿಶೇಷ ಬೋನಸ್ ಸಿಕ್ಕಂತಾಯಿತು.

ಕೆಳಗಿನ ಚಿತ್ರಗಳಲ್ಲಿ (ಎಡದಿಂದ ಬಲಕ್ಕೆ) ನರ್ತಕರ ಹಾವ ಭಾವ, ದಿರಿಸು, ಹಸ್ತ ಮುದ್ರೆ, ಮುಖವಾಡ ನೃತ್ಯ (ಟೊಪೆಂಗ್), ಯುವ ಯೋಧನ ಬಾರಿಸ್ ನೃತ್ಯ, ಬೀಸಣಿಗೆ ನೃತ್ಯ ಹಾಗೂ ಹಿನ್ನಲೆಯಲ್ಲಿ ಸಾಂಪ್ರದಾಯಿಕ ಬಾಲಿ ವಾಸ್ತುಶಿಲ್ಪಗಳನ್ನು ಕಾಣಬಹುದು.

  • ರಾಮಶರಣ
ಕೆಚಕ್ ನೃತ್ಯ: ರಾವಣನ ಅಂತ್ಯ (ವಿಡಿಯೋ ೧)
ಲೆಗೊಂಗ್ ನೃತ್ಯ ಪ್ರದರ್ಶನದ ಮೊದಲು ಗಮೆಲಾನ್ ಹಿಮ್ಮೇಳದ ಝಲಕ್ (ವಿಡಿಯೋ ೨)
ಗರುಡ ವಾಹನ ನೃತ್ಯ: ಲೆಗೊಂಗ್ ಶೈಲಿ (ವಿಡಿಯೋ ೩)

3 thoughts on “ಬಾಲಿ : ಹಿಂದೂ ಮಹಾಸಾಗರದಲ್ಲೊಂದು ಅದ್ಭುತ ದ್ವೀಪ 

  1. ಬಾಲಿಯ ಸಣ್ಣ ಇತಿಹಾಸ ಮತ್ತು ಅಲ್ಲಿನ ಪ್ರೇಕ್ಷಣೀಯ ಸ್ಥಳಗಳ ಮತ್ತು ಸಂಸ್ಕೃತಿಯ ಸುಂದರ ಪರಿಚಯ. ಅಲ್ಲಿನ ಕೆಚಕ್ ನೃತ್ಯದ ಬಗೆಗಿನ ವಿವರಣೆ. ಬಾಲಿಯ ಬಾಗಿಲಿಗೆ ತಂದಿವೆ, ಇನ್ನು ಹೋಗಿ ಬರುವುದೊಂದೇ ಬಾಕಿ.

    – ಕೇಶವ

    Like

  2. ಬಾಲಿಯ ಬಾಗಿಲಲ್ಲೀ ನಿಲ್ಲಿಸಿ ತೋರಿಸಿದಂತಾಯಿತು. ಕೆಚಕ್ ನೃತ್ಯಶೈಲಿಯಲ್ಲಿ ರಾಮ ಬಿಲ್ಲು ಝೇಂಕರಿಸಿದಾಗ ರಾವಣನ ಕಚಕ್ ಅಂತ ಹತ್ಯೆಯಾಗುವ ಘಟ್ಟ ಪರಿಣಾಮಕಾರಿಯಾಗಿದೆ. ಕೆಂಪು ಕೆಚಪ್ ಹರಿದಿದ್ದರೆ ಇನ್ನೂ ಡ್ರಮಾಟಿಕ್ ಆಗುತ್ತಿತ್ತು. ಅದಲ್ಲದೆ ಅವರ ವಾದ್ಯಗಳ ಶ್ರವಣದ ಮಾಸಲೆ ಮಾತ್ರ ಸಿಕ್ಕಿತು. ಈ ಟೂರಿಸ್ಟ್ ಟೇಸ್ಟರ್ ಗೆ ವರ್ಣರಂಜಿತ ಚಿತ್ರಗಳು ಮತ್ತು ವಿಡಿಯೋಗೆ ನಾನೂ ಬಲಿಯಾಗಿದ್ದೇನೆ! ಇನ್ನು ಹೋರಾಡಬೇಕಷ್ಟೇ!

    Like

  3. ಉತ್ತಮ ಪ್ರವಾಸ ಕಥನ, ರಾಮ್, ಬಾಲಿಗೇ ಹೋಗಿಬಂದಂತೆ ಆಯಿತು. ಜೊತೆಗಿನ ಚಿತ್ರಗಳೂ ಅದ್ಭುತ. ನಮ್ಮ ಪಟ್ಟಿಯಲ್ಲಿ ಇದೆ, ಹೋಗಬೇಕೆಂಬ ಆಸೆ ಬಲವಾಯಿತು ಇನ್ನೂ.

    Like

Leave a Reply to Ln Gudur Cancel reply

Your email address will not be published. Required fields are marked *