ಮಾಚು-ಪೀಕ್ಚೂ ಚಾರಣ – ಅನ್ನಪೂರ್ಣಾ ಆನಂದ್

ಇತಿಹಾಸ:

ದಕ್ಷಿಣ ಅಮೇರಿಕಾ ಖಂಡದ ಪೆರು ದೇಶದಲ್ಲಿರುವ ಕುಸ್ಕೋ ನಗರದ ಬಳಿ ಇರುವ ಮಾಚು-ಪೀಕ್ಚೂ (Machu-Picchu), ಇಂಕಾ (Inca) ಜನಾಂಗದ ಧಾರ್ಮಿಕ ಸ್ಥಳ. ಇಂಕಾ ನಾಗರೀಕತೆ ಸುಮಾರು ೧೩ನೇ ಶತಮಾನದಲ್ಲಿ ಹುಟ್ಟಿ, ಬೆಳದು, ಉತ್ತುಂಗಕ್ಕೇರಿ, ಸ್ಪೇನ್ ದೇಶದ ಧಾಳಿಯಿಂದ (೧೬ನೇ ಶತಮಾನ) ಪತನಗೊಂಡ ಬಹುಪ್ರಸಿದ್ಧ ನಾಗರೀಕತೆ ಮತ್ತು ಜನಾಂಗ. ೧೩ನೇ ಶತಮಾನದಲ್ಲಿ, ಪ್ರಪಂಚದ ಬೇರೆಡೆಗಳಲ್ಲಿ ನಾಗರೀಕತೆ ಬಹಳ ಮುಂದಿದ್ದರೂ, ಈ ಜನಾಂಗ, ಇದೆಲ್ಲದರಿಂದ ದೂರವಿದ್ದು, ತನ್ನದೇ ಆದ ರೀತಿಯಲ್ಲಿ ಬೆಳೆಯಿತು! ಬೆಟ್ಟಗುಡ್ಡಗಳಲ್ಲೇ ವಾಸಮಾಡುತ್ತಿದ್ದ ಈ ಜನಾಂಗ, ಕಡಿದಾದ ಜಾಗಗಳಲ್ಲಿ ಮನೆ, ಹಳ್ಳಿ, ಊರುಗಳನ್ನು ಕಟ್ಟಿ, ಈ ಗುಡ್ಡಗಳಲ್ಲಿ, ಮೆಟ್ಟಿಲುಗಳನ್ನು ಮಾಡಿ ವ್ಯವಸಾಯವನ್ನು ಮಾಡುತ್ತಿದ್ದರು. ಈ ವ್ಯವಸಾಯ ಕ್ಷೇತ್ರಗಳಿಗೆ ಮಳೆ ಮತ್ತು ಈ ಗುಡ್ಡದಳಿಂದ ಕರಗಿ, ಹರಿದು ಬರುವ ಮಂಜಿನ ನೀರನ್ನುಪಯೋಗಿಸಿ ದವಸ-ಧಾನ್ಯಗಳನ್ನು ಬೆಳೆಯುತ್ತಿದ್ದರು. ಇಂಟಿ (ಸೂರ್ಯ) ಇವರ ಮುಖ್ಯ ದೇವರು. ತಮ್ಮ ರಾಜನನ್ನು ಅವರು ಸೂರ್ಯನ ಮಗನೆಂದು ಭಾವಿಸುತ್ತಿದ್ದರು. “ಕ್ವೆಚುವಾ” (Quechua) ಇವರು ಬಳಸುತ್ತಿದ್ದ ಭಾಷೆ (ಈಗಲೂ ಈ ಭಾಷೆಯನ್ನು ಬಳಸುವ ಜನರು ಅಲ್ಪ ಸ್ವಲ್ಪ ಇದ್ದಾರೆ).

ಪ್ರಯಾಣ:

ಈ ಇಂಕಾ ಜನರ ಧಾರ್ಮಿಕ ಸ್ಥಳವಾದ ಮಾಚು – ಪೀಕ್ಚೂವನ್ನು ಕುಸ್ಕೋ ನಗರದಿಂದ ತಲುಪಲು ಇರುವ ದಾರಿಯೇ ಇಂಕಾ ಟ್ರೈಲ್ (Inca Trail).  ೩೯ ಕಿಲೋ ಮೀಟರ್ (೨೪ ಮೈಲಿ) ಉದ್ದದ ಈ ಹಾದಿಯನ್ನು ಸುಮಾರು ೩ ಅಥವಾ ೪ ದಿನಗಳಲ್ಲಿ ನಡೆಯಬಹುದು. ಸುಮಾರು ೩೦೦೦ ಮೀಟರ್ ಎತ್ತರದಿಂದ ಪ್ರಾರಂಭವಾಗುವ ಈ ಹಾದಿ, ೪೨೧೫ ಮೀಟರ್ (ಈ ಹಾದಿಯ ಉತ್ತುಂಗ) ತಲುಪಿ, ಮತ್ತೆ ೨೪೩೦ ಮೀಟರಿಗೆ ಇಳಿದರೆ ಸಿಗುವುದೀ ಜಗತ್ಪ್ರಸಿದ್ದ ಸ್ಥಳ. ಹಾದಿಯಲ್ಲಿ ಬಹಳಷ್ಟು ಇಂಕಾ ವಸಾಹತುಗಳು (settlements ) ಕಾಣಸಿಗುತ್ತವೆ. ಕ್ಲೌಡ್ ಫಾರೆಸ್ಟ್ ಮೂಲಕ ಹೋಗುವಾಗಲಂತೂ ವಿಶಿಷ್ಟವಾದ ಮರ, ಗಿಡ, ಹಕ್ಕಿಗಳು ಕಾಣಸಿಗುತ್ತವೆ. ಪ್ರತಿ ತಿರುವು ಮುರುವೂ ಅವರ್ಣನೀಯ ಪ್ರಕೃತಿ ಸೌಂದರ್ಯದಿಂದ ತುಂಬಿದೆ! ಆಂಡಿಸ್ (andes ) ಪರ್ವತ ಶ್ರೇಣಿಯನ್ನು ನೋಡುವಾಗ “ಹುಲುಮಾನವ” ಎಂಬ ಉಕ್ತಿಯ ಅರ್ಥ ಮನದಟ್ಟಾಗುತ್ತದೆ!

ಈ ಇಂಕಾ ಟ್ರೈಲ್-ಅನ್ನು ನಡೆಯುವ ಆಸೆ ಬಹಳ ವರ್ಷಗಳಿಂದ ಇತ್ತು. ಈ ವರ್ಷದ ಜನವರಿಯಲ್ಲಿ ಇದರ ಬಗ್ಗೆ ಬಹಳಷ್ಟು ವಿಷಯ ಸಂಗ್ರಹಿಸಿ, ನಾನು, ನನ್ನ ಪತಿ ಆನಂದ್, “Exodus ” ಎಂಬ ಯು.ಕೆ ಕಂಪನಿಯ ಮೂಲಕ ಈ ಪ್ರಯಾಣವನ್ನು ಕೈಗೊಳ್ಳುವ ನಿರ್ಧಾರ ಮಾಡಿದೆವು. ಈ ರೀತಿಯ ಪ್ರವಾಸಗಳಿಗೆ ಕಂಪನಿಗಳ ಮೂಲಕ ಹೋಗುವುದು ಅನುಕೂಲ. ಕ್ಯಾಂಪ್ ಸೈಟ್ಸ್, ಟೆಂಟ್ಸ್, ಟಾಲೆಟ್ಸ್, ಊಟ, ತಿಂಡಿ – ಹೀಗೆ ಎಲ್ಲದರ ವ್ಯವಸ್ಥೆಯನ್ನು ಸುಸಜ್ಜಿತವಾಗಿ ಮಾಡುವುದದಿಂದ ಪ್ರಯಾಣದಲ್ಲಿ ಈ ಅವಶ್ಯಕತೆಗಳ ಬಗ್ಗೆ ಯೋಚನೆ ಮಾಡುವ ತಲೆನೋವು ತಪ್ಪುತ್ತದೆ. ಮೊದಲೇ ಕಷ್ಟಕರವಾದ ಪ್ರಯಾಣ, ಇದರ ಮಧ್ಯೆ ಈ ತಲೆಬಿಸಿ ಬೇಕೇ!

ಆಗಸ್ಟ್ ೨೫ರಿಂದ ೩೧ರ ವರೆಗೆ ಈ ಪ್ರಯಾಣವನ್ನು ನಾನು, ಆನಂದ್ ಮತ್ತೆ ನಮ್ಮೆರಡೂ ಮಕ್ಕಳು, ಮಾಡುವುದೆಂದು ನಿರ್ಧರಿಸಿದೆವು. ನಿಶ್ವಯಿಸಿದ ಕೆಲ ದಿನಗಳಲ್ಲೇ ನಾನು ಮತ್ತು ಆನಂದ್ ನಮ್ಮ ತಯಾರಿ ಪ್ರಾರಂಭಿಸಿದೆವು. ೪ ದಿನಗಳ ಕಾಲ ಸುಮಾರು ೭ – ೮ ಘಂಟೆ ನಡೆಯುವುದು ಅಷ್ಟು ಸುಲಭವಲ್ಲ! ತಯಾರಿಯಿಲ್ಲದೆ ಹೋದರೆ ಬಹಳ ಕಷ್ಟ! ಹಾಗಾಗಿ ವಾರಾಂತ್ಯದ ರಜೆಗಳಲ್ಲಿ ನಡೆಯಲು ಶುರು ಮಾಡಿದೆವು. ೩ ಘಂಟೆಗಳ ನಡಿಗೆಯಿಂದ ಪ್ರಾರಂಭಿಸಿ ೯  – ೧೦  ಘಂಟೆಗಳ ಕಾಲ ನಡೆಯುವಷ್ಟು ನಮ್ಮ ಕಾಲುಗಳಿಗೆ ಶಕ್ತಿ ಬಂತು. ಆತ್ಮಬಲ ಹೆಚ್ಚಿತು. Altitude  sickness ನಮ್ಮ ಕೈಲಿಲ್ಲ, ಅದು ದೇಹಪ್ರಕೃತಿಗೆ ಬಿಟ್ಟದ್ದು. ಆದರೆ ೪ ದಿನದ ನಡಿಗೆಯನ್ನು ಸಂಭಾಳಿಸಬಹುದೆಂಬ ಧೈರ್ಯ ಬಂತು.

ಆಗಸ್ಟ್ ೨೫ ನಾವು ಕುಸ್ಕೋ ನಗರವನ್ನು ತಲುಪಿದೆವು. ೩೩೯೯ ಮೀಟರ್ ಎತ್ತರದಲ್ಲಿರುವ ಈ ನಗರಕ್ಕೆ ಬಂದಿಳಿದ ಸ್ವಲ್ಪ ಹೊತ್ತಿನ್ಲಲಿ altitude ಅನುಭವವಾಗತೊಡಗಿತು – ತಲೆನೋವು, ಓಕರಿಕೆ, ಹಸಿವಾಗದಿರುವುದು, ಇತ್ಯಾದಿ. Diamox ಎಂಬ ಮಾತ್ರೆ ಈ ಅನುಭವಗಳನ್ನು ಹತೋಟಿಯಲ್ಲಿಡಲು ಬಹಳ ಉಪಯುಕ್ತ. ನಾನು ಆನಂದ್ ಈ ಮಾತ್ರೆಯನ್ನು (ಅರ್ಧ ಮಾತ್ರೆ) ದಿನಾ ತೆಗೆದುಕೊಳ್ಳಲು ಪ್ರಾರಂಭಿಸಿದೆವು. ನನ್ನ ಮಕ್ಕಳು ವಯಸ್ಸಿನಲ್ಲಿ ಚಿಕ್ಕವರಾದ್ದರಿಂದ ಅವರಿಗೆ ಮಾತ್ರೆಯ ಆವಶ್ಯಕತೆ ಬರಲಿಲ್ಲ. ಬರೀ ವಯಸ್ಸಲ್ಲ, ದೇಹಪ್ರಕೃತಿಯೂ ಇದಕ್ಕೆ ಕಾರಣ. ಕೆಲವರಿಗೆ ಈ ಅನುಭವವಾಗುವುದೇ ಇಲ್ಲ, ಕೆಲವರಿಗೆ ಸ್ವಲ್ಪ ಗೊತ್ತಾಗತ್ತೆ, ಮತ್ತೆ ಕೆಲವರಿಗೆ ಬಹಳಷ್ಟು ಕಷ್ಟವಾಗುತ್ತದೆ.

೨೫ರ ಸಾಯಂಕಾಲ ನಮ್ಮ ಗೈಡ್ ಎದ್ವಿನ್ಡ್ ನಮ್ಮನ್ನು ೫ ಘಂಟೆಗೆ ನಾವಿಳಿದುಕೊಂಡಿದ್ದ ಹೋಟೆಲಿನ ಲಾಬಿಯಲ್ಲಿ ಸಿಗಲು ತಿಳಿಸಿದ್ದರು. ಅಲ್ಲಿಗೆ ಹೋದಾಗ ನಮ್ಮ ಜೊತೆ ಈ ಪ್ರಯಾಣವನ್ನು ಮಾಡುವ ಮಿಕ್ಕ ೧೨ ಜನರನ್ನು ಸಂಧಿಸಿದೆವು. ಇಂಗ್ಲೆಂಡಿನ ಹಲವಾರು ಭಾಗಗಳಿಂದ ಬಂದ ಎಲ್ಲರ ಪರಿಚಯವಾದ ಮೇಲೆ, ಎದ್ವಿನ್ಡ್ ನಮ್ಮ ಪ್ರವಾಸದ ವಿವರಗಳನ್ನು ಸವಿಸ್ತಾರವಾಗಿ ತಿಳಿಸಿದರು

ಮುಂಬರುವ ೪ ದಿನಗಳ ದಿನಚರಿ – ಪ್ರತಿ ದಿನ ೬ ಘಂಟೆಗೆ ಏಳುವುದು. ಒಂದು ಬೋಗಣಿ ನೀರಲ್ಲಿ ಹಲ್ಲು ಉಜ್ಜಿ ಮುಖ ತೊಳೆಯುವುದು, ನಂತರ ಬಿಸಿ ಬಿಸಿ ಕಾಫೀ ಅಥವಾ ಟೀ. ೭ ಘಂಟೆಗೆ ತಿಂಡಿ ತಿಂದು, ಪ್ರಯಾಣಕ್ಕೆ ಬೇಕಾಗುವ ನೀರು ಮತ್ತು ಕೆಲವು ಉಪಾಹಾರಗಳನ್ನು (ಸೀರಿಯಲ್ ಬಾರ್ಸ್, ಹಣ್ಣು, ಚಾಕಲೇಟ್ ಇತ್ಯಾದಿ) ತೆಗೆದುಕೊಂಡು ನಡಿಗೆ ಶುರು. ಮಧ್ಯಾಹ್ನ ೧ ರಿಂದ ೨ ರ ನಡುವೆ ಊಟ, ಮತ್ತೆ ನಡಿಗೆ, ಸಾಯಂಕಾಲ ೪ ರಿಂದ ೫ ರೊಳಗೆ ಮುಂದಿನ campsite ತಲುಪುವುದು. ಅಲ್ಲಿ ರಾತ್ರಿ ಊಟ ಮತ್ತು ನಿದ್ದೆ. 

ಎದ್ವಿನ್ಡ್ ನಮ್ಮ ಹಾದಿಯ ನಕ್ಷೆಯನ್ನು ತೋರಿಸಿ, ಪ್ರತಿದಿನ ಎಷ್ಟು ನಡೆಯಬೇಕು, ಎಲ್ಲಿ ಇಳಿದುಕೊಳ್ಳುವುದು, ಹೇಗೆ ಈ ಕಷ್ಟಕರವಾದ ಪ್ರಯಾಣವನ್ನು ಸವೆಸಬಹುದು ಎಂದು ಬಹಳಷ್ಟು ಮಾಹಿತಿಯನ್ನು ಕೊಟ್ಟು, ೨೭ರ ಬೆಳಿಗ್ಗೆ  ೭ ಘಂಟೆಗೆ ನಾವೆಲ್ಲಾ ತಯಾರಾಗಿರಬೇಕೆಂದು ತಿಳಿಸಿ ಹೊರಟರು.

೨೬ ಆಗಸ್ಟ್ ನಾವು ಕುಸ್ಕೋ ನಗರದ ಇಂಕಾ ಸ್ಥಳಗಳಿಗೆ ಮತ್ತು ಸಂಗ್ರಹಾಲಯಕ್ಕೆ ಭೆಟ್ಟಿ ಕೊಟ್ಟೆವು. ಹಾಗೇ ಕುಸ್ಕೋ ನಗರದ ಮಾರುಕಟ್ಟೆ ಮತ್ತು ಇತರ ಪ್ರಮುಖ ಬೀದಿಗಳಲ್ಲಿ ಸುತ್ತಾಡಿ, ಮುಂದಿನ ದಿನದ ತಯಾರಿ ನಡೆಸಿ, ಊಟ ಮುಗಿಸಿ ಮಲಗಿದೆವು.

ಇಂಕಾ ಟ್ರೈಲ್ – ಡೇ ೧ (೩೩೯೯ – ೩೦೦೦ ಮೀಟರ್ ಎತ್ತರ, ೧೫ ಕಿಮಿ):

ಬೆಳಿಗ್ಗೆ ೬ ಘಂಟೆಗೆ ತಿಂಡಿ ಮುಗಿಸಿ, ೭ ಘಂಟೆಗೆ ನಾವು ೧೬ ಜನ, ನಮ್ಮ ಗೈಡ್ ಎದ್ವಿನ್ಡ್ ಜೊತೆಗೆ ಒಂದು ಬಸ್ ಹತ್ತಿದೆವು. ಸುಮಾರು ಒಂದು ಘಂಟೆಯ ಪ್ರಯಾಣವಾದಮೇಲೆ ಬಸ್ ನಿಲ್ಲಿಸಿ ನಮ್ಮೊಂದಿಗೆ ಬರುವ ಇನ್ನೊಬ್ಬ ಗೈಡ್ ಮತ್ತು ಸುಮಾರು ೨೦ ಜನ ಸಹಾಯಕರನ್ನು ಹತ್ತಿಸಿಕೊಂಡು, ಮತ್ತೆರಡು ಘಂಟೆ ಪ್ರಯಾಣದ ನಂತರ KM82 ತಲುಪಿದೆವು.

ಇಲ್ಲಿ ನಮ್ಮ ಸಹಾಯಕರ ಬಗ್ಗೆ ಕೆಲವು ಮಾಹಿತಿ ಕೊಡುವುದು ಅತ್ಯಗತ್ಯ.

ನಡೆಯುವ ೧೬ ಮಂದಿಗೆ, ೨ ಗೈಡ್ಸ್ ಮತ್ತೆ ಸುಮಾರು ೨೦ ಜನ ಸಹಾಯಕರು. ಇವರು ನಮ್ಮ ದಿನ ನಿತ್ಯದ ಆವಶ್ಯಕತೆಗಳನ್ನೆಲ್ಲಾ ಚಾಚೂ ತಪ್ಪದೆ ಪೂರೈಸಿದರು! ಅಡಿಗೆ ಮಾಡುವವರು, ಅವರಿಗೆ ಸಹಾಯ ಮಾಡುವವರು, ಟೆಂಟ್-ಗಳನ್ನು ಸಿದ್ಧಗೊಳಿಸುವವರು, ಪೋರ್ಟಬಲ್ ಟಾಯ್ಲೆಟ್ಟುಗಳನ್ನು ತೊಳೆದು ಶುಚಿಗೊಳಿಸುವುದು , ಊಟ ಬಡಿಸುವುದು,  ಹೀಗೆ ಹಲವು ಹತ್ತಾರು ಕೆಲಸಗಳನ್ನು ನಗುಮೊಗದಿಂದ ಮಾಡುವರು. ಇದಲ್ಲದೆ ಪ್ರತಿದಿನ ನಾವೆಲ್ಲಾ ಹೊರಟ ನಂತರ, ಟೆಂಟ್-ಗಳನ್ನೆಲ್ಲಾ ತೆಗೆದು, ಮಡಿಚಿ, ಅಡಿಗೆ ಸಾಮಗ್ರಿಗಳನ್ನೆಲ್ಲ ಒಟ್ಟುಗೂಡಿಸಿ, ನಮ್ಮ ೪ – ೫ ದಿನದ ಬಟ್ಟೆಗಳು ಮತ್ತು ಸ್ಲೀಪಿಂಗ್ ಬ್ಯಾಗ್-ಗಳಿದ್ದ (೭ ಕಿಲೋ) ಚೀಲಗಳನ್ನು ಹೊತ್ತು, ನಾವು ಹೋಗುವ ಹಾದಿಯೆಲ್ಲೇ, ನಮಗಿಂತ ಬೇಗ ಹೋಗಿ, ಮಧ್ಯಾಹ್ನದ ಕ್ಯಾಂಪ್ ಸೈಟ್-ನಲ್ಲಿ ಅಡಿಗೆಗೆ ಮತ್ತೆ ಎಲ್ಲ ಸಾಮಗ್ರಿಗಳನ್ನೂ ಅಣಿಮಾಡಿಕೊಂಡು, ನಮಗೆ ಅಡಿಗೆ ಮಾಡಿ, ಬಡಿಸಿ, ತಾವೂ ಊಟ ಮಾಡಿ, ಮತ್ತೆ ಎಲ್ಲವನ್ನೂ ಹೊತ್ತು ರಾತ್ರಿಯ campsite ತಲುಪಿ, ಎಲ್ಲರ ಟೆಂಟ್ ಹಾಕಿ, ನಮ್ಮ ಚೀಲಗಳನ್ನು ಇಟ್ಟು, ಮತ್ತೆ ರಾತ್ರಿಯ ಅಡಿಗೆ ಮಾಡುತ್ತಿದ್ದರು! ಅವರಿಲ್ಲದಿದ್ದರೆ ಈ ರೀತಿಯ ಪ್ರಯಾಣಮಾಡುವುದು ಅಸಾಧ್ಯವೆಂದೇ ಹೇಳಬಹುದು!

KM82 – ಇದು ನಮ್ಮ ಪ್ರಯಾಣದ ಮೊದಲ ಘಟ್ಟ. ೧೦.೩೦ ಹೊತ್ತಿಗೆ ನಾವೆಲ್ಲಾ ನಮ್ಮ ಪ್ರಯಾಣ ಪ್ರಾರಂಭಿಸಿದೆವು. ಮುಂದೆ ಸಿಕ್ಕಿದ ಚೆಕ್-ಪೋಸ್ಟ್-ನಲ್ಲಿ ನಮ್ಮ ಪಾಸ್-ಪೋರ್ಟ್ ತಪಾಸಣೆಯಾಯಿತು. ಮೊದಲ ದಿನದ ಹಾದಿ ಸ್ವಲ್ಪ ಸುಲಭವಾಗಿತ್ತು. ಹಾಗೇ ನಮ್ಮಲ್ಲಿ ಬಹಳ ಹುರುಪೂ ಇತ್ತು. ೧೬ ಜನರೂ ಮಾತಾಡಿಕೊಂಡು, “ I Spy..”, “word building” ಆಟಗಳನ್ನು ಆಡಿಕೊಂಡು ಹೊರಟೆವು. ಪರಿಚಯ ಸ್ನೇಹವಾಗಲು ಈ ಹಾದಿ ಅನುವುಮಾಡಿಕೊಟ್ಟಿತು ಅಂತಲೂ ಹೇಳಬಹುದು. ತಗ್ಗು ದಿಣ್ಣೆಗಳಿದ್ದ ಈ ಹಾದಿಯನ್ನು ಎಲ್ಲರೂ ಕಷ್ಟಪಡದೆ ಮುಗಿಸಿದೆವು. ಸುಮಾರು ೬ ಘಂಟೆಯ ಹೊತ್ತಿಗೆ “ವೈಲಬಂಬ” ಕ್ಯಾಂಪ್-ಸೈಟ್ ತಲುಪಿದೆವು. ಬಿಸಿ ಕಾಫಿ ಟೀ ನಮ್ಮನ್ನು ಕಾದಿತ್ತು. ಮೊದಲೇ ಹೇಳಿದಂತೆ ನಮ್ಮ ಸಹಾಯಕರು ಆಗಲೇ ಕ್ಯಾಂಪ್-ಸೈಟ್ ತಲುಪಿ ಎಲ್ಲ ವ್ಯವಸ್ಥೆಮಾಡಿದ್ದರು.

ಕಾಫೀ ಟೀ ಮುಗಿಸಿ ನಮ್ಮ ಟೆಂಟು ಗಳಲ್ಲಿ ಸೇರಿಕೊಂಡೆವು. ಇಬ್ಬರು ಮಲಗಬಹುದಾದ ಈ ಟೆಂಟ್-ಗಳು ಅಷ್ಟೇನೂ ದೊಡ್ಡದಿರುವುದಿಲ್ಲ. ಸ್ಲೀಪಿಂಗ್ ಬ್ಯಾಗ್ ಹಾಕಿ, ನಮ್ಮ ಬ್ಯಾಗ್ ಗಳನ್ನೂ ಇಟ್ಟರೆ, ಮಗ್ಗುಲು ಬದಲಿಸಲು ಸ್ವಲ್ಪ ಜಾಗವಿರುತ್ತದೆ ಅಷ್ಟೇ! ಅಂತಹ ಒಂದು ಟೆಂಟ್-ನಲ್ಲಿ ನಮ್ಮ ಸಾಮಗ್ರಿಗಳನ್ನು ಅಣಿಮಾಡಿಕೊಂಡೆವು. ಇಂತಹ ಚಾರಣಗಳಲ್ಲಿ ಸ್ನಾನದ ವ್ಯವಸ್ಥೆ ಇರುವುದಿಲ್ಲ. ವೆಟ್ ವೈಪ್ಸ್ ಉಪಯೋಗಿಸಿ ಮೈ ಒರೆಸಿಕೊಳ್ಳಬೇಕು ಅಷ್ಟೇ. ಅಂತೂ ಸ್ನಾನ ಮಾಡಿ ಬಟ್ಟೆ ಬದಲಾಯಿಸುವ ಹೊತ್ತಿಗೆ ಊಟಕ್ಕೆ ಕರೆ ಬಂತು. ಬಿಸಿ ಬಿಸಿ ಸೂಪ್, ಸಸ್ಯಾಹಾರಿ ಮತ್ತು ಮಾಂಸಾಹಾರಿ ಊಟ ಮತ್ತು ಕಾಫಿ ಟೀ. ರುಚಿಕರವಾದ ಮತ್ತು ಪೌಷ್ಟಿಕವಾದ ಆಹಾರ. ವೀಗನ್ ಊಟ ಕೂಡ ಇತ್ತು (ಮೊದಲೇ ಹೇಳಿದ್ದರಿಂದ). ಊಟದ ನಂತರ ಸ್ಲೀಪಿಂಗ್ ಬ್ಯಾಗ್ ಒಳಗೆ ತೂರಿ ನಿದ್ದೆ!

ಇಂಕಾ ಟ್ರೈಲ್ – ಡೇ ೨ (೩೦೦೦ – ೪೨೧೩ – ೪೫೦೮ ಮೀಟರ್ ಎತ್ತರ, ೧೨ ಕಿಮಿ):

ಇಂಕಾ ಟ್ರೈಲ್ – ಡೇ ೨ – (೩೦೦೦ – ೪೨೧೩ – ೪೫೦೮ ಮೀಟರ್ಸ್) – ೧೨ ಕಿಲೋಮೀಟರ್ಸ್ – ಮತ್ತೆ ೬ಕ್ಕೆ ಎದ್ದು, ೭ಕ್ಕೆ ತಯಾರಾಗಿ ನಡೆಯಲು ಶುರು ಮಾಡಿದೆವು. ಇಂದು ಅತಿ ಕಷ್ಟದ ದಿನ ಎಂಬುದರ ಅರಿವು ಎಲ್ಲರಿಗೂ ಇತ್ತು. ಈ ದಿನ, ನಮ್ಮ ಚಾರಣದ ಉತ್ತುಂಗಕ್ಕೇರಿ (highest point – “ಡೆಡ್ ವಿಮೆನ್ ಪಾಸ್”), ಇಳಿಯುವ ದಿನ! ಸುಮಾರು ೬೦೦೦ ಮೆಟ್ಟಿಲುಗಳನ್ನು ಅಷ್ಟು ಎತ್ತರದಲ್ಲಿ (altitude) ಹತ್ತುವುದು ಸುಲಭವಾಗಿರಲಿಲ್ಲ! ಆಮ್ಲಜನಕದ ವಿರಳತೆಯಿಂದ ಉಸಿರಾಡಲೇ ಕಷ್ಟವಾಗುವ ವಾತಾವರಣದಲ್ಲಿ ಈ ಹಾದಿ ಸವೆಸಲು ಕಷ್ಟವಿತ್ತು. ಗುಂಪಿನಲ್ಲಿದ್ದ ಕೆಲವು ಸದೃಢರು ಸರಾಗವಾಗಿ ನಡೆದರೂ. ಮಿಕ್ಕವರೆಲ್ಲ ನಿಧಾನವಾಗಿ, ನಮಗೆ ಸರಿಹೋಗುವ ವೇಗದಲ್ಲಿ, ಅಲ್ಲಲ್ಲಿ ವಿರಮಿಸುತ್ತಾ ಉತ್ತುಂಗವನ್ನು ತಲುಪಿದೆವು. ವಿರಮಿಸಿದಾಗ ಸುತ್ತಲೂ ಕಣ್ಣಾಡಿಸಿದರೆ, ದೂರ ದೂರಕ್ಕೆ ಕಾಣುವ ಆಂಡಿಸ್ ಪರ್ವತ ಶ್ರೇಣಿ, ರುದ್ರ ರಮಣೀಯ! ಪ್ರತಿ ತಿರುವೂ ಹೊಸ ನೋಟ ಹೊಸ ವಿಸ್ಮಯ! ನಮ್ಮ ಗುರಿ ತಲುಪಿದಾಗ ಆದ ಆ ಅನುಭವ, ಅನಿಸಿಕೆ, ಭಾವೋದ್ವೇಗ ವರ್ಣಿಸಲಸಾಧ್ಯ! ಒಂದು ರೀತಿಯ ಸಾರ್ಥಕತೆ, ವಿನಮ್ರತೆ ಮನಸ್ಸನ್ನು ಮತ್ತು ಕಣ್ಣನ್ನು ತುಂಬಿಸಿತ್ತು. ಹಲವಾರು ಫೋಟೋಗಳನ್ನು ಕ್ಲಿಕ್ಕಿಸಿ, ಪರ್ವತವನ್ನಿಳಿಯಲು ಪ್ರಾರಂಭಿಸಿದೆವು. “ಪಕಾಯ್ಮಯೋ” ಕ್ಯಾಂಪ್-ಸೈಟ್ ತಲಪುವ ಹೊತ್ತಿಗೆ ಎಲ್ಲರೂ ಸುಸ್ತಾಗಿದ್ದೆವು. ಆದರೆ ಬಹಳ ಕಠಿಣವಾದ ದಿನವನ್ನು ಮುಗಿಸಿದ ನಿರಾಳವಿತ್ತು ಎಲ್ಲರ ಮನದಲ್ಲಿ.

ಇಂಕಾ ಟ್ರೈಲ್ – ಡೇ ೩ – (೪೫೦೮ – ೩೫೮೦ ಮೀಟರ್ ಎತ್ತರ, ೧೨ ಕಿಮಿ):

ಈ ದಿನ ಹಾದಿ ಬಹಳ ಆಸಕ್ತಿದಾಯಕವಾಗಿತ್ತು. ಬಹಳಷ್ಟು ಇಂಕಾ ವಸಾಹತುಗಳನ್ನು ನೋಡಿದೆವು. ನಮ್ಮ ಗೈಡ್ ಎದ್ವಿನ್ಡ್, ಇಂಕಾ ಜನಾಂಗದ ರಾಜಕೀಯ, ಆರ್ಥಿಕ, ಸಾಮಾಜಿಕ ಪರಿಸ್ಥಿತಿಗಳನ್ನು ಬಹಳ ವಿವರವಾಗಿ, ಮನಮುಟ್ಟುವಂತೆ ವಿವರಿಸಿದರು. ಆಗಿನ ಕಾಲದಲ್ಲಿ ಕಲ್ಲಿನಿಂದ ಕಟ್ಟಿದ ಗೋಡೆಗಳು, ಮನೆಗಳು, ಬಹಳಷ್ಟು ಭೂಕಂಪಗಳನ್ನು ಎದುರಿಸಿಯೂ, ಇನ್ನೂ ಸ್ಥಿರವಾಗಿ ನಿಂತಿರುವುದು ಮಹದಾಶ್ಚರ್ಯ ಮತ್ತು ಇಂಕಾ ಜನಾಂಗದ ಕೌಶಲತೆಯನ್ನು ಎತ್ತಿ ತೋರಿಸುತ್ತದೆ. ಹಣದ ವಿನಿಮಯಕ್ಕಿಂತಾ ವಸ್ತುಗಳ ವಿನಿಮಯವೇ ಜಾಸ್ತಿ ಪ್ರಚಲಿತವಿತ್ತು. ಲಿಖಿತ ಭಾಷೆ ಇಲ್ಲದ್ದರಿಂದ, ದಾರದ ಗಂಟುಗಳಿಂದ ಲೆಖ್ಖವಿಡುತ್ತಿದ್ದರು ಮತ್ತು ಸಂದೇಶವನ್ನೂ ವಿನಿಮಯಿಸುತ್ತಿದ್ದರು ಎಂಬುದು ಕುತೂಹಲಹರ. ಈ ಐತಿಹಾಸಿಕ ಸ್ಥಳಗಳ ಮೂಲಕ ಹಾದು, ಸಂಜೆಯ ಹೊತ್ತಿಗೆ ಆ ದಿನದ ಕ್ಯಾಂಪ್-ಸೈಟ್ “ಪುಯುಪುಕಮಾರ್ಕ” ತಲುಪಿದೆವು.  

ಇಂಕಾ ಟ್ರೈಲ್ – ಡೇ ೪ (೩೫೮೦ – ೨೪೩೦ ಮೀಟರ್ ಎತ್ತರ, ೧೦ ಕಿಮಿ):

ಕಡೆಯ ದಿನ! ಸುಮಾರು ೫೦೦೦ ಮೆಟ್ಟಿಲುಗಳನ್ನು ಹತ್ತಿಳಿದೆವು. ಇಳಿಯುತ್ತಿದ್ದರಿಂದ ಉಸಿರಾಟ ಸ್ವಲ್ಪ ಸರಾಗವಾಗಿತ್ತು. ಆದರೆ ೩ ದಿನದ ಸತತ ನಡಿಗೆಯಿಂದ ಕಾಲುಗಳು ಸೋಲುತ್ತಿದ್ದವು! ಆದರೆ ಪ್ರಸಿದ್ಧ ಮಾಚು-ಪೀಕ್ಚುವನ್ನು ಕಣ್ಣಾರೆ ನೋಡುವ ಸಮಯ ಹತ್ತಿರವಾಗುತ್ತಿದೆಯೆಂಬ ಉತ್ಸಾಹ, ಸಂತೋಷ ಎಲ್ಲರಲ್ಲೂ. ಕೆಲವು ಘಂಟೆಗಳ ಕಾಲ ಕ್ಲೌಡ್ ಫಾರೆಸ್ಟ್ ಮೂಲಕ ನಡೆದಾಗ ಅಲ್ಲಿನ ವೈವಿಧ್ಯತೆಯನ್ನು ನೋಡುವ ಭಾಗ್ಯ ನಮ್ಮದಾಯಿತು. ಪಾಚಿ (moss) ಎಲ್ಲೆಲ್ಲೂ! ಅದೂ ಹಿಂದೆಂದೂ ನೋಡದ ಬಣ್ಣಗಳಲ್ಲಿ! ತಿಳಿ ಹಳದಿ ಇಂದ ಕಂದು ಬಣ್ಣದವರೆಗಿನ ಎಲ್ಲ ಬಣ್ಣಗಳೂ ಕಂಡವು! ಬಣ್ಣ ಬಣ್ಣದ ಆರ್ಕಿಡ್ ಗಳು ಕಣ್ಣು ಸೆಳೆದವು! ಹಾಗೆ ಥರಾವರೀ ಪಕ್ಷಿಗಳ ಚಿಲಿಪಿಲಿ ಮನಸ್ಸಿಗೆ ಆಹ್ಲಾದತಂದಿತು.  ಈ ದಿನಕ್ಕಾಗಿ ಕಾಯುತ್ತಿದ್ದ ನಾವೆಲ್ಲರೂ ಆನಂದದಿಂದ ಹೆಜ್ಜೆ ಹಾಕುತ್ತಾ “ಇಂಟಿ ಪುಂಕು” (sun gate ) ತಲುಪಿದೆವು. ಎದುರಿನ ಬೆಟ್ಟದಲ್ಲಿದ್ದ ಮಾಚು-ಪೀಕ್ಚು ರಮಣೀಯವಾಗಿ ಕಾಣಿಸುತ್ತಿತ್ತು. ಇಂಟರ್ನೆಟ್ ನಲ್ಲಿ ಸಿಗುವ ಮಾಚು-ಪೀಕ್ಚು ವಿನ ಬಹಳಷ್ಟು ಚಿತ್ರಗಳು ಈ ಜಾಗದಿಂದ ತೆಗೆದವೇ! ಮತ್ತೆ ಇಲ್ಲಿ ಬಹಳಷ್ಟು ಫೋಟೋಗಳನ್ನು ಕ್ಲಿಕ್ಕ್ಸಿದೆವು. ಈ ಅಸದಳ ದೃಶ್ಯವನ್ನು ಕಣ್ಣುತುಂಬಿಸಿಕೊಂಡು, ಮನಸ್ಸಿಲ್ಲದ ಮನಸ್ಸಿನಲ್ಲಿ ಆ ಜಾಗದಿಂದ ಹೊರಟೆವು, ಯಾಕಂದ್ರೆ, ಕೆಳಗೆ ೩ ಘಂಟೆಯ ಬಸ್ ಹತ್ತಬೇಕಿತ್ತು ಮತ್ತು ನಾವು ಇನ್ನೂ ಸುಮಾರು ೬ ಕಿಲೋಮೀಟರು ನಡೆಯಬೇಕಿತ್ತು! ಮತ್ತೆ ಸಾವಿರಾರು ಮೆಟ್ಟಿಲುಗಳನ್ನು ಇಳಿದು, ಅಂತೂ ಸರಿಯಾದ ಸಮಯಕ್ಕೆ ಬಸ್ ಹತ್ತಿ ಹೋಟೆಲ್ ತಲುಪಿದೆವು. ನಾಲ್ಕು ದಿನದ ನಂತರ  ಸ್ನಾನ  ಮಾಡಲು ಶವರ್, ಮಲಗಲು ಸರಿಯಾದ ಹಾಸಿಗೆ ಸಿಕ್ಕಿತು. ವಾಟ್ ಅ ಪ್ರಿವಿಲೇಜ್!

ಇಂಕಾ ಟ್ರೈಲ್ – ಡೇ ೫:

ಈ ದಿನ ಹೋಟೆಲಿನಿಂದ ಬಸ್ಸಿನಲ್ಲಿ ಮ್ಯಾಚು-ಪೀಕ್ಚು ತಲುಪಿದೆವು. ನಮ್ಮ ಗೈಡ್ ನಮಗಾಗಲೇ ನಮ್ಮ ಪ್ರವೇಶದ ಸಮಯವನ್ನು ಕಾದಿರಿಸಿದ್ದರು. ಒಳಗೆ ಹೋದರೆ ಇಂಕಾ ಜನಾಂಗದ ಅತಿ ದೊಡ್ಡ ವಸಾಹತು ನಮ್ಮ ಮುಂದೆ ವಿಜೃಂಭಿಸುತ್ತಿತ್ತು. ಗೈಡ್ ಎದ್ವಿನ್ಡ್ ಈ ಸ್ಥಳದ ವಿಷಯಗಳನ್ನು ಸವಿಸ್ತಾರವಾಗಿ ವಿವರಿಸಿ, ಆಗಿನ ರಾಜರ ಅರಮನೆ, ದೇವಸ್ಥಾನಗಳು, ಮನೆಗಳು, ಅವರಿದ್ದ ರೀತಿ, ನೀತಿಗಳನ್ನು ತಿಳಿಸಿದರು. ನಮ್ಮ ಪ್ರಶ್ನೆಗಳಿಗೆಲ್ಲ ಸಮರ್ಪಕವಾಗಿ ಉತ್ತರಿಸಿದರು. ಮಾಚು – ಪೀಕ್ಚೂವನ್ನು ಕಣ್ತುಂಬಿಸಿಕೊಂಡು ಅಲ್ಲಿಂದ ಹೊರಟೆವು. ಮಧ್ಯಾಹ್ನದ ಊಟವನ್ನು ಮಾಚು – ಪೀಕ್ಚೂ ಊರಿನಲ್ಲಿ ಮುಗಿಸಿ, ೩ ಘಂಟೆಗೆ ಟ್ರೈನ್ ಹತ್ತಿ “ಒಲಂಟಾಯ್ತೊಂಬಾ” ತಲುಪಿದೆವು. ಗಾಜಿನ ಛಾವಣಿ ಮತ್ತು ದೊಡ್ಡ ದೊಡ್ಡ ಗಾಜಿನ ಕಿಟಕಿಯ ಟ್ರೈನ್ ನಲ್ಲಿ ಹಿಂದಿರುಗುವಾಗ ಪ್ರಕೃತಿ ಸೌಂದರ್ಯ ಅತಿ ರಮಣೀಯ! ಟ್ರೈನ್ ಇಳಿದು ಬಸ್ ಹತ್ತಿ ೩ ಘಂಟೆ ಪ್ರಯಾಣ ಮಾಡಿ ಕುಸ್ಕೋ ನಗರವನ್ನು ತಲುಪಿದೆವು. ಚಾರಣ ಮುಗಿಸಿದ ಸಂತಸದೊಂದಿಗೆ, ಈ ೫ ದಿನ ಜೊತೆಯಾದ ಸ್ನೇಹಿತರನ್ನು ಬೀಳ್ಕೊಡುವ ಬೇಸರವೂ ಇತ್ತು! ಎಲ್ಲರಿಗೂ ವಿದಾಯ ಹೇಳಿ ಮನೆಗೆ ಮರಳಿದೆವು.

ಮಂಗಳ:

ಒಟ್ಟಿನಲ್ಲಿ ಒಂದು ಅವಿಸ್ಮರಣೀಯ ಅನುಭವ! ಸಮಯ ಮಾಡಿಕೊಂಡು ಖಂಡಿತ ಮಾಚು – ಪೀಕ್ಚೂವಿಗೆ ಭೆಟ್ಟಿಕೊಡಿ. ನಡೆಯುವ ಇಚ್ಛೆಯಿಲ್ಲದಿದ್ದರೆ ಟ್ರೈನ್ ನಲ್ಲಿ ಅನಾಯಾಸವಾಗಿ ಹೋಗಿ ಬರಬಹುದು. ಹಾಗೇ ಪೆರುವಿನಲ್ಲಿ ನೋಡಿವಂತಹ ಇನ್ನೂ ಬೇಕಾದಷ್ಟು ಜಾಗಗಳಿವೆ – ಲಿಮಾ (ರಾಜಧಾನಿ), ಅರಿಕ್ವಿಪ, ಕೊಲ್ಕಾ ಕಣಿವೆ, ಲೇಕ್ ಟಿಟಿಕಾಕಾ, ಎಲ್ಲಾ ನೋಡುವಂತಹ ಸ್ಥಳಗಳು. ೩ ಅಥವಾ ೪ ವಾರ ಆರಾಮಾಗಿ ಕಳಿಯಬಹುದು.  ಒಮ್ಮೆ ಹೋಗಿ ಬನ್ನಿ.   

4 thoughts on “ಮಾಚು-ಪೀಕ್ಚೂ ಚಾರಣ – ಅನ್ನಪೂರ್ಣಾ ಆನಂದ್

  1. ಮಾಚು ಪೀಚುಗೆ 2015ರಲ್ಲಿ ನಾನು ಹೋಗಿ ಬಂದದ್ದು ನೆನಪಿಗೆ ಬಂತು. ವ್ಯತ್ಯಾಸ ಇಷ್ಟೇ ನಾವು ಆರಾಮಾಗಿ ಎರಡೂ ದಾರಿ ಕುಸ್ಕೊಯಿಂದ ಮಾಚುಪಿಚುಗೆ ಸುಖಾಸಿನ ರೈಲಿನಲ್ಲಿ ಕಾಫೀ ಟೀ ಹೀರುತ್ತ ಹೋಗಿ ಬಂದೆವು. ನಮ್ಮ ಚಾರಣ ಮಾಚು ಪೀಚುವಿನಿಂದ ಇಂಟಿ ಪೂಕುವಿನ ವರೆಗೆ ಬೆಳಗ್ಗೆ 5 ಕ್ಕೆ ಸೂರ್ಯೋದಯ ವೀಕ್ಷಿಸಲು ಮಾಡಿದ್ದು. ನಮ್ಮ ಪಾಲಿಗೆ ಅದೇ ದೊಡ್ಡ ಸಾಹಸ ಎನ್ನಬಹುದು.
    ಬೆಟ್ಟ ಹತ್ತಿಳಿಯುವ ವಯಸ್ಸು ಅಲ್ಲ, ಹುಮ್ಮಸ್ಸೂ ಇಲ್ಲ.
    ನಿಮ್ಮ ಸಾಹಸ ಪ್ರವೃತ್ತಿಗೆ ಶರಣು. ಇನ್ನು ಹಿಮಾಲಯ ಬೇಸ್ ಕ್ಯಾಂಪ್ ಕಥೆ ಮುಂದಕ್ಕೆ ನಿರೀಕ್ಷಿಸಬಹುದೇನೋ. ಉತ್ತಮ ಪರಿಚಯ. 👍👏

    Like

  2. ಆನಂದ್ ಮತ್ತು ಅನ್ನಪೂರ್ಣ 
    ನಿಮ್ಮ ಹಿಂದಿನ ಪ್ರಯಾಣಗಳ ಬಗ್ಗೆ ಬರೆದದ್ದನ್ನು ನಾನು ಓದಿದ್ದೇನೆ. ಈ ಸಾಹಸ (ಅಡ್ವೆಂಚರ್ ) ನಾವು ,ಅಂದರೆ ನಾನು ಮತ್ತು ಸೀತು , ಇಪ್ಪತ್ತು ವರ್ಷದ ಹಿಂದೆ ಮಾಡಬೇಕಾಗಿತ್ತು ಈಗ out of question, 
    ಬರೆದಿರುವ ವಿಷಯಗಳು 
    ಮತ್ತು ವಿವರಣೆ ಬಹಳ ಚೆನ್ನಾಗಿದೆ. ನಿಮ್ಮ bucket list ನಲ್ಲಿ ಇನ್ನೇನಿದ್ರೂ ಬೇಗ ಮುಗಿಸಿ. 
    ಅಂದ ಹಾಗೆ , ನಿಮ್ಮ ಊಟ ,ತಿಂಡಿ ಹೇಗಿತ್ತು ? ನಮಗೆ ( ನನಗಿಂತ ಸೀತುಗೆ ) ಈ ಸಮಸ್ಯೆ ತುಂಬಾ ಇತ್ತು ,ಇದೆ !
    ಮುಂದಿನ ಪ್ರಯಾಣಗಳಿಗೆ Best Wishes 
    Ramamurthy 
    Basingstoke 

    Like

  3. (ಉಮಾ ವೆಂಕಟೇಶ್ ಬರೆಯುತ್ತಾರೆ: ಅನ್ನಪೂರ್ಣ ಲೇಖನಕ್ಕೆ ನನ್ನ ಹಿನ್ನುಣಿಕೆ ಬರೆದು ಅನಿವಾಸಿ ಬ್ಲಾಗಿನಲ್ಲಿ ಟೈಪಿಸಲು ಪ್ರಯತ್ನಿಸಿದೆ. ಯಶಸ್ವಿಯಾಗಲಿಲ್ಲ. ಅದಕ್ಕೆ ನಿಮಗೆ ಇಮೇಲ್ ಮೂಲಕ ಕಳಿಸುತ್ತಿದ್ದೇನೆ.)

    ಅನ್ನಪೂರ್ಣ, ಸೊಗಸಾದ ಲೇಖನ. ಲೇಖನದಲ್ಲಿ ನಿಮ್ಮ ಕುಟುಂಬದ ಸಾಹಸ ಗಾಥೆಯನ್ನು ಪ್ರತಿ ದಿನದ ದಿನಚರಿಯ ಮೂಲಕ ಚೆನ್ನಾಗಿ ವರ್ಣಿಸಿದ್ದೀರಿ. ಇಂತಹ ಸಾಹಸಮಯ, ಕ್ಲಿಷ್ಟ ಚಾರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದು ಎಲ್ಲರ ಪಾಲಿಗೆ ದಕ್ಕುವ ವಿಷಯವಲ್ಲ. ದಕ್ಷಿಣ ಅಮೆರಿಕೆಯ ಪ್ರಕೃತಿಯನ್ನು ನೋಡಿಯೇ ಸವಿಯಬೇಕು. ಇದನ್ನು ೨೦೧೭ರಲ್ಲಿ ನಾವು ಕೈಗೊಂಡ ನಮ್ಮ ಬ್ರೆಜಿಲ್ ಪ್ರವಾಸದಲ್ಲಿ ಅನುಭವಿಸಿದೆವು. ಮತ್ತೊಮ್ಮೆ ಅಲ್ಲಿಗೆ ಹೋಗುವ ಆಸೆಯಿದೆ. ಆಂಡಿಸ್ ಪರ್ವತ ಶ್ರೇಣಿಯಲ್ಲಿನ ರುದ್ರಮಯ ಪ್ರಕೃತಿ, ಸಸ್ಯ ಮತ್ತು ಪ್ರಾಣಿವರ್ಗಗಳ ವೈವಿಧ್ಯಮಯತೆ ಹಲವಾರು ಲೇಖನಗಳಲ್ಲಿ ಓದಿದ್ದೆ. ಆದರೆ ನಮಗೆ ಹತ್ತಿರದಿಂದ ತಿಳಿದವರ ಅನುಭವವನ್ನಾಧರಿಸಿದ ಲೇಖನದಲ್ಲಿ ಓದುವ ಅನುಭವ ಅನನ್ಯವಾದದ್ದು. ನೀವು ಒಂದೆರಡು ಆರ್ಕಿಡ್ ಫೋಟೋಗಳನ್ನು ಲೇಖನದಲ್ಲಿ ಅಳವಡಿಸಬೇಕಿತ್ತು. ನನ್ನಂತಹ ಸಸ್ಯ ಪ್ರೇಮಿಗಳು ಅದನ್ನು ನೋಡಿ ಸಂತೋಷಪಡುತ್ತಿದ್ದೆವು. ನಿಮ್ಮ ಕುಟುಂಬಕ್ಕೆ ಅಭಿನಂದನೆಗಳು. ಹೀಗೆ ಇನ್ನು ಅನೇಕ ಸಾಹಸಮಯ ಚಾರಣಗಳನ್ನು ಹೀಗೆ ಕೈಗೊಂಡು ನಿಮ್ಮ ಲೇಖನಗಳ ಮೂಲಕ ಎಲ್ಲರಿಗು ತಲುಪಿಸಿ. ಧನ್ಯವಾದಗಳು.

    ಉಮಾ ವೆಂಕಟೇಶ್

    Like

  4. I have been to Macchu pichu few years ago. We didn’t walk went by train. Beautiful scenery, Enchanting history. We spent 15days in Peru. Visited Arokoppa And all the important cities. We were amazed by Floting houses on lake Titicaca. It was memorable trip..Visit it when you have energy. Vathsala Ramamurthy

    Like

Leave a Reply to Anonymous Cancel reply

Your email address will not be published. Required fields are marked *