ನಾನೂ ಕಿಲಿಮಾಂಜಾರೋ ಹತ್ತಿದೆ  – ಕೇಶವ ಕುಲಕರ್ಣಿ

ನಾನು `ಕಿಲಿಮಾಂಜಾರೋ` ಎನ್ನುವ ಹೆಸರನ್ನು ಮೊಟ್ಟಮೊದಲು ಕೇಳಿದ್ದು, ಆರನೇ ಇಯತ್ತೆಯಲ್ಲಿ ನಾನು ಭಾಗವಹಿಸಿದ ಅಂತರಶಾಲಾ ರಸಪ್ರಶ್ನೆಯ ಸ್ಪರ್ಧೆಯಲ್ಲಿ: `ಆಫ್ರಿಕಾ ಖಂಡದ ಅತ್ಯಂತ ಎತ್ತರದ ಪರ್ವತ ಯಾವುದು?` ಎನ್ನುವುದು ಪ್ರಶ್ನೆ. ಮೌಂಟ್ ಎವರೆಸ್ಟ್ ಎನ್ನುವುದು ಪ್ರಪಂಚದ ಅತ್ಯಂತ ಎತ್ತರದ ಪರ್ವತ ಅನ್ನುವುದನ್ನು ಬಿಟ್ಟರೆ ಬೇರೆ ಪರ್ವತಗಳ ಬಗ್ಗೆ ಏನೂ ಗೊತ್ತಿರಲಿಲ್ಲ. ಕಿಲಿಮಾಂಜಾರೋ ಎನ್ನುವುದು ಆಫ್ರಿಕಾ ಖಂಡದ ಅತ್ಯಂತ ಎತ್ತರದ ಪರ್ವತ ಎನ್ನುವುದು ಗೊತ್ತಾದದ್ದೇ ಅವತ್ತು. ಸದ್ಯ, ಆ ಪ್ರಶ್ನೆ ಬೇರೆ ತಂಡಕ್ಕೆ ಬಂದಿತ್ತು ಮತ್ತು ಆ ತಂಡಕ್ಕೂ ಸರಿಯಾದ ಉತ್ತರ ಗೊತ್ತಿರಲಿಲ್ಲ ಎನ್ನುವುದು ಬಹಳ ಖುಷಿಕೊಟ್ಟಿತ್ತು, ಆದರೆ ನನಗೆ ಉತ್ತರ ಗೊತ್ತಿರಲಿಲ್ಲ ಎನ್ನುವ ಬಗ್ಗೆ ಖೇದವೂ ಆಗಿತ್ತು. ಅವತ್ತು ಸಂಜೆ ಮನೋರಮಾ ಇಯರ್ ಪುಸ್ತಕದಲ್ಲಿ ಕಿಲಿಮಾಂಜಾರೋ ಬಗ್ಗೆ ಓದಿದ್ದು.  

ನಾನಾಗ ಪಿಯುಸಿಯಲ್ಲಿದ್ದೆ. ಹೆಮಿಂಗ್ವೆಯ `ಓಲ್ಡ್ ಮ್ಯಾನ್ ಆಂಡ್ ಸೀ` ಎನ್ನುವ ನೀಳ್ಗತೆಯ ಬಗ್ಗೆ ಲಂಕೇಶ್ ತಮ್ಮ `ಮರೆಯುವ ಮುನ್ನ`ದಲ್ಲಿ ಬರೆದಿದ್ದರು. ಗ್ರಂಥಾಲಯದಲ್ಲಿ ಹುಡುಕಿದಾಗ ಹೆಮಿಂಗ್ವೇಯ ಆ ಪುಸ್ತಕದ ಜೊತೆ ಅವನ ಇನ್ನೊಂದು ಕಥಾಸಂಕಲನವೂ ಸಿಕ್ಕಿ, ಅದರಲ್ಲಿ `ದ ಸ್ನೋಸ್ ಆಫ್ ಕಿಲಿಮಾಂಜಾರೋ` ಎನ್ನುವ ಕತೆಯ ತಲೆಬರಹವನ್ನು ನೋಡಿವವರೆಗೂ ಮತ್ತೆ ಕಿಲಿಮಾಂಜಾರೋದ ನೆನಪೇ ಇರಲಿಲ್ಲ.  

ಇಂಗ್ಲೆಂಡಿಗೆ ಬಂದ ಮೇಲೆ ಕಿಲಿಮಾಂಜಾರೋ ಎನ್ನುವ ಹೆಸರು ಮತೆ ಮತ್ತೆ ಕೇಳಲಾರಂಭಿಸಿತು. ಎ ಶ್ರೇಣಿಯಲ್ಲಿ ಓದುವ ಮಕ್ಕಳನ್ನು ಕರೆದುಕೊಂಡು ಕೆಲವು ಖಾಸಗಿ ಶಾಲೆಯವರು ಕಿಲಿಮಾಂಜಾರೋಗೆ ಹೋಗುವಾಗ, ಹೋಗಿ ಬಂದ ಮೇಲೆ ಆ ಫೋಟೋಗಳನ್ನು ನೋಡಿದಾಗ, ಕಿಲಿಮಾಂಜಾರೋ ಎನ್ನುವುದು ಹದಿಹರೆಯದವರು ಮಾತ್ರ ಹತ್ತಬಲ್ಲ ಪರ್ವತ ಎಂದುಕೊಂಡಿದ್ದೆ.  

`ಕಿಲಿಮಾಂಜಾರೋ`ವನ್ನು ಕೆಲವು ವರ್ಷಗಳ ಹಿಂದೆ ವಸುಧೇಂದ್ರ ಬರೆದ `ಮೋಹನಸ್ವಾಮಿ` ಕಥಾಸಂಕಲನದಲ್ಲಿ ಓದಿದೆ. ಆ ಕಥೆ ನನ್ನನ್ನು ತುಂಬ ಕಾಡಿತ್ತು. ಪರ್ವತದ ಚಾರಣ ಮನುಷ್ಯನಿಗೆ ತನ್ನನ್ನು ತಾನು ಕಂಡುಕೊಳ್ಳಲು ಅಥವಾ ತೆರೆದುಕೊಳ್ಳಲು ಸಾಧ್ಯವಾಗುವ ಸಾಧ್ಯತೆಯ ಬಗ್ಗೆ ಪ್ರಶ್ನೆ ಎತ್ತುವ ಕಥೆ. ಆ ಕಥೆಯಲ್ಲಿ ಕಿಲಿಮಾಂಜಾರೋ ಪರ್ವತದ ಬಗ್ಗೆ ಮತ್ತು ಚಾರಣದ ಬಗ್ಗೆ ಕೆಲವು ವಿವರಗಳು ಬರುತ್ತವೆ. ಓಹೋ, ಇದು ಬರೀ ಚಿಕ್ಕ ವಯಸ್ಸಿನವರಿಗೆ ಮಾತ್ರವಲ್ಲ, ನಾನೂ ಮಾಡಬಹುದು ಎನಿಸಿದ್ದು ಆಗಲೇ! 

ನನ್ನ ಮಿತ್ರರೊಬ್ಬರಲ್ಲಿ ಮಾತನಾಡುವಾಗ ಆಗಾಗ ನಾವೆಲ್ಲ ಸೇರಿ ಕಿಲಿಮಾಂಜಾರೋಗೆ ಹೋಗಬೇಕು, ಎವರೆಸ್ಟ್ ಅಡಿಗೆ ಹೋಗಬೇಕು ಎಂದೆಲ್ಲ ಮಾತಾಡಿಕೊಳ್ಳುತ್ತಿದ್ದೆವು. ಇಂಗ್ಲೆಂಡಿನ ಪೀಕ್ ಡಿಸ್ಟ್ರಿಕ್ಟ್ ಮತ್ತು ವೇಲ್ಸಿನ ಸ್ನೋಡೋನ್ ಹತ್ತಿ ಇಳಿದಿದ್ದನ್ನು ಬಿಟ್ಟರೆ ಯಾವ ಚಾರಣವನ್ನೂ ಮಾಡಿದವನಲ್ಲ. ನಾನು ಉತ್ತರ ಕರ್ನಾಟಕದ ಬಯಲುಸೀಮೆಯ ಬರಭೂಮಿಯವನು; ಗುಡ್ಡಗಾಡುಗಳಲ್ಲಿ ಹುಟ್ಟಿದವನೂ ಅಲ್ಲ, ಬೆಳೆದವನೂ ಅಲ್ಲ; ಪರ್ವತಗಳು, ಕಾಡುಗಳು ನನ್ನನ್ನು ಕಾಡುವುದೂ ಇಲ್ಲ. ಆದರೂ ನನ್ನ `ಬಕೆಟ್ ಲಿಸ್ಟ್`ನಲ್ಲಿ, ಕಿಲಿಮಾಂಜಾರೋವನ್ನು ಬರೆದುಕೊಂಡಿದ್ದೆ. ಆದರೆ ನಾನೂ ಕಿಲಿಮಾಂಜಾರೋ ಪರ್ವತವನ್ನು ಹತ್ತಿ ಸುರಕ್ಷಿತವಾಗಿ ಇಳಿದು ಬರುವೆನೆಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ.  

ಆದರೆ ಈಗ ಆರೆಂಟು ತಿಂಗಳ ಹಿಂದೆ, ನನ್ನ ಮಿತ್ರನೊಬ್ಬ  ‘(No) Country for Old Men’ ಎನ್ನುವ ವಾಟ್ಸ್ಯಾಪ್ ಗ್ರುಪ್-ಅನ್ನು  ನಲವತ್ತು ದಾಟಿದ ತನ್ನಂಥ ಮಧ್ಯವಯಸ್ಕರಿಗಾಗಿ ಶುರುಮಾಡಿ, ಅದರಲ್ಲಿ ನನ್ನನ್ನೂ ಸೇರಿಸಿದ. ಎರಡು ತಿಂಗಳಿಗೊಮ್ಮೆ ಬರೀ ಗಂಡಸರೇ ಸೇರಿ ಎಲ್ಲಾದರೂ ಯುನೈಟೆಡ್ ಕಿಂಗ್ಡಮ್ಮಿನಲ್ಲಿ ಟ್ರೆಕಿಂಗ್ ಹೋಗುವುದು, ಆ ನೆಪದಲ್ಲಿ ಪಬ್ಬಿಗೆ ಹೋಗಿ ಕುಡಿದು ತಿಂದು ಬರುವುದು, ಇದರ ಮುಖ್ಯ ಉದ್ದೇಶ. ಈ ಗುಂಪಿನಲ್ಲಿ ಕಿಲಿಮಾಂಜಾರೋದ ಕನಸುಗಳೆದ್ದು ನನ್ನನ್ನೂ ತಟ್ಟಿದವು. ಅಷ್ಟು ಜನರ ಗುಂಪಿನಲ್ಲಿ ಗೋವಿಂದನಾದೆ. 

ಕಿಲಿಮಾಂಜಾರೋದ ಕಿರುಪರಿಚಯ: 

ಕಿಲಿಮಾಂಜಾರೋ ಆಫ್ರಿಕಾ ಖಂಡದ ತಾಂಜಾನಿಯಾ ದೇಶದಲ್ಲಿರುವ ಪರ್ವತ. ಇದೊಂದು ಜ್ವಾಲಾಮುಖಿ ಪರ್ವತ. ಆಫ್ರಿಕಾ ಖಂಡದ ಅತ್ಯಂತ ಎತ್ತರ ಪರ್ವತ, ಜಗತ್ತಿನ ಅತ್ಯಂತ ಎತ್ತರದ ಒಂಟಿ ಪರ್ವತ. ಜಗತ್ತಿನ ನಾಲ್ಕನೇ ಎತ್ತರದ ಪರ್ವತ.  

ಈ ಪರ್ವತಕ್ಕೆ ಮೂರು ಶಿಖರಗಳಿವೆ: ಕಿಬೋ, ಮಾವೆಂಝಿ ಮತ್ತು ಶಿರಾ. ಇದರಲ್ಲಿ ಕಿಬೋ ಎಲ್ಲಕ್ಕಿಂತ ಎತ್ತರದಲ್ಲಿರುವ ಶಿಖರ ಮತ್ತು ಎಲ್ಲರೂ ಹತ್ತುವುದೂ ಇದನ್ನೇ. ಜಗತ್ತಿನ ಅತ್ಯಂತ ಎತ್ತರದ ಪರ್ವತವಾದ ಮೌಂಟ್ ಎವರೆಸ್ಟಿಗೆ ಹೋಲಿಸಿದರೆ ಕಿಲಿಮಾಂಜಾರೋ ಅದಕ್ಕಿಂತ ೨೯೫೫ ಮೀಟರ್ ಚಿಕ್ಕದು. ಕಿಲಿಮಾಂಜಾರೋ ಸಮುದ್ರದ ಮಟ್ಟದಿಂದ ೫೮೯೫ ಮೀಟರ್ (ಹತ್ತಿರ ಆರು ಕಿಲೋಮೀಟರ್) ಎತ್ತರದಲ್ಲಿದೆ, ಅಡಿಗಳಲ್ಲಿ ಲೆಕ್ಕ ಹಾಕಿದರೆ ಸುಮಾರು ೨೦ ಸಾವಿರ ಅಡಿಗಳು.  ಮೆಟ್ಟಿಲುಗಳ ಲೆಕ್ಕದಲ್ಲಿ ಹೇಳಿದರೆ ಸುಮಾರು ೨೫ ರಿಂದ ೨೮ ಸಾವಿರ ಮೆಟ್ಟಿಲುಗಳು. ಇಂಗ್ಲೆಂಡಿನ ದೊಡ್ಡ ಕಟ್ಟಡಗಳನ್ನು ತೆಗೆದುಕೊಂಡರೆ, ಒಂದು ಅಂತಸ್ತಿನಿಂದ ಇನ್ನೊಂದು ಅಂತಸ್ತಿಗೆ ಹೋಗಲು ಸುಮಾರು ೨೫ ಮೆಟ್ಟಿಲುಗಳಿರುತ್ತವೆ. ಅಂದರೆ ಈ ಪರ್ವತವನ್ನು ಹತ್ತುವುದು ಎಂದರೆ ಒಂದು ಸಾವಿರ ಮಹಡಿಯ ಕಟ್ಟಡವನ್ನು ಹತ್ತಿದಂತೆ! ಬರೀ ಮೇಲೆ ಹತ್ತುವುದಲ್ಲ, ಮುಂದೆ ಕೂಡ ನಡೆಯಬೇಕಲ್ಲ! ಬೆಟ್ಟದ  ತಪ್ಪಲಿನಿಂದ ತುದಿಯನ್ನು ಮುಟ್ಟಲು ಒಟ್ಟು 40 ಕಿಲೋಮೀಟರ್  (೨೫ ಮೈಲುಗಳು, ಹತ್ತಿರ ಫುಲ್ ಮ್ಯಾರಥಾನ್), ಮತ್ತು ಅಷ್ತೇ ಇಳಿಯಬೇಕು, ಒಟ್ಟು ೮೦ ಕಿಲೋಮೀಟರಿನ ದಾರಿ. ಇದನ್ನು ನಾಲ್ಕರಿಂದ ಏಳುದಿನದವರೆಗೆ ಕ್ರಮಿಸಲಾಗುತ್ತದೆ.   

ಕಿಲಿಮಾಂಜಾರೋ ಪರ್ವತವನ್ನು ಮೊಟ್ಟಮೊದಲು ಹತ್ತಿದ ಲಿಖಿತ ದಾಖಲೆ ಮಾಡಿರುವುದು ೧೮೮೯ರಲ್ಲಿ ಜರ್ಮನಿಯ ಜೊಹಾನ್ನೆಸ್ ರೆಬ್ಮನ್. ಅಂದಿನಿಂದ ಇಂದಿನವರೆಗೆ ಲಕ್ಷಾಂತರ ಜನರು ಈ ಪರ್ವತದ ಶೃಂಗವನ್ನು ಮುಟ್ಟಿ ಬಂದಿದ್ದಾರೆ. ಭೂಮಧ್ಯರೇಖೆಯ ಹತ್ತಿರದಲ್ಲಿದ್ದರೂ  ಪರ್ವತದ ತುದಿಯಲ್ಲಿ ಹಿಮಗಡ್ಡೆಗಳಿವೆ. ಮೊದಲಿನ ಐತಿಹಾಸಿಕ ದಾಖಲೆಯಿಂದ ಇಂದಿನವರೆಗೆ ಹಿಮದ ಗುಡ್ಡೆಗಳು ಕಡಿಮೆಯಾಗುತ್ತ ಬಂದಿವೆ ಮತ್ತು ೨೦೩೫ರ ಹೊತ್ತಿಗೆ ಸಂಪೂರ್ಣವಾಗಿ ಮಾಯವಾಗಬಹುದು ಎನ್ನುವುದು ವಿಜ್ಞಾನಿಗಳ ಲೆಕ್ಕಾಚಾರ.    

ಮೋಶಿ ಎನ್ನುವ ಊರು ಕಿಲಿಮಾಂಜಾರೋ ಪರ್ವತದ ತಪ್ಪಲಿನಲ್ಲಿದೆ. ಕೇವಲ ೪೦ ಕಿಲೋಮೇಟರ್ ದೂರದಲ್ಲಿ `ಕಿಲಿಮಾಂಜಾರೋ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ`ವಿದೆ.   

ದಾರಿ ಯಾವುದಯ್ಯ, ಕಿಲಿಮಾಂಜಾರೋವಿಗೆ?

ಈ ಮಹಾನ್ ಪರ್ವತದ ತುದಿಯನ್ನು ಮುಟ್ಟಲು ಬಹಳಷ್ಟು ದಾರಿಗಳಿವೆ.  ನಾಲ್ಕರಿಂದ ಏಳು ದಿನಗಳವರೆಗೆ ಈ ದಾರಿಗಳು ಶಿಖರದ ತುದಿಗೆ ಕರೆದುಕೊಂಡು ಹೋಗಿ ಇಳಿಸಿಕೊಂಡು ಬರುತ್ತವೆ. ಕೊಕೋಕೋಲಾ ಮಾರ್ಗ, ಮರಂಗು ಮಾರ್ಗ, ಲೆಮೊಶೋ ಮಾರ್ಗ ಇತ್ಯಾದಿ ಮಾರ್ಗಗಳಿವೆ.  ನಮ್ಮ ಪ್ರವಾಸದ ಉಸ್ತುವಾರಿ ಹೊತ್ತ ಸಂಸ್ಠೆಯು ಏಳು ದಿನಗಳ ಚಾರಣವನ್ನು ನಿಗದಿಪಡಿಸಿತು. ಹೆಚ್ಚು ದಿನ ತೆಗೆದುಕೊಂಡಷ್ಟೂ ಕಡಿಮಯಾಗುವ ಆಮ್ಲಜನಕಕ್ಕೆ ಹೊಂದಿಕೊಳ್ಳಲು ಅನುಕೂಲವಾಗುತ್ತದೆ ಮತ್ತು ಪರ್ವತದ ತುದಿಯನ್ನು ತಲುಪುವ ಸಾಧ್ಯತೆಗಳು ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕೆ ನಮಗೆ ಏಳು ದಿನಗಳ ಚಾರಣವನ್ನು ಸೂಚಿಸಿದರು. ಈ ದಾರಿಗೆ `ಮಚಾಮೆ ಮಾರ್ಗ` ಎಂದು ಕರೆಯುತ್ತಾರೆ.   

ಮೊದಲ ದಿನ: 

ಮಚಾಮೆ ದ್ವಾರದಿಂದ ನಮ್ಮ ಪ್ರಯಾಣ ಆರಂಭ. ಮಚಾಮೆ ದ್ವಾರವು ಸಮುದ್ರದ ಮಟ್ಟದಿಂದ ೧೮೦೦ ಮೀಟರ್ ಎತ್ತರದಲ್ಲಿದೆ. ಅಲ್ಲಿಂದ ಸುಮಾರು ೧೮ ಕಿಲೋಮೀಟರ್ ನಡೆದು ೧೨೦೦ ಮೀಟರ್ ಮೇಲೆ ಹತ್ತಿ ೩೦೦೦ ಮೀಟರ್ ಎತ್ತರವನ್ನು ತಲುಪುವುದು ಮೊದಲ ದಿನದ ಚಾರಣ. ಮೊದಲ ದಿನದ ಚಾರಣವು ದಟ್ಟವಾದ ರೇನ್-ಫಾರೆಸ್ಟ್ ನಡುವೆ. ಸೂರ್ಯನ ಕಿರಣಗಳು ಒಳಗೆ ಬರದಷ್ಟು ದಟ್ಟ ಕಾಡು. ೨೬ ಡಿಗ್ರಿ ಸೆಲ್ಸಿಯಸ್ ಉಷ್ಣಾಂಷದಲ್ಲಿ ಒಂದು ತೆಳು ಟಿ-ಶರ್ಟ್ ಹಾಕಿಕೊಂಡು, ಬೆನ್ನ ಹಿಂದೆ ರಕ್-ಸ್ಯಾಕ್ ತಗುಲಿಸಿಕೊಂಡು ಹೊರಟೆವು.  

ಗೈಡ್ ನಮ್ಮನ್ನು ನಿಧಾನವಾಗಿ ನಡೆಯಲು ಹೇಳುತ್ತಾನೆ. ತಾಂಜಾನಿಯಾದ ಮುಖ್ಯ ಭಾಷೆ, ಸ್ವಾಹಿಲಿ. ಸ್ವಾಹಿಲಿಯಲ್ಲಿ, `ಪೋಲೆ ಪೋಲೆ` ಎಂದರೆ `ನಿಧನಿಧಾನವಾಗಿ`. ಇದು ಕಿಲಿಮಾಂಜಾರೋ ಹತ್ತುವ ಮಂತ್ರ. ಇಲ್ಲಿ ನಿಧಾನವೇ ಪ್ರಧಾನ. ಗೈಡ್ ನಮ್ಮ ನಡೆಯುವ ವೇಗವನ್ನು ನಿರ್ಧರಿಸುತ್ತಾನೆ. `ಪೋಲೆ ಪೋಲೆ,` ಎಂದು ಆಗಾಗ ಹೇಳುತ್ತ ನಿಧಾನವಾಗಿ ದಟ್ಟ ಕಾಡಿನ ಮಧ್ಯ ಹತ್ತಿಸಿಕೊಂಡು ಹೋಗುತ್ತಾನೆ.   

ಹಾದಿಯಲ್ಲಿ ಮಧ್ಯ ಮಧ್ಯ ನಿಂತು ಹಾಡು ಹೇಳಿ ಕುಣಿದು ನಲಿಸುತ್ತಾರೆ. ಕಿಲಿಮಾಂಜಾರೋ ಹತ್ತುವಷ್ಟರಲ್ಲಿ ಅವರು ಹಾಡುವ `ಹಕೂನ ಮಟಾಟ` ಹಾಡು ಬಾಯಿಪಾಠವಾಗಿ ಬಿಡುತ್ತದೆ. `ಹಕೂನ ಮಾಟಾಟ,` ಎನ್ನುವ ಫ್ರೇಸ್ `ಲಯನ್ ಕಿಂಗ್` ಸಿನೆಮಾದಿಂದಾಗಿ ಬಹಳ ಪ್ರಖ್ಯಾತವಾದ ಸಾಲು ಮತ್ತು ಹಾಡು ಕೂಡ: `ಹಕೂನ ಮಟಾಟ, ಮೀನ್ಸ್ ನೋ ವರೀಸ್` 

ನಮ್ಮದು ೨೧ ಜನ ಮಧ್ಯವಯಸ್ಕ ಗಂಡಸರ ಗುಂಪು. ನಮ್ಮನ್ನು ನೋಡಿಕೊಳ್ಳುವ ಮುಖ್ಯ ಗೈಡ್, ಬ್ರೂಸ್, ನಲವತ್ತರ ಆಸುಪಾಸಿನಲ್ಲಿರುವ ಎತ್ತರದ ಆಳು. ಜೊತೆಗೆ ನಾಕಾರು ಜನ ಜ್ಯೂನಿಯರ್ ಗೈಡುಗಳು. ಅಷ್ಟೇ ಅಲ್ಲದೇ, ಅಡುಗೆಯವನು, ಅಡುಗೆಯ ಸಹಾಯಕರು, ನಮ್ಮ ಡಫೆಲ್ ಬ್ಯಾಗ್ (ಒಬ್ಬೊಬ್ಬರ ಡಫಲ್ ಬ್ಯಾಗ್ ೧೫ ಕಿಲೋ!) ಹೊರುವವರು, ನಮ್ಮ ಟೆಂಟ್ ಹೊರುವವರು, ಊಟಕ್ಕೆ ಬೇಕಾಗುವ ತಟ್ಟೆ, ಅಡುಗೆ ಸಾಮಗ್ರಿ, ಟೇಬಲ್, ಚೇರ್ ಹೊರುವವರು, ಟೆಂಟ್ ಟಾಯ್ಲೆಟ್ ಹೊರುವವರು, ಟಾಯ್ಲೆಟ್ಟನ್ನು ಶುಚಿಯಾಗಿ ಇಡುವವರು, ಎಲ್ಲ ಸೇರಿ ಸುಮಾರು ೬೦  ಜನ ಸಹಾಯಕರು ಇರಬಹುಸು! ಗೈಡುಗಳನ್ನು ಬಿಟ್ಟರೆ ಉಳಿದವರೆಲ್ಲರೂ ತಮ್ಮ ಹೆಗಲು ಮತ್ತು ತಲೆಯ ಮೇಲೆ ೨೦ ರಿಂದ ೩೦ ಕಿಲೋ ಭಾರದ ಸಾಮಗ್ರಿಗಳನ್ನು ಇಟ್ಟುಕೊಂಡು ಭರಭರನೇ ಮುಂದೆ ಸಾಗಿ, ನಮ್ಮ ಟೆಂಟು, ಟಾಯ್ಲೆಟ್ಟು ಮತ್ತು ಅಡಿಗೆಗಳನ್ನು ತಯಾರು ಮಾಡುತ್ತಾರೆ.  

ನಾವು ಸಂಜೆಯ ಹೊತ್ತಿಗೆ ನಮ್ಮ ಮೊದಲ ದಿನದ ಟೆಂಟನ್ನು ತಲುಪಿದಾಗ, ನಮ್ಮ ಟೆಂಟುಗಳು ನಮಗಾಗಿ ಕಾಯುತ್ತಿದ್ದವು. ಬಿಸಿ ಬಿಸಿ ಊಟ ಕೂಡ ತಯಾರಾಗಿತ್ತು. ನಾವು ತಲುಪಬೇಕಾದ `ಕಿಬೋ` ಶೃಂಗ ಕಾಣುತ್ತಿತ್ತು.  ಒಂದು ಟೆಂಟಿನಲ್ಲಿ ಇಬ್ಬರು. ಇಬ್ಬರು ಕೂತುಕೊಳ್ಳಬಹುದು, ಇಬ್ಬರು ಮಲಗಿಕೊಂಡರೆ ಟೆಂಟು ತುಂಬಿಹೋಗುವಂಥ ಚಿಕ್ಕ ಟೆಂಟು.  ಊಟ ಮಾಡಿ ಮಲಗಿದೆವು. ಮೊದಲ ದಿನದ ಚಾರಣ ಆರಾಮವಾಗಿತ್ತು.  

ಎರಡನೇ ದಿನ: 

ಎರಡನೇ ದಿನ ಮಚಾಮೆ ಕ್ಯಾಂಪಿನಿಂದ ಶಿರಾ ಕ್ಯಾಂಪಿಗೆ ೧೦ ಕಿಲೋಮೀಟರ್, ೮೪೦ ಮೀಟರ್ ಮೇಲಕ್ಕೆ ಹತ್ತಿ, ೩೮೪೦ ಮೀಟರ್ ತಲುಪಿದೆವು. ಮೊದಲ ದಿನದ ದಟ್ಟಕಾಡು ಮಾಯವಾಗಿ ಎರಡನೇ ದಿನ ನಮಗೆ ಸಿಕ್ಕಿದ್ದು ಚಿಕ್ಕ ಚಿಕ್ಕ ಗಿಡಗಳು, ಕಳ್ಳೆ ಕಂಟೆಗಳು. ಶಿರಾ ಕ್ಯಾಂಪಿನಲ್ಲಿ ನಮ್ಮ ರಕ್-ಸ್ಯಾಕ್ ಇಟ್ಟು, ಕ್ಯಾಂಪಿನಿಂದ ಹತ್ತಿರದಲ್ಲಿರುವ ನೈಸರ್ಗಿಕವಾದ ಶಿರಾ ಗುಹೆಗೆ ಹೋದೆವು. ಅದರೊಳಗೆ ಹೋಗಿ, ಗುಹೆಯ ಗುಡ್ಡದ ಮೇಲೆ ಹತ್ತಿ ಫೋಟೊ ತೆಗೆದುಕೊಂಡು ಬಂದೆವು. ಸಂಜೆಯಾಗಿತ್ತು, ಮೊದಲಬಾರಿಗೆ ಸಣ್ಣಗೆ ಚಳಿಯ ಅನುಭವ  ಶುರುವಾಯಿತು. ನಡೆದದ್ದು ಕೇವಲ ೧೦ ಕಿಲೋಮೀಟರ್ ಆಗಿದ್ದರೂ ಎರಡನೇ ದಿನದ ಚಾರಣ ಮೊದಲನೇ ದಿನಕ್ಕೆ ಹೋಲಿಸಿದರೆ ಸ್ವಲ್ಪ ಕಷ್ಟಕರವಾಗಿತ್ತು.  

ಮೂರನೇ ದಿನ: 

ಮೂರನೇ ದಿನ ೭೬೦ ಮೀಟರ್ ಹತ್ತಿ, ೪೬೦೦ ಮೀಟರ್ ಎತ್ತರದಲ್ಲಿರುವ ಲಾವಾ ಟಾವರ್ ತಲುಪಿದೆವು! ಆಮ್ಲಜನಕ ಕಡಿಮಾಯಾಗುವುದು ಯಾರೂ ಹೇಳದಿದ್ದರೂ ಮೊದಲ ಸಲ ಅನುಭವಕ್ಕೆ ಬರುತ್ತದೆ. ಅಷ್ಟು ಮೇಲೆ ಹತ್ತಿದ ಮೇಲೆ ಮತ್ತೆ ೬೫೦ ಮೀಟರ್ ಕೆಳಗೆ ಇಳಿಯಬೇಕು! ಒಟ್ಟು ೧೫ ಕಿಲೋಮೀಟರ್ ನಡೆದು ಬರಾಂಕೋ ಕ್ಯಾಂಪ್ ತಲುಪಿದೆವು. ದಾರಿಯುದ್ದಕ್ಕೂ ಆಗಾಗ ನೀರು ಕುಡಿಯಲು ಗೈಡ್ ಎಲ್ಲರಿಗೂ ಜ್ಞಾಪಿಸುತ್ತಿದ್ದ. ಸ್ವಾಹಿಲಿಯಲ್ಲಿ ನೀರಿಗೆ `ಮಾಜಿ` ಎನ್ನುತ್ತಾರೆ.  ನಾವೆಲ್ಲ ಆಗ, `ಮಾಜಿ ಮಾಜಿ,` ಎಂದು ಕೂಗಿ ನೀರು ಕುಡಿಯುತ್ತಿದೆವು.  ಲಾವಾ ಟಾವರಿನಿಂದ ಕಿಲಿಮಾಂಜಾರೋದ ಶೃಂಗ ನಯನ ಮನೋಹರವಾಗಿ ಕಾಣುತ್ತಿತ್ತು, ಆದರೆ ಊಹೆಗೂ ಮೀರಿದ ಎತ್ತರದಲ್ಲಿತ್ತು. ನಿಜವಾಗಿಯೂ ನಾನು ಇದರ  ಶೃಂಗ ಮುಟ್ಟಲು ಸಾಧ್ಯವೇ ಎಂದು ಸಣ್ಣ ಅಳುಕು ಕೂಡ ಮೂಡಿತು. ದಾರಿಯುದ್ದಕ್ಕೂ ಚಿಕ್ಕ ಚಿಕ್ಕ ಪೊದೆಗಳು ಮತ್ತು ಕುರುಚಲು ಗಿಡಗಳು. ತೆಂಗಿನಗಿಡವನ್ನು ಮೇಲಿನಿಂದ ಜೋರಾಗಿ ಒತ್ತಿದಂತೆ ಕಾಣುವ ಚಿಕ್ಕ ಚಿಕ್ಕ ಸೆನಿಸಿಯೋ ಗಿಡಗಳು. ಮೂರನೇ ದಿನ ನಾವು ಒಟ್ಟು ಬರೀ ೧೧೦ ಮೀಟರ್ ಮೇಲೆ ಬಂದಿದ್ದೆವು. ಎಂಥಹ ನಷ್ಟ! 

ಆಗ ನಮ್ಮ ಚೀಫ್ ಗೈಡ್ ಹೇಳಿದ, `ಮೂರನೇ ದಿನ ಅಷ್ಟು ಮೇಲೆ ಹತ್ತಿ ಮತ್ತೆ ಇಳಿಯುವುದಿದೆಯಲ್ಲ, ಇದು ಕಡಿಮೆಯಾಗುತ್ತಿರುವ ಆಮ್ಲಜನಕ್ಕೆ ಹೊಂದಿಕೊಳ್ಳಲು ಬಹಳ ಉಪಯುಕ್ತವಾದ ಚಾರಣದ ದಿನ. ನೀವು ಅಷ್ಟು ಮೇಲೆ ಹತ್ತಿ ಅಲ್ಲಿ ಊಟ ಮಾಡಿದ್ದೀರಿ, ಆಗ ನಿಮ್ಮಲ್ಲಿ ಆಗಲೇ ಕೆಲವರಿಗೆ ತಲೆನೋವು ಕಾಣಿಸಿಕೊಂಡಿದೆ, ನಂತರ ಕೆಳಗೆ ಇಳಿದಿದ್ದೀರಿ, ಇಲ್ಲಿ ಮಲಗುತ್ತೀರಿ, ಇದು ಮುಂದಿನ ಎರಡು ದಿನಗಳಿಗೆ ಮುಖ್ಯವಾದ ಪೂರ್ವ ತಯಾರಿ,` ಎಂದ. ಇದ್ದರೂ ಇರಬಹುದು ಎಂದುಕೊಂಡೆ. ಒಟ್ಟು ಹದಿನೈದು ಕಿಲೋಮೀಟರ್ ಹತ್ತಿ ಇಳಿಯುವಷ್ಟರಲ್ಲಿ ಎಲ್ಲರೂ ಸುಸ್ತು ಹೊಡೆದು ಹೋಗಿದ್ದೆವು. ಕೆಲವರಿಗೆ ತಲೆ ನೋವು ಕಾಣಿಸಿಕೊಂಡಿತ್ತು. ಚಳಿ ಕೂಡ ಜಾಸ್ತಿಯಾಗಿತ್ತು. 

ನಾಲ್ಕನೇ ದಿನ: 

ನಾಲ್ಕನೇ ದಿನ ಬರಾಂಕೋ ಕ್ಯಾಂಪಿನಿಂದ ಕರಂಗಾ ಕ್ಯಾಂಪಿಗೆ ಹತ್ತು ಕಿಲೋಮೀಟರ್, ೩೯೫೦ ಮೀಟರಿನಿಂದ ೪೨೦೦ ಮೀಟರಿನವರೆಗೆ (೨೫೦ ಮೀಟರ್ ಎತ್ತರ) ಚಾರಣ! ಪ್ರತಿದಿನದಂತೆ ಪ್ರಾಥರ್ವಿಧಿಗಳನ್ನು ಪೂರೈಸಿಕೊಂಡು (ಸ್ನಾನದ ಹೊರತು), ಬೆಳಗಿನ ಉಪಾಹಾರ ಮಾಡಿ, ಚಳಿಗೆ ಬೇಕಾದ ಬಟ್ಟೆಗಳನ್ನು ಹಾಕಿಕೊಂಡು, ರಕ್-ಸ್ಯಾಕಿನಲ್ಲಿ ಕೆಲವು ಬಟ್ಟೆ ಸ್ನ್ಯಾಕ್-ಗಳನ್ನು ಇಟ್ಟುಕೊಂಡು, ಕ್ಯಾಮಲ್ ಬ್ಯಾಗಿನಲ್ಲಿ ನೀರು ತುಂಬಿಕೊಂಡು, ಸನ್-ಸ್ಕ್ರೀನ್ ಹಾಕಿಕೊಂಡು ಹೊರಟೆವು. ಕರಂಗಾ ಕ್ಯಾಂಪ್ ತಲುಪಿದಾಗ ಲೇಟ್- ಮಧ್ಯಾಹ್ನ. ಈಗ ನಾವು ಎಲ್ಲ ಮೋಡಗಳಿಗಿಂತ ಮೇಲೆ ಇದ್ದೆವು. ಮೋಡಗಳು ನಮ್ಮ ಕೆಳಗೆ ಸುಮುದ್ರದಂತೆ ಕಾಣುತ್ತಿದ್ದವು!  ಅವತ್ತು ನಾವು ಸ್ವಾಹಿಲಿಯ `ಕಿಲಿಮಾಂಜಾರೋ`  ಹಾಡನ್ನು ಕನ್ನಡ ಮತ್ತು ಹಿಂದಿಗೆ ಭಾಷಾಂತರ ಮಾಡಿ ಅದೇ ಧಾಟಿಯಲ್ಲಿ ಹೇಳಿ ಕುಣಿದು, ಸಾಕಷ್ಟು ಫೋಟೋ ತೆಗೆದುಕೊಂಡೆವು. ಹಿಂದಿನ ದಿನಕ್ಕೆ ಹೋಲಿಸಿದರೆ ಚಳಿ ಹೆಚ್ಚಾಗಿತ್ತು.  

ಐದನೇ ದಿನ: 

ಐದನೇ ದಿನ ಕರಂಗಾ ಕ್ಯಾಂಪಿನಿಂದ ಬರಾಫು (ಬರಾಫು ಎಂದರೆ ಹಿಮ, ಹಿಂದಿಯಲ್ಲಿ `ಬರ್ಫ್` ಶಬ್ದಕ್ಕೆ ಎಷ್ಟು ಹತ್ತಿರವಿಲ್ಲವೇ?) ಕ್ಯಾಂಪಿಗೆ ಚಾರಣ, ೪೨೦೦ರಿಂದ ೪೬೬೦ ಮೀಟರಿನವರೆಗೆ, ಹತ್ತಿರ ಅರ್ಧ ಕಿಲೋಮೀಟರ್ ಮೇಲಕ್ಕೆ. ಸಮುದ್ರ ಮಟ್ಟದಿಂದ ನಾಲ್ಕು ಸಾವಿರ ಮೀಟರ್ ಮೇಲೆ ಹೋದ ಮೇಲೆ ವಾತಾವರಣದಲ್ಲಿ ಆಮ್ಲಜನಕ ಸಾಕಷ್ಟು ಕಡಿಮೆಯಾಗಲು ಶುರುವಾಗುತ್ತದೆ. ಐದನೇ ದಿನ ನಾವು ನಡೆದದ್ದು ೮ ಕಿಲೋಮೀಟರ್, ನಡೆಯಲು ತೆಗೆದುಕೊಂಡ ಅವಧಿ ೫ ಗಂಟೆ! ಆಗಲೇ ಸ್ವಲ್ಪ ಏದುಸಿರು ಶುರುವಾಗಿತ್ತು, ಚಳಿಕೂಡ ತನ್ನ ಕೈಚಳಕವನ್ನು ತೋರಿಸುತ್ತಿತ್ತು. ಮೋಡಗಳಿಲ್ಲದ ನಗ್ನ ಕಿಬೋ ಶೃಂಗ ಕಣ್ಣಳತೆಯಲ್ಲಿ ಕರೆಯುತ್ತಿತ್ತು. ಬರಾಫು ಕ್ಯಾಂಪಿನಲ್ಲಿ ವಾತಾವರಣದ ಆಮ್ಲಜನಕ ೨೧%ನಿಂದ ೧೦%ಗೆ ಇಳಿದಿತ್ತು! 

ಮಧ್ಯಾಹ್ನವಾಗುವಷ್ಟರಲ್ಲಿ ಬರಾಫು ಕ್ಯಾಂಪ್ ತಲುಪಿದೆವು. ಯಥಾಪ್ರಕಾರ ಬಿಸಿಬಿಸಿ ಊಟ ಮಾಡಿದೆವು. ನಂತರ ನಮಗೆಲ್ಲ ಮಲಗಲು ಹೇಳಿದರು! ಆ ಚಳಿಯಲ್ಲಿ, ಅಷ್ಟು ಕಡಿಮೆ ಆಮ್ಲಜನಕದಲ್ಲಿ ಅದೂ ಮಧ್ಯಾಹ್ನ ಎಲ್ಲಿಂದ ತಾನೆ ನಿದ್ದೆ ಬಂದೀತು? ಆದರೆ ಹೊರಗೆ ಅಸಾಧ್ಯ ಚಳಿ, ಜೊತೆಗೆ ನಾಲ್ಕು ಹೆಜ್ಜೆ ಜೋರಾಗಿ ನಡೆದರೆ ಏದುಸಿರು ಬೇರೆ, ಟೆಂಟಿಗೆ ಬಂದು ಮಾಡಿದ್ದು ಮಲಗುವ ನಾಟಕವಷ್ಟೇ!  

ಸಂಜೆ ಏಳು ಗಂಟೆಗೆ ರಾತ್ರಿಯ ಭೋಜನ. ಇದು ಕೊನೆಯ ಆರೋಹಣದ ಕೊನೆಯ ಭೋಜನ. ಊಟ ಮಾಡಿದ ಮೇಲೆ ಮತ್ತೆ ಮಲಗಲು ಹೇಳಿದರು, ಏಕೆಂದರೆ ಕೊನೆಯ ಆರೋಹಣ ಶುರುವಾಗುವುದು ಮಧ್ಯರಾತ್ರಿ ೧೨ ಗಂಟೆಗೆ! ಇಲ್ಲಿಯವರೆಗೂ ನಮ್ಮ ಚಾರಣವೆಲ್ಲ ಹಾಡುಹಗಲಿನಲ್ಲೇ ಆಗಿತ್ತು. ನಾವಿನ್ನೂ ಹತ್ತಬೇಕಾಗಿರುವುದು ೧೨೩೫ ಮೀಟರ್!  ಆಗಲೇ ಗಾಳಿಯ ಆಮ್ಲಜನಕಕ್ಕೆ ಒದ್ದಾಡುತ್ತಿದ್ದೇವೆ. ರಾತ್ರಿಯ ಹೊತ್ತು ಚಳಿ ಕೂಡ ಜಾಸ್ತಿ. ಬರಾಫು ಕ್ಯಾಂಪಿನಲ್ಲಿ ಉಷ್ಣಾಂಶ ಆಗಲೆ ೮ ಡಿಗ್ರಿ ಸೆಲ್ಸಿಯಸ್ ತೋರಿಸುತ್ತಿತ್ತು. ಇದನ್ನೆಲ್ಲ ನೆನೆಸಿಕೊಂಡು ವೇಳೆ ಕಳೆದದ್ದು, ನಿದ್ದೆ ಮಾತ್ರ ಬಾರದು! ಎದ್ದಿದ್ದು ಬೆಳಿಗ್ಗೆ ೭ ಗಂಟೆಗೆ, ಇನ್ನು ರಾತ್ರಿ ಪೂರ್ತಿ ಏರಬೇಕು. ಇದೆಲ್ಲ ನನ್ನಿಂದ ಸಾಧ್ಯವೇ, ಅಥವಾ ಇದೆಲ್ಲ ಕನಸೇ? 

ಐದನೇ ರಾತ್ರಿ ಮತ್ತು ಆರನೇ ದಿನ: 

ಐದನೇ ರಾತ್ರಿ ಹನ್ನೊಂದು ಗಂಟೆಯಿಂದ ಕೊನೆಯ ಆರೋಹಣಕ್ಕೆ ತಯಾರಾಗಲು ಶುರುವಾದೆವು. ಅಂತಿಮಾರೋಹಣಕ್ಕೆ ಎರಡರಿಂದ ಮೂರು ಲೇಯರ್ ಕಾಲುಚೀಲಗಳು, ಮೂರರಿಂದ ನಾಲ್ಕು ಲೇಯರ್ ಉಡುಗೆಗಳು ಕಾಲು, ಕೈ ಮತ್ತು ದೇಹಕ್ಕೆ, ಕತ್ತಿಗೆ ಬಲಕ್ಲಾವಾ, ತಲೆ ಮತ್ತು ಕಿವಿ ಮುಚ್ಚಿಕೊಳ್ಳಲು ಟೋಪಿ, ಬೆರಳುಗಳನ್ನು ಮುಚ್ಚಿಕೊಳ್ಳಲು ಕೈಗವಸು, ನಡೆಯಲು ಸಹಾಯಕ್ಕಾಗಿ ಊರುಗೋಲುಗಳು, ತಲೆಗೆ ಹೆಡ್-ಲೈಟು, ರಕ್-ಸ್ಯಾಕಿನಲ್ಲಿ ಕ್ಯಾಮೆಲ್ ಬ್ಯಾಗಿನಲ್ಲಿ ನೀರು, ಸ್ನ್ಯಾಕ್, ಇನ್ನೆರೆಡು ಇರಲಿ ಎಂದು ಹೆಚ್ಚುವರಿ ದಿರಿಸುಗಳು! ಮಧ್ಯರಾತ್ರಿ ಹನ್ನೆರಡಕ್ಕೆ ನಮ್ಮ ಕೊನೆಯ ಆರೋಹಣಕ್ಕೆ ನಮ್ಮ ಗೈಡ್ ನಾಂದಿ ಹಾಡಿದ, `ಹಕೂನ ಮಟಾಟ`. 

ನಾವು ಹೊರಟ ರಾತ್ರಿ ಅಮಾವಾಸ್ಯೆ! `ಅಮಾಸಿಯ ನಡುರಾತ್ರಿ  ಎಲ್ಲೂ ಹೋಗಬ್ಯಾಡ,` ಎಂದು ಚಿಕ್ಕವನಿದ್ದಾಗ ಹಿರಿಯರಿಂದ   ಕೇಳಿಸಿಕೊಳ್ಳುವ ಮಾತು ನೆನಪಾಯಿತು. ಅವತ್ತು ಅಮಾವಾಸ್ಯೆಯ ಮಧ್ಯರಾತ್ರಿ ನಾನೆಂದೂ ಮಾಡಿರದ ಆರೋಹಣಕ್ಕೆ ಅಣಿಯಾಗಿದ್ದೆ! ನಮ್ಮಂತೆಯೇ ಹತ್ತಾರು ಗುಂಪುಗಳು ನಮಗಿಂತೆ ಮೊದಲೇ ಮುಂದೆ ಸಾಗುತ್ತಿದ್ದರು. ಗೈಡ್ ದಾರಿ ತೋರಿಸುತ್ತಿದ್ದ. ನಾವು ಒಬ್ಬರ ಹಿಂದೆ ಒಬ್ಬರು ಹೆಡ್-ಲೈಟಿನಲ್ಲಿ ಮುಂದಿನವರ ಕಾಲನ್ನು ಅನುಸರಿಸಿ ಮೇಲೆ ಹತ್ತಲು ತೊಡಗಿದೆವು. `ಪೋಲೆ ಪೋಲೆ` ಹೆಜ್ಜೆ ಹಾಕುವ ಬರೀ ಕಲ್ಲು ಮಣ್ಣುಗಳಿಂದ ತುಂಬಿದ ಕಡಿದಾದ ಆರೋಹಣ. ನಮ್ಮ ಗೈಡ್ ತುಂಬ ನಿಧಾನವಾಗಿ ಹೆಜ್ಜೆ ಹಾಕುತ್ತ ನಮ್ಮ ಹತ್ತುವ ಗತಿಯನ್ನು ನಿರ್ಧರಿಸಿದ್ದ.  

ಅವನು ಅಷ್ಟು ಮೆಲ್ಲ ಹತ್ತುತ್ತಿದ್ದರೂ, ನಮಗೆ ಅದೂ ಕಷ್ಟವೆನಿಸಲು ಶುರು ಹತ್ತಿತು. ಕೈಗವಸು ಹಾಕಿಕೊಂಡಿದ್ದರೂ ಹತ್ತು ನಿಮಿಷದಲ್ಲಿ ಕೈ ಮರಗಟ್ಟಲು ಶುರುವಾಯಿತು. ಇನ್ನೊಂದು ಕೈಗವಸನ್ನು ಅದರ ಮೇಲೆ ಹಾಕಿಕೊಂಡೆ. ಕೈಯ ಚಳಿ ಸ್ವಲ್ಪ ಕಡಿಮೆಯಾಯಿತು, ಆದರೆ ಊರುಗೋಲು ಹಿಡಿಯುವುದು ಕಷ್ಟವೆನಿಸಲು ಶುರುವಾಯಿತು. ಇನ್ನೂ ಹತ್ತು ನಿಮಿಷವಾಗುವಷ್ಟರಲ್ಲಿ ಎದೆ ಮತ್ತು ಬೆನ್ನನ್ನು ಯಾರೋ ಕಟ್ಟಿ ಅಮುಕುತ್ತಿರುವ ಭಾವನೆ. ಸದ್ಯ ಮೂರು ಕಾಲುಚೀಲ ಹಾಕಿಕೊಂಡಿದ್ದು ಒಳ್ಳೆಯದಾಯಿತು, ಕಾಲ್ಬೆರಳುಗಳು ಸುರಕ್ಷಿತವಾಗಿದ್ದವು. 

ಸುಮಾರು ಒಂದು ಗಂಟೆ ಹತ್ತಿದ ಮೇಲೆ ಒಂದು ಸಣ್ಣ ಬ್ರೇಕ್! ಆಗ ಒಬ್ಬ ಗೈಡ್ ನನ್ನ ಕಷ್ಟವನ್ನು ನೋಡಿ, ನನ್ನ ಬಳಿ ಬಂದು, ಕೈಗವಸನ್ನು ಸರಿಯಾಗಿ ಹಾಕಿದ. ನಾನು ಹಾಕಿಕೊಂಡ ಲೇಯರ್-ಗಳಲ್ಲಿ ಒಂದು ಲೇಯರ್ ಅನ್ನು ಕಡಿಮೆ ಮಾಡಲು ಹೇಳಿದ. ನಾನು ಇಲ್ಲಿಯವರೆಗೂ ಊರುಗೋಲನ್ನು ಉಪಯೋಗಿಸಿಯೇ ಇರಲಿಲ್ಲ, ಆದರೆ ಊರುಗೋಲಿಲ್ಲದೇ ಅಂತಿಮ ಆರೋಹಣ ಮಾಡಬೇಡಿ ಎಂದು ನಮ್ಮ ಚೀಫ್ ಗೈಡ್ ಹೇಳಿದ್ದ. ನನ್ನ ಜೊತೆಗಾರರೆಲ್ಲ್ರೂ ಊರುಗೋಲನ್ನು ಹಿಡಿದು ನಡೆಯುತ್ತಿದ್ದರು. ನನಗೆ ಮಾತ್ರ ಇಂಥ ರಾತ್ರಿಯಲ್ಲಿ ಕೈಗವಸಿನಲ್ಲಿ ಊರುಗೋಲನ್ನು  ಊರಿ ನಡೆಯುವುದು ತುಂಬ ಕಷ್ಟವಾಗುತ್ತಿತ್ತು. ಗೈಡ್ ನನ್ನ ಊರುಗೋಲುಗಳನ್ನು ಮಡಚಿ ನನ್ನ ರಕ್-ಸ್ಯಾಕಿಗೆ ಹಾಕಿದ. ತನ್ನಂತೆ ಊರುಗೋಲಿಲ್ಲದೇ ಹತ್ತಬಹುದು ಎಂದು ಭರವಸೆ ಕೊಟ್ಟ.  ಕುಡಿಯಲು ನೀರುಕೊಟ್ಟ, ತಿನ್ನಲು ನನ್ನ ಬ್ಯಾಗಿನಿಂದ ಬಿಸ್ಕೀಟು ಕೊಟ್ಟ. ಹೋದ ಜೀವ ಬಂದಂತಾಯಿತು.  

ಮತ್ತೆ ಚಾರಣ ಮುಂದುವರೆಯಿತು. ನಾವೀಗ ಎಲ್ಲ ಮೋಡಗಳಿಗಿಂತ ಆಗಲೇ ಮೇಲಕ್ಕೆ ಬಂದ್ದಿದ್ದೆವಲ್ಲ, ಅಮವಾಸ್ಯೆಯ ರಾತ್ರಿ ಬೇರೆ, ಆಕಾಶದಲ್ಲಿ ಪ್ರತಿ ನಕ್ಷತ್ರಗಳೂ ಕಾಣಿಸುತ್ತಿದ್ದವು. ಅಷ್ಟು ಶುಭ್ರವಾದ ಅಷ್ಟೊಂದು ಚುಕ್ಕೆಗಳಿರುವ ಆಕಾಶವನ್ನು ನಾನು ಅವತ್ತೇ ನೋಡಿದ್ದು. ಆದರೆ ತಲೆ ಮೇಲೆತ್ತಿ ನಡೆಯುವಂತಿಲ್ಲ, ಮುಂದಿನವರ ಕಾಲನ್ನು ನೋಡಿ ಹತ್ತಬೇಕು. ನಾವು ಹೀಗೆ ಹತ್ತಬೇಕಾದರೆ ಬೇರೆ ಗುಂಪಿನಿಂದ ಕೆಲವರನ್ನು ಇಳಿಸಿಕೊಂಡು ಹೋಗುತ್ತಿದ್ದರು, ಅವರಿಗೆಲ್ಲ `ತೀವ್ರ ಪರ್ವತ ಕಾಯಿಲೆ` (acute mountain syndrome) ಆಗಿತ್ತು. ಬಾಯಿಯವರೆಗೂ ಬಂದು ಗಂಟಲಿಗೆ ಇಳಿಯಲಿಲ್ಲ ಎನ್ನುವಂತೆ, ಇಷ್ಟು ಎತ್ತರ ಬಂದು ಪರ್ವತದ ಶೃಂಗ ತಲುಪದವರನ್ನು ನೋಡುತ್ತ ನಿಧನಿಧಾನವಾಗಿ ಮೇಲೆ ಹತ್ತುತ್ತಿದ್ದೆವು. ನಮಗೂ ಅದೇ ಪಾಡು ಬರದಿರಲಿ ಎಂದು ಮನಸ್ಸಿನಲ್ಲೇ ಪ್ರಾರ್ಥಿಸುತ್ತ. ಚಳಿಯ ಹೊಡೆತಕ್ಕೆ ಕ್ಯಾಮೆಲ್ ಬ್ಯಾಗಿನಲ್ಲಿ ನೀರು ಪೂರ್ತಿ ಮಂಜುಗಡ್ಡೆಯಾಗಿಬಿಟ್ಟಿದೆ.  ಉಷ್ಣಾಂಶ -೧೦, ಅನುಭವಿಸುವ ಉಷ್ಣಾಂಶ -೧೫ ಡಿಗ್ರೈ ಸೆಂಟಿಗ್ರೇಡ್!

ಕಿಬೋ ಶಿಖರದ ಮೊದಲ ಶೃಂಗದ ಹೆಸರು, ಸ್ಟೆಲ್ಲಾ ಪಾಯಿಂಟ್. ನಾವು ಅದನ್ನು ತಲುಪಲು ಸುಮಾರು ೭೫% ಹತ್ತಿರಬಹುದು, ಸೂರ್ಯೋದಯದ ಮೊದಲ ಕುರುಹುಗಳು ಶುರುವಾದವು. ನಾವು ಹತ್ತುವ ಪರ್ವತವನ್ನು ಬಿಟ್ಟರೆ, ಸುತ್ತಲಿನ ೨೭೦ ಡಿಗ್ರ ಒಂದು ಸರಳರೇಖೆಯನ್ನು ಎಳೆದಂತೆ, ನಸುಗೆಂಪು ಬಣ್ಣದ ಬೆಳಕು! ಅಲ್ಲಿ ಕಾಣುವ ದೃಶ್ಯವನ್ನು ಮತ್ತು ಅನುಭವವನ್ನು ಶಬ್ದಗಳಲ್ಲಿ ವರ್ಣಿಸುವುದು ಅಸಾಧ್ಯ, ಫೋಟೋಗಳಲ್ಲಿ ವಿಡಿಯೋಗಳಲ್ಲಿ ಹಿಡಿದಿಡುವುದು ಸಾಧ್ಯವೇ ಇಲ್ಲ. ಮುಂದಿನ ಹದಿನೈದು ನಿಮಿಷ ಸೂರ್ಯ ಹುಟ್ಟುವ ಅದ್ಭುತ ಕ್ರಿಯೆ ನಾವು ಮೇಲೆ ಹತ್ತುವ ಕಾರ್ಯಕ್ಕೆ ಹುಮ್ಮಸ್ಸು ಕೊಡುತ್ತಿತ್ತು.  ಎರಡೂ ಬದಿಯಲ್ಲಿ ಹಿಮಾಚ್ಛಾಧಿತ ಕಲ್ಲುಗಳು ಕಣ್ಣಿಗೆ ತಂಪನ್ನುಣಿಸುತ್ತಿದ್ದವು.  

ಸ್ಟೆಲ್ಲಾ ಪಾಯಿಂಟ್ ೫೭೫೬ ಮೀಟರ್ ಎತ್ತರದಲ್ಲಿದೆ. ನಾವು ಅಲ್ಲಿ ತಲುಪುವಷ್ಟರಲ್ಲಿ ಆಗಲೇ ಕೆಲವರು ಕೆಳಗೆ ಇಳಿಯುತ್ತಿದ್ದರು! ಅಲ್ಲಿ ಫೋಟೋ ತೆಗೆದುಕೊಂಡು ಸ್ವಲ್ಪ ಹೊತ್ತು ವಿರಮಿಸಿ, ನಮ್ಮ ಕೊನೆಯ ಆರೋಹಣವನ್ನು ಆರಂಭಿಸಿದೆವು, `ಉಹುರು` ಎನ್ನುವ ತುದಿಯನ್ನು ಮುಟ್ಟಲು. ಅಸಾಧ್ಯ ಚಳಿ. ಹತ್ತು ಹೆಜ್ಜೆ ನಡೆಯುವಷ್ಟರಲ್ಲಿ ಏದುಸಿರು.  ಆದರೆ `ಊರಿಗೆ ಬಂದವಳು ನೀರಿಗೆ ಬಾರದಿರುವಳೇ?` ಎನ್ನುವ ಗಾದೆಯಂತೆ, `ಸ್ಟೆಲ್ಲಾ ಪಾಯಿಂಟ್ ತಲುಪಿದ ಮೇಲೆ ಉಹುರು ತಲುಪದಿರಲು ಸಾಧ್ಯವೇ?`  

ಸ್ಟೆಲ್ಲಾ ಪಾಯಿಂಟ್-ನಿಂದ `ಉಹುರು` ಸುಮಾರು ಒಂದು ಕಿಲೋಮೀಟರ್, ಸ್ಟೆಲ್ಲಾ ಪಾಯಿಂಟಿಗಿಂತ ಕೇವಲ ೧೪೦ ಮೀಟರ್ ಎತ್ತರ. ನಡೆಯುವ ಎರಡೂ ಬದಿ ದೂರದಲ್ಲಿ ಹಿಮದ ಬಂಡೆಗಳು, ದೂರದಲ್ಲಿ ಕೆಳಗೆ ಮೋಡಗಳು. ನನಗೆ `ನಾರದ ವಿಜಯ್` ಸಿನೆಮಾದಲ್ಲಿ  ಆಕಾದಲ್ಲಿ ನಡೆಯುವ ನಾರದನ ನೆನಪಾಯಿತು. ಹೆಜ್ಜೆಯ ಮೇಲೊಂದು ಹೆಜ್ಜೆಯ ನಿಕ್ಕುತ  ಒಂದೂವರೆ ಗಂಟೆಯಲ್ಲಿ ಉಹುರು ತಲುಪಿದೆವು.  ಅಸಾಧ್ಯ ಎಂದುಕೊಂಡ ಕಿಲಿಮಾಂಜಾರೋ ಪರ್ವತದ ತುಟ್ಟತುದಿ `ಉಹುರು`ದ ಮೇಲೆ ನಾನು ನಿಂತಿದ್ದೆ.  

ಉಹುರು ಎಂದು ಬರೆದಿರುವ ಫಲಕದ ಮುಂದೆ ನಿಂತಾಗ, ನನಗೆ ಕಿಲಿಮಾಂಜಾರೋ ಗೆದ್ದ ಭಾವನೆ ಬರಲಿಲ್ಲ. ನನ್ನನ್ನು ಗೆದ್ದ ಭಾವನೆಯೂ ಬರಲಿಲ್ಲ. ನನಗಿಂತ ಮೊದಲು ಲಕ್ಷಾಂತರ ಜನ ಕಿಲಿಮಾಂಜಾರೋ ಹತ್ತಿದ್ದಾರೆ, ನಾನಾದ ಮೇಲೆ ಕೂಡ ಮಿಲಿಯನ್-ಗಟ್ಟಲೇ ಜನರು ಹತ್ತುತ್ತಾರೆ.  ಗೈಡುಗಳು ಪೋರ್ಟರುಗಳಿಲ್ಲದೇ ಇದ್ದಿದ್ದರೆ ಇದೆಲ್ಲ ಸಾಧ್ಯವಾಗುವ ಮಾತೇ? `ಉಹುರು` ಎಂದರೆ `ಬಿಡುಗಡೆ` ಎಂದು ಅರ್ಥ; ಎಂಥಹ ಅನ್ವರ್ಥನಾಮ! `ಉಹುರು` ಆ ಕ್ಷ ನನ್ನನ್ನು ಎಲ್ಲದರಿಂದ ಬಿಡುಗಡೆ ಮಾಡಿ ವಿನೀತನನ್ನಾಗಿಸಿತು. ಪ್ರಕೃತಿಯ ಅಗಾಧತೆಯ ಮುಂದೆ ನಾನು ಅಕ್ಷರಷಃ ಇರುವಯಾಗಿಬಿಟ್ಟೆ. ನಮ್ಮನ್ನು ಇಲ್ಲಿಯವರೆಗೆ ಹರೆತಂದ ಗೈಡುಗಳು, ಪೋರ್ಟರುಗಳು, ಅಡುಗೆಯವರು ಮಾಡುವ ಕೆಲಸವನ್ನು ಹಣದಲ್ಲಿ ಅಳೆಯಲು ಸಾಧ್ಯವೇ ಇಲ್ಲ ಎಂದು `ಉಹುರು` ಹೇಳಿದಂತಾಗುತ್ತದೆ, ನಾನು ವಿನಮ್ರನಾಗಿ `ಉಹುರು` ಎಂದು ಬರೆದ ಫಲಕದ ಬಳಿ ಕೂತುಕೊಂಡೆ. .  

ಮಿತ್ರರೆಲ್ಲ ಸೇರಿದೆವು. ಎಲ್ಲ ೨೧ ಜನರೂ ಉಹುರು ಮುಟ್ಟಿದೆವು ಎನ್ನುವುದು ದೊಡ್ಡ ಸಮಾಧಾನ. ನೂರಾರು ಫೋಟೋಗಳನ್ನು ತೆಗೆದುಕೊಂಡು, ಉಹುರುದವರೆಗೂ ತಂದ ಥೇಪ್ಲಾ ತಿಂದು, ಹಾಡಿ, ಕುಣಿದೆವು. ನಂತರ ನಾನೊಬ್ಬನೇ ಇನ್ನೂ ಸ್ವಲ್ಪ ಮುಂದೆ ನಡೆದು ಹೋದೆ. ಚಳಿ ಸ್ವಲ್ಪ ಕಡಿಮೆಯಾಗಿತ್ತು ಅಥವಾ ಕಡಿಮೆ ಅನಿಸುತ್ತಿತ್ತು. ಹತ್ತು ನಿಮಿಷ ಏಕಾಂತದಲ್ಲಿ ಕುಳಿತುಕೊಂಡು ಸುತ್ತಲಿನ ದೃಶ್ಯ ವೈಭವನ್ನು ನೋಡುತ್ತ ಕುಳಿತುಕೊಂಡು ಬಿಟ್ಟೆ. ಇದು ನಿಜವಾ, ಕನಸಾ, ಭ್ರಮೆಯಾ, ವಾಸ್ತವವಾ, ಕತೆಯಾ ಎನಿಸುತ್ತಿತ್ತು. ಆಗುತ್ತಿರುವುದು ಸಂತೋಷವಾ, ಆನಂದವಾ, ಶಾಂತಿಯಾ, ಶೂನ್ಯವಾ, ಖಾಲಿತನವಾ, ರಾಹಿತ್ಯವಾ? ಏನೆಂದು ಕರೆಯಲಿ  ಆ ಭಾವಕ್ಕೆ? ಕಿಲಿಮಾಂಜಾರೋದ ತುಟ್ಟತುದಿಯಲ್ಲಿ `ಉಹುರು`ವಿನ ಅನುಭವವಾಯಿತು ಎನ್ನುವುದೇ ಸರಿಯೇನೋ! 

ಎಷ್ಟು ಹೊತ್ತು ಅಂತ ಅಲ್ಲೇ ಇರಲು ಸಾಧ್ಯ? ಒಲ್ಲದ ಮನಸ್ಸಿನಿಂದ ಒಬ್ಬೊಬ್ಬರಾಗಿ ಹೊರಟೆವು. ಕೆಳಗಿಳಿಯಲು ಮಾತ್ರ ಊರುಗೋಲು ಬೇಕೇ ಬೇಕು. ಹೊಸ ಹುಮ್ಮಸ್ಸಿನಲ್ಲಿ ಊರುಗೋಲುಗಳನ್ನು ಊರುತ್ತ ಕೆಳಗೆ ಇಳಿಯಲು ಶುರುಮಾಡಿದೆವು. ಹಿಂದಿನ ದಿನ ಬೆಳಗಿನ ಆರುವರೆಯಿಂದ ನಿದ್ದೆ ಮಾಡಿಲ್ಲದಿದ್ದರೂ ಒಂಚೂರೂ ನಿದ್ದೆ ಬರುತ್ತಿಲ್ಲ, ಆಗಿರುವ ಸುಸ್ತು ಕೂಡ ಮರೆತು ಹೋಗಿತ್ತು. ಮತ್ತೆ ಬರಾಫು ಕ್ಯಾಂಪು ಸೇರಿದಾಗ ಮಧ್ಯಾಹ್ನವಾಗಿತ್ತು. ಅಲ್ಲಿ ಊಟಮಾಡಿ ಸ್ವಲ್ಪ ಹೊತ್ತು ವಿರಾಮ. ದೇಹಕ್ಕೆ ಹೊಸ ಉತ್ಸಾಹ ಬಂದಿತ್ತು. ಅಲ್ಲಿಂದ ನಾವು ಮಲಗುವ `ಹೈ ಕ್ಯಾಂಪಿ`ಗೆ ಮತ್ತೆ ಎರಡೂವರೆ ಗಂಟೆ ಇಳಿತ. ಹೈ ಕ್ಯಾಂಪ್ ಸೇರಿದಾಗ ಸೂರ್ಯ ಮುಳುಗಲು ಕಾಯುತ್ತಿದ್ದ. ಹೈ ಕ್ಯಾಂಪ್ ೩೯೫೦ ಮೀಟರ್ ಎತ್ತರದಲ್ಲಿದೆ. 

ಒಟ್ಟಿನಲ್ಲಿ ಮಧ್ಯರಾತ್ರಿಯಿಂದ ೧೨೪೦ ಮೀಟರ್ ಹತ್ತಿ ಉಹುರು ಮುಟ್ಟಿ, ಮತ್ತೆ ೧೯೪೫ ಮೀಟರ್ ಕೆಳಗೆ ಇಳಿದು ಬಂದಿದ್ದೆವು! ಅಲ್ಲಿ ಊಟಮಾಡಿ ಟೆಂಟ್ ಒಳಗೆ ಸೇರಿದೆವು. ಕಳೆದ ೩೮ ಗಂಟೆಯಿಂದ ನಿದ್ದೆ ಮಾಡಿರಲಿಲ್ಲ. ತಲೆ ಇಟ್ಟ ತಕ್ಷಣ ನಿದ್ದೆ ಬಾರದಿರುತ್ತದೆಯೇ?  

ಏಳನೇ ದಿನ:  

ಮಾರನೇಯ ದಿನ ಎದ್ದು, ತಿಂಡಿ ತಿಂದು, ಮತ್ತೆ ರೇನ್-ಫಾರೆಸ್ಟ್-ನಲ್ಲಿ ೧೪ ಕಿಲೋಮೀಟರ್ ಇಳಿಯುತ್ತ ಮ್ವೇಕಾ ಬಾಗಿಲನ್ನು ತಲುಪಿ, ಕಿಲಿಮಾಂಜಾರೋಗೆ ವಿದಾಯ ಹೇಳಿದೆವು.  ಮ್ವೇಕಾ ದ್ವಾರದಿಂದ ಹೊರಬಂದು, ನಮಗಾಗಿ ಕಾಯುತ್ತಿದ್ದ ಬಸ್ಸಿನಲ್ಲಿ ಕೂತು ಮತ್ತೆ ನಮ್ಮ ಹೊಟೇಲು ಸೇರಿದೆವು. 

12 thoughts on “ನಾನೂ ಕಿಲಿಮಾಂಜಾರೋ ಹತ್ತಿದೆ  – ಕೇಶವ ಕುಲಕರ್ಣಿ

  1. Very well written, congratulations to you and your team for completing this expedition. Experiencing mountains is one of the best one. Nature makes us realize the reality that humans cannot control it, if you get to experience to the fullest extent, you are lucky! Well done again!
    What’s next?? ☺️

    Like

  2. ಕಿಲಿ ಹತ್ತಿ ಬಂದ ಅನುಭವ ತುಂಬ ಸುಂದರವಾಗಿ ಮೂಡಿ ಬಂದಿದೆ. ಇಷ್ಟು ದಿನಗಳ ಪ್ರಯಾಸವನ್ನು ನಮಗೆ ಸರಾಗವಾಗಿ ಭಟ್ಟಿ ಇಳಿಸಿಕೊಡುವುದು ಸುಲಭದ ಮಾತಲ್ಲ; ಆದರೆ ಈ ಲೇಖನ ಅದನ್ನು ಉಸಿರಾಡಿದಂತೆ ಸರಾಗವಾಗಿ ಮಾಡಿಕೊಟ್ಟಿದೆ. ಇದು ಕೇವಲ ಮಾಹಿತಿಗಳ ಭಂಡಾರವಲ್ಲ, ಇದರಲ್ಲಿ ಕಿಲಿಯ ಬಗ್ಗೆ ಚಿಕ್ಕಂದಿನಲ್ಲಿ ಅರಿತ ವಿಷಯವಿದೆ, ವಸುಧೇಂದ್ರರ ಲೇಖನದ ಪ್ರಸ್ತಾಪವಿದೆ. ಎಲ್ಲಕ್ಕಿಂತಲೂ ಮಿಗಿಲಾಗಿ ಆತ್ಮಾವಲೋಕನವಿದೆ. ಇಂತಹ ವಿಚಾರಗಳ ಅಳವಡಿಕೆ ಪ್ರವಾಸ ಕಥನವನ್ನು, ಚಾರಣ ಅನುಭವವನ್ನು ಇನ್ನೊಂದು ಮಜಲಿಗೆ ಏರಿಸುವುದರೊಂದಿಗೆ ಮನಸ್ಸಿಗೆ ಆತ್ಮೀಯನಾಗುತ್ತದೆ. ಈ ದಿಶೆಯಲ್ಲೂ ಕೇಶವ ಯಶಸ್ವಿಯಾಗಿದ್ದಾರೆ
    – ರಾಂ.

    Like

  3. Well narrated mountain hiking experience, I felt I climbed the hill in your team…. The dream and the reality is very well explained, and no words to explain your love and hold for the Kannada language…..being in UK from decades…… hats off to you , Congratulations to successful trip to Kilimanjaro…..💐🎉

    Like

  4. ಈ ಲೇಖನ ಉಹುರುವನ್ನು (ಬಿಡುಗಡೆ) ತೋರಿಸುವ ಜಾಗ.ನಿಮ್ಮ ಲೇಖನದಲ್ಲಿ “(ಉಹುರು ಎಂದು ಬರೆದಿರುವ ಫಲಕದ ಮುಂದೆ ನಿಂತಾಗ, ನನಗೆ ಕಿಲಿಮಾಂಜಾರೋ ಗೆದ್ದ ಭಾವನೆ ಬರಲಿಲ್ಲ.)”ಇಲ್ಲಿಂದ ಶುರುವಾಗುವ. ಆ ಇಡೀ ಪ್ಯಾರಾನೇ ಈ ಲೇಖನಕೆ ಕಳಶವಿಟ್ಟಂತಿದೆ. ಎಲ್ಲ ಮಹತ್ವದ ಅನುಭವಗಳಂತೆ “Kili” humbled you, ಎಂದು ಕೇಳಿದ್ದೇನೆ. ಅದನ್ನು ಗೆದ್ದೆನೆಂದು ಅಂದುಕೊಳ್ಳದಿದ್ದರೂ ಗೆದ್ದ ನಿಮಗೆ ಅಭಿನಂದನೆಗಳು. ಡೇ ಬೈ ಡೇ ದಿನಚರಿ, ಸ್ಪಷ್ಟವಾಗಿ ಇಡೀ ಅನುಭವವನ್ನು ಒಂದೇ ಲೇಖನದಲ್ಲಿ ಭಟ್ಟಿ ಇಳಿಸಿದ ಬರಹ ಕುಶಲತೆಗೆ ಮತ್ತೊಮ್ಮೆ ಅಭಿನಂದನೆಗಳು. ‘ಅನಿವಾಸಿ’ಯಲ್ಲೇ ಆನಂದ, ಅನ್ನಪೂರ್ಣ ಜೊತೆ ಹೋಗಿದ್ದ ಅಭಿಷೇಕ್ ವಸಿಷ್ಠ. ಅವರ ವರ್ಣನೆ ಓದಿದಾಗಿನಿಂದ ನಿಮ್ಮ ಅನುಭವ ಕಥನಕ್ಕೆ ಕಾಯುತ್ತಿದ್ದೆ. ನೀವು ಓದಿ ಮರೆತದ್ದು ಒಳ್ಳೆಯದೇ ಆಯಿತು. ನೀವು ಬಂದ ಮೇಲೆ ನನಗೆ ಸುದ್ದಿ ಹೇಳಿದಾಗ ಅದರ ಬಗ್ಗೆ ಪ್ರಸ್ತಾಪ ನಾನು ಮಾಡಿದಾಗಲೂ ನೆನಪಾಗಲಿಲ್ಲವೇ? ಇದೂ ಒಂದು ತರದ mountain sickness! ನೀವು ಚಾರಣಪೂರ್ವ ಸಿದ್ಧತೆಗಳ ಬಗ್ಗೆ ಹೇಳಿದ್ದನ್ನೂ ಬರೆದರೆ ಓದುಗರಿಗೆ ಲಾಭವಾಗುತ್ತದೆ. ಈಗಾಗಲೇ ಉಳಿದವರು ಲೇಖನದ ಬಗ್ಗೆ ಬರೆದಿದ್ದಾರಂದು ಹೆಚ್ಚು ಹೇಳಲಾರೆ. ನಾನಂತೂ ಹತ್ತಲಾರೆ ಅಂತ ನಾನೂ ಓದಿ ನಿಮ್ಮೊಡನೆ ಹತ್ತಿದ ಅನುಭವದ ಆದಂತಾಗಿದೆಯಷ್ಟೆ. ‘ಹಕೂನ ಮಟಾಟಾ’ ಅಂದುಕೊಳ್ಳುತ್ತೇನೆ!

    Like

    • Congratulations Keshav great achievement and brilliant narration of your experience I am sure many people will be inspired by your writing Well done and good luck with the Everest Base Camp expedition .

      Like

Leave a Reply to Shantha Rao Cancel reply

Your email address will not be published. Required fields are marked *