ಹೊರನಾಡಿನ ಕನ್ನಡಿಗರು:  ಅಜ್ಜಿ – ಮೊಮ್ಮಗಳ ಸಂವಾದ; ವತ್ಸಲಾ ರಾಮಮೂರ್ತಿ ಬರೆದ ಲೇಖನ

ಸಮಸುಖಿ (ಸಮದುಃಖಿ) ಕನ್ನಡಿಗರಿಗೆ ಸಬ್ಸ್ಟಿಟ್ಯೂಟ್ ಸಂಪಾದಕನ ನಮಸ್ಕಾರಗಳು.  ಕೆಳಗೆ ಬರೆದಿರುವ ಸಂವಾದ ಬರಿಯ ಲೇಖಕಿಯದಲ್ಲ, ಅದು ನಮ್ಮಲ್ಲಿ ಅನೇಕರ ಜೀವನದಲ್ಲಿ ಒಮ್ಮೆ ಬರಬಹುದಾದ ಘಳಿಗೆ.  ಇದು ಬರಿಯ ಕನ್ನಡಿಗರಿಗೆ ಮಾತ್ರವಲ್ಲ, ಯಾವ ವಲಸಿಗರಿಗೂ ಬರಬಹುದಾದ ಪ್ರಶ್ನೆ. ಓದಿ, ನಿಮ್ಮ ಸ್ವಂತದ ಅಥವಾ ಕೇಳಿದ / ನೋಡಿದ ಅನುಭವವೇನಾದರೂ ಇದ್ದರೆ, ಹಂಚಿಕೊಳ್ಳಿ - ಸಂ. 
*****************************************
ನನ್ನ  ಮೊಮ್ಮಗಳು ನನ್ನನ್ನು ಒಂದು question ಕೇಳಿದಳು “ಅಜ್ಜಿ ನಾನು ಯಾರು? ನೀನು ಎಲ್ಲಿಂದ ಬಂದೆ?  ಯಾಕೆ ಬಂದಿ?”
ಅವಳಿಗೆ ಕೂಡಲೆ ಉತ್ತರ ಕೊಡಲು ಹೊಳೆಯಲ್ಲಿಲ್ಲ.  ತುಸು ತಡೆದು “ಮೊಮ್ಮಗಳೇ, ನಮ್ಮ ಚರಿತ್ರೆಯನ್ನು ಕೇಳುವಂತವಳಾಗು.”
“ಹಾಗಾದರೆ ಅಜ್ಜಮ್ಮ, ನಿಮ್ಮ ಊರು, ಸಂಸ್ಕೃತಿಯನ್ನು ವಿವರವಾಗಿ ತಿಳಿಸು” ಎಂಬುದಾಗಿ ಕೇಳಲು, ಕೆಳ ಕಂಡ ಕತೆ ಹೇಳಿದೆ.
“ನಾವು ಹೊರನಾಡಿನ ಕನ್ನಡಿಗರು.  ನಾವು ವಲಸೆ ಬಂದವರು.”

“ಹಾಗಾದರೆ ಬೆಂಗಳೂರಿನಿಂದ ಮುಂಬಯಿ, ಚೆನ್ನೈ ಮುಂತಾದ ಪ್ರದೇಶಕ್ಕೆ ಹೋಗುತ್ತಾರಲ್ಲ? ಅವರೆಲ್ಲಾ ವಲಸೆ ಹೋದವರೇ?”
“ಹೌದು ಬಂಗಾರಿ, ಅವರೊಬ್ಬರೇ ಅಲ್ಲ.  ಅಮೆರಿಕ, ಇಂಗ್ಲಂಡ್‌, ಇನ್ನೂ ಬೇರೆ  ಬೇರೆ ದೇಶಕ್ಕೆ ನಮ್ಮ ಕನ್ನಡನಾಡಿನಿಂದ ಹೋದವರೆಲ್ಲಾ ವಲಸೆ ಹೋದವರೇ.” 
“ಪರದೇಶಕ್ಕೆ ಕೆಲಸ ಹುಡಿಕಿಕೊಂಡು ಬಂದವರೇ ಹೆಚ್ಚು. ಕೆಲಸ ಸಿಕ್ಕಿದ ಮೇಲೆ ಮನೆ, ಸಂಸಾರ ಎಲ್ಲಾ ಮಾಡಿಯಾಯಿತು.”

“ಹಾಗಾದರೆ ನೀವೆಲ್ಲಾ ಸಂತೋಷವಾಗಿ ಇದ್ದೀರಾ?  ನಿಮಗೆ ನಿಮ್ಮ ಭಾಷೆ, ಪರಂಪರೆ, ಚರಿತ್ರೆ, ಹಬ್ಬ-ಹುಣ್ಣಿಮೆಗಳು ಮಿಸ್ಸಾಗುತ್ತಾ?” ಎಂದು ಕೇಳಿದಳು.
“ಹೌದು ಕಣೆ ಖಂಡಿತವಾಗಲೂ ಮಿಸ್ಸಾಗುತ್ತದೆ.  ವಲಸೆ ಬಂದವರು ತುಂಬಾ ಜನ ಒಳ್ಳೆಯ ಕೆಲಸ, ಹಣ ಸಂಪಾದನೆ ಮಾಡಿ ಗೌರವಾಗಿ ಬಾಳುತ್ತಿದ್ದಾರೆ.  ಆದರೆ ನಮಗೆ ನಮ್ಮದು, ನಮ್ಮ ಬಾಲ್ಯದ ಅನುಭವಗಳನ್ನು ಮರೆಯಲು ಸಾಧ್ಯವೇ?  ನಮ್ಮ ಪರಂಪರೆ, ನಮ್ಮ ಭಾವನೆಗಳನ್ನು ಅಳಿಸಲು ಸಾಧ್ಯವೇ?  ಅದೇ ಅಲ್ಲವೇ ನಮ್ಮ ವ್ಯಕ್ತಿತ್ವಕ್ಕೆ ಅಡಿಪಾಯ.  ಅಡಿಪಾಯವನ್ನು ಮುರಿಯಲು ಸಾಧ್ಯವೇ?  ಮುರಿದರೆ ನಮ್ಮ ಬದುಕು ಬರಡಲ್ಲವೇ, ನಮ್ಮ ವ್ಯಕ್ತಿತ್ವ ಒಂದು ದೊಡ್ಡ ಅಂಶವನ್ನ ಕಳೆದ ಹಾಗಲ್ಲವೇ?”

ಮತ್ತೊಂದು ಸವಾಲು – “ನಿಮಗೆ ಕನ್ನಡ ಬಳಗ ಯಾಕೆ ಬೇಕು?”
“ನಮ್ಮ ವ್ಯಕ್ತಿತ್ವದ ಅಡಿಪಾಯಕ್ಕೆ ಆಸರೆ ಬೇಡವೇ?  ನಾವು ಒಂದು ಸಂಘದಲ್ಲಿಯಿದ್ದೇವೆ.  ನಾವು ಭಾಷೆ, ಚರಿತ್ರೆ, ವಾತ್ಯಲ್ಯ ಮುಂತಾದ ಮಾನವೀಯ ಗುಣಗಳನ್ನು ಹಂಚಿಕೊಳ್ಳುತ್ತೇವೆ.  ಈ ಹೊರನಾಡಿನ ಸಂಘಗಳು ನಮ್ಮ ವ್ಯಕ್ತಿತ್ವಕ್ಕೆ ಒಂದು meaning ಕೊಡುತ್ತದೆ.  ನಾವು ವಲಸೆ ಬಂದ ದೇಶಕ್ಕೆ ಹೊಂದಿಕೊಂಡರೂ, ಈ ಹೊರನಾಡು ನಮ್ಮದು ಎನಿಸಲು ಕಷ್ಷ ಅನಿಸುತ್ತದೆ.  ನಮಗೆ chipsಗಿಂತ ಕೋಡುಬಳೆ ರುಚಿಯಲ್ಲವೇ?”

ಮತ್ತೊಂದು ಕ್ವೆಶ್ಚನ್ನು – “ಸರಿ ಇಲ್ಲಿಗೆ ಬಂದಿರಿ. ನಿಮ್ಮ ಜೀವನ ಕಟ್ಟಿದಿರಿ. ಮಕ್ಕಳು, ಮರಿಗಳಾದವು.  ನಮ್ಮ ವಂಶ ಬೆಳೆಯುತ್ತಿದೆ.
ಈಗ ನಾವು ೩ನೆ ಜನರೇಶನ್ನು.  ಮೊದಲನೆಯದು ನೀವು; ಹೊರನಾಡಿಗೆ ಬಂದು ನಿಮ್ಮ ಭಾಷೆ, ಸಂಸ್ಕೃತಿ ಬೆಳಿಸಿ, ಉಳಿಸಿಕೊಂಡಿರಿ.

“ಎರಡನೆ ಜನಾಂಗ ನಿಮ್ಮ ಮಕ್ಕಳು. ನನ್ನ ತಂದೆ-ತಾಯಿಯರು. ಇಲ್ಲೇ ಹುಟ್ಟಿ ಬೆಳದವರು.  ಅವರು ನಿಮ್ಮ ಅಡುಗೆ ತಿಂಡಿ ಎಲ್ಲ ಮಜವಾಗಿ ತಿನ್ನುತ್ತಾರೆ. ಮನೆಯಲ್ಲಿ ನಿಮ್ಮ ಮಾತು ಕೇಳಬಹುದು. ಮನೆಯ ಹೊರಗೆ ಅವರು ಈ ದೇಶದ ಜನರನ್ನೇ ಅನುಸರಿಸುತ್ತಾರೆ.  ಕನ್ನಡ ಮಾತನಾಡಲು ಬರುವುದಿಲ್ಲ.  ಚಿಕ್ಕವರಾಗಿದ್ದಾಗ ಕನ್ನಡ ಕಲಿಯಲು ನೀವು ಸಹಾಯಮಾಡಲಿಲ್ಲ. ಅವರು ಕುವೆಂಪು, ದ ರಾ ಬೇಂದ್ರೆಯಂಥವರ ಹೆಸರು ಕೇಳಿಲ್ಲ.  ಅವರಿಗೆ ನಿಮಗೆ ಇರುವಷ್ಟು ಮಮತೆ ನಿಮ್ಮ ಪರಂಪರೆ ಮೇಲೆ ಖಂಡಿತಯಿಲ್ಲ.  ಅವರು ಕನ್ನಡ ಬಳಗಕ್ಕೆ ಬರುವುದಿಲ್ಲ.  ಬಂದರೂ, ‘we don’t understand anything’ ಅಂತಾರೆ.

ಮೂರನೆಯ ಜನಾಂಗ ನಿಮ್ಮ ಮೊಮ್ಮಕ್ಕಳು. ಅವರ ಬಗ್ಗೆ ಮತ್ತೊಂದು ಸವಾಲು.
“ಅಜ್ಜಿ ನಮಗೆ ನಿಮ್ಮ ಭಾಷೆ ಗೊತ್ತಾಗುವುದಿಲ್ಲ.  ಬೆಂಗಳೂರಿಗೆ ಒಂದೇ ಸಲ ಮಮ್ಮಿ ಡ್ಯಾಡಿ ಜತೆ ಹೋಗಿದ್ದೆ.  ಎಲ್ಲರೂ Englishನಲ್ಲೇ ಮಾತಾಡಿದರು.  ಮಮ್ಮಿ ಡ್ಯಾಡಿ ಕನ್ನಡ ಮಾತನಾಡುವುದಿಲ್ಲ.  ಅವರಿಗೆ ಬರಲ್ಲ ಅಂತಾರೆ.  ಹಬ್ಬ, ಹರಿದಿನ ಮಾಡುವುದಿಲ್ಲ.  ನಾವು ಏನು ಮಾಡಬೇಕು?  ಬ್ರಿಟಿಶ್ ಜನರಂತೆ ಇರಬೇಕೆ?”

“ಇದಲ್ಲದೆ ಮತ್ತೊಂದು ಗುಂಪಿದೆ ಈಗ. ಇವರು ಇತ್ತೀಚಿಗೆ ಹೊರನಾಡಿಗೆ ವಲಸೆ ಬಂದವರು.  ಹೊಸ ಟೆಕ್ನಾಲಜಿ ತಿಳಿದವರು. ಅವರೊಡನೆ ನಮ್ಮ ಮೊದಲನೆ ಜನಾಂಗ (ಹಿರಿಯರು, ೩೦-೪೦ವರುಷಗಳಿಂದ ಹೊರನಾಡಿನಲ್ಲಿ ಇರುವವರು) ಬಾಂಧವ್ಯ ಬೆಳಸಲು ಸಾದ್ಯವೇ?”

“ನನ್ನ ಕತೆ ಮುಗಿಯಿತು. ನಿನ್ನ ಸವಾಲಿಗೆ ನನ್ನ ಹತ್ತಿರ ಉತ್ತರವಿಲ್ಲ!”

- ವತ್ಸಲಾ ರಾಮಮೂರ್ತಿ

*****************************************************

4 thoughts on “ಹೊರನಾಡಿನ ಕನ್ನಡಿಗರು:  ಅಜ್ಜಿ – ಮೊಮ್ಮಗಳ ಸಂವಾದ; ವತ್ಸಲಾ ರಾಮಮೂರ್ತಿ ಬರೆದ ಲೇಖನ

  1. Basingstoke Ramamurthy writes:
    ಈ ಸಂಭಾಷಣೆ ನಮ್ಮೇಲ್ಲರ ಮನೆಯಲ್ಲಿ ನಡೆದ ಅಥವಾ ನಡೆದಿದ್ದು . ೪೫-೫೦ ವರ್ಷದ ಹಿಂದೆ ನಮ್ಮ ಪ್ರಾಯಾರಿಟೀಸ್ ಬೇರೆ ಇತ್ತು
    ಅದೂ ಅಲ್ಲದೆ ಆಗ ನಮಗೆ ಪರಿಚಯದ ಕನ್ನಡದರು ಮೂರೋ ನಾಲಕ್ಕು ಕುಟುಂಬಗಳು ಅಷ್ಟೇ . ಕನ್ನಡ ಬಳಗ ಹುಟ್ಟಿದಮೇಲೆ ಅನೇಕರು ಗೊತ್ತಾದರು ಮತ್ತು ಬಹುಮಂದಿ ಮಕ್ಕಳು ಬಳಗದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು , ಇವರಿಗೆ ಆಗ ಪರಿಚಯವಾದವರು ಇಂದಿಗೂ ಕಾಂಟಾಕ್ಟ್ ನಲ್ಲಿ ಇದ್ದಾರೆ. ನಮ್ಮ ಭಾಷೆ ಮತ್ತು ಸಂಸ್ಕೃತಿ ಇವರಿಗೆ ಗೊತ್ತಿಲ್ಲ ಅಂದರೆ ಅದಕ್ಕೆ ಕಾರಣ ನಾವೇ !
    ನಾವು ನಮ್ಮ ಮಕ್ಕಳನ್ನು ಕನ್ನಡದಲ್ಲಿ ಮುಂಚಿನಿಂದ ಮಾತನಾಡಿಸಿದ್ದರೆ ಅವರೆಗೆ ನಮ್ಮಭಾಷೆ ಬರುತಿತ್ತು , ಗುಜರಾತಿ ಅಥವಾ ಪಂಜಾಬಿ ಮಕ್ಕಳಿಗೆ ಈ ಸಮಸ್ಯೆ ಇಲ್ಲ , ತಮಿಳು ಜನರಿಗೂ ಅಷ್ಟೇ . ಸಧ್ಯ ನಮ್ಮ ಮನೆಯಲ್ಲಿ ಈ ಗೊಂದಲ ಇಲ್ಲ ,
    ಇವತ್ತಿನ ಪರಿಸ್ಥಿತಿ ಬೇರೆ , ಪ್ರತಿ ಊರಿನಲ್ಲಿ ಒಂದು ಕನ್ನಡ ಸಂಸ್ಥೆ ಇದೆ . ಈ ಜನಾಂಗದವರಿಗೆ ಕನ್ನಡದ ಬಗ್ಗೆ ಬಹಳ ಅಭಿಮಾನ ಇದೆ , ತಮ್ಮ ಮಕ್ಕಳಿಗೆ “ಕನ್ನಡ ಕಲಿ ” ಮೂಲಕ ಭಾಷೆ ಪರಿಚಯ ಮಾಡಿಸುತ್ತಿದ್ದಾರೆ .
    ಭಾಷೆ ಮತ್ತು ಸಂಸ್ಕೃತಿ ಈ ದೇಶದಲ್ಲಿ ಉಳಿಯುವುದರಲ್ಲಿ ಸಂದೇಹ ಇಲ್ಲ
    Ramamurthy

    Like

  2. ನಮ್ಮ ಮುಂದಿನ ಅನಿವಾಸಿ ಪೀಳಿಗೆಯವರು ನಮ್ಮ ಮೂಲ ಭಾಷೆ, ಸಂಸ್ಕೃತಿಗಳನ್ನು ಉಳಿಸಿಕೊಳ್ಳಬೇಕು ಎಂಬ ನಮ್ಮ ನಿರೀಕ್ಷೆ ಸಹಜವೇ ಆದರೂ ಅವರು ತಮ್ಮ ಪರಿಸರ ಭಾಷೆ ಮತ್ತು ಸಂಸ್ಕೃತಿಯಲ್ಲಿ ಬದುಕುವುದು ಅವರಿಗೆ ಸಹಜ. ಒಂದು ಭಾಷೆಯ, ಧರ್ಮ ಮತ್ತು ಸಂಸ್ಕೃತಿಯ ಪ್ರಸ್ತುತತೆ ಅವರ ಪರಿವಾರದ ಪ್ರಜ್ಞೆ, ಮೌಲ್ಯ,
    ಮತ್ತು ಆದ್ಯತೆಗಳನ್ನು ಆಧರಿಸಿರುತ್ತವೆ. ಇಸ್ಲಾಂ ಧರ್ಮದವರು ಹಿಜಾಬ್ ಹಾಕಿ ಕೊಳ್ಳಿ ಎಂದು ಒತ್ತಾಯಿಸಿ ಅವರ ಮಕ್ಕಳು ಪರಿಪಾಲಿಸುತ್ತರೆ. ಏಕೆಂದರೆ ಅದನ್ನು ಜಾರಿಗೆ ತರಲು ಸಮುದಾಯ ಒಟ್ಟಿಗೆ ನಿಲ್ಲುತ್ತದೆ. ಇದೇ ಉದಾಹರಣೆಯನ್ನು ತೆಗೆದುಕೊಂಡು ನಾವು ನಮ್ಮ ಸಂಪ್ರದಾಯವನ್ನು, ಸಂಸ್ಕೃತಿಯನ್ನು ಮಕ್ಕಳ ಮೇಲೆ ಹೇರ ಬಹುದು. ಎಷ್ಟರ ಮಟ್ಟಿಗೆ enforce ಮಾಡುತ್ತೇವೆ ಎನ್ನುವುದು ಸಮುದಾಯಕ್ಕೆ ಬಿಟ್ಟಿದ್ದು. ಹೇರುವುದು ಬಿಡುವುದು ಸರಿಯೇ ಎಂಬುದು ಇನ್ನೊಂದು ವಿಚಾರ!

    “ಒಂದು ಕುದುರೆಯನ್ನು ನೀರಿಗೆ ಕರೆದುಕೊಂಡು ಹೋಗಬಹುದು. ನೀರನ್ನು ಕುಡಿಯುವುದು ಬಿಡುವುದು ಅದಕ್ಕೆ ಬಿಟ್ಟಿದ್ದು”.

    Like

  3. ಭಾರತದಿಂದ ವಲಸೆ ಬಂದ ಕನ್ನಡಿಗರು, ಅವರ ಎರಡನೇ ಜನಾಂಗ ಮತ್ತು ಇದೀಗ ಮೂರನೇ ಜನಾಂಗ ಕೂಡ ಪ್ರೌಢಾವಸ್ಥೆಗೆ ಬರುತ್ತಿದ್ದಾರೆ. ಅನಿವಾಸಿ ಕನ್ನಡಿಗರ ಇತಿಹಾಸ ಪಂಜಾಬ್ (ಪೂರ್ವ ಮತ್ತು ಪಶ್ಚಿಮ) ಮತ್ತು ಗುಜಾರಾತಿಗಳಷ್ಟು ಹಳೆಯದಲ್ಲವಾದರೂ, ಮೂರನೇ ತಲೆಮಾರಿನವರೆಗೂ ಬಂದು‌ ನಿಂತಿದೆ.

    ಕರ್ನಾಟಕದಲ್ಲೇ ಕನ್ನಡಕ್ಕೆ ದೊರಕಬೇಕಾದ ಮರ್ಯಾದೆ , ರಾಜಕೀಯ ಪ್ರಾಶಸ್ತ್ಯ, ಶೈಕ್ಷಣಿಕ ಮನ್ನಣೆ ಸಿಕ್ಕಿಲ್ಲ. ಕನ್ನಡ ಶಾಲೆಗಳಲ್ಲಿ ಓದುವವರ ಸಂಖ್ಯೆ ದಿನದಿಂದ‌ ದಿನಕ್ಲೆ ಕಡೆಯಾಗುತ್ತಿದೆ.

    ಹೀಗಿರುವಾಗ, ಇಂಗ್ಲಂಡಿನಲ್ಲಿ ನೆಲೆಸಿರುವ ಎರಡನೇ ಮತ್ತು ಮೂರನೇ ತಲೆಮಾರಿನವರಿಗೆ ಕನ್ನಡ ಭಾಷೆ ಮತ್ತು ಕನ್ನಡತನವನ್ನು ಎಷ್ಟರ ಮಟ್ಟಿಗೆ ಮೊದಲನೇ ತಲೆಮಾರಿನವರು ಕಲಿಸಿರಲು ಸಾದ್ಯ ಮತ್ತು ಈ ಹೊಸ ತಲೆಮಾರಿನವರಿಗೆ ಅದರಿಂದ ಏನುಪಯೋಗ ಎನ್ನುವ ಪ್ರಶ್ನೆ ಮೂಡುವುದು ಸಹಜವೆ ಅಲ್ಲವೇ?

    – ಕೇಶವ

    Like

  4. ವತ್ಸಲಾ ಅವರದು ಮೇಲ್ನೋಟಕ್ಕ ಸರಳವಾದ ಅಜ್ಜಿ- ಮೊಮ್ಮಗುವಿನ ಸಂವಾದ ಅನಿಸಿದರೂ ವೈಚಾರಿಕ ಲೇಖನ! ಹೆಚ್ಚು ಕಡಿಮೆ ಅವರ ಸಮಯದಲ್ಲೇ ಬಂದ ನಾವೆಲ್ಲರನ್ನೂ ಆತ್ಮಾವಲೋಕನಕ್ಕೆ ಹಚ್ಚುತ್ತದೆ. ಪರಿಹಾರ ಮಾತ್ರ ಕೊನೆಯ ಸಾಲಿನಂತೆ ಅಷ್ಟು ಸುಲಭದ ಮಾತಲ್ಲ! ಎಲ್ಲರೂ ತಮ್ಮದೇ ರೀತಿಯಲ್ಲಿ ಮೋಕ್ಷ ಪಡೆದಂತೆ!

    Like

Leave a Reply to prasad092014 Cancel reply

Your email address will not be published. Required fields are marked *