ನಮಸ್ಕಾರ ಅನಿವಾಸಿ ಬಂಧುಗಳೇ. ಬೆಳಗಾದರೆ ಭೋಗಿ-ಸಂಕ್ರಾಂತಿಗಳು. ಸುಗ್ಗಿಯ ಹಬ್ಬ ತಮ್ಮೆಲ್ಲರಿಗೂ ಹಿಗ್ಗನ್ನು ತರಲಿ. ಹುಗ್ಗಿಯ ಘಮದಂತೆ ಬದುಕು ಹಿತವಾಗಲಿ ಎಳ್ಳು-ಬೆಲ್ಲದ ಸಿಹಿ ಬಾಳ ತುಂಬಿರಲಿ. ಸಿಹಿಗಬ್ಬು, ಬಾಳೆ- ಬಾರೆ, ಸೀತನಿ-ಸುಲಗಾಯಿ..ಆಹಾ! 'ಈ ಜನುಮವೇ ಆಹಾ ದೊರಕಿದೆ ರುಚಿ ಸವಿಯಲು.. ಈ ಜಗವಿದೆ ನವರಸಗಳ ಉಣಬಡಿಸಲು' ಅಲ್ಲವೇ? ಬನ್ನಿ.. ಇವತ್ತು ಮರವಂತೆಯವರ ಮನೆಯಲ್ಲಿ ಶ್ಯಾವಿಗೆಯಂತೆ. ಎಂಥಾ ಸೊಗಸಾದ ಊಟ ಉಣಬಡಿಸಿದ್ದಾರೆ ಸವಿಯಬನ್ನಿ. ಉಂಡಾದ ಮೇಲೆ ಹಾಯಾಗಿ ಅಡ್ಡಾಗಿ ಅಮರಪ್ರೇಮ ಕಥಾಯಾನ ಮಾಡಿ ಸಂಕ್ರಾಂತಿ ಸಂಭ್ರಮ ಹೆಚ್ಚಿಸಿಕೊಳ್ಳಿ. ~ ಗೌರಿ ಪ್ರಸನ್ನ, ಸಂಪಾದಕರು
ಶ್ಯಾವಿಗೆ ಹಬ್ಬ – ಯೋಗೀಂದ್ರ ಮರವಂತೆ

ಇವತ್ತು ಶ್ಯಾವಿಗೆ. ಇಂತಹ ಇವತ್ತು ವಾರಾಂತ್ಯದ ದಿನಗಳಾದ ಶನಿವಾರ ಆದಿತ್ಯವಾರ ಅಲ್ಲದಿದ್ದರೆ ಯಾವುದೊ ಹಬ್ಬದ ರಜೆಯ ದಿವಸ ಬರುತ್ತದೆ. ಇಲ್ಲದಿದ್ದರೆ ಶ್ಯಾವಿಗೆಯಂತಹ ಪ್ರಯಾಸಕರ ಸಾಹಸವನ್ನು ದೈನಿಕದ ಕೆಲಸ ಇರುವ ವಾರದ ನಡುವೆ ಯಾರಾದರೂ ಮೈಮೇಲೆ ಎಳೆದುಕೊಳ್ಳುವ ಸಾಧ್ಯತೆ ಕಡಿಮೆ. ಶ್ಯಾವಿಗೆಯನ್ನು ತಲೆಮಾರುಗಳಿಂದ ತಯಾರಿಸಿ ಪ್ರೀತಿಸಿ ಆಸ್ವಾದಿಸಿ ಬಡಿಸಿ ಉಣಿಸಿ ತಣಿಸಿದ ಪರಂಪರೆಯಲ್ಲಿ ಹುಟ್ಟಿದ್ದು ನನ್ನ ಭಾಗ್ಯ ಇರಬೇಕು. ಸಂಗೀತ ನೃತ್ಯ ಪ್ರಕಾರಗಳಲ್ಲಿ ಇಂತಹ ಶೈಲಿ ಘರಾನಾ ತಿಟ್ಟು ಮಟ್ಟು ಎಂದೆಲ್ಲ ಇದೆಯಲ್ಲ. ಪರಂಪರೆಯೊಂದು ಗುರುವಿನಿಂದ ಶುರುವಾಗಿ ಶಿಷ್ಯರ ತಲಾಂತರಗಳಿಗೆ ವಿಶಿಷ್ಟ ಗುರುತಾಗಿ ಹರಿದು ಹೋಗುವಂತಹದು. ಹೀಗೆ ಹೆಸರಾಂತ ಪರಂಪರೆಯಿಂದ ಬಂದವರನ್ನು ನೋಡಿದ ಕೇಳಿದ ತಕ್ಷಣ ಇನ್ಯಾರೋ ,"ಓ ಇವರು ಇಂತಹಲ್ಲಿಗೆ ಸೇರಿದವರು "ಎಂದು ಸುಲಭವಾಗಿ ಗುರುತಿಸುವುದಿದೆ. ಅಂತಹ ಯಾವುದೇ ಗಾಯಕ ವೈಣಿಕ ನರ್ತಕ ಕಲಾವಿದರ ಸಾಲಿಗೆ ಪರಂಪರೆಗೆ ಸೇರದ ನಾನು , ಆದರೆ, ಒಂದು ವೇಳೆ ಮನುಷ್ಯರೇ ಆರೋಪಿಸಿಕೊಂಡ ಸಾಮೂಹಿಕ ಗುರುತಿಗೆ ಸೇರಲೇಬೇಕಾದ ಸಂದರ್ಭದಲ್ಲಿ " ಶ್ಯಾವಿಗೆ ಘರಾನಾ"ಕ್ಕೆ ಮಾತ್ರ ಸೇರಬೇಕಾದವನು ಎಂದು ಅನಿಸಿದ್ದಿದೆ. ಶ್ಯಾವಿಗೆಯನ್ನು ತಿಂಡಿ ಎಂತಲೋ ಕಜ್ಜಾಯ ಊಟ ಉಪಹಾರ ಎಂತಲೋ ವರ್ಗೀಕರಿಸಿದವರಿದ್ದಾರೆ. ಮತ್ತೆ ಕೆಲವರು ಅದರ ತಯಾರಿಯ ಹಿಂದಿನ ಸಿದ್ಧತೆ ಬದ್ಧತೆ ಶ್ರಮ ಸಾಹಸಗಳನ್ನು ಕಂಡು ಅಡಿಗೆಯ ಪ್ರಕಾರದಿಂದಲೇ ಹೊರಗಿಟ್ಟು ದೂರ ಉಳಿದಿದ್ದಾರೆ. ನನ್ನ ಮಟ್ಟಿಗೆ ಶ್ಯಾವಿಗೆ ಇಂತಹ ಮಾನವ ಮಿತಿಯ ವಿವರ ವರ್ಣನೆಗಳನ್ನು ಮೀರಿದ ಒಂದು ಮಹಾ ಕುಸುರಿ ಕೆತ್ತನೆ ಕಾವ್ಯ. ಈ ಕಾಲದಲ್ಲಿ ಉಪ್ಪಿಟ್ಟನ್ನು ಪಾಯಸ ಫಲೂದಂತಹ ಸಿಹಿಖಾದ್ಯಗಳನ್ನೂ ಶ್ಯಾವಿಗೆ ಬಳಸಿ ತಯಾರಿಸುವುದು ಜನಪ್ರಿಯವಾಗಿರುವವಾದರೂ "ಒತ್ತು ಶ್ಯಾವಿಗೆ"ಯನ್ನೇ ಶ್ಯಾವಿಗೆ ಎಂದು ಸಂಬೋಧಿಸುವುದು ಕೆಲವು ಊರು ಮನೆಗಳಲ್ಲಿ ಇಂದಿಗೂ ಕ್ರಮ. ಹಲವು ಮಾದರಿ ಬಗೆಗಗಳ ಶ್ಯಾವಿಗೆಳು ಅಸ್ತಿತ್ವದಲ್ಲಿ ಇದ್ದರೂ ಅದರ ಉಗಮ ಮೂಲ ನಾಲ್ಕು ಸಾವಿರ ವರ್ಷಗಳ ಹಿಂದೆ ಚೈನಾದಲ್ಲಿ ಆಯಿತು ಎಂದು ಕೆಲವು ಆಹಾರ ಇತಿಹಾಸಕಾರರು ಬರೆದಿಟ್ಟಿದ್ದಾರೆ. ಇನ್ನು ಕೆಲವರು ಅನಾದಿ ಕಾಲದಲ್ಲಿ ನೂಡಲ್ಸ್ ನಂತಹ ತಿನಿಸು ಇಟೆಲಿಯಲ್ಲಿ ಇತ್ತು ಎಂದೂ ಹೇಳಿದ್ದಾರೆ. ಮತ್ತೊಬ್ಬರು ಕ್ರಿಸ್ತ ಪೂರ್ವ ೨೦೦೦ದ ಹೊತ್ತಿಗೆ ಭಾರತದಲ್ಲಿಯೂ ಶ್ಯಾವಿಗೆ ಮಾದರಿಯ ಊಟ ತಿಂಡಿ ಇದ್ದುದರ ಕುರುಹು ಇದೆ ಎನ್ನುತ್ತಾರೆ. ಹಲವು ನೂರು, ಕೆಲವು ಸಾವಿರ ವರ್ಷಗಳ ಹಿಂದೆ ಶ್ಯಾವಿಗೆಯ ಹುಟ್ಟು ಎಲ್ಲೇ ಆಗಿದ್ದರೂ ,ಅಂದಿನಿಂದ ಇಂದಿನ ತನಕದ ಸುದೀರ್ಘ ಯಾನದಲ್ಲಿ ಜಗತ್ತಿನ ಬೇರೆ ಬೇರೆ ಮೂಲೆಗಳಿಗೆ ಹರಡಿ ಹಲವು ಮಾರ್ಪಾಟುಗಳನ್ನು ಕಂಡು ಇಂದು ಇಲ್ಲಿ ಹೀಗೆ ಹಸನಾಗಿ ಬದುಕಿ ಬಾಳಿಕೊಂಡಿದೆ. ಶ್ಯಾವಿಗೆ ಮಾಡುವವರು ತಯಾರಿಯನ್ನು ಹಿಂದಿನ ದಿನ ಅರೆಯುವ ಕೆಲಸದಿಂದ ಆರಂಭಿಸಿರುತ್ತಾರೆ. ಇನ್ನು ನನ್ನಂತೆ ತಿನ್ನುವುದರಲ್ಲಿ ತೀವ್ರ ಆಸಕ್ತಿ ಇರುವವರು ಅದಕ್ಕಿಂತಲೂ ಮೊದಲೇ ಒಂದು ಮಾನಸಿಕ ಸಿದ್ಧತೆ ಪ್ರತೀಕ್ಷೆಯಲ್ಲಿ ಇರುತ್ತಾರೆ. ಬಿಡಿ,ಅರೆಯುವುದು ಶ್ಯಾವಿಗೆ ಯಾನದ ಮೊದಲ ಹಂತವಾದರೂ ಅದಕ್ಕೂ ಪೂರ್ವದಲ್ಲಿ ಶ್ಯಾವಿಗೆ ಸ್ನೇಹಿ ಅಕ್ಕಿ ಕೈವಶವಾಗಿರಬೇಕು. ಶ್ಯಾವಿಗೆಗೆ ಸಮರ್ಪಕ ಅಕ್ಕಿ ಯಾವುದು ಎಂದು ಅರಸುವುದು ಮತ್ತೆ ಕಂಡುಹಿಡಿಯುವುದು ಪರಂಪರೆ ಪ್ರಯೋಗಗಳು ಕಲಿಸಿಕೊಡುವ ಗುಟ್ಟುಗಳಲ್ಲಿ ಒಂದು. ಬಿಳಿಯಾಗಿ ಹೊಳೆಯುವ ಯಾವುದೋ ಅಕ್ಕಿ, ದುಬಾರಿಯಾದ ಕಾರಣಕ್ಕೆ ಒಳ್ಳೆಯದು ಎನ್ನುವ ಹೆಸರು ಪಡೆದ ಅಕ್ಕಿ ಇಂತಹವನ್ನು ತಂದು ಅರೆದು ಶ್ಯಾವಿಗೆ ಮಾಡಲು ಕೈಹಾಕಿದರೆ ಉದ್ದುದ್ದ ಎಳೆಯಾಗಿ ನಿಂತು ನಲಿದು ಬಾಳಬೇಕಾದ ಶ್ಯಾವಿಗೆ ನೂಲುಗಳು ಕ್ಷಣಮಾತ್ರದಲ್ಲಿ ತುಂಡು ತುಂಡಾಗಿ ಹರಿದು ಛಿದ್ರವಾಗಿ ನಾಲಿಗೆಯಲ್ಲಿ ನಿಲ್ಲದೆ ಕರಗಿ ನಿರಾಸೆ ಜಿಗುಪ್ಸೆ ಹುಟ್ಟಿಸುವ ಸಾಧ್ಯತೆಯೇ ಹೆಚ್ಚು. ಕೇರಳದ ಕಡೆಯ ಶ್ಯಾವಿಗೆ ಬಿಳಿ ಅಲ್ಲದೇ ಕೆಂಪು ಅಕ್ಕಿಯಿಂದಲೂ ತಯಾರಾಗುತ್ತದೆ."ಇಡಿಯಪ್ಪಂ" ಎನ್ನುವ ಹೆಸರಿನ ಕೇರಳದ ಶಾವಿಗೆ ಪ್ರಕಾರಕ್ಕೆ ನೂಲುಪೊಟ್ಟು ,ನೂಲಪ್ಪಮ್ ಎಂಬ ಹೆಸರುಗಳೂ ದಕ್ಷಿಣ ಭಾರತದಲ್ಲಿ ಪ್ರಚಲಿತದಲ್ಲಿ ಇವೆ. ಇನ್ನು ಆಂಗ್ಲ ಭಾಷೆಯಲ್ಲಿಯೇ ಹೆಸರು ಬೇಕೆಂದು ಬಯಸುವವರು ರೈಸ್ ನೂಡಲ್ಸ್ ಅಥವಾ ಸ್ಟ್ರಿಂಗ್ ಹೋಪರ್ ಎಂದೂ ಕರೆದು ಕೃತಾರ್ತರಾಗಬಹುದು. ರುಚಿ ಗಂಧಗಳಲ್ಲಿ ಕೇರಳದ ಅಥವಾ ಇನ್ಯಾವುದೋ ರಾಜ್ಯದ ಶ್ಯಾವಿಗೆ ಕನ್ನಡದ ಶ್ಯಾವಿಗೆಗಿಂತ ಭಿನ್ನ. ಮೇಲುನೋಟಕ್ಕೆ ಎಲ್ಲ ಬಗೆಯ ಶ್ಯಾವಿಗೆಗಳೂ ಸುರುಳಿಸುತ್ತಿದ ನೂಲಿನ ಮುದ್ದೆಯಾದರೂ ಅವುಗಳೊಳಗೆ ವೈವಿಧ್ಯ ಇದೆ. ವೈವಿಧ್ಯಮಯ ಶ್ಯಾವಿಗೆಯನ್ನು ಪ್ರೀತಿಸಿ ಸ್ವಯಂ ತಯಾರಿಸುವವರು ಜಗತ್ತಿನ ಯಾವುದೇ ಮೂಲೆಯಲ್ಲಿ ಇದ್ದರೂ ಅಲ್ಲಿನ ಸ್ಥಳೀಯ ಅಂಗಡಿಗಳಲ್ಲಿ ಸಿಗುವ ಅಕ್ಕಿಗಳಲ್ಲಿ ಶ್ಯಾವಿಗೆಗೆ ಹೊಂದುವ ಅಕ್ಕಿ ಯಾವುದು ಎಂದು ತಮ್ಮ ಅಡುಗೆಯ ವಿಜ್ಞಾನ ಗಣಿತ ಪ್ರಯೋಗಗಳನ್ನು ಜೊತೆಮಾಡಿಸಿ ಕಂಡುಕೊಂಡಿರುತ್ತಾರೆ. ಅದಕ್ಕಿಂತ ಮುಖ್ಯವಾಗಿ ತಾವಿರುವ ಊರಿಗೆ ಶ್ಯಾವಿಗೆ ಒತ್ತುವ ಒರಳನ್ನೂ ಕೊಂಡೊಯ್ದಿರುತ್ತಾರೆ. ಹಿತ್ತಾಳೆಯ ಹೊಳೆಯುವ ಒರಳುಗಳು ಸಣ್ಣ ದೊಡ್ಡ ಗಾತ್ರದಲ್ಲಿ ಕನ್ನಡ ನಾಡಿನ ಅಂಗಡಿಗಳಲ್ಲಿ ದೊರೆಯುತ್ತವೆ. ವಿದೇಶ ಪ್ರವಾಸದ ಬ್ಯಾಗಿನ ಅಚ್ಚುಕಟ್ಟಿನ ಜಾಗದಲ್ಲಿ ಸಾಗಿಸಲು ಅನುಕೂಲಕರ ಆಗಲಿ ಎಂದು ಒರಳಿನ ಭಾಗಗಳನ್ನು ಹೊರಡುವಾಗ ಬಿಡಿಸಿ ಮತ್ತೆ ತಲುಪಿದ ಮೇಲೆ ಜೋಡಿಸಲಾಗುವ ನಮೂನೆಗಳೂ ದೊರೆಯುತ್ತವೆ. ಅಂತೂ ಒರಳೂ ಇದ್ದು, ಸೂಕ್ತವಾದ ಅಕ್ಕಿಯೂ ದಕ್ಕಿದ ಮೇಲೆ , ಮರುದಿನ ಬೆಳಿಗ್ಗೆಯ ಶ್ಯಾವಿಗೆ ತಯಾರಿಗೆ ಹಿಂದಿನ ಸಂಜೆ ಅರೆದಿಡಬಹುದು , ಜೊತೆಗೆ ತೆಂಗಿಕಾಯಿ ತುರಿದು ಸೇರಿಸುವ ಪದ್ಧತಿಯೂ ಇದೆ. ಕೆಲವು ಊರು ಮನೆಗಳಲ್ಲಿ ತೆಂಗಿನ ಕಾಯಿ ಹಾಕದೆಯೂ ಶ್ಯಾವಿಗೆ ಮಾಡುತ್ತಾರೆ. ನಾನಂತೂ ಶ್ಯಾವಿಗೆ ಪರಂಪರೆಯಲ್ಲಿ "ತೆಂಗಿನಕಾಯಿ ಸಹಿತ" ಸಂತತಿಗೆ ಸೇರಿದವನು. ಶ್ಯಾವಿಗೆಯನ್ನು ಆಘ್ರಾಣಿಸಿಯೇ ಅದಕ್ಕೆ ತೆಂಗಿನ ಕಾಯಿ ಹಾಕಿದ್ದಾರೋ ಇಲ್ಲವೋ ಎಂದು ಹೇಳಬಲ್ಲ ಹುಟ್ಟಾ ಕಟ್ಟಾ ಶ್ಯಾವಿಗೆ ಪ್ರೇಮಿಗಳೂ ಇದ್ದಾರೆ. ಎಷ್ಟು ಅಕ್ಕಿಗೆ ಎಷ್ಟು ತೆಂಗಿನಕಾಯಿ ಸೇರಿಸಿ ಅರೆಯಬೇಕು ಎನ್ನುವುದು ಶ್ಯಾವಿಗೆಯ ಸೂಕ್ಶ್ಮಾತಿಸೂಕ್ಷ್ಮಗಳಲ್ಲಿ ಇನ್ನೊಂದು. ಈ ಹಂತದಲ್ಲಿ ಕಾಯಿ ಹೆಚ್ಚು ಸೇರಿಸಿದರೆ ಶ್ಯಾವಿಗೆ ತಯಾರಾಗುವ ಕೊನೆಯ ಹಂತದಲ್ಲಿ ಎಳೆಗಳು ತೀರಾ ದುರ್ಬಲವಾಗಿ ಪುಡಿ ಪುಡಿ ಆಗುತ್ತವೆ.ಕಡಿಮೆ ಆದರೆ ಎಳೆಗಳು ಗಟ್ಟಿಯಾಗಿ ತಿನ್ನುವ ಅನುಭವ ಕೆಡುತ್ತದೆ. ಚದುರಂಗದ ಆಟದಲ್ಲಿ ಹಲವು ಹೆಜ್ಜೆಗಳ ಮುಂದಿನ ಪರಿಣಾಮವನ್ನು ಅಳೆದು ಮೊದಲೇ ಯೋಜನೆ ಮಾಡಿ ಜಾಗರೂಕವಾಗಿ ಮುನ್ನಡೆಯುವಂತೆ ಈ ಮಹಾಖಾದ್ಯದ ತಯಾರಿಯೂ. ಒಂದಾನೊಂದು ಕಾಲದಲ್ಲಿ ನನ್ನ ತಂದೆ ತಾಯಿಯರ ಕಡೆಯ ಅಮ್ಮಮ್ಮಂದಿರು (ಅಜ್ಜಿಯರು) ಶಿಲೆಯ ಅರೆಯುವ ಕಲ್ಲುಗಳ ಎದುರು ನೇರ ಕುಳಿತು ಒಂದು ಕೈಯಿಂದ ಕಲ್ಲನ್ನು ತಿರುವುತ್ತಾ ಮತ್ತೊಂದರಲ್ಲಿ ಅಷ್ಟಷ್ಟೇ ಅಕ್ಕಿ ತುರಿದ ಕಾಯಿಯನ್ನು ಕಲ್ಲಿನ ಕುಳಿಗೆ ಜಾರಿಸುತ್ತಾ ನಡುನಡುವೆ ಹಣೆಯ ಬೆವರನ್ನೂ ಸೆರಗಿಂದ ಒರಸುತ್ತ ಸಣ್ಣ ಸದ್ದಿನಲ್ಲಿ ಅರೆಯುತ್ತಿದ್ದ ಪ್ರಕ್ರಿಯೆ ಇದೀಗ ತಲೆಮಾರುಗಳನ್ನು ದಾಟಿ ಬಟನ್ ಒತ್ತಿದೊಡನೆ ಕರ್ಕಶವಾಗಿ ಗಿರಗಿಟ್ಟುವ ಮಿಕ್ಸರ್ ಗ್ರೈಂಡರ್ ಗಳ ಶಬ್ದದ ನಡುವೆ ನುಣ್ಣಗೆ ತೆಳ್ಳಗಾಗುವುದಕ್ಕೆ ಒಗ್ಗಿಕೊಂಡಿವೆ. ಹೀಗೆ ಸಿದ್ಧವಾದ ನೀರುನೀರಾದ ಶ್ಯಾವಿಗೆ ಹಿಟ್ಟು ಒಂದು ರಾತ್ರಿಯನ್ನು ಏನೂ ಮಾಡದೇ ಪಾತ್ರೆಯೊಂದರಲ್ಲಿ ಬೆಳಗಿನ ನಿರೀಕ್ಷೆಯಲ್ಲಿ ಕಳೆಯುತ್ತದೆ . ,ಮರುದಿನ ಬೆಳಗಿಗೆ ತುಸು ಹುಳಿಯಾಗಿ ಮುಂದಿನ ಹಂತಕ್ಕೆ ಅಣಿಗೊಳ್ಳುತ್ತದೆ. ಇನ್ನು ಶ್ಯಾವಿಗೆ ಸಂಭ್ರಮದ ದಿನದ ಬೆಳಿಗ್ಗೆ ಒಲೆಯ ಮೇಲಿರುವ ಬಾಣಾಲೆಯನ್ನು ಏರಿದ ತೆಳ್ಳಗಿನ ಹಿಟ್ಟು ,ಮನೆಯ ನಿಷ್ಣಾತ ಬಾಣಸಿಗರ ಸುಪರ್ದಿಯಲ್ಲಿ ನಿಧಾನವಾಗಿ ಕುದಿಯುತ್ತಾ ಮಗುಚಿಸಿಕೊಳ್ಳುತ್ತ ಮುದ್ದೆಯಾಗುತ್ತದೆ , ಮತ್ತೆ ಆ ಗಟ್ಟಿ ಮುದ್ದೆ ಕೈಮುಷ್ಟಿಯ ಬಿಗಿಯಲ್ಲಿ ಉಂಡೆಯ ರೂಪವನ್ನು ಪಡೆದು ಇಡ್ಲಿ ಅಟ್ಟ ಅಥವಾ ಕುಕರ್ ಒಳಗೆ ನಂತರ ಬೇಯುತ್ತದೆ ತೋಯುತ್ತದೆ . ತೆಳ್ಳಗಿನ ಹಿಟ್ಟು ಯಾವ ಬೆಂಕಿಯಲ್ಲಿ ಎಷ್ಟೊತ್ತು ಕುದಿಯಬೇಕು ಎಷ್ಟು ಗಟ್ಟಿಯಾಗಬೇಕು ಮತ್ತೆ ಎಷ್ಟು ಬೇಯಬೇಕು ಎನ್ನುವುದು ಕೂಡ ಶ್ಯಾವಿಗೆಯ ಯಶಸ್ಸಿನ ಹಿಂದೆ ದುಡಿಯುವ ನಯ ನಾಜೂಕಿನ ವಿಚಾರಗಳು. ಈಗ ಮೃದುವಾಗಿ ಹದವಾಗಿ ಕುದಿದು ಬೆಂದ ಉಂಡೆಗಳು ಒತ್ತಿಸಿಕೊಳ್ಳಲಿಕ್ಕೆ ತಯಾರು. ಎಂದೋ ಯಾರೋ ಮಹಾ ಇಂಜಿನೀಯರ್ ಒಬ್ಬರು ಸಂಶೋಧನೆಯ ಕಾರಣಕ್ಕೆ ಈಗಲೂ ಅವರಿಗೆ ಪುಣ್ಯ ಸಂಚಯ ಮಾಡಿಸುತ್ತಿರುವ "ಶ್ಯಾವಿಗೆ ಒರಳು" ಇಷ್ಟೊತ್ತಿಗೆ ಮೈಮುರಿದು ಅಡುಗೆ ಮನೆಯಲ್ಲಿ ಪ್ರತ್ಯಕ್ಷ ಆಗಿರುತ್ತದೆ. ಸಾಮಾನ್ಯವಾಗಿ ಮನೆಯ ಅಟ್ಟದಲ್ಲೋ ಅಡುಗೆ ಮನೆಯ ನೇಪತ್ಯದಲ್ಲೋ ನಿಷ್ಕ್ರಿಯವಾಗಿರುವ ಒರಳು, ಶ್ಯಾವಿಗೆ ಒತ್ತಬೇಕಾದ ಅಪರೂಪದ ವಿಶೇಷ ದಿನಗಳಲ್ಲಿ ಮಾತ್ರ ಹೊರಬಂದು ಕತ್ತು ಗಿರಗಿರ ತಿರುಗಿಸುವ ಮೂರು ಕಾಲಿನ ವಿಚಿತ್ರ ಜಂತುವಾಗಿ ಜೀವ ತಳೆಯುತ್ತದೆ . ಒರಳಿನ ತಿರುಗಿಸುವ ಹಿಡಿಯ ಕೆಳಗಿನ ಭಾಗಕ್ಕೆ ತೆಂಗಿನ ಎಣ್ಣೆ ಸವರುವುದು ಪ್ರತಿ ಒತ್ತಿಗೂ ಮೇಲೆ ಕೆಳಗೆ ಹೋಗುವಾಗ ಆಗುವ ಘರ್ಷಣೆಯನ್ನು ತಗ್ಗಿಸುತ್ತದೆ, ಅಮೂಲ್ಯವಾದ ಒರಳಿನ ಆಯಸ್ಸನ್ನು ವರ್ಧಿಸುತ್ತದೆ ಎನ್ನುವುದನ್ನು ಅಡುಗೆಮನೆ ನಿರ್ವಹಿಸುವ ಅನುಭವದ ಯಾರೂ ಹೇಳಬಲ್ಲರು. ಹೀಗೆ ಒರಳುಯಂತ್ರದ ಪ್ರವೇಶ ಅಲಂಕಾರ ಆಗುತ್ತಿರುವಾಗ ಒಲೆಯ ಮೇಲೆ ಬೆಂದ ಹಿಟ್ಟಿನ ಉಂಡೆಗಳ ಬಿಸಿ ಆರದಂತೆ ಸಣ್ಣ ಬೆಂಕಿ ಮುಂದುವರಿಯುತ್ತಿರುತ್ತದೆ. ಇನ್ನು ಅಕ್ಕಿ ಕಾಯಿಯಗಳು ಅರೆದು ಬೆಂದ ಉಂಡೆಗಳು ಶ್ಯಾವಿಗೆಯ ಎಳೆಗಳಾಗಿ ಮಾರ್ಪಡುವ ದಿವ್ಯ ಘಳಿಗೆ ಸನ್ನಹಿತವಾದಾಗ ಆಯಾ ಮನೆಯ ಬಲಿಷ್ಠ ಒತ್ತುಗಾರರಿಗೆ ಒಂದು ಕೂಗು ಕರೆ ಹೋಗುತ್ತದೆ. ಒಬ್ಬರು ಶ್ಯಾವಿಗೆ ಒರಳಿನ ಒತ್ತು ಪಾತ್ರೆ ಹಿಡಿಯುವಷ್ಟು ಬೆಂದ ಹಿಟ್ಟಿನ ಉಂಡೆಯನ್ನು ಕುಳಿತು ತುಂಬಿಸಿದರೆ ಇನ್ನೊಬ್ಬರು ನಿಂತು, ಒರಳಿನ ಎರಡು ಕಾಲುಗಳನ್ನು ತಮ್ಮ ಪಾದಗಳಿಂದ ಅದುಮಿ ಹಿಡಿದು ಎರಡು ಕೈಯಲ್ಲಿ ಹ್ಯಾಂಡಲ್ ಬಾರ್ ತಿರುಗಿಸುತ್ತಾ ಶ್ಯಾವಿಗೆ ಒತ್ತುತ್ತಾರೆ. ಪ್ರತಿ ಸುತ್ತಿಗೂ ಅಷ್ಟಷ್ಟು ಶ್ಯಾವಿಗೆ ಎಳೆಯಾಗಿ ನೂಲಾಗಿ ಒರಳಿನ ಕೆಳಗಿರುವ ಅಚ್ಚಿನಿಂದ ಹೊರ ಬರುತ್ತದೆ, ಕುಳಿತವರು ಪ್ಲೇಟ್ ಅನ್ನು ಎಳೆಗಳು ಹೊರ ಬರುವ ಲಯಕ್ಕೆ ಹೊಂದಿಕೊಂಡು ತಿರುಗಿಸುತ್ತಾ ಸುರುಳಿಯಾಗಿ ಸುತ್ತಿಸಿ ಮುದ್ದೆಯನ್ನು ಹಿಡಿಯುತ್ತಾರೆ . ಶ್ಯಾವಿಗೆ ಮಾಡುವುದರಲ್ಲಿ ಪಳಗಿರುವ ಅಜ್ಜಿ ಅಮ್ಮ ಹೆಂಡತಿ ದೊಡ್ಡಮ್ಮ ಚಿಕ್ಕಮ್ಮ ಅತ್ತಿಗೆ ಹೆಂಡತಿಯಂತಹ ಮಹಾನ್ ಬಾಣಸಿಗರು ಬಿಸಿ ಹಿಟ್ಟಿನ ಮುದ್ದೆಯನ್ನು ಒರಳಿಗೆ ತುಂಬುವ ಮತ್ತೆ ಒತ್ತಿದಾಗ ಕೆಳಗೆ ಧಾರೆಯಾಗಿ ಇಳಿಯುವ ಶ್ಯಾವಿಗೆಯನ್ನು ಪ್ಲೇಟು ಹಿಡಿದು ಸುತ್ತಿಸಿ ಹದ್ದುಬಸ್ತಿನಲ್ಲಿಡುವ ಕೆಲಸ ಮಾಡಿದರೆ, ರಟ್ಟೆಯ ಬಲ ಹೆಚ್ಚಿರುವ ಗಂಡ ಮಗ ಅಳಿಯ ಮೊಮ್ಮಗರಂತವರು ಒರಳು ತಿರುಗಿಸುವ ಹೊಣೆಗಾರಿಕೆಯನ್ನು ನಿರ್ವಹಿಸುತ್ತಾರೆ.ಕೆಲವು ಪ್ರದರ್ಶನಗಲ್ಲಿ ಈ ಪಾತ್ರಗಳು ಬದಲಾಗುವುದು ಒಬ್ಬರೇ ಎರಡು ಮೂರು ಪಾತ್ರ ಮಾಡಬೇಕಾದ ಅನಿವಾರ್ಯತೆ ಬರುವುದೂ ಇರುತ್ತದೆ. ಕಾರ್ಖಾನೆಯೊಂದರ ನಿರ್ಧರಿತ ನಿಯಮಿತ ಚಲನೆಗಳಂತೆ ಕುಕ್ಕರಿನಲ್ಲಿ ಹದ ಬಿಸಿಯಲ್ಲಿರುವ ಒಂದೊಂದೇ ಹಿಟ್ಟಿನ ಉಂಡೆಗಳು ಒರಳಿನ ತೂತು ಅಚ್ಚುಗಳ ಮೂಲಕ ಹಾದು ನೀಳ ನೂಲಿನ ಗುಚ್ಛದ ಸ್ವರೂಪವನ್ನು ಪಡೆದು ಪ್ಲೇಟಿನಲ್ಲಿ ಇಳಿದು ದೊಡ್ಡ ಪಾತ್ರಕ್ಕೆ ವರ್ಗಾವಣೆ ಆಗುತ್ತಿರುತ್ತವೆ. ಇಡೀ ಕುಟುಂಬ ಮನೆಯನ್ನು, ತಾನು ರೂಪ ಆಕಾರ ಪಡೆಯುವ ಪ್ರಸನ್ನ ಘಳಿಗೆಯಲ್ಲಿ ಅಡಿಗೆಮನೆಯ ಸೂರಿನ ಕೆಳಗೆ ಒಂದು ಮಾಡಿಸುವ ಸಾಮರ್ಥ್ಯ ಶ್ಯಾವಿಗೆ ಎನ್ನುವ ಅದ್ಭುತ ಪ್ರಕ್ರಿಯೆಗೆ ಇದೆ. ಹೀಗೆ ತಯಾರಾದ ಶ್ಯಾವಿಗೆಯನ್ನು ಹೇಗೆ ತಿನ್ನಬೇಕು ಬಾರದು ಎನ್ನುವುದರ ಬಗ್ಗೆ ಅದರ ಪ್ರೇಮಿಗಳಲ್ಲಿ ಜಿಜ್ಞಾಸೆ ಇದೆ ಅವರೊಳಗೆ ಪಂಥ ಗುಂಪುಗಳೂ ಇವೆ .ಈ ಗುಂಪುಗಾರಿಕೆ ಒಡಕುಗಳು ಶ್ಯಾವಿಗೆ ಹುಟ್ಟಿತು ಎನ್ನಲಾದ ಕೆಲ ಸಾವಿರ ವರ್ಷಗಳ ಹಿಂದೆಯೂ ಇದ್ದವೋ ಇತ್ತೀಚಿಗೆ ಹುಟ್ಟಿಕೊಂಡದ್ದೋ ಆ ಶ್ಯಾವಿಗೆಯ ಎಳೆಗಳೇ ಹೇಳಬೇಕು. ಕೆಲವರು ಶ್ಯಾವಿಗೆ ಮುದ್ದೆಗೆ ತೆಂಗಿನೆ ಎಣ್ಣೆ ಕಲಸಿಕೊಂಡು ಉಪ್ಪಿನ ಕಾಯಿಯ ಜೊತೆ ತಿನ್ನುವ, ಅಲ್ಲವೇ ಕಾಯಿರಸ, ಸಾಂಬಾರ್ ಇನ್ನೇನೋ ಖಾರ ಪದಾರ್ಥದ ಜೊತೆ ಸೇವಿಸುವ ಖಡಕ್ ಮನುಷ್ಯರು. ಇನ್ನು ಕೆಲವರು ತುರಿದ ತೆಂಗಿನ ಕಾಯಿಯನ್ನು ಮಿಕ್ಸರ್ ಅಲ್ಲಿ ಅರೆದು ಹಿಂಡಿದ ಹಾಲಿಗೆ ಬೆಲ್ಲ ಸೇರಿಸಿ ತಯಾರಾದ ಕಾಯಿಹಾಲಿನ ಜೊತೆ ಮಾತ್ರ ಶ್ಯಾವಿಗೆಯನ್ನು ಸವಿಯ ಬಲ್ಲ ಸಂಕುಲದವರು. ತಿನ್ನುವ ಹೊತ್ತಿನಲ್ಲಿ ನಮ್ಮೊಳಗೇ ಭಿನ್ನಾಭಿಪ್ರಾಯ ಎಷ್ಟೇ ಇದ್ದರೂ ಶ್ಯಾವಿಗೆಯ ಕುರಿತಾದ ಅಭಿಮಾನ ಒತ್ತಾಯ ಪ್ರೀತಿಯ ವಿಷಯದಲ್ಲಿ ಎಲ್ಲರೂ ಸಂಘಟಿತರು. ಮರವಂತೆಯ ನನ್ನ ಬಾಲ್ಯದ ಬೇಸಿಗೆ ರಜೆಯಯಲ್ಲಿ ಮಂಗಳೂರು ಚಿಕ್ಕಮ್ಮನ ಮನೆಗೆ ಹೋಗಿದ್ದಾಗ, ಅಲ್ಲಿ ವಾಸಿಸುತ್ತಿದ್ದ ಅಮ್ಮಮ್ಮನಿಗೂ ನನಗೂ ಒಂದು ಪಂಥ ಬಿದ್ದ್ದಿತ್ತು. ಒಂದೋ ಆಕೆ ನಿತ್ಯವೂ ಶ್ಯಾವಿಗೆ ಮಾಡಿ ದಣಿದು ನಿಲ್ಲಿಸಬೇಕು, ಇಲ್ಲದಿದ್ದರೆ ನಾನು ದಿನಾ ತಿಂದು ತಿಂದು ಸಾಕೆನ್ನಬೇಕು. ಈ ಪಂಥದ ಪ್ರಕಾರ ಪ್ರತಿ ದಿನ ಬೆಳಿಗ್ಗೆ ಅಮ್ಮಮ್ಮನಿಂದ ಹೊಚ್ಚ ಹೊಸ ಶ್ಯಾವಿಗೆ ತಯಾರಿ ಮತ್ತೆ ನಿತ್ಯವೂ ನಾನು ತಿನ್ನುವುದು ನಡೆಯಿತು. ಒಂದು ವಾರದ ಪರಿಯಂತ ನಿತ್ಯ ನಡೆದ ಈ ಹಿತಸ್ಪರ್ಧೆಯಲ್ಲಿ ಸೋಲು ಗೆಲುವುಗಳ ನಿರ್ಧಾರ ಆಗದೇ , ಲೋಕಹಿತಕ್ಕಾಗಿ ನಾವಿಬ್ಬರೂ ಹೊಂದಾಣಿಕೆ ಒಪ್ಪಂದ ಮಾಡಿಕೊಂಡು ಪಂಥವನ್ನು ಕೈಬಿಟ್ಟಿದ್ದೆವು. ಶ್ಯಾವಿಗೆಯ ಸುದೀರ್ಘ ಇತಿಹಾಸದಲ್ಲಿ ದಾಖಲಾದ ಅವಿಸ್ಮರಣೀಯ ಜಿದ್ದು ಇದಾಗಿದ್ದಿರಬಹುದು. ಇಂದಿಗೂ ಶ್ಯಾವಿಗೆ -ಕಾಯಿ ಹಾಲುಗಳ ಜೋಡಿಯನ್ನು ಮೀರಿದ ಸುಖ ರಸಸೃಷ್ಟಿ ಇನ್ನೊಂದಿಲ್ಲ ಎಂದು ನಂಬುವ ಕೆಲವರಲ್ಲಿಯಾದರೂ ನಾನೊಬ್ಬ. ಶ್ಯಾವಿಗೆಯನ್ನು ಇನ್ನೊಂದು ಆಹಾರ ಎಂತಲೋ ವಿಶೇಷ ತಿಂಡಿ ಎಂದೋ ಹಲವರು ಕರೆಯಬಹುದಾದರೂ ನನ್ನ ಮಟ್ಟಿಗೆ ಶ್ಯಾವಿಗೆ ಯಾವಾಗಲೂ ಹಬ್ಬ; ಮತ್ತೆ ಇವತ್ತು ಮನೆಯಲ್ಲಿ ಶ್ಯಾವಿಗೆ.
ಅಮರಪ್ರೇಮ (ಕತೆ): ಕೇಶವ ಕುಲಕರ್ಣಿ (ಕೊನೆಯ ಕಂತು)
ಮೊದಲ ಕಂತನ್ನು ಇನ್ನೂ ಓದಿಲ್ಲದಿದ್ದರೆ, ಓದಲು ಇಲ್ಲಿ ಒತ್ತಿ
ಎರಡನೆಯ ಕಂತನ್ನು ಇನ್ನೂ ಓದಿಲ್ಲದಿದ್ದರೆ, ಓದಲು ಇಲ್ಲಿ ಒತ್ತಿ
ಅಮರನಿಗೆ ಪ್ರೇಮಾಳನ್ನು ನೋಡುವ ಅದಮ್ಯ ಹಂಬಲ ಪರಾಕಾಷ್ಠೆಗೆ ತಲುಪಿದ್ದು, ೨೦ನೇ ವರ್ಷದ ಪುನರ್ಮಿಲನದ ಕಾರ್ಯಕ್ರಮದ ಸಲುವಾಗಿ, ಪುಣೆಯಿಂದ ಬೆಂಗಳೂರಿಗೆ ರೈಲಿನಲ್ಲಿ, ಬೆಂಗಳೂರಿನಿಂದ ಮೈಸೂರಿಗೆ ಬಸ್ಸಿನಲ್ಲಿ ಪಯಣಿಸಿ, ಬಸ್ ನಿಲ್ದಾಣದಿಂದ ಹೊಟೇಲಿಗೆ ಆಟೋದಲ್ಲಿ ಬಂದಿಳಿದ ಆ ಒಂದು ದಿನದ ಸುದೀರ್ಘ ಪಯಣದಲ್ಲಿ.
ಪ್ರೇಮಾ ಬರುತ್ತಾಳೆ, ಬರುವುದಿಲ್ಲ ಎನ್ನುವ ಚಡಪಡಿಕೆ; ಜೊತೆಗೆ ಅವಳ ಗಂಡನೂ ಬರಬಹುದು, ಬರಲಿಕ್ಕಿಲ್ಲ ಎನ್ನುವ ಗೊಂದಲ. ಗಂಡ ಬರದಿದ್ದರೆ ಒಳ್ಳೆಯದು, ಅವಳ ಜೊತೆ ಕೂತು ನಾಕು ಮಾತಾದರೂ ಆಡಲು ಸಮಯ ಸಿಕ್ಕಬಹುದು ಎಂಬ ಹಂಬಲ. ಆದರೆ ಅಮೇರಿಕದಲ್ಲಿ ಈಗ ರಜೆಯ ಸಮಯವಲ್ಲವೇ, ಅವಳು ಕುಟುಂಬ ಸಮೇತ ಬಂದೇ ಬರುತ್ತಾಳೆ ಎನ್ನುವ ತರ್ಕ. ಅವಳಿಗೆ ಬಹುಷಃ ಇಬ್ಬರು ಮಕ್ಕಳಿರಬಹುದು. ತನ್ನ ಮಗಳಿಗಿಂತ ದೊಡ್ಡ ಮಕ್ಕಳಿರುತ್ತಾರೆ, ಏಕೆಂದರೆ ಅವಳಿಗೆ ತನಗಿಂತ ಮೊದಲು ಮದುವೆ ಆಯಿತಲ್ಲವೇ? ಸ್ವಲ್ಪ ದಪ್ಪಗಾಗಿರಬಹುದು, ಇಲ್ಲ, ಅಮೇರಿಕದಲ್ಲಿರುವವರಿಗೆ ದೇಹದ ಬಗ್ಗೆ ತುಂಬ ಕಾಳಜಿಯಂತೆ, ಮೊದಲಿಗಿಂತ ಸಪೂರವಾಗಿರಬಹುದು ಎಂದೆಲ್ಲ ಪ್ರಯಾಣದ ತುಂಬ ಯೋಚಿಸಿದ.
ಪ್ರೇಮಾ ಎದುರಾದಾಗ ಯಾವ ಮಾತಿನಿಂದ ಶುರು ಮಾಡುವುದು, ಯಾವ ಯಾವ ಹಳೆಯ ವಿಷಯಗಳ ಬಗ್ಗೆ ಮಾತಾಡುವುದು ಎಂದು ಮನದಲ್ಲೇ ಪಟ್ಟಿ ಮಾಡಿಕೊಂಡ. ಕಾಲೇಜಿನಲ್ಲಿರುವಾಗ ಇದ್ದ ತನ್ನ ದಟ್ಟ ಕಪ್ಪು ಕೂದಲು ಬಹಳಷ್ಟು ಮಾಯವಾಗಿ ಉಳಿದ ಅರೆಬಕ್ಕ ತಲೆಯ ಬಗ್ಗೆ ಕಸಿವಿಸಿಯಾಯಿತು. ನಿಯಮಿತವಾಗಿ ವ್ಯಾಯಾಮ ಮಾಡಿದ್ದರೆ ಇಷ್ಟು ಹೊಟ್ಟೆ ಬರುತ್ತಿರಲಿಲ್ಲ ಎಂದು ಮೊಟ್ಟಮೊದಲ ಬಾರಿಗೆ ತನ್ನ ಹೊಟ್ಟೆಯ ಬಗ್ಗೆ ಬೇಸರ ಮೂಡಿತು.
ಅವಳಿಗೆ ತನ್ನ ಹೆಂಡತಿಯನ್ನು ಹೇಗೆ ಪರಿಚಯಿಸುವುದು, ಅದಕ್ಕಿಂತ ಹೆಚ್ಚಾಗಿ ತನ್ನ ಮಗಳ ಹೆಸರು ಕೂಡ `ಪ್ರೇಮಾ` ಎಂದು ಹೇಗೆ ಹೇಳುವುದು ಎನ್ನುವ ಪ್ರಶ್ನೆಗಳಿಗೆ ಇಡೀ ಪ್ರಯಾಣದಲ್ಲಿ ಉತ್ತರಗಳೇ ಸಿಗಲಿಲ್ಲ. ಹಲವಾರು ಸನ್ನಿವೇಷಗಳನ್ನು ತಾನೇ ಸೃಷ್ಟಿಸಿಕೊಂಡು ಅದನ್ನು ಹೇಗೆ ನಿಭಾಯಿಸುವುಸುದು ಎಂದು ಪ್ರಯಾಣದ ಪೂರ್ತಿ ನಾನಾ ರೀತಿಯ ಲೆಖ್ಖಾಚಾರ ಹಾಕುತ್ತಲೇ ಇದ್ದ. ಹೆಂಡತಿ ಮತ್ತು ತಾಯಿಯ ಮಾತನ್ನು ಕೇಳಿ ಮಗಳಿಗೆ `ಪ್ರೇಮಾ` ಎನ್ನುವ ಹೆಸರನ್ನು ಯಾವ ಕಾರಣಕ್ಕೂ ಇಡಲು ಬಿಡಬಾರದಿತ್ತು ಎಂದು ತನ್ನನ್ನೇ ಬಯ್ದುಕೊಂಡ. ಏನಾದರೂ ಕಾರಣ ಹೇಳಿ ಹೆಂಡತಿ ಮಗಳನ್ನು ಕರೆತರಬಾರದಿತ್ತು ಎಂದುಕೊಂಡ. ಹೊಟೇಲು ತಲುಪಿದರೂ ತನ್ನ ಸಮಸ್ಯೆಗೆ ಯಾವ ಸಮಂಜಸ ಉತ್ತರವೂ ದೊರಕದೇ, ಹೇಗೆ ಆಗುತ್ತೋ ಹಾಗೆ ಆಗಲಿ ಎಂದು ತನಗೆ ತಾನೇ ಸಮಾಧಾನ ಮಾಡಿಕೊಂಡ.
ಮೊದಲೇ ಬುಕ್ ಮಾಡಿರುವ ಹೋಟೀಲು ತಲುಪಿದಾಗ ಆಗಲೇ ಸಂಜೆ ಆಗಿತ್ತು. ಎಲ್ಲ ಕ್ಲಾಸ್‍ಮೇಟುಗಳೂ ಆಗಲೇ ಮುಖ್ಯ ಸಭಾಂಗಣಕ್ಕೆ ಹೋಗಿಯಾಗಿತ್ತು. ಹಾಗಾಗಿ ಅಮರನಿಗೆ ಯಾವ ಗೆಳೆಯರೂ ಸಿಗಲಿಲ್ಲ.
ರೂಮಿಗೆ ಬಂದವರೇ ಸ್ನಾನ ಮಾಡಿ, `ಪುನರ್ಮಿಲನ`ಕ್ಕಾಗಿಯೇ ಖರೀದಿಸಿದ ಹೊಸ ಬಟ್ಟೆಗಳನ್ನು ಮೂವರೂ ಹಾಕಿಕೊಂಡರು. ಉಷಾ ಮದುವೆಯ ಮನೆಗೆ ಹೋಗುವವಳಂತೆ ಶೃಂಗಾರ ಮಾಡಿಕೊಂಡು ನಳನಳಿಸುತ್ತಿದ್ದಳು. ಎಂದೂ ಅಷ್ಟಾಗಿ ಹೊಗಳದ ಅಮರ `ಚೆನ್ನಾಗಿ ಕಾಣುತ್ತಿದ್ದೀಯಾ,` ಎಂದು ಹೆಂಡತಿಯನ್ನು ಹೊಗಳಿದ. ಮಗಳೂ ಚೆನ್ನಾಗಿ ಡ್ರೆಸ್ ಮಾಡಿದ್ದಳು, `ಸೋ ಕ್ಯೂಟ್,` ಎಂದು ಮಗಳ ಕೆನ್ನೆಗೆ ಮುತ್ತನಿಟ್ಟ. `ಏನು ಯಜಮಾನರು, ಇವತ್ತು ಭಾರೀ ಮೂಡಿನಲ್ಲಿ ಇರುವಂತಿದೆ!` ಎಂದು ಉಷಾ ತಮಾಷೆ ಮಾಡಿದಳು. ಮಗಳ ಮುಂದೆಯೇ ಹೆಂಡತಿಯ ಕೆನ್ನೆಗೂ ಒಂದು ಮುತ್ತನಿತ್ತ. ಮಗಳು ಖುಷಿಯಲ್ಲಿ ನಕ್ಕಳು. ಲಿಫ್ಟಿನಿಂದ ಇಳಿದು `ಪುನರ್ಮಿಲನ` ನಡೆಯುತ್ತಿರುವ ಹೊಟೀಲಿನ ಸಭಾಂಗಣದತ್ತ ಹೊರಡಲು ಹೊಟೇಲಿನ ಲಾಬಿಗೆ ಬಂದರು.
ಹೆಂಡತಿ ಮಗಳನ್ನು ಹೊಟೇಲ್ ಲಾಬಿಯಲ್ಲಿ ಕೂರಲು ಹೇಳಿ, ಸಭಾಂಗಣ ಎಲ್ಲಿದೆ ಎಂದು ರೆಸೆಪ್ಷೆನ್ನಿನಲ್ಲಿ ಕೇಳಿಕೊಂಡು ಬರುತ್ತೇನೆ ಎಂದು ಅಮರ ರಿಸೆಪ್ಷನ್ನಿಗೆ ಬಂದು, ಅಲ್ಲಿರುವ ಹುಡುಗನಿಗೆ ಕೇಳಿದ.

ಅಷ್ಟರಲ್ಲಿ ಹಿಂದಿನಿಂದ ಯಾರೋ ಬಂದು ಅವನ ಕಣ್ಣು ಮುಚ್ಚಿದರು. ಯಾರು ಎಂದು ಅಮರನಿಗೆ ಗೊತ್ತಾಗದಿದ್ದರೂ ಬಳೆಗಳ ಸದ್ದು ಮತ್ತು ಪರ್ಫ್ಯೂಮಿನ ವಾಸನೆಯಿಂದ ಹೆಣ್ಣು ಎನ್ನುವುದಂತೂ ಗೊತ್ತಾಯಿತು. ಬಂದಿದ್ದು ರಿ-ಯುನಿಯನ್ನಿಗೆ ತಾನೆ, ತನಗೆ ಪ್ರೇಮಾಳನ್ನು ಬಿಟ್ಟರೆ ಇನ್ಯಾರೂ ಸನಿಹದ ಗೆಳತಿಯರಿರಲಿಲ್ಲ. ಕಾಲೇಜಿನಲ್ಲಿ ಇರುವಾಗ ಒಂದೇ ಒಂದು ದಿನವೂ ಸಲಿಗೆಯಿಂದ ಭುಜವನ್ನೂ ತಟ್ಟಿರದ ಹುಡುಗಿ, ಈಗ ಹಿಂದಿನಿಂದ ಬಂದು ಕಣ್ಣು ಮುಚ್ಚುವುದೆಂದರೆ! ಅವಳು ಪ್ರೇಮಾ ಅಲ್ಲದಿದ್ದರೆ ಅಥವಾ ತನ್ನನ್ನು ಇನ್ನಾರೋ ಎಂದು ಅಂದುಕೊಂಡು ಬೇರೆ ಯಾರೋ ಕ್ಲಾಸ್‍ಮೇಟ್ ಹುಡುಗಿ ತನ್ನ ಕಣ್ಣು ಮುಚ್ಚಿದ್ದರೆ ಎಂದು ಅಂದುಕೊಂಡು, `ಯಾರು? ಹು ಈಸ್ ಇಟ್?` ಎಂದ.
ಅತ್ತ ಕಡೆಯಿಂದ ಯಾವ ಉತ್ತರವೂ ಬರಲಿಲ್ಲ. ಅಮರನ ಕಣ್ಣಿನ ಮೇಲಿನ ಬಿಗಿತ ಹೆಚ್ಚಾಯಿತು. ಅಮರನಿಗೆ ಬೇರೆ ದಾರಿಯೇ ಇರಲಿಲ್ಲ, `ಪ್ರೇಮಾ!` ಎಂದ. ಕಣ್ಣು ಕಟ್ಟಿದ್ದ ಕೈ ಸಡಿಲಿತು. ತಿರುಗಿ ನೋಡಿದರೆ, ಸಾಕ್ಷಾತ್ ಪ್ರೇಮಾ ಸಕಲ ಶೃಂಗಾರದೊಂದಿಗೆ ಸೀರೆಯುಟ್ಟು ಮುಖದಲ್ಲಿ ಮಿಲಿಯನ್ ವ್ಯಾಟ್ ಬೆಳಕು ಸೂಸಿ ನಗುತ್ತಿದ್ದಳು.
`ನನ್ನನ್ನು ಮರೆತೇ ಬಿಟ್ಟಿದ್ದೀಯೇನೋ ಅಂದುಕೊಂಡಿದ್ದೆ, ಪರವಾಗಿಲ್ಲ, ಇನ್ನೂ ನನ್ನ ನೆನಪಿದೆಯಲ್ಲ,` ಎಂದು ಪಾಶ್ಯಾತ್ಯ ದೇಶದಲ್ಲಿ ಭೇಟಿಯಾದಾಗ ಮಾಡುವಂತೆ ಅಮರನನ್ನು ತಬ್ಬಿಕೊಂಡು ಕೆನ್ನೆಯ ಹತ್ತಿರ ಕೆನ್ನೆ ತಂದು ಹಿಂದೆ ಸರಿದಳು. ಅವಳ ತಾಕಿಯೂ ತಾಕದ ದೇಹ, ಕೆನ್ನೆ ಮತ್ತು ಕೇಶರಾಶಿಗೆ ಒಂದು ಕ್ಷಣ ಅಮರ ಮೈಮರೆತ; ಅವಳ ಮೈಗಂಧ ಮೂಗಿನಿಂದ ಹೊರಬಿಡುವ ಮನಸ್ಸಿಲ್ಲದೇ ಉಸಿರು ಹಿಡಿದೇ ನಿಂತ. ಕಾಲೇಜಿನಲ್ಲಿ ಒಟ್ಟಿಗಿದ್ದ ಐದೂವರೆ ವರ್ಷದಲ್ಲಿ ಒಂದೇ ಒಂದು ಸಲವೂ ಇಷ್ಟು ಸನಿಹ ಅವಳ ಹತ್ತಿರ ಬಂದಿರಲಿಲ್ಲ.
ಲಾಬಿಯಲ್ಲಿ ಮಗಳ ಜೊತೆ ಏನೋ ಮಾತಾಡುತ್ತ ಕುಳಿತ ಉಷಾ ಇದನ್ನು ಗಮನಿಸದೇ ಇರಲಿಲ್ಲ.
`ಹೇಗಿದ್ದೀಯಾ? ಯಾವಾಗ ಬಂದೆ? ನೀನು ಬರುತ್ತೀಯೋ ಇಲ್ಲವೋ ಅಂದುಕೊಂಡಿದ್ದೆ,` ಎಂದ.
`ನಾನು ಅಷ್ಟೇ. ನೀನಂತೂ ಯಾರ ಜೊತೆನಲ್ಲೂ ಸಂಪರ್ಕದಲ್ಲಿಲ್ಲ, ನೀನು ಬರುವುದಿಲ್ಲ ಎಂದೇ ತುಂಬ ಜನ ಹೇಳಿದ್ದರು. ಇನ್ ಫ್ಯಾಕ್ಟ್, ನಿನ್ನನ್ನು ನೋಡಿ ನನಗೆ ಆಶ್ಯರ್ಯವೇ ಆಯಿತು. ಏನೋ ಎಷ್ಟು ವರ್ಷವಾಯಿತೋ? ಎಷ್ಟೊಂದು ಮಾತಾಡಲು ಇದೆಯೋ?` ಎಂದಳು.
`ನೀನೊಬ್ಬಳೇ ಬಂದಿರುವೆಯೋ, ಇಲ್ಲಾ ಎಲ್ಲರೂ ಬಂದ್ದಿದ್ದೀರೋ?` ಎಂದು ಕೇಳಿದ.
`ಎಲ್ಲಾ ಬಂದ್ದಿದ್ದೇವೆ, ನೀನು?` ಎಂದಳು.
ಅದೇ ಸಮಯಕ್ಕೆ ಅವರತ್ತಲೇ ನಡೆದುಕೊಂಡು ಬರುತ್ತಿದ್ದ ಗಂಡಸು ಮತ್ತು ಹುಡುಗನನ್ನು.
`ಇವನು ನನ್ನ ಗಂಡ ರಾಜ್ ಮತ್ತು ಒಬ್ಬನೇ ಮಗ` ಎಂದು ಪರಿಚಯಿಸಿ, ಗಂಡನಿಗೆ, `ಇವನು ನನ್ನ ಕ್ಲಾಸ್‍ಮೇಟ್` ಎಂದು ಪರಸ್ಪರ ಪರಿಚಯ ಮಾಡಿದಳು.
ಅಮರ ಕೈಕುಲುಕಿ, `ಹಾಯ್, ನಾನು ಅಮರ ಚರಂತಿಮಠ, ನೈಸ್ ಮೀಟಿಂಗ್ ಯು, ರಾಜಶೇಖರ ಕೃಷ್ಣೇಗೌಡ,` ಎಂದ. ಅಮರನಿಗೆ ತನ್ನ ಗಂಡನ ಪೂರ್ತಿ ಹೆಸರು ನನಪಿರುವುದನ್ನು ಕೇಳಿ ಪ್ರೇಮಾ ಹುಬ್ಬೇರಿಸಿ ಅಮರನತ್ತ ನೋಡಿದಳು.
ರಾಜಶೇಖರ ಅವಕ್ಕಾಗಿ ಒಂದು ಕ್ಷಣ ಗಲಿಬಿಲಿಗೊಂಡಂತೆ ಕಂಡ, ತಕ್ಷಣವೇ ಸಾವರಿಸಿಕೊಂಡು, `ಹಾಯ್, ನೈಸ್ ಮೀಟಿಂಗ್ ಯು, ಅಮರ್` ಎಂದ. ಅಮರ ಅದನ್ನು ಗಮನಿಸದೇ ಇರಲಿಲ್ಲ.
ಲಾಬಿಯಲ್ಲಿ ಕೂತ ಉಷಾ ಈಗ ಮೈಯೆಲ್ಲ ಕಣ್ಣಾಗಿ ರಿಸೆಪ್ಷನ್ನಿನಲ್ಲಿ ನಡೆಯುತ್ತಿರುವುದನ್ನೆಲ್ಲ ನೋಡುತ್ತಿದ್ದಳು; ತನಗಿಂತ ವಯಸ್ಸಾದ ಹೆಂಗಸೊಂದು ಸಕಲ ಅಲಂಕಾರ ಭೂಷಿತೆಯಾಗಿ ಚಿಕ್ಕ ಹುಡುಗಿಯಂತೆ ಹಿಂದಿನಿಂದ ತನ್ನ ಗಂಡನ ಕಣ್ಣು ಮುಚ್ಚುವುದು, ಇಬ್ಬರೂ ತಬ್ಬಿಕೊಳ್ಳುವುದು, ಕಿಲಕಿಲ ನಗುವುದನ್ನು ನೋಡುತ್ತಲೇ ಇದ್ದಳು. ಅಮರ ಉಷಾಳನ್ನು ಕರೆದ. ಉಷಾ ಗಂಟು ಮುಖ ಹಾಕಿಕೊಂಡು ಮಗಳನ್ನು ಕರೆದುಕೊಂಡು ರಿಸೆಪ್ಷೆನ್ನಿಗೆ ಬಂದಳು.
ಪ್ರೇಮಾಳಿಗೆ ತನ್ನ ಹೆಂಡತಿಯ ಪರಿಚಯ ಮಾಡಿಸಿದ, `ಇವಳು ನನ್ನ ಹೆಂಡತಿ, ಉಷಾ, ಮತ್ತು ಮಗಳು ಪ್ರೇಮಾ,` ಎಂದ. ಪ್ರೇಮಾಳ ಮುಖದಲ್ಲಿ ಒಂದು ತೆಳುವಾದ ನಗು ಮೂಡಿ, ಅಮರನತ್ತ ಓರೆನೋಟ ಬೀರಿ, ಉಷಾಳ ಕೈ ಕುಲುಕಿದಳು. ಉಷಾ ಕೂಡ ಕೈಕುಲುಕಿ (ಕೃತಕವಾಗಿ) ಮುಗುಳ್ನಕ್ಕಳು. ಅವಳ ಆತ್ಮವಿಶ್ವಾಸ, ಚೆಲುವು, ನಿಲುವು, ಶೃಂಗಾರಗಳನ್ನು ನೋಡಿ ಈರ್ಷೆಯಾದರೂ ತೋರಿಸಿಕೊಳ್ಳಲಿಲ್ಲ.
ಅಮರ ಹೆಂಡತಿಯತ್ತ ತಿರುಗಿ, `ಇವರು ರಾಜಶೇಖರ ಕೃಷ್ಣೇಗೌಡ, ಅಮೇರಿಕದಲ್ಲಿ ಡಾಕ್ಟರು, ಇವಳು ಅವರ ಹೆಂಡತಿ, ನನ್ನ ಕ್ಲಾಸ್-ಮೇಟ್,` ಎಂದ.
ಪ್ರೇಮಾ ಕೈ ಚಾಚಿ ಉಷಾಳ ಕೈ ಕುಲುಕಿ ಹತ್ತಿರ ಬಂದು ತಬ್ಬಿಕೊಂಡು, ‘ನಾನು ಪ್ರೇಮಾ,’ ಎಂದಳು.
ಇಬ್ಬರು `ಪ್ರೇಮಾ`ರ ನಡುವೆ ನಿಂತ ಉಷಾಳ ಮುಖದ ಬಣ್ಣವೇ ಬದಲಾಯಿತು. ಒಂದು ಕ್ಷಣ ತನ್ನ ಮಗಳು ‘ಪ್ರೇಮಾ’ನ್ನೂ ಇನ್ನೊಂದು ಕ್ಷಣ ಅಮರನ ಕ್ಲಾಸ್‍ಮೇಟ್ ‘ಪ್ರೇಮಾ’ಳನ್ನೂ ನೋಡಿದಳು.
ನಂತರ ಏನು ಮಾಡುವುದೆಂದು ತೋಚದೇ, ತನಗಾದ ಆಘಾತವನ್ನು ಮುಚ್ಚಿಕೊಳ್ಳಲು ಕಣ್ಣು ತಿರುಗಿಸಿದಾಗ, ಅವಳ ದೃಷ್ಟಿ ಅಪ್ಪನ ಕೈಹಿಡಿದು ನಿಂತಿದ್ದ ಪ್ರೇಮಾಳ ಮಗನ ಮೇಲೆ ಬಿತ್ತು. ತನ್ನನ್ನು ಸ್ಥಿಮಿತಕ್ಕೆ ತಂದುಕೊಳ್ಳಲು, ಒಣಗಿಹೋದ ತುಟಿಯಲ್ಲೇ ಹುಡುಗನ ಕೆನ್ನೆ ಸವರಿ `ಎಷ್ಟು ಕ್ಯೂಟಾಗಿದ್ದಾನೆ ನಿಮ್ಮ ಮಗ‘, ಎಂದು, ‘ಏನು ಮರಿ ನಿನ್ನ ಹೆಸರು?` ಎಂದು ಕೇಳಿದಳು.
ಹುಡುಗ ಹೇಳಿದ, `ಅಮರ್`.
(ಮುಗಿಯಿತು)
Nice ending, enjoyed reading the story. Please write more stories like this
LikeLike
Shavige PURANA beautifuly documented by Yogindra Maravante.
LikeLike
ಸಂಕ್ರಾಂತಿಗೆ ಬೋನಸ್ ಸಂಚಿಕೆ ಕೊಟ್ಟ ಗೌರಿಯವರಿಗೆ ಧನ್ಯವಾದ.
ವಿಶೇಷದ ನೆಂಟರು ಬಂದಾಗ ಶ್ಯಾವಿಗೆ ಒತ್ತುವುದು ನಮ್ಮಲ್ಲಿಯ ವಾಡಿಕೆ. ಇಂಥ ವಿಶೇಷ ಖಾದ್ಯದ ಗರ್ಭಧಾರಣೆಯಿಂದ (ಶ್ಯಾವಿಗೆಯು ಅಮ್ಮನ ಹುಡುಕಾಟದಿಂದಲೇ ಎಂದು ಹೇಳಬಹುದು) ಮಾನವನ ಜಿಹ್ವೆಯ ಮೇಲೆ ಕೊನೆಯುಸಿರೆಳೆಯುವರೆಗಿನ ಜೀವ ಚಕ್ರವನ್ನು ಯೋಗೀಂದ್ರ ರಸವತ್ತಾಗಿ ತೆರೆದಿಟ್ಟಿದ್ದಾರೆ. ಈ ಪ್ರಂಬಂಧ ಬಾಲ್ಯದ ನೆನಪಿನ ಸುರುಳಿಯನ್ನು ಬಿಚ್ಚಿಟ್ಟಿದೆ. ಶಬ್ದಗಳಲ್ಲೇ ಶ್ಯಾವಿಗೆಯ ತಂತುಗಳನ್ನು ಆಸ್ವಾದಿಸಬಹುದು.
‘ಅಮರ ಪ್ರೇಮ’ ಕೊನೆಯಲ್ಲಿ ಕೊಂಡಿ ಇರುವ, ಮರೆಯಲ್ಲೇ ಅಡಗಿದ ಪ್ರೇಮಿಗಳ ಭಗ್ನಪ್ರೇಮದ ಕಥೆಯಾಗಿ ಕೊನೆಗೊಂಡಿಲ್ಲ. ಹಿಂದೆ, ದೇಸಾಯಿಯವರು ಹೇಳಿದಂತೆ ನಮ್ಮ ಸಮಾಜಕ್ಕೆ, ಮದುವೆ ವ್ಯವಸ್ಥೆಗೆ ಹಿಡಿದ ಕೈಗನ್ನಡಿ. ಕಥೆಯಲ್ಲಿ ಸರಾಗವಾಗಿ ಓದಿಸಿಕೊಂಡು ಹೋಗುವ ಲಾಲಿತ್ಯವಿದೆ. ನಮ್ಮ ಬದುಕಿನಲ್ಲೇ ಆಗಿ ಹೋಗುವ ಘಟನೆಗಳೊಂದಿಗೆ ತಾಕಲಾಡುವ ಪಾತ್ರಗಳು, ಭಾವನೆಗಳು, ದೃಶ್ಯಗಳು ನೈಜತೆ ಕೊಡುತ್ತಲೇ ಕಥೆ ಅಪ್ಯಾಯಮಾನವಾಗುತ್ತವೆ. ಉತ್ತಮ ನೀಳ್ಗತೆ ಕೊಟ್ಟ ಕೇಶವ್ ಗೆ ಧನ್ಯವಾದಗಳು. ಇನ್ನೂ ಚಿಪ್ಪಿನಲ್ಲಡಗಿರುವ ಮುತ್ತುಗಳ ನಿರೀಕ್ಷೆಯಲ್ಲಿದ್ದೇನೆ
– ರಾಂ
LikeLike
Teenage crush ಅನುಭವ ಬಹುಶಃ ಎಲ್ಲರೂ ಅನುಭವಿಸಿರುವ ಸಾಧ್ಯತೆ ಇರುತ್ತದೆ. ಅದರಲ್ಲೂ ವೈದ್ಯಕೀಯ ವಿದ್ಯಾಭ್ಯಾಸದಲ್ಲಿ ಸಾಮೀಪ್ಯದ ಅವಕಾಶ ಇನ್ನು ಹೆಚ್ಚು ಎಂದು ಹೇಳಬಹುದು. ಈ ರೀತಿಯ ಪ್ರಸಂಗಗಳನ್ನು ಪ್ರತ್ಯಕ್ಷವಾಗಿ ಅಥವಾ ಇನ್ನೊಬ್ಬರ ಗಾಸ್ಸಿಪಿನಿಂದ ಕೇಳಿರುತ್ತೇವೆ. ಈ Crush ಮುಂದಿನ ಹಂತಕ್ಕೆ ಬೆಳೆದು ಮದುವೇ ಸಂಸಾರದಲ್ಲಿ ಮುಕ್ತಯಗೊಳ್ಳ ಬಹುದು. ಇಲ್ಲವೇ ಮನಸ್ಸಿನಲ್ಲಿ ಇದದ್ದು ನಾಲಿಗೆಗೆ ಬರೆದೇ ಅಲ್ಲೇ ಮುರುಟಿಕೊಳ್ಳಬಹುದು. ಪ್ರೀತಿ ಚಿಗುರೊಡೆದರೂ ನಮ್ಮ ಸಮಾಜದ Arranged marriage ವ್ಯವಸ್ಥೆಯಿಂದ ಭಗ್ನ ಗೊಳ್ಳಬಹುದು. ದೇಹ ಮತ್ತು ಮನಸ್ಸು ಬೇರ್ಪಟ್ಟರು, ಸಾವಿರಾರು ಮೈಲಿ ದೂರವಿದ್ದರೂ ಆ ಹೃದಯಗಳು ತುಡಿಯುತ್ತಲೇ ಇರುತ್ತವೆ, ಪ್ರೇಮದ ಆ ಗುಪ್ತಗಾಮಿನಿ ನಿರಂತರವಾಗಿ ಹರಿಯುತ್ತದೆ ಎಂಬುದನ್ನು ಕೇಶವ್ ಅವರು ತಮ್ಮ ಅಮರ ಪ್ರೇಮ ಕಥೆಯಲ್ಲಿ ಬಹಳ subtle ಆಗಿ ಚಿತ್ರಿಸಿದ್ದಾರೆ. ಇಲ್ಲಿ ಕಾತರತೆ ಇದೆ ಭಾವನೆಗಳ ಅಬ್ಬರವಿಲ್ಲ, ಕುತೂಹಲವಿದೆ ವಿರಹದ ನೋವಿಲ್ಲ, ಬದುಕನ್ನು ಯಥಾವತ್ತಾಗಿ ಒಪ್ಪಿಕೊಳ್ಳುವ ಮನಸ್ಸುಗಳಿವೆ, ಮದುವೇ ಎಂಬ ವ್ಯವಸ್ಥೆಗೆ ಗೌರವವಿದೆ. ಕಥೆ ಸರಳವಾಗಿ ನೈಜತೆ ಇದೆ. ಇಂಗ್ಲಿಷ್ ಲೇಖಕರ ಒಂದು sensitivities, refinement ಕೇಶವ ಅವರ ಈ ಕಥೆಯಲ್ಲಿದೆ. ಅಭಿನಂದನೆಗಳು ಕೇಶವ್ ನಿಮ್ಮ ಕಥಾ ಸಂಕಲನಕ್ಕೆ ಇನ್ನೊಂದು ನವಿಲುಗರಿ.
ಯೋಗಿಂದ್ರ ಮರವಂತೆ ಅವರು ಉತ್ತಮ ಪ್ರಬಂಧಕಾರರು, ಈಗಾಗಲೇ ಪ್ರಬಂಧ ಸಂಕಲಗಳನ್ನು ಪ್ರಕಟಿಸಿದವರು. ಯಾವುದೇ ಸಾಧಾರಣ ವಿಷಯವನ್ನು ಕೂಡ ಕೈಗೆತ್ತಿಕೊಂಡು ಹಿನ್ನಲೆ ಮಾಹಿತಿಗಳನ್ನು ಗ್ರಹಿಸಿ ಓದುಗರ ಆಸಕ್ತಿಯನ್ನು ಹಿಡಿಯಬಲ್ಲ ಸಾಮರ್ಥ್ಯ ಅವರಿಗಿದೆ. ಟೆಸ್ಕೋ ಸೂಪರ್ ಮಾರ್ಕೆಟ್ಟಿನಲ್ಲಿ ರೆಡಿ ಶಾವಿಗೆ ತಂದು ಐದು ನಿಮಿಷದಲ್ಲಿ ವಗ್ಗರಣೆ ಹಾಕಿ ಶಾವಿಗೆ ತಿನ್ನುವ ನನ್ನಂಥವರಿಗೆ ಶಾವಿಗೆಯ ಉತ್ಕೃಷ್ಟ ಪರಂಪರೆಯನ್ನು ಪರಿಚಯಿಸಿದ್ದಾರೆ.
LikeLike
Very interesting story. Ends with lot of speculations. Beginning of 3rd part creates so much curiosity about end of the story. All in all enjoyed the writing with keen interest. Hope to read new story soon.
LikeLike
Thank you very much, Prakash sir. With your encouraging words, will write more.
LikeLike
Really enjoyed the story Keshav, especially the end. entaha viparyaasa!!!
LikeLike
Thank you so much!
LikeLike