ಬಾಲ್ಯದ ನೆನಪುಗಳು – ‘ಬಾಲ್ಯದ ಬೆಳದಿಂಗಳು’ ರಾಧಿಕಾ ಜೋಶಿ ಹಾಗೂ ‘ನನ್ನ ಬಾಲ್ಯದ ಕಥೆಗಾರರು’ ಲಕ್ಷ್ಮೀನಾರಾಯಣ ಗುಡೂರ

ಪ್ರಿಯರೇ, ಚಿಕ್ಕಂದಿನ ದಿನಗಳಲ್ಲಿ ಕಟ್ಟಿಕೊಂಡ ಅನುಭವಗಳ ಬುತ್ತಿ ಕರಗದಂಥದ್ದು. ಅದು ಸಿಹಿ, ಕಹಿ, ಹುಳಿ, ಉಪ್ಪು, ಖಾರ ಎಂಥದ್ದೇ ಇರಲಿ, ಅದರ ರುಚಿ ಬಾಯಲ್ಲಿ ಕೊನೆಯವರೆಗೂ ಉಳಿಯುವುದು ಖಂಡಿತ. ನೀವು ಕೇಳಿರಬಹುದು ಈ ಗಝಲ್, ಜಗಜಿತ ಸಿಂಗ್ ಹಾಡಿರೋದು, “ಯಹ್ ದೌಲತ್ ಭೀ ಲೇಲೋ, ಯಹ್ ಶೋಹೊರತ್ ಭೀ ಲೇಲೋ, ಮಗರ್ ಮುಝ ಕೋ ಲೌಟಾದೋ ಬಚಪನ ಕಾ ಸಾವನ್; ವೋ ಕಾಗಜ ಕಿ ಕಷ್ತಿ ವೋ ಬಾರಿಶ್ ಕಾ ಪಾನಿ” .. ಆ ರೀತಿ ಎಷ್ಟು ಬೇಡಿಕೊಂಡರೂ ಬಾಲ್ಯ ತಿರುಗಿ ಬಾರದೆನ್ನುವುದೇನೋ ನಿಜ. ಆದರೆ, ಆ ನೆನಪುಗಳನ್ನ ಮತ್ತೆ ಮನಸ್ಸಿನ ಅಟ್ಟದಿಂದ ಕೆಳಗಿಳಿಸಿ, ಧೂಳು ಝಾಡಿಸಿ ಒಂದೊಂದಾಗಿ ತೆಗೆದು, ನೋಡಿ ನಕ್ಕು, ನಗುತ್ತಾ ತೆಗೆದಿಟ್ಟದ್ದನ್ನ ಜೊತೆಯವರೊಂದಿಗೆ ಹಂಚಿಕೊಂಡು ಮೆಲುಕು ಹಾಕುವುದಿದೆಯಲ್ಲ, ಅದು ಮಜಾ! ಈ ವಿಚಾರ ಮಾಡಿಯೇ ನನ್ನ ಮುಂಚಿನ ಸಂಪಾದಕಿ ಶ್ರೀಮತಿ ದಾಕ್ಷಾಯಣಿ ಗೌಡ ಅವರು ಹಾಕಿಟ್ಟ ಪಾಯದ ಮೇಲೆ ಕಟ್ಟಿದ ಮೊದಲ ಎರಡು ಲೇಖನಗಳು – ರಾಧಿಕಾ ಜೋಶಿಯವರು ನೋಡಿದ “ಬಾಲ್ಯದ ಬೆಳದಿಂಗಳು” ಮತ್ತು ನಾನು (ಲನಾ ಗುಡೂರ) ಕೇಳಿದ “ನನ್ನ ಬಾಲ್ಯದ ಕಥೆಗಾರರು”. ಎಂದಿನಂತೆ ಓದಿ, ನಿಮ್ಮ ಅಭಿಪ್ರಾಯ ತಿಳಿಸಿ; ನಿಮ್ಮ ಬುತ್ತಿಯಲ್ಲೇನಾದರೂ ಹಂಚಿಕೊಳ್ಳುವಂಥದು ಇದ್ದರೆ, e-ಪೇಪರೆತ್ತಿಕೊಂಡು ಪೊಟ್ಟಣ ಕಟ್ಟಿ ಹಂಚಿ ಮತ್ತೆ! – ಎಲ್ಲೆನ್ ಗುಡೂರ (ಸಂ.)

ಬಾಲ್ಯದ ಬೆಳದಿಂಗಳು – ರಾಧಿಕಾ ಜೋಶಿ

ಚಿತ್ರ ಕೃಪೆ: ಗೂಗಲ್

ಬಾಲ್ಯದ ಬಗ್ಗೆ ನೆನಪುಗಳು ನನ್ನ ಜೀವನದ ಉತ್ತಮವಾದ ಹಾಗು ಈಗಿನ ಜೀವನ ಶೈಲಿಯನ್ನು ರೂಪಿಸುವಲ್ಲಿ ಮಹತ್ತಾದ ಪಾತ್ರ ವಹಿಸಿವೆ. ಎಲ್ಲರಂತೆ ನನ್ನ ಬಾಲ್ಯವೂ ಹಿತಕರವಾಗಿ ಹಾಗು ಆರೋಗ್ಯಕರವಾಗಿ ಇತ್ತು. ಟಿವಿ, ಮೊಬೈಲ್ ಫೋನ್, ಕಂಪ್ಯೂಟ ಇಲ್ಲದ ಜಗತ್ತು ನಮ್ಮ ಮಕ್ಕಳ ಬಾಲ್ಯದ ಜೀವನಕ್ಕಿಂತ ಉತ್ತಮವೆಂದು ದಿನನಿತ್ಯ ಅನಿಸುತ್ತದೆ. ಆದರೆ ಕೆಲವೊಂದು ವಿಷಯಗಳು ಪೀಳಿಗೆಯಿಂದ ಪೀಳಿಗೆಗೆ ಬದಲಾಗುವಂತೆ, ಬದಲಾವಣೆ ನಮ್ಮಲ್ಲಿ ಉತ್ತಮ ವ್ಯಕ್ತಿತ್ವ ಮೂಡಿಸುವಲ್ಲಿ ಸಹಾಯ ಮಾಡುತ್ತದೆ.

ಹುಟ್ಟಿದ್ದು ಹುಬ್ಬಳ್ಳಿಯಲ್ಲಾದರೂ, ನನ್ನ ಸಂಪೂರ್ಣ ಬಾಲ್ಯ ಹಾಗು ವಿದ್ಯಾಭ್ಯಾಸ ಎಲ್ಲವು ವೈಭವಯುತ ಮೈಸೂರಿನಲ್ಲಿ. ನನ್ನ ಅದೃಷ್ಟವೋ ಅವಕಾಶವೋ ಗೊತ್ತಿಲ್ಲ, ಮೈಸೂರಿನಂತಹ ಸಾಂಪ್ರದಾಯಿಕ ಹಾಗು ಪ್ರಗತಿಶೀಲ ನಗರಲ್ಲಿ ನನ್ನ ಬೆಳೆವಣಿಗೆಯ ೨೩ ವರ್ಷಗಳು ಇದ್ದದ್ದು ಒಂದು ಅಮೂಲ್ಯವಾದ ಅಂಶ.

ತಂದೆಯದು ಸರ್ಕಾರೀ ನೌಕರಿ. ಮಧ್ಯಮ ವರ್ಗದ ಪರಿವಾರದಲ್ಲಿ ಇದ್ದ ನಮಗೆ ಮೈಸೂರಿನಲ್ಲಿ ನಮ್ಮ ಸಂಬಂಧಿಕರು ಅಂತ ಯಾರೂ ಇರದಿದ್ದ ಕಾರಣ, ನಮ್ಮ ಅಕ್ಕ ಪಕ್ಕದ ಮನೆಯವರು ಮತ್ತು ನಮ್ಮ ತಂದೆ ವರ್ಷಗಳಿಂದ ಸಂಪಾದಿಸಿದ ಸ್ನೇಹಿತರ ಗುಂಪೇ ನಮ್ಮ ನೆಂಟರಿಷ್ಟರು. ಮನೆಯೊಳಗೆ ಉತ್ತರ ಕರ್ನಾಟಕ ಭಾಷೆ ಹಾಗು ಅಡುಗೆ. ಹೊರಗೆ ಕಾಲಿಟ್ಟ ತಕ್ಷಣ ಮೈಸೂರಿನ ಸೊಗಸಾದ ಕನ್ನಡ ಹಾಗೂ ಅಕ್ಕ-ಪಕ್ಕದ ಮನೆಯವರ ರುಚಿಯಾದ ಬಿಟ್ಟಿ ಕವಳದ (ನನ್ನ ತಾಯಿ ನನ್ನ ಆಡಿಕೊಳ್ಳತಾಯಿದ್ರು ‘ನೀನು ಹೊರಗೆ ಆಟಕ್ಕೆ ಹೋದರೆ ಯಾರದಾದರೂ ಮನೇಲಿ ಊಟ ಮಾಡತಿದ್ದೆ’) ಆನಂದ.

ನಮಗೆ ಬೇಸಿಗೆಯ ರಜೆಯಲ್ಲಿ ಅಜ್ಜಿ ಮನೆಯಾದ ಹುಬ್ಬಳ್ಳಿ, ಮೌಶಿಯಂದಿರ ಊರಾದ ಶಿಗ್ಗಾವಿ, ಗದುಗ, ಧಾರ್ವಾಡ ಹೀಗೆ ಹಲವು ಊರುಗಳ ಪರ್ಯಟನೆ ಆಗುತಿತ್ತು. ನಮ್ಮ ಸೋದರಸಂಬಂಧಿ ಅಕ್ಕ ಅಣ್ಣರೊಂದಿಗೆ ಒಂದು ತಿಂಗಳು ಹೇಗೆ ಕಳೆಯುತಿದ್ವಿ ಗೊತ್ತೇ ಆಗುತ್ತಿರಲಿಲ್ಲ.

ನಾನು ಈ ಕೆಳಗೆ ಬರೆಯುವ ವಿಷಯ ಕೇವಲ ನನ್ನ ಸುತ್ತಮುತ್ತಲಿನ ಸಹೋದರ ಸಂಬಂದಿಯಲ್ಲಿ ಹಾಗು ಅವರ ಗೆಳೆಯೆರ ಗುಂಪಿನಲ್ಲಿ ಕಂಡಂತಹ ವಿಷಯ. ತಮ್ಮದೇ ಮಾರ್ಗ ಸೃಷ್ಟಿಸಿಕೊಂಡು, ಶ್ರಮಪಟ್ಟ ತಂದೆ ತಾಯಿ ವಿರುದ್ಧ ಹೋಗಿ ಭವಿಷ್ಯ ರೂಪಿಸಿಕೊಂಡ ಜನರೂ ಇದ್ದಾರೆ (ಅದು ನನಗೆ ದೊಡ್ಡವಳಾದ ಮೇಲೆ ತಿಳಿಯಿತು). ಹೀಗಾಗಿ ದಯವಿಟ್ಟು ಇದನ್ನು ಬೇರೆ ಯಾವ ಅರ್ಥದಲ್ಲಿ ತಿಳಿಯದಿರಿ.

ಮೈಸೂರಿನಲ್ಲಿ ನಾವು ವಿದ್ಯಾಭ್ಯಾಸ ಹಾಗು ಸಂಗೀತ – ನೃತ್ಯದ ಮೇಲೆ ಹೆಚ್ಚು ಗಮನ ಕೊಟ್ರೆ, ಹುಬ್ಬಳ್ಳಿ, ಬಾಗಲಕೋಟೆ ಅಂತಹ ಊರುಗಳಲ್ಲಿ ಶಾಲಾ ಮಟ್ಟದ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ. ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಪೂರ್ಣಗೊಳಿಸುವ ಶಿಕ್ಷಣ ಮನೆಯಲ್ಲಿ ಕೊಟ್ಟರೂ ಅದನ್ನು ವೃತ್ತಿ ರೂಪಕ್ಕೆ ಪರಿವರ್ತಿಸುವ ಅವಕಾಶ ಕಡಿಮೆ. ವೈದ್ಯಕೀಯ ವೃತ್ತಿಯ ಹೊರತಾಗಿ, ನಾವು ನೋಡಿದ ನಮ್ಮ ಸಂಬಂಧಿಕರಲ್ಲಿ ಹೆಚ್ಚಾಗಿ ಎಲ್ಲಾ ಹೆಣ್ಣು ಮಕ್ಕಳಲ್ಲಿ ವೃತ್ತಿಪರ ಮಹತ್ವಾಕಾಂಕ್ಷೆ ಕಂಡದ್ದು ಕಡಿಮೆ. ಕೆಲವರಿಗೆ ಸಂಗೀತದಲ್ಲಿ ಆಸಕ್ತಿ, ಮತ್ತೊಬ್ಬರಿಗೆ ಕ್ರೀಡೆಯನ್ನು ವೃತ್ತಿಯನ್ನಾಗಿಸಬೇಕೆಂಬ ಆಸೆ ಆದರೆ, ನಮ್ಮ ಜಾತಿ ಅಡ್ಡವಾಯಿತೋ ಅಥವಾ ಸಂಪ್ರದಾಯವೋ ಗೊತ್ತಿಲ್ಲ! ಮೈಸೂರಿನಲ್ಲಿ  (ಬೆಂಗಳೂರು) ಬೆಳೆದ ಮಕ್ಕಳಲ್ಲಿ ಛಾತಿ, ಅದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಹೆಚ್ಚು ಕಂಡುಬಂದಿತು.

ನಮ್ಮ ಬ್ರಾಹ್ಮಣ ಜಾತಿಯಲ್ಲಿ ಹೆಣ್ಣು ಮಕ್ಕಳಿಗೆ ಎಷ್ಟೆಲ್ಲಾ ವಿದ್ಯಾಭ್ಯಾಸ ಕೊಟ್ಟು, ಎಲ್ಲಾ ಸಂಸ್ಕಾರವನ್ನು ಕೊಡುವಾಗ ಒಳ್ಳೆಯ ಗೃಹಿಣಿ ಆಗಬೇಕೆಂಬ ಅಂಶವನ್ನು ಅಧಿಕವಾಗಿ ನಮ್ಮಲ್ಲಿ ಬಿತ್ತುತ್ತಾರೆ. ಪ್ರತಿಭೆ ಹಾಗು ಜಾಣ್ಮೆಗೆ ಶಭಾಷಿ ಕೊಟ್ಟರೂ ಅದನ್ನು ಪ್ರೋತ್ಸಾಹಿಸುತ್ತಿರಲಿಲ್ಲ. ಮನೆ ನಡೆಸುವುದು ಸುಲಭವಲ್ಲ. ಒಳ್ಳೆ ಗೃಹಿಣಿಯಾಗಿ, ಒಳ್ಳೆ ತಾಯಿಯಾಗಿ, ಎಲ್ಲವನ್ನು ನಯವಾಗಿ ನಿಭಾಯಿಸುವುದು ಎಲ್ಲಕಿಂತ ಕಷ್ಟದ ಕೆಲಸ. ಆದರೆ ಅವಕಾಶ ಸಿಕ್ಕಾಗ ನಮ್ಮ ಕನಸು ಆಸೆಯನ್ನು ಪೂರ್ಣಗೊಳಿಸುವ ಸಮಯ ಬಂದಾಗ ಹಿಂದೇಟು ಹಾಕುತ್ತೀವಿ.

ನನ್ನ ಅದೃಷ್ಟ ಏನಂದರೆ ನನ್ನ ತಂದೆ ತಾಯಿ ಹುಬ್ಬಳ್ಳಿಯವರಾದರೂ ಇಬ್ಬರು ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಹಾಗು ಮೈಸೂರಿನ ಜೀವನ ಶೈಲಿಯನ್ನು ಮೆಚ್ಚಿ ಅಲ್ಲಿಯೇ ಉಳಿದು ನಮ್ಮ ಮೇಲೆ ತಮ್ಮ ಎಲ್ಲಾ ಗಮನವನ್ನು ಇಟ್ಟು ನಮ್ಮನ್ನು ಕೇವಲ ಪದವೀಧರನ್ನಾಗಿ ಸೀಮಿತ ಮಾಡದೇ ಅದನ್ನು ವೃತ್ತಿಯನ್ನಾಗಿ ಪರಿವರ್ತಿಸಲು ಪ್ರಯತ್ನ ಪಟ್ಟರೂ. ನಮ್ಮಲ್ಲಿನ ಆತ್ಮವಿಶ್ವಾಸ ಕುಗ್ಗದಂತೆ ಉಳಿಯುವ ಸಂಸ್ಕಾರ ಕೊಟ್ಟ ನಮ್ಮ ತಂದೆ-ತಾಯಿಯಂಥವರು ಬಹಳ ವಿರಳ. ಈ ಅದೃಷ್ಟ ನನ್ನ ಸಂಬಂಧಿಕರಲ್ಲಿ ಕಂಡುಬರಲಿಲ್ಲ. ಆದರೆ ಈಗ ಜಗತ್ತು ಬದಲಾಗುತ್ತಿದೆ, ಎಲ್ಲೆಡೆ ಮಕ್ಕಳ ಪ್ರತಿಭೆ ಹಾಗು ಜಾಣ್ಮೆಯನ್ನು ಗುರುತಿಸಿ ಅವರಿಗೆ ಸರಿಯಾದ ಪ್ರೋತ್ಸಾಹ ನೀಡಲಾಗುತ್ತಿದೆ.

ಚಂದ್ರನಂತಿರುವ ಪ್ರತಿಯೊಬ್ಬ ಮಗುವಿನಲ್ಲೂ ಇರುವ ಪ್ರತಿಭೆಯನ್ನು ಕೇವಲ ಇರುಳಿಗೆ ಸೀಮಿತವಾಗಿಸದೇ ಬೆಳದಿಂಗಳಿನ ಕಾಂತಿಯಂತೆ ಎಲ್ಲೆಡೆ ಹರಡಲು ಅವಕಾಶ ಮಾಡಿಕೊಟ್ಟರೆ ಎಷ್ಟು ಸುಂದರ!

– ರಾಧಿಕಾ ಜೋಶಿ

ನನ್ನ ಬಾಲ್ಯದ ಕಥೆಗಾರರು – ಲಕ್ಷ್ಮೀನಾರಾಯಣ ಗುಡೂರ

ಕಥೆ ಕೇಳುವವರಿಗೆ ಎಷ್ಟು ಆಸಕ್ತಿ ಇರಬೇಕೋ, ಹೇಳುವವರಿಗೂ ಅಷ್ಟೇ ಹೇಳುವ ಹುಮ್ಮಸ್ಸು ಇರಬೇಕು. ಇಲ್ಲದಿದ್ದರೆ ಕಥೆಯ ಸ್ವಾರಸ್ಯವೇ ಹಾಳಾಗಿ ಹೋಗಿಬಿಡುತ್ತದೆ, ಕೇಳಿದರೂ ಪ್ರಯೋಜನವಿಲ್ಲ.  ಒಂದು ನುಡಿಗಟ್ಟಿದೆ, ಯಾವಾಗಲೋ ಕೇಳಿದ್ದು ‘there are no boring subjects; there are boring teachers’; ಇದನ್ನು ಕಥೆಗಳಿಗೂ ಅನ್ವಯಿಸಬಹುದು.  ಜನಮೇಜಯನಿಗೆ ಕಥೆ ಹೇಳಿದ ಸೂತ ಪುರಾಣಿಕರಂತಹವರಿದ್ದರೆ, ಕೂತು ಲಕ್ಷ ಶ್ಲೋಕಗಳ ಮಹಾಭಾರತವನ್ನೂ ಕೇಳಬಹುದು.  ಇಲ್ಲದಿದ್ದರೆ, ಐದು ನಿಮಿಷಕ್ಕೆ ಮುಖ ಮುಚ್ಚಿಯೋ, ಆ ಕಡೆ ನೋಡಿಯೋ ಆಕಳಿಸುವ ಪರಿಸ್ಥಿತಿ ಬರುತ್ತದೆ, ಅಷ್ಟೇ!

ಕಥೆ ಹೇಳುವುದು ನನಗೆ ಮುಂಚಿನಿಂದಲೂ ಇಷ್ಟವಾದದ್ದು.  ಶಾಲೆಯಲ್ಲಿದ್ದಾಗ ನನ್ನ ಸಹಪಾಠಿಗಳಿಗೆ ನನ್ನ ಕಥೆ ಹೇಳುವ ರೀತಿ ಸಾಕಷ್ಟು ಇಷ್ಟವಿದ್ದು, ಯಾವುದಾದರೂ ಪಿರಿಯಡ್ ಖಾಲಿ ಇದ್ದರಾಯಿತು, ಅದು ನನ್ನ ಕಥೆಯ ಕ್ಲಾಸ್ ಆಗಿಬಿಡುತ್ತಿತ್ತು.  ಈಗಲೂ ಮನೆಯಲ್ಲಿ ಮಕ್ಕಳಿಗೆ ಕಥೆ ಹೇಳುವುದು ನನ್ನ ಕೆಲಸವೇ.

ಈ ನನ್ನ ಕಥೆ ಹೇಳುವ ಹುಚ್ಚಿಗೆ ಕಾರಣಕರ್ತರು ಕೆಲವರಿದ್ದಾರೆ.  ಅವರನ್ನು ನೆನೆಯುವುದೇ ಈ ಬರಹದ ಉದ್ದೇಶ.  ಕಥೆ ಹೇಳಲು ಒಂಚೂರೂ ಬಾರದವರು ಮಾಡಿದ ಕಥೆಗಳ ಕೊಲೆಯನ್ನೂ ಸಂಕಟಪಟ್ಟು ಸಹಿಸಿದ್ದೇನೆ, ಆದರೆ ಆ ಮಹಾನುಭಾವರನ್ನ ಅಲ್ಲ ನಾನಿಲ್ಲಿ ನೆನೆಯುತ್ತಿರುವುದು.    

ನನಗೆ ನೆನಪಿರುವ ಮೊದಲ ಕಥೆಗಾರ ನನ್ನ ಬಾಲ್ಯದ ಗೆಳೆಯ ಗುಂಡಪ್ಪ, ಈಗ ಎಲ್ಲಿದ್ದಾನೋ ಗೊತ್ತಿಲ್ಲ.  ಒಂದು ಹತ್ತು ನಿಮಿಷ ಖಾಲಿ ಕೂತರೆ ಸಾಕು, ಗುಂಡಪ್ಪನ ಕಥಾಲಹರಿ ಹರಿಯಲು ಶುರು.  ಒಮ್ಮೆ ಶುರುವಾಯಿತೆಂದರೆ ನಿಲ್ಲಿಸುವುದು ಕಷ್ಟ, ವಾಶರ ಕೆಟ್ಟು ಹೋದ ನಲ್ಲಿಯಂತೆ.  ಅವನ ಕಥೆಗಳೋ, ಸುಳ್ಳು-ಬಳ್ಳು ಹೆಣೆದವು – ಆದಿ-ಅಂತ್ಯಗಳಿಲ್ಲದವು!  ಅವನ ಒಂದು ಕಥೆ ವಾರಗಟ್ಟಲೆ ಸಾಗಿದ್ದಲ್ಲದೇ, ಅದರಲ್ಲಿ ಡಾ|| ರಾಜಕುಮಾರ, ವಿಷ್ಣುವರ್ಧನ್ ಇತ್ಯಾದಿ ಕನ್ನಡ ಸಿನಿಮಾದ ದಿಗ್ಗಜರು ಮಾತ್ರವಲ್ಲ, ಅಕ್ಕ-ಪಕ್ಕದ ಓಣಿಯ ಹುಡುಗ-ಹುಡುಗಿಯರೂ, ಶೇಂಗಾ – ಪುಠಾಣಿ ಇತ್ಯಾದಿ ವಿಚಿತ್ರ ನಾಮಧೇಯಗಳುಳ್ಳ ಪಾತ್ರಗಳೂ ಬಂದು ಹೋಗುವಂಥ 12 ತಾಸಿನ ಹಳೆಯ ಕಾಲದ ತಮಿಳು ಸಿನಿಮದಂತಹವು.  ಕೊನೆ ಕೊನೆಗೆ ಯಾರಿಗೆ ಎಲ್ಲಿ ಏನಾಗುತ್ತಿದೆ ಅನ್ನುವದೆಲ್ಲ ಕಲಿತು ಕಲಗಚ್ಚಾಗುವ ಹೊತ್ತಿಗೆ, ಅಮ್ಮನೋ ಅಪ್ಪನೋ ನಮ್ಮ ಹೆಸರು ಹಿಡಿದು ಕೂಗಿ, ಗಜೇಂದ್ರ ಮೋಕ್ಷದ ವಿಷ್ಣುವಿನಂತೆ ಬಂದು ಕಾಪಾಡುತ್ತಿದ್ದರೆನ್ನಿ!

ಅಲ್ಲಿಂದ ಮುಂದಿನವರೆಲ್ಲ, ನನ್ನ ತುಂಬಾ ಇಷ್ಟದ ಕಥೆಗಾರರು. ಕೇಳಿ 40 ವರ್ಷವಾದರೂ, ಹೇಳಿದ ಪಾತ್ರಗಳ, ಸನ್ನಿವೇಶಗಳ ಚಿತ್ರಣ ಇನ್ನೂ ಕಲರ್ ಸಿನಿಮದಂತೆ ನನ್ನ ಕಣ್ಣ ಮುಂದಿದೆ.  ಆಗಾಗ್ಗೆ ನಮ್ಮಲ್ಲಿಗೆ ಬಂದು ಹೋಗುತ್ತಿದ್ದ ನಮ್ಮ ಆಚಾರು ತಾತ (ಅಮ್ಮನ ಅಪ್ಪ) ಅಲ್ಲದೆ, ವರ್ಷಕ್ಕೊಮ್ಮೆ ನಮ್ಮೂರಿಗೆ (ಆಗ ನಮ್ಮಪ್ಪ ಪೋಸ್ಟ್ ಮಾಸ್ಟರ್ ಆಗಿದ್ದ ಊರು, ಗಂಗಾವತಿ) ಪುರಾಣ, ಹರಿಕಥೆ ಹೇಳಲು ಬರುತ್ತಿದ್ದವರು ನನಗೆ ಮಹಾಭಾರತ, ಭಾಗವತ ಇತ್ಯಾದಿ ಕಥೆಗಳ ಪರಿಚಯ ಮಾಡಿಕೊಟ್ಟರು. ನಾವಾಗ ಇದ್ದದ್ದು ರಾಯರ ಮಠದ ಹತ್ತಿರವಾದ್ದರಿಂದ ಈ ರೀತಿಯ ಅವಕಾಶಗಳಿಗೇನೂ ಕೊರತೆಯಿರಲಿಲ್ಲವೆನ್ನಿ.  ಇವರಲ್ಲಿ ಪುರಾಣಿಕರು ಕಡಪ ಕೃಷ್ಟಾಚಾರ್ಯ ಅನ್ನುವವರು ಒಬ್ಬರು.  ಇನ್ನೊಬ್ಬರು ಹರಿಕಥೆ ಹೇಳುತ್ತಿದ್ದ ಶಿವಮೊಗ್ಗ ಶ್ರೀನಿವಾಸ ದಾಸರು ಅನ್ನುವವರು.  ಅವರಿಬ್ಬರ ಕಥೆ (ನನಗೆ ಕಥೆ, ಭಕ್ತರಿಗೆ ಪುರಾಣ / ಹರಿಕಥೆ ಅನ್ನಬಹುದು) ಹೇಳುವ ರೀತಿ, ಪಾತ್ರಗಳನ್ನು ಮತ್ತು ಸನ್ನಿವೇಶಗಳನ್ನು ಬಣ್ಣಿಸುವ ಹಾವ-ಭಾವಗಳು ಇನ್ನೂ ನನ್ನ ಕಣ್ಣಿಗೆ ಕಟ್ಟಿವೆ.  8-10 ವರ್ಷದ ನಾನು ಅವನ್ನು ಕೇಳಲು ಪ್ರತಿದಿನ ಮಠಕ್ಕೋ, ಯಾರದೋ ಮನೆಗೋ ಹೋಗಿ, ಮುಂದಿನ ಸಾಲಲ್ಲೆ ಕುಳಿತು, ಬಿಟ್ಟ ಬಾಯಿ ಬಿಟ್ಟ ಹಾಗೆಯೇ ಗಂಟೆಗಳ ಕಾಲ ಕಥೆ ಕೇಳುತ್ತಿದ್ದುದು ನನಗೆ ನೆನಪಿದೆ.  ಕೇಳುತ್ತಾ ಮೈಮರೆತು ನೇರವಾಗಿ ಕುರುಸಭೆಗೋ, ಕುರುಕ್ಷೇತ್ರಕ್ಕೋ ವೃಂದಾವನಕ್ಕೊ ಸಾಗಿಸಿ, ಅಲ್ಲಿ ನಡೆಯುತ್ತಿದ್ದ ಘಟನೆಗಳನ್ನು ಸೈಡ್ ವಿಂಗಿನಲ್ಲಿ ನಿಂತು ನಾಟಕ ನೋಡಿದಂತೆ ತೋರಿಸಿ ವಾಪಸ್ ಮನೆಗೆ ತಂದು ಬಿಟ್ಟ ಹಾಗೆ ಅನಿಸುತ್ತಿತ್ತು.  ಅವರ ಬಾಯಿಂದ ಕೇಳಿದ ಭೀಮನ ಶಕ್ತಿಯ, ಅರ್ಜುನನ ಬಿಲ್ಲುಗಾರಿಕೆಯ, ದುರ್ಯೋಧನನ ಸ್ವಾಭಿಮಾನದ, ಕೃಷ್ಣನ ಯುಕ್ತಿಯ, ಅಭಿಮನ್ಯುವಿನ ಸಾಹಸದ ಮತ್ತು ಭೀಷ್ಮ-ದ್ರೋಣ-ಕರ್ಣಾದಿಗಳ ಕುರುಕ್ಷೇತ್ರದ ಶೌರ್ಯದ ವರ್ಣನೆ ನನ್ನ ಮೆದುಳಿನ ಮೇಲೆ ಅಚ್ಚು ಒತ್ತಿದಂತಿದೆ. 

ಚಿತ್ರ: ಲಕ್ಷ್ಮೀನಾರಾಯಣ ಗೂಡೂರ್

ಅದಾದ ಮೇಲೆ ನಾನು ನನ್ನ ಅಜ್ಜನ ಮನೆಯಲ್ಲಿದ್ದು ಓದು ಮುಂದುವರಿಸಲು ಕಲಬುರ್ಗಿಗೆ ಬಂದೆ, 7 ನೇ ತರಗತಿಗೆ.  ಬೇಸಿಗೆ ರಜೆ ಬಂತೆಂದರೆ ನಮ್ಮ ಸೋದರತ್ತೆಯ ಮನೆಗೆ ರಾಯಚೂರಿಗೆ ಹೋಗುತ್ತಿದ್ದ 1 ತಿಂಗಳು ನಮಗೆಲ್ಲ ಭಾರಿ ಇಷ್ಟದ ಸಮಯ.  ಇದಕ್ಕೆ ಎರಡು ಕಾರಣಗಳು – ಒಂದು, ವಾರಿಗೆಯ ಹುಡುಗರು ಒಟ್ಟು 9 ಜನ, ದೊಡ್ಡ ಗದ್ದಲ ಹಾಕಿ ಮಜಾ ಮಾಡುವುದು; ಎರಡನೆಯ ಕಾರಣ, ನಮ್ಮ ಸೋದರತ್ತೆಯ ಗಂಡ ಅರವಿಂದ ಮಾಮಾ ಹೇಳುತ್ತಿದ್ದ ಕಥೆಗಳು.  ಅವರ ಮನೆಯಲ್ಲಿ ತರುತ್ತಿದ್ದ ಬುಟ್ಟಿಗಟ್ಟಲೆ ಮಾವಿನಹಣ್ಣುಗಳದ್ದೂ ಸ್ವಲ್ಪ (!) ಪಾತ್ರ ಇತ್ತು ಅನ್ನಬಹುದು.  ಅರವಿಂದ ಮಾಮಾ ನಮಗೆ ಹೇಳುತ್ತಿದ್ದ ಸಿನಿಮಾ ಕಥೆಗಳು, ಇಂಗ್ಲೀಷಿನ ಗಲಿವರನ ಪ್ರವಾಸ ಇತ್ಯಾದಿ ಕಥೆಗಳು, 3-4 ಗಂಟೆಯವು ಒಂದೊಂದೂ. ರಾತ್ರಿ 9 ಕ್ಕೆ ಊಟ ಮುಗಿಸಿ, ಛತ್ತಿನ ಮೇಲೆ ಹಾಸಿಗೆ ಹಾಸಿಕೊಂಡು, ತಣ್ಣನೆ ನೀರಿನ ಹೂಜಿ-ಲೋಟ ಪಕ್ಕದಲ್ಲಿಟ್ಟುಕೊಂಡು, ಬಾಳೆಹಣ್ಣು ಇತ್ಯಾದಿ ಕುರುಕು ತಯಾರಿಟ್ಟುಕೊಂಡು ಕೂತರೆ, ಕಥೆಗೆ ರೆಡಿ ಅಂತರ್ಥ.  ”ಇವತ್ತಿನ ಕಥೆಯ ಹೆಸರು ಪಾತಾಳ ಭೈರವಿ” ಅನ್ನುವ ಥರದ ಘೋಷಣೆಯೊಂದಿಗೆ ಶುರುವಾಗೋದು.  ಎರಡು ಗಂಟೆಗಳ ಮೊದಲ ಭಾಗ ಮುಗಿದೊಡನೆ ಇಂಟರವಲ್ಲು, ದೊಡ್ಡ ಹುಯಿಲೆಬ್ಬಿಸಿ ಎಲ್ಲರೂ  ಮತ್ತೆ ಕೆಳಗೆ ಬಂದು, ಒಂದು ದೊಡ್ಡ ಡಬರಿ ಅವಲಕ್ಕಿ ಕಲಿಸಿಕೊಂಡು, ನಂಚಿಕೊಳ್ಳಲು ಸೌತೆಕಾಯಿ, ಹಸಿಮೆಣಸಿನಕಾಯಿ, ಉಳ್ಳಾಗಡ್ಡಿಗಳೊಂದಿಗೆ ಮತ್ತೆ ಮೇಲೆ ಬಂದು ಕೂತೆವೆಂದರೆ, ಪಾರ್ಟ್ 2 ಶುರು.  ನಾಯಕ ರಾಜಕುಮಾರ (ಎನ್ ಟಿ ಆರ್), ನೇಪಾಳ ಮಾಂತ್ರಿಕನನ್ನು (ಎಸ್ವಿ ರಂಗಾರಾವು) ಸೋಲಿಸಿ, ರಾಜಕುಮಾರಿಯನ್ನು ಕಾಪಾಡುವ ಹೊತ್ತಿಗೆ ನಮ್ಮ ಡಬರಿ ಅವಲಕ್ಕಿ ಇತ್ಯಾದಿಗಳನ್ನು ಧ್ವಂಸ ಮಾಡುವ ಕಾರ್ಯಕ್ರಮವೂ ಮುಗಿದು, ಮಧ್ಯರಾತ್ರಿ ದಾಟಿ 1 ಗಂಟೆ ಆಗಿರುತ್ತಿತ್ತು.  ಅಲ್ಲಿಗೆ ಕಥೆ ಮುಗಿಯಿತು ಅಷ್ಟೇ, ನಮ್ಮ ಮಾತಲ್ಲ!  ಹಾಗೂ ಹೀಗೂ ಪಿಸ-ಪಿಸ ಗುಸು-ಗುಸು ಮಾತು, ನಗುವಿನಲ್ಲಿ ಇನ್ನೊಂದು ಗಂಟೆ ತಳ್ಳಿ, “ಇನ್ನ ಮಲಕೋಳರೊ ಎಲ್ಲ, ಸಾಕದು ನಗೋದು” ಅಂತ ಅಜ್ಜಿಯ ಕಡೆಯಿಂದ ಬೈಸಿಕೊಂಡು ಮಲಗುವಲ್ಲಿಗೆ ನಮ್ಮ ದಿನ ಸಮಾಪ್ತಿ!  ಈ ದಿನಚರಿ ವಾರಕ್ಕೊಂದು 2-3 ದಿನ ಖಂಡಿತ.  ಯಾವುದಾದರೂ ಕಥೆ ಒಂದೇ ದಿನಕ್ಕೆ ಮುಗಿಯದಿದ್ದರೆ, ಮತ್ತೊಂದು ರಾತ್ರಿ ಮುಂದುವರೆಯುತ್ತಿತ್ತು, ಆದರೆ, ನಾವೆಲ್ಲ ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಹೇಳಿ ನಮಗೆ ಕಥೆಯ ಪಾತ್ರ-ಸನ್ನಿವೇಶಗಳೆಲ್ಲ ನೆನಪಿವೆಯೆಂದು ಸಾಧಿಸಿ ತೋರಿಸಿದರೆ ಮಾತ್ರ.   ರಾಬರ್ಟ್ ಲೂಯಿ ಸ್ಟೀವನ್ಸನ್ನನ Treasure Island ಮೂರು ಬೇಸಿಗೆಯಾದರೂ ಮುಗಿಯದೇ, ಕಾದು ಕಾದು ಸಾಕಾಗಿ ನಾನೇ ಆ ಪುಸ್ತಕ ಕೊಂಡು ಓದಿ ಮುಗಿಸಿದೆ! 

ಕಥೆ-ಕಾದಂಬರಿಗಳನ್ನು ಸ್ವತಃ ಓದುವ ಮಜಾ ಒಂದು ರೀತಿಯದಾದರೆ, ಒಳ್ಳೆಯ ಕಥೆಗಾರರಿಂದ ಕೇಳುವ ಸ್ವಾರಸ್ಯವೇ ಬೇರೆ.  ಅದೊಂದು ನನ್ನ ಬಾಲ್ಯದ ಮರೆಯದ ಸಿಹಿ ಅಥವಾ ಹುಳಿ-ಉಪ್ಪು-ಖಾರದ ಹದನಾದ ಅನುಭವ.

– ಲಕ್ಷ್ಮೀನಾರಾಯಣ ಗುಡೂರ್, ಪ್ರೆಸ್ಟನ್ (ಲಾಂಕಶೈರ್)

5 thoughts on “ಬಾಲ್ಯದ ನೆನಪುಗಳು – ‘ಬಾಲ್ಯದ ಬೆಳದಿಂಗಳು’ ರಾಧಿಕಾ ಜೋಶಿ ಹಾಗೂ ‘ನನ್ನ ಬಾಲ್ಯದ ಕಥೆಗಾರರು’ ಲಕ್ಷ್ಮೀನಾರಾಯಣ ಗುಡೂರ

  1. ರಾಧಿಕಾ, ನಿಮ್ಮ ಲೇಖನ ಮನೆ ಕಥೆ, ಶತ ಶತಮಾನಗಳ ಅಸಮಾನತೆಯ ವ್ಯಥೆ, ಸಮಾಜದ ಬಹುದೊಡ್ಡ ನೊನ್ಯತೆ! ಸ್ತ್ರೀ ಯರ ಬದುಕು ಬವಣೆಗಳ ಕುರಿತಾದ ಪ್ರಬುದ್ಧ ಲೇಖನ. ಹೆಣ್ಣಿನ ಸುತ್ತಾ ಮುತ್ತ ಸದಾ ಸಾವಿರಾರು ನಿರ್ಭಂದಗಳು. ಹುಟ್ಟಿನಿಂದಲೂ ಹೆಣ್ಣಿಗೆ ಯಾವುದೇ ಸಂದರ್ಭದಲ್ಲೂ ತಗ್ಗಿ ಬಗ್ಗಿ ನಡೆದು ನಿಸ್ವಾರ್ಥ ಜೀವನ ನಡೆಸುವಂತೆ ಭೋದಿಸುವ ಅದೇ ಸಮಾಜವು ಅವಳಿಂದ ನಿರೀಕ್ಷಿಸಿ ಸುವುದನ್ನು ಮಾತ್ರ ಬಿಡುವುದಿಲ್ಲ. ಆದರೆ ಈ ಧೋರಣೆ ಬದಲಾಯಿಸುವ ನಿಟ್ಟಿನಲ್ಲಿ ಇಂದಿನ ನಾರಿಯರು ಹೋರಾಡುತ್ತಾ ಮುಂದಿನ ಪೀಳಿಗೆಗೆ ಸರಿಯಾದ ತಿಳುವಳಿಕೆ ಮೂಡಿಸುವ ಧ್ಯೇಯ ಹೊತ್ತು ಸಮಾಜವು ಬದಲಾವಣೆಯ ಹಾದಿಯಲ್ಲಿ ಸಾಗುವಂತೆ ಮಾಡಿರುವುದು ಸಮಾಧಾನ ಹಾಗೂ ಸಂತೋಷದ ಸಂಗತಿ.

    ಗುಡೂರ್ ರವರ ಲೇಖನ ಓದುತ್ತಾ ಓದುತ್ತಾ ನನ್ನ ಬಾಲ್ಯದ ನೆನಪುಗಳು ಕಣ್ಣ ಮುಂದೆ ಹಾದು ಹೋಯಿತು.ಹಬ್ಬ ಹರಿದನಗಳಲ್ಲಿ ಅದರ ಹಿನ್ನಲೆ ಗೆ ಸಂಭಂದಪಟ್ಟ ಕಥೆಗಳನ್ನು ಅಮ್ಮ ಹೇಳುತ್ತಿದ್ದುದ್ದು ನೆನಪಾಯಿತು. ಅದರಲ್ಲೂ ನಿಮ್ಮ ಕಥೆಗಾರ ಗುಂಡಪ್ಪ , ನನ್ನ ಬಾಲ್ಯದಲ್ಲಿ, ದೆವ್ವ ಭೂತಗಳನ್ನು ನೋಡಿದವರಿಗೆ ಗಿಂತ ಹಚ್ಚಾಗಿ ಕಥೆ ಹೇಳುತ್ತಿದ್ದ ಮಹದೇವಪ್ಪನ ಕಥಚಾವಡಿಗೆ ಕರೆದೊಯ್ಯಿತು ಹಾಗೆ ನಗುವಿನ ಸಣ್ಣ ಅಲೆಯನ್ನೆಬ್ಬಿಸಿತು! ಕಥೆ ಕೇಳಿದ ಮೇಲೆ ಕತ್ತಲಲ್ಲಿ ಹಿತ್ತಲಿಗೆ ಹೋಗಲು ಆಗುತ್ತಿದ್ದ ಪೀಕಲಾಟ ಅಷ್ಟಿಷ್ಟಲ್ಲ! ಸಾಲದಕ್ಕೆ ಹಿತ್ತಲಲ್ಲಿ ಮುಪ್ಪಾದ ಹುಣಸೆ ಮರ ಬೇರೆ ಇತ್ತು!😅😂😂

    Liked by 1 person

  2. ಹೊಸ ಸರಣಿಗೆ ಸ್ವಾಗತ.
    ರಾಧಿಕಾ ಅವರಿಂದ ಆರಂಭವಾದ ಈ ಲೇಖನ ಮಾಲೆ ವಿಭಿನ್ನವಾಗಿದೆ.
    ಬಾಲ್ಯ ಅಂದ ತಕ್ಷಣ ಬಾಲ್ಯದ ಆನಂದಮಯ ಕ್ಷಣಗಳನ್ನು ಮಾತ್ರ ನೆನಪಿಸಿಕೊಂಡು ಬರೆಯುತ್ತಾರೆ, ಆದರೆ ರಾಧಿಕಾ ಅವರು ವಿಭಿನ್ನ ರೀತಿಯಲ್ಲಿ ಯೋಚಿಸಿ ನಮ್ಮೆಲ್ಲರನ್ನೂ ಯೋಚಿಸುವಂತೆ ಮಾಡಿದ್ದಾರೆ.
    ಕೇಶವ

    Like

  3. ಗುಡೂರವರು ಕತೆ ಕೇಳುವ ಕತೆಯನ್ನು ನಾವೆಲ್ಲ ಮಕ್ಕಳ ಹಾಗೆ ಬಾಯಿ ಬಿಟ್ಟು ಕೇಳುವಂತೆ ಹೇಳಿದ್ದಾರೆ. ಓದುತ್ತ ಓದುತ್ತ ಬಾಲ್ಯದಲ್ಲಿ ಅಜ್ಜಿ ಹೇಳುತ್ತಿದ್ದ ರಾಮಾಯಣ ಮಹಾಭಾರತ ಮತ್ತು ಯಾವ್ಯಾವುದೋ ಕತೆಗಳು ನೆನಪಾದವು. ಮನೆಯ ಹಿಂದೆ ಆಗುತ್ತಿದ್ದ ‘ಕೀರ್ತನ’ ದ ಹರಿಕತೆಗಳು ನೆನಪಾದವು. ನಾವೆಲ್ಲ ಕತೆ ಕೇಳಿ ಬೆಳೆದವು, ನಂತರ ಓದಲು ಕಲಿತೆವು. ಈಗ ಕಾಲ ಬದಲಾಗಿದೆ. ಆರು ತಿಂಗಳ ಮಗುವಿಗೂ ಪುಸ್ತಕದ ಚಿತ್ರಗಳನ್ನು ತೋರಿಸುತ್ತ ಕತೆ ಓದುತ್ತೇವೆ.

    ಕೇಶವ

    Liked by 1 person

  4. ಮೊದಲನೆಯದಾಗಿ ಈ ಸರಣಿಯನ್ನು ಆರಂಭಿಸಿದ ಹಿಂದಿನ ಸಂಪಾದಕರಾದ ದಾಕ್ಷಾಯಿನಿಯವರ ಚಿಂತನೆಗೆ ಅಭಿನಂದನೆಗಳು. ಈ ವಾರದ ಎರಡು ಲೇಖನಗಳು ತೋರಿಸಿಕೊಟ್ಟಂತೆ ನಮ್ಮ ಬಾಲ್ಯದ ನೆನಪುಗಳು ನಮಗೆ ಕಹಿ-ಸಿಹಿ-ಉಪ್ಪು-ಖಾರ-ಹುಳಿ ಅನುಭವಗಳ ’ಪೆಂಡೋರಾ ಪೆಟ್ಟಿಗೆ’ಯನ್ನು ತೆರೆದಿಡುವದರ ಜೊತೆಗೆ ನಮ್ಮ ದೇಶದ (ಯಾವದೇ ಪ್ರಾಂತ, ಭಾಗ ವಿರಲಿ) ಬದುಕು, ಸಂಸ್ಕಾರಕ್ಕೂ ಕನ್ನಡಿಯಾಗಲಿದೆ. ರಾಧಿಕಾ ಜೋಶಿಯವರ ಸುಂದರ ಬರೆಹದಲ್ಲಿ ಒಂದು ಮಹತ್ವದ ಪ್ರಶ್ನೆಯನ್ನೂ ಎತ್ತಿದ್ದಾರೆ. ನಾವು, ಅದರಲ್ಲೂ ನಮ್ಮ ಸಂಸ್ಕಾರದಲ್ಲಿ ಬೆಳೆದ ಹೆಣ್ಣುಮಕ್ಕಳು ಎಷ್ಟರಮಟ್ಟಿಗೆ ’prisoners of their past’ ಆಗಿರುತ್ತಾರೆ ಮತ್ತು ಅದರಿಂದಾಗಿರಬಹುದಾದ ಲಾಭ-ಹಾನಿಯಬಗ್ಗೆ ವಿಚಾರಲಹರಿಯನ್ನು ಹರಿಬಿಟ್ಟಿದ್ದಾರೆ. ತಮ್ಮ ಬೆಳವಣಿಗೆಯನ್ನು ನೆನಸಿ ಹಿರಿಯರ ಋಣವನ್ನು ತೀರಿಸಿದ್ದಾರೆ. ಆ ತಲೆಮಾರಿನವರು ಎಷ್ಟರಮಟ್ಟಿಗ ತಮ್ಮ ಭೂತಕಾಲದ ಕೈದಿಗಳಾಗಿರಬಹುದೋ, ಈಗ ನಾವು ’parenting’ ಹೊಣೆಯಬಗ್ಗೆ ಯೋಚಿಸುವಂತೆ ಅವರಿಗೆ ಆಸ್ಪದವಿತ್ತೋ? ಸಮಾಜ ಬದಲಾಗುತ್ತಿದೆಯೇ? ಅವರು ಪ್ರಸ್ತುತ ಪಡಿಸಿದ ವಿಚಾರಗಳಲ್ಲಿ ನಮ್ಮ ಮುಂದಿನ ಪೀಳಿಗೆಗಾದರೂ ನಾವು ಸಲ್ಲಿಸಬೇಕಾದ ನಮ್ಮ ಕರ್ತವ್ಯದ ಎಚ್ಚರಿಕೆಯನ್ನು ಕಂಡೆ.
    ಎರಡನೆಯ ಆಪ್ತ ಬರಹದಲ್ಲಿ ನಮ್ಮ ಸಮಕಾಲೀನರಲ್ಲಿ ಬಹಳಷ್ಟು ಜನ ತಮ್ಮ ಬಾಲ್ಯದ ಅನುಭವಗಳನ್ನು ಸಹ ಕಂಡು ನನ್ನಂತೆ ಮತ್ತೆ ಅನುಭವಿಸಿರಬಹುದು. ಲಕ್ಷ್ಮೀನಾರಾಯಣ ಗುಡೂರ್ ಅವರು ತಮ್ಮ ವಿಶಿಷ್ಟ ಶೈಲಿಯಲ್ಲಿ ತಮ್ಮ ಬಾಲ್ಯದ ಕಥೆಗಾರರ ಚಂದದ ಚಿತ್ರ ರೂಪಿಸಿದ್ದಾರೆ. ’Fly on the wall’ ತರಹ ಅವರು ಕುರುಕ್ಶೇತ್ರದ ಸಮರದ ಅಥವಾ ಇಂಗ್ಲಿಷ್ ಕಥೆಗಳ ಘಟನೆಗಳನ್ನು ವೀಕ್ಷಿಸುವಂತೆ ನಮಗೂ ಅದೇ ತರದ ಅನುಭವವಾಗುತ್ತದೆ. ಅವರ ಕಾರ್ಟೂನಿನಲ್ಲಿಯ ವಿವರಗಳು ಅವರ ಸೂಕ್ಷ್ಮ ದೃಷ್ಟಿಗೆ ಸಾಕ್ಷಿ -ಮುಖ್ಯತಃ ನಮ್ಮಂಥ ಆ fly on the wall ನುಂಗಿದ ಹಲ್ಲಿ ಸಹ! (ಶರೀಫ್ ಸಾಹೇಬರ ಕ್ಷಮೆ ಕೋರಿ).
    ಇಬ್ಬರಿಗೂ ಅಭಿನಂದನೆಗಳು ಮತ್ತು ಹಂಚಿಕೊಂಡದ್ದಕ್ಕೆ ಧನ್ಯವಾದಗಳು.
    ಮುಂದಿನ ಕಂತಿನಲ್ಲಿ ಇನ್ನಿತರರ ಬಾಲ್ಯದ ಸ್ಮೃತಿಚಿತ್ರಗಳನ್ನು ತವಕದಿಂದ ಎದುರುನೋಡುವಾ.
    ಶ್ರೀವತ್ಸ ದೇಸಾಯಿ

    Liked by 1 person

  5. ಇಬ್ಬರ ಬಾಲ್ಯದ ನೆನಪುಗಳು ವಿಭಿನ್ನ ರೀತಿಯವು. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು

    ರಮ್ಯಾರವರ ನೆನಪು ಬಹಳಷ್ಟು ಹುಡಿಗಿಯರು ಬೆಳೆದ ರೀತಿ ಮತ್ತು ಸಂಸ್ಕೃತಿಯನ್ನು ನೆನಪು ಮಾಡಿಕೊಡುತ್ತದೆ. ಹೆಣ್ಣು ಮಕ್ಕಳನ್ನು ಗೃಹಿಣಿಯಾಗಿ ತರಬೇತಿಗೊಳಿಸುವುದರಲ್ಲಿ ಇದ್ದ ಉತ್ಸಾಹ ಬೇರೆ ಕ್ರೀಡೆಗಳಲ್ಲಿ, ವೃತ್ತಿಪರತೆಯಲ್ಲಿ ಆಗ ಇರಲಿಲ್ಲ ಆದರೆ ಈಗ ನಮ್ಮ ರಾಜ್ಯದಲ್ಲೂ ಬಹಳ ರೀತಿಯ ಬದಲಾವಣೆ ಗಳು ನಮ್ಮ ಸಮಾಜದಲ್ಲಾಗಿದೆ ಅದಕ್ಕೆ ಕಾರಣ ನಾವು, ನಮ್ಮ ಪ್ರಶ್ನೆಗಳು ಮತ್ತು ಪ್ರತಿಕ್ರಿಯೆಗಳು.

    ಗೂಡುರ್ ರವರ ಬಾಲ್ಯದಲ್ಲಿ ಅವಲಕ್ಕಿ ಮತ್ತು ಕಥೆಗಳ ಜೊತೆಗಿನ ಸಂಭಂದದ ಬಗೆಗೆ ಓದಿದಾಗ ನಗುವಿನ ಜೊತೆಗೆ ಸ್ವಲ್ಪ ಹೊಟ್ಟೆಕಿಚ್ಚು ಆಯಿತು, ನಮಗೆ ಅಂತಹ ಸೋದರಮಾಮ ಇರಲಿಲ್ಲ ಎಂದು. ನನ್ನ ಬಾಲ್ಯದಲ್ಲಿ ಬಹಳ ಅಪರೂಪಕ್ಕೆ ಹರಿಕಥೆ ಕೇಳಿದ ನೆನಪಿದೆ. ಕತೆ ಹೆಣೆಯುವ, ಹೇಳುವ ಕಲೆಗಾರಿಕೆ ಕೆಲವರಿಗೆ ಮಾತ್ರ ಲಭ್ಯವಿರುತ್ತದೆ. ರಸವತ್ತಾದ ಬರಹ, ಉತ್ತಮ ಸಂಪಾದಕೀಯ.

    Liked by 1 person

Leave a reply to shrivatsadesai Cancel reply

This site uses Akismet to reduce spam. Learn how your comment data is processed.