ಎರಡು ಕವನಗಳು – ಮಳೆ,ಮಳೆ (ಸ್ಮಿತಾ ಕದಡಿ) ಮತ್ತು ಒಲವಿನ ಮಾತು (ವಿಜಯನರಸಿಂಹ)

ಈ ಬಾರಿಯ ಅನಿವಾಸಿಯಲ್ಲಿ ಎರಡು ಭಿನ್ನವಾದ ಕವನಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ – ಶ್ರೀಮತಿ ಸ್ಮಿತಾ ಕದಡಿಯವರ “ಮಳೆ, ಮಳೆ” ಮತ್ತು ಶ್ರೀ ವಿಜಯನರಸಿಂಹ ಅವರ “ಒಲವಿನ ಮಾತು”. ವಿಜಯನರಸಿಂಹ ಅವರು ಪ್ರೇಮವನ್ನು ಸುಪ್ತವಾಗಿ ಕಾವ್ಯರೂಪದಲ್ಲಿ ವ್ಯಕ್ತಪಡಿಸುತ್ತಾ, ಒಲವಿನ ಮಾತುಗಳನ್ನು ಹಾಡಾಗಿ ಬರೆದಿದ್ದಾರೆ. ಸ್ಮಿತಾರವರ ಕವನ ಮಳೆಯನ್ನು ತನ್ನ ಅನುಕೂಲಕ್ಕೆ ಒಪ್ಪವಾಗುವಂತೆ ಬಯಸುವ ಮುಗ್ಧ ಮನಸ್ಸಿನ ಬೇಡಿಕೆಯನ್ನು ಸುಂದರವಾಗಿ ಚಿತ್ರಿಸಿದೆ.
ಎಂದಿನಂತೆ ಓದಿ, ಪ್ರತಿಕ್ರಿಯಿಸಿ ಪ್ರೋತ್ಸಾಹಿಸುವಿರೆಂಬ ನಂಬಿಕೆಯೊಂದಿಗೆ – ಸಂ.

ಶ್ರೀಮತಿ ಸ್ಮಿತಾ ಕದಡಿ ಅವರು ವೃತ್ತಿಯಲ್ಲಿ ಚಾರ್ಟೆಡ್ ಆಕೌಂಟೆಂಟ್. ರೆಡಿಂಗ್ ಬಳಿ ಕಳೆದ 16 ವರ್ಷಗಳಿಂದ ಇಂಗ್ಲೆಂಡಿನಲ್ಲಿ ನೆಲಸಿದ್ದಾರೆ. “ರೆಡಿಂಗ್ ಕನ್ನಡ ಮಿತ್ರರು“ ಎನ್ನುವ ಸಂಸ್ಥೆಯ ಸ್ಥಾಪಕರಲ್ಲಿ ಇವರೂ ಒಬ್ಬರು. ಮತ್ತು ಮಕ್ಕಳಿಗೆ ಕನ್ನಡ ಕಲಿಸುವ ಉದ್ದೇಶದಿಂದ ಅರ್ಲಿ ಎನ್ನುವ ಊರಲ್ಲಿ ’ಕಥಾಚಾವಡಿ‘ ಎನ್ನುವ ಕಲಿಕೆಯ ಕಾರ್ಯಕ್ರಮವನ್ನೂ ನೆಡೆಸಿಕೊಂಡು ಬಂದಿದ್ದಾರೆ. ಅದರಲ್ಲಿ ಕಥೆ ಮತ್ತು ಆಟಗಳಿಂದ ಮಕ್ಕಳಿಗೆ ಬೆಳವಣಿಗೆಗೆ ಸಹಾಯವಾಗುತ್ತದೆ ಎನ್ನುವದನ್ನು ಕಳೆದ ಎರಡೂವರೆ ವರ್ಷಗಳ ಅನುಭವದಲ್ಲಿ ಕಂಡುಕೊಂಡಿದ್ದಾಗಿ ಹೇಳುತ್ತಾರೆ. ಲಂಡನ್ ಮತ್ತು ಇಂಗ್ಲೆಂಡಿನ ಆಗ್ನೇಯ ಪ್ರದೇಶದಲ್ಲಿ ಕೆಲವು ಕನ್ನಡ ಕಾರ್ಯಕ್ರಮಗಳಿಗೆ ನಿರೂಪಣೆಯನ್ನೂ ಮಾಡಿದ್ದಾರೆ. ’ಮಳೆ, ಮಳೆ’ ಕವನ ಅನಿವಾಸಿಯಲ್ಲಿ ಇವರ ಮೊದಲ ಪ್ರಕಟಣೆ.(ಸಂ)

ಮಳೆ, ಮಳೆ

This image has an empty alt attribute; its file name is rain.-cour.jpg
ಚಿತ್ರ ಕೃಪೆ: ಅಂತರ್ಜಾಲ

ಮಳೆ, ಮಳೆ, ಮಳೆ
ಬೇಗ ಹೋಗೆ ಮಳೆ
ಹೊರಗೆ ಹೋಗಿ ಆಡಬೇಕು
ಈಗಿಂದೀಗಲೇ

ಹುಲ್ಲು ಹಸಿರೇ ಇದೆ
ಗಿಡವು ನಗುತಲಿದೆ
ನದಿಯು ತುಂಬಿ ಹರಿಯುತಿದೆ
ಸಂತಸದಿಂದಲೇ

ಮಲಗೊ ಮುನ್ನ ಕರೆವೆ
ಬೇಗ ಬಾರೇ ಮಳೆ
ಬೆಳಗಾಗೂ ತನಕ ಸುರಿದು
ಹೋಗು ಎಂದು, ನನ್ನ ಪುಟ್ಟ ಮೊರೆ

ಹಗಲಲ್ಲೂ, ಕೆಲವೊಮ್ಮೆ ಬಾರೇ
ಕಾಮನಬಿಲ್ಲು ತಾರೆ
ನಕ್ಕು ನಲಿದು ನಮ್ಮ ಕೂಡೆ
ಮರಳಿ ಹೋಗೆಲೆ

ಮಳೆ, ಮಳೆ, ಮಳೆ
ಬೇಗ ಹೋಗೆ ಮಳೆ
ಹೊರಗೆ ಹೋಗಿ ಆಡಬೇಕು
ಈಗಿಂದೀಗಲೇ

-ಶ್ರೀಮತಿ ಸ್ಮಿತಾ ಕದಡಿ

(ಈ ಕವಿತೆಯನ್ನು ರೆಡಿಂಗಿನ ಸುಮನಾ ಧ್ರುವ ಅವರ ಮಧುರ ಕಂಠದಲ್ಲಿ, ಅವರದೇ ಸಂಗೀತ ಸಂಯೋಜನೆಯಲ್ಲಿ ಕೇಳಲು ಈ ಪುಟದ ಕೆಳಗಿನ ಕೊಂಡಿಯನ್ನು ಒತ್ತಿ. )

ಒಲವಿನ ಮಾತು

ಚಿತ್ರಕಲೆ: ಲಕ್ಷ್ಮೀನಾರಾಯಣ ಗುಡೂರ್

ನನ್ನ ಬರಿ ಬೆನ್ನಿನ ಮೇಲಾಡುತಿರುವ ನಿನ್ನ ಕೈ ಬೆರಳುಗಳು
ನಿನ್ನ ಬರಿ ಬೆನ್ನಿನ ಮೇಲಾಡುತಿರುವ ನನ್ನ ಕೈ ಬೆರಳುಗಳು

ತಮ್ ತಾವೇ ಆಡುತಿವೆ ಗಮನಿಸು ನೂರು ಮಾತು
ತುಟಿ ತೆರೆಯದೇ ಇದ್ದ ಮಾತು, ಕಣ್ಗಳಾಡಬೇಕೆಂದಿದ್ದ ಮಾತು

ಮಾತಿಗೊಂದು ಮಾತು, ಪ್ರತಿ ಮಾತು, ಪ್ರತೀ ಮಾತು
ಮತಿಗಳೊಳಗಿನ ಮಾತು, ಮಥಿಸಿ ಮಥಿಸಿ ಆಡದುಳಿದ ಮಾತು

ಹೃನ್ಮನಗಳನೊಲೊಸಿ, ಬೆರೆಸಿ, ರತಿಸಿ, ರಚಿಸಲಾಗದ ಮಾತು
ನನ್ನ, ನಿನ್ನ, ಎಲ್ಲ ಅವ್ಯಕ್ತ, ವ್ಯಕ್ತ, ವ್ಯತಿರಿಕ್ತದ ಮಾತು

ನಾಚಿಕೊಳುವಂತೆ ಆಡಿ ಮನಗಾಣಿಸುತಿವೆ ಆ ಬೆರಗು ಮಾತು
ಮನಸಿನ ಮೂಲೆಯಲಿ ಸುಪ್ತದಲಡಗಿದ್ದ ಒಲವಿನ ಮಾತು

ವಿಜಯನರಸಿಂಹ

5 thoughts on “ಎರಡು ಕವನಗಳು – ಮಳೆ,ಮಳೆ (ಸ್ಮಿತಾ ಕದಡಿ) ಮತ್ತು ಒಲವಿನ ಮಾತು (ವಿಜಯನರಸಿಂಹ)

 1. ಗುಡೂರ್ ಅವರಿಗೆ ಹಾರ್ದಿಕ ಅಭಿನಂದನೆಗಳು. ನಿಮ್ಮ ನೇತೃತ್ವದಲ್ಲಿ’ ಅನಿವಾಸಿ’ ಚಿತ್ರಮಯವಾಗುವುದರಲ್ಲಿ ಸಂದೇಹವೇ ಇಲ್ಲ.

  …………….

  ಸ್ಮಿತಾ ಕದಡಿ ಅವರ ‘ಮಳೆ’ ಕವನ Rain rain go away ಎನ್ನುವ ನರ್ಸರಿ ರೈಂ ಅನ್ನು ನೆನಪಿಸುತ್ತದೆ. ಮಕ್ಕಳ ಸುಂದರ ಪದ್ಯವಾಗಿ ಗೆಲ್ಲುತ್ತದೆ.

  ‘ಹಗಲಲ್ಲೂ ಕೆಲವೊಮ್ಮೆ ಬಾರೆ
  ಕಾಮನಬಿಲ್ಲು ತಾರೆ’

  ಇಷ್ಟವಾದ ಸಾಲು.

  …………………………

  ವಿಜಯ ನಾರಸಿಂಹ ಅವರು’ ಅನಿವಾಸಿ’ಯ ಕೆ ಎಸ್ ಎನ್ ಇದ್ದಂತೆ.

  ಬೆರಳುಗಳಿಗೆ ಬಾಯಿ ಇದ್ದರೆ ಮಾತು ಬರುತ್ತಿದ್ದರೆ ಏನಾಗುತ್ತಿತ್ತು ಎನ್ನುವುದಕ್ಕೆ ಕಾವ್ಯಮಯ ಭಾಷೆಯಲ್ಲಿ ಕವಿತೆಯಾಗಿಸಿದ್ದಾರೆ.

  ‘ಪ್ರತಿ ಮಾತು’ ಮತ್ತು ‘ಪ್ರತೀ ಮಾತು’ : ಸುಂದರ ಸಂಯೋಜನೆ

  _ ಕೇಶವ

  Like

 2. ‘ಅನಿವಾಸಿ‘ ಈ ಸಂಚಿಕೆ ಕಣ್ಣಿಕೆ, ಕಿವಿಗೆ ಮತ್ತು ಓದಿಗೆ ಹಿತವಾದ ಅನುಭವವನ್ನು ಕೊಡುತ್ತಿದೆ.
  ಮೊದಲನೆಯದು‘ಮಳೆ, ಮಳೆ‘ ಮಕ್ಕಳೂ ಕೇಳಿ ತಿಳಿದು ಹಾಡಬಹುದಾದ ಮಳೆಯ ಮೇಲಿನ ಕವನ ಮುದ ಕೊಡುತ್ತದೆ. ಬಹಳ ಸರಳ ರಚನೆಯಾದರೂ, ಹಲವಾರು ಜನರಿಗೆ ತಮ್ಮ ಚಿಕ್ಕಂದಿನಲ್ಲಿ ಇಲ್ಲಿ ಮಕ್ಕಳು ಹೇಳಿದ್ದರ ಅನುಭವ ಮತ್ತು ಅಪೇಕ್ಷೆ ಇದ್ದಿರಬಹುದು: ಬೆಳಗಾಗುವವರೆಗೆ ಸುರಿದು ಹೋಗುವ ಮಳೆ, ಹಗಲೆಲ್ಲ ಆಟವಾಡಲು ಬಿಡುವ ಮಳೆ, ಅಕಸ್ಮಾತ್ ಹಗಲಲ್ಲಿ ಬಂದರೂ ಕಾಮನ ಬಿಲ್ಲನ್ನಾದರೂ ತಂದು ಕೊಟ್ಟು ಮರಳುವ ಮಳೆ!, ಮಕ್ಕಳು ಇದನ್ನೇ ತಾನೆ ಬೇಡುವದು?
  ಎರಡನೆಯ ನವಿರಾದ ಭಾವನೆಗಳು ತುಂಬಿದ ಕವನದಲ್ಲಿ “ಹಿನ್ಮನಗಳನೊಲಿಸಿ, ಬೆರೆಸಿ, ರತಿಸಿದ ಜೀವಗಳು“ ಮಾತಿಲ್ಲದೆ ಬೆರಳುಗಳು ಆಡುತ್ತವೆ, ಹೆಣೆದುಕೊಳ್ಳುತ್ತವೆ, ಒಲವಿನಲ್ಲಿ ಬೆಸೆದುಕೊಳ್ಳುತ್ತವೆ. ಇಲ್ಲಿ “ಮಾತು ಮೌನವಾದಾಗ, ಮೌನ ಮಾತಾದಾಗ“ ಅನ್ನುವ ಕ್ಲೀಷೆಯನ್ನೆ ಉಪಯೋಗಿಸಬೇಕಾಗುತ್ತದೆ. ಲಕ್ಷ್ಮೀನಾರಾಯಣ ಗುಡೂರ್ ಅವರು ಬರೆದ ಪೂರಕ ಚಿತ್ರ ಆ ಕೊರತೆಯನ್ನು ತುಂಬಿಕೊಡುತ್ತದೆ, ತುಂಬಿ ಹರಿಸುತ್ತದೆ.

  Like

 3. ಒಂದು ಮಳೆ ಹನಿಯು ಸುರಿದ ಒಲವು
  ಇನ್ನೊಂದು ಒಲವಿನ ಮೌನದನಿಯ ಕಾವು
  ಎರಡರಲ್ಲೂ ಹಾತೊರಿಕೆಯ ತುಂಬು ಮೋಡ
  ಬೆರೆತು ಸುರಿದಿವೆ, ಗೂಡೂರರ ಗೆರೆಗಳ ಕೂಡ

  ಮುರಳಿ ಹತ್ವಾರ

  Like

 4. ಸ್ಮಿತಾ ಅವರ ಕವನ ನನ್ನನ್ನು ಬಾಲ್ಯಕ್ಕೆ ಸೆಳೆದೊಯ್ಯಿತು. ರಾತ್ರಿ ಮಲಗುವಾಗ ಬೀಳುವ ಮಳೆಯ ಜೋಗುಳದ ಸೊಗಸು ಬಣ್ಣಿಸಲದಳ. ಸುಂದರವಾದ ಕಿಣ್ಣರ ಕವನ.

  ವಿಜಯನಾರಸಿಂಹ ಪ್ರೀತಿಯ ಆಯಾಮಗಳನ್ನು ನವಿರಾಗಿ, ಎಳೆ ಎಳೆಯಾಗಿ ಅನಾವರಣಗೊಳಿಸಿದ ಪರಿ, ಭಾಷೆಯ ಲಾಲಿತ್ಯ ಕವನದ ವಸ್ತುವಿಗೆ ತಕ್ಕುದಾಗಿದೆ.

  -ರಾ೦

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.